ಪಾಠ 80
ಯೇಸು ಹನ್ನೆರಡು ಅಪೊಸ್ತಲರನ್ನು ಆರಿಸಿದನು
ಯೇಸು ಸುಮಾರು ಒಂದೂವರೆ ವರ್ಷ ಸಿಹಿಸುದ್ದಿ ಸಾರಿದ ನಂತರ ಒಂದು ಪ್ರಾಮುಖ್ಯ ನಿರ್ಣಯವನ್ನು ಮಾಡಬೇಕಿತ್ತು. ತನ್ನೊಂದಿಗೆ ಸಿಹಿಸುದ್ದಿ ಸಾರಲು ಯಾರನ್ನು ಆರಿಸಿಕೊಳ್ಳಬೇಕು? ಕ್ರೈಸ್ತ ಸಭೆಯನ್ನು ನೋಡಿಕೊಳ್ಳಲು ಯಾರಿಗೆ ತರಬೇತಿ ಕೊಡಬೇಕು? ಈ ನಿರ್ಣಯವನ್ನು ಮಾಡಲು ಯೇಸುವಿಗೆ ಯೆಹೋವನ ಸಹಾಯ ಬೇಕಿತ್ತು. ಆದ್ದರಿಂದ ಆತನು ಒಬ್ಬನೇ ಒಂದು ಬೆಟ್ಟಕ್ಕೆ ಹೋಗಿ ಇಡೀ ರಾತ್ರಿ ಪ್ರಾರ್ಥನೆ ಮಾಡಿದನು. ಬೆಳಗಾದಾಗ, ಯೇಸು ತನ್ನ ಶಿಷ್ಯರಲ್ಲಿ ಕೆಲವರನ್ನು ಕರೆದು ಅವರಲ್ಲಿ 12 ಮಂದಿಯನ್ನು ಅಪೊಸ್ತಲರನ್ನಾಗಿ ಆರಿಸಿದನು. ನಿನಗೆ ಅವರ ಹೆಸರುಗಳು ನೆನಪಿದೆಯಾ? ಅವರು ಪೇತ್ರ, ಅಂದ್ರೆಯ, ಯಾಕೋಬ, ಯೋಹಾನ, ಫಿಲಿಪ್ಪ, ಬಾರ್ತೊಲೊಮಾಯ, ತೋಮ, ಮತ್ತಾಯ, ಅಲ್ಫಾಯನ ಮಗ ಯಾಕೋಬ, ತದ್ದಾಯ, ಸೀಮೋನ ಮತ್ತು ಇಸ್ಕರಿಯೂತ ಯೂದ.
ಅಂದ್ರೆಯ, ಪೇತ್ರ, ಫಿಲಿಪ್ಪ, ಯಾಕೋಬ
ಈ 12 ಅಪೊಸ್ತಲರು ಇನ್ನು ಮುಂದೆ ಯೇಸುವಿನೊಂದಿಗೆ ಪ್ರಯಾಣ ಮಾಡಲಿದ್ದರು. ಮೊದಲು ಯೇಸು ಅವರಿಗೆ ತರಬೇತಿಯನ್ನು ಕೊಟ್ಟನು. ಬಳಿಕ ಅವರನ್ನು ಸಾರಲು ಕಳುಹಿಸಿದನು. ಯೆಹೋವನು ಅವರಿಗೆ ಕೆಟ್ಟ ದೇವದೂತರನ್ನು ಬಿಡಿಸುವ, ರೋಗಿಗಳನ್ನು ವಾಸಿಮಾಡುವ ಶಕ್ತಿಯನ್ನೂ ಕೊಟ್ಟನು.
ಯೋಹಾನ, ಮತ್ತಾಯ, ಬಾರ್ತೊಲೊಮಾಯ, ತೋಮ
ಯೇಸು ತನ್ನ ಹನ್ನೆರಡು ಶಿಷ್ಯರನ್ನು ಸ್ನೇಹಿತರೆಂದು ಕರೆದನು. ಅವರ ಮೇಲೆ ನಂಬಿಕೆ ಇಟ್ಟನು. ಫರಿಸಾಯರಾದರೋ ಅಪೊಸ್ತಲರನ್ನು ಓದು-ಬರಹ ತಿಳಿಯದ ಸಾಧಾರಣ ಜನರೆಂದು ನೆನಸಿದರು. ಆದರೆ ಯೇಸು ಅವರಿಗೆ ತರಬೇತಿಯನ್ನು ಕೊಟ್ಟನು. ಅವರು ಯೇಸುವಿನ ಜೀವಿತದ ಅತಿ ಮಹತ್ವದ ಸಮಯದಲ್ಲಿ ಅಂದರೆ ಸಾಯೋ ಮುಂಚೆ, ಮತ್ತೆ ಜೀವ ಪಡ್ಕೊಂಡು ಬಂದ ಮೇಲೆ ಅವನೊಟ್ಟಿಗೆ ಇರಲಿದ್ದರು. ಯೇಸುವಿನಂತೆ ತನ್ನ ಹನ್ನೆರಡು ಮಂದಿ ಶಿಷ್ಯರಲ್ಲಿ ಹೆಚ್ಚಿನವರು ಗಲಿಲಾಯದವರು. ಕೆಲವರಿಗೆ ಮದುವೆಯಾಗಿತ್ತು.
ಅಲ್ಫಾಯನ ಮಗ ಯಾಕೋಬ, ಇಸ್ಕರಿಯೂತ ಯೂದ, ತದ್ದಾಯ, ಸೀಮೋನ
ಅಪೊಸ್ತಲರು ಅಪರಿಪೂರ್ಣರಾಗಿದ್ದರು. ತಪ್ಪುಗಳನ್ನು ಮಾಡುತ್ತಿದ್ದರು. ಯೋಚನೆ ಮಾಡದೇ ಮಾತಾಡಿ ಬಿಡುತ್ತಿದ್ದರು. ಸರಿಯಾದ ನಿರ್ಣಯಗಳನ್ನು ಮಾಡುತ್ತಿರಲಿಲ್ಲ. ಕೆಲವು ಸಂದರ್ಭದಲ್ಲಿ, ತಾಳ್ಮೆಗೆಡುತ್ತಿದ್ದರು. ಇನ್ನು ಕೆಲವು ಸಮಯದಲ್ಲಿ ಅವರು ‘ನಮ್ಮಲ್ಲಿ ದೊಡ್ಡವರು ಯಾರು’ ಎಂದು ಜಗಳ ಕೂಡ ಆಡುತ್ತಿದ್ದರು. ಆದರೆ ಅವರು ಒಳ್ಳೆಯವರಾಗಿದ್ದರು. ಯೆಹೋವನನ್ನು ಪ್ರೀತಿಸುತ್ತಿದ್ದರು. ಯೇಸು ಹೋದ ಮೇಲೆ ಅವರು ಕ್ರೈಸ್ತ ಸಭೆಯ ಮೊದಲ ಸದಸ್ಯರಾಗಿ ತುಂಬಾ ಪ್ರಾಮುಖ್ಯವಾದ ಜವಾಬ್ದಾರಿಗಳನ್ನು ಹೊರಲಿಕ್ಕಿದ್ದರು.
“ನಿಮ್ಮನ್ನ ಸ್ನೇಹಿತರಂತ ಕರಿದಿದ್ದೀನಿ. ಯಾಕಂದ್ರೆ ಅಪ್ಪನ ಹತ್ರ ನಾನು ಕೇಳಿಸ್ಕೊಂಡ ಎಲ್ಲ ವಿಷ್ಯ ನಿಮಗೆ ಹೇಳಿದ್ದೀನಿ.”—ಯೋಹಾನ 15:15