ಪಾಠ 83
ಯೇಸು ಸಾವಿರಾರು ಜನರಿಗೆ ಊಟ ಕೊಟ್ಟನು
ಇದು ಕ್ರಿ.ಶ. 32ರ ಪಸ್ಕಹಬ್ಬದ ಸ್ವಲ್ಪ ಮುಂಚೆ ನಡೆದ ಘಟನೆ. ಅಪೊಸ್ತಲರು ಸಹಿಸುದ್ದಿ ಸಾರಿ ಯೇಸುವಿನ ಹತ್ತಿರ ವಾಪಸ್ಸು ಬಂದರು. ಅವರಿಗೆ ತುಂಬಾ ಸುಸ್ತಾಗಿತ್ತು. ಆದ್ದರಿಂದ ಯೇಸು ಅವರನ್ನು ದೋಣಿಯಲ್ಲಿ ಬೇತ್ಸಾಯಿದ ಎಂಬ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದನು. ಇವರು ಆಚೆ ದಡ ಮುಟ್ಟುವಷ್ಟರಲ್ಲಿ ಸಾವಿರಾರು ಜನರು ಅವರನ್ನು ಹಿಂಬಾಲಿಸಿ ಬಂದಿದ್ದರು. ಒಂಟಿಯಾಗಿ ತನ್ನ ಶಿಷ್ಯರೊಟ್ಟಿಗೆ ಸ್ವಲ್ಪ ಸಮಯ ಕಳೆಯಬೇಕು ಅಂತ ಯೇಸು ಅಂದುಕೊಂಡಿದ್ದರೂ ಜನರನ್ನು ದಯೆಯಿಂದ ಬರಮಾಡಿಕೊಂಡನು. ಕಾಯಿಲೆ ಇದ್ದವರನ್ನು ವಾಸಿ ಮಾಡಿ ಅವರಿಗೆ ಕಲಿಸಿದನು. ಹೀಗೆ ಇಡೀ ದಿನ ಯೇಸು ಜನರಿಗೆ ದೇವರ ಆಳ್ವಿಕೆಯ ಬಗ್ಗೆ ಕಲಿಸಿದನು. ಸಂಜೆಯಾದಾಗ, ಅಪೊಸ್ತಲರು ಯೇಸುವಿನ ಹತ್ತಿರ ಬಂದು ‘ಜನ್ರಿಗೆ ಹಸಿವಾಗಿದೆ, ಅವ್ರನ್ನ ಕಳಿಸಿಬಿಡು. ಅವರು ಹೋಗಿ ಏನಾದ್ರೂ ತಗೊಂಡು ತಿನ್ನಲಿ’ ಅಂದನು.
ಆಗ ಯೇಸು ‘ಅವರು ಹೋಗೋದು ಬೇಡ. ಇಲ್ಲೇ ಏನಾದ್ರೂ ತಿನ್ನೋಕೆ ಕೊಡಿ’ ಅಂದನು. ಅದಕ್ಕೆ ಅಪೊಸ್ತಲರು ‘ಅವರಿಗೋಸ್ಕರ ನಾವೇ ಹೋಗಿ ಊಟ ತರಬೇಕಾ?’ ಎಂದರು. ಅಪೊಸ್ತಲರಲ್ಲಿ ಒಬ್ಬನಾದ ಫಿಲಿಪ್ಪನು ‘ನಮ್ಮ ಹತ್ತಿರ ತುಂಬ ಹಣ ಇದ್ದರೂ ಇಲ್ಲಿರೋ ಎಲ್ಲರಿಗೂ ರೊಟ್ಟಿ ಖರೀದಿಸಲು ಸಾಧ್ಯವಿಲ್ಲ’ ಅಂದನು.
ಯೇಸು ‘ನಮ್ಮ ಹತ್ರ ಎಷ್ಟು ರೊಟ್ಟಿ ಇದೆ?’ ಅಂದನು. ಅದಕ್ಕೆ ಆಂದ್ರೆಯ ‘ನಮ್ಮ ಹತ್ತಿರ ಐದು ರೊಟ್ಟಿ ಮತ್ತು ಎರಡು ಚಿಕ್ಕ ಮೀನುಗಳಿವೆ. ಇದು ಏನೇನೂ ಸಾಕಾಗುವುದಿಲ್ಲ’ ಅಂದನು. ಆಗ ಯೇಸು ‘ಅದನ್ನು ತೆಗೆದುಕೊಂಡು ಬನ್ನಿ’ ಅಂದನು. ಜನರನ್ನು 50 ಮತ್ತು 100ರಂತೆ ಗುಂಪು ಗುಂಪಾಗಿ ಹುಲ್ಲುಹಾಸಿನ ಮೇಲೆ ಕೂತುಕೊಳ್ಳುವಂತೆ ಹೇಳಿದನು. ಯೇಸು ಆ ರೊಟ್ಟಿ ಮತ್ತು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಪ್ರಾರ್ಥಿಸಿದನು. ಆಮೇಲೆ ಅದನ್ನು ಅಪೊಸ್ತಲರಿಗೆ ಕೊಟ್ಟನು. ಅವರು ಜನರಿಗೆ ಹಂಚಿದರು. 5,000 ಗಂಡಸರ ಜೊತೆಗೆ ಹೆಂಗಸರು, ಮಕ್ಕಳು ಹೊಟ್ಟೆ ತುಂಬ ಊಟ ಮಾಡಿದರು. ಆಮೇಲೆ ಉಳಿದ ಆಹಾರ ವ್ಯರ್ಥವಾಗದಂತೆ ಅದನ್ನು ಬುಟ್ಟಿಗಳಲ್ಲಿ ತುಂಬಿಸಿದರು. ಅದನ್ನು ಕೂಡಿಸಿದಾಗ ಸುಮಾರು 12 ಬುಟ್ಟಿಗಳಷ್ಟಿತ್ತು. ಇದು ನಿಜವಾಗಲೂ ಒಂದು ದೊಡ್ಡ ಅದ್ಭುತವಾಗಿತ್ತು!
ಇದನ್ನು ನೋಡಿದಾಗ ಜನರಿಗೆ ತುಂಬಾ ಆಶ್ಚರ್ಯವಾಯಿತು. ಯೇಸುವನ್ನು ರಾಜನಾಗಿ ಮಾಡಬೇಕು ಅಂದುಕೊಂಡರು. ಆದರೆ ಯೆಹೋವನು ತನ್ನನ್ನು ರಾಜನಾಗಿ ಮಾಡುವ ಸಮಯ ಇನ್ನೂ ಬಂದಿಲ್ಲ ಎಂದು ಯೇಸುವಿಗೆ ಗೊತ್ತಿತ್ತು. ಆದ್ದರಿಂದ ಅವನು ಜನರಿಗೆ ಹೋಗುವಂತೆ ಹೇಳಿದನು. ತನ್ನ ಅಪೊಸ್ತಲರಿಗೆ ಗಲಿಲಾಯ ಸಮುದ್ರದ ಕಡೆ ಹೋಗುವಂತೆ ಹೇಳಿದಾಗ ಅವರು ದೋಣಿ ಹತ್ತಿ ಹೋದರು. ಆಗ ಯೇಸು ಒಬ್ಬನೇ ಬೆಟ್ಟಕ್ಕೆ ಹೋದನು. ಯಾಕೆ ಗೊತ್ತಾ? ತನ್ನ ತಂದೆಗೆ ಪ್ರಾರ್ಥಿಸಲು. ಯೇಸುವಿಗೆ ಎಷ್ಟೇ ಕೆಲಸ ಇದ್ರೂ ಪ್ರಾರ್ಥಿಸಲು ಸಮಯ ಮಾಡಿಕೊಳ್ಳುತ್ತಿದ್ದನು.
“ಹಾಳಾಗಿ ಹೋಗೋ ಆಹಾರಕ್ಕಾಗಿ ದುಡಿಬೇಡಿ, ಶಾಶ್ವತ ಜೀವ ಕೊಡೋ ಹಾಳಾಗದ ಆಹಾರಕ್ಕಾಗಿ ದುಡಿರಿ. ಮನುಷ್ಯಕುಮಾರ ಅದನ್ನ ನಿಮಗೆ ಕೊಡ್ತಾನೆ.”—ಯೋಹಾನ 6:27