ಮೇಕಪ್ ಮತ್ತು ಆಭರಣಗಳನ್ನ ಹಾಕೊಳ್ಳೋದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಬೈಬಲ್ ಕೊಡೋ ಉತ್ತರ
ಮೇಕಪ್ ಮಾಡ್ಕೊಳ್ಳೋದು, ಆಭರಣ ಹಾಕಿಕೊಳ್ಳೋದು ಮತ್ತು ಯಾವುದೇ ರೀತಿಯ ಅಲಂಕಾರ ಮಾಡ್ಕೊಳ್ಳೋದ್ರ ಬಗ್ಗೆ ಬೈಬಲ್ ವಿವರವಾಗಿ ಹೇಳಿಲ್ಲ. ಆದ್ರೂ ಹಾಗೆ ಮಾಡ್ಕೊಳ್ಳೋದು ತಪ್ಪು ಅಂತನೂ ಎಲ್ಲೂ ಹೇಳಿಲ್ಲ. ಆದ್ರೆ ಹೊರ ತೋರಿಕೆಗಿಂತ ಯಾವತ್ತೂ ಹಾಳಾಗದ “ಶಾಂತಿ, ಸೌಮ್ಯಭಾವ ಅನ್ನೋ ಗುಣಗಳಿಂದ ನಿಮ್ಮನ್ನ ಅಲಂಕಾರ ಮಾಡ್ಕೊಬೇಕು” ಅಂತ ಅದು ಹೇಳುತ್ತೆ.—1 ಪೇತ್ರ 3:3, 4.
ಅಲಂಕಾರ ಮಾಡ್ಕೊಳ್ಳೋದು ತಪ್ಪಲ್ಲ
ಬೈಬಲ್ ಕಾಲದಲ್ಲಿದ್ದ ನಂಬಿಗಸ್ತ ಸ್ತ್ರೀಯರು ಅಲಂಕಾರ ಮಾಡ್ಕೊಂಡ್ರು. ಅಬ್ರಹಾಮನ ಮಗನಾದ ಇಸಾಕನನ್ನ ಮದುವೆ ಆದ ರೆಬೆಕ್ಕ ಚಿನ್ನದ ಮೂಗುತಿ, ಚಿನ್ನದ ಬಳೆ ಮತ್ತು ಬೇರೆ ಬೆಲೆ ಬಾಳೋ ಆಭರಣಗಳನ್ನ ಹಾಕಿಕೊಂಡಿದ್ದಳು ಅಂತ ಬೈಬಲ್ ಹೇಳುತ್ತೆ. ಈ ಆಭರಣಗಳನ್ನ ಅವಳ ಭಾವೀ ಮಾವ ಅವಳಿಗೆ ಕೊಟ್ಟನು. (ಆದಿಕಾಂಡ 24:22, 30, 53) ಪರ್ಷಿಯ ಸಾಮ್ರಾಜ್ಯದ ರಾಣಿ ಆಗಲಿಕ್ಕಿದ್ದ ಎಸ್ತೇರ್ ಕೂಡ ತನ್ನ ‘ಸೌಂದರ್ಯ ಹೆಚ್ಚಿಸಿಕೊಂಡಳು’ ಅಂತ ಬೈಬಲ್ ಹೇಳುತ್ತೆ. (ಎಸ್ತೇರ್ 2:7, 9, 12) ಈ ರೀತಿ ಸೌಂದರ್ಯ ಹೆಚ್ಚಿಸಿಕೊಳ್ಳೋದ್ರಲ್ಲಿ “ಸೌಂದರ್ಯ ಲೇಪನಗಳನ್ನ ಹಚ್ಕೊಳ್ಳೋದು” ಅಥವಾ ಬೇರೆ ಬೇರೆ ರೀತಿಯ “ಮೇಕಪ್ ಹಾಕಿಕೊಳ್ಳೋದು” ಸೇರಿತ್ತು.—ನ್ಯೂ ಇಂಟರ್ನ್ಯಾಷನಲ್ ವರ್ಷನ್.
ಬೈಬಲಲ್ಲಿ ಒಳ್ಳೇ ವಿಷಯಗಳನ್ನ ಸೂಚಿಸೋಕೆ ಆಭರಣಗಳ ಉದಾಹರಣೆಗಳನ್ನ ಬಳಸಲಾಗಿದೆ. ಒಳ್ಳೇ ಸಲಹೆ ಕೊಡೋ ವ್ಯಕ್ತಿಯ ಮಾತು “ಕೇಳೋ ಕಿವಿಗೆ ಅದು ಬಂಗಾರದ ಕಿವಿಯೋಲೆ ತರ” ಅಂತ ಹೇಳಿದೆ. (ಜ್ಞಾನೋಕ್ತಿ 25:12) ಅದಷ್ಟೇ ಅಲ್ಲ, ಗಂಡ ತನ್ನ ಹೆಂಡತಿಗೆ ಬಳೆ, ಸರ, ಕಿವಿಯೋಲೆ ಹಾಕಿ ಅಲಂಕರಿಸೋ ತರ ತಾನು ಇಸ್ರಾಯೇಲ್ ಜನಾಂಗವನ್ನ ಅಲಂಕರಿಸ್ತೀನಿ ಅಂತ ದೇವರು ಹೇಳಿದನು. ಈ ರೀತಿ ಅಲಂಕಾರ ಮಾಡಿದ್ರಿಂದ ಆ ಜನಾಂಗ ತುಂಬಾ ‘ಸುಂದರವಾಯ್ತು.’—ಯೆಹೆಜ್ಕೇಲ 16:11-13.
ಮೇಕಪ್ ಮತ್ತು ಆಭರಣಗಳನ್ನ ಹಾಕಿಕೊಳ್ಳೋದ್ರ ಬಗ್ಗೆ ಇರೋ ತಪ್ಪು ಅಭಿಪ್ರಾಯ
ತಪ್ಪು ಅಭಿಪ್ರಾಯ: 1 ಪೇತ್ರ 3:3ರಲ್ಲಿ “ಕೂದಲು ಬಾಚೋದು, ಚಿನ್ನದ ಒಡವೆ ಹಾಕೊಳ್ಳೋದು” ತಪ್ಪು ಅಂತ ಇದೆ.
ನಿಜ: ಈ ವಚನದ ಹಿನ್ನಲೆ ನೋಡೋದಾದ್ರೆ ಇಲ್ಲಿ ಹೊರಗಿನ ತೋರಿಕೆ ಅಥವಾ ಅಲಂಕಾರಕ್ಕಿಂತ ಒಳ್ಳೇ ಗುಣಗಳನ್ನ ತೋರಿಸೋದು ಮುಖ್ಯ ಅಂತ ಬೈಬಲ್ ಹೇಳುತ್ತೆ. (1 ಪೇತ್ರ 3:3-6) ಬೈಬಲಿನ ಬೇರೆ ಬೇರೆ ವಚನಗಳಲ್ಲೂ ಇದೇ ತರ ಇದೆ.—1 ಸಮುವೇಲ 16:7; ಜ್ಞಾನೋಕ್ತಿ 11:22; 31:30; 1 ತಿಮೊತಿ 2:9, 10.
ತಪ್ಪು ಅಭಿಪ್ರಾಯ: ದುಷ್ಟ ರಾಣಿ ಈಜೆಬೇಲ್ ತನ್ನ “ಕಣ್ಣಿಗೆ ಕಾಡಿಗೆ” ಹಚ್ಕೊಂಡಳು ಅಂತ ಬೈಬಲ್ ಹೇಳುತ್ತೆ. ಇದ್ರಿಂದ ಮೇಕಪ್ ಮಾಡ್ಕೊಳ್ಳೋದು ತಪ್ಪು.—2 ಅರಸು 9:30.
ನಿಜ: ಈಜೆಬೇಲ್ ಮಾಟಮಂತ್ರ ಮಾಡ್ತಿದ್ದಳು, ಕೊಲೆ ಮಾಡಿದಳು. ಇದಕ್ಕೆ ಅವಳಿಗೆ ತೀರ್ಪಾಯ್ತೇ ಹೊರತು ಅವಳ ಹೊರ ತೋರಿಕೆಗೆ ಅಲ್ಲ.—2 ಅರಸು 9:7, 22, 36, 37.