ಪಾಠ 90
ಯೇಸು ಗೊಲ್ಗೊಥಾದಲ್ಲಿ ಸತ್ತನು
ಮುಖ್ಯ ಪುರೋಹಿತರು ಯೇಸುವನ್ನು ರಾಜ್ಯಪಾಲನ ಅರಮನೆಗೆ ಕರೆದುಕೊಂಡು ಹೋದರು. ಆಗ ಪಿಲಾತನು ‘ಈ ಮನುಷ್ಯ ಏನು ತಪ್ಪು ಮಾಡಿದ್ದಾನೆ?’ ಎಂದು ಕೇಳಿದನು. ಅದಕ್ಕೆ ಅವರು ‘ಇವನು ತನ್ನನ್ನೇ ರಾಜ ಅಂತ ಹೇಳ್ಕೊತಿದ್ದಾನೆ!’ ಅಂದರು. ಆಗ ಪಿಲಾತನು ಯೇಸುವಿಗೆ “ನೀನು ಯೆಹೂದ್ಯರ ರಾಜನಾ?” ಎಂದು ಕೇಳಿದನು. ಅದಕ್ಕೆ ಯೇಸು “ನನ್ನ ಆಳ್ವಿಕೆ ಈ ಲೋಕದ್ದಲ್ಲ” ಅಂದನು.
ಆಮೇಲೆ ಪಿಲಾತನು, ಗಲಿಲಾಯದ ಅಧಿಪತಿ ಹೆರೋದನು ಯೇಸುವಿನಲ್ಲಿ ಏನಾದರೂ ತಪ್ಪು ಕಂಡು ಹಿಡಿಯಬಹುದೆಂದು ಅವನ ಹತ್ತಿರ ಕಳುಹಿಸಿದನು. ಹೆರೋದನಿಗೆ ಸಹ ಯೇಸುವಿನಲ್ಲಿ ಯಾವ ತಪ್ಪೂ ಕಾಣಲಿಲ್ಲ. ಅದಕ್ಕೆ ಅವನು ಯೇಸುವನ್ನು ಮತ್ತೆ ಪಿಲಾತನ ಹತ್ತಿರ ಕಳುಹಿಸಿದನು. ಆಗ ಪಿಲಾತನು ಜನರಿಗೆ ‘ಹೆರೋದನಿಗಾಗಲಿ, ನನಗಾಗಲಿ ಯೇಸುವಿನಲ್ಲಿ ಯಾವ ತಪ್ಪೂ ಕಾಣಿಸಲಿಲ್ಲ. ಹಾಗಾಗಿ ಇವನನ್ನ ಬಿಟ್ಟುಬಿಡ್ತೀನಿ’ ಅಂದನು. ಅದಕ್ಕೆ ಜನರ ಗುಂಪಿನಲ್ಲಿರುವವರು ‘ಅವನನ್ನ ಕೊಲ್ಲಿಸು! ಕೊಲ್ಲಿಸು!’ ಎಂದು ಗಟ್ಟಿಯಾಗಿ ಕೂಗಿದರು. ಸೈನಿಕರು ಯೇಸುವನ್ನು ಚಾಟಿಯಿಂದ ಹೊಡೆದರು, ಅವನ ಮೇಲೆ ಉಗುಳಿದರು, ಅವನನ್ನು ಗುದ್ದಿದರು. ಅವರು ಮುಳ್ಳಿನ ಕಿರೀಟ ಮಾಡಿ ಯೇಸುವಿನ ತಲೆಗೆ ಹಾಕಿ “ಯೆಹೂದ್ಯರ ರಾಜನಿಗೆ ಜೈ!” ಎಂದು ಗೇಲಿ ಮಾಡಿದರು. ಮತ್ತೆ ಪಿಲಾತನು ಜನರ ಗುಂಪಿಗೆ “ನನಗಂತೂ ಇವನಲ್ಲಿ ಯಾವ ತಪ್ಪೂ ಕಾಣಿಸ್ತಿಲ್ಲ” ಅಂದನು. ಅದಕ್ಕೆ ಅವರು ‘ಅವನನ್ನ ಕಂಬಕ್ಕೆ ಏರಿಸಿ!’ ಎಂದು ಕಿರುಚಿದರು. ಕೊನೆಗೆ ಪಿಲಾತನು ಯೇಸುವನ್ನು ಕೊಲ್ಲಲು ಒಪ್ಪಿಗೆ ಕೊಟ್ಟನು.
ಸೈನಿಕರು ಯೇಸುವನ್ನು ಗೊಲ್ಗೊಥಾ ಎಂಬ ಸ್ಥಳಕ್ಕೆ ಕರೆದುಕೊಂಡು ಹೋಗಿ ಕಂಬಕ್ಕೆ ಏರಿಸಿದರು. ಆಗ ಯೇಸು “ಅಪ್ಪಾ, ಇವ್ರನ್ನ ಕ್ಷಮಿಸು. ಇವ್ರೇನು ಮಾಡ್ತಿದ್ದಾರೆ ಅಂತ ಇವ್ರಿಗೆ ಗೊತ್ತಿಲ್ಲ” ಎಂದು ಪ್ರಾರ್ಥಿಸಿದನು. ಜನರು ಯೇಸುವನ್ನು ಗೇಲಿ ಮಾಡುತ್ತಾ ‘ನಿನ್ನನ್ನ ಕಾಪಾಡ್ಕೊ. ನೀನು ದೇವರ ಮಗನಾಗಿದ್ರೆ ಕಂಬದಿಂದ ಇಳಿದು ಬಾ ನೋಡೋಣ’ ಎಂದರು.
ಯೇಸುವಿನ ಜೊತೆ ಕಂಬಕ್ಕೆ ಏರಿಸಿದಂತ ಒಬ್ಬ ಕಳ್ಳ ಯೇಸುವಿನ ಹತ್ತಿರ “ನೀನು ರಾಜನಾದಾಗ ನನ್ನನ್ನ ನೆನಪು ಮಾಡ್ಕೊ” ಅಂದನು. ಅದಕ್ಕೆ ಯೇಸು “ನೀನು ನನ್ನ ಜೊತೆ ಪರದೈಸಲ್ಲಿ ಇರ್ತಿಯ” ಎಂದು ಮಾತು ಕೊಟ್ಟನು. ಮಧ್ಯಾಹ್ನದ ಹೊತ್ತಿಗೆ ಸುಮಾರು ಮೂರು ಗಂಟೆಗಳ ಕಾಲ ಎಲ್ಲಾ ಕಡೆ ಕತ್ತಲು ಕವಿಯಿತು. ಕೆಲವು ಶಿಷ್ಯರು ಹಿಂಸಾ ಕಂಬದ ಹತ್ತಿರವೇ ಇದ್ದರು. ಅವರಲ್ಲಿ ಯೇಸುವಿನ ತಾಯಿ ಮರಿಯಳೂ ಇದ್ದಳು. ಆಗ ಯೇಸು ಯೋಹಾನನಿಗೆ ಮರಿಯಳನ್ನು ತನ್ನ ಸ್ವಂತ ತಾಯಿಯಂತೆ ನೋಡಿಕೊಳ್ಳಲು ಹೇಳಿದನು.
ಕೊನೆಗೆ, ಯೇಸು “ಎಲ್ಲಾ ಮುಗಿತು!” ಎಂದು ಹೇಳಿ ತಲೆಬಗ್ಗಿಸಿ ಕೊನೆ ಉಸಿರೆಳೆದನು. ಆ ಕ್ಷಣವೇ ಒಂದು ದೊಡ್ಡ ಭೂಕಂಪವಾಯಿತು. ದೇವಾಲಯದ ಪವಿತ್ರಸ್ಥಳ ಮತ್ತು ಅತೀ ಪವಿತ್ರಸ್ಥಳದ ಮಧ್ಯೆ ಇದ್ದ ಪರದೆಯು ಎರಡು ಭಾಗವಾಯಿತು. ಆಗ ಸೇನಾಧಿಕಾರಿಯೊಬ್ಬ “ಇವನು ನಿಜವಾಗ್ಲೂ ದೇವರ ಮಗನೇ” ಅಂದನು.
“ದೇವರು ಕೊಟ್ಟ ಮಾತುಗಳು ಎಷ್ಟೇ ಇದ್ರೂ ಅವು ಆತನ ಮೂಲಕ “ಹೌದು” ಅಂತ ಆಗಿವೆ.”—2 ಕೊರಿಂಥ 1:20