ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
© 2024 Watch Tower Bible and Tract Society of Pennsylvania
ಮೇ 6-12
ಬೈಬಲಿನಲ್ಲಿರುವ ನಿಧಿ | ಕೀರ್ತನೆ 36-37
“ಕೆಟ್ಟವರನ್ನ ನೋಡಿ ನೆಮ್ಮದಿ ಕಳ್ಕೊಬೇಡ”
ಕಾವಲಿನಬುರುಜು17.04 ಪುಟ 10 ಪ್ಯಾರ 4
ದೇವರ ರಾಜ್ಯ ಬಂದಾಗ ಯಾವ ವಿಷಯಗಳು ಹೋಗುತ್ತವೆ?
4 ದುಷ್ಟ ಜನರಿಂದ ಇಂದು ನಮಗೆ ಯಾವ ತೊಂದರೆ ಆಗುತ್ತಿದೆ? “ಕಡೇ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಬರುವವು” ಎಂದು ಅಪೊಸ್ತಲ ಪೌಲ ಹೇಳಿದನು. ಆಗ ‘ದುಷ್ಟರೂ ವಂಚಕರೂ ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ ಹೋಗುವರು’ ಎಂದೂ ಹೇಳಿದನು. (2 ತಿಮೊ. 3:1-5, 13) ಗೂಂಡಾಗಳಿಂದ, ಜಾತೀಯವಾದಿಗಳಿಂದ, ಕ್ರೂರ ಪಾತಕಿಗಳಿಂದ ನಮ್ಮಲ್ಲಿ ಅನೇಕರು ತುಂಬ ತೊಂದರೆ ಅನುಭವಿಸಿದ್ದೇವೆ. ಕೆಲವು ದುಷ್ಟರು ರಾಜಾರೋಷವಾಗಿ ಕೆಟ್ಟದ್ದನ್ನು ಮಾಡುತ್ತಾರೆ. ಇನ್ನು ಕೆಲವರು ಗೋಮುಖ ವ್ಯಾಘ್ರರಂತೆ ಇರುತ್ತಾರೆ. ಇಂಥವರಿಂದ ನಮಗೆ ನೇರವಾಗಿ ತೊಂದರೆ ಆಗಿಲ್ಲವಾದರೂ ಅವರ ಕೆಟ್ಟತನದ ಬಿಸಿ ನಮಗೂ ತಟ್ಟುತ್ತದೆ. ಉದಾಹರಣೆಗೆ, ಪುಟ್ಟ ಮಕ್ಕಳ, ವೃದ್ಧರ ಹಾಗೂ ಅಮಾಯಕರ ಮೇಲೆ ನಡೆಯುವ ದೌರ್ಜನ್ಯವನ್ನು ಕೇಳಿ ಕೇಳಿ ನಾವು ಬೇಸತ್ತು ಹೋಗಿದ್ದೇವೆ. ದುಷ್ಟರು ಮೃಗಗಳಂತೆ, ದೆವ್ವಗಳಂತೆ ವರ್ತಿಸುತ್ತಿದ್ದಾರೆ. (ಯಾಕೋ. 3:15) ಸಂತೋಷದ ವಿಷಯ ಏನೆಂದರೆ, ದೇವರ ವಾಕ್ಯದಲ್ಲಿ ಒಂದು ಒಳ್ಳೇ ಸುದ್ದಿ ಇದೆ.
ಕಾವಲಿನಬುರುಜು22.06 ಪುಟ 10 ಪ್ಯಾರ 10
ಮನಸಾರೆ ಕ್ಷಮಿಸಿ ಆಶೀರ್ವಾದ ಗಳಿಸಿ
10 ದ್ವೇಷ ಅನ್ನೋದು ಮಡಿಲಲ್ಲಿರೋ ಬೆಂಕಿ ತರ. ಹಾಗಾಗಿ ಅದನ್ನ ಬಿಟ್ಟುಬಿಡಬೇಕು. ನಾವು ಸಂತೋಷ ನೆಮ್ಮದಿಯಿಂದ ಇರಬೇಕು ಅಂತ ಯೆಹೋವ ಇಷ್ಟಪಡ್ತಾನೆ. (ಎಫೆಸ 4:31, 32 ಓದಿ.) “ಕೋಪವನ್ನ ಬಿಟ್ಟುಬಿಡು, ಕ್ರೋಧವನ್ನ ತೊರೆದುಬಿಡು” ಅಂತ ಯೆಹೋವ ನಮಗೆ ಹೇಳ್ತಾನೆ. (ಕೀರ್ತ. 37:8) ಇದು ಒಳ್ಳೇ ಸಲಹೆ. ಯಾಕಂದ್ರೆ ಬೇರೆಯವರ ಮೇಲೆ ನಾವು ದ್ವೇಷ ಬೆಳೆಸಿಕೊಂಡ್ರೆ ನಮ್ಮ ಮನಸ್ಸು ಮತ್ತು ಆರೋಗ್ಯನ ಹಾಳು ಮಾಡಿಕೊಳ್ತೀವಿ. (ಜ್ಞಾನೋ. 14:30) ಒಬ್ಬರ ಮೇಲೆ ದ್ವೇಷ ಬೆಳೆಸಿಕೊಂಡ್ರೆ ಅದು ಅವರಿಗಲ್ಲ ನಮಗೇ ಹಾನಿ ಮಾಡುತ್ತೆ. ಅದು ಹೇಗಿರುತ್ತೆ ಅಂದ್ರೆ ನಾವು ವಿಷ ಕುಡಿದು ಇನ್ನೊಬ್ಬ ವ್ಯಕ್ತಿ ಸಾಯೋಕೆ ಕಾಯೋ ತರ ಇರುತ್ತೆ. ಆದ್ರೆ ನಾವು ಬೇರೆಯವರನ್ನ ಕ್ಷಮಿಸಿದ್ರೆ ನಮಗೆ ನಾವೇ ಒಳ್ಳೇದು ಮಾಡಿಕೊಂಡ ಹಾಗಾಗುತ್ತೆ. (ಜ್ಞಾನೋ. 11:17) ನಾವು ನೆಮ್ಮದಿ, ಶಾಂತಿಯಿಂದ ಇರುತ್ತೀವಿ ಮತ್ತು ಯೆಹೋವನ ಸೇವೆನೂ ಸಂತೋಷದಿಂದ ಮಾಡ್ತೀವಿ.
ಕಾವಲಿನಬುರುಜು03 12/1 ಪುಟ 14 ಪ್ಯಾರ 20
“ಯೆಹೋವನಲ್ಲಿ ಅತ್ಯಾನಂದಪಡು”
20 ಬಳಿಕ “ದೀನರು ದೇಶವನ್ನು ಅನುಭವಿಸುವರು.” (ಕೀರ್ತನೆ 37:11ಎ) ಆದರೆ ಈ ದೀನರು ಯಾರು? ಹೌದು, ತಮ್ಮ ಮೇಲೆ ಬರಮಾಡಲ್ಪಡುವ ಎಲ್ಲಾ ಅನ್ಯಾಯಗಳನ್ನು ಸರಿಪಡಿಸಲಿಕ್ಕಾಗಿ ನಮ್ರತೆಯಿಂದ ಯೆಹೋವನಲ್ಲಿ ಕಾದುಕೊಳ್ಳುವವರೇ ಈ ‘ದೀನರಾಗಿದ್ದಾರೆ.’ “ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:11ಬಿ) ಸತ್ಯ ಕ್ರೈಸ್ತ ಸಭೆಯೊಂದಿಗೆ ಸಹವಾಸಿಸುತ್ತಿರುವ ನಾವು ಆತ್ಮಿಕ ಪರದೈಸಿನಲ್ಲಿ ಈಗಲೂ ಸಮೃದ್ಧವಾದ ಶಾಂತಿಯನ್ನು ಕಂಡುಕೊಳ್ಳುತ್ತೇವೆ.
ಬೈಬಲಿನಲ್ಲಿರುವ ರತ್ನಗಳು
it-2-E ಪುಟ 445
ಬೆಟ್ಟ, ಪರ್ವತ
ಸ್ಥಿರವಾಗಿ, ಶಾಶ್ವತವಾಗಿ ಅಥವಾ ಎತ್ತರವಾಗಿ ಇರೋದು. ಸಾಮಾನ್ಯವಾಗಿ ಪರ್ವತಗಳು ಸ್ಥಿರವಾಗಿ ಮತ್ತು ಶಾಶ್ವತವಾಗಿರುತ್ತೆ. (ಯೆಶಾ 54:10; ಹಬ 3:6; ಕೀರ್ತ 46:2 ಹೋಲಿಸಿ.) ಕೀರ್ತನೆಗಾರ ಯೆಹೋವನ ನೀತಿಯನ್ನ “ದೇವರ ಬೆಟ್ಟ” ಅಂತ ಕರೆದ. ಹೀಗೆ ಯೆಹೋವನ ನೀತಿ ಬದಲಾಗದೆ ಸ್ಥಿರವಾಗಿರುತ್ತೆ ಅಂತ ಹೇಳಿದ. (ಕೀರ್ತ 36:6) ಅಷ್ಟೇ ಅಲ್ಲ ಯೆಹೋವನ ನೀತಿ ಮನುಷ್ಯರ ನೀತಿಗಿಂತ ತುಂಬ ಉನ್ನತವಾಗಿದೆ. (ಯೆಶಾ 55:8, 9 ಹೋಲಿಸಿ.) ಏಳನೇ ಬಟ್ಟಲಲ್ಲಿ ಇದ್ದ ದೇವರ ಕೋಪವನ್ನ ಸುರಿಯೋ ಸಮಯದಲ್ಲಿ ಬೆಟ್ಟದಷ್ಟು ದೊಡ್ಡದಾಗಿರೋ ಯಾವ ವಿಷಯಕ್ಕೂ ಆತನ ಕೋಪದಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ ಅಂತ ಪ್ರಕಟನೆ 16:20 ಹೇಳುತ್ತೆ.—ಯೆರೆ. 4:23-26 ಹೋಲಿಸಿ.
ಮೇ 13-19
ಬೈಬಲಿನಲ್ಲಿರುವ ನಿಧಿ | ಕೀರ್ತನೆ 38-39
ದೋಷಿ ಭಾವನೆಗೆ ದಾಸರಾಗಬೇಡಿ
ಕಾವಲಿನಬುರುಜು20.11 ಪುಟ 27 ಪ್ಯಾರ 12-13
“ನಿಮ್ಮ ಗಮನ ಭವಿಷ್ಯದ ಮೇಲಿರಲಿ”
12 ಒಂದನೇ ಯೋಹಾನ 3:19, 20 ಓದಿ. ನಮೆಲ್ಲರಿಗೂ ಕೆಲವೊಮ್ಮೆ ತಪ್ಪಿತಸ್ಥ ಮನೋಭಾವ ಕಾಡುತ್ತೆ. ಉದಾಹರಣೆಗೆ, ಕೆಲವರು ಸತ್ಯ ಕಲಿಯೋ ಮುಂಚೆ ಮಾಡಿದ ತಪ್ಪನ್ನ ನೆನಸಿಕೊಂಡು ಕೊರಗ್ತಾ ಇರ್ತಾರೆ. ಇನ್ನು ಕೆಲವ್ರಿಗೆ ದೀಕ್ಷಾಸ್ನಾನ ಆದ ಮೇಲೆ ಮಾಡಿದ ತಪ್ಪಿನ ಬಗ್ಗೆ ದೋಷಿ ಭಾವನೆ ಕಾಡುತ್ತೆ. ಇಂಥ ಭಾವನೆಗಳು ಕಾಡೋದು ಸಹಜ. (ರೋಮ. 3:23) ನಾವು ಸರಿಯಾದದ್ದನ್ನೇ ಮಾಡಬೇಕು ಅಂತ ಬಯಸೋದಾದ್ರೂ ಅನೇಕ ಬಾರಿ ಎಡವುತ್ತೇವೆ. (ಯಾಕೋ. 3:2; ರೋಮ. 7:21-23) ನಾವು ಮಾಡಿದ ತಪ್ಪಿನ ಬಗ್ಗೆ ನಮ್ಮ ಮನಸ್ಸು ಚುಚ್ಚುವಾಗ ನಮ್ಗೆ ಇಷ್ಟ ಆಗಲ್ಲ. ಆದ್ರೂ ತಪ್ಪಿತಸ್ಥ ಮನೋಭಾವ ಇರೋದು ಒಳ್ಳೇದೇ. ಯಾಕೆಂದ್ರೆ ಅಂಥ ಮನೋಭಾವ ಇರುವಾಗ ನಾವು ತಪ್ಪನ್ನ ಬೇಗ ತಿದ್ದಿಕೊಂಡು ಸರಿಯಾದ ದಾರಿಯಲ್ಲಿ ನಡಿತೇವೆ. ಜೊತೆಗೆ ಅಂಥ ತಪ್ಪುಗಳನ್ನ ಪುನಃ ಮಾಡದೇ ಇರೋಕೆ ದೃಢತೀರ್ಮಾನ ಮಾಡ್ತೇವೆ.—ಇಬ್ರಿ. 12:12, 13.
13 ಆದ್ರೆ ಕೆಲವೊಮ್ಮೆ ನಾವು ಮಾಡಿದ ತಪ್ಪಿನ ಬಗ್ಗೆ ಮಿತಿಮೀರಿ ಯೋಚಿಸ್ತಿರ್ತೀವೆ. ಆ ತಪ್ಪಿನ ಬಗ್ಗೆ ಈಗಾಗ್ಲೇ ಪಶ್ಚಾತ್ತಾಪ ಪಟ್ಟಿರುತ್ತೇವೆ, ಯೆಹೋವನೂ ಅದನ್ನ ಕ್ಷಮಿಸಿರ್ತಾನೆ. ಆದ್ರೂ ನಮಗೆ ತಪ್ಪಿತಸ್ಥ ಮನೋಭಾವ ಕಾಡ್ತಾ ಇರುತ್ತೆ. ಇದು ತುಂಬ ಅಪಾಯಕಾರಿ. (ಕೀರ್ತ. 31:10; 38:3, 4) ಯಾಕೆ? ಹಿಂದೆ ಮಾಡಿದ ತಪ್ಪಿನ ಬಗ್ಗೆ ಯೋಚಿಸ್ತಾ ಕೊರಗ್ತಿದ್ದ ಒಬ್ಬ ಸಹೋದರಿಯ ಉದಾಹರಣೆ ನೋಡಿ. ಆಕೆ ಹೀಗೆ ಹೇಳ್ತಾಳೆ: “ನಾನು ಯೆಹೋವನ ಸೇವೆಯಲ್ಲಿ ಏನು ಮಾಡಿದ್ರೂ ವ್ಯರ್ಥ ಅಂತ ನೆನಸ್ತಿದ್ದೆ. ಯಾಕಂದ್ರೆ, ನಾನು ಎಂಥ ತಪ್ಪುಗಳನ್ನ ಮಾಡಿದ್ದೀನಂದ್ರೆ ನಾಶನದ ಸಮ್ಯದಲ್ಲಿ ನಾನು ಪಾರಾಗಲ್ಲ ಅಂತ ಅನಿಸ್ತಿತ್ತು.” ನಮ್ಮಲ್ಲಿ ಅನೇಕರಿಗೆ ಇದೇ ರೀತಿ ಅನಿಸಬಹುದು. ಆದ್ರೆ ಮಾಡಿದ ತಪ್ಪಿನ ಬಗ್ಗೆ ಮಿತಿಮೀರಿ ಕೊರಗದೇ ಇರೋದು ತುಂಬ ಮುಖ್ಯ. ಯಾಕೆಂದ್ರೆ ನಾವು ಮಾಡಿದ ತಪ್ಪನ್ನು ಯೆಹೋವನು ಕ್ಷಮಿಸಿದ ಮೇಲೂ ‘ನಾನು ಯಾವ್ದಕ್ಕೂ ಲಾಯಕ್ಕಿಲ್ಲ’ ಅಂತ ಯೋಚಿಸಿ ಯೆಹೋವನ ಸೇವೆಯನ್ನ ನಿಲ್ಲಿಸಿಬಿಟ್ರೆ ಸೈತಾನನಿಗೆ ತುಂಬ ಖುಷಿಯಾಗುತ್ತೆ.—2 ಕೊರಿಂ. 2:5-7, 11 ಹೋಲಿಸಿ.
ಕಾವಲಿನಬುರುಜು02 11/15 ಪುಟ 20 ಪ್ಯಾರ 1-2
ಯೆಹೋವನ ಮುಂದೆ ನಮ್ಮ ದಿನಗಳು ಎಣಿಕೆಗೆ ಯೋಗ್ಯವಾಗಿರುವಂತೆ ನಾವು ಹೇಗೆ ಮಾಡಬಲ್ಲೆವು?
ನಮ್ಮ ಜೀವಮಾನದ ದಿನಗಳು ಕೊಂಚವೂ ಬೇಗನೆ ಹಾರಿಹೋಗುವಂಥವುಗಳೂ ಆಗಿ ತೋರುತ್ತವೆ. ಜೀವನವು ಎಷ್ಟು ಅಲ್ಪಾವಧಿಯದ್ದಾಗಿದೆ ಎಂಬುದರ ಬಗ್ಗೆ ಕೀರ್ತನೆಗಾರನಾದ ದಾವೀದನು ಚಿಂತಿಸುತ್ತಾ, ಹೀಗೆ ಪ್ರಾರ್ಥಿಸುವಂತೆ ಪ್ರೇರಿಸಲ್ಪಟ್ಟನು: “ಯೆಹೋವನೇ, ನನಗೆ ಅವಸಾನವುಂಟೆಂದೂ ನನ್ನ ಜೀವಮಾನವು ಅತ್ಯಲ್ಪವೆಂದೂ ನಾನು ಎಷ್ಟೋ ಅಸ್ಥಿರನೆಂದೂ ನನಗೆ ತಿಳಿಯಪಡಿಸು. ನನ್ನ ಆಯುಸ್ಸನ್ನು ಗೇಣುದ್ದವಾಗಿ ಮಾಡಿದ್ದೀಯಲ್ಲಾ; ನನ್ನ ಜೀವಿತಕಾಲ ನಿನ್ನ ಎಣಿಕೆಯಲ್ಲಿ ಏನೂ ಅಲ್ಲ.” ದಾವೀದನ ಮುಖ್ಯ ಚಿಂತೆಯು, ತನ್ನ ನಡೆನುಡಿಯ ಮೂಲಕ ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ಜೀವಿಸುವುದೇ ಆಗಿತ್ತು. ದೇವರ ಮೇಲಣ ತನ್ನ ಆತುಕೊಳ್ಳುವಿಕೆಯ ಬಗ್ಗೆ ತಿಳಿಸುತ್ತಾ ಅವನಂದದ್ದು: “ನೀನೇ ನನ್ನ ನಿರೀಕ್ಷೆ.” (ಕೀರ್ತನೆ 39:4, 5, 7) ಯೆಹೋವನು ದಾವೀದನ ಮಾತುಗಳಿಗೆ ಕಿವಿಗೊಟ್ಟನು. ಮತ್ತು ಆತನು ನಿಜವಾಗಿಯೂ ದಾವೀದನ ಚಟುವಟಿಕೆಗಳನ್ನು ಅಳೆದು, ಅದಕ್ಕನುಸಾರ ಅವನಿಗೆ ಪ್ರತಿಫಲವನ್ನು ಕೊಟ್ಟನು.
ದಿನದ ಪ್ರತಿಯೊಂದು ಕ್ಷಣವೂ ಕಾರ್ಯಮಗ್ನರಾಗಿದ್ದು, ವೇಗವಾಗಿ ಮುಂದೋಡುವ ಮತ್ತು ತುಂಬ ಚಟುವಟಿಕೆಯಿಂದ ಕೂಡಿರುವ ಜೀವನದಲ್ಲಿ ಮುಂದೆ ಸಾಗುವುದು ತೀರ ಸುಲಭ. ಇದು ನಮ್ಮಲ್ಲಿ ಕೌತುಕಭರಿತ ಚಿಂತೆಯನ್ನೂ ಉಂಟುಮಾಡಬಹುದು, ಏಕೆಂದರೆ ಮಾಡಲು ಮತ್ತು ಅನುಭವಿಸಲು ಬಹಳಷ್ಟು ಇದೆ, ಆದರೆ ಇರುವ ಸಮಯ ತೀರ ಕಡಿಮೆ. ನಮ್ಮ ಚಿಂತೆಯೂ, ದಾವೀದನಿಗಿದ್ದ ಚಿಂತೆಯೇ ಆಗಿದೆಯೊ? ಅಂದರೆ ದೇವರ ಮೆಚ್ಚಿಕೆಯನ್ನು ಪಡೆಯುವಂಥ ರೀತಿಯ ಜೀವನವನ್ನು ನಡೆಸುವುದು ನಮ್ಮ ಚಿಂತೆಯಾಗಿದೆಯೊ? ಖಂಡಿತವಾಗಿಯೂ ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬನನ್ನೂ ಗಮನಿಸುತ್ತಾನೆ ಮತ್ತು ಜಾಗರೂಕತೆಯಿಂದ ಪರೀಕ್ಷಿಸುತ್ತಾನೆ. ದೇವಭಯವಿದ್ದ ಯೋಬನೆಂಬ ಪುರುಷನು ಸುಮಾರು 3,600 ವರ್ಷಗಳ ಹಿಂದೆ ಅಂಗೀಕರಿಸಿದ್ದೇನೆಂದರೆ, ಯೆಹೋವನು ತನ್ನ ಎಲ್ಲ ಮಾರ್ಗಗಳನ್ನು ನೋಡುತ್ತಿದ್ದಾನೆ ಮತ್ತು ತನ್ನ ಹೆಜ್ಜೆಗಳನ್ನು ಎಣಿಸುತ್ತಿದ್ದಾನೆಂದೇ. ಯೋಬನು ಆಲಂಕಾರಿಕವಾಗಿ ಕೇಳಿದ್ದು: “ಆತನು ವಿಚಾರಿಸುವಾಗ ಯಾವ ಉತ್ತರ ಕೊಟ್ಟೇನು?” (ಯೋಬ 31:4-6, 14) ಆತ್ಮಿಕ ಆದ್ಯತೆಗಳನ್ನಿಡುವ ಮೂಲಕ, ದೇವರಾಜ್ಞೆಗಳಿಗೆ ವಿಧೇಯರಾಗುವ ಮೂಲಕ ಮತ್ತು ನಮ್ಮ ಸಮಯವನ್ನು ವಿವೇಕಯುತವಾಗಿ ವಿನಿಯೋಗಿಸುವ ಮೂಲಕ ನಮ್ಮ ದಿನಗಳು ದೇವರ ಮುಂದೆ ಎಣಿಕೆಗೆ ಯೋಗ್ಯವಾಗಿರುವಂತೆ ನಾವು ಮಾಡಬಲ್ಲೆವು. ಈ ವಿಷಯಗಳನ್ನು ನಾವು ಹೆಚ್ಚು ಸೂಕ್ಷ್ಮವಾಗಿ ಚರ್ಚಿಸೋಣ.
ಕಾವಲಿನಬುರುಜು21.10 ಪುಟ 15 ಪ್ಯಾರ 4
ಪುನಃ ಯೆಹೋವನ ಫ್ರೆಂಡ್ ಆಗಿ
ಯೆಹೋವನ ಹತ್ರ ಮಾತಾಡ್ತಾ ಇರಿ. ಆತನ ಹತ್ರ ಮಾತಾಡೋಕೆ ಎಷ್ಟು ಕಷ್ಟ ಆಗುತ್ತೆ, ನಿಮ್ಮ ಮನಸ್ಸು ಎಷ್ಟು ಚುಚ್ಚುತ್ತೆ ಅಂತ ಯೆಹೋವ ಅಪ್ಪಾಗೆ ಅರ್ಥ ಆಗುತ್ತೆ. (ರೋಮ. 8:26) ಆದ್ರೂ ನೀವು ‘ಪಟ್ಟುಬಿಡದೆ ಪ್ರಾರ್ಥನೆ ಮಾಡ್ತಾ’ ಯೆಹೋವನ ಸ್ನೇಹ ಬೇಕು ಅಂತ ಹೇಳ್ತಾ ಇರಿ. (ರೋಮ. 12:12) ಸಹೋದರ ಆಂದ್ರೆ ನೆನಪಿಸಿಕೊಳ್ಳೋದು: “ನಂಗೆ ನಾಚಿಕೆ ಆಗ್ತಿತ್ತು. ನನ್ನ ಮನಸ್ಸು ಚುಚ್ಚುತ್ತಿತ್ತು. ಆದ್ರೂ ಆಗೆಲ್ಲಾ ನಾನು ಪ್ರಾರ್ಥನೆ ಮಾಡ್ತಿದ್ದೆ. ಆಗ ಮನಸ್ಸು ಹಗುರ ಆಗ್ತಿತ್ತು ಮತ್ತು ಸಮಾಧಾನ ಸಿಗ್ತಿತ್ತು.” ಪ್ರಾರ್ಥನೆಯಲ್ಲಿ ಏನು ಹೇಳಬೇಕು ಅಂತ ನಿಮಗೆ ಗೊತ್ತಿಲ್ಲಾಂದ್ರೆ ಪಶ್ಚಾತ್ತಾಪ ಪಟ್ಟ ರಾಜ ದಾವೀದ ಕೀರ್ತನೆ 51 ಮತ್ತು 65ರಲ್ಲಿ ಏನು ಹೇಳಿದ್ದಾರೆ ಅಂತ ನೋಡಿ.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು22.09 ಪುಟ 12-13 ಪ್ಯಾರ 16
ಬೇರೆಯವರ ನಂಬಿಕೆ ಸಂಪಾದಿಸಿ
16 ಬೇರೆಯವರು ನಮ್ಮನ್ನ ನಂಬಬೇಕು ಅಂದ್ರೆ ನಮಗೆ ಸ್ವನಿಯಂತ್ರಣ ಇರಲೇಬೇಕು. ಗುಟ್ಟಾಗಿ ಇಡಬೇಕಾದ ವಿಷಯನ ಬೇರೆಯವರಿಗೆ ಹೇಳದೇ ಇರೋಕೆ ಈ ಗುಣ ನಮಗೆ ಸಹಾಯ ಮಾಡುತ್ತೆ. (ಜ್ಞಾನೋಕ್ತಿ 10:19 ಓದಿ.) ಅದ್ರಲ್ಲೂ ಸೋಶಿಯಲ್ ಮೀಡಿಯಾ ಬಳಸುವಾಗ ನಾವು ತುಂಬ ಹುಷಾರಾಗಿರಬೇಕು. ಯಾಕಂದ್ರೆ ನಾವು ಗುಟ್ಟಾಗಿ ಇಡಬೇಕಾದ ಮಾಹಿತಿಯನ್ನ ನಮಗೇ ಗೊತ್ತಿಲ್ಲದೆ ಬರಿ ಒಂದು ಸಲ ಪೋಸ್ಟ್ ಮಾಡಿದ್ರೂ ಅದು ಎಲ್ಲರ ಕೈಗೆ ಸಿಕ್ಕಿಬಿಡುತ್ತೆ. ಆಮೇಲೆ ಆ ಮಾಹಿತಿನ ಯಾರು ಹೇಗೆ ಬೇಕಾದ್ರೂ ಬಳಸಿಕೊಳ್ಳಬಹುದು. ಇದ್ರಿಂದ ತುಂಬ ತೊಂದ್ರೆಗಳಾಗುತ್ತೆ. ಯೆಹೋವನ ಸಾಕ್ಷಿಗಳನ್ನ ನಿಷೇಧಿಸಿರೋ ದೇಶದಲ್ಲಿ ನೀವಿದ್ರೆ ಪೊಲೀಸರು ನಿಮ್ಮನ್ನ ವಿಚಾರಣೆ ಮಾಡುವಾಗ ಸ್ವನಿಯಂತ್ರಣ ತೋರಿಸಬೇಕು. ವಿರೋಧಿಗಳು ಸಭೆಯ ಮಾಹಿತಿಯನ್ನ ನಿಮ್ಮಿಂದ ಬಾಯಿಬಿಡಿಸೋಕೆ ತುಂಬ ಪ್ರಯತ್ನ ಮಾಡ್ತಾರೆ. ಆಗ ನಾವು ಎಲ್ಲಾ ಹೇಳಿಬಿಟ್ರೆ ಸಹೋದರ ಸಹೋದರಿಯರ ಜೀವಕ್ಕೆ ಅಪಾಯ ಆಗಬಹುದು. ಇಂಥ ಸಂದರ್ಭಗಳಲ್ಲಿ ನಮ್ಮ “ಬಾಯಿಗೆ ಕಡಿವಾಣ” ಹಾಕಬೇಕು. (ಕೀರ್ತ. 39:1) ನಮ್ಮ ಕುಟುಂಬದವರ, ಸಹೋದರರ, ಸಭೆಯ ಮತ್ತು ಯೆಹೋವ ದೇವರ, ಹೀಗೆ ಎಲ್ಲರ ನಂಬಿಕೆನ ಉಳಿಸಿಕೊಳ್ಳಬೇಕು. ಆ ನಂಬಿಕೆ ಉಳಿಸಿಕೊಳ್ಳಬೇಕಂದ್ರೆ ನಮಗೆ ಸ್ವನಿಯಂತ್ರಣ ಇರಬೇಕು.
ಮೇ 20-26
ಬೈಬಲಿನಲ್ಲಿರುವ ನಿಧಿ | ಕೀರ್ತನೆ 40-41
ಬೇರೆಯವರಿಗೆ ಯಾಕೆ ಸಹಾಯ ಮಾಡಬೇಕು?
ಕಾವಲಿನಬುರುಜು18.08 ಪುಟ 22 ಪ್ಯಾರ 16-18
ಉದಾರವಾಗಿ ಕೊಡಿ ಸಂತೋಷಪಡಿ
16 ನಿಜವಾಗಿ ಉದಾರತೆ ತೋರಿಸುವವರು ಲಾಭ ಲೆಕ್ಕಿಸದೆ ಬೇರೆಯವರಿಗೆ ಸಹಾಯ ಮಾಡುತ್ತಾರೆ. ಯೇಸು ಹೇಳಿದ್ದು: “ನೀನು ಔತಣವನ್ನು ಏರ್ಪಡಿಸುವಾಗ ಬಡವರನ್ನೂ ಊನವಾದವರನ್ನೂ ಕುಂಟರನ್ನೂ ಕುರುಡರನ್ನೂ ಆಮಂತ್ರಿಸು; ನಿನಗೆ ಪ್ರತ್ಯುಪಕಾರ ಮಾಡಲು ಅವರ ಬಳಿ ಏನೂ ಇಲ್ಲದ ಕಾರಣ ನೀನು ಸಂತೋಷಿತನಾಗುವಿ.” (ಲೂಕ 14:13, 14) “ದಯಾದೃಷ್ಟಿಯವನು ಆಶೀರ್ವಾದವನ್ನು ಪಡೆಯುವನು” ಮತ್ತು “ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು” ಎಂದು ಬೈಬಲ್ ಹೇಳುತ್ತದೆ. (ಜ್ಞಾನೋ. 22:9; ಕೀರ್ತ. 41:1) ಬೇರೆಯವರಿಗೆ ಸಹಾಯ ಮಾಡುವುದರಲ್ಲಿ ನಮಗೆ ಸಂತೋಷ ಸಿಗುವುದರಿಂದ ನಾವು ಉದಾರತೆ ತೋರಿಸಬೇಕು.
17 “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಎಂದು ಯೇಸು ಹೇಳಿದ ಮಾತನ್ನೇ ಪೌಲನು ಉಲ್ಲೇಖಿಸಿದ್ದಾನೆ. ಅವನಿದನ್ನು ಆರ್ಥಿಕವಾಗಿ ಸಹಾಯ ಮಾಡುವುದಲ್ಲದೆ ಬೇರೆ ವಿಷಯಗಳಿಗೂ ಅನ್ವಯಿಸಿದ್ದಾನೆ. ನಾವು ಜನರಿಗೆ ಪ್ರೋತ್ಸಾಹ ಕೊಡಬಹುದು, ಬೈಬಲಿನಿಂದ ಸಲಹೆ ಕೊಡಬಹುದು ಮತ್ತು ಪ್ರಾಯೋಗಿಕ ಸಹಾಯನೂ ಮಾಡಬಹುದು. (ಅ. ಕಾ. 20:31-35) ಜನರಿಗೆ ಸಹಾಯ ಮಾಡುವುದರಲ್ಲಿ ನಮ್ಮ ಸಮಯ, ಶಕ್ತಿ, ಹಿತಾಸಕ್ತಿ, ಪ್ರೀತಿಯನ್ನು ಉದಾರವಾಗಿ ಉಪಯೋಗಿಸುವುದು ತುಂಬ ಮುಖ್ಯ ಎಂದು ಪೌಲನು ತನ್ನ ಮಾತು ಮತ್ತು ನಡತೆಯಿಂದ ತೋರಿಸಿದ್ದಾನೆ.
18 ಮನುಷ್ಯನ ಸ್ವಭಾವಗಳ ಬಗ್ಗೆ ಅಧ್ಯಯನ ಮಾಡುವ ಸಂಶೋಧಕರು ಸಹ ಕೊಡುವುದರಿಂದ ಸಂತೋಷವಾಗಿ ಇರಬಹುದು ಎನ್ನುವುದನ್ನು ಗಮನಿಸಿದ್ದಾರೆ. ಒಂದು ಲೇಖನಕ್ಕನುಸಾರ, ಬೇರೆಯವರಿಗೆ ಒಳ್ಳೇದನ್ನು ಮಾಡಿದ ಮೇಲೆ ತಮಗೆ ತುಂಬ ಸಂತೋಷ ಸಿಕ್ಕಿದೆ ಎಂದು ಜನರು ಹೇಳಿದ್ದಾರೆ. ಸಂಶೋಧಕರು ಹೇಳುವುದೇನೆಂದರೆ, ನಾವು ಬೇರೆಯವರಿಗೆ ಸಹಾಯ ಮಾಡಿದರೆ ನಮ್ಮ ಜೀವನಕ್ಕೆ ಅರ್ಥ ಇದೆ, ಉದ್ದೇಶ ಇದೆ ಎಂದು ಅನಿಸುತ್ತದೆ. ಆದ್ದರಿಂದ ಆರೋಗ್ಯ ಚೆನ್ನಾಗಿರಲು ಮತ್ತು ಸಂತೋಷ ಹೆಚ್ಚಲು ಸ್ವಯಂಸೇವೆ ಮಾಡಿ ಎಂದು ಕೆಲವು ಪರಿಣತರು ಸಲಹೆ ಕೊಡುತ್ತಾರೆ. ಇದೆಲ್ಲ ಕೇಳಿದಾಗ ನಮಗೆ ಹೊಸ ವಿಷಯ ಎಂದು ಅನಿಸಲ್ಲ. ಯಾಕೆಂದರೆ ನಮ್ಮ ಪ್ರೀತಿಯ ಸೃಷ್ಟಿಕರ್ತನಾದ ಯೆಹೋವನು ಬೇರೆಯವರಿಗೆ ಸಹಾಯ ಮಾಡಿದರೆ ಸಂತೋಷ ಸಿಗುತ್ತದೆ ಎಂದು ಸಾವಿರಾರು ವರ್ಷಗಳ ಹಿಂದೆನೇ ಹೇಳಿದ್ದಾನೆ.—2 ತಿಮೊ. 3:16, 17.
ಕಾವಲಿನಬುರುಜು15 12/15 ಪುಟ 24 ಪ್ಯಾರ 7
ಯೆಹೋವನು ನಿಮ್ಮನ್ನು ಬಲಪಡಿಸುವನು
7 ಆದರೆ ನಿಮಗೆ ಅನಾರೋಗ್ಯವಿರುವಲ್ಲಿ ಯೆಹೋವನು ಹಿಂದಿನ ಕಾಲದಲ್ಲಿ ತನ್ನ ಸೇವಕರಿಗೆ ಬೆಂಬಲ, ಸಾಂತ್ವನ ಕೊಟ್ಟಂತೆ ನಿಮಗೂ ಕೊಟ್ಟೇ ಕೊಡುವನು. ರಾಜ ದಾವೀದನು ಹೀಗೆ ಬರೆದನು: “ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು; ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು. ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು.” (ಕೀರ್ತ. 41:1, 2) ದಿಕ್ಕಿಲ್ಲದವನನ್ನು ಪರಾಂಬರಿಸುವ ಒಳ್ಳೇ ವ್ಯಕ್ತಿ ಸಾಯುವುದೇ ಇಲ್ಲ ಎಂದು ದಾವೀದನ ಮಾತಿನ ಅರ್ಥವಾಗಿರಲಿಲ್ಲ. ಹಾಗಾದರೆ ಆ ಒಳ್ಳೇ ವ್ಯಕ್ತಿಗೆ ಯೆಹೋವನು ಹೇಗೆ ಸಹಾಯ ಮಾಡುತ್ತಾನೆ? ದಾವೀದನೇ ವಿವರಿಸಿದ್ದು: ‘ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟುಮಾಡುವನು.’ (ಕೀರ್ತ. 41:3) ತನ್ನ ಸೇವಕರು ಯಾವ ಅನಾರೋಗ್ಯದಿಂದ ನರಳುತ್ತಿದ್ದಾರೆಂದು ಯೆಹೋವನಿಗೆ ಚೆನ್ನಾಗಿ ಗೊತ್ತಿದೆ. ಅವರನ್ನು ಆತನೆಂದೂ ಮರೆಯುವುದಿಲ್ಲ. ಧೈರ್ಯ, ವಿವೇಕವನ್ನು ಕೊಡುತ್ತಾನೆ. ಅಷ್ಟೇ ಅಲ್ಲ ಮಾನವ ದೇಹವನ್ನು ಯೆಹೋವನು ಹೇಗೆ ಸೃಷ್ಟಿ ಮಾಡಿದ್ದಾನೆಂದರೆ ಅದು ತನ್ನಿಂದ ತಾನೇ ಗುಣವಾಗುತ್ತದೆ.
ಕಾವಲಿನಬುರುಜು17.09 ಪುಟ 12 ಪ್ಯಾರ 17
ಯೆಹೋವನಂತೆ ನೀವೂ ಕನಿಕರ ತೋರಿಸಿ
17 ಕನಿಕರ ತೋರಿಸುವುದರಿಂದ ನಮಗೂ ಒಳ್ಳೇದಾಗುತ್ತದೆ ನಿಜ. ಆದರೆ ಈ ಒಂದೇ ಕಾರಣಕ್ಕೆ ನಾವು ಬೇರೆಯವರಿಗೆ ಕನಿಕರ ತೋರಿಸುವುದಿಲ್ಲ. ಯೆಹೋವನನ್ನು ಅನುಕರಿಸುವುದು ಮತ್ತು ಆತನಿಗೆ ಮಹಿಮೆ ತರುವುದೇ ಮುಖ್ಯ ಕಾರಣವಾಗಿದೆ. ಆತನು ಪ್ರೀತಿ ಮತ್ತು ಕನಿಕರದ ಉಗಮನಾಗಿದ್ದಾನೆ. (ಜ್ಞಾನೋ. 14:31) ಕನಿಕರ ತೋರಿಸುವುದರಲ್ಲಿ ಆತನು ನಮಗೆ ಅತ್ಯುತ್ತಮ ಮಾದರಿಯಾಗಿದ್ದಾನೆ. ಆತನನ್ನು ಅನುಕರಿಸಲು ನಮ್ಮಿಂದಾಗುವುದನ್ನೆಲ್ಲ ಮಾಡೋಣ. ಹೀಗೆ ಮಾಡಿದರೆ ನಮ್ಮ ಸಹೋದರ ಸಹೋದರಿಯರಿಗೆ ಇನ್ನೂ ಹತ್ತಿರವಾಗುತ್ತೇವೆ ಮತ್ತು ನಮ್ಮ ಸುತ್ತಮುತ್ತಲಿರುವ ಜನರ ಜೊತೆ ಒಳ್ಳೇ ಸಂಬಂಧ ಇರುತ್ತದೆ.—ಗಲಾ. 6:10; 1 ಯೋಹಾ. 4:16.
ಬೈಬಲಿನಲ್ಲಿರುವ ರತ್ನಗಳು
it-2-E ಪುಟ 16
ಯೆಹೋವ
ಯೆಹೋವನ ಆಳ್ವಿಕೆನೇ ಸರಿ ಅಂತ ಹೇಳೋದು ಬೈಬಲಿನ ಮುಖ್ಯ ವಿಷಯ. ಇದ್ರಿಂದ ಯೆಹೋವನ ಹೆಸರನ್ನ ಪವಿತ್ರೀಕರಿಸೋದೇ ಆತನ ಮುಖ್ಯ ಉದ್ದೇಶ ಅಂತ ಗೊತ್ತಾಗುತ್ತೆ. ಆದ್ರೆ ಪವಿತ್ರೀಕರಿಸಬೇಕಾದ್ರೆ ಆತನ ಹೆಸರಿಗೆ ಬಂದ ಕಳಂಕವನ್ನ ತೆಗೆದುಹಾಕಬೇಕು. ಅಷ್ಟೇ ಅಲ್ಲ ಸ್ವರ್ಗದಲ್ಲಿರೋ ದೇವದೂತರು ಮತ್ತು ಭೂಮಿಯಲ್ಲಿರೋ ಮನುಷ್ಯರೆಲ್ಲಾ ಆತನಿಗಿರೋ ಮಹೋನ್ನತ ಅಧಿಕಾರವನ್ನ ಗೌರವಿಸಬೇಕು. ಆತನನ್ನ ಮನಸಾರೆ ಆರಾಧಿಸಿ, ಆತನ ಇಷ್ಟವನ್ನ ಮಾಡಿ ಆತನನ್ನ ಪ್ರೀತಿಸ್ತೀವಿ ಅಂತ ತೋರಿಸಿಕೊಡಬೇಕು. ಇದನ್ನೇ ದಾವೀದ ಮಾಡಿದ. ಅವನು ಯೆಹೋವನ ಹೆಸರನ್ನ ಪವಿತ್ರೀಕರಿಸೋಕೆ ಮಾಡಿದ ಪ್ರಾರ್ಥನೆ ಬಗ್ಗೆ ಕೀರ್ತನೆ 40:5-10ರಲ್ಲಿದೆ. (ಈ ಕೀರ್ತನೆಯಲ್ಲಿರೋ ಕೆಲವು ವಿಷಯಗಳು ಯೇಸು ಕ್ರಿಸ್ತನಿಗೆ ಹೇಗೆ ಅನ್ವಯಿಸುತ್ತೆ ಅಂತ ತಿಳ್ಕೊಳ್ಳೋಕೆ ಇಬ್ರಿಯ 10:5-10ನ್ನು ನೋಡಿ.)
ಮೇ 27–ಜೂನ್ 2
ಬೈಬಲಿನಲ್ಲಿರುವ ನಿಧಿ | ಕೀರ್ತನೆ 42-44
ಯೆಹೋವನ ಮಾತನ್ನ ಕೇಳಿ, ಪಾಲಿಸಿ
ಕಾವಲಿನಬುರುಜು06 6/1 ಪುಟ 9 ಪ್ಯಾರ 4
ಕೀರ್ತನೆ ಪುಸ್ತಕದ ದ್ವಿತೀಯ ಭಾಗದ ಮುಖ್ಯಾಂಶಗಳು
42:4, 5, 11; 43:3-5. ನಮ್ಮ ಹತೋಟಿಯನ್ನು ಮೀರಿರುವ ಯಾವುದೊ ಕಾರಣದಿಂದಾಗಿ ನಾವು ತಾತ್ಕಾಲಿಕವಾಗಿ ಕ್ರೈಸ್ತ ಸಭೆಯಿಂದ ಪ್ರತ್ಯೇಕಿಸಲ್ಪಟ್ಟಿರುವುದಾದರೆ, ಹಿಂದೆ ನಾವು ಆನಂದಿಸಿದ ಸಹವಾಸದ ಸವಿನೆನಪುಗಳು ನಮಗೆ ಬಲವನ್ನು ನೀಡಬಲ್ಲವು. ಆರಂಭದಲ್ಲಿ ಆ ಸವಿನೆನಪುಗಳು ನಮ್ಮ ಏಕಾಂತತೆಯ ನೋವನ್ನು ತೀವ್ರಗೊಳಿಸಬಹುದಾದರೂ, ದೇವರು ನಮ್ಮ ದುರ್ಗವಾಗಿದ್ದಾನೆ ಮತ್ತು ಬಿಡುಗಡೆಗಾಗಿ ನಾವು ಆತನಲ್ಲಿ ಕಾಯಬೇಕು ಎಂಬ ಜ್ಞಾಪಕವನ್ನು ಸಹ ಅವು ನಮಗೆ ನೀಡುವವು.
ಕಾವಲಿನಬುರುಜು12 1/15 ಪುಟ 15 ಪ್ಯಾರ 2
ಅಧ್ಯಯನ ಆನಂದಮಯವೂ ಫಲಕಾರಿಯೂ ಆಗಿರಲು . . .
1 ಪ್ರಾರ್ಥಿಸಿ: ಮೊದಲ ಹೆಜ್ಜೆ ಪ್ರಾರ್ಥನೆ. (ಕೀರ್ತ. 42:8) ಅಧ್ಯಯನ ಮಾಡುವ ಮುನ್ನ ನಾವೇಕೆ ಪ್ರಾರ್ಥಿಸಬೇಕು? ಏಕೆಂದರೆ ದೇವರ ವಾಕ್ಯದ ಅಧ್ಯಯನ ನಮ್ಮ ಆರಾಧನೆಯ ಭಾಗವಾಗಿದೆ. ಹಾಗಾಗಿ ಕಲಿಯುವ ವಿಷಯವನ್ನು ಪೂರ್ಣವಾಗಿ ಗ್ರಹಿಸಲು ನಮ್ಮ ಹೃದಮನಗಳನ್ನು ತೆರೆಯುವಂತೆ ಪವಿತ್ರಾತ್ಮದ ಸಹಾಯಕ್ಕಾಗಿ ಯೆಹೋವನಲ್ಲಿ ಕೇಳಿಕೊಳ್ಳಬೇಕು. (ಲೂಕ 11:13) ತುಂಬ ವರುಷಗಳಿಂದ ಮಿಷನೆರಿ ಸೇವೆಮಾಡುತ್ತಿರುವ ಬಾರ್ಬ್ರ ಹೀಗೆ ಹೇಳುತ್ತಾರೆ: “ಬೈಬಲ್ ಓದುವ ಇಲ್ಲವೆ ಅಧ್ಯಯನ ಮಾಡುವ ಮುನ್ನ ನಾನು ಯಾವಾಗಲೂ ಪ್ರಾರ್ಥನೆ ಮಾಡುತ್ತೇನೆ. ಆಗ ಯೆಹೋವನು ನನ್ನೊಂದಿಗಿದ್ದಾನೆ, ನನ್ನ ಅಧ್ಯಯನವನ್ನು ಇಷ್ಟಪಡುತ್ತಾನೆ ಎಂಬ ಗಾಢ ಅನಿಸಿಕೆ ನನಗಾಗುತ್ತದೆ.” ಅಧ್ಯಯನಕ್ಕಿಂತ ಮುಂಚೆ ಪ್ರಾರ್ಥಿಸುವುದು ನಮ್ಮ ಮುಂದಿರುವ ಹೇರಳವಾದ ಆಧ್ಯಾತ್ಮಿಕ ಆಹಾರದಿಂದ ಪೂರ್ಣ ಪ್ರಯೋಜನ ಪಡೆಯಲು ನಮ್ಮ ಹೃದಮನವನ್ನು ತೆರೆಯುತ್ತದೆ.
ಕಾವಲಿನಬುರುಜು16.09 ಪುಟ 5-6 ಪ್ಯಾರ 11-12
ನಿಮ್ಮ ಕೈಗಳು ಸೋತುಹೋಗದಿರಲಿ
11 ಸಭಾ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ, ಅಧಿವೇಶನಗಳಲ್ಲಿ, ಬೈಬಲ್ ಶಾಲೆಗಳಲ್ಲಿ ಸಿಗುವ ಬೋಧನೆಯ ಮೂಲಕ ಸಹ ಯೆಹೋವನು ನಮ್ಮನ್ನು ಬಲಪಡಿಸುತ್ತಾನೆ. ಆ ಬೋಧನೆಯು ನಾವು ಸರಿಯಾದ ಉದ್ದೇಶದಿಂದ ಯೆಹೋವನ ಸೇವೆ ಮಾಡಲು, ಆಧ್ಯಾತ್ಮಿಕ ಗುರಿಗಳನ್ನಿಡಲು, ನಮಗಿರುವ ಅನೇಕ ಕ್ರೈಸ್ತ ಜವಾಬ್ದಾರಿಗಳನ್ನು ಪೂರೈಸಲು ಸಹಾಯಮಾಡುತ್ತದೆ. (ಕೀರ್ತ. 119:33) ಯೆಹೋವನ ಈ ಬೋಧನೆಯಿಂದ ಬಲ ಪಡೆಯಲು ನೀವು ಆತುರದಿಂದ ಇದ್ದೀರಾ?
12 ಯೆಹೋವನು ತನ್ನ ಜನರಿಗೆ ಅಮಾಲೇಕ್ಯರನ್ನು ಮತ್ತು ಕೂಷ್ಯರನ್ನು ಸೋಲಿಸಲು ಸಹಾಯಮಾಡಿದನು. ಯೆರೂಸಲೇಮಿನ ಗೋಡೆಗಳನ್ನು ಕಟ್ಟಿ ಮುಗಿಸಲು ನೆಹೆಮೀಯನಿಗೂ ಯೆಹೂದ್ಯರಿಗೂ ಶಕ್ತಿ ಕೊಟ್ಟನು. ಹಾಗೆಯೇ ಇಂದು ನಮಗೆ ಸಹ ಯೆಹೋವನು ಸಹಾಯಮಾಡುತ್ತಾನೆ. ಚಿಂತೆ ಆತಂಕಗಳಿದ್ದರೂ, ವಿರೋಧವಿದ್ದರೂ, ಜನರು ಆಸಕ್ತಿ ತೋರಿಸದಿದ್ದರೂ ಸುವಾರ್ತೆ ಸಾರುತ್ತಾ ಇರಲು ನಮಗೆ ಬೇಕಾದ ಬಲವನ್ನು ಆತನು ಕೊಡುತ್ತಾನೆ. (1 ಪೇತ್ರ 5:10) ಯೆಹೋವನು ಅದ್ಭುತ ಮಾಡಿ ನಮ್ಮ ಸಮಸ್ಯೆಗಳನ್ನು ತೆಗೆದುಹಾಕಬೇಕೆಂದು ನಾವು ನಿರೀಕ್ಷಿಸಬಾರದು. ಬದಲಿಗೆ ಆತನಿಂದ ಬಲ ಪಡೆದುಕೊಳ್ಳಲು ನಾವು ನಮ್ಮ ಪಾಲನ್ನು ಮಾಡಬೇಕು, ಅಂದರೆ ಪ್ರತಿದಿನ ಬೈಬಲನ್ನು ಓದಬೇಕು, ಪ್ರತಿವಾರ ಕೂಟಗಳಿಗೆ ತಯಾರಿಮಾಡಿ ಹಾಜರಾಗಬೇಕು, ತಪ್ಪದೆ ವೈಯಕ್ತಿಕ ಅಧ್ಯಯನ ಮತ್ತು ಕುಟುಂಬ ಆರಾಧನೆ ಮಾಡಬೇಕು, ಯೆಹೋವನಿಗೆ ಪ್ರಾರ್ಥಿಸುತ್ತಾ ಆತನ ಮೇಲೆ ಆತುಕೊಳ್ಳಬೇಕು. ನಮ್ಮನ್ನು ಬಲಗೊಳಿಸಲು ಮತ್ತು ಪ್ರೋತ್ಸಾಹಿಸಲು ಯೆಹೋವನು ಮಾಡಿರುವ ಏರ್ಪಾಡುಗಳಿಂದ ಪ್ರಯೋಜನ ಪಡೆಯುವುದನ್ನು ಯಾವುದೂ ಯಾವತ್ತೂ ತಡೆಯದಂತೆ ನೋಡಿಕೊಳ್ಳೋಣ. ಈ ವಿಷಯಗಳಲ್ಲಿ ಯಾವುದರಲ್ಲಾದರೂ ನಿಮ್ಮ ಕೈಗಳು ಸೋತುಹೋಗುತ್ತಿವೆ ಎಂದು ಅನಿಸುವಲ್ಲಿ ದೇವರ ಸಹಾಯ ಕೇಳಿಕೊಳ್ಳಿ. ಆಗ ಪವಿತ್ರಾತ್ಮವು ‘ದೇವರಿಗೆ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡಬೇಕೆಂಬ ಅಪೇಕ್ಷೆಯನ್ನು ನಿಮ್ಮಲ್ಲಿ ಹುಟ್ಟಿಸಿ ಅವುಗಳನ್ನು ಮಾಡಲು ನಿಮಗೆ ಶಕ್ತಿ ಕೊಡುವುದನ್ನು’ ನೀವೇ ನೋಡುವಿರಿ. (ಫಿಲಿ. 2:13, ಪರಿಶುದ್ಧ ಬೈಬಲ್) ಆದರೆ ನಿಮಗೊಂದು ಪ್ರಶ್ನೆ: ನೀವು ಇತರರ ಕೈಗಳನ್ನು ಬಲಗೊಳಿಸುವಿರಾ?
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 1242
ಗುಳ್ಳೆನರಿ
ಕೆಲವು ಸಂದರ್ಭಗಳಲ್ಲಿ ಗುಳ್ಳೆನರಿಯನ್ನ ಒಂದು ಚಿಹ್ನೆಯಾಗಿ ಅಥವಾ ಉದಾಹರಣೆಯಾಗಿ ಬೈಬಲ್ನಲ್ಲಿ ಬಳಸಲಾಗಿದೆ. ಯೋಬ ತನ್ನ ಕೆಟ್ಟ ಪರಿಸ್ಥಿತಿ ಬಗ್ಗೆ ವಿವರಿಸಿದಾಗ ತನ್ನನ್ನ “ಗುಳ್ಳೆನರಿಗಳಿಗೆ ಸಹೋದರ” ಆಗಿದ್ದೀನಿ ಅಂತ ಹೇಳಿದ. (ಯೋಬ 30:29) ದೇವಜನರಿಗೆ ಬಂದ ಅವಮಾನಕರ ಸೋಲನ್ನ ಯುದ್ದ ಭೂಮಿಯಲ್ಲಿ ಬಿದ್ದಿರೋ ಹೆಣಗಳನ್ನ ತಿನ್ನೋ ಗುಳ್ಳೆನರಿಗೆ ಕೀರ್ತನೆಗಾರ ಹೋಲಿಸಿದ್ದಾನೆ. (ಕೀರ್ತ. 68:23 ಹೋಲಿಸಿ.) ಅಷ್ಟೇ ಅಲ್ಲ “ನೀನು ನಮ್ಮನ್ನ ಗುಳ್ಳೆನರಿ ವಾಸಿಸೋ ಜಾಗದಲ್ಲಿ ಜಜ್ಜಿಬಿಟ್ಟೆ” ಅಂತ ಕೀರ್ತನೆಗಾರ ಗೋಳಾಡ್ತಾನೆ. (ಕೀರ್ತ. 44:19) ಕ್ರಿಸ್ತ ಶಕ 607ರಲ್ಲಿ ಬಾಬೆಲಿನವರು ಯೆರೂಸಲೇಮಿಗೆ ಮುತ್ತಿಗೆ ಹಾಕಿದಾಗ ಬರಗಾಲ ಶುರುವಾಯ್ತು, ಅದೆಷ್ಟು ಘೋರವಾಗಿತ್ತೆಂದ್ರೆ ತಾಯಂದಿರು ತಮ್ಮ ಮಕ್ಕಳನ್ನ ಕ್ರೂರವಾಗಿ ಹಿಂಸಿಸ್ತಿದ್ರು. ಈ ಕ್ರೂರತನದ ಬಗ್ಗೆ ಹೇಳುವಾಗ ಗುಳ್ಳೆನರಿಗೆ ತನ್ನ ಮರಿಗಳ ಮೇಲೆ ಇರೋವಷ್ಟು ಪ್ರೀತಿ ‘ನನ್ನ ಜನಕ್ಕೆ’ ಇರಲಿಲ್ಲ ಅಂತ ಯೆರೆಮೀಯ ಹೇಳಿದ.—ಪ್ರಲಾ. 4:3, 10.
ಜೂನ್ 3-9
ಬೈಬಲಿನಲ್ಲಿರುವ ನಿಧಿ | ಕೀರ್ತನೆ 45-47
ರಾಜನ ಮದುವೆ ಬಗ್ಗೆ ಹಾಡು
ಕಾವಲಿನಬುರುಜು14 2/15 ಪುಟ 9-10 ಪ್ಯಾರ 8-9
ಕುರಿಮರಿಯ ವಿವಾಹ—ಹರ್ಷಿಸಿರಿ!
8 ಕೀರ್ತನೆ 45:13, 14 ಓದಿ. ಮದುವೆಗಾಗಿ ಚೆನ್ನಾಗಿ ಸಿಂಗರಿಸಿಕೊಂಡಿರುವ ಮದುಮಗಳು “ವೈಭವದಿಂದಿದ್ದಾಳೆ.” ಪ್ರಕಟನೆ 21:2ರಲ್ಲಿ ಆಕೆಯನ್ನು ಒಂದು ನಗರಕ್ಕೆ ‘ಅಂದರೆ ಹೊಸ ಯೆರೂಸಲೇಮ್ಗೆ’ ಹೋಲಿಸಲಾಗಿದೆ. ಆಕೆ ‘ತನ್ನ ಗಂಡನಿಗಾಗಿ ಅಲಂಕರಿಸಿಕೊಂಡಿದ್ದಾಳೆ’ ಎಂದು ಹೇಳಲಾಗಿದೆ. ಈ ಸ್ವರ್ಗೀಯ ನಗರ “ದೇವರ ಮಹಿಮೆಯನ್ನು” ಹೊಂದಿದೆ. ಮಾತ್ರವಲ್ಲ ನಗರದ ತೇಜಸ್ಸು ‘ಅತ್ಯಮೂಲ್ಯ ರತ್ನದ ಹೊಳಪಿನಂತೆ, ಸ್ಫಟಿಕದಂತೆ ಸ್ವಚ್ಛವಾಗಿ ಥಳಥಳಿಸುವ ಸೂರ್ಯಕಾಂತ ಮಣಿಯಂತೆ’ ಇದೆ. (ಪ್ರಕ. 21:10, 11) ಹೊಸ ಯೆರೂಸಲೇಮಿನ ಸೌಂದರ್ಯದ ಉಜ್ವಲತೆಯನ್ನು ಪ್ರಕಟನೆ ಪುಸ್ತಕದಲ್ಲಿ ಸೊಗಸಾಗಿ ವರ್ಣಿಸಲಾಗಿದೆ. (ಪ್ರಕ. 21:18-21) ವಧು “ವೈಭವದಿಂದಿದ್ದಾಳೆ” ಎಂದು ಕೀರ್ತನೆಗಾರನು ವರ್ಣಿಸಿರುವುದು ನಿಜಕ್ಕೂ ತಕ್ಕದ್ದಾಗಿದೆ. ಎಷ್ಟೆಂದರೂ ಇದು ಸ್ವರ್ಗದಲ್ಲಿ ನಡೆಯುವ ರಾಜಮನೆತನದ ವಿವಾಹ ಅಲ್ಲವೇ?
9 ಮದುಮಗಳನ್ನು ಮದುಮಗನ ಬಳಿ ಅಂದರೆ ಮೆಸ್ಸೀಯ ರಾಜನ ಬಳಿ ಕರೆತರಲಾಗುತ್ತದೆ. ಅವನು ತನ್ನ ವಧುವನ್ನು ‘ವಾಕ್ಯದ ಮೂಲಕ ಜಲಸ್ನಾನದಿಂದ ಶುದ್ಧೀಕರಿಸುತ್ತಾ’ ಸಿದ್ಧಗೊಳಿಸಿದ್ದಾನೆ. ಆಕೆ ‘ಪವಿತ್ರಳೂ ದೋಷವಿಲ್ಲದವಳೂ’ ಆಗಿದ್ದಾಳೆ. (ಎಫೆ. 5:26, 27) ಮದುಮಗಳು ವಿವಾಹಕ್ಕಾಗಿ ಯೋಗ್ಯ ಉಡುಪನ್ನು ಕೂಡ ಧರಿಸಿರಬೇಕಲ್ಲವೇ? ಹೌದು, ಅಂಥ ಉಡುಪನ್ನೇ ಆಕೆ ಧರಿಸಿದ್ದಾಳೆ. ‘ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ ಮತ್ತು ಬೂಟೇದಾರೀ ಕಸೂತಿಕೆಲಸದ ವಸ್ತ್ರಗಳನ್ನು ಧರಿಸಿಕೊಂಡ ಆಕೆಯನ್ನು ಅರಸನ ಬಳಿಗೆ’ ಕರೆತರಲಾಗುತ್ತದೆ. ಕುರಿಮರಿಯ ವಿವಾಹಕ್ಕಾಗಿ “ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳಲು ಅವಳಿಗೆ ಅನುಗ್ರಹಿಸಲ್ಪಟ್ಟಿದೆ, ಏಕೆಂದರೆ ಆ ನಯವಾದ ನಾರುಮಡಿಯು ಪವಿತ್ರ ಜನರ ನೀತಿಯ ಕಾರ್ಯಗಳನ್ನು ಸೂಚಿಸುತ್ತದೆ.”—ಪ್ರಕ. 19:8.
ಕಾವಲಿನಬುರುಜು22.05 ಪುಟ 17 ಪ್ಯಾರ 10-12
ನಮ್ಮ ಭವಿಷ್ಯ ಹೇಗಿರುತ್ತೆ ಅಂತ ಪ್ರಕಟನೆ ಪುಸ್ತಕ ಹೇಳುತ್ತೆ?
10 ತನ್ನ ಜನರ ಮೇಲೆ ಆಕ್ರಮಣ ಆದಾಗ ಯೆಹೋವನಿಗೆ ಹೇಗನಿಸುತ್ತೆ? ಆತನ “ರೋಷಾವೇಶ ಭಗ್ಗಂತ ಉರಿಯುತ್ತೆ.” (ಯೆಹೆ. 38:18, 21-23) ಆಮೇಲೆ ಆತನು ಏನು ಮಾಡುತ್ತಾನೆ ಅಂತ ಪ್ರಕಟನೆ 19ನೇ ಅಧ್ಯಾಯದಲ್ಲಿ ಹೇಳುತ್ತೆ. ತನ್ನ ಜನರನ್ನ ಕಾಪಾಡೋಕೆ ಮತ್ತು ವೈರಿಗಳನ್ನ ನಾಶಮಾಡೋಕೆ ಯೆಹೋವ ತನ್ನ ಮಗನನ್ನ ಕಳಿಸುತ್ತಾನೆ. ‘ಸ್ವರ್ಗದಲ್ಲಿರೋ ಸೈನ್ಯದಲ್ಲಿ’ 1,44,000 ಅಭಿಷಿಕ್ತರು ಮತ್ತು ದೇವದೂತರು ಯೇಸುವಿನ ಜೊತೆ ಇರುತ್ತಾರೆ. (ಪ್ರಕ. 17:14; 19:11-15) ಈ ಯುದ್ಧದಲ್ಲಿ ಯೆಹೋವನಿಗೆ ವಿರುದ್ಧವಾಗಿರೋ ಎಲ್ಲಾ ಮಾನವರು ಮತ್ತು ಸಂಘಟನೆಗಳು ಸರ್ವನಾಶ ಆಗುತ್ತಾರೆ!—ಪ್ರಕಟನೆ 19:19-21 ಓದಿ.
11 ದೇವರ ವೈರಿಗಳು ಸರ್ವನಾಶ ಆದಮೇಲೆ ಭೂಮಿಯಲ್ಲಿ ನಂಬಿಗಸ್ತ ಜನರು ಮಾತ್ರ ಉಳಿದಿರುತ್ತಾರೆ. ಅದನ್ನ ನೆನಸಿಕೊಂಡರೇನೇ ಮನಸ್ಸು ಖುಷಿಯಲ್ಲಿ ತೇಲಾಡುತ್ತೆ! ಮಹಾ ಬಾಬೆಲ್ ನಾಶ ಆಗಿದ್ದಕ್ಕೆ ಸ್ವರ್ಗದಲ್ಲಿರೋ ಎಲ್ಲರೂ ತುಂಬ ಖುಷಿಪಡ್ತಾರೆ. ಆದ್ರೆ ಅದಕ್ಕಿಂತ ಖುಷಿ ತರೋ ಇನ್ನೊಂದು ವಿಷಯ ನಡಿಯುತ್ತೆ ಅಂತ ಪ್ರಕಟನೆ ಪುಸ್ತಕದ ಕೊನೆಯಲ್ಲಿ ಹೇಳಿದೆ. (ಪ್ರಕ. 19:1-3) ಅದೇ “ಕುರಿಮರಿಯ ಮದುವೆ.”—ಪ್ರಕ. 19:6-9.
12 ಈ ಮದುವೆ ಯಾವಾಗ ಆಗುತ್ತೆ? ಹರ್ಮಗೆದೋನ್ ಶುರುವಾಗೋ ಸ್ವಲ್ಪ ಮುಂಚೆ ಎಲ್ಲಾ 1,44,000 ಅಭಿಷಿಕ್ತರು ಸ್ವರ್ಗದಲ್ಲಿರುತ್ತಾರೆ. (ಪ್ರಕಟನೆ 21:1, 2 ಓದಿ.) ಹರ್ಮಗೆದೋನ್ ಯುದ್ಧದಲ್ಲಿ ಎಲ್ಲಾ ವೈರಿಗಳ ನಾಶ ಆದಮೇಲೆ ಕುರಿಮರಿಯ ಮದುವೆ ನಡೆಯುತ್ತೆ.—ಕೀರ್ತ. 45:3, 4, 13-17.
it-2-E ಪುಟ 1169
ಯುದ್ಧ
ಈ ಯುದ್ಧ ಆದ ಮೇಲೆ ಸಾವಿರ ವರ್ಷ ಭೂಮಿ ಮೇಲೆ ಶಾಂತಿ ಇರುತ್ತೆ. “[ಯೆಹೋವ] ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ. ಬಾಣಗಳನ್ನ ಮುರಿದು, ಈಟಿಗಳನ್ನ ನುಚ್ಚುನೂರು ಮಾಡ್ತಾನೆ, ಯುದ್ಧ ರಥಗಳನ್ನ ಬೆಂಕಿಯಲ್ಲಿ ಸುಟ್ಟುಹಾಕ್ತಾನೆ” ಅಂತ ಕೀರ್ತನೆಯಲ್ಲಿದೆ. ಶತ್ರು ಸೈನ್ಯದ ಯುದ್ಧೋಪಕರಣಗಳನ್ನ ನಾಶ ಮಾಡಿ ಇಸ್ರಾಯೇಲ್ಯರಿಗೆ ಶಾಂತಿ ಕೊಡೋ ಮೂಲಕ ಈ ಭವಿಷ್ಯವಾಣಿಯ ಮೊದಲ ನೆರವೇರಿಕೆಯನ್ನ ಯೆಹೋವ ಮಾಡಿದನು. ಅರ್ಮಗೆದ್ದೋನ್ ಯುದ್ಧದಲ್ಲಿ ಕ್ರಿಸ್ತ ಜಯಗಳಿಸಿದ ಮೇಲೆ ಇಡೀ ಭೂಮಿಯಲ್ಲಿ ಶಾಂತಿ ತುಂಬಿ ತುಳುಕುತ್ತೆ. (ಕೀರ್ತ. 46:8-10) ಶಾಶ್ವತ ಜೀವ ಪಡೆದುಕೊಳ್ಳೋವ್ರು “ತಮ್ಮ ಕತ್ತಿಗಳನ್ನ ಬಡಿದು ನೇಗಿಲ ಗುಳಗಳಾಗಿ ಮಾಡ್ತಾರೆ, ತಮ್ಮ ಈಟಿಗಳನ್ನ ಬಡಿದು ಕುಡುಗೋಲುಗಳಾಗಿ ಮಾಡ್ತಾರೆ. ಇನ್ನು ಯಾವತ್ತೂ ಅವರು ಯುದ್ಧ ಮಾಡೋಕೆ ಕಲಿಯಲ್ಲ.” ನಾವು ಯಾಕೆ ಈ ಭವಿಷ್ಯವಾಣಿಯನ್ನ ನಂಬಬಹುದು? ಯಾಕಂದ್ರೆ “ಸೈನ್ಯಗಳ ದೇವರಾದ ಯೆಹೋವನೇ ಇದನ್ನ ಹೇಳಿದ್ದಾನೆ.”—ಯೆಶಾ. 2:4; ಮೀಕ 4:3, 4.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು17.04 ಪುಟ 11-12 ಪ್ಯಾರ 9
ದೇವರ ರಾಜ್ಯ ಬಂದಾಗ ಯಾವ ವಿಷಯಗಳು ಹೋಗುತ್ತವೆ?
9 ಭ್ರಷ್ಟ ಸಂಘಟನೆಗಳು ಹೋದ ಮೇಲೆ ಏನು ಬರುತ್ತದೆ? ಅರ್ಮಗೆದೋನಿನ ನಂತರ ಭೂಮಿಯಲ್ಲಿ ಯಾವುದಾದರೂ ಸಂಘಟನೆ ಇರುತ್ತಾ? ಯೆಹೋವನ “ವಾಗ್ದಾನಕ್ಕನುಸಾರ ನಾವು ನೂತನ ಆಕಾಶವನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಿದ್ದೇವೆ ಮತ್ತು ಇವುಗಳಲ್ಲಿ ನೀತಿಯು ವಾಸವಾಗಿರುವುದು” ಎನ್ನುತ್ತದೆ ಬೈಬಲ್. (2 ಪೇತ್ರ 3:13) ಹಳೆಯ ಆಕಾಶ ಅಂದರೆ ಭ್ರಷ್ಟ ಸರ್ಕಾರಗಳು. ಹಳೆಯ ಭೂಮಿ ಅಂದರೆ ಸರ್ಕಾರಗಳ ಕೆಳಗಿರುವ ಜನರು. ಹಳೆಯ ಆಕಾಶ ಮತ್ತು ಭೂಮಿ ಹೋದ ಮೇಲೆ ಏನು ಬರುತ್ತದೆ? “ನೂತನ ಆಕಾಶ ಮತ್ತು ನೂತನ ಭೂಮಿ.” ನೂತನ ಆಕಾಶ ಹೊಸ ಸರ್ಕಾರವನ್ನು ಸೂಚಿಸುತ್ತದೆ. ಈ ಸರ್ಕಾರ ದೇವರ ರಾಜ್ಯವಾಗಿದ್ದು, ಯೇಸು ಅದರ ರಾಜನಾಗಿರುತ್ತಾನೆ ಮತ್ತು ಆತನೊಂದಿಗೆ 1,44,000 ಮಂದಿ ರಾಜರಿರುತ್ತಾರೆ. ನೂತನ ಭೂಮಿ ದೇವರ ರಾಜ್ಯದ ಕೆಳಗಿರುವ ಜನರನ್ನು ಸೂಚಿಸುತ್ತದೆ. ಯೇಸು ಮತ್ತು ಅವನೊಂದಿಗಿರುವ ರಾಜರು, ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡುವ ದೇವರಾಗಿರುವ ಯೆಹೋವನನ್ನು ಪರಿಪೂರ್ಣವಾಗಿ ಅನುಕರಿಸುತ್ತಾರೆ. (1 ಕೊರಿಂ. 14:33) ಆದ್ದರಿಂದ “ನೂತನ ಭೂಮಿ” ವ್ಯವಸ್ಥಿತವಾಗಿ ಇರುತ್ತದೆ. ಅದನ್ನು ನೋಡಿಕೊಳ್ಳಲು ಭೂಮಿಯಲ್ಲಿ ಉತ್ತಮ ಪುರುಷರಿರುತ್ತಾರೆ. (ಕೀರ್ತ. 45:16) ಈ ಪುರುಷರನ್ನು ಯೇಸು ಕ್ರಿಸ್ತ ಮತ್ತು 1,44,000 ಮಂದಿ ಮಾರ್ಗದರ್ಶಿಸುತ್ತಾರೆ. ಭ್ರಷ್ಟ ಸಂಘಟನೆಗಳ ಬದಲಿಗೆ ಐಕ್ಯವಾಗಿ ಕೆಲಸ ಮಾಡುವ, ಎಂದಿಗೂ ಭ್ರಷ್ಟಗೊಳ್ಳದ ಒಂದೇ ಒಂದು ಸಂಘಟನೆ ಇರುವಾಗ ಎಷ್ಟು ಚೆನ್ನಾಗಿರುತ್ತೆ ಅಲ್ವಾ?
ಜೂನ್ 10-16
ಬೈಬಲಿನಲ್ಲಿರುವ ನಿಧಿ | ಕೀರ್ತನೆ 48-50
ಅಪ್ಪಅಮ್ಮಂದಿರೇ—ಸಂಘಟನೆ ಮೇಲೆ ಮಕ್ಕಳಿಗಿರೋ ನಂಬಿಕೆಯನ್ನ ಜಾಸ್ತಿ ಮಾಡಿ
ಕಾವಲಿನಬುರುಜು22.03 ಪುಟ 22 ಪ್ಯಾರ 11
ಸತ್ಯ ಆರಾಧನೆಯಿಂದ ಸಂತೋಷವಾಗಿ ಇರ್ತೀರ
11 ಬೈಬಲ್ ಅಧ್ಯಯನ ಮಾಡೋದು, ಮಕ್ಕಳಿಗೆ ಕಲಿಸುವುದು. ಸಬ್ಬತ್ ದಿನದಲ್ಲಿ ಇಸ್ರಾಯೇಲ್ಯರು ಯಾವ ಕೆಲಸನೂ ಮಾಡದೆ ಯೆಹೋವನ ಬಗ್ಗೆ ಕಲಿಯೋಕೆ ಸಮಯ ಕೊಡಬೇಕಿತ್ತು. (ವಿಮೋ. 31:16, 17) ಅವರು ಯೆಹೋವನ ಬಗ್ಗೆ, ಆತನ ಗುಣಗಳ ಬಗ್ಗೆ ತಮ್ಮ ಮಕ್ಕಳಿಗೆ ಕಲಿಸಿಕೊಡುತ್ತಿದ್ದರು. ಅದೇ ತರ ನಾವು ಕೂಡ ಬೈಬಲ್ ಅಧ್ಯಯನ ಮಾಡೋಕೆ ಶೆಡ್ಯೂಲ್ ಮಾಡಿಕೊಳ್ಳಬೇಕು. ಯಾಕಂದ್ರೆ ಇದೂ ಕೂಡ ನಮ್ಮ ಆರಾಧನೆಯಲ್ಲಿ ಸೇರಿದೆ. ಇದರಿಂದ ಯೆಹೋವನ ಜೊತೆ ಒಳ್ಳೇ ಸ್ನೇಹ ಬೆಳೆಸಿಕೊಳ್ಳೋಕೆ ಆಗುತ್ತೆ. (ಕೀರ್ತ. 73:28) ಅಷ್ಟೇ ಅಲ್ಲ, ಕುಟುಂಬದಲ್ಲಿ ಎಲ್ಲರೂ ಒಟ್ಟಿಗೆ ಬೈಬಲ್ ಅಧ್ಯಯನ ಮಾಡೋದರಿಂದ ನಮ್ಮ ಮಕ್ಕಳು ಸ್ವರ್ಗೀಯ ಅಪ್ಪ ಯೆಹೋವನಿಗೆ ಒಳ್ಳೇ ಫ್ರೆಂಡ್ಸ್ ಆಗುತ್ತಾರೆ.—ಕೀರ್ತನೆ 48:13 ಓದಿ.
ಕಾವಲಿನಬುರುಜು11 3/15 ಪುಟ 19 ಪ್ಯಾರ 5-7
ನಿಮಗೆ ಹರ್ಷಿಸಲು ಸಕಾರಣವಿದೆ
“ಚೀಯೋನ್ ಸಂಸ್ಥಾನದ ಸುತ್ತಲು ಸಂಚರಿಸಿ ಅದರ ಬುರುಜುಗಳನ್ನು ಲೆಕ್ಕಿಸಿರಿ. ಅದರ ಪ್ರಾಕಾರಗಳನ್ನು ಚೆನ್ನಾಗಿ ನೋಡಿರಿ; ಅದರ ಕೊತ್ತಲುಗಳನ್ನು ಸೂಕ್ಷ್ಮವಾಗಿ ಗಮನಿಸಿರಿ. ಆಗ ನೀವು ನಿಮ್ಮ ಮುಂದಣ ಸಂತತಿಯವರಿಗೆ . . . ತಿಳಿಸುವಿರಿ.” (ಕೀರ್ತ. 48:12-14) ಇಲ್ಲಿ ಕೀರ್ತನೆಗಾರನು ಇಸ್ರಾಯೇಲ್ಯರಿಗೆ ಯೆರೂಸಲೇಮನ್ನು ಸೂಕ್ಷ್ಮವಾಗಿ ಗಮನಿಸುವಂತೆ ಉತ್ತೇಜಿಸುತ್ತಿದ್ದನು. ವಾರ್ಷಿಕ ಹಬ್ಬಗಳಿಗಾಗಿ ಆ ಪವಿತ್ರ ಪಟ್ಟಣಕ್ಕೆ ಹೋಗಿ ಅಲ್ಲಿನ ಭವ್ಯ ಆಲಯವನ್ನು ಕಣ್ಣಾರೆ ಕಂಡ ಇಸ್ರಾಯೇಲ್ಯ ಕುಟುಂಬಗಳು ತಮ್ಮ ಮಧುರ ನೆನಪನ್ನು ಹಂಚಿಕೊಂಡದ್ದನ್ನು ಸ್ವಲ್ಪ ಊಹಿಸಿರಿ. ಹೌದು ಆ ಬಗ್ಗೆ ‘ಮುಂದಣ ಸಂತತಿಯವರಿಗೆ ತಿಳಿಸಲು’ ಅವರು ಪ್ರಚೋದಿಸಲ್ಪಟ್ಟಿರಬೇಕು.
ಶೆಬದ ರಾಣಿಯ ಕುರಿತು ಯೋಚಿಸಿರಿ. ಸೊಲೊಮೋನನ ವೈಭವಯುತ ಆಳ್ವಿಕೆ ಮತ್ತು ಅಪಾರ ವಿವೇಕದ ಕುರಿತು ಆಕೆ ಕೇಳಿಸಿಕೊಂಡಾಗ ಮೊದಲು ಸಂಶಯಪಟ್ಟಳು. ಆದರೆ ಅದೆಲ್ಲಾ ಸತ್ಯವೆಂದು ಯಾವುದು ಆಕೆಗೆ ಮನವರಿಕೆ ಮಾಡಿತು? “ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವದಕ್ಕಿಂತ ಮೊದಲು ಜನರು ಹೇಳಿದ ಸುದ್ದಿಯನ್ನು ನಂಬಲಿಲ್ಲ” ಎಂದಳಾಕೆ. (2 ಪೂರ್ವ. 9:6) ಹೌದು, ನಾವು “ಕಣ್ಣಾರೆ ನೋಡುವ” ವಿಷಯವು ನಮ್ಮನ್ನು ಗಾಢವಾಗಿ ಪ್ರಭಾವಿಸಬಲ್ಲದು.
ನಿಮ್ಮ ಮಕ್ಕಳು ಯೆಹೋವನ ಸಂಘಟನೆಯ ಮಹತ್ಕಾರ್ಯಗಳನ್ನು ‘ಕಣ್ಣಾರೆ ನೋಡಲು’ ನೀವು ಹೇಗೆ ಸಹಾಯಮಾಡಬಲ್ಲಿರಿ? ನೀವಿರುವ ಸ್ಥಳಕ್ಕೆ ಸಮೀಪವಾದ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸನ್ನು ಭೇಟಿನೀಡಲು ಪ್ರಯತ್ನಿಸಿರಿ. ಮ್ಯಾಂಡೀ ಮತ್ತು ಬೆತನೀ ಎಂಬ ಸಹೋದರಿಯರ ಉದಾಹರಣೆಯನ್ನು ಪರಿಗಣಿಸಿ. ಅವರಿದ್ದ ಸ್ಥಳದಿಂದ ಬೆತೆಲ್ ಗೃಹಕ್ಕೆ ಸುಮಾರು 1,500 ಕಿ.ಮೀ. ದೂರವಿತ್ತು. ಹಾಗಿದ್ದರೂ ಅವರು ಕುಟುಂಬಸಮೇತ ಬೆತೆಲ್ಗೆ ಆಗಾಗ್ಗೆ ಭೇಟಿನೀಡುತ್ತಿದ್ದರು. ಆ ಮಕ್ಕಳು ಹೇಳಿದ್ದು: “ಬೆತೆಲ್ಗೆ ಹೋಗುವುದಕ್ಕೆ ಮುನ್ನ ನಾವು ನೆನಸಿದ್ದು ಅದು ವೃದ್ಧಜನರಿಗಾಗಿರುವ ಸ್ಥಳ, ಅಲ್ಲಿಯವರೆಲ್ಲಾ ತುಂಬ ಗಂಭೀರ ಸ್ವಭಾವದ ಜನರು ಅಂತ. ಆದರೆ ಅಲ್ಲಿ ಯೆಹೋವನಿಗಾಗಿ ಸಂತೋಷದಿಂದ ಶ್ರಮಪಟ್ಟು ಕೆಲಸಮಾಡುತ್ತಿದ್ದ ಯೌವನಸ್ಥರನ್ನೂ ನಾವು ಭೇಟಿಯಾದೆವು! ಯೆಹೋವನ ಸಂಘಟನೆ ನಾವು ನೆನಸಿದಷ್ಟು ಚಿಕ್ಕದಲ್ಲ ತುಂಬ ದೊಡ್ಡದೆಂದು ಕಣ್ಣಾರೆ ನೋಡಿದೆವು. ಬೆತೆಲ್ಗೆ ನೀಡಿದ ಪ್ರತಿಯೊಂದು ಭೇಟಿಯು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳಸಿಕೊಳ್ಳುವಂತೆ ಮಾಡಿತು ಮತ್ತು ಆತನಿಗೆ ಸೇವೆಸಲ್ಲಿಸಲು ಇನ್ನಷ್ಟು ಹುರಿದುಂಬಿಸಿತು.” ದೇವರ ಸಂಘಟನೆಯನ್ನು ನಿಕಟವಾಗಿ ನೋಡಿದ್ದು ಮ್ಯಾಂಡೀ ಮತ್ತು ಬೆತನೀಯವರನ್ನು ಪಯನೀಯರ್ ಸೇವೆ ಆರಂಭಿಸುವಂತೆ ಪ್ರಚೋದಿಸಿತು. ಮಾತ್ರವಲ್ಲ, ಬೆತೆಲ್ನಲ್ಲಿ ಸ್ವಲ್ಪ ಸಮಯಕ್ಕೆ ಸ್ವಯಂಸೇವಕರಾಗಿ ಕೆಲಸಮಾಡಲು ಸಹ ಅವರನ್ನು ಆಮಂತ್ರಿಸಲಾಯಿತು.
ಕಾವಲಿನಬುರುಜು12 8/15 ಪುಟ 12-13 ಪ್ಯಾರ 5
ದೇವರ ರಾಜ್ಯದ ಪ್ರಜೆಗಳಾಗಿ ಮುಂದುವರಿಯಿರಿ!
5 ಇತಿಹಾಸ ತಿಳಿಯಬೇಕು. ಒಂದು ದೇಶದ ಪ್ರಜೆಯಾಗಲು ಅಪೇಕ್ಷಿಸುವ ವ್ಯಕ್ತಿ ಅದರ ಇತಿಹಾಸವನ್ನೂ ತಿಳಿಯಬೇಕಾಗುತ್ತದೆ. ಅದೇ ರೀತಿ ದೇವರ ರಾಜ್ಯದ ಪ್ರಜೆಯಾಗಲು ಬಯಸುವವರು ಆ ರಾಜ್ಯದ ಕುರಿತು ಸಾಧ್ಯವಾದಷ್ಟು ಹೆಚ್ಚು ಕಲಿಯಬೇಕು. ಈ ವಿಷಯದಲ್ಲಿ ಕೋರಹನ ಮಕ್ಕಳು ಒಳ್ಳೇ ಮಾದರಿಯಾಗಿದ್ದಾರೆ. ಪ್ರಾಚೀನ ಇಸ್ರಾಯೇಲ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಯೆರೂಸಲೇಮ್ ಮತ್ತು ಅಲ್ಲಿದ್ದ ಆರಾಧನಾ ಸ್ಥಳವೆಂದರೆ ಬಹಳ ಪ್ರೀತಿ. ಇತರರ ಬಳಿ ಅದರ ಬಗ್ಗೆ ಉತ್ಸುಕತೆಯಿಂದ ಮಾತಾಡುತ್ತಿದ್ದರು. ಅದು ನೋಡಲು ಭವ್ಯವಾಗಿತ್ತೆಂಬ ಕಾರಣದಿಂದಲ್ಲ. ಬದಲಾಗಿ ಯೆರೂಸಲೇಮ್ ‘ರಾಜಾಧಿರಾಜನಾದ’ ಯೆಹೋವನ “ಪಟ್ಟಣ”ವಾಗಿದ್ದರಿಂದಲೇ. ಮಾತ್ರವಲ್ಲ ಅದು ಸತ್ಯಾರಾಧನೆಯ ಕೇಂದ್ರವಾಗಿತ್ತು. ಯೆಹೋವನ ಧರ್ಮಶಾಸ್ತ್ರವನ್ನು ಅಲ್ಲಿ ಕಲಿಸಲಾಗುತ್ತಿತ್ತು. ರಾಜಾಧಿರಾಜನಾದ ಆತನು ತನ್ನ ಆಳ್ವಿಕೆಯ ಕೆಳಗಿದ್ದ ಜನರಿಗೆ ವಿಶೇಷ ರೀತಿಯ ಪ್ರೀತಿ, ದಯೆ ತೋರಿಸಿದ್ದನು. (ಕೀರ್ತನೆ 48:1, 2, 9, 12, 13 ಓದಿ.) ಕೋರಹನ ಮಕ್ಕಳಂತೆ ನಿಮ್ಮಲ್ಲೂ ಯೆಹೋವನ ಸಂಘಟನೆಯ ಭೂಭಾಗದ ಇತಿಹಾಸವನ್ನು ಅಧ್ಯಯನ ಮಾಡುವ ಮತ್ತು ಇತರರಿಗೆ ವಿವರಿಸಿ ಹೇಳುವ ತವಕ ಇದೆಯೇ? ಯೆಹೋವನ ಸಂಘಟನೆ ಮತ್ತು ಆತನು ತನ್ನ ಜನರನ್ನು ಬೆಂಬಲಿಸುವ ಕುರಿತು ಹೆಚ್ಚೆಚ್ಚು ಕಲಿಯುತ್ತ ಹೋದಂತೆ ದೇವರ ರಾಜ್ಯ ನಮಗೆ ಹೆಚ್ಚೆಚ್ಚು ನೈಜವಾಗುವುದು. ರಾಜ್ಯದ ಸುವಾರ್ತೆಯನ್ನು ಸಾರಬೇಕೆಂಬ ನಮ್ಮ ಅಪೇಕ್ಷೆ ತನ್ನಿಂದ ತಾನೇ ತೀವ್ರವಾಗುವುದು.—ಯೆರೆ. 9:24; ಲೂಕ 4:43.
ಬೈಬಲಿನಲ್ಲಿರುವ ರತ್ನಗಳು
it-2-E ಪುಟ 805
ಐಶ್ವರ್ಯ
ಇಸ್ರಾಯೇಲ್ ಎಷ್ಟು ಸಮೃದ್ದವಾಗಿತ್ತಂದ್ರೆ ಅಲ್ಲಿದ್ದ ಜನ್ರಿಗೆ ತಿನ್ನೋಕೆ ಕುಡಿಯೋಕೆ ಏನೂ ಕಡಿಮೆ ಇರಲಿಲ್ಲ. (1 ಅರ. 4:20; ಪ್ರಸಂ. 5:18, 19) ಅವರಿಗೆ ಸಿಕ್ಕಾಪಟ್ಟೆ ಆಸ್ತಿ ಇದ್ದಿದ್ರಿಂದ ಬಡತನನೂ ಇರಲಿಲ್ಲ. (ಜ್ಞಾನೋ. 10:15; ಪ್ರಸಂ. 7:12) ಅವರು ಚೆನ್ನಾಗಿ ಕೆಲಸ ಮಾಡಿ ಸಮೃದ್ದಿಯನ್ನ ಪಡಿಬೇಕು ಅಂತ ಯೆಹೋವ ಬಯಸಿದನು. (ಜ್ಞಾನೋ. 6:6-11; 20:13; 24:33, 34) ಆದ್ರೆ ಅವರು ಬರೀ ಆಸ್ತಿ ಮೇಲೆನೇ ನಂಬಿಕೆ ಇಡಬಾರದು, ಆ ಆಸ್ತಿಯನ್ನ ಕೊಟ್ಟಿದ್ದು ಯೆಹೋವನೇ ಅನ್ನೋದನ್ನ ಮರೀಬಾರದು ಅಂತ ಯೆಹೋವ ಎಚ್ಚರಿಕೆ ಕೊಟ್ಟನು. (ಧರ್ಮೋ. 8:7-17; ಕೀರ್ತ. 49:6-9; ಜ್ಞಾನೋ. 11:4; 18:10, 11; ಯೆರೆ. 9:23, 24) ಆಸ್ತಿ ಅಂತಸ್ತೆಲ್ಲಾ ಶಾಶ್ವತವಾಗಿರಲ್ಲ, (ಜ್ಞಾನೋ. 23:4, 5) ದೇವರಿಗೆ ಹಣ ಆಸ್ತಿಕೊಟ್ಟರೆ ಮರಣದಿಂದ ತಪ್ಪಿಸಿಕೊಳ್ಳೋಕೆ ಆಗಲ್ಲ, (ಕೀರ್ತ. 49:6, 7) ಐಶ್ವರ್ಯದಿಂದ ಸತ್ತವರಿಗೆ ಪ್ರಯೋಜನವಿಲ್ಲ ಅಂತ ಆತನು ನೆನಪಿಸಿದನು. (ಕೀರ್ತ. 49:16, 17; ಪ್ರಸಂ. 5:15) ಅಷ್ಟೇ ಅಲ್ಲ ‘ಅತಿಯಾಸೆ ಇದ್ದರೆ ಅಪ್ರಮಾಣಿಕರಾಗ್ತೀರಾ, ಅದು ನಂಗೆ ಇಷ್ಟ ಇಲ್ಲ’ ಅಂತ ಯೆಹೋವ ಇಸ್ರಾಯೇಲ್ಯರಿಗೆ ಎಚ್ಚರಿಕೆ ಕೊಟ್ಟನು. (ಜ್ಞಾನೋ. 28:20; ಯೆರೆ. 5:26-28; 17:9-11) “ಬೆಲೆ ಬಾಳೋ ವಸ್ತುಗಳಿಂದ” ನನ್ನನ್ನ ಸನ್ಮಾನಿಸು ಅಂತ ಆತನು ಉತ್ತೇಜನನೂ ಕೊಟ್ಟನು.—ಜ್ಞಾನೋ. 3:9.
ಜೂನ್ 17-23
ಬೈಬಲಿನಲ್ಲಿರುವ ನಿಧಿ | ಕೀರ್ತನೆ 51-53
ದೊಡ್ಡ ತಪ್ಪು ಮಾಡದಿರೋಕೆ ಏನು ಮಾಡಬೇಕು?
ಕಾವಲಿನಬುರುಜು19.01 ಪುಟ 14-15 ಪ್ಯಾರ 4-5
ನಿಮ್ಮ ಹೃದಯ ಕಾಪಾಡಿಕೊಳ್ಳಿ
4 ಜ್ಞಾನೋಕ್ತಿ 4:23ರಲ್ಲಿ “ಹೃದಯ” ಅನ್ನುವುದು ನಮ್ಮ ಮನದಾಳದ ಯೋಚನೆ, ಭಾವನೆ, ಉದ್ದೇಶ ಮತ್ತು ಆಸೆಗಳನ್ನು ಸೂಚಿಸುತ್ತದೆ. ಇದು ನಾವು ಹೊರಗೆ ಹೇಗೆ ಕಾಣುತ್ತೇವೋ ಅದಕ್ಕಲ್ಲ, ಒಳಗೆ ಏನಾಗಿದ್ದೇವೋ ಅದಕ್ಕೆ ಸೂಚಿಸುತ್ತದೆ.
5 ನಾವು ಒಳಗೆ ಎಂಥ ವ್ಯಕ್ತಿಯಾಗಿದ್ದೇವೋ ಅದು ತುಂಬ ಪ್ರಾಮುಖ್ಯ ಅನ್ನುವುದಕ್ಕೆ ಒಂದು ಉದಾಹರಣೆ ನೋಡೋಣ. ನಮ್ಮ ಆರೋಗ್ಯದ ವಿಷಯ ತೆಗೆದುಕೊಳ್ಳೋಣ. ಆರೋಗ್ಯ ಚೆನ್ನಾಗಿರಬೇಕೆಂದರೆ ಮೊದಲನೇದಾಗಿ, ಒಳ್ಳೇ ಆಹಾರ ತಿನ್ನಬೇಕು ಮತ್ತು ವ್ಯಾಯಾಮ ಮಾಡಬೇಕು. ಅದೇ ರೀತಿ ನಮ್ಮ ಆಧ್ಯಾತ್ಮಿಕ ಆರೋಗ್ಯ ಚೆನ್ನಾಗಿರಬೇಕೆಂದರೆ ಬೈಬಲ್ ಮತ್ತು ಬೈಬಲ್ ಆಧಾರಿತ ಪ್ರಕಾಶನಗಳನ್ನು ತಪ್ಪದೆ ಓದಬೇಕು ಮತ್ತು ಯೆಹೋವನ ಮೇಲೆ ನಮಗಿರುವ ನಂಬಿಕೆಯನ್ನು ತೋರಿಸಬೇಕು. ನಂಬಿಕೆ ತೋರಿಸಬೇಕು ಅಂದರೆ ಬೈಬಲಿಂದ ಕಲಿತ ವಿಷಯಗಳನ್ನು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು ಮತ್ತು ನಮ್ಮ ನಂಬಿಕೆ ಬಗ್ಗೆ ಬೇರೆಯವರ ಹತ್ತಿರ ಮಾತಾಡಬೇಕು. (ರೋಮ. 10:8-10; ಯಾಕೋ. 2:26) ಎರಡನೇದಾಗಿ, ‘ಹೊರಗೆ ಥಳುಕು, ಒಳಗೆ ಹುಳುಕು’ ಅನ್ನುವಂತೆ ನಾವು ಹೊರಗೆ ನೋಡುವುದಕ್ಕೆ ಆರೋಗ್ಯವಂತರಾಗಿ ಕಂಡರೂ ಒಳಗೆ ಏನಾದರೂ ಕಾಯಿಲೆ ಇರಬಹುದು. ಅದೇ ರೀತಿ ನಮ್ಮ ಆಧ್ಯಾತ್ಮಿಕ ಚಟುವಟಿಕೆಗಳನ್ನು ನೋಡಿ ನಮ್ಮ ನಂಬಿಕೆ ತುಂಬ ಬಲವಾಗಿದೆ ಎಂದು ನಮಗೆ ಅನಿಸಬಹುದು. ಆದರೆ ನಮ್ಮೊಳಗೆ ಕೆಟ್ಟ ಆಸೆಗಳು ಬೆಳೆಯುತ್ತಾ ಇರಬಹುದು. (1 ಕೊರಿಂ. 10:12; ಯಾಕೋ. 1:14, 15) ಸೈತಾನ ನಮ್ಮ ಮನಸ್ಸನ್ನು, ಯೋಚನೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಾನೆ ಅನ್ನುವುದನ್ನು ನೆನಪಲ್ಲಿಡಬೇಕು. ಅವನು ಏನೆಲ್ಲ ಮಾಡುತ್ತಾನೆ? ನಾವು ಹೇಗೆ ನಮ್ಮ ಹೃದಯವನ್ನು ಕಾಪಾಡಿಕೊಳ್ಳಬಹುದು?
ಕಾವಲಿನಬುರುಜು15 6/15 ಪುಟ 14 ಪ್ಯಾರ 5-6
ನಮ್ಮ ಯೋಚನೆ, ನಡತೆಯನ್ನು ಶುದ್ಧವಾಗಿಡಲು ಸಾಧ್ಯ!
5 ಸಹಾಯಕ್ಕಾಗಿ ನಾವು ಯೆಹೋವನ ಹತ್ತಿರ ಬೇಡಿಕೊಳ್ಳುತ್ತಾ ಇದ್ದರೆ ಅನೈತಿಕ ಯೋಚನೆಗಳ ವಿರುದ್ಧ ಹೋರಾಡಲು ಖಂಡಿತ ಸಹಾಯ ಕೊಡುವನು. ನಮ್ಮ ಯೋಚನೆ ಹಾಗೂ ನಡತೆಯನ್ನು ಶುದ್ಧವಾಗಿಡಲು ಬೇಕಾದ ಬಲವನ್ನು ಆತನು ಪವಿತ್ರಾತ್ಮದ ಮೂಲಕ ಕೊಡುತ್ತಾನೆ. ಆತನು ಮೆಚ್ಚುವಂಥ ಯೋಚನೆಗಳು ನಮಗಿರುವಂತೆ ಬಯಸುತ್ತೇವೆಂದು ಪ್ರಾರ್ಥನೆ ಮಾಡುವಾಗೆಲ್ಲ ಯೆಹೋವನಿಗೆ ಹೇಳಬಹುದು. (ಕೀರ್ತ. 19:14) ಪಾಪಕ್ಕೆ ನಡೆಸಬಹುದಾದ ಯಾವುದೇ ಹಾನಿಕರ ಆಸೆಗಳು ನಮ್ಮ ಹೃದಯದಲ್ಲಿವೆಯಾ ಎಂದು ಪರೀಕ್ಷಿಸಿನೋಡಲು ನಾವು ದೀನತೆಯಿಂದ ಆತನಿಗೆ ಕೇಳಿಕೊಳ್ಳಬೇಕು. (ಕೀರ್ತ. 139:23, 24) ಅನೈತಿಕತೆಯನ್ನು ತಳ್ಳಿಹಾಕಲು ಮತ್ತು ಕಷ್ಟವಾದರೂ ಸರಿಯಾದದ್ದನ್ನೇ ಮಾಡಲು ಸಹಾಯ ಕೊಡುವಂತೆ ಯೆಹೋವನ ಬಳಿ ಬೇಡಿಕೊಳ್ಳುತ್ತಾ ಇರಬೇಕು.—ಮತ್ತಾ. 6:13.
6 ಯೆಹೋವನ ಬಗ್ಗೆ ತಿಳಿದುಕೊಳ್ಳುವ ಮುಂಚೆ ಬಹುಶಃ ಆತನಿಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡುತ್ತಿದ್ದೆವು. ಆ ತಪ್ಪು ಆಸೆಗಳ ವಿರುದ್ಧ ನಾವೀಗಲೂ ಹೋರಾಡುತ್ತಾ ಇರಬಹುದು. ಆದರೆ ನಾವು ಬದಲಾಗುವಂತೆ ಮತ್ತು ಆತನಿಗೆ ಮೆಚ್ಚಿಕೆಯಾದದ್ದನ್ನು ಮಾಡುವಂತೆ ಬೇಕಾದ ಸಹಾಯವನ್ನು ಯೆಹೋವನು ಕೊಡಬಲ್ಲನು. ರಾಜ ದಾವೀದನ ಉದಾಹರಣೆ ತೆಗೆದುಕೊಳ್ಳಿ. ಅವನು ಬತ್ಷೆಬೆಯೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡ ನಂತರ ಪಶ್ಚಾತ್ತಾಪಪಟ್ಟನು. ಯೆಹೋವನ ಬಳಿ “ಶುದ್ಧಹೃದಯ”ಕ್ಕಾಗಿ ಮತ್ತು ಆತನಿಗೆ ವಿಧೇಯನಾಗಲು ಸಹಾಯಕ್ಕಾಗಿ ಅಂಗಲಾಚಿದನು. (ಕೀರ್ತ. 51:10, 12) ಹಾಗಾಗಿ ಒಂದುವೇಳೆ ಹಿಂದೆ ನಮಗೆ ತುಂಬ ಬಲವಾದ ಅನೈತಿಕ ಆಸೆಗಳಿದ್ದು, ಈಗಲೂ ಅವುಗಳ ವಿರುದ್ಧ ಹೋರಾಡುತ್ತಾ ಇದ್ದರೆ ಯೆಹೋವನು ನಮಗೆ ಸಹಾಯ ಮಾಡುತ್ತಾನೆ. ಆತನಿಗೆ ವಿಧೇಯರಾಗಿ ಸರಿಯಾದದ್ದನ್ನೇ ಮಾಡಲು ಅನೈತಿಕ ಆಸೆಗಳಿಗಿಂತಲೂ ಹೆಚ್ಚು ಬಲವಾದ ಆಸೆ ಹೊಂದಲು ಸಹಾಯ ಮಾಡುತ್ತಾನೆ. ನಮ್ಮ ಅಪರಿಪೂರ್ಣ ಯೋಚನೆಗಳನ್ನು ನಿಯಂತ್ರಿಸಲು ನಮಗೆ ನೆರವು ಕೊಡುತ್ತಾನೆ.—ಕೀರ್ತ. 119:133.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 644
ದೋಯೇಗ
ದೋಯೇಗ ಒಬ್ಬ ಎದೋಮ್ಯನಾಗಿದ್ದ. ಅವನು ಸೌಲನ ಕುರುಬರ ಮುಖ್ಯಸ್ಥನಾಗಿದ್ದ. (1ಸಮು 21:7; 22:9) ಅವನು ಬಹುಶಃ ಯೆಹೂದಿಯಾಗಿ ಮತಾಂತರ ಆಗಿದ್ದ. ಮಾತಿಗೆ ತಪ್ಪಿದ್ರಿಂದಾನೋ, ಅಶುದ್ದತೆಯ ಕಾರಣದಿಂದಾನೋ ಅಥವಾ ಕುಷ್ಠ ಇದ್ದಿದ್ರಿಂದಾನೋ ಇವನು ನೋಬ್ ನಗರದಲ್ಲಿದ್ದ “ಯೆಹೋವನ ಆಲಯದಲ್ಲಿ” ಇರಬೇಕಾಯಿತು. ಮಹಾ ಪುರೋಹಿತ ಅಹೀಮೆಲೆಕ ದಾವೀದನಿಗೆ ಪವಿತ್ರ ರೊಟ್ಟಿ ಮತ್ತು ಗೊಲ್ಯಾತನ ಕತ್ತಿ ಕೊಡೋದನ್ನ ದೋಯೇಗ ನೋಡಿದ. ಆಮೇಲೆ ಸಂಚಿನ ಬಗ್ಗೆ ಸೌಲನಿಗೆ ಗೊತ್ತಾದಾಗ ದೋಯೇಗ ತಾನು ನೋಡಿದ ಎಲ್ಲಾ ವಿಷಯವನ್ನ ಹೇಳಿದ. ಆಗ ಯೆಹೋವನ ಪುರೋಹಿತರನ್ನ ಸಾಯಿಸಿ ಅಂತ ಸೌಲ ಹೇಳಿದ. ಆದ್ರೆ ಸೇವಕರು ಯೆಹೋವನ ಪುರೋಹಿತರನ್ನ ಸಾಯಿಸೋಕೆ ಅವ್ರ ಮೇಲೆ ಕೈ ಎತ್ತೋಕೆ ಬಯಸಲಿಲ್ಲ. ಆಮೇಲೆ ರಾಜ ದೋಯೇಗನಿಗೆ “ನೀನು ಹೋಗಿ ಆ ಪುರೋಹಿತರನ್ನ ಸಾಯಿಸು” ಅಂದ ತಕ್ಷಣ ದೋಯೇಗ ಹಿಂದೆಮುಂದೆ ನೋಡದೆ ಆ 85 ಪುರೋಹಿತರನ್ನ ಸಾಯಿಸಿಬಿಟ್ಟ. ಅಷ್ಟೇ ಅಲ್ಲ ನೋಬಿನ ಜನ್ರನ್ನ ಸಹ ಕತ್ತಿಯಿಂದ ಸಾಯಿಸಿದ. ಅಲ್ಲಿದ್ದ ಗಂಡಸ್ರನ್ನ, ಸ್ತ್ರೀಯರನ್ನ, ಮಕ್ಕಳನ್ನ, ಕೂಸುಗಳನ್ನ, ಹೋರಿ, ಕತ್ತೆ, ಕುರಿ ಹೀಗೆ ಎಲ್ಲವನ್ನೂ ಕತ್ತಿಯಿಂದ ಸಾಯಿಸಿದ.—1ಸಮು 22:6-20.
“ನಿನ್ನ ನಾಲಿಗೆ ಕ್ಷೌರ ಕತ್ತಿ ತರ ಚೂಪಾಗಿ ಇದೆ, ಅದು ಕೇಡು ಮಾಡೋಕೆ ಸಂಚು ಮಾಡುತ್ತೆ, ಮೋಸದ ಮಾತುಗಳನ್ನ ಆಡುತ್ತೆ. ನೀನು ಒಳ್ಳೇದಕ್ಕಿಂತ ಕೆಟ್ಟದ್ದನ್ನೇ ಜಾಸ್ತಿ ಪ್ರೀತಿಸ್ತೀಯ, ಸತ್ಯಕ್ಕಿಂತ ಸುಳ್ಳನ್ನೇ ಜಾಸ್ತಿ ಹೇಳ್ತೀಯ. ಮೋಸದ ನಾಲಿಗೆಯೇ! ಹಾನಿ ಮಾಡೋ ಮಾತೇ ನಿನಗೆ ತುಂಬ ಇಷ್ಟ” ಅಂತ ಕೀರ್ತನೆ 52ರ ಮೇಲ್ಬರಹದಲ್ಲಿ ದೋಯೇಗನ ಬಗ್ಗೆ ದಾವೀದ ಬರೀತಾನೆ.—ಕೀರ್ತ 52:2-4.
ಜೂನ್ 24-30
ಬೈಬಲಿನಲ್ಲಿರುವ ನಿಧಿ | ಕೀರ್ತನೆ 54-56
ದೇವರು ನಿಮ್ಮ ಪಕ್ಷದಲ್ಲಿದ್ದಾನೆ
ಕಾವಲಿನಬುರುಜು06 8/1 ಪುಟ 22-23 ಪ್ಯಾರ 10-11
ದೇವರಿಗೆ ಭಯಪಟ್ಟು ವಿವೇಕಿಗಳಾಗಿರಿ!
10 ಒಂದು ಸಂದರ್ಭದಲ್ಲಿ, ದಾವೀದನು ಗೊಲ್ಯಾತನ ಊರಾಗಿದ್ದ ಗತ್ ಎಂಬ ಫಿಲಿಷ್ಟಿಯ ಪಟ್ಟಣದ ಅರಸ ಅಕೀಷನ ಆಶ್ರಯವನ್ನು ಕೋರಿದನು. (1 ಸಮುವೇಲ 21:10-15) ಅರಸನ ಸೇವಕರು, ದಾವೀದನು ತಮ್ಮ ರಾಜ್ಯದ ವೈರಿಯೆಂದು ಅಪವಾದ ಹೊರಿಸಿದರು. ಆ ಅಪಾಯಕರ ಸಂದರ್ಭದಲ್ಲಿ ದಾವೀದನು ಹೇಗೆ ಪ್ರತಿವರ್ತಿಸಿದನು? ಅವನು ಯೆಹೋವನಿಗೆ ತನ್ನ ಹೃದಯ ಬಿಚ್ಚಿ ಪ್ರಾರ್ಥಿಸಿದನು. (ಕೀರ್ತನೆ 56:1-4, 11-13) ಅಲ್ಲಿಂದ ತಪ್ಪಿಸಿಕೊಳ್ಳಲು ದಾವೀದನಿಗೆ ಹುಚ್ಚನಂತೆ ವರ್ತಿಸಬೇಕಾಯಿತಾದರೂ, ತನ್ನ ಪ್ರಯತ್ನವನ್ನು ಹರಸುವ ಮೂಲಕ ವಾಸ್ತವವಾಗಿ ಯೆಹೋವನೇ ತನ್ನನ್ನು ರಕ್ಷಿಸಿದನೆಂದು ದಾವೀದನು ತಿಳಿದುಕೊಂಡನು. ದಾವೀದನು ಯೆಹೋವನ ಮೇಲೆ ಪೂರ್ಣ ಹೃದಯದಿಂದ ಹೊಂದಿಕೊಂಡದ್ದು ಮತ್ತು ಭರವಸೆಯಿಟ್ಟದ್ದು ಅವನು ನಿಜವಾಗಿಯೂ ದೇವಭಯವುಳ್ಳವನೆಂದು ತೋರಿಸಿತು.—ಕೀರ್ತನೆ 34:4-6, 9-11.
11 ನಮ್ಮ ಸಮಸ್ಯೆಗಳನ್ನು ನಿಭಾಯಿಸಲು ದೇವರು ಸಹಾಯನೀಡುವನೆಂದು ಆತನು ಮಾಡಿರುವ ವಾಗ್ದಾನದಲ್ಲಿ ಭರವಸೆಯಿಡುವ ಮೂಲಕ ನಾವು ಸಹ ದಾವೀದನಂತೆ ದೇವಭಯವನ್ನು ತೋರಿಸಬಲ್ಲೆವು. “ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು” ಎಂದು ದಾವೀದನು ಹೇಳಿದನು. (ಕೀರ್ತನೆ 37:5) ಅಂದರೆ ನಾವು ನಮ್ಮ ಸಮಸ್ಯೆಗಳ ವಿಷಯದಲ್ಲಿ ನಮ್ಮಿಂದಾಗುವುದೇನನ್ನು ಮಾಡದೆ, ದೇವರೇ ನಮ್ಮ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ಅವನ್ನು ಆತನ ಮೇಲೆ ಹಾಕಬೇಕೆಂಬುದು ಇದರ ಅರ್ಥವಲ್ಲ. ದಾವೀದನು ದೇವರಿಗೆ ಪ್ರಾರ್ಥಿಸಿ, ಏನನ್ನೂ ಮಾಡದೆ ಕೈಕಟ್ಟಿ ಕೂರಲಿಲ್ಲ. ಅವನು ಯೆಹೋವನು ತನಗೆ ಕೊಟ್ಟಿದ್ದ ಬುದ್ಧಿಶಕ್ತಿ ಹಾಗೂ ಶಾರೀರಿಕ ಸಾಮರ್ಥ್ಯಗಳನ್ನು ಉಪಯೋಗಿಸಿ ಸಮಸ್ಯೆಯನ್ನು ಎದುರಿಸಿದನು. ಆದರೂ, ಕೇವಲ ಮಾನವ ಪ್ರಯತ್ನಗಳ ಮೇಲೆ ಹೊಂದಿಕೊಂಡಿದ್ದರೆ ಜಯಹೊಂದಸಾಧ್ಯವಿಲ್ಲ ಎಂಬುದು ದಾವೀದನಿಗೆ ತಿಳಿದಿತ್ತು. ದಾವೀದನಂತೆ ನಾವು ಸಹ ನಮ್ಮ ಕೈಯಲ್ಲಿ ಮಾಡಸಾಧ್ಯವಿರುವುದೆಲ್ಲವನ್ನು ಮಾಡಿ ಉಳಿದುದನ್ನು ಯೆಹೋವನಿಗೆ ವಹಿಸಿಬಿಡತಕ್ಕದ್ದು. ವಾಸ್ತವದಲ್ಲಿ, ಅನೇಕವೇಳೆ ಯೆಹೋವನ ಮೇಲೆ ಹೊಂದಿಕೊಳ್ಳುವುದನ್ನು ಬಿಟ್ಟು ನಾವು ಬೇರೇನನ್ನೂ ಮಾಡಸಾಧ್ಯವಿರುವುದಿಲ್ಲ. ಆದರೆ, ವೈಯಕ್ತಿಕವಾಗಿ ನಮ್ಮಲ್ಲಿರುವ ದೇವಭಯವನ್ನು ನಾವು ತೋರಿಸಬೇಕಾಗಿರುವುದು ಈ ಸಮಯದಲ್ಲಿಯೇ. ದಾವೀದನ ಈ ಹೃತ್ಪೂರ್ವಕವಾದ ಅಭಿವ್ಯಕ್ತಿಯಿಂದ ನಾವು ಸಾಂತ್ವನ ಪಡೆಯಬಲ್ಲೆವು: “ಯೆಹೋವನು ತನ್ನ ಸದ್ಭಕ್ತರಿಗೆ [“ತನಗೆ ಭಯಪಡುವವರಿಗೆ,” NW] ಆಪ್ತಮಿತ್ರನಂತಿರುವನು.”—ಕೀರ್ತನೆ 25:14.
ಸಮೀಪಕ್ಕೆ ಬನ್ನಿರಿ ಪುಟ 243 ಪ್ಯಾರ 9
ನಮ್ಮನ್ನು ಯಾವುದೂ ‘ದೇವರ ಪ್ರೀತಿಯಿಂದ ಅಗಲಿಸಲಾರದು’
9 ನಮ್ಮ ತಾಳ್ಮೆಯನ್ನೂ ಯೆಹೋವನು ಅಮೂಲ್ಯವೆಂದೆಣಿಸುತ್ತಾನೆ. (ಮತ್ತಾಯ 24:13) ನೀವು ಯೆಹೋವನಿಗೆ ಬೆನ್ನುಹಾಕಬೇಕೆಂಬುದೇ ಸೈತಾನನ ಬಯಕೆಯೆಂಬ ವಿಷಯವನ್ನು ನೆನಪಿನಲ್ಲಿಡಿರಿ. ನೀವು ಯೆಹೋವನಿಗೆ ನಿಷ್ಠರಾಗಿರುವ ಪ್ರತಿಯೊಂದು ದಿನವು, ಸೈತಾನನ ದೂರುಗಳಿಗೆ ತಕ್ಕದಾದ ಉತ್ತರವನ್ನು ಕೊಡಲು ನೀವು ಸಹಾಯಮಾಡಿರುವ ದಿನವಾಗಿರುವುದು. (ಜ್ಞಾನೋಕ್ತಿ 27:11) ತಾಳಿಕೊಳ್ಳುವುದು ಕೆಲವೊಮ್ಮೆ ಅಷ್ಟೇನೂ ಸುಲಭಸಾಧ್ಯವಲ್ಲ. ಆರೋಗ್ಯದ ಸಮಸ್ಯೆಗಳು, ಆರ್ಥಿಕ ತಾಪತ್ರಯಗಳು, ಭಾವನಾತ್ಮಕ ಸಂಕಟ, ಮತ್ತು ಇತರ ಅಡ್ಡಿತಡೆಗಳು ಪ್ರತಿಯೊಂದು ದಿನವನ್ನೂ ಕ್ಲೇಶಕರವನ್ನಾಗಿ ಮಾಡಬಲ್ಲದು. ಕೋರಿದ ವಿಷಯಗಳು ಕೈಗೂಡಲು ತಡವಾದಾಗಲೂ ನಿರಾಶೆಯಾಗಬಲ್ಲದು. (ಜ್ಞಾನೋಕ್ತಿ 13:12) ಇಂಥ ಸವಾಲುಗಳ ಮಧ್ಯೆಯೂ ತೋರಿಸಲ್ಪಡುವ ತಾಳ್ಮೆಯು ಯೆಹೋವನಿಗೆ ಇನ್ನಷ್ಟು ಹೆಚ್ಚು ಅಮೂಲ್ಯವಾಗಿರುತ್ತದೆ. ಆದುದರಿಂದಲೇ ರಾಜ ದಾವೀದನು ತನ್ನ ಕಣ್ಣೀರನ್ನು ಒಂದು “ಬುದ್ದಲಿಯಲ್ಲಿ” ತುಂಬಿಸುವಂತೆ ಯೆಹೋವನನ್ನು ಕೇಳಿಕೊಂಡು, ಭರವಸೆಯಿಂದ ಕೂಡಿಸಿ ಹೇಳಿದ್ದು: “ಅದರ ವಿಷಯ ನಿನ್ನ ಪುಸ್ತಕದಲ್ಲಿ ಬರದದೆಯಲ್ಲಾ.” (ಕೀರ್ತನೆ 56:8) ಹೌದು, ಆತನ ಕಡೆಗೆ ನಮ್ಮ ನಿಷ್ಠೆಯನ್ನು ನಾವು ಕಾಪಾಡಿಕೊಳ್ಳುವಾಗ, ನಾವು ಸುರಿಸುವ ಕಣ್ಣೀರನ್ನೂ ತಾಳಿಕೊಳ್ಳುವ ಎಲ್ಲಾ ಕಷ್ಟವನ್ನೂ ಯೆಹೋವನು ಅಮೂಲ್ಯವೆಂದೆಣಿಸುತ್ತಾನೆ ಮತ್ತು ನೆನಪಿಡುತ್ತಾನೆ. ಅವೂ ಆತನ ದೃಷ್ಟಿಯಲ್ಲಿ ಬಹುಮೂಲ್ಯವಾಗಿರುತ್ತವೆ.
ಕಾವಲಿನಬುರುಜು22.06 ಪುಟ 18 ಪ್ಯಾರ 16-17
ಭಯಕ್ಕೆ ಪ್ರೀತಿನೇ ಮದ್ದು
16 ನಾವು ಜೀವಕ್ಕೆ ತುಂಬ ಬೆಲೆ ಕೊಡ್ತೀವಿ ಅಂತ ಸೈತಾನನಿಗೆ ಚೆನ್ನಾಗಿ ಗೊತ್ತು. ಅದನ್ನ ಕಾಪಾಡಿಕೊಳ್ಳೋಕೆ ನಾವು ಏನು ಬೇಕಾದ್ರೂ ತ್ಯಾಗ ಮಾಡ್ತೀವಿ, ಯೆಹೋವನ ಜೊತೆ ಇರೋ ಸ್ನೇಹನ ಬಿಟ್ಟುಕೊಡೋಕೂ ನಾವು ರೆಡಿ ಅಂತ ಅವನು ಅಂದುಕೊಂಡಿದ್ದಾನೆ. (ಯೋಬ 2:4, 5) ಆದ್ರೆ ಅದು ಶುದ್ಧ ಸುಳ್ಳು. ಜನರು ಸಾಮಾನ್ಯವಾಗಿ ಸಾವಿಗೆ ಹೆದರುತ್ತಾರೆ ಅಂತ ಸೈತಾನನಿಗೆ ಚೆನ್ನಾಗಿ ಗೊತ್ತು. ಅಷ್ಟೇ ಅಲ್ಲ, ಅವನಿಗೆ “ಸಾಯಿಸೋಕೆ ಶಕ್ತಿ” ಇದೆ. ಹಾಗಾಗಿ ಸಾವಿನ ಭಯನ ನಮ್ಮ ಮುಂದಿಟ್ಟು ಯೆಹೋವನಿಂದ ನಮ್ಮನ್ನ ದೂರಮಾಡೋಕೆ ಪ್ರಯತ್ನಿಸುತ್ತಾನೆ. (ಇಬ್ರಿ. 2:14, 15) ಉದಾಹರಣೆಗೆ, ಸೈತಾನನ ಕೈಗೊಂಬೆಯಾಗಿರೋ ಅಧಿಕಾರಿಗಳು ಯೆಹೋವನ ಸಾಕ್ಷಿಗಳಿಗೆ “ಸಾರೋದನ್ನ ನಿಲ್ಲಿಸದೆ ಇದ್ರೆ ಸಾಯಿಸಿಬಿಡ್ತೀವಿ” ಅಂತ ಜೀವಬೆದರಿಕೆ ಹಾಕೋ ತರ ಮಾಡಿದ್ದಾನೆ. ಇನ್ನೂ ಕೆಲವೊಮ್ಮೆ ನಮಗೆ ಏನಾದ್ರೂ ಕಾಯಿಲೆ ಬಂದು ಚಿಕಿತ್ಸೆ ತಗೊಳ್ಳೋ ಪರಿಸ್ಥಿತಿ ಬಂದಾಗ ಡಾಕ್ಟರ್ ಮತ್ತು ನಮ್ಮ ಸಂಬಂಧಿಕರು ರಕ್ತ ತಗೊಳ್ಳೋಕೆ ಹೇಳಬಹುದು. ಇನ್ನೂ ಕೆಲವರು, ಬೈಬಲ್ ಒಪ್ಪದೆ ಇರೋ ಬೇರೆ ಚಿಕಿತ್ಸೆ ಪಡಕೊಳ್ಳೋಕೆ ಒತ್ತಾಯ ಮಾಡಬಹುದು. ಹೀಗೆ ನಮ್ಮ ಜೀವ ಉಳಿಸಿಕೊಳ್ಳೋಕೆ ದೇವರ ನಿಯಮನ ಮುರಿದ್ರೂ ಪರವಾಗಿಲ್ಲ ಅಂತ ನಮಗೆ ಅನಿಸೋ ತರ ಸೈತಾನ ಮಾಡಿಬಿಡಬಹುದು.
17 ನಮಗೆ ಯಾರಿಗೂ ಸಾಯೋಕೆ ಇಷ್ಟ ಇಲ್ಲ ನಿಜ. ಆದ್ರೆ ನಾವು ಸತ್ರೂ ಯೆಹೋವ ನಮ್ಮನ್ನ ಪ್ರೀತಿಸೋದನ್ನ ನಿಲ್ಲಿಸಲ್ಲ ಅಂತ ನಮಗೆ ಗೊತ್ತು. (ರೋಮನ್ನರಿಗೆ 8:37-39 ಓದಿ.) ಯಾಕಂದ್ರೆ ಆತನ ಸೇವಕರಲ್ಲಿ ಎಷ್ಟೋ ಜನ ಈಗಾಗಲೇ ತೀರಿಹೋಗಿದ್ರೂ ಆತನ ನೆನಪಲ್ಲಿ ಅವರು ಇನ್ನೂ ಜೀವಂತವಾಗಿದ್ದಾರೆ. (ಲೂಕ 20:37, 38) ಅವರಿಗೆಲ್ಲಾ ಮತ್ತೆ ಜೀವ ಕೊಡೋಕೆ ಆತನು ತುದಿಗಾಲಲ್ಲಿ ನಿಂತಿದ್ದಾನೆ. (ಯೋಬ 14:15) ನಾವು “ಶಾಶ್ವತ ಜೀವ ಪಡ್ಕೊಳ್ಳಬೇಕು” ಅಂತ ದೊಡ್ಡ ತ್ಯಾಗನೇ ಮಾಡಿದ್ದಾನೆ. (ಯೋಹಾ. 3:16) ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ, ನಮ್ಮ ಕಾಳಜಿ ವಹಿಸ್ತಾನೆ ಅಂತ ನಮಗೆ ಗೊತ್ತು. ಹಾಗಾಗಿ ನಮಗೆ ಕಷ್ಟ ಬಂದಾಗ ಅಥವಾ ಸಾಯೋ ಪರಿಸ್ಥಿತಿ ಬಂದಾಗ ಯೆಹೋವನನ್ನು ಬಿಟ್ಟುಹೋಗೋ ಬದಲು ಅದನ್ನ ಸಹಿಸಿಕೊಳ್ಳೋಕೆ ಶಕ್ತಿ ಕೊಡಪ್ಪಾ, ಸರಿಯಾದ ನಿರ್ಣಯ ಮಾಡೋಕೆ ವಿವೇಕ ಕೊಡಪ್ಪಾ ಅಂತ ಯೆಹೋವನ ಹತ್ರ ಕೇಳಿಕೊಳ್ಳಬೇಕು. ಅದನ್ನೇ ಸಹೋದರಿ ವನಿತಾ ಮತ್ತು ಅವರ ಗಂಡ ಮಾಡಿದ್ರು.—ಕೀರ್ತ. 41:3.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 857-858
ಮುಂಚೆನೇ ತಿಳ್ಕೊಳ್ಳೋದು ಅಥವಾ ಮುಂಚೆನೇ ತೀರ್ಮಾನ ಮಾಡೋದು
ಇಸ್ಕರಿಯೂತ ಯೂದ ಮೋಸ ಮಾಡಿದ್ದು ಬೈಬಲ್ ಭವಿಷ್ಯವಾಣಿಯನ್ನ ನಿಜ ಮಾಡಿತು. ಇದ್ರಿಂದ ಯೆಹೋವ ಮತ್ತು ಯೇಸುವಿಗೆ ವಿಷಯಗಳನ್ನ ಮುಂಚೆನೇ ತಿಳ್ಕೊಳ್ಳೋ ಶಕ್ತಿಯಿದೆ ಅಂತ ಗೊತ್ತಾಗುತ್ತೆ. (ಕೀರ್ತ. 41:9; 55:12, 13; 109:8; ಅ. ಕಾ. 1:16-20) ಆದ್ರೆ ಯೂದನೇ ಇದನ್ನ ಮಾಡಬೇಕು ಅಂತ ಯೆಹೋವ ಮುಂಚೆನೇ ತೀರ್ಮಾನ ಮಾಡಿರಲಿಲ್ಲ ಅನ್ನೋದನ್ನ ನಾವು ನೆನಪಲ್ಲಿಡಬೇಕು. ಯೇಸುವಿಗೆ ಹತ್ರ ಆದವ್ರೇ ಮೋಸ ಮಾಡ್ತಾರೆ ಅಂತ ಭವಿಷ್ಯವಾಣಿಗಳು ಸೂಚಿಸಿತು. ಆದ್ರೆ ಆ ವ್ಯಕ್ತಿ ಯಾರು ಅಂತ ಹೇಳಿರಲಿಲ್ಲ. ಯೂದ ಏನು ಮಾಡಬೇಕು, ಹೇಗೆ ನಡ್ಕೊಳ್ಳಬೇಕು ಅಂತ ಯೆಹೋವ ದೇವರು ಮುಂಚೆನೇ ತೀರ್ಮಾನ ಮಾಡಿರಲಿಲ್ಲ ಅಂತ ಬೈಬಲ್ ತತ್ವಗಳಿಂದ ಗೊತ್ತಾಗುತ್ತೆ. ಪವಿತ್ರಶಕ್ತಿಯ ಸಹಾಯದಿಂದ ಅಪೊಸ್ತಲ ಪೌಲ ಹೀಗೆ ಬರೆದ: “ಯಾರ ಮೇಲೂ ನಿನ್ನ ಕೈಗಳನ್ನಿಟ್ಟು ಅವಸರದಿಂದ ನೇಮಿಸಬೇಡ. ಬೇರೆಯವ್ರ ಪಾಪದಲ್ಲಿ ಪಾಲು ತಗೊಬೇಡ. ನಿನ್ನ ನಡತೆ ಯಾವಾಗ್ಲೂ ಶುದ್ಧವಾಗಿರಲಿ.” (1 ತಿಮೊ. 5:22; 1 ತಿಮೊ. 3:6 ಹೋಲಿಸಿ.) 12 ಅಪೊಸ್ತಲರನ್ನ ಆರಿಸೋ ಮುಂಚೆ ಯೇಸು ಇಡೀ ರಾತ್ರಿ ವಿವೇಕ ಮತ್ತು ಮಾರ್ಗದರ್ಶನೆಗಾಗಿ ಯೆಹೋವನತ್ರ ಪ್ರಾರ್ಥಿಸಿದನು. (ಲೂಕ 6:12-16) ಒಂದುವೇಳೆ ಯೇಸುವಿಗೆ ಯೂದನೇ ಮೋಸ ಮಾಡ್ಬೇಕು ಅಂತ ದೇವರು ಮುಂಚೆನೇ ತೀರ್ಮಾನ ಮಾಡಿದ್ದಿದ್ರೆ, ಯೆಹೋವ ಯೇಸುವಿಗೆ ತಪ್ಪಾದ ಮಾರ್ಗದರ್ಶನೆ ಕೊಟ್ಟ ಹಾಗೆ ಇರುತ್ತಲ್ವಾ? ಯೂದ ಮಾಡಿದ ಪಾಪದಲ್ಲಿ ದೇವರು ಪಾಲು ತಗೊಂಡ ಹಾಗೆ ಇರುತ್ತಲ್ವಾ?
ಯೂದನನ್ನ ಆಯ್ಕೆ ಮಾಡೋ ಸಂದರ್ಭದಲ್ಲಿ ಅವನ ಹೃದಯದಲ್ಲಿ ಯೇಸುವಿಗೆ ಮೋಸ ಮಾಡಬೇಕು ಅನ್ನೋ ಯೋಚನೆ ಕಿಂಚಿತ್ತೂ ಇರಲಿಲ್ಲ. ಆದ್ರೆ ಅವನು ತನ್ನೊಳಗೆ ವಿಷದ ಬೇರು ಚಿಗುರೋಕೆ ಮತ್ತು ಅದು ಅವನನ್ನ ಹಾಳುಮಾಡೋಕೆ ಬಿಟ್ಟುಬಿಟ್ಟ. ಹೀಗೆ ಅವನು ದೇವರ ಮಾರ್ಗದರ್ಶನ ಪಡೆಯದೆ ಪಿಶಾಚನ ಮಾರ್ಗದರ್ಶನ ಪಡೆದು ಕಳ್ಳತನ ಮಾಡಿದ ಮತ್ತು ಯೇಸುವಿಗೆ ದ್ರೋಹ ಬಗೆದ. (ಇಬ್ರಿ. 12:14, 15; ಯೋಹಾ. 13:2; ಅ. ಕಾ. 1:24, 25; ಯಾಕೋ. 1:14, 15) ಯೂದನಲ್ಲಾದ ಬದಲಾವಣೆಯನ್ನ ಯೇಸು ಗಮನಿಸಿದ. ಅವನ ಹೃದಯದ ಆಲೋಚನೆ ತಿಳಿದುಕೊಂಡು ಯೂದನೇ ತನಗೆ ಮೋಸ ಮಾಡ್ತಾನೆ ಅಂತ ಯೇಸು ತಿಳ್ಕೊಂಡನು.—ಯೋಹಾ. 13:10, 11.