ಪಾಠ 93
ಯೇಸು ಸ್ವರ್ಗಕ್ಕೆ ಹೋದನು
ಗಲಿಲಾಯದಲ್ಲಿ ಯೇಸು ತನ್ನ ಹಿಂಬಾಲಕರನ್ನು ಭೇಟಿ ಮಾಡಿದನು. ಅವನು ಅವರಿಗೆ ‘ಹೋಗಿ ಎಲ್ಲಾ ದೇಶದ ಜನ್ರಿಗೆ ನನ್ನ ಶಿಷ್ಯರಾಗೋಕೆ ಕಲಿಸಿ. ನಾನು ನಿಮಗೆ ಹೇಳಿಕೊಟ್ಟ ಎಲ್ಲಾ ವಿಷ್ಯಗಳನ್ನ ಅವ್ರಿಗೆ ಕಲಿಸಿ, ದೀಕ್ಷಾಸ್ನಾನ ಮಾಡಿಸಿ’ ಎಂಬ ಪ್ರಾಮುಖ್ಯ ಆಜ್ಞೆಯನ್ನು ಕೊಟ್ಟನು. ಯೇಸು ಪುನಃ ಅವರಿಗೆ, ‘ನೆನಪಿಡಿ, ನಾನು ಯಾವಾಗ್ಲೂ ನಿಮ್ಮ ಜೊತೆ ಇರ್ತಿನಿ’ ಎಂದು ಮಾತು ಕೊಟ್ಟನು.
ಯೇಸು ಮತ್ತೆ ಜೀವ ಪಡ್ಕೊಂಡು 40 ದಿನಗಳಲ್ಲಿ ತನ್ನ ನೂರಾರು ಶಿಷ್ಯರಿಗೆ ಗಲಿಲಾಯ ಮತ್ತು ಯೆರೂಸಲೇಮಿನಲ್ಲಿ ಕಾಣಿಸಿಕೊಂಡನು. ಅವನು ಅವರಿಗೆ ತುಂಬಾ ಮುಖ್ಯ ಪಾಠಗಳನ್ನು ಕಲಿಸಿದನು ಮತ್ತು ಅನೇಕ ಅದ್ಭುತಗಳನ್ನು ಮಾಡಿದನು. ಆಮೇಲೆ ಯೇಸು ಕೊನೆ ಬಾರಿ ತನ್ನ ಶಿಷ್ಯರನ್ನು ಆಲೀವ್ ಮರಗಳ ಗುಡ್ಡದಲ್ಲಿ ಭೇಟಿಯಾದನು. ಅವನು ಅವರಿಗೆ ‘ಯೆರೂಸಲೇಮನ್ನ ಬಿಟ್ಟುಹೋಗಬೇಡಿ. ನನ್ನ ತಂದೆ ನಿಮಗೆ ಕೊಟ್ಟ ಮಾತು ನಿಜ ಆಗೋ ತನಕ ಕಾಯಿರಿ’ ಅಂದನು.
ಈ ಮಾತಿನ ಅರ್ಥ ಏನೆಂದು ಅಪೊಸ್ತಲರಿಗೆ ಗೊತ್ತಾಗಲಿಲ್ಲ. ಅವರು ಯೇಸುವಿನ ಹತ್ತಿರ ‘ನೀನು ಈಗಲೇ ಇಸ್ರಾಯೇಲಿನ ರಾಜನಾಗ್ತೀಯಾ?’ ಎಂದು ಕೇಳಿದರು. ಅದಕ್ಕೆ ಯೇಸು ‘ನಾನು ರಾಜನಾಗಲು ಯೆಹೋವನು ನೇಮಿಸಿದ ಸಮಯ ಇನ್ನೂ ಬಂದಿಲ್ಲ. ಬೇಗನೆ ನಿಮ್ಮ ಮೇಲೆ ಪವಿತ್ರಶಕ್ತಿ ಬರುತ್ತೆ. ಇದರಿಂದ ನಿಮಗೆ ಬಲ ಸಿಗುತ್ತೆ. ನನ್ನ ಬಗ್ಗೆ ಸಾಕ್ಷಿ ಕೊಡ್ತೀರ. ಹೋಗಿ ಯೆರೂಸಲೇಮ್, ಯೂದಾಯ, ಸಮಾರ್ಯ ಮತ್ತು ಭೂಮಿಯ ಕಟ್ಟಕಡೆಯವರೆಗೂ ಸಾರಿ’ ಅಂದನು.
ಆಮೇಲೆ ಯೇಸು ಮೇಲಕ್ಕೆ ಹೋದನು. ಮೋಡಗಳಲ್ಲಿ ಮರೆಯಾದನು. ಅವನ ಶಿಷ್ಯರು ಆಕಾಶದ ಕಡೆಗೆ ನೋಡುತ್ತಲೇ ಇರುವಾಗ ಯೇಸು ಸ್ವರ್ಗಕ್ಕೆ ಹೋದನು.
ಆತನ ಶಿಷ್ಯರು ಆಲೀವ್ ಮರಗಳ ಗುಡ್ಡದಿಂದ ಯೆರೂಸಲೇಮಿಗೆ ಹೋದರು. ಅವರು ಕ್ರಮವಾಗಿ ಮೇಲಂತಸ್ತಿನ ಕೋಣೆಯಲ್ಲಿ ಕೂಡಿ ಬಂದು ಪ್ರಾರ್ಥಿಸುತ್ತಿದ್ದರು. ಹೀಗೆ ಯೇಸುವಿನಿಂದ ಇನ್ನಿತರ ಮಾರ್ಗದರ್ಶನ ಪಡೆಯಲು ಅವರು ಕಾಯುತ್ತಿದ್ದರು.
“ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ದೇಶಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ. ಆಮೇಲೆ ಅಂತ್ಯ ಬರುತ್ತೆ.”—ಮತ್ತಾಯ 24:14