ಪಾಠ 26
ಹನ್ನೆರಡು ಗೂಢಚಾರರು
ಇಸ್ರಾಯೇಲ್ಯರು ಸಿನಾಯಿ ಬೆಟ್ಟದಿಂದ ಹೊರಟು ಪಾರಾನ್ ಮರುಭೂಮಿಯನ್ನು ದಾಟಿ ಕಾದೇಶ್ ಎಂಬ ಸ್ಥಳಕ್ಕೆ ಬಂದರು. ಅಲ್ಲಿ ಯೆಹೋವನು ಮೋಶೆಗೆ ‘ನಾನು ಇಸ್ರಾಯೇಲ್ಯರಿಗೆ ಕೊಡೋ ಕಾನಾನ್ ದೇಶವನ್ನ ನೋಡ್ಕೊಂಡು ಬರೋಕೆ ಪ್ರತಿಯೊಂದು ಕುಲದಿಂದ ಒಬ್ಬೊಬ್ಬ ಪ್ರಧಾನನನ್ನ ಆರಿಸಿ, 12 ಗಂಡಸರನ್ನ ಕಳುಹಿಸು’ ಎಂದನು. ಈ ಕೆಲಸಕ್ಕೆ ಹೋಗುವವರನ್ನು ಗೂಢಚಾರರು ಎನ್ನುವರು. ಆದ್ದರಿಂದ ಮೋಶೆ 12 ಗಂಡಸರನ್ನ ಆರಿಸಿ ಅವರಿಗೆ ‘ನೀವು ಕಾನಾನಿಗೆ ಹೋಗಿ. ಆ ದೇಶದಲ್ಲಿ ಬೆಳೆ ಚೆನ್ನಾಗಿ ಬೆಳೆಯುತ್ತಾ, ಅಲ್ಲಿನ ಜನ ಬಲಶಾಲಿಗಳಾ ಬಲಹೀನರಾ, ಡೇರೆಯಲ್ಲಿ ವಾಸಿಸುತ್ತಿದ್ದಾರಾ ಅಥವಾ ಪಟ್ಟಣಗಳಲ್ಲಿ ಇದ್ದಾರಾ ಎಂದು ನೋಡಿಕೊಂಡು ಬನ್ನಿ’ ಅಂದನು. ಕಾನಾನಿಗೆ ಹೋದ 12 ಗೂಢಚಾರರಲ್ಲಿ ಯೆಹೋಶುವ ಮತ್ತು ಕಾಲೇಬ ಸಹ ಇದ್ದರು.
40 ದಿನಗಳ ನಂತರ ಗೂಢಚಾರರು ಹಿಂದಿರುಗಿ ಬಂದರು. ಬರುವಾಗ ಅಂಜೂರ, ದಾಳಿಂಬೆ, ದ್ರಾಕ್ಷೀ ಹಣ್ಣುಗಳನ್ನು ತೆಗೆದುಕೊಂಡು ಬಂದರು. ಗೂಢಚಾರರು ಮೋಶೆಗೆ ‘ಅದು ನಿಜವಾಗಿಯೂ ಉತ್ತಮವಾದ ದೇಶ. ಆದ್ರೆ ಆ ದೇಶದ ಜನ ಬಲಿಷ್ಠರು. ಅಲ್ಲಿ ಭದ್ರ ಕೋಟೆಗಳಿರೋ ದೊಡ್ಡದೊಡ್ಡ ಪಟ್ಟಣಗಳಿವೆ’ ಎಂದರು. ಆಗ ಕಾಲೇಬ ‘ನಾವು ಅವರನ್ನು ಸೊಲಿಸಬಹುದು. ಬನ್ನಿ, ಈಗ್ಲೇ ಹೋಗಿ ದಾಳಿ ಮಾಡೋಣ!’ ಅಂದನು. ಕಾಲೇಬ ಯಾಕೆ ಹಾಗೆ ಹೇಳಿದ ಎಂದು ಗೊತ್ತಾ? ಏಕೆಂದರೆ ಕಾಲೇಬ ಮತ್ತು ಯೆಹೋಶುವನಿಗೆ ಯೆಹೋವನಲ್ಲಿ ಭರವಸೆ ಇತ್ತು. ಆದರೆ ಉಳಿದ 10 ಗೂಢಚಾರರು ‘ಇಲ್ಲ! ಅಲ್ಲಿರುವ ಜನ್ರು ತುಂಬ ಎತ್ತರವಾಗಿ, ಬಲಿಷ್ಠರಾಗಿ ಇದ್ದಾರೆ! ಅವ್ರ ಮುಂದೆ ನಾವು ಮಿಡತೆಗಳ ತರ ಇದ್ದೀವಿ’ ಎಂದರು.
ಇದನ್ನು ಕೇಳಿದಾಗ ಇಸ್ರಾಯೇಲ್ಯರಿಗೆ ಭಯ ಆಯಿತು. ಅವರು ಗುಣುಗುಟ್ಟುತ್ತಾ ಒಬ್ಬರಿಗೊಬ್ಬರು ‘ನಾವೇ ಒಬ್ಬ ನಾಯಕನನ್ನ ಆರಿಸ್ಕೊಂಡು ಈಜಿಪ್ಟ್ಗೆ ವಾಪಸ್ ಹೋಗೋಣ. ನಾವು ಕಾನಾನ್ ದೇಶಕ್ಕೆ ಹೋಗಿ ಆ ದೇಶದವರ ಕೈಯಿಂದ ಯಾಕೆ ಸಾಯಬೇಕು?’ ಅಂದರು. ಆಗ ಯೆಹೋಶುವ ಮತ್ತು ಕಾಲೇಬ ‘ಯೆಹೋವನ ವಿರುದ್ಧ ದಂಗೆ ಏಳಬೇಡಿ. ಹೆದರಬೇಡಿ. ಆತನು ನಮ್ಮನ್ನು ಖಂಡಿತ ಕಾಪಾಡುತ್ತಾನೆ’ ಎಂದರು. ಆದರೆ ಇಸ್ರಾಯೇಲ್ಯರು ಅವರ ಮಾತು ಕೇಳಲಿಲ್ಲ. ಅವರು ಯೆಹೋಶುವ ಮತ್ತು ಕಾಲೇಬನನ್ನು ಕೊಲ್ಲಬೇಕು ಅಂದುಕೊಂಡರು!
ಯೆಹೋವನು ಏನು ಮಾಡಿದ? ಆತನು ಮೋಶೆಗೆ ‘ನಾನು ಇಸ್ರಾಯೇಲ್ಯರಿಗಾಗಿ ಇಷ್ಟೆಲ್ಲಾ ಮಾಡಿದರೂ ಅವರು ಇನ್ನೂ ನನ್ನ ಮಾತನ್ನು ಕೇಳುತ್ತಿಲ್ಲ. ಆದ್ದರಿಂದ ಅವರು 40 ವರ್ಷ ಕಾಡಲ್ಲೇ ಇದ್ದು ಅಲ್ಲೇ ಸಾಯಬೇಕು. ಅವರ ಮಕ್ಕಳು ಮತ್ತು ಯೆಹೋಶುವ-ಕಾಲೇಬರು ಮಾತ್ರ ನಾನು ಮಾತು ಕೊಟ್ಟ ಆ ದೇಶಕ್ಕೆ ಹೋಗುತ್ತಾರೆ’ ಎಂದನು.
“ನಂಬಿಕೆ ಕೊರತೆ ಇರುವವರೇ, ಯಾಕಿಷ್ಟು ಹೆದರುತ್ತಾ ಇದ್ದೀರಾ?”—ಮತ್ತಾಯ 8:26