ಎಲ್ಲ ವಿಪತ್ತುಗಳಿಗೆ ಬೇಗನೆ ಒಂದು ಅಂತ್ಯ
“ಮಕ್ಕಳೇ ಮತ್ತು ಮಕ್ಕಳ ಮಕ್ಕಳೇ. ಕೇಳಿರಿ! . . . ಅತಿ ಬೇಗನೆ ಈ ಬೆಟ್ಟವು ಉರಿಯಲು ಆರಂಭಿಸುತ್ತದೆ. ಆದರೆ ಅದಕ್ಕಿಂತ ಮುಂಚೆ ಅಲ್ಲಿ ಗುಡುಗುಟ್ಟುವ ಮತ್ತು ಗರ್ಜಿಸುವ ಶಬ್ದವು ಕೇಳಿಬರುತ್ತದೆ ಹಾಗೂ ಭೂಕಂಪಗಳು ಸಂಭವಿಸುತ್ತವೆ. ಹೊಗೆ, ಬೆಂಕಿ ಮತ್ತು ಮಿಂಚಿನಂಥ ಬೆಳಕು ಬೆಟ್ಟದಿಂದ ಹೊರಚಿಮ್ಮಲು ಆರಂಭಿಸುತ್ತದೆ. ಗಾಳಿಯು ಕಂಪಿಸುತ್ತಾ ಗಡಗಡನೆ ಸದ್ದುಮಾಡುತ್ತಾ ಊಳಿಡುತ್ತದೆ. ಎಷ್ಟು ದೂರ ಸಾಧ್ಯವೊ ಅಷ್ಟು ದೂರ ಓಡಿರಿ . . . ನೀವು ಬೆಟ್ಟವನ್ನು ಕಡೆಗಣಿಸಿದರೆ ಮತ್ತು ನಿಮಗೆ ನಿಮ್ಮ ಜೀವಕ್ಕಿಂತ ನಿಮ್ಮ ಆಸ್ತಿಪಾಸ್ತಿಗಳು ಹೆಚ್ಚು ಬೆಲೆಯುಳ್ಳದಾಗಿ ಕಂಡರೆ, ನಿಮ್ಮ ಅಜಾಗ್ರತೆಗಾಗಿ ಹಾಗೂ ಲೋಭಕ್ಕಾಗಿ ಬೆಟ್ಟವು ನಿಮ್ಮನ್ನು ದಂಡಿಸುವುದು. ನಿಮ್ಮ ಮನೆ ಮತ್ತು ಅದರ ಸೌಕರ್ಯಗಳ ಬಗ್ಗೆ ಚಿಂತಿಸಬೇಡಿ, ಯಾವುದೇ ಚಂಚಲತೆಯಿಲ್ಲದೆ ಓಡಿಹೋಗಿ.”
ಆ್ಯನ್ಡ್ರ್ಯೂ ರಾಬಿನ್ಸನ್ರ ಅರ್ಥ್ ಶಾಕ್ ಎಂಬ ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟಿರುವ ಈ ಎಚ್ಚರಿಕೆಯು, 1631ರಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟದ ಅನಂತರ ಇಟಲಿಯ ವೆಸೂವೀಯಸ್ ಪರ್ವತದ ಬುಡದಲ್ಲಿದ್ದ ಒಂದು ಪಟ್ಟಣವಾದ ಪೋರ್ಟೀಚೀನಲ್ಲಿದ್ದ ಒಂದು ಸ್ಮಾರಕ ಕಲ್ಲಿನ ಮೇಲೆ ಕೆತ್ತಲ್ಪಟ್ಟಿತ್ತು. ಆ ಸ್ಫೋಟದಿಂದಾಗಿ 4,000ಕ್ಕಿಂತಲೂ ಹೆಚ್ಚು ಮಂದಿ ತಮ್ಮ ಜೀವವನ್ನು ಕಳೆದುಕೊಂಡರು. “ಒಂದು ಅನಿರೀಕ್ಷಿತ ಘಟನೆಯಂತೆ 1631ರ ಈ ಸ್ಫೋಟವು . . . ವೆಸೂವೀಯಸ್ ಎಂಬ ಹೆಸರು ಮನೆಮಾತಾಗುವಂತೆ ಮಾಡಿತು” ಎಂಬುದಾಗಿ ರಾಬಿನ್ಸನ್ ತಿಳಿಸುತ್ತಾರೆ. ಅದು ಹೇಗೆ? ಪೋರ್ಟೀಚೀ ಪಟ್ಟಣವನ್ನು ಪುನಃ ಕಟ್ಟಲು ಹೊರಟಾಗ ಹರ್ಕ್ಯಲೇನ್ಯಮ್ ಮತ್ತು ಪಾಂಪೇ ಎಂಬ ಎರಡು ನಗರಗಳು ಕಂಡುಹಿಡಿಯಲ್ಪಟ್ಟವು. ಸಾ.ಶ. 79ರಲ್ಲಿ ವೆಸೂವೀಯಸ್ ಪರ್ವತವು ಸ್ಫೋಟಗೊಂಡಾಗ ಈ ಎರಡೂ ನಗರಗಳು ಧ್ವಂಸಗೊಂಡು ಮರೆಯಾಗಿದ್ದವು.
ಈ ವಿಪತ್ತಿನಲ್ಲಿ ಪಾರಾಗಿ ಉಳಿದು ಅನಂತರ ರಾಜ್ಯಪಾಲನಾದ ರೋಮನ್ ವ್ಯಕ್ತಿ ಪ್ಲಿನಿ ದ ಯಂಗರ್, ಆ ವಿಪತ್ತಿನ ಮುಂಚೆ ಎಚ್ಚರಿಕೆಯಂತಿದ್ದ ಅಸಾಮಾನ್ಯವಾದ ಭೂಕಂಪನಗಳ ಬಗ್ಗೆ ಬರೆದನು. ಅವನು, ಅವನ ತಾಯಿ ಮತ್ತು ಇತರರು ಈ ಎಚ್ಚರಿಕೆಗೆ ಹೊಂದಿಕೆಯಲ್ಲಿ ಪ್ರತಿಕ್ರಿಯಿಸಿದರು ಹಾಗೂ ಪಾರಾಗಿ ಉಳಿದರು.
ನಮ್ಮ ದಿನಕ್ಕಾಗಿ ಎಚ್ಚರಿಕೆಯ ಸೂಚನೆ
ಇಂದು ನಾವು, ಈ ಲೋಕದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳ ಅಂತ್ಯವನ್ನು ಅತಿ ಶೀಘ್ರವಾಗಿ ಸಮೀಪಿಸುತ್ತಿದ್ದೇವೆ. ಇದು ನಮಗೆ ಹೇಗೆ ತಿಳಿದಿದೆ? ಹೇಗೆಂದರೆ, ಲೋಕದಲ್ಲೆಲ್ಲ ಒಂದರ ಅನಂತರ ಒಂದರಂತೆ ನಡೆಯಲಿರುವ ಸಂಗತಿಗಳನ್ನು ಮತ್ತು ಇವು, ದೇವರ ಮುಯ್ಯಿತೀರಿಸುವ ದಿನವು ಹತ್ತಿರವಿದೆ ಎಂಬುದನ್ನು ತೋರಿಸುವ ಸೂಚನೆಯನ್ನು ಒದಗಿಸುತ್ತವೆ ಎಂಬುದನ್ನು ಯೇಸು ಕ್ರಿಸ್ತನು ಮುಂತಿಳಿಸಿದ್ದಾನೆ. ಗಡಗಡನೆ ಸದ್ದುಮಾಡುವ, ಹೊಗೆ ಕಾರುವ ಮತ್ತು ಬೂದಿಯನ್ನು ಹೊರಚಿಮ್ಮುವ ಜ್ವಾಲಾಮುಖಿಯಂತೆ, ಈ ಸಂಯೋಜಿತ ಸೂಚನೆಯಲ್ಲಿ ಮಹಾ ಯುದ್ಧಗಳು, ಭೂಕಂಪಗಳು, ಬರಗಾಲಗಳು ಮತ್ತು ಉಪದ್ರವಗಳು (ಅಂಟು ರೋಗಗಳು) ಒಳಗೂಡಿವೆ. ಇವೆಲ್ಲವೂ, ಹಿಂದೆಂದೂ ಕಂಡಿರದಂಥ ಪ್ರಮಾಣದಲ್ಲಿ 1914ರಿಂದ ಭೂಮಿಯನ್ನು ಹಾಳುಮಾಡಿವೆ.—ಮತ್ತಾಯ 24:3-8; ಲೂಕ 21:10, 11; ಪ್ರಕಟನೆ 6:1-8.
ಆದರೆ ಯೇಸುವಿನ ಎಚ್ಚರಿಕೆಯ ಸೂಚನೆಯಲ್ಲಿ ನಿರೀಕ್ಷೆಯ ಸಂದೇಶವೂ ಅಡಕವಾಗಿದೆ. ಅವನು ಹೇಳಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಯೇಸು ಈ ರಾಜ್ಯದ ಸಂದೇಶವನ್ನು “ಸುವಾರ್ತೆ” ಎಂದು ಕರೆದನು ಎಂಬುದನ್ನು ಗಮನಿಸಿರಿ. ಇದು ನಿಜವಾಗಿಯೂ ಸುವಾರ್ತೆಯಾಗಿದೆ, ಏಕೆಂದರೆ ಕ್ರಿಸ್ತ ಯೇಸುವಿನ ಕೈಯಲ್ಲಿರುವ ಸ್ವರ್ಗೀಯ ಸರಕಾರವಾದ ದೇವರ ರಾಜ್ಯವು ಮಾನವನಿಂದ ಮಾಡಲ್ಪಟ್ಟಿರುವ ಎಲ್ಲ ಹಾನಿಯನ್ನು ಸರಿಪಡಿಸುವುದು. ಮಾತ್ರವಲ್ಲದೆ, ನೈಸರ್ಗಿಕ ವಿಪತ್ತುಗಳನ್ನು ಅದು ಇಲ್ಲದಂತೆ ಮಾಡುವುದು.—ಲೂಕ 4:43; ಪ್ರಕಟನೆ 21:3, 4.
ಯೇಸು ಮನುಷ್ಯನಾಗಿ ಈ ಭೂಮಿಯಲ್ಲಿದ್ದಾಗ, ಜೀವಕ್ಕೆ ಬೆದರಿಕೆಯನ್ನು ಉಂಟುಮಾಡುತ್ತಿದ್ದ ಒಂದು ಬಿರುಗಾಳಿಯನ್ನು ಶಮನಮಾಡುವ ಮೂಲಕ, ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸುವ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದನು. ಭಯಪಟ್ಟ ಅವನ ಶಿಷ್ಯರು ಅತ್ಯಾಶ್ಚರ್ಯದಿಂದ, “ಈತನು ಯಾರಿರಬಹುದು? ಗಾಳಿಗೂ ನೀರಿಗೂ ಅಪ್ಪಣೆಕೊಡುತ್ತಾನೆ; ಅವು ಕೂಡ ಹೇಳಿದ ಹಾಗೆ ಕೇಳುತ್ತವಲ್ಲಾ” ಎಂದು ಹೇಳಿದರು. (ಲೂಕ 8:22-25) ಇಂದು, ಯೇಸು ಒಬ್ಬ ಸಾಮಾನ್ಯ ಮನುಷ್ಯನಾಗಿಲ್ಲ, ಬದಲಾಗಿ ಅವನೊಬ್ಬ ಶಕ್ತಿಶಾಲಿ ಆತ್ಮಜೀವಿಯಾಗಿದ್ದಾನೆ. ಆದುದರಿಂದ, ತನ್ನ ಪ್ರಜೆಗಳಿಗೆ ಹಾನಿಯನ್ನುಂಟುಮಾಡದಂತೆ ನೈಸರ್ಗಿಕ ಶಕ್ತಿಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವುದು ಅವನಿಗೆ ಒಂದು ದೊಡ್ಡ ವಿಷಯವೇ ಅಲ್ಲ.—ಕೀರ್ತನೆ 2:6-9; ಪ್ರಕಟನೆ 11:15.
ಇದೆಲ್ಲ ಬರೀ ಕನಸು ಎಂದು ಅನೇಕರು ನೆನಸಬಹುದು. ಆದರೆ ನೆನಪಿನಲ್ಲಿಡಿ, ಮನುಷ್ಯರ ವಾಗ್ದಾನಗಳು ಮತ್ತು ಭವಿಷ್ಯನುಡಿಗಳಂತಿರದೆ ಬೈಬಲಿನ ಪ್ರವಾದನೆಗಳೆಲ್ಲವು ನಿಖರವಾಗಿ ನೆರವೇರಿವೆ. ಇವುಗಳಲ್ಲಿ, 1914ರಿಂದ ನಾವು ನೆರವೇರುತ್ತಿರುವುದನ್ನು ಕಾಣುತ್ತಿರುವ ಪ್ರವಾದನೆಗಳೂ ಸೇರಿವೆ. (ಯೆಶಾಯ 46:10; 55:10, 11) ಹೌದು, ಭೂಮಿಗೆ ಶಾಂತಿಭರಿತ ಭವಿಷ್ಯವಿದೆಯೆಂಬುದು ನಿಶ್ಚಯ. ನಾವು ದೇವರ ವಾಕ್ಯವನ್ನು ಹೃದಯಕ್ಕೆ ತೆಗೆದುಕೊಳ್ಳುವುದಾದರೆ ಮತ್ತು ಬೇಗನೆ ಸಂಭವಿಸಲಿರುವ, ಭೂಮಿಯನ್ನು ನಡುಗಿಸುವಂಥ ಘಟನೆಗಳ ಕುರಿತಾದ ಅದರ ಪ್ರೀತಿಪರ ಎಚ್ಚರಿಕೆಗೆ ಗಮನವನ್ನು ಕೊಡುವುದಾದರೆ ನಮ್ಮ ಭವಿಷ್ಯತ್ತು ಸಹ ಸ್ಥಿರವಾಗಿರುವುದು.—ಮತ್ತಾಯ 24:42, 44; ಯೋಹಾನ 17:3. (g05 7/22)
[ಪುಟ 11ರಲ್ಲಿರುವ ಚೌಕ/ಚಿತ್ರ]
ನಮ್ಮ ಸತ್ತ ಪ್ರಿಯ ಜನರಿಗಾಗಿ ಯಾವ ನಿರೀಕ್ಷೆಯಿದೆ?
ಪ್ರಿಯ ವ್ಯಕ್ತಿಯೊಬ್ಬರನ್ನು ಮರಣದಲ್ಲಿ ಕಳೆದುಕೊಳ್ಳುವಾಗ, ನಾವು ದುಃಖದಲ್ಲಿ ಮುಳುಗಿಹೋಗುತ್ತೇವೆ. ಯೇಸುವಿನ ಆಪ್ತ ಸ್ನೇಹಿತನಾದ ಲಾಜರನು ಸತ್ತಾಗ ಯೇಸು ಅತ್ತನೆಂದು ಬೈಬಲ್ ತಿಳಿಸುತ್ತದೆ. ಹಾಗಿದ್ದರೂ, ಮರುನಿಮಿಷದಲ್ಲಿ ಯೇಸು ಒಂದು ಆಶ್ಚರ್ಯಕರವಾದ ಅದ್ಭುತವನ್ನು ಮಾಡಿದನು. ಅವನು ಲಾಜರನನ್ನು ಪುನಃ ಜೀವಕ್ಕೆ ತಂದನು. (ಯೋಹಾನ 11:32-44) ಹೀಗೆ ಮಾಡುವ ಮೂಲಕ, ಈ ಹಿಂದೆ ತನ್ನ ಶುಶ್ರೂಷೆಯ ಸಮಯದಲ್ಲಿ ಅವನು ಮಾಡಿದ ವಾಗ್ದಾನದಲ್ಲಿ ಇಡೀ ಮಾನವಕುಲವು ನಂಬಿಕೆಯಿಡಲು ಅವನು ಬಲವಾದ ಆಧಾರವನ್ನು ಒದಗಿಸಿದನು. ಅವನು ವಾಗ್ದಾನಿಸಿದ್ದು: “ಸಮಾಧಿಗಳಲ್ಲಿರುವವರೆಲ್ಲರು [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:28, 29) ತಮ್ಮ ಪ್ರಿಯ ಜನರನ್ನು ಮರಣದಲ್ಲಿ ಕಳೆದುಕೊಂಡಿರುವ ಎಲ್ಲರಿಗೂ, ಭೂಪರದೈಸಿನಲ್ಲಿ ನಡೆಯಲಿರುವ ಪುನರುತ್ಥಾನದ ಅಮೂಲ್ಯ ನಿರೀಕ್ಷೆಯು ಸಾಂತ್ವನವನ್ನು ಒದಗಿಸಲಿ.—ಅ. ಕೃತ್ಯಗಳು 24:15.
[ಪುಟ 10ರಲ್ಲಿರುವ ಚಿತ್ರಗಳು]
ಸದ್ಯದ ಲೋಕವು ಅದರ ಕಡೇ ದಿವಸಗಳಲ್ಲಿದೆ ಎಂದು ತೋರಿಸುವ ಎಚ್ಚರಿಕೆಗೆ ನೀವು ಗಮನಕೊಡುತ್ತಿದ್ದೀರೊ?
[ಪುಟ 10ರಲ್ಲಿರುವ ಚಿತ್ರ ಕೃಪೆ]
USGS, David A. Johnston, Cascades Volcano Observatory