“ಶಾಂತಿದಾಯಕನಾದ ದೇವರು” ಪೀಡಿತರ ಕಾಳಜಿವಹಿಸುತ್ತಾನೆ
ಪುರಾತನ ಕಾಲದ ದಾವೀದನು ಕಡುಸಂಕಟಕ್ಕೆ ಅಪರಿಚಿತನಾಗಿರಲಿಲ್ಲ ಎಂಬು ದನ್ನು ಬೈಬಲು ಸ್ಪಷ್ಟಪಡಿಸುತ್ತದೆ. ಅನೇಕ ವರ್ಷಗಳ ವರೆಗೆ ಅವನು, ಒಬ್ಬ ದೇಶಭ್ರಷ್ಟನೋಪಾದಿ ಜೀವಿಸಿದನು. ಅವನನ್ನು ಕೊಲ್ಲಲು ದೃಢನಿರ್ಧಾರವನ್ನು ಮಾಡಿದ್ದ, ಒಬ್ಬ ದುಷ್ಟನೂ ಹಟಮಾರಿಯೂ ಆಗಿದ್ದ ರಾಜನಿಂದ ಅವನು ನಿಷ್ಠುರವಾಗಿ ಬೆನ್ನಟ್ಟಲ್ಪಟ್ಟನು. ಕಡುಸಂಕಟದ ಈ ಕಾಲಾವಧಿಯಲ್ಲಿ, ದಾವೀದನು ದೂರ ದೂರದ ಸ್ಥಳಗಳಲ್ಲಿ ಅಡಗಿಕೊಂಡಿದ್ದನು. ಆದರೂ ಅವನು ಹೆಚ್ಚಿನದ್ದನ್ನು ಮಾಡಿದನು. ತನ್ನ ಪ್ರತಿಕೂಲ ಪರಿಸ್ಥಿತಿಯ ಕುರಿತಾಗಿ ಅವನು ಯೆಹೋವನಿಗೆ ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಿದನು. ತದನಂತರ ಅವನು, ‘ನಾನು ಯೆಹೋವನಿಗೆ ಮೊರೆಯಿಟ್ಟೆನು; ಯೆಹೋವನಿಗೆ ಕೂಗಿ ಬಿನ್ನೈಸಿದೆನು’ ಎಂದು ತನ್ನ ಕಠಿನ ಪರೀಕ್ಷೆಯ ವಿಷಯದಲ್ಲಿ ಬರೆದನು. “ನನ್ನ ಚಿಂತೆಗಳನ್ನು ಆತನ ಮುಂದೆ ಬಿಚ್ಚಿದೆನು; ನನ್ನ ಕಷ್ಟವನ್ನು ಆತನಿಗೆ ಅರಿಕೆಮಾಡಿದೆನು.’—ಕೀರ್ತನೆ 142:1, 2.
ಇಂದು, ಕೆಲವರು ದೇವರ ಮೇಲೆ ದಾವೀದನಿಗಿದ್ದ ಅವಲಂಬನೆಯನ್ನು ಅಪಹಾಸ್ಯಮಾಡಬಹುದು. ಪ್ರಾರ್ಥನೆಯು ಕೇವಲ ಒಂದು ಮನಶ್ಶಾಸ್ತ್ರೀಯ ಊರುಗೋಲಾಗಿದೆ ಮತ್ತು ಪ್ರಾಯೋಗಿಕ ಅರ್ಥದಲ್ಲಿ ಅದು ಕಾಲಹರಣವಾಗಿದೆಯೆಂದು ಅವರು ಹೇಳಬಹುದು. ಆದರೂ, ದೇವರಲ್ಲಿದ್ದ ದಾವೀದನ ದೃಢಭರವಸೆಯು ಅನುಚಿತವಾಗಿರಲಿಲ್ಲ, ಏಕೆಂದರೆ ಕಟ್ಟಕಡೆಗೆ ಅವನ ವೈರಿಗಳು ಸೋಲಿಸಲ್ಪಟ್ಟರು. ತನ್ನ ಅನುಭವದ ಕುರಿತು ಹಿನ್ನೋಟ ಬೀರುತ್ತಾ ದಾವೀದನು ಬರೆದುದು: “ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು ಯೆಹೋವನು ಕೇಳಿ ಎಲ್ಲಾ ಬಾಧೆಗಳಿಂದ ಬಿಡಿಸಿದನು.” (ಕೀರ್ತನೆ 34:6) ಯಾರ ಕಡೆಗೆ ದಾವೀದನು ತಿರುಗಿದನೋ ಆ ಸತ್ಯ ದೇವರು, ಇನ್ನೆಲ್ಲಿಯೋ “ಶಾಂತಿದಾಯಕನಾದ ದೇವರು” ಎಂದು ಕರೆಯಲ್ಪಟ್ಟಿದ್ದಾನೆ. (ಫಿಲಿಪ್ಪಿ 4:9; ಇಬ್ರಿಯ 13:20) ನಮಗೆ ಶಾಂತಿಯಲ್ಲಿ ಫಲಿಸುವ, ಕಡುಸಂಕಟದಿಂದ ಪರಿಹಾರವನ್ನು ಆತನು ತರುವನೊ?
ಯೆಹೋವನು ನಿಮ್ಮ ಕುರಿತಾಗಿ ಕಾಳಜಿವಹಿಸುತ್ತಾನೆ
ಯೆಹೋವನು ತನ್ನ ಜನರ ಪ್ರತಿಕೂಲ ಪರಿಸ್ಥಿತಿಗಳ ಕುರಿತಾಗಿ ಉದಾಸೀನನಾಗಿರುವುದಿಲ್ಲ. (ಕೀರ್ತನೆ 34:15) ಒಂದು ಗುಂಪಿನೋಪಾದಿ ತನ್ನ ಸೇವಕರ ಆವಶ್ಯಕತೆಗಳ ಕುರಿತಾಗಿ ಮಾತ್ರವಲ್ಲ, ತನಗೆ ಭಯಪಡುವ ಪ್ರತಿಯೊಬ್ಬ ವ್ಯಕ್ತಿಯ ಆವಶ್ಯಕತೆಗಳ ಕುರಿತಾಗಿಯೂ ಆತನು ಆಸಕ್ತಿತೋರಿಸುವವನಾಗಿದ್ದಾನೆ. ಪುರಾತನ ಯೆರೂಸಲೇಮಿನಲ್ಲಿ ದೇವಾಲಯವನ್ನು ಪ್ರತಿಷ್ಠಾಪಿಸುತ್ತಿದ್ದಾಗ, ಸೊಲೊಮೋನನು ಯೆಹೋವನಿಗೆ, “ಎಲ್ಲಾ ಇಸ್ರಾಯೇಲ್ಯರಾಗಲಿ ಅವರಲ್ಲೊಬ್ಬನಾಗಲಿ ತಾವು ಅನುಭವಿಸುತ್ತಿರುವ ಉಪದ್ರವ ದುಃಖಗಳ ನಿಮಿತ್ತವಾಗಿ ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡುವದಾದರೆ,” ಅವರಿಗೆ ಕಿವಿಗೊಡುವಂತೆ ದೈನ್ಯಭಾವದಿಂದ ಬೇಡಿಕೊಂಡನು. (ಓರೆಅಕ್ಷರಗಳು ನಮ್ಮವು.) (2 ಪೂರ್ವಕಾಲವೃತ್ತಾಂತ 6:29) ಸೊಲೊಮೋನನು ಒಪ್ಪಿಕೊಂಡಂತೆ, ಪ್ರತಿಯೊಬ್ಬ ವ್ಯಕ್ತಿಗೂ, ತನ್ನದೇ ಆದ ಅಸದೃಶ ಕಡುಸಂಕಟವನ್ನು ತಾಳಿಕೊಳ್ಳಲಿಕ್ಕಿರುತ್ತದೆ. ಒಬ್ಬ ವ್ಯಕ್ತಿಗೆ ಅದು ಶಾರೀರಿಕ ಅಸ್ವಸ್ಥತೆಯಾಗಿರಬಹುದು. ಇನ್ನೊಬ್ಬ ವ್ಯಕ್ತಿಗಾದರೋ ಅದು ಭಾವನಾತ್ಮಕ ಬೇಗುದಿಯಾಗಿರಬಹುದು. ಕೆಲವರು ಒಬ್ಬ ಪ್ರಿಯ ವ್ಯಕ್ತಿಯ ಮರಣದಿಂದ ಕಡುಸಂಕಟಕ್ಕೊಳಗಾಗಿರಬಹುದು. ಈ ಕಷ್ಟಕರ ಸಮಯಗಳಲ್ಲಿ, ನಿರುದ್ಯೋಗ, ಆರ್ಥಿಕ ಸಂಕಷ್ಟ, ಮತ್ತು ಕೌಟುಂಬಿಕ ಸಮಸ್ಯೆಗಳು ಸಹ ಸರ್ವಸಾಮಾನ್ಯವಾದ ಕಡುಸಂಕಟಗಳಾಗಿವೆ.
‘ನಿಮ್ಮ ಸ್ವಂತ ಉಪದ್ರವ ಹಾಗೂ ನಿಮ್ಮ ಸ್ವಂತ ದುಃಖದ’ ಕುರಿತು ತುಸು ಆಲೋಚಿಸಿರಿ. ಆಗಿಂದಾಗ್ಗೆ ಕೀರ್ತನೆಗಾರನಾದ ದಾವೀದನಿಗಾಗಿದ್ದಂತಹದ್ದೇ ಅನಿಸಿಕೆ ನಿಮಗೂ ಆಗಿರಬಹುದು. ಅವನು ಬರೆದುದು: “ಕರುಣಾಳುಗಳನ್ನು ನಿರೀಕ್ಷಿಸಿದೆ; ದೊರೆಯಲಿಲ್ಲ. ಸಂತೈಸುವವರನ್ನು ಹಾರೈಸಿದೆ; ಸಿಕ್ಕಲಿಲ್ಲ.” ಆದರೂ, ದೇವರು ನಿಮ್ಮ ಸನ್ನಿವೇಶದ ಕುರಿತು ಕಾಳಜಿವಹಿಸುತ್ತಾನೆ ಎಂದು ನೀವು ಆಶ್ವಾಸನೆಯಿಂದಿರಸಾಧ್ಯವಿದೆ. ಏಕೆಂದರೆ ತದನಂತರ ಅದೇ ಕೀರ್ತನೆಯಲ್ಲಿ ದಾವೀದನು ಬರೆದುದು: “ಯೆಹೋವನು ಬಡವರ ಮೊರೆಗೆ ಲಕ್ಷ್ಯಕೊಡುವನು; ಸೆರೆಯಲ್ಲಿರುವ ತನ್ನವರನ್ನು ತಿರಸ್ಕರಿಸುವದಿಲ್ಲ.”—ಕೀರ್ತನೆ 69:20, 33.
ರೂಪಕಾಲಂಕಾರವಾಗಿ ಹೇಳುವುದಾದರೆ, ದಾವೀದನ ಮಾತುಗಳನ್ನು ವಿಶಾಲಾರ್ಥದಲ್ಲಿ ಅನ್ವಯಿಸಿಕೊಳ್ಳುವ ಮೂಲಕ, ತಮ್ಮ ಕಡುಸಂಕಟಗಳಿಂದ ಬಂಧಿತರಾಗಿರುವವರ ಪ್ರಾರ್ಥನೆಗಳಿಗೆ ಮಾನವಕುಲದ ಸೃಷ್ಟಿಕರ್ತನು ಕಿವಿಗೊಡುತ್ತಾನೆ ಎಂಬ ಆಶ್ವಾಸನೆಯಿಂದಿರಬಲ್ಲೆವು. ಅದಕ್ಕಿಂತಲೂ ಹೆಚ್ಚಾಗಿ, ಆತನು ಅವರ ಸ್ಥಿತಿಯ ವಿಷಯದಲ್ಲಿ ಪ್ರತಿಕ್ರಿಯಿಸುತ್ತಾನೆ. ಪೀಡಿತರಿಗಾಗಿರುವ ಯೆಹೋವನ ಸಹಾನುಭೂತಿಯನ್ನು ಪ್ರಕಟಪಡಿಸುವ ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿರಿ.
“ವಿಧವೆಯರನ್ನಾಗಲಿ ದಿಕ್ಕಿಲ್ಲದ ಮಕ್ಕಳನ್ನಾಗಲಿ ಬಾಧಿಸಬಾರದು. ನೀವು ಇಂಥವರನ್ನು ಬಾಧಿಸಿದರೆ ಅವರು ನನಗೆ ಮೊರೆಯಿಡುವರು; ಆ ಮೊರೆಗೆ ನಾನು ಕಿವಿಗೊಡುವೆನೆಂದು ತಿಳಿದುಕೊಳ್ಳಿರಿ. ನಾನು ಕೋಪಿಸಿಕೊಂಡು ನಿಮ್ಮನ್ನು ಶತ್ರುಗಳ ಕತ್ತಿಯಿಂದ ಸಂಹಾರಮಾಡಿಸುವೆನು.”—ವಿಮೋಚನಕಾಂಡ 22:22-24.
“ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ?”—ಲೂಕ 18:7.
“ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.”—ಕೀರ್ತನೆ 72:12-14.
“ನಿಮ್ಮನ್ನು [ಭೂಮಿಯಲ್ಲಿರುವ ದೇವರ ಜನರನ್ನು] ಮುಟ್ಟುತ್ತಿರುವವನು, ನನ್ನ ಕಣ್ಣುಗುಡ್ಡೆಯನ್ನು ಮುಟ್ಟುತ್ತಿದ್ದಾನೆ.”—ಜೆಕರ್ಯ 2:8, NW.
ಈ ಕೆಲವು ಉದಾಹರಣೆಗಳು, ತನ್ನ ಜನರ ಕ್ಷೇಮದ ವಿಷಯದಲ್ಲಿ ನಮ್ಮ ಸೃಷ್ಟಿಕರ್ತನಿಗಿರುವ ಗಾಢವಾದ ಆಸಕ್ತಿಯನ್ನು ದೃಷ್ಟಾಂತಿಸುತ್ತವೆ. ಆದುದರಿಂದ, ಅಪೊಸ್ತಲ ಪೇತ್ರನ ಬುದ್ಧಿವಾದವನ್ನು ಅನುಸರಿಸಲು ನಮಗೆ ಸಕಾರಣವಿದೆ: “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ಆದರೆ ಕಡುಸಂಕಟದ ಸಮಯಗಳಲ್ಲಿ ದೇವರು ನಮಗೆ ಹೇಗೆ ಸಹಾಯ ಮಾಡುವನು?
ದೇವರು ಪೀಡಿತರಿಗೆ ಸಹಾಯ ಮಾಡುವ ವಿಧ
ನಾವು ನೋಡಿರುವಂತೆ, ದಾವೀದನು ಕಡುಸಂಕಟವನ್ನು ಅನುಭವಿಸಿದಾಗ, ಅವನು ಮಾರ್ಗದರ್ಶನಕ್ಕಾಗಿ ದೇವರಿಗೆ ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಿದನು. ಅದೇ ಸಮಯದಲ್ಲಿ, ತನ್ನನ್ನು ಬೆನ್ನಟ್ಟುವವರಿಂದ ತಪ್ಪಿಸಿಕೊಳ್ಳಲು ಜಾಣತನವನ್ನು ಉಪಯೋಗಿಸುತ್ತಾ, ಆ ಸನ್ನಿವೇಶವನ್ನು ನಿವಾರಿಸಲು ಆರಂಭದ ಹೆಜ್ಜೆಯನ್ನು ತೆಗೆದುಕೊಂಡನು. ಹೀಗೆ, ವೈಯಕ್ತಿಕ ಪ್ರಯತ್ನದೊಂದಿಗೆ ಯೆಹೋವನ ಮೇಲಿನ ಆತುಕೊಳ್ಳುವಿಕೆಯು, ತನ್ನ ಪ್ರತಿಕೂಲ ಪರಿಸ್ಥಿತಿಯನ್ನು ಸಹಿಸಿಕೊಳ್ಳುವಂತೆ ದಾವೀದನನ್ನು ಶಕ್ತನನ್ನಾಗಿಮಾಡಿತು. ಇದರಿಂದ ನಾವು ಏನನ್ನು ಕಲಿಯಸಾಧ್ಯವಿದೆ?
ನಾವು ಕಡುಸಂಕಟವನ್ನು ಎದುರಿಸುವಾಗ, ಆ ಸಮಸ್ಯೆಯನ್ನು ಬಗೆಹರಿಸಲಿಕ್ಕಾಗಿ ಸಮಂಜಸವಾದ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವುದು ನಿಶ್ಚಯವಾಗಿಯೂ ತಪ್ಪಾಗಿರುವುದಿಲ್ಲ. ಉದಾಹರಣೆಗಾಗಿ, ಕ್ರೈಸ್ತನೊಬ್ಬನು ನಿರುದ್ಯೋಗಿಯಾಗಿರುವುದಾದರೆ, ಅವನು ಕೆಲಸವನ್ನು ಕಂಡುಕೊಳ್ಳಲು ಪ್ರಯತ್ನಿಸದೆ ಇರುವನೊ? ಅಥವಾ ಅವನು ಶಾರೀರಿಕ ವ್ಯಾಧಿಯಿಂದ ಕಷ್ಟಾನುಭವಿಸುತ್ತಿರುವಲ್ಲಿ, ಚಿಕಿತ್ಸೆಯನ್ನು ಪಡೆದುಕೊಳ್ಳಲು ಪ್ರಯತ್ನಿಸದೆ ಇರುವನೊ? ವಾಸ್ತವವಾಗಿ, ಸರ್ವ ರೀತಿಯ ಅಸ್ವಸ್ಥತೆಯನ್ನು ವಾಸಿಮಾಡುವ ಶಕ್ತಿಯನ್ನು ಹೊಂದಿದ್ದ ಯೇಸು ಸಹ, ‘ವ್ಯಾಧಿಯಿರುವವನಿಗೆ ವೈದ್ಯನ ಆವಶ್ಯಕತೆಯಿದೆ’ (NW) ಎಂಬುದನ್ನು ಒಪ್ಪಿಕೊಂಡನು. (ಮತ್ತಾಯ 9:12; 1 ತಿಮೊಥೆಯ 5:23ನ್ನು ಹೋಲಿಸಿರಿ.) ನಿಶ್ಚಯವಾಗಿ ಕೆಲವೊಂದು ಪ್ರತಿಕೂಲ ಪರಿಸ್ಥಿತಿಗಳನ್ನು ಇಲ್ಲದಂತೆಮಾಡಲು ಸಾಧ್ಯವಿಲ್ಲ; ಅವುಗಳನ್ನು ತಾಳಿಕೊಳ್ಳಬೇಕು ಅಷ್ಟೆ. ಆದರೂ, ಕೆಲವರು ಪರಿಗಣಿಸುವಂತೆ, ನಿಜ ಕ್ರೈಸ್ತನೊಬ್ಬನು ಕಷ್ಟಾನುಭವವನ್ನೇ ಒಂದು ಪುಣ್ಯವಾಗಿ ವೀಕ್ಷಿಸುವುದಿಲ್ಲ. (1 ಅರಸುಗಳು 18:28ನ್ನು ಹೋಲಿಸಿರಿ.) ಬದಲಾಗಿ, ಅವನು ತನ್ನ ಕಡುಸಂಕಟವನ್ನು ನಿಭಾಯಿಸಲು ಸಾಧ್ಯವಿರುವ ಯಾವುದೇ ಸೂಕ್ತ ಕ್ರಮಗಳನ್ನು ಕೈಕೊಳ್ಳುತ್ತಾನೆ.
ಆದರೂ, ಅದೇ ಸಮಯದಲ್ಲಿ ಆ ವಿಷಯವನ್ನು ಪ್ರಾರ್ಥನೆಯಲ್ಲಿ ಯೆಹೋವನ ಮುಂದೆ ನಿವೇದಿಸುವುದು ಸಮಂಜಸವಾದದ್ದಾಗಿದೆ. ಏಕೆ? ಮೊದಲಾಗಿ, ನಮ್ಮ ಸೃಷ್ಟಿಕರ್ತನ ಮೇಲೆ ಆತುಕೊಳ್ಳುವ ಮೂಲಕ, “ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಲು” (NW) ನಮಗೆ ಸಹಾಯವು ನೀಡಲ್ಪಡುತ್ತದೆ. (ಫಿಲಿಪ್ಪಿ 1:10) ದೃಷ್ಟಾಂತಕ್ಕಾಗಿ, ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವಾಗ, ದೇವರ ಮೇಲಿನ ಪ್ರಾರ್ಥನಾಪೂರ್ವಕವಾದ ಅವಲಂಬನೆಯು, ಬೈಬಲ್ ಮೂಲತತ್ವಗಳೊಂದಿಗೆ ಸಂಘರ್ಷಿಸುವ ಕೆಲಸವನ್ನು ಮಾಡಲು ಒಪ್ಪಿಕೊಳ್ಳದಂತೆ ನಮಗೆ ಸಹಾಯ ಮಾಡುವುದು. ನಾವು ಹಣದಾಶೆಯಿಂದ ‘ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡುವುದನ್ನು’ ಸಹ ತೊರೆಯುವೆವು. (1 ತಿಮೊಥೆಯ 6:10) ನಿಜವಾಗಿಯೂ, ಉದ್ಯೋಗ ಅಥವಾ ಜೀವಿತದ ಬೇರೆ ಯಾವುದೇ ಅಂಶದ ವಿಷಯದಲ್ಲಿ ಗುರುತರವಾದ ನಿರ್ಧಾರಗಳನ್ನು ಮಾಡುವಾಗ, ನಾವು ದಾವೀದನ ಬುದ್ಧಿವಾದವನ್ನು ಅನುಸರಿಸುವ ಅಗತ್ಯವಿದೆ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.”—ಕೀರ್ತನೆ 55:22.
ಪ್ರಾರ್ಥನೆಯು, ನಾವು ನಮ್ಮ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವಂತೆ ಸಹ ಸಹಾಯ ಮಾಡುತ್ತದೆ; ಇದರಿಂದಾಗಿ ನಮ್ಮ ಕಡುಸಂಕಟವು ನಮ್ಮನ್ನು ಪೂರ್ತಿ ಕಂಗೆಡಿಸುವುದಿಲ್ಲ. ಅಪೊಸ್ತಲ ಪೌಲನು ಬರೆದುದು: “ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದುದನ್ನು ತಿಳಿಯಪಡಿಸಿರಿ.” ಯಾವ ಫಲಿತಾಂಶದೊಂದಿಗೆ? “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಹೌದು, ಶಾಂತಿ, ದೇವಶಾಂತಿ. ಆ ಶಾಂತಿಯು “ಎಲ್ಲಾ ಗ್ರಹಿಕೆಯನ್ನು ಮೀರು”ತ್ತದೆ; ಇದು ನಾವು ನಿರಾಶಾದಾಯಕ ಭಾವೋದ್ವೇಗಗಳಿಂದ ತುಂಬಿದವರಾಗಿರುವಾಗ, ನಮ್ಮನ್ನು ಸ್ಥಿರಪಡಿಸುತ್ತದೆ. ಇದು ‘ನಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕಾಯು’ವುದು; ಹೀಗೆ ನಮ್ಮ ದುಡುಕಿನಿಂದ ಮತ್ತು ಅವಿವೇಕವಾಗಿ ವರ್ತಿಸುವುದನ್ನು—ಇವು ನಮ್ಮ ಕಡುಸಂಕಟಕ್ಕೆ ಕೂಡಿಸಸಾಧ್ಯವಿದೆ—ತೊರೆಯಲು ನಮಗೆ ಸಹಾಯ ಮಾಡುವುದು.—ಪ್ರಸಂಗಿ 7:7.
ಪ್ರಾರ್ಥನೆಯು ಇನ್ನೂ ಹೆಚ್ಚನ್ನು ಮಾಡಬಲ್ಲದು. ಒಂದು ಸನ್ನಿವೇಶವು ಕಾರ್ಯನಡಿಸುವ ರೀತಿಯಲ್ಲಿ ಅದು ವ್ಯತ್ಯಾಸವನ್ನು ಉಂಟುಮಾಡಬಲ್ಲದು. ಒಂದು ಬೈಬಲ್ ಉದಾಹರಣೆಯನ್ನು ಪರಿಗಣಿಸಿರಿ. ಅಪೊಸ್ತಲ ಪೌಲನು ರೋಮ್ನಲ್ಲಿ ಸೆರೆಮನೆಯಲ್ಲಿ ಬಂಧಿತನಾಗಿದ್ದಾಗ, ತನ್ನ ಪರವಾಗಿ ಪ್ರಾರ್ಥಿಸುವಂತೆ ಅವನು ಜೊತೆ ಕ್ರೈಸ್ತರನ್ನು ಉತ್ತೇಜಿಸಿದನು. ಏಕೆ? ಅವನು ಅವರಿಗೆ, “ನಮಗೋಸ್ಕರ ಪ್ರಾರ್ಥನೆಮಾಡಬೇಕೆಂದು ನಿಮ್ಮನ್ನು ಬಹು ವಿಶೇಷವಾಗಿ ಬೇಡಿಕೊಳ್ಳುತ್ತೇನೆ, ಯಾಕಂದರೆ ನಿಮ್ಮ ಪ್ರಾರ್ಥನೆಗಳ ಮೂಲಕ ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರಿಗಿ ಬಂದೇನು” ಎಂದು ಬರೆದನು. (ಇಬ್ರಿಯ 13:19) ತನ್ನ ಜೊತೆ ವಿಶ್ವಾಸಿಗಳ ನಿರಂತರವಾದ ಪ್ರಾರ್ಥನೆಗಳು, ತಾನು ಯಾವಾಗ ಬಿಡುಗಡೆಗೊಳಿಸಲ್ಪಡುವೆನು ಎಂಬ ವಿಷಯದಲ್ಲಿ ವ್ಯತ್ಯಾಸವನ್ನು ಮಾಡಸಾಧ್ಯವಿತ್ತು ಎಂಬುದು ಪೌಲನಿಗೆ ತಿಳಿದಿತ್ತು.—ಫಿಲೆಮೋನ 22.
ಪ್ರಾರ್ಥನೆಯು ನಿಮ್ಮ ಕಡುಸಂಕಟದ ಪರಿಣಾಮವನ್ನು ಬದಲಾಯಿಸುವುದೊ? ಬದಲಾಯಿಸಬಹುದು. ಆದರೂ, ನಾವು ನಿರೀಕ್ಷಿಸಬಹುದಾದಂತಹ ರೀತಿಯಲ್ಲಿ ಯೆಹೋವನು ಯಾವಾಗಲೂ ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುವುದಿಲ್ಲವೆಂಬುದನ್ನು ನಾವು ಗ್ರಹಿಸಬೇಕು. ಉದಾಹರಣೆಗಾಗಿ, ‘ಶರೀರದಲ್ಲಿ ನಾಟಿಕೊಂಡಿದ್ದ ಒಂದು ಶೂಲ’ದ—ಅವನ ದೃಷ್ಟಿಗೆ ಸಂಬಂಧಿಸಿದ ಒಂದು ಶಾರೀರಿಕ ಸಮಸ್ಯೆ ಅದಾಗಿರಬಹುದು—ಕುರಿತಾಗಿ ಪೌಲನು ಪುನಃ ಪುನಃ ಪ್ರಾರ್ಥಿಸಿದನು. ಆ ಕಡುಸಂಕಟವನ್ನು ಇಲ್ಲದಂತೆ ಮಾಡುವ ಬದಲಾಗಿ, ದೇವರು ಪೌಲನಿಗೆ ಹೇಳಿದ್ದು: “ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ.”—2 ಕೊರಿಂಥ 12:7-9.
ಆದುದರಿಂದ ಕೆಲವೊಮ್ಮೆ ನಮ್ಮ ಪ್ರತಿಕೂಲ ಪರಿಸ್ಥಿತಿಗಳು ತೆಗೆದುಹಾಕಲ್ಪಡುವುದಿಲ್ಲ. ಬದಲಾಗಿ, ಸೃಷ್ಟಿಕರ್ತನ ಮೇಲಿರುವ ನಮ್ಮ ಆತುಕೊಳ್ಳುವಿಕೆಯನ್ನು ರುಜುಪಡಿಸಲು ನಮಗೆ ಸಂದರ್ಭವು ದೊರಕುವುದು. (ಅ. ಕೃತ್ಯಗಳು 14:22) ಇದಲ್ಲದೆ, ಯೆಹೋವನು ಕಡುಸಂಕಟವನ್ನು ಇಲ್ಲದಂತೆ ಮಾಡದಿದ್ದರೂ, ಆತನು “[ನಾವು] ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು” ಎಂಬ ಆಶ್ವಾಸನೆ ನಮಗಿರಸಾಧ್ಯವಿದೆ. (1 ಕೊರಿಂಥ 10:13) ಹೌದು, ಯೆಹೋವನು, “ಸಕಲವಿಧವಾಗಿ ಸಂತೈಸುವ ದೇವರೂ ಆಗಿದ್ದು ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ” ಎಂದು ಕರೆಯಲ್ಪಟ್ಟಿರುವುದು ಸಕಾರಣಕ್ಕಾಗಿಯೇ. (2 ಕೊರಿಂಥ 1:3, 4) ನಮಗೆ ಸಹಿಸಲು ಏನು ಅಗತ್ಯವೋ ಅದನ್ನು ಗಣನೀಯವಾದ ಶಾಂತಿಯೊಂದಿಗೆ ಆತನು ನಮಗೆ ಕೊಡುತ್ತಾನೆ.
ಬೇಗನೆ—ಕಡುಸಂಕಟವಿಲ್ಲದ ಒಂದು ಲೋಕ!
ತನ್ನ ರಾಜ್ಯದ ಮೂಲಕ, ತಾನು ಬೇಗನೆ ಮಾನವಕುಲದ ಕಡುಸಂಕಟಗಳನ್ನು ನಿರ್ಮೂಲಮಾಡುವೆನೆಂದು ಸೃಷ್ಟಿಕರ್ತನು ವಾಗ್ದಾನಿಸುತ್ತಾನೆ. ಇದನ್ನು ಆತನು ಹೇಗೆ ಪೂರೈಸುವನು? “ಈ ವಿಷಯಗಳ ವ್ಯವಸ್ಥೆಯ ದೇವರು” ಎಂದು ಬೈಬಲು ಗುರುತಿಸುವ, ಕಡುಸಂಕಟದ ಪ್ರಧಾನ ಪ್ರೇರೇಪಕನೂ ಶಾಂತಿಯ ಅಗ್ರಗಣ್ಯ ವೈರಿಯೂ ಆಗಿರುವ ಪಿಶಾಚನಾದ ಸೈತಾನನನ್ನು ತೆಗೆದುಹಾಕುವ ಮೂಲಕವೇ. (2 ಕೊರಿಂಥ 4:4) ಆದರೆ ಮಾನವಕುಲದ ಮೇಲಿನ ಅವನ ನಿಯಂತ್ರಣವು ಬೇಗನೆ ಕೊನೆಗೊಳ್ಳುವುದು. ಅವನ ನಿರ್ಮೂಲನವು, ದೇವರಿಗೆ ಭಯಪಡುವವರಿಗೆ ಅಸಂಖ್ಯಾತ ಆಶೀರ್ವಾದಗಳನ್ನು ಬರಮಾಡುವ ಮಾರ್ಗವನ್ನು ತೆರೆಯುವುದು. ಯೆಹೋವನು “ತಾನೇ ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು” ಎಂದು ಬೈಬಲು ವಾಗ್ದಾನಿಸುತ್ತದೆ.—ಪ್ರಕಟನೆ 21:1-4.
ಕಡುಸಂಕಟವಿಲ್ಲದ ಲೋಕವೊಂದು ನಂಬಲಸಾಧ್ಯವಾದ ವಿಷಯವಾಗಿ ನಿಮಗೆ ಕಂಡುಬರುತ್ತದೊ? ಪ್ರತಿಕೂಲ ಪರಿಸ್ಥಿತಿಯೊಂದಿಗೆ ಜೀವಿಸುವುದು ನಮಗೆ ಎಷ್ಟೊಂದು ರೂಢಿಯಾಗಿಬಿಟ್ಟಿದೆಯೆಂದರೆ, ಅದರ ಇಲ್ಲದಿರುವಿಕೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟಕರವಾಗಿದೆ. ಆದರೆ, ಭಯ, ವ್ಯಾಕುಲತೆ, ಹಾಗೂ ಮಹಾದುರಂತದಿಂದ ಸ್ವಾತಂತ್ರ್ಯವು ತಾನೇ ದೇವರು ಸೃಷ್ಟಿಯ ಸಮಯದಲ್ಲಿ ಮಾನವಕುಲಕ್ಕಾಗಿ ಉದ್ದೇಶಿಸಿದ ವಿಷಯವಾಗಿದೆ, ಮತ್ತು ಆತನ ಉದ್ದೇಶವು ಸಫಲವಾಗುವುದು.—ಯೆಶಾಯ 55:10, 11.
ಆರಂಭದ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟ ಸೋನ್ಯ, ಫಾಬ್ಯಾನ, ಮತ್ತು ಆನ ಕಂಡುಕೊಂಡಂಥ ನಿರೀಕ್ಷೆಯು ಇದೇ ಆಗಿದೆ. ಯಾರ ಇಬ್ಬರು ಪುತ್ರರು ಏಡ್ಸ್ನಿಂದ ಮೃತಪಟ್ಟರೋ ಆ ಸೋನ್ಯಳು, ಬೈಬಲು ಒದಗಿಸುವ ನಿರೀಕ್ಷೆಯಿಂದ ಬಹಳಷ್ಟು ಶಾಂತಿಯನ್ನು ಪಡೆದುಕೊಂಡಳು. ನೀತಿವಂತರ ಹಾಗೂ ಅನೀತಿವಂತರ ಪುನರುತ್ಥಾನವೇ ಆ ನಿರೀಕ್ಷೆಯಾಗಿದೆ. (ಅ. ಕೃತ್ಯಗಳು 24:15) “ಒಂದು ವಿಷಯವು ಖಚಿತ, ವೇದನೆಯು ಎಂಥದ್ದಾದರೂ ನಮ್ಮ ನಿರೀಕ್ಷೆಯು ಅದಕ್ಕಿಂತ ಮಿಗಿಲಾದದ್ದಾಗಿದೆ,” ಎಂದು ಅವಳು ಹೇಳುತ್ತಾಳೆ.
ಇನ್ನೂ ಅನಾಥಾಲಯದಲ್ಲೇ ಜೀವಿಸುತ್ತಿದ್ದಾಗ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳು ಆನಳನ್ನು ಭೇಟಿಮಾಡಿದಳು. “ಅವಳು ನನಗೆ ಬೈಬಲಿನಲ್ಲಿ ಯೆಹೋವನ ಹೆಸರನ್ನು ತೋರಿಸಿದಳು, ಮತ್ತು ನಾನು ಆನಂದದಿಂದ ಅತ್ತುಬಿಟ್ಟೆ. ನನಗೆ ಸಹಾಯದ ಅಗತ್ಯ ತೀವ್ರವಾಗಿತ್ತು, ಹಾಗೂ ನಮ್ಮ ಕುರಿತಾಗಿ ಕಾಳಜಿವಹಿಸುವ ದೇವರೊಬ್ಬನು ಇದ್ದಾನೆ ಎಂಬುದನ್ನು ನಾನು ಕಲಿತುಕೊಂಡೆ” ಎಂದು ಆನ ಹೇಳುತ್ತಾಳೆ. ಅನಾಥಾಲಯವನ್ನು ಬಿಟ್ಟುಹೋದ ಬಳಿಕ, ಆನ ಬೈಬಲ್ ಅಭ್ಯಾಸವನ್ನು ಸ್ವೀಕರಿಸಿ, ಯೆಹೋವನ ವಾಗ್ದಾನಗಳ ಕುರಿತಾಗಿ ಹೆಚ್ಚನ್ನು ಕಲಿತುಕೊಂಡಳು. ತದನಂತರ ಅವಳು ತನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ಅದನ್ನು ದೀಕ್ಷಾಸ್ನಾನದ ಮೂಲಕ ಸಂಕೇತಿಸಿದಳು. “ಅಂದಿನಿಂದ ನಾನು ಪ್ರಾರ್ಥನೆಯ ಮೂಲಕ ಯೆಹೋವನ ಮೇಲೆ ಆತುಕೊಳ್ಳುವುದನ್ನು ಮುಂದುವರಿಸಿದ್ದೇನೆ, ಮತ್ತು ಆತನು ನನಗೆ ಸಹಾಯ ಮಾಡುವನು ಎಂಬ ಆಶ್ವಾಸನೆಯಿಂದ ನಾನು ಸಾಂತ್ವನಗೊಳಿಸಲ್ಪಟ್ಟಿದ್ದೇನೆ.”
ಭವಿಷ್ಯತ್ತಿಗಾಗಿರುವ ದೇವರ ವಾಗ್ದಾನಗಳ ಕುರಿತು ಕಲಿಯುವ ಮೂಲಕ, ಫಾಬ್ಯಾನಳು ಸಹ ತನ್ನ ಕಡುಸಂಕಟದಲ್ಲಿ ಅತ್ಯಧಿಕ ಸಾಂತ್ವನ ಹಾಗೂ ಮನಶ್ಶಾಂತಿಯನ್ನು ಕಂಡುಕೊಂಡಿದ್ದಾಳೆ. “ಬೈಬಲಿನಿಂದ ಸತ್ಯವನ್ನು ಕಲಿತುಕೊಳ್ಳುವುದು, ತುಂಬಾ ಅಂಧಕಾರದ ಹಾಗೂ ಮಂಕಾದ ಸ್ಥಳವನ್ನು ಬಿಟ್ಟು, ಸ್ಪಷ್ಟವಾದ, ಪ್ರಕಾಶಮಾನವಾದ ಹಾಗೂ ಹಿತಕರವಾದ ಕೋಣೆಯನ್ನು ಪ್ರವೇಶಿಸುವಂತಿದೆ.”—ಕೀರ್ತನೆ 118:5ನ್ನು ಹೋಲಿಸಿರಿ.
ಆದರೆ ಇಡೀ ಭೂಮಂಡಲದಾದ್ಯಂತ ಅಕ್ಷರಾರ್ಥಕವಾದ ಶಾಂತಿಯು ಹೇಗೆ ಮತ್ತು ಯಾವಾಗ ಬರುವುದು? ಮುಂದಿನ ಲೇಖನಗಳಲ್ಲಿ ನಾವು ನೋಡೋಣ.
[ಪುಟ 6 ರಲ್ಲಿರುವ ಚೌಕ]
ಕಡುಸಂಕಟದ ಬಹುಮುಖಗಳು
▪ ಸರಿಸುಮಾರಾಗಿ ಲೋಕದ ಜನಸಂಖ್ಯೆಯ ಕಾಲುಭಾಗವು, ವಿಪರೀತ ಬಡತನದಲ್ಲಿ ಜೀವಿಸುತ್ತದೆ. ಮತ್ತು ಕೋಟ್ಯಂತರ ಮಂದಿ, ತಮ್ಮ ಬದುಕಿ ಉಳಿಯುವಿಕೆಗೆ ಅಪಾಯವನ್ನೊಡ್ಡುವಂತಹ, ಮನುಷ್ಯರಿಗೆ ಅಯೋಗ್ಯವಾಗಿರುವ ಪರಿಸ್ಥಿತಿಗಳಲ್ಲಿ ಜೀವಿಸುತ್ತಾರೆ.
▪ ಇಪ್ಪತ್ತು ಕೋಟಿಗಿಂತಲೂ ಹೆಚ್ಚು ಮಕ್ಕಳು ನ್ಯೂನಪೋಷಿತರಾಗಿದ್ದಾರೆ.
▪ ಪ್ರತಿ ವರ್ಷ ಅತಿಭೇದಿಯು, ಐದು ವರ್ಷಗಳಿಗಿಂತಲೂ ಕೆಳಗಣ ಪ್ರಾಯದ ಮಕ್ಕಳಲ್ಲಿ ಸುಮಾರು ಮೂವತ್ತು ಲಕ್ಷ ಮಂದಿಯನ್ನು ಕೊಲ್ಲುತ್ತದೆ.
▪ 1993ನೆಯ ಇಸವಿಯೊಂದರಲ್ಲಿಯೇ, ಸೋಂಕುರೋಗಗಳು ಸುಮಾರು 1.65 ಕೋಟಿ ಜನರನ್ನು ಕೊಂದವು. ಕೆಲವು ದೇಶಗಳು ಅನಾರೋಗ್ಯಗಳನ್ನು ವಿಭಿನ್ನವಾಗಿ ವರ್ಗೀಕರಿಸುವುದರಿಂದ, ನಿಜವಾದ ಸಂಖ್ಯೆಯು ಇನ್ನೂ ಅಧಿಕವಾಗಿರಬಹುದು.
▪ ಅಂದಾಜುಮಾಡಲ್ಪಟ್ಟ 50 ಕೋಟಿ ಜನರು, ಯಾವುದೋ ಒಂದು ರೀತಿಯ ಮಾನಸಿಕ ಸಮಸ್ಯೆಯಿಂದ ಬಾಧಿತರಾಗಿದ್ದಾರೆ.
▪ ಬೇರೆ ಯಾವುದೇ ವಯೋವರ್ಗಕ್ಕಿಂತಲೂ, ಯುವ ಜನರ ನಡುವೆ ಆತ್ಮಹತ್ಯೆಯ ಪ್ರಮಾಣಗಳು ಹೆಚ್ಚು ತೀವ್ರಗತಿಯಿಂದ ಹೆಚ್ಚುತ್ತಿವೆ.
▪ “ಹಸಿವೆ ಮತ್ತು ನಿರುದ್ಯೋಗಗಳು, ಲೋಕದ ನ್ಯೂನತೆಗಳಾಗಿ ಪರಿಣಮಿಸಿವೆ” ಎಂದು ದಿ ಯುನೆಸ್ಕೊ ಕುರಿಯರ್ ಹೇಳುತ್ತದೆ. “ಲೋಕದ ಅತ್ಯಂತ ಸಂಪದ್ಭರಿತವಾದ ಏಳು ರಾಷ್ಟ್ರಗಳಲ್ಲಿ, 3.5 ಕೋಟಿ ನಿರುದ್ಯೋಗಿಗಳಿದ್ದಾರೆ; ಮತ್ತು ಬ್ರೆಸಿಲ್ ಒಂದರಲ್ಲಿಯೇ ಯಾರಿಗೆ ಒಂದು ಉದ್ಯೋಗವಿರುವುದು ಸಾಕಷ್ಟು ತಿನ್ನಸಾಧ್ಯವಾಗುವುದನ್ನೂ ಅರ್ಥೈಸುವುದಿಲ್ಲವೊ ಅಂತಹ 2 ಕೋಟಿ ಕೆಲಸಗಾರರಿದ್ದಾರೆ.”
[ಪುಟ 7 ರಲ್ಲಿರುವ ಚಿತ್ರ]
ಪ್ರಾರ್ಥನೆಯು, ಕಡುಸಂಕಟವಿಲ್ಲದ ಒಂದು ಲೋಕದ ಕುರಿತಾದ ದೇವರ ವಾಗ್ದಾನದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ನಮಗೆ ಸಹಾಯ ಮಾಡಬಲ್ಲದು