ಪಾಠ 74
ಯೇಸು ಮೆಸ್ಸೀಯನಾದನು
‘ತನಗಿಂತ ದೊಡ್ಡವನೊಬ್ಬ ಬರುವನು’ ಎಂದು ಯೋಹಾನ ಸಾರುತ್ತಿದ್ದನು. ಯೇಸು 30 ವರ್ಷದವನಾಗಿದ್ದಾಗ ಗಲಿಲಾಯದ ಯೋರ್ದನ್ ನದಿಗೆ ಬಂದನು. ಅಲ್ಲಿ ಯೋಹಾನ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಯೇಸು ತನಗೂ ದೀಕ್ಷಾಸ್ನಾನ ಮಾಡಿಸುವಂತೆ ಕೇಳಿಕೊಂಡನು. ಅದಕ್ಕೆ ಯೋಹಾನ ‘ನಾನು ನಿನಗೆ ದೀಕ್ಷಾಸ್ನಾನ ಮಾಡಿಸಬಾರದು. ನೀನೇ ನನಗೆ ದೀಕ್ಷಾಸ್ನಾನ ಮಾಡಿಸಬೇಕು’ ಅಂದನು. ಅದಕ್ಕೆ ಯೇಸು ‘ನೀನು ನನಗೆ ದೀಕ್ಷಾಸ್ನಾನ ಮಾಡಿಸಬೇಕೆನ್ನುವುದು ಯೆಹೋವನ ಇಚ್ಛೆ’ ಅಂದನು. ಯೇಸು ಮತ್ತು ಯೋಹಾನ ಇಬ್ಬರೂ ಯೋರ್ದನ್ ನದಿಗೆ ಹೋದರು. ಯೋಹಾನನು ಯೇಸುವನ್ನು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸುವ ಮೂಲಕ ದೀಕ್ಷಾಸ್ನಾನ ಮಾಡಿಸಿದನು.
ಯೇಸು ನೀರಿನಿಂದ ಮೇಲೆ ಬಂದಾಗ ಯೆಹೋವನಿಗೆ ಪ್ರಾರ್ಥಿಸಿದನು. ಆ ಕ್ಷಣವೇ ಆಕಾಶವು ತೆರೆಯಿತು. ದೇವರ ಪವಿತ್ರಶಕ್ತಿ ಪಾರಿವಾಳದಂತೆ ಯೇಸುವಿನ ಮೇಲೆ ಬಂತು. ನಂತರ ಯೆಹೋವನು ಸ್ವರ್ಗದಿಂದ ‘ನೀನು ನನ್ನ ಪ್ರೀತಿಯ ಮಗ. ನೀನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ’ ಎಂದು ಹೇಳಿದನು.
ಯೇಸುವಿನ ಮೇಲೆ ಯೆಹೋವನ ಪವಿತ್ರಶಕ್ತಿ ಬಂದಾಗ ಅವನು ಕ್ರಿಸ್ತ ಅಥವಾ ಮೆಸ್ಸೀಯನಾದನು. ಯೆಹೋವನು ಯೇಸುವನ್ನು ಭೂಮಿಗೆ ಯಾವ ಕೆಲಸಕ್ಕಾಗಿ ಕಳುಹಿಸಿದ್ದನೋ ಆ ಕೆಲಸವನ್ನು ಯೇಸು ಮಾಡಲು ಆರಂಭಿಸಿದನು.
ದೀಕ್ಷಾಸ್ನಾನ ಆದ ತಕ್ಷಣ ಯೇಸು ಕಾಡಿಗೆ ಹೋಗಿ 40 ದಿನ ಅಲ್ಲೇ ಇದ್ದನು. ಅವನು ಕಾಡಿನಿಂದ ತಿರುಗಿ ಬಂದ ಮೇಲೆ ಯೋಹಾನನನ್ನು ನೋಡಲು ಹೋದನು. ಯೇಸು ತನ್ನ ಕಡೆ ಬರುತ್ತಿರುವುದನ್ನು ನೋಡಿದ ಯೋಹಾನ ‘ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ ಇವನೇ’ ಅಂದನು. ಯೇಸುವೇ ಮೆಸ್ಸೀಯ ಎಂದು ಜನರು ತಿಳಿದುಕೊಳ್ಳುವಂತೆ ಯೋಹಾನ ಹೀಗೆ ಹೇಳಿದನು. ಯೇಸು ಕಾಡಿನಲ್ಲಿ ಇದ್ದಾಗ ಏನಾಯಿತು ಗೊತ್ತಾ? ಮುಂದಿನ ಅಧ್ಯಾಯದಲ್ಲಿ ತಿಳಿಯೋಣ.
“ಸ್ವರ್ಗದಿಂದ ‘ನೀನು ನನ್ನ ಪ್ರೀತಿಯ ಮಗ. ನೀನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ’ ಅನ್ನೋ ಧ್ವನಿ ಕೇಳಿಸ್ತು.”—ಮಾರ್ಕ 1:11