ಬೈಬಲ್ ವಚನಗಳ ವಿವರಣೆ
ಮಾರ್ಕ 11:24—“ಪ್ರಾರ್ಥನೆಯಲ್ಲಿ ನೀವು ಏನೇ ಕೇಳಿದ್ರೂ, ಅದು ನಿಮಗೆ ಈಗಾಗಲೇ ಸಿಕ್ಕಿದೆ ಅಂತ ನಂಬಿ”
“ಅದಕ್ಕೆ ಹೇಳ್ತಿದ್ದೀನಿ, ನೀವು ಯಾವುದಕ್ಕಾಗಿ ಪ್ರಾರ್ಥನೆ ಮಾಡ್ತಿರೋ ಅದು ಈಗಾಗ್ಲೇ ನಿಮಗೆ ಸಿಕ್ಕಿದೆ ಅಂತ ನಂಬಿದ್ರೆ ಖಂಡಿತ ಸಿಗುತ್ತೆ.”—ಮಾರ್ಕ 11:24, ಹೊಸ ಲೋಕ ಭಾಷಾಂತರ.
“ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವದೆಂದು ನಿಮಗೆ ಹೇಳುತ್ತೇನೆ.”—ಮಾರ್ಕ 11:24, ಸತ್ಯವೇದವು.
ಮಾರ್ಕ 11:24—ಅರ್ಥ.
ಈ ವಚನದಲ್ಲಿ ಯೇಸು ತನ್ನ ಹಿಂಬಾಲಕರಿಗೆ ಪ್ರಾರ್ಥನೆಗೆ ತುಂಬಾ ಶಕ್ತಿ ಇದೆ, ನೀವು ಅದರ ಮೇಲೆ ನಂಬಿಕೆ ಬೆಳೆಸಿಕೊಳ್ಳಿ ಅಂತ ಹೇಳಿದನು. ದೇವರು ಅವರ ಪ್ರಾರ್ಥನೆಯನ್ನ ಕೇಳೋದು ಅಷ್ಟೇ ಅಲ್ಲ, ಅದಕ್ಕೆ ಉತ್ರನೂ ಕೊಡ್ತಾನೆ ಅಂತ ಭರವಸೆ ಕೊಟ್ಟನು. ದೇವರ ಇಷ್ಟದ ತರ ಯಾರು ಪ್ರಾರ್ಥನೆ ಮಾಡ್ತಾರೋ ಅವರಿಗೆ ಖಂಡಿತ ಉತ್ರ ಸಿಕ್ಕೇ ಸಿಗುತ್ತೆ, ಇನ್ನೊಂದು ಮಾತಲ್ಲಿ ಹೇಳೋದಾದ್ರೆ, ಈಗಾಗ್ಲೇ ಉತ್ರ ಸಿಕ್ಕಿದೆ ಅನ್ನೋ ತರ ಇರುತ್ತೆ.
ಯೇಸು ನಂಬಿಕೆ ಇಟ್ಟು ಪ್ರಾರ್ಥನೆ ಮಾಡೋದು ಪ್ರಾಮುಖ್ಯ ಅಂತ ಹೇಳಿದನು. ಅದಕ್ಕೆ ಪ್ರಾರ್ಥನೆ ಮಾಡಿದ ವ್ಯಕ್ತಿ “ಸಂಶಯಪಡದೆ ಹೇಳಿದ್ದು ಆಗುತ್ತೆ ಅಂತ ನಂಬಿಕೆ” ಇಡಬೇಕು ಅಂತ ಯೇಸು ಒತ್ತಿ ಹೇಳಿದನು. (ಮಾರ್ಕ 11:23) ಯಾಕಂದ್ರೆ ಸಂಶಯ ಪಡೋರು “ಯೆಹೋವನಿಂದ ಏನಾದ್ರೂ ಸಿಗುತ್ತೆ ಅಂತ ಆಸೆ ಪಡ್ಲೇಬಾರದು.”a—ಯಾಕೋಬ 1:5-8.
ನಂಬಿಕೆ ಇರೋ ವ್ಯಕ್ತಿ ಎಲ್ಲಾ ಸಮಯದಲ್ಲೂ ಪ್ರಾರ್ಥನೆ ಮಾಡ್ತಾನೇ ಇರ್ತಾನೆ. (ಲೂಕ 11:9, 10; ರೋಮನ್ನರಿಗೆ 12:12) ಈ ತರ ಪ್ರಾರ್ಥನೆ ಮಾಡೋದ್ರ ಮೂಲಕ ತಾನು ಯಾವುದಕ್ಕಾಗಿ ಪ್ರಾರ್ಥನೆ ಮಾಡ್ತಿದ್ದಾನೊ ಅದು ನಿಜವಾಗ್ಲೂ ಬೇಕು ಮತ್ತು ದೇವರು ತನ್ನ ಪ್ರಾರ್ಥನೆಗೆ ಉತ್ರ ಕೊಡ್ತಾನೆ ಅನ್ನೋ ನಂಬಿಕೆ ತನಗಿದೆ ಅಂತ ತೋರಿಸ್ತಾನೆ. ಇಂಥಾ ವ್ಯಕ್ತಿ ತನ್ನ ಪ್ರಾರ್ಥನೆಗೆ ತಾನು ಅಂದ್ಕೊಂಡಿದ್ದಕ್ಕಿಂತ ಬೇರೆ ತರ ಅಥವಾ ಬೇರೆ ಸಮಯದಲ್ಲೂ ಉತ್ರ ಸಿಗಬಹುದು ಅಂತ ಅರ್ಥ ಮಾಡ್ಕೋತಾನೆ.—ಎಫೆಸ 3:20; ಇಬ್ರಿಯ 11:6.
ಪ್ರಾರ್ಥನೆ ಮಾಡಿದಾಗ ಯಾರು ಏನು ಕೇಳಿದ್ರೂ ದೇವರು ಕೊಟ್ಟು ಬಿಡ್ತಾನೆ ಅಂತ ಯೇಸು ಇಲ್ಲಿ ಹೇಳ್ತಿಲ್ಲ. ಯೇಸು ಈ ಮಾತುಗಳನ್ನ ತನ್ನ ಹಿಂಬಾಲಕರಿಗೆ, ನಂಬಿಕೆ ತೋರಿಸೋದ್ರಲ್ಲಿ ಒಳ್ಳೇ ಮಾದರಿ ಇಟ್ಟು ಯೆಹೋವನಿಗೆ ಇಷ್ಟ ಆಗೋ ರೀತಿಯಲ್ಲಿ ಸೇವೆ ಮಾಡೋದಕ್ಕೆ ತಮ್ಮ ಕೈಲಾದಷ್ಟು ಪ್ರಯತ್ನ ಮಾಡ್ತಿದ್ದ ಪುರುಷರಿಗೆ ಹೇಳಿದನು. ಯಾರು ತನ್ನ ಇಷ್ಟದ ಪ್ರಕಾರ ಪ್ರಾರ್ಥನೆ ಮಾಡುವವರ ಪ್ರಾರ್ಥನೆಯನ್ನ ಯೆಹೋವ ಕೇಳ್ತಾನೆ ಅಂತ ಬೈಬಲ್ ಹೇಳುತ್ತೆ. (1 ಯೋಹಾನ 5:14) ದೇವರ ನೀತಿ-ನಿಯಮಗಳನ್ನ ಬೇಕು ಬೇಕಂತ ಕಡೆಗಣಿಸುವವರನ್ನ ಮತ್ತು ಕೆಟ್ಟ ಕೆಲಸಗಳನ್ನ ಮಾಡ್ತಾ ಪಶ್ಚಾತ್ತಾಪ ಪಡದವರ ಪ್ರಾರ್ಥನೆಯನ್ನ ಯೆಹೋವ ದೇವರು ಕೇಳಲ್ಲ. (ಯೆಶಾಯ 1:15; ಮೀಕ 3:4; ಯೋಹಾನ 9:31) ದೇವರು ಎಂಥವರ ಪ್ರಾರ್ಥನೆಯನ್ನ ಕೇಳ್ತಾನೆ ಅನ್ನೋದಕ್ಕೆ ಈ ಚಿಕ್ಕ ವಿಡಿಯೋ ನೋಡಿ.
ಮಾರ್ಕ 11:24—ಸಂದರ್ಭ
ಯೇಸು ತನ್ನ ಭೂಜೀವಿತದ ಕೊನೆಯಲ್ಲಿ ಸಿಹಿಸುದ್ದಿ ಸಾರುವಾಗ ತನ್ನ ಶಿಷ್ಯರಿಗೆ ದೇವರ ಮೇಲೆ ನಂಬಿಕೆ ಬೆಳೆಸಿಕೊಳ್ಳೋದು ಮುಖ್ಯ ಅಂತ ಹೇಳಿದನು. ಅದನ್ನ ಚೆನ್ನಾಗಿ ಅರ್ಥ ಮಾಡಿಸೋಕೆ ಒಂದು ಉದಾಹರಣೆಯನ್ನ ಕೊಟ್ಟನು. ಯೇಸು ಯೆರೂಸಲೇಮಿಗೆ ಪ್ರಯಾಣ ಮಾಡ್ತಿದ್ದಾಗ, ಎಲೆಗಳು ಚಿಗುರಿದ ಒಂದು ಅಂಜೂರದ ಮರವನ್ನ ನೋಡಿದನು. ಆದ್ರೆ ಆ ಮರದಲ್ಲಿ ಯಾವುದೇ ರೀತಿ ಫಲ ಇರಲಿಲ್ಲ. ಅದಕ್ಕೆ ಯೇಸು ಆ ಮರವನ್ನ ಶಪಿಸಿದನು. (ಮಾರ್ಕ 11:12-14) ಆ ಮರ ನೋಡೋಕೆ ಚೆನ್ನಾಗಿದ್ರೂ ಅದರಲ್ಲಿ ಫಲ ಇರಲಿಲ್ಲ. ಅದೇ ತರ ಇಸ್ರಾಯೇಲ್ಯ ಜನ್ರು ತೋರಿಕೆಗೆ ಮಾತ್ರ ದೇವರನ್ನ ಆರಾಧನೆ ಮಾಡ್ತಿದ್ರು, ಆದ್ರೆ ಅವರಿಗೆ ದೇವರ ಮೇಲೆ ನಿಜವಾದ ನಂಬಿಕೆ ಇರಲಿಲ್ಲ ಅಂತ ಈ ಮರದ ಉದಾಹರಣೆಯಿಂದ ಗೊತ್ತಾಗುತ್ತೆ. (ಮತ್ತಾಯ 21:43) ಸ್ವಲ್ಪ ಸಮಯ ಆದ ಮೇಲೆ ಅಂಜೂರದ ಮರ ಒಣಗಿ ಹೋಯ್ತು. ಇದು ನಂಬಿಕೆ ಇಲ್ಲದ ಇಸ್ರಾಯೇಲ್ಯರಿಗೆ ಏನಾಗುತ್ತೆ ಅನ್ನೋದನ್ನ ಸೂಚಿಸ್ತು.—ಮಾರ್ಕ 11:19-21.
ತನ್ನ ಹಿಂಬಾಲಕರು ಇಸ್ರಾಯೇಲ್ಯರ ತರ ಅಲ್ಲ, ಅವರಿಗೆ ಬರೋ ಕಷ್ಟ ಸಮಸ್ಯೆಗಳನ್ನ ಎದುರಿಸ್ತಾರೆ ಮತ್ತು ದೊಡ್ಡ ದೊಡ್ಡ ಸಾಧನೆಗಳನ್ನ ಮಾಡ್ತಾರೆ ಮತ್ತು ಅದನ್ನ ಮಾಡೋದಕ್ಕೆ ಬೇಕಾದಷ್ಟು ನಂಬಿಕೆಯನ್ನ ಬೆಳೆಸಿಕೊಳ್ತಾರೆ ಅನ್ನೋ ಭರವಸೆ ಯೇಸುಗೆ ಇತ್ತು. (ಮಾರ್ಕ 11:22, 23) ಯೇಸು ಸರಿಯಾದ ಸಮಯಕ್ಕೆ ತನ್ನ ಹಿಂಬಾಲಕರಿಗೆ ಪ್ರಾರ್ಥನೆಯ ಬಗ್ಗೆ ಸಲಹೆ ಕೊಟ್ಟನು. ಯಾಕಂದ್ರೆ ತುಂಬಾ ಬೇಗ ಅವರು ನಂಬಿಕೆ ಪರೀಕ್ಷೆಗಳನ್ನ ಎದುರಿಸಬೇಕಾಗಿತ್ತು. ಯೇಸು ತೀರಿ ಹೋಗಲಿದ್ದನು, ಜೊತೆಗೆ ಸಿಹಿಸುದ್ದಿ ಸಾರುವಾಗ ತುಂಬಾ ವಿರೋಧಗಳನ್ನ ಎದುರಿಸಬೇಕಿತ್ತು. (ಲೂಕ 24:17-20; ಅಪೊಸ್ತಲರ ಕಾರ್ಯ 5:17, 18, 40) ಇವತ್ತು ಕೂಡ ಯೇಸುವಿನ ಹಿಂಬಾಲಕರು ದೇವರ ಮೇಲೆ ಮತ್ತು ಪ್ರಾರ್ಥನೆಗೆ ಇರುವ ಶಕ್ತಿ ಮೇಲೆ ನಂಬಿಕೆಯನ್ನ ತೋರಿಸೋ ಮೂಲಕ ತಮಗೆ ಬರೋ ಕಷ್ಟಗಳನ್ನ ಜಯಿಸಬಹುದು.—ಯಾಕೋಬ 2:26.
ಮಾರ್ಕ ಪುಸ್ತಕದ ಬಗ್ಗೆ ಕಿರುಪರಿಚಯ ಮಾಡಿಕೊಳ್ಳೋಕೆ ಈ ಚಿಕ್ಕ ವಿಡಿಯೋ ನೋಡಿ.
a ಯೆಹೋವ ಅನ್ನೋದು ದೇವರ ಹೆಸರು. (ಕೀರ್ತನೆ 83:18) “ಯೆಹೋವ ಯಾರು?” ಅನ್ನೋ ಲೇಖನ ನೋಡಿ.