ಪಾಠ 29
ಯೆಹೋವನು ಯೆಹೋಶುವನನ್ನು ಆರಿಸಿದನು
ಮೋಶೆ ಇಸ್ರಾಯೇಲ್ಯರನ್ನು ಅನೇಕ ವರ್ಷಗಳವರೆಗೆ ಮುನ್ನಡೆಸಿದನು. ಅವನಿಗೆ ತುಂಬ ವಯಸ್ಸಾಗಿತ್ತು. ಆಗ ಯೆಹೋವನು ಮೋಶೆಗೆ ‘ನೀನು ಇಸ್ರಾಯೇಲ್ಯರನ್ನು ಮಾತು ಕೊಡೋ ದೇಶಕ್ಕೆ ನಡೆಸುವುದಿಲ್ಲ. ಆದರೆ ನೀನು ಆ ದೇಶವನ್ನು ನೋಡಬಹುದು’ ಎಂದನು. ಅದಕ್ಕೆ ಮೋಶೆ ಇಸ್ರಾಯೇಲ್ಯರನ್ನು ಮುನ್ನಡೆಸಲು ಒಬ್ಬ ಹೊಸ ನಾಯಕನನ್ನು ಆರಿಸಲು ಯೆಹೋವನನ್ನು ಕೇಳಿಕೊಂಡನು. ಆಗ ಯೆಹೋವನು ‘ಯೆಹೋಶುವನ ಹತ್ತಿರ ಹೋಗು. ನಾನು ಅವನನ್ನು ನಾಯಕನಾಗಿ ಆರಿಸಿದ್ದೇನೆ ಎಂದು ಅವನಿಗೆ ಹೇಳು’ ಅಂದನು.
ಮೋಶೆ ಇಸ್ರಾಯೇಲ್ಯರ ಹತ್ತಿರ ಬಂದು ‘ನನ್ನ ಸಾವು ಹತ್ತಿರವಿದೆ. ಹಾಗಾಗಿ ನಿಮ್ಮನ್ನು ಮಾತು ಕೊಟ್ಟ ದೇಶಕ್ಕೆ ನಡೆಸಲು ಯೆಹೋವನು ಯೆಹೋಶುವನನ್ನು ಆರಿಸಿದ್ದಾನೆ’ ಎಂದು ಹೇಳಿದನು. ಆಮೇಲೆ ಮೋಶೆ ಯೆಹೋಶುವನಿಗೆ ‘ಹೆದರಬೇಡ. ಯೆಹೋವನು ನಿನಗೆ ಸಹಾಯ ಮಾಡುತ್ತಾನೆ’ ಎಂದನು. ಇದಾದ ನಂತರ ಮೋಶೆ ನೆಬೋ ಬೆಟ್ಟವನ್ನು ಹತ್ತಿದನು. ಅಲ್ಲಿ ಯೆಹೋವನು ಅವನಿಗೆ ಅಬ್ರಹಾಮ, ಇಸಾಕ ಮತ್ತು ಯಾಕೋಬನಿಗೆ ಮಾತು ಕೊಟ್ಟ ದೇಶವನ್ನು ತೋರಿಸಿದನು. ಮೋಶೆ ಸಾಯುವಾಗ ಅವನಿಗೆ 120 ವರ್ಷ ವಯಸ್ಸಾಗಿತ್ತು.
ಯೆಹೋವನು ಯೆಹೋಶುವನಿಗೆ ‘ಯೋರ್ದನ್ ನದಿಯನ್ನು ದಾಟಿ ಕಾನಾನಿಗೆ ಹೋಗು. ನಾನು ಮೋಶೆ ಜೊತೆ ಇದ್ದ ಹಾಗೆ ನಿನ್ನ ಜೊತೆನೂ ಇರ್ತಿನಿ. ತಪ್ಪದೇ ಪ್ರತಿದಿನ ನಿಯಮ ಪುಸ್ತಕವನ್ನು ಓದು. ಹೆದರಬೇಡ, ಧೈರ್ಯವಾಗಿರು. ನಾನು ನಿನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡು’ ಅಂದನು.
ಯೆಹೋಶುವ ಯೆರಿಕೋ ಪಟ್ಟಣಕ್ಕೆ ಇಬ್ಬರು ಗೂಢಚಾರರನ್ನು ಕಳುಹಿಸಿದ. ಅಲ್ಲಿ ಏನಾಯಿತು ಎಂದು ಮುಂದಿನ ಕಥೆಯಲ್ಲಿ ಕಲಿಯುತ್ತೇವೆ. ಅವರು ವಾಪಸ್ಸು ಬಂದು ‘ಕಾನಾನಿಗೆ ಹೋಗಲು ಇದೇ ಸರಿಯಾದ ಸಮಯ’ ಎಂದು ಹೇಳಿದರು. ಮಾರನೇ ದಿನ ಯೆಹೋಶುವ ಇಸ್ರಾಯೇಲ್ಯರಿಗೆ ಗುಡಾರಗಳನ್ನು ಬಿಚ್ಚಿ ಸಿದ್ಧರಾಗಲು ಹೇಳಿದನು. ಮೊದಲು ಮಂಜೂಷವನ್ನು ಹೊತ್ತುಕೊಂಡಿರುವ ಪುರೋಹಿತರನ್ನು ಯೋರ್ದನ್ ನದಿಯ ಹತ್ತಿರ ಕಳುಹಿಸಿದನು. ನದಿ ತುಂಬಿ ಹರಿಯುತ್ತಿತ್ತು. ಆದರೆ ಪುರೋಹಿತರು ನೀರಿನಲ್ಲಿ ಕಾಲಿಡುತ್ತಿದ್ದ ಹಾಗೆ ನದಿ ಹರಿಯುವುದು ನಿಂತು ಹೋಗಿ ಒಣನೆಲ ಕಾಣಿಸಿತು! ಪುರೋಹಿತರು ನದಿಯ ಮಧ್ಯದ ವರೆಗೆ ನಡೆದುಕೊಂಡು ಹೋಗಿ ಇಸ್ರಾಯೇಲ್ಯರೆಲ್ಲರೂ ಆಚೆ ದಡವನ್ನು ಸೇರುವ ತನಕ ಅಲ್ಲೇ ನಿಂತಿದ್ದರು. ಈ ಅದ್ಭುತವನ್ನು ನೋಡಿದಾಗ ಯೆಹೋವನು ಕೆಂಪು ಸಮುದ್ರವನ್ನು ಎರಡು ಭಾಗ ಮಾಡಿದ್ದು ಇಸ್ರಾಯೇಲ್ಯರಿಗೆ ಜ್ಞಾಪಕ ಬಂದಿರಬಹುದು. ಅಲ್ವಾ?
ಅನೇಕ ವರ್ಷಗಳ ನಂತರ ಕೊನೆಗೂ ಇಸ್ರಾಯೇಲ್ಯರು ಮಾತು ಕೊಟ್ಟ ದೇಶಕ್ಕೆ ಬಂದರು. ಇಲ್ಲಿ ಅವರು ತಮಗಾಗಿ ಮನೆಯನ್ನು ಹಾಗೂ ಪಟ್ಟಣಗಳನ್ನು ಕಟ್ಟಬಹುದಿತ್ತು. ಹೊಲ ಗದ್ದೆಗಳನ್ನು, ದ್ರಾಕ್ಷಿತೋಟಗಳನ್ನು ಮಾಡಿ ಮರಗಿಡಗಳನ್ನು ನೆಟ್ಟರು. ಕಾನಾನ್ ನಿಜಕ್ಕೂ ಹಾಲು ಜೇನು ಹರಿಯುತ್ತಿದ್ದ ದೇಶವಾಗಿತ್ತು. ಅಂದರೆ ಆ ದೇಶ ತುಂಬಾ ಸಮೃದ್ಧವಾಗಿತ್ತು.
“ಯೆಹೋವ ಯಾವಾಗ್ಲೂ ನಿಮ್ಮನ್ನ ಮುನ್ನಡೆಸ್ತಾನೆ, ಬತ್ತಿ ಹೋಗಿರೋ ದೇಶದಲ್ಲೂ ಆತನು ನಿಮ್ಮನ್ನ ತೃಪ್ತಿಪಡಿಸ್ತಾನೆ.”—ಯೆಶಾಯ 58:11