ಯೆಹೋವನನ್ನು ಯಾವಾಗಲೂ ನಿಮ್ಮೆದುರಿಗೆ ಇಟ್ಟುಕೊಳ್ಳಿರಿ
“ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ.”—ಕೀರ್ತ. 16:8.
1. ಬೈಬಲ್ ವೃತ್ತಾಂತಗಳು ನಮ್ಮ ಮೇಲೆ ಯಾವ ಪರಿಣಾಮ ಬೀರಬಲ್ಲವು?
ಯೆಹೋವನ ಲಿಖಿತ ವಾಕ್ಯದಲ್ಲಿ, ಮಾನವರೊಂದಿಗೆ ದೇವರ ವ್ಯವಹಾರಗಳ ಕುರಿತಾದ ಒಂದು ಉತ್ತಮ ದಾಖಲೆಯಿದೆ. ದೇವರ ಉದ್ದೇಶದ ನೆರವೇರಿಕೆಯಲ್ಲಿ ಪಾತ್ರವಹಿಸಿದ ಅನೇಕ ಜನರ ಕುರಿತಾಗಿ ಅದು ತಿಳಿಸುತ್ತದೆ. ಬೈಬಲಿನಲ್ಲಿ ಅವರ ಮಾತುಗಳನ್ನೂ ಕ್ರಿಯೆಗಳನ್ನೂ ಕೇವಲ ನಮ್ಮ ಮನೋರಂಜನೆಗಾಗಿರುವ ಕಥೆಗಳಾಗಿ ಕೊಡಲಾಗಿಲ್ಲ. ಬದಲಾಗಿ, ಅಂಥ ವೃತ್ತಾಂತಗಳು ನಮ್ಮನ್ನು ದೇವರಿಗೆ ಇನ್ನೂ ಸಮೀಪವಾಗುವಂತೆ ಮಾಡಬಲ್ಲವು.—ಯಾಕೋ. 4:8.
2, 3. ಕೀರ್ತನೆ 16:8ರ ಮಾತುಗಳನ್ನು ನಾವು ಹೇಗೆ ಅರ್ಥೈಸಿಕೊಳ್ಳಬಹುದು?
2 ಬೈಬಲಿನ ಸುಪರಿಚಿತ ವ್ಯಕ್ತಿಗಳಾದ ಅಬ್ರಹಾಮ, ಸಾರ, ಮೋಶೆ, ರೂತ, ದಾವೀದ, ಎಸ್ತೇರ, ಅಪೊಸ್ತಲ ಪೌಲ ಹಾಗೂ ಇತರರ ಅನುಭವಗಳಿಂದ ನಾವೆಲ್ಲರೂ ಬಹಳಷ್ಟನ್ನು ಕಲಿಯಬಲ್ಲೆವು. ಆದರೆ ಹೆಚ್ಚು ಪ್ರಖ್ಯಾತರಲ್ಲದ ವ್ಯಕ್ತಿಗಳ ವೃತ್ತಾಂತಗಳೂ ನಮಗೆ ಪ್ರಯೋಜನಕರವಾಗಿವೆ. ಬೈಬಲ್ ವೃತ್ತಾಂತಗಳ ಕುರಿತಾಗಿ ಧ್ಯಾನಿಸುವುದು ಕೀರ್ತನೆಗಾರನ ಈ ಮಾತುಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವಂತೆ ನಮಗೆ ಸಹಾಯಮಾಡಬಲ್ಲದು: “ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ.” (ಕೀರ್ತ. 16:8) ಈ ಮಾತುಗಳನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು?
3 ಒಬ್ಬ ಸೈನಿಕನು ಸಾಮಾನ್ಯವಾಗಿ ಅವನ ಎಡಗೈಯಲ್ಲಿ ಗುರಾಣಿಯನ್ನು ಮತ್ತು ಬಲಗೈಯಲ್ಲಿ ಖಡ್ಗವನ್ನು ಹಿಡಿಯುತ್ತಾನೆ. ಹೀಗಿರುವುದರಿಂದ, ಅವನ ಬಲಪಕ್ಕಕ್ಕೆ ಗುರಾಣಿಯ ಸಂರಕ್ಷಣೆ ಸಿಗುವುದಿಲ್ಲ. ಆದರೆ ಒಬ್ಬ ಸ್ನೇಹಿತನು ಅವನ ಬಲಗಡೆಯಲ್ಲಿದ್ದು ಹೋರಾಡಿದರೆ ಅವನಿಗೆ ಸಂರಕ್ಷಣೆ ಸಿಗುವುದು. ಒಂದುವೇಳೆ ನಾವು ಯೆಹೋವನನ್ನು ಮನಸ್ಸಿನಲ್ಲಿಟ್ಟುಕೊಂಡು ಆತನ ಚಿತ್ತವನ್ನು ಮಾಡುವಲ್ಲಿ ಆತನು ನಮ್ಮನ್ನು ಸಂರಕ್ಷಿಸುವನು. ಆದುದರಿಂದ ‘ಯೆಹೋವನನ್ನು ಯಾವಾಗಲೂ ನಮ್ಮೆದುರಿಗೇ ಇಟ್ಟು’ಕೊಳ್ಳಲು ಸಾಧ್ಯವಾಗುವಂತೆ ಬೈಬಲ್ ವೃತ್ತಾಂತಗಳನ್ನು ಪರಿಗಣಿಸುವುದು ನಮ್ಮ ನಂಬಿಕೆಯನ್ನು ಹೇಗೆ ಬಲಪಡಿಸಬಲ್ಲದೆಂದು ನಾವು ನೋಡೋಣ.
ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರಕೊಡುತ್ತಾನೆ
4. ದೇವರು ಪ್ರಾರ್ಥನೆಗಳಿಗೆ ಉತ್ತರಕೊಡುತ್ತಾನೆಂದು ತೋರಿಸುವ ಒಂದು ಶಾಸ್ತ್ರಾಧಾರಿತ ಉದಾಹರಣೆ ಕೊಡಿ.
4 ಯೆಹೋವನನ್ನು ನಮ್ಮೆದುರಿಗೇ ಇಟ್ಟರೆ, ಆತನು ನಮ್ಮ ಪ್ರಾರ್ಥನೆಗಳಿಗೆ ಉತ್ತರಕೊಡುವನು. (ಕೀರ್ತ. 65:2; 66:19) ಈ ವಿಷಯದಲ್ಲಿ ನಮಗೆ ರುಜುವಾತು ಅಬ್ರಹಾಮನ ಅತಿ ಹಿರಿಯ ಸೇವಕನಿಂದ ಸಿಗುತ್ತದೆ. ಇವನು ಬಹುಶಃ ಎಲೀಯೆಜರನಾಗಿದ್ದನು. ಇಸಾಕನಿಗಾಗಿ ಒಬ್ಬ ದೇವಭಕ್ತೆ ಹೆಂಡತಿಯನ್ನು ತರಲಿಕ್ಕಾಗಿ ಅಬ್ರಹಾಮನು ಎಲೀಯೆಜರನನ್ನು ಮೆಸೊಪೊತಾಮ್ಯಕ್ಕೆ ಕಳುಹಿಸಿದ್ದನು. ಈ ಕೆಲಸದಲ್ಲಿ ಸಫಲನಾಗಲು ಎಲೀಯೆಜರನು ದೇವರ ಮಾರ್ಗದರ್ಶನ ಕೋರಿದನು. ಮತ್ತು ರೆಬೆಕ್ಕಳು ಅವನ ಒಂಟೆಗಳಿಗೆ ಕುಡಿಯಲು ನೀರು ಕೊಟ್ಟಾಗ ದೇವರೇ ವಿಷಯಗಳನ್ನು ಮಾರ್ಗದರ್ಶಿಸುತ್ತಿದ್ದಾನೆ ಎಂದು ಅಂಗೀಕರಿಸಿದನು. ಎಲೀಯೆಜರನು ಶ್ರದ್ಧೆಯಿಂದ ಪ್ರಾರ್ಥನೆ ಮಾಡಿದ ಕಾರಣ, ತದನಂತರ ಇಸಾಕನ ಮುದ್ದಿನ ಮಡದಿಯಾದ ಈ ಸ್ತ್ರೀಯನ್ನು ಕಂಡುಕೊಂಡನು. (ಆದಿ. 24:12-14, 67) ಅಬ್ರಹಾಮನ ಸೇವಕನಿಗೆ ಒಂದು ವಿಶೇಷ ನೇಮಕವಿತ್ತು ನಿಜ. ಹಾಗಿದ್ದರೂ, ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆಂದು ಅವನಿಗಿದ್ದಷ್ಟೇ ಭರವಸೆ ನಮಗೂ ಇರಬೇಕಲ್ಲವೇ?
5. ಯೆಹೋವನಿಗೆ ಮಾಡುವ ಚುಟುಕಾದ, ಮೌನ ಪ್ರಾರ್ಥನೆ ಸಹ ಪರಿಣಾಮಕಾರಿ ಆಗಿರಬಲ್ಲದೆಂದು ನಾವೇಕೆ ಹೇಳಸಾಧ್ಯ?
5 ಕೆಲವೊಮ್ಮೆ ನಾವು ದೇವರ ಸಹಾಯಕ್ಕಾಗಿ ಆ ಕೂಡಲೇ ಪ್ರಾರ್ಥನೆಮಾಡಬೇಕಾದೀತು. ಒಂದು ಸಂದರ್ಭದಲ್ಲಿ ಪರ್ಷಿಯದ ರಾಜ ಅರ್ತಷಸ್ತನು, ತನ್ನ ಪಾನಸೇವಕ ನೆಹೆಮೀಯನು ದುಃಖದಿಂದಿರುವುದನ್ನು ಗಮನಿಸಿದನು. “ನಿನ್ನ ಅಪೇಕ್ಷೆಯೇನು”? ಎಂದು ರಾಜನು ಕೇಳಿದನು. ಆ ಕೂಡಲೇ ನೆಹೆಮೀಯನು “ಪರಲೋಕದ ದೇವರನ್ನು ಪ್ರಾರ್ಥಿಸಿ”ದನು. ನೆಹೆಮೀಯನು ಬಹುಶಃ ಮೌನವಾಗಿ ಮಾಡಿದ ಆ ಪ್ರಾರ್ಥನೆಯು ಚುಟುಕಾಗಿದ್ದಿರಬೇಕು. ಆದರೂ ದೇವರು ಅದಕ್ಕೆ ಉತ್ತರಕೊಟ್ಟನು. ಆದ್ದರಿಂದಲೇ ನೆಹೆಮೀಯನಿಗೆ ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟಲು ರಾಜನ ಬೆಂಬಲ ಸಿಕ್ಕಿತು. (ನೆಹೆಮೀಯ 2:1-8ನ್ನು ಓದಿ.) ಹೌದು, ಚುಟುಕಾದ, ಮೌನ ಪ್ರಾರ್ಥನೆ ಸಹ ಪರಿಣಾಮಕಾರಿ ಆಗಿರಬಲ್ಲದು.
6, 7. (ಎ) ಪ್ರಾರ್ಥನೆಯ ವಿಷಯದಲ್ಲಿ ಎಪಫ್ರನು ಯಾವ ಮಾದರಿಯಿಟ್ಟನು? (ಬಿ) ನಾವು ಇತರರ ಪರವಾಗಿ ಏಕೆ ಪ್ರಾರ್ಥಿಸಬೇಕು?
6 ದೇವರು ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೆಂದು ನಮಗೆ ಯಾವಾಗಲೂ ಕೂಡಲೇ ರುಜುವಾತು ಸಿಗದಿದ್ದರೂ “ಒಬ್ಬರಿಗೋಸ್ಕರ ಒಬ್ಬರು ದೇವರನ್ನು ಪ್ರಾರ್ಥಿಸಿರಿ” ಎಂದು ನಮ್ಮನ್ನು ಪ್ರೇರಿಸಲಾಗಿದೆ. (ಯಾಕೋ. 5:16) ‘ಕ್ರಿಸ್ತ ಯೇಸುವಿನ’ ನಂಬಿಗಸ್ತ ‘ದಾಸನಾಗಿದ್ದ’ ಎಪಫ್ರನು, ನಂಬಿಕೆಯಲ್ಲಿ ಸಂಬಂಧಿಕರಾಗಿರುವ ಎಲ್ಲರಿಗಾಗಿ ಶ್ರದ್ಧೆಯಿಂದ ಪ್ರಾರ್ಥಿಸಿದನು. ರೋಮ್ನಿಂದ ಪತ್ರಬರೆಯುತ್ತಾ ಪೌಲನು ಹೇಳಿದ್ದು: “ಕ್ರಿಸ್ತ ಯೇಸುವಿನ ದಾಸನಾಗಿರುವ ನಿಮ್ಮ [ಕೊಲೊಸ್ಸೆಯವರ] ಊರಿನ ಎಪಫ್ರನು ನಿಮಗೆ ವಂದನೆಹೇಳುತ್ತಾನೆ; ಇವನು ಪ್ರಾರ್ಥನೆಮಾಡುವಾಗೆಲ್ಲಾ ನಿಮಗೋಸ್ಕರ ಹೋರಾಡಿ ನೀವು ಪ್ರವೀಣರಾಗಿಯೂ ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತವನ್ನು ಕುರಿತು ಪೂರ್ಣ ನಿಶ್ಚಯವುಳ್ಳವರಾಗಿಯೂ ನಿಂತಿರಬೇಕೆಂದು ವಿಜ್ಞಾಪನೆಮಾಡುತ್ತಾನೆ. ಇವನು ನಿಮಗೋಸ್ಕರವೂ ಲವೊದಿಕೀಯದವರಿಗೋಸ್ಕರವೂ ಹಿರಿಯಾಪೊಲಿಯವರಿಗೋಸ್ಕರವೂ ಬಹಳ ಪ್ರಯಾಸಪಡುತ್ತಾನೆಂದು ಸಾಕ್ಷಿಹೇಳುತ್ತೇನೆ.”—ಕೊಲೊ. 1:7; 4:12, 13.
7 ಕೊಲೊಸ್ಸೆ, ಲವೊದಿಕೀಯ ಮತ್ತು ಹಿರಿಯಾಪೊಲಿ ಎಂಬ ಪಟ್ಟಣಗಳು ಏಷ್ಯಾಮೈನರ್ ಪ್ರದೇಶದಲ್ಲೇ ಇದ್ದವು. ಹಿರಿಯಾಪೊಲಿಯಲ್ಲಿದ್ದ ಕ್ರೈಸ್ತರ ಸುತ್ತಲೂ ಸಿಬೆಲ್ ಎಂಬ ದೇವತೆಯ ಆರಾಧಕರಿದ್ದರು, ಲವೊದಿಕೀಯದ ಕ್ರೈಸ್ತರಿಗೆ ಪ್ರಾಪಂಚಿಕತೆಯ ಬೆದರಿಕೆಯಿತ್ತು ಮತ್ತು ಕೊಲೊಸ್ಸೆಯಲ್ಲಿದ್ದ ಕ್ರೈಸ್ತರಿಗೆ ಮಾನವ ತತ್ತ್ವಜ್ಞಾನದಿಂದ ಅಪಾಯವಿತ್ತು. (ಕೊಲೊ. 2:8) ಆದುದರಿಂದ ಕೊಲೊಸ್ಸೆಯವನಾಗಿದ್ದ ಎಪಫ್ರನು, ಆ ಪಟ್ಟಣದಲ್ಲಿದ್ದ ವಿಶ್ವಾಸಿಗಳಿಗಾಗಿ ‘ಪ್ರಾರ್ಥನೆಮಾಡಲು ಪ್ರಯಾಸಪಡುತ್ತಿದ್ದದ್ದು’ ಸಮಂಜಸ! ಎಪಫ್ರನ ಪ್ರಾರ್ಥನೆಗಳಿಗೆ ಹೇಗೆ ಉತ್ತರಸಿಕ್ಕಿತೆಂದು ಬೈಬಲ್ ವಿವರಿಸುವುದಿಲ್ಲವಾದರೂ, ಅವನು ತನ್ನ ಜೊತೆ ವಿಶ್ವಾಸಿಗಳಿಗಾಗಿ ಪ್ರಾರ್ಥಿಸುವುದನ್ನು ನಿಲ್ಲಿಸಲಿಲ್ಲ. ನಾವೂ ಹಾಗೆಯೇ ಇರಬೇಕು. ನಾವು ‘ಪರಕಾರ್ಯಗಳಲ್ಲಿ ತಲೆಹಾಕುವವರು’ ಆಗಿರದಿದ್ದರೂ, ಒಬ್ಬ ಕುಟುಂಬ ಸದಸ್ಯ ಇಲ್ಲವೇ ಸ್ನೇಹಿತನು ನಂಬಿಕೆಯ ಕಠಿನ ಪರೀಕ್ಷೆ ಎದುರಿಸುತ್ತಿದ್ದಾನೆಂದು ನಮಗೆ ತಿಳಿದುಬಂದಿರಬಹುದು. (1 ಪೇತ್ರ 4:15) ನಾವು ಆತನ ಪರವಾಗಿ ವೈಯಕ್ತಿಕ ಪ್ರಾರ್ಥನೆಮಾಡುವುದು ಎಷ್ಟು ಉಚಿತವಾಗಿರುವುದು! ಪೌಲನಿಗೆ ಬೇರೆಯವರ ವಿಜ್ಞಾಪನೆಗಳಿಂದಾಗಿ ಸಹಾಯ ಸಿಕ್ಕಿತು. ಅಂತೆಯೇ ನಮ್ಮ ಪ್ರಾರ್ಥನೆಗಳು ಇತರರಿಗೆ ತುಂಬ ಒಳಿತನ್ನು ಮಾಡಬಲ್ಲವು.—2 ಕೊರಿಂ. 1:10, 11.
8. (ಎ) ಎಫೆಸದಿಂದ ಬಂದಿದ್ದ ಹಿರಿಯರು ಪ್ರಾರ್ಥನೆಯ ಮಹತ್ವವನ್ನು ಗಣ್ಯಮಾಡುವ ವ್ಯಕ್ತಿಗಳಾಗಿದ್ದರೆಂದು ನಮಗೆ ಹೇಗೆ ತಿಳಿಯುತ್ತದೆ? (ಬಿ) ದೇವರಿಗೆ ಮಾಡುವ ಪ್ರಾರ್ಥನೆಯ ವಿಷಯದಲ್ಲಿ ನಮ್ಮ ಮನೋಭಾವ ಏನಾಗಿರಬೇಕು?
8 ನಾವು ಪ್ರಾರ್ಥನಾಪರ ವ್ಯಕ್ತಿಗಳು ಎಂಬ ಅಭಿಪ್ರಾಯ ಬೇರೆಯವರಿಗಿದೆಯೋ? ಪೌಲನು ಎಫೆಸದಿಂದ ಬಂದಿದ್ದ ಹಿರಿಯರನ್ನು ಸಂಧಿಸಿದಾಗ “ಮೊಣಕಾಲೂರಿಕೊಂಡು ಅವರೆಲ್ಲರ ಸಂಗಡ ಪ್ರಾರ್ಥನೆಮಾಡಿದನು.” ಅನಂತರ, “ಅವರೆಲ್ಲರು ಬಹಳವಾಗಿ ಅತ್ತರು. ನೀವು ಇನ್ನು ಮೇಲೆ ನನ್ನ ಮುಖವನ್ನು ಕಾಣುವದಿಲ್ಲವೆಂದು ಪೌಲನು ಹೇಳಿದ ಮಾತಿಗೆ ಅವರು ವಿಶೇಷವಾಗಿ ವ್ಯಥೆಪಟ್ಟು ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು.” (ಅ. ಕೃ. 20:36-38) ಆ ಹಿರಿಯರೆಲ್ಲರ ಹೆಸರು ನಮಗೆ ಗೊತ್ತಿಲ್ಲದಿದ್ದರೂ, ಅವರು ಪ್ರಾರ್ಥನೆಯ ಮಹತ್ವವನ್ನು ಗಣ್ಯಮಾಡುವ ವ್ಯಕ್ತಿಗಳಾಗಿದ್ದರೆಂಬುದು ವ್ಯಕ್ತ. ದೇವರಿಗೆ ಪ್ರಾರ್ಥನೆಮಾಡಲು ನಮಗಿರುವ ಸದವಕಾಶವನ್ನು ನಾವು ನಿಶ್ಚಯವಾಗಿ ಅಮೂಲ್ಯವೆಂದೆಣಿಸತಕ್ಕದ್ದು ಮತ್ತು ನಮ್ಮ ಸ್ವರ್ಗೀಯ ಪಿತನು ನಮಗೆ ಕಿವಿಗೊಡುವನೆಂದು ನಂಬಿಕೆ ಹಾಗೂ ನಿಷ್ಠೆಯಿಂದ ‘ಪ್ರಾರ್ಥಿಸಬೇಕು.’—1 ತಿಮೊ. 2:8.
ದೇವರಿಗೆ ಸಂಪೂರ್ಣವಾಗಿ ವಿಧೇಯರಾಗಿರಿ
9, 10. (ಎ) ಚಲ್ಪಹಾದನ ಪುತ್ರಿಯರು ಯಾವ ಮಾದರಿಯನ್ನಿಟ್ಟರು? (ಬಿ) ಚಲ್ಪಹಾದನ ಪುತ್ರಿಯರ ವಿಧೇಯತೆಯು ಮದುವೆಯ ಕುರಿತ ಒಬ್ಬ ಕ್ರೈಸ್ತ ವ್ಯಕ್ತಿಯ ದೃಷ್ಟಿಕೋನವನ್ನು ಹೇಗೆ ಪ್ರಭಾವಿಸಬಲ್ಲದು?
9 ಯೆಹೋವನನ್ನು ಯಾವಾಗಲೂ ನಮ್ಮೆದುರಿಗೆ ಇಟ್ಟುಕೊಳ್ಳುವುದು ನಾವಾತನಿಗೆ ವಿಧೇಯರಾಗುವಂತೆ ಸಹಾಯಮಾಡುವುದು ಮತ್ತು ಫಲಿತಾಂಶವಾಗಿ ನಾವು ಆಶೀರ್ವಾದಗಳನ್ನು ಕೊಯ್ಯುವೆವು. (ಧರ್ಮೋ. 28:13; 1 ಸಮು. 15:22) ಇದಕ್ಕಾಗಿ ವಿಧೇಯ ಮನೋವೃತ್ತಿ ಇರುವುದು ಆವಶ್ಯಕ. ಮೋಶೆಯ ದಿನದಲ್ಲಿದ್ದ ಚಲ್ಪಹಾದನ ಹೆಣ್ಣುಮಕ್ಕಳಾದ ಐದು ಮಂದಿ ಅಕ್ಕತಂಗಿಯರ ಮನೋಭಾವವನ್ನು ಪರಿಗಣಿಸಿರಿ. ಇಸ್ರಾಯೇಲ್ಯರಲ್ಲಿ, ಪುತ್ರರು ತಮ್ಮ ತಂದೆಯ ಆಸ್ತಿಯನ್ನು ಬಾಧ್ಯತೆಯಾಗಿ ಪಡೆಯುವ ಪದ್ಧತಿಯಿತ್ತು. ಆದರೆ ಚಲ್ಪಹಾದನೆಂಬ ಈ ವ್ಯಕ್ತಿಗೆ ಗಂಡುಮಕ್ಕಳಿರಲಿಲ್ಲ. ಆದುದರಿಂದ ಅವನು ಸತ್ತನಂತರ ಯೆಹೋವನು ಈ ಐದು ಮಂದಿ ಸ್ತ್ರೀಯರಿಗೆ ಇಡೀ ಆಸ್ತಿಯನ್ನು ಕೊಡುವಂತೆ ನಿರ್ದೇಶನಕೊಟ್ಟನು. ಆದರೆ ಒಂದು ಷರತ್ತನ್ನಿಟ್ಟನು. ಅವರು ಮನಸ್ಸೆಯ ಪುತ್ರರನ್ನೇ ಮದುವೆಯಾಗಬೇಕಿತ್ತು. ಹೀಗೆ ಮಾಡುವುದರಿಂದ ಆ ಪಿತ್ರಾರ್ಜಿತ ಆಸ್ತಿಯು ಅದೇ ಕುಲದೊಳಗೆ ಉಳಿಯಸಾಧ್ಯವಿತ್ತು.—ಅರಣ್ಯ. 27:1-8; 36:6-8.
10 ಚಲ್ಪಹಾದನ ಪುತ್ರಿಯರಿಗೆ ತಾವು ದೇವರಿಗೆ ವಿಧೇಯರಾಗುವಲ್ಲಿ ಎಲ್ಲವೂ ಸರಿಹೋಗುವುದೆಂಬ ನಂಬಿಕೆಯಿತ್ತು. ಬೈಬಲ್ ಹೇಳುವುದು: “ಚಲ್ಪಹಾದನ ಹೆಣ್ಣುಮಕ್ಕಳಾದ ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕಾ, ನೋವಾ ಎಂಬವರು ಯೆಹೋವನ ಆಜ್ಞಾನುಸಾರ ನಡೆದು ತಂದೆಯ ಅಣ್ಣತಮ್ಮಂದಿರ ಮಕ್ಕಳನ್ನು ಮದುವೆಮಾಡಿಕೊಂಡರು. ಅವರು ಯೋಸೇಫನ ಮಗನಾದ ಮನಸ್ಸೆಯ ಕುಲದವರಿಗೇ ಮದುವೆಯಾದದರಿಂದ ಅವರ ಸ್ವಾಸ್ತ್ಯವು ತಂದೆಯ ಕುಲದಲ್ಲಿಯೇ ನಿಂತಿತು.” (ಅರಣ್ಯ. 36:10-12) ಆ ವಿಧೇಯ ಸ್ತ್ರೀಯರು ಯೆಹೋವನ ಅಪ್ಪಣೆಯಂತೆಯೇ ನಡೆದುಕೊಂಡರು. (ಯೆಹೋ. 17:3, 4) ಆಧ್ಯಾತ್ಮಿಕವಾಗಿ ಪ್ರೌಢರಾಗಿರುವ ಕ್ರೈಸ್ತರು ಅದೇ ರೀತಿಯ ನಂಬಿಕೆಯಿಂದ ‘ಕರ್ತನಲ್ಲಿ ವಿಶ್ವಾಸಿಯಾಗಿರುವವರನ್ನು’ ಮಾತ್ರ ಮದುವೆಯಾಗುವುದರ ಮೂಲಕ ದೇವರಿಗೆ ವಿಧೇಯರಾಗುತ್ತಾರೆ.—1 ಕೊರಿಂ. 7:39, NIBV.
11, 12. ಕಾಲೇಬನು ದೇವರಲ್ಲಿ ತನಗೆ ಭರವಸೆಯಿದೆಯೆಂದು ಹೇಗೆ ತೋರಿಸಿದನು?
11 ಇಸ್ರಾಯೇಲ್ಯನಾದ ಕಾಲೇಬನಂತೆ ನಾವು ಯೆಹೋವನಿಗೆ ಸಂಪೂರ್ಣ ವಿಧೇಯತೆ ತೋರಿಸಬೇಕು. (ಧರ್ಮೋ. 1:36) ಸಾ.ಶ.ಪೂ. 16ನೇ ಶತಮಾನದಲ್ಲಿ ಐಗುಪ್ತದಿಂದ ಇಸ್ರಾಯೇಲ್ಯರ ಬಿಡುಗಡೆಯಾದ ಬಳಿಕ ಕಾನಾನ್ ದೇಶವನ್ನು ಹೊಂಚಿನೋಡಲು ಮೋಶೆ 12 ಮಂದಿ ಗೂಢಚಾರರನ್ನು ಕಳುಹಿಸಿದನು. ಇವರಲ್ಲಿ ಕೇವಲ ಇಬ್ಬರು ಅಂದರೆ ಕಾಲೇಬ ಯೆಹೋಶುವರು, ದೇವರ ಮೇಲೆ ಪೂರ್ಣ ಭರವಸೆಯಿಟ್ಟು ಆ ದೇಶವನ್ನು ಪ್ರವೇಶಿಸುವಂತೆ ಜನರನ್ನು ಪ್ರೇರಿಸಿದರು. (ಅರಣ್ಯ. 14:6-9) ಸುಮಾರು ನಾಲ್ವತ್ತು ವರ್ಷಗಳ ಬಳಿಕ ಯೆಹೋಶುವ ಕಾಲೇಬರು ಇನ್ನೂ ಬದುಕಿದ್ದು ಯೆಹೋವನನ್ನು ಪೂರ್ಣ ರೀತಿಯಲ್ಲಿ ಅನುಸರಿಸುತ್ತಿದ್ದರು. ಅಲ್ಲದೆ, ವಾಗ್ದತ್ತ ದೇಶದೊಳಗೆ ಇಸ್ರಾಯೇಲ್ಯರನ್ನು ನಡೆಸುವಂತೆ ದೇವರು ಯೆಹೋಶುವನನ್ನು ಉಪಯೋಗಿಸಿದನು. ಇದಕ್ಕೆ ವ್ಯತಿರಿಕ್ತವಾಗಿ ಉಳಿದ ಹತ್ತು ಮಂದಿ ಗೂಢಚಾರರು, ಅರಣ್ಯದಲ್ಲಿ ಇಸ್ರಾಯೇಲ್ ಜನಾಂಗದ 40 ವರ್ಷಗಳ ಅಲೆದಾಡುವಿಕೆಯ ಸಮಯದಲ್ಲಿ ಮರಣಪಟ್ಟರೆಂಬುದು ವ್ಯಕ್ತ.—ಅರಣ್ಯ. 14:31-34.
12 ಇಸ್ರಾಯೇಲ್ಯರಿಗೆ ಅರಣ್ಯದಲ್ಲಾದ ಅನುಭವಗಳನ್ನು ಪಾರಾಗಿ ಉಳಿದ ವೃದ್ಧ ಕಾಲೇಬನು ಯೆಹೋಶುವನ ಮುಂದೆ ನಿಂತು ಹೀಗನ್ನಸಾಧ್ಯವಿತ್ತು: “ನಾನು ನನ್ನ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದ ಹಿಂಬಾಲಿಸಿದೆನು.” (NIBV) (ಯೆಹೋಶುವ 14:6-9ನ್ನು ಓದಿ.) ಎಂಬತ್ತೈದು ವರ್ಷ ವಯಸ್ಸಿನ ಕಾಲೇಬನು, ದೇವರು ತನಗೆ ವಾಗ್ದಾನಿಸಿದ್ದ ಬೆಟ್ಟಗುಡ್ಡಗಳ ಪ್ರದೇಶವನ್ನು ಕೊಡುವಂತೆ ಯೆಹೋಶುವನನ್ನು ಕೇಳಿದನು. ಆ ಪ್ರದೇಶದಲ್ಲಿ ಶತ್ರುಗಳು ತಮ್ಮ ಬಲವಾದ ಕೋಟೆಪಟ್ಟಣಗಳಲ್ಲಿ ವಾಸಿಸುತ್ತಿದ್ದರೂ ಅದಕ್ಕಾಗಿ ಕೇಳಿಕೊಂಡನು.—ಯೆಹೋ. 14:10-15.
13. ನಮ್ಮ ಪರೀಕ್ಷೆಗಳ ಮಧ್ಯೆಯೂ ನಾವೇನನ್ನು ಮಾಡಿದರೆ ಆಶೀರ್ವದಿಸಲ್ಪಡುವೆವು?
13 ನಾವು ‘ಯೆಹೋವನನ್ನು ಪೂರ್ಣಹೃದಯದಿಂದ ಹಿಂಬಾಲಿಸುವಲ್ಲಿ’ ನಂಬಿಗಸ್ತನೂ ವಿಧೇಯನೂ ಆದ ಕಾಲೇಬನಂತೆ ನಮಗೂ ದೈವಿಕ ಬೆಂಬಲವಿರುವುದು. ನಮಗೆ ದೊಡ್ಡ ಸಮಸ್ಯೆಗಳಿರುವಾಗಲೂ ನಾವು ‘ಯೆಹೋವನನ್ನು ಪೂರ್ಣಹೃದಯದಿಂದ ಹಿಂಬಾಲಿಸುವಾಗ’ ನಮಗೆ ಆತನ ಸಹಾಯವಿರುವುದು. ಆದರೆ ಕಾಲೇಬನಂತೆ ಜೀವನದಾದ್ಯಂತ ಯೆಹೋವನನ್ನು ಹಿಂಬಾಲಿಸುವುದು ಒಂದು ಕಷ್ಟಕರ ಸವಾಲಾಗಿರಬಲ್ಲದು. ರಾಜ ಸೊಲೊಮೋನನು ಮೊದಮೊದಲು ಯೆಹೋವನನ್ನು ಹಿಂಬಾಲಿಸಿದನು. ಆದರೆ ಮುದಿಪ್ರಾಯದಲ್ಲಿ ಅವನ ಹೆಂಡತಿಯರು ಅವನು ಸುಳ್ಳು ದೇವರುಗಳನ್ನು ಸೇವಿಸುವಂತೆ ಮನವೊಲಿಸಿದರು ಮತ್ತು ಅವನು ‘ತನ್ನ ತಂದೆ ದಾವೀದನ ಹಾಗೆ ಯೆಹೋವನನ್ನು ಪೂರ್ಣವಾಗಿ ಹಿಂಬಾಲಿಸಲು’ ತಪ್ಪಿಹೋದನು. (1 ಅರ. 11:4-6, NIBV) ಎದುರಿಸಬೇಕಾದ ಪರೀಕ್ಷೆಗಳು ಏನೇ ಆಗಿದ್ದರೂ, ನಾವು ದೇವರಿಗೆ ಪೂರ್ಣರೀತಿಯಲ್ಲಿ ವಿಧೇಯರಾಗಿರೋಣ ಮತ್ತು ಆತನನ್ನು ಯಾವಾಗಲೂ ನಮ್ಮೆದುರಿಗೇ ಇಡೋಣ.
ಯಾವಾಗಲೂ ಯೆಹೋವನಲ್ಲಿ ಭರವಸೆಯಿಡು
14, 15. ದೇವರಲ್ಲಿ ಭರವಸೆ ಇಡುವುದರ ಅಗತ್ಯದ ಕುರಿತಾಗಿ ನೊವೊಮಿಯ ಅನುಭವಗಳಿಂದ ನೀವೇನು ಕಲಿತಿದ್ದೀರಿ?
14 ವಿಶೇಷವಾಗಿ ನಾವು ಖಿನ್ನರಾಗಿರುವಾಗ ದೇವರಲ್ಲಿ ಭರವಸೆಯಿಡಬೇಕು ಏಕೆಂದರೆ ಅಂಥ ಸಮಯಗಳಲ್ಲಿ ನಮ್ಮ ಭವಿಷ್ಯವು ಕರಾಳವಾಗಿರುವಂತೆ ತೋರುತ್ತದೆ. ಮರಣವೆಂಬ ಶತ್ರುವಿನಿಂದಾಗಿ ಗಂಡನನ್ನೂ ಇಬ್ಬರು ಪುತ್ರರನ್ನೂ ಕಳೆದುಕೊಂಡ ವೃದ್ಧೆ ನೊವೊಮಿಯನ್ನು ಪರಿಗಣಿಸಿರಿ. ಅವಳು ಮೋವಾಬಿನಿಂದ ಯೆಹೂದಕ್ಕೆ ಹಿಂದಿರುಗಿ ಬಂದಾಗ ಪ್ರಲಾಪಿಸಿದ್ದು: “ನನ್ನನ್ನು ನೊವೊಮಿ [ಅಂದರೆ, “ರಮಣೀಯಳು”]ಯೆಂದು ಕರೆಯಬೇಡಿರಿ; ಸರ್ವಶಕ್ತನು ನನ್ನನ್ನು ಬಹಳವಾಗಿ ದುಃಖಪಡಿಸಿದ್ದಾನೆ. ಆದದರಿಂದ ಮಾರಾ [ಅಂದರೆ, “ದುಃಖಿತಳು”] ಎಂದು ಕರೆಯಿರಿ. ಭಾಗ್ಯವಂತಳಾಗಿ ಹೋದೆನು; ಯೆಹೋವನು ನನ್ನನ್ನು ಗತಿಹೀನಳನ್ನಾಗಿ ಬರಮಾಡಿದನು. ಯೆಹೋವನು ನನಗೆ ವಿರೋಧವಾಗಿ ಸಾಕ್ಷಿಹೇಳಿದ್ದಾನೆ; ಸರ್ವಶಕ್ತನು ನನ್ನನ್ನು ಬಾಧಿಸಿದ್ದಾನೆ.”—ರೂತ. 1:20, 21, BSI Reference edition ಪಾದಟಿಪ್ಪಣಿ.
15 ನೊವೊಮಿ ಸಂಕಟದಲ್ಲಿದ್ದಳಾದರೂ, ಯೆಹೋವನಲ್ಲಿ ಭರವಸೆಯಿಡುವುದನ್ನು ಬಿಟ್ಟುಕೊಡಲಿಲ್ಲವೆಂದು ರೂತಳ ಪುಸ್ತಕವನ್ನು ಜಾಗರೂಕತೆಯಿಂದ ಓದುವಾಗ ತಿಳಿದುಬರುತ್ತದೆ. ಅವಳ ಪರಿಸ್ಥಿತಿಗಳು ಎಷ್ಟು ನಾಟಕೀಯವಾಗಿ ಬದಲಾದವು! ನೊವೊಮಿಯ ಸೊಸೆ ರೂತಳು ವಿಧವೆಯಾಗಿದ್ದಳು, ಆದರೆ ತದನಂತರ ಬೋವಜನ ಹೆಂಡತಿಯಾಗಿ ಒಂದು ಗಂಡುಮಗುವನ್ನು ಹೆತ್ತಳು. ನೊವೊಮಿ ಆ ಮಗುವನ್ನು ಸಾಕಿದಳು ಮತ್ತು ಆ ವೃತ್ತಾಂತವು ಹೇಳುವುದು: “ನೆರೆಹೊರೆಯ ಹೆಂಗಸರು ನೊವೊಮಿಗೆ ಒಬ್ಬ ಮಗನು ಹುಟ್ಟಿದ್ದಾನೆಂದು ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ಇಷಯನಿಗೆ ತಂದೆಯೂ ದಾವೀದನಿಗೆ ಅಜ್ಜನೂ ಆದನು.” (ರೂತ. 4:14-17) ನೊವೊಮಿ ಪುನರುತ್ಥಾನಗೊಂಡು ಪರದೈಸ ಭೂಮಿಯಲ್ಲಿ ಜೀವಿಸುವಾಗ, ರೂತಳೂ ಅಲ್ಲಿರುವಳು. ಆಗ, ರೂತಳು ಮೆಸ್ಸೀಯ ಯೇಸುವಿನ ಪೂರ್ವಜೆಯಾದ ವಿಷಯ ನೊವೊಮಿಗೆ ತಿಳಿದುಬರುವುದು. (ಮತ್ತಾ. 1:5, 6, 16) ನೊವೊಮಿಗೆ ಆದಂತೆಯೇ ನಮ್ಮ ಸನ್ನಿವೇಶಗಳು ಎಷ್ಟು ಕೆಟ್ಟದ್ದಾಗಬಲ್ಲವೆಂದು ನಾವು ನಿಶ್ಚಿತವಾಗಿ ಹೇಳಲಾರೆವು. ಆದುದರಿಂದ ನಾವು ಯಾವಾಗಲೂ ದೇವರಲ್ಲಿ ಭರವಸೆ ಇಡೋಣ. ಇದನ್ನೇ ಜ್ಞಾನೋಕ್ತಿ 3:5, 6ರಲ್ಲಿ ನಮಗೆ ಹೇಳಲಾಗಿದೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”
ಪವಿತ್ರಾತ್ಮದ ಮೇಲೆ ಆತುಕೊಳ್ಳಿ
16. ದೇವರ ಪವಿತ್ರಾತ್ಮವು ಪುರಾತನ ಇಸ್ರಾಯೇಲಿನ ನಿರ್ದಿಷ್ಟ ಹಿರೀ ಪುರುಷರಿಗೆ ಹೇಗೆ ಸಹಾಯಮಾಡಿತು?
16 ನಾವು ಯೆಹೋವನನ್ನು ಯಾವಾಗಲೂ ನಮ್ಮೆದುರಿಗೇ ಇಟ್ಟುಕೊಳ್ಳುವಲ್ಲಿ ಆತನು ತನ್ನ ಪವಿತ್ರಾತ್ಮದ ಮೂಲಕ ನಮ್ಮನ್ನು ನಡೆಸುವನು. (ಗಲಾ. 5:16-18) ಇಸ್ರಾಯೇಲ್ ‘ಜನರ ಭಾರವನ್ನು ಹೊರುವುದರಲ್ಲಿ’ ಮೋಶೆಗೆ ಸಹಾಯಮಾಡಲು ಆಯ್ಕೆಯಾದ 70 ಮಂದಿ ಹಿರೀ ಪುರುಷರ ಮೇಲೆ ದೇವರಾತ್ಮವಿತ್ತು. ಇವರಲ್ಲಿ ಎಲ್ದಾದ್, ಮೇದಾಬ್ ಎಂಬ ಹೆಸರುಗಳನ್ನು ಮಾತ್ರ ಕೊಡಲಾಗಿದೆ. ಆದರೆ ಅವರೆಲ್ಲರೂ ತಮ್ಮ ಕರ್ತವ್ಯಗಳನ್ನು ಪೂರೈಸುವಂತೆ ಪವಿತ್ರಾತ್ಮವು ಅವರನ್ನು ಶಕ್ತಗೊಳಿಸಿತು. (ಅರಣ್ಯ. 11:13-29) ಈ ಹಿಂದೆ ಆರಿಸಲ್ಪಟ್ಟ ಇತರರಂತೆ ಅವರೂ ನಿಸ್ಸಂದೇಹವಾಗಿ ಸಮರ್ಥರೂ, ದೇವಭಯವುಳ್ಳವರೂ, ಭರವಸಾರ್ಹರೂ ಮತ್ತು ಪ್ರಾಮಾಣಿಕರೂ ಆಗಿದ್ದರು. (ವಿಮೋ. 18:21) ಅಂಥ ಗುಣಗಳನ್ನು ಇಂದು ಕ್ರೈಸ್ತ ಹಿರಿಯರು ಪ್ರದರ್ಶಿಸುತ್ತಾರೆ.
17. ದೇವಗುಡಾರದ ನಿರ್ಮಾಣದಲ್ಲಿ ಯೆಹೋವನ ಪವಿತ್ರಾತ್ಮದ ಪಾತ್ರವೇನಾಗಿತ್ತು?
17 ಯೆಹೋವನ ಪವಿತ್ರಾತ್ಮವು, ಅರಣ್ಯದಲ್ಲಿನ ದೇವಗುಡಾರದ ನಿರ್ಮಾಣದಲ್ಲಿ ಒಂದು ಮುಖ್ಯ ಪಾತ್ರ ವಹಿಸಿತು. ಯೆಹೋವನು ಬೆಚಲೇಲನೆಂಬವನನ್ನು ಮುಖ್ಯ ಕೆತ್ತನೆಗಾರ ಹಾಗೂ ದೇವಗುಡಾರದ ನಿರ್ಮಾಪಕನಾಗಿ ನೇಮಿಸಿದನು. ಅವನಿಗೆ “ದಿವ್ಯಾತ್ಮವನ್ನು ಕೊಟ್ಟು ಬೇಕಾದ ಜ್ಞಾನ ವಿದ್ಯಾವಿವೇಕಗಳನ್ನೂ ಸಕಲಶಿಲ್ಪಶಾಸ್ತ್ರಜ್ಞಾನವನ್ನೂ ಅನುಗ್ರಹಿ”ಸುವುದಾಗಿ ಯೆಹೋವನು ಮಾತುಕೊಟ್ಟನು. (ವಿಮೋ. 31:3-5) ಈ ಅತ್ಯದ್ಭುತ ನೇಮಕವನ್ನು ಪೂರೈಸುವುದರಲ್ಲಿ ಬೆಚಲೇಲ ಮತ್ತು ಅವನ ಸಹಾಯಕ ಒಹೊಲೀಯಾಬನೊಂದಿಗೆ ‘ಜಾಣರಾದ’ ಪುರುಷರು ಕೆಲಸಮಾಡಿದರು. ಅಷ್ಟುಮಾತ್ರವಲ್ಲದೆ, ಯೆಹೋವನ ಆತ್ಮವು ಸಿದ್ಧಮನಸ್ಸಿನ ಜನರು ಉದಾರ ಕಾಣಿಕೆಗಳನ್ನು ಕೊಡುವಂತೆ ಪ್ರಚೋದಿಸಿತು. (ವಿಮೋ. 31:6; 35:5, 30-34) ಅದೇ ಆತ್ಮವು ದೇವರ ಇಂದಿನ ಸೇವಕರು ರಾಜ್ಯದ ಅಭಿರುಚಿಗಳನ್ನು ಪ್ರವರ್ಧಿಸಲು ತಮ್ಮಿಂದಾದುದೆಲ್ಲವನ್ನು ಮಾಡುವಂತೆ ಪ್ರಚೋದಿಸುತ್ತದೆ. (ಮತ್ತಾ. 6:33) ನಮಗೆ ಕೆಲವೊಂದು ಸಾಮರ್ಥ್ಯಗಳು, ಪ್ರತಿಭೆಗಳು ಇರಬಹುದು. ಹಾಗಿದ್ದರೂ ಯೆಹೋವನು ನಮ್ಮ ದಿನದಲ್ಲಿ ತನ್ನ ಜನರಿಗೆ ಕೊಟ್ಟಿರುವ ಕೆಲಸವನ್ನು ನಾವು ಪೂರೈಸಬೇಕಾದರೆ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿ, ಅದು ನಮ್ಮನ್ನು ನಡೆಸುವಂತೆ ಬಿಡಬೇಕು.—ಲೂಕ 11:13.
ಸೇನಾಧೀಶ್ವರ ಯೆಹೋವನನ್ನು ಯಾವಾಗಲೂ ಪೂಜ್ಯಭಾವದಿಂದ ನೋಡಿ
18, 19. (ಎ) ದೇವರ ಪವಿತ್ರಾತ್ಮವು ನಮ್ಮೊಳಗೆ ಯಾವ ವಿಧದ ಮನೋಭಾವವನ್ನು ಹುಟ್ಟಿಸುತ್ತದೆ? (ಬಿ) ಸಿಮೆಯೋನ ಮತ್ತು ಅನ್ನಳ ಉದಾಹರಣೆಗಳಿಂದ ನೀವೇನು ಕಲಿತುಕೊಂಡಿರಿ?
18 ಯೆಹೋವನನ್ನು ಯಾವಾಗಲೂ ನಮ್ಮೆದುರಿಗೇ ಇಟ್ಟುಕೊಳ್ಳುವಂಥ ಪೂಜ್ಯಭಾವವನ್ನು ಪವಿತ್ರಾತ್ಮವು ನಮ್ಮಲ್ಲಿ ಹುಟ್ಟಿಸುತ್ತದೆ. ದೇವರ ಪುರಾತನಕಾಲದ ಜನರಿಗೆ ಹೀಗೆ ಹೇಳಲಾಗಿತ್ತು: “ಸೇನಾಧೀಶ್ವರ ಯೆಹೋವನನ್ನು ನೀವು ಪವಿತ್ರನೆಂದು ಪೂಜ್ಯಭಾವದಿಂದ ನೋಡಬೇಕು.” (ಯೆಶಾ. 8:13, ಬೈಯಿಂಗ್ಟನ್) ಪ್ರಥಮ ಶತಮಾನದ ಯೆರೂಸಲೇಮಿನಲ್ಲಿದ್ದ ಸಿಮೆಯೋನ ಮತ್ತು ಅನ್ನ ಎಂಬವರು ಪೂಜ್ಯಭಾವವಿದ್ದ ಇಬ್ಬರು ವೃದ್ಧ ವ್ಯಕ್ತಿಗಳಾಗಿದ್ದರು. (ಲೂಕ 2:25-38ನ್ನು ಓದಿ.) ಸಿಮೆಯೋನನು ಮೆಸ್ಸೀಯ ಸಂಬಂಧಿತ ಪ್ರವಾದನೆಗಳಲ್ಲಿ ನಂಬಿಕೆಯಿಟ್ಟನು ಮತ್ತು “ಇಸ್ರಾಯೇಲ್ ಜನರನ್ನು ಸಂತೈಸುವವನು ಯಾವಾಗ ಬಂದಾನೆಂದು ಹಾರೈಸುತ್ತಿದ್ದನು.” ದೇವರು ಸಿಮೆಯೋನನ ಮೇಲೆ ಪವಿತ್ರಾತ್ಮ ಸುರಿಸಿ, ಅವನು ಮೆಸ್ಸೀಯನನ್ನು ನೋಡುವ ವರೆಗೆ ಬದುಕಿರುವನೆಂದು ಆಶ್ವಾಸನೆಕೊಟ್ಟನು. ಹಾಗೆಯೇ ಆಯಿತು. ಸಾ.ಶ.ಪೂ. 2ನೇ ಇಸವಿಯ ಒಂದು ದಿನ, ಯೇಸುವಿನ ತಾಯಿ ಹಾಗೂ ಸಾಕುತಂದೆ ಮರಿಯ ಯೋಸೇಫರು ಅವನನ್ನು ಆಲಯಕ್ಕೆ ತಂದರು. ಪವಿತ್ರಾತ್ಮದಿಂದ ಪ್ರೇರಿತನಾಗಿ ಸಿಮೆಯೋನನು ಮೆಸ್ಸೀಯನ ಕುರಿತಾಗಿ ಪ್ರವಾದನಾತ್ಮಕ ನುಡಿಗಳನ್ನು ಆಡಿದನು ಮತ್ತು ಮರಿಯಳಿಗಾಗಲಿದ್ದ ದುಃಖವನ್ನು ಮುಂತಿಳಿಸಿದನು. ಅದರಂತೆಯೇ, ಯೇಸು ಯಾತನಾ ಕಂಬಕ್ಕೇರಿಸಲ್ಪಟ್ಟಾಗ ಮರಿಯಳು ದುಃಖದಿಂದ ಛಿದ್ರಳಾದಳು. ಆದರೆ ಸಿಮೆಯೋನನು ‘ಯೆಹೋವನು ಕಳುಹಿಸಬೇಕಾದ ಕ್ರಿಸ್ತನನ್ನು’ ತನ್ನ ಕೈಯಲ್ಲಿ ತೆಗೆದುಕೊಂಡಾಗ ಅವನಿಗಾದ ಮಹದಾನಂದವನ್ನು ಊಹಿಸಿರಿ! ಅಲ್ಲದೆ, ಸಿಮೆಯೋನನು ದೇವರ ಇಂದಿನ ಸೇವಕರಿಗೆ ಪೂಜ್ಯಭಾವನೆಯ ವಿಷಯದಲ್ಲಿ ಎಂಥ ಉತ್ತಮ ಮಾದರಿಯನ್ನಿಟ್ಟನು!
19 ಪೂಜ್ಯಭಾವದ 84 ವರ್ಷ ವಯಸ್ಸಿನ ವಿಧವೆ ಅನ್ನಳು ‘ದೇವಾಲಯವನ್ನು ಬಿಟ್ಟುಹೋಗುತ್ತಿರಲಿಲ್ಲ.’ ಅವಳು “ಉಪವಾಸವಿಜ್ಞಾಪನೆಗಳಿಂದ” ಯೆಹೋವನಿಗೆ ಹಗಲೂರಾತ್ರಿ ಪವಿತ್ರ ಸೇವೆ ಸಲ್ಲಿಸುತ್ತಿದ್ದಳು. ಮರಿಯ ಯೋಸೇಫರು ಶಿಶುವಾಗಿದ್ದ ಯೇಸುವನ್ನು ಆಲಯಕ್ಕೆ ತಂದಾಗ ಅನ್ನಳೂ ಅಲ್ಲಿದ್ದಳು. ಭಾವೀ ಮೆಸ್ಸೀಯನನ್ನು ನೋಡಿ ಅವಳೆಷ್ಟು ಸಂತೋಷಿತಳಾದಳು! ಅವಳು, “ದೇವರಿಂದಾದ ಉಪಕಾರವನ್ನು ನೆನಸಿ ಕೊಂಡಾಡಿದ್ದಲ್ಲದೆ ಯೆರೂಸಲೇಮಿನ ಬಿಡುಗಡೆಯನ್ನು ಹಾರೈಸುತ್ತಿದ್ದವರೆಲ್ಲರ ಸಂಗಡ ಆತನ ವಿಷಯವಾಗಿ ಮಾತಾಡುವವಳಾದಳು.” ಅನ್ನಳಿಗೆ ಈ ಸುವಾರ್ತೆಯನ್ನು ಇತರರಿಗೆ ಹಂಚಲೇಬೇಕೆಂದು ಅನಿಸಿತು! ಸಿಮೆಯೋನ ಮತ್ತು ಅನ್ನಳಂತೆ ತಾವು ಎಷ್ಟೇ ವೃದ್ಧರಾಗಿರಲಿ ಯೆಹೋವನನ್ನು ಆತನ ಸಾಕ್ಷಿಗಳಾಗಿ ಸೇವಿಸಬಲ್ಲೆವೆಂದು ಇಂದಿನ ವೃದ್ಧ ಸಾಕ್ಷಿಗಳು ತುಂಬ ಸಂತೋಷಪಡುತ್ತಾರೆ.
20. ನಮ್ಮ ವಯಸ್ಸು ಎಷ್ಟೇ ಆಗಿರಲಿ ನಾವೇನು ಮಾಡುವ ಅಗತ್ಯವಿದೆ, ಮತ್ತು ಏಕೆ?
20 ನಮ್ಮ ವಯಸ್ಸು ಎಷ್ಟೇ ಆಗಿರಲಿ ನಾವು ಯೆಹೋವನನ್ನು ಯಾವಾಗಲೂ ನಮ್ಮೆದುರಿಗೆ ಇಟ್ಟುಕೊಳ್ಳುವ ಅಗತ್ಯವಿದೆ. ಆಗ, ನಾವು ಆತನ ರಾಜತ್ವದ ಬಗ್ಗೆ ಮತ್ತು ಆತನ ಅದ್ಭುತ ಕೆಲಸಗಳ ಬಗ್ಗೆ ಇತರರಿಗೆ ತಿಳಿಸಲು ಮಾಡುವ ನಮ್ರ ಪ್ರಯತ್ನಗಳನ್ನು ಆತನು ಆಶೀರ್ವದಿಸುವನು. (ಕೀರ್ತ. 71:17, 18; 145:10-13) ಆದರೆ ನಾವು ಯೆಹೋವನಿಗೆ ಗೌರವತರಬೇಕಾದರೆ ದೈವಿಕ ಗುಣಗಳನ್ನು ಪ್ರದರ್ಶಿಸಬೇಕು. ಇಂಥ ಗುಣಗಳ ಬಗ್ಗೆ ಬೈಬಲಿನ ಇನ್ನೂ ಹೆಚ್ಚಿನ ವೃತ್ತಾಂತಗಳನ್ನು ಪರೀಕ್ಷಿಸುವ ಮೂಲಕ ನಾವು ಏನು ಕಲಿಯಬಲ್ಲೆವು?
ನೀವು ಹೇಗೆ ಉತ್ತರಿಸುವಿರಿ?
• ಯೆಹೋವನು ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆಂದು ನಮಗೆ ಹೇಗೆ ತಿಳಿದಿದೆ?
• ನಾವು ದೇವರಿಗೆ ಪೂರ್ಣವಾಗಿ ವಿಧೇಯರಾಗಬೇಕು ಏಕೆ?
• ನಾವು ಖಿನ್ನರಾಗಿದ್ದರೂ ಯೆಹೋವನಲ್ಲಿ ಯಾವಾಗಲೂ ಭರವಸೆ ಇಡಬೇಕು ಏಕೆ?
• ದೇವರ ಪವಿತ್ರಾತ್ಮವು ಆತನ ಜನರಿಗೆ ಹೇಗೆ ಸಹಾಯಮಾಡುತ್ತದೆ?
[ಪುಟ 4ರಲ್ಲಿರುವ ಚಿತ್ರ]
ನೆಹೆಮೀಯನು ಯೆಹೋವನಿಗೆ ಮಾಡಿದ ಪ್ರಾರ್ಥನೆ ಪರಿಣಾಮಕಾರಿ ಆಗಿತ್ತು
[ಪುಟ 5ರಲ್ಲಿರುವ ಚಿತ್ರ]
ನೊವೊಮಿಗೆ ಸಿಕ್ಕಿದಂಥ ಆಶೀರ್ವಾದಗಳನ್ನು ನೆನಪಿಸಿಕೊಳ್ಳುವುದು, ನಾವು ಯೆಹೋವನಲ್ಲಿ ಭರವಸೆ ಇಡುವಂತೆ ಸಹಾಯಮಾಡುವುದು