ಮುಂಚೆ ತಮ್ಮದೇ ಧರ್ಮದಲ್ಲಿದ್ದವರ ಜೊತೆ ಯೆಹೋವನ ಸಾಕ್ಷಿಗಳು ಹೇಗೆ ನಡ್ಕೊಳ್ತಾರೆ?
ನಾವು ಎಲ್ಲರ ಜೊತೆ ಪ್ರೀತಿ, ದಯೆ ಮತ್ತು ಗೌರವದಿಂದ ನಡ್ಕೊಳೋಕೆ ನಮ್ಮ ಕೈಲಾದ ಎಲ್ಲಾ ಪ್ರಯತ್ನ ಹಾಕ್ತೀವಿ. ಒಂದುವೇಳೆ ಒಬ್ಬ ಯೆಹೋವನ ಸಾಕ್ಷಿ ಮುಂಚಿನ ತರ ದೇವರ ಸೇವೆ ಮಾಡ್ತಿಲ್ಲ ಅಂದ್ರೆ ಅಥವಾ ದೇವರ ಆರಾಧನೆ ಮಾಡೋದನ್ನೇ ನಿಲ್ಲಿಸಿಬಿಟ್ರೆ, ನಾವಾಗೇ ಅವನa ಹತ್ರ ಹೋಗಿ ಮಾತಾಡ್ತೀವಿ. ಅವರಂದ್ರೆ ನಮಗೆ ಎಷ್ಟು ಇಷ್ಟ ಅಂತ ಹೇಳ್ತೀವಿ. ಅಷ್ಟೇ ಅಲ್ಲ, ಯೆಹೋವ ದೇವರಿಗೆ ಹತ್ರ ಆಗೋಕೆ ಏನೆಲ್ಲಾ ಸಹಾಯ ಬೇಕೋ ಅದನ್ನೆಲ್ಲಾ ಮಾಡ್ತೀವಿ.—ಲೂಕ 15:4-7.
ಕೆಲವು ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಮಾಡಿದ ತಪ್ಪಿಂದ ಅವನನ್ನ ಸಭೆಯಿಂದ ಹೊರಗೆ ಹಾಕಬೇಕಾಗುತ್ತೆ. (1 ಕೊರಿಂಥ 5:13) ಆದ್ರೆ ನಾವು ನಮ್ಮ ಜೊತೆ ಆರಾಧಕರನ್ನ ತುಂಬಾ ಪ್ರೀತಿ ಮಾಡ್ತೀವಿ. ಅದಕ್ಕೆ ಅವರು ಪಾಪ ಮಾಡೋಕೂ ಮುಂಚೆನೇ ಅವರಿಗೆ ಬೇಕಾದ ಸಹಾಯ ಮಾಡ್ತೀವಿ. ಆಗ ಅವರನ್ನ ಸಭೆಯಿಂದ ಹೊರಗೆ ಹಾಕೋ ಸಂದರ್ಭನೇ ಬರಲ್ಲ. ಒಂದುವೇಳೆ ಆ ವ್ಯಕ್ತಿನ ಸಭೆಯಿಂದ ಹೊರಗೆ ಹಾಕಿದ್ರೂ ನಮಗೆ ಆತನ ಮೇಲಿರೋ ಪ್ರೀತಿ ಮತ್ತು ಗೌರವ ಒಂಚೂರು ಕಮ್ಮಿ ಆಗಲ್ಲ. ಯಾಕಂದ್ರೆ ಬೈಬಲ್, ಪ್ರೀತಿ ಮತ್ತು ಗೌರವ ತೋರಿಸಿ ಅಂತ ನಮಗೆ ಹೇಳುತ್ತೆ.—ಮಾರ್ಕ 12:31; 1 ಪೇತ್ರ 2:17.
ಸಭೆಯಿಂದ ಒಬ್ಬ ವ್ಯಕ್ತಿಯನ್ನ ಯಾಕೆ ಹೊರಗೆ ಹಾಕ್ತಾರೆ?
ಒಬ್ಬ ಕ್ರೈಸ್ತ ಗಂಭೀರ ಅಥವಾ ದೊಡ್ಡ ತಪ್ಪು ಮಾಡಿ ಅದನ್ನ ಬದಲಾಯಿಸಿಕೊಳ್ಳಲಿಲ್ಲ ಅಂದ್ರೆ ಅವನನ್ನ ಸಭೆಯಿಂದ ಹೊರಗೆ ಹಾಕಿ ಅಂತ ಬೈಬಲ್ ಹೇಳುತ್ತೆ.b (1 ಕೊರಿಂಥ 5:11-13) ಒಬ್ಬ ವ್ಯಕ್ತಿ ಯಾವೆಲ್ಲಾ ಪಾಪ ಮಾಡಿದ್ರೆ ಸಭೆಯಿಂದ ಹೊರಗೆ ಹಾಕಬೇಕು ಅಂತ ಬೈಬಲ್ ಸ್ಪಷ್ಟವಾಗಿ ಹೇಳುತ್ತೆ. ಉದಾಹರಣೆಗೆ ಅಂಥ ಪಾಪಗಳಲ್ಲಿ ವ್ಯಭಿಚಾರ, ಅತಿಯಾಗಿ ಕುಡಿಯೋದು, ಕೊಲೆ, ಕುಟುಂಬದವರನ್ನ ಹಿಂಸೆ ಮಾಡೋದು, ಕಳ್ಳತನ ಕೂಡ ಸೇರಿದೆ.—1 ಕೊರಿಂಥ 6:9, 10; ಗಲಾತ್ಯ 5:19-21; 1 ತಿಮೊತಿ 1:9, 10.
ಹಾಗಂತ ಒಬ್ಬ ವ್ಯಕ್ತಿ ಗಂಭೀರ ತಪ್ಪು ಮಾಡಿದ ತಕ್ಷಣ ಅವನನ್ನ ಸಭೆಯಿಂದ ಹೊರಗೆ ಹಾಕಲ್ಲ. ಸಭೆಯ ಹಿರಿಯರುc ಅವನ ಕೆಟ್ಟ ನಡತೆಯನ್ನ ಬದಲಾಯಿಸಿಕೊಳ್ಳೋಕೆ ಸಹಾಯ ಮಾಡ್ತಾರೆ. (ರೋಮನ್ನರಿಗೆ 2:4) ಅವನ ಜೊತೆ ಮೃದುವಾಗಿ, ದಯೆಯಿಂದ ನಡ್ಕೊಳ್ತಾ ಅವನ ವ್ಯಕ್ತಿತ್ವವನ್ನ ಬದಲಾಯಿಸಿಕೊಳ್ಳೋಕೆ ಸಹಾಯ ಮಾಡ್ತಾರೆ. (ಗಲಾತ್ಯ 6:1) ಹೀಗೆ ಮಾಡೋದ್ರಿಂದ ತಪ್ಪು ಮಾಡಿದ ವ್ಯಕ್ತಿ ತನ್ನ ತಪ್ಪನ್ನ ಅರ್ಥ ಮಾಡ್ಕೊಂಡು ಬದಲಾಗೋಕೆ, ಪಶ್ಚಾತ್ತಾಪ ಪಡೋಕೆ ಆಗುತ್ತೆ. (2 ತಿಮೊತಿ 2:24-26) ಇಷ್ಟೆಲ್ಲಾ ಪ್ರಯತ್ನ ಹಾಕಿದ್ರೂ ಅವನು ತನ್ನ ಕೆಟ್ಟ ನಡತೆಯನ್ನ ಬಿಡದೇ ಬೈಬಲ್ ನಿಯಮಗಳನ್ನ ಮುರಿತಾ ಇದ್ರೆ, ಪಶ್ಚಾತ್ತಾಪ ಪಟ್ಟಿಲ್ಲಾಂದ್ರೆ ಅವನನ್ನ ಸಭೆಯಿಂದ ಹೊರಗೆ ಹಾಕ್ತಾರೆ. ಆಗ ಹಿರಿಯರು ಸಭೆ ಮುಂದೆ ಈ ವ್ಯಕ್ತಿ ಇನ್ಮುಂದೆ ಯೆಹೋವನ ಸಾಕ್ಷಿಯಾಗಿರಲ್ಲ ಅನ್ನೋ ಪ್ರಕಟನೆ ಮಾಡ್ತಾರೆ.
ಹಿರಿಯರು ಪಾಪ ಮಾಡಿದ ವ್ಯಕ್ತಿ ಹತ್ರ ಮೃದುವಾಗಿ, ದಯೆ ಮತ್ತು ಪ್ರೀತಿಯಿಂದ ನಡ್ಕೊಳ್ಳೋ ಮೂಲಕ ಅವನು ಬದಲಾಗೋಕೆ ಸಹಾಯ ಮಾಡ್ತಾರೆ.
ಪಶ್ಚಾತ್ತಾಪ ಪಡದೇ ಪಾಪ ಮಾಡ್ತಾನೇ ಇರೋ ವ್ಯಕ್ತಿನ ಸಭೆಯಿಂದ ಹೊರಗೆ ಹಾಕಿದ್ರೆ ಏನು ಪ್ರಯೋಜನ? ದೇವರ ನೀತಿ-ನಿಯಮಗಳನ್ನ ಎತ್ತಿ ಹಿಡಿಯೋದಕ್ಕೆ ಮತ್ತು ಸಭೆಯ ಶುದ್ಧತೆಯನ್ನ ಕಾಪಾಡೋದಕ್ಕೆ ಆಗುತ್ತೆ. ಅಷ್ಟೇ ಅಲ್ಲ, ಅವನ ಕೆಟ್ಟ ಪ್ರಭಾವ ಸಭೆಯವರ ಮೇಲೆ ಬೀಳಲ್ಲ. (1 ಕೊರಿಂಥ 5:6; 15:33; 1 ಪೇತ್ರ 1:16) ಜೊತೆಗೆ ಪಾಪ ಮಾಡಿದ ವ್ಯಕ್ತಿ ತನ್ನ ಕೆಟ್ಟ ನಡತೆಯನ್ನ ಬಿಟ್ಟು ಬದಲಾವಣೆ ಮಾಡ್ಕೊಳ್ಳೋಕೆ ಆಗುತ್ತೆ.—ಇಬ್ರಿಯ 12:11.
ಸಭೆಯಿಂದ ಹೊರಗೆ ಹಾಕಿದವರ ಜೊತೆ ಯೆಹೋವನ ಸಾಕ್ಷಿಗಳು ಹೇಗೆ ನಡ್ಕೊಳ್ತಾರೆ?
ಸಭೆಯಿಂದ ಹೊರಗೆ ಹಾಕಿದವರ ‘ಜೊತೆ ಸೇರಬೇಡಿ, ಅವರ ಜೊತೆ ಊಟನೂ ಮಾಡಬೇಡಿ’ ಅಂತ ಬೈಬಲ್ ಕ್ರೈಸ್ತರಿಗೆ ಹೇಳುತ್ತೆ. (1 ಕೊರಿಂಥ 5:11) ಹಾಗಾಗಿ ಸಭೆಯಿಂದ ಹೊರಗೆ ಹಾಕಿದವರ ಜೊತೆ ನಾವು ಯಾವುದೇ ರೀತಿ ಸಹವಾಸ ಮಾಡಲ್ಲ. ಹಾಗಂತ ನಾವು ಅವರನ್ನ ಪೂರ್ತಿಯಾಗೂ ಬಿಟ್ಟುಬಿಡಲ್ಲ. ಅವರಿಗೆ ಗೌರವ ಕೊಡ್ತೀವಿ, ಬೇಕಿದ್ರೆ ಅವರು ನಮ್ಮ ಕೂಟಗಳಿಗೆ ಬರಬಹುದು. ಹೀಗೆ ಬಂದಾಗ ಸಹೋದರ ಸಹೋದರಿಯರು ಅವ್ರಿಗೆ ನಮಸ್ಕಾರ ಹೇಳಬಹುದು ಅಥವಾ ಸ್ವಾಗತಿಸಬಹುದು.d ಅಷ್ಟೇ ಅಲ್ಲ, ಅವರು ಸಭೆಗೆ ವಾಪಸ್ ಬರೋಕೆ ಹಿರಿಯರ ಸಹಾಯನೂ ಪಡ್ಕೊಬಹುದು.
ಸಭೆಯಿಂದ ಹೊರಗೆ ಹಾಕಲ್ಪಟ್ಟವರು ಕೂಟಗಳಿಗೆ ಹಾಜರಾಗಬಹುದು
ಒಬ್ಬ ವ್ಯಕ್ತಿಯನ್ನ ಸಭೆಯಿಂದ ಹೊರಗೆ ಹಾಕಿದ್ದಾರೆ, ಆದ್ರೆ ಅವನ ಹೆಂಡ್ತಿ ಮಕ್ಕಳು ಇನ್ನೂ ಯೆಹೋವನ ಸಾಕ್ಷಿಗಳಾಗಿಯೇ ಇದ್ದಾರೆ. ಆಗ ಪರಿಸ್ಥಿತಿ ಹೇಗಿರುತ್ತೆ? ಸಭೆಯಿಂದ ಹೊರಗೆ ಹಾಕಲ್ಪಟ್ಟ ವ್ಯಕ್ತಿ ತನ್ನ ಕುಟುಂಬದವ್ರ ಜೊತೆ ಸೇರಿ ಯೆಹೋವನನ್ನ ಆರಾಧನೆ ಮಾಡಲ್ಲ ನಿಜ, ಆದ್ರೆ ಕುಟುಂಬದವ್ರ ಜೊತೆಗಿನ ಅವನ ರಕ್ತ ಸಂಬಂಧ ಹಾಗೇ ಇರುತ್ತೆ. ಅವರೆಲ್ಲರೂ ಒಂದೇ ಮನೆಯಲ್ಲಿ ಜೀವನ ಮಾಡ್ತಿರೋದ್ರಿಂದ ಹೆಂಡ್ತಿ ಜೊತೆ ಅವನಿಗಿರೋ ಸಂಬಂಧ, ಮಕ್ಕಳ ಜೊತೆ ಅವನಿಗಿರೋ ಬಾಂಧವ್ಯ ಮತ್ತು ಪ್ರೀತಿ ಹಾಗೇ ಮುಂದುವರಿಯುತ್ತೆ.
ಸಭೆಯಿಂದ ಹೊರಗೆ ಹಾಕಲ್ಪಟ್ಟ ವ್ಯಕ್ತಿ ತನ್ನನ್ನ ಹಿರಿಯರು ಭೇಟಿ ಮಾಡೋಕೆ ಕೇಳಿಕೊಳ್ಳಬಹುದು. ಈ ತರ ಭೇಟಿ ಮಾಡುವಾಗ ಅವರು ಬೈಬಲಿನಲ್ಲಿರುವ ಸಲಹೆಗಳನ್ನ ಪ್ರೀತಿಯಿಂದ ಹೇಳ್ತಾರೆ. ಆತನನ್ನ ದಯೆಯಿಂದ ಪ್ರೋತ್ಸಾಹಿಸ್ತಾ ತನ್ನ ತಪ್ಪನ್ನ ಬದಲಾಯಿಸಿಕೊಂಡು ದೇವರ ಹತ್ರ ವಾಪಸ್ ಬರೋಕೆ ಸಹಾಯ ಮಾಡ್ತಾರೆ. (ಜೆಕರ್ಯ 1:3) ಆ ವ್ಯಕ್ತಿ ತನ್ನ ಕೆಟ್ಟ ನಡತೆಯನ್ನ ಬಿಟ್ಟು, ತನಗೆ ಬೈಬಲ್ ನೀತಿ-ನಿಯಮಗಳ ಪ್ರಕಾರ ನಡ್ಕೊಳೋಕೆ ಮನಸ್ಸಿದೆ ಅಂತ ತನ್ನ ನಡತೆ ಮೂಲಕ ತೋರಿಸೋದಾದ್ರೆ ಅವನು ಮತ್ತೆ ಸಭೆಯ ಭಾಗ ಆಗಬಹುದು. ಆಗ ಸಭೆಯವರು ‘ಅವನನ್ನ ಮನಸಾರೆ ಕ್ಷಮಿಸ್ತಾರೆ ಮತ್ತು ಸಮಾಧಾನ ಮಾಡ್ತಾರೆ.’ ಹಿಂದೆ ಪಾಪ ಮಾಡಿ ತನ್ನ ನಡತೆಯನ್ನ ಬದಲಾಯಿಸಿಕೊಂಡ ವ್ಯಕ್ತಿನ ಕೊರಿಂಥ ಸಭೆಯವರೂ ಹೀಗೇ ಕ್ಷಮಿಸಿದ್ರು.—2 ಕೊರಿಂಥ 2:6-8.
ಮುಂಚೆ ಸಭೆಯಿಂದ ಹೊರಗೆ ಹಾಕಲ್ಪಟ್ಟ ವ್ಯಕ್ತಿಗಳಿಗೆ ಈಗ ಹೇಗೆ ಅನಿಸ್ತಿದೆ?
ಮುಂಚೆ ಯೆಹೋವ ಸಾಕ್ಷಿಗಳಾಗಿದ್ದು ಸಭೆಯಿಂದ ಹೊರಗೆ ಹಾಕಲ್ಪಟ್ಟು, ಈಗ ದೇವರ ಹತ್ರ ವಾಪಸ್ ಬಂದವರ ಮಾತುಗಳನ್ನ ಗಮನಿಸಿ.
“ನಾನು ಸಭೆಗೆ ವಾಪಸ್ ಬರಬೇಕು ಅಂತ ನಿರ್ಧಾರ ಮಾಡಿದಾಗ, ಇಷ್ಟು ವರ್ಷ ನಾನು ಏನೆಲ್ಲಾ ಮಾಡ್ದೆ ಅಂತ ಹಿರಿಯರು ಕೇಳ್ತಾರೆ ಅಂತ ಅಂದ್ಕೊಂಡಿದ್ದೆ. ಆದ್ರೆ ಅವರು ನಂಗೆ, ‘ಇನ್ಮುಂದೆ ನೀನು ಏನ್ ಮಾಡ್ತೀಯೋ ಅದಕ್ಕೆ ಗಮನ ಕೊಡು’ ಅಂತ ಹೇಳಿದ್ರು. ಅವ್ರ ಮಾತುಗಳನ್ನ ಕೇಳಿದಾಗ ನಂಗೆ ತುಂಬಾ ಸಮಾಧಾನ ಆಯ್ತು.”—ಮರಿಯ, ಅಮೆರಿಕ.
“ನಾನು ಸಭೆಗೆ ವಾಪಸ್ ಬಂದಿದ್ದಕ್ಕೆ ಸಭೆಯವ್ರಿಗೆ ತುಂಬಾ ಖುಷಿ ಆಯ್ತು. ಅವರು ನನ್ನನ್ನ ಅಮೂಲ್ಯವಾಗಿ ನೋಡಿದ್ರು. ಸಹೋದರ ಸಹೋದರಿಯರು ಮತ್ತು ಯೆಹೋವ ದೇವರು ನನ್ನನ್ನ ಕ್ಷಮಿಸಿದ್ದಾರೆ ಅಂತ ಗೊತ್ತಾದಾಗ ನಂಗೆ ತುಂಬಾ ಸಮಾಧಾನ ಆಯ್ತು. ಯೆಹೋವ ದೇವರ ಜೊತೆಗಿರೋ ಸ್ನೇಹನ ಗಟ್ಟಿ ಮಾಡ್ಕೊಳ್ಳೋಕೆ ಹಿರಿಯರು ನಂಗೆ ಸಹಾಯ ಮಾಡಿದ್ರು, ಸಮಾಧಾನ ಮಾಡಿದ್ರು. ಯೆಹೋವ ಈಗಲೂ ನನ್ನನ್ನ ಅಮೂಲ್ಯವಾಗಿ ನೋಡ್ತಾನೆ, ಪ್ರೀತಿ ಮಾಡ್ತಾನೆ ಅಂತ ಅರ್ಥ ಮಾಡ್ಕೊಳ್ಳೋಕೆ ಹಿರಿಯರು ನಂಗೆ ಸಹಾಯ ಮಾಡಿದ್ರು.”—ಮಾಲ್ಕಮ್, ಸಿಯೆರಾ ಲಿಯೋನ್.
“ಯೆಹೋವ ದೇವರು ತನ್ನ ಜನರನ್ನ ಪ್ರೀತಿಸೋದ್ರಿಂದನೇ ತನ್ನ ಸಂಘಟನೆ ಶುದ್ಧವಾಗಿರಬೇಕು ಅಂತ ಇಷ್ಟ ಪಡ್ತಾನೆ. ಇದನ್ನ ನೋಡುವಾಗ ನಂಗೆ ತುಂಬಾ ಖುಷಿ ಆಗುತ್ತೆ. ಪಾಪ ಮಾಡಿದವರನ್ನ ಸಭೆಯಿಂದ ಹೊರಗೆ ಹಾಕೋದನ್ನ ನೋಡಿದಾಗ ಬೇರೆಯವರಿಗೆ ಇದು ತುಂಬಾ ಕಟುಕತನ ಅಂತ ಅನಿಸಬಹುದು. ಆದ್ರೆ ಈ ತರ ಮಾಡೋದು ತುಂಬಾ ಪ್ರಾಮುಖ್ಯ, ಅದ್ರಿಂದ ನಮಗೇ ಒಳ್ಳೇದು. ನಮ್ಮ ಮೇಲಿರೋ ಪ್ರೀತಿಯಿಂದನೇ ಹೀಗೆ ಮಾಡ್ತಾರೆ. ನಮ್ಮ ಅಪ್ಪ ಯೆಹೋವ ನಮ್ಮನ್ನ ತುಂಬಾ ಪ್ರೀತಿಸ್ತಾನೆ ಮತ್ತು ಕ್ಷಮಿಸೋಕೆ ಯಾವಾಗ್ಲೂ ರೆಡಿ ಇರ್ತಾನೆ.”—ಸ್ಯಾಂಡಿ, ಅಮೆರಿಕ.
a ಈ ಲೇಖನದಲ್ಲಿ ಹೇಳಿದ ವಿಷಯ ಸ್ತ್ರೀ ಪುರುಷ ಇಬ್ಬರಿಗೂ ಅನ್ವಯಿಸುತ್ತೆ.
b ಪಾಪ ಮಾಡಿ ಪಶ್ಚಾತ್ತಾಪ ಪಡದ ವ್ಯಕ್ತಿಗಳನ್ನ ಇದಕ್ಕೂ ಮುಂಚೆ ನಾವು ಬಹಿಷ್ಕರಿಸಲಾದ ವ್ಯಕ್ತಿ ಅಂತ ಕರೀತಿದ್ವಿ. ಆದ್ರೆ ಈಗ ನಾವು ಬೈಬಲ್ನಲ್ಲಿ ಉಪಯೋಗಿಸಿರುವ ಪದವನ್ನ ಅಂದ್ರೆ ಅವನನ್ನ ಸಭೆಯಿಂದ ಹೊರಗೆ ಹಾಕಲಾಗಿದೆ ಅನ್ನೋ ಪದವನ್ನ ಬಳಸ್ತೀವಿ.
c ಹಿರಿಯರು ನಂಬಿಗಸ್ತ ಕ್ರೈಸ್ತ ಪುರುಷರಾಗಿದ್ದಾರೆ, ಅವರು ಬೈಬಲಿನಲ್ಲಿರುವ ವಿಷಯಗಳನ್ನ ಕಲಿಸ್ತಾರೆ. ಅಷ್ಟೇ ಅಲ್ಲ, ಯೆಹೋವನ ಜನರನ್ನ ಪ್ರೀತಿಯಿಂದ ನೋಡ್ಕೊಂಡು ಅವರಿಗೆ ಸಹಾಯ ಮಾಡ್ತಾ, ಪ್ರೋತ್ಸಾಹ ಕೊಡ್ತಾರೆ. ಈ ಕೆಲಸ ಮಾಡೋದಕ್ಕೆ ಅವರಿಗೆ ಯಾವುದೇ ತರ ಸಂಬಳ ಸಿಗಲ್ಲ.—1 ಪೇತ್ರ 5:1-3.
d ಕೆಲವೊಂದು ಅತಿರೇಕದ ಸಂದರ್ಭಗಳಲ್ಲಿ, ಸಭೆಯನ್ನ ಬಿಟ್ಟು ಹೋದ ವ್ಯಕ್ತಿ ಸಭೆಗೆ ಕೆಟ್ಟ ಹೆಸರು ತರೋಕೆ ಮತ್ತು ಸಭೆಯಲ್ಲಿರೋರನ್ನ ಕುಗ್ಗಿಸೋಕೆ ಪ್ರಯತ್ನ ಮಾಡ್ತಾನೆ. ಅಷ್ಟೇ ಅಲ್ಲ, ಸಭೆಯಲ್ಲಿರೋರೂ ಕೆಟ್ಟ ಕೆಲಸ ಮಾಡಬೇಕು ಅಂತ ಒತ್ತಾಯ ಮಾಡ್ತಾನೆ. ಇಂಥಾ ಸಂದರ್ಭದಲ್ಲಿ ನಾವು ಬೈಬಲ್ ಹೇಳೋ ತರ ಆ ವ್ಯಕ್ತಿಗೆ “ನಮಸ್ಕಾರ” ಕೂಡ ಹೇಳಲ್ಲ.—2 ಯೋಹಾನ 9-11.