ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧೂಮಪಾನ ನಿಲ್ಲಿಸಲು ಗಟ್ಟಿಮನಸ್ಸು ಮಾಡಿ
    ಎಚ್ಚರ!—2010 | ಅಕ್ಟೋಬರ್‌
    • ಧೂಮಪಾನ ನಿಲ್ಲಿಸಲು ಗಟ್ಟಿಮನಸ್ಸು ಮಾಡಿ

      “ಧೂಮಪಾನವನ್ನು ಸಂಪೂರ್ಣ ನಿಲ್ಲಿಸಿದವರಲ್ಲಿದ್ದ ಒಂದೇ ಒಂದು ಅತಿ ಪ್ರಾಮುಖ್ಯ ಗುಣ ಅದನ್ನು ಬಿಟ್ಟು ಬಿಡಲೇ ಬೇಕೆಂಬ ಅವರ ದೃಢ ನಿರ್ಧಾರವೇ ಆಗಿತ್ತು.”—ಧೂಮಪಾನ ಈಗಲೇ ನಿಲ್ಲಿಸಿ! (ಇಂಗ್ಲಿಷ್‌ ಪುಸ್ತಕ)

      ಸರಳ ಮಾತಿನಲ್ಲಿ ಹೇಳುವುದಾದರೆ, ಧೂಮಪಾನ ನಿಲ್ಲಿಸಲಿಕ್ಕಾಗಿ ನಿಮ್ಮಲ್ಲಿ ಗಟ್ಟಿಮನಸ್ಸು ಇರಬೇಕು. ಅದನ್ನು ಮಾಡುವುದು ಹೇಗೆ? ಒಂದು ವಿಧ, ಧೂಮಪಾನ ನಿಲ್ಲಿಸಿದ್ದಲ್ಲಿ ಆಗುವ ಒಳಿತನ್ನು ಪರಿಗಣಿಸುವ ಮೂಲಕವೇ.

      ಹಣ ಉಳಿಸುವಿರಿ. ದಿನಕ್ಕೊಂದು ಪೊಟ್ಟಣ ಮಾತ್ರ ಸೇದಿದರೂ ವರ್ಷಕ್ಕೆ ಸಾವಿರಾರು ರೂಪಾಯಿ ಅದರ ಹಿಂದೆಯೇ ಖರ್ಚಾಗುವುದು. “ತಂಬಾಕಿಗೆ ಎಷ್ಟೊಂದು ಹಣ ಪೋಲುಮಾಡುತ್ತಿದ್ದೇನೆಂದು ನನಗೆ ಆಗ ಗೊತ್ತಾಗಲಿಲ್ಲ.”—ಗ್ಯಾನು, ನೇಪಾಳ.

      ಜೀವನದಲ್ಲಿ ಆನಂದ ಹೆಚ್ಚಾಗುತ್ತದೆ. “ನನ್ನ ಜೀವನ ಆರಂಭವಾದದ್ದೇ ಧೂಮಪಾನ ನಿಲ್ಲಿಸಿದಾಗ. ಆಮೇಲಂತೂ ಅದು ಉತ್ತಮವಾಗುತ್ತಾ ಹೋಯಿತು.” (ರೆಜಿನಾ, ದಕ್ಷಿಣ ಆಫ್ರಿಕಾ) ಧೂಮಪಾನ ನಿಲ್ಲಿಸಿದಾಗ ರುಚಿ ಮತ್ತು ವಾಸನೆ ಗ್ರಹಿಸುವ ಶಕ್ತಿ ಹೆಚ್ಚುತ್ತದೆ ಮಾತ್ರವಲ್ಲ ದೇಹದ ಬಲ ಹೆಚ್ಚಿ, ಚಹರೆಯಲ್ಲಿ ಕಳೆ ತುಂಬುತ್ತದೆ.

      ಆರೋಗ್ಯ ಸುಧಾರಿಸಬಲ್ಲದು. “ಧೂಮಪಾನ ನಿಲ್ಲಿಸುವುದರಿಂದ ಯಾವುದೇ ವಯಸ್ಸಿನ ಸ್ತ್ರೀಪುರುಷರ ಆರೋಗ್ಯದಲ್ಲಿ ತಕ್ಷಣ ದೊಡ್ಡ ಸುಧಾರಣೆ ಆಗುತ್ತದೆ.”—ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಯು.ಎಸ್‌. ಕೇಂದ್ರಗಳು.

      ಆತ್ಮವಿಶ್ವಾಸ ಹೆಚ್ಚಾಗುತ್ತದೆ. “ತಂಬಾಕು ನನ್ನ ಮೇಲೆ ಅಧಿಕಾರ ಚಲಾಯಿಸುವುದು ನನಗಿಷ್ಟವಿರಲಿಲ್ಲ. ಆದ್ದರಿಂದ ಧೂಮಪಾನ ನಿಲ್ಲಿಸಿದೆ. ನನ್ನ ಶರೀರದ ಮೇಲೆ ನನಗೆ ಮಾತ್ರ ಅಧಿಕಾರವಿರಬೇಕು.”—ಹೆನ್ನಿಂಗ್‌, ಡೆನ್ಮಾರ್ಕ್‌.

      ಕುಟುಂಬ ಹಾಗೂ ಸ್ನೇಹಿತರಿಗೂ ಪ್ರಯೋಜನವಾಗಲಿದೆ. “ಧೂಮಪಾನ . . . ನಿಮ್ಮ ಸುತ್ತಲಿರುವವರ ಆರೋಗ್ಯವನ್ನು ಕೆಡಿಸುತ್ತದೆ. ಏಕೆಂದರೆ ಅವರೂ ಆ ಹೊಗೆಯನ್ನು ಸೇವಿಸುತ್ತಾರೆ. ಅಂಥ ಹೊಗೆಯಿಂದ ಉಂಟಾಗುವ ಶ್ವಾಸಕೋಶದ ಕ್ಯಾನ್ಸರ್‌ ಹಾಗೂ ಹೃದ್ರೋಗದಿಂದ ಪ್ರತಿ ವರ್ಷ ಸಾವಿರಾರು ಜನರು ಸಾಯುತ್ತಾರೆಂದು ಅಧ್ಯಯನಗಳು ತೋರಿಸಿಕೊಟ್ಟಿವೆ.”—ಅಮೆರಿಕನ್‌ ಕ್ಯಾನ್ಸರ್‌ ಸೊಸೈಟಿ.

      ಸೃಷ್ಟಿಕರ್ತನನ್ನು ಸಂತೋಷಪಡಿಸುವಿರಿ. ‘ಪ್ರಿಯರೇ, ಶರೀರದ ಪ್ರತಿಯೊಂದು ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಳ್ಳೋಣ.’ (2 ಕೊರಿಂಥ 7:1) ‘ನಿಮ್ಮ ದೇಹಗಳನ್ನು ಪವಿತ್ರವಾಗಿಯೂ ದೇವರಿಗೆ ಸ್ವೀಕೃತವಾಗಿಯೂ ಅರ್ಪಿಸಿರಿ.’—ರೋಮನ್ನರಿಗೆ 12:1.

      “ಶರೀರವನ್ನು ಅಶುದ್ಧಗೊಳಿಸುವ ಯಾವುದನ್ನೂ ದೇವರು ಮೆಚ್ಚುವುದಿಲ್ಲ ಎಂದು ಗೊತ್ತಾದಾಗ ಧೂಮಪಾನ ನಿಲ್ಲಿಸಬೇಕೆಂಬ ನಿರ್ಣಯ ಮಾಡಿದೆ.”—ಸಿಲ್ವಿಯಾ, ಸ್ಪೇನ್‌.

      ಕೆಲವೊಮ್ಮೆ ಗಟ್ಟಿಮನಸ್ಸು ಇದ್ದರೆ ಮಾತ್ರ ಸಾಲದು. ನೀವು ಎದುರಿಸಲಿರುವ ತಡೆಗಳಿಗಾಗಿಯೂ ಸಿದ್ಧರಾಗಿರಬೇಕು. ಈ ತಡೆಗಳು ಯಾವುವು ಎಂಬುದನ್ನು ಮುಂದಿನ ಲೇಖನ ಚರ್ಚಿಸಲಿದೆ. (g10-E 05)

  • ತಡೆಗಳನ್ನು ತೊಡೆದುಹಾಕಲು ಸಿದ್ಧರಾಗಿ
    ಎಚ್ಚರ!—2010 | ಅಕ್ಟೋಬರ್‌
    • ತಡೆಗಳನ್ನು ತೊಡೆದುಹಾಕಲು ಸಿದ್ಧರಾಗಿ

      “ನಮ್ಮ ನವಜಾತ ಕಂದನ ಆರೋಗ್ಯಕ್ಕೆ ಹಾನಿಯಾಗಬಾರದೆಂದು ಧೂಮಪಾನ ನಿಲ್ಲಿಸಲು ನಿರ್ಣಯಿಸಿದೆ. ‘ಧೂಮಪಾನ ನಿಷೇಧಿಸಿದೆ’ ಎಂಬ ಸೂಚನೆಯನ್ನೂ ಮನೆಯಲ್ಲಿ ಹಾಕಿದೆ. ಇದನ್ನು ಮಾಡಿ ಒಂದು ತಾಸೂ ಕಳೆದಿರಲಿಲ್ಲ. ಅಷ್ಟರಲ್ಲಿ, ನಿಕೋಟಿನ್‌ಗಾಗಿ ಕಡುಬಯಕೆಯು ಸುನಾಮಿ ಥರ ನನ್ನನ್ನು ಅಪ್ಪಳಿಸಿತು. ತಡೆಯಲಾಗದೆ ಸಿಗರೇಟನ್ನು ಹೊತ್ತಿಸಿದೆ.” —ಯೊಶೀಮಿಟ್ಸು, ಜಪಾನ್‌.

      ಯೊಶೀಮಿಟ್ಸುವಿನ ಅನುಭವ ತೋರಿಸುವಂತೆ ಧೂಮಪಾನ ನಿಲ್ಲಿಸಲು ಪ್ರಯತ್ನಿಸುವಾಗ ಅನೇಕ ತಡೆಗಳು ಎದುರಾಗುತ್ತವೆ. ಇವುಗಳಿಂದ ಮುಗ್ಗರಿಸಿ ಬಿದ್ದವರಲ್ಲಿ ಸರಿಸುಮಾರು 90% ಮಂದಿ ಮೇಲೇಳಲು ಪ್ರಯತ್ನಿಸದೆ ತಮ್ಮ ದುಶ್ಚಟಕ್ಕೆ ಹಿಂದಿರುಗುತ್ತಾರೆಂದು ಸಮೀಕ್ಷೆಗಳು ತೋರಿಸುತ್ತವೆ. ಆದರೆ ನೀವು ಯಶಸ್ವಿಗಳಾಗಬೇಕಾದರೆ ಈ ಚಟ ಬಿಡಲು ಪ್ರಯತ್ನಿಸುವಾಗ ಬರಬಲ್ಲ ತಡೆಗಳನ್ನು ಎದುರಿಸಲು ಮೊದಲೇ ತಯಾರಾಗಿ. ಹೆಚ್ಚಾಗಿ ಎದುರಾಗುವ ತಡೆಗಳಾವುವು?

      ನಿಕೋಟಿನ್‌ಗಾಗಿ ಉತ್ಕಟ ಬಯಕೆ: ಇದು ಸಾಮಾನ್ಯವಾಗಿ ನೀವು ಕೊನೆ ಸಿಗರೇಟ್‌ ಸೇದಿದ ಮೂರು ದಿನಗಳೊಳಗೆ ಗರಿಷ್ಠ ಮಟ್ಟಕ್ಕೇರಿ ಬಳಿಕ ಸುಮಾರು ಎರಡು ವಾರಗಳೊಳಗೆ ತಗ್ಗುತ್ತದೆ. ಆ ಸಮಯಾವಧಿಯಲ್ಲಿ “ಧೂಮಪಾನ ಮಾಡಬೇಕೆಂಬ ಆಸೆ ಅಲೆಗಳಂತೆ ಒಮ್ಮೆಲೇ ಉಕ್ಕಿಬಂದು ಆಮೇಲೆ ತಗ್ಗುತ್ತದೆ” ಎನ್ನುತ್ತಾರೆ ಒಬ್ಬ ಮಾಜಿ ಧೂಮಪಾನಿ. ಆ ಚಟ ಬಿಟ್ಟು ಅನೇಕ ವರ್ಷಗಳ ಬಳಿಕವೂ ಆ ಆಸೆ ತಟ್ಟನೆ ಬರಬಹುದು. ಆಗ, ದುಡುಕಿ ಸಿಗರೇಟನ್ನು ಹೊತ್ತಿಸಬೇಡಿ. ಒಂದೈದು ನಿಮಿಷ ಕಾಯಿರಿ. ಆ ಆಸೆ ಅಲ್ಲೇ ನಂದಿಹೋಗುವುದು.

      ಚಟ ನಿಲ್ಲಿಸುವಾಗ ಕಾಣಿಸುವ ಲಕ್ಷಣಗಳು: ಈ ಚಟ ಬಿಡುವವರಿಗೆ ಮೊದಮೊದಲು ಜಡತ್ವ ಆವರಿಸಿರುತ್ತದೆ ಇಲ್ಲವೆ ಏಕಾಗ್ರತೆ ಕಡಿಮೆಯಾಗುತ್ತದೆ. ತೂಕವೂ ಹೆಚ್ಚಾಗಬಹುದು. ಮೈಕೈ ನೋವು, ತುರಿಕೆ, ಬೆವರುವಿಕೆ, ಕೆಮ್ಮು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮಾತ್ರವಲ್ಲದೆ ಮನೋಸ್ಥಿತಿ ಬದಲಾಗುತ್ತಾ ಇರುವುದರಿಂದ ಅವರು ಎಲ್ಲದಕ್ಕೂ ಅಸಹನೆ, ಸಿಟ್ಟು ತೋರಿಸುತ್ತಿರಬಹುದು ಇಲ್ಲವೆ ಖಿನ್ನತೆಗೊಳಗಾಗಬಹುದು. ಇದರಲ್ಲಿ ಹೆಚ್ಚಿನ ಲಕ್ಷಣಗಳು 4-6 ವಾರಗಳೊಳಗೆ ಕಡಿಮೆಯಾಗುತ್ತವೆ.

      ಇಂಥ ಕಷ್ಟಕರ ಸಮಯದಲ್ಲಿ ಈ ಪ್ರಾಯೋಗಿಕ ಹೆಜ್ಜೆಗಳಿಂದ ನಿಮಗೆ ಸಹಾಯವಾದೀತು. ಉದಾಹರಣೆಗೆ:

      ● ಸಾಕಷ್ಟು ನಿದ್ದೆಮಾಡಿ.

      ● ತುಂಬ ನೀರು, ಜ್ಯೂಸ್‌ ಕುಡಿಯಿರಿ. ಸತ್ವಭರಿತ ಆಹಾರ ಸೇವಿಸಿ.

      ● ತಕ್ಕ ಪ್ರಮಾಣದ ವ್ಯಾಯಾಮ ಮಾಡಿ.

      ● ದೀರ್ಘವಾಗಿ ಉಸಿರಾಡುತ್ತಿರಿ. ನಿಮ್ಮ ಶ್ವಾಸಕೋಶಗಳಲ್ಲಿ ಸ್ವಚ್ಛ ಗಾಳಿ ತುಂಬುತ್ತಿರುವುದನ್ನು ಮನಸ್ಸಲ್ಲೇ ಚಿತ್ರಿಸಿಕೊಳ್ಳಿ.

      ಆಸೆಯನ್ನು ಕೆರಳಿಸುವ ಸಂಗತಿಗಳು: ಧೂಮಪಾನ ಮಾಡುವ ಆಸೆಯನ್ನು ಕೆರಳಿಸಬಲ್ಲ ಚಟುವಟಿಕೆ ಇಲ್ಲವೆ ಭಾವನೆಗಳು ಇರುತ್ತವೆ. ಉದಾಹರಣೆಗೆ, ನಿಮಗೆ ಪಾನೀಯ ಸೇವಿಸುತ್ತಾ ಸಿಗರೇಟ್‌ ಸೇದುವ ರೂಢಿ ಇದ್ದಿರಬಹುದು. ಹಾಗಾಗಿ ಆ ಆಸೆ ಕೆರಳದಂತೆ ನೀವೀಗ ಪಾನೀಯ ಸೇವಿಸುವಾಗೆಲ್ಲ ಹೆಚ್ಚು ಸಮಯ ತಕ್ಕೊಳ್ಳದೆ ಬೇಗನೆ ಕುಡಿದುಮುಗಿಸಿ. ಮುಂದೆ ನೀವು ಪಾನೀಯವನ್ನು ಹೆಚ್ಚು ಆರಾಮವಾಗಿ ಕುಡಿದರೂ ಆ ಆಸೆ ಕೆರಳದ ಸಮಯ ಖಂಡಿತ ಬರಬಹುದು.

      ನಿಮ್ಮ ದೇಹ ನಿಕೋಟಿನ್‌ನೊಂದಿಗಿನ ಕೊಂಡಿಯನ್ನು ಕಳಚಿಕೊಂಡರೂ ಮನಸ್ಸಿಗೆ ಹಾಗೆ ಮಾಡಲು ತುಂಬ ಸಮಯ ಹಿಡಿಯಬಹುದು. ಟಾರ್ಬೆನ್‌ ಎಂಬವರು, “ಧೂಮಪಾನ ನಿಲ್ಲಿಸಿ 19 ವರ್ಷಗಳಾದರೂ ಈಗಲೂ ನಾನು ಕಾಫಿ ಕುಡಿಯುವಾಗಲೆಲ್ಲ ಸಿಗರೇಟ್‌ ಸೇದಲು ಮನಸ್ಸಾಗುತ್ತದೆ” ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಹೆಚ್ಚಾಗಿ, ನಿರ್ದಿಷ್ಟ ಚಟುವಟಿಕೆಗಳೊಂದಿಗೆ ಧೂಮಪಾನ ಮಾಡಬೇಕೆಂಬ ತೀವ್ರ ಆಸೆ ದುರ್ಬಲವಾಗುತ್ತಾ ನಿಂತುಹೋಗುತ್ತದೆ.

      ಮದ್ಯಪಾನಕ್ಕೂ ಧೂಮಪಾನಕ್ಕೂ ಇರುವ ಕೊಂಡಿಯಾದರೊ ಸುಲಭದಲ್ಲಿ ಕಳಚಿಹೋಗುವುದಿಲ್ಲ. ಆದ್ದರಿಂದ ನೀವು ಧೂಮಪಾನ ನಿಲ್ಲಿಸಲು ಪ್ರಯತ್ನಿಸುತ್ತಿರುವಾಗ, ಮದ್ಯಪಾನ ಮಾಡಬಾರದು ಮಾತ್ರವಲ್ಲ ಅದನ್ನು ಎಲ್ಲೆಲ್ಲಿ ಕೊಡಲಾಗುತ್ತದೋ ಆ ಸ್ಥಳಗಳಿಂದಲೂ ದೂರವಿರಬೇಕು. ಕಾರಣ? ಹೆಚ್ಚಿನವರು ಮದ್ಯ ಕುಡಿಯುವಾಗಲೇ ಧೂಮಪಾನವನ್ನು ಪುನಃ ಆರಂಭಿಸುತ್ತಾರೆ. ಹೀಗಾಗುವುದು ಏಕೆ?

      ● ಸ್ವಲ್ಪ ಮದ್ಯ ಸಹ ನಿಕೊಟೀನ್‌ನಿಂದ ಸಿಗುವ ಇಂದ್ರಿಯಸುಖವನ್ನು ಹೆಚ್ಚಿಸಬಲ್ಲದು.

      ● ಹೆಚ್ಚಾಗಿ ಸಂತೋಷಕೂಟಗಳಲ್ಲಿ ಮದ್ಯಪಾನದ ಜೊತೆಗೆ ಧೂಮಪಾನವೂ ಇರುತ್ತದೆ.

      ● ಮದ್ಯವು ಮನಸ್ಸನ್ನು ದುರ್ಬಲಗೊಳಿಸಿ ಸಂಕೋಚ/ಹಿಂಜರಿಕೆಗಳನ್ನು ತೆಗೆದುಹಾಕುತ್ತದೆ. ಆದ್ದರಿಂದಲೇ ಬೈಬಲ್‌ ಸೂಕ್ತವಾಗಿಯೇ ಹೀಗನ್ನುತ್ತದೆ: “ದ್ರಾಕ್ಷಾರಸಮದ್ಯಗಳು ಬುದ್ಧಿಯನ್ನು ಕೆಡಿಸುತ್ತವೆ.”—ಹೋಶೇಯ 4:11.

      ಒಡನಾಟ: ಒಡನಾಡಿಗಳನ್ನು ಜಾಗ್ರತೆಯಿಂದ ಆಯ್ಕೆಮಾಡಿ. ಉದಾಹರಣೆಗೆ, ಧೂಮಪಾನಿಗಳಾಗಿರುವ ಇಲ್ಲವೆ ಧೂಮಪಾನ ಮಾಡಲು ಒತ್ತಾಯಿಸುವ/ಪುಸಲಾಯಿಸುವ ಜನರೊಂದಿಗೆ ಅನಗತ್ಯ ಒಡನಾಟ ಬೇಡ. ಕೆಲವರು ನಿಮ್ಮನ್ನು ಚುಡಾಯಿಸಬಹುದು. ಚಟಬಿಡುವ ನಿಮ್ಮ ಪ್ರಯತ್ನಗಳ ಮೇಲೆ ನೀರೆರಚುವ ಇಂಥವರಿಂದಲೂ ದೂರವಿರಿ.

      ಭಾವನೆಗಳು: 67%ದಷ್ಟು ಮಂದಿ ತಮ್ಮ ಚಟವನ್ನು ಪುನಃ ಆರಂಭಿಸಲು ಕಾರಣ ಖಿನ್ನತೆ ಇಲ್ಲವೆ ಸಿಟ್ಟು ಎನ್ನುತ್ತದೆ ಒಂದು ಸಮೀಕ್ಷೆ. ಇಂಥ ಭಾವನೆಗಳು ಧೂಮಪಾನ ಮಾಡುವ ಆಸೆಯನ್ನು ನಿಮ್ಮಲ್ಲಿ ಕೆರಳಿಸುವಲ್ಲಿ, ನಿಮ್ಮ ಗಮನವನ್ನು ಬೇರೆ ಕಡೆಗೆ ಹರಿಸಲು ನೀರು ಕುಡಿಯಿರಿ, ಚೂಯಿಂಗ್‌ ಗಮ್‌ ಅಗಿಯಿರಿ ಅಥವಾ ಒಂದು ಸುತ್ತು ನಡೆದುಕೊಂಡು ಬನ್ನಿ. ನಿಮ್ಮ ಮನಸ್ಸಲ್ಲಿ ಧನಾತ್ಮಕ ಯೋಚನೆಗಳನ್ನು ತುಂಬಿಸಿ. ಇದನ್ನು ಪ್ರಾರ್ಥನೆಯ ಮೂಲಕವೋ ಬೈಬಲಿನ ಕೆಲವು ಪುಟಗಳನ್ನು ಓದುವ ಮೂಲಕವೋ ಮಾಡಬಹುದು.—ಕೀರ್ತನೆ 19:14.

      ಧೂಮಪಾನ ಮಾಡಲು ಈ ನೆಪ ಕೊಡಬೇಡಿ

      ● ಒಂದೇ ಒಂದು ದಮ್‌ ಎಳೀತೇನೆ.

      ನಿಜಾಂಶ: ಒಂದೇ ಒಂದು ದಮ್‌ ಎಳೆಯುವುದರಿಂದ ಮಿದುಳಿನಲ್ಲಿರುವ ನಿರ್ದಿಷ್ಟ ನಿಕೋಟಿನ್‌ ಗ್ರಾಹಕಗಳಲ್ಲಿ 50%ದಷ್ಟು ಗ್ರಾಹಕಗಳು ಮೂರು ತಾಸುಗಳ ವರೆಗೆ ಬಾಧಿಸಲ್ಪಡುತ್ತವೆ. ಇದರಿಂದಾಗಿ ಹೆಚ್ಚಿನವರು ಪುನಃ ಒಮ್ಮೆ ಪೂರ್ತಿಯಾಗಿ ಧೂಮಪಾನಕ್ಕೆ ಅಡಿಯಾಳಾಗುತ್ತಾರೆ.

      ● ಧೂಮಪಾನ ಮಾಡಿದರೆ ಮಾನಸಿಕ ಒತ್ತಡ ನಿಭಾಯಿಸಬಲ್ಲೆ.

      ನಿಜಾಂಶ: ವಾಸ್ತವದಲ್ಲಿ ನಿಕೋಟಿನ್‌ ಮಾನಸಿಕ ಒತ್ತಡದ ಹಾರ್ಮೋನ್‌ಗಳನ್ನು ಹೆಚ್ಚಿಸುತ್ತದೆಂದು ಸಮೀಕ್ಷೆಗಳು ತೋರಿಸುತ್ತವೆ. ಧೂಮಪಾನ ಮಾಡಿದಾಗ ಮಾನಸಿಕ ಒತ್ತಡ ಮಾಯವಾದಂತೆ ಅನಿಸುವುದು ಏಕೆಂದರೆ ಧೂಮಪಾನ ನಿಲ್ಲಿಸಿದ್ದರಿಂದ ಕಾಣಿಸಿದ ಲಕ್ಷಣಗಳು ತಾತ್ಕಾಲಿಕವಾಗಿ ಇಲ್ಲವಾಗುತ್ತವೆ.

      ● ಎಷ್ಟೋ ವರ್ಷಗಳಿಂದ ಸೇದುತ್ತಿದ್ದೇನೆ. ಈಗ ಬಿಟ್ಟು ಏನು ಪ್ರಯೋಜನ?

      ನಿಜಾಂಶ: ನಕಾರಾತ್ಮಕ ಭಾವನೆಯು ಮನೋಬಲವನ್ನು ಒಳಗಿಂದೊಳಗೆ ಶಿಥಿಲಗೊಳಿಸುತ್ತದೆ. “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ [“ನಿರಾಶನಾಗುವಲ್ಲಿ,” NW] ನಿನ್ನ ಬಲವೂ ಇಕ್ಕಟ್ಟೇ” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 24:10) ಆದುದರಿಂದ ನನ್ನಿಂದ ಏನೂ ಮಾಡಲಾಗದು ಎಂಬ ಯೋಚನೆಯನ್ನು ತಲೆಯಿಂದ ತೆಗೆದುಹಾಕಿ. ನಿಜವಾಗಿಯೂ ಧೂಮಪಾನ ನಿಲ್ಲಿಸಲು ಮನಸ್ಸಿರುವವನು ಈ ಪತ್ರಿಕೆಯಲ್ಲಿರುವಂಥ ಪ್ರಾಯೋಗಿಕ ಮೂಲತತ್ತ್ವಗಳನ್ನು ಪಾಲಿಸುವಲ್ಲಿ ಅವನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

      ● ಚಟ ನಿಲ್ಲಿಸಿದಾಗ ಉಂಟಾಗುವ ಲಕ್ಷಣಗಳನ್ನು ನನ್ನಿಂದ ಸಹಿಸಲಿಕ್ಕೆ ಆಗುವುದಿಲ್ಲ.

      ನಿಜಾಂಶ: ಆ ಲಕ್ಷಣಗಳು ಪ್ರಬಲವಾಗಿರುತ್ತವೆ ಎಂಬದು ಒಪ್ಪಿಕೊಳ್ಳತಕ್ಕ ಮಾತು. ಆದರೆ ಅವು ಕೆಲವೇ ವಾರಗಳೊಳಗೆ ಕಡಿಮೆಯಾಗುತ್ತವೆ. ಆದುದರಿಂದ ನಿಮ್ಮ ಗಮನ ನಿಮ್ಮ ಗುರಿಯ ಮೇಲಿರಲಿ. ಕೆಲವೊಂದು ತಿಂಗಳು ಇಲ್ಲವೆ ವರ್ಷಗಳ ಬಳಿಕ ಸಿಗರೇಟ್‌ ಸೇದುವ ಆಸೆ ಬಂದರೆ ಅದು ಸಹ, ಬಹುಶಃ ಕೆಲವೇ ನಿಮಿಷಗಳೊಳಗೆ ಮಾಯವಾಗುವುದು. ನೀವು ದುಡುಕಿ ಸಿಗರೇಟ್‌ ಹೊತ್ತಿಸಿದರಂತೂ ಆ ಚಟ ಪುನಃ ನಿಮ್ಮನ್ನು ಬೆಂಬತ್ತುವುದು.

      ● ನನಗೊಂದು ಮನೋರೋಗವಿದೆ.

      ನಿಜಾಂಶ: ಖಿನ್ನತೆ ಇಲ್ಲವೆ ಸ್ಕಿಜೋಫ್ರೀನಿಯಾದಂಥ ಮಾನಸಿಕ ಅಸ್ವಸ್ಥತೆಗಾಗಿ ನೀವು ಚಿಕಿತ್ಸೆ ಪಡೆಯುತ್ತಿರುವಲ್ಲಿ, ಧೂಮಪಾನ ನಿಲ್ಲಿಸಲು ನಿಮ್ಮ ವೈದ್ಯರ ಸಹಾಯ ಕೋರಿ. ಅವರು ಸಂತೋಷದಿಂದ ನಿಮಗೆ ಸಹಾಯಮಾಡುವರು. ನಿಮ್ಮ ಚಿಕಿತ್ಸೆ ಇಲ್ಲವೆ ನೀವು ಸೇವಿಸುತ್ತಿರುವ ಔಷಧವನ್ನು ಅವರು ಬದಲಾಯಿಸಬಹುದು.

      ● ಪುನಃ ಸಿಗರೇಟ್‌ ಸೇದಿದರೆ ನಾನು ಸೋತೆ ಎಂದಾಗುವುದಿಲ್ವಾ?

      ನಿಜಾಂಶ: ಒಂದು ತಡೆಯಿಂದಾಗಿ ನೀವು ಮುಗ್ಗರಿಸಿ ಪುನಃ ಧೂಮಪಾನ ಮಾಡಿರಬಹುದು. ಈ ಚಟ ಬಿಡುವವರಲ್ಲಿ ಹೆಚ್ಚಿನವರಿಗೆ ಹೀಗಾಗುತ್ತದೆ. ಆದರೆ ನೀವು ಆ ಚಟ ಬಿಟ್ಟು ಮೇಲೇಳಲಾಗದ ಸ್ಥಿತಿ ತಲಪಿದ್ದೀರಿ ಎಂದು ಇದರರ್ಥವಲ್ಲ. ಪುನಃ ಎದ್ದು ನಿಂತು ಮುಂದೆ ಸಾಗಿ. ಒಮ್ಮೆ ಎಡವಿಬಿದ್ದೀರೆಂದ ಮಾತ್ರಕ್ಕೆ ಅದು ನಿಮ್ಮ ಸೋಲು ಆಗುವುದಿಲ್ಲ. ಬದಲಾಗಿ ಹಾಗೆಯೇ ಬಿದ್ದುಕೊಂಡಿರುವುದು ಅಂದರೆ ಆ ಚಟವನ್ನು ಪುನಃ ಮುಂದುವರಿಸುವುದೇ ದೊಡ್ಡ ಸೋಲು. ಆದುದರಿಂದ ಪ್ರಯತ್ನಿಸುತ್ತಾ ಇರಿ. ಕಟ್ಟಕಡೆಗೆ ನೀವು ಖಂಡಿತ ಯಶಸ್ವಿಗಳಾಗುವಿರಿ!

      ರೊಮುಆಲ್ಡೊ ಎಂಬವರ ಅನುಭವವನ್ನು ಪರಿಗಣಿಸಿ. ಈತನಿಗೆ 26 ವರ್ಷಗಳಿಂದ ಧೂಮಪಾನದ ಚಟವಿತ್ತು. “ಸೇದಲೇಬಾರದು ಎಂದುಕೊಂಡಿದ್ದರೂ ಅದೆಷ್ಟು ಸಾರಿ ಪುನಃ ಸೇದಿದ್ದೇನೋ ನನಗೇ ಲೆಕ್ಕವಿಲ್ಲ. ನಾನು ಹಾಗೆ ಸೇದಿದಾಗಲೆಲ್ಲ ನನ್ನ ಬಗ್ಗೆಯೇ ಒಂದು ರೀತಿಯ ಜುಗುಪ್ಸೆ ಹುಟ್ಟಿತು. ಆದರೆ ಯೆಹೋವ ದೇವರೊಂದಿಗೆ ಸುಸಂಬಂಧವನ್ನು ಇಟ್ಟುಕೊಳ್ಳಲು ನಾನು ದೃಢ ನಿರ್ಣಯ ಮಾಡಿ ಆತನ ಸಹಾಯಕ್ಕಾಗಿ ಪದೇ ಪದೇ ಕೋರಿದಾಗ ಕೊನೆಗೂ ಆ ಚಟವನ್ನು ಪೂರ್ಣವಾಗಿ ನಿಲ್ಲಿಸಲು ಶಕ್ತನಾದೆ” ಎಂದಾತ ಬರೆಯುತ್ತಾನೆ. ಆತನು ಆ ಚಟ ಬಿಟ್ಟು ಈಗ 30ಕ್ಕಿಂತಲೂ ಹೆಚ್ಚು ವರ್ಷಗಳಾಗಿವೆ.

      ಈ ಲೇಖನಮಾಲೆಯ ಕೊನೆಯ ಲೇಖನದಲ್ಲಿ, ಇನ್ನೂ ಕೆಲವೊಂದು ಪ್ರಾಯೋಗಿಕ ಸಲಹೆಗಳನ್ನು ಪರಿಗಣಿಸುವೆವು. ಇವು ನಿಮಗೆ ಧೂಮಪಾನದ ಚಟ ನಿಲ್ಲಿಸಿ ಸಂತೋಷವಾಗಿರಲು ಸಹಾಯಮಾಡುವವು. (g10-E 05)

      [ಪುಟ 30ರಲ್ಲಿರುವ ಚೌಕ/ಚಿತ್ರ]

      ಎಲ್ಲ ರೂಪಗಳೂ ಮಾರಕ

      ತಂಬಾಕನ್ನು ಅನೇಕ ವಿಧಗಳಲ್ಲಿ ಬಳಸಲಾಗುತ್ತದೆ. ಕೆಲವು ತಂಬಾಕು-ಉತ್ಪನ್ನಗಳನ್ನು ಆರೋಗ್ಯಾಹಾರದ ಅಂಗಡಿಗಳು ಮತ್ತು ಗಿಡಮೂಲಿಕೆ ಔಷಧಿ ಅಂಗಡಿಗಳಲ್ಲೂ ಮಾರಲಾಗುತ್ತದೆ. ಆದರೆ “ತಂಬಾಕಿನ ಎಲ್ಲ ರೂಪಗಳೂ ಮಾರಕ” ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ತಂಬಾಕು ಸೇವನೆಯಿಂದ ಬರುವ ಹಲವಾರು ಕಾಯಿಲೆಗಳು, ಉದಾಹರಣೆಗೆ ಕ್ಯಾನ್ಸರ್‌ ಮತ್ತು ಹೃದಯರಕ್ತನಾಳದ ಕಾಯಿಲೆಗಳು ಸಾವಿಗೆ ಕಾರಣವಾಗಬಹುದು. ಗರ್ಭಿಣಿಯರು ಧೂಮಪಾನ ಮಾಡಿದರೆ ಮಗುವಿಗೂ ಹಾನಿಯಾಗುತ್ತದೆ. ತಂಬಾಕು ಉತ್ಪನ್ನಗಳ ವಿಭಿನ್ನ ರೂಪಗಳಾವವು?

      ಬೀಡಿ: ಕೈಯಿಂದ ಸುರುಟಿದ ಈ ಚಿಕ್ಕ ಸಿಗರೇಟ್‌ಗಳನ್ನು ಸಾಮಾನ್ಯವಾಗಿ ಏಷ್ಯಾ ಖಂಡದ ದೇಶಗಳಲ್ಲಿ ಬಳಸಲಾಗುತ್ತದೆ. ಬೀಡಿಗಳು ಸಾಮಾನ್ಯ ಸಿಗರೇಟ್‌ಗಳಿಗಿಂತ ಎಷ್ಟೋ ಹೆಚ್ಚು ಪಟ್ಟು ಟಾರು, ನಿಕೋಟಿನ್‌ ಮತ್ತು ಕಾರ್ಬನ್‌ ಮೊನೊಕ್ಸೈಡ್‌ ಅನ್ನು ಹೊರಸೂಸುತ್ತವೆ.

      ಸಿಗಾರ್‌: ತಂಬಾಕು ಎಲೆಗಳನ್ನು ಒತ್ತಾಗಿ ಸುತ್ತಿ ಅದರ ಮೇಲೆ ಒಂದು ತಂಬಾಕು ಎಲೆಯನ್ನೊ ತಂಬಾಕಿನಿಂದ ಮಾಡಲಾದ ಕಾಗದವನ್ನೊ ಹೊದಿಸುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಸಿಗರೇಟುಗಳಲ್ಲಿನ ಆಮ್ಲೀಯ ತಂಬಾಕಿಗೆ ಹೋಲಿಸುವಾಗ ಸಿಗಾರ್‌ಗಳಲ್ಲಿನ ತಂಬಾಕು ಸ್ವಲ್ಪಮಟ್ಟಿಗೆ ಕ್ಷಾರೀಯ (ನೀರಿನಲ್ಲಿ ಕರಗುವ ಮತ್ತು ಸುಡುವ ಗುಣವುಳ್ಳದ್ದು) ಆಗಿರುತ್ತದೆ. ಇದರಿಂದಾಗಿ, ಸಿಗಾರ್‌ ಅನ್ನು ಹೊತ್ತಿಸದೆ ಬಾಯಿಯಲ್ಲಿಟ್ಟರೂ ನಿಕೋಟಿನನ್ನು ಹೀರಿಕೊಳ್ಳಬಹುದು.

      ಕ್ರೀಟೆಕ್ಸ್‌, ಇಲ್ಲವೆ ಲವಂಗದ ಸಿಗರೇಟ್‌ಗಳು: ಇವುಗಳಲ್ಲಿ ಸಾಮಾನ್ಯವಾಗಿ 60% ತಂಬಾಕು, 40% ಲವಂಗವಿರುತ್ತದೆ. ಇವು ಸಾಮಾನ್ಯ ಸಿಗರೇಟುಗಳಿಗಿಂತ ಹೆಚ್ಚಿನ ಟಾರು, ನಿಕೋಟಿನ್‌ ಮತ್ತು ಕಾರ್ಬನ್‌ ಮೊನೊಕ್ಸೈಡ್‌ ಅನ್ನು ಹೊರಹಾಕುತ್ತವೆ.

      ಪೈಪ್‌: ಸಿಗರೇಟ್‌ಗಳಿಗಿಂತ ಪೈಪ್‌ ಸುರಕ್ಷಿತ ಎಂಬ ಮಾತಲ್ಲಿ ಹುರುಳಿಲ್ಲ. ಏಕೆಂದರೆ ಇವೆರಡರಿಂದಲೂ ಉಂಟಾಗುವ ಕ್ಯಾನ್ಸರ್‌ ಹಾಗೂ ಇತರ ರೋಗಗಳು ಹೆಚ್ಚಾಗಿ ಒಂದೇ ಪ್ರಕಾರದ್ದಾಗಿವೆ.

      ಹೊಗೆರಹಿತ ತಂಬಾಕು: ಜಗಿಯುವ ತಂಬಾಕು, ನಶ್ಯ, ಸುಗಂಧಭರಿತ ಗುಟ್ಕಾ ಇತ್ಯಾದಿ ಈ ವರ್ಗಕ್ಕೆ ಸೇರಿದ್ದು. ಸಾಮಾನ್ಯವಾಗಿ ಇದನ್ನು ಆಗ್ನೇಯ ಏಷ್ಯಾದಲ್ಲಿ ಬಳಸಲಾಗುತ್ತದೆ ಮತ್ತು ಬಾಯಿ ಮೂಲಕ ನಿಕೋಟಿನ್‌ ರಕ್ತಪ್ರವಾಹವನ್ನು ಸೇರುತ್ತದೆ. ಈ ಹೊಗೆರಹಿತ ತಂಬಾಕಿನ ಬಳಕೆಯೂ ತಂಬಾಕಿನ ಬೇರಾವುದೇ ಬಳಕೆಯಷ್ಟೇ ಅಪಾಯಕಾರಿ.

      ನೀರಿನ ಕೊಳವೆಗಳು (ಬಾಂಗ್‌, ಹುಕ್ಕಾ, ನಾರ್ಗಿಲ್‌, ಶೀಶಾ): ಈ ಉಪಕರಣಗಳಲ್ಲಿ ತಂಬಾಕು ಹೊಗೆಯು ಮೊದಲು ನೀರಿನ ಮೂಲಕ ಹಾದುಹೋಗುತ್ತದೆ, ನಂತರ ಅದನ್ನು ಬಾಯಿ ಮೂಲಕ ಒಳಕ್ಕೆ ಸೇದಿಕೊಳ್ಳಲಾಗುತ್ತದೆ. ಆದರೆ ಇದರಿಂದಾಗಿ, ಶ್ವಾಸಕೋಶಗಳೊಳಗೆ ಹೋಗುವ ಕ್ಯಾನ್ಸರ್‌ಜನಕದಂಥ ವಿಷಕಾರಕಗಳ ಪ್ರಮಾಣ ಕಡಿಮೆಯಂತೂ ಆಗುವುದಿಲ್ಲ.

      [ಪುಟ 31ರಲ್ಲಿರುವ ಚೌಕ/ಚಿತ್ರ]

      ಧೂಮಪಾನ ನಿಲ್ಲಿಸಲು ಸಹಾಯಮಾಡಿ:

      ● ಸಕಾರಾತ್ಮಕವಾಗಿರಿ. ಕಾಡುತ್ತಾ ಇಲ್ಲವೇ ಭಾಷಣ ಬಿಗಿಯುತ್ತಾ ಇರುವುದಕ್ಕಿಂತ ಪ್ರಶಂಸೆಯ ಮಾತುಗಳನ್ನಾಡಿ, ಇನಾಮು ಕೊಡಿ. ಇದು ಹೆಚ್ಚು ಪರಿಣಾಮಕಾರಿ. “ಪುನಃ ಸೋತು ಹೋದಿರಲ್ಲಾ” ಎನ್ನುವುದಕ್ಕಿಂತ “ಪುನಃ ಪ್ರಯತ್ನಿಸಿ ನೋಡಿ. ನಿಮ್ಮಿಂದ ಖಂಡಿತ ಆಗುತ್ತೆ” ಎಂಬ ಮಾತುಗಳಿಗೆ ಹೆಚ್ಚು ಶಕ್ತಿಯಿದೆ.

      ● ಕ್ಷಮಿಸಿರಿ. ಧೂಮಪಾನ ನಿಲ್ಲಿಸಲು ಪ್ರಯತ್ನಮಾಡುತ್ತಿರುವವರು ನಿಮ್ಮ ಮೇಲೆ ಸಿಟ್ಟುಮಾಡಿದರೆ ಅದನ್ನು ಅಲಕ್ಷಿಸಿ. “ನಿಮಗೆ ತುಂಬ ಕಷ್ಟವಾಗುತ್ತಿದೆಯೆಂದು ನನಗೆ ಗೊತ್ತು. ಆದರೂ ನಿಮ್ಮ ಪ್ರಯತ್ನ ನೋಡಿ ತುಂಬ ಹೆಮ್ಮೆಯಾಗುತ್ತಿದೆ” ಎಂಬಂಥ ದಯಾಪರ ಮಾತುಗಳನ್ನಾಡಿ. “ನೀವು ಸಿಗರೇಟ್‌ ಸೇದುತ್ತಿದ್ದಾಗಲೇ ಸರಿಯಾಗಿದ್ದಿರಿ. ಅದೇ ಚೆನ್ನಾಗಿತ್ತು” ಎಂದು ಅಪ್ಪಿತಪ್ಪಿಯೂ ಹೇಳಬೇಡಿ.

      ● ನಿಜ ಮಿತ್ರರಾಗಿರಿ. “ಮಿತ್ರನ ಪ್ರೀತಿಯು ನಿರಂತರ” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 17:17) ಹೌದು, ಧೂಮಪಾನ ನಿಲ್ಲಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಯೊಂದಿಗೆ ‘ನಿರಂತರವೂ’ ಅಂದರೆ ಯಾವುದೇ ಹೊತ್ತಿನಲ್ಲಿ, ಅವರ ಮನೋಸ್ಥಿತಿ ಹೇಗೆಯೇ ಇರಲಿ ತಾಳ್ಮೆ ಹಾಗೂ ಪ್ರೀತಿಯಿಂದ ನಡೆದುಕೊಳ್ಳಲು ಪ್ರಯತ್ನಿಸಿ.

  • ನೀವು ಖಂಡಿತ ಜಯಿಸುವಿರಿ!
    ಎಚ್ಚರ!—2010 | ಅಕ್ಟೋಬರ್‌
    • ನೀವು ಖಂಡಿತ ಜಯಿಸುವಿರಿ!

      ನೀವೀಗ ‘ಧೈರ್ಯದಿಂದ ಕೆಲಸಕ್ಕೆ ಕೈಹಚ್ಚುವ’ ಸಮಯ ಬಂದಿದೆ. (1 ಪೂರ್ವಕಾಲವೃತ್ತಾಂತ 28:10) ಸಫಲರಾಗುವ ಸಾಧ್ಯತೆಯನ್ನು ಹೆಚ್ಚಿಸಲು ಕೊನೆಯಲ್ಲಿ ನೀವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು?

      ತಾರೀಖು ಗೊತ್ತುಪಡಿಸಿ. ಧೂಮಪಾನ ನಿಲ್ಲಿಸಲು ಒಂದು ತಾರೀಖನ್ನು ಗೊತ್ತುಪಡಿಸಿ. ಆ ತಾರೀಖು ನೀವು ಚಟ ಬಿಡುವ ನಿರ್ಣಯ ತಕ್ಕೊಂಡ ಎರಡು ವಾರಗಳೊಳಗೆ ಇರಬೇಕೆಂದು ಆರೋಗ್ಯಕ್ಕೆ ಸಂಬಂಧಪಟ್ಟ ಯು.ಎಸ್‌. ಇಲಾಖೆ ಶಿಫಾರಸ್ಸು ಮಾಡುತ್ತದೆ. ಏಕೆಂದರೆ ಆ ಸಮಯಾವಧಿಯಲ್ಲಿ ನಿಮ್ಮ ದೃಢಸಂಕಲ್ಪ ಕಡಿಮೆಯಾಗಿರುವುದಿಲ್ಲ. ಆ ದಿನವನ್ನು ಕ್ಯಾಲೆಂಡರ್‌ನಲ್ಲಿ ಗುರುತಿಸಿಡಿ. ಮಿತ್ರರಿಗೂ ತಿಳಿಸಿ. ಬಳಿಕ ಏನೇ ಆದರೂ ಆ ತಾರೀಖನ್ನು ಮುಂದೂಡಬೇಡಿ.

      “ಚಟ ಬಿಡಲು ನೆರವಾಗುವ ಕಾರ್ಡು” ತಯಾರಿಸಿ. ಈ ಕಾರ್ಡಲ್ಲಿ ಕೆಳಕಂಡ ಮಾಹಿತಿಯನ್ನಲ್ಲದೆ ನಿಮ್ಮ ದೃಢಸಂಕಲ್ಪವನ್ನು ಬಲಪಡಿಸುವ ವಿಷಯವನ್ನೂ ಸೇರಿಸಬಹುದು:

      ● ನೀವು ಧೂಮಪಾನ ನಿಲ್ಲಿಸಲು ಕಾರಣಗಳು

      ● ಸಿಗರೇಟ್‌ ಸೇದಲು ಮನಸ್ಸಾದಾಗ ಆ ಆಸೆಯನ್ನು ಹೊಸಕಿಹಾಕಲು ನೆರವಾಗುವವರ ಫೋನ್‌ ನಂಬರುಗಳು

      ● ನಿಮ್ಮ ಗುರಿಯನ್ನು ಸಾಧಿಸಲು ನೆರವಾಗುವ ವಿಚಾರಗಳು. ಗಲಾತ್ಯ 5:22, 23ರಂಥ ಬೈಬಲ್‌ ವಚನಗಳನ್ನೂ ಸೇರಿಸಬಹುದು.

      ಈ ಕಾರ್ಡ್‌ ಯಾವಾಗಲೂ ನಿಮ್ಮ ಬಳಿ ಇರಲಿ. ಅದನ್ನು ಆಗಾಗ್ಗೆ ಓದಿ. ಆ ಚಟ ಬಿಟ್ಟ ಬಳಿಕವೂ ಧೂಮಪಾನ ಮಾಡಲು ಮನಸ್ಸಾದಾಗಲೆಲ್ಲ ಆ ಕಾರ್ಡನ್ನು ಓದಿ.

      ಕೊಂಡಿಗಳನ್ನು ಕಳಚಿಹಾಕಿ. ನೀವು ಗೊತ್ತುಪಡಿಸಿರುವ ತಾರೀಖಿನ ಮುಂಚೆಯೇ, ಧೂಮಪಾನದೊಂದಿಗೆ ಜೋಡಿಸಿರುವ ನಿಮ್ಮ ರೂಢಿಗಳನ್ನೆಲ್ಲ ಬಿಟ್ಟುಬಿಡಲಾರಂಭಿಸಿ. ಉದಾಹರಣೆಗೆ ಬೆಳಗ್ಗೆ ಎದ್ದ ಕೂಡಲೇ ಧೂಮಪಾನ ಮಾಡುವ ಅಭ್ಯಾಸವಿರುವಲ್ಲಿ, ಅದನ್ನು ಒಂದು ತಾಸು ಇಲ್ಲವೆ ಹೆಚ್ಚು ಸಮಯಕ್ಕೆ ಮುಂದೂಡಿರಿ. ಊಟ ಮಾಡುತ್ತಿರುವಾಗಲೊ ನಂತರವೊ ಧೂಮಪಾನ ಮಾಡುವ ರೂಢಿಯಿದ್ದಲ್ಲಿ ಅದನ್ನೂ ಬಿಟ್ಟುಬಿಡಿ. ಧೂಮಪಾನಿಗಳಿರುವ ಸ್ಥಳಗಳಿಂದ ದೂರವಿರಿ. ಅಲ್ಲದೆ, ಯಾರಾದರೂ ನಿಮಗೆ ಸಿಗರೇಟ್‌ ನೀಡಿದರೆ “ಬೇಡ, ಧೂಮಪಾನ ಬಿಟ್ಟುಬಿಟ್ಟಿದ್ದೇನೆ” ಎಂದು ಹೇಳಲಿಕ್ಕಾಗಿ ಆ ಮಾತುಗಳನ್ನು ನೀವೊಬ್ಬರೇ ಇರುವಾಗ ಗಟ್ಟಿಯಾಗಿ ಪ್ರ್ಯಾಕ್ಟಿಸ್‌ ಮಾಡಿ. ಇಂಥ ಹೆಜ್ಜೆಗಳು ಆ ದಿನಕ್ಕಾಗಿ ನಿಮ್ಮನ್ನು ತಯಾರಾಗಿಸುವುದು ಮಾತ್ರವಲ್ಲ ನೀವು ‘ಮಾಜಿ ಧೂಮಪಾನಿ’ ಆಗುವ ದಿನ ದೂರವಿಲ್ಲವೆಂದು ನಿಮಗೆ ನೆನಪುಹುಟ್ಟಿಸುತ್ತಿರುವವು.

      ಸಿದ್ಧರಾಗಿ. ನೀವು ಗೊತ್ತುಪಡಿಸಿರುವ ತಾರೀಖು ಹತ್ತಿರಬಂದಂತೆ ಕ್ಯಾರೆಟ್‌ ತುಂಡುಗಳು, ಚೂಯಿಂಗ್‌ ಗಮ್‌, ಬೀಜಗಳು (ಗೇರುಬೀಜ, ಬಾದಾಮಿ ಇತ್ಯಾದಿ) ಮುಂತಾದ ತಿನಿಸುಗಳನ್ನು ತಂದಿಡಿ. ಇವುಗಳನ್ನು ಧೂಮಪಾನ ಮಾಡುವ ಆಸೆ ಬಂದಾಗಲೆಲ್ಲ ಬಾಯಿಗೆ ಹಾಕಿ ಮೆಲ್ಲುತ್ತಾ ಇರಿ. ನಿಮ್ಮ ಸ್ನೇಹಿತರಿಗೂ ಕುಟುಂಬದವರಿಗೂ ನೀವು ಗೊತ್ತುಪಡಿಸಿರುವ ತಾರೀಖಿನ ಬಗ್ಗೆ ನೆನಪುಹುಟ್ಟಿಸಿ, ಅವರಿಂದ ಯಾವ ನೆರವು ಬಯಸುತ್ತೀರೆಂದು ತಿಳಿಸಿ. ಆ ತಾರೀಖಿನ ಹಿಂದಿನ ದಿನ ಆ್ಯಶ್‌ಟ್ರೇಗಳನ್ನು, ಲೈಟರ್‌ಗಳನ್ನು ತೆಗೆದುಹಾಕಿ. ಅಷ್ಟುಮಾತ್ರವಲ್ಲದೆ ಅನಿರೀಕ್ಷಿತವಾಗಿ ನಿಮ್ಮ ಕಣ್ಣಿಗೆ ಬಿದ್ದು ಧೂಮಪಾನಕ್ಕೆ ಪ್ರೇರಿಸುವ ವಸ್ತುಗಳನ್ನು ಹುಡುಕಿ ಎಸೆದುಬಿಡಿ. ಉದಾಹರಣೆಗೆ ಮನೆಯಲ್ಲೋ, ಕಾರ್‌ನಲ್ಲೊ, ಜೇಬುಗಳಲ್ಲೋ, ಕೆಲಸದ ಸ್ಥಳದಲ್ಲೋ ಉಳಿದಿರಬಹುದಾದ ಸಿಗರೇಟ್‌ಗಳನ್ನು ಎಸೆದುಬಿಡಿ. ಏಕೆಂದರೆ ಸಿಗರೇಟ್‌ ಸೇದಲು ಮನಸ್ಸಾದಾಗ ಡ್ರಾಅರ್‌ ತೆರೆದಾಕ್ಷಣ ಅದು ಕೈಗೆ ಸಿಕ್ಕಿದರೆ ಸೇದದೇ ಇರಲು ಕಷ್ಟವಾದೀತಲ್ಲವೇ? ಆದರೆ ಸಿಗದೆ ಹೋದರೆ ಮಿತ್ರನ ಬಳಿ ಸಿಗರೇಟ್‌ ಕೇಳುವ ಅಥವಾ ಸಿಗರೇಟ್‌ ಪ್ಯಾಕ್‌ ಅನ್ನು ಖರೀದಿಸಿ ತರುವ ಗೋಜಿಗೆ ಹೋಗದಿರುವಿರಿ. ಅಲ್ಲದೆ ದೇವರ ಬೆಂಬಲಕ್ಕಾಗಿ ಪ್ರಾರ್ಥಿಸುತ್ತಾ ಇರಿ. ಇದನ್ನು ನಿಮ್ಮ ಕೊನೆಯ ಸಿಗರೇಟ್‌ ಸೇದಿದ ಬಳಿಕವಂತೂ ಇನ್ನಷ್ಟು ಕಟ್ಟಾಸಕ್ತಿಯಿಂದ ಮಾಡಿ.—ಲೂಕ 11:13.

      ಅಸಂಖ್ಯಾತ ಜನರು ಒಂದುಕಾಲದಲ್ಲಿ ತಮ್ಮ ದುಷ್ಟ ಮಿತ್ರನಾಗಿದ್ದ ಸಿಗರೇಟ್‌ನೊಂದಿಗಿನ “ಸಂಬಂಧ ಮುರಿದುಹಾಕಿದ್ದಾರೆ.” ನೀವೂ ಹಾಗೆ ಮಾಡಬಲ್ಲಿರಿ. ಈ ಚಟವನ್ನು ಕೈಬಿಟ್ಟರೆ ಉತ್ತಮ ಆರೋಗ್ಯ ನಿಮ್ಮ ಕೈಗೆಟಕುವುದು ಮಾತ್ರವಲ್ಲದೆ ಆ ಚಟದ ಕಪಿಮುಷ್ಟಿಯಿಂದ ಮುಕ್ತರಾದ ನೆಮ್ಮದಿ ನಿಮ್ಮದಾಗುವುದು! (g10-E 05)

      [ಪುಟ 32ರಲ್ಲಿರುವ ಚಿತ್ರ]

      ಚಟ ಬಿಡಲು ನೆರವಾಗುವ ಕಾರ್ಡ್‌ ಯಾವಾಗಲೂ ನಿಮ್ಮ ಬಳಿ ಇರಲಿ. ಅದನ್ನು ಆಗಾಗ್ಗೆ ಓದಿ

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ