ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr24 ಮಾರ್ಚ್‌ ಪು. 1-13
  • “ಜೀವನ ಮತ್ತು ಸೇವೆ ಕೂಟದ ಕೈಪಿಡಿ” ರೆಫೆರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಜೀವನ ಮತ್ತು ಸೇವೆ ಕೂಟದ ಕೈಪಿಡಿ” ರೆಫೆರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2024
  • ಉಪಶೀರ್ಷಿಕೆಗಳು
  • ಮಾರ್ಚ್‌ 4-10
  • ಮಾರ್ಚ್‌ 11-17
  • ಮಾರ್ಚ್‌ 18-24
  • ಮಾರ್ಚ್‌ 25-31
  • ಏಪ್ರಿಲ್‌ 1-7
  • ಏಪ್ರಿಲ್‌ 8-14
  • ಏಪ್ರಿಲ್‌ 15-21
  • ಏಪ್ರಿಲ್‌ 22-28
  • ಏಪ್ರಿಲ್‌ 29–ಮೇ 5
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2024
mwbr24 ಮಾರ್ಚ್‌ ಪು. 1-13

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್‌ಗಳು

© 2023 Watch Tower Bible and Tract Society of Pennsylvania

ಮಾರ್ಚ್‌ 4-10

ಬೈಬಲಿನಲ್ಲಿರುವ ನಿಧಿ | ಕೀರ್ತನೆ 16-17

“ಯೆಹೋವನೇ, ಎಲ್ಲ ಒಳ್ಳೇ ವಿಷ್ಯಗಳು ನಿನ್ನಿಂದಾನೇ ಬರುತ್ತೆ”

ಕಾವಲಿನಬುರುಜು18.12 ಪುಟ 26 ಪ್ಯಾರ 11

ಯುವಜನರೇ, ಸಂತೋಷ ತುಂಬಿದ ಜೀವನ ನಡೆಸಲು ಏನು ಮಾಡಬೇಕು?

ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳಿ

11 ಕೀರ್ತನೆ 16:3 ಓದಿ. ಒಳ್ಳೇ ಸ್ನೇಹಿತರನ್ನು ಹೇಗೆ ಕಂಡುಹಿಡಿಯಬೇಕೆಂದು ದಾವೀದನಿಗೆ ಗೊತ್ತಿತ್ತು. ಯೆಹೋವನನ್ನು ಪ್ರೀತಿಸುವವರನ್ನು ಮಾತ್ರ ಆತನು ಸ್ನೇಹಿತರಾಗಿ ಆರಿಸಿಕೊಂಡನು. “ಇವರೇ ನನಗೆ ಇಷ್ಟರಾದವರು” ಅನ್ನುವುದನ್ನು ನೂತನ ಲೋಕ ಭಾಷಾಂತರ “ಇವರೇ ನನಗೆ ತುಂಬ ಸಂತೋಷ ಕೊಡುತ್ತಾರೆ” ಎಂದು ಭಾಷಾಂತರಿಸುತ್ತದೆ. ತನ್ನ ಸ್ನೇಹಿತರನ್ನು ‘ದೇವಜನರು’ ಎಂದು ಕರೆದನು. ಯಾಕೆಂದರೆ ಅವರು ಯೆಹೋವನ ಉನ್ನತವಾದ ನೈತಿಕ ಮಟ್ಟಗಳನ್ನು ಪಾಲಿಸಿದರು. ಸ್ನೇಹಿತರನ್ನು ಆರಿಸಿಕೊಳ್ಳುವುದರ ಬಗ್ಗೆ ಇನ್ನೊಬ್ಬ ಕೀರ್ತನೆಗಾರನಿಗೂ ಇದೇ ತರ ಅನಿಸಿತು. “ನಿನ್ನ ನೇಮಗಳನ್ನು ಕೈಕೊಂಡು ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸಂಗಡಿಗನು” ಅಥವಾ ಸ್ನೇಹಿತನು ಎಂದು ಆತನು ಹೇಳಿದನು. (ಕೀರ್ತ. 119:63) ನಾವು ಹಿಂದಿನ ಲೇಖನದಲ್ಲಿ ಚರ್ಚಿಸಿದಂತೆ, ಯೆಹೋವನನ್ನು ಪ್ರೀತಿಸಿ ಆತನ ಮಾತಿನಂತೆ ನಡೆಯುವವರಲ್ಲಿ ನಿಮಗೆ ಎಷ್ಟೋ ಒಳ್ಳೇ ಸ್ನೇಹಿತರು ಸಿಗುತ್ತಾರೆ. ನಿಮ್ಮ ಸ್ನೇಹಿತರು ನಿಮ್ಮ ವಯಸ್ಸಿನವರೇ ಆಗಿರಬೇಕು ಅಂತ ಏನಿಲ್ಲ.

ಕಾವಲಿನಬುರುಜು14 2/15 ಪುಟ 29 ಪ್ಯಾರ 4

‘ಯೆಹೋವನ ಪ್ರಸನ್ನತೆಯನ್ನು ನೋಡಿ’

“ನನ್ನ ಪಾಲೂ ಪಾನವೂ ಯೆಹೋವನೇ; ನೀನೇ ನನ್ನ ಸ್ವಾಸ್ತ್ಯವನ್ನು ಭದ್ರಗೊಳಿಸುತ್ತೀ. ನನಗೆ ಪ್ರಾಪ್ತವಾಗಿರುವ ಸ್ವಾಸ್ತ್ಯವು ರಮಣೀಯವಾದದ್ದು” ಎಂದು ದಾವೀದ ಹಾಡಿದನು. (ಕೀರ್ತ. 16:5, 6) ದಾವೀದನು ತನಗೆ ದೊರಕಿದ ‘ಸ್ವಾಸ್ತ್ಯಕ್ಕಾಗಿ’ ಅಂದರೆ ಯೆಹೋವನೊಂದಿಗೆ ತನಗಿರುವ ಸುಸಂಬಂಧ ಹಾಗೂ ಆತನ ಸೇವೆಮಾಡುವ ಸದವಕಾಶಕ್ಕಾಗಿ ಕೃತಜ್ಞನಾಗಿದ್ದನು. ದಾವೀದನಂತೆಯೇ, ನಾವು ಕಷ್ಟಗಳನ್ನು ಸಹಿಸಿಕೊಳ್ಳುತ್ತಿರುವ ಸಮಯದಲ್ಲೂ ಅನೇಕ ಆಧ್ಯಾತ್ಮಿಕ ಆಶೀರ್ವಾದಗಳನ್ನು ಅನುಭವಿಸುತ್ತಿರುತ್ತೇವೆ! ಆದ್ದರಿಂದ ಸತ್ಯಾರಾಧನೆಯಲ್ಲಿ ಆನಂದಿಸುತ್ತಿರೋಣ ಹಾಗೂ ಯೆಹೋವನ ಆಧ್ಯಾತ್ಮಿಕ ಆಲಯದ ಕುರಿತು ಯಾವಾಗಲೂ ಗಣ್ಯತೆಯಿಂದ ‘ಧ್ಯಾನಿಸುತ್ತಿರೋಣ.’

ಕಾವಲಿನಬುರುಜು08 2/15 ಪುಟ 3 ಪ್ಯಾರ 2-3

ಯೆಹೋವನನ್ನು ಯಾವಾಗಲೂ ನಿಮ್ಮೆದುರಿಗೆ ಇಟ್ಟುಕೊಳ್ಳಿರಿ

2 ಬೈಬಲಿನ ಸುಪರಿಚಿತ ವ್ಯಕ್ತಿಗಳಾದ ಅಬ್ರಹಾಮ, ಸಾರ, ಮೋಶೆ, ರೂತ, ದಾವೀದ, ಎಸ್ತೇರ, ಅಪೊಸ್ತಲ ಪೌಲ ಹಾಗೂ ಇತರರ ಅನುಭವಗಳಿಂದ ನಾವೆಲ್ಲರೂ ಬಹಳಷ್ಟನ್ನು ಕಲಿಯಬಲ್ಲೆವು. ಆದರೆ ಹೆಚ್ಚು ಪ್ರಖ್ಯಾತರಲ್ಲದ ವ್ಯಕ್ತಿಗಳ ವೃತ್ತಾಂತಗಳೂ ನಮಗೆ ಪ್ರಯೋಜನಕರವಾಗಿವೆ. ಬೈಬಲ್‌ ವೃತ್ತಾಂತಗಳ ಕುರಿತಾಗಿ ಧ್ಯಾನಿಸುವುದು ಕೀರ್ತನೆಗಾರನ ಈ ಮಾತುಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವಂತೆ ನಮಗೆ ಸಹಾಯಮಾಡಬಲ್ಲದು: “ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ.” (ಕೀರ್ತ. 16:8) ಈ ಮಾತುಗಳನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು?

3 ಒಬ್ಬ ಸೈನಿಕನು ಸಾಮಾನ್ಯವಾಗಿ ಅವನ ಎಡಗೈಯಲ್ಲಿ ಗುರಾಣಿಯನ್ನು ಮತ್ತು ಬಲಗೈಯಲ್ಲಿ ಖಡ್ಗವನ್ನು ಹಿಡಿಯುತ್ತಾನೆ. ಹೀಗಿರುವುದರಿಂದ, ಅವನ ಬಲಪಕ್ಕಕ್ಕೆ ಗುರಾಣಿಯ ಸಂರಕ್ಷಣೆ ಸಿಗುವುದಿಲ್ಲ. ಆದರೆ ಒಬ್ಬ ಸ್ನೇಹಿತನು ಅವನ ಬಲಗಡೆಯಲ್ಲಿದ್ದು ಹೋರಾಡಿದರೆ ಅವನಿಗೆ ಸಂರಕ್ಷಣೆ ಸಿಗುವುದು. ಒಂದುವೇಳೆ ನಾವು ಯೆಹೋವನನ್ನು ಮನಸ್ಸಿನಲ್ಲಿಟ್ಟುಕೊಂಡು ಆತನ ಚಿತ್ತವನ್ನು ಮಾಡುವಲ್ಲಿ ಆತನು ನಮ್ಮನ್ನು ಸಂರಕ್ಷಿಸುವನು. ಆದುದರಿಂದ ‘ಯೆಹೋವನನ್ನು ಯಾವಾಗಲೂ ನಮ್ಮೆದುರಿಗೇ ಇಟ್ಟು’ಕೊಳ್ಳಲು ಸಾಧ್ಯವಾಗುವಂತೆ ಬೈಬಲ್‌ ವೃತ್ತಾಂತಗಳನ್ನು ಪರಿಗಣಿಸುವುದು ನಮ್ಮ ನಂಬಿಕೆಯನ್ನು ಹೇಗೆ ಬಲಪಡಿಸಬಲ್ಲದೆಂದು ನಾವು ನೋಡೋಣ.

ಬೈಬಲಿನಲ್ಲಿರುವ ರತ್ನಗಳು

it-2-E ಪುಟ 714

ಕಣ್ಣಗುಡ್ಡೆ

‘ಇಷೋನ್‌’ ಅನ್ನೋ ಹೀಬ್ರು ಪದದ ಜೊತೆ (ಧರ್ಮೋ 32:10; ಜ್ಞಾನೋ 7:2), ಆಯಿನ್‌ (ಕಣ್ಣು) ಅನ್ನೋ ಪದನ ಸೇರಿಸಿದಾಗ “ಕಣ್ಣಿನ ಚಿಕ್ಕ ಮನುಷ್ಯ” ಅನ್ನೋ ಅರ್ಥ ಬರುತ್ತೆ. “ಇಷೋನ್‌” ಜೊತೆಗೆ “ಬತ್‌” (ಮಗಳು) ಅನ್ನೋ ಪದನ ಸೇರಿಸಿದಾಗ “ಕಣ್ಣಿನ ಮಗಳು” ಅನ್ನೋ ಅರ್ಥ ಬರುತ್ತೆ. ಇಲ್ಲಿ ಈ ಎರಡೂ ಪದಗಳು ಕಣ್ಣಗುಡ್ಡೆ ಬಗ್ಗೆನೇ ಮಾತಾಡ್ತಾ ಇದೆ. ಅದಕ್ಕೇ ಕೀರ್ತನೆ 17:8ರಲ್ಲಿ ಈ ಎರಡೂ ಪದಗಳನ್ನ ಸೇರಿಸಿ ಇಷೋನ್‌ ಬತ್‌ಆಯಿನ್‌ ಅಂತ ಬರೆದಿದ್ದಾರೆ. ಅಂದ್ರೆ ನಮ್ಮ “ಕಣ್ಣಗುಡ್ಡೆ” ಅಂತ ಅರ್ಥ. (ಅಕ್ಷರಾರ್ಥ, ಕಣ್ಣಿನ ಚಿಕ್ಕ ಮನುಷ್ಯ ಅಥವಾ ಮಗಳು) ಹಾಗಾಗಿ ಕೀರ್ತನೆ 17:8ರಲ್ಲಿ ನಮ್ಮ ಎದುರುಗಡೆ ಒಬ್ಬ ವ್ಯಕ್ತಿ ನಿಂತಾಗ ಅವನ ಕಣ್ಣಲ್ಲಿ ಕಾಣೋ ನಮ್ಮ ಚಿಕ್ಕ ಪ್ರತಿಬಿಂಬದ ಬಗ್ಗೆ ಮಾತಾಡ್ತಿರಬಹುದು.

ನಮ್ಮ ಕಣ್ಣು ತುಂಬ ಸೂಕ್ಷ್ಮ ಮತ್ತು ನಾಜೂಕು. ನಮ್ಮ ಕಣ್ಣೊಳಗೆ ಒಂದು ಚಿಕ್ಕ ಕೂದಲು ಅಥವಾ ಧೂಳಿನ ಕಣ ಹೋದ್ರೂನೂ ಅದು ಆರಾಮಾಗಿ ಗೊತ್ತಾಗುತ್ತೆ. ನಮ್ಮ ಕಣ್ಣುಗುಡ್ಡೆ ಮೇಲೆ ಕಾರ್ನಿಯ ಪಾರದರ್ಶಕ ಪದರ ಇದೆ. ಇದನ್ನ ನಾವು ತುಂಬ ಜೋಪಾನವಾಗಿ ನೋಡ್ಕೊಬೇಕಾಗುತ್ತೆ. ಅಪ್ಪಿತಪ್ಪಿ ಏನಾದ್ರೂ ತಗಲಿ ಗಾಯ ಆದ್ರೆ ಅಥವಾ ಕಾಯಿಲೆ ಬಂದು ಕಣ್ಣು ಮೊಬ್ಬಾದ್ರೆ ಎಲ್ಲ ಮಂಜುಮಂಜಾಗಿ ಕಾಣುತ್ತೆ, ನಾವು ಕರುಡರೂ ಆಗಿಬಿಡಬಹುದು. ನಾವು ಒಂದು ವಸ್ತುನ ಅಥವಾ ವಿಷ್ಯನ ಜೋಪಾನವಾಗಿ ನೋಡ್ಕೊಬೇಕು ಅಂತ ಅರ್ಥ ಮಾಡಿಸೋಕೆ ಬೈಬಲಲ್ಲಿ “ಕಣ್ಣಗುಡ್ಡೆ” ಅನ್ನೋ ಪದನ ಬಳಸಲಾಗಿದೆ. ಉದಾಹರಣೆಗೆ, ಯೆಹೋವನ ನಿಯಮಗಳನ್ನ ನಮ್ಮ ಹೃದಯದಲ್ಲಿ ಜೋಪಾನವಾಗಿ ಇಟ್ಕೊಬೇಕು. (ಜ್ಞಾನೋ 7:2) ಯೆಹೋವ ದೇವರು ಇಸ್ರಾಯೇಲ್ಯರನ್ನ ಒಬ್ಬ ಅಪ್ಪನ ತರ ತುಂಬ ಚೆನ್ನಾಗಿ ನೋಡ್ಕೊಂಡನು. ಅದಕ್ಕೇ ಧರ್ಮೋಪದೇಶಕಾಂಡ 32:10ರಲ್ಲಿ ಆತನು ಅವ್ರನ್ನ “ತನ್ನ ಕಣ್ಣುಗುಡ್ಡೆ ತರ ನೋಡ್ಕೊಂಡ” ಅಂತ ಹೇಳುತ್ತೆ. ದಾವೀದ ಕೂಡ ಯೆಹೋವನಿಗೆ ಪ್ರಾರ್ಥನೆ ಮಾಡುವಾಗ “ನಿನ್ನ ಕಣ್ಣಗುಡ್ಡೆ ಹಾಗೆ ನನ್ನನ್ನ ಕಾಪಾಡು” ಅಂತ ಕೇಳಿದ. (ಕೀರ್ತ 17:8) ಯಾಕಂದ್ರೆ ಶತ್ರುಗಳು ಆಕ್ರಮಣ ಮಾಡುವಾಗ ತಕ್ಷಣ ಅವನಿಗೆ ಯೆಹೋವನ ಸಹಾಯ ಸಿಗಬೇಕು ಅಂತ ಹಾಗೆ ಹೇಳಿದ. (ಜೆಕರ್ಯ 2:8 ಹೋಲಿಸಿ. ಅಲ್ಲಿ “ಕಣ್ಣಗುಡ್ಡೆ” ಅನ್ನೋ ಹೀಬ್ರು ಪದನ ಬಳಸಲಾಗಿದೆ.)

ಮಾರ್ಚ್‌ 11-17

ಬೈಬಲಿನಲ್ಲಿರುವ ನಿಧಿ | ಕೀರ್ತನೆ 18

“ಯೆಹೋವನೇ . . . ನನ್ನ ರಕ್ಷಕ”

ಕಾವಲಿನಬುರುಜು09-E 5/1 ಪುಟ 14 ಪ್ಯಾರ 4-5

ಯೆಹೋವ ಕೊಡೋ ಆನಂದನೇ ನಮ್ಮ ಬಲ

ಬೈಬಲ್‌ ಯೆಹೋವ ದೇವರನ್ನ “ಇಸ್ರಾಯೇಲ್ಯರ ಬಂಡೆ,” “ಕಡಿದಾದ ಬಂಡೆ,” “ಭದ್ರ ಕೋಟೆ” ಅಂತ ಕರಿಯುತ್ತೆ. (2 ಸಮುವೇಲ 23:3; ಕೀರ್ತನೆ 18:2; ಧರ್ಮೋಪದೇಶಕಾಂಡ 32:4) ಒಂದು ದೊಡ್ಡ ಬಂಡೆ ತುಂಬ ಗಟ್ಟಿಯಾಗಿರುತ್ತೆ. ಅದನ್ನ ಯಾರಿಂದನೂ ಅಲ್ಲಾಡಿಸೋಕಾಗಲ್ಲ, ಅದು ಸಂರಕ್ಷಣೆ ಕೊಡುತ್ತೆ. ಯೆಹೋವ ದೇವರೂ ಹಾಗೆನೇ. ಆತನಿಗೆ ತುಂಬ ಶಕ್ತಿ ಇದೆ ಮತ್ತು ಆತನು ನಮ್ಮನ್ನ ಕಾಪಾಡ್ತಾನೆ.

5 ಕೀರ್ತನೆ ಪುಸ್ತಕದಲ್ಲಿ ಯೆಹೋವನನ್ನ ಇನ್ನೂ ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದಾರೆ. ಇದ್ರಿಂದ ಯೆಹೋವ ಎಷ್ಟು ಒಳ್ಳೆ ವ್ಯಕ್ತಿ ಅಂತ ನಮಗೆ ಗೊತ್ತಾಗುತ್ತೆ. ಉದಾಹರಣೆಗೆ ಕೀರ್ತನೆ 84:11ರಲ್ಲಿ ಯೆಹೋವನನ್ನ “ನಮ್ಮ ಸೂರ್ಯ, ನಮ್ಮ ಗುರಾಣಿ” ಅಂತ ಹೇಳುತ್ತೆ. ಅಂದ್ರೆ ಆತನು ನಮಗೆ ಬೆಳಕು, ಜೀವ, ಶಕ್ತಿ ಮತ್ತು ಸಂರಕ್ಷಣೆ ಕೊಡ್ತಾನೆ. ಕೀರ್ತನೆ 121:5ರಲ್ಲಿ “ಯೆಹೋವ ನಿನ್ನ ಬಲಗಡೆನೇ ಇದ್ದು ನಿನ್ನನ್ನ ಸಂರಕ್ಷಿಸೋ ನೆರಳಾಗಿ ಇರ್ತಾನೆ” ಅಂತ ಹೇಳುತ್ತೆ. ಸುಡೋ ಬಿಸಿಲಿಂದ ನೆರಳು ನಮ್ಮನ್ನ ಹೇಗೆ ಕಾಪಾಡುತ್ತೋ ಅದೇ ತರ ಯೆಹೋವ ಕಷ್ಟಗಳು ಬಂದಾಗ ನಮ್ಮನ್ನ ಕಾಪಾಡ್ತಾನೆ. ಅಂದ್ರೆ ತನ್ನ “ಕೈಯ” ಅಥವಾ “ರೆಕ್ಕೆಗಳ ನೆರಳಲ್ಲಿ” ನಮ್ಮನ್ನ ಬಚ್ಚಿಡ್ತಾನೆ.—ಯೆಶಾಯ 51:16; ಕೀರ್ತನೆ 17:8; 36:7.

it-2-E ಪುಟ 1161 ಪ್ಯಾರ 7

ಸ್ವರ

ದೇವರು ತನ್ನ ಸೇವಕರ ಸ್ವರವನ್ನ ಕೇಳಿಸ್ಕೊಳ್ತಾನೆ. ಪವಿತ್ರಶಕ್ತಿಗೆ ಮತ್ತು ಸತ್ಯಕ್ಕೆ ತಕ್ಕ ಹಾಗೆ ಆರಾಧಿಸೋರ ಪ್ರಾರ್ಥನೆಯನ್ನ ಯೆಹೋವನ ಕೇಳಿಸ್ಕೊಳ್ತಾನೆ. ನಾವು ಯಾವ ಭಾಷೆಯಲ್ಲಿ ಪ್ರಾರ್ಥನೆ ಮಾಡಿದ್ರೂ ಕೇಳಿಸ್ಕೊಳ್ತಾನೆ. ನಾವು ಮನಸ್ಸಲ್ಲಿ ಪ್ರಾರ್ಥನೆ ಮಾಡಿದ್ರೂ ಯೆಹೋವನಿಗೆ ಕೇಳಿಸುತ್ತೆ. ಯಾಕಂದ್ರೆ ಆತನಿಗೆ ನಮ್ಮ ಮನಸ್ಸನ್ನ ಓದೋಕೆ ಆಗುತ್ತೆ. (ಕೀರ್ತ 66:19; 86:6; 116:1; 1ಸಮು 1:13; ನೆಹೆ 2:4) ಯಾರಾದ್ರೂ ಕಷ್ಟದಲ್ಲಿದ್ದು ಸಹಾಯ ಕೇಳಿದಾಗ ಅವ್ರ ಕೂಗನ್ನ ಯೆಹೋವ ಕೇಳಿಸ್ಕೊಳ್ತಾನೆ. ತನ್ನನ್ನ ವಿರೋಧಿಸೋರ ಮನಸ್ಸಲ್ಲಿ ಏನಿದೆ ಅಂತ ಯೆಹೋವನಿಗೆ ಗೊತ್ತು. ತನ್ನ ಸೇವಕರ ವಿರುದ್ಧ ಅವರು ಏನೆಲ್ಲ ಸಂಚು ಮಾಡ್ತಿದ್ದಾರೆ ಅನ್ನೋದೂ ಆತನಿಗೆ ಗೊತ್ತು.—ಆದಿ 21:17; ಕೀರ್ತ 55:18, 19; 69:33; 94:9-11; ಯೆರೆ 23:25.

ಕಾವಲಿನಬುರುಜು22.04 ಪುಟ 3 ಪ್ಯಾರ 1

ಚಿಂತೆಯಿಂದ ಹೊರಗೆ ಬರೋದು ಹೇಗೆ?

2. ಯೆಹೋವ ಮಾಡಿರೋ ಸಹಾಯನ ನೆನಪಿಸಿಕೊಳ್ಳಿ. ನೀವು ಕಷ್ಟದಲ್ಲಿದ್ದಾಗ ಯೆಹೋವ ನಿಮಗೆ ಸಹಾಯ ಮಾಡಿದ್ದು ನಿಮಗೆ ನೆನಪಿದೆಯಾ? ನಿಮಗೆ ಮತ್ತು ಹಿಂದಿನ ಕಾಲದ ತನ್ನ ಸೇವಕರಿಗೆ ಯೆಹೋವ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಅಂತ ಯೋಚನೆ ಮಾಡುವಾಗ ಆತನ ಮೇಲಿರೋ ನಂಬಿಕೆ, ಭರವಸೆ ಇನ್ನೂ ಜಾಸ್ತಿಯಾಗುತ್ತೆ. (ಕೀರ್ತ. 18:17-19) ಜೋಶುವ ಅನ್ನೋ ಹಿರಿಯ ಹೀಗೆ ಹೇಳ್ತಾರೆ: “ಯೆಹೋವ ನನ್ನ ಪ್ರಾರ್ಥನೆಗೆ ಉತ್ತರ ಕೊಟ್ಟಾಗೆಲ್ಲಾ ನಾನು ಅದನ್ನ ಬರೆದು ಇಡ್ತೀನಿ. ಇದು ಕಷ್ಟ ಬಂದಾಗೆಲ್ಲಾ ಯೆಹೋವ ನನಗೆ ಬೇಕಾಗಿರೋದನ್ನ ಕೊಟ್ಟಿದ್ದಾರೆ ಅಂತ ನೆನಪಿಸುತ್ತೆ.” ಯೆಹೋವ ನಮಗಾಗಿ ಮಾಡಿರೋ ವಿಷಯಗಳನ್ನ ಜ್ಞಾಪಿಸಿಕೊಂಡಾಗ ನಮಗೆ ಧೈರ್ಯ ಬರುತ್ತೆ, ಚಿಂತೆಯಿಂದ ಹೊರಗೆ ಬರೋಕೆ ಆಗುತ್ತೆ.

ಬೈಬಲಿನಲ್ಲಿರುವ ರತ್ನಗಳು

it-1-E ಪುಟ 432 ಪ್ಯಾರ 2

ಕೆರೂಬಿ

ಯೆಹೋವ ದೇವರು ಕೆರೂಬಿಯರ ಮುಖಾಂತರ ತನ್ನ ಜನ್ರ ಜೊತೆ ಮಾತಾಡ್ತಿದ್ದನು. ಮಂಜೂಷದ ಮೇಲಿದ್ದ ಇಬ್ರು ಕೆರೂಬಿಯರಿಂದ ಆತನ ಧ್ವನಿ ಕೇಳಿಸ್ತಿತ್ತು. (ವಿಮೋ 25:22; ಅರ 7:89) ಆತನು ‘ಕೆರೂಬಿಯರ ಮೇಲೆ ಅಥವಾ ಮಧ್ಯ ಕೂತಿದ್ದನು’ ಅಂತ ಬೈಬಲ್‌ ಹೇಳುತ್ತೆ. (1ಸಮು 4:4; 2ಸಮು 6:2; 2ಅರ 19:15; 1ಪೂರ್ವ 13:6; ಕೀರ್ತ 80:1; 99:1; ಯೆಶಾ 37:16) ಈ ಕೆರೂಬಿಯರು ಯೆಹೋವ ಸವಾರಿ ಮಾಡ್ತಿದ್ದ ರಥವನ್ನೂ ಸೂಚಿಸ್ತಾರೆ. (1ಪೂರ್ವ 28:18) ಈ ಕೆರೂಬಿಯರ ರೆಕ್ಕೆಗಳು ಸಂರಕ್ಷಣೆ ಕೊಡ್ತಿತ್ತು ಮತ್ತು ವೇಗವಾಗಿ ಹಾರೋಕೆ ಸಹಾಯ ಮಾಡ್ತಿತ್ತು. ಅದಕ್ಕೇ ಯೆಹೋವ ದಾವೀದನ ಸಹಾಯಕ್ಕೆ ಬಂದಾಗ ಅವನು, “ಆತನು ಕೆರೂಬಿಯ ಮೇಲೆ ಹತ್ತಿ ಹಾರುತ್ತಾ ಬಂದ,” “ದೇವದೂತನ ರೆಕ್ಕೆಗಳ ಮೇಲೆ ಸವಾರಿ ಮಾಡ್ತಾ . . . ಬಂದ” ಅಂತ ಹೇಳಿದ.—2ಸಮು 22:11; ಕೀರ್ತ 18:10.

ಮಾರ್ಚ್‌ 18-24

ಬೈಬಲಿನಲ್ಲಿರುವ ನಿಧಿ | ಕೀರ್ತನೆ 19-21

“ಆಕಾಶ ದೇವರ ಮಹಿಮೆಯನ್ನ ಸಾರಿ ಹೇಳುತ್ತೆ”

ಕಾವಲಿನಬುರುಜು04 1/1 ಪುಟ 8 ಪ್ಯಾರ 1-2

ಎಲ್ಲರೂ ಯೆಹೋವನ ಘನವನ್ನು ಪ್ರಕಟಪಡಿಸಲಿ

ಇಷಯನ ಮಗನಾದ ದಾವೀದನು ಬೇತ್ಲೆಹೇಮಿನ ಆಸುಪಾಸಿನಲ್ಲಿ ಒಬ್ಬ ಕುರುಬನಾಗಿ ಬೆಳೆದನು. ಆ ಏಕಾಂತವಾದ ಹುಲ್ಲುಗಾವಲುಗಳಲ್ಲಿ ತನ್ನ ತಂದೆಯ ಮಂದೆಗಳನ್ನು ಕಾಯುತ್ತಿದ್ದಾಗ, ಪ್ರಶಾಂತವಾದ ರಾತ್ರಿಗಳಲ್ಲಿ ಅವನೆಷ್ಟು ಬಾರಿ ತಾರೆಗಳಿಂದ ತುಂಬಿದ್ದ ವಿಸ್ತಾರವಾದ ಆಕಾಶವನ್ನು ಕಣ್ಣೆತ್ತಿ ನೋಡಿದ್ದಿರಬೇಕು! ಆದುದರಿಂದಲೇ, ಅವನ ಮನಸ್ಸಿನಲ್ಲಿ ಈ ರೀತಿಯ ಸಜೀವವಾದ ಅಭಿವ್ಯಕ್ತಿಗಳು ಹೊರಹೊಮ್ಮಿದವು, ಮತ್ತು ಪವಿತ್ರಾತ್ಮದಿಂದ ಪ್ರೇರಿಸಲ್ಪಟ್ಟವನಾಗಿ ಅವನು 19ನೆಯ ಕೀರ್ತನೆಯ ಸುಂದರವಾದ ಮಾತುಗಳನ್ನು ರಚಿಸಿ ಹಾಡಿದನು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ. ಆದರೂ ಅವುಗಳ ಪ್ರಭುತ್ವವು ಭೂಮಿಯಲ್ಲೆಲ್ಲಾ ಪ್ರಸರಿಸಿದೆ; ಅವುಗಳ ನುಡಿಗಳು ಲೋಕದ ಕಟ್ಟಕಡೆಯ ವರೆಗೂ ವ್ಯಾಪಿಸಿರುತ್ತವೆ.”—ಕೀರ್ತನೆ 19:1, 4.

2 ಯೆಹೋವನು ಭಯಚಕಿತಗೊಳಿಸುವ ರೀತಿಯಲ್ಲಿ ಸೃಷ್ಟಿಸಿರುವ ಆಕಾಶವು ಶಬ್ದವಿಲ್ಲದೆ, ಮಾತಿಲ್ಲದೆ, ಸ್ವರವಿಲ್ಲದೆ ಆತನ ಘನವನ್ನು ದಿನದಿಂದ ದಿನಕ್ಕೆ, ರಾತ್ರಿಯಿಂದ ರಾತ್ರಿಗೆ ಪ್ರಕಟಪಡಿಸುತ್ತದೆ. ಸೃಷ್ಟಿಯು ಎಡೆಬಿಡದೆ ದೇವರ ಘನತೆಯನ್ನು ಪ್ರಚುರಪಡಿಸುತ್ತದೆ, ಮತ್ತು ಭೂನಿವಾಸಿಗಳೆಲ್ಲರೂ ನೋಡುವಂತೆ “ಭೂಮಿಯಲ್ಲೆಲ್ಲಾ” ಹರಡಿಕೊಂಡಿರುವ ಈ ಮೌನ ಸಾಕ್ಷ್ಯದ ಎದುರಿನಲ್ಲಿ ನಾವೆಷ್ಟು ಅಲ್ಪಮಾತ್ರರು ಎಂಬುದು ನಮ್ಮ ಮನಸ್ಸಿಗೆ ತಟ್ಟುತ್ತದೆ. ಆದರೂ, ಸೃಷ್ಟಿಯ ಮೌನ ಸಾಕ್ಷಿಯೊಂದೇ ಸಾಲದು. ಈ ಮೌನ ಸಾಕ್ಷ್ಯಕ್ಕೆ ಮಾನವರು ತಮ್ಮ ಸ್ವರವನ್ನು ಸೇರಿಸುವಂತೆ ಪ್ರೋತ್ಸಾಹಿಸಲಾಗಿದೆ. ಒಬ್ಬ ಅನಾಮಧೇಯ ಕೀರ್ತನೆಗಾರನು ಈ ಪ್ರೇರಿತ ಮಾತುಗಳೊಂದಿಗೆ ನಂಬಿಗಸ್ತ ಆರಾಧಕರನ್ನು ಸಂಬೋಧಿಸುತ್ತಾನೆ: “ಬಲಪ್ರಭಾವಗಳು ಯೆಹೋವನವೇ ಯೆಹೋವನವೇ ಎಂದು ಹೇಳಿ ಆತನನ್ನು ಘನಪಡಿಸಿರಿ. ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ.” (ಕೀರ್ತನೆ 96:7, 8) ಯೆಹೋವನೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿರುವವರು ಆ ಪ್ರಚೋದನೆಗೆ ಪ್ರತಿಕ್ರಿಯಿಸುವುದರಲ್ಲಿ ಪುಳಕಿತಗೊಳ್ಳುತ್ತಾರೆ. ಆದರೂ, ದೇವರಿಗೆ ಘನವನ್ನು ಸಲ್ಲಿಸುವುದರಲ್ಲಿ ಏನು ಒಳಗೂಡಿದೆ?

ಕಾವಲಿನಬುರುಜು04 6/1 ಪುಟ 11 ಪ್ಯಾರ 8-10

ಸೃಷ್ಟಿಯು ದೇವರ ಘನತೆಯನ್ನು ಪ್ರಚುರಪಡಿಸುತ್ತದೆ!

8 ಇದಾದ ಬಳಿಕ, ದಾವೀದನು ಯೆಹೋವನ ಸೃಷ್ಟಿಯ ಇನ್ನೊಂದು ಅದ್ಭುತವನ್ನು ವರ್ಣಿಸುತ್ತಾನೆ: “ಅದರಲ್ಲಿ [ದೃಶ್ಯ ಆಕಾಶಗಳಲ್ಲಿ] ಆತನು ಸೂರ್ಯನಿಗೆ ಒಂದು ಡೇರೆಯನ್ನು ಕಟ್ಟಿದ್ದಾನೆ, ಮತ್ತು ವಿವಾಹದ ಕೊಠಡಿಯಿಂದ ಮದುಮಗನು ಹೊರಗೆ ಬರುವಂತೆ ಅದು ಇದೆ. ಸೂರ್ಯ ತನ್ನ ಪಥದಲ್ಲಿ ಓಡುವ ಶೂರನಂತೆ ಉಲ್ಲಾಸಪಡುತ್ತದೆ. ಅದರ ಹೋಗೋಣವು ಆಕಾಶಮಂಡಲದ ಒಂದು ಕಟ್ಟಕಡೆಯಿಂದ ಆರಂಭವಾಗಿ ಮುಕ್ತಾಯದ ಪರಿಧಿಯು ಇನ್ನೊಂದು ಕಟ್ಟಕಡೆಯಲ್ಲಿದೆ; ಅದರ ತಾಪಕ್ಕೆ ಯಾವುದೂ ಮರೆಯಾಗಿರುವುದಿಲ್ಲ.”—ಕೀರ್ತನೆ 19:4-6, NW.

9 ಬೇರೆ ನಕ್ಷತ್ರಗಳಿಗೆ ಹೋಲಿಸುವಾಗ, ಸೂರ್ಯನದ್ದು ಕೇವಲ ಮಧ್ಯಮ ಗಾತ್ರವಾಗಿದೆ. ಆದರೂ ಅದೊಂದು ಅಸಾಧಾರಣವಾದ ನಕ್ಷತ್ರವಾಗಿದ್ದು ಅದರ ಸುತ್ತಲೂ ಚಲಿಸುತ್ತಿರುವ ಗ್ರಹಗಳು ಕುಬ್ಜವಾಗಿ ತೋರುತ್ತವೆ. ಸೂರ್ಯನ ದ್ರವ್ಯರಾಶಿಯ ತೂಕವು “2 ಕೋಟಿ ಕೋಟಿಗಳಿಗೆ 13 ಸೊನ್ನೆಗಳನ್ನು ಕೂಡಿಸಿದರೆ ಎಷ್ಟಾಗುತ್ತದೊ ಅಷ್ಟು ಟನ್ನುಗಳು,” ಅಂದರೆ ನಮ್ಮ ಇಡೀ ಸೌರವ್ಯೂಹದ ದ್ರವ್ಯರಾಶಿಯ 99.9 ಪ್ರತಿಶತದಷ್ಟಾಗಿದೆ ಎಂದು ಒಂದು ಮೂಲವು ಹೇಳುತ್ತದೆ! ಅದರ ಗುರುತ್ವಾಕರ್ಷಣವು ಎಷ್ಟು ಪ್ರಬಲವಾಗಿದೆಯೆಂದರೆ, ಅದು 15 ಕೋಟಿ ಕಿಲೊಮೀಟರ್‌ ದೂರದಲ್ಲಿರುವ ಭೂಮಿಯು ತನ್ನ ಕಕ್ಷೆಯನ್ನು ಬಿಟ್ಟು ಹೊರಗೆ ಹೋಗದಂತೆ ಅಥವಾ ಒಳಗೆ ಎಳೆಯಲ್ಪಡದಂತೆಯೂ ನೋಡಿಕೊಳ್ಳುತ್ತದೆ. ಸೂರ್ಯನ ಶಕ್ತಿಯ 200 ಕೋಟಿ ಅಂಶಗಳಲ್ಲಿ ಸುಮಾರು ಒಂದಂಶ ಮಾತ್ರ ನಮ್ಮ ಗ್ರಹವನ್ನು ತಲಪುತ್ತದಾದರೂ ಅದು ಜೀವವನ್ನು ಪೋಷಿಸಲು ಸಾಕಾಗುವಷ್ಟು ಪ್ರಮಾಣದಲ್ಲಿದೆ.

10 ಕೀರ್ತನೆಗಾರನು ಸೂರ್ಯನ ಬಗ್ಗೆ ಸಾಂಕೇತಿಕ ಭಾಷೆಯಲ್ಲಿ ಮಾತಾಡುತ್ತಾ, ಅದನ್ನು ದಿನದಲ್ಲಿ ಒಂದು ದಿಗಂತದಿಂದ ಇನ್ನೊಂದು ದಿಗಂತಕ್ಕೆ ಓಡಾಡುತ್ತ, ರಾತ್ರಿಯಲ್ಲಿ “ಡೇರೆಯಲ್ಲಿ” ವಿಶ್ರಮಿಸುವ ಒಬ್ಬ “ಶೂರ”ನಂತೆ ಚಿತ್ರಿಸುತ್ತಾನೆ. ಆ ಮಹಾ ನಕ್ಷತ್ರವು ದಿಗಂತದಲ್ಲಿ ಕೆಳಗಿಳಿಯುತ್ತಾ ಹೋಗುವುದನ್ನು ಈ ಭೂಮಿಯಿಂದ ನೋಡುವಾಗ, ಅದು “ಒಂದು ಡೇರೆ”ಯೊಳಗೆ ವಿಶ್ರಾಂತಿಗಾಗಿ ಹೋಗುತ್ತಿರುವಂತೆ ಕಾಣುತ್ತದೆ. ಆದರೆ ಬೆಳಗ್ಗೆ, ಅದು “ವಿವಾಹದ ಕೊಠಡಿಯಿಂದ ಮದುಮಗನು ಹೊರಗೆ ಬರುವಂತೆ,” ತೇಜೋಮಯವಾಗಿ ಪ್ರಜ್ವಲಿಸುತ್ತಾ ಥಟ್ಟನೆ ಹೊರಬರುವಂತೆ ಕಾಣುತ್ತದೆ. ಕುರುಬನಾಗಿದ್ದ ದಾವೀದನಿಗೆ ರಾತ್ರಿಯ ವಿಪರೀತ ಚಳಿಯ ಅನುಭವವಿತ್ತು. (ಆದಿಕಾಂಡ 31:40) ಸೂರ್ಯನ ಕಿರಣಗಳು ತನ್ನನ್ನೂ ತನ್ನ ಸುತ್ತಲಿನ ಭೂಪ್ರದೇಶವನ್ನೂ ಹೇಗೆ ಶೀಘ್ರವಾಗಿ ಬೆಚ್ಚಗಾಗಿಸುತ್ತಿದ್ದವು ಎಂಬುದನ್ನು ಅವನು ಮರುಜ್ಞಾಪಿಸಿಕೊಂಡನು. ಪೂರ್ವದಿಂದ ಪಶ್ಚಿಮಕ್ಕೆ ಸೂರ್ಯವು ಮಾಡುತ್ತಿದ್ದ ಪ್ರಯಾಣದಿಂದ ಅದು ದಣಿದಿರಲಿಲ್ಲ, ಬದಲಿಗೆ “ಶೂರ”ನಂತೆ ಆ “ಪ್ರಯಾಣವನ್ನು” ಪುನರಾವರ್ತಿಸಲು ಸಿದ್ಧವಾಗಿರುತ್ತಿತ್ತು.

ಎಚ್ಚರ!95 12/8 ಪುಟ 23 ಪ್ಯಾರ 1

ನಮ್ಮ ಕಾಲದ ಅತ್ಯಂತ ಉಪೇಕ್ಷಿತ ಕಲಾಕಾರ

ನಿಸರ್ಗದಲ್ಲಿರುವ ಕಲಾ ಕೌಶಲಕ್ಕಾಗಿ ನಮ್ಮ ಗಣ್ಯತೆಯನ್ನು ನಾವು ಆಳಗೊಳಿಸುವುದು, ಯಾರ ಕೈಕೆಲಸಗಳು ನಮ್ಮ ಸುತ್ತಲೂ ಇವೆಯೋ ಆ ನಮ್ಮ ನಿರ್ಮಾಣಿಕನನ್ನು ತಿಳಿದುಕೊಳ್ಳಲು ನಮಗೆ ನೆರವಾಗಬಲ್ಲದು. ಒಂದು ಸಂದರ್ಭದಲ್ಲಿ ಯೇಸು ತನ್ನ ಶಿಷ್ಯರಿಗೆ ಗಲಿಲಾಯದ ಸುತ್ತಲೂ ಬೆಳೆಯುತ್ತಿರುವ ಕಾಡುಹೂವುಗಳ ಕಡೆಗೆ ನಿಕಟ ದೃಷ್ಟಿಯಿಡುವಂತೆ ಹೇಳಿದನು. “ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿಯಿರಿ,” ಎಂದನವನು, “ಅವು ದುಡಿಯುವದಿಲ್ಲ, ನೂಲುವದಿಲ್ಲ; ಆದಾಗ್ಯೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ.” (ಮತ್ತಾಯ 6:28, 29) ನಿಕೃಷ್ಟವಾದ ಒಂದು ಕಾಡು ಹೂವಿನ ಸೌಂದರ್ಯವು, ಮಾನವ ಕುಟುಂಬದ ಅಗತ್ಯಗಳನ್ನು ದೇವರು ಅಲಕ್ಷಿಸುವುದಿಲ್ಲವೆಂಬುದನ್ನು ನೆನಪಿಸಲು ನಮಗೆ ಸಾಧನವಾಗಿರಬಲ್ಲದು.

ಬೈಬಲಿನಲ್ಲಿರುವ ರತ್ನಗಳು

it-1-E ಪುಟ 1073

ಹೀಬ್ರು, II

ಹೀಬ್ರು ಕವಿತೆಗಳನ್ನ ಬೇರೆಬೇರೆ ಶೈಲಿಗಳಲ್ಲಿ ಬರೀತಿದ್ರು. ಅದ್ರಲ್ಲಿ ಒಂದು ಶೈಲಿ ಹೇಗಿತ್ತಂದ್ರೆ ಮೊದಲನೇ ಸಾಲಲ್ಲಿ ಒಂದು ವಿಷ್ಯ ಹೇಳಿದ್ರೆ ಎರಡನೇ ಸಾಲಲ್ಲಿ ಅದಕ್ಕೆ ಸೇರಿಸ್ಕೊಂಡು ಅಥವಾ ಅದ್ರ ವಿರುದ್ಧವಾಗಿ ಇನ್ನೊಂದು ವಿಷ್ಯ ಹೇಳ್ತಿದ್ರು. ಇನ್ನೊಂದು ಶೈಲಿ ಹೇಗಿತ್ತಂದ್ರೆ ಅದ್ರಲ್ಲಿ ಎರಡು ಸಾಲುಗಳು ಇರ್ತಿತ್ತು. ಮೊದಲನೇ ಸಾಲಲ್ಲಿ ಅರ್ಧ ವಾಕ್ಯ ಮತ್ತು ಎರಡನೇ ಸಾಲಲ್ಲಿ ಇನ್ನರ್ಧ ವಾಕ್ಯ ಇರ್ತಿತ್ತು. ಎರಡನೇ ಸಾಲನ್ನ ಓದಿದ್ರೆನೇ ಆ ವಾಕ್ಯ ಪೂರ್ತಿ ಆಗ್ತಿತ್ತು. ಇದಕ್ಕೊಂದು ಉದಾಹರಣೆ ಕೀರ್ತನೆ 19:7-9:

ಯೆಹೋವನ ನಿಯಮ ಪುಸ್ತಕದಲ್ಲಿ ಕುಂದುಕೊರತೆ ಇಲ್ಲ,

ಅದು ನವಚೈತನ್ಯ ಕೊಡುತ್ತೆ.

ಯೆಹೋವನ ಎಚ್ಚರಿಕೆಗಳಲ್ಲಿ ಭರವಸೆ ಇಡಬಹುದು,

ಅವು ಅನುಭವ ಇಲ್ಲದವನನ್ನೂ ವಿವೇಕಿಯಾಗಿ ಮಾಡುತ್ತೆ.

ಯೆಹೋವನಿಂದ ಬರೋ ಅಪ್ಪಣೆಗಳು ನ್ಯಾಯವಾಗಿವೆ,

ಅವು ಹೃದಯಕ್ಕೆ ಖುಷಿ ಕೊಡುತ್ತೆ.

ಯೆಹೋವನ ಆಜ್ಞೆಗಳು ಶುದ್ಧ,

ಅವು ಕಣ್ಣಿಗೆ ಹೊಳಪು ನೀಡುತ್ತೆ.

ಯೆಹೋವನ ಭಯ ಪವಿತ್ರ,

ಅದು ಯಾವಾಗ್ಲೂ ಇರುತ್ತೆ.

ಯೆಹೋವನ ತೀರ್ಪುಗಳು ಸತ್ಯ,

ಅವೆಲ್ಲ ನ್ಯಾಯವಾಗಿರುತ್ತೆ.

ಈ ವಚನದಲ್ಲಿ “ನವಚೈತನ್ಯ ಕೊಡುತ್ತೆ” ಮತ್ತು “ಅನುಭವ ಇಲ್ಲದವನನ್ನೂ ವಿವೇಕಿಯಾಗಿ ಮಾಡುತ್ತೆ” ಅಂತ ಹೇಳ್ತಿರೋ ಎರಡನೇ ಸಾಲುಗಳು ಅವುಗಳ ಮೊದಲನೇ ಸಾಲಿನ ಅರ್ಥವನ್ನ ಹೇಳ್ತಿದೆ. ಹೀಗೆ ಅದು ಒಂದು ಪೂರ್ತಿ ಕವಿತೆಯಾಗುತ್ತೆ.

ಮಾರ್ಚ್‌ 25-31

ಬೈಬಲಿನಲ್ಲಿರುವ ನಿಧಿ | ಕೀರ್ತನೆ 22

ಯೇಸು ಸಾಯುವಾಗ ಏನೆಲ್ಲಾ ಆಗುತ್ತೆ ಅಂತ ಬೈಬಲ್‌ ಮುಂಚೆನೇ ಹೇಳಿತ್ತು?

ಕಾವಲಿನಬುರುಜು11 8/15 ಪುಟ 15 ಪ್ಯಾರ 16

ಮೆಸ್ಸೀಯನನ್ನು ಕಂಡುಕೊಂಡರು!

16 ಮೆಸ್ಸೀಯನನ್ನು ದೇವರು ಕೈಬಿಟ್ಟಂತೆ ತೋರುವುದು. (ಕೀರ್ತನೆ 22:1 ಓದಿ.) ಈ ಪ್ರವಾದನೆಗೆ ಅನುಗುಣವಾಗಿ, ಮಧ್ಯಾಹ್ನ “ಮೂರು ಗಂಟೆಗೆ ಯೇಸು, ‘ಏಲೀ, ಏಲೀ, ಲಮಾ ಸಬಕ್ತಾನೀ?’ ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು. ಇದನ್ನು ಭಾಷಾಂತರಿಸಿದಾಗ, ‘ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ?’ ಎಂದರ್ಥ.” (ಮಾರ್ಕ 15:34) ಯೇಸುವೇನೂ ಯೆಹೋವ ದೇವರ ಮೇಲಿನ ಭರವಸೆಯನ್ನು ಕಳೆದುಕೊಂಡು ಈ ಮಾತನ್ನು ಆಡಿರಲಿಲ್ಲ. ವೈರಿಗಳ ಕೈಯಿಂದ ದೇವರು ತನ್ನನ್ನು ಈ ಸಂದರ್ಭದಲ್ಲಿ ರಕ್ಷಿಸುವುದಿಲ್ಲ ಮತ್ತು ದೇವರಿಗೆ ತನ್ನ ಸಂಪೂರ್ಣ ನಿಷ್ಠೆಯನ್ನು ತೋರಿಸುವ ಒಂದು ಸುಸಂಧರ್ಭ ಇದಾಗಿದೆಯೆಂದು ಅವನಿಗೆ ಗೊತ್ತಿತ್ತು. ಯೇಸು ಜೋರಾಗಿ ಕೂಗಿದಾಗ ಕೀರ್ತನೆ 22:1ರಲ್ಲಿನ ಪ್ರವಾದನೆ ನೆರವೇರಿತು.

ಕಾವಲಿನಬುರುಜು11 8/15 ಪುಟ 15 ಪ್ಯಾರ 13

ಮೆಸ್ಸೀಯನನ್ನು ಕಂಡುಕೊಂಡರು!

13 ಮೆಸ್ಸೀಯನನ್ನು ಅಪಹಾಸ್ಯ ಮಾಡುವರೆಂದು ದಾವೀದನು ಪ್ರವಾದನೆ ತಿಳಿಸಿದನು. (ಕೀರ್ತನೆ 22:7, 8 ಓದಿ.) ಯೇಸುವನ್ನು ಯಾತನಾ ಕಂಬದಲ್ಲಿ ಜಡಿದ ನಂತರ ಹಂಗಿಸಲಾಯಿತೆಂದು ಮತ್ತಾಯ ವರದಿಸುತ್ತಾನೆ: “ಹಾದುಹೋಗುತ್ತಿದ್ದವರು ತಮ್ಮ ತಲೆಗಳನ್ನು ಆಡಿಸುತ್ತಾ, ‘ಆಹಾ, ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟಲಿರುವವನೇ, ನಿನ್ನನ್ನು ರಕ್ಷಿಸಿಕೋ! ನೀನು ದೇವಕುಮಾರನಾಗಿರುವಲ್ಲಿ ಈ ಯಾತನಾ ಕಂಬದಿಂದ ಕೆಳಗಿಳಿದು ಬಾ!’ ಎಂದು ಅವನನ್ನು ಹಂಗಿಸಿದರು.” ಅಂತೆಯೇ ಮುಖ್ಯ ಯಾಜಕರೂ ಶಾಸ್ತ್ರಿಗಳೂ ಹಿರೀಪುರುಷರೂ ಸೇರಿ ಅವನನ್ನು ಅಪಹಾಸ್ಯಮಾಡುತ್ತಾ, “ಇವನು ಇತರರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. ಇವನು ಇಸ್ರಾಯೇಲ್ಯರ ಅರಸನು; ಈಗ ಯಾತನಾ ಕಂಬದಿಂದ ಕೆಳಗಿಳಿದು ಬರಲಿ, ಆಗ ನಾವು ಅವನಲ್ಲಿ ನಂಬಿಕೆಯಿಡುವೆವು. ಇವನು ದೇವರಲ್ಲಿ ಭರವಸೆಯಿಟ್ಟಿದ್ದಾನೆ; ಆತನಿಗೆ ಇವನು ಬೇಕಾಗಿದ್ದರೆ ಇವನನ್ನು ಕಾಪಾಡಲಿ, ಏಕೆಂದರೆ ‘ನಾನು ದೇವರ ಮಗನು’ ಎಂದು ಇವನೇ ಹೇಳಿದ್ದಾನೆ” ಎಂದರು. (ಮತ್ತಾ. 27:39-43) ಈ ಎಲ್ಲ ಅವಮಾನವನ್ನು ಯೇಸು ಶಾಂತಚಿತ್ತದಿಂದ ಸಹಿಸಿಕೊಂಡನು. ನಮ್ಮೆಲ್ಲರಿಗೂ ಉತ್ತಮ ಮಾದರಿ.

ಕಾವಲಿನಬುರುಜು11 8/15 ಪುಟ 15 ಪ್ಯಾರ 14

ಮೆಸ್ಸೀಯನನ್ನು ಕಂಡುಕೊಂಡರು!

14 ಮೆಸ್ಸೀಯನ ವಸ್ತ್ರಗಳಿಗಾಗಿ ಚೀಟು ಹಾಕಲಾಗುವುದು. “ನನ್ನ ಮೇಲ್ಹೊದಿಕೆಯನ್ನು ತಮ್ಮಲ್ಲಿ ಪಾಲುಮಾಡಿಕೊಳ್ಳುತ್ತಾರೆ; ನನ್ನ ಅಂಗಿಗೋಸ್ಕರ ಚೀಟು ಹಾಕುತ್ತಾರೆ” ಎಂದು ಕೀರ್ತನೆಗಾರ ಬರೆದನು. (ಕೀರ್ತ. 22:18) ಪ್ರವಾದನೆ ಚಾಚೂತಪ್ಪದೆ ನೆರವೇರಿತು. ರೋಮನ್‌ ಸೈನಿಕರು ಯೇಸುವನ್ನು “ಶೂಲಕ್ಕೇರಿಸಿದ ಬಳಿಕ ಅವನ ಮೇಲಂಗಿಗಳನ್ನು ಚೀಟಿಎತ್ತಿ ಹಂಚಿಕೊಂಡರು.”—ಮತ್ತಾ. 27:35; ಯೋಹಾನ 19:23, 24 ಓದಿ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು06 11/1 ಪುಟ 29 ಪ್ಯಾರ 7

ನಮ್ಮ ಪವಿತ್ರ ಕೂಟಗಳಿಗೆ ಗೌರವ ತೋರಿಸುವುದು

7 ನಮ್ಮ ಕೂಟಗಳಿಗಾಗಿ, ಸ್ಪಷ್ಟವಾಗಿ ತೋರಿಬರುವ ವಿಧಗಳಲ್ಲಿ ನಾವು ಗೌರವತೋರಿಸಬಹುದು. ಇವುಗಳಲ್ಲಿ ಒಂದು ವಿಧ, ರಾಜ್ಯ ಗೀತೆಗಳು ಹಾಡಲ್ಪಡುವಾಗ ಉಪಸ್ಥಿತರಿರುವುದೇ ಆಗಿದೆ. ಈ ಗೀತೆಗಳಲ್ಲಿ ಹೆಚ್ಚಿನವುಗಳು ಪ್ರಾರ್ಥನಾ ರೂಪದಲ್ಲಿವೆ, ಆದುದರಿಂದಲೇ ಅವುಗಳನ್ನು ಪೂಜ್ಯಭಾವದಿಂದ ಹಾಡಬೇಕು. ಕೀರ್ತನೆ 22ನ್ನು ಉಲ್ಲೇಖಿಸುತ್ತಾ, ಅಪೊಸ್ತಲ ಪೌಲನು ಯೇಸುವಿನ ಕುರಿತು ಬರೆದುದು: “ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನಗೆ ಸ್ತುತಿಪದಗಳನ್ನು ಹಾಡುವೆನು.” (ಇಬ್ರಿಯ 2:12) ಆದುದರಿಂದ ಅಧ್ಯಕ್ಷನು ಗೀತೆಯನ್ನು ಪರಿಚಯಿಸುವ ಮುಂಚೆಯೇ ನಾವು ನಮ್ಮ ಆಸನಗಳಲ್ಲಿ ಕುಳಿತುಕೊಂಡಿರಲು ಮತ್ತು ತದನಂತರ ಗೀತೆಯನ್ನು ಹಾಡುತ್ತಿರುವಾಗ ಅದರ ಪದಗಳ ಅರ್ಥದ ಮೇಲೆ ಗಮನವನ್ನು ಕೇಂದ್ರೀಕರಿಸುವ ರೂಢಿಯನ್ನು ಬೆಳೆಸಬೇಕು. ನಮ್ಮ ಹಾಡುವಿಕೆಯು ಕೀರ್ತನೆಗಾರನ ಈ ಭಾವನೆಗಳನ್ನು ಪ್ರತಿಬಿಂಬಿಸಲಿ: “ಯಾಹುವಿಗೆ ಸ್ತೋತ್ರ! ನಾನು ಯೆಹೋವನನ್ನು ಕೊಂಡಾಡುವೆನು; ಯಥಾರ್ಥರ ಕೂಟದಲ್ಲಿಯೂ ನೆರೆದ ಸಭೆಯಲ್ಲಿಯೂ ಮನಃಪೂರ್ವಕವಾಗಿ ಕೀರ್ತಿಸುವೆನು.” (ಕೀರ್ತನೆ 111:1) ಹೌದು, ಯೆಹೋವನಿಗೆ ಸ್ತುತಿಯನ್ನು ಹಾಡುವ ಕಾರಣಕ್ಕಾಗಿಯೇ ಕೂಟಗಳಿಗೆ ಬೇಗನೆ ಬರುವುದು ಮತ್ತು ಆಮೇಲೆ ಕೊನೆ ವರೆಗೂ ಉಳಿಯುವುದು ಒಂದು ಉತ್ತಮ ಸಂಗತಿಯಾಗಿದೆ.

ಕಾವಲಿನಬುರುಜು03 9/1 ಪುಟ 20 ಪ್ಯಾರ 1

“ಸಭಾಮಧ್ಯದಲ್ಲಿ” ಯೆಹೋವನನ್ನು ಸ್ತುತಿಸಿರಿ

ಆರಂಭದ ಸಮಯದಲ್ಲಿದ್ದಂತೆಯೇ ಇಂದು ಸಹ, “ಸಭಾಮಧ್ಯದಲ್ಲಿ” ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಲಿಕ್ಕಾಗಿ ಪ್ರತಿಯೊಬ್ಬ ವಿಶ್ವಾಸಿಗೂ ಒದಗಿಸುವಿಕೆಗಳು ಮಾಡಲ್ಪಟ್ಟಿವೆ. ಪ್ರತಿಯೊಬ್ಬರಿಗೂ ಲಭ್ಯಗೊಳಿಸಲ್ಪಟ್ಟಿರುವ ಒಂದು ಸದವಕಾಶವು, ಸಭಾ ಕೂಟಗಳಲ್ಲಿ ಸಭಿಕರಿಗೆ ಕೇಳಲ್ಪಡುವ ಪ್ರಶ್ನೆಗಳಿಗೆ ಉತ್ತರವಾಗಿ ಹೇಳಿಕೆಗಳನ್ನು ನೀಡುವುದೇ ಆಗಿದೆ. ಹೇಳಿಕೆಗಳನ್ನು ನೀಡುವುದರಿಂದ ಸಿಗುವ ಪ್ರಯೋಜನಗಳನ್ನು ಎಂದೂ ಕಡಿಮೆ ಅಂದಾಜುಮಾಡದಿರಿ. ಉದಾಹರಣೆಗೆ, ಸಮಸ್ಯೆಗಳನ್ನು ಹೇಗೆ ಜಯಿಸುವುದು ಅಥವಾ ಅವುಗಳಿಂದ ಹೇಗೆ ದೂರವಿರಸಾಧ್ಯವಿದೆ ಎಂಬುದನ್ನು ತೋರಿಸುವಂಥ ಹೇಳಿಕೆಗಳು, ಬೈಬಲ್‌ ಮೂಲತತ್ತ್ವಗಳನ್ನು ಅನುಸರಿಸುವ ನಮ್ಮ ಸಹೋದರರ ದೃಢನಿರ್ಧಾರವನ್ನು ಇನ್ನಷ್ಟು ಬಲಗೊಳಿಸುತ್ತವೆ. ಉಲ್ಲೇಖಿಸಲ್ಪಟ್ಟಿದ್ದರೂ ಉದ್ಧರಿಸದಂಥ ಬೈಬಲ್‌ ವಚನಗಳನ್ನು ವಿವರಿಸುವ ಅಥವಾ ವೈಯಕ್ತಿಕ ಸಂಶೋಧನೆಯ ಸಮಯದಲ್ಲಿ ಕಂಡುಕೊಂಡಿರುವ ವಿಚಾರಗಳನ್ನು ಒಳಗೂಡಿರುವಂಥ ಹೇಳಿಕೆಗಳು, ಇತರರು ಸಹ ಹೆಚ್ಚು ಉತ್ತಮವಾದ ಅಧ್ಯಯನ ರೂಢಿಗಳನ್ನು ಬೆಳೆಸಿಕೊಳ್ಳುವಂತೆ ಉತ್ತೇಜಿಸಬಹುದು.

ಏಪ್ರಿಲ್‌ 1-7

ಬೈಬಲಿನಲ್ಲಿರುವ ನಿಧಿ | ಕೀರ್ತನೆ 23-25

“ಯೆಹೋವ ನನ್ನ ಕುರುಬ”

ಕಾವಲಿನಬುರುಜು11-E 5/1 ಪುಟ 31 ಪ್ಯಾರ 3

“ಯೆಹೋವ ನನ್ನ ಕುರುಬ”

ಯೆಹೋವ ಮುಂದೆ ನಿಂತು ತನ್ನ ಕುರಿಗಳನ್ನ ನಡೆಸ್ತಾನೆ. ಕುರುಬ ಇಲ್ಲ ಅಂದ್ರೆ ಕುರಿಗಳು ದಿಕ್ಕಾಪಾಲಾಗಿ ಹೋಗಿಬಿಡುತ್ತೆ. ಅದೇ ತರ ನಮ್ಮ ಜೀವನದಲ್ಲಿ ಯೆಹೋವ ಇಲ್ಲಾಂದ್ರೆ ನಮಗೆ ಸರಿಯಾದ ದಾರಿಲಿ ನಡಿಯೋಕಾಗಲ್ಲ. (ಯೆರೆಮೀಯ 10:23) ಅದಕ್ಕೇ ದಾವೀದ, ಯೆಹೋವ ತನ್ನ ಜನ್ರನ್ನ ಒಳ್ಳೇ ಪ್ರದೇಶಗಳಿಗೆ ಕರ್ಕೊಂಡು ಹೋಗ್ತಾನೆ ಮತ್ತು ಒಳ್ಳೇ ದಾರಿಯಲ್ಲಿ ನಡಿಸ್ತಾನೆ ಅಂತ ಹೇಳಿದ. (ಕೀರ್ತನೆ 23:2, 3) ಇದ್ರಿಂದ ನಮಗೇನು ಗೊತ್ತಾಗುತ್ತೆ? ನಾವು ಯೆಹೋವನನ್ನ ಕಣ್ಮುಚ್ಚಿ ನಂಬಬಹುದು. ಯೆಹೋವ ತನ್ನ ವಾಕ್ಯದಲ್ಲಿ ಹೇಳಿರೋ ತರ ನಾವು ನಡ್ಕೊಂಡ್ರೆ ನಮ್ಮ ಜೀವನದಲ್ಲಿ ತೃಪ್ತಿ ಇರುತ್ತೆ, ನಮಗೆ ಹೊಸಬಲ ಸಿಗುತ್ತೆ, ನಾವು ಸುರಕ್ಷಿತವಾಗೂ ಇರ್ತೀವಿ.

ಕಾವಲಿನಬುರುಜು11-E 5/1 ಪುಟ 31 ಪ್ಯಾರ 4

“ಯೆಹೋವ ನನ್ನ ಕುರುಬ”

ಯೆಹೋವ ತನ್ನ ಕುರಿಗಳನ್ನ ಕಾಪಾಡ್ತಾನೆ. ಕುರುಬ ಇಲ್ಲಾಂದ್ರೆ ಕುರಿಗಳಿಗೆ ತುಂಬ ಭಯ ಆಗುತ್ತೆ ಮತ್ತು ಏನು ಮಾಡಬೇಕು ಅಂತ ಗೊತ್ತಾಗಲ್ಲ. ಅದಕ್ಕೇ ಯೆಹೋವ ತನ್ನ ಜನ್ರಿಗೆ ಎಷ್ಟೇ ಕಷ್ಟ ಬಂದ್ರೂ ಹೆದರಬೇಡಿ ಅಂತ ಹೇಳ್ತಿದ್ದಾನೆ. (ಕೀರ್ತನೆ 23:4) ಆತನು ನಮ್ಮನ್ನ ಯಾವಾಗ್ಲೂ ನೋಡ್ತಾ ಇರ್ತಾನೆ, ಸಹಾಯ ಮಾಡ್ತಾನೆ. ಕಷ್ಟಗಳನ್ನ ನಿಭಾಯಿಸೋಕೆ ನಮಗೆ ವಿವೇಕ ಮತ್ತು ಶಕ್ತಿ ಕೊಡ್ತಾನೆ.—ಫಿಲಿಪ್ಪಿ 4:13; ಯಾಕೋಬ 1:2-5.

ಕಾವಲಿನಬುರುಜು11-E 5/1 ಪುಟ 31 ಪ್ಯಾರ 5

“ಯೆಹೋವ ನನ್ನ ಕುರುಬ”

ಯೆಹೋವ ತನ್ನ ಕುರಿಗಳನ್ನ ಮೇಯಿಸ್ತಾನೆ. ಕುರಿಗಳಿಗೆ ಊಟ ಸಿಗೋದು ಕುರುಬನಿಂದ ಮಾತ್ರನೇ. ಹಾಗೇನೇ ನಮಗೆ ಆಧ್ಯಾತ್ಮಿಕ ಆಹಾರ ಅಂದ್ರೆ ಯೆಹೋವನಿಗೆ ಹತ್ರ ಆಗೋಕೆ ಬೇಕಾದ ಸಹಾಯ ಸಿಗೋದು ಯೆಹೋವನಿಂದನೇ. (ಮತ್ತಾಯ 5:3) ಅದನ್ನ ಯೆಹೋವ ನಮಗೆ ಧಾರಾಳವಾಗಿ ಕೊಡ್ತಾನೆ. (ಕೀರ್ತನೆ 23:5) ಬೈಬಲ್‌ ಮತ್ತು ಬೇರೆ ಪ್ರಕಾಶನಗಳಿಂದ ನಮ್ಮ ಜೀವನದ ಅರ್ಥ ಏನು ಅಂತ ತಿಳ್ಕೊಳ್ಳೋಕೆ, ಆತನ ಉದ್ದೇಶ ಏನು ಅಂತ ತಿಳ್ಕೊಳ್ಳೋಕೆ ಸಹಾಯ ಮಾಡಿದ್ದಾನೆ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು11 2/15 ಪುಟ 24 ಪ್ಯಾರ 1-3

ಸಂಪೂರ್ಣ ಹೃದಯದಿಂದ ನೀತಿಯನ್ನು ಪ್ರೀತಿಸಿರಿ

ಯೆಹೋವನು ತನ್ನ ವಾಕ್ಯ ಮತ್ತು ಪವಿತ್ರಾತ್ಮದ ಮೂಲಕ ತನ್ನ ಜನರನ್ನು “ನೀತಿಮಾರ್ಗದಲ್ಲಿ” ಮುನ್ನಡೆಸುತ್ತಿದ್ದಾನೆ. (ಕೀರ್ತ. 23:3) ಆದರೂ ನಾವು ಅಪರಿಪೂರ್ಣರಾದ ಕಾರಣ ಆ ಮಾರ್ಗದಿಂದ ದೂರಸರಿಯುವ ಪ್ರವೃತ್ತಿ ನಮ್ಮಲ್ಲಿದೆ. ಪುನಃ ಸರಿಯಾದ ಮಾರ್ಗಕ್ಕೆ ಹಿಂತಿರುಗಬೇಕಾದರೆ ದೃಢಸಂಕಲ್ಪ ಅಗತ್ಯ. ಇದರಲ್ಲಿ ಯಶಸ್ವಿಯಾಗಲು ಯಾವುದು ನೆರವಾಗುವುದು? ಯೇಸುವಿನಂತೆ ನಾವು ನೀತಿಯನ್ನು ಪ್ರೀತಿಸಬೇಕು.—ಇಬ್ರಿಯ 1:9 ಓದಿ.

2 “ನೀತಿಮಾರ್ಗ” ಅಂದರೇನು? ಇದು ಯೆಹೋವನ ನೀತಿಯ ಮಟ್ಟಕ್ಕೆ ಅನುಸಾರವಾದ ಜೀವನಮಾರ್ಗವೇ. ಹೀಬ್ರು ಮತ್ತು ಗ್ರೀಕ್‌ನಲ್ಲಿ ನೀತಿ ಎಂಬುದು ನೈತಿಕ ಮೂಲತತ್ತ್ವಗಳಿಗೆ ಕಟ್ಟುನಿಟ್ಟಾಗಿ ಅಂಟಿಕೊಳ್ಳುವುದಕ್ಕೆ ಸೂಚಿಸುತ್ತದೆ. ಯೆಹೋವನು “ನೀತಿಯ ನಿವಾಸವಾದ” ಕಾರಣ ಆತನ ಆರಾಧಕರು ತಾವು ಅನುಸರಿಸಬೇಕಾದ ನೀತಿಯ ಮಾರ್ಗ ಯಾವುದೆಂದು ಖಚಿತಪಡಿಸಲಿಕ್ಕಾಗಿ ಆತನೆಡೆಗೆ ನೋಡಲು ಹರ್ಷಿಸುತ್ತಾರೆ.—ಯೆರೆ. 50:7, NIBV.

3 ದೇವರ ನೀತಿಯ ಮಟ್ಟಗಳಿಗನುಸಾರ ನಡೆಯಲು ನಾವು ಸಂಪೂರ್ಣ ಹೃದಯದಿಂದ ಪ್ರಯತ್ನಿಸುವಲ್ಲಿ ಮಾತ್ರ ಆತನನ್ನು ಪೂರ್ಣವಾಗಿ ಮೆಚ್ಚಿಸುವವರಾಗುವೆವು. (ಧರ್ಮೋ. 32:4) ಇದಕ್ಕಾಗಿ ಮೊದಲು ನಾವು ದೇವರ ವಾಕ್ಯವಾದ ಬೈಬಲಿನಿಂದ ಯೆಹೋವನ ಕುರಿತು ನಮ್ಮಿಂದಾದುದೆಲ್ಲವನ್ನು ಕಲಿಯಬೇಕು. ನಾವು ಆತನ ಕುರಿತು ಹೆಚ್ಚೆಚ್ಚನ್ನು ಕಲಿಯುತ್ತಾ ದಿನದಿನವೂ ಆತನಿಗೆ ಆಪ್ತರಾದಂತೆ ಆತನ ನೀತಿಯನ್ನು ಹೆಚ್ಚೆಚ್ಚು ಪ್ರೀತಿಸುವವರಾಗುವೆವು. (ಯಾಕೋ. 4:8) ಜೀವನದಲ್ಲಿ ಪ್ರಾಮುಖ್ಯ ನಿರ್ಣಯಗಳನ್ನು ಮಾಡಬೇಕಾಗಿರುವಾಗ ದೇವಪ್ರೇರಿತ ವಾಕ್ಯದ ಮಾರ್ಗದರ್ಶನವನ್ನು ಕೂಡ ನಾವು ಸ್ವೀಕರಿಸಬೇಕು.

ಏಪ್ರಿಲ್‌ 8-14

ಬೈಬಲಿನಲ್ಲಿರುವ ನಿಧಿ | ಕೀರ್ತನೆ 26-28

ನೀತಿಯಿಂದ ನಡೆಯೋಕೆ ದಾವೀದ ಏನು ಮಾಡಿದ?

ಕಾವಲಿನಬುರುಜು04 12/1 ಪುಟ 14 ಪ್ಯಾರ 8-9

ಸಮಗ್ರತೆಯ ಮಾರ್ಗದಲ್ಲಿ ನಡೆಯಿರಿ

8 ದಾವೀದನು ಪ್ರಾರ್ಥಿಸಿದ್ದು: “ಯೆಹೋವನೇ, ನನ್ನನ್ನು ಪರೀಕ್ಷಿಸು, ಪರಿಶೀಲಿಸು; ನನ್ನ ಅಂತರಿಂದ್ರಿಯವನ್ನೂ ಹೃದಯವನ್ನೂ ಪರಿಶೋಧಿಸು.” (ಕೀರ್ತನೆ 26:2) ಈ ವಚನದಲ್ಲಿ “ಅಂತರಿಂದ್ರಿಯ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದವು, ಒಬ್ಬನ ಆಳವಾದ ಆಲೋಚನೆಗಳು ಹಾಗೂ ಭಾವನೆಗಳನ್ನು ಪ್ರತಿನಿಧಿಸುತ್ತದೆ. ಮತ್ತು ಸಾಂಕೇತಿಕ ಹೃದಯವು ಇಡೀ ಆಂತರಿಕ ವ್ಯಕ್ತಿಯನ್ನು, ಅಂದರೆ ಒಬ್ಬನ ಪ್ರಚೋದನೆ, ಅನಿಸಿಕೆಗಳು, ಹಾಗೂ ಬುದ್ಧಿಶಕ್ತಿಯನ್ನು ಸೂಚಿಸುತ್ತದೆ. ತನ್ನನ್ನು ಪರೀಕ್ಷಿಸುವಂತೆ ದಾವೀದನು ಯೆಹೋವನನ್ನು ಕೇಳಿಕೊಂಡಾಗ, ತನ್ನ ಆಂತರಿಕ ಆಲೋಚನೆಗಳು ಮತ್ತು ಭಾವನೆಗಳನ್ನು ಪರಿಶೋಧಿಸುವಂತೆ ಹಾಗೂ ಜಾಗ್ರತೆಯಿಂದ ಪರಿಶೀಲಿಸುವಂತೆ ಅವನು ಪ್ರಾರ್ಥಿಸಿದನು.

9 ತನ್ನ ಅಂತರಿಂದ್ರಿಯವನ್ನೂ ಹೃದಯವನ್ನೂ ಪರಿಶೋಧಿಸುವಂತೆ ದಾವೀದನು ಬೇಡಿಕೊಂಡನು. ನಮ್ಮ ಆಂತರಿಕ ವ್ಯಕ್ತಿತ್ವವನ್ನು ಯೆಹೋವನು ಹೇಗೆ ಪರಿಶೋಧಿಸುತ್ತಾನೆ? ದಾವೀದನು ಹಾಡಿದ್ದು: “ಯೆಹೋವನು ನನಗೆ ಆಲೋಚನೆಯನ್ನು ಹೇಳಿಕೊಡುತ್ತಾನೆ; ಆತನನ್ನು ಕೊಂಡಾಡುವೆನು. ರಾತ್ರಿಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುತ್ತದೆ.” (ಕೀರ್ತನೆ 16:7) ಇದು ಏನನ್ನು ಅರ್ಥೈಸುತ್ತದೆ? ಇದರ ಅರ್ಥ, ದೈವಿಕ ಸಲಹೆಯು ದಾವೀದನ ಆಂತರಿಕ ಭಾಗಗಳಿಗೆ ತಲಪಿತು ಮತ್ತು ಅವನ ಮನದಾಳದ ಆಲೋಚನೆಗಳು ಹಾಗೂ ಭಾವನೆಗಳನ್ನು ಸರಿಪಡಿಸುತ್ತಾ ಅಲ್ಲಿಯೇ ಉಳಿಯಿತು ಎಂದಾಗಿದೆ. ದೇವರ ವಾಕ್ಯದಿಂದ, ಆತನ ಪ್ರತಿನಿಧಿಗಳಿಂದ, ಮತ್ತು ಆತನ ಸಂಘಟನೆಯಿಂದ ಪಡೆದುಕೊಳ್ಳುವ ಸಲಹೆಯ ಕುರಿತು ನಾವು ಕೃತಜ್ಞತಾಭಾವದಿಂದ ಧ್ಯಾನಿಸುವುದಾದರೆ ಮತ್ತು ನಮ್ಮ ಅಂತರಾಳದಲ್ಲಿ ಅದು ಬೇರೂರುವಂತೆ ಅನುಮತಿಸುವುದಾದರೆ, ನಮ್ಮ ಆಂತರಿಕ ಆಲೋಚನೆಗಳು ಮತ್ತು ಭಾವನೆಗಳು ಸಹ ಸರಿಪಡಿಸಲ್ಪಡಸಾಧ್ಯವಿದೆ. ಈ ರೀತಿಯಲ್ಲಿ ನಮ್ಮನ್ನು ಪರಿಶೋಧಿಸುವಂತೆ ನಾವು ಕ್ರಮವಾಗಿ ಯೆಹೋವನಿಗೆ ಪ್ರಾರ್ಥಿಸುವುದು, ಸಮಗ್ರತೆಯಲ್ಲಿ ನಡೆಯಲು ನಮಗೆ ಸಹಾಯಮಾಡುವುದು.

ಕಾವಲಿನಬುರುಜು04 12/1 ಪುಟ 15 ಪ್ಯಾರ 12-13

ಸಮಗ್ರತೆಯ ಮಾರ್ಗದಲ್ಲಿ ನಡೆಯಿರಿ

12 ತನ್ನ ಸಮಗ್ರತೆಯನ್ನು ಬಲಪಡಿಸಿದಂಥ ಇನ್ನೊಂದು ಅಂಶವನ್ನು ಸೂಚಿಸುತ್ತಾ ದಾವೀದನು ಹೇಳಿದ್ದು: “ನಾನು ಕುಟಿಲ [“ಅಸತ್ಯ,” NW]ಸ್ವಭಾವಿಗಳ ಸಹವಾಸಮಾಡುವವನಲ್ಲ; ಕಪಟಿಗಳನ್ನು ಸೇರುವವನಲ್ಲ. ನನಗೆ ದುರ್ಜನರ ಕೂಟವು ಅಸಹ್ಯ; ದುಷ್ಟರ ಸಂಗವು ಬೇಕಿಲ್ಲ.” (ಕೀರ್ತನೆ 26:4, 5) ದಾವೀದನು ದುಷ್ಟರ ಸಂಗವನ್ನು ಮಾಡುತ್ತಿರಲಿಲ್ಲ. ಅವನು ದುಸ್ಸಹವಾಸವನ್ನು ದ್ವೇಷಿಸಿದನು.

13 ನಮ್ಮ ಕುರಿತಾಗಿ ಏನು? ನಾವು ಟೆಲಿವಿಷನ್‌ ಕಾರ್ಯಕ್ರಮಗಳು, ವಿಡಿಯೋಗಳು, ಚಲನಚಿತ್ರಗಳು, ಇಂಟರ್‌ನೆಟ್‌ ಸೈಟ್‌ಗಳು, ಅಥವಾ ಇತರ ಮಾಧ್ಯಮಗಳ ಮೂಲಕ ಅಸತ್ಯಸ್ವಭಾವಿಗಳೊಂದಿಗೆ ಸಹವಾಸಮಾಡುತ್ತೇವೋ? ನಾವು ಕಪಟಿಗಳಿಂದ ದೂರ ಇರುತ್ತೇವೋ? ಶಾಲೆಯಲ್ಲಿ ಅಥವಾ ನಮ್ಮ ಉದ್ಯೋಗದ ಸ್ಥಳದಲ್ಲಿ ಕೆಲವರು ವಂಚನಾತ್ಮಕ ಉದ್ದೇಶಗಳಿಗಾಗಿ ನಮ್ಮೊಂದಿಗೆ ಸ್ನೇಹಸಂಬಂಧವನ್ನು ಬೆಳೆಸಬಹುದು. ದೇವರ ಸತ್ಯದಲ್ಲಿ ನಡೆಯದವರೊಂದಿಗೆ ನಿಕಟ ಸಂಬಂಧಗಳನ್ನು ಬೆಸೆಯಲು ನಾವು ನಿಜವಾಗಿಯೂ ಇಷ್ಟಪಡುತ್ತೇವೋ? ಧರ್ಮಭ್ರಷ್ಟರು ತಾವು ಯಥಾರ್ಥರೆಂದು ಪ್ರತಿಪಾದಿಸುವುದಾದರೂ, ಯೆಹೋವನ ಸೇವೆಯಿಂದ ನಮ್ಮನ್ನು ದೂರ ಸೆಳೆಯುವ ತಮ್ಮ ಹೇತುವನ್ನು ಅವರು ಮರೆಮಾಚಬಹುದು. ಕ್ರೈಸ್ತ ಸಭೆಯಲ್ಲಿ ಇಬ್ಬಗೆಯ ಜೀವಿತವನ್ನು ನಡೆಸುವಂಥ ಕೆಲವರು ಇರುವಲ್ಲಿ ಆಗೇನು? ಅವರು ಸಹ ಕಪಟಿಗಳಾಗಿದ್ದಾರೆ. ಈಗ ಒಬ್ಬ ಶುಶ್ರೂಷಾ ಸೇವಕನಾಗಿ ಸೇವೆಮಾಡುತ್ತಿರುವ ಜೇಸನ್‌ ಯುವಪ್ರಾಯದವನಾಗಿದ್ದಾಗ ಅವನಿಗೆ ಇಂಥ ಸ್ನೇಹಿತರಿದ್ದರು. ಅವರ ಕುರಿತು ಅವನು ಹೀಗನ್ನುತ್ತಾನೆ: “ಒಂದು ದಿನ ಅವರಲ್ಲೊಬ್ಬನು ನನಗೆ ಹೇಳಿದ್ದು: ‘ಈಗ ನಾವು ಏನು ಮಾಡಿದರೂ ಚಿಂತೆಯಿಲ್ಲ, ಏಕೆಂದರೆ ಹೊಸ ವ್ಯವಸ್ಥೆಯು ಬರುವಾಗ ನಾವು ಹೇಗೂ ಸತ್ತುಹೋಗಿರುತ್ತೇವೆ. ನಾವು ಏನನ್ನು ಕಳೆದುಕೊಂಡಿದ್ದೇವೆ ಎಂಬುದು ನಮಗೆ ಗೊತ್ತಾಗುವುದೂ ಇಲ್ಲ.’ ಈ ರೀತಿಯ ಮಾತುಗಳು ನನ್ನನ್ನು ಜಾಗೃತಗೊಳಿಸಿದವು. ಹೊಸ ವ್ಯವಸ್ಥೆಯು ಬರುವಾಗ ನಾನು ಸತ್ತಿರಲು ಬಯಸುವುದಿಲ್ಲ.” ಇಂಥವರೊಂದಿಗಿನ ತನ್ನ ಸಹವಾಸವನ್ನು ಜೇಸನ್‌ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟನು. ಈ ವಿಷಯದಲ್ಲಿ ಅಪೊಸ್ತಲ ಪೌಲನು ಎಚ್ಚರಿಸಿದ್ದು: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” (1 ಕೊರಿಂಥ 15:33) ದುಸ್ಸಹವಾಸದಿಂದ ದೂರವಿರುವುದು ಎಷ್ಟು ಅತ್ಯಾವಶ್ಯಕವಾದದ್ದಾಗಿದೆ!

ಕಾವಲಿನಬುರುಜು04 12/1 ಪುಟ 16 ಪ್ಯಾರ 17-18

ಸಮಗ್ರತೆಯ ಮಾರ್ಗದಲ್ಲಿ ನಡೆಯಿರಿ

17 ಇಸ್ರಾಯೇಲಿನಲ್ಲಿ, ದೇವದರ್ಶನದ ಗುಡಾರ ಮತ್ತು ಯಜ್ಞಗಳಿಗಾಗಿದ್ದ ಅದರ ಯಜ್ಞವೇದಿಯು ಯೆಹೋವನ ಆರಾಧನೆಯ ಕೇಂದ್ರವಾಗಿತ್ತು. ಈ ಸ್ಥಳದಲ್ಲಿ ತಾನು ಕಂಡುಕೊಳ್ಳುವ ಸಂತೋಷವನ್ನು ವ್ಯಕ್ತಪಡಿಸುತ್ತಾ ದಾವೀದನು ಪ್ರಾರ್ಥಿಸಿದ್ದು: “ಯೆಹೋವನೇ, ನಿನ್ನ ನಿವಾಸವು ನನಗೆ ಎಷ್ಟೋ ಪ್ರಿಯ; ನಿನ್ನ ಪ್ರಭಾವಸ್ಥಾನವು ನನಗೆ ಇಷ್ಟ.”—ಕೀರ್ತನೆ 26:8.

18 ಯೆಹೋವನ ಕುರಿತು ನಾವು ಎಲ್ಲಿ ಕಲಿತುಕೊಳ್ಳುತ್ತೇವೋ ಅಂಥ ಸ್ಥಳಗಳಲ್ಲಿ ಕೂಡಿಬರುವುದು ನಮಗೆ ಪ್ರಿಯವಾಗಿದೆಯೋ? ಪ್ರತಿಯೊಂದು ರಾಜ್ಯ ಸಭಾಗೃಹ ಹಾಗೂ ಅದರ ಆಧ್ಯಾತ್ಮಿಕ ಉಪದೇಶದ ನಿಯತ ಕಾರ್ಯಕ್ರಮವು, ಒಂದು ಸಮುದಾಯದಲ್ಲಿ ಸತ್ಯಾರಾಧನೆಯ ಕೇಂದ್ರಭಾಗವಾಗಿ ಕಾರ್ಯನಡಿಸುತ್ತದೆ. ಇದಕ್ಕೆ ಕೂಡಿಸಿ, ನಮಗೆ ವಾರ್ಷಿಕ ಅಧಿವೇಶನಗಳು, ಸರ್ಕಿಟ್‌ ಸಮ್ಮೇಳನಗಳು ಮತ್ತು ವಿಶೇಷ ಸಮ್ಮೇಳನ ದಿನಗಳು ಇರುತ್ತವೆ. ಇಂಥ ಕೂಟಗಳಲ್ಲಿ ಯೆಹೋವನ “ಕಟ್ಟಳೆಗಳ” ಕುರಿತು ಚರ್ಚಿಸಲಾಗುತ್ತದೆ. ಒಂದುವೇಳೆ ನಾವು ಅವುಗಳನ್ನು “ಬಹುಪ್ರಿಯವಾಗಿ” ಪರಿಗಣಿಸಲು ಕಲಿಯುವಲ್ಲಿ, ನಾವು ಅತ್ಯಾಸಕ್ತಿಯಿಂದ ಕೂಟಗಳಿಗೆ ಹಾಜರಾಗುವೆವು ಮತ್ತು ಕೂಟಗಳಲ್ಲಿರುವಾಗ ನಿಕಟ ಗಮನವನ್ನು ಕೊಡುವೆವು. (ಕೀರ್ತನೆ 119:167) ನಮ್ಮ ವೈಯಕ್ತಿಕ ಹಿತಕ್ಷೇಮದಲ್ಲಿ ಆಸಕ್ತರಾಗಿದ್ದು, ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮಾರ್ಗದಲ್ಲೇ ಉಳಿಯುವಂತೆ ನಮಗೆ ಸಹಾಯಮಾಡುವಂಥ ಜೊತೆವಿಶ್ವಾಸಿಗಳೊಂದಿಗೆ ಇರುವುದು ಎಷ್ಟು ಚೈತನ್ಯದಾಯಕವಾಗಿದೆ!—ಇಬ್ರಿಯ 10:24, 25.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು06 8/1 ಪುಟ 20 ಪ್ಯಾರ 15

ಕಷ್ಟದಲ್ಲಿದ್ದವನನ್ನು ಯೆಹೋವನು ಬಿಡಿಸುತ್ತಾನೆ

15 ಕೀರ್ತನೆಗಾರನಾದ ದಾವೀದನು ಹಾಡಿದ್ದು: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” (ಕೀರ್ತನೆ 27:10) ಯೆಹೋವನ ಪ್ರೀತಿಯು ಯಾವುದೇ ಮಾನವ ತಂದೆತಾಯಿಯ ಪ್ರೀತಿಗಿಂತಲೂ ಎಷ್ಟೋ ಹೆಚ್ಚಿನದ್ದೆಂಬುದನ್ನು ತಿಳಿಯುವುದು ಎಷ್ಟು ಸಾಂತ್ವನಕರ! ತಂದೆ ಇಲ್ಲವೆ ತಾಯಿ ನಿಮ್ಮನ್ನು ತ್ಯಜಿಸಿದ್ದರಿಂದ, ದುರುಪಚರಿಸಿದ್ದರಿಂದ ಇಲ್ಲವೆ ತೊರೆದುಬಿಟ್ಟದ್ದರಿಂದ ನಿಮಗೆ ಎಷ್ಟೇ ನೋವಾಗಿರುವುದಾದರೂ, ಇದು ಯೆಹೋವನಿಗೆ ನಿಮ್ಮ ಬಗ್ಗೆ ಇರುವ ಅಪಾರ ಕಾಳಜಿಯನ್ನು ಕಿಂಚಿತ್ತೂ ಬಾಧಿಸುವುದಿಲ್ಲ. (ರೋಮಾಪುರ 8:38, 39) ದೇವರು ಯಾರನ್ನು ಪ್ರೀತಿಸುತ್ತಾನೊ ಅವರನ್ನು ಸೆಳೆಯುತ್ತಾನೆ ಎಂಬುದನ್ನು ನೆನಪಿಡಿರಿ. (ಯೋಹಾನ 3:16; 6:44) ಮನುಷ್ಯರು ನಿಮ್ಮನ್ನು ಹೇಗೆಯೇ ಉಪಚರಿಸಲಿ, ನಿಮ್ಮ ಸ್ವರ್ಗೀಯ ತಂದೆಯಾದರೊ ನಿಮ್ಮನ್ನು ಬಹಳಷ್ಟು ಪ್ರೀತಿಸುತ್ತಾನೆ!

ಏಪ್ರಿಲ್‌ 15-21

ಬೈಬಲಿನಲ್ಲಿರುವ ನಿಧಿ | ಕೀರ್ತನೆ 29-31

ಶಿಸ್ತು—ಯೆಹೋವ ಪ್ರೀತಿ ತೋರಿಸೋ ಒಂದು ವಿಧ

it-1-E ಪುಟ 802 ಪ್ಯಾರ 3

ಮುಖ

ಮುಖವನ್ನ ಮರೆಮಾಡ್ಕೊ ಅನ್ನೋ ಪದಕ್ಕೆ ತುಂಬ ಅರ್ಥಗಳಿದೆ. ಯೆಹೋವ ದೇವರು ಒಬ್ಬ ವ್ಯಕ್ತಿಯ ಕಡೆಯಿಂದ ತನ್ನ ಮುಖನ ತಿರುಗಿಸ್ಕೊಂಡ್ರೆ ಆ ವ್ಯಕ್ತಿ ಆತನ ಮೆಚ್ಚಿಗೆ ಕಳ್ಕೊಂಡಿದ್ದಾನೆ ಅಂತ ಅರ್ಥ. ಉದಾಹರಣೆಗೆ ಯೆಹೋವನ ಮಾತನ್ನ ಕೇಳದೇ ಇದ್ದಾಗ ಇಸ್ರಾಯೇಲ್ಯರು ಯೆಹೋವನ ಮೆಚ್ಚಿಗೆಯನ್ನ ಕಳ್ಕೊಂಡ್ರು. (ಯೋಬ 34:29; ಕೀರ್ತ 30:5-8; ಯೆಶಾ 54:8; 59:2) ಕೆಲವೊಮ್ಮೆ ಯೆಹೋವ ತನ್ನ ಮುಖವನ್ನ ತಿರುಗಿಸ್ಕೊಂಡಿದ್ದಾನೆ ಅನ್ನೋ ಪದಕ್ಕೆ ಆತನು ಸರಿಯಾದ ಸಮಯಕ್ಕೋಸ್ಕರ ಕಾಯ್ತಾ ಇದ್ದಾನೆ ಅನ್ನೋ ಅರ್ಥನೂ ಇದೆ. (ಕೀರ್ತ 13:1-3) ದಾವೀದ ಕೂಡ “ನನ್ನ ಪಾಪಗಳ ಕಡೆಯಿಂದ ನಿನ್ನ ಮುಖವನ್ನ ತಿರುಗಿಸ್ಕೊ” ಅಂತ ಯೆಹೋವನಿಗೆ ಹೇಳಿದ. ಅಂದ್ರೆ ‘ನನ್ನ ಪಾಪಗಳನ್ನ ಕ್ಷಮಿಸು’ ಅಂತ ಯೆಹೋವನ ಹತ್ರ ಕೇಳ್ತಿದ್ದ. —ಕೀರ್ತ 51:9; ಕೀರ್ತ 10:11 ಹೋಲಿಸಿ.

ಕಾವಲಿನಬುರುಜು07-E 3/1 ಪುಟ 19 ಪ್ಯಾರ 1

ಯೆಹೋವನಿಗೋಸ್ಕರ ಖುಷಿಯಿಂದ ಕಾಯ್ತೀವಿ

ಯೆಹೋವನಿಂದ ಸಿಗೋ ಶಿಸ್ತನ್ನ ಹಣ್ಣಾಗಬೇಕಾಗಿರೋ ಕಾಯಿಗೆ ಹೋಲಿಸಬಹುದು. “ಶಿಸ್ತು ಸಿಕ್ಕವ್ರಿಗೆ ಮುಂದೆ ಅದ್ರಿಂದ ಪ್ರಯೋಜನ ಇದೆ. ಅವರು ಒಳ್ಳೇ ದಾರೀಲಿ ನಡಿತಾ ಶಾಂತಿಯಿಂದ ಇರೋಕೆ ಆಗುತ್ತೆ” ಅಂತ ಬೈಬಲ್‌ ಹೇಳುತ್ತೆ. (ಇಬ್ರಿಯ 12:11) ಒಂದು ಕಾಯಿ ಹಣ್ಣಾಗೋಕೆ ಸಮಯ ಹಿಡಿಯುತ್ತೆ. ಅದೇ ತರ ಯೆಹೋವ ಕೊಡೋ ತರಬೇತಿನ ಪಡ್ಕೊಂಡು ಒಳ್ಳೇ ಗುಣಗಳನ್ನ ಬೆಳೆಸ್ಕೊಳ್ಳೋಕೆ ನಮಗೆ ಸಮಯ ಹಿಡಿಯುತ್ತೆ. ಉದಾಹರಣೆಗೆ, ನಾವೇನೋ ತಪ್ಪು ಮಾಡಿ ನಮ್ಮ ಸುಯೋಗಗಳನ್ನ ಕಳ್ಕೊಂಡಾಗ ಯೆಹೋವ ಮುಂದಿನ ನಿರ್ದೇಶನಗಳನ್ನ ಕೊಡೋ ತನಕ ಕಾಯೋ ಸ್ವಭಾವನ ಬೆಳೆಸ್ಕೊಂಡ್ರೆ ನಾವು ಕುಗ್ಗಿಹೋಗಲ್ಲ. ಇದಕ್ಕೆ ನಮಗೆ ದಾವೀದನ ಮಾತುಗಳು ಪ್ರೋತ್ಸಾಹ ಕೊಡುತ್ತೆ. ಅಲ್ಲಿ ಅವನು “[ದೇವರ] ಕೋಪ ಕ್ಷಣಮಾತ್ರ, ಆದ್ರೆ ಆತನ ಕೃಪೆ ಜೀವನಪರ್ಯಂತ. ಸಂಜೆ ದುಃಖದಿಂದ ಕಣ್ಣೀರು ಬಂದ್ರೂ, ಮುಂಜಾನೆ ಆನಂದದ ಜೈಕಾರ ಕೇಳಿಸುತ್ತೆ” ಅಂತ ಹೇಳಿದ. (ಕೀರ್ತನೆ 30:5) ಹಾಗಾಗಿ ತಾಳ್ಮೆಯಿಂದ ಕಾಯೋ ಒಳ್ಳೇ ಗುಣನ ನಾವು ಬೆಳೆಸ್ಕೊಂಡ್ರೆ ಮತ್ತು ದೇವರ ವಾಕ್ಯದಿಂದ, ಸಂಘಟನೆಯಿಂದ ಬರೋ ಸಲಹೆನ ಪಾಲಿಸಿದ್ರೆ ‘ಆನಂದದಿಂದ’ ಇರೋ ಸಮಯ ನಮಗೂ ಬರುತ್ತೆ.

ಕಾವಲಿನಬುರುಜು21.10 ಪುಟ 6 ಪ್ಯಾರ 18

ಮನಸಾರೆ ಪಶ್ಚಾತ್ತಾಪ ಪಡೋದು ಅಂದ್ರೆ ಏನು?

18 ಬಹಿಷ್ಕಾರ ಆದ ವ್ಯಕ್ತಿ ಮನಸಾರೆ ಪಶ್ಚಾತ್ತಾಪ ಪಟ್ಟಿದ್ದಾನೆ ಅಂತ ಹೇಗೆ ತೋರಿಸಿಕೊಡ್ತಾನೆ? ಹಿರಿಯರು ಸಲಹೆ ಕೊಟ್ಟ ಪ್ರಕಾರನೇ ಅವನು ತಪ್ಪದೆ ಪ್ರಾರ್ಥನೆ ಮಾಡ್ತಾನೆ, ಬೈಬಲ್‌ ಓದುತ್ತಾನೆ, ಕೂಟಗಳಿಗೆ ಬರ್ತಾನೆ, ಅವನನ್ನ ಅದೇ ತಪ್ಪಿಗೆ ನಡೆಸೋ ವಿಷಯಗಳಿಂದ ದೂರ ಇರೋಕೆ ತುಂಬ ಪ್ರಯತ್ನ ಮಾಡ್ತಾನೆ. ಹೀಗೆ ಅವನು ಯೆಹೋವ ದೇವರ ಜೊತೆ ಇದ್ದ ಸಂಬಂಧನ ಸರಿಮಾಡೋಕೆ ತನ್ನ ಕೈಲಾಗಿದ್ದೆಲ್ಲಾ ಮಾಡುವಾಗ ದೇವರು ಅವನನ್ನ ಖಂಡಿತ ಕ್ಷಮಿಸ್ತಾರೆ ಮತ್ತು ಹಿರಿಯರು ಸಭೆಗೆ ಪುನಃ ಸೇರಿಸಿಕೊಳ್ತಾರೆ. ತಪ್ಪು ಮಾಡಿದವರಲ್ಲಿ ಒಬ್ಬೊಬ್ಬರ ಸನ್ನಿವೇಶ ಒಂದೊಂದು ತರ ಇರುತ್ತೆ ಅನ್ನೋದನ್ನ ಹಿರಿಯರು ಮನಸ್ಸಲ್ಲಿ ಇಡ್ತಾರೆ. ಹಾಗಾಗಿ ಪ್ರತಿಯೊಂದು ವಿಷಯವನ್ನೂ ಪರೀಕ್ಷಿಸಿ ನೋಡ್ತಾರೆ, ದುಡುಕಿ ತೀರ್ಮಾನ ಮಾಡಲ್ಲ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು06 5/15 ಪುಟ 19 ಪ್ಯಾರ 12

ಕೀರ್ತನೆಗಳು ಪುಸ್ತಕದ ಪ್ರಥಮ ಭಾಗದ ಮುಖ್ಯಾಂಶಗಳು

31:23—ಒಬ್ಬ ಅಹಂಕಾರಿಗೆ ಚೆನ್ನಾಗಿ ಮುಯ್ಯಿತೀರಿಸಲ್ಪಡುವುದು ಹೇಗೆ? ಇಲ್ಲಿ ತಿಳಿಸಲ್ಪಟ್ಟಿರುವ ಮುಯ್ಯಿತೀರಿಸುವಿಕೆ ಶಿಕ್ಷೆಯಾಗಿದೆ. ಒಬ್ಬ ಅಹಂಕಾರಿಯು ತನ್ನ ಕೆಟ್ಟ ಮಾರ್ಗಕ್ರಮವನ್ನು ತೊರೆಯದೇ ಇರುವುದರಿಂದ ಅವನಿಗೆ ಕಠಿನ ಶಿಕ್ಷೆಯಿಂದ ಮುಯ್ಯಿತೀರಿಸಲಾಗುವುದು.—1 ಪೇತ್ರ 4:18.

ಏಪ್ರಿಲ್‌ 22-28

ಬೈಬಲಿನಲ್ಲಿರುವ ನಿಧಿ | ಕೀರ್ತನೆ 32-33

ದೊಡ್ಡ ತಪ್ಪುಗಳನ್ನ ಮಾಡ್ದಾಗ ನಾವ್ಯಾಕೆ ಅದನ್ನ ಒಪ್ಕೊಬೇಕು?

ಕಾವಲಿನಬುರುಜು93-E 3/15 ಪುಟ 9 ಪ್ಯಾರ 7

ಯೆಹೋವನ ಕರುಣೆ ನಮ್ಮನ್ನ ಕುಗ್ಗಿಹೋಗೋಕೆ ಬಿಡಲ್ಲ

7 ನಾವೇನಾದ್ರೂ ದೊಡ್ಡ ತಪ್ಪುಗಳನ್ನ ಮಾಡಿಬಿಟ್ರೆ ಅದನ್ನ ಯೆಹೋವನ ಮುಂದೆ ಒಪ್ಕೊಳ್ಳೋಕೂ ಕಷ್ಟ ಆಗುತ್ತೆ. ದಾವೀದನಿಗೂ ಹಾಗೇ ಅನಿಸ್ತು. ಅವನು ತನ್ನ ತಪ್ಪನ್ನ ಯೆಹೋವನಿಂದ ಮುಚ್ಚಿಟ್ಟಾಗ ಅವನಿಗೆ ಹೇಗನಿಸ್ತು ಅಂತ ಕೀರ್ತನೆ 32ರಲ್ಲಿ ಬರೆದಿದ್ದಾನೆ. “ನಾನು ಮೌನವಾಗಿದ್ದಾಗ, ಇಡೀ ದಿನ ನರಳ್ತಿದ್ದೆ. ಅದ್ರಿಂದ ನನ್ನ ಮೂಳೆ ಸವೆದುಹೋದ್ವು. ಯಾಕಂದ್ರೆ ಹಗಲೂರಾತ್ರಿ ನಿನ್ನ ಶಿಕ್ಷೆ ನನಗೆ ಭಾರವಾಗಿತ್ತು. ಬಿಸಿಗೆ ಆವಿಯಾಗಿ ಹೋಗೋ ನೀರಿನ ತರ ನನ್ನ ಬಲ ಬತ್ತಿಹೋಯ್ತು” ಅಂತ ಅವನು ಹೇಳಿದ. (ಕೀರ್ತನೆ 32:3, 4) ದಾವೀದ ಅವನ ತಪ್ಪನ್ನ ಮುಚ್ಚಿಟ್ಟಷ್ಟು ಅವನಿಗೆ ಕಷ್ಟ ಆಯ್ತು. ಅವನ ಮನಶ್ಶಾಂತಿ ಹಾಳಾಯ್ತು, ತುಂಬ ಕುಗ್ಗಿಹೋಗಿಬಿಟ್ಟ. ಬರಡುಭೂಮಿಲಿರೋ ಒಣಗಿದ ಮರದ ತರ ಆಗಿಬಿಟ್ಟ, ಅವನ ಜೀವನದಲ್ಲಿ ಖುಷಿನೇ ಕಳ್ಕೊಂಡುಬಿಟ್ಟ. ಹಾಗಾದ್ರೆ ನೀವೂ ಒಂದುವೇಳೆ ಏನಾದ್ರೂ ತಪ್ಪು ಮಾಡಿದ್ರೆ ಏನು ಮಾಡ್ತೀರಾ?

ಯೆಹೋವನ ಸಮೀಪಕ್ಕೆ ಬನ್ನಿರಿ ಪುಟ 262 ಪ್ಯಾರ 8

‘ಕ್ಷಮಿಸಲು ಸಿದ್ಧನು’ ಆಗಿರುವ ದೇವರು

8 ಪಶ್ಚಾತ್ತಾಪಿ ದಾವೀದನು ಅಂದದ್ದು: “ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ.” (ಓರೆ ಅಕ್ಷರಗಳು ನಮ್ಮವು.) (ಕೀರ್ತನೆ 32:5) “ಪರಿಹರಿಸಿಬಿಟ್ಟಿ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದಕ್ಕೆ “ಮೇಲೆತ್ತು” ಅಥವಾ “ಹೊತ್ತುಕೊ” ಎಂಬ ಮೂಲಾರ್ಥವಿದೆ. ಇಲ್ಲಿ ಅದರ ಉಪಯೋಗವು “ಪಾಪ, ದೋಷ, ಅಪರಾಧವನ್ನು” ತೆಗೆದುಹಾಕುವುದನ್ನು ಸೂಚಿಸುತ್ತದೆ. ಹೀಗೆ ಯೆಹೋವನು ಕಾರ್ಯತಃ ದಾವೀದನ ಪಾಪಗಳನ್ನು ಮೇಲಕ್ಕೆತ್ತಿ ಹೊತ್ತುಕೊಂಡು ಹೋದನು. ದಾವೀದನಿಗಿದ್ದ ಅಪರಾಧಿ ಭಾವನೆಗಳನ್ನು ಇದು ನಿಸ್ಸಂದೇಹವಾಗಿ ತಗ್ಗಿಸಿತು. (ಕೀರ್ತನೆ 32:3) ಯಾರು ಯೇಸುವಿನ ಈಡು ಯಜ್ಞದಲ್ಲಿ ನಂಬಿಕೆಯನ್ನಿಟ್ಟು ದೇವರ ಕ್ಷಮಾಪಣೆಗಾಗಿ ಕೋರುತ್ತಾರೋ ಅವರ ಪಾಪಗಳನ್ನೂ ಆತನು ಹೊತ್ತುಕೊಂಡು ದೂರ ಒಯ್ಯುತ್ತಾನೆಂಬ ವಿಷಯದಲ್ಲಿ ನಮಗೂ ಪೂರ್ಣ ಭರವಸೆಯಿರಸಾಧ್ಯವಿದೆ.—ಮತ್ತಾಯ 20:28.

ಕಾವಲಿನಬುರುಜು01 6/1 ಪುಟ 30 ಪ್ಯಾರ 1

ಆತ್ಮಿಕ ವಾಸಿಯಾಗುವಿಕೆಗೆ ನಡೆಸುವಂಥ

ದಾವೀದನು ತನ್ನ ಪಾಪವನ್ನು ಅರಿಕೆಮಾಡಿದ ನಂತರ, ತಾನು ಪ್ರಯೋಜನಕ್ಕೆ ಬಾರದವನು ಎಂಬ ನಕಾರಾತ್ಮಕ ಭಾವನೆಗಳಲ್ಲಿ ಮುಳುಗಿಹೋಗಲಿಲ್ಲ. ಪಾಪ ಅರಿಕೆಗಳ ಕುರಿತಾಗಿ ಅವನು ಬರೆದ ಕೀರ್ತನೆಗಳಲ್ಲಿನ ಅವನ ಅಭಿವ್ಯಕ್ತಿಗಳು, ಅವನು ಅನುಭವಿಸಿದ ಉಪಶಮನ ಮತ್ತು ನಂಬಿಗಸ್ತಿಕೆಯಿಂದ ದೇವರ ಸೇವೆಮಾಡುವ ಅವನ ದೃಢಸಂಕಲ್ಪವನ್ನು ವ್ಯಕ್ತಪಡಿಸುತ್ತವೆ. ಉದಾಹರಣೆಗಾಗಿ 32ನೇ ಕೀರ್ತನೆಯನ್ನು ನೋಡಿ. 1ನೆಯ ವಚನದಲ್ಲಿ ನಾವು ಹೀಗೆ ಓದುತ್ತೇವೆ: “ಯಾವನ ದ್ರೋಹವು ಪರಿಹಾರವಾಗಿದೆಯೋ ಯಾವನ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ ಧನ್ಯನು.” ಒಬ್ಬ ವ್ಯಕ್ತಿಯು ಮಾಡಿರುವ ಪಾಪವು ಎಷ್ಟೇ ಗಂಭೀರವಾಗಿರಲಿ, ಅವನು ನಿಜವಾಗಿಯೂ ಪಶ್ಚತ್ತಾಪಪಡುವಲ್ಲಿ, ಅವನಿಗೆ ಸಂತೋಷಕರವಾದ ಫಲಿತಾಂಶವು ಸಿಗುವುದು. ಈ ರೀತಿಯ ಪಶ್ಚಾತ್ತಾಪವನ್ನು ತೋರಿಸುವ ಒಂದು ವಿಧವು, ದಾವೀದನು ಮಾಡಿದಂತೆ, ತನ್ನ ಕೃತ್ಯಗಳಿಗಾಗಿ ಸ್ವತಃ ತಾನೇ ಜವಾಬ್ದಾರನೆಂದು ಒಪ್ಪಿಕೊಳ್ಳುವುದಾಗಿದೆ. (2 ಸಮುವೇಲ 12:13) ದಾವೀದನು, ತಾನು ಮಾಡಿದಂಥ ಕೆಲಸವು ನ್ಯಾಯವಾದದ್ದೆಂದು ಯೆಹೋವನ ಮುಂದೆ ಸಮರ್ಥಿಸಲು ಅಥವಾ ದೋಷವನ್ನು ಬೇರೆಯವರ ಮೇಲೆ ಹೊರಿಸಲು ಪ್ರಯತ್ನಿಸಲಿಲ್ಲ. 5ನೆಯ ವಚನವು ಹೇಳುವುದು: “ಯೆಹೋವನ ಸನ್ನಿಧಿಯಲ್ಲಿ ನನ್ನ ದ್ರೋಹವನ್ನು ಒಪ್ಪಿಕೊಳ್ಳುವೆನು ಅಂದುಕೊಂಡು ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ.” ಪ್ರಾಮಾಣಿಕವಾಗಿ ಪಾಪ ಅರಿಕೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಒಬ್ಬ ವ್ಯಕ್ತಿಯ ಮನಸ್ಸಾಕ್ಷಿಯು ಅವನ ಗತಕಾಲದ ತಪ್ಪುಗಳಿಗಾಗಿ ಅವನನ್ನು ಕಾಡುವುದಿಲ್ಲ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು06 5/15 ಪುಟ 20 ಪ್ಯಾರ 1

ಕೀರ್ತನೆಗಳು ಪುಸ್ತಕದ ಪ್ರಥಮ ಭಾಗದ ಮುಖ್ಯಾಂಶಗಳು

33:6. ಯೆಹೋವನ ಬಾಯಿಯ ‘ಉಸುರು’ (NIBV) ಅಥವಾ “ಶ್ವಾಸ” ಏನಾಗಿದೆ? ಇದು, ಭೌತಿಕ ಆಕಾಶವನ್ನು ಸೃಷ್ಟಿಸುವುದರಲ್ಲಿ ದೇವರು ಉಪಯೋಗಿಸಿದ ಆತನ ಕಾರ್ಯಕಾರಿ ಶಕ್ತಿಯಾಗಿದೆ ಅಂದರೆ ಪವಿತ್ರಾತ್ಮವಾಗಿದೆ. (ಆದಿಕಾಂಡ 1:1, 2) ಇದನ್ನು ಆತನ ಬಾಯಿಯ ಉಸುರು ಎಂದು ಕರೆಯಲಾಗಿದೆ, ಏಕೆಂದರೆ ಪ್ರಬಲವಾದ ಶ್ವಾಸದಂತೆ ಬಹುದೂರದಿಂದಲೇ ವಿಷಯಗಳನ್ನು ಪೂರೈಸಲಿಕ್ಕಾಗಿ ಇದನ್ನು ಕಳುಹಿಸಸಾಧ್ಯವಿದೆ.

ಏಪ್ರಿಲ್‌ 29–ಮೇ 5

ಬೈಬಲಿನಲ್ಲಿರುವ ನಿಧಿ | ಕೀರ್ತನೆ 34-35

‘ಯಾವಾಗ್ಲೂ ಯೆಹೋವನನ್ನ ಹೊಗಳಿ’

ಕಾವಲಿನಬುರುಜು07 3/1 ಪುಟ 24 ಪ್ಯಾರ 11

ನಾವು ಒಟ್ಟಾಗಿ ಯೆಹೋವನ ಹೆಸರನ್ನು ಘನಪಡಿಸೋಣ

11 “ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು.” (ಕೀರ್ತನೆ 34:1) ಸಮಾಜದಿಂದ ಬಹಿಷ್ಕೃತನಾದವನಂತೆ ಜೀವಿಸುತ್ತಿದ್ದ ದಾವೀದನಿಗೆ ತನ್ನ ಶಾರೀರಿಕ ಪೋಷಣೆಯ ಬಗ್ಗೆ ಅನೇಕ ಚಿಂತೆಗಳು ಇದ್ದಿರಬಹುದು. ಆದರೆ ಇವು, ಯೆಹೋವನನ್ನು ಸ್ತುತಿಸಬೇಕೆಂಬ ಅವನ ದೃಢನಿರ್ಧಾರವನ್ನು ಕಬಳಿಸಿಬಿಡುವಂತೆ ಅವನು ಅನುಮತಿಸಲಿಲ್ಲವೆಂದು ಅವನ ಈ ಮಾತುಗಳು ತೋರಿಸುತ್ತವೆ. ಕಷ್ಟತೊಂದರೆಗಳನ್ನು ನಾವು ಎದುರಿಸುತ್ತಿರುವಾಗ ಅನುಸರಿಸಲಿಕ್ಕಾಗಿ ಒಂದು ಉತ್ತಮ ಮಾದರಿ ಇದಾಗಿದೆ! ನಾವು ಶಾಲೆಯಲ್ಲಿರಲಿ, ಕೆಲಸದಲ್ಲಿರಲಿ, ಜೊತೆ ಕ್ರೈಸ್ತರೊಂದಿಗಿರಲಿ ಇಲ್ಲವೆ ಸಾರ್ವಜನಿಕ ಶುಶ್ರೂಷೆಯಲ್ಲಿರಲಿ ನಮ್ಮ ಅತಿ ಪ್ರಧಾನ ಚಿಂತೆಯು ಯೆಹೋವನನ್ನು ಸ್ತುತಿಸುವುದೇ ಆಗಿರಬೇಕು. ಇದನ್ನು ಮಾಡಲು ನಮಗಿರುವ ಅಸಂಖ್ಯಾತ ಕಾರಣಗಳ ಕುರಿತು ಸ್ವಲ್ಪ ಯೋಚಿಸಿ! ಉದಾಹರಣೆಗೆ, ಯೆಹೋವನ ಅದ್ಭುತ ಸೃಷ್ಟಿಕಾರ್ಯಗಳಲ್ಲಿ ನಾವು ಕಂಡುಕೊಳ್ಳಬಲ್ಲ ಮತ್ತು ಆನಂದಿಸಬಲ್ಲ ವಿಷಯಗಳಿಗೆ ಮಿತಿ ಉಂಟೇ? ಅಷ್ಟುಮಾತ್ರವಲ್ಲದೆ, ಆತನು ತನ್ನ ಸಂಘಟನೆಯ ಭೂಭಾಗದ ಮುಖಾಂತರ ಏನೆಲ್ಲ ಸಾಧಿಸಿದ್ದಾನೆ ಎಂಬುದನ್ನು ಪರಿಗಣಿಸಿರಿ! ನಂಬಿಗಸ್ತ ಮಾನವರು ಅಪರಿಪೂರ್ಣರಾಗಿರುವುದಾದರೂ, ಯೆಹೋವನು ಅವರನ್ನು ಆಧುನಿಕ ಸಮಯಗಳಲ್ಲಿ ಬಲಾಢ್ಯ ರೀತಿಗಳಲ್ಲಿ ಉಪಯೋಗಿಸಿದ್ದಾನೆ. ಲೋಕವು ಆರಾಧಿಸುವಂಥ ಮಾನವರ ಸಾಧನೆಗಳಿಗೆ ಹೋಲಿಸುವಾಗ ದೇವರ ಕೆಲಸಗಳು ಎಂಥದ್ದಾಗಿವೆ? “ಕರ್ತನೇ, ದೇವರುಗಳಲ್ಲಿ ನಿನಗೆ ಸಮಾನನೇ ಇಲ್ಲ; ನಿನ್ನ ಕೃತ್ಯಗಳಿಗೆ ಸರಿಯಾದದ್ದು ಇನ್ನೊಂದಿಲ್ಲ” ಎಂದು ಬರೆದ ದಾವೀದನ ಮಾತುಗಳೊಂದಿಗೆ ನೀವು ಸಮ್ಮತಿಸುವುದಿಲ್ಲವೆ?—ಕೀರ್ತನೆ 86:8.

ಕಾವಲಿನಬುರುಜು07 3/1 ಪುಟ 25 ಪ್ಯಾರ 13

ನಾವು ಒಟ್ಟಾಗಿ ಯೆಹೋವನ ಹೆಸರನ್ನು ಘನಪಡಿಸೋಣ

13 “ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವದು; ಇದನ್ನು ದೀನರು ಕೇಳಿ ಸಂತೋಷಿಸುವರು.” (ಕೀರ್ತನೆ 34:2) ದಾವೀದನು ಇಲ್ಲಿ ತನ್ನ ಸ್ವಂತ ಸಾಧನೆಗಳ ಬಗ್ಗೆ ಹಿಗ್ಗುತ್ತಿಲ್ಲ ಇಲ್ಲವೆ ಜಂಬಕೊಚ್ಚಿಕೊಳ್ಳುತ್ತಿರಲಿಲ್ಲ. ಉದಾಹರಣೆಗೆ, ಗತ್‌ ಊರಿನ ರಾಜನನ್ನು ತಾನು ಮೋಸಗೊಳಿಸಿದೆ ಎಂದವನು ಕೊಚ್ಚಿಕೊಳ್ಳಲಿಲ್ಲ. ತನ್ನನ್ನು ಸಂರಕ್ಷಿಸಿದವನು ಯೆಹೋವನು ಮತ್ತು ಆತನ ಸಹಾಯದಿಂದಲೇ ತಾನು ಅಲ್ಲಿಂದ ತಪ್ಪಿಸಿಕೊಂಡೆ ಎಂಬುದನ್ನು ಅವನು ಗ್ರಹಿಸಿದನು. (ಜ್ಞಾನೋಕ್ತಿ 21:1) ಆದುದರಿಂದ ದಾವೀದನು ತನ್ನಲ್ಲಿ ಅಲ್ಲ ಬದಲಾಗಿ ಯೆಹೋವನಲ್ಲಿ ಹಿಗ್ಗಿದನು. ಅವನು ಹೀಗೆ ಮಾಡಿದ್ದರಿಂದ ದೀನ ಜನರು ಯೆಹೋವನ ಕಡೆಗೆ ಸೆಳೆಯಲ್ಪಟ್ಟರು. ಯೇಸು ಸಹ ಅದೇ ರೀತಿಯಲ್ಲಿ ಯೆಹೋವನ ನಾಮವನ್ನು ಮಹಿಮೆಪಡಿಸಿದನು. ಇದರಿಂದಾಗಿ ದೀನರಾದ ಮತ್ತು ಕಲಿಯುವ ಪ್ರವೃತ್ತಿಯುಳ್ಳ ಜನರು ಯೆಹೋವನೆಡೆಗೆ ಸೆಳೆಯಲ್ಪಟ್ಟರು. ಇಂದು ಎಲ್ಲ ಜನಾಂಗಗಳ ದೀನ ಜನರು, ಯೇಸುವಿನ ಶಿರಸ್ಸುತನದ ಕೆಳಗಿರುವ ಅಭಿಷಿಕ್ತ ಕ್ರೈಸ್ತರ ಅಂತರಾಷ್ಟ್ರೀಯ ಸಭೆಯತ್ತ ಸೆಳೆಯಲ್ಪಡುತ್ತಿದ್ದಾರೆ. (ಕೊಲೊಸ್ಸೆ 1:18) ದೇವರ ನಮ್ರ ಸೇವಕರು ಆತನ ನಾಮವನ್ನು ಮಹಿಮೆಪಡಿಸುವುದನ್ನು ಅಂಥ ದೀನ ಜನರು ಕೇಳುವಾಗ ಮತ್ತು ಬೈಬಲಿನ ಸಂದೇಶವನ್ನು ಕೇಳಿಸಿಕೊಳ್ಳುವಾಗ ಇದು ಅವರ ಮನಸ್ಸನ್ನು ಮುಟ್ಟುತ್ತದೆ. ಈ ಸಂದೇಶವನ್ನು ಅರ್ಥಮಾಡಿಕೊಳ್ಳುವಂತೆ ದೇವರ ಪವಿತ್ರಾತ್ಮವು ಆ ದೀನ ಜನರಿಗೆ ಸಹಾಯಮಾಡುತ್ತದೆ.—ಯೋಹಾನ 6:44; ಅ. ಕೃತ್ಯಗಳು 16:14.

ಕಾವಲಿನಬುರುಜು07 3/1 ಪುಟ 26 ಪ್ಯಾರ 15

ನಾವು ಒಟ್ಟಾಗಿ ಯೆಹೋವನ ಹೆಸರನ್ನು ಘನಪಡಿಸೋಣ

15 “ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು.” (ಕೀರ್ತನೆ 34:4) ಈ ಅನುಭವವು ದಾವೀದನಿಗೆ ಮಹತ್ವಪೂರ್ಣವಾಗಿತ್ತು. ಆದುದರಿಂದ ಅವನು ಹೀಗನ್ನುತ್ತಾ ಮುಂದುವರಿಸಿದನು: “ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು ಯೆಹೋವನು ಕೇಳಿ ಎಲ್ಲಾ ಬಾಧೆಗಳಿಂದ ಬಿಡಿಸಿದನು.” (ಕೀರ್ತನೆ 34:6) ಕಷ್ಟಕರ ಪರಿಸ್ಥಿತಿಗಳನ್ನು ತಾಳಿಕೊಳ್ಳುವಂತೆ ಯೆಹೋವನು ನಮಗೆ ಸಹಾಯಮಾಡಿರುವಂಥ ಬಲವರ್ಧಕ ಅನುಭವಗಳು ನಮಗಿರುತ್ತವೆ. ಜೊತೆ ವಿಶ್ವಾಸಿಗಳೊಂದಿಗೆ ಸಹವಸಿಸುತ್ತಿರುವಾಗ ಇವುಗಳನ್ನು ತಿಳಿಸಲು ನಮಗೆ ಅನೇಕ ಅವಕಾಶಗಳು ಸಿಗುತ್ತವೆ. ದಾವೀದನ ಅಭಿವ್ಯಕ್ತಿಗಳು ಅವನ ಬೆಂಬಲಿಗರ ನಂಬಿಕೆಯನ್ನು ಬಲಪಡಿಸಿದಂತೆಯೇ, ನಮ್ಮ ಈ ಅನುಭವಗಳು ನಮ್ಮ ಜೊತೆ ವಿಶ್ವಾಸಿಗಳ ನಂಬಿಕೆಯನ್ನು ಬಲಪಡಿಸುತ್ತವೆ. ದಾವೀದನ ವಿಷಯದಲ್ಲಿ ನೋಡುವುದಾದರೆ ಅವನ ಸಂಗಡಿಗರು, ‘ಆತನನ್ನೇ [ಯೆಹೋವನನ್ನು] ದೃಷ್ಟಿಸಿ ಪ್ರಕಾಶವನ್ನು ಹೊಂದಿದರು; ಅವರ ಮುಖವು ಲಜ್ಜೆಯಿಂದ ಕೆಡಲೇ ಇಲ್ಲ.’ (ಕೀರ್ತನೆ 34:5) ಅವರು ರಾಜ ಸೌಲನಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದರೂ ಅವರು ಲಜ್ಜಿತರಾಗಿರಲಿಲ್ಲ. ದಾವೀದನಿಗೆ ದೇವರ ಬೆಂಬಲವಿದೆಯೆಂದು ಅವರಿಗೆ ದೃಢಭರವಸೆಯಿತ್ತು. ಆದುದರಿಂದ ಅವರ ಮುಖಗಳು ಪ್ರಕಾಶಮಾನವಾಗಿದ್ದವು. ಅದೇ ರೀತಿಯಲ್ಲಿ, ಹೊಸದಾಗಿ ಆಸಕ್ತರಾಗಿರುವ ಜನರು ಹಾಗೂ ದೀರ್ಘ ಸಮಯದಿಂದ ನಿಜ ಕ್ರೈಸ್ತರಾಗಿರುವವರು ಬೆಂಬಲಕ್ಕಾಗಿ ಯೆಹೋವನ ಕಡೆಗೆ ನೋಡುತ್ತಾರೆ. ಅವರು ವೈಯಕ್ತಿಕವಾಗಿ ಆತನ ಸಹಾಯವನ್ನು ಅನುಭವಿಸಿರುವುದರಿಂದ ನಂಬಿಗಸ್ತರಾಗಿ ಉಳಿಯಬೇಕೆಂಬ ತಮ್ಮ ದೃಢಸಂಕಲ್ಪವನ್ನು ಅವರ ಪ್ರಕಾಶಮಾನ ಮುಖಗಳು ಬಿಂಬಿಸುತ್ತವೆ.

ಬೈಬಲಿನಲ್ಲಿರುವ ರತ್ನಗಳು

ಕಾವಲಿನಬುರುಜು06 5/15 ಪುಟ 20 ಪ್ಯಾರ 2

ಕೀರ್ತನೆಗಳು ಪುಸ್ತಕದ ಪ್ರಥಮ ಭಾಗದ ಮುಖ್ಯಾಂಶಗಳು

35:19—ತನ್ನನ್ನು ದ್ವೇಷಿಸುತ್ತಿರುವವರಿಗೆ ಕಣ್ಣುಸನ್ನೆಮಾಡಲು ಅಥವಾ ಕಣ್ಣನ್ನು ಮಿಟುಕಿಸಲು ಆಸ್ಪದಕೊಡಬೇಡ ಎಂಬ ದಾವೀದನ ಬೇಡಿಕೆಯ ಅರ್ಥವೇನು? ಕಣ್ಣನ್ನು ಮಿಟುಕಿಸುವುದು, ದಾವೀದನ ವಿರೋಧಿಗಳು ಅವನ ವಿರುದ್ಧ ಮಾಡಿದ ಮತ್ಸರಭರಿತ ಯೋಜನೆಗಳ ಯಶಸ್ಸಿನಿಂದ ಸುಖಾನುಭವವನ್ನು ಪಡೆದುಕೊಳ್ಳುತ್ತಿದ್ದರು ಎಂಬುದನ್ನು ಸೂಚಿಸಸಾಧ್ಯವಿದೆ. ಇದು ಸಂಭವಿಸದಿರುವಂತೆ ದಾವೀದನು ವಿನಂತಿಸಿಕೊಂಡನು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ