ಪಾಠ 99
ಸತ್ಯ ಕಲಿತ ಜೈಲಿನ ಅಧಿಕಾರಿ
ಫಿಲಿಪ್ಪಿಯಲ್ಲಿ ಕೆಟ್ಟ ದೇವದೂತನ ನಿಯಂತ್ರಣದಲ್ಲಿದ್ದ ಒಬ್ಬ ಹುಡುಗಿ ಇದ್ದಳು. ಆ ಕೆಟ್ಟ ದೇವದೂತನ ಸಹಾಯದಿಂದ ಅವಳು ಭವಿಷ್ಯ ಹೇಳ್ತಾ ಇದ್ದಳು. ಇದರಿಂದ ಅವಳ ಯಜಮಾನರಿಗೆ ತುಂಬಾ ಆದಾಯ ಬರುತ್ತಿತ್ತು. ಪೌಲ ಮತ್ತು ಸೀಲರು ಫಿಲಿಪ್ಪಿಗೆ ಬಂದಾಗ ಅವಳು ಅನೇಕ ದಿನಗಳವರೆಗೆ ಅವರನ್ನು ಹಿಂಬಾಲಿಸುತ್ತಿದ್ದಳು. ಕೆಟ್ಟ ದೇವದೂತನ ಪ್ರಭಾವದಿಂದ ಅವಳು, “ಇವರು ಸರ್ವೋನ್ನತ ದೇವ್ರ ಸೇವಕ್ರು” ಎಂದು ಕೂಗುತ್ತಿದ್ದಳು. ಕೊನೆಗೆ ಪೌಲನು ಅವಳಲ್ಲಿದ್ದ ಕೆಟ್ಟ ದೇವದೂತನಿಗೆ ‘ಯೇಸು ಕ್ರಿಸ್ತನ ಹೆಸ್ರಲ್ಲಿ ಅವಳನ್ನ ಬಿಟ್ಟು ಹೋಗು’ ಎಂದನು. ತಕ್ಷಣ ಆ ಕೆಟ್ಟ ದೇವದೂತ ಅವಳನ್ನು ಬಿಟ್ಟು ಹೋದನು.
ಈ ವಿಷಯ ಆ ಹುಡುಗಿಯ ಯಜಮಾನರಿಗೆ ತಿಳಿದಾಗ ಅವಳಿಂದ ಇನ್ನು ಮುಂದೆ ತಮಗೆ ಯಾವ ಆದಾಯವು ಬರುವುದಿಲ್ಲ ಎಂದು ತಿಳಿದು ತುಂಬಾ ಕೋಪಗೊಂಡರು. ಅವರು ಪೌಲ ಮತ್ತು ಸೀಲರನ್ನು ನ್ಯಾಯಾಧೀಶರ ಹತ್ತಿರ ಎಳೆದುಕೊಂಡು ಬಂದು ‘ಇವರು ಕಾನೂನನ್ನ ಮುರೀತಿದ್ದಾರೆ ಮತ್ತು ಪಟ್ಟಣದಲ್ಲಿ ಗಲಿಬಿಲಿ ಹುಟ್ಟಿಸ್ತಾ ಇದ್ದಾರೆ’ ಎಂದರು. ಆಗ ನ್ಯಾಯಾಧೀಶ ಪೌಲ-ಸೀಲರನ್ನು ಹೊಡೆಸಿ ಜೈಲಿಗೆ ಹಾಕಲು ಹೇಳಿದನು. ಜೈಲಿನ ಅಧಿಕಾರಿ ಅವರನ್ನು ಜೈಲಿನ ಕತ್ತಲ ಕೋಣೆಗೆ ಹಾಕಿ ಬೇಡಿಗಳಿಂದ ಬಂಧಿಸಿದನು.
ಜೈಲಿನಲ್ಲಿ ಪೌಲ ಮತ್ತು ಸೀಲರು ಯೆಹೋವನಿಗೆ ಸ್ತುತಿ ಗೀತೆಗಳನ್ನು ಹಾಡುತ್ತಿದ್ದಾಗ ಜೈಲಿನಲ್ಲಿದ್ದ ಇತರರು ಕೇಳಿಸಿಕೊಳ್ಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಮಧ್ಯರಾತ್ರಿ ಒಂದು ದೊಡ್ಡ ಭೂಕಂಪವಾಯಿತು. ಜೈಲಿನ ಬಾಗಿಲು ತೆರೆದುಕೊಂಡಿತು. ಕೈದಿಗಳ ಬೇಡಿಗಳು ಕಳಚಿಬಿದ್ದವು. ಆಗ ಜೈಲಿನ ಅಧಿಕಾರಿ ಒಳಗೆ ಓಡಿಹೋಗಿ ನೋಡಿದಾಗ ಜೈಲಿನ ಬಾಗಿಲು ತೆರೆದಿತ್ತು. ಕೈದಿಗಳು ತಪ್ಪಿಸಿಕೊಂಡು ಹೋಗಿರಬಹುದೆಂದು ಭಾವಿಸಿದನು. ತನ್ನ ಕತ್ತಿ ತೆಗೆದುಕೊಂಡು ಪ್ರಾಣ ಕಳೆದುಕೊಳ್ಳಲು ಮುಂದಾದನು.
ಆಗ ಪೌಲನು ‘ಹಾಗೆ ಮಾಡಬೇಡ. ನಾವೆಲ್ಲ ಇಲ್ಲೇ ಇದ್ದೀವಿ’ ಅಂದನು. ಜೈಲಿನ ಅಧಿಕಾರಿ ಓಡಿಹೋಗಿ ಪೌಲ ಸೀಲರ ಮುಂದೆ ಬಿದ್ದನು. ‘ನನಗೆ ರಕ್ಷಣೆ ಸಿಗಬೇಕಂದ್ರೆ ನಾನೇನು ಮಾಡ್ಬೇಕು?’ ಎಂದು ಅವರ ಹತ್ತಿರ ಕೇಳಿದನು. ಅದಕ್ಕೆ ಅವರು ‘ಯೇಸು ಪ್ರಭು ಮೇಲೆ ನಂಬಿಕೆ ಇಡು. ಆಗ ನಿನಗೂ ನಿನ್ನ ಕುಟುಂಬಕ್ಕೂ ರಕ್ಷಣೆ ಸಿಗುತ್ತೆ’ ಅಂದರು. ಆಮೇಲೆ ಪೌಲ ಮತ್ತು ಸೀಲ ಅವನಿಗೆ ಯೆಹೋವನ ವಾಕ್ಯವನ್ನು ಬೋಧಿಸಿದರು. ಅವನು ಮತ್ತು ಅವನ ಮನೆಯವರು ದೀಕ್ಷಾಸ್ನಾನ ಪಡೆದುಕೊಂಡರು.
“ಜನ ನಿಮ್ಮನ್ನ ಬಂಧಿಸ್ತಾರೆ. ಹಿಂಸೆ ಮಾಡ್ತಾರೆ. ಸಭಾಮಂದಿರಕ್ಕೆ ಕರ್ಕೊಂಡು ಹೋಗ್ತಾರೆ. ನ್ಯಾಯಾಲಯದ ಮೆಟ್ಟಿಲು ಹತ್ತಿಸ್ತಾರೆ. ನನ್ನಿಂದಾಗಿ ನಿಮ್ಮನ್ನ ರಾಜ್ಯಪಾಲರ ಹತ್ರ, ರಾಜರ ಹತ್ರ ಎಳ್ಕೊಂಡು ಹೋಗ್ತಾರೆ. ಇದ್ರಿಂದ ನಿಮಗೆ ಸಾಕ್ಷಿ ಕೊಡೋ ಅವಕಾಶ ಸಿಗುತ್ತೆ.”—ಲೂಕ 21:12, 13