ಪಾಠ 52
ಯೆಹೋವನ ಅಗ್ನಿಮಯ ಸೈನ್ಯ
ಸಿರಿಯದ ರಾಜನಾದ ಬೆನ್ಹದದನು ಇಸ್ರಾಯೇಲಿನ ಮೇಲೆ ಆಗಾಗ ಯುದ್ಧಕ್ಕೆ ಬರುತ್ತಿದ್ದ. ಆದರೆ ಎಲೀಷ ಅವನ ಒಳಸಂಚಿನ ಬಗ್ಗೆ ಇಸ್ರಾಯೇಲಿನ ರಾಜನಿಗೆ ಮೊದಲೇ ತಿಳಿಸುತ್ತಿದ್ದದ್ದರಿಂದ ಅವನು ಬೆನ್ಹದದನ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದ. ಆದ್ದರಿಂದ ಬೆನ್ಹದದ ಎಲೀಷನನ್ನು ಹಿಡಿಸಲು ನಿರ್ಧರಿಸಿದ. ಎಲೀಷ ದೋತಾನಿನಲ್ಲಿದ್ದಾನೆ ಎಂದು ಗೊತ್ತಾದಾಗ ಅವನನ್ನು ಹಿಡಿದುಕೊಂಡು ಬರಲು ತನ್ನ ಸೈನ್ಯವನ್ನು ಕಳುಹಿಸಿದ.
ಸಿರಿಯದ ಸೈನ್ಯ ರಾತ್ರಿ ದೋತಾನಿಗೆ ಬಂದು ಮುಟ್ಟಿತು. ಮಾರನೇ ದಿನ ಬೆಳಗ್ಗೆ ಎಲೀಷನ ಸೇವಕ ಹೊರಗೆ ಬಂದಾಗ ಇಡೀ ಪಟ್ಟಣವನ್ನು ಸಿರಿಯದ ಸೈನ್ಯ ಮುತ್ತಿಗೆ ಹಾಕಿತ್ತು. ಅವನು ಭಯದಿಂದ ಕೂಗುತ್ತಾ ‘ಎಲೀಷ, ನಾವೀಗ ಏನು ಮಾಡೋಣ?’ ಅಂದ. ಆಗ ಎಲೀಷ ‘ಅವ್ರ ಜೊತೆ ಇರುವವ್ರಿಗಿಂತ ನಮ್ಮ ಜೊತೆ ಇರುವವ್ರೇ ಜಾಸ್ತಿ’ ಎಂದ. ಅದೇ ಕ್ಷಣದಲ್ಲಿ ಬೆಟ್ಟದ ಸುತ್ತ ನಿಂತಿದ್ದ ಅಗ್ನಿಮಯ ಯುದ್ಧರಥಗಳು ಮತ್ತು ಕುದುರೆಗಳು ಸೇವಕನಿಗೆ ಕಾಣುವಂತೆ ಯೆಹೋವನು ಮಾಡಿದನು.
ಸಿರಿಯದ ಸೈನಿಕರು ಎಲೀಷನನ್ನು ಹಿಡಿಯಲು ಬಂದಾಗ ಅವನು ‘ಯೆಹೋವನೇ, ದಯವಿಟ್ಟು ಇವರನ್ನು ಕುರುಡರಾಗೋ ತರ ಮಾಡು’ ಎಂದು ಪ್ರಾರ್ಥಿಸಿದ. ಆಗ ಅವರಿಗೆ ಕಣ್ಣು ಕಾಣಿಸುತ್ತಿದ್ದರೂ ಸಹ ತಾವು ಎಲ್ಲಿದ್ದೇವೆ ಅಂತ ಗೊತ್ತಾಗಲಿಲ್ಲ. ಎಲೀಷ ಸೈನಿಕರಿಗೆ ‘ನೀವು ದಾರಿ ತಪ್ಪಿ ಬಂದಿದ್ದೀರ. ನನ್ನ ಜೊತೆ ಬನ್ನಿ. ನೀವು ಹುಡುಕ್ತಿರೋ ಮನುಷ್ಯನ ಹತ್ರ ನಾನು ಕರ್ಕೊಂಡು ಹೋಗ್ತೀನಿ’ ಅಂದ. ಅವರು ಎಲೀಷನ ಜೊತೆಗೆ ಇಸ್ರಾಯೇಲಿನ ರಾಜನಿದ್ದ ಸಮಾರ್ಯಕ್ಕೆ ಬಂದರು.
ಅವರಿಗೆ ತಾವು ಎಲ್ಲಿದ್ದೇವೆ ಎಂದು ಗೊತ್ತಾಗುವಷ್ಟರಲ್ಲಿ ಕಾಲ ಮೀರಿ ಹೋಗಿತ್ತು. ‘ನಾನು ಇವರನ್ನ ಸಾಯಿಸ್ಲಾ?’ ಎಂದು ಇಸ್ರಾಯೇಲಿನ ರಾಜ ಎಲೀಷನಿಗೆ ಕೇಳಿದ. ಆಗ ಎಲೀಷ ಇದೇ ಒಳ್ಳೇ ಅವಕಾಶ ಅಂತ ತನ್ನನ್ನು ಹಿಡಿಯೋಕೆ ಬಂದವರ ಮೇಲೆ ಸೇಡು ತೀರಿಸಿಕೊಂಡನಾ? ಇಲ್ಲ. ಅವನು ‘ಇವರನ್ನ ಸಾಯಿಸಬೇಡ. ಇವರಿಗೆ ಊಟ ಕೊಡು. ಆಮೇಲೆ ಅವರನ್ನು ಕಳುಹಿಸು’ ಎಂದ. ಆದ್ದರಿಂದ ರಾಜ ಅವರಿಗಾಗಿ ಒಂದು ದೊಡ್ಡ ಔತಣವನ್ನು ಮಾಡಿಸಿ ನಂತರ ಮನೆಗೆ ಕಳುಹಿಸಿದ.
“ದೇವರ ಇಷ್ಟದ ಪ್ರಕಾರ ನಾವು ಏನೇ ಕೇಳಿದ್ರೂ ದೇವರು ಅದನ್ನ ಕೊಡ್ತಾನೆ ಅನ್ನೋ ನಂಬಿಕೆ ನಮಗಿದೆ.”—1 ಯೋಹಾನ 5:14