-
ದೇವರ ಮತ್ತು ಮನುಷ್ಯರ ದೃಷ್ಟಿಯಲ್ಲಿ ಗೌರವಾರ್ಹವಾದ ವಿವಾಹಕಾವಲಿನಬುರುಜು—2006 | ನವೆಂಬರ್ 1
-
-
ದೇವರ ಮತ್ತು ಮನುಷ್ಯರ ದೃಷ್ಟಿಯಲ್ಲಿ ಗೌರವಾರ್ಹವಾದ ವಿವಾಹ
“ಕಾನಾ ಊರಿನಲ್ಲಿ ಒಂದು ಮದುವೆ ಆಯಿತು; . . . ಯೇಸುವನ್ನೂ ಆತನ ಶಿಷ್ಯರನ್ನೂ ಮದುವೆಗೆ ಕರೆದರು.”—ಯೋಹಾನ 2:1, 2.
1. ಕಾನಾದಲ್ಲಿ ಯೇಸು ಮಾಡಿದ ಕಾರ್ಯವು ಯಾವುದಕ್ಕೆ ಗಮನ ಸೆಳೆಯುತ್ತದೆ?
ದೇವಜನರ ಮಧ್ಯೆ ನಡೆಯುವ ಗೌರವಾರ್ಹ ವಿವಾಹ ಸಮಾರಂಭವು ಸಂತೋಷವನ್ನು ತರುತ್ತದೆಂದು ಯೇಸುವಿಗೆ, ಅವನ ತಾಯಿ ಮತ್ತು ಕೆಲವು ಶಿಷ್ಯರಿಗೆ ತಿಳಿದಿತ್ತು. ಬೈಬಲಿನಲ್ಲಿ ದಾಖಲಾಗಿರುವಂತೆ ಯೇಸು ಕ್ರಿಸ್ತನು ಒಂದು ಮದುವೆಯಲ್ಲಿ ತನ್ನ ಪ್ರಥಮ ಅದ್ಭುತವನ್ನು ಮಾಡುವ ಮೂಲಕ ಆ ಸಮಾರಂಭವನ್ನು ಎದ್ದುಕಾಣುವಂಥದ್ದಾಗಿ ಮಾಡಿದನು ಮತ್ತು ಅಲ್ಲಿನ ಸಂತೋಷವನ್ನು ಹೆಚ್ಚಿಸಿದನು. (ಯೋಹಾನ 2:1-11) ಸುಖಿ ದಂಪತಿಗಳಾಗಿ ಯೆಹೋವನನ್ನು ಸೇವಿಸಬಯಸುವ ಕ್ರೈಸ್ತರ ವಿವಾಹಕ್ಕೆ ನೀವು ಸಹ ಹಾಜರಾಗಿ ಸಂತೋಷದಿಂದ ನಕ್ಕು ನಲಿದಿರಬಹುದು. ಇಲ್ಲವೆ ನಿಮ್ಮ ಸ್ವಂತ ವಿವಾಹವನ್ನು ನೀವು ಮುನ್ನೋಡುತ್ತಿರಬಹುದು ಅಥವಾ ನಿಮ್ಮ ಸ್ನೇಹಿತನ ಯಾ ಸ್ನೇಹಿತೆಯ ವಿವಾಹದ ಯಶಸ್ಸಿಗೆ ಸಹಾಯ ನೀಡಲು ಬಯಸುತ್ತಿರಬಹುದು. ಹಾಗಿರುವಲ್ಲಿ, ಒಂದು ಯಶಸ್ವೀ ವಿವಾಹಕ್ಕೆ ಯಾವುದು ಸಹಾಯ ನೀಡಬಲ್ಲದು?
2. ವಿವಾಹಗಳ ಬಗ್ಗೆ ಬೈಬಲಿನಲ್ಲಿ ಯಾವ ಮಾಹಿತಿಯಿದೆ?
2 ಒಬ್ಬ ಪುರುಷ ಮತ್ತು ಸ್ತ್ರೀ ವಿವಾಹವಾಗಲು ಯೋಜಿಸುವಾಗ, ದೇವರ ಪ್ರೇರಿತ ವಾಕ್ಯದಲ್ಲಿನ ಬುದ್ಧಿವಾದವು ಅತಿ ಸಹಾಯಕಾರಿಯಾಗಿದೆ ಎಂದು ಕ್ರೈಸ್ತರು ಕಂಡುಕೊಂಡಿದ್ದಾರೆ. (2 ತಿಮೊಥೆಯ 3:16, 17) ಕ್ರೈಸ್ತ ವಿವಾಹವೊಂದು ಹೀಗೆಯೇ ನಡೆಸಲ್ಪಡಬೇಕೆಂದು ಒಂದು ನಿರ್ದಿಷ್ಟ ಕಾರ್ಯವಿಧಾನ ಬೈಬಲಿನಲ್ಲಿ ಕೊಡಲ್ಪಟ್ಟಿಲ್ಲ ನಿಜ. ಏಕೆಂದರೆ, ಪದ್ಧತಿಗಳು ಮಾತ್ರವಲ್ಲ ಶಾಸನಸಂಬಂಧವಾದ ಆವಶ್ಯಕತೆಗಳು ಸ್ಥಳ ಮತ್ತು ಕಾಲಾನುಸಾರ ಭಿನ್ನವಾಗಿರುತ್ತವೆ. ಉದಾಹರಣೆಗೆ, ಪೂರ್ವಕಾಲದ ಇಸ್ರಾಯೇಲಿನಲ್ಲಿ ಶಾಸ್ತ್ರೋಕ್ತವಾದ ವಿವಾಹ ಸಂಸ್ಕಾರವಿರಲಿಲ್ಲ. ವಿವಾಹದಿನದಂದು ಮದುಮಗನು ತನ್ನ ವಧುವನ್ನು ತನ್ನ ಮನೆಗೊ ತನ್ನ ತಂದೆಯ ಮನೆಗೊ ಕರೆತರುತ್ತಿದ್ದನು. (ಆದಿಕಾಂಡ 24:67; ಯೆಶಾಯ 61:10; ಮತ್ತಾಯ 1:24) ಈ ದೃಶ್ಯ ಕಾರ್ಯವೇ ವಿವಾಹವೆಂದೆಣಿಸಲ್ಪಟ್ಟಿತು; ಇಂದಿನ ವಿವಾಹಗಳಲ್ಲಿ ಸಾಮಾನ್ಯವಾಗಿರುವ ಶಾಸ್ತ್ರೋಕ್ತ ವಿಧಗಳು ಅಲ್ಲಿರಲಿಲ್ಲ.
3. ಕಾನಾದಲ್ಲಿ ಯಾವ ಸಂಭವಕ್ಕೆ ಯೇಸು ನೆರವು ನೀಡಿದನು?
3 ಈ ಹೆಜ್ಜೆಯನ್ನು ಇಸ್ರಾಯೇಲ್ಯರು ಮದುವೆ ಅಥವಾ ವಿವಾಹವೆಂದು ಅಂಗೀಕರಿಸುತ್ತಿದ್ದರು. ಇದಾದ ಬಳಿಕ ಅವರು ಔತಣಕೂಟದಲ್ಲಿ ಪಾಲ್ಗೊಳ್ಳಬಹುದಿತ್ತು. ಯೋಹಾನ 2:1 ತಿಳಿಸುವುದು: “ಕಾನಾ ಊರಿನಲ್ಲಿ ಒಂದು ಮದುವೆ ಆಯಿತು.” ಇಲ್ಲಿ ಮದುವೆ ಎಂಬುದಕ್ಕಾಗಿರುವ ಮೂಲಭಾಷೆಯಲ್ಲಿನ ಪದವನ್ನು “ಮದುವೆಯ ಔತಣ” ಅಥವಾ “ವಿವಾಹ ಭೋಜನಕೂಟ” ಎಂದು ಭಾಷಾಂತರಿಸಲಾಗುತ್ತದೆ.a ಯೆಹೂದಿ ವಿವಾಹದ ಸಂಬಂಧದಲ್ಲಿ ನಡೆದ ಆ ಔತಣಕ್ಕೆ ಯೇಸು ಹಾಜರಾಗಿ ಅದರ ಸಂತೋಷ ಸಂಭ್ರಮಕ್ಕೆ ನೆರವು ನೀಡಿದನೆಂದು ಈ ವೃತ್ತಾಂತವು ಸ್ಪಷ್ಟಪಡಿಸುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಯೇಸುವಿನ ದಿನಗಳಲ್ಲಿ ನಡೆಯುತ್ತಿದ್ದ ವಿವಾಹದ ಕಾರ್ಯವಿಧಾನಗಳು ಇಂದಿನದಕ್ಕಿಂತ ಭಿನ್ನವಾಗಿದ್ದವು.
4. ಕೆಲವು ಮಂದಿ ಕ್ರೈಸ್ತರು ಯಾವ ರೀತಿಯಲ್ಲಿ ವಿವಾಹವಾಗಲು ಇಷ್ಟಪಡಬಹುದು ಮತ್ತು ಏಕೆ?
4 ಅನೇಕ ದೇಶಗಳಲ್ಲಿ ಇಂದು, ವಿವಾಹವಾಗಲು ಬಯಸುವ ಕ್ರೈಸ್ತರು ಕೆಲವು ಶಾಸನಬದ್ಧ ಅಗತ್ಯತೆಗಳನ್ನು ಪೂರೈಸಬೇಕಾಗುತ್ತದೆ. ಅವರು ಅದನ್ನು ಪೂರೈಸುವಲ್ಲಿ, ಯಾವುದೇ ಶಾಸನಬದ್ಧ ರೀತಿಯಲ್ಲಿ ವಿವಾಹ ಮಾಡಿಕೊಳ್ಳಬಹುದು. ಅದು, ಸರಕಾರದಿಂದ ಮನ್ನಣೆ ಪಡೆದಿರುವ ನ್ಯಾಯಾಧೀಶನೊ ನಗರಾಧ್ಯಕ್ಷನೊ ಇಲ್ಲವೆ ಧಾರ್ಮಿಕ ಅಧಿಕಾರಿಯೊ ನಡೆಸುವ ಚಿಕ್ಕ, ಸರಳ ಸಮಾರಂಭವಾಗಿರಬಲ್ಲದು. ಕೆಲವರು ತಮ್ಮ ಸಂಬಂಧಿಗಳಲ್ಲಿ ಅಥವಾ ಕ್ರೈಸ್ತ ಮಿತ್ರರಲ್ಲಿ ಕೆಲವು ಮಂದಿಯನ್ನು ಶಾಸನಬದ್ಧ ಸಾಕ್ಷಿಗಳಾಗುವಂತೆ ಇಲ್ಲವೆ ಈ ಪ್ರಾಮುಖ್ಯ ಸಂದರ್ಭದ ಆನಂದದಲ್ಲಿ ಭಾಗಿಗಳಾಗುವಂತೆ ಆಮಂತ್ರಿಸಿ ಮದುವೆಯಾಗಲು ಬಯಸಬಹುದು. (ಯೆರೆಮೀಯ 33:11; ಯೋಹಾನ 3:29) ಅದೇ ರೀತಿ ಇತರ ಕ್ರೈಸ್ತರು, ದೊಡ್ಡ ವಿವಾಹದೌತಣ ಅಥವಾ ರಿಸೆಪ್ಷನನ್ನು ಆಡಂಬರವಾಗಿ ನಡೆಸದಿರಲು ಇಷ್ಟಪಡಬಹುದು. ಏಕೆಂದರೆ ಅದಕ್ಕೆ ಬಹಳ ಯೋಜನೆ ಮಾಡಬೇಕಾಗಬಹುದು ಮತ್ತು ತುಂಬ ಖರ್ಚು ಆಗಬಹುದು. ಇದರ ಬದಲಿಗೆ, ಅವರು ಕೆಲವು ಆಪ್ತ ಸ್ನೇಹಿತರಿಗೆ ಭೋಜನವನ್ನು ಏರ್ಪಡಿಸಲು ಇಷ್ಟಪಡಬಹುದು. ಈ ವಿಷಯದಲ್ಲಿ ನಮ್ಮ ವೈಯಕ್ತಿಕ ಇಷ್ಟಗಳು ಏನೇ ಆಗಿರಲಿ, ಇತರ ಪ್ರೌಢ ಕ್ರೈಸ್ತರಿಗೆ ನಮ್ಮದ್ದಕ್ಕಿಂತ ಭಿನ್ನ ದೃಷ್ಟಿಕೋನಗಳು ಇರಬಹುದೆಂಬುದನ್ನು ನಾವು ಒಪ್ಪಿಕೊಳ್ಳಬೇಕು.—ರೋಮಾಪುರ 14:3, 4.
5. ಅನೇಕ ಕ್ರೈಸ್ತರು ತಮ್ಮ ವಿವಾಹದ ಸಮಯದಲ್ಲಿ ವಿವಾಹಭಾಷಣವನ್ನು ಏರ್ಪಡಿಸಲು ಬಯಸುವುದೇಕೆ ಮತ್ತು ಅದು ಯಾವ ಮುಖ್ಯಾಂಶವನ್ನು ಹೊರತರುತ್ತದೆ?
5 ಅನೇಕ ಕ್ರೈಸ್ತ ಜೊತೆಗಳು ತಮ್ಮ ವಿವಾಹದಲ್ಲಿ ಒಂದು ಬೈಬಲಾಧಾರಿತ ಭಾಷಣವನ್ನು ಏರ್ಪಡಿಸಲು ಬಯಸುತ್ತಾರೆ.b ಕಾರಣವೇನೆಂದರೆ, ಯೆಹೋವನು ವಿವಾಹವನ್ನು ಆರಂಭಿಸಿದನೆಂದು ಮತ್ತು ಆ ವಿವಾಹ ಯಶಸ್ವಿಯಾಗಿ ಸಂತೋಷವನ್ನು ತರುವುದಕ್ಕೆ ಆತನ ವಾಕ್ಯದ ಮೂಲಕ ವಿವೇಕಪೂರ್ಣ ಸಲಹೆಯನ್ನು ನೀಡುತ್ತಾನೆಂದೂ ಅವರು ಒಪ್ಪಿಕೊಳ್ಳುವುದರಿಂದಲೇ. (ಆದಿಕಾಂಡ 2:22-24; ಮಾರ್ಕ 10:6-9; ಎಫೆಸ 5:22, 23) ಹೆಚ್ಚಿನ ದಂಪತಿಗಳು ಆ ಸಂತೋಷ ಸಮಾರಂಭದಲ್ಲಿ ತಮ್ಮ ಬಂಧುಬಳಗದವರು ಭಾಗವಹಿಸಬೇಕೆಂದು ಅಪೇಕ್ಷಿಸುತ್ತಾರೆ. ಆದರೂ, ಶಾಸನಬದ್ಧ ಅಗತ್ಯತೆಗಳು, ಕಾರ್ಯವಿಧಾನಗಳು ಮತ್ತು ರೂಢಿಯಲ್ಲಿರುವ ಸ್ಥಳಿಕ ಪದ್ಧತಿಗಳಲ್ಲಿನ ಮಹಾ ವೈವಿಧ್ಯವನ್ನು ನಾವು ಹೇಗೆ ವೀಕ್ಷಿಸಬೇಕು? ಈ ಲೇಖನವು ವಿವಿಧ ಪ್ರದೇಶಗಳಲ್ಲಿರುವ ಸನ್ನಿವೇಶಗಳನ್ನು ಪರಿಗಣಿಸುವುದು. ಇವುಗಳಲ್ಲಿ ಕೆಲವು, ನಿಮಗೆ ಪರಿಚಯವಿರುವುದಕ್ಕಿಂತ ಅಥವಾ ನಿಮ್ಮ ಸ್ಥಳದಲ್ಲಿ ಆಚರಿಸಲ್ಪಡುವುದಕ್ಕಿಂತ ಎಷ್ಟೋ ಭಿನ್ನವಾಗಿರಬಹುದು. ಆದರೂ, ದೇವರ ಸೇವಕರಿಗೆ ಪ್ರಾಮುಖ್ಯವಾಗಿರುವ ಕೆಲವು ಸಾಮಾನ್ಯ ಮೂಲತತ್ತ್ವಗಳನ್ನು ಅಥವಾ ಅಂಶಗಳನ್ನು ನೀವು ತಿಳುಕೊಳ್ಳಬಲ್ಲಿರಿ.
ಶಾಸನಬದ್ಧ ವಿವಾಹವು ಗೌರವಯುತ ವಿವಾಹ
6, 7. ವಿವಾಹದ ಶಾಸನಬದ್ಧ ಅಂಶಗಳಲ್ಲಿ ನಾವೇಕೆ ಆಸಕ್ತಿವಹಿಸಬೇಕು ಮತ್ತು ನಾವದನ್ನು ಹೇಗೆ ತೋರಿಸಿಕೊಡಬಹುದು?
6 ಯೆಹೋವನು ವಿವಾಹವನ್ನು ಆರಂಭಿಸಿರುವುದಾದರೂ, ವಿವಾಹವಾಗುತ್ತಿರುವವರ ನಡವಳಿಕೆಗಳ ವಿಷಯದಲ್ಲಿ ಸರಕಾರಗಳಿಗೆ ಸ್ವಲ್ಪಮಟ್ಟಿಗೆ ಅಧಿಕಾರವಿದೆ. ಇದು ಯೋಗ್ಯ. ಯೇಸು ಹೇಳಿದ್ದು: “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ.” (ಮಾರ್ಕ 12:17) ತದ್ರೀತಿ, ಅಪೊಸ್ತಲ ಪೌಲನು ನಿರ್ದೇಶಿಸಿದ್ದು: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವರಿಂದ ನೇಮಿಸಲ್ಪಟ್ಟವರು.”—ರೋಮಾಪುರ 13:1; ತೀತ 3:1.
7 ಹೆಚ್ಚಿನ ದೇಶಗಳಲ್ಲಿ, ಯಾರು ವಿವಾಹಕ್ಕೆ ಅರ್ಹರೆಂಬುದನ್ನು ಕೈಸರನು ಅಥವಾ ಸರಕಾರಿ ಅಧಿಕಾರಿಗಳು ನಿರ್ಧರಿಸುವರು. ಈ ಕಾರಣದಿಂದ, ಶಾಸ್ತ್ರೀಯವಾಗಿ ಅರ್ಹರಾಗಿರುವ ಇಬ್ಬರು ಕ್ರೈಸ್ತರು ವಿವಾಹಿತರಾಗಲು ಇಷ್ಟಪಡುವಾಗ, ಅವರು ಸ್ಥಳಿಕ ನಿಯಮಕ್ಕೆ ಶುದ್ಧಾಂತಃಕರಣದಿಂದ ವಿಧೇಯರಾಗುತ್ತಾರೆ. ಇದರಲ್ಲಿ ವಿವಾಹದ ಲೈಸನ್ಸ್ ಪಡೆಯುವುದು, ಸರಕಾರದಿಂದ ಮಾನ್ಯತೆ ಪಡೆದಿರುವ ವಿವಾಹಾಧಿಕಾರಿಯನ್ನು ಉಪಯೋಗಿಸುವುದು ಮತ್ತು ಪ್ರಾಯಶಃ ಸಂಪೂರ್ಣಗೊಂಡಿರುವ ವಿವಾಹವನ್ನು ನೋಂದಾಯಿಸುವುದು (ರಿಜಿಸ್ಟರ್ ಮಾಡುವುದು) ಸೇರಿರಬಹುದು. ಕೈಸರ್ ಔಗುಸ್ತನು ‘ಖಾನೇಷುಮಾರಿಯನ್ನು’ (ದಾಖಲಾತಿಯನ್ನು) ಆಜ್ಞಾಪಿಸಿದಾಗ ಮರಿಯಳು ಮತ್ತು ಯೋಸೇಫನು ಅದಕ್ಕೆ ವಿಧೇಯರಾಗಿ, “ಹೆಸರುಬರಸಿಕೊಳ್ಳುವದಕ್ಕಾಗಿ” ಬೇತ್ಲೆಹೇಮಿಗೆ ಪ್ರಯಾಣಬೆಳೆಸಿದರು.—ಲೂಕ 2:1-5.
8. ವಿವಾಹವು ಎಷ್ಟು ಬದ್ಧತೆಯದ್ದಾಗಿದೆ ಮತ್ತು ಯೆಹೋವನ ಸಾಕ್ಷಿಗಳ ಯಾವ ಕಾರ್ಯವಿಧಾನವು ಈ ತಿಳಿವಳಿಕೆಯನ್ನು ಪ್ರತಿಬಿಂಬಿಸುತ್ತದೆ?
8 ಇಬ್ಬರು ಕ್ರೈಸ್ತರು ಶಾಸನಬದ್ಧ ಮತ್ತು ಮನ್ನಣೆ ಪಡೆದಿರುವ ರೀತಿಯಲ್ಲಿ ವಿವಾಹಿತರಾಗುವಾಗ, ಆ ಒಂದಾದ ಸಂಬಂಧವು ದೇವರ ದೃಷ್ಟಿಯಲ್ಲಿ ಬದ್ಧವಾಗುತ್ತದೆ. ಈ ಕಾರಣದಿಂದ, ಯೆಹೋವನ ಸಾಕ್ಷಿಗಳು ಬಹುವಿಧವಾದ ಶಾಸನಬದ್ಧ ಸಂಸ್ಕಾರಗಳನ್ನು ನಡೆಸುತ್ತ ವಿವಾಹ ಸಂಸ್ಕಾರವನ್ನು ಪುನರಾವರ್ತಿಸುವುದಿಲ್ಲ ಅಥವಾ ದಂಪತಿಗಳ 25ನೆಯ ಅಥವಾ 50ನೆಯ ವಿವಾಹ ವಾರ್ಷಿಕೋತ್ಸವದಲ್ಲಿ ತಮ್ಮ ವಿವಾಹದ ನಿಷ್ಠಾಪ್ರತಿಜ್ಞೆಯನ್ನು ನವೀಕರಿಸುವುದಿಲ್ಲ. (ಮತ್ತಾಯ 5:37) (ಒಬ್ಬ ಪುರೋಹಿತನೊ ಪಾದ್ರಿಯೊ ಸಂಸ್ಕಾರಗಳಲ್ಲಿ ಭಾಗವಹಿಸಿ, ದಂಪತಿಗಳನ್ನು ಪತಿಪತ್ನಿಯಾಗಿ ಘೋಷಿಸದಿರುವಲ್ಲಿ ಅದು ನಿಜವಾಗಿಯೂ ಸರಿಯಾದ ಮದುವೆಯಲ್ಲ ಎಂದು ಹೇಳಿ ಕೆಲವು ಚರ್ಚುಗಳು ಶಾಸನಬದ್ಧವಾಗಿ ಮನ್ನಣೆ ಪಡೆದ ಮದುವೆಯನ್ನು ತಳ್ಳಿಹಾಕುತ್ತವೆ.) ಅನೇಕ ದೇಶಗಳಲ್ಲಿ, ಸರಕಾರಗಳು ಯೆಹೋವನ ಸಾಕ್ಷಿಗಳ ಶುಶ್ರೂಷಕನೊಬ್ಬನು ವಿವಾಹವನ್ನು ನಡೆಸುವಂತೆ ಅಧಿಕಾರವನ್ನು ಕೊಡುತ್ತವೆ. ಹೀಗೆ ಮಾನ್ಯತೆ ಪಡೆದಿರುವ ಶುಶ್ರೂಷಕನು ಇರುವಲ್ಲಿ, ಪ್ರಾಯಶಃ ಅವನು ವಿವಾಹವನ್ನು ರಾಜ್ಯ ಸಭಾಗೃಹದಲ್ಲಿ ಒಂದು ವಿವಾಹದ ಭಾಷಣದೊಂದಿಗೆ ನಡೆಸಲು ಬಯಸಬಹುದು. ಅದು ಸತ್ಯಾರಾಧನೆಯ ಸ್ಥಳಿಕ ನಿವೇಶನವಾಗಿರುವುದರಿಂದ, ಯೆಹೋವ ದೇವರು ಆರಂಭಿಸಿದ ಈ ಏರ್ಪಾಡಿನ ಕುರಿತ ಭಾಷಣಕ್ಕೆ ತಕ್ಕ ಸ್ಥಳವಾಗಿದೆ.
9. (ಎ) ಶಾಸನಬದ್ಧವಾಗಿ ವಿವಾಹವಾಗುವ ಕ್ರೈಸ್ತ ದಂಪತಿಗಳು ಏನನ್ನು ಏರ್ಪಡಿಸಲು ಇಷ್ಟಪಡಬಹುದು? (ಬಿ) ವಿವಾಹ ಯೋಜನೆಗಳಲ್ಲಿ ಹಿರಿಯರು ಹೇಗೆ ಒಳಗೂಡಬಹುದು?
9 ಬೇರೆ ದೇಶಗಳಲ್ಲಿ, ದಂಪತಿಗಳು ಪುರಸಭಾ ಭವನದಂತಹ ಒಂದು ಸರಕಾರಿ ಆಫೀಸಿನಲ್ಲಿ ಇಲ್ಲವೆ ನಿಯಮಿತ ಸರಕಾರಿ ಅಧಿಕಾರಿಯ ಮುಂದೆ ವಿವಾಹ ಮಾಡಿಕೊಳ್ಳುವಂತೆ ನಿಯಮವು ಅಗತ್ಯಪಡಿಸುತ್ತದೆ. ಆಗ ಕ್ರೈಸ್ತರು ಅನೇಕವೇಳೆ, ಆ ಶಾಸನಬದ್ಧ ಹೆಜ್ಜೆಯ ನಂತರ ಅದೇ ದಿನ ಇಲ್ಲವೆ ಮರುದಿನ, ರಾಜ್ಯ ಸಭಾಗೃಹದಲ್ಲಿ ವಿವಾಹಭಾಷಣವನ್ನು ಏರ್ಪಡಿಸುತ್ತಾರೆ. (ಶಾಸನಬದ್ಧ ಸಂಸ್ಕಾರ ಮತ್ತು ಬೈಬಲ್ ಭಾಷಣಗಳ ಮಧ್ಯೆ ಅನೇಕ ದಿನಗಳ ಅಂತರವಿರುವುದನ್ನು ಅವರು ಅಪೇಕ್ಷಿಸುವುದಿಲ್ಲ, ಏಕೆಂದರೆ ಅವರು ಆಗಲೇ ದೇವರ ಮತ್ತು ಕ್ರೈಸ್ತ ಸಭೆಯನ್ನು ಸೇರಿಸಿ ಮನುಷ್ಯರ ಮುಂದೆ ವಿವಾಹಿತರಾಗಿರುತ್ತಾರೆ.) ಶಾಸನಬದ್ಧವಾಗಿ ವಿವಾಹವಾಗಲಿರುವ ದಂಪತಿಗಳು ಒಂದು ರಾಜ್ಯ ಸಭಾಗೃಹದಲ್ಲಿ ಭಾಷಣವನ್ನು ಏರ್ಪಡಿಸಲು ಅಪೇಕ್ಷಿಸುವಲ್ಲಿ ಅವರು ಮುಂದಾಗಿಯೇ ಸಭಾ ಸೇವಾ ಕಮಿಟಿಯ ಹಿರಿಯರ ಅಪ್ಪಣೆಯನ್ನು ಕೋರಬೇಕು. ಸಭಾ ಮೇಲ್ವಿಚಾರಕರು ಈ ದಂಪತಿಗಳಿಗೆ ಒಳ್ಳೆಯ ಹೆಸರಿದೆಯೋ ಎಂಬುದನ್ನು ದೃಢೀಕರಿಸುವರು. ಮಾತ್ರವಲ್ಲ, ವಿವಾಹಭಾಷಣದ ಸಮಯವು ಸಭಾಗೃಹದ ಕ್ರಮದ ಕೂಟಗಳು ಮತ್ತು ನಿಯಮಿತ ಕಾರ್ಯಕ್ರಮಗಳಿಗೆ ಅಡ್ಡಬರದಂತೆ ನೋಡಿಕೊಳ್ಳುವರು. (1 ಕೊರಿಂಥ 14:33, 40) ಅವರು ದಂಪತಿಗಳು ಕೇಳಿಕೊಳ್ಳಬಹುದಾದ ಸಭಾಗೃಹದ ಯಾವುದೇ ಸಿದ್ಧತೆಗಳನ್ನು ಸಹ ಪುನರ್ವಿಮರ್ಶಿಸಿ, ಈ ಉಪಯೋಗದ ಬಗ್ಗೆ ಸಭೆಗೆ ಪ್ರಕಟಿಸಬೇಕೊ ಎಂಬುದನ್ನು ನಿರ್ಣಯಿಸುವರು.
10. ಶಾಸನಬದ್ಧ ಮದುವೆಯಾಗುವ ಅವಶ್ಯವಿದ್ದಲ್ಲಿ, ಅದು ವಿವಾಹಭಾಷಣದ ಮೇಲೆ ಯಾವ ಪರಿಣಾಮವನ್ನು ಬೀರುವುದು?
10 ವಿವಾಹಭಾಷಣವನ್ನು ಕೊಡುವ ಹಿರಿಯನು, ಆ ಭಾಷಣವನ್ನು ಸ್ನೇಹಪರವಾಗಿಯೂ ಆಧ್ಯಾತ್ಮಿಕವಾಗಿ ಭಕ್ತಿವರ್ಧಕವಾಗಿಯೂ ಗೌರವಯುತವಾಗಿಯೂ ನೀಡಬೇಕು. ದಂಪತಿಗಳಿಗೆ ಈ ಮೊದಲೇ ಶಾಸನಬದ್ಧವಾಗಿ ವಿವಾಹವಾಗಿರುವಲ್ಲಿ, ಕೈಸರನ ನಿಯಮದ ಪ್ರಕಾರ ಇವರಿಗೆ ಮದುವೆಯಾಗಿದೆ ಎಂಬುದನ್ನು ಹಿರಿಯನು ಸ್ಪಷ್ಟಪಡಿಸಬೇಕು. ದಂಪತಿಗಳು ಶಾಸನಬದ್ಧ ಮದುವೆಯಲ್ಲಿ ವಿವಾಹ ಪ್ರತಿಜ್ಞೆಯನ್ನು ವಿನಿಮಯ ಮಾಡಿರದಿದ್ದರೆ, ಈ ಭಾಷಣದ ಸಮಯದಲ್ಲಿ ಅದನ್ನು ಮಾಡಬಹುದು.c ಶಾಸನಬದ್ಧವಾಗಿ ಮದುವೆಯಾಗುವಾಗ ಪ್ರತಿಜ್ಞೆಗಳನ್ನು ಮಾಡಿರುವುದಾದರೂ, ಅವನ್ನು ಯೆಹೋವನ ಮುಂದೆ ಹಾಗೂ ಸಭೆಯ ಮುಂದೆ ಮಾಡಬೇಕೆಂದು ನವದಂಪತಿಗಳು ಬಯಸುವಲ್ಲಿ, ಅವರು ಈಗಾಗಲೇ ‘ಕೂಡಿಸಲ್ಪಟ್ಟವರು’ ಎಂಬುದನ್ನು ತೋರಿಸುವಂತೆ ಅದನ್ನು ಭೂತಕಾಲದಲ್ಲಿ ಹೇಳಬೇಕು.—ಮತ್ತಾಯ 19:6; 22:21.
11. ಕೆಲವು ಸ್ಥಳಗಳಲ್ಲಿ ದಂಪತಿಗಳು ವಿವಾಹವಾಗುವುದು ಹೇಗೆ ಮತ್ತು ಆ ಸನ್ನಿವೇಶದಲ್ಲಿ ವಿವಾಹ ಭಾಷಣದ ಕುರಿತೇನು?
11 ಕೆಲವು ಸ್ಥಳಗಳಲ್ಲಿನ ಕಾನೂನು, ಗಂಡು-ಹೆಣ್ಣು ಯಾವುದೇ ಸಂಸ್ಕಾರದ ಮೂಲಕವಾಗಲಿ ಸರಕಾರೀ ಏಜಂಟನ ಮುಂದೆಯಾಗಲಿ ಮದುವೆಯಾಗುವುದನ್ನು ಅವಶ್ಯಪಡಿಸದಿರಬಹುದು. ಆ ಸಂದರ್ಭದಲ್ಲಿ, ಅವರು ವಿವಾಹ ರೆಜಿಸ್ಟ್ರೇಷನ್ ಫಾರ್ಮ್‌ಗೆ ಸಹಿಹಾಕಿ ಒಬ್ಬ ಅಧಿಕಾರಿಗೆ ಒಪ್ಪಿಸುವಲ್ಲಿ ಅದೇ ಮದುವೆಯಾಗಿ ಪರಿಗಣಿಸಲ್ಪಡುತ್ತದೆ. ಬಳಿಕ, ಒಂದು ವಿವಾಹ ಸರ್ಟಿಫಿಕೇಟನ್ನು ರಿಜಿಸ್ಟರ್ ಮಾಡಲಾಗುತ್ತದೆ. ಈ ರೀತಿಯಲ್ಲಿ ಆ ಜೋಡಿಯನ್ನು ಗಂಡಹೆಂಡತಿಯಾಗಿ ಪರಿಗಣಿಸಲಾಗುತ್ತದೆ ಮತ್ತು ಆ ಸರ್ಟಿಫಿಕೇಟಿನ ತಾರೀಖು ಅವರ ವಿವಾಹದ ತಾರೀಖಾಗುತ್ತದೆ. ಹೀಗೆ ವಿವಾಹಿತರಾದ ದಂಪತಿಗಳು, ಮೇಲೆ ಗಮನಿಸಲಾದಂತೆ ಆ ರೆಜಿಸ್ಟ್ರೇಷನ್‌ನ ನಂತರ ಕೂಡಲೇ ರಾಜ್ಯ ಸಭಾಗೃಹದಲ್ಲಿ ಬೈಬಲಾಧಾರಿತವಾದ ಒಂದು ಭಾಷಣ ಕೊಡಲಾಗುವಂತೆ ಏರ್ಪಡಿಸಬಹುದು. ಆ ಭಾಷಣವನ್ನು ನೀಡಲು ಆಯ್ಕೆಮಾಡಲ್ಪಟ್ಟ ಆಧ್ಯಾತ್ಮಿಕವಾಗಿ ಪ್ರೌಢನಾದ ಸಹೋದರನು ಉಪಸ್ಥಿತರೆಲ್ಲರಿಗೆ ಈ ದಂಪತಿಗಳು ಆಗ ತಾನೇ ನಡೆದಿರುವ ರೆಜಿಸ್ಟ್ರೇಷನ್‌ನ ಕಾರಣ ವಿವಾಹಿತರಾಗಿದ್ದಾರೆ ಎಂದು ಪ್ರಕಟಿಸುವನು. ಯಾವುದೇ ನಿಷ್ಠಾಪ್ರತಿಜ್ಞೆಯನ್ನು ಮಾಡಲಿಕ್ಕಿರುವಲ್ಲಿ ಅವನ್ನು 10ನೆಯ ಪ್ಯಾರ ಮತ್ತು ಅದರ ಪಾದಟಿಪ್ಪಣಿಯಲ್ಲಿ ಹೇಳಿರುವಂತೆ ನಿರ್ವಹಿಸಲಾಗುವುದು. ರಾಜ್ಯ ಸಭಾಗೃಹದಲ್ಲಿ ಉಪಸ್ಥಿತರಿರುವವರು ಆ ದಂಪತಿಗಳ ಜೊತೆಯಲ್ಲಿ ಹರ್ಷಿಸಿ, ದೇವರ ವಾಕ್ಯದ ಬುದ್ಧಿವಾದಗಳಿಂದ ಪ್ರಯೋಜನ ಪಡೆಯುವರು.—ಪರಮಗೀತ 3:11.
ಸಾಂಪ್ರದಾಯಿಕ ಮದುವೆ ಮತ್ತು ರಿಜಿಸ್ಟರ್ ಮದುವೆ
12. ಸಾಂಪ್ರದಾಯಿಕ ಮದುವೆಯೆಂದರೇನು ಮತ್ತು ಇಂತಹ ಮದುವೆಯ ನಂತರ ಏನು ಮಾಡುವುದು ಸೂಕ್ತ?
12 ಕೆಲವು ದೇಶಗಳಲ್ಲಿ ವಿವಾಹ ಜೋಡಿಗಳು ಸಾಂಪ್ರದಾಯಿಕ (ಇಲ್ಲವೆ ಬುಡಕಟ್ಟಿನ) ವಿವಾಹವೆಂದು ಕರೆಯಲ್ಪಡುವ ವಿವಾಹವನ್ನು ಮಾಡಿಕೊಳ್ಳುತ್ತಾರೆ. ಇದು ಒಂದು ಗಂಡು-ಹೆಣ್ಣು ಕೇವಲ ಜೊತೆಯಾಗಿ ವಾಸಿಸುವುದಕ್ಕೆ ಸೂಚಿಸುವುದಿಲ್ಲ. ಹಾಗೆಯೇ ಇದು ಕೆಲವು ಪ್ರದೇಶಗಳಲ್ಲಿ ಸ್ವಲ್ಪಮಟ್ಟಿಗೆ ಮಾನ್ಯತೆ ಪಡೆದರೂ ಪೂರ್ತಿ ಶಾಸನಸಮ್ಮತವಾಗಿರದ ವಿವಾಹದಂಥ ಸಾಮಾನ್ಯ ಕಾನೂನು ಸನ್ನಿವೇಶಕ್ಕೂ ಸೂಚಿಸುವುದಿಲ್ಲ.d ನಾವು ಇಲ್ಲಿ ಮಾತಾಡುತ್ತಿರುವುದು, ಬುಡಕಟ್ಟಿನ ಜನರ ಅಥವಾ ಪ್ರದೇಶದ ಪದ್ಧತಿಗೆ ಹೊಂದಿಕೆಯಲ್ಲಿ ಸಾರ್ವಜನಿಕವಾಗಿ ಮಾನ್ಯತೆ ಪಡೆದಿರುವ ಮದುವೆಯಾಗಿದೆ. ಇದರಲ್ಲಿ ವಧೂದಕ್ಷಿಣೆಯ ಪೂರ್ತಿ ಪಾವತಿ ಮತ್ತು ಸ್ವೀಕಾರ ಸೇರಿರಬಹುದು ಮತ್ತು ಈ ಮೂಲಕ ದಂಪತಿಗಳು ಶಾಸನಸಮ್ಮತವಾಗಿಯೂ ಶಾಸ್ತ್ರಸಮ್ಮತವಾಗಿಯೂ ಮದುವೆಯಾಗುತ್ತಾರೆ. ಇಂತಹ ಸಾಂಪ್ರದಾಯಿಕ ವಿವಾಹಗಳನ್ನು ಸರಕಾರವು ನ್ಯಾಯೋಕ್ತ, ಶಾಸನಸಮ್ಮತ ಮತ್ತು ಬಂಧಕವಾದ ವಿವಾಹಗಳಾಗಿ ವೀಕ್ಷಿಸುತ್ತದೆ. ಸಾಮಾನ್ಯವಾಗಿ ಆ ಬಳಿಕ, ಈಗಾಗಲೇ ನಡೆದ ಈ ಸಾಂಪ್ರದಾಯಿಕ ವಿವಾಹವನ್ನು ದಾಖಲೆ ಅಥವಾ ರಿಜಿಸ್ಟರ್ ಮಾಡಲು ಸಾಧ್ಯವಾಗುತ್ತದೆ ಮತ್ತು ಹೀಗೆ ರಿಜಿಸ್ಟರ್ ಮಾಡುವಾಗ ದಂಪತಿಗಳಿಗೆ ಒಂದು ಅಧಿಕೃತ ಸರ್ಟಿಫಿಕೇಟ್ ದೊರೆಯುತ್ತದೆ. ಈ ರಿಜಿಸ್ಟರ್ ಮಾಡುವಿಕೆಯು ದಂಪತಿಗಳಿಗೆ ಅಥವಾ ವಿಧವೆಯಾಗುವಲ್ಲಿ ಹೆಂಡತಿಗೆ ಮತ್ತು ಭಾವೀ ಮಕ್ಕಳಿಗೆ ಶಾಸನಸಮ್ಮತ ಸಂರಕ್ಷಣೆಯನ್ನು ಕೊಡಬಲ್ಲದು. ಸಾಂಪ್ರದಾಯಿಕ ವಿವಾಹ ಮಾಡಿಕೊಳ್ಳುವವರನ್ನು ಆದಷ್ಟು ಬೇಗ ರಿಜಿಸ್ಟರ್ ಮಾಡುವಂತೆ ಸಭೆಯು ಪ್ರೋತ್ಸಾಹಿಸುತ್ತದೆ. ಮೋಶೆಯ ನಿಯಮದ ಕೆಳಗೆ ವಿವಾಹಗಳೂ ಜನನಗಳೂ ಅಧಿಕೃತವಾಗಿ ದಾಖಲೆಯಾಗುತ್ತಿದ್ದಂತೆ ಕಂಡುಬರುವುದು ಆಸಕ್ತಿಕರ ವಿಷಯವಾಗಿದೆ.—ಮತ್ತಾಯ 1:1-16.
13. ಸಾಂಪ್ರದಾಯಿಕ ಮದುವೆಯ ನಂತರ ಕೊಡಲ್ಪಡುವ ವಿವಾಹಭಾಷಣದಲ್ಲಿ ಏನನ್ನು ತಿಳಿಸುವುದು ಸೂಕ್ತವಾಗಿರುವುದು?
13 ಇಂತಹ ಸಾಂಪ್ರದಾಯಿಕ ವಿವಾಹದಲ್ಲಿ ಶಾಸನಸಮ್ಮತವಾಗಿ ಒಂದಾಗುವ ಜೋಡಿಯು ಆ ವಿವಾಹ ಜರುಗಿದಾಗ ಪತಿಪತ್ನಿಯಾಗುತ್ತಾರೆ. ಮೇಲೆ ಗಮನಿಸಲಾದಂತೆ, ಇಂತಹ ಶಾಸನಸಮ್ಮತ ವಿವಾಹವನ್ನು ಮಾಡಿಕೊಳ್ಳುವ ಕ್ರೈಸ್ತರು, ರಾಜ್ಯ ಸಭಾಗೃಹದಲ್ಲಿ ವಿವಾಹ ನಿಷ್ಠಾಪ್ರತಿಜ್ಞೆ ಸೇರಿರುವ ವಿವಾಹಭಾಷಣವನ್ನು ಏರ್ಪಡಿಸಲು ಬಯಸಬಹುದು. ಹಾಗೆ ಮಾಡುವಲ್ಲಿ, ಭಾಷಣಕರ್ತನು ಈ ದಂಪತಿಗಳು ಕೈಸರನ ನಿಯಮಾನುಸಾರ ಈಗಾಗಲೇ ವಿವಾಹಿತರಾಗಿದ್ದಾರೆ ಎಂಬುದನ್ನು ತಿಳಿಯಪಡಿಸುವನು. ಇಂತಹ ವಿವಾಹಭಾಷಣವು ಒಂದೇ ಸಲ ಕೊಡಲ್ಪಡುವುದು. ಇಲ್ಲಿ ಸೂಚಿಸಲ್ಪಟ್ಟಂತೆ ಶಾಸನಸಮ್ಮತವಾದ ಸಾಂಪ್ರದಾಯಿಕ (ಬುಡಕಟ್ಟಿನ) ವಿವಾಹವೊಂದರಲ್ಲಿ ಶಾಸ್ತ್ರಾಧಾರವಾದ ಒಂದು ಭಾಷಣ ಕೊಡಲ್ಪಡುವುದು. ಇವೆರಡನ್ನು ಸಾಧ್ಯವಾದಷ್ಟು ಒತ್ತಾಗಿ ಏರ್ಪಡಿಸುವುದು ಅಂದರೆ ಒಂದೇ ದಿವಸ ಇಡುವುದು ಉತ್ತಮ. ಅದು ಆ ಸಮಾಜದಲ್ಲಿ ಕ್ರೈಸ್ತ ವಿವಾಹಕ್ಕೆ ಗೌರವ ತರಲು ಸಹಾಯಮಾಡುವುದು.
14. ಕ್ರೈಸ್ತನೊಬ್ಬನಿಗೆ ಸಾಂಪ್ರದಾಯಿಕ ಮತ್ತು ರಿಜಿಸ್ಟರ್ ಮದುವೆ ಇವೆರಡಕ್ಕೂ ಅವಕಾಶವಿರುವಲ್ಲಿ ಅವನು ಏನು ಮಾಡಬಹುದು?
14 ಸಾಂಪ್ರದಾಯಿಕ ಮದುವೆಯು ಶಾಸನಸಮ್ಮತವೆಂದು ಒಪ್ಪಲಾಗುವ ಕೆಲವು ದೇಶಗಳಲ್ಲಿ, ರಿಜಿಸ್ಟರ್ (ಅಥವಾ ಶಾಸನಬದ್ಧ) ಮದುವೆಯ ಏರ್ಪಾಡುಗಳೂ ಇವೆ. ಒಂದು ರಿಜಿಸ್ಟರ್ ಮದುವೆಯು ಸಾಮಾನ್ಯವಾಗಿ ಸರಕಾರಿ ಏಜಂಟನ ಮುಂದೆ ನಡೆಯುತ್ತದೆ. ಇದರಲ್ಲಿ ವಿವಾಹ ನಿಷ್ಠಾಪ್ರತಿಜ್ಞೆಗಳು ಮತ್ತು ರಿಜಿಸ್ಟರ್‌ಗೆ ಸಹಿಹಾಕುವುದು ಇವೆರಡೂ ಸೇರಿರಬಹುದು. ಕೆಲವು ಕ್ರೈಸ್ತ ದಂಪತಿಗಳು ಸಾಂಪ್ರದಾಯಿಕ ಮದುವೆಗಿಂತ ಹೆಚ್ಚಾಗಿ ಇದನ್ನು ಇಷ್ಟಪಡುತ್ತಾರೆ. ಸಾಂಪ್ರದಾಯಿಕ ಮದುವೆ ಮತ್ತು ರಿಜಿಸ್ಟರ್ ಮದುವೆ ಇವೆರಡನ್ನೂ ಮಾಡಿಕೊಳ್ಳುವಂತೆ ಕಾನೂನು ಅಗತ್ಯಪಡಿಸುವುದಿಲ್ಲ; ಇವೆರಡೂ ಶಾಸನಬದ್ಧವಾಗಿ ನ್ಯಾಯೋಕ್ತವಾಗಿದೆ. ವಿವಾಹಭಾಷಣ ಮತ್ತು ನಿಷ್ಠಾಪ್ರತಿಜ್ಞೆಗಳ ಕುರಿತು 9 ಮತ್ತು 10ನೇ ಪ್ಯಾರಗಳಲ್ಲಿ ಹೇಳಲಾಗಿರುವ ವಿಷಯಗಳು ರಿಜಿಸ್ಟರ್ ಮದುವೆಗೂ ಅನ್ವಯಿಸುತ್ತವೆ. ದಂಪತಿಗಳು ದೇವರ ಮತ್ತು ಮನುಷ್ಯರ ಮುಂದೆ ಗೌರವಾರ್ಹವಾದ ರೀತಿಯಲ್ಲಿ ವಿವಾಹವಾಗುವುದೇ ಪ್ರಧಾನ ವಿಷಯವಾಗಿದೆ.—ಲೂಕ 20:25; 1 ಪೇತ್ರ 2:13, 14.
ವಿವಾಹದಲ್ಲಿ ಗೌರವವನ್ನು ಕಾಪಾಡಿಕೊಳ್ಳಿ
15, 16. ಒಂದು ವಿವಾಹದಲ್ಲಿ ಗೌರವವು ಹೇಗೆ ಒಳಗೂಡಿದೆ?
15 ಪಾರಸೀಯ ರಾಜನೊಬ್ಬನ ವೈವಾಹಿಕ ಜೀವನದಲ್ಲಿ ಸಮಸ್ಯೆ ಎದ್ದಾಗ, ಮೆಮೂಕಾನನೆಂಬ ಮುಖ್ಯ ಸಲಹೆಗಾರನು ಬುದ್ಧಿವಾದವನ್ನು ಕೊಟ್ಟನು. ಅದು ‘ಎಲ್ಲಾ ಸ್ತ್ರೀಯರು ತಮ್ಮ ಗಂಡಂದಿರಿಗೆ ಮಾನಸಲ್ಲಿಸುವಂಥ’ ಪ್ರಯೋಜನಕರವಾದ ಪರಿಣಾಮವನ್ನು ಬೀರಸಾಧ್ಯವಿತ್ತು. (ಎಸ್ತೇರಳು 1:20) ಕ್ರೈಸ್ತ ವಿವಾಹಗಳಲ್ಲಿ, ಆ ಬುದ್ಧಿವಾದವನ್ನು ಯಾವುದೇ ಮಾನವ ರಾಜನು ಆಜ್ಞಾರೂಪವಾಗಿ ಕೊಡಬೇಕೆಂದಿರುವುದಿಲ್ಲ; ಪತ್ನಿಯರೇ ತಮ್ಮ ಪತಿಗಳನ್ನು ಗೌರವಿಸಲು ಬಯಸುತ್ತಾರೆ. ಅದೇ ರೀತಿ, ಕ್ರೈಸ್ತ ಗಂಡಂದಿರು ‘ತಮ್ಮ ಹೆಂಡತಿಯರಿಗೆ ಮಾನಸಲ್ಲಿಸುತ್ತಾರೆ.’ (ಜ್ಞಾನೋಕ್ತಿ 31:11, 30; 1 ಪೇತ್ರ 3:7) ನಮ್ಮ ವಿವಾಹಕ್ಕೆ ಗೌರವವನ್ನು ಸಲ್ಲಿಸುವುದು ಮದುವೆಯಾಗಿ ಅನೇಕ ವರುಷಗಳು ಕಳೆದ ಮೇಲೆ ಅಲ್ಲ. ಅದು ಮದುವೆಯಾದ ಕೂಡಲೇ, ಹೌದು ಮದುವೆದಿನದಿಂದಲೇ ತೋರಿಸಲ್ಪಡಬೇಕು.
16 ಮದುವೆಯ ದಿನದಲ್ಲಿ ಗೌರವವನ್ನು ತೋರಿಸಬೇಕಾಗಿರುವುದು ಕೇವಲ ಗಂಡು-ಹೆಣ್ಣು ಅಂದರೆ ಪತಿಪತ್ನಿಯರು ಮಾತ್ರವೇ ಅಲ್ಲ. ಕ್ರೈಸ್ತ ಹಿರಿಯನೊಬ್ಬನು ನೀಡುವ ವಿವಾಹಭಾಷಣವೂ ಗೌರವಪೂರ್ಣವಾಗಿರಬೇಕು. ಆ ಭಾಷಣವು ಮದುವೆಯ ಜೋಡಿಗೆ ಸಂಬೋಧಿಸಲ್ಪಡಬೇಕು. ಅವರಿಗೆ ಗೌರವ ತರುವ ಭಾಷಣ ಅದಾಗಿರುವುದರಿಂದ, ಭಾಷಣಕರ್ತನು ಹಾಸ್ಯಪೂರಿತ ಹೇಳಿಕೆಗಳನ್ನಾಗಲಿ ಕಟ್ಟುಕಥೆಗಳನ್ನಾಗಲಿ ಹೇಳಬಾರದು. ಇಲ್ಲವೆ, ಗಂಡು-ಹೆಣ್ಣನ್ನು ಮತ್ತು ಕೇಳುಗರನ್ನು ಕಸಿವಿಸಿಗೊಳಿಸಬಹುದಾದ ತೀರ ವೈಯಕ್ತಿಕ ವಿಷಯಗಳನ್ನು ಭಾಷಣದಲ್ಲಿ ಸೇರಿಸಬಾರದು. ಬದಲಿಗೆ, ಅವನು ಹಾರ್ದಿಕವಾಗಿ ಭಕ್ತಿವೃದ್ಧಿಯನ್ನುಂಟು ಮಾಡುವ ರೀತಿಯಲ್ಲಿ ಮಾತಾಡತಕ್ಕದ್ದು. ವಿವಾಹದ ಮೂಲ ಸ್ಥಾಪಕನ ಕುರಿತು ಮತ್ತು ಆತನ ಗಮನಾರ್ಹ ಸಲಹೆಯನ್ನು ಎತ್ತಿ ಹೇಳತಕ್ಕದ್ದು. ಹೌದು, ಆ ಹಿರಿಯನ ಗೌರವಪೂರ್ಣವಾದ ವಿವಾಹಭಾಷಣವು ಯೆಹೋವ ದೇವರಿಗೆ ಗೌರವ ತರುವುದು ಮತ್ತು ವಿವಾಹಕ್ಕೂ ಗೌರವ ತರುವುದು.
17. ಕ್ರೈಸ್ತ ವಿವಾಹಗಳಲ್ಲಿ ಶಾಸನಬದ್ಧ ಅಂಶವನ್ನು ಏಕೆ ಪರಿಗಣಿಸಬೇಕು?
17 ನೀವು ಈ ಲೇಖನದಲ್ಲಿ ವಿವಾಹದ ಶಾಸನಬದ್ಧ ವಿವರಣೆಗಳನ್ನು ಗಮನಿಸಿರಬಹುದು. ಕೆಲವಂಶಗಳು ನಿಮ್ಮ ಪ್ರದೇಶದಲ್ಲಿ ನೇರವಾಗಿ ಅನ್ವಯವಾಗಲಿಕ್ಕಿಲ್ಲ. ಆದರೂ, ಯೆಹೋವನ ಸಾಕ್ಷಿಗಳ ಮಧ್ಯೆ ನಡೆಯುವ ವಿವಾಹದ ಏರ್ಪಾಡುಗಳು ಸ್ಥಳಿಕ ನಿಯಮಗಳಿಗೆ, ಕೈಸರನ ಆವಶ್ಯಕತೆಗಳಿಗೆ ಗೌರವವನ್ನು ತೋರ್ಪಡಿಸುವುದು ಎಷ್ಟು ಪ್ರಾಮುಖ್ಯವೆಂಬುದನ್ನು ನಾವೆಲ್ಲರೂ ಅರಿತಿರಬೇಕು. (ಲೂಕ 20:25) ಪೌಲನು ನಮ್ಮನ್ನು ಪ್ರೋತ್ಸಾಹಿಸಿದ್ದು: “ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು, ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು . . . ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು ಸಲ್ಲಿಸಿರಿ.” (ರೋಮಾಪುರ 13:7) ಹೌದು, ದೇವರು ಈಗ ಚಾಲ್ತಿಯಲ್ಲಿಟ್ಟಿರುವ ಏರ್ಪಾಡನ್ನು ಕ್ರೈಸ್ತರು ಮದುವೆದಿನದಿಂದಲೇ ಗೌರವಿಸುವುದು ಯೋಗ್ಯವಾಗಿದೆ.
18. ವಿವಾಹದಲ್ಲಿ ಕಡ್ಡಾಯವಲ್ಲದ ಯಾವ ಅಂಶ ನಮ್ಮ ಗಮನಕ್ಕೆ ಯೋಗ್ಯವಾಗಿದೆ ಮತ್ತು ಈ ವಿಷಯದ ಕುರಿತು ಮಾಹಿತಿಯನ್ನು ನಾವೆಲ್ಲಿ ಕಂಡುಕೊಳ್ಳುವೆವು?
18 ಅನೇಕ ಕ್ರೈಸ್ತ ವಿವಾಹಗಳ ನಂತರ ಒಂದು ಸಾಮಾಜಿಕ ಗೋಷ್ಠಿ—ವಿವಾಹದ ಔತಣ, ಊಟ, ಅಥವಾ ರಿಸೆಪ್ಷನ್ ಏರ್ಪಡಿಸಲಾಗುತ್ತದೆ. ಯೇಸು ಇಂತಹ ಒಂದು ಔತಣದಲ್ಲಿ ಹಾಜರಾದನೆಂಬುದನ್ನು ಜ್ಞಾಪಿಸಿಕೊಳ್ಳಿ. ಈ ರೀತಿಯ ಒಂದು ಗೋಷ್ಠಿಯು ಸಹ ದೇವರಿಗೆ ಗೌರವವನ್ನು, ನವದಂಪತಿಗಳಿಗೆ ಮತ್ತು ಕ್ರೈಸ್ತ ಸಭೆಗೆ ಒಳ್ಳೆಯ ಹೆಸರನ್ನು ತರುವಂತೆ ಬೈಬಲಿನ ಸಲಹೆಯು ಹೇಗೆ ತಾನೇ ಸಹಾಯಮಾಡಬಲ್ಲದು? ಮುಂದಿನ ಲೇಖನ ನಿರ್ದಿಷ್ಟವಾಗಿ ಈ ವಿಷಯವನ್ನು ಪರಿಗಣಿಸುವುದು.e (w06 10/15)
[ಪಾದಟಿಪ್ಪಣಿಗಳು]
a ಇದೇ ಪದವನ್ನು ಮದುವೆಯ ಸಮಾರಂಭಕ್ಕೆ ಮಾತ್ರವಲ್ಲ ಬೇರೆ ಔತಣಕ್ಕೂ ಬಳಸಬಹುದಾಗಿದೆ.—ಎಸ್ತೇರಳು 9:22, ಸೆಪ್ಟುವಜಿಂಟ್.
b ಯೆಹೋವನ ಸಾಕ್ಷಿಗಳು, “ದೇವರ ದೃಷ್ಟಿಯಲ್ಲಿ ಗೌರವಾರ್ಹವಾಗಿರುವ ವಿವಾಹ” ಎಂಬ 30 ನಿಮಿಷಗಳ ವಿವಾಹಭಾಷಣದ ಹೊರಮೇರೆಯನ್ನು ಉಪಯೋಗಿಸುತ್ತಾರೆ. ಈ ಭಾಷಣವು ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾದ ಕುಟುಂಬ ಸಂತೋಷದ ರಹಸ್ಯ ಮತ್ತು ಇತರ ಸಾಹಿತ್ಯಗಳಲ್ಲಿರುವ ಉತ್ತಮ ಶಾಸ್ತ್ರೀಯ ಬುದ್ಧಿವಾದವನ್ನು ಹೊರತರುತ್ತದೆ. ಈ ಚರ್ಚೆ ಮದುವೆಯಾಗುತ್ತಿರುವವರಿಗೂ ಮದುವೆಯಲ್ಲಿ ಉಪಸ್ಥಿತರಾಗಿರುವವರಿಗೂ ಪ್ರಯೋಜನಕರ.
c ಸ್ಥಳಿಕ ನಿಯಮವು ಇನ್ನಾವುದಾದರೂ ಪ್ರತಿಜ್ಞೆಯನ್ನು ಆವಶ್ಯಪಡಿಸದಿದ್ದಲ್ಲಿ, ದೇವರನ್ನು ಗೌರವಿಸುವ ಈ ಕೆಳಗಿನ ಪ್ರತಿಜ್ಞೆಯನ್ನು ಬಳಸಲಾಗುತ್ತದೆ. ವರನು ಮಾಡುವ ಪ್ರಮಾಣ: “[ವರನ ಹೆಸರು] ಎಂಬ ನಾನು [ವಧುವಿನ ಹೆಸರು] ಎಂಬ ನಿಮ್ಮನ್ನು, ನಾವಿಬ್ಬರು ಭೂಮಿಯ ಮೇಲೆ ದೇವರ ವಿವಾಹದ ಏರ್ಪಾಡಿಗನುಸಾರ ಕೂಡಿ ಜೀವಿಸುವಷ್ಟು ಕಾಲ, ಕ್ರೈಸ್ತ ಪತಿಯರಿಗಾಗಿ ಪವಿತ್ರ ಶಾಸ್ತ್ರಗಳಲ್ಲಿ ಕೊಡಲ್ಪಟ್ಟಿರುವ ದೈವಿಕ ನಿಯಮಕ್ಕೆ ಅನುಗುಣವಾಗಿ ಪ್ರೀತಿಸಲು, ಪಾಲಿಸಲು ಮತ್ತು ಆಳವಾಗಿ ಗೌರವಿಸಲು, ನನ್ನ ವಿವಾಹಿತ ಪತ್ನಿಯಾಗಿ ಸ್ವೀಕರಿಸುತ್ತೇನೆ.” ವಧು ಮಾಡುವ ಪ್ರಮಾಣ: “[ವಧುವಿನ ಹೆಸರು] ಎಂಬ ನಾನು [ವರನ ಹೆಸರು] ಎಂಬ ನಿಮ್ಮನ್ನು, ನಾವಿಬ್ಬರು ಭೂಮಿಯ ಮೇಲೆ ದೇವರ ವಿವಾಹದ ಏರ್ಪಾಡಿಗನುಸಾರ ಕೂಡಿ ಜೀವಿಸುವಷ್ಟು ಕಾಲ, ಕ್ರೈಸ್ತ ಪತ್ನಿಯರಿಗಾಗಿ ಪವಿತ್ರ ಶಾಸ್ತ್ರಗಳಲ್ಲಿ ಕೊಡಲ್ಪಟ್ಟಿರುವ ದೈವಿಕ ನಿಯಮಕ್ಕೆ ಅನುಗುಣವಾಗಿ ಪ್ರೀತಿಸಲು, ಪಾಲಿಸಲು ಮತ್ತು ಆಳವಾಗಿ ಗೌರವಿಸಲು, ನನ್ನ ವಿವಾಹಿತ ಪತಿಯಾಗಿ ಸ್ವೀಕರಿಸುತ್ತೇನೆ.”
d 1962, ಮೇ 1ರ ಕಾವಲಿನಬುರುಜು (ಇಂಗ್ಲಿಷ್) ಪುಟ 287ರಲ್ಲಿ ಸಾಮಾನ್ಯ ಕಾನೂನು ವಿವಾಹದ (ಕಾಮನ್-ಲಾ ಮ್ಯಾರೆಜ್) ಕುರಿತು ತಿಳಿಸಲ್ಪಟ್ಟಿದೆ.
e ಪುಟ 28 ರಲ್ಲಿರುವ, “ನಿಮ್ಮ ವಿವಾಹದಿನದ ಹರ್ಷ ಮತ್ತು ಘನತೆಯನ್ನು ಹೆಚ್ಚಿಸಿರಿ” ಎಂಬ ಲೇಖನವನ್ನು ಸಹ ನೋಡಿ.
ನೆನಪಿದೆಯೆ?
• ವಿವಾಹದ ಶಾಸನಬದ್ಧ ಮತ್ತು ಆಧ್ಯಾತ್ಮಿಕ ಅಂಶಗಳೆರಡರಲ್ಲೂ ನಾವು ಆಸಕ್ತಿವಹಿಸಬೇಕು ಏಕೆ?
• ಕ್ರೈಸ್ತ ಸ್ತ್ರೀಪುರಷರಿಬ್ಬರು ಶಾಸನಬದ್ಧ ವಿವಾಹ ಮಾಡಿಕೊಳ್ಳುವಲ್ಲಿ, ಆ ಬಳಿಕ ಕೂಡಲೇ ಅವರು ಏನನ್ನು ಏರ್ಪಡಿಸಲು ನಿರ್ಣಯಿಸಬಹುದು?
• ವಿವಾಹಭಾಷಣಗಳು ರಾಜ್ಯ ಸಭಾಗೃಹದಲ್ಲಿ ಕೊಡಲ್ಪಡುವುದೇಕೆ?
[ಪುಟ 12ರಲ್ಲಿರುವ ಚಿತ್ರ]
ಪೂರ್ವಕಾಲದ ಇಸ್ರಾಯೇಲಿನ ವಿವಾಹದಲ್ಲಿ, ವರನು ವಧುವನ್ನು ತನ್ನ ಮನೆಗೆ ಇಲ್ಲವೆ ತನ್ನ ತಂದೆಯ ಮನೆಗೆ ಕರೆತರುತ್ತಿದ್ದನು
-
-
ನಿಮ್ಮ ನಂಬಿಕೆಯನ್ನು ನಿಮ್ಮ ಜೀವನರೀತಿಯ ಮೂಲಕ ರುಜುಪಡಿಸಿರಿಕಾವಲಿನಬುರುಜು—2006 | ನವೆಂಬರ್ 1
-
-
ನಿಮ್ಮ ನಂಬಿಕೆಯನ್ನು ನಿಮ್ಮ ಜೀವನರೀತಿಯ ಮೂಲಕ ರುಜುಪಡಿಸಿರಿ
“ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು.”—ಯಾಕೋಬ 2:17.
1. ಆದಿಕ್ರೈಸ್ತರು ನಂಬಿಕೆ ಮತ್ತು ಕ್ರಿಯೆ ಇವೆರಡಕ್ಕೂ ಏಕೆ ಗಮನಕೊಟ್ಟರು?
ಆದಿಕ್ರೈಸ್ತರಲ್ಲಿ ಹೆಚ್ಚಿನವರು ತಾವು ವಾಸ್ತವವಾಗಿ ಹೇಗೆ ಜೀವಿಸಿದರೊ ಅದರ ಮೂಲಕ ತಮ್ಮ ನಂಬಿಕೆಯನ್ನು ರುಜುಪಡಿಸಿದರು. ಶಿಷ್ಯ ಯಾಕೋಬನು ಸಕಲ ಕ್ರೈಸ್ತರನ್ನು ಪ್ರೋತ್ಸಾಹಿಸಿದ್ದು, ‘ವಾಕ್ಯದ ಪ್ರಕಾರ ನಡೆಯುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿರಬೇಡಿರಿ.’ ಅವನು ಕೂಡಿಸಿ ಹೇಳಿದ್ದು: “ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ.” (ಯಾಕೋಬ 1:22; 2:26) ಅವನು ಇದನ್ನು ಬರೆದು ಸುಮಾರು 35ವರುಷಗಳ ಬಳಿಕವೂ ಅನೇಕ ಕ್ರೈಸ್ತರು ತಕ್ಕ ಕಾರ್ಯಗಳ ಮೂಲಕ ತಮ್ಮ ನಂಬಿಕೆಯನ್ನು ರುಜುಪಡಿಸಿ ತೋರಿಸುತ್ತಿದ್ದರು. ಆದರೆ ವಿಷಾದಕರವಾಗಿ ಕೆಲವರು ಹಾಗೆ ಮಾಡುತ್ತಿರಲಿಲ್ಲ. ಸ್ಮುರ್ನದ ಸಭೆಯನ್ನು ಯೇಸು ಪ್ರಶಂಸಿಸಿದರೂ ಸಾರ್ದಿಸ್ ಸಭೆಯ ಅನೇಕರಿಗೆ ಅವನಂದದ್ದು: “ನಿನ್ನ ಕೃತ್ಯಗಳನ್ನು ಬಲ್ಲೆನು; ಜೀವಿಸುವವನು ಎಂದು ಹೆಸರು ನಿನಗಿದ್ದರೂ ಸತ್ತವನಾಗಿದ್ದೀ ಎಂಬುದನ್ನು ಬಲ್ಲೆನು.”—ಪ್ರಕಟನೆ 2:8-11; 3:1.
2. ಕ್ರೈಸ್ತರು ತಮ್ಮ ನಂಬಿಕೆಯ ವಿಷಯದಲ್ಲಿ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
2 ಆದುದರಿಂದಲೇ, ಯೇಸು ಸಾರ್ದಿಸಿನವರನ್ನು—ಮತ್ತು ವಿಸ್ತರಣೆಯಾಗಿ, ಅವನ ಮಾತುಗಳನ್ನು ಮುಂದಕ್ಕೆ ಓದುವ ಎಲ್ಲರನ್ನು—ಕ್ರೈಸ್ತ ಸತ್ಯಕ್ಕಾಗಿ ಅವರಲ್ಲಿದ್ದ ಪ್ರಥಮ ಪ್ರೀತಿಯನ್ನು ರುಜುಪಡಿಸಿ ತೋರಿಸಬೇಕೆಂದೂ ಆಧ್ಯಾತ್ಮಿಕವಾಗಿ ಎಚ್ಚರದಿಂದಿರಬೇಕೆಂದೂ ಪ್ರೋತ್ಸಾಹಿಸಿದನು. (ಪ್ರಕಟನೆ 3:2, 3) ನಮ್ಮಲ್ಲಿ ಪ್ರತಿಯೊಬ್ಬರು ಹೀಗೆ ಕೇಳಿಕೊಳ್ಳಬಹುದು: ‘ನನ್ನ ಕ್ರಿಯೆಗಳು ಹೇಗಿವೆ? ನಾನು ಮಾಡುವ ಕ್ರಿಯೆಗಳು ನನ್ನ ನಂಬಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತದೊ? ಮತ್ತು ನನ್ನ ನಂಬಿಕೆಯನ್ನು ನಾನು ಮಾಡುವ ಪ್ರತಿಯೊಂದು ಕಾರ್ಯದ ಮೂಲಕ ರುಜುಪಡಿಸಲು ಸಾಧ್ಯವಿರುವುದೆಲ್ಲವನ್ನು ನಾನು ಮಾಡುತ್ತಿದ್ದೇನೊ? ಸಾರುವ ಕೆಲಸ ಅಥವಾ ಸಭಾಕೂಟಗಳಿಗೆ ನೇರವಾಗಿ ಸಂಬಂಧಿಸದ ವಿಷಯಗಳಲ್ಲೂ ನನ್ನ ನಂಬಿಕೆಯನ್ನು ನಾನು ರುಜುಪಡಿಸುತ್ತಿದ್ದೇನೊ?’ (ಲೂಕ 16:10) ಜೀವನದ ಹಲವಾರು ವಿಷಯಗಳಲ್ಲಿ ನಾವು ನಮ್ಮ ನಂಬಿಕೆಯನ್ನು ರುಜುಪಡಿಸಸಾಧ್ಯವಿದೆ. ಆದರೆ ನಾವೀಗ ಸಾಮಾಜಿಕ ಗೋಷ್ಠಿಯ ಕುರಿತಾಗಿ ಮಾತ್ರ ನೋಡೋಣ. ಅನೇಕವೇಳೆ ಕ್ರೈಸ್ತ ವಿವಾಹದ ನಂತರ ನಡೆಸಲ್ಪಡುವ ಗೋಷ್ಠಿಗಳು ಇದರಲ್ಲಿ ಸೇರಿವೆ.
ಚಿಕ್ಕ ಸಾಮಾಜಿಕ ಗೋಷ್ಠಿಗಳು
3. ಗೋಷ್ಠಿಗಳಲ್ಲಿ ಭಾಗವಹಿಸುವ ವಿಷಯದಲ್ಲಿ ಬೈಬಲಿನ ದೃಷ್ಟಿಕೋನವೇನು?
3 ಸಂತೋಷಿಸುತ್ತಿರುವ ಕ್ರೈಸ್ತರ ಗೋಷ್ಠಿಗೆ ಆಮಂತ್ರಿಸಲ್ಪಡುವುದನ್ನು ನಮ್ಮಲ್ಲಿ ಹೆಚ್ಚಿನವರು ಗಣ್ಯಮಾಡುತ್ತಾರೆ. ಯೆಹೋವನು “ಸಂತೋಷದ ದೇವರು” ಮತ್ತು ತನ್ನ ಸೇವಕರು ಸಂತೋಷವಾಗಿರಬೇಕೆಂಬುದು ಆತನ ಬಯಕೆ. (1 ತಿಮೊಥೆಯ 1:11, NW) ಯೆಹೋವನು ಸೊಲೊಮೋನನ ಮೂಲಕ ಈ ನಿಜತ್ವವನ್ನು ಬೈಬಲಿನಲ್ಲಿ ಸೇರಿಸಿದನು: “ಮನುಷ್ಯನು ಅನ್ನಪಾನಗಳನ್ನು ತೆಗೆದುಕೊಂಡು ಸಂತೋಷಪಡುವದಕ್ಕಿಂತ ಅವನಿಗೆ ಲೋಕದಲ್ಲಿ ಇನ್ನಾವ ಮೇಲೂ ಇಲ್ಲವೆಂದು ಸಂತೋಷವನ್ನೇ ಸ್ತುತಿಸಿದೆನು; ದೇವರು ಅವನಿಗೆ ಲೋಕದಲ್ಲಿ ಅನುಗ್ರಹಿಸುವ ದಿನಗಳಲ್ಲೆಲ್ಲಾ ಅವನು ಪಡುವ ಪ್ರಯಾಸದಲ್ಲಿ ಸಂತೋಷವೇ ಸೇರಿರುವದು.” (ಪ್ರಸಂಗಿ 3:1, 4, 13; 8:15) ಇಂತಹ ಸಂತೋಷವು ಒಂದು ಕುಟುಂಬ ಭೋಜನದ ಸಮಯದಲ್ಲಿಯೊ ಸತ್ಯಾರಾಧಕರ ಬೇರೆ ಚಿಕ್ಕ ಸಾಮಾಜಿಕ ಗೋಷ್ಠಿಯ ಸಮಯದಲ್ಲಿಯೊ ಇರಬಹುದು.—ಯೋಬ 1:4, 5, 18; ಲೂಕ 10:38-42; 14:12-14.
4. ಒಂದು ಗೋಷ್ಠಿಯನ್ನು ಏರ್ಪಡಿಸುವವನು ಯಾವುದರಲ್ಲಿ ಆಸಕ್ತನಾಗಿರಬೇಕು?
4 ನೀವು ಅಂತಹ ಗೋಷ್ಠಿಯನ್ನು ಏರ್ಪಡಿಸುವಲ್ಲಿ ಮತ್ತು ಅದಕ್ಕೆ ಜವಾಬ್ದಾರರಾಗಿರುವಲ್ಲಿ, ಕೇವಲ ಕೆಲವೇ ಮಂದಿ ವಿಶ್ವಾಸಿಗಳನ್ನು ಒಂದು ಊಟ ಮತ್ತು ಸ್ನೇಹಪರ ಮಾತುಕತೆಗಾಗಿ ಕರೆಯುವುದಾದರೂ ನಿಮ್ಮ ಯೋಜನೆಯನ್ನು ನೀವು ಜಾಗರೂಕತೆಯಿಂದ ಪರಿಶೀಲಿಸಬೇಕು. (ರೋಮಾಪುರ 12:13) “ಎಲ್ಲವೂ ಮರ್ಯಾದೆಯಿಂದ,” ನಡೆಯುವಂತೆಯೂ ‘ಮೇಲಣಿಂದ ಬರುವ ವಿವೇಕದಿಂದ’ ಮಾರ್ಗದರ್ಶಿಸಲ್ಪಡುವಂತೆಯೂ ನೋಡಿಕೊಳ್ಳಿರಿ. (1 ಕೊರಿಂಥ 14:40; ಯಾಕೋಬ 3:17) ಅಪೊಸ್ತಲ ಪೌಲನು ಬರೆದುದು: “ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ. . . . ವಿಘ್ನವಾಗಬೇಡಿರಿ.” (1 ಕೊರಿಂಥ 10:31, 32) ಹಾಗಾದರೆ, ನಿರ್ದಿಷ್ಟವಾಗಿ ಗಮನಕೊಡಬೇಕಾದ ಕೆಲವು ವಿಷಯಗಳಾವುವು? ಇವುಗಳ ಕುರಿತು ಮುಂಚಿತವಾಗಿಯೇ ಯೋಚಿಸುವುದು, ನೀವು ಮತ್ತು ನಿಮ್ಮ ಅತಿಥಿಗಳು ಮಾಡುವಂಥ ವಿಷಯಗಳು ನೀವು ನಿಮ್ಮ ನಂಬಿಕೆಯನ್ನು ಕ್ರಿಯೆಯಲ್ಲಿ ತೋರಿಸುತ್ತೀರೆಂಬುದನ್ನು ಖಾತರಿಮಾಡಲು ಸಹಾಯಮಾಡುವುದು.—ರೋಮಾಪುರ 12:2.
ಗೋಷ್ಠಿ ಹೇಗಿರಬೇಕು?
5. ಮದ್ಯಸಾರ ಪಾನೀಯಗಳನ್ನು ಒದಗಿಸಿಬೇಕೊ, ಸಂಗೀತವನ್ನು ಏರ್ಪಡಿಸಬೇಕೊ ಎಂಬ ವಿಷಯವನ್ನು ಆತಿಥೇಯನು ಏಕೆ ಜಾಗರೂಕವಾಗಿ ಪರಿಗಣಿಸಬೇಕು?
5 ಮದ್ಯಸಾರ ಪಾನೀಯಗಳನ್ನು ವಿತರಿಸಬೇಕೊ ಬಾರದೊ ಎಂಬ ಪ್ರಶ್ನೆಯನ್ನು ಅನೇಕ ಆತಿಥೇಯರು ಎದುರಿಸುತ್ತಾರೆ. ಒಂದು ಒಕ್ಕೂಟವು ಭಕ್ತಿವರ್ಧನೆಯಾಗಿರಲು ಇಂತಹ ಪಾನೀಯಗಳು ಅಗತ್ಯವಿರುವುದಿಲ್ಲ. ಯೇಸು ತನ್ನ ಬಳಿಗೆ ಬಂದ ದೊಡ್ಡ ಜನಸಮೂಹಕ್ಕೆ ರೊಟ್ಟಿ ಮೀನುಗಳನ್ನು ಬಹುಸಂಖ್ಯೆಯಲ್ಲಿ ಹೆಚ್ಚಿಸುತ್ತ ಭೋಜನವನ್ನು ಒದಗಿಸಿದ್ದನ್ನು ನೆನಪಿಸಿಕೊಳ್ಳಿ. ಆದರೆ ಅವನು ಅದ್ಭುತಕರವಾಗಿ ದ್ರಾಕ್ಷಾಮದ್ಯವನ್ನು ಒದಗಿಸಿದನೆಂದು ಆ ವೃತ್ತಾಂತವು ತಿಳಿಸುವುದಿಲ್ಲ. ಆದರೆ ಹಾಗೆ ಮಾಡುವ ಸಾಮರ್ಥ್ಯ ಅವನಿಗಿತ್ತೆಂದು ನಮಗೆ ತಿಳಿದದೆ. (ಮತ್ತಾಯ 14:14-21) ಒಂದು ಒಕ್ಕೂಟದಲ್ಲಿ ಮದ್ಯಸಾರ ಪಾನೀಯಗಳನ್ನು ವಿತರಿಸಬೇಕೆಂದು ನೀವು ನಿರ್ಣಯಿಸುವುದಾದರೆ, ಅದರ ಪ್ರಮಾಣದ ವಿಷಯದಲ್ಲಿ ಮಿತವಾದಿಯಾಗಿರಿ ಮತ್ತು ಮದ್ಯಸಾರರಹಿತ ಪಾನೀಯಗಳನ್ನು ಇಷ್ಟಪಡುವವರಿಗೆ ಅವು ಲಭ್ಯ ಇವೆಯೆಂದು ನಿಶ್ಚಯ ಮಾಡಿಕೊಳ್ಳಿರಿ. (1 ತಿಮೊಥೆಯ 3:2, 3, 8; 5:23; 1 ಪೇತ್ರ 4:3) “ನಾಗದ ಹಾಗೆ” ಕಡಿಯುವ ಯಾವುದನ್ನೇ ಆಗಲಿ ಕುಡಿಯುವಂತೆ ಯಾರನ್ನೂ ಒತ್ತಾಯಿಸಬೇಡಿರಿ. (ಜ್ಞಾನೋಕ್ತಿ 23:29-32) ಸಂಗೀತ ಮತ್ತು ಹಾಡುಗಳ ಕುರಿತೇನು? ನಿಮ್ಮ ಗೋಷ್ಠಿಯಲ್ಲಿ ಸಂಗೀತವು ಸೇರಿರುವಲ್ಲಿ ಹಾಡುಗಳ ಛಂದೋಗತಿ (ರಿದಮ್) ಮತ್ತು ಪದಗಳನ್ನು (ಲಿರಿಕ್ಸ್) ಗಮನಿಸಿ ಅವನ್ನು ನೀವೇ ಜಾಗರೂಕತೆಯಿಂದ ಆರಿಸಿಕೊಳ್ಳಿರಿ. (ಕೊಲೊಸ್ಸೆ 3:8; ಯಾಕೋಬ 1:21) ಅನೇಕ ಕ್ರೈಸ್ತರು, ಕಿಂಗ್‌ಡಮ್ ಮೆಲಡೀಸ್‌ಗಳನ್ನು ನುಡಿಸುವುದು ಇಲ್ಲವೆ ರಾಜ್ಯಗೀತೆಗಳನ್ನು ಗುಂಪಾಗಿ ಹಾಡುವುದು ಕೂಡ ಉತ್ತಮ ವಾತಾವರಣಕ್ಕೆ ಇಂಬುಕೊಡುತ್ತದೆ ಎಂದು ಕಂಡುಕೊಂಡಿದ್ದಾರೆ. (ಎಫೆಸ 5:19, 20) ಸಂಗೀತದ ಧ್ವನಿಪ್ರಮಾಣ ಹರ್ಷಕರ ಸಂಭಾಷಣೆಯನ್ನು ತಡೆಯದಂತೆಯೂ ನೆರೆಯವರ ನೆಮ್ಮದಿಯನ್ನು ಕೆಡಿಸದಂತೆಯೂ ಆಗಿಂದಾಗ್ಗೆ ಅದನ್ನು ಪರೀಕ್ಷಿಸುತ್ತ ಇರಿ.—ಮತ್ತಾಯ 7:12.
6. ತನ್ನದು ಸಜೀವವಾದ ನಂಬಿಕೆಯೆಂದು ಸಂಭಾಷಣೆ ಹಾಗೂ ಇತರ ಚಟುವಟಿಕೆಗಳಲ್ಲಿ ಆತಿಥೇಯನು ಹೇಗೆ ತೋರಿಸಬಲ್ಲನು?
6 ಒಂದು ಸಾಮಾಜಿಕ ಗೋಷ್ಠಿಯಲ್ಲಿ ಕ್ರೈಸ್ತರು ವಿವಿಧ ವಿಷಯಗಳ ಕುರಿತು ಸಂಭಾಷಿಸಬಹುದು, ಕೆಲವು ವಿಷಯಗಳನ್ನು ಗಟ್ಟಿಯಾಗಿ ಓದಬಹುದು ಇಲ್ಲವೆ ಆಸಕ್ತಿಕರವಾದ ಅನುಭವಗಳನ್ನು ಹೇಳಬಹುದು. ಆದರೆ ಸಂಭಾಷಣೆ ಕ್ರೈಸ್ತ ಮಟ್ಟದಿಂದ ಸರಿಯುವಲ್ಲಿ, ಆತಿಥೇಯನು ಅದನ್ನು ಜಾಣತನದಿಂದ ಹಿಂದೆ ತಿರುಗಿಸಬಹುದು. ಸಂಭಾಷಣೆಯಲ್ಲಿ ಒಬ್ಬ ವ್ಯಕ್ತಿಯೇ ಮೇಲುಗೈ ಹೊಂದದಂತೆ ಆತಿಥೇಯನು ಎಚ್ಚರವಹಿಸುವನು. ಒಂದುವೇಳೆ ಸನ್ನಿವೇಶ ಈ ರೀತಿ ತಿರುಗುವುದನ್ನು ಆತಿಥೇಯನು ಗಮನಿಸುವಲ್ಲಿ, ಅವನು ವಿವೇಚನೆಯಿಂದ ಮಧ್ಯೆ ಬಂದು, ಪ್ರಾಯಶಃ ಎಳೆಯರು ಮಾತಾಡುವಂತೆ ಆಹ್ವಾನಿಸುವನು ಇಲ್ಲವೆ ವಿಭಿನ್ನ ಹೇಳಿಕೆಗಳನ್ನು ಹೊರಸೆಳೆಯುವ ವಿಷಯವೊಂದನ್ನು ಎತ್ತಿಹೇಳಿ ವೈವಿಧ್ಯವನ್ನು ಒದಗಿಸುವನು. ಗೋಷ್ಠಿಯ ಈ ಅಂಶದಿಂದಾಗಿ ಆಬಾಲವೃದ್ಧರು ಹರ್ಷಗೊಳ್ಳುವರು. ವ್ಯವಸ್ಥಾಪಕರಾದ ನೀವು ಸಂಗತಿಗಳನ್ನು ವಿವೇಕದಿಂದಲೂ ಸಮಯೋಚಿತನಯದಿಂದಲೂ ನಡೆಸುವಲ್ಲಿ, ಅಲ್ಲಿ ಉಪಸ್ಥಿತರಿಗೆ ‘ನಿಮ್ಮ ನ್ಯಾಯಸಮ್ಮತತೆಯು ಪ್ರಸಿದ್ಧ’ವಾಗುವುದು. (ಫಿಲಿಪ್ಪಿ 4:5, NW) ಆಗ, ನಿಮ್ಮ ಜೀವನದ ಎಲ್ಲ ಅಂಶಗಳನ್ನು ಪ್ರಭಾವಿಸುವಂಥ ಸಜೀವವಾದ ನಂಬಿಕೆ ನಿಮಗಿದೆಯೆಂದು ಅವರು ತಿಳಿದುಕೊಳ್ಳುವರು.
ಮದುವೆ ಮತ್ತು ರಿಸೆಪ್ಷನ್
7. ವಿವಾಹಗಳನ್ನು ಮತ್ತು ಸಂಬಂಧಿತ ಗೋಷ್ಠಿಗಳನ್ನು ಯೋಜಿಸುವುದು ಚಿಂತನಾರ್ಹವೇಕೆ?
7 ಉಲ್ಲಾಸಿಸುವ ಒಂದು ವಿಶೇಷ ಸಂದರ್ಭವು ಕ್ರೈಸ್ತ ವಿವಾಹವಾಗಿದೆ. ಯೇಸು ಕ್ರಿಸ್ತನು ಮತ್ತು ಅವನ ಶಿಷ್ಯರು ಸೇರಿ ದೇವರ ಪೂರ್ವಕಾಲದ ಸೇವಕರು, ಇಂತಹ ಸಂತೋಷ ಸಮಾರಂಭಗಳಲ್ಲಿ ಮತ್ತು ಅವುಗಳೊಂದಿಗೆ ಏರ್ಪಡಿಸುತ್ತಿದ್ದ ಔತಣಗಳಲ್ಲಿ ಹರ್ಷದಿಂದ ಭಾಗವಹಿಸಿದರು. (ಆದಿಕಾಂಡ 29:21, 22; ಯೋಹಾನ 2:1, 2) ಆದರೆ, ವಿವಾಹಗಳಿಗೆ ಸಂಬಂಧಿಸಿದ ಸಾಮಾಜಿಕ ಚಟುವಟಿಕೆಗಳನ್ನು ಯೋಜಿಸುವಾಗ ಒಳ್ಳೆಯ ಔಚಿತ್ಯ ಪ್ರಜ್ಞೆ ಮತ್ತು ಕ್ರೈಸ್ತ ಸಮತೋಲನವನ್ನು ತೋರಿಸಲು ವಿಶೇಷ ಪ್ರಯತ್ನ ಅಗತ್ಯವೆಂದು ಇತ್ತೀಚಿನ ಅನುಭವಗಳು ಸ್ಪಷ್ಟವಾಗಿ ತಿಳಿಯಪಡಿಸಿವೆ. ಆದರೂ, ಇಂಥ ಚಟುವಟಿಕೆಗಳು ಒಬ್ಬ ಕ್ರೈಸ್ತನು ತನ್ನ ನಂಬಿಕೆಯನ್ನು ತೋರ್ಪಡಿಸಲು ಸಂದರ್ಭ ನೀಡುವ ಜೀವನದ ಸಾಮಾನ್ಯ ಕ್ಷೇತ್ರಗಳಾಗಿವೆ.
8, 9. ಅನೇಕ ವಿವಾಹ ಸಮಾರಂಭದ ಆಚರಣೆಗಳು ನಾವು 1 ಯೋಹಾನ 2:16, 17ರಲ್ಲಿ ಓದುವುದನ್ನು ಸರಿಯೆಂದು ಹೇಗೆ ತೋರಿಸುತ್ತವೆ?
8 ದೈವಿಕ ಮೂಲತತ್ತ್ವಗಳನ್ನು ಅರಿಯದವರು ಅಥವಾ ಅವನ್ನು ಅಲಕ್ಷಿಸುವವರು ವಿವಾಹವನ್ನು ಮಿತಿಮೀರಿ ವಿಜೃಂಭನೆಯಿಂದ ಮಾಡುವ ಸಮಾರಂಭವೆಂದು ವೀಕ್ಷಿಸುತ್ತಾರೆ ಇಲ್ಲವೆ ಆ ಸಂದರ್ಭದಲ್ಲಿ ಮಿತಿಮೀರಿ ಅದ್ದೂರಿಯಾಗಿ ಏನೇ ಮಾಡಿದರೂ ತಪ್ಪೇನಿಲ್ಲವೆಂದು ನೆನಸುತ್ತಾರೆ. ಒಂದು ಯೂರೋಪಿಯನ್ ಪತ್ರಿಕೆಯಲ್ಲಿ, ನವವಿವಾಹಿತ ಪತ್ನಿಯೊಬ್ಬಳು ತನ್ನ “ರಾಜೋಚಿತ” ವಿವಾಹದ ಕುರಿತಾಗಿ ಹೀಗೆಂದಳು: “ನಾವು ನಾಲ್ಕು ಕುದುರೆಗಳ ರಥದಲ್ಲಿ ಸವಾರಿಮಾಡಿದೆವು. ನಮ್ಮ ಹಿಂದೆ ಹನ್ನೆರಡು ಮಡಚುಚಾವಣಿಯ ಒಂಟಿಕುದುರೆ ಬಂಡಿಗಳು ಮತ್ತು ವಾದ್ಯವೃಂದವಿದ್ದ ಕುದುರೆ ಬಂಡಿ ಬರುತ್ತಿದ್ದವು. ನಂತರ ಭರ್ಜರಿ ಊಟ, ಸುಮಧುರ ಸಂಗೀತ, ಅಬ್ಬಾ ಎಲ್ಲವೂ ಅಮೋಘ! ನನ್ನ ಇಚ್ಛೆಯಂತೆ ನಾನು ಆ ದಿನ ರಾಣಿಯಾಗಿದ್ದೆ.”
9 ಪದ್ಧತಿಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರಬಹುದಾದರೂ, ಮೇಲಿನ ಮನೋಭಾವವು ಅಪೊಸ್ತಲ ಯೋಹಾನನು ಏನು ಬರೆದನೊ ಅದನ್ನು ದೃಢೀಕರಿಸುತ್ತವೆ: “ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.” ರಾಜರಾಣಿಯರ ಮದುವೆಯಂತೆ ತಮ್ಮ ವಿವಾಹ ಮತ್ತು ರಿಸೆಪ್ಷನ್ “ರಾಜೋಚಿತ”ವಾಗಿ ಅದ್ದೂರಿಯಿಂದ ನಡೆಯಬೇಕೆಂದು ಪ್ರೌಢ ಕ್ರೈಸ್ತ ದಂಪತಿಗಳು ಬಯಸುವುದನ್ನು ನೀವು ಊಹಿಸಬಲ್ಲಿರಾ? ಇದಕ್ಕೆ ಬದಲಾಗಿ, “ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು” ಎಂಬ ಮಾತುಗಳ ದೃಷ್ಟಿಕೋನ ಅವರದ್ದಾಗಿರಬೇಕು.—1 ಯೋಹಾನ 2:16, 17.
10. (ಎ) ಒಂದು ಸರಳ ವಿವಾಹಕ್ಕಾಗಿ ಯೋಜಿಸುವುದು ಅಗತ್ಯವೇಕೆ? (ಬಿ) ಆಮಂತ್ರಿಸಲ್ಪಡುವವರ ಬಗ್ಗೆ ಹೇಗೆ ನಿರ್ಣಯ ಮಾಡತಕ್ಕದು?
10 ಕ್ರೈಸ್ತ ದಂಪತಿಗಳು ವಾಸ್ತವಿಕ ನೋಟವುಳ್ಳವರೂ ವಿವೇಚನಾಶೀಲರೂ ಆಗಿರಲು ಬಯಸುತ್ತಾರೆ ಮತ್ತು ಇದಕ್ಕಾಗಿ ಬೈಬಲ್ ಅವರಿಗೆ ಸಹಾಯ ನೀಡಬಲ್ಲದು. ವಿವಾಹದಿನವು ಮಹತ್ವಪೂರ್ಣ ಸಂದರ್ಭವಾಗಿರುವುದಾದರೂ, ಅದು ನಿತ್ಯಜೀವದ ನಿರೀಕ್ಷೆಯಿರುವ ಇಬ್ಬರು ಕ್ರೈಸ್ತರ ವೈವಾಹಿಕ ಜೀವನದ ಕೇವಲ ಆರಂಭವಾಗಿದೆ ಎಂಬುದನ್ನು ಅವರು ತಿಳಿದಿರುತ್ತಾರೆ. ಅವರು ಒಂದು ದೊಡ್ಡ ವಿವಾಹದೌತಣವನ್ನು ಏರ್ಪಡಿಸಲೇಬೇಕೆಂದಿಲ್ಲ. ಒಂದುವೇಳೆ ಅವರು ವಿವಾಹದ ಗೋಷ್ಠಿಯನ್ನು ಏರ್ಪಡಿಸಲು ಇಷ್ಟಪಡುವಲ್ಲಿ, ಅದಕ್ಕಾಗುವ ಖರ್ಚುವೆಚ್ಚ ಮತ್ತು ಅದು ಯಾವ ರೀತಿಯಲ್ಲಿ ಇರಬೇಕೆಂಬುದನ್ನು ಪರಿಗಣಿಸಬಯಸುವರು. (ಲೂಕ 14:28) ಅವರ ಕ್ರೈಸ್ತ ಸಹಬಾಳ್ವೆಯಲ್ಲಿ ಪತಿಯು ಶಾಸ್ತ್ರಾಧಾರಿತವಾಗಿ ಶಿರಸ್ಸಾಗಿರುವನು. (1 ಕೊರಿಂಥ 11:3; ಎಫೆಸ 5:22, 23) ಆದುದರಿಂದ, ವಿವಾಹದ ರಿಸೆಪ್ಷನ್‌ಗೆ ಪ್ರಮುಖ ಹೊಣೆಗಾರನು ವರನಾಗಿರುತ್ತಾನೆ. ಆದರೂ, ವಿವಾಹದೌತಣಕ್ಕೆ ಯಾರನ್ನು ಆಮಂತ್ರಿಸಬೇಕು ಅಥವಾ ಎಷ್ಟು ಮಂದಿಯನ್ನು ಆಮಂತ್ರಿಸಸಾಧ್ಯವಿದೆ ಎಂಬ ವಿಷಯದಲ್ಲಿ ಅವನು ತನ್ನ ಕೈಹಿಡಿಯುವವಳನ್ನು ಪ್ರೀತಿಯಿಂದ ವಿಚಾರಿಸುವನು. ಅವರ ಎಲ್ಲ ಬಂಧುಮಿತ್ರರನ್ನು ಆಮಂತ್ರಿಸಲು ಸಾಧ್ಯವಿರಲಿಕ್ಕಿಲ್ಲ ಇಲ್ಲವೆ ಅದು ಪ್ರಾಯೋಗಿಕವೂ ಆಗಿರಲಿಕ್ಕಿಲ್ಲ. ಆದಕಾರಣ, ಕೆಲವು ನ್ಯಾಯಸಮ್ಮತ ನಿರ್ಣಯಗಳನ್ನು ಮಾಡಬೇಕಾದೀತು. ಕೆಲವು ಜೊತೆಕ್ರೈಸ್ತರಿಗೆ ಕರೆಕೊಡದಿರುವಲ್ಲಿ, ಆ ಕ್ರೈಸ್ತರು ಬೇಸರ ಮಾಡಿಕೊಳ್ಳದೆ ಅದು ಏಕೆಂಬುದಕ್ಕೆ ವಿವೇಚನಾಶಕ್ತಿಯನ್ನು ಉಪಯೋಗಿಸುವರು ಎಂಬ ಭರವಸೆ ಅವರಿಗಿರಬೇಕು.—ಪ್ರಸಂಗಿ 7:9.
“ಔತಣದ ಮೇಲ್ವಿಚಾರಕ”
11. “ಔತಣದ ಮೇಲ್ವಿಚಾರಕನು” ವಿವಾಹದಲ್ಲಿ ಯಾವ ಪಾತ್ರವನ್ನು ವಹಿಸಬಲ್ಲನು?
11 ದಂಪತಿಗಳು ತಮ್ಮ ವಿವಾಹೋತ್ಸವಕ್ಕಾಗಿ ಒಂದು ಸಮಾರಂಭವನ್ನು ಏರ್ಪಡಿಸಲು ಇಷ್ಟಪಡುವಲ್ಲಿ, ಆ ಸಂದರ್ಭವು ಗೌರವಪೂರ್ಣವಾಗಿ ಉಳಿಯುವುದೆಂದು ಹೇಗೆ ಖಾತರಿಯಿಂದಿರಬಲ್ಲರು? ಕೆಲವು ದಶಕಗಳಿಂದ ಯೆಹೋವನ ಸಾಕ್ಷಿಗಳು, ಯೇಸು ಕಾನಾದಲ್ಲಿ ಉಪಸ್ಥಿತನಾಗಿದ್ದ ಔತಣದ ಸಂಬಂಧದಲ್ಲಿ ಹೇಳಲ್ಪಟ್ಟಿರುವಂತೆ ಒಬ್ಬ “ಔತಣದ ಮೇಲ್ವಿಚಾರಕನು” ಇರುವುದು ವಿವೇಕಪೂರ್ಣವೆಂದು ಕಂಡುಕೊಂಡಿದ್ದಾರೆ. ಅವನು ನಿಶ್ಚಯವಾಗಿಯೂ ಜವಾಬ್ದಾರಿಯುತ ಜೊತೆ ವಿಶ್ವಾಸಿಯಾಗಿದ್ದನು. (ಯೋಹಾನ 2:9, 10, NIBV) ಅದೇ ರೀತಿಯಲ್ಲಿ, ಈ ಪ್ರಾಮುಖ್ಯ ಪಾತ್ರವನ್ನು ವಹಿಸಿಕೊಳ್ಳಲು, ವಿವೇಕಿಯಾದ ವರನು ಆಧ್ಯಾತ್ಮಿಕವಾಗಿ ಪ್ರೌಢನಾಗಿರುವ ಕ್ರೈಸ್ತ ಸಹೋದರನೊಬ್ಬನನ್ನು ಆರಿಸಿಕೊಳ್ಳುವನು. ಮತ್ತು ಈ ಔತಣದ ಮೇಲ್ವಿಚಾರಕನು ವರನ ಅಪೇಕ್ಷೆ ಮತ್ತು ಅಭಿರುಚಿಗಳನ್ನು ತಿಳಿದುಕೊಂಡು ಗೋಷ್ಠಿಗೆ ಮುಂಚೆ ಹಾಗೂ ಆ ಗೋಷ್ಠಿಯಲ್ಲಿ ಅವನ್ನು ಅನುಸರಿಸುವನು.
12. ಮದ್ಯಸಾರ ಪಾನೀಯಗಳ ಬಳಕೆಯ ಬಗ್ಗೆ ವರನು ಏನನ್ನು ಪರ್ಯಾಲೋಚಿಸಬೇಕು?
12 ಐದನೆಯ ಪ್ಯಾರದಲ್ಲಿ ಚರ್ಚಿಸಲ್ಪಟ್ಟಿರುವುದಕ್ಕೆ ಹೊಂದಿಕೆಯಲ್ಲಿ, ಕೆಲವು ದಂಪತಿಗಳು ಮದ್ಯಸಾರ ಪಾನೀಯಗಳನ್ನು ತಮ್ಮ ವಿವಾಹದೌತಣದಲ್ಲಿ ಸೇರಿಸದಿರಲು ನಿರ್ಣಯಿಸುತ್ತಾರೆ. ಒಂದುವೇಳೆ, ಅದರ ದುರುಪಯೋಗದಿಂದ ಆ ಸಂದರ್ಭದ ಸಂತೋಷ ಮತ್ತು ಯಶಸ್ವಿಗೆ ಕುಂದು ಬಂದೀತೆಂದು ಅವರು ಹೀಗೆ ಮಾಡುತ್ತಾರೆ. (ರೋಮಾಪುರ 13:13; 1 ಕೊರಿಂಥ 5:11) ಆದರೆ, ಮದ್ಯಸಾರ ಪಾನೀಯಗಳನ್ನು ವಿವಾಹದೌತಣದಲ್ಲಿ ಸೇರಿಸುವಲ್ಲಿ, ಅವು ಮಿತವಾಗಿ ಹಂಚಲ್ಪಡುವಂತೆ ಇಲ್ಲವೆ ಲಭ್ಯವಿರುವಂತೆ ವರನು ನಿಶ್ಚಯವಾಗಿ ನೋಡಿಕೊಳ್ಳಬೇಕು. ಯೇಸು ಕಾನಾದಲ್ಲಿ ಹಾಜರಾಗಿದ್ದ ವಿವಾಹದಲ್ಲಿ ದ್ರಾಕ್ಷಾಮದ್ಯವಿದದ್ದು ಮಾತ್ರವಲ್ಲ, ಅವನು ಉತ್ತಮ ದರ್ಜೆಯ ದ್ರಾಕ್ಷಾಮದ್ಯವನ್ನೂ ಒದಗಿಸಿದನು. ಆಸಕ್ತಿಕರವಾಗಿ, ಔತಣದ ಮೇಲ್ವಿಚಾರಕನು ಹೇಳಿದ್ದು: “ಎಲ್ಲರು ಹಿರಿದಿನ ದ್ರಾಕ್ಷಾರಸವನ್ನು ಮೊದಲು ಕೊಟ್ಟು ಅಮಲೇರಿದ ಮೇಲೆ ಕಿರಿದಿನ ದ್ರಾಕ್ಷಾರಸವನ್ನು ಕೊಡುತ್ತಾರೆ; ನೀನು ಹಿರಿದಿನ ದ್ರಾಕ್ಷಾರಸವನ್ನು ಇದುವರೆಗೂ ಇಟ್ಟುಕೊಂಡಿದ್ದೀ.” (ಯೋಹಾನ 2:10) ಯೇಸು ಕುಡಿಕತನವನ್ನು ಉತ್ತೇಜಿಸಲಿಲ್ಲವೆಂಬುದು ನಿಶ್ಚಯ, ಏಕೆಂದರೆ ಕುಡುಕರನ್ನು ನಿಂದಾರ್ಹರೆಂದು ಅವನು ವೀಕ್ಷಿಸಿದನು. (ಲೂಕ 12:45, 46) ದ್ರಾಕ್ಷಾಮದ್ಯದ ಗುಣಮಟ್ಟದ ಬಗ್ಗೆ ಈ ಮೇಲ್ವಿಚಾರಕನು ಆಶ್ಚರ್ಯವನ್ನು ವ್ಯಕ್ತಪಡಿಸಿದಾಗ, ಕೆಲವು ಮಂದಿ ವಿವಾಹಾತಿಥಿಗಳು ಕುಡಿದು ಮತ್ತರಾದ ನಿದರ್ಶನಗಳನ್ನು ತಾನು ನೋಡಿದ್ದೇನೆಂದು ಆ ಮೇಲ್ವಿಚಾರಕನು ಸ್ಪಷ್ಟಪಡಿಸಿದನು. (ಅ. ಕೃತ್ಯಗಳು 2:15; 1 ಥೆಸಲೊನೀಕ 5:7) ಆದುದರಿಂದ, ವರನು ಮತ್ತು ಔತಣದ ಮೇಲ್ವಿಚಾರಕನಾಗಿ ವರನು ನೇಮಿಸಿದ ಭರವಸಾರ್ಹ ಕ್ರೈಸ್ತನು—ಇವರಿಬ್ಬರು ಸಹ ಉಪಸ್ಥಿತರಾಗಿರುವ ಎಲ್ಲರೂ, “ಮದ್ಯಪಾನ ಮಾಡಿ ಮತ್ತರಾಗಬೇಡಿರಿ; ಅದರಿಂದ ಪಟಿಂಗತನವು ಹುಟ್ಟುತ್ತದೆ” ಎಂಬ ಸ್ಪಷ್ಟ ನಿರ್ದೇಶನವನ್ನು ಪಾಲಿಸುವುದನ್ನು ಖಾತರಿಮಾಡಿಕೊಳ್ಳಬೇಕು.—ಎಫೆಸ 5:18; ಜ್ಞಾನೋಕ್ತಿ 20:1; ಹೋಶೇಯ 4:11.
13. ವಿವಾಹದೌತಣದಲ್ಲಿ ಸಂಗೀತವನ್ನು ದಂಪತಿಗಳು ಏರ್ಪಡಿಸುವಲ್ಲಿ ಅವರೇನನ್ನು ಪರಿಗಣಿಸಬೇಕು ಮತ್ತು ಏಕೆ?
13 ಬೇರೆ ಸಮಾರಂಭಗಳಲ್ಲಿರುವಂತೆ, ಸಂಗೀತವಿರುವಲ್ಲಿ ಸಂಭಾಷಣೆಗೆ ಅಡಚಣೆಯಾಗದಂತೆ ಸಂಗೀತದ ಧ್ವನಿಮಟ್ಟಕ್ಕೆ ತಕ್ಕ ಗಮನವನ್ನು ಕೊಡಬೇಕು. ಕ್ರೈಸ್ತ ಹಿರಿಯನೊಬ್ಬನು ಗಮನಿಸಿದ್ದು: “ಸಂಜೆ ಕಳೆದಂತೆ, ಸಂಭಾಷಣೆ ಆವೇಶಪೂರಿತವಾಗುವಾಗ ಅಥವಾ ಡಾನ್ಸ್ ಆರಂಭಗೊಳ್ಳುವಾಗ ಸಂಗೀತದ ಧ್ವನಿಮಟ್ಟವೂ ಕೆಲವು ಬಾರಿ ಹೆಚ್ಚುತ್ತದೆ. ಯಾವುದು ಹಿನ್ನೆಲೆ ಸಂಗೀತವಾಗಿ ಆರಂಭವಾಯಿತೊ ಅದು ಈಗ ಗಟ್ಟಿಯಾಗುತ್ತಾ ಸಂಭಾಷಣೆಗೆ ಅಡ್ಡಿಮಾಡಬಲ್ಲದು. ವಿವಾಹ ಸತ್ಕಾರಕೂಟ ಹಿತಕರವಾದ ಒಡನಾಟಕ್ಕೆ ಅವಕಾಶಕೊಡುತ್ತದೆ. ಈ ಅವಕಾಶವನ್ನು ಗಟ್ಟಿಯಾದ ಸಂಗೀತವು ಕೆಡಿಸುವುದಾದರೆ ಅದೆಷ್ಟು ವಿಷಾದಕರ!” ಈ ವಿಷಯದಲ್ಲಿ ಸಹ ವರನೂ ಔತಣದ ಮೇಲ್ವಿಚಾರಕನೂ ಜವಾಬ್ದಾರಿಯಿಂದ ವರ್ತಿಸುವ ಅಗತ್ಯವಿದೆ. ಯಾವ ರೀತಿಯ ಸಂಗೀತ ನುಡಿಸಲ್ಪಡಬೇಕು ಮತ್ತು ಸಂಗೀತದ ಧ್ವನಿ ಎಷ್ಟಿರಬೇಕೆಂಬ ಜವಾಬ್ದಾರಿಯನ್ನು ಸಂಗೀತಕಾರರಿಗೆ—ಅವರು ಬಾಡಿಗೆಗೆ ಹಿಡಿಯಲ್ಪಟ್ಟವರಾಗಿರಲಿ, ಅಲ್ಲವಾಗಿರಲಿ—ಒಪ್ಪಿಸಿಕೊಡಬಾರದು. ಪೌಲನು ಬರೆದುದು: “ನೀವು ನುಡಿಯಿಂದಾಗಲಿ ನಡೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ.” (ಕೊಲೊಸ್ಸೆ 3:17) ವಿವಾಹದ ಔತಣದ (ಅಥವಾ ರಿಸೆಪ್ಷನ್) ಬಳಿಕ ಅತಿಥಿಗಳು ತಮ್ಮ ಮನೆಗಳಿಗೆ ಹೋದಾಗ, ದಂಪತಿಗಳು ಎಲ್ಲವನ್ನೂ ಯೇಸುವಿನ ಹೆಸರಿನಲ್ಲಿ ಮಾಡಿದರೆಂದು ಹೇಳುವಷ್ಟರ ಮಟ್ಟಿಗೆ ಆ ಸಂಗೀತವಿತ್ತೆಂದು ಅವರು ನೆನಸಿಕೊಳ್ಳುವರೊ? ವಿಷಯವು ಹಾಗಿರಬೇಕು.
14. ಒಂದು ವಿವಾಹದ ಕುರಿತು ಕ್ರೈಸ್ತರಲ್ಲಿ ಯಾವುದು ಸವಿನೆನಪಾಗಿರಬೇಕು?
14 ಹೌದು, ಅಚ್ಚುಕಟ್ಟಾಗಿ ಏರ್ಪಡಿಸಲಾದ ವಿವಾಹವೊಂದು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಸಾಧ್ಯವಿದೆ. ಮದುವೆಯಾಗಿ 30 ವರುಷಗಳಾಗಿರುವ ಆಡಾಮ್ ಮತ್ತು ಎಡೀಟಾ ಎಂಬವರು ಒಂದು ವಿವಾಹದ ಕುರಿತು ಹೀಗೆಂದರು: “ಅಲ್ಲಿನ ಕ್ರೈಸ್ತ ಪರಿಸರವನ್ನು ನಾವು ನಿಜವಾಗಿಯೂ ಅನುಭವಿಸಸಾಧ್ಯವಾಯಿತು. ಯೆಹೋವನನ್ನು ಸ್ತುತಿಸುವ ಗೀತೆಗಳಲ್ಲದೆ ಇತರ ಉತ್ತಮ ರೀತಿಯ ಮನೋರಂಜನೆಯೂ ಅಲ್ಲಿತ್ತು. ಡಾನ್ಸಿಂಗ್ ಮತ್ತು ಸಂಗೀತ ಎರಡನೆಯ ಸ್ಥಾನದಲ್ಲಿತ್ತು. ಅದು ಹಿತಕರವೂ ಭಕ್ತಿವರ್ಧಕವೂ ಆಗಿತ್ತು ಮತ್ತು ಸಕಲವೂ ಬೈಬಲ್ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿತ್ತು.” ಹೌದು, ಕ್ರಿಯೆಗಳಿಂದ ತಮ್ಮ ನಂಬಿಕೆಯನ್ನು ರುಜುಪಡಿಸಲು ವಧೂವರರು ಅನೇಕ ವಿಷಯಗಳನ್ನು ಮಾಡಸಾಧ್ಯವಿದೆ.
ವಿವಾಹದ ಉಡುಗೊರೆಗಳು
15. ವಿವಾಹದ ಉಡುಗೊರೆಗಳ ವಿಷಯದಲ್ಲಿ ಯಾವ ಬೈಬಲ್ ಸಲಹೆಯನ್ನು ಅನ್ವಯಿಸಿಕೊಳ್ಳಸಾಧ್ಯವಿದೆ?
15 ಅನೇಕ ದೇಶಗಳಲ್ಲಿ ವಿವಾಹವಾಗುತ್ತಿರುವವರಿಗೆ ಬಂಧುಮಿತ್ರರು ಉಡುಗೊರೆಯನ್ನು ಕೊಡುವುದು ಸಾಮಾನ್ಯ. ನೀವು ಹಾಗೆ ಉಡುಗೊರೆಯನ್ನು ಕೊಡಬಯಸುವಲ್ಲಿ ಯಾವ ವಿಷಯವನ್ನು ಮನಸ್ಸಿನಲ್ಲಿಡಬಹುದು? ಒಳ್ಳೆದು, ಅಪೊಸ್ತಲ ಯೋಹಾನನು ‘ಬದುಕುಬಾಳಿನ ಡಂಬದ’ ಕುರಿತು ಏನು ಹೇಳಿದನೆಂದು ನೆನಪಿಸಿಕೊಳ್ಳಿ. ಅವನು ಅಂತಹ ಬೆಡಗನ್ನು, ತಮ್ಮ ನಂಬಿಕೆಯನ್ನು ಕ್ರಿಯೆಯ ಮೂಲಕ ತೋರಿಸುವ ಕ್ರೈಸ್ತರಿಗೆ ಜೋಡಿಸದೆ, ‘ಗತಿಸಿಹೋಗುವ ಲೋಕಕ್ಕೆ’ ಜೋಡಿಸಿದನು. (1 ಯೋಹಾನ 2:16, 17) ಯೋಹಾನನ ಈ ಪ್ರೇರಿತ ಅವಲೋಕನವನ್ನು ಮನಸ್ಸಿನಲ್ಲಿಟ್ಟುಕೊಂಡು, ನವದಂಪತಿಗಳು ತಮಗೆ ಉಡುಗೊರೆಯನ್ನು ನೀಡಿದವರ ಹೆಸರನ್ನು ಎಲ್ಲರಿಗೆ ತಿಳಿಯಪಡಿಸಬೇಕೊ? ಮಕೆದೋನ್ಯ ಮತ್ತು ಅಖಾಯದ ಕ್ರೈಸ್ತರು ಯೆರೂಸಲೇಮಿನ ಸಹೋದರರಿಗೆ ದಾನವನ್ನು ಕೊಟ್ಟರು; ಆದರೆ ಅವರ ಹೆಸರುಗಳನ್ನು ಪ್ರಕಟಿಸಲಾಯಿತೆಂಬುದರ ಬಗ್ಗೆ ಯಾವ ಸೂಚನೆಯೂ ಇಲ್ಲ. (ರೋಮಾಪುರ 15:26) ವಿವಾಹದ ಉಡುಗೊರೆಯನ್ನು ಕೊಡುವ ಅನೇಕ ಕ್ರೈಸ್ತರು ತಮ್ಮ ಕಡೆಗೆ ಅನುಚಿತ ಗಮನವನ್ನು ಸೆಳೆದುಕೊಳ್ಳದಿರಲಿಕ್ಕಾಗಿ ತಮ್ಮ ಹೆಸರನ್ನು ತಿಳಿಯಪಡಿಸದಿರಲು ಬಯಸುವರು. ಈ ಸಂಬಂಧದಲ್ಲಿ ಮತ್ತಾಯ 6:1-4ರಲ್ಲಿರುವ ಯೇಸುವಿನ ಸಲಹೆಯನ್ನು ಪುನರ್ವಿಮರ್ಶಿಸಿರಿ.
16. ನವದಂಪತಿಗಳು ವಿವಾಹ ಉಡುಗೊರೆಗಳ ವಿಷಯದಲ್ಲಿ ಇತರರಿಗೆ ಮುಜುಗರವನ್ನು ಉಂಟುಮಾಡುವುದರಿಂದ ಹೇಗೆ ದೂರವಿರಬಲ್ಲರು?
16 ಉಡುಗೊರೆ ಕೊಡುವವರ ಹೆಸರನ್ನು ತಿಳಿಯಪಡಿಸುವುದು, ಯಾವುದು ಹೆಚ್ಚು ಉತ್ತಮ ಕೊಡುಗೆ ಅಥವಾ ಯಾವುದು ಹೆಚ್ಚು ದುಬಾರಿ ಎಂಬ ಕಾರಣದಿಂದ ‘ಸ್ಪರ್ಧೆಯನ್ನು ಕೆದಕಿ ಮೇಲೆಬ್ಬಿಸುವುದಕ್ಕೆ’ ನಡೆಸಸಾಧ್ಯವಿದೆ. ಆದುದರಿಂದ ವಿವೇಕಿಗಳಾದ ಕ್ರೈಸ್ತ ನವದಂಪತಿಗಳು ಉಡುಗೊರೆಯನ್ನು ನೀಡಿದವರ ಹೆಸರುಗಳನ್ನು ಬಹಿರಂಗವಾಗಿ ಪ್ರಕಟಪಡಿಸುವುದಿಲ್ಲ. ಹಾಗೆ ಹೆಸರುಗಳನ್ನು ಪ್ರಕಟಿಸುವುದು ಉಡುಗೊರೆಯನ್ನು ನೀಡಲು ಸಾಧ್ಯವಾಗದವರಿಗೆ ಮುಜುಗರವನ್ನುಂಟುಮಾಡುವುದು. (ಗಲಾತ್ಯ 5:26; 6:10, NW) ಒಂದು ಉಡುಗೊರೆಯನ್ನು ಯಾರು ಕೊಟ್ಟರೆಂಬುದನ್ನು ವಧೂವರರು ತಿಳಿಯುವುದು ತಪ್ಪಲ್ಲವೆಂಬುದು ಒಪ್ಪಿಕೊಳ್ಳುವ ವಿಷಯ. ಅದನ್ನು ಅವರು ಉಡುಗೊರೆಯ ಜೊತೆಗಿರುವ ಕಾರ್ಡಿನಿಂದ ತಿಳಿದುಕೊಳ್ಳಸಾಧ್ಯವಿದೆ, ಆದರೆ ಅದನ್ನು ಬಹಿರಂಗವಾಗಿ ಓದುವುದಿಲ್ಲ. ವಿವಾಹದ ಕೊಡುಗೆಗಳನ್ನು ಕೊಳ್ಳುವಾಗ, ಕೊಡುವಾಗ ಮತ್ತು ಪಡೆಯುವಾಗ, ನಮ್ಮ ನಂಬಿಕೆ ನಮ್ಮ ಕ್ರಿಯೆಗಳನ್ನು ಇಂತಹ ವೈಯಕ್ತಿಕ ವಿಷಯದಲ್ಲಿಯೂ ಪ್ರಭಾವಿಸುತ್ತಿದೆಯೆಂದು ರುಜುಪಡಿಸುವ ಸಂದರ್ಭ ನಮ್ಮೆಲ್ಲರಿಗೂ ಇದೆ.a
17. ತಮ್ಮ ನಂಬಿಕೆ ಮತ್ತು ಕ್ರಿಯೆಗಳ ವಿಷಯದಲ್ಲಿ ಕ್ರೈಸ್ತರಿಗೆ ಯಾವ ಗುರಿ ಇರಬೇಕು?
17 ನಮ್ಮ ನಂಬಿಕೆಯನ್ನು ರುಜುಪಡಿಸಿ ತೋರಿಸಲು ನೈತಿಕವಾಗಿ ಒಳ್ಳೆಯ ರೀತಿಯಲ್ಲಿ ಜೀವಿಸುವುದು, ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಮತ್ತು ಸಾರುವ ಕಾರ್ಯದಲ್ಲಿ ಭಾಗವಹಿಸುವುದಷ್ಟೇ ಸಾಕಾಗುವುದಿಲ್ಲ. ನಾವು ಮಾಡುವ ಸಕಲ ವಿಷಯಗಳನ್ನು ನಮ್ಮ ನಂಬಿಕೆಯು ಪ್ರಭಾವಿಸತಕ್ಕದು. ಇಂಥ ಸಜೀವವಾದ ನಂಬಿಕೆ ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇರಲಿ. ಹೌದು, ನಾವು ಮೇಲೆ ಚರ್ಚಿಸಲ್ಪಟ್ಟಿರುವ ವಿಷಯಗಳ ಸಮೇತ ಜೀವನದ ಪ್ರತಿಯೊಂದು ಕ್ಷೇತ್ರಗಳಲ್ಲಿ ಕ್ರಿಯೆಗಳನ್ನು ‘ಸಂಪೂರ್ಣವಾದದ್ದಾಗಿ’ ಮಾಡುವ ಮೂಲಕ ನಮ್ಮ ನಂಬಿಕೆಯನ್ನು ತೋರಿಸಬಲ್ಲೆವು.—ಪ್ರಕಟನೆ 3:2.
18. ಯೋಹಾನ 13:17ರ ಮಾತುಗಳು ಕ್ರೈಸ್ತ ವಿವಾಹಗಳು ಮತ್ತು ಗೋಷ್ಠಿಗಳ ಸಂಬಂಧದಲ್ಲಿ ಹೇಗೆ ನಿಜವಾಗಿ ಪರಿಣಮಿಸಬಲ್ಲವು?
18 ಯೇಸು ತನ್ನ ನಂಬಿಗಸ್ತ ಅಪೊಸ್ತಲರ ಪಾದಗಳನ್ನು ತೊಳೆಯುವ ದೀನ ಕೃತ್ಯದ ಮೂಲಕ ಉತ್ತಮ ಮಾದರಿಯನ್ನಿಟ್ಟನು. ಅದನ್ನು ಮಾಡಿದ ಅನಂತರ “ನೀವು ಇದನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು” ಎಂದು ಹೇಳಿದನು. (ಯೋಹಾನ 13:4-17) ಸಾಮಾನ್ಯವಾಗಿ, ನಾವಿಂದು ವಾಸಿಸುತ್ತಿರುವ ಸ್ಥಳಗಳಲ್ಲಿ ನಮ್ಮ ಮನೆಗೆ ಬರುವ ಅತಿಥಿ ಇಲ್ಲವೆ ಇನ್ನೊಬ್ಬ ವ್ಯಕ್ತಿಯ ಪಾದಗಳನ್ನು ತೊಳೆಯುವುದಾಗಲಿ ಅಥವಾ ಅಂಥ ರೂಢಿಯಾಗಲಿ ಇರಲಿಕ್ಕಿಲ್ಲ. ಆದರೂ, ನಾವು ಈ ಲೇಖನದಲ್ಲಿ ಪರಿಗಣಿಸಿರುವಂತೆ ಸಾಮಾಜಿಕ ಗೋಷ್ಠಿಗಳು ಮತ್ತು ಕ್ರೈಸ್ತ ವಿವಾಹ ಸಮಾರಂಭಗಳಲ್ಲಿ ಮಾತ್ರವಲ್ಲ ಜೀವನದ ಇತರ ಎಲ್ಲ ವಿಷಯಗಳಲ್ಲಿ ನಮ್ಮ ನಂಬಿಕೆಯನ್ನು ಪ್ರೀತಿಯ ಪರಚಿಂತನೆಯ ಕಾರ್ಯಗಳ ಮೂಲಕ ತೋರಿಸಬಲ್ಲೆವು. ಇದನ್ನು ನಾವು ವಿವಾಹವಾಗುತ್ತಿರುವ ಸಮಯದಲ್ಲಿ ಅಥವಾ ವಿವಾಹದ ಅತಿಥಿಗಳಾಗಿರುವ ಸಮಯದಲ್ಲಿ ಇಲ್ಲವೆ ತಮ್ಮ ನಂಬಿಕೆಯನ್ನು ಕ್ರಿಯೆಗಳಲ್ಲಿ ತೋರಿಸಬಯಸುವ ಕ್ರೈಸ್ತರ ಸಂತೋಷಕೂಟಗಳಲ್ಲಿ ತೋರಿಸಬಲ್ಲೆವು. (w06 10/15)
[ಪಾದಟಿಪ್ಪಣಿ]
a ವಿವಾಹಗಳು ಮತ್ತು ಅವುಗಳೊಂದಿಗೆ ಏರ್ಪಡಿಸಲಾಗುವ ರಿಸೆಪ್ಷನ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು “ನಿಮ್ಮ ವಿವಾಹದಿನದ ಹರ್ಷ ಮತ್ತು ಘನತೆಯನ್ನು ಹೆಚ್ಚಿಸಿರಿ” ಎಂಬ ಮುಂದಿನ ಲೇಖನದಲ್ಲಿ ಕೊಡಲಾಗಿದೆ.
ಹೇಗೆ ಉತ್ತರ ಕೊಡುವಿರಿ?
• ಸಾಮಾಜಿಕ ಗೋಷ್ಠಿಯನ್ನು ಏರ್ಪಡಿಸುವಾಗ
• ವಿವಾಹ ಇಲ್ಲವೆ ರಿಸೆಪ್ಷನ್ ಏರ್ಪಡಿಸುವಾಗ
• ವಿವಾಹ ಉಡುಗೊರೆಗಳನ್ನು ಕೊಡುವಾಗ ಇಲ್ಲವೆ ಪಡೆಯುವಾಗ
ನಿಮ್ಮ ನಂಬಿಕೆಯನ್ನು ಹೇಗೆ ರುಜುಪಡಿಸುವಿರಿ?
[ಪುಟ 17ರಲ್ಲಿರುವ ಚಿತ್ರ]
ಕೆಲವರನ್ನು ಮಾತ್ರ ಆಮಂತ್ರಿಸುವುದಾದರೂ ‘ಮೇಲಣಿಂದ ಬರುವ ವಿವೇಕದಿಂದ’ ಮಾರ್ಗದರ್ಶಿಸಲ್ಪಡಿರಿ
-
-
ನಿಮ್ಮ ವಿವಾಹದಿನದ ಹರ್ಷ ಮತ್ತು ಘನತೆಯನ್ನು ಹೆಚ್ಚಿಸಿರಿಕಾವಲಿನಬುರುಜು—2006 | ನವೆಂಬರ್ 1
-
-
ನಿಮ್ಮ ವಿವಾಹದಿನದ ಹರ್ಷ ಮತ್ತು ಘನತೆಯನ್ನು ಹೆಚ್ಚಿಸಿರಿ
“ನನ್ನ ಜೀವನದಲ್ಲಿನ ಹೆಚ್ಚು ಮಹತ್ವಪೂರ್ಣವಾದ ಹಾಗೂ ಹರ್ಷಮಯ ದಿನಗಳಲ್ಲಿ ನನ್ನ ವಿವಾಹದಿನವು ಒಂದಾಗಿದೆ” ಎಂದು ಸುಮಾರು 60 ವರ್ಷ ವೈವಾಹಿಕ ಜೀವನ ನಡೆಸಿರುವ ಗಾರ್ಡ್‌ನ್ ಹೇಳಿದರು. ವಿವಾಹದಿನವು ಸತ್ಕ್ರೈಸ್ತರಿಗೆ ಅಷ್ಟೊಂದು ಮಹತ್ವವುಳ್ಳದಾಗಿದೆ ಏಕೆ? ಏಕೆಂದರೆ, ಅವರು ತಮಗೆ ಅತಿ ಪ್ರೀತಿಪಾತ್ರರಾದ ಬಾಳಸಂಗಾತಿಗೂ ಯೆಹೋವ ದೇವರಿಗೂ ಒಂದು ಪವಿತ್ರ ಪ್ರತಿಜ್ಞೆಯನ್ನು ಮಾಡುವ ದಿನ ಅದಾಗಿದೆ. (ಮತ್ತಾಯ 22:37; ಎಫೆಸ 5:22-29) ಹೌದು, ವಿವಾಹವಾಗಲು ಯೋಜಿಸುತ್ತಿರುವ ಗಂಡು-ಹೆಣ್ಣು ತಮ್ಮ ವಿವಾಹದಿನದಲ್ಲಿ ಆನಂದಿಸಲು ಬಯಸುವುದು ಮಾತ್ರವಲ್ಲ, ವಿವಾಹದ ಸ್ಥಾಪಕನಿಗೂ ಗೌರವ ಕೊಡಲು ಬಯಸುತ್ತಾರೆ.—ಆದಿಕಾಂಡ 2:18-24; ಮತ್ತಾಯ 19:5, 6.
ವರನು ಈ ಸಂತೋಷ ಸಮಾರಂಭದ ಘನತೆಯನ್ನು ಹೇಗೆ ಹೆಚ್ಚಿಸಸಾಧ್ಯವಿದೆ? ತನ್ನ ಪತಿಗೆ ಹಾಗೂ ಯೆಹೋವನಿಗೆ ಗೌರವ ತೋರಿಸಲಿಕ್ಕಾಗಿ ವಧು ಏನು ಮಾಡಬಲ್ಲಳು? ಮದುವೆಗೆ ಹಾಜರಾಗುವ ಇತರರು ಆ ದಿನದ ಸಂಭ್ರಮಕ್ಕೆ ಹೇಗೆ ಮೆರಗು ನೀಡಬಲ್ಲರು? ಬೈಬಲಿನ ಕೆಲವು ಮೂಲತತ್ತ್ವಗಳನ್ನು ಪರಿಗಣಿಸುವುದು ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ನಮಗೆ ಸಹಾಯಮಾಡುತ್ತದೆ. ಅಲ್ಲದೆ, ಆ ಮೂಲತತ್ತ್ವಗಳನ್ನು ಅನ್ವಯಿಸುವುದು ಈ ವಿಶೇಷ ಸಮಾರಂಭದ ಮಹತ್ವಕ್ಕೆ ಕುಂದುತರಬಹುದಾದ ಸಮಸ್ಯೆಗಳನ್ನು ಕಡಿಮೆಗೊಳಿಸುವುದು.
ಯಾರು ಹೊಣೆಗಾರರು?
ಅನೇಕ ದೇಶಗಳಲ್ಲಿ ಒಂದು ವಿವಾಹೋತ್ಸವವನ್ನು ಯೆಹೋವನ ಸಾಕ್ಷಿಗಳ ಶುಶ್ರೂಷಕನೊಬ್ಬನು ಕಾನೂನುಬದ್ಧವಾಗಿ ನಡೆಸಬಹುದು. ಇದನ್ನು ಸರಕಾರಿ ಸಿಬ್ಬಂದಿಯೇ ನಡೆಸಬೇಕೆಂಬ ಕಾನೂನು ಇರುವ ಸ್ಥಳಗಳಲ್ಲಿಯೂ ದಂಪತಿಗಳು ವಿವಾಹದ ಕುರಿತು ಬೈಬಲಾಧಾರಿತ ಭಾಷಣವನ್ನು ಏರ್ಪಡಿಸಲು ಇಷ್ಟಪಡಬಹುದು. ಸಾಮಾನ್ಯವಾಗಿ ಆ ಭಾಷಣದಲ್ಲಿ, ಕುಟುಂಬದ ತಲೆಯಾಗಿ ದೇವರು ನೇಮಿಸಿರುವ ಪಾತ್ರದ ಕುರಿತು ವರನು ಪರ್ಯಾಲೋಚಿಸುವಂತೆ ಸಲಹೆನೀಡಲಾಗುತ್ತದೆ. (1 ಕೊರಿಂಥ 11:3) ಅದಕ್ಕನುಗುಣವಾಗಿ, ವಿವಾಹದಲ್ಲಿ ಏನು ನಡೆಯುತ್ತದೊ ಅದರ ಪ್ರಧಾನ ಹೊಣೆಗಾರಿಕೆ ವರನದ್ದಾಗಿರುತ್ತದೆ. ವಿವಾಹ ಸಮಾರಂಭ ಮತ್ತು ಅದರ ನಂತರವಿರಬಹುದಾದ ಯಾವುದೇ ಗೋಷ್ಠಿಗಳಿಗೆ ಬೇಕಾದ ಏರ್ಪಾಡುಗಳನ್ನು ಬಹಳ ಮುಂಚಿತವಾಗಿಯೇ ಮಾಡಲಾಗುತ್ತದೆ ಎಂಬುದು ನಿಜ. ಆದರೆ, ಈ ಏರ್ಪಾಡುಗಳನ್ನು ಮಾಡುವುದು ವರನಿಗೆ ಏಕೆ ಸವಾಲೊಡ್ಡಬಹುದು?
ಇದಕ್ಕೆ ಒಂದು ಕಾರಣವು ವಧೂವರರ ಸಂಬಂಧಿಕರು ವಿವಾಹ ಯೋಜನೆಗಳಲ್ಲಿ ಮಿತಿಮೀರಿ ತಲೆಹಾಕಲು ಪ್ರಯತ್ನಿಸುವುದೇ ಆಗಿರಬಹುದು. ಅನೇಕ ವಿವಾಹಗಳನ್ನು ನಡೆಸಿರುವ ರೊಡಾಲ್ಫೊ ಗಮನಿಸಿದ್ದು: “ಕೆಲವೊಮ್ಮೆ ವರನು ಸಂಬಂಧಿಗಳಿಂದ, ಅದರಲ್ಲೂ ಅವರು ಮದುವೆಯ ಖರ್ಚಿಗೆ ಸಹಾಯ ನೀಡುವಲ್ಲಿ ಅತ್ಯಂತ ಒತ್ತಡಕ್ಕೆ ಒಳಗಾಗುತ್ತಾನೆ. ಮದುವೆ ಮತ್ತು ರಿಸೆಪ್ಷನ್‌ನಲ್ಲಿ ಯಾವುದು ಹೇಗೆ ನಡೆಯಬೇಕೆಂಬುದರ ಕುರಿತು ಅವರು ಕಡ್ಡಾಯ ಹಾಕಬಹುದು. ಇದು ಆ ಸಂದರ್ಭಕ್ಕೆ ಜವಾಬ್ದಾರನಾಗಿರುವ ವರನ ಶಾಸ್ತ್ರೀಯ ಪಾತ್ರವನ್ನು ಕಡೆಗಣಿಸಬಲ್ಲದು.”
ಸುಮಾರು 35 ವರ್ಷಗಳಿಂದ ವಿವಾಹವನ್ನು ನಡೆಸುತ್ತಿರುವ ಮ್ಯಾಕ್ಸ್ ಗಮನಿಸಿದ್ದು: “ಮದುವೆಯಲ್ಲಾಗಲಿ ರಿಸೆಪ್ಷನ್‌ನಲ್ಲಾಗಲಿ ಏನೆಲ್ಲಾ ಇರಬೇಕು ಎಂಬುದನ್ನು ವಧುವೇ ತೀರ್ಮಾನಿಸುತ್ತಾಳೆ. ಈ ವಿಷಯದಲ್ಲಿ ವರನ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ ಕೊಡದಿರುವುದನ್ನು ನಾನು ಗಮನಿಸಿದ್ದೇನೆ.” ಅನೇಕ ವಿವಾಹಗಳನ್ನು ನಡೆಸಿರುವ ಡೇವಿಡ್ ಹೇಳಿದ್ದು: “ಮುಂದಾಳುತ್ವವನ್ನು ವಹಿಸುವ ರೂಢಿ ವರರಿಗೆ ಇರಲಿಕ್ಕಿಲ್ಲ. ಮದುವೆ ಸಿದ್ಧತೆಗಳಲ್ಲಿ ಅವರು ಸಾಕಾಷ್ಟು ಸೇರಿಕೊಳ್ಳದಿರುವುದು ಸಾಮಾನ್ಯ.” ಹೀಗಿರುವಲ್ಲಿ, ಒಬ್ಬ ವರನು ತನ್ನ ಜವಾಬ್ದಾರಿಯನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲನು?
ಸಂವಾದದಿಂದ ಸಂತಸ!
ವರನೊಬ್ಬನು ಮದುವೆಗಾಗಿ ಸಿದ್ಧತೆಗಳನ್ನು ಮಾಡುವಾಗ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಪರಿಣಾಮಕಾರಿಯಾಗಿ ಸಂವಾದಿಸಬೇಕು. “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು” ಎಂದು ಬೈಬಲು ಸ್ಪಷ್ಟವಾಗಿ ಹೇಳುತ್ತದೆ. (ಜ್ಞಾನೋಕ್ತಿ 15:22) ಆದುದರಿಂದ, ವರನು ಮುಂಚಿತವಾಗಿಯೇ ತನ್ನ ಕೈಹಿಡಿಯುವವಳೊಂದಿಗೆ, ಕುಟುಂಬ ಸದಸ್ಯರೊಂದಿಗೆ ಮತ್ತು ಬೈಬಲಾಧಾರಿತ ಸಲಹೆ ಕೊಡಬಲ್ಲ ಇತರರೊಂದಿಗೆ ಮದುವೆಯ ಸಿದ್ಧತೆಗಳ ಕುರಿತು ಚರ್ಚಿಸುವುದಾದರೆ ಹೆಚ್ಚಿನ ಆಶಾಭಂಗವನ್ನು ತಡೆಯಸಾಧ್ಯವಿದೆ.
ಹೌದು, ವಿವಾಹ ನಿಶ್ಚಯವಾಗಿರುವ ಗಂಡು-ಹೆಣ್ಣು ಮೊದಲು ಮದುವೆ ಯೋಜನೆಗಳು ಮತ್ತು ಅವನ್ನು ಕೈಗೊಳ್ಳಸಾಧ್ಯವಿರುವ ಬಗ್ಗೆ ಕೂಡಿ ಮಾತಾಡುವುದು ಪ್ರಾಮುಖ್ಯ. ಯಾಕೆ? ಐವನ್ ಮತ್ತವನ ಪತ್ನಿ ಡೆಲ್ವಿನ್ ಇದರ ಬಗ್ಗೆ ಏನು ಹೇಳುತ್ತಾರೆಂದು ಕೇಳಿ. ಅವರು ವಿಭಿನ್ನ ಹಿನ್ನಲೆಗಳಿಂದ ಬಂದವರಾಗಿದ್ದರೂ ಅನೇಕ ವರ್ಷಗಳಿಂದ ತಮ್ಮ ವೈವಾಹಿಕ ಜೀವನದಲ್ಲಿ ಆನಂದಿಸುತ್ತಿದ್ದಾರೆ. ತಮ್ಮ ಮದುವೆ ಯೋಜನೆಗಳನ್ನು ನೆನಸಿಕೊಳ್ಳುತ್ತಾ ಐವನ್ ಹೇಳುವುದು: “ನನ್ನ ಮದುವೆ ಹೇಗೆ ನಡೆಯಬೇಕೆಂದು ನಾನು ಮೊದಲೇ ಯೋಜಿಸಿದ್ದೆ. ರಿಸೆಪ್ಷನ್‌ಗೆ ನನ್ನ ಸ್ನೇಹಿತರೆಲ್ಲರನ್ನೂ ಆಮಂತ್ರಿಸಬೇಕು, ವೆಡ್ಡಿಂಗ್ ಕೇಕನ್ನು ಕಟ್ ಮಾಡಬೇಕು, ಹುಡುಗಿಯು ಬಿಳಿ ಗೌನ್ ಧರಿಸಬೇಕು ಎಂದೆಲ್ಲಾ ನಾನು ನೆನಸಿದೆ. ಆದರೆ ಡೆಲ್ವಿನಳಿಗೆ ಇದೆಲ್ಲಾ ಇಷ್ಟವಿರಲಿಲ್ಲ. ಮದುವೆ ಸರಳವಾಗಿರಬೇಕೆಂದು ಅವಳು ಬಯಸಿದಳು. ವೆಡ್ಡಿಂಗ್ ಕೇಕನ್ನು ಸಹ ಬೇಡವೆಂದಳು. ಗೌನ್‌ಗಿಂತಲೂ ಸಾಧಾರಣ ರೀತಿಯ ಬಟ್ಟೆ ಧರಿಸುವುದು ಅವಳ ಆಶೆಯಾಗಿತ್ತು.”
ಈ ಜೋಡಿ ತಮ್ಮ ಮಧ್ಯೆ ಇದ್ದ ಭಿನ್ನತೆಗಳನ್ನು ಹೇಗೆ ಪರಿಹರಿಸಿದರು? ಪ್ರೀತಿಯಿಂದ ಮುಚ್ಚುಮರೆಯಿಲ್ಲದೆ ಸಂವಾದಿಸುವ ಮೂಲಕವೇ. (ಜ್ಞಾನೋಕ್ತಿ 12:18) ಐವನ್ ಹೇಳುವುದು: “ವಿವಾಹದ ಕುರಿತು ಅನೇಕ ಬೈಬಲಾಧಾರಿತ ಲೇಖನಗಳನ್ನು ನಾವು ಒಟ್ಟಾಗಿ ಅಧ್ಯಯನ ಮಾಡಿದೆವು. ಉದಾಹರಣೆಗೆ ಏಪ್ರಿಲ್ 15, 1984ರ ಕಾವಲಿನಬುರುಜುವಿನಲ್ಲಿರುವ ಒಂದು ಲೇಖನವನ್ನು ಪರಿಗಣಿಸಿದೆವು.a ಈ ಲೇಖನಗಳು ಸಮಾರಂಭದ ಬಗ್ಗೆ ಆಧ್ಯಾತ್ಮಿಕ ದೃಷ್ಟಿಕೋನವನ್ನು ಇಟ್ಟುಕೊಳ್ಳುವಂತೆ ನಮಗೆ ಸಹಾಯಮಾಡಿದವು. ನಮ್ಮ ಹಿನ್ನೆಲೆಗಳು ಬೇರೆ ಬೇರೆಯಾಗಿದ್ದರಿಂದ ಅನೇಕ ವೈಯಕ್ತಿಕ ಇಷ್ಟಗಳನ್ನು ಬಿಟ್ಟುಕೊಡಬೇಕಾಯಿತು. ಹೀಗೆ, ನಾವಿಬ್ಬರೂ ನಮ್ಮ ಮನೋಭಾವಗಳನ್ನು ಹೊಂದಿಸಿಕೊಂಡೆವು.”
ಆರೆಟ್ ಮತ್ತು ಪೆನಿ ಕೂಡಾ ಇದನ್ನೇ ಮಾಡಿದರು. ಅವರ ವಿವಾಹದಿನದ ಕುರಿತು ಆರೆಟ್ ಹೇಳಿದ್ದು: “ಮದುವೆದಿನದ ಬಗ್ಗೆ ನನಗೆ ಮತ್ತು ಪೆನಿಗೆ ಇದ್ದ ವಿವಿಧ ಆಶೆಗಳನ್ನು ಇಬ್ಬರೂ ಕೂಡಿ ಚರ್ಚಿಸಿ ಒಮ್ಮತದಿಂದ ಒಂದು ತೀರ್ಮಾನಕ್ಕೆ ಬಂದೆವು. ಆ ದಿನದ ಮೇಲೆ ಯೆಹೋವನ ಆಶೀರ್ವಾದಕ್ಕಾಗಿ ನಾವು ಪ್ರಾರ್ಥಿಸಿದೆವು. ಇದಲ್ಲದೆ ನಾನು ನನ್ನ ಹೆತ್ತವರ ಹಾಗೂ ಸಭೆಯ ಕೆಲವು ಪ್ರೌಢ ವಿವಾಹಿತ ದಂಪತಿಗಳ ಸಲಹೆಯನ್ನು ಕೇಳಿದೆ. ಅವರು ಕೊಟ್ಟ ಸಲಹೆಗಳು ತುಂಬಾ ಸಹಾಯಕರವಾಗಿದ್ದವು. ಅದರ ಫಲಿತಾಂಶವಾಗಿ ನಮ್ಮ ವಿವಾಹವು ಸುಂದರವಾಗಿತ್ತು.”
ಉಡುಪು ಮತ್ತು ಕೇಶಾಲಂಕಾರದಿಂದ ಘನತೆಗೆ ಮೆರಗು
ವಧೂವರರಿಬ್ಬರೂ ಅಂದವಾಗಿ ಉಡುಪು ಧರಿಸಲು ಇಷ್ಟಪಡುವುದು ಒಪ್ಪತಕ್ಕ ಮಾತು. (ಕೀರ್ತನೆ 45:8-15) ಅವರು ತಮಗಿಷ್ಟವಾದ ಡ್ರೆಸ್‌ಗಾಗಿ ಸಮಯ, ಪ್ರಯತ್ನ ಮತ್ತು ಹಣವನ್ನು ವ್ಯಯಿಸಬಹುದು. ಘನತೆಯುಳ್ಳ, ಅದೇ ಸಮಯದಲ್ಲಿ ಆಕರ್ಷಕವಾಗಿರುವ ಬಟ್ಟೆಗಳನ್ನು ಆಯ್ಕೆಮಾಡಲು ಯಾವ ಬೈಬಲ್ ಮೂಲತತ್ತ್ವಗಳು ಅವರಿಗೆ ಸಹಾಯಮಾಡಸಾಧ್ಯವಿದೆ?
ವಧುವಿನ ಉಡುಪಿನ ಕುರಿತು ನಾವೀಗ ಪರಿಗಣಿಸೋಣ. ಈ ವಿಷಯದಲ್ಲಿ ಅಭಿರುಚಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ಆದರೆ, ಇದರ ಕುರಿತು ಬೈಬಲ್ ನೀಡುವ ಬುದ್ಧಿವಾದ ಎಲ್ಲೆಡೆಯಲ್ಲೂ ಅನ್ವಯವಾಗುತ್ತದೆ. ‘ಸ್ತ್ರೀಯರು ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕು.’ ಈ ಬುದ್ಧಿವಾದವು ಕ್ರೈಸ್ತ ಸ್ತ್ರೀಯರಿಗೆ ಎಲ್ಲ ಸಮಯಗಳಲ್ಲೂ ಅನ್ವಯವಾಗುತ್ತದೆ. ಖಂಡಿತವಾಗಿಯೂ ವಿವಾಹದಿನದಲ್ಲಿ ಸಹ! ಆನಂದದ ವಿವಾಹಕ್ಕೆ “ಬೆಲೆಯುಳ್ಳ ವಸ್ತ್ರ” ಅವಶ್ಯವಿಲ್ಲ ಎಂಬುದಂತೂ ನಿಜ. (1 ತಿಮೊಥೆಯ 2:9, 10; 1 ಪೇತ್ರ 3:3, 4) ಈ ಸಲಹೆಯನ್ನು ಅನ್ವಯಿಸುವುದು ಅದೆಷ್ಟು ಸಂತೋಷವನ್ನು ತರುತ್ತದೆ!
ಈ ಮುಂಚೆ ತಿಳಿಸಲಾದ ಡೇವಿಡ್ ಹೇಳುವುದು: “ಹೆಚ್ಚಿನ ದಂಪತಿಗಳು ಬೈಬಲಿನ ಮೂಲತತ್ತ್ವಗಳನ್ನು ಅನುಸರಿಸಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕಾಗಿ ಅವರನ್ನು ಶ್ಲಾಘಿಸಲೇಬೇಕು. ಆದರೆ ಕೆಲವೊಮ್ಮೆ ಮದುವೆಹೆಣ್ಣು, ಅವಳೊಂದಿಗಿರುವ ಗೆಳತಿಯರು ಹಾಕಿಕೊಂಡಿದ್ದ ಬಟ್ಟೆ ಅಸಭ್ಯವಾಗಿತ್ತು. ಅದು ಕತ್ತಿನ ಬಳಿ ಕೆಳಗಿನವರೆಗೂ ತೆರೆದಿರುವ ಅಥವಾ ಮೈತೋರಿಸುವಷ್ಟು ತೆಳುವಾಗಿದದ್ದನ್ನು ಗಮನಿಸಿದ್ದೇನೆ.” ಉಡುಪಿನ ವಿಷಯವನ್ನು ವಧೂವರರು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡುವಂತೆ ಪ್ರೌಢ ಕ್ರೈಸ್ತ ಹಿರಿಯನೊಬ್ಬನು ಸಹಾಯ ನೀಡುತ್ತಾನೆ. ಹೇಗೆ? ಅವರು ಮದುವೆಗೆ ಧರಿಸಲು ಇಚ್ಛಿಸಿರುವ ಉಡುಪು, ಕ್ರೈಸ್ತ ಕೂಟಗಳಿಗೆ ಧರಿಸುವ ಉಡುಪಿನಂತೆ ಸಭ್ಯವಾಗಿದೆಯೊ ಎಂದು ಅವರನ್ನು ಕೇಳುವ ಮೂಲಕವೇ. ಮದುವೆ ಉಡುಪಿನ ಶೈಲಿಯು ಸಾಮಾನ್ಯವಾಗಿ ಕೂಟಗಳಿಗೆ ಧರಿಸುವ ಉಡುಪಿಗಿಂತಲೂ ಭಿನ್ನವಾಗಿದ್ದು, ಸ್ಥಳಿಕ ಪದ್ಧತಿಗನುಸಾರ ಇರಬಹುದು ಎಂಬುದು ನಿಜ. ಆದರೂ, ಅದರ ಸಭ್ಯತೆಯ ಮಟ್ಟವು ಘನತೆಯುಳ್ಳ ಕ್ರೈಸ್ತ ಮಟ್ಟಗಳಿಗೆ ಹೊಂದಿಕೆಯಲ್ಲಿರಬೇಕು. ಬೈಬಲಿನ ನೈತಿಕ ಮೂಲತತ್ತ್ವಗಳು ತುಂಬ ಕಟ್ಟುನಿಟ್ಟಾಗಿವೆ ಎಂದು ಈ ಲೋಕದ ಜನರಿಗೆ ಅನಿಸಬಹುದು. ಆದರೆ, ನಿಜ ಕ್ರೈಸ್ತರು ಈ ಲೋಕದ ನಡವಳಿಕೆಯನ್ನು ಅನುಸರಿಸುವುದಿಲ್ಲ.—ರೋಮಾಪುರ 12:2; 1 ಪೇತ್ರ 4:4.
ಪೆನಿ ಹೇಳುವುದು “ಡ್ರೆಸ್, ರಿಸೆಪ್ಷನ್ ಇವೇ ಪ್ರಾಮುಖ್ಯವೆಂದು ನಾವು ನೆನಸಲಿಲ್ಲ. ನಾನು ಮತ್ತು ಆರೆಟ್ ಆ ಸಮಾರಂಭದ ಆಧ್ಯಾತ್ಮಿಕ ಭಾಗಕ್ಕೆ ಗಮನ ಕೊಟ್ಟೇವು. ಅದೇ ಆ ದಿನ ಅತಿ ಪ್ರಾಮುಖ್ಯವಾಗಿತ್ತು. ಆ ದಿನ ನಾನು ಏನು ಧರಿಸಿದೆ, ಏನು ತಿಂದೆ ಎಂಬುದು ನನಗೆ ಅಷ್ಟಾಗಿ ನೆನಪಿಲ್ಲ. ಆದರೆ ನಾನು ಯಾರೊಟ್ಟಿಗೆ ಇದ್ದೆ ಮತ್ತು ನನ್ನ ಮನಮೆಚ್ಚಿದವನನ್ನು ಕೈಹಿಡಿದಾಗ ನನಗಾದ ಸಂತೋಷವೇ ಸವಿನೆನಪಾಗಿ ಉಳಿದಿದೆ.” ವಿವಾಹಕ್ಕಾಗಿ ಯೋಜಿಸುತ್ತಿರುವ ಕ್ರೈಸ್ತ ಜೋಡಿಗಳು ಇಂಥ ವಿಚಾರಗಳನ್ನೇ ಮನಸ್ಸಿನಲ್ಲಿಡುವುದು ಒಳ್ಳೇದು.
ರಾಜ್ಯ ಸಭಾಗೃಹ—ಘನತೆಯುಳ್ಳ ಒಂದು ಸ್ಥಳ
ಲಭ್ಯವಿರುವಲ್ಲಿ, ರಾಜ್ಯ ಸಭಾಗೃಹದಲ್ಲಿ ತಮ್ಮ ಮದುವೆಯನ್ನು ನಡೆಸಲು ಅನೇಕ ಕ್ರೈಸ್ತ ದಂಪತಿಗಳು ಇಷ್ಟಪಡುತ್ತಾರೆ. ಯಾಕೆ? ಒಂದು ದಂಪತಿ ಇದಕ್ಕಿರುವ ಕಾರಣವನ್ನು ಹೀಗೆ ವಿವರಿಸಿದರು: “ವಿವಾಹವು ಯೆಹೋವನ ಪವಿತ್ರ ಏರ್ಪಾಡಾಗಿದೆ ಎಂಬುದನ್ನು ನಾವು ಮನಗಂಡೆವು. ನಮ್ಮ ಆರಾಧನ ಸ್ಥಳವಾದ ರಾಜ್ಯ ಸಭಾಗೃಹದಲ್ಲಿ ನಾವು ಮದುವೆಯಾದದ್ದು ಯೆಹೋವನು ನಮ್ಮ ವಿವಾಹದ ಒಂದು ಭಾಗವಾಗಿರಬೇಕೆಂಬ ಅಂಶವನ್ನು ಆರಂಭದಿಂದಲೇ ಮನಸ್ಸಿನಲ್ಲಿ ಅಚ್ಚೊತ್ತಿಸಲು ಸಹಾಯಮಾಡಿತು. ಮದುವೆಯನ್ನು ಬೇರೆ ಸ್ಥಳಕ್ಕಿಂತ ರಾಜ್ಯ ಸಭಾಗೃಹದಲ್ಲಿಯೇ ನಡಿಸಿದ್ದರಿಂದ ಇನ್ನೊಂದು ಪ್ರಯೋಜನವಾಯಿತು. ಅದು ಯೆಹೋವನ ಆರಾಧನೆ ನಮಗೆಷ್ಟು ಪ್ರಾಮುಖ್ಯವೆಂಬುದನ್ನು ವಿಶ್ವಾಸಿಗಳಲ್ಲದ ಸಂಬಂಧಿಕರಿಗೆ ತೋರಿಸಿಕೊಟ್ಟಿತು.”
ರಾಜ್ಯ ಸಭಾಗೃಹದಲ್ಲಿ ವಿವಾಹ ನಡೆಸಲು ಜವಾಬ್ದಾರಿತ ಸಭಾ ಹಿರಿಯರು ಅನುಮತಿಸುವುದಾದರೆ ಮದುವೆಯಾಗುತ್ತಿರುವವರು ತಾವು ಯೋಜಿಸುತ್ತಿರುವ ಎಲ್ಲ ಏರ್ಪಾಡುಗಳನ್ನು ಮುಂಚಿತವಾಗಿಯೇ ಅವರಿಗೆ ತಿಳಿಸಬೇಕು. ಮದುವೆಗೆ ಹಾಜರಾಗಿರುವವರಿಗೆ ವಧೂವರರು ಗೌರವ ತೋರಿಸಸಾಧ್ಯವಿರುವ ಒಂದು ವಿಧ ಯಾವುದು? ಅವರಿಬ್ಬರೂ ವಿವಾಹದ ನೇಮಿತ ಸಮಯಕ್ಕೆ ಸರಿಯಾಗಿ ಬರುವ ಮೂಲಕವೇ. ಇದಲ್ಲದೆ, ಪ್ರತಿಯೊಂದು ವಿಷಯವು ಘನಮಾನದಿಂದ ನಡೆಯುವುದನ್ನು ಅವರು ಖಚಿತಪಡಿಸಿಕೊಳ್ಳಲು ಬಯಸುವರು.b (1 ಕೊರಿಂಥ 14:40) ಅವರು ಹೀಗೆ, ಲೋಕದ ಜನರ ವಿವಾಹಗಳಲ್ಲಿ ನಡೆಯುವಂಥ ಯಾವುದೇ ಅಸಭ್ಯತೆಯ ವಿಷಯಗಳನ್ನು ತಪ್ಪಿಸುವರು.—1 ಯೋಹಾನ 2:15, 16.
ವಿವಾಹದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ತಮಗೂ ಇದೆಯೆಂದು ಮದುವೆಗೆ ಹಾಜರಾಗುವವರು ಕೂಡ ತೋರಿಸಸಾಧ್ಯವಿದೆ. ಉದಾಹರಣೆಗೆ, ಅವರು ಇತರ ಕ್ರೈಸ್ತ ವಿವಾಹಗಳನ್ನು ಮೀರಿಸುವಂಥ ರೀತಿಯಲ್ಲಿ ಈ ವಿವಾಹವು ಆಡಂಭರವಾಗಿರಬೇಕೆಂದು ಎದುರುನೋಡಬಾರದು ಇಲ್ಲವೆ ಯಾರ ಮದುವೆ ಅದ್ದೂರಿಯಾಗಿತ್ತು ಎಂಬ ಪೈಪೋಟಿಯನ್ನು ಉಂಟುಮಾಡಬಾರದು. ಮದುವೆಯೂಟ ಅಥವಾ ವಿವಾಹದ ನಂತರ ಇರಬಹುದಾದ ಯಾವುದೇ ಪಾರ್ಟಿಗಿಂತಲೂ ಬೈಬಲಾಧಾರಿತ ಭಾಷಣ ಕೇಳಲು ರಾಜ್ಯ ಸಭಾಗೃಹದಲ್ಲಿ ಹಾಜರಿರುವುದು ಹೆಚ್ಚು ಪ್ರಾಮುಖ್ಯ ಮತ್ತು ಪ್ರಯೋಜನದಾಯಕ ಎಂಬುದನ್ನು ಕೂಡ ಪ್ರೌಢ ಕ್ರೈಸ್ತರು ಮನಗಂಡಿದ್ದಾರೆ. ಒಬ್ಬ ಕ್ರೈಸ್ತನಿಗೆ ರಾಜ್ಯ ಸಭಾಗೃಹ ಇಲ್ಲವೆ ಪಾರ್ಟಿ—ಇವೆರಡರಲ್ಲಿ ಒಂದನ್ನು ಮಾತ್ರ ಹಾಜರಾಗುವ ಪರಿಸ್ಥಿತಿ ಏಳುವಲ್ಲಿ ರಾಜ್ಯ ಸಭಾಗೃಹಕ್ಕೆ ಹಾಜರಾಗುವುದೇ ಅತಿ ಯೋಗ್ಯ. ವಿಲಿಯಮ್ ಎಂಬ ಹಿರಿಯನೊಬ್ಬನು ಹೇಳುವುದು: “ಅತಿಥಿಗಳು ರಾಜ್ಯ ಸಭಾಗೃಹಕ್ಕೆ ಆಗಮಿಸದೆ ರಿಸೆಪ್ಷನ್‌ಗೆ ಮಾತ್ರ ಬರುವಲ್ಲಿ, ಅದು ಆ ಸಮಾರಂಭದ ಪವಿತ್ರತೆಯನ್ನು ಅವರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂಬುದನ್ನು ತೋರಿಸುತ್ತದೆ. ನಾವು ರಿಸೆಪ್ಷನ್‌ಗೆ ಆಮಂತ್ರಿಸಲ್ಪಡದಿದ್ದರೂ ರಾಜ್ಯ ಸಭಾಗೃಹದ ಕಾರ್ಯಕ್ರಮಕ್ಕೆ ಹಾಜರಾಗುವ ಮೂಲಕ ವಧೂವರರಿಗೆ ನಮ್ಮ ಬೆಂಬಲವನ್ನು ತೋರಿಸಸಾಧ್ಯವಿದೆ. ಇದರಿಂದ ಅವಿಶ್ವಾಸಿ ಸಂಬಂಧಿಕರಿಗೂ ಉತ್ತಮ ಸಾಕ್ಷಿಯನ್ನು ಕೊಡಸಾಧ್ಯವಿದೆ.”
ವಿವಾಹದಿನದ ಅನಂತರವೂ ಉಳಿಯುವ ಸಂತೋಷ
ವಾಣಿಜ್ಯ ಜಗತ್ತು ವಿವಾಹ ಸಮಾರಂಭವನ್ನು ಒಂದು ದೊಡ್ಡ ವ್ಯಾಪಾರ ಉದ್ಯಮವಾಗಿ ಮಾಡಿದೆ. ಇತ್ತೀಚಿನ ಒಂದು ವರದಿಗನುಸಾರ ಅಮೆರಿಕದಲ್ಲಿ ಮದುವೆಗೆ ಸರಾಸರಿ “22,000 ಡಾಲರ್ ಅಥವಾ ಒಂದು ಕುಟುಂಬದ ಸರಾಸರಿ ವಾರ್ಷಿಕ ವರಮಾನದ ಅರ್ಧದಷ್ಟು ಖರ್ಚಾಗುತ್ತದೆ.” ವಾಣಿಜ್ಯ ಜಾಹೀರಾತಿನ ಪ್ರಭಾವಕ್ಕೆ ಮರುಳಾಗಿ ಅನೇಕ ನವದಂಪತಿಗಳು ಅಥವಾ ಅವರ ಕುಟುಂಬದವರು ಆ ಒಂದು ದಿನಕ್ಕಾಗಿ ಭಾರಿ ಮೊತ್ತದ ಸಾಲ ಮಾಡುತ್ತಾರೆ. ಅನಂತರ ವರ್ಷಾನುಗಟ್ಟಲೆ ಆ ಸಾಲದ ಭಾರವನ್ನು ಹೊರುತ್ತಾರೆ. ಒಬ್ಬನು ವೈವಾಹಿಕ ಜೀವನವನ್ನು ಹೀಗೆ ಆರಂಭಿಸುವುದು ವಿವೇಕಯುತವೊ? ಬೈಬಲಿನ ಮೂಲತತ್ತ್ವಗಳನ್ನು ಅರಿಯದವರು ಇಲ್ಲವೆ ಅವನ್ನು ಅಲಕ್ಷ್ಯಮಾಡುವವರು ಇಂಥ ದುಂದುವೆಚ್ಚಗಳನ್ನು ಮಾಡಬಯಸಬಹುದು. ಕ್ರೈಸ್ತರಾದರೋ ಎಷ್ಟು ಭಿನ್ನರು!
ಅನೇಕ ಕ್ರೈಸ್ತ ದಂಪತಿಗಳು ತಮ್ಮ ವಿವಾಹಕ್ಕೆ ಹೆಚ್ಚು ಮಂದಿಯನ್ನು ಆಮಂತ್ರಿಸಿ ಆಡಂಭರವಾಗಿ ನಡೆಸದೆ, ಇತಿ-ಮಿತಿಯಾಗಿ ಖರ್ಚುಮಾಡಿ ಸಮಾರಂಭವನ್ನು ಸರಳವಾಗಿಟ್ಟು ಆಧ್ಯಾತ್ಮಿಕ ವಿಷಯಕ್ಕೆ ಹೆಚ್ಚು ಗಮನಕೊಟ್ಟಿದ್ದಾರೆ. ಈ ಮೂಲಕ ಅವರು ತಮ್ಮ ಸಮಯ ಸಂಪತ್ತನ್ನು ದೇವರಿಗೆ ಮಾಡಿಕೊಂಡಿರುವ ತಮ್ಮ ಸಮರ್ಪಣೆಗನುಸಾರವಾಗಿ ಉಪಯೋಗಿಸಲು ಶಕ್ತರಾಗಿದ್ದಾರೆ. (ಮತ್ತಾಯ 6:33) ಲಾಯ್ಡ್ ಮತ್ತು ಅಲೆಕ್ಸಾಂಡ್ರರ ಉದಾಹರಣೆಯನ್ನು ಪರಿಗಣಿಸಿರಿ. ಇವರಿಬ್ಬರೂ ತಮ್ಮ ವಿವಾಹದ ಬಳಿಕ 17 ವರ್ಷಗಳಿಂದ ಪೂರ್ಣಸಮಯದ ಶುಶ್ರೂಷೆಯನ್ನು ಮಾಡುತ್ತಾ ಇದ್ದಾರೆ. ಲಾಯ್ಡ್ ಹೇಳುವುದು: “ನಮ್ಮ ಮದುವೆಯು ತೀರ ಸರಳವಾಗಿತ್ತೆಂದು ಅನೇಕರು ನೆನಸಿರಬಹುದು. ಆದರೆ ನನಗೆ ಮತ್ತು ಅಲೆಕ್ಸಾಂಡ್ರಗೆ ಅದು ತುಂಬ ಸಂತೋಷ ತಂದಿತು. ನಮ್ಮ ವಿವಾಹದಿನವು ನಮ್ಮ ಹೆಗಲ ಮೇಲೆ ಯಾವುದೇ ಸಾಲದ ಹೊರೆಯನ್ನು ಹೊರಿಸದೇ, ಇಬ್ಬರು ವ್ಯಕ್ತಿಗಳಿಗೆ ಸಂತೋಷವನ್ನು ತರುವ ಯೆಹೋವನ ಏರ್ಪಾಡಿನ ಆಚರಣೆಯಾಗಿರಬೇಕೆಂದು ನಾವು ಬಯಸಿದೆವು.”
ಅಲೆಕ್ಸಾಂಡ್ರ ಕೂಡಿಸುವುದು: “ವಿವಾಹವಾಗುವುದಕ್ಕೆ ಮುಂಚೆ ನಾನು ಪಯನೀಯರಳಾಗಿದ್ದೆ. ಆ ಸೇವಾ ಭಾಗ್ಯವನ್ನು ಕೇವಲ ಒಂದು ಮದುವೆಯ ದುಂದುವೆಚ್ಚಕ್ಕಾಗಿ ಬಿಟ್ಟುಬಿಡಲು ನಾನು ಸಿದ್ಧಳಿರಲಿಲ್ಲ. ನಮ್ಮ ವಿವಾಹದಿನವು ಮರೆಯಲಾಗದ ವಿಶೇಷದಿನವಾಗಿತ್ತು. ಆದರೂ ಅದು ನಮ್ಮ ದಾಂಪತ್ಯ ಬದುಕಿನ ಆರಂಭದ ದಿನವಾಗಿತ್ತಷ್ಟೇ. ನಾವು ವಿವಾಹಸಮಾರಂಭಕ್ಕೆ ಹೆಚ್ಚು ಗಮನ ಕೊಡಬಾರದೆಂಬ ಬುದ್ಧಿವಾದವನ್ನು ಪಾಲಿಸಿದೆವು. ನಮ್ಮ ವೈವಾಹಿಕಜೀವನದ ಕುರಿತು ಯೆಹೋವನ ಮಾರ್ಗದರ್ಶನವನ್ನು ಹುಡುಕಿದೆವು. ಇದು ಖಂಡಿತವಾಗಿಯೂ ನಮಗೆ ಯೆಹೋವನ ಆಶೀರ್ವಾದವನ್ನು ತಂದಿದೆ.”c
ಹೌದು, ನಿಮ್ಮ ವಿವಾಹದಿನವು ಒಂದು ವಿಶೇಷ ಸಂದರ್ಭವಾಗಿದೆ. ಆ ದಿನದಲ್ಲಿನ ನಡತೆ ಮತ್ತು ಕ್ರಿಯೆಗಳು ನಿಮ್ಮ ಮುಂದಿನ ಸುಮಧುರ ದಾಂಪತ್ಯ ಬದುಕಿಗೆ ಒಂದು ಆದರ್ಶವಾಗಿರಬಲ್ಲದು. ಆದುದರಿಂದ ಮಾರ್ಗದರ್ಶನಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳಿರಿ. (ಜ್ಞಾನೋಕ್ತಿ 3:5, 6) ಆ ದಿನಕ್ಕಿರುವ ಆಧ್ಯಾತ್ಮಿಕ ಮಹತ್ವವನ್ನು ನಿಮ್ಮ ಮನಸ್ಸಿನಲ್ಲಿ ಪ್ರಥಮವಾಗಿಡಿರಿ. ದೇವರು ನಿಮಗೆ ವಹಿಸಿರುವ ಪಾತ್ರಗಳಲ್ಲಿ ಪರಸ್ಪರ ಬೆಂಬಲಿಸಿರಿ. ಹೀಗೆ, ನಿಮ್ಮ ವಿವಾಹಕ್ಕೆ ಸ್ಥಿರವಾದ ಬುನಾದಿಯನ್ನು ಹಾಕಲು ನಿಮ್ಮಿಂದ ಸಾಧ್ಯವಾಗುತ್ತದೆ ಮತ್ತು ಯೆಹೋವನ ಆಶೀರ್ವಾದದೊಂದಿಗೆ ವಿವಾಹದಿನದ ಅನಂತರವೂ ಬಾಳಲಿರುವ ಆನಂದವು ನಿಮ್ಮದಾಗುವುದು.—ಜ್ಞಾನೋಕ್ತಿ 18:22. (w06 10/15)
[ಪಾದಟಿಪ್ಪಣಿಗಳು]
a ಹೆಚ್ಚಿನ ವಿಷಯವು ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾದ ಫೆಬ್ರವರಿ 8, 2002ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯಲ್ಲಿದೆ.
b ರಾಜ್ಯ ಸಭಾಗೃಹದಲ್ಲಿ ನಡೆಯುವ ವಿವಾಹ ಸಮಾರಂಭದ ಫೊಟೋಗ್ರಾಫ್ ಅಥವಾ ವಿಡಿಯೋ ರೆಕಾರ್ಡ್‌ಗಳನ್ನು ಮಾಡಲು ದಂಪತಿಗಳು ಬಯಸುವಲ್ಲಿ, ಅವು ಸಮಾರಂಭದ ಘನತೆಗೆ ಕುಂದುತರದಂತಹ ರೀತಿಯಲ್ಲಿ ಮುನ್ನೇರ್ಪಾಡುಗಳನ್ನು ಮಾಡತಕ್ಕದ್ದು.
c ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾಗಿರುವ ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕದ ಪುಟ 26ನ್ನು ನೋಡಿರಿ.
[ಪುಟ 21ರಲ್ಲಿರುವ ಚಿತ್ರ]
ವಿವಾಹವಾಗುತ್ತಿರುವ ಜೋಡಿಯು ತಮ್ಮ ವಿವಾಹ ಯೋಜನೆಯ ಕುರಿತು ಗೌರವದಿಂದ ಮುಕ್ತವಾಗಿ ಸಂವಾದಿಸಬೇಕು
[ಪುಟ 23ರಲ್ಲಿರುವ ಚಿತ್ರ]
ಮುಖ್ಯವಾಗಿ ವಿವಾಹದಿನದ ಆಧ್ಯಾತ್ಮಿಕ ಮಹತ್ವವು ನಿಮ್ಮ ಮನಸ್ಸಿನಲ್ಲಿರಲಿ
-