ಇಂದು ಆಶಾವಾದಕ್ಕಾಗಿ ಒಳ್ಳೆಯ ಆಧಾರ
ಇತಿಹಾಸಕಾರನೂ ಸಮಾಜಶಾಸ್ತ್ರಜ್ಞನೂ ಆದ ಏಚ್. ಜಿ. ವೆಲ್ಸ್ 1866ರಲ್ಲಿ ಜನಿಸಿ, 20ನೇ ಶತಮಾನದ ಆಲೋಚನೆಯ ಮೇಲೆ ಒಂದು ಶಕ್ತಿಶಾಲಿ ಪ್ರಭಾವವನ್ನು ಬೀರಿದನು. ಸುಯುಗವು ವಿಜ್ಞಾನದ ಪ್ರಗತಿಯೊಂದಿಗೆ ಸಹಘಟಿಸುವುದು ಎಂಬ ತನ್ನ ನಿಶ್ಚಿತಾಭಿಪ್ರಾಯವನ್ನು ಅವನು ತನ್ನ ಬರಹಗಳ ಮುಖಾಂತರ, ವಿಶದಪಡಿಸಿದನು. ಹೀಗೆ, ತನ್ನ ಧ್ಯೇಯವನ್ನು ಅಭಿವೃದ್ಧಿಪಡಿಸಲು ನಿರಂತರವಾಗಿ ಕಾರ್ಯಮಾಡಿದಂತೆ, ವೆಲ್ಸ್ಗಿದ್ದ “ಅಮಿತ ಆಶಾವಾದ”ವನ್ನು ಕಾಲಿಯರ್ಸ್ ಎನ್ಸೈಕ್ಲೊಪೀಡಿಯ ಜ್ಞಾಪಿಸಿಕೊಳ್ಳುತ್ತದೆ. ಆದರೆ IIನೇ ಲೋಕ ಯುದ್ಧವು ತಲೆದೋರಿದಾಗ ಅವನ ಆಶಾವಾದವು ನುಚ್ಚುನೂರಾಯಿತು ಎಂಬುದನ್ನು ಸಹ ಅದು ಗಮನಕ್ಕೆ ತರುತ್ತದೆ.
“ವಿಜ್ಞಾನವು ಕೆಟ್ಟದಕ್ಕೂ ಒಳ್ಳೆಯದಕ್ಕೂ ಕಾರ್ಯಮಾಡಸಾಧ್ಯವಿದೆ” ಎಂಬುದನ್ನು ವೆಲ್ಸ್ ತಿಳಿದುಕೊಂಡಾಗ, “ಅವನ ನಂಬಿಕೆಯು ಅಂತರ್ಧಾನವಾಗಿ ಹೋಯಿತು ಮತ್ತು ಅವನು ನಿರಾಶಾವಾದದಲ್ಲಿ ಮುಳುಗಿಬಿಟ್ಟನು” ಎಂದು ಚೇಂಬರ್ಸ್ ಬಯೊಗ್ರಾಫಿಕಲ್ ಡಿಕ್ಷನೆರಿ ಹೇಳುತ್ತದೆ. ಇದು ಹೀಗೇಕೆ ಆಯಿತು?
ವೆಲ್ಸ್ನ ನಂಬಿಕೆ ಹಾಗೂ ಆಶಾವಾದವು, ಸಂಪೂರ್ಣವಾಗಿ ಮಾನವ ಸಾಧನೆಗಳ ಮೇಲೆ ಆಧಾರಿತವಾಗಿದ್ದವು. ಮಾನವಕುಲವು ತನ್ನ ಅಸಾಧ್ಯಾದರ್ಶವನ್ನು ಪಡೆದುಕೊಳ್ಳಲು ಅಸಮರ್ಥವಾಗಿತ್ತೆಂಬುದನ್ನು ಅವನು ತಿಳಿದುಕೊಂಡಾಗ, ಅವನಿಗೆ ಬೇರೆ ಮಾರ್ಗವೇ ಕಾಣಲಿಲ್ಲ. ಹತಾಶೆಯು ಬೇಗನೆ ನಿರಾಶಾವಾದಕ್ಕೆ ತಿರುಗಿತು.
ಇಂದು, ಇದೇ ಕಾರಣಕ್ಕಾಗಿ ಅನೇಕ ಜನರಿಗೆ ಈ ರೀತಿಯ ಅನುಭವವಾಗುತ್ತದೆ. ಅವರು ಯುವವ್ಯಕ್ತಿಗಳಾಗಿರುವಾಗ ಆಶಾವಾದದಿಂದ ತುಂಬಿತುಳುಕುತ್ತಿರುತ್ತಾರೆ, ಆದರೆ ವೃದ್ಧರಾದಂತೆ ವಿಷಣ್ಣವಾದ ನಿರಾಶಾವಾದದಲ್ಲಿ ಮುಳುಗಿಹೋಗುತ್ತಾರೆ. ಸಾಮಾನ್ಯ ಜೀವನ ಶೈಲಿಯನ್ನು ಬಿಟ್ಟುಬಿಟ್ಟು, ಅಮಲೌಷಧ, ಸ್ವೇಚ್ಛಾಚಾರ, ಮತ್ತು ಇತರ ವಿನಾಶಕಾರಕ ಜೀವನ ಶೈಲಿಗಳಲ್ಲಿ ಒಳಗೂಡುವಂಥ ಯುವಜನರು ಸಹ ಇದ್ದಾರೆ. ಉತ್ತರವು ಏನಾಗಿದೆ? ಬೈಬಲ್ ಸಮಯಗಳ ಮುಂದಿನ ಉದಾಹರಣೆಗಳನ್ನು ಪರಿಗಣಿಸಿರಿ ಮತ್ತು ಆಶಾವಾದಕ್ಕಾಗಿ—ಗತ, ಪ್ರಸ್ತುತ ಹಾಗೂ ಭವಿಷ್ಯತ್ತಿಗೆ—ಯಾವ ಆಧಾರವಿದೆ ಎಂಬುದನ್ನು ನೋಡಿರಿ.
ಅಬ್ರಹಾಮನ ಆಶಾವಾದಕ್ಕೆ ಪ್ರತಿಫಲವು ಕೊಡಲ್ಪಟ್ಟಿತು
ಸಾ.ಶ.ಪೂ. 1943ರಲ್ಲಿ, ಅಬ್ರಹಾಮನು ಖಾರಾನ್ ಪಟ್ಟಣದಿಂದ ಹೊರಟು, ಯೂಫ್ರೇಟೀಸ್ ನದಿಯನ್ನು ದಾಟಿ, ಕಾನಾನ್ ದೇಶವನ್ನು ಪ್ರವೇಶಿಸಿದನು. ಅಬ್ರಹಾಮನು, “ನಂಬುವವರೆಲ್ಲರಿಗೂ . . . ಮೂಲತಂದೆ” ಎಂದು ವರ್ಣಿಸಲ್ಪಟ್ಟಿದ್ದಾನೆ ಮತ್ತು ಅವನು ಎಂಥ ಒಂದು ಉತ್ತಮ ಮಾದರಿಯನ್ನಿಟ್ಟನು!—ರೋಮಾಪುರ 4:11.
ಅಬ್ರಹಾಮನ ಜೊತೆಯಲ್ಲಿ, ಅಬ್ರಹಾಮನ ಸಹೋದರನ ಅನಾಥ ಪುತ್ರನಾದ ಲೋಟನು ಹಾಗೂ ಲೋಟನ ಕುಟುಂಬವಿತ್ತು. ಅನಂತರ, ಆ ದೇಶದಲ್ಲಿ ಬರಗಾಲವು ಬಂದಾಗ, ಆ ಎರಡು ಕುಟುಂಬಗಳು ಐಗುಪ್ತಕ್ಕೆ ಹೋದವು ಮತ್ತು ತಕ್ಕ ಸಮಯದಲ್ಲಿ ಅವರು ಜೊತೆಯಾಗಿ ಹಿಂದಿರುಗಿದರು. ಅಷ್ಟರೊಳಗೆ ಅಬ್ರಹಾಮನೂ ಲೋಟನೂ ಸಾಕಷ್ಟು ಸಂಪತ್ತನ್ನೂ ದನಕುರಿಗಳನ್ನೂ ಕೂಡಿಸಿಟ್ಟಿದ್ದರು. ಅವರ ಗೊಲ್ಲರ ಮಧ್ಯದಲ್ಲಿ ಜಗಳವುಂಟಾದಾಗ, ಅಬ್ರಹಾಮನು ಆರಂಭದ ಹೆಜ್ಜೆಯನ್ನು ತೆಗೆದುಕೊಂಡು, ಹೀಗೆ ಹೇಳಿದನು: “ನನಗೂ ನಿನಗೂ, ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು; ನಾವು ಸಹೋದರರಲ್ಲವೇ. ದೇಶವೆಲ್ಲಾ ನಿನ್ನೆದುರಿಗೆ ಇದೆ; ದಯವಿಟ್ಟು ನನ್ನನ್ನು ಬಿಟ್ಟು ಪ್ರತ್ಯೇಕ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುವೆನು; ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುವೆನು.”—ಆದಿಕಾಂಡ 13:8, 9.
ವಯಸ್ಸಿನಲ್ಲಿ ಹಿರಿಯವನಾಗಿದ್ದ ಅಬ್ರಹಾಮನು, ತನಗೆ ಅನುಕೂಲವಾಗುವಂಥ ರೀತಿಯಲ್ಲಿ ವಿಷಯಗಳನ್ನು ನಿರ್ದೇಶಿಸಬಹುದಿತ್ತು. ಹಾಗೂ ಲೋಟನು ತನ್ನ ಚಿಕ್ಕಪ್ಪನಿಗೆ ಗೌರವ ತೋರಿಸುತ್ತಾ, ಅಬ್ರಹಾಮನ ಆಯ್ಕೆಗೆ ಮಣಿಯಬಹುದಿತ್ತು. ಅದಕ್ಕೆ ಬದಲಾಗಿ, “ಲೋಟನು ಕಣ್ಣೆತ್ತಿ ನೋಡಲಾಗಿ ಯೊರ್ದನ್ ಹೊಳೆಯ ಸುತ್ತಲಿನ ಪ್ರದೇಶವು ಚೋಗರೂರಿನ ತನಕ ಎಲ್ಲಾ ಕಡೆಯಲ್ಲಿಯೂ ನೀರಾವರಿಯ ಸ್ಥಳವೆಂದು ತಿಳುಕೊಂಡನು. ಯೆಹೋವನು ಸೊದೋಮ್ ಗೊಮೋರ ಪಟ್ಟಣಗಳನ್ನು ನಾಶಮಾಡುವದಕ್ಕಿಂತ ಮುಂಚೆ ಆ ಸೀಮೆಯು ಯೆಹೋವನ ವನದಂತೆಯೂ ಐಗುಪ್ತದೇಶದಂತೆಯೂ ನೀರಾವರಿಯಾಗಿತ್ತು. ಆದದರಿಂದ ಲೋಟನು ಯೊರ್ದನ್ ಹೊಳೆಯ ಸುತ್ತಣ ಪ್ರದೇಶವನ್ನು ಆದುಕೊಂಡು ಮೂಡಣ ಕಡೆಗೆ ಹೊರಟನು.” ಅಂಥ ಒಂದು ಆಯ್ಕೆಯಿಂದ, ಲೋಟನಿಗೆ ಆಶಾವಾದಿಯಾಗಿರಲು ಪ್ರತಿಯೊಂದು ಕಾರಣವಿತ್ತು. ಆದರೆ ಅಬ್ರಹಾಮನ ಕುರಿತೇನು?—ಆದಿಕಾಂಡ 13:10, 11.
ಅಬ್ರಹಾಮನು ತನ್ನ ಕುಟುಂಬದ ಹಿತವನ್ನು ಗಂಡಾಂತರಕ್ಕೆ ಈಡುಮಾಡುವ ಹುಚ್ಚುಸಾಹಸವನ್ನು ಮಾಡುತ್ತಿದ್ದನೋ? ಇಲ್ಲ. ಅಬ್ರಹಾಮನ ಸಕಾರಾತ್ಮಕ ಮನೋಭಾವ ಹಾಗೂ ಉದಾರಭಾವವು ಮಹತ್ತಾದ ಪ್ರತಿಫಲಗಳನ್ನು ತಂದವು. ಯೆಹೋವನು ಅಬ್ರಹಾಮನಿಗೆ ಹೇಳಿದ್ದು: “ನೀನಿರುವ ಸ್ಥಳದಿಂದ ದಕ್ಷಿಣೋತ್ತರಪೂರ್ವಪಶ್ಚಿಮಗಳಿಗೆ ಕಣ್ಣೆತ್ತಿ ನೋಡು. ನೀನು ನೋಡುವ ಈ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು.”—ಆದಿಕಾಂಡ 13:14, 15.
ಅಬ್ರಹಾಮನ ಆಶಾವಾದಕ್ಕೆ ಒಂದು ಒಳ್ಳೆಯ ಆಧಾರವಿತ್ತು. ಅದು, “[ಅಬ್ರಹಾಮನ] ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದ”ವು ಸಿಗುವಂತೆ, ದೇವರು ಅಬ್ರಹಾಮನ ಮೂಲಕ ಒಂದು ಮಹಾ ಜನಾಂಗವನ್ನು ಉಂಟುಮಾಡುವನೆಂಬ ಆತನ ವಾಗ್ದಾನದ ಮೇಲೆ ಆಧಾರಿಸಿತ್ತು. (ಆದಿಕಾಂಡ 12:2-4, 7) “ದೇವರು ತನ್ನನ್ನು ಪ್ರೀತಿಸುವವರ ಹಿತಕ್ಕಾಗಿ ತನ್ನ ಎಲ್ಲ ಕಾರ್ಯಗಳು ಒಟ್ಟಿಗೆ ಸಹಕರಿಸುವಂತೆ ಮಾಡುತ್ತಾನೆ” (NW) ಎಂಬುದನ್ನು ತಿಳಿದುಕೊಂಡವರಾಗಿ, ನಮಗೂ ಭರವಸೆಯುಳ್ಳವರಾಗಿರಲು ಕಾರಣವಿದೆ.—ರೋಮಾಪುರ 8:28.
ಇಬ್ಬರು ಆಶಾವಾದಿ ಗೂಢಚಾರರು
400ಕ್ಕಿಂತಲೂ ಹೆಚ್ಚು ವರ್ಷಗಳ ಬಳಿಕ, ಇಸ್ರಾಯೇಲ್ನ ಜನಾಂಗವು “ಹಾಲೂ ಜೇನೂ ಹರಿಯುವ” ಕಾನಾನ್ ದೇಶವನ್ನು ಪ್ರವೇಶಿಸುವುದಕ್ಕೆ ಸಿದ್ಧವಾಗಿತ್ತು. (ವಿಮೋಚನಕಾಂಡ 3:8; ಧರ್ಮೋಪದೇಶಕಾಂಡ 6:3) ‘ಆ ದೇಶವನ್ನು ಪರೀಕ್ಷಿಸಿ ನೋಡಿ ಅವರು ಹತ್ತಿ ಹೋಗಬೇಕಾದ ದಾರಿಯ ವಿಷಯದಲ್ಲೂ ಸೇರಬೇಕಾದ ಊರುಗಳ ವಿಷಯದಲ್ಲೂ ವರ್ತಮಾನ ತಿಳಿಸಲಿ’ಕ್ಕಾಗಿ ಮೋಶೆಯು 12 ಮುಖ್ಯಸ್ಥರಿಗೆ ಆಜ್ಞೆಕೊಟ್ಟನು. (ಧರ್ಮೋಪದೇಶಕಾಂಡ 1:22; ಅರಣ್ಯಕಾಂಡ 13:2) ಎಲ್ಲ 12 ಗೂಢಚಾರರು ದೇಶದ ಏಳಿಗೆಯ ಕುರಿತಾದ ತಮ್ಮ ವರ್ಣನೆಯಲ್ಲಿ ಏಕಾಭಿಪ್ರಾಯವುಳ್ಳವರಾಗಿದ್ದರೂ ಅವರಲ್ಲಿ 10 ಮಂದಿ, ಜನರ ಹೃದಯಗಳಲ್ಲಿ ಭಯವನ್ನು ಉಂಟುಮಾಡಿದಂಥ ಒಂದು ನಿರಾಶಾವಾದದ ವರದಿಯನ್ನು ನೀಡಿದರು.—ಅರಣ್ಯಕಾಂಡ 13:31-33.
ಮತ್ತೊಂದು ಕಡೆಯಲ್ಲಿ, ಯೆಹೋಶುವ ಹಾಗೂ ಕಾಲೇಬರು ಜನರಿಗೆ ಒಂದು ಆಶಾವಾದಿ ಸಂದೇಶವನ್ನು ನೀಡಿ, ಅವರ ಭಯವನ್ನು ಕಡಿಮೆಮಾಡಲು ತಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡಿದರು. ಅವರ ಮನೋಭಾವ ಹಾಗೂ ವರದಿಯು, ಅವರನ್ನು ವಾಗ್ದತ್ತ ದೇಶಕ್ಕೆ ಕರೆದುಕೊಂಡುಹೋಗಲು ಯೆಹೋವನು ಕೊಟ್ಟ ಮಾತನ್ನು ನೆರವೇರಿಸುವ ಆತನ ಸಾಮರ್ಥ್ಯದಲ್ಲಿ ಅವರಿಗಿದ್ದ ಸಂಪೂರ್ಣ ಭರವಸೆಯನ್ನು ತೋರಿಸಿದವು—ಆದರೆ ಇದರಿಂದ ಏನೂ ಪ್ರಯೋಜನವಾಗಲಿಲ್ಲ. ಅದಕ್ಕೆ ಬದಲಾಗಿ, “ಜನಸಮೂಹದವರೆಲ್ಲರೂ [ಕೇಳಲೊಲ್ಲದೆ] ಅವರನ್ನು ಕಲ್ಲೆಸೆದು ಕೊಲ್ಲಬೇಕೆಂದು” ಮಾತಾಡಿಕೊಂಡರು.—ಅರಣ್ಯಕಾಂಡ 13:30; 14:6-10.
ಮೋಶೆಯು, ಯೆಹೋವನಲ್ಲಿ ಭರವಸೆಯನ್ನಿಡುವಂತೆ ಜನರನ್ನು ಪ್ರೇರಿಸಿದನಾದರೂ ಅವರು ಕಿವಿಗೊಡಲು ನಿರಾಕರಿಸಿದರು. ಅವರು ತಮ್ಮ ನಿರಾಶಾವಾದದ ಮನೋಭಾವದಲ್ಲಿ ಪಟ್ಟುಹಿಡಿದ ಕಾರಣ, ಇಡೀ ಜನಾಂಗವು ಅರಣ್ಯದಲ್ಲಿ 40 ವರ್ಷಗಳ ತನಕ ಅಲೆದಾಡಬೇಕಾಯಿತು. ಆ 12 ಗೂಢಚಾರರಲ್ಲಿ, ಕೇವಲ ಯೆಹೋಶುವ ಹಾಗೂ ಕಾಲೇಬರು ಆಶಾವಾದದ ಪ್ರತಿಫಲಗಳನ್ನು ಅನುಭವಿಸಿದರು. ಮೂಲಭೂತ ಸಮಸ್ಯೆಯು ಏನಾಗಿತ್ತು? ಜನರು ತಮ್ಮ ಸ್ವಂತ ವಿವೇಕದ ಮೇಲೆ ಅವಲಂಬಿಸಿದ್ದರಿಂದ, ನಂಬಿಕೆಯ ಕೊರತೆಯೇ ಸಮಸ್ಯೆಯಾಗಿತ್ತು.—ಅರಣ್ಯಕಾಂಡ 14:26-30; ಇಬ್ರಿಯ 3:7-12.
ಯೋನನ ಅನಿಶ್ಚಯತೆ
ಯೋನನು ಸಾ.ಶ.ಪೂ. ಒಂಬತ್ತನೆಯ ಶತಮಾನದಲ್ಲಿ ಜೀವಿಸಿದನು. ಅವನು, ಯೆಹೋರಾಮ IIನೆಯ ಆಳ್ವಿಕೆಯ ಸಮಯದಲ್ಲಿ, ಇಸ್ರಾಯೇಲಿನ ಹತ್ತು ಕುಲದ ರಾಜ್ಯಕ್ಕೆ ಯೆಹೋವನ ಒಬ್ಬ ನಂಬಿಗಸ್ತ ಪ್ರವಾದಿಯಾಗಿದ್ದನೆಂದು ಬೈಬಲ್ ಸೂಚಿಸುತ್ತದೆ. ಆದರೂ ಅವನು ನಿನವೆಗೆ ಹೋಗಿ ಜನರಿಗೆ ಎಚ್ಚರಿಕೆಯನ್ನು ಕೊಡಲಿಕ್ಕಾಗಿ ನೀಡಲ್ಪಟ್ಟ ಒಂದು ನಿಯುಕ್ತಿಯನ್ನು ಸ್ವೀಕರಿಸಲು ನಿರಾಕರಿಸಿದನು. ಇತಿಹಾಸಕಾರ ಜೋಸೀಫಸನು ಹೇಳುವುದೇನೆಂದರೆ, ಯೋನನು “ಅಲ್ಲಿಂದ ಓಡಿಹೋಗಿ” ಅದಕ್ಕೆ ಬದಲಾಗಿ ಯೊಪ್ಪಕ್ಕೆ ಹೋಗುವುದು “ಉತ್ತಮವೆಂದು ನೆನಸಿದನು.” ಅಲ್ಲಿ ಅವನು ತಾರ್ಷಿಷಿಗೆ, ಬಹುಶಃ ಆಧುನಿಕ ದಿನದ ಸ್ಪೆಯ್ನ್ಗೆ, ಹೋಗಲು ಹಡಗನ್ನು ಹತ್ತಿದನು. (ಯೋನ 1:1-3) ಯೋನನು ಈ ನೇಮಕದ ವಿಷಯದಲ್ಲಿ ಇಂಥ ಒಂದು ನಿರಾಶಾವಾದದ ನೋಟವನ್ನು ತೆಗೆದುಕೊಂಡ ಕಾರಣವು ಯೋನ 4:2ರಲ್ಲಿ ವಿವರಿಸಲ್ಪಟ್ಟಿದೆ.
ಯೋನನು ಕಟ್ಟಕಡೆಗೆ ತನ್ನ ಕಾರ್ಯವನ್ನು ಪೂರೈಸಲು ಒಪ್ಪಿಕೊಂಡನಾದರೂ, ನಿನವೆಯ ಜನರು ಪಶ್ಚಾತ್ತಾಪಪಟ್ಟಾಗ ಅವನು ಕೋಪಗೊಂಡನು. ಆದುದರಿಂದ ಯೆಹೋವನು, ಯೋನನು ಯಾವುದರ ನೆರಳಲ್ಲಿ ಆಶ್ರಯಪಡೆದಿದ್ದನೋ ಆ ಸೋರೆಗಿಡವನ್ನು ಒಣಗಿಸಿಬಿಡುವ ಮೂಲಕ, ಸಹಾನುಭೂತಿಯ ಒಂದು ಒಳ್ಳೆಯ ಪಾಠವನ್ನು ಅವನಿಗೆ ಕಲಿಸಿದನು. (ಯೋನ 4:1-8) ಆ ಗಿಡದ ಸತ್ತುಹೋಗುವಿಕೆಯಿಂದ ಯೋನನಿಗಾದಂಥ ದುಃಖದ ಭಾವನೆಗಳು, “ಎಡಗೈ ಬಲಗೈ ತಿಳಿಯದ” ನಿನವೆಯ 1,20,000 ಮಂದಿಯ ಕಡೆಗೆ ಯೋಗ್ಯವಾಗಿ ನಿರ್ದೇಶಿಸಲ್ಪಡಬೇಕಿತ್ತು.—ಯೋನ 4:11.
ಯೋನನ ಅನುಭವದಿಂದ ನಾವು ಏನನ್ನು ಕಲಿತುಕೊಳ್ಳಸಾಧ್ಯವಿದೆ? ಪವಿತ್ರ ಸೇವೆಯು ನಿರಾಶಾವಾದಕ್ಕಾಗಿ ಯಾವುದೇ ಆಸ್ಪದಕೊಡುವುದಿಲ್ಲ. ನಾವು ಯೆಹೋವನ ಮಾರ್ಗದರ್ಶನವನ್ನು ವಿವೇಚಿಸಿ ತಿಳಿದುಕೊಂಡು, ಅದನ್ನು ಪೂರ್ಣ ಭರವಸೆಯಿಂದ ಅನುಸರಿಸುವುದಾದರೆ, ನಾವು ಯಶಸ್ಸನ್ನು ಪಡೆದುಕೊಳ್ಳುವೆವು.—ಜ್ಞಾನೋಕ್ತಿ 3:5, 6.
ಎಡರುತೊಡರುಗಳ ಮಧ್ಯದಲ್ಲಿಯೂ ಆಶಾವಾದ
“ಕೆಟ್ಟ ನಡತೆಯುಳ್ಳವರನ್ನು ನೋಡಿ ಉರಿಗೊಳ್ಳಬೇಡ; ದುರಾಚಾರಿಗಳಿಗೋಸ್ಕರ ಹೊಟ್ಟೆಕಿಚ್ಚುಪಡಬೇಡ” ಎಂದು ರಾಜ ದಾವೀದನು ಹೇಳಿದನು. (ಕೀರ್ತನೆ 37:1) ಇಂದು ನಮ್ಮ ಸುತ್ತಮುತ್ತಲೂ ಅನ್ಯಾಯ ಹಾಗೂ ಕುಟಿಲತೆಯಿರುವುದರಿಂದ, ಅದು ನಿಶ್ಚಯವಾಗಿಯೂ ವಿವೇಕಯುಕ್ತ ಸಲಹೆಯಾಗಿದೆ.—ಪ್ರಸಂಗಿ 8:11.
ನಾವು ಅನೀತಿವಂತರ ಮೇಲೆ ಹೊಟ್ಟೆಕಿಚ್ಚುಪಡದಿದ್ದರೂ, ಮುಗ್ಧ ಜನರು ದುಷ್ಟರ ಕೈಯಲ್ಲಿ ಹಿಂಸೆಯನ್ನು ಅನುಭವಿಸುವುದನ್ನು ನಾವು ನೋಡುವಾಗ ಇಲ್ಲವೇ ನಮಗೇ ಅನ್ಯಾಯವಾಗುತ್ತಿರುವಾಗ ಹತಾಶೆಗೊಳ್ಳುವುದು ಸುಲಭ. ಇಂಥ ಅನುಭವಗಳು ಎದೆಗುಂದಿದ ಅಥವಾ ನಿರಾಶಾವಾದದ ಮನೋಭಾವವನ್ನು ಸಹ ಉಂಟುಮಾಡಬಹುದು. ಆ ರೀತಿಯಲ್ಲಿ ನಮಗನಿಸುವಾಗ, ನಾವೇನು ಮಾಡಬೇಕು? ಮೊದಲಾಗಿ, ದುಷ್ಟನು ತನ್ನ ಮೇಲೆ ಪ್ರತೀಕಾರವು ಎಂದೂ ಬರುವುದಿಲ್ಲ ಎಂದು ನಿಶ್ಚಿಂತನಾಗಿರಸಾಧ್ಯವಿಲ್ಲ ಎಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಸಾಧ್ಯವಿದೆ. ಕೀರ್ತನೆ 37, 2ನೇ ವಚನವು ನಮಗೆ ಆಶ್ವಾಸನೆಯನ್ನೀಯುತ್ತಾ ಮುಂದುವರಿಯುವುದು: “ಅವರು ಹುಲ್ಲಿನಂತೆ ಬೇಗ ಒಣಗಿಹೋಗುವರು; ಸೊಪ್ಪಿನ ಪಲ್ಯದಂತೆ ಬಾಡಿಹೋಗುವರು.”
ಅಷ್ಟುಮಾತ್ರವಲ್ಲದೆ, ನಾವು ಒಳ್ಳೆಯದನ್ನು ಮಾಡುತ್ತಾ, ಆಶಾವಾದಿಗಳಾಗಿ ಉಳಿಯುತ್ತಾ, ಯೆಹೋವನನ್ನು ಕಾಯುತ್ತಾ ಇರಸಾಧ್ಯವಿದೆ. “ಕೆಟ್ಟದ್ದಕ್ಕೆ ಹೋಗದೆ ಒಳ್ಳೆಯದನ್ನೇ ಮಾಡು; ಆಗ ನೀನು ಯಾವಾಗಲೂ [ದೇಶದಲ್ಲಿ] ವಾಸವಾಗಿರುವಿ. ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ” ಎಂದು ಕೀರ್ತನೆಗಾರನು ಮುಂದುವರಿಸಿದನು.—ಕೀರ್ತನೆ 37:27, 28.
ನಿಜ ಆಶಾವಾದವು ಗೆಲ್ಲುತ್ತದೆ!
ಹಾಗಾದರೆ, ನಮ್ಮ ಭವಿಷ್ಯತ್ತಿನ ಕುರಿತಾಗಿ ಏನು? ಬೈಬಲಿನ ಪ್ರಕಟನೆಯ ಪುಸ್ತಕವು ನಮಗೆ, “ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳ” ಬಗ್ಗೆ ತಿಳಿಸುತ್ತದೆ. ಅವುಗಳಲ್ಲಿ, ಯುದ್ಧವನ್ನು ಚಿತ್ರಿಸುವ ಒಂದು ಕೆಂಪು ಕುದುರೆಯ ಸವಾರನು, “ಭೂಮಿಯಿಂದ ಸಮಾಧಾನವನ್ನು ತೆಗೆದುಬಿಡು”ವನೆಂದು ಪ್ರಕಟಿಸಲ್ಪಟ್ಟಿದೆ.—ಪ್ರಕಟನೆ 1:1; 6:4.
Iನೇ ವಿಶ್ವ ಯುದ್ಧದ ಸಮಯದಲ್ಲಿ ಬ್ರಿಟನಿನಲ್ಲಿ ಒಂದು ಜನಪ್ರಿಯ—ಮತ್ತು ಆಶಾವಾದಿ—ಅಭಿಪ್ರಾಯವು, ಇದು ಕೊನೆಯ ಅತಿ ದೊಡ್ಡ ಯುದ್ಧವಾಗಿರುವುದು ಎಂದಾಗಿತ್ತು. 1916ರಲ್ಲಿ ಬ್ರಿಟಿಷ್ ರಾಜ್ಯನೀತಿಜ್ಞ ಡೇವಿಡ್ ಲಾಯ್ಡ್ ಜಾರ್ಜ್, ಹೆಚ್ಚು ವಾಸ್ತವ ಮನೋಭಾವವುಳ್ಳವನಾಗಿದ್ದನು. ಅವನು ಹೇಳಿದ್ದು: “ಈ ಯುದ್ಧವು, ಮುಂದಿನ ಯುದ್ಧದಂತೆ, ಯುದ್ಧವನ್ನು ಅಂತ್ಯಗೊಳಿಸುವ ಒಂದು ಯುದ್ಧವಾಗಿದೆ.” (ಓರೆಅಕ್ಷರಗಳು ನಮ್ಮವು.) ಅವನ ಮಾತುಗಳು ಸರಿಯಾಗಿದ್ದವು. IIನೇ ವಿಶ್ವ ಯುದ್ಧವು ಜನರನ್ನು ನಾಶಮಾಡುವುದರಲ್ಲಿ ಹೆಚ್ಚು ಕ್ರೂರ ವಿಧಾನಗಳ ಉತ್ಪಾದನೆಯನ್ನು ಕೇವಲ ಹೆಚ್ಚಿಸಿತಷ್ಟೆ. 50ಕ್ಕಿಂತಲೂ ಹೆಚ್ಚು ವರ್ಷಗಳ ಅನಂತರ, ಈಗಲೂ ಯುದ್ಧವು ಅಂತ್ಯಗೊಳ್ಳುವುದೆಂಬ ಯಾವ ಆಶಾಕಿರಣವೂ ಇಲ್ಲ.
ಅದೇ ಪ್ರಕಟನೆಯ ಪುಸ್ತಕದಲ್ಲಿ, ಬರಗಾಲ, ಅಂಟುರೋಗ ಮತ್ತು ಮರಣವನ್ನು ಸಂಕೇತಿಸುವ ಇತರ ಕುದುರೆ ಸವಾರರ ಬಗ್ಗೆ ನಾವು ಓದುತ್ತೇವೆ. (ಪ್ರಕಟನೆ 6:5-8) ಅವು ಈ ಸಮಯಗಳ ಸೂಚನೆಯ ಇನ್ನೂ ಹೆಚ್ಚಿನ ಮುಖಗಳಾಗಿವೆ.—ಮತ್ತಾಯ 24:3-8.
ಇವುಗಳು ನಿರಾಶಾವಾದಕ್ಕಾಗಿ ಕಾರಣವಾಗಿವೆಯೋ? ಇಲ್ಲವೇ ಇಲ್ಲ, ಏಕೆಂದರೆ ಆ ದರ್ಶನವು, “ಒಂದು ಬಿಳಿ ಕುದುರೆ”ಯ ಕುರಿತಾಗಿಯೂ ವರ್ಣಿಸುತ್ತದೆ. “ಅದರ ಮೇಲೆ ಕೂತಿದ್ದವನ ಕೈಯಲ್ಲಿ ಬಿಲ್ಲು ಇತ್ತು; ಅವನಿಗೆ ಜಯಮಾಲೆ ಕೊಡಲ್ಪಟ್ಟಿತು; ಅವನು ಜಯಿಸುತ್ತಿರುವವನಾಗಿ ಜಯಿಸುವದಕ್ಕೋಸ್ಕರ ಹೊರಟನು.” (ಪ್ರಕಟನೆ 6:2) ಇಲ್ಲಿ ನಾವು, ಎಲ್ಲ ದುಷ್ಟತನವನ್ನು ತೆಗೆದುಹಾಕುತ್ತಾ, ಲೋಕವ್ಯಾಪಕವಾಗಿ ಶಾಂತಿ ಹಾಗೂ ಸಾಮರಸ್ಯವನ್ನು ಸ್ಥಾಪಿಸಲಿಕ್ಕಾಗಿ ಸವಾರಿಮಾಡುತ್ತಿರುವ ಒಬ್ಬ ಸ್ವರ್ಗೀಯ ರಾಜನೋಪಾದಿ ಯೇಸು ಕ್ರಿಸ್ತನನ್ನು ಕಾಣುತ್ತೇವೆ.a
ನಿಯುಕ್ತ ರಾಜನೋಪಾದಿ ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ ತನ್ನ ಶಿಷ್ಯರಿಗೆ ಆ ರಾಜ್ಯಕ್ಕಾಗಿ ಪ್ರಾರ್ಥಿಸುವಂತೆ ಕಲಿಸಿದನು. ನಿಮಗೆ ಕೂಡ, “ನಮ್ಮ ತಂದೆಯೇ” ಅಥವಾ ಕರ್ತನ ಪ್ರಾರ್ಥನೆಯು ಕಲಿಸಲ್ಪಟ್ಟಿದ್ದಿರಬಹುದು. ಅದರಲ್ಲಿ ನಾವು ದೇವರ ರಾಜ್ಯವು ಬರುವಂತೆ, ಆತನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರುವಂತೆ ಪ್ರಾರ್ಥಿಸುತ್ತೇವೆ.—ಮತ್ತಾಯ 6:9-13.
ಈ ಪ್ರಸ್ತುತ ವಿಷಯಗಳ ವ್ಯವಸ್ಥೆಗೆ ತೇಪೆಹಚ್ಚಲು ಪ್ರಯತ್ನಿಸುವುದರ ಬದಲಿಗೆ, ಯೆಹೋವನು, ತನ್ನ ಮೆಸ್ಸೀಯ ಸಂಬಂಧಿತ ರಾಜನಾದ ಕ್ರಿಸ್ತ ಯೇಸುವಿನ ಮುಖಾಂತರ ಅದನ್ನು ಸಂಪೂರ್ಣವಾಗಿ ತೆಗೆದುಹಾಕುವನು. ಅದರ ಸ್ಥಾನದಲ್ಲಿ, “ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು” ಎಂದು ಯೆಹೋವನು ಹೇಳುತ್ತಾನೆ. ಸ್ವರ್ಗೀಯ ರಾಜ್ಯ ಸರಕಾರದ ಕೆಳಗೆ, ಭೂಮಿಯು ಮಾನವಕುಲಕ್ಕೆ ಒಂದು ಶಾಂತಿಭರಿತ, ಸಂತುಷ್ಟ ಮನೆಯಾಗಿ ಪರಿಣಮಿಸುವುದು, ಅಲ್ಲಿ ಜೀವನ ಹಾಗೂ ಕೆಲಸವು ಒಂದು ನಿರಂತರ ಹರ್ಷವಾಗಿರುವುದು. “ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ” ಎಂದು ಯೆಹೋವನು ಹೇಳುತ್ತಾನೆ. “ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.” (ಯೆಶಾಯ 65:17-22) ಭವಿಷ್ಯತ್ತಿಗಾಗಿರುವ ನಿಮ್ಮ ನಿರೀಕ್ಷೆಯನ್ನು ಆ ವಿಫಲವಾಗದ ವಾಗ್ದಾನದ ಮೇಲೆ ಆಧಾರಮಾಡಿಕೊಂಡರೆ, ನಿಮಗೆ ಆಶಾವಾದಿಗಳಾಗಿರಲು ಪ್ರತಿಯೊಂದು ಕಾರಣವಿರುವುದು—ಈಗಲೂ ನಿತ್ಯಕ್ಕೂ!
[ಪಾದಟಿಪ್ಪಣಿ]
a ಈ ದರ್ಶನದ ಸವಿವರ ಚರ್ಚೆಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿರುವ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದಲ್ಲಿರುವ 16ನೇ ಅಧ್ಯಾಯವನ್ನು ದಯವಿಟ್ಟು ನೋಡಿರಿ.
[ಪುಟ 4 ರಲ್ಲಿರುವ ಚಿತ್ರ]
ಏಚ್. ಜಿ. ವೆಲ್ಸ್
[ಕೃಪೆ]
Corbis-Bettmann