ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋವನು ನಮ್ಮ ಕುರುಬನು
    ಕಾವಲಿನಬುರುಜು—2005 | ನವೆಂಬರ್‌ 1
    • “ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು”

      13. ಕೀರ್ತನೆ 23:4ರಲ್ಲಿ ದಾವೀದನು ಹೇಗೆ ಹೆಚ್ಚು ಆಪ್ತತೆಯಿಂದ ಮಾತಾಡಿದನು, ಮತ್ತು ಇದು ಆಶ್ಚರ್ಯಕರವಲ್ಲವೇಕೆ?

      13 ದಾವೀದನು ತನ್ನ ದೃಢವಿಶ್ವಾಸಕ್ಕಾಗಿರುವ ಎರಡನೆಯ ಕಾರಣವನ್ನು ಕೊಡುತ್ತಾನೆ: ಯೆಹೋವನು ತನ್ನ ಕುರಿಗಳನ್ನು ಸಂರಕ್ಷಿಸುತ್ತಾನೆ. ನಾವು ಓದುವುದು: “ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು; ನಿನ್ನ ದೊಣ್ಣೆಯೂ ನಿನ್ನ ಕೋಲೂ ನನಗೆ ಧೈರ್ಯಕೊಡುತ್ತವೆ.” (ಕೀರ್ತನೆ 23:4) ಈಗ ದಾವೀದನು ಹೆಚ್ಚು ಆಪ್ತತೆಯಿಂದ, ಯೆಹೋವನನ್ನು “ನೀನು” ಎಂಬ ಸರ್ವನಾಮದಿಂದ ಸಂಬೋಧಿಸಿ ಮಾತಾಡುತ್ತಾನೆ. ಇದು ಆಶ್ಚರ್ಯಕರವೇನಲ್ಲ, ಏಕೆಂದರೆ ಪ್ರತಿಕೂಲ ಪರಿಸ್ಥಿತಿಯನ್ನು ತಾಳಿಕೊಳ್ಳಲು ದೇವರು ತನಗೆ ಹೇಗೆ ಸಹಾಯಮಾಡಿದನು ಎಂಬುದರ ಕುರಿತು ದಾವೀದನು ಇಲ್ಲಿ ಮಾತಾಡುತ್ತಿದ್ದಾನೆ. ದಾವೀದನು ಅನೇಕ ಕಾರ್ಗತ್ತಲಿನ ಕಣಿವೆಗಳನ್ನು, ಅಂದರೆ ಅವನ ಜೀವವೇ ಅಪಾಯದಲ್ಲಿದ್ದ ಸಮಯಗಳನ್ನು ದಾಟಿಬಂದನು. ಆದರೆ ಭಯವು ತನ್ನ ಮೇಲೆ ಅಧಿಕಾರ ನಡಿಸುವಂತೆ ಅವನು ಬಿಡಲಿಲ್ಲ, ಏಕೆಂದರೆ ಅಗತ್ಯವಿರುವಾಗ ಕ್ರಿಯೆಗೈಯಲು ಸಿದ್ಧನಾಗಿ ತನ್ನ “ದೊಣ್ಣೆ” ಮತ್ತು ‘ಕೋಲಿನೊಂದಿಗೆ’ ದೇವರು ತನ್ನೊಂದಿಗಿದ್ದಾನೆ ಎಂಬುದನ್ನು ಅವನು ಮನಗಂಡನು. ಸಂರಕ್ಷಣೆಯ ಈ ಅರಿವು ದಾವೀದನನ್ನು ಸಂತೈಸಿತು ಮತ್ತು ಅವನನ್ನು ಯೆಹೋವನ ಸಮೀಪಕ್ಕೆ ಬರುವಂತೆ ಮಾಡಿತು ಎಂಬುದರಲ್ಲಿ ಸಂದೇಹವೇ ಇಲ್ಲ.b

      14. ಯೆಹೋವನ ಸಂರಕ್ಷಣೆಯ ವಿಷಯದಲ್ಲಿ ಬೈಬಲ್‌ ನಮಗೆ ಯಾವ ಆಶ್ವಾಸನೆಯನ್ನು ನೀಡುತ್ತದೆ, ಆದರೆ ಇದರ ಅರ್ಥ ಏನಾಗಿರುವುದಿಲ್ಲ?

      14 ಇಂದು ಯೆಹೋವನು ತನ್ನ ಕುರಿಗಳನ್ನು ಹೇಗೆ ಸಂರಕ್ಷಿಸುತ್ತಾನೆ? ದೆವ್ವಗಳಾಗಲಿ ಮಾನವರಾಗಲಿ, ಯಾವುದೇ ವಿರೋಧಿಗಳು ಆತನ ಕುರಿಗಳನ್ನು ಭೂಮಿಯಿಂದ ನಿರ್ಮೂಲನಮಾಡುವುದರಲ್ಲಿ ಎಂದಿಗೂ ಸಫಲರಾಗುವುದಿಲ್ಲ ಎಂದು ಬೈಬಲ್‌ ನಮಗೆ ಆಶ್ವಾಸನೆ ನೀಡುತ್ತದೆ. ಯೆಹೋವನು ಎಂದಿಗೂ ಇದನ್ನು ಅನುಮತಿಸನು. (ಯೆಶಾಯ 54:17; 2 ಪೇತ್ರ 2:9) ಆದರೆ, ನಮ್ಮ ಕುರುಬನು ಎಲ್ಲ ರೀತಿಯ ವಿಪತ್ತುಗಳಿಂದ ನಮ್ಮನ್ನು ಕಾಪಾಡುವನು ಎಂಬುದು ಇದರ ಅರ್ಥವಲ್ಲ. ಮಾನವರು ಸಾಮಾನ್ಯವಾಗಿ ಅನುಭವಿಸುವ ಪರೀಕ್ಷೆಗಳನ್ನು ನಾವು ಅನುಭವಿಸುತ್ತೇವೆ ಮತ್ತು ಎಲ್ಲ ಸತ್ಯ ಕ್ರೈಸ್ತರ ಮೇಲೆ ಬರುವ ಹಿಂಸೆಯನ್ನು ನಾವು ಎದುರಿಸುತ್ತೇವೆ. (2 ತಿಮೊಥೆಯ 3:12; ಯಾಕೋಬ 1:2) ಕೆಲವೊಮ್ಮೆ ನಾವು ‘ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯಬಹುದಾದ’ ಸಮಯಗಳಿರುತ್ತವೆ. ಉದಾಹರಣೆಗೆ, ಹಿಂಸೆಯ ಕಾರಣದಿಂದ ಇಲ್ಲವೆ ಯಾವುದೋ ಆರೋಗ್ಯ ಸಮಸ್ಯೆಯ ಪರಿಣಾಮವಾಗಿ ನಾವು ಸಾವಿನಂಚಿಗೆ ಬಂದು ತಲಪಬಹುದು. ಅಥವಾ ನಾವು ತುಂಬ ಪ್ರೀತಿಸುವಂಥ ಯಾರಾದರೊಬ್ಬರು ಸಾವುಬದುಕಿನ ನಡುವೆ ಹೋರಾಡುತ್ತಿರಬಹುದು ಅಥವಾ ಸಾವಿಗೀಡಾಗಬಹುದು. ಹೀಗೆ ಘೋರ ಕಾರ್ಗತ್ತಲಿನ ಕ್ಷಣಗಳಾಗಿ ತೋರುವ ಇಂಥ ಸಮಯದಲ್ಲಿ ನಮ್ಮ ಕುರುಬನು ನಮ್ಮೊಂದಿಗಿದ್ದಾನೆ ಮತ್ತು ಆತನು ನಮ್ಮನ್ನು ಕಾಪಾಡುತ್ತಾನೆ. ಹೇಗೆ?

      15, 16. (ಎ) ನಾವು ಎದುರಿಸಬಹುದಾದ ಯಾವುದೇ ಅಡಚಣೆಗಳನ್ನು ನಿಭಾಯಿಸಲು ಯೆಹೋವನು ಯಾವ ವಿಧಗಳಲ್ಲಿ ನಮಗೆ ಸಹಾಯಮಾಡುತ್ತಾನೆ? (ಬಿ) ಪರೀಕ್ಷೆಯ ಸಮಯಗಳಲ್ಲಿ ಯೆಹೋವನು ನಮಗೆ ಹೇಗೆ ಸಹಾಯಮಾಡುತ್ತಾನೆ ಎಂಬುದನ್ನು ತೋರಿಸಲಿಕ್ಕಾಗಿ ಒಂದು ಅನುಭವವನ್ನು ತಿಳಿಸಿರಿ.

      15 ಯೆಹೋವನು ಅದ್ಭುತಕರವಾದ ರೀತಿಯಲ್ಲಿ ಹಸ್ತಕ್ಷೇಪಮಾಡುವುದಾಗಿ ವಾಗ್ದಾನಿಸುವುದಿಲ್ಲ.c ಆದರೆ ನಾವು ಎದುರಿಸಬಹುದಾದ ಯಾವುದೇ ಅಡಚಣೆಗಳನ್ನು ಜಯಿಸಲು ಯೆಹೋವನು ನಮಗೆ ಸಹಾಯಮಾಡುವನು ಎಂಬ ಖಾತ್ರಿ ನಮಗಿರಸಾಧ್ಯವಿದೆ. ‘ನಾನಾವಿಧವಾದ ಕಷ್ಟಗಳನ್ನು’ ನಿಭಾಯಿಸಲು ಬೇಕಾದ ವಿವೇಕವನ್ನು ಆತನು ನಮಗೆ ದಯಪಾಲಿಸಬಲ್ಲನು. (ಯಾಕೋಬ 1:2-5) ಒಬ್ಬ ಕುರುಬನು ತನ್ನ ದೊಣ್ಣೆ ಅಥವಾ ಕೋಲನ್ನು ಪರಭಕ್ಷಕ ಪ್ರಾಣಿಗಳನ್ನು ಅಟ್ಟಿಸಲಿಕ್ಕಾಗಿ ಮಾತ್ರವಲ್ಲ ತನ್ನ ಕುರಿಗಳನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಮೃದುವಾಗಿ ತಿವಿಯಲಿಕ್ಕಾಗಿಯೂ ಉಪಯೋಗಿಸುತ್ತಾನೆ. ನಮ್ಮ ಪರಿಸ್ಥಿತಿಯಲ್ಲಿ ಗಮನಾರ್ಹವಾದ ಬದಲಾವಣೆಯನ್ನು ಉಂಟುಮಾಡಬಹುದಾದ ಬೈಬಲ್‌ ಆಧಾರಿತ ಸಲಹೆಯನ್ನು ನಾವು ಅನ್ವಯಿಸಲಿಕ್ಕಾಗಿ ಯೆಹೋವನು ನಮ್ಮನ್ನು ಮೃದುವಾಗಿ “ತಿವಿಯ”ಸಾಧ್ಯವಿದೆ. ಇದಕ್ಕಾಗಿ ಆತನು ಬಹುಶಃ ಒಬ್ಬ ಜೊತೆ ಆರಾಧಕನನ್ನು ಬಳಸಬಹುದು. ಅಷ್ಟುಮಾತ್ರವಲ್ಲ, ತಾಳಿಕೊಳ್ಳಲು ಅಗತ್ಯವಿರುವ ಬಲವನ್ನು ಯೆಹೋವನು ನಮಗೆ ನೀಡಶಕ್ತನಾಗಿದ್ದಾನೆ. (ಫಿಲಿಪ್ಪಿ 4:13) ತನ್ನ ಪವಿತ್ರಾತ್ಮದ ಮೂಲಕ ಆತನು ನಮ್ಮನ್ನು “ಬಲಾಧಿಕ್ಯ”ದೊಂದಿಗೆ ಸಜ್ಜುಗೊಳಿಸುತ್ತಾನೆ. (2 ಕೊರಿಂಥ 4:7) ಸೈತಾನನು ನಮ್ಮ ಮೇಲೆ ತರಬಹುದಾದ ಯಾವುದೇ ಪರೀಕ್ಷೆಯನ್ನು ತಾಳಿಕೊಳ್ಳುವಂತೆ ದೇವರ ಆತ್ಮವು ನಮ್ಮನ್ನು ಶಕ್ತರನ್ನಾಗಿ ಮಾಡಬಲ್ಲದು. (1 ಕೊರಿಂಥ 10:13) ಯೆಹೋವನು ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿದ್ದಾನೆ ಎಂಬುದನ್ನು ತಿಳಿಯುವುದು ಸಾಂತ್ವನದಾಯಕವಾಗಿಲ್ಲವೊ?

      16 ಹೌದು, ನಾವು ಯಾವ ಕಾರ್ಗತ್ತಲಿನ ಕಣಿವೆಯಲ್ಲಿರಬಹುದಾದರೂ, ಅದರಲ್ಲಿ ನಾವು ಒಬ್ಬರೇ ನಡೆಯಬೇಕಾಗಿರುವುದಿಲ್ಲ. ನಮ್ಮ ಕುರುಬನು ನಮ್ಮೊಂದಿಗಿದ್ದಾನೆ ಮತ್ತು ಆರಂಭದಲ್ಲಿ ನಾವು ಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಇರಬಹುದಾದ ವಿಧಗಳಲ್ಲಿ ನಮಗೆ ಸಹಾಯಮಾಡುತ್ತಾನೆ. ತನಗೆ ಮಾರಕವಾದ ಮಿದುಳಿನ ಟ್ಯೂಮರ್‌ ಇದೆಯೆಂದು ಕಂಡುಕೊಂಡ ಒಬ್ಬ ಕ್ರೈಸ್ತ ಹಿರಿಯನ ಅನುಭವವನ್ನು ತೆಗೆದುಕೊಳ್ಳಿ. “ಆರಂಭದಲ್ಲಿ, ಯೆಹೋವನಿಗೆ ನನ್ನ ಮೇಲೆ ಕೋಪ ಬಂದಿದೆ ಅಥವಾ ಆತನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ಎಂದು ನಾನು ಆಲೋಚಿಸುತ್ತಾ ಇದ್ದೆ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು. ಆದರೆ ಯೆಹೋವನಿಂದ ದೂರಸರಿಯಬಾರದು ಎಂಬ ದೃಢನಿರ್ಧಾರವನ್ನು ನಾನು ಮಾಡಿದೆ. ನನ್ನ ಚಿಂತೆಗಳನ್ನು ಆತನಿಗೆ ವ್ಯಕ್ತಪಡಿಸಿದೆ. ಮತ್ತು ಯೆಹೋವನು ನನಗೆ ಸಹಾಯಮಾಡಿದನು, ಅನೇಕವೇಳೆ ನನ್ನ ಸಹೋದರ ಸಹೋದರಿಯರ ಮೂಲಕ ನನ್ನನ್ನು ಸಂತೈಸಿದನು. ಅನೇಕರು, ಗುರುತರವಾದ ಅಸ್ವಸ್ಥತೆಯೊಂದಿಗೆ ಹೆಣಗಾಡಿದ್ದರ ಕುರಿತಾದ ತಮ್ಮ ಸ್ವಂತ ಅನುಭವದ ಮೇಲಾಧಾರಿತವಾದ ಸಹಾಯಕರ ವಿಷಯಗಳನ್ನು ನನ್ನೊಂದಿಗೆ ಹಂಚಿಕೊಂಡರು. ಅವರ ಸಮತೂಕ ಹೇಳಿಕೆಗಳು, ನಾನು ಏನನ್ನು ಅನುಭವಿಸುತ್ತಿದ್ದೇನೋ ಅದು ಅಸಾಮಾನ್ಯವಾದದ್ದೇನಲ್ಲ ಎಂಬುದನ್ನು ನನಗೆ ನೆನಪುಹುಟ್ಟಿಸಿದವು. ಪ್ರಾಯೋಗಿಕ ಸಹಾಯ ಮತ್ತು ನನಗೆ ನೆರವನ್ನು ನೀಡಲಿಕ್ಕಾಗಿ ಅನೇಕರು ಮುಂದೆ ಬಂದದ್ದು, ಯೆಹೋವನಿಗೆ ನನ್ನ ವಿಷಯದಲ್ಲಿ ಅಸಮಾಧಾನವಿಲ್ಲ ಎಂಬ ಪುನರಾಶ್ವಾಸನೆಯನ್ನು ನೀಡಿತು. ಏನೇ ಆದರೂ ನನ್ನ ಅಸ್ವಸ್ಥತೆಯೊಂದಿಗೆ ನಾನು ಹೋರಾಟ ನಡೆಸಲೇಬೇಕಾಗಿದೆ ಮತ್ತು ಇದರ ಫಲಿತಾಂಶವೇನು ಎಂಬುದು ಸಹ ನನಗೆ ತಿಳಿದಿದೆ. ಆದರೆ ಯೆಹೋವನು ನನ್ನೊಂದಿಗಿದ್ದಾನೆ ಮತ್ತು ಈ ಪರೀಕ್ಷೆಯಾದ್ಯಂತ ಆತನು ನನಗೆ ಸಹಾಯಮಾಡುತ್ತಾ ಇರುವನು ಎಂಬ ನಿಶ್ಚಿತಾಭಿಪ್ರಾಯ ನನಗಿದೆ.”

  • ಯೆಹೋವನು ನಮ್ಮ ಕುರುಬನು
    ಕಾವಲಿನಬುರುಜು—2005 | ನವೆಂಬರ್‌ 1
    • b ದಾವೀದನು ಅನೇಕ ಕೀರ್ತನೆಗಳನ್ನು ರಚಿಸಿದನು ಮತ್ತು ಅವನನ್ನು ಅಪಾಯದಿಂದ ಕಾಪಾಡಿದ್ದಕ್ಕಾಗಿ ಅವುಗಳಲ್ಲಿ ಯೆಹೋವನನ್ನು ಸ್ತುತಿಸಿದನು.​—⁠ಉದಾಹರಣೆಗೆ 18, 34, 56, 57, 59 ಮತ್ತು 63ನೇ ಕೀರ್ತನೆಗಳ ಮೇಲ್ಬರಹಗಳನ್ನು ನೋಡಿರಿ.

      c ಅಕ್ಟೋಬರ್‌ 1, 2003ರ ಕಾವಲಿನಬುರುಜು ಸಂಚಿಕೆಯಲ್ಲಿರುವ “ದೈವಿಕ ಹಸ್ತಕ್ಷೇಪ​—⁠ನಾವು ಏನನ್ನು ನಿರೀಕ್ಷಿಸಸಾಧ್ಯವಿದೆ?” ಎಂಬ ಲೇಖನವನ್ನು ನೋಡಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ