ಪಾಠ 66
ಎಜ್ರನು ನಿಯಮ ಪುಸ್ತಕವನ್ನು ಕಲಿಸಿದ
ಇಸ್ರಾಯೇಲ್ಯರಲ್ಲಿ ಹೆಚ್ಚಿನವರು ಯೆರೂಸಲೇಮಿಗೆ ವಾಪಸ್ ಹೋಗಿ ಈಗ ಸುಮಾರು 70 ವರ್ಷಗಳು ದಾಟಿವೆ. ಆದರೆ ಇನ್ನು ಕೆಲವರು ಪರ್ಶಿಯ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದರು. ಅವರಲ್ಲೊಬ್ಬನು ಪುರೋಹಿತನಾದ ಎಜ್ರ. ಅವನು ಯೆಹೋವನ ನಿಯಮ ಪುಸ್ತಕವನ್ನು ಕಲಿಸುತ್ತಿದ್ದನು. ಯೆರೂಸಲೇಮಿನ ಜನರು ನಿಯಮ ಪುಸ್ತಕವನ್ನು ಅನುಸರಿಸುತ್ತಿಲ್ಲ ಎಂಬ ವಿಷಯ ಎಜ್ರನಿಗೆ ಗೊತ್ತಾಯಿತು. ಅಲ್ಲಿಗೆ ಹೋಗಿ ಅವರಿಗೆ ಸಹಾಯ ಮಾಡಲು ಅವನು ಬಯಸಿದನು. ಪರ್ಶಿಯ ರಾಜ ಅರ್ತಷಸ್ತನು ಎಜ್ರನಿಗೆ, ‘ದೇವರು ನಿನಗೆ ನಿಯಮ ಪುಸ್ತಕವನ್ನು ಕಲಿಸಲು ವಿವೇಕ ಕೊಟ್ಟಿದ್ದಾನೆ. ಯಾರು ನಿನ್ನೊಂದಿಗೆ ಬರಲು ಇಷ್ಟಪಡುತ್ತಾರೋ ಅವರನ್ನು ಕರೆದುಕೊಂಡು ಹೋಗು’ ಎಂದು ಹೇಳಿದನು. ಎಜ್ರ ಯೆರೂಸಲೇಮಿಗೆ ಹಿಂದೆ ಹೋಗಲು ಬಯಸುವ ಎಲ್ಲರನ್ನು ಭೇಟಿಯಾದನು. ಅವರೆಲ್ಲರೂ ಈ ದೂರದ ಪ್ರಯಾಣದಲ್ಲಿ ತಮ್ಮನ್ನು ಕಾಪಾಡುವಂತೆ ಯೆಹೋವನಿಗೆ ಪ್ರಾರ್ಥಿಸಿ ಹೊರಟರು.
ನಾಲ್ಕು ತಿಂಗಳ ನಂತರ, ಅವರು ಯೆರೂಸಲೇಮಿಗೆ ಬಂದು ಮುಟ್ಟಿದರು. ಆಗ ಅಧಿಕಾರಿಗಳು ಎಜ್ರನಿಗೆ, ‘ಇಸ್ರಾಯೇಲ್ಯರು ಯೆಹೋವನಿಗೆ ಅವಿಧೇಯರಾಗಿದ್ದಾರೆ, ಅವರು ಸುಳ್ಳು ದೇವರುಗಳನ್ನು ಪೂಜಿಸುವ ಸ್ತ್ರೀಯರನ್ನು ಮದುವೆಯಾಗಿದ್ದಾರೆ’ ಎಂದು ಹೇಳಿದರು. ಆಗ ಎಜ್ರ ಏನು ಮಾಡಿದನು? ಜನರ ಮುಂದೆಯೇ ಮಂಡಿಯೂರಿ, ‘ಯೆಹೋವನೇ, ನೀನು ನಮಗೆ ಎಷ್ಟೊಂದು ಸಹಾಯ ಮಾಡಿದ್ದೀ. ಆದರೂ ನಾವು ನಿನ್ನ ವಿರೋಧವಾಗಿ ಪಾಪ ಮಾಡಿದ್ದೇವೆ’ ಎಂದು ಪ್ರಾರ್ಥಿಸಿದನು. ಆಗ ಜನರು ಪಶ್ಚಾತ್ತಾಪಪಟ್ಟರು. ಆದರೂ ಸರಿ ದಾರಿಯಲ್ಲಿ ನಡೆಯಲು ಅವರಿಗೆ ಸಹಾಯ ಬೇಕಿತ್ತು. ಅದಕ್ಕೆ ಎಜ್ರ ಹಿರಿಯರನ್ನು ಮತ್ತು ನ್ಯಾಯಾಧೀಶರನ್ನು ನೇಮಿಸಿದನು. ಯಾರು ಯೆಹೋವನ ಆರಾಧನೆ ಮಾಡಲಿಲ್ಲವೋ ಅವರೆಲ್ಲರನ್ನು ಮುಂದಿನ ಮೂರು ತಿಂಗಳುಗಳಲ್ಲಿ ದೇಶದಿಂದ ಕಳುಹಿಸಿಬಿಟ್ಟರು.
ಹೀಗೆ ಹನ್ನೆರಡು ವರ್ಷಗಳು ಕಳೆದವು. ಅಷ್ಟರೊಳಗೆ ಯೆರೂಸಲೇಮಿನ ಸುತ್ತಲಿದ್ದ ಗೋಡೆಗಳನ್ನು ಪುನಃ ಕಟ್ಟಲಾಯಿತು. ಜನರಿಗೆ ದೇವರ ನಿಯಮ ಪುಸ್ತಕವನ್ನು ಓದಿ ಹೇಳಲು ಎಜ್ರನು ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಒಟ್ಟುಸೇರಿಸಿದನು. ಎಜ್ರನು ಗ್ರಂಥವನ್ನು ಓದಲು ತೆರೆದಾಗ ಜನರು ಎದ್ದುನಿಂತರು. ಅವನು ಯೆಹೋವನನ್ನು ಸ್ತುತಿಸಿದಾಗ ಅವರೂ ಕೈಗಳನ್ನು ಮೇಲಕ್ಕೆತ್ತುವ ಮೂಲಕ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಎಜ್ರ ನಿಯಮ ಪುಸ್ತಕವನ್ನು ಓದಿ ವಿವರಿಸಿದನು. ಜನರು ಜಾಗರೂಕತೆಯಿಂದ ಕಿವಿಗೊಟ್ಟು ಕೇಳಿಸಿಕೊಂಡರು. ಯೆಹೋವನಿಂದ ಪುನಃ ದೂರ ಹೋಗಿದ್ದೇವೆ ಎಂದು ಒಪ್ಪಿಕೊಂಡು ಅತ್ತರು. ಮಾರನೇ ದಿನ, ಎಜ್ರನು ನಿಯಮ ಪುಸ್ತಕದಲ್ಲಿರುವ ಇನ್ನೂ ಅನೇಕ ವಿಷಯಗಳನ್ನು ಹೇಳಿದನು. ಆಗ ಅವರಿಗೆ ಕೆಲವೇ ದಿನಗಳಲ್ಲಿ ತಾವು ಚಪ್ಪರಗಳ ಹಬ್ಬ ಆಚರಿಸಬೇಕೆಂದು ಗೊತ್ತಾಯಿತು. ತಕ್ಷಣ ಅವರು ಅದಕ್ಕಾಗಿ ಸಿದ್ಧತೆಗಳನ್ನು ಮಾಡಿದರು.
ಹಬ್ಬದ ಏಳು ದಿನಗಳಲ್ಲೂ ಜನರು ಸಂತೋಷಿಸಿದರು. ತಮಗೆ ಸಮೃದ್ಧ ಬೆಳೆ ಕೊಟ್ಟಿದ್ದಕ್ಕಾಗಿ ಯೆಹೋವನಿಗೆ ಧನ್ಯವಾದ ಹೇಳಿದರು. ಈ ರೀತಿಯಲ್ಲಿ ಚಪ್ಪರಗಳ ಹಬ್ಬವನ್ನು ಯೆಹೋಶುವನ ಕಾಲದಿಂದ ಮಾಡಿರಲಿಲ್ಲ. ಹಬ್ಬದ ನಂತರ ಜನರು ಕೂಡಿ ಬಂದು ಯೆಹೋವನಿಗೆ, ‘ನೀನು ನಮ್ಮನ್ನು ಗುಲಾಮಗಿರಿಯಿಂದ ರಕ್ಷಿಸಿದೆ, ಮರುಭೂಮಿಯಲ್ಲಿ ಇದ್ದಾಗ ಆಹಾರ ಕೊಟ್ಟೆ, ಸುಂದರವಾದ ದೇಶವನ್ನು ಕೊಟ್ಟೆ. ಆದರೆ ನಾವು ಪದೇ ಪದೇ ನಿನಗೆ ಅವಿಧೇಯರಾದೆವು. ನಮ್ಮನ್ನು ಎಚ್ಚರಿಸಲು ನೀನು ಪ್ರವಾದಿಗಳನ್ನು ಕಳುಹಿಸಿದೆ. ಆದರೆ, ನಾವು ಅವರ ಮಾತಿಗೆ ಕಿವಿಗೊಡಲಿಲ್ಲ. ಆದರೂ ನೀನು ತಾಳ್ಮೆ ತೋರಿಸಿದೆ. ಅಬ್ರಹಾಮನಿಗೆ ಕೊಟ್ಟ ಮಾತನ್ನು ಕಾಪಾಡಿಕೊಂಡೆ. ಇನ್ನು ಮುಂದೆ ನಾವು ನಿನಗೆ ವಿಧೇಯರಾಗುತ್ತೇವೆ ಎಂದು ಮಾತು ಕೊಡುತ್ತೇವೆ’ ಅಂತ ಪ್ರಾರ್ಥಿಸಿದರು. ತಾವು ದೇವರಿಗೆ ಕೊಟ್ಟ ಮಾತನ್ನು ಬರೆದಿಟ್ಟರು. ಅದಕ್ಕೆ ಪ್ರಧಾನರು, ಲೇವಿಯರು, ಪುರೋಹಿತರು ಸಹಿಮಾಡಿ ಮುದ್ರೆಹಾಕಿದರು.
“ದೇವರ ಮಾತು ಕೇಳಿಸ್ಕೊಂಡು ಅದ್ರ ಪ್ರಕಾರ ನಡೆಯೋರು ಇನ್ನೂ ಖುಷಿಯಾಗಿ ಇರ್ತಾರೆ.”—ಲೂಕ 11:28