ಪಾಠ 84
ಯೇಸು ನೀರಿನ ಮೇಲೆ ನಡೆಯುತ್ತಾನೆ
ಯೇಸುವಿಗೆ ಕಾಯಿಲೆ ಬಿದ್ದವರನ್ನು ವಾಸಿ ಮಾಡುವ ಮತ್ತು ಸತ್ತವರನ್ನು ಮತ್ತೆ ಬದುಕಿಸುವ ಶಕ್ತಿ ಮಾತ್ರ ಅಲ್ಲ, ಗಾಳಿ-ಮಳೆಯನ್ನು ನಿಯಂತ್ರಿಸುವ ಶಕ್ತಿ ಕೂಡ ಇತ್ತು. ಯೇಸು ಬೆಟ್ಟಕ್ಕೆ ಹೋಗಿ ಪ್ರಾರ್ಥಿಸಿದ ನಂತರ ಗಲಿಲಾಯದ ಸಮುದ್ರದಲ್ಲಿ ಬಿರುಗಾಳಿ ಬಂದಿದ್ದನ್ನು ನೋಡಿದನು. ಅವನ ಅಪೊಸ್ತಲರು ಬಿರುಗಾಳಿಗೆ ಸಿಕ್ಕಿ ದೋಣಿಯನ್ನು ನಡೆಸಲು ಕಷ್ಟಪಡುತ್ತಿದ್ದರು. ಆಗ ಯೇಸು ಸಮುದ್ರಕ್ಕೆ ಬಂದು ನೀರಿನ ಮೇಲೆ ನಡೆಯುತ್ತಾ ದೋಣಿ ಇದ್ದಲ್ಲಿಗೆ ಹೋದನು. ಯಾರೋ ಒಬ್ಬರು ನೀರಿನ ಮೇಲೆ ನಡೆದುಕೊಂಡು ಬರುತ್ತಿರುವುದನ್ನು ನೋಡಿ ಅಪೊಸ್ತಲರಿಗೆ ತುಂಬಾ ಭಯ ಆಯಿತು. ಆಗ ಯೇಸು, ‘ನಾನೇ, ಭಯಪಡಬೇಡಿ’ ಅಂದನು.
ಆಗ ಪೇತ್ರನು, ‘ಸ್ವಾಮಿ, ಅದು ನೀನೇ ಆಗಿದ್ರೆ ಅಲ್ಲಿಗೆ ಬರೋಕೆ ನಂಗೆ ಅಪ್ಪಣೆಕೊಡು’ ಅಂದನು. ಅದಕ್ಕೆ ಯೇಸು, ‘ಬಾ’ ಅಂದನು. ಕೂಡಲೇ ಪೇತ್ರ ಬಿರುಗಾಳಿ ಬೀಸುತ್ತಾ ಇದ್ದರೂ ದೋಣಿಯಿಂದ ಇಳಿದು ನೀರಿನ ಮೇಲೆ ನಡೆಯುತ್ತಾ ಹೋದನು. ಆದರೆ ಯೇಸುವಿನ ಹತ್ತಿರ ಹೋಗುತ್ತಿದ್ದಂತೆ ಪೇತ್ರ ಬಿರುಗಾಳಿಯನ್ನು ನೋಡಿದ್ದರಿಂದ ಭಯಪಟ್ಟನು. ಅವನು ನೀರಲ್ಲಿ ಮುಳುಗಲು ಆರಂಭಿಸಿದನು. ತಕ್ಷಣ ಪೇತ್ರ, ‘ಸ್ವಾಮಿ ನನ್ನನ್ನ ಕಾಪಾಡು’ ಎಂದು ಕೂಗಿದನು. ಯೇಸು ಅವನ ಕೈ ಹಿಡಿದು ‘ನೀನು ಯಾಕೆ ಸಂಶಯಪಟ್ಟೆ? ನಿನ್ನ ನಂಬಿಕೆಗೆ ಏನಾಯ್ತು?’ ಅಂದನು.
ನಂತರ ಯೇಸು ಮತ್ತು ಪೇತ್ರ ದೋಣಿ ಹತ್ತಿದರು. ತಕ್ಷಣ ಬಿರುಗಾಳಿ ನಿಂತುಹೋಯಿತು. ಅದನ್ನು ನೋಡಿದ ಅಪೊಸ್ತಲರಿಗೆ ಹೇಗನಿಸಿತು ಗೊತ್ತಾ? ಅವರು ಯೇಸುವಿಗೆ ‘ನೀನು ನಿಜವಾಗ್ಲೂ ದೇವರ ಮಗ’ ಅಂದರು.
ಯೇಸು ಪ್ರಕೃತಿಯನ್ನು ನಿಯಂತ್ರಿಸಿದ್ದು ಇದೊಂದೇ ಸಲ ಅಲ್ಲ. ಇನ್ನೊಂದು ಸಲ, ಯೇಸು ಮತ್ತು ಅಪೊಸ್ತಲರು ಸಮುದ್ರದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತಿದ್ದರು. ಯೇಸು ದೋಣಿಯ ಹಿಂಭಾಗದಲ್ಲಿ ನಿದ್ರೆ ಹೋದನು. ಆಗ ಒಂದು ದೊಡ್ಡ ಬಿರುಗಾಳಿ ಬಂತು. ಅಲೆಗಳು ಬಂದು ದೋಣಿಗೆ ಬಡಿದು ದೋಣಿಯಲ್ಲೆಲ್ಲಾ ನೀರು ತುಂಬಿಹೋಯಿತು. ಆಗ ಅಪೊಸ್ತಲರು ‘ಗುರು, ಕಾಪಾಡು, ನಾವು ಸತ್ತು ಹೋಗ್ತೀವಿ’ ಅಂತ ಜೋರಾಗಿ ಕೂಗುತ್ತಾ ಯೇಸುವನ್ನು ಎಬ್ಬಿಸಿದರು. ಯೇಸು ಎದ್ದು ಸಮುದ್ರಕ್ಕೆ ‘ಸುಮ್ಮನಿರು!’ ಅಂದನು. ಕೂಡಲೇ, ಬಿರುಗಾಳಿ ನಿಂತು, ಸಮುದ್ರ ಶಾಂತವಾಯಿತು. ನಂತರ ಯೇಸು ಶಿಷ್ಯರಿಗೆ, ‘ದೇವರ ಮೇಲೆ ನಿಮಗಿದ್ದ ನಂಬಿಕೆ ಎಲ್ಲಿ ಹೋಯ್ತು?’ ಅಂದನು. ‘ಗಾಳಿ, ಸಮುದ್ರನೂ ಇವನ ಮಾತು ಕೇಳುತ್ತಲ್ಲಾ’ ಅಂತ ಶಿಷ್ಯರು ತಮ್ಮೊಳಗೆ ಮಾತಾಡಿಕೊಂಡರು. ಯೇಸುವಿನ ಮೇಲೆ ಸಂಪೂರ್ಣ ಭರವಸೆ ಇಟ್ಟರೆ ತಾವು ಯಾವುದರ ಬಗ್ಗೆನೂ ಭಯಪಡಬೇಕಾಗಿಲ್ಲ ಅಂತ ಅಪೊಸ್ತಲರಿಗೆ ಇದರಿಂದ ಗೊತ್ತಾಯಿತು.
“ನಾನು ಬದುಕಿದ್ದಾಗಲೇ ಯೆಹೋವನ ಒಳ್ಳೇತನ ನೋಡ್ತೀನಿ ಅಂತ ನನಗೆ ನಂಬಿಕೆ ಇಲ್ಲದಿದ್ರೆ ನಾನು ಈಗ ಎಲ್ಲಿ ಇರ್ತಿದ್ದೆ?”—ಕೀರ್ತನೆ 27:13