ಯುವಜನರ ಪ್ರಶ್ನೆಗಳು
ನಾನು ಯಾರನ್ನ ಒಳ್ಳೆ ರೋಲ್ ಮಾಡೆಲ್ ಆಗಿ ಆರಿಸಿಕೊಳ್ಳಲಿ?
“ಶಾಲೆಯಲ್ಲಿ ನಾನು ಸಮಸ್ಯೆಗಳನ್ನ ಎದುರಿಸಿದಾಗ, ನನಗೆ ಇಷ್ಟ ಇರೋ, ಇದೇ ರೀತಿಯ ಸಮಸ್ಯೆಯನ್ನ ಅನುಭವಿಸಿದ ಒಬ್ಬ ವ್ಯಕ್ತಿಯ ಬಗ್ಗೆ ಯೋಚಿಸೋದು ನನಗೆ ಸಹಾಯ ಮಾಡ್ತು. ಆಮೇಲೆ ನಾನು ಅವರೇನು ಮಾಡಿದ್ರೋ ಅದನ್ನೇ ಮಾಡಲು ಪ್ರಯತ್ನಿಸಿದೆ. ಒಬ್ಬ ರೋಲ್ ಮಾಡೆಲ್ ಇರೋದು ಕಷ್ಟಕರ ಸಂದರ್ಭಗಳನ್ನ ನಿಭಾಯಿಸೋಕೆ ಸುಲಭ ಮಾಡುತ್ತೆ.”—ಹ್ಯಾಲಿ.
ಒಬ್ಬ ರೋಲ್ ಮಾಡೆಲ್ ನಿಮಗೆ ಸಮಸ್ಯೆಗಳಿಂದ ದೂರ ಇರಲು ಮತ್ತು ನಿಮ್ಮ ಗುರಿಗಳನ್ನ ತಲುಪಲು ಸಹಾಯ ಮಾಡಬಹುದು. ಅದಕ್ಕೆ, ಒಳ್ಳೆ ರೋಲ್ ಮಾಡೆಲ್ನ ಆಯ್ಕೆ ಮಾಡೋದು ತುಂಬ ಮುಖ್ಯ.
ರೋಲ್ ಮಾಡೆಲ್ನ ಆರಿಸಿಕೊಳ್ಳುವಾಗ ಯಾಕೆ ಹುಷಾರಾಗಿರಬೇಕು?
ನೀವು ಯಾರನ್ನ ರೋಲ್ ಮಾಡೆಲ್ ಆಗಿ ಆರಿಸಿಕೊಳ್ಳುತ್ತೀರೋ ಅದು ನಿಮ್ಮ ನಡೆ-ನುಡಿ ಮೇಲೆ ಪ್ರಭಾವ ಬೀರುತ್ತೆ.
ಬೈಬಲ್ನಲ್ಲಿ ಕ್ರೈಸ್ತರು ಒಳ್ಳೆ ಮಾದರಿಯಾಗಿರೋರನ್ನ ಗಮನಿಸಬೇಕಂತ ಹೇಳುತ್ತೆ. ಬೈಬಲ್ ಹೀಗೆ ಹೇಳುತ್ತೆ: “ಅವ್ರ ಒಳ್ಳೇ ನಡತೆಯಿಂದ ಎಷ್ಟೆಲ್ಲ ಪ್ರಯೋಜನ ಆಗಿದೆ ಅಂತ ತುಂಬಾ ಯೋಚ್ನೆ ಮಾಡಿ ಅವ್ರ ತರ ನಂಬಿಕೆ ತೋರಿಸಿ.”—ಇಬ್ರಿಯ 13:7.
ಹೀಗೆ ಮಾಡಿ ನೋಡಿ: ನೀವು ಆಯ್ಕೆ ಮಾಡುವ ರೋಲ್ ಮಾಡೆಲ್, ನಿಮ್ಮ ಮೇಲೆ ಒಳ್ಳೆಯ ಅಥವಾ ಕೆಟ್ಟ ಪ್ರಭಾವ ಬೀರುವುದರಿಂದ, ಫೇಮಸ್ ಆಗಿರೋರನ್ನ ಅಥವಾ ನಿಮ್ಮ ವಯಸ್ಸಿನವರನ್ನ ಆಯ್ಕೆ ಮಾಡಿಕೊಳ್ಳೋ ಬದಲು, ನಿಜವಾಗಿಯೂ ಒಳ್ಳೆ ಗುಣಗಳಿರೋ ವ್ಯಕ್ತಿಯನ್ನ ಆಯ್ಕೆಮಾಡಿ.
“ನಾನು ಆ್ಯಡಮ್ ಅನ್ನೋ ಜೊತೆ ಕ್ರೈಸ್ತನಿಂದ ತುಂಬ ಕಲ್ತಿದ್ದೀನಿ, ಅವನು ನಡ್ಕೊಳ್ಳೋ ರೀತಿ ನನ್ನ ಮೇಲೆ ಪ್ರಭಾವ ಬೀರ್ತು. ಅವನು ಹೇಳಿದ ಮತ್ತು ಮಾಡಿದ ಕೆಲವು ವಿಷಯಗಳು ನಾನಿನ್ನೂ ಮರೆತಿಲ್ಲ. ಅವನು ನನ್ನ ಮೇಲೆ ಎಷ್ಟು ಪ್ರಭಾವ ಬೀರಿದ ಅಂತ ಅವನಿಗೆ ಗೊತ್ತಿಲ್ಲ.”—ಕೊಲಿನ್.
ನೀವು ಯಾರನ್ನ ರೋಲ್ ಮಾಡೆಲ್ ಆಗಿ ಆಯ್ಕೆ ಮಾಡ್ತೀರೋ ಅವರು ನಿಮ್ಮ ಯೋಚನೆ ಹಾಗೂ ಭಾವನೆಗಳ ಮೇಲೆ ಪರಿಣಾಮ ಬೀರ್ತಾರೆ.
ಬೈಬಲ್ ಹೀಗೆ ಹೇಳುತ್ತೆ: “ಮೋಸ ಹೋಗಬೇಡಿ. ಕೆಟ್ಟ ಸಹವಾಸ ಒಳ್ಳೇ ನಡತೆಯನ್ನ ಹಾಳು ಮಾಡುತ್ತೆ.”—1 ಕೊರಿಂಥ 15:33.
ಹೀಗೆ ಮಾಡಿ ನೋಡಿ: ಕೇವಲ ನೋಡೋಕೆ ಚೆನ್ನಾಗಿರೋ ವ್ಯಕ್ತಿಯನಲ್ಲ, ಒಳ್ಳೆ ಗುಣಗಳಿರೋ ವ್ಯಕ್ತಿಯನ್ನ ಆರಿಸಿಕೊಳ್ಳಿ. ಇಲ್ಲದಿದ್ರೆ, ನಿಮಗೆ ನಿರಾಶೆ ಕಟ್ಟಿಟ್ಟ ಬುತ್ತಿ.
“ನಮ್ಮನ್ನ ನಾವು ಯಾವಾಗಲೂ ನೋಡೋಕೆ ಚೆನ್ನಾಗಿರೋ ವ್ಯಕ್ತಿ ಜೊತೆ ಹೋಲಿಸಿಕೊಂಡಾಗ ನಾವು ಯಾವುದಕ್ಕೂ ಲಾಯಕ್ಕಿಲ್ಲ, ನಾನು ನೋಡೋಕೆ ಚೆನ್ನಾಗಿಲ್ಲ ಅನ್ನೋ ಭಾವನೆ ಮೂಡಿಸುತ್ತೆ. ಇದರಿಂದಾಗಿ ಮೂರು ಹೊತ್ತು ನಾವು ಚೆನ್ನಾಗಿ ಕಾಣಬೇಕು ಅನ್ನೋದ್ರ ಬಗ್ಗೆನೇ ಯೋಚಿಸ್ತಾ ಇರ್ತೀವಿ.”—ತಾಮಾರ.
ಸ್ವಲ್ಪ ಯೋಚಿಸಿ: ಸೆಲೆಬ್ರಿಟಿಗಳ್ನ ಹಾಗೂ ಕ್ರೀಡಾಪಟುಗಳನ್ನ ರೋಲ್ ಮಾಡೆಲ್ ಆಗಿ ಆಯ್ಕೆ ಮಾಡೋದ್ರಿಂದ ಏನಾದ್ರು ಅಪಾಯಗಳಿದೆಯಾ?
ನೀವು ಯಾರನ್ನ ರೋಲ್ ಮಾಡೆಲ್ ಆಗಿ ಆಯ್ಕೆ ಮಾಡ್ತಿರೋ, ಅವರು ನೀವು ನಿಮ್ಮ ಗುರಿಯನ್ನ ಮುಟ್ತೀರ ಇಲ್ವಾ ಅನ್ನೋದ್ರ ಮೇಲೆ ಪರಿಣಾಮ ಬೀರ್ತಾರೆ.
ಬೈಬಲ್ ಹೀಗೆ ಹೇಳುತ್ತೆ: “ವಿವೇಕಿ ಜೊತೆ ಸಹವಾಸ ಮಾಡುವವನು ವಿವೇಕಿ ಆಗ್ತಾನೆ, ಮೂರ್ಖನ ಜೊತೆ ಸೇರುವವನು ಹಾಳಾಗಿ ಹೋಗ್ತಾನೆ.”—ಜ್ಞಾನೋಕ್ತಿ 13:20.
ಹೀಗೆ ಮಾಡಿ ನೋಡಿ: ನೀವು ಬೆಳೆಸಿಕೊಳ್ಳೋಕೆ ಇಷ್ಟ ಪಡೋ ಗುಣಗಳಿರೋ ವ್ಯಕ್ತಿಗಳನ್ನೇ ನಿಮ್ಮ ರೋಲ್ ಮಾಡೆಲ್ ಆಗಿ ಆಯ್ಕೆ ಮಾಡ್ಕೊಳ್ಳಿ. ಅವರನ್ನ ನೋಡ್ತಾ, ಗಮನಿಸ್ತಾ, ನೀವು ನಿಮ್ಮ ಗುರಿ ಮುಟ್ಟೋದಕ್ಕೆ ಯಾವ ನಿರ್ದಿಷ್ಟ ಹೆಜ್ಜೆಗಳನ್ನ ತಗೊಳ್ಳಬೇಕು ಅನ್ನೋದನ್ನ ಕಲೀತಿರ.
“ಗುರಿಗಳನ್ನ ಇಡಬೇಕಾದ್ರೆ, ‘ನಾನು ಜವಾಬ್ದಾರಿ ಇರೋ ವ್ಯಕ್ತಿಯಾಗಬೇಕು’ ಅಂತ ಸುಮ್ನೆ ಅನ್ಕೊಂಡ್ರೆ ಸಾಕಾಗಲ್ಲ, ಅದ್ರ ಬದಲು ‘ನಾನು ಜೇನ್ ತರ ಜವಾಬ್ದಾರಿ ಇರೋ ವ್ಯಕ್ತಿಯಾಗಿರಬೇಕು. ಯಾಕಂದ್ರೆ ಅವಳು ಯಾವಾಗ್ಲೂ ಸಮಯಕ್ಕೆ ಸರಿಯಾಗಿ ಬರ್ತಾಳೆ, ತನ್ನ ಎಲ್ಲಾ ನೇಮಕನಾ ಗಂಭೀರವಾಗಿ ನೋಡ್ತಾಳೆ’ ಅಂತ ಯೋಚಿಸಿ.”—ಮಿರ್ಯಾಮ್.
ಇದನ್ನ ನೆನಪಿಡಿ: ನೀವು ಒಳ್ಳೆ ರೋಲ್ ಮಾಡೆಲ್ನ ಆಯ್ಕೆ ಮಾಡಿದಾಗ, ನೀವು ಯಾವ ರೀತಿಯ ವ್ಯಕ್ತಿಯಾಗುತ್ತೀರ ಅನ್ನೋದು ನಿಮ್ಮ ಕಂಟ್ರೋಲ್ನಲ್ಲಿರುತ್ತೆ.
ನಿಮ್ಮ ಗುರಿಗಳನ್ನ ಮುಟ್ಟೋಕೆ ಶಾರ್ಟ್ ಕಟ್ ಬೇಕಂದ್ರೆ, ಒಳ್ಳೆ ರೋಲ್ ಮಾಡೆಲ್ನ ಹುಡುಕಿ, ಅನುಕರಿಸಿ!
ಹೇಗೆ ಆರಿಸಿಕೊಳ್ಳೋದು?
ಕೆಳಗೆ ಕೊಟ್ಟಿರುವ ಎರಡು ವಿಧಾನಗಳಲ್ಲಿ ಒಂದನ್ನ ಬಳಸ್ತಾ ನೀವು ಒಳ್ಳೆ ರೋಲ್ ಮಾಡೆಲ್ನ ಆರಿಸಿಕೊಳ್ಳಬಹುದು.
ಮೊದಲು ನೀವು ಬೆಳೆಸಿಕೊಳ್ಳೋಕೆ ಇಷ್ಟಪಡೋ ಗುಣ ಯಾವುದು ಅಂತ ಆರಿಸಿಕೊಳ್ಳಿ, ಆಮೇಲೆ ನಿಮಗೆ ಇಷ್ಟ ಇರೋ ಹಾಗೂ ಆ ಗುಣನ ಬೆಳೆಸಿಕೊಂಡಿರೋ ವ್ಯಕ್ತಿಯನ್ನ ನಿಮ್ಮ ರೋಲ್ ಮಾಡೆಲ್ ಆಗಿ ಆರಿಸಿಕೊಳ್ಳಬಹುದು.
ಮೊದಲು ನಿಮಗೆ ಇಷ್ಟ ಇರೋ ವ್ಯಕ್ತಿಯನ್ನ ನಿಮ್ಮ ರೋಲ್ ಮಾಡೆಲ್ ಆಗಿ ಆರಿಸಿಕೊಳ್ಳಿ. ಆಮೇಲೆ ಅವರಲ್ಲಿ ನಿಮಗೆ ಇಷ್ಟ ಆಗಿರೋ ಒಂದು ಒಳ್ಳೆ ಗುಣನ ಆರಿಸಿಕೊಂಡು ಅದನ್ನ ಬೆಳೆಸಿಕೊಳ್ಳಿ.
ಈ ಲೇಖನದೊಂದಿಗೆ ಕೊಟ್ಟಿರೋ ವರ್ಕ್ ಶೀಟ್ ಅದನ್ನ ಮಾಡಲು ನಿಮಗೆ ಸಹಾಯ ಮಾಡುತ್ತೆ.
ನಿಮ್ಮ ರೋಲ್ ಮಾಡೆಲ್ ಗಳಾಗಿ ನೀವು ಯಾರನ್ನೆಲ್ಲ ಆರಿಸಿಕೊಳ್ಳಬಹುದು:
ನಿಮ್ಮ ವಯಸ್ಸಿನವರು. “ನಾನು ನನ್ನ ಬೆಸ್ಟ್ ಫ್ರೆಂಡ್ ತರ ಆಗಬೇಕು. ಬೇರೆಯವರಿಗೆ ಅಗತ್ಯ ಇದ್ದಾಗ ಅವರಿಗೆ ಕಾಳಜಿ ತೋರ್ಸೋಕೆ ಅವಳು ಯಾವತ್ತೂ ಹಿಂದೆ ಮುಂದೆ ನೋಡಲ್ಲ, ಯಾವಾಗ್ಲೂ ರೆಡಿಯಾಗಿರ್ತಾಳೆ. ಅವಳು ನನಗಿಂತ ಚಿಕ್ಕವಳು, ಆದರೆ ನನ್ನಲ್ಲಿ ಇಲ್ದೇ ಇರೋ ಅನೇಕ ಒಳ್ಳೆ ಗುಣಗಳು ಅವಳಲ್ಲಿದೆ. ಅದಕ್ಕೆ ನಾನು ಅವಳನ್ನ ನನ್ನ ರೋಲ್ ಮಾಡೆಲ್ ಆಗಿ ಇಟ್ಕೊಳ್ಳೋಕೆ ಇಷ್ಟಪಡ್ತೀನಿ”—ಮಿರ್ಯಾಮ್.
ವಯಸ್ಸಲ್ಲಿ ನಿಮಗಿಂತ ದೊಡ್ಡವರು. ಅವರು ನಿಮ್ಮ ಹೆತ್ತವರು ಅಥವಾ ನಿಮ್ಮ ಸಭೆಯಲ್ಲಿರುವವರಾಗಿರಬಹುದು. “ನನ್ನ ಅಪ್ಪ ಅಮ್ಮ ಇಬ್ಬರೂ ನನ್ನ ರೋಲ್ ಮಾಡೆಲ್ ಗಳು ಅನ್ನೋದ್ರಲ್ಲಿ ಡೌಟೇ ಇಲ್ಲ. ಅವರಲ್ಲಿ ತುಂಬಾ ಒಳ್ಳೆ ಗುಣಗಳಿದೆ. ಅವರಲ್ಲೂ ಕೆಲವು ಕುಂದು ಕೊರತೆಗಳು ಇದೆ ನಿಜ, ಆದ್ರೂ ಅವರು ತುಂಬಾ ನಿಯತ್ತಾಗಿದ್ದಾರೆ. ನಾನೂ ದೊಡ್ಡವಳಾದ ಮೇಲೆ ನನ್ ಬಗ್ಗೆನೂ ಬೇರೆಯವರು ಇದೇ ತರ ಹೇಳಬಹುದು ಅಂತ ಭಾವಿಸ್ತೀನಿ.”—ಆ್ಯನೆಟ್.
ಬೈಬಲ್ನಲ್ಲಿರೋ ವ್ಯಕ್ತಿಗಳು. “ಬೈಬಲ್ನಲ್ಲಿರೋ ಅನೇಕ ವ್ಯಕ್ತಿಗಳನ್ನ ನಾನು ನನ್ನ ರೋಲ್ ಮಾಡೆಲ್ ಆಗಿ ಆರಿಸಿಕೊಂಡಿದ್ದೀನಿ—ತಿಮೊತಿ, ರೂತ್, ಯೋಬ, ಪೇತ್ರ, ಪುಟ್ಟ ಇಸ್ರಾಯೇಲ್ ಹುಡುಗಿ—ಪ್ರತಿಯೊಬ್ಬರನ್ನ ಒಂದೊಂದು ಕಾರಣಕ್ಕೆ ಆರಿಸಿಕೊಂಡಿದ್ದೀನಿ. ನಾನು ಇವರ ಬಗ್ಗೆ ಎಷ್ಟು ಚೆನ್ನಾಗಿ ಕಲಿತಿನೋ, ಅಷ್ಟು ಅವರು ನನಗೆ ನೈಜ್ಯ ವ್ಯಕ್ತಿಗಳಾಗಿದ್ದಾರೆ. ಅವರ ನಂಬಿಕೆಯನ್ನು ಅನುಕರಿಸಿ ಪುಸ್ತಕ ಹಾಗೂ ಯುವಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್) ಪುಸ್ತಕಗಳ ಎರಡೂ ಸಂಪುಟಗಳಲ್ಲಿರೋ ‘ರೋಲ್ ಮಾಡೆಲ್ ಇಂಡೆಕ್ಸ್’ ನಲ್ಲಿ ಇವರೆಲ್ಲರ ಬಗ್ಗೆ ಓದಿ ಕಲಿಯುವಾಗ ನನಗೆ ತುಂಬಾ ಖುಷಿಯಾಗುತ್ತೆ.”—ಮೆಲಿಂಡ.
ಹೀಗೆ ಮಾಡಿ ನೋಡಿ: ಕೇವಲ ಒಬ್ಬ ವ್ಯಕ್ತಿಯನ್ನ ಮಾತ್ರ ನಿಮ್ಮ ರೋಲ್ ಮಾಡೆಲ್ ಆಗಿ ಮಾಡ್ಕೊಳ್ಬೇಕಂತೇನಿಲ್ಲ. ಅಪೊಸ್ತಲ ಪೌಲ ಜೊತೆ ಕ್ರೈಸ್ತರಿಗೆ ಹೀಗೆ ಹೇಳಿದ: “ಸಹೋದರರೇ, ನೀವೆಲ್ಲ ನನ್ನನ್ನ ಅನುಕರಿಸೋಕೆ ಪ್ರಯತ್ನಿಸಿ. ನಾವು ನಿಮಗಾಗಿ ಇಟ್ಟ ಮಾದರಿಯನ್ನ ಯಾರೆಲ್ಲ ಅನುಕರಿಸ್ತಿದ್ದಾರೋ ಅವ್ರಿಗೆ ಗಮನಕೊಡಿ”—ಫಿಲಿಪ್ಪಿ 3:17.
ನಿಮಗೆ ಗೊತ್ತಾ? ಬೇರೆಯವರಿಗೆ ನೀವು ಕೂಡ ರೋಲ್ ಮಾಡೆಲ್ ಆಗಬಹುದು! ಬೈಬಲ್ ಹೀಗೆ ಹೇಳುತ್ತೆ: “ನಿನ್ನ ಮಾತು, ನಡತೆ, ಪ್ರೀತಿ, ನಂಬಿಕೆ, ನೈತಿಕ ಶುದ್ಧತೆಯಲ್ಲಿ ನಂಬಿಗಸ್ತರಿಗೆ ಮಾದರಿಯಾಗಿರು.”—1 ತಿಮೊತಿ 4:12.
“ನೀವು ನಿಮ್ಮಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ, ಇತರರಿಗೂ ಸಹಾಯ ಮಾಡಬಹುದು. ನಿಮಗೆ ಗೊತ್ತಾಗಲ್ಲ, ಆದರೆ ಬೇರೆಯವರು ನಿಮ್ಮನ್ನ ಗಮನಿಸುತ್ತಿರುತ್ತಾರೆ ಮತ್ತು ನೀವು ಏನ್ ಹೇಳ್ತಿರೋ, ಏನ್ ಮಾಡ್ತೀರೋ ಅದು ಅವರ ಜೀವನವನ್ನ ಬದಲಾಯಿಸುತ್ತಿರುತ್ತೆ.”—ಕಿಯಾನ