ಪಾಠ 92
ಮೀನು ಹಿಡಿಯುವವರಿಗೆ ಯೇಸು ಕಾಣಿಸಿಕೊಂಡನು
ಯೇಸು ಅಪೊಸ್ತಲರಿಗೆ ಕಾಣಿಸಿಕೊಂಡ ಸ್ವಲ್ಪ ಸಮಯದ ನಂತರ ಪೇತ್ರ ಗಲಿಲಾಯದ ಸಮುದ್ರಕ್ಕೆ ಮೀನು ಹಿಡಿಯಲು ಹೋದನು. ಅವನ ಜೊತೆ ತೋಮ, ಯಾಕೋಬ, ಯೋಹಾನ ಮತ್ತು ಇತರ ಶಿಷ್ಯರೂ ಹೋದರು. ರಾತ್ರಿಯಿಡೀ ಬಲೆ ಬೀಸಿದರೂ ಅವರಿಗೆ ಒಂದೇ ಒಂದು ಮೀನು ಸಿಗಲಿಲ್ಲ.
ಮಾರನೇ ದಿನ ಮುಂಜಾನೆ ದಡದಲ್ಲಿ ಯಾರೋ ಒಬ್ಬ ವ್ಯಕ್ತಿ ನಿಂತಿರುವುದನ್ನು ಅವರು ಕಂಡರು. ಆ ವ್ಯಕ್ತಿ ಅವರಿಗೆ ‘ನಿಮಗೆ ಮೀನು ಸಿಕ್ತಾ?’ ಎಂದು ಕೇಳಿದನು. ಆಗ ಅವರು ‘ಇಲ್ಲ!’ ಅಂದರು. ಆಗ ಅವನು “ದೋಣಿ ಬಲಗಡೆಯಲ್ಲಿ ಬಲೆ ಬೀಸಿ” ಅಂದನು. ಅವರು ಹಾಗೆ ಮಾಡಿದಾಗ ಬಲೆ ತುಂಬ ಮೀನು ಸಿಕ್ಕಿತು! ಎಷ್ಟೆಂದರೆ ಬಲೆಯನ್ನು ಮೇಲೆ ಎಳೆಯಲು ಆಗಲೇ ಇಲ್ಲ. ಯೋಹಾನನಿಗೆ ಆ ದಡದಲ್ಲಿ ನಿಂತ ವ್ಯಕ್ತಿ ಯೇಸುವೇ ಎಂದು ಗೊತ್ತಾಯಿತು. ಆಗ ಅವನು “ಅದು ಪ್ರಭುವೇ” ಎಂದನು. ಪೇತ್ರ ತಕ್ಷಣ ನೀರಿಗೆ ಹಾರಿ ದಡಕ್ಕೆ ಈಜುತ್ತಾ ಹೋದನು. ಇತರ ಶಿಷ್ಯರು ದೋಣಿಯನ್ನು ದಡಕ್ಕೆ ನಡೆಸುತ್ತಾ ಅವನನ್ನು ಹಿಂಬಾಲಿಸಿದರು.
ಅವರು ದಡಕ್ಕೆ ಬಂದಾಗ ಕೆಂಡದ ಮೇಲೆ ರೊಟ್ಟಿ ಮತ್ತು ಮೀನು ಸುಡುತ್ತಿರುವುದನ್ನು ಕಂಡರು. ತಿನ್ನಲು ಇನ್ನೂ ಸ್ವಲ್ಪ ಮೀನನ್ನು ತರುವಂತೆ ಯೇಸು ಅವರಿಗೆ ಹೇಳಿದನು. ಆಮೇಲೆ ಅವನು “ಬನ್ನಿ, ಊಟ ಮಾಡಿ” ಅಂದನು.
ಅವರು ಊಟ ಮಾಡಿದ ನಂತರ ಯೇಸು ಪೇತ್ರನಿಗೆ ‘ನೀನು ಮೀನು ಹಿಡಿಯುವುದಕ್ಕಿಂತ ಜಾಸ್ತಿ ನನ್ನನ್ನ ಪ್ರೀತಿಸ್ತೀಯಾ?’ ಅಂದನು. ಅದಕ್ಕೆ ಪೇತ್ರ ‘ಹೌದು ಪ್ರಭು, ನಾನು ನಿನ್ನನ್ನ ಎಷ್ಟು ಪ್ರೀತಿಸ್ತೀನಿ ಅಂತ ನಿಂಗೊತ್ತು’ ಅಂದನು. ಆಗ ಯೇಸು ‘ನನ್ನ ಕುರಿಮರಿಗಳನ್ನ ಮೇಯಿಸು’ ಎಂದನು. ಮತ್ತೊಮ್ಮೆ ಯೇಸು ‘ಪೇತ್ರನೇ, ನೀನು ನನ್ನನ್ನ ಪ್ರೀತಿಸ್ತೀಯಾ?’ ಎಂದನು. ಅದಕ್ಕೆ ಪೇತ್ರ ‘ಹೌದು ಪ್ರಭು, ನಾನು ನಿನ್ನನ್ನ ಎಷ್ಟು ಪ್ರೀತಿಸ್ತೀನಿ ಅಂತ ನಿಂಗೊತ್ತು’ ಅಂದನು. ಆಗ ಯೇಸು “ನನ್ನ ಚಿಕ್ಕ ಕುರಿಗಳಿಗೆ ಕುರುಬನಾಗಿರು” ಅಂದನು. ಯೇಸು ಮೂರನೇ ಸಾರಿ ಕೇಳಿದಾಗ ಪೇತ್ರನಿಗೆ ತುಂಬಾ ದುಃಖವಾಯಿತು. ಅವನು ‘ಪ್ರಭು, ನಿನಗೆಲ್ಲಾ ಗೊತ್ತು. ನಾನು ನಿನ್ನನ್ನ ಎಷ್ಟು ಪ್ರೀತಿಸ್ತೀನಿ ಅಂತನೂ ನಿಂಗೊತ್ತು’ ಅಂದನು. ಅದಕ್ಕೆ ಯೇಸು “ನನ್ನ ಚಿಕ್ಕ ಕುರಿಗಳನ್ನ ಮೇಯಿಸು” ಅಂದನು. ಆಮೇಲೆ ಪೇತ್ರನಿಗೆ “ನನ್ನನ್ನ ಹಿಂಬಾಲಿಸ್ತಾ ಇರು” ಅಂದನು.
“ಅವ್ರಿಗೆ ಯೇಸು ‘ನನ್ನ ಜೊತೆ ಬನ್ನಿ, ನಾನು ನಿಮ್ಮನ್ನ ಮನುಷ್ಯರನ್ನ ಹಿಡಿಯೋ ಬೆಸ್ತರಾಗಿ ಮಾಡ್ತೀನಿ’ ಅಂದನು. ತಕ್ಷಣ ಅವರು ಬಲೆ ಬಿಟ್ಟು ಆತನ ಜೊತೆ ಹೋದ್ರು.”—ಮತ್ತಾಯ 4:19, 20