ಲೋಕವ್ಯಾಪಕವಾಗಿ ಹರ್ಷಭರಿತ ಸ್ತುತಿಗಾರರಾಗಿರಲು ಪ್ರತ್ಯೇಕಿಸಲ್ಪಟ್ಟದ್ದು
“ಯಾಹುವಿಗೆ ಸ್ತೋತ್ರ! ಯೆಹೋವನ ಸೇವಕರೇ, ಸ್ತೋತ್ರಮಾಡಿರಿ; ಯೆಹೋವನಾಮಸ್ತುತಿಮಾಡಿರಿ.”—ಕೀರ್ತನೆ 113:1.
1, 2. (ಎ) ಕೀರ್ತನೆ 113:1-3ಕ್ಕನುಗುಣವಾಗಿ, ಯಾರು ನಮ್ಮ ಉತ್ಸಾಹಿತ ಸ್ತುತಿಗೆ ಯೋಗ್ಯರು? (ಬಿ) ಯಾವ ಪ್ರಶ್ನೆಯನ್ನು ಕೇಳಿಕೊಳ್ಳುವುದು ಸೂಕ್ತವಾಗಿದೆ?
ಯೆಹೋವ ದೇವರು, ಭೂಮ್ಯಾಕಾಶಗಳ ಮಹಾನ್ ಸೃಷ್ಟಿಕರ್ತನೂ, ಎಲ್ಲ ನಿತ್ಯತೆಗಿರುವ ನಮ್ಮ ವಿಶ್ವದ ಪರಮಾಧಿಕಾರಿಯೂ ಆಗಿದ್ದಾನೆ. ಆತನು, ನಮ್ಮ ಉತ್ಸಾಹಿತ ಸ್ತುತಿಗೆ ಸಂಪೂರ್ಣವಾಗಿ ಯೋಗ್ಯನು. ಆದುದರಿಂದಲೇ ಕೀರ್ತನೆ 113:1-3 ನಮಗೆ ಆಜ್ಞೆ ನೀಡುವುದು: “ಯಾಹುವಿಗೆ ಸ್ತೋತ್ರ! ಯೆಹೋವನ ಸೇವಕರೇ, ಸ್ತೋತ್ರಮಾಡಿರಿ; ಯೆಹೋವನಾಮಸ್ತುತಿಮಾಡಿರಿ. ಇಂದಿನಿಂದ ಯುಗಯುಗಕ್ಕೂ ಯೆಹೋವನಾಮವು ಕೀರ್ತಿಸಲ್ಪಡಲಿ. ಯೆಹೋವನ ನಾಮವು ಮೂಡಣಿಂದ ಪಡುವಣ ವರೆಗೂ ಸ್ತುತಿಹೊಂದಲಿ.”
2 ದೇವರ ಸಾಕ್ಷಿಗಳೋಪಾದಿ, ನಾವು ಇದನ್ನು ಮಾಡಲು ಹರ್ಷಿಸುತ್ತೇವೆ. ಯೆಹೋವ ದೇವರು, ನಾವು ಇಂದು ಹಾಡುತ್ತಿರುವ ಈ ಸ್ತುತಿಯ ಹರ್ಷಭರಿತ ಗೀತೆಯು, ಬೇಗನೆ ಈ ಇಡೀ ಭೂಮಿಯಲ್ಲಿ ತುಂಬುವಂತೆ ಮಾಡುವನೆಂಬುದು ಎಷ್ಟು ರೋಮಾಂಚಕರ! (ಕೀರ್ತನೆ 22:27) ಈ ಮಹಾ ಲೋಕವ್ಯಾಪಕ ಗಾಯಕವೃಂದದಲ್ಲಿ ನಿಮ್ಮ ಧ್ವನಿಯು ಕೇಳಲ್ಪಡುತ್ತಿದೆಯೊ? ಹಾಗಿರುವಲ್ಲಿ, ಈ ಅನೈಕ್ಯವಾದ, ಹರ್ಷರಹಿತ ಲೋಕದಿಂದ ಪ್ರತ್ಯೇಕವಾಗಿರುವುದು, ನಿಮ್ಮನ್ನು ಎಷ್ಟು ಸಂತೋಷಿತರನ್ನಾಗಿ ಮಾಡಬೇಕು!
3. (ಎ) ಯಾವ ವಿಷಯವು ಯೆಹೋವನ ಜನರನ್ನು ಭಿನ್ನರನ್ನಾಗಿಯೂ, ಅದ್ವಿತೀಯರನ್ನಾಗಿಯೂ ಮಾಡುತ್ತದೆ? (ಬಿ) ಯಾವ ವಿಧಗಳಲ್ಲಿ ನಾವು ಪ್ರತ್ಯೇಕವಾಗಿರಿಸಲ್ಪಟ್ಟಿದ್ದೇವೆ?
3 ನಾವು ಯೆಹೋವನನ್ನು ಐಕ್ಯವಾಗಿ ಸ್ತುತಿಸುವಾಗ, ಅದು ನಿಜವಾಗಿಯೂ ನಮ್ಮನ್ನು ಭಿನ್ನರನ್ನಾಗಿಯೂ, ಅದ್ವಿತೀಯರನ್ನಾಗಿಯೂ ಮಾಡುತ್ತದೆ. ನಾವು ಏಕಾಭಿಪ್ರಾಯವಾಗಿ ಮಾತಾಡುತ್ತೇವೆ ಮತ್ತು ಕಲಿಸುತ್ತೇವೆ ಹಾಗೂ ‘ಯೆಹೋವನ ಒಳ್ಳೆಯತನದ ಪುಷ್ಕಳತೆ’ (NW)ಯನ್ನು ಪ್ರಕಟಪಡಿಸಲು ಒಂದೇ ರೀತಿಯ ವಿಧಾನಗಳನ್ನು ಬಳಸುತ್ತೇವೆ. (ಕೀರ್ತನೆ 145:7) ಹೌದು, ಯೆಹೋವನ ಸಮರ್ಪಿತ ಜನರೋಪಾದಿ, ನಾವು ನಮ್ಮ ದೇವರಾದ ಯೆಹೋವನ ಸೇವೆಗಾಗಿ ಪ್ರತ್ಯೇಕಿಸಲ್ಪಟ್ಟಿದ್ದೇವೆ. ದೇವರು, ತನ್ನ ಪ್ರಾಚೀನ ಸಮರ್ಪಿತ ಜನಾಂಗವಾದ ಇಸ್ರಾಯೇಲಿಗೆ, ತಮ್ಮ ಸುತ್ತಲೂ ಇದ್ದ ರಾಷ್ಟ್ರಗಳಿಂದ ಪ್ರತ್ಯೇಕವಾಗಿರುವಂತೆ ಮತ್ತು ಆ ರಾಷ್ಟ್ರಗಳ ಆಚರಣೆಗಳಿಂದ ಮಲಿನಗೊಳ್ಳದಿರುವಂತೆ ಹೇಳಿದನು. (ವಿಮೋಚನಕಾಂಡ 34:12-16) ಇದನ್ನು ಮಾಡುವಂತೆ ತನ್ನ ಜನರಿಗೆ ನೆರವು ನೀಡಲು, ಆತನು ಅವರಿಗೆ ನಿಯಮಗಳನ್ನು ಕೊಟ್ಟನು. ತದ್ರೀತಿಯಲ್ಲಿ ಇಂದು, ಯೆಹೋವನು ನಮಗೆ ತನ್ನ ಪವಿತ್ರ ವಾಕ್ಯವಾದ ಬೈಬಲನ್ನು ಕೊಟ್ಟಿದ್ದಾನೆ. ನಾವು ಈ ಲೋಕದಿಂದ ಹೇಗೆ ಪ್ರತ್ಯೇಕವಾಗಿರಸಾಧ್ಯವಿದೆ ಎಂಬುದಾಗಿ, ಅದರ ಉಪದೇಶವು ನಮಗೆ ತೋರಿಸುತ್ತದೆ. (2 ಕೊರಿಂಥ 6:17; 2 ತಿಮೊಥೆಯ 3:16, 17) ಮಹಾ ಬಾಬೆಲಿನ ಸಂನ್ಯಾಸಿಗಳು ಮತ್ತು ನನ್ಗಳು, ಸಂನ್ಯಾಸಿಮಠಗಳು ಮತ್ತು ಧಾರ್ಮಿಕ ಸಂಘ (ಕಾನ್ವೆಂಟ್)ಗಳಲ್ಲಿ ಪ್ರತ್ಯೇಕವಾಗಿರುವಂತೆ ನಾವು ಪ್ರತ್ಯೇಕಿಸಲ್ಪಟ್ಟಿಲ್ಲ. ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸುತ್ತಾ, ನಾವು ಯೆಹೋವನ ಬಹಿರಂಗ ಸ್ತುತಿಗಾರರಾಗಿದ್ದೇವೆ.
ಯೆಹೋವನ ಪ್ರಧಾನ ಸ್ತುತಿಗಾರನನ್ನು ಅನುಕರಿಸಿರಿ
4. ಯೆಹೋವನನ್ನು ಸ್ತುತಿಸುವುದರಲ್ಲಿ ಯೇಸು ಹೇಗೆ ಮಾದರಿಯನ್ನಿಟ್ಟನು?
4 ಯೇಸು, ಯೆಹೋವನನ್ನು ಸ್ತುತಿಸಬೇಕೆಂಬ ತನ್ನ ಉದ್ದೇಶದಿಂದ ಎಂದೂ ಪಥಭ್ರಷ್ಟನಾಗಲಿಲ್ಲ. ಮತ್ತು ಇದು, ಅವನನ್ನು ಲೋಕದಿಂದ ಪ್ರತ್ಯೇಕವಾಗಿರಿಸಿತು. ಸಭಾಮಂದಿರಗಳಲ್ಲಿ ಮತ್ತು ಯೆರೂಸಲೇಮಿನಲ್ಲಿದ್ದ ದೇವಾಲಯದಲ್ಲಿ, ಅವನು ದೇವರ ಪವಿತ್ರ ನಾಮವನ್ನು ಸ್ತುತಿಸಿದನು. ಜನಸಮೂಹಗಳು ಎಲ್ಲೇ ಗುಂಪುಗೂಡಲಿ—ಬೆಟ್ಟದಮೇಲಾಗಲಿ ಇಲ್ಲವೆ ನದಿತೀರದಲ್ಲಾಗಲಿ—ಯೇಸು ಬಹಿರಂಗವಾಗಿ ಯೆಹೋವನ ಸತ್ಯತೆಗಳನ್ನು ಸಾರಿದನು. ಅವನು ಪ್ರಕಟಿಸಿದ್ದು: “ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನಿನ್ನನ್ನು [“ನಾನು ಬಹಿರಂಗವಾಗಿ,” NW] ಕೊಂಡಾಡುತ್ತೇನೆ.” (ಮತ್ತಾಯ 11:25) ಪೊಂತ್ಯ ಪಿಲಾತನ ಮುಂದೆ, ನ್ಯಾಯವಿಚಾರಣೆಗೆ ಒಳಪಟ್ಟಾಗಲೂ, ಯೇಸು ಸಾಕ್ಷ್ಯನೀಡಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.” (ಯೋಹಾನ 18:37) ಯೇಸು ತನ್ನ ಕೆಲಸದ ಪ್ರಾಧಾನ್ಯತೆಯನ್ನು ಗಣ್ಯಮಾಡಿದನು. ಅವನು ಎಲ್ಲಿಯೇ ಇದ್ದರೂ, ಯೇಸು ಯೆಹೋವನ ಕುರಿತು ಸಾಕ್ಷಿನೀಡಿದನು ಮತ್ತು ಆತನನ್ನು ಬಹಿರಂಗವಾಗಿ ಸ್ತುತಿಸಿದನು.
5. ಕೀರ್ತನೆ 22:22 ಯಾರಿಗೆ ಅನ್ವಯಿಸುತ್ತದೆ, ಮತ್ತು ನಮ್ಮ ಮನೋಭಾವವು ಏನಾಗಿರಬೇಕು?
5 ಕೀರ್ತನೆ 22:22ರಲ್ಲಿ, ಯೆಹೋವನ ಪ್ರಧಾನ ಸ್ತುತಿಗಾರನ ಕುರಿತು, ನಾವು ಈ ಪ್ರವಾದನಾತ್ಮಕ ಹೇಳಿಕೆಯನ್ನು ಕಂಡುಕೊಳ್ಳುತ್ತೇವೆ: “ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.” ಮತ್ತು ಇಬ್ರಿಯ 2:11, 12ರಲ್ಲಿ, ಅಪೊಸ್ತಲ ಪೌಲನು ಈ ವಚನಗಳನ್ನು ಕರ್ತನಾದ ಯೇಸುವಿಗೆ ಮತ್ತು ಸ್ವರ್ಗೀಯ ಮಹಿಮೆಗಾಗಿ ಯೆಹೋವ ದೇವರು ಯಾರನ್ನು ಪವಿತ್ರೀಕರಿಸಿದ್ದಾನೊ ಅವರಿಗೆ ಅನ್ವಯಿಸುತ್ತಾನೆ. ಅವನಂತೆ, ಅವರು ಸಭಾಮಧ್ಯದಲ್ಲಿ ಯೆಹೋವನ ನಾಮವನ್ನು ಸ್ತುತಿಸಲು ನಾಚಿಕೆಪಡುವುದಿಲ್ಲ. ನಮ್ಮ ಸಭಾ ಕೂಟಗಳಿಗೆ ಹಾಜರಾಗುವಾಗ, ನಮಗೆ ಅದೇ ರೀತಿಯ ಮಾನಸಿಕ ಮನೋಭಾವವಿದೆಯೊ? ಕೂಟಗಳಲ್ಲಿ ನಮ್ಮ ಉತ್ಸಾಹಿತ ಭಾಗವಹಿಸುವಿಕೆಯು—ಗಮನನೀಡುವ ಮೂಲಕ ಮತ್ತು ಉತ್ತರಿಸುವ ಹಾಗೂ ಹಾಡುವ ಮೂಲಕ, ಎರಡೂ ವಿಷಯಗಳು—ಯೆಹೋವನನ್ನು ಸ್ತುತಿಸುತ್ತದೆ. ಆದರೆ ನಿಮ್ಮ ಹರ್ಷಭರಿತ ಸ್ತುತಿಯು ಅಲ್ಲಿಗೆ ಕೊನೆಗೊಳ್ಳುತ್ತದೊ?
6. ಯೇಸು ತನ್ನ ಶಿಷ್ಯರಿಗೆ ಯಾವ ಆದೇಶವನ್ನು ಕೊಟ್ಟನು, ಮತ್ತು ಬೆಳಕನ್ನು ಪ್ರೀತಿಸುವವರು ದೇವರನ್ನು ಹೇಗೆ ಮಹಿಮೆಪಡಿಸುತ್ತಾರೆ?
6 ಮತ್ತಾಯ 5:14-16ಕ್ಕನುಸಾರ, ಕರ್ತನಾದ ಯೇಸು ತನ್ನ ಹಿಂಬಾಲಕರಿಗೆ, ಇತರರು ಯೆಹೋವನನ್ನು ಸ್ತುತಿಸುವವರಾಗುವಂತೆ ತಮ್ಮ ಬೆಳಕನ್ನು ಪ್ರಕಾಶಿಸುವ ಆದೇಶವನ್ನೂ ನೀಡಿದನು. ಅವನು ಹೇಳಿದ್ದು: “ನೀವು ಲೋಕಕ್ಕೆ ಬೆಳಕಾಗಿದ್ದೀರಿ. . . . ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” ಬೆಳಕನ್ನು ಪ್ರೀತಿಸುವವರು ದೇವರಿಗೆ ಮಹಿಮೆಯನ್ನು ತರುತ್ತಾರೆ. ಇದನ್ನು, ಅವರು ಕೇವಲ ಒಳ್ಳೆಯ, ಮಾನವೀಯ ಸಂಗತಿಗಳನ್ನು ಹೇಳುವ ಮತ್ತು ಮಾಡುವ ಮೂಲಕ ಮಾಡುತ್ತಾರೊ? ಇಲ್ಲ, ಬದಲಾಗಿ ಯೆಹೋವನನ್ನು ಐಕ್ಯವಾಗಿ ಮಹಿಮೆಪಡಿಸುವ ಮೂಲಕ ಅವರು ಅದನ್ನು ಮಾಡುತ್ತಾರೆ. ಹೌದು, ಬೆಳಕನ್ನು ಪ್ರೀತಿಸುವವರು ತಮ್ಮನ್ನು ದೇವರಿಗೆ ಸಮರ್ಪಿಸಿಕೊಂಡು, ಆತನ ಹರ್ಷಭರಿತ ಸ್ತುತಿಗಾರರಾಗುತ್ತಾರೆ. ಈ ಸಂತೋಷಕರ ಹೆಜ್ಜೆಯನ್ನು ನೀವು ತೆಗೆದುಕೊಂಡಿದ್ದೀರೊ?
ಯೆಹೋವನನ್ನು ಸ್ತುತಿಸುವುದರಿಂದ ಬರುವ ಹರ್ಷ
7. ಯೆಹೋವನ ಸ್ತುತಿಗಾರರು ಇಷ್ಟೊಂದು ಹರ್ಷಭರಿತರಾಗಿರುವುದು ಏಕೆ, ಮತ್ತು ಸಾ.ಶ. 33ರ ಪಂಚಾಶತ್ತಮದ ದಿನದಂದು ಅವರು ಯಾವ ಹರ್ಷವನ್ನು ಅನುಭವಿಸಿದರು?
7 ಯೆಹೋವನ ಸ್ತುತಿಗಾರರು ಏಕೆ ಇಷ್ಟೊಂದು ಹರ್ಷಭರಿತರಾಗಿದ್ದಾರೆ? ಏಕೆಂದರೆ ಹರ್ಷವು, ದೇವರ ಪವಿತ್ರಾತ್ಮದ ಒಂದು ಫಲವಾಗಿದೆ. ಗಲಾತ್ಯ 5:22 (NW)ರಲ್ಲಿ, ಅದನ್ನು ಪ್ರೀತಿಯ ಅನಂತರವೇ ಪಟ್ಟಿಮಾಡಲಾಗಿದೆ. ಪ್ರಥಮ ಶತಮಾನದಲ್ಲಿದ್ದ ಯೇಸುವಿನ ಶಿಷ್ಯರು, ಯೆಹೋವನ ಆತ್ಮದ ಈ ಫಲವನ್ನು ಪ್ರದರ್ಶಿಸಿದರು. ಅಷ್ಟೇಕೆ, ಸಾ.ಶ. 33ರ ಪಂಚಾಶತ್ತಮದ ದಿನದಂದು, ದೇವರು ತನ್ನ ಆತ್ಮವನ್ನು ಯೇಸುವಿನ ಶಿಷ್ಯರಲ್ಲಿ ಸುಮಾರು 120 ಜನರ ಮೇಲೆ ಸುರಿಸಿದಾಗ, ಅವರೆಲ್ಲರು ಯೆಹೋವನನ್ನು ವಿಭಿನ್ನ ಭಾಷೆಗಳಲ್ಲಿ ಸ್ತುತಿಸಲಾರಂಭಿಸಿದರು. ಅನೇಕ ರಾಷ್ಟ್ರಗಳಿಂದ ಯೆರೂಸಲೇಮಿಗೆ ಬಂದಿದ್ದ ಸದ್ಭಕ್ತರಾದ ಯೆಹೂದ್ಯರು, ‘ಆಶ್ಚರ್ಯದಿಂದ ಬೆರಗಾದರು.’ ಅವರು ಉದ್ಗರಿಸಿದ್ದು: “ನಮ್ಮನಮ್ಮ ಭಾಷೆಗಳಲ್ಲಿ ಇವರು ದೇವರ ಮಹತ್ತುಗಳ ವಿಷಯವಾಗಿ ಹೇಳುವದನ್ನು ಕೇಳುತ್ತೇವೆ.” (ಅ. ಕೃತ್ಯಗಳು 2:1-11) ಯೆಹೋವನ ಈ ಅದ್ಭುತಕರವಾದ, ಬಹುಭಾಷೀಯ ಸ್ತುತಿಯಿಂದಾದ ಪರಿಣಾಮವೇನು? ಮೆಸ್ಸೀಯನ ಕುರಿತಾದ ರಾಜ್ಯ ಸುವಾರ್ತೆಯನ್ನು ಸುಮಾರು 3,000 ಯೆಹೂದ್ಯರು ಮತ್ತು ಯೆಹೂದಿ ಮತಾಂತರಿಗಳು ಸ್ವೀಕರಿಸಿಕೊಂಡರು. ಅವರು ದೀಕ್ಷಾಸ್ನಾನ ಹೊಂದಿ, ಪವಿತ್ರಾತ್ಮವನ್ನು ಪಡೆದು, ಯೆಹೋವನ ಹರ್ಷಭರಿತ ಸ್ತುತಿಗಾರರೋಪಾದಿ ಉತ್ಸಾಹದಿಂದ ತಮ್ಮ ಧ್ವನಿಗಳನ್ನು ಕೂಡಿಸಿದರು. (ಅ. ಕೃತ್ಯಗಳು 2:37-42) ಅದು ಎಂತಹ ಒಂದು ಆಶೀರ್ವಾದವಾಗಿತ್ತು!
8. ಪಂಚಾಶತ್ತಮದ ಅನಂತರ, ತಮ್ಮ ಹರ್ಷವನ್ನು ಹೆಚ್ಚಿಸಲು ಕ್ರೈಸ್ತರು ಏನು ಮಾಡಿದರು?
8 ವರದಿಯು ಮುಂದುವರಿಸುವುದು: “ಅವರು ದಿನಾಲು ಏಕಮನಸ್ಸಿನಿಂದ ದೇವಾಲಯದಲ್ಲಿ ಕೂಡುತ್ತಾ ಮನೆಮನೆಗಳಲ್ಲಿ ರೊಟ್ಟಿಮುರಿದು ಉಲ್ಲಾಸದಿಂದಲೂ ಸರಲ ಹೃದಯದಿಂದಲೂ ಊಟಮಾಡುತ್ತಾ ಇದ್ದರು; ದೇವರನ್ನು ಕೊಂಡಾಡುವವರಾಗಿಯೂ ಜನರೆಲ್ಲರ ದಯವನ್ನು ಹೊಂದುವವರಾಗಿಯೂ ಇದ್ದರು. ಕರ್ತನು [“ಯೆಹೋವನು,” NW] ರಕ್ಷಣೆಯ ಮಾರ್ಗದಲ್ಲಿರುವವರನ್ನು ದಿನಾಲು ಅವರ ಮಂಡಲಿಗೆ ಸೇರಿಸುತ್ತಿದ್ದನು.” (ಅ. ಕೃತ್ಯಗಳು 2:46, 47) ಒಟ್ಟಾಗಿ ಜೊತೆಗೂಡಿ ಊಟಮಾಡುವುದು ಮಾತ್ರ ಅವರಿಗೆ ಮಹಾ ಆನಂದವನ್ನು ತಂದಿತೊ? ಇಲ್ಲ, ಅವರ ಪ್ರಧಾನವಾದ ಹರ್ಷವು, ಯೆಹೋವ ದೇವರನ್ನು ದಿನಾಲು ಸ್ತುತಿಸುವುದರಿಂದ ಬಂದಿತು. ಮತ್ತು ತಮ್ಮ ರಕ್ಷಣೆಯ ಸಂದೇಶಕ್ಕೆ ಸಾವಿರಾರು ಜನರು ಪ್ರತಿಕ್ರಿಯಿಸುವುದನ್ನು ಅವರು ನೋಡಿದಾಗ, ಅವರ ಹರ್ಷವು ಹೆಚ್ಚಾಯಿತು. ಇಂದು, ನಮ್ಮ ವಿಷಯದಲ್ಲಿಯೂ ಇದು ಸತ್ಯವಾಗಿದೆ.
ಎಲ್ಲ ರಾಷ್ಟ್ರಗಳಲ್ಲಿನ ಹರ್ಷಭರಿತ ಸ್ತುತಿಗಾರರು
9. (ಎ) ದೇವರು, ತನ್ನ ಸುವಾರ್ತೆಯನ್ನು ಕೇಳುವ ಅವಕಾಶವನ್ನು ಎಲ್ಲ ರಾಷ್ಟ್ರಗಳ ಜನರಿಗೆ ಯಾವಾಗ ಮತ್ತು ಹೇಗೆ ಕೊಡಲಾರಂಭಿಸಿದನು? (ಬಿ) ಕೊರ್ನೇಲ್ಯ ಮತ್ತು ಅವನ ಸಂಗಡಿಗರ ಮೇಲೆ ಅವರ ದೀಕ್ಷಾಸ್ನಾನದ ಮೊದಲೇ ಪವಿತ್ರಾತ್ಮವು ಏಕೆ ಸುರಿಸಲ್ಪಟ್ಟಿತು?
9 ಯೆಹೋವನು, ತನ್ನ ಸೇವಕರ ಬೆಳಕು ಬೀರುವ ಚಟುವಟಿಕೆಯು, ಒಂದೇ ರಾಷ್ಟ್ರಕ್ಕೆ ಸೀಮಿತವಾಗಿರಬೇಕೆಂದು ಬಯಸಲಿಲ್ಲ. ಆದುದರಿಂದ ಸಾ.ಶ. 36ರಲ್ಲಿ ಆರಂಭಿಸುತ್ತಾ, ಆತನು ತನ್ನ ಸುವಾರ್ತೆಯನ್ನು ಕೇಳುವ ಅವಕಾಶವನ್ನು ಎಲ್ಲ ರಾಷ್ಟ್ರಗಳ ಜನರಿಗೆ ನೀಡಿದನು. ದೇವರ ನಿರ್ದೇಶನಕ್ಕನುಸಾರ ಪೇತ್ರನು, ಕೈಸರೈಯದಲ್ಲಿದ್ದ ಒಬ್ಬ ಅನ್ಯಜನಾಂಗದ ಶತಾಧಿಪತಿಯ ಮನೆಗೆ ಹೋದನು. ಅಲ್ಲಿ, ಕೊರ್ನೇಲ್ಯನು ತನ್ನ ಅತಿ ನಿಕಟವಾದ ಮಿತ್ರರು ಮತ್ತು ಕುಟುಂಬದವರೊಂದಿಗೆ ಜೊತೆಗೂಡಿದ್ದನ್ನು ಅವನು ಕಂಡುಕೊಂಡನು. ಅವರು ಪೇತ್ರನ ಮಾತುಗಳನ್ನು ಅತಿ ಶ್ರದ್ಧೆಯಿಂದ ಆಲಿಸಿದಂತೆ, ಅವರು ತಮ್ಮ ಹೃದಯಗಳಲ್ಲಿ ಯೇಸುವಿನ ಮೇಲೆ ನಂಬಿಕೆಯನ್ನಿಟ್ಟರು. ನಮಗೆ ಹೇಗೆ ಗೊತ್ತು? ಏಕೆಂದರೆ ದೇವರ ಪವಿತ್ರಾತ್ಮವು ಆ ಅನ್ಯಜನಾಂಗದ ವಿಶ್ವಾಸಿಗಳ ಮೇಲೆ ಬಂತು. ಸಾಧಾರಣವಾಗಿ, ದೇವರ ಆತ್ಮದ ಕೊಡುಗೆಯು, ದೀಕ್ಷಾಸ್ನಾನವಾದ ಅನಂತರವೇ ಅನುಗ್ರಹಿಸಲ್ಪಡುತ್ತಿತ್ತು, ಆದರೆ ಆ ಸಂದರ್ಭದಲ್ಲಿ ಯೆಹೋವನು, ಈ ಯೆಹೂದ್ಯೇತರರ ವಿಷಯದಲ್ಲಿ ತನ್ನ ಸಮ್ಮತಿಯನ್ನು ಅವರ ನಿಮಜ್ಜನದ ಮೊದಲೇ ಸೂಚಿಸಿದನು. ಯೆಹೋವನು ಅದನ್ನು ಮಾಡಿರದಿದ್ದರೆ, ದೇವರು ಈಗ ಅನ್ಯಜನಾಂಗದವರನ್ನು ತನ್ನ ಸೇವಕರಾಗಿ ಸ್ವೀಕರಿಸಿಕೊಳ್ಳುತ್ತಿದ್ದನೆಂಬ ವಿಷಯದಲ್ಲಿ ಮತ್ತು ಅವರು ನೀರಿನ ದೀಕ್ಷಾಸ್ನಾನಕ್ಕೆ ಅರ್ಹರಾಗಿದ್ದರೆಂಬ ವಿಷಯದಲ್ಲಿ ಪೇತ್ರನು ನಿಶ್ಚಿತನಾಗಿರಸಾಧ್ಯವಿರಲಿಲ್ಲ.—ಅ. ಕೃತ್ಯಗಳು 10:34, 35, 47, 48.
10. ಎಲ್ಲ ರಾಷ್ಟ್ರಗಳ ಜನರು ಯೆಹೋವನನ್ನು ಸ್ತುತಿಸುವರೆಂದು ಪ್ರಾಚೀನ ಸಮಯಗಳಿಂದ ಹೇಗೆ ಮುಂತಿಳಿಸಲಾಗಿತ್ತು?
10 ಎಲ್ಲ ರಾಷ್ಟ್ರಗಳ ಜನರು ತನ್ನನ್ನು ಸ್ತುತಿಸುವರೆಂದು, ಪ್ರಾಚೀನ ಸಮಯಗಳಿಂದ ಯೆಹೋವನು ಮುಂತಿಳಿಸಿದನು. ಪ್ರತಿಯೊಂದು ದೇಶದಲ್ಲಿ ಆತನಿಗೆ ಹರ್ಷಭರಿತ ಸ್ತುತಿಗಾರರಿರುವರು. ಇದನ್ನು ರುಜುಪಡಿಸಲು, ಅಪೊಸ್ತಲ ಪೌಲನು ಹೀಬ್ರು ಶಾಸ್ತ್ರವಚನಗಳಿಂದ ಪ್ರವಾದನೆಗಳನ್ನು ಉದ್ಧರಿಸಿದನು. ರೋಮಿನಲ್ಲಿದ್ದ ಕ್ರೈಸ್ತರ ಅಂತಾರಾಷ್ಟ್ರೀಯ ಸಭೆಗೆ ಅವನು ಹೇಳಿದ್ದು: “ಕ್ರಿಸ್ತನು ನಿಮ್ಮನ್ನು ಸೇರಿಸಿಕೊಂಡಂತೆ ನೀವು ಸಹ ಒಬ್ಬರನ್ನೊಬ್ಬರು ಸೇರಿಸಿಕೊಂಡು ದೇವರ ಮಹಿಮೆಯನ್ನು ಪ್ರಕಾಶಪಡಿಸಿರಿ, ಯಾಕಂದರೆ ನಾನು ಹೇಳುವದೇನಂದರೆ—ಕ್ರಿಸ್ತನು ಪಿತೃಗಳಿಗೆ ಉಂಟಾದ ದೇವರ ವಾಗ್ದಾನಗಳನ್ನು ದೃಢಪಡಿಸಿ ಆತನ ಸತ್ಯವನ್ನು ತೋರಿಸುವದಕ್ಕಾಗಿ ಸುನ್ನತಿಯೆಂಬ ಸಂಸ್ಕಾರಕ್ಕೆ ಒಳಗಾದನು; ಜನಾಂಗಗಳಾದರೆ ಕಾರುಣ್ಯದ ನಿಮಿತ್ತ ದೇವರನ್ನು ಕೊಂಡಾಡುತ್ತಾರೆಂಬದೇ. ಇದಕ್ಕೆ ಸರಿಯಾಗಿ ಶಾಸ್ತ್ರದಲ್ಲಿಯೂ [ಕೀರ್ತನೆ 18:49ರಲ್ಲಿ] ಬರೆದದೆ. ಹೇಗಂದರೆ—ಈ ಕಾರಣದಿಂದ ಅನ್ಯಜನಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು; ನಿನ್ನ ನಾಮವನ್ನು ಸಂಕೀರ್ತಿಸುವೆನು ಎಂದೂ ಇನ್ನೊಂದು ಸ್ಥಳದಲ್ಲಿ—[ಧರ್ಮೋಪದೇಶಕಾಂಡ 32:43ರಲ್ಲಿ] ಜನಾಂಗಗಳಿರಾ, ದೇವರ ಜನರೊಡನೆ ಉಲ್ಲಾಸಪಡಿರಿ ಎಂದೂ ಬೇರೊಂದು ಸ್ಥಳದಲ್ಲಿ—[ಕೀರ್ತನೆ 117:1ರಲ್ಲಿ] ಸರ್ವಜನಾಂಗಗಳೇ, ಕರ್ತನನ್ನು [“ಯೆಹೋವನನ್ನು,” NW] ಕೀರ್ತಿಸಿರಿ, ಸಮಸ್ತಪ್ರಜೆಗಳೂ ಆತನನ್ನು ಸಂಕೀರ್ತಿಸಲಿ ಎಂದೂ ಬರೆದದೆ.”—ರೋಮಾಪುರ 15:7-11.
11. ದೇವರು, ತನ್ನ ಸತ್ಯತೆಗಳನ್ನು ಕಲಿಯುವಂತೆ ಎಲ್ಲ ರಾಷ್ಟ್ರಗಳ ಜನರಿಗೆ ಹೇಗೆ ಸಹಾಯ ಮಾಡಿದ್ದಾನೆ, ಮತ್ತು ಫಲಿತಾಂಶವು ಏನಾಗಿದೆ?
11 ದೇವರು ಯಾರನ್ನು ಎಲ್ಲ ರಾಷ್ಟ್ರಗಳ ಜನರ ಮೇಲೆ ಆಳುವಂತೆ ನೇಮಿಸಿರುವನೊ, ಆ ಯೇಸು ಕ್ರಿಸ್ತನ ಮೇಲೆ ಜನರು ತಮ್ಮ ನಿರೀಕ್ಷೆಯನ್ನು ಇಡದ ಹೊರತು, ಅವರು ಯೆಹೋವನನ್ನು ಐಕ್ಯವಾಗಿ ಸ್ತುತಿಸಸಾಧ್ಯವಿಲ್ಲ. ಅನಂತ ಜೀವನಕ್ಕೆ ನಡೆಸುವ ಆತನ ಸತ್ಯತೆಗಳನ್ನು ಗಣ್ಯಮಾಡುವಂತೆ ಅವರಿಗೆ ಸಹಾಯ ಮಾಡಲು, ದೇವರು ಒಂದು ಅಂತಾರಾಷ್ಟ್ರೀಯ ಕಲಿಸುವ ಕಾರ್ಯಕ್ರಮವನ್ನು ಸ್ಥಾಪಿಸಿದ್ದಾನೆ. ತನ್ನ ನಂಬಿಗಸ್ತ ಆಳು ವರ್ಗದ ಮೂಲಕ ಆತನು ನಿರ್ದೇಶನವನ್ನು ನೀಡುತ್ತಿದ್ದಾನೆ. (ಮತ್ತಾಯ 24:45-47) ಫಲಿತಾಂಶವು ಏನಾಗಿದೆ? 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿರುವ 50 ಲಕ್ಷಕ್ಕಿಂತಲೂ ಹೆಚ್ಚಿನ ಹರ್ಷಭರಿತ ಧ್ವನಿಗಳು ಯೆಹೋವನ ಸ್ತುತಿಗಳನ್ನು ಹಾಡುತ್ತಿವೆ. ಮತ್ತು ಇನ್ನೂ ಲಕ್ಷಾಂತರ ಜನರು ಅದನ್ನೇ ಮಾಡುವುದರಲ್ಲಿ ಆಸಕ್ತಿಯನ್ನು ತೋರಿಸುತ್ತಿದ್ದಾರೆ. 1996ರ ಜ್ಞಾಪಕಾಚರಣೆಗೆ ಎಷ್ಟು ಮಂದಿ ಹಾಜರಿದ್ದರೆಂಬುದನ್ನು ನೋಡಿ: 1,29,21,933 ಮಂದಿ. ಅದ್ಭುತಕರ!
ಹರ್ಷಭರಿತ ಸ್ತುತಿಗಾರರ ಒಂದು ಮಹಾ ಸಮೂಹವು ಮುಂತಿಳಿಸಲ್ಪಟ್ಟದ್ದು
12. ಅಪೊಸ್ತಲ ಯೋಹಾನನು ಯಾವ ಹುರಿದುಂಬಿಸುವ ದರ್ಶನವನ್ನು ನೋಡಿದನು, ಮತ್ತು ಆ ದರ್ಶನದ ಜೀವಂತ ವಾಸ್ತವಿಕತೆಯು ಏನಾಗಿದೆ?
12 ದರ್ಶನದಲ್ಲಿ ಅಪೊಸ್ತಲ ಯೋಹಾನನು, ಎಲ್ಲ ರಾಷ್ಟ್ರಗಳಿಂದ ಹೊರಬಂದ “ಒಂದು ಮಹಾ ಸಮೂಹ”ವನ್ನು ನೋಡಿದನು. (ಪ್ರಕಟನೆ 7:9) ದೇವರ ಅಭಿಷಿಕ್ತ ಉಳಿಕೆಯವರೊಂದಿಗೆ ಈ ಮಹಾ ಸಮೂಹವು ಹಾಡುತ್ತಿರುವ ಸ್ತುತಿಗಳ ಮುಖ್ಯವಿಷಯವು ಏನಾಗಿದೆ? ಯೋಹಾನನು ನಮಗೆ ಹೇಳುವುದು: “ಸಿಂಹಾಸನಾಸೀನನಾದಾತನಾದ ನಮ್ಮ ದೇವರಿಗೆ ಮತ್ತು ಕುರಿಮರಿಗೆ ನಮ್ಮ ರಕ್ಷಣೆಗಾಗಿ ನಾವು ಋಣಿಗಳು.” (ಪ್ರಕಟನೆ 7:10, NW) ಈ ವಿಷಯವನ್ನು ಲೋಕದ ಪ್ರತಿಯೊಂದು ಭಾಗದಲ್ಲಿ ಧೈರ್ಯದಿಂದ ಪ್ರಕಟಿಸಲಾಗುತ್ತಿದೆ. ಖರ್ಜೂರದ ಗರಿಗಳನ್ನು ಬೀಸುತ್ತಿರುವಂತೆಯೆ, ನಾವು ಐಕ್ಯವಾಗಿ ದೇವರನ್ನು ವಿಶ್ವದ ಪರಮಾಧಿಕಾರಿಯಾಗಿ ಜಯಕಾರ ಮಾಡುತ್ತೇವೆ ಮತ್ತು ನಮ್ಮ ರಕ್ಷಣೆಗಾಗಿ ಆತನಿಗೆ ಮತ್ತು ಕುರಿಮರಿಯಾದ ಆತನ ಮಗ, ಯೇಸು ಕ್ರಿಸ್ತನಿಗೆ “ನಾವು ಋಣಿ”ಯಾಗಿದ್ದೇವೆಂದು ಭೂಮ್ಯಾಕಾಶಗಳ ಮುಂದೆ ಹರ್ಷಭರಿತರಾಗಿ ಹೇಳಿಕೊಳ್ಳುತ್ತೇವೆ. ಮಹಾ ಸಮೂಹದ ಈ ಹುರಿದುಂಬಿಸುವ ದರ್ಶನವನ್ನು ನೋಡುವುದರಲ್ಲಿ ಅಪೊಸ್ತಲ ಯೋಹಾನನು ಎಂತಹ ರೋಮಾಂಚನವನ್ನು ಅನುಭವಿಸಿದನು! ಮತ್ತು ಯೋಹಾನನು ನೋಡಿದುದರ ಜೀವಂತ ವಾಸ್ತವಿಕತೆಯನ್ನು ಇಂದು ನೋಡುವುದರಲ್ಲಿ ಮತ್ತು ಅದರ ಭಾಗವಾಗಿರುವುದರಲ್ಲಿಯೂ ನಮಗೆಂತಹ ರೋಮಾಂಚನವಿದೆ!
13. ಯಾವುದು ಯೆಹೋವನ ಜನರನ್ನು ಈ ಲೋಕದಿಂದ ಪ್ರತ್ಯೇಕವಾಗಿರಿಸುತ್ತದೆ?
13 ಯೆಹೋವನ ಸೇವಕರೋಪಾದಿ, ಹೆಮ್ಮೆಯಿಂದ ನಾವು ಆತನ ನಾಮವನ್ನು ಧರಿಸಿಕೊಳ್ಳುತ್ತೇವೆ. (ಯೆಶಾಯ 43:10, 12) ನಾವು ಯೆಹೋವನ ಸಾಕ್ಷಿಗಳಾಗಿರುವುದು, ನಮ್ಮನ್ನು ಈ ಲೋಕದಿಂದ ಭಿನ್ನರಾಗಿರುವಂತೆ ಮಾಡುತ್ತದೆ. ದೇವರ ವೈಶಿಷ್ಟ್ಯಪೂರ್ಣ ನಾಮವನ್ನು ಧರಿಸಿರುವುದು ಮತ್ತು ಆತನ ದೈವಿಕ ಕೆಲಸದ ಮಾಡುವಿಕೆಯನ್ನು ಜೀವನದಲ್ಲಿನ ನಮ್ಮ ಉದ್ದೇಶವಾಗಿ ಪಡೆದಿರುವುದು ಎಂತಹ ಒಂದು ಹರ್ಷವಾಗಿದೆ! ರಾಜ್ಯದ ಮೂಲಕ ತನ್ನ ಪವಿತ್ರ ನಾಮವನ್ನು ಪವಿತ್ರೀಕರಿಸುವ ಮತ್ತು ತನ್ನ ವಿಶ್ವ ಪರಮಾಧಿಕಾರವನ್ನು ನಿರ್ದೋಷೀಕರಿಸುವ ಯೆಹೋವನ ಮಹಾನ್ ಉದ್ದೇಶವು, ನಮ್ಮ ಜೀವಿತಗಳಿಗೆ ಅರ್ಥವನ್ನು ನೀಡಿದೆ. ಮತ್ತು ತನ್ನ ನಾಮ ಹಾಗೂ ರಾಜ್ಯದ ಸಂಬಂಧದಲ್ಲಿರುವ ತನ್ನ ದೈವಿಕ ಉದ್ದೇಶದಲ್ಲಿ ನಮಗೊಂದು ಸ್ಥಾನವಿರುವಂತೆ ಆತನು ಸಹಾಯ ಮಾಡಿದ್ದಾನೆ. ಇದನ್ನು ಆತನು ಮೂರು ವಿಧಗಳಲ್ಲಿ ಮಾಡಿದ್ದಾನೆ.
ಸತ್ಯದ ಹೊಣೆಯು ಒಪ್ಪಿಸಲ್ಪಟ್ಟದ್ದು
14, 15. (ಎ) ತನ್ನ ನಾಮ ಮತ್ತು ರಾಜ್ಯದ ಸಂಬಂಧದಲ್ಲಿರುವ ಆತನ ದೈವಿಕ ಉದ್ದೇಶದಲ್ಲಿ ನಮಗೊಂದು ಸ್ಥಾನವಿರುವಂತೆ ದೇವರು ಸಹಾಯ ಮಾಡಿರುವ ಒಂದು ವಿಧವು ಯಾವುದು? (ಬಿ) ಸಾ.ಶ. 1914ರಲ್ಲಿ ಸ್ಥಾಪಿಸಲ್ಪಟ್ಟ ರಾಜ್ಯವು, ಸಾ.ಶ.ಪೂ. 607ರಲ್ಲಿ ಉರುಳಿಸಲ್ಪಟ್ಟ ರಾಜ್ಯಕ್ಕಿಂತ ಹೇಗೆ ಭಿನ್ನವಾಗಿದೆ?
14 ಪ್ರಥಮವಾಗಿ, ಯೆಹೋವನು ತನ್ನ ಜನರಿಗೆ ಸತ್ಯದ ಹೊಣೆಯನ್ನು ಒಪ್ಪಿಸಿದ್ದಾನೆ. ಆತನ ರಾಜ್ಯವು 1914ರಲ್ಲಿ ಆಳಲಾರಂಭಿಸಿತೆಂಬುದು ಅತ್ಯಂತ ಉತ್ತೇಜಕವಾದ ಪ್ರಕಟನೆಯಾಗಿದೆ. (ಪ್ರಕಟನೆ 12:10) ಈ ಸ್ವರ್ಗೀಯ ಸರಕಾರವು, ಎಲ್ಲಿ ದಾವೀದನ ವಂಶದ ರಾಜರು ಸಿಂಹಾಸನಕ್ಕೇರಿಸಲ್ಪಡುತ್ತಿದ್ದರೊ, ಆ ಯೆರೂಸಲೇಮಿನಲ್ಲಿದ್ದ ಪ್ರಾತಿನಿಧಿಕ ರಾಜ್ಯಕ್ಕಿಂತ ಭಿನ್ನವಾಗಿದೆ. ಆ ರಾಜ್ಯವನ್ನು ಉರುಳಿಸಲಾಯಿತು, ಮತ್ತು ಸಾ.ಶ.ಪೂ. 607ರಲ್ಲಿ ಆರಂಭಿಸುತ್ತಾ, ಯೆರೂಸಲೇಮ್ ಅನ್ಯಜನಾಂಗದ ಲೋಕ ಶಕ್ತಿಗಳ ಆಳಿಕೆಗೆ ಸಂಪೂರ್ಣವಾಗಿ ಅಧೀನವಾಗಿತ್ತು. ಯೆಹೋವನು 1914ರಲ್ಲಿ ಸ್ಥಾಪಿಸಿದ ಆ ಹೊಸ ರಾಜ್ಯವು, ಒಂದು ಸ್ವರ್ಗೀಯ ಶಕ್ತಿಯಾಗಿದ್ದು, ಯೆಹೋವನನ್ನು ಬಿಟ್ಟು ಬೇರೆ ಯಾರಿಗೂ ಅಧೀನವಾಗದು, ಇಲ್ಲವೆ ಅದು ಎಂದಿಗೂ ಅಳಿಸಲ್ಪಡದು. (ದಾನಿಯೇಲ 2:44) ಅಲ್ಲದೆ, ಅದರ ದೊರೆತನವು ಕೂಡ ಭಿನ್ನವಾಗಿದೆ. ಹೇಗೆ? ಪ್ರಕಟನೆ 11:15 (NW) ಉತ್ತರಿಸುವುದು: “ಪರಲೋಕದಲ್ಲಿ ಮಹಾ ಶಬ್ದಗಳುಂಟಾಗಿ, ಹೇಳುವುದು: ‘ಲೋಕದ ರಾಜ್ಯವು ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯವಾಗಿ ಪರಿಣಮಿಸಿತು, ಮತ್ತು ಅವನು ಸದಾ ಸರ್ವದಾ ರಾಜನಾಗಿ ಆಳುವನು.’”
15 “ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯ”ವು, ಮಾನವಜಾತಿಯ ಇಡೀ ಲೋಕದ ಮೇಲೆ ಅಧಿಕಾರ ಚಲಾಯಿಸುತ್ತದೆ. ಯೆಹೋವನ ಪರಮಾಧಿಕಾರದ ಈ ಹೊಸ ಅಭಿವ್ಯಕ್ತಿಯು, ಯಾವುದರಲ್ಲಿ ತನ್ನ ಮೆಸ್ಸೀಯ ಪುತ್ರನಾದ ಯೇಸು ಕ್ರಿಸ್ತನು ಮತ್ತು ಯೇಸುವಿನ 1,44,000 ಸಹೋದರರು—ಅವರಲ್ಲಿ ಹೆಚ್ಚಿನವರು ಸ್ವರ್ಗೀಯ ಮಹಿಮೆಗೆ ಈಗ ಪುನರುತ್ಥಾನಗೊಳಿಸಲ್ಪಟ್ಟಿದ್ದಾರೆ—ಒಳಗೊಂಡಿದ್ದಾರೊ, ಕೇವಲ ಶೈಕ್ಷಣಿಕ ಆಸಕ್ತಿಯ, ವಿದ್ಯಾರ್ಥಿಗಳು ಚರ್ಚಿಸಲು ಬಯಸಬಹುದಾದ ಯಾವುದೊ ತಾತ್ವಿಕ ವಿಷಯವಾಗಿಲ್ಲ. ಇಲ್ಲ, ಈ ಸ್ವರ್ಗೀಯ ರಾಜ್ಯವು ಒಂದು ನೈಜ ಸರಕಾರವಾಗಿದೆ. ಮತ್ತು ಅದರ ಆಳಿಕೆಯ ಪರಿಣಾಮವಾಗಿ, ಪರಿಪೂರ್ಣತೆಯಲ್ಲಿ ಸದಾಕಾಲ ಜೀವಿಸುವ ನಮ್ಮ ಆನಂದಕರ ಪ್ರತೀಕ್ಷೆಯು, ಹರ್ಷಿಸುತ್ತಾ ಇರುವುದನ್ನು ಮುಂದುವರಿಸಲು ನಮಗೆ ಹೇರಳವಾದ ಕಾರಣವನ್ನು ಕೊಡುತ್ತದೆ. ಯೆಹೋವನ ವಾಕ್ಯದ ಇಂತಹ ಸತ್ಯಗಳ ಹೊಣೆ ನಮಗೆ ಒಪ್ಪಿಸಲ್ಪಟ್ಟಿರುವುದು, ಅದರ ಕುರಿತು ಒಳ್ಳೆಯದನ್ನು ಮಾತಾಡುವಂತೆ ನಮ್ಮನ್ನು ಯಾವಾಗಲೂ ಪ್ರೇರಿಸುತ್ತದೆ. (ಕೀರ್ತನೆ 56:10) ದೇವರ ಮೆಸ್ಸೀಯ ಸಂಬಂಧಿತ ರಾಜ್ಯವು ಈಗ ಸ್ವರ್ಗದಲ್ಲಿ ಆಳುತ್ತಿದೆ ಎಂಬುದನ್ನು ಪ್ರತಿಯೊಬ್ಬರಿಗೆ ಹೇಳುವ ಮೂಲಕ ನೀವು ಇದನ್ನು ಕ್ರಮವಾಗಿ ಮಾಡುತ್ತಿದ್ದೀರೊ?
ಪವಿತ್ರಾತ್ಮ ಮತ್ತು ಲೋಕವ್ಯಾಪಕ ಸಹೋದರತ್ವದ ಮೂಲಕ ಸಹಾಯ ನೀಡಲ್ಪಟ್ಟದ್ದು
16, 17. ತನ್ನ ದೈವಿಕ ಉದ್ದೇಶದಲ್ಲಿ ನಮಗೊಂದು ಸ್ಥಾನವಿರುವಂತೆ ದೇವರು ಸಹಾಯ ಮಾಡಿರುವ ಎರಡನೆಯ ಹಾಗೂ ಮೂರನೆಯ ವಿಧಗಳಾವುವು?
16 ತನ್ನ ದೈವಿಕ ಉದ್ದೇಶದಲ್ಲಿ ನಮಗೊಂದು ಸ್ಥಾನವಿರುವಂತೆ ದೇವರು ಸಹಾಯ ಮಾಡಿರುವ ಎರಡನೆಯ ವಿಧವು, ತನ್ನ ಪವಿತ್ರಾತ್ಮವನ್ನು ನಮಗೆ ಕೊಡುವ ಮೂಲಕವೇ. ಇದು, ಅದರ ಮನೋಹರವಾದ ಫಲವನ್ನು ನಮ್ಮ ಜೀವಿತಗಳಲ್ಲಿ ಉತ್ಪಾದಿಸುವಂತೆ ಮತ್ತು ಆತನ ಮೆಚ್ಚಿಗೆಯನ್ನು ಪಡೆದುಕೊಳ್ಳಲು ಶಕ್ತರಾಗುವಂತೆ ಮಾಡುತ್ತದೆ. (ಗಲಾತ್ಯ 5:22, 23) ಅದಲ್ಲದೆ, ಪೌಲನು ಅಭಿಷಿಕ್ತ ಕ್ರೈಸ್ತರಿಗೆ ಬರೆದುದು: “ದೇವರು ನಮಗೆ ದಯಪಾಲಿಸಿರುವ ಕೃಪಾವರಗಳನ್ನು ತಿಳುಕೊಳ್ಳುವದಕ್ಕಾಗಿ ದೇವರಿಂದ ಬಂದ ಆತ್ಮವನ್ನೇ ಹೊಂದಿದೆವು.” (1 ಕೊರಿಂಥ 2:12) ಯೆಹೋವನ ಆತ್ಮಕ್ಕೆ ನಾವು ಪ್ರತಿಕ್ರಿಯಿಸುವ ಮೂಲಕ, ಆತನು ದಯಾಪರವಾಗಿ ನಮಗೆ ಕೊಟ್ಟಿರುವ, ಪ್ರಚಲಿತ ಒಳ್ಳೆಯ ವಿಷಯಗಳನ್ನು—ಆತನ ವಾಗ್ದಾನಗಳು, ನಿಯಮಗಳು, ಮೂಲತತ್ವಗಳು, ಇನ್ನೂ ಮುಂತಾದವುಗಳನ್ನು—ನಾವೆಲ್ಲರೂ ಈಗ ತಿಳಿದು, ಅರ್ಥಮಾಡಿಕೊಳ್ಳಬಲ್ಲೆವು.—ಮತ್ತಾಯ 13:11ನ್ನು ಹೋಲಿಸಿರಿ.
17 ದೇವರು ನಮಗೆ ಸಹಾಯ ಮಾಡುತ್ತಿರುವ ಮೂರನೆಯ ವಿಧವಾಗಿ, ನಮ್ಮ ಲೋಕವ್ಯಾಪಕ ಸಹೋದರತ್ವ ಮತ್ತು ಆರಾಧನೆಗಾಗಿ ಯೆಹೋವನ ಉಲ್ಲಾಸಕರ ಸುಸಂಘಟಿತ ಏರ್ಪಾಡು ನಮಗಿದೆ. “ಸಹೋದರರ ಇಡೀ ಸಂಘಕ್ಕಾಗಿ ಪ್ರೀತಿ ಇರುವಂತೆ” (NW) ಪೇತ್ರನು ನಮ್ಮನ್ನು ಪ್ರೋತ್ಸಾಹಿಸಿದಾಗ, ಅದರ ಕುರಿತು ಅವನು ಮಾತಾಡಿದನು. (1 ಪೇತ್ರ 2:17) ನಮ್ಮ ಸಹೋದರ ಸಹೋದರಿಯರ ಪ್ರೀತಿಯ ಅಂತಾರಾಷ್ಟ್ರೀಯ ಕುಟುಂಬವು, ಯೆಹೋವನನ್ನು ಬಹಳಷ್ಟು ಹೃದಯಾನಂದದಿಂದ ಸೇವಿಸುವಂತೆ ಸಹಾಯ ಮಾಡುತ್ತದೆ. ಇದು ಕೀರ್ತನೆ 100:2 ಆಜ್ಞಾಪಿಸುವಂತಿದೆ: “ಯೆಹೋವನನ್ನು ಸಂತೋಷದಿಂದ ಸೇವಿಸಿರಿ; ಉತ್ಸಾಹಧ್ವನಿಮಾಡುತ್ತಾ ಆತನ ಸನ್ನಿಧಿಗೆ ಬನ್ನಿರಿ.” ವಚನ 4 ಮುಂದುವರಿಸಿ ಹೇಳುವುದು: “ಕೃತಜ್ಞತಾಸ್ತುತಿಯೊಡನೆ ಆತನ ಮಂದಿರದ್ವಾರಗಳಿಗೂ ಕೀರ್ತನೆಯೊಡನೆ ಆತನ ಅಂಗಳಗಳಿಗೂ ಬನ್ನಿರಿ; ಆತನ ಉಪಕಾರ ಸ್ಮರಿಸಿರಿ; ಆತನ ನಾಮವನ್ನು ಕೊಂಡಾಡಿರಿ.” ಆದುದರಿಂದ, ನಾವು ಬಹಿರಂಗವಾಗಿ ಸಾರುತ್ತಿರಲಿ ಇಲ್ಲವೆ ನಮ್ಮ ಕೂಟಗಳಿಗೆ ಹಾಜರಾಗುತ್ತಿರಲಿ, ನಾವು ಹರ್ಷವನ್ನು ಅನುಭವಿಸಬಲ್ಲೆವು. ಯೆಹೋವನ ಆತ್ಮಿಕ ಆಲಯದ ಸುಂದರವಾದ ಅಂಗಳಗಳಲ್ಲಿ, ನಾವು ಎಂತಹ ಶಾಂತಿ ಮತ್ತು ಭದ್ರತೆಯನ್ನು ಕಂಡುಕೊಂಡಿದ್ದೇವೆ!
ಹರ್ಷಭರಿತರಾಗಿ ಯೆಹೋವನನ್ನು ಸ್ತುತಿಸಿರಿ!
18. ನಮ್ಮನ್ನು ಆಕ್ರಮಿಸುವ ಹಿಂಸೆ ಇಲ್ಲವೆ ಇತರ ಸಮಸ್ಯೆಗಳ ಎದುರಿನಲ್ಲಿಯೂ ನಾವು ಯೆಹೋವನನ್ನು ಸ್ತುತಿಸುವುದರಲ್ಲಿ ಏಕೆ ಹರ್ಷಿಸಬಲ್ಲೆವು?
18 ನಮ್ಮನ್ನು ಯಾವುದೇ ಕಷ್ಟಕರ ಪರಿಸ್ಥಿತಿಗಳು, ಹಿಂಸೆಯು, ಇಲ್ಲವೆ ಇತರ ಸಮಸ್ಯೆಗಳು ಆಕ್ರಮಿಸಲಿ, ನಾವು ಯೆಹೋವನ ಆರಾಧನಾಮಂದಿರಲ್ಲಿ ಇದ್ದೇವೆಂಬ ಕಾರಣಕ್ಕಾಗಿ ಹರ್ಷಿಸೋಣ. (ಯೆಶಾಯ 2:2, 3) ಹರ್ಷವು ಹೃದಯದ ಒಂದು ಗುಣವಾಗಿದೆ ಎಂಬುದನ್ನು ಜ್ಞಾಪಕದಲ್ಲಿಡಿ. ನಮ್ಮ ಆದಿ ಕ್ರೈಸ್ತ ಸಹೋದರ ಸಹೋದರಿಯರು, ತಾವು ಅನುಭವಿಸಿದ ಅನೇಕ ತೊಂದರೆಗಳ ಮತ್ತು ನಷ್ಟಗಳ ಎದುರಿನಲ್ಲಿಯೂ ಯೆಹೋವನ ಹರ್ಷಭರಿತ ಸ್ತುತಿಗಾರರಾಗಿದ್ದರು. (ಇಬ್ರಿಯ 10:34) ನಮ್ಮ ಜೊತೆ ವಿಶ್ವಾಸಿಗಳು ಇಂದು, ಅವರಂತೆಯೇ ಇದ್ದಾರೆ.—ಮತ್ತಾಯ 5:10-12.
19. (ಎ) ಯಾವ ಸತತವಾದ ಆಜ್ಞೆಗಳು ಯೆಹೋವನನ್ನು ಸ್ತುತಿಸುವಂತೆ ನಮ್ಮನ್ನು ಪ್ರಚೋದಿಸುತ್ತವೆ? (ಬಿ) ನಮ್ಮ ಅನಂತ ಜೀವಿತಗಳು ಯಾವುದರ ಮೇಲೆ ಅವಲಂಬಿಸುತ್ತವೆ, ಮತ್ತು ನಮ್ಮ ನಿರ್ಧಾರವು ಏನಾಗಿದೆ?
19 ನಮ್ಮಲ್ಲಿ ಯೆಹೋವನನ್ನು ಸೇವಿಸುವವರೆಲ್ಲರೂ, ಆತನನ್ನು ಸ್ತುತಿಸಬೇಕೆಂಬ ಬೈಬಲಿನ ಆಜ್ಞೆಗಳಿಗೆ ವಿಧೇಯರಾಗಲು ಹರ್ಷಿಸುತ್ತೇವೆ. ಪ್ರಕಟನೆಯ ಪುಸ್ತಕವು, ದೇವರ ಸ್ತುತಿಗಳ ನಡುವೆ “ಯಾಹುವಿಗೆ ಸ್ತೋತ್ರ” ಎಂಬ ಅಭಿವ್ಯಕ್ತಿಯನ್ನು ಆಗಾಗ್ಗೆ ಕೂಡಿಸುತ್ತದೆ. (ಪ್ರಕಟನೆ 19:1-6) ಕೀರ್ತನೆ 150ನೆಯ ಅಧ್ಯಾಯದ ಆರು ವಚನಗಳಲ್ಲಿ, ಯೆಹೋವನನ್ನು ಸ್ತುತಿಸುವಂತೆ ನಮಗೆ 13 ಬಾರಿ ಹೇಳಲಾಗಿದೆ. ಇದು, ಯೆಹೋವನ ಸ್ತುತಿಯನ್ನು ಹಾಡುವುದರಲ್ಲಿ ಹರ್ಷಭರಿತವಾಗಿ ಸೇರುವಂತೆ, ಸಕಲ ಸೃಷ್ಟಿಗೆ ಒಂದು ವಿಶ್ವ ಕರೆಯಾಗಿದೆ. ನಮ್ಮ ಅನಂತ ಜೀವಿತವು, ಈ ಮಹಾ ಹಲ್ಲೆಲೂಯಾ ಮೇಳಗೀತೆಯಲ್ಲಿ ನಾವು ಸೇರುವುದರ ಮೇಲೆ ಅವಲಂಬಿಸುತ್ತದೆ! ಹೌದು, ಯೆಹೋವನಿಗೆ ನಿರಂತರವಾಗಿ ಸ್ತುತಿಯನ್ನು ಸಲ್ಲಿಸುವವರು ಮಾತ್ರ ಸದಾಕಾಲ ಜೀವಿಸುವ ಜನರಾಗಿದ್ದಾರೆ. ಆದುದರಿಂದ, ಅಂತ್ಯವು ನಿಕಟವಾದಂತೆ, ನಾವು ಆತನ ನಿಷ್ಠೆಯ, ಲೋಕವ್ಯಾಪಕ ಸಭೆಗೆ ನಿಕಟವಾಗಿ ಅಂಟಿಕೊಳ್ಳಲು ದೃಢನಿರ್ಧಾರ ಮಾಡಿದ್ದೇವೆ. ಆಗ, 150ನೆಯ ಕೀರ್ತನೆಯ ಕೊನೆಯ ಮಾತುಗಳು ಸಂಪೂರ್ಣವಾಗಿ ನೆರವೇರುವುದನ್ನು ನೋಡಲು ನಾವು ನಿರೀಕ್ಷಿಸಬಲ್ಲೆವು: “ಶ್ವಾಸವಿರುವದೆಲ್ಲವೂ ಯೆಹೋವನನ್ನು ಸ್ತುತಿಸಲಿ; ಯಾಹುವಿಗೆ ಸ್ತೋತ್ರ!”
ನೀವು ಹೇಗೆ ಉತ್ತರಿಸುವಿರಿ?
◻ ಯಾವುದು ಯೆಹೋವನ ಜನರನ್ನು ಭಿನ್ನರನ್ನಾಗಿಯೂ ಅದ್ವಿತೀಯರನ್ನಾಗಿಯೂ ಮಾಡುತ್ತದೆ?
◻ ಯೆಹೋವನ ಸೇವಕರು ಇಷ್ಟೊಂದು ಹರ್ಷಭರಿತರಾಗಿರುವುದು ಏಕೆ?
◻ ಯಾವುದು ನಮ್ಮನ್ನು ಲೋಕದಿಂದ ಪ್ರತ್ಯೇಕವಾಗಿರಿಸುತ್ತದೆ?
◻ ತನ್ನ ದೈವಿಕ ಉದ್ದೇಶದಲ್ಲಿ ನಮಗೊಂದು ಸ್ಥಾನವಿರುವಂತೆ ದೇವರು ಸಹಾಯ ಮಾಡಿರುವ ಮೂರು ವಿಧಗಳಾವುವು?
[ಪುಟ 17 ರಲ್ಲಿರುವ ಚಿತ್ರ]
ಅವನು ಎಲ್ಲಿಯೇ ಇದ್ದರೂ, ಯೇಸು ಯೆಹೋವನ ಕುರಿತು ಸಾಕ್ಷಿಯನ್ನು ನೀಡಿದನು ಮತ್ತು ಬಹಿರಂಗವಾಗಿ ಆತನನ್ನು ಸ್ತುತಿಸಿದನು