ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋವನಿಗೆ ಆಪ್ತರಾಗಲು ಪ್ರಾರ್ಥನೆ ಮಾಡಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
    • ಯೆಹೋವನಿಗೆ ಆಪ್ತರಾಗಲು ಪ್ರಾರ್ಥನೆ ಮಾಡಿ

      ಯಾರಾದ್ರೂ ನಿಮಗೆ ಬುದ್ಧಿಮಾತು ಹೇಳಿದ್ರೆ ಚೆನ್ನಾಗಿರುತ್ತಿತ್ತು ಅಂತ ನಿಮಗೆ ಯಾವತ್ತಾದ್ರೂ ಅನಿಸಿದೆಯಾ? ನೀವು ಯಾವುದಾದ್ರೂ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಬೇಕು ಅಂತ ಬಯಸಿದ್ದೀರಾ? ನಿಮಗೆ ಸಾಂತ್ವನ, ನೆಮ್ಮದಿ ಬೇಕು ಅಂತ ಅನಿಸಿದೆಯಾ? ನೀವು ದೇವರ ಆಪ್ತ ಸ್ನೇಹಿತರಾಗೋಕೆ ಬಯಸ್ತಿದ್ದೀರಾ? ಇದಕ್ಕೆಲ್ಲಾ ಪ್ರಾರ್ಥನೆ ನಿಮಗೆ ಸಹಾಯ ಮಾಡುತ್ತೆ. ಆದ್ರೆ ಪ್ರಾರ್ಥನೆ ಮಾಡೋದು ಹೇಗೆ? ದೇವರು ಎಲ್ಲಾ ಪ್ರಾರ್ಥನೆಗಳನ್ನ ಕೇಳ್ತಾನಾ? ನಿಮ್ಮ ಪ್ರಾರ್ಥನೆಗಳನ್ನ ದೇವರು ಕೇಳಬೇಕಾದ್ರೆ ನೀವೇನು ಮಾಡಬೇಕು? ನಾವೀಗ ಅದರ ಬಗ್ಗೆ ನೋಡೋಣ.

      1. ನಾವು ಯಾರಿಗೆ ಮತ್ತು ಯಾವೆಲ್ಲಾ ವಿಷಯಗಳಿಗಾಗಿ ಪ್ರಾರ್ಥನೆ ಮಾಡಬೇಕು?

      ನಾವು ಸ್ವರ್ಗದಲ್ಲಿರುವ ನಮ್ಮ ತಂದೆಗೆ ಮಾತ್ರ ಪ್ರಾರ್ಥನೆ ಮಾಡಬೇಕು ಅಂತ ಯೇಸು ಕಲಿಸಿದನು. ಯೇಸು ಸಹ ಯೆಹೋವ ದೇವರಿಗೆ ಪ್ರಾರ್ಥಿಸಿದನು. ಆತನು ತನ್ನ ಶಿಷ್ಯರಿಗೆ: “ನೀವು ಹೇಗೆ ಪ್ರಾರ್ಥನೆ ಮಾಡಬೇಕಂದ್ರೆ: ‘ಸ್ವರ್ಗದಲ್ಲಿರೋ ಅಪ್ಪಾ . . . ’” ಅಂತ ದೇವರಿಗೆ ಪ್ರಾರ್ಥಿಸೋಕೆ ಹೇಳಿದನು. (ಮತ್ತಾಯ 6:9) ನಾವು ಪ್ರಾರ್ಥನೆ ಮಾಡುವಾಗ ಯೆಹೋವ ದೇವರ ಜೊತೆ ನಮಗಿರೋ ಸ್ನೇಹ ಗಟ್ಟಿಯಾಗುತ್ತೆ.

      ನಾವು ಯಾವ ವಿಷಯದ ಬಗ್ಗೆ ಬೇಕಾದ್ರೂ ಪ್ರಾರ್ಥನೆ ಮಾಡಬಹುದು. ನಮ್ಮ ಪ್ರಾರ್ಥನೆಯನ್ನ ದೇವರು ಕೇಳಬೇಕಾದ್ರೆ ಅದು ದೇವರ ಇಷ್ಟಕ್ಕೆ ತಕ್ಕ ಹಾಗೆ ಇರಬೇಕು. “ದೇವರ ಇಷ್ಟದ ಪ್ರಕಾರ ನಾವು ಏನೇ ಕೇಳಿದ್ರೂ ದೇವರು ಅದನ್ನ ಕೊಡ್ತಾನೆ.” (1 ಯೋಹಾನ 5:14) ನಾವು ಯಾವೆಲ್ಲಾ ವಿಷಯಗಳಿಗಾಗಿ ಪ್ರಾರ್ಥನೆ ಮಾಡಬೇಕು ಅನ್ನೋದಕ್ಕೆ ಯೇಸು ಕೆಲವು ಉದಾಹರಣೆಗಳನ್ನ ಕೊಟ್ಟಿದ್ದಾನೆ. (ಮತ್ತಾಯ 6:9-13 ಓದಿ.) ನಮ್ಮ ಅಗತ್ಯಗಳ ಬಗ್ಗೆ ನಾವು ಪ್ರಾರ್ಥನೆ ಮಾಡಬೇಕು ನಿಜ, ಜೊತೆಗೆ ನಮಗಾಗಿ ಯೆಹೋವ ದೇವರು ಇಲ್ಲಿಯವರೆಗೆ ಏನೆಲ್ಲಾ ಮಾಡಿದ್ದಾನೋ ಅದಕ್ಕೆ ಧನ್ಯವಾದ ಹೇಳಬೇಕು. ಅಷ್ಟೇ ಅಲ್ಲ, ಬೇರೆಯವರಿಗೂ ಒಳ್ಳೇದಾಗಲಿಕ್ಕಾಗಿ ಬೇಡಿಕೊಳ್ಳಬೇಕು.

      2. ನಾವು ಹೇಗೆ ಪ್ರಾರ್ಥಿಸಬೇಕು?

      “[ದೇವರ] ಮುಂದೆ ನಿಮ್ಮ ಮನಸ್ಸನ್ನ ತೋಡ್ಕೊಳ್ಳಿ” ಅಂತ ಬೈಬಲ್‌ ಹೇಳುತ್ತೆ. (ಕೀರ್ತನೆ 62:8) ಅಂದರೆ ನಾವು ಪ್ರಾರ್ಥಿಸುವಾಗ ನಮ್ಮ ಮನದಾಳದ ಭಾವನೆಗಳನ್ನ ಮುಚ್ಚುಮರೆಯಿಲ್ಲದೆ ದೇವರ ಹತ್ತಿರ ಹೇಳಿಕೊಳ್ಳಬೇಕು. ನಾವು ಮನಸ್ಸಲ್ಲಿ ಬೇಕಾದ್ರೂ ಪ್ರಾರ್ಥಿಸಬಹುದು, ಜೋರಾಗಿ ಬೇಕಾದ್ರೂ ಪ್ರಾರ್ಥಿಸಬಹುದು. ಕೂತುಕೊಂಡೇ, ನಿಂತುಕೊಂಡೇ ಅಥವಾ ಮಂಡಿಯೂರಿನೇ ಪ್ರಾರ್ಥಿಸಬೇಕು ಅಂತೇನಿಲ್ಲ. ಆದರೆ ಗೌರವದಿಂದ ಪ್ರಾರ್ಥಿಸಬೇಕು. ನಾವು ಯಾವ ಸಮಯದಲ್ಲಾದ್ರೂ ಎಲ್ಲಿ ಬೇಕಾದ್ರೂ ಪ್ರಾರ್ಥಿಸಬಹುದು.

      3. ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಹೇಗೆ ಉತ್ತರ ಕೊಡ್ತಾನೆ?

      ದೇವರು ತನ್ನ ವಾಕ್ಯವಾದ ಬೈಬಲನ್ನ ನಮಗೆ ಕೊಟ್ಟಿದ್ದಾನೆ. ನಮಗಿರೋ ಪ್ರಶ್ನೆಗಳಿಗೆ ಅದರಲ್ಲಿ ಉತ್ತರ ಸಿಗುತ್ತೆ. ಕೀರ್ತನೆ 19:7ರಲ್ಲಿ ಹೇಳೋ ಹಾಗೆ ಬೈಬಲನ್ನ ಓದೋದ್ರಿಂದ ‘ಅನುಭವ ಇಲ್ಲದವನು ವಿವೇಕಿಯಾಗುತ್ತಾನೆ.’ (ಯಾಕೋಬ 1:5 ಓದಿ.) ನಾವು ಸಮಸ್ಯೆಗಳಿಂದ ಕುಗ್ಗಿ ಹೋದಾಗ ಆತನು ನಮಗೆ ಶಾಂತಿ ನೆಮ್ಮದಿಯನ್ನ ಕೊಡ್ತಾನೆ. ನಮಗೆ ಕಷ್ಟಗಳು ಬಂದಾಗ ಸಹಾಯ ಮಾಡುವಂತೆ ಆತನು ತನ್ನ ಆರಾಧಕರನ್ನ ಬಳಸ್ತಾನೆ. ಹೀಗೆ ಆತನು ತುಂಬ ವಿಧಗಳಲ್ಲಿ ನಮ್ಮ ಪ್ರಾರ್ಥನೆಗೆ ಉತ್ತರ ಕೊಡ್ತಾನೆ.

      ಹೆಚ್ಚನ್ನ ತಿಳಿಯೋಣ

      ಯೆಹೋವನಿಗೆ ಇಷ್ಟ ಆಗೋ ತರ ಹೇಗೆ ಪ್ರಾರ್ಥನೆ ಮಾಡಬಹುದು ಮತ್ತು ಪ್ರಾರ್ಥನೆಯಿಂದ ಯಾವ ಪ್ರಯೋಜನ ಇದೆ ಅಂತ ನೋಡಿ.

      4. ದೇವರು ಕೇಳುವ ಪ್ರಾರ್ಥನೆಗಳು

      ದೇವರು ಎಂಥ ಪ್ರಾರ್ಥನೆಗಳನ್ನ ಕೇಳ್ತಾನೆ, ಎಂಥ ಪ್ರಾರ್ಥನೆಗಳನ್ನ ಕೇಳಲ್ಲ ಅಂತ ತಿಳಿದುಕೊಳ್ಳಲು ವಿಡಿಯೋ ನೋಡಿ.

      ವಿಡಿಯೋ: ದೇವರು ಎಲ್ಲಾ ರೀತಿಯ ಪ್ರಾರ್ಥನೆಗಳನ್ನು ಕೇಳುತ್ತಾನಾ?—ತುಣುಕು (2:43)

      ನಾವು ಯೆಹೋವನಿಗೆ ಪ್ರಾರ್ಥನೆ ಮಾಡಬೇಕು ಅಂತ ಆತನು ಬಯಸ್ತಾನೆ. ಕೀರ್ತನೆ 65:2 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

      • “ಪ್ರಾರ್ಥನೆ ಕೇಳುವ” ದೇವರು ನೀವು ಪ್ರಾರ್ಥನೆ ಮಾಡಬೇಕು ಅಂತ ಬಯಸ್ತಾನಾ? ಯಾಕೆ?

      ದೇವರು ನಮ್ಮ ಪ್ರಾರ್ಥನೆಯನ್ನ ಕೇಳಬೇಕಾದ್ರೆ ನಾವು ಆತನಿಗೆ ಇಷ್ಟವಾಗುವ ರೀತಿಯಲ್ಲಿ ಜೀವನ ನಡೆಸಬೇಕು. ಮೀಕ 3:4 ಮತ್ತು 1 ಪೇತ್ರ 3:12 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

      • ಯೆಹೋವ ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಬೇಕಾದ್ರೆ ನಾವೇನು ಮಾಡಬೇಕು?

      ಯುದ್ಧ ನಡೆಯುವಾಗ ಹೋರಾಡುವ ಎರಡೂ ಕಡೆಯವರು ಜಯಕ್ಕಾಗಿ ಪ್ರಾರ್ಥಿಸ್ತಾರೆ. ದೇವರು ಇಂಥ ಪ್ರಾರ್ಥನೆಗಳನ್ನ ಕೇಳ್ತಾನಾ?

      5. ನಾವು ಮನಬಿಚ್ಚಿ ಪ್ರಾರ್ಥಿಸಬೇಕು

      ಕೆಲವರು ಬಾಯಿಪಾಠ ಮಾಡಿ ಪ್ರಾರ್ಥಿಸ್ತಾರೆ ಯಾಕಂದ್ರೆ ಅವ್ರಿಗೆ ಹಾಗೇ ಕಲಿಸಿರುತ್ತಾರೆ. ಆದ್ರೆ ನಾವು ಹಾಗೆ ಪ್ರಾರ್ಥಿಸಬೇಕು ಅಂತ ದೇವರು ಬಯಸ್ತಾನಾ? ಮತ್ತಾಯ 6:7 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

      • ಪ್ರಾರ್ಥನೆ ಮಾಡುವಾಗ ‘ಹೇಳಿದ್ದನ್ನೇ ಮತ್ತೆ ಮತ್ತೆ ಹೇಳದೇ’ ಇರೋದು ಹೇಗೆ?

      ನಿಮ್ಮ ಜೀವನದಲ್ಲಿ ನಡೆದ ಯಾವುದಾದರೂ ಒಂದು ಒಳ್ಳೇ ವಿಷಯಕ್ಕಾಗಿ ಯೆಹೋವನಿಗೆ ಪ್ರಾರ್ಥನೆಯಲ್ಲಿ ಥ್ಯಾಂಕ್ಸ್‌ ಹೇಳಿ. ಪ್ರತಿದಿನ ನೀವು ಹೀಗೆ ಒಂದೊಂದು ವಿಷಯಕ್ಕಾಗಿ ಥ್ಯಾಂಕ್ಸ್‌ ಹೇಳುತ್ತಾ ಹೋದ್ರೆ ಒಂದು ವಾರದಲ್ಲಿ 7 ವಿಷಯಗಳಿಗೆ ಥ್ಯಾಂಕ್ಸ್‌ ಹೇಳಿದ ಹಾಗಿರುತ್ತೆ. ಆಗ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿದಂತೆ ಆಗಲ್ಲ.

      ಒಬ್ಬ ಹುಡುಗ ತನ್ನ ಹೆತ್ತವರ ಹತ್ತಿರ ಮಾತಾಡ್ತಿದ್ದಾನೆ.

      ಮಗ ತನ್ನ ಹತ್ತಿರ ಮುಚ್ಚುಮರೆಯಿಲ್ಲದೆ ಮಾತಾಡಬೇಕು ಅಂತ ಒಬ್ಬ ಪ್ರೀತಿಯ ತಂದೆ ಬಯಸುತ್ತಾನೆ. ಅದೇ ತರ ನಾವು ಮನಸ್ಸಲ್ಲಿ ಇರೋದನ್ನೆಲ್ಲಾ ಯೆಹೋವನ ಹತ್ತಿರ ಹೇಳಿಕೊಳ್ಳಬೇಕು ಅಂತ ಆತನು ಬಯಸುತ್ತಾನೆ

      6. ಪ್ರಾರ್ಥನೆ ದೇವರು ಕೊಟ್ಟಿರೋ ಉಡುಗೊರೆ

      ಪ್ರಾರ್ಥನೆ ನಮಗೆ ಹೇಗೆ ಸಹಾಯ ಮಾಡುತ್ತೆ, ದುಃಖದಲ್ಲಿರುವಾಗ ಹೇಗೆ ಬಲ ಕೊಡುತ್ತೆ? ವಿಡಿಯೋ ನೋಡಿ.

      ವಿಡಿಯೋ: ಸಹಿಸಲು ಪ್ರಾರ್ಥನೆಯ ಸಹಾಯ (1:33)

      ಪ್ರಾರ್ಥನೆ ನಮ್ಮ ಮನಸ್ಸಿಗೆ ನೆಮ್ಮದಿ ಕೊಡುತ್ತೆ ಅಂತ ಬೈಬಲ್‌ ಹೇಳುತ್ತೆ. ಫಿಲಿಪ್ಪಿ 4:6, 7 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

      • ನಾವು ಪ್ರಾರ್ಥನೆ ಮಾಡುವಾಗ ನಮ್ಮ ಸಮಸ್ಯೆಗಳು ಕಡಿಮೆ ಆಗದಿದ್ರೂ ಹೇಗೆ ಪ್ರಾರ್ಥನೆ ನಮಗೆ ಸಹಾಯ ಮಾಡುತ್ತೆ?

      • ಯಾವೆಲ್ಲಾ ವಿಷಯಗಳಿಗಾಗಿ ಪ್ರಾರ್ಥನೆ ಮಾಡೋಕೆ ನಿಮಗೆ ಇಷ್ಟ?

      ನಿಮಗೆ ಗೊತ್ತಿತ್ತಾ?

      “ಆಮೆನ್‌” ಅನ್ನೋ ಪದದ ಅರ್ಥ “ಖಂಡಿತ” ಅಥವಾ “ಹಾಗೇ ಆಗಲಿ” ಅಂತಾಗಿದೆ. ಹಿಂದಿನ ಕಾಲದಿಂದನೂ ದೇವಜನರು ಪ್ರಾರ್ಥನೆಯ ಕೊನೆಯಲ್ಲಿ “ಆಮೆನ್‌” ಅನ್ನೋ ಪದವನ್ನ ಹೇಳುತ್ತಾ ಬಂದಿದ್ದಾರೆ.—1 ಪೂರ್ವಕಾಲವೃತ್ತಾಂತ 16:36.

      7. ಪ್ರಾರ್ಥನೆ ಮಾಡೋಕೆ ಸಮಯ ಮಾಡಿಕೊಳ್ಳಿ

      ಪುರುಸೊತ್ತಿಲ್ಲದ ಜೀವನದಲ್ಲಿ ಕೆಲವೊಂದು ಸಲ ನಾವು ಪ್ರಾರ್ಥನೆ ಮಾಡೋಕೆ ಮರೆತು ಬಿಡುತ್ತೇವೆ. ಪ್ರಾರ್ಥನೆ ಮಾಡೋದು ಯೇಸುವಿಗೆ ಎಷ್ಟು ಪ್ರಾಮುಖ್ಯವಾಗಿತ್ತು? ಮತ್ತಾಯ 14:23 ಮತ್ತು ಮಾರ್ಕ 1:35 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

      • ಪ್ರಾರ್ಥನೆ ಮಾಡೋಕೆ ಯೇಸು ಹೇಗೆ ಸಮಯ ಮಾಡಿಕೊಂಡನು?

      • ಪ್ರಾರ್ಥನೆ ಮಾಡೋಕೆ ನೀವು ಹೇಗೆ ಸಮಯ ಮಾಡಿಕೊಳ್ಳಬಹುದು?

      ಕೊಲಾಜ್‌: ಒಬ್ಬ ಸ್ತ್ರೀ ದಿನದ ಪ್ರತಿಯೊಂದು ಸಂದರ್ಭದಲ್ಲೂ ಪ್ರಾರ್ಥಿಸ್ತಿದ್ದಾಳೆ. 1. ಬೆಳಗ್ಗೆ. 2. ಮಕ್ಕಳ ಜೊತೆ. 3. ಕೆಲಸದಲ್ಲಿ. 4. ಊಟಕ್ಕೆ ಮುಂಚೆ.

      ಕೆಲವರು ಹೀಗಂತಾರೆ: “ಪ್ರಾರ್ಥನೆ ಮಾಡೋದ್ರಿಂದ ಏನೂ ಪ್ರಯೋಜನ ಇಲ್ಲ, ಯಾಕಂದ್ರೆ ದೇವರು ನಮ್ಮ ಪ್ರಾರ್ಥನೆಯನ್ನ ಕೇಳೋದಿಲ್ಲ.”

      • ನೀವೇನು ಹೇಳ್ತಿರಾ?

      ನಾವೇನು ಕಲಿತ್ವಿ

      ನಾವು ಮನಬಿಚ್ಚಿ ಪ್ರಾರ್ಥನೆ ಮಾಡೋದಾದ್ರೆ ಯೆಹೋವ ದೇವರಿಗೆ ಆಪ್ತರಾಗ್ತೇವೆ. ನಮಗೆ ನೆಮ್ಮದಿ ಸಿಗುತ್ತೆ ಹಾಗೂ ಯೆಹೋವನನ್ನ ಖುಷಿಪಡಿಸುವ ವಿಷಯಗಳನ್ನ ಮಾಡೋಕೆ ಬೇಕಾದ ಬಲ ಸಿಗುತ್ತೆ.

      ನೆನಪಿದೆಯಾ

      • ನಾವು ಯಾರಿಗೆ ಪ್ರಾರ್ಥಿಸಬೇಕು?

      • ನಾವು ಹೇಗೆ ಪ್ರಾರ್ಥಿಸಬೇಕು?

      • ಪ್ರಾರ್ಥನೆ ಮಾಡೋದ್ರಿಂದ ಯಾವೆಲ್ಲಾ ಪ್ರಯೋಜನಗಳಿವೆ?

      ಇದನ್ನ ಮಾಡಿ ನೋಡಿ

      ಇದನ್ನೂ ನೋಡಿ

      ಪ್ರಾರ್ಥನೆ ಬಗ್ಗೆ ಇರೋ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

      “ಪ್ರಾರ್ಥನೆಯ ಬಗ್ಗೆ ಗೊತ್ತಿರಬೇಕಾದ ಏಳು ವಿಷಯಗಳು” (ಕಾವಲಿನಬುರುಜು ಲೇಖನ)

      ನಾವು ಯಾಕೆ ಮತ್ತು ಹೇಗೆ ಪ್ರಾರ್ಥನೆ ಮಾಡಬೇಕು ಅಂತ ತಿಳಿದುಕೊಳ್ಳಿ.

      “ನಾನು ಯಾಕೆ ಪ್ರಾರ್ಥನೆ ಮಾಡಬೇಕು?” (jw.org ಲೇಖನ)

      ನಾವು ಯಾರಿಗೆ ಪ್ರಾರ್ಥನೆ ಮಾಡಬೇಕು ಅಂತ ಬೈಬಲ್‌ ಹೇಳುತ್ತೆ?

      “ಸಂತರಿಗೆ (ಸೇಂಟ್ಸ್‌) ಪ್ರಾರ್ಥನೆ ಮಾಡಬೇಕಾ?” (jw.org ಲೇಖನ)

      ನಾವು ಪ್ರಾರ್ಥನೆಯನ್ನ ಯಾವಾಗ, ಎಲ್ಲಿ ಮಾಡಬಹುದು ಅಂತ ತಿಳಿಯಲು ಈ ಸಂಗೀತ ವಿಡಿಯೋ ನೋಡಿ.

      ಪ್ರಾರ್ಥನೆ ಕೇಳುವ ತಂದೆಯೇ (1:22)

  • ಯೆಹೋವನ ಸೇವೆಯಲ್ಲಿ ಪ್ರಗತಿ ಮಾಡುತ್ತಾ ಇರಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
    • 4. ನಿಮ್ಮ ಆಪ್ತ ಸ್ನೇಹಿತನ ಜೊತೆ ಸಂವಾದ ಮಾಡುತ್ತಾ ಇರಿ

      ಇಲ್ಲಿವರೆಗೆ ಯೆಹೋವ ದೇವರ ಸ್ನೇಹಿತರಾಗೋಕೆ ಪ್ರಾರ್ಥನೆ ಮತ್ತು ಬೈಬಲ್‌ ಕಲಿಯುವುದು ನಿಮಗೆ ಸಹಾಯ ಮಾಡಿದೆ. ಆತನಿಗೆ ಇನ್ನೂ ಆಪ್ತರಾಗೋಕೆ ಇವು ಹೇಗೆ ಸಹಾಯ ಮಾಡುತ್ತೆ?

      ಕೀರ್ತನೆ 62:8 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

      • ಯೆಹೋವ ದೇವರ ಜೊತೆ ನಿಮ್ಮ ಸ್ನೇಹವನ್ನ ಬಲಪಡಿಸೋಕೆ ನೀವು ಪ್ರಾರ್ಥನೆಯನ್ನ ಇನ್ನೂ ಚೆನ್ನಾಗಿ ಹೇಗೆ ಮಾಡಬಹುದು?

      ಕೀರ್ತನೆ 1:2 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

      • ಯೆಹೋವ ದೇವರ ಜೊತೆ ನಿಮ್ಮ ಸ್ನೇಹವನ್ನ ಬಲಪಡಿಸೋಕೆ ಬೈಬಲ್‌ ಓದುವಾಗ ಇನ್ನೂ ಏನೆಲ್ಲಾ ಮಾಡಬೇಕು ಅಂತ ನಿಮಗೆ ಅನಿಸುತ್ತೆ?

      ನಿಮ್ಮ ವೈಯಕ್ತಿಕ ಬೈಬಲ್‌ ಅಧ್ಯಯನವನ್ನ ಇನ್ನೂ ಹೆಚ್ಚು ಆನಂದಿಸೋಕೆ ಏನು ಮಾಡಬೇಕೆಂದು ತಿಳಿಯಲು ವಿಡಿಯೋ ನೋಡಿ, ನಂತರ ಪ್ರಶ್ನೆಗಳನ್ನ ಚರ್ಚಿಸಿ.

      ವಿಡಿಯೋ: ವೈಯಕ್ತಿಕ ಅಧ್ಯಯನವನ್ನ ಇನ್ನೂ ಚೆನ್ನಾಗಿ ಮಾಡಿ (5:22)

      • ಈ ವಿಡಿಯೋದಲ್ಲಿ ನೋಡಿದ ಯಾವ ವಿಷಯಗಳನ್ನ ನೀವು ಮಾಡಕ್ಕೆ ಇಷ್ಟಪಡುತ್ತೀರಾ?

      • ಯಾವ ವಿಷಯಗಳ ಬಗ್ಗೆ ಹೆಚ್ಚನ್ನ ಕಲಿಯಲಿಕ್ಕೆ ಇಷ್ಟಪಡುತ್ತೀರಾ?

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ