ಪಾಠ 37
ಯೆಹೋವನು ಸಮುವೇಲನೊಂದಿಗೆ ಮಾತಾಡಿದ
ಮಹಾ ಪುರೋಹಿತ ಏಲಿಗೆ ಇಬ್ಬರು ಗಂಡು ಮಕ್ಕಳಿದ್ದರು. ಅವರ ಹೆಸರು ಹೊಫ್ನಿ ಮತ್ತು ಫೀನೆಹಾಸ. ಅವರು ಪವಿತ್ರ ಡೇರೆಯಲ್ಲಿ ಪುರೋಹಿತರಾಗಿ ಸೇವೆಸಲ್ಲಿಸುತ್ತಿದ್ದರು. ಆದರೆ ಅವರು ಯೆಹೋವನ ನಿಯಮಗಳನ್ನು ಪಾಲಿಸುತ್ತಿರಲಿಲ್ಲ, ಅಲ್ಲದೇ ಜನರೊಂದಿಗೆ ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ಇಸ್ರಾಯೇಲ್ಯರು ಯೆಹೋವನಿಗೆ ಅರ್ಪಿಸಲು ಬಲಿಗಳನ್ನ ತಂದಾಗ ಹೊಫ್ನಿ ಮತ್ತು ಫೀನೆಹಾಸ ಉತ್ತಮವಾದ ಮಾಂಸವನ್ನು ತಮಗಾಗಿ ತೆಗೆದುಕೊಳ್ಳುತ್ತಿದ್ದರು. ತನ್ನ ಮಕ್ಕಳು ಮಾಡುತ್ತಿದ್ದ ಈ ಕೆಟ್ಟ ವಿಷಯ ಏಲಿಯ ಕಿವಿಗೆ ಬಿತ್ತು. ಆದರೆ ಅವನು ಅವರನ್ನು ಶಿಕ್ಷಿಸಲಿಲ್ಲ. ಇದು ಮುಂದುವರಿಯುತ್ತಾ ಇರಲು ಯೆಹೋವನು ಬಿಟ್ಟನಾ?
ಹೊಫ್ನಿ ಮತ್ತು ಫೀನೆಹಾಸರಿಗಿಂತ ಸಮುವೇಲ ತುಂಬಾ ಚಿಕ್ಕವನಾಗಿದ್ದನು. ಆದರೆ ಅವನು ಅವರಂತಿರಲಿಲ್ಲ. ಯೆಹೋವನು ಸಮುವೇಲನನ್ನು ಮೆಚ್ಚಿದನು. ಒಂದಿನ ರಾತ್ರಿ ಸಮುವೇಲ ಮಲಗಿರುವಾಗ ಯಾರೋ ಅವನ ಹೆಸರನ್ನು ಕರೆದಂತಾಯಿತು. ಆಗ ಅವನು ಏಲಿಯ ಹತ್ತಿರ ಓಡಿ ಹೋಗಿ ‘ಬಂದೆ’ ಅಂದನು. ಆಗ ಏಲಿ ‘ನಾನು ನಿನ್ನನ್ನು ಕರೀಲಿಲ್ಲ. ಹೋಗಿ ಮಲ್ಕೊ’ ಅಂದನು. ಸಮುವೇಲ ಹೋಗಿ ಮಲಗಿದ. ಮತ್ತೇ ಅದೇ ರೀತಿ ಆಯಿತು. ಹೀಗೆ ಮೂರನೇ ಬಾರಿ ಸಮುವೇಲನಿಗೆ ಆ ಶಬ್ದ ಕೇಳಿಸಿದಾಗ ಸಮುವೇಲನನ್ನು ಕರೆಯುತ್ತಿರೋದು ಯೆಹೋವನೇ ಎಂದು ಏಲಿಗೆ ಗೊತ್ತಾಯಿತು. ಏಲಿ ಸಮುವೇಲನಿಗೆ, ಮತ್ತೊಮ್ಮೆ ಆ ಶಬ್ದ ಕೇಳಿಸಿದರೆ ‘ಹೇಳು ಯೆಹೋವನೇ, ನಿನ್ನ ಸೇವಕ ಕೇಳ್ತಿದ್ದಾನೆ ಅಂತ ಹೇಳು’ ಅಂದನು.
ಸಮುವೇಲ ಮತ್ತೆ ಹೋಗಿ ಮಲಗಿದ. ನಂತರ ‘ಸಮುವೇಲ! ಸಮುವೇಲ!’ ಎಂಬ ಶಬ್ದ ಮತ್ತೆ ಕೇಳಿಸಿತು. ಆಗ ‘ದಯವಿಟ್ಟು ಹೇಳು, ನಿನ್ನ ಸೇವಕ ಕೇಳ್ತಿದ್ದಾನೆ’ ಎಂದು ಉತ್ತರಿಸಿದ. ಯೆಹೋವನು ಸಮುವೇಲನಿಗೆ ‘ನನ್ನ ಪವಿತ್ರ ಡೇರೆಯಲ್ಲಿ ತನ್ನ ಮಕ್ಕಳು ಮಾಡುತ್ತಿರುವ ಕೆಟ್ಟ ವಿಷಯಗಳು ಏಲಿಗೆ ಗೊತ್ತಿದ್ದರೂ ಅವನು ಅವರಿಗೆ ಶಿಕ್ಷೆ ಕೊಡಲಿಲ್ಲ. ಆದ್ದರಿಂದ ನಾನು ಅವನನ್ನು ಹಾಗೂ ಅವನ ಕುಟುಂಬವನ್ನು ಶಿಕ್ಷಿಸುತ್ತೇನೆ ಎಂದು ಏಲಿಗೆ ಹೇಳು’ ಅಂದನು. ಮಾರನೇ ದಿನ ಬೆಳಿಗ್ಗೆ ಎಂದಿನಂತೆ ಸಮುವೇಲ ಪವಿತ್ರ ಡೇರೆಯ ಬಾಗಿಲುಗಳನ್ನು ತೆರೆದ. ಯೆಹೋವನು ಹೇಳಿದ್ದನ್ನು ಮಹಾ ಪುರೋಹಿತನಿಗೆ ತಿಳಿಸಲು ಸಮುವೇಲನಿಗೆ ಭಯ ಆಗುತ್ತಿತ್ತು. ಆದರೆ ಏಲಿ ಸಮುವೇಲನನ್ನು ಕರೆದು ‘ಕಂದಾ, ಸಮುವೇಲ, ಯೆಹೋವನು ನಿನಗೆ ಏನು ಹೇಳಿದನು? ಆತನು ನಿನಗೆ ಹೇಳಿದ್ದನ್ನೆಲ್ಲಾ ನನಗೆ ತಿಳಿಸು’ ಅಂದನು. ಆಗ ಸಮುವೇಲ ಏಲಿಗೆ ಎಲ್ಲವನ್ನೂ ಹೇಳಿದ.
ಸಮುವೇಲ ದೊಡ್ಡವನಾದಂತೆ ಯೆಹೋವನು ಸದಾ ಅವನೊಟ್ಟಿಗಿದ್ದನು. ಯೆಹೋವನು ಸಮುವೇಲನನ್ನು ಪ್ರವಾದಿಯಾಗಿ ಮತ್ತು ನ್ಯಾಯಾಧೀಶನಾಗಿ ಆರಿಸಿದ್ದಾನೆಂದು ಇಡೀ ದೇಶಕ್ಕೆ ಗೊತ್ತಾಯಿತು.
“ನೀನು ಯೌವನದಲ್ಲೇ ನಿನ್ನ ಮಹಾ ಸೃಷ್ಟಿಕರ್ತನನ್ನ ನೆನಪಿಸ್ಕೊ.”—ಪ್ರಸಂಗಿ 12:1