ಲಕ್ಷಾಂತರ ಮಂದಿ ಹೋಗಲಿದ್ದಾರೆ ನೀವೂ ಹೋಗುವಿರೊ?
◼ ಅವರು ಎಲ್ಲಿಗೆ ಹೋಗಲಿದ್ದಾರೆ? “ಬಿಡುಗಡೆಯು ಸಮೀಪವಿದೆ!”—ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಕ್ಕೆ. ಇದು ಮೂರು ದಿನಗಳ ಅಧಿವೇಶನವಾಗಿದೆ. ಮುಂಬರುವ ತಿಂಗಳುಗಳಲ್ಲಿ ಲೋಕದಾದ್ಯಂತ ಅನೇಕ ನಗರಗಳಲ್ಲಿ ಇಂಥ ನೂರಾರು ಅಧಿವೇಶನಗಳು ಜರುಗಲಿವೆ ಮತ್ತು ಕಳೆದ ಮೇ ತಿಂಗಳ ಕೊನೆಯ ವಾರಾಂತ್ಯದಂದು ಅಮೆರಿಕದಲ್ಲಿ ಆರಂಭಗೊಂಡಿತು. ಇತ್ತೀಚಿನ ವರ್ಷವೊಂದರಲ್ಲಿ ನಡೆದ 2,981 ಅಧಿವೇಶನಗಳಲ್ಲಿ ಸುಮಾರು 1,10,00,000 ಜನರು ಹಾಜರಾಗಿದ್ದರು!
ಹೆಚ್ಚಿನ ಸ್ಥಳಗಳಲ್ಲಿ ಕಾರ್ಯಕ್ರಮಗಳು ಬೆಳಗ್ಗೆ 9:30ಕ್ಕೆ ಸಂಗೀತದೊಂದಿಗೆ ಆರಂಭವಾಗುವವು. ಶುಕ್ರವಾರದಂದು “ಯೆಹೋವನ ಬಿಡುಗಡೆಯ ವಾಗ್ದಾನಗಳಿಗೆ ಲಕ್ಷ್ಯಕೊಡಿರಿ” ಮತ್ತು “ಸಹಾಯಕ್ಕಾಗಿ ‘ಮೊರೆಯಿಡುವ ಬಡವರನ್ನು’ ಯೆಹೋವನು ಉದ್ಧರಿಸುವ ವಿಧ” ಎಂಬ ವಿಷಯಗಳು ಚರ್ಚಿಸಲ್ಪಡುವವು. ಬೆಳಗ್ಗಿನ ಕಾರ್ಯಕ್ರಮವು “ನಮ್ಮ ‘ನಿತ್ಯವಿಮೋಚನೆಗಾಗಿ’ ಯೆಹೋವನು ಮಾಡಿರುವ ಒದಗಿಸುವಿಕೆಗಳು” ಎಂಬ ಮುಖ್ಯ ಭಾಷಣದೊಂದಿಗೆ ಕೊನೆಗೊಳ್ಳುವುದು.
ಶುಕ್ರವಾರ ಮಧ್ಯಾಹ್ನದ ಕಾರ್ಯಕ್ರಮದಲ್ಲಿ, “ಯೆಹೋವನು ವೃದ್ಧರನ್ನು ಕೋಮಲವಾಗಿ ಪರಾಮರಿಸುತ್ತಾನೆ,” “ವೇದನಾಮಯ ಸಂಕಟದಿಂದ ಬಿಡುಗಡೆ” ಮತ್ತು “ಬಹಿರಂಗ ‘ಸೇವೆ’ಸಲ್ಲಿಸುವುದರಲ್ಲಿ ದೇವದೂತರ ಪಾತ್ರ” ಎಂಬ ಭಾಷಣಗಳನ್ನು ಕೊಡಲಾಗುವುದು. “ಯೆಹೋವನು ‘ರಕ್ಷಕನು’” ಎಂಬ ನಾಲ್ಕುಭಾಗಗಳಿರುವ ಭಾಷಣಮಾಲೆಯ ನಂತರ ಮಧ್ಯಾಹ್ನದ ಕೊನೆಯ ಭಾಷಣವು, “ನಿಮ್ಮ ವಿರುದ್ಧವಾಗಿ ಏಳುವ ಯಾವ ಆಯುಧವು ಅಥವಾ ನಾಲಗೆಯು ಜಯಿಸದು” ಎಂದಾಗಿದೆ.
ಶನಿವಾರ ಬೆಳಗ್ಗಿನ ಕಾರ್ಯಕ್ರಮದಲ್ಲಿ “ಶುಶ್ರೂಷೆಯಲ್ಲಿ ‘ಎಡೆಬಿಡದೆ’ ಮುಂದುವರಿಯಿರಿ” ಎಂಬ ಮೂರುಭಾಗಗಳಿರುವ ಭಾಷಣಮಾಲೆ ಹಾಗೂ “ಬೇಟೆಗಾರನ ಬಲೆಯಿಂದ ಬಿಡಿಸಲ್ಪಡುವುದು” ಮತ್ತು “‘ದೇವರ ಅಗಾಧವಾದ ವಿಷಯಗಳನ್ನು’ ಪರಿಶೋಧಿಸುವುದು” ಎಂಬ ಭಾಷಣಗಳೂ ಕೊಡಲ್ಪಡುವವು. ಬೆಳಗ್ಗಿನ ಕಾರ್ಯಕ್ರಮದ ಕೊನೆಯ ಭಾಷಣದ ನಂತರ, ಅರ್ಹರಾದವರಿಗೆ ನೀರಿನ ದೀಕ್ಷಾಸ್ನಾನ ಕೊಡಲಾಗುವುದು.
ಶನಿವಾರ ಮಧ್ಯಾಹ್ನದ ಭಾಷಣಗಳಲ್ಲಿ “ಆರೋಗ್ಯಾರೈಕೆಯ ಬಗ್ಗೆ ಶಾಸ್ತ್ರಾಧಾರಿತ ನೋಟವನ್ನು ಇಟ್ಟುಕೊಳ್ಳಿ,” “ಯಾವ ಆತ್ಮವು ನಿಮ್ಮ ಜೀವನವನ್ನು ಆಳುತ್ತಿದೆ?,” “ವಿವಾಹದಲ್ಲಿ ‘ಮೂರು ಹುರಿಯ ಹಗ್ಗವನ್ನು’ ಕಾಪಾಡಿಕೊಳ್ಳಿ” ಮತ್ತು “ಯುವಜನರೇ, ‘ಈಗಲೇ ನಿಮ್ಮ ಸೃಷ್ಟಿಕರ್ತನನ್ನು ಸ್ಮರಿಸಿರಿ’” ಸೇರಿವೆ. “ಯೆಹೋವನ ದಿನವನ್ನು ಮನಸ್ಸಿನಲ್ಲಿಟ್ಟುಕೊಂಡು ಜೀವಿಸುತ್ತಿದ್ದೀರೊ?” ಎಂಬ ಕೊನೆಯ ಭಾಷಣದಲ್ಲಿ ನಮ್ಮ ದಿನಕ್ಕಾಗಿ ವ್ಯಾವಹಾರಿಕ ಬುದ್ಧಿವಾದಗಳನ್ನು ಕೊಡಲಾಗುವುದು.
ಭಾನುವಾರದ ಬೆಳಗ್ಗಿನ ಕಾರ್ಯಕ್ರಮದಲ್ಲಿ, ಮತ್ತಾಯ 13ನೇ ಅಧ್ಯಾಯದಲ್ಲಿ ಪರಲೋಕ ರಾಜ್ಯದ ಬಗ್ಗೆ ಯೇಸು ಕೊಟ್ಟ ಸಾಮ್ಯಗಳ ಮೇಲಾಧರಿತವಾದ ನಾಲ್ಕು ಭಾಗಗಳಿರುವ ಭಾಷಣಮಾಲೆ ಇರುವುದು.
ತದನಂತರ ಅಧಿವೇಶನದ ಒಂದು ಗಮನಾರ್ಹ ಭಾಗವನ್ನು ಪರಿಚಯಿಸುವ ಒಂದು ಭಾಷಣವಿರುವುದು. ಅದು, ಬೈಬಲಿನ ಮೊದಲನೆಯ ಅರಸುಗಳ ಪುಸ್ತಕದ 13ನೇ ಅಧ್ಯಾಯದ ಮೇಲಾಧರಿತವಾದ ನಾಟಕವನ್ನು ಆ ಕಾಲದ ವೇಷಭೂಷಣದೊಂದಿಗೆ ನಡೆಸಲಾಗುವುದು. ಅಧಿವೇಶನದ ಕೊನೆಯ ಸೆಷನ್ ಅಂದರೆ ಭಾನುವಾರ ಮಧ್ಯಾಹ್ನದಂದು “ದೇವರ ರಾಜ್ಯದ ಮೂಲಕ ಬಿಡುಗಡೆಯು ಸಮೀಪವಿದೆ!” ಎಂಬ ಬಹಿರಂಗ ಭಾಷಣ ಇರುವುದು.
ಈ ಅಧಿವೇಶನಕ್ಕೆ ಹಾಜರಾಗಲು ಈಗಲೇ ಯೋಜನೆಗಳನ್ನು ಮಾಡಿರಿ. ನಿಮಗೆ ಹತ್ತಿರವಾಗುವ ಯಾವ ಸ್ಥಳದಲ್ಲಿ ಅಧಿವೇಶನವು ನಡೆಯಲಿದೆ ಎಂದು ತಿಳಿದುಕೊಳ್ಳಲು, ಸ್ಥಳಿಕ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವನ್ನು ಇಲ್ಲವೆ ಈ ಪತ್ರಿಕೆಯ ಪ್ರಕಾಶಕರನ್ನು ಸಂಪರ್ಕಿಸಿರಿ. ಈ ಪತ್ರಿಕೆಯ ಜೊತೆ ಪತ್ರಿಕೆಯಾದ ಕಾವಲಿನಬುರುಜುವಿನ ಮಾರ್ಚ್ 1ರ ಸಂಚಿಕೆಯಲ್ಲಿ, ಭಾರತದಲ್ಲಿ ನಡೆಯುವ ಎಲ್ಲ ಅಧಿವೇಶನ ಸ್ಥಳಗಳ ಪಟ್ಟಿ ಇದೆ. (g 6/06)