ಪಾಠ 70
ಯೇಸು ಹುಟ್ಟಿದನೆಂದು ದೇವದೂತರು ತಿಳಿಸುತ್ತಾರೆ
ರೋಮನ್ ಸಾಮ್ರಾಜ್ಯದ ರಾಜನಾದ ಅಗಸ್ಟಸ್ ಒಂದು ಆಜ್ಞೆ ಕೊಟ್ಟ. ಅದೇನೆಂದರೆ ಎಲ್ಲಾ ಯೆಹೂದ್ಯರು ತಮ್ಮತಮ್ಮ ಸ್ವಂತ ಊರುಗಳಿಗೆ ಹೋಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಅಂತ. ಆದ್ದರಿಂದ ಯೋಸೇಫ ಮತ್ತು ಮರಿಯಳು ಯೋಸೇಫನ ಸ್ವಂತ ಊರಾದ ಬೆತ್ಲೆಹೇಮಿಗೆ ಪ್ರಯಾಣಿಸುತ್ತಾರೆ. ಆಗ ಮರಿಯಳು ತುಂಬು ಗರ್ಭಿಣಿ.
ಅವರು ಬೆತ್ಲೆಹೇಮನ್ನು ತಲುಪಿದಾಗ ಅವರಿಗೆ ಉಳಿದುಕೊಳ್ಳಲು ಪ್ರಾಣಿಗಳು ಇರುವ ಕೊಟ್ಟಿಗೆ ಬಿಟ್ಟು ಬೇರೆ ಯಾವ ಸ್ಥಳವೂ ಸಿಗಲಿಲ್ಲ. ಅಲ್ಲೇ ಮರಿಯಳು ಯೇಸುವನ್ನು ಹೆತ್ತಳು. ಅವಳು ಅವನನ್ನು ಮೆತ್ತನೆಯ ಬಟ್ಟೆಯಲ್ಲಿ ಸುತ್ತಿ ನಿಧಾನವಾಗಿ ಮೇವು ಹಾಕೋ ಸ್ಥಳದಲ್ಲಿ ಮಲಗಿಸಿದಳು.
ಬೆತ್ಲೆಹೇಮಿನ ಹತ್ತಿರದಲ್ಲೇ ಕೆಲವು ಕುರುಬರು ತಮ್ಮ ಕುರಿಗಳನ್ನು ಕಾಯುತ್ತಾ ಹೊರಗೆ ಹೊಲದಲ್ಲಿದ್ದರು. ಇದ್ದಕ್ಕಿದ್ದಂತೆ ಅವರಿಗೆ ಒಬ್ಬ ದೇವದೂತ ಕಾಣಿಸಿಕೊಂಡನು ಮತ್ತು ಅವರನ್ನು ಯೆಹೋವನ ಮಹಿಮೆಯ ಬೆಳಕು ಸುತ್ತುವರಿಯಿತು. ಕುರುಬರಿಗೆ ಭಯವಾಯಿತು, ಆಗ ದೇವದೂತನು: ‘ಹೆದ್ರಬೇಡಿ, ಒಂದು ವಿಶೇಷ ಸುದ್ದಿ ಇದೆ. ಇವತ್ತು ಬೆತ್ಲೆಹೇಮಿನಲ್ಲಿ ಮೆಸ್ಸೀಯನು ಹುಟ್ಟಿದ್ದಾನೆ’ ಅಂದನು. ಕೂಡಲೇ ಆಕಾಶದಲ್ಲಿ ಅನೇಕ ದೇವದೂತರು ಕಾಣಿಸಿಕೊಂಡು, ‘ಸ್ವರ್ಗದಲ್ಲಿ ದೇವರಿಗೆ ಮಹಿಮೆ ಸಿಗಲಿಮತ್ತು ಭೂಮಿಯಲ್ಲಿ ಶಾಂತಿ ಸಿಗಲಿ’ ಎಂದರು. ನಂತರ ದೇವದೂತರು ಕಣ್ಮರೆಯಾದರು. ಈಗ ಆ ಕುರುಬರು ಏನು ಮಾಡಿದರು ಗೊತ್ತಾ?
ಕುರುಬರು, ‘ನಾವು ಈಗಲೇ ಬೆತ್ಲೆಹೇಮಿಗೆ ಹೋಗೋಣ’ ಅಂತ ಮಾತಾಡಿಕೊಂಡರು. ಅವರು ಕೂಡಲೇ ಅಲ್ಲಿಗೆ ಹೋಗಿ ಕೊಟ್ಟಿಗೆಯಲ್ಲಿ ಯೋಸೇಫ, ಮರಿಯಳನ್ನು ಮತ್ತು ಪುಟ್ಟ ಕಂದ ಯೇಸುವನ್ನೂ ನೋಡಿದರು.
ದೇವದೂತನು ಕುರುಬರಿಗೆ ಹೇಳಿದ ಮಾತಿನ ಬಗ್ಗೆ ಕೇಳಿಸಿಕೊಂಡವರೆಲ್ಲರೂ ಆಶ್ಚರ್ಯಪಟ್ಟರು. ದೇವದೂತ ಹೇಳಿದ ಮಾತಿನ ಬಗ್ಗೆ ಮರಿಯಳು ತುಂಬ ಯೋಚಿಸಿದಳು ಮತ್ತು ಅದನ್ನು ಸದಾ ಮನಸ್ಸಿನಲ್ಲಿಟ್ಟಳು. ಕುರುಬರು ತಾವು ನೋಡಿದ ಮತ್ತು ಕೇಳಿಸಿಕೊಂಡ ವಿಷಯಗಳಿಗಾಗಿ ಯೆಹೋವನಿಗೆ ಕೃತಜ್ಞತೆ ಹೇಳುತ್ತಾ ತಮ್ಮ ಕುರಿಗಳು ಇದ್ದಲ್ಲಿಗೆ ಹೋದರು.
“ನಾನು ಬಂದಿರೋದು ದೇವರಿಂದಾನೇ. ನಾನಿಲ್ಲಿ ಇರೋದು ದೇವರಿಂದಾನೇ. ನಾನೇ ಬರ್ಲಿಲ್ಲ, ಆತನೇ ನನ್ನನ್ನ ಕಳಿಸಿದನು.”—ಯೋಹಾನ 8:42