ಯುವ ಜನರು ಪ್ರಶ್ನಿಸುವುದು . . .
ನಾನು ಓದಲೇಬೇಕೆಂದು ಏಕೆ ಹೇಳುತ್ತೀರಿ?
“ಓದಿ ಮುಗಿಸುವಷ್ಟು ತಾಳ್ಮೆ ನನಗಿಲ್ಲ. ಇದಕ್ಕಿಂತ ಟಿವಿ ನೋಡುವುದೇ ಮೇಲು.”—ಮಾರ್ಗಾರೀಟ, 13, ರಷ್ಯಾ.
“ಪುಸ್ತಕ ಓದಬೇಕೊ ಬಾಸ್ಕೆಟ್ ಬಾಲ್ ಆಡಬೇಕೊ ಎಂಬ ಆಯ್ಕೆ ನನಗಿರುವಲ್ಲಿ ನಾನು ಆಟವನ್ನೇ ಆರಿಸುವೆ.” —ಆಸ್ಕರ್, 19, ಅಮೆರಿಕ.
ನೀವು ಇಲ್ಲಿಯ ತನಕ ಓದಲು ಸಮಯ ತಕ್ಕೊಂಡಿರುವಲ್ಲಿ, ಓದುವಿಕೆಯು ಕಲಿಯಬೇಕಾದ ಒಂದು ಪ್ರಮುಖ ಕೌಶಲವೆಂದು ನೀವು ಪ್ರಾಯಶಃ ಅರಿತಿದ್ದೀರಿ. ಹಾಗಿದ್ದರೂ, ಒಂದು ಪುಸ್ತಕವನ್ನು ಇಲ್ಲವೆ ಒಂದು ಪತ್ರಿಕೆಯ ಲೇಖನವನ್ನು ಓದುವುದು ಔಷಧವನ್ನು ತೆಗೆದುಕೊಳ್ಳುವುದಕ್ಕೆ ಸಮಾನ ಎಂದು ನೀವು ವೀಕ್ಷಿಸಬಹುದು: ಅದು ಒಳ್ಳೆಯದೆಂದು ನಿಮಗೆ ಗೊತ್ತಿರುವುದಾದರೂ ಅದನ್ನು ತೆಗೆದುಕೊಳ್ಳದಿರಲು ನೀವು ಇಷ್ಟಪಡುತ್ತೀರಿ.
ಓದನ್ನು ಕಷ್ಟಕರವಾಗಿ ಮಾಡುವಂಥ ವಿಷಯಗಳು ಯಾವುವು ಮತ್ತು ಓದಿನ ಪ್ರಯೋಜನಗಳೇನು ಎಂಬುದರ ಬಗ್ಗೆ ಹನ್ನೊಂದು ದೇಶಗಳ ಯುವ ಜನರನ್ನು ಎಚ್ಚರ! ಪತ್ರಿಕೆಯು ಇಂಟರ್ವ್ಯೂ ಮಾಡಿತು. ಅವರು ಈ ಕೆಳಗಿನಂತೆ ಹೇಳಿದರು.
ಓದುವಿಕೆಯು ನಿಮಗೆ ಏಕೆ ಅಷ್ಟು ಕಷ್ಟಕರವಾಗಿ ಕಾಣುತ್ತದೆ?
“ಅದಕ್ಕಾಗಿ ನನಗೆ ಸಮಯ ಸಿಗುವುದೇ ಕಡಿಮೆ ಅಂತ ತೋರುತ್ತದೆ.”—ಸೆಮ್ಸಿಹಾನ್, 19, ಜರ್ಮನಿ.
“ಓದುವುದು ತುಂಬ ಕಷ್ಟದ ಕೆಲಸ. ನಾನು ಸ್ವಲ್ಪ ಸೋಮಾರಿ ಎಂದು ನನಗನಿಸುತ್ತದೆ.”—ಎಸೀಕಿಯೆಲ್, 19, ಫಿಲಿಪ್ಪೀನ್ಸ್.
“ಬೋರ್ ಆಗೋ ವಿಷಯಗಳನ್ನು ಓದಲು ಒತ್ತಾಯಿಸಿದರೆ ನನಗೆ ಸ್ವಲ್ಪವೂ ಇಷ್ಟ ಆಗುವುದಿಲ್ಲ.”—ಕ್ರಿಶ್ಚನ್, 15, ಇಂಗ್ಲೆಂಡ್.
“ಕೆಲವೇ ಪುಟಗಳುಳ್ಳ ಪುಸ್ತಕವಿದ್ದರೆ ನಾನು ಹೇಗೊ ಓದಲು ಮನಸ್ಸುಮಾಡಬಹುದು. ಆದರೆ ದಪ್ಪವಾದ ಪುಸ್ತಕವಾದರೆ ಅದನ್ನು ನೋಡಿಯೇ ನನಗೆ ಭಯವಾಗುತ್ತ.”—ಎರಿಕೊ, 18, ಜಪಾನ್.
“ಬೇರೆ ವಿಷಯಗಳಿಂದ ನಾನು ಸುಲಭವಾಗಿ ಅಪಕರ್ಷಿತನಾಗುತ್ತೇ. ಆದುದರಿಂದ ನನಗೆ ಓದುವುದರ ಮೇಲೆ ಗಮನವನ್ನು ಕೇಂದ್ರೀಕರಿಸಲು ಆಗುವುದಿಲ್ಲ.”—ಫ್ರಾನ್ಸಿಸ್ಕೊ, 13, ದಕ್ಷಿಣ ಆಫ್ರಿಕ.
ಬೈಬಲನ್ನು ಓದುವಂತೆ ಕ್ರೈಸ್ತ ಯುವ ಜನರನ್ನು ಪ್ರೋತ್ಸಾಹಿಸಲಾಗುತ್ತದೆ. (ಕೀರ್ತನೆ 1:1-3) ಅದು ನಿಮಗೆ ಕಷ್ಟಕರವೇ? ಹೌದಾದರೆ ಏಕೆ?
“ಬೈಬಲ್ ಎಷ್ಟೊಂದು ದೊಡ್ಡ ಪುಸ್ತಕ! ನನ್ನ ಜೀವಮಾನವಿಡೀ ಓದಿದರೂ ಅದನ್ನು ಮುಗಿಸಲಿಕ್ಕೆ ಆಗುವುದಿಲ್ಲ ಎಂದೆಣಿಸುತ್ತೇನೆ!”—ಆನ, 13, ರಷ್ಯಾ.
“ಬೈಬಲಿನ ಕೆಲವು ಭಾಗಗಳು ಅರ್ಥಮಾಡಿಕೊಳ್ಳಲಿಕ್ಕೆ ಕಷ್ಟ ಮತ್ತು ಅಷ್ಟೇನೂ ಆಸಕ್ತಿಕರವಾಗಿಲ್ಲ.”—ಜೆಸ್ರೀಲ್, 11, ಭಾರತ.
“ಬೈಬಲನ್ನು ಕ್ರಮವಾಗಿ ಓದುವುದು ನನಗೆ ಕಷ್ಟಕರವಾಗಿದೆ, ಏಕೆಂದರೆ ನನ್ನ ಕಾರ್ಯತಖ್ತೆ ತುಂಬ ಅಸ್ತವ್ಯಸ್ತವಾಗಿದೆ.”—ಎಲ್ಸ, 19, ಇಂಗ್ಲೆಂಡ್.
“ಮನೆಗೆಲಸ ಮತ್ತು ಶಾಲಾಕೆಲಸ ಮಾಡುವುದರಲ್ಲೇ ನನ್ನ ಹೆಚ್ಚಿನ ಸಮಯ ಹೋಗುವುದರಿಂದ ಬೈಬಲ್ ಓದುವುದು ಕಷ್ಟಕರವಾಗಿಬಿಟ್ಟಿದೆ.”—ಸೂರೀಸಾಡೈ, 14, ಮೆಕ್ಸಿಕೊ.
“ಬೈಬಲ್ ಓದುವುದು ನನಗೆ ಕಷ್ಟಕರವಾಗಿದೆ, ಏಕೆಂದರೆ ನನಗಿರುವ ಹವ್ಯಾಸಗಳಿಗಾಗಿ ಕಳೆಯುವ ಸಮಯವನ್ನು ಕಡಮೆಮಾಡಲು ನನಗಾಗದೆಂದು ತೋರುತ್ತದೆ.”—ಶೋ, 14, ಜಪಾನ್.
ಹೌದು, ಓದುವುದು ಕಷ್ಟಕರವಾಗಿರಬಲ್ಲದು. ಆದರೆ ಅದಕ್ಕಾಗಿ ಮಾಡುವ ಪ್ರಯತ್ನ ಸಾರ್ಥಕವೊ? ಓದುವಿಕೆಯಿಂದ ನೀವು ಹೇಗೆ ಪ್ರಯೋಜನ ಹೊಂದಿದ್ದೀರಿ?
“ಓದುವುದರಿಂದ ನನ್ನ ಜ್ಞಾನವು ಹೆಚ್ಚಾಗಿದೆ, ಮತ್ತು ಇದರಿಂದಾಗಿ ನಾನು ಹೆಚ್ಚು ಆತ್ಮವಿಶ್ವಾಸದಿಂದ ಜನರೊಂದಿಗೆ ಮಾತಾಡಬಲ್ಲೆ.”—ಮನೀಷ, 14, ಭಾರತ.
“ಓದುವಿಕೆಯು ನನ್ನ ಮನಸ್ಸನ್ನು ಹಗುರಗೊಳಿಸಿ, ತೊಂದರೆಗಳ ಬಗ್ಗೆ ಯೋಚಿಸುತ್ತಾ ಇರದಂತೆ ನನಗೆ ಸಹಾಯಮಾಡುತ್ತದೆ.”—ಆ್ಯಲಿಸನ್, 17, ಆಸ್ಟ್ರೇಲಿಯ.
“ಓದುವಿಕೆಯು, ನಾನೆಂದಿಗೂ ಹೋಗಲಾಗದಂಥ ಸ್ಥಳಗಳಿಗೆ ನನ್ನನ್ನು ಕೊಂಡೊಯ್ಯುತ್ತದೆ.”—ಡೂಆನ್, 19, ದಕ್ಷಿಣ ಆಫ್ರಿಕ.
“ಇತರರು ಏನು ಹೇಳುತ್ತಾರೊ ಅದರ ಮೇಲೆ ಹೊಂದಿಕೊಳ್ಳುವುದರ ಬದಲು ನಾನು ಸ್ವತಃ ವಿಷಯಗಳನ್ನು ಪರೀಕ್ಷಿಸುವಂತೆ ಓದುವಿಕೆಯು ನನಗೆ ಸಹಾಯಮಾಡುತ್ತದೆ.”—ಆಬೀಊ, 16, ಮೆಕ್ಸಿಕೊ.
ನೀವು ಓದುವಿಕೆಯಲ್ಲಿ ಸಂತೋಷಿಸುವಂತೆ ಯಾವುದು ಸಹಾಯ ಮಾಡಿದೆ?
“ನಾನು ತೀರ ಚಿಕ್ಕವಳಾಗಿದ್ದ ಸಮಯದಿಂದಲೂ ಗಟ್ಟಿಯಾಗಿ ಓದಲು ನನ್ನ ಹೆತ್ತವರು ಪ್ರೋತ್ಸಾಹಿಸಿದ್ದಾರೆ.”—ಟಾನ್ಯ, 18, ಭಾರತ.
“ನಾನು ಓದುವಾಗ ನನ್ನ ಕಲ್ಪನಾ ಶಕ್ತಿಯನ್ನು ಉಪಯೋಗಿಸುವಂತೆ, ಕ್ರಿಯೆಗಳನ್ನು ಮನಸ್ಸಲ್ಲಿ ಚಿತ್ರಿಸಿಕೊಳ್ಳುವಂತೆ ನನ್ನ ಹೆತ್ತವರು ನನ್ನನ್ನು ಪ್ರೋತ್ಸಾಹಿಸಿದರು.”—ಡ್ಯಾನಿಯೆಲ್, 18, ಇಂಗ್ಲೆಂಡ್.
“ನನಗೆ ಹೆಚ್ಚು ಹಿಡಿಸುವ ಕೀರ್ತನೆಗಳು ಮತ್ತು ಜ್ಞಾನೋಕ್ತಿಗಳಂತಹ ಪುಸ್ತಕಗಳನ್ನು ಓದುವ ಮೂಲಕ ಬೈಬಲ್ ಓದುವಿಕೆಯನ್ನು ಆರಂಭಿಸುವಂತೆ ನನ್ನ ತಂದೆ ಸೂಚಿಸಿದರು. ಈಗ ಬೈಬಲನ್ನು ಓದುವುದು ಹೊರೆಯಲ್ಲ ಬದಲಾಗಿ ಹರ್ಷಕರವಾಗಿದೆ.”—ಚಾರೀನ್, 16, ದಕ್ಷಿಣ ಆಫ್ರಿಕ.
“ನಾನು ನಾಲ್ಕು ವರುಷದವಳು ಆಗುವುದರೊಳಗೆ, ನನ್ನ ಹೆತ್ತವರು ನಾನು ಹುಟ್ಟಿದಾಗಿನಿಂದ ನನಗಾಗಿ ಆರಿಸಿ ತೆಗೆದಿಟ್ಟಿದ್ದ ಎಲ್ಲ ಪುಸ್ತಕಗಳಿದ್ದ ಒಂದು ಶೆಲ್ಫ್ ಮತ್ತು ಮೇಜನ್ನು ಒದಗಿಸಿದ್ದರು.”—ಆರೀ, 14, ಜಪಾನ್.
ಬೈಬಲ್ ಓದುವಿಕೆಯು ಪ್ರಾಮುಖ್ಯವೆಂದು ನೀವೇಕೆ ನೆನಸುತ್ತೀರಿ?
“ಬೈಬಲಿನ ಕುರಿತು ಸತ್ಯವಾಗಿಲ್ಲದ ಅನೇಕ ವಿಷಯಗಳನ್ನು ಜನರು ನಂಬುತ್ತಾರೆ. ಆದರೆ ಈ ವಿಷಯಗಳನ್ನು ನಾವೇ ಪರೀಕ್ಷಿಸಿ ನೋಡುವುದು ಎಷ್ಟೋ ಉತ್ತಮ.” (ಅ. ಕೃತ್ಯಗಳು 17:11)—ಮ್ಯಾಥ್ಯೂ, 15, ಅಮೆರಿಕ.
“ಬೈಬಲ್ ಓದುವಿಕೆಯನ್ನು ಮಾಡುವಾಗ ತುಂಬ ಯೋಚಿಸಬೇಕಾಗುತ್ತದೆ. ಆದರೆ ಅದನ್ನು ಓದುವುದರಿಂದ, ನಾನು ನನ್ನ ನಂಬಿಕೆಗಳ ಕುರಿತು ಇತರರೊಂದಿಗೆ ಮಾತಾಡುವಾಗ ನನ್ನ ಮನಸ್ಸಿನಲ್ಲಿರುವುದನ್ನು ಭರವಸೆಯಿಂದ ಹೇಳಲಿಕ್ಕೂ ಸ್ಪಷ್ಟವಾಗಿ ತಿಳಿಸಲಿಕ್ಕೂ ಸಹಾಯಸಿಕ್ಕಿದೆ.” (1 ತಿಮೊಥೆಯ 4:13)—ಜೇನ್, 19, ಇಂಗ್ಲೆಂಡ್.
“ನಾನು ಬೈಬಲನ್ನು ಓದುವಾಗ, ಯೆಹೋವನೇ ನೇರವಾಗಿ ನನ್ನೊಂದಿಗೆ ಮಾತನಾಡುವ ಹಾಗೆ ನನಗನಿಸುತ್ತದೆ. ಕೆಲವೊಮ್ಮೆ ಅದು ನನ್ನ ಭಾವಾವೇಶವನ್ನು ಸ್ಪರ್ಶಿಸುತ್ತದೆ.” (ಇಬ್ರಿಯ 4:12)—ಒಬೆಡಾಯ, 15, ಭಾರತ.
“ಬೈಬಲ್ ಓದುವಿಕೆಯಲ್ಲಿ ಸಂತೋಷಿಸುವಂತೆ ನಾನು ಕಲಿಯುತ್ತಿದ್ದೇನೆ, ಏಕೆಂದರೆ ನನ್ನ ಬಗ್ಗೆ ಯೆಹೋವನು ಏನು ನೆನಸುತ್ತಾನೆ ಎಂದು ಅದು ಹೇಳುತ್ತದೆ ಮಾತ್ರವಲ್ಲ, ಅತಿ ಸಹಾಯಕರವಾದ ಸಲಹೆಯನ್ನೂ ನನಗೆ ನೀಡುತ್ತದೆ.”—ವಿಕ್ಟೋರ್ಯ, 14, ರಷ್ಯಾ.
ಬೈಬಲ್ ಮತ್ತು ಬೈಬಲ್ ಸಾಹಿತ್ಯವನ್ನು ಓದಲು ನಿಮಗೆ ಯಾವಾಗ ಸಮಯ ದೊರೆಯುತ್ತದೆ?
“ನನಗೊಂದು ಕಾಲತಖ್ತೆಯಿದೆ. ನಾನು ಪ್ರತಿದಿನ ಬೆಳಗ್ಗೆ ಎದ್ದಕೂಡಲೆ ಬೈಬಲಿನ ಒಂದು ಅಧ್ಯಾಯವನ್ನು ಓದುತ್ತೇನೆ.”—ಲಯೀಸ್, 17, ಬ್ರಸೀಲ್.
“ನಾನು ಬೈಬಲ್ ಮತ್ತು ಬೇರೆ ಕ್ರೈಸ್ತ ಸಾಹಿತ್ಯಗಳನ್ನು ಶಾಲೆಗೆ ಟ್ರೇನಿನಲ್ಲಿ ಹೋಗುವಾಗ ಓದುತ್ತೇನೆ. ಕಳೆದ ನಾಲ್ಕು ವರುಷಗಳಿಂದ ನಾನು ಪ್ರತಿದಿನ ಈ ರೂಢಿಯನ್ನು ಅನುಸರಿಸಲು ಶಕ್ತನಾಗಿದ್ದೇನೆ.”—ಟಯಿಇಚೀ, 19, ಜಪಾನ್.
“ನಾನು ಪ್ರತಿ ರಾತಿ ಮಲಗುವ ಮೊದಲು ಬೈಬಲಿನಿಂದ ಸ್ವಲ್ಪ ಭಾಗವನ್ನು ಓದುತ್ತೇನೆ.”—ಮರೀಯ, 15, ರಷ್ಯಾ.
“ನಾನು ಪ್ರತಿದಿನ ‘ಕಾವಲಿನಬುರುಜು’ ಅಥವಾ ‘ಎಚ್ಚರ!’ದಲ್ಲಿ ನಾಲ್ಕು ಪುಟಗಳನ್ನು ಓದುತ್ತೇನೆ. ಇದರಿಂದ ಮುಂದಿನ ಪತ್ರಿಕೆ ಬರುವ ಮೊದಲು ನನಗೆ ಇಡೀ ಪತ್ರಿಕೆಯನ್ನು ಓದಿ ಮುಗಿಸಲಿಕ್ಕಾಗುತ್ತದೆ.”—ಎರಿಕೊ, 18, ಜಪಾನ್.
“ನಾನು ಪ್ರತಿದಿನ ಬೆಳಗ್ಗೆ ಶಾಲೆಗೆ ಹೋಗುವ ಮುಂಚೆ ಬೈಬಲನ್ನು ಓದುತ್ತೇನೆ.”—ಜೇಮ್ಸ್, 17, ಇಂಗ್ಲೆಂಡ್.
ಮೇಲಿನ ಹೇಳಿಕೆಗಳು ತೋರಿಸುವಂತೆ ಓದುವಿಕೆಯು ನಿಮ್ಮ ಆತ್ಮವಿಶ್ವಾಸವನ್ನು ವರ್ಧಿಸಬಲ್ಲದು ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಬಲ್ಲದು. ಅಲ್ಲದೆ ಬೈಬಲ್ ಹಾಗೂ ಈ ಪತ್ರಿಕೆಯ ಸಮೇತ ಇತರ ಬೈಬಲ್ ಆಧಾರಿತ ಸಾಹಿತ್ಯಗಳ ಓದುವಿಕೆಯು ನಿಮಗೆ ‘ದೇವರ ಸಮೀಪಕ್ಕೆ ಬರುವಂತೆ’ ಸಹ ಸಹಾಯ ಮಾಡುವುದು. (ಯಾಕೋಬ 4:8) ಆದಕಾರಣ, ಓದುವುದು ಕಷ್ಟಕರವೆಂದು ನಿಮಗೆ ಅನಿಸಿದರೂ ಓದುವುದನ್ನು ಅಸಡ್ಡೆಮಾಡಬೇಡಿ. (g 5/06)
ಇದರ ಕುರಿತು ಯೋಚಿಸಿ
◼ ನೀವು ದೇವರ ವಾಕ್ಯವನ್ನು ಓದುವುದು ಏಕೆ ಪ್ರಾಮುಖ್ಯವಾಗಿದೆ?
◼ ಬೈಬಲ್ ಮತ್ತು ಬೈಬಲ್ ಸಾಹಿತ್ಯವನ್ನು ಓದಲು ನೀವು ಹೇಗೆ ‘ಸಮಯವನ್ನು ಖರೀದಿಸಬಲ್ಲಿರಿ’?—ಎಫೆಸ 5:15, 16, NW.
[ಪುಟ 22ರಲ್ಲಿರುವ ಚೌಕ]
ಒಂದಕ್ಕೊಂದನ್ನು ಸಂಬಂಧಿಸಿರಿ
ನೀವು ಏನನ್ನು ಓದುತ್ತೀರೊ ಅದನ್ನು ನಿಮಗೆ ನಿಮ್ಮ ವಿಷಯದಲ್ಲಿ ಮತ್ತು ನಿಮ್ಮ ಸುತ್ತಮುತ್ತಲಿನ ಪರಿಸರದ ವಿಷಯದಲ್ಲಿ ಈಗಾಗಲೇ ತಿಳಿದಿರುವ ವಿಷಯಗಳೊಂದಿಗೆ ಸಂಬಂಧಿಸಿರಿ. ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ:
◼ ಓದುತ್ತಿರುವ ವಿಷಯವನ್ನು ನೀವು ಹಿಂದೆ ಓದಿದಂಥ ವಿಷಯಗಳಿಗೆ ಸಂಬಂಧಿಸುವುದು ವರ್ಣಿಸಲ್ಪಟ್ಟಿರುವ ಸನ್ನಿವೇಶಗಳು ಅಥವಾ ಸಮಸ್ಯೆಗಳು, ನಾನು ಹಿಂದೆ ಓದಿರುವ ಪುಸ್ತಕಗಳು, ಪತ್ರಿಕೆಗಳು ಅಥವಾ ಕಥೆಗಳಿಗೆ ಹೋಲುತ್ತವೆಯೆ? ನಾನು ಈ ಹಿಂದೆ ಓದಿರುವ ವ್ಯಕ್ತಿಗಳಲ್ಲಿದ್ದ ಗುಣಲಕ್ಷಣಗಳು ಈ ಪಾಠದಲ್ಲಿರುವ ವ್ಯಕ್ತಿಗಳಲ್ಲಿಯೂ ಇವೆಯೆ?
◼ ಓದುತ್ತಿರುವ ವಿಷಯವನ್ನು ನಿಮಗೇ ಸಂಬಂಧಿಸುವುದು ಈ ಮಾಹಿತಿ ನನ್ನ ಪರಿಸ್ಥಿತಿಗಳಿಗೆ, ನನ್ನ ಸಂಸ್ಕೃತಿಗೆ ಮತ್ತು ನನ್ನ ಸಮಸ್ಯೆಗಳಿಗೆ ಹೇಗೆ ಸಂಬಂಧಿಸುತ್ತದೆ? ಈ ವಿಷಯವನ್ನು ನಾನು ಸಮಸ್ಯೆಗಳನ್ನು ನಿಭಾಯಿಸಲಿಕ್ಕಾಗಿ ಅಥವಾ ನನ್ನ ಜೀವನವನ್ನು ಉತ್ತಮಗೊಳಿಸಲಿಕ್ಕಾಗಿ ಉಪಯೋಗಿಸಬಲ್ಲೆನೋ?
◼ ಓದುತ್ತಿರುವ ವಿಷಯವನ್ನು ನಿಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಸಂಬಂಧಿಸುವುದು ಪ್ರಕೃತಿ, ಪರಿಸರ, ವಿಭಿನ್ನ ಸಂಸ್ಕೃತಿಗಳು ಅಥವಾ ಸಮಾಜದ ಸಮಸ್ಯೆಗಳ ಬಗ್ಗೆ ಈ ವಿಷಯವು ನನಗೇನು ಕಲಿಸುತ್ತದೆ? ಈ ಮಾಹಿತಿಯು ಸೃಷ್ಟಿಕರ್ತನ ವಿಷಯದಲ್ಲಿ ನನಗೇನನ್ನು ಕಲಿಸುತ್ತದೆ?