ಯೆಹೋವನು ವಿವೇಚನೆಯುಳ್ಳವನಾಗಿದ್ದಾನೆ!
“ಮೇಲಣಿಂದ ಬರುವ ವಿವೇಕವು . . . ವಿವೇಚನೆಯುಳ್ಳದ್ದಾಗಿದೆ.”—ಯಾಕೋಬ 3:17,
1. ಕೆಲವರು ದೇವರನ್ನು ವಿವೇಚನೆರಹಿತನೋಪಾದಿ ಹೇಗೆ ಚಿತ್ರಿಸಿದ್ದಾರೆ, ಮತ್ತು ದೇವರ ಅಂತಹ ಒಂದು ದೃಷ್ಟಿಕೋನದ ಕುರಿತು ನಿಮಗೆ ಹೇಗನಿಸುತ್ತದೆ?
ಯಾವ ರೀತಿಯ ದೇವರನ್ನು ನೀವು ಆರಾಧಿಸುತ್ತೀರಿ? ಆತನನ್ನು ನೀವು ಮಣಿಯದ, ಕಟ್ಟುನಿಟ್ಟಿನ ನ್ಯಾಯದ, ಕಠಿನ ಮತ್ತು ಅನಮ್ಯ ಸ್ವಭಾವದ ದೇವರೆಂದು ನಂಬುತ್ತೀರೊ? ಪ್ರಾಟೆಸ್ಟಂಟ್ ಮತಸುಧಾರಕನಾದ ಜಾನ್ ಕ್ಯಾಲ್ವಿನ್ಗೆ, ದೇವರು ಆ ರೀತಿಯಲ್ಲಿ ತೋರಿರಬೇಕು. ಪ್ರತಿಯೊಬ್ಬನು ಸಂತೋಷದಿಂದ ಸದಾಕಾಲ ಜೀವಿಸುವನೊ ಯಾ ನರಕಾಗ್ನಿಯಲ್ಲಿ ಅನಂತವಾಗಿ ಹಿಂಸಿಸಲ್ಪಡುವನೊ ಎಂಬುದಾಗಿ ಮೊದಲೆ ವಿಧಿಸುತ್ತಾ, ಪ್ರತಿಯೊಬ್ಬ ವ್ಯಕ್ತಿಯ ಕುರಿತು ದೇವರಿಗೆ “ಅನಂತವಾದ ಮತ್ತು ಬದಲಾಯಿಸಲಾಗದ ಯೋಜನೆ” ಇದೆಯೆಂದು ಕ್ಯಾಲ್ವಿನ್ ವಾದಿಸಿದನು. ಊಹಿಸಿರಿ: ಇದು ಸತ್ಯವಾಗಿರುವಲ್ಲಿ, ನೀವೆಂದೂ ಮಾಡಸಾಧ್ಯವಾದ ಯಾವುದೆ ವಿಷಯವು, ನೀವು ಎಷ್ಟೇ ಕಷ್ಟಪಟ್ಟು ಪ್ರಯತ್ನಿಸಿದರೂ, ನಿಮ್ಮ ಮತ್ತು ನಿಮ್ಮ ಭವಿಷ್ಯತ್ತಿನ ಕುರಿತಾದ ದೇವರ ದೀರ್ಘ ಕಾಲದ, ಅನಮ್ಯ ಯೋಜನೆಯನ್ನು ಬದಲಾಯಿಸದು. ಅಂತಹ ವಿವೇಚನೆರಹಿತ ದೇವರ ಕಡೆಗೆ ನೀವು ಆಕರ್ಷಿತರಾಗುವಿರೊ?—ಹೋಲಿಸಿ ಯಾಕೋಬ 4:8.
2, 3. (ಎ) ಮಾನವ ಸಂಘಗಳ ಮತ್ತು ಸಂಸ್ಥೆಗಳ ಅವಿವೇಚನೆಯನ್ನು ನಾವು ಹೇಗೆ ದೃಷ್ಟಾಂತಿಸಬಲ್ಲೆವು? (ಬಿ) ಯೆಹೋವನ ಆಕಾಶಸ್ಥ ರಥದ ಕುರಿತು ಯೆಹೆಜ್ಕೇಲನ ದರ್ಶನವು ಆತನ ಹೊಂದಿಕೊಳ್ಳುವಿಕೆಯನ್ನು ಹೇಗೆ ಪ್ರಕಟಿಸುತ್ತದೆ?
2 ಬೈಬಲಿನ ದೇವರು ಉಚ್ಚ ರೀತಿಯಲ್ಲಿ ವಿವೇಚನೆಯುಳ್ಳವನಾಗಿದ್ದಾನೆಂದು ಕಲಿಯಲು ನಾವೆಷ್ಟು ನೆಮ್ಮದಿಪಡುತ್ತೇವೆ! ದೇವರಲ್ಲ, ಮಾನವರೇ ತಮ್ಮ ಸ್ವಂತ ಅಪರಿಪೂರ್ಣತೆಗಳಿಂದ ನಿರ್ಬಂಧಿಸಲ್ಪಟ್ಟು, ಅನಮ್ಯರೂ ಬಾಗದಿರುವವರೂ ಆಗಿರುತ್ತಾರೆ. ಮಾನವ ಸಂಸ್ಥೆಗಳು ಸರಕು ರವಾನೆಯ ಗಾಡಿಗಳಂತೆ ನಿಯಂತ್ರಣರಹಿತವಾಗಿರಬಲ್ಲವು. ಹಾದಿಯ ಮೇಲಿರುವ ಒಂದು ಅಡಚಣೆಯ ಕಡೆಗೆ ಒಂದು ದೈತ್ಯಾಕಾರದ ಸರಕು ರವಾನೆಯ ಗಾಡಿಯು ಚಲಿಸುವಾಗ, ಅದನ್ನು ತಿರುಗಿಸುವುದು ಅಸಾಧ್ಯ, ಮತ್ತು ನಿಲ್ಲಿಸುವುದು ಬಹಳ ಕಷ್ಟ. ಕೆಲವು ಗಾಡಿಗಳಿಗೆ ಎಷ್ಟೊಂದು ಮುಂದುಗಡೆಯ ಆವೇಗವಿರುತ್ತದೆಂದರೆ, ಬ್ರೇಕ್ಗಳನ್ನು ಹಾಕಿದ ತರುವಾಯ ನಿಲ್ಲಲು ಅವಕ್ಕೆ ಒಂದು ಕಿಲೊಮೀಟರಿಗಿಂತ ಹೆಚ್ಚು ದೂರ ತಗಲುತ್ತದೆ! ಅದೇ ರೀತಿಯಲ್ಲಿ, ಒಂದು ದೊಡ್ಡ ಹಡಗು, ಯಂತ್ರಗಳನ್ನು (ಎಂಜಿನ್ಸ್) ಬಂದ್ ಮಾಡಿದ ಮೇಲೆ ಇನ್ನೂ ಎಂಟು ಕಿಲೊಮೀಟರುಗಳಷ್ಟು ಮುಂಚಲಿಸಬಹುದು. ಅವುಗಳನ್ನು ಹಿಮ್ಮೊಗವಾಗಿ ತಿರುಗಿಸಿದರೂ, ಮೂರು ಕಿಲೊಮೀಟರುಗಳ ವರೆಗೆ ಅದಿನ್ನೂ ನೀರಿನಲ್ಲಿ ಚಲಿಸುತ್ತಾ ಇರಬಹುದು! ಆದರೆ ಇವೆರಡಕ್ಕಿಂತ ಅತಿ ಹೆಚ್ಚು ಭಯಹುಟ್ಟಿಸುವ ಒಂದು ವಾಹನವನ್ನು—ದೇವರ ಸಂಸ್ಥೆಯನ್ನು ಪ್ರತಿನಿಧಿಸುವ ವಾಹನವನ್ನು ಈಗ ಪರಿಗಣಿಸಿರಿ.
3 ಎರಡು ಸಾವಿರದ ಆರು ನೂರು ವರ್ಷಗಳ ಹಿಂದೆ, ಆತ್ಮ ಜೀವಿಗಳ ತನ್ನ ಸ್ವರ್ಗೀಯ ಸಂಸ್ಥೆಯನ್ನು ಚಿತ್ರಿಸಿದ ಒಂದು ದರ್ಶನವನ್ನು ಯೆಹೋವನು ಪ್ರವಾದಿಯಾದ ಯೆಹೆಜ್ಕೇಲನಿಗೆ ನೀಡಿದನು. ಅದು ಭಯಹುಟ್ಟಿಸುವ ಪ್ರಮಾಣಗಳ ಒಂದು ರಥ, ಯೆಹೋವನ ನಿಯಂತ್ರಣದ ಕೆಳಗೆ ಸದಾ ಇರುವ ಆತನ ಸ್ವಂತ “ವಾಹನ” ವಾಗಿತ್ತು. ಅದು ಚಲಿಸಿದ ರೀತಿಯು ಬಹಳ ಆಸಕ್ತಿಕರವಾಗಿತ್ತು. ದೈತ್ಯಾಕಾರದ ಚಕ್ರಗಳು ನಾಲ್ಕು ಪಕ್ಕಗಳ್ಳುಳ್ಳವುಗಳು ಮತ್ತು ಕಣ್ಣುಗಳಿಂದ ತುಂಬಿದವುಗಳು ಆಗಿದ್ದವು, ಇದರಿಂದ ಅವು ಎಲಕ್ಲಡೆ ನೋಡಬಹುದಿತ್ತು ಮತ್ತು ನಿಲ್ಲಿಸದೆ ಯಾ ತಿರುಗದೆ ದಿಕ್ಕನ್ನು ತಕ್ಷಣ ಬದಲಾಯಿಸಬಹುದಿತ್ತು. ಮತ್ತು ಈ ದೈತ್ಯಾಕಾರದ ವಾಹನವು ದೊಡ್ಡ ಹಡಗಿನಂತೆ ಯಾ ಸರಕು ರವಾನೆಯ ಗಾಡಿಯಂತೆ ತಡವರಿಸುತ್ತಾ ಚಲಿಸಬೇಕೆಂದಿರಲಿಲ್ಲ. ಸಮಕೋನದ ತಿರುಗುಗಳನ್ನು ಕೂಡ ಮಾಡುತ್ತಾ, ಅದು ಮಿಂಚಿನ ವೇಗದಲ್ಲಿ ಚಲಿಸಬಹುದಿತ್ತು! (ಯೆಹೆಜ್ಕೇಲ 1:1, 14-28) ಒಡ್ಡೊಡ್ಡಾದ ಮಾನವ ನಿರ್ಮಿತ ಯಂತ್ರಗಳಿಗಿಂತ ಆತನ ರಥವು ಭಿನ್ನವಾಗಿರುವಂತೆಯೇ ಕ್ಯಾಲ್ವಿನ್ ಸಾರಿದ ದೇವರಿಗಿಂತ ಯೆಹೋವನು ಅಷ್ಟೇ ಭಿನ್ನನಾಗಿದ್ದಾನೆ. ಆತನು ಪರಿಪೂರ್ಣವಾಗಿ ಹೊಂದಿಕೊಳ್ಳುವವನಾಗಿದ್ದಾನೆ. ಯೆಹೋವನ ವ್ಯಕ್ತಿತ್ವದ ಈ ರೂಪವನ್ನು ಗಣ್ಯಮಾಡುವುದು, ಹೊಂದಿಕೊಳ್ಳುವವರಾಗಿ ಉಳಿಯುವಂತೆ ಮತ್ತು ವಿಚಾರಹೀನತೆಯ ಪಾಶವನ್ನು ತ್ಯಜಿಸುವಂತೆ ನಮಗೆ ಸಹಾಯಮಾಡಬೇಕು.
ಯೆಹೋವನು—ವಿಶ್ವದಲ್ಲೇ ಅತಿಯಾಗಿ ಹೊಂದಿಕೊಳ್ಳುವ ವ್ಯಕ್ತಿ
4. (ಎ) ಯೆಹೋವನ ಹೆಸರೇ ಆತನೊಬ್ಬ ಹೊಂದಿಕೊಳ್ಳುವ ದೇವರೆಂದು ಯಾವ ರೀತಿಯಲ್ಲಿ ಪ್ರಕಟಿಸುತ್ತದೆ? (ಬಿ) ಯೆಹೋವ ದೇವರಿಗೆ ಅನ್ವಯಿಸುವ ಕೆಲವು ಬಿರುದುಗಳು ಯಾವುವು, ಮತ್ತು ಅವು ತಕ್ಕದಾಗಿವೆ ಏಕೆ?
4 ಯೆಹೋವನ ಹೆಸರೇ ಆತನ ಹೊಂದಿಕೊಳ್ಳುವಿಕೆಯನ್ನು ಸೂಚಿಸುತ್ತದೆ. “ಯೆಹೋವ” ಅಕ್ಷರಶಃ “ಆಗುವಂತೆ ಮಾಡುವಾತನು” ಎಂಬುದನ್ನು ಅರ್ಥೈಸುತ್ತದೆ. ತನ್ನ ಎಲ್ಲ ವಾಗ್ದಾನಗಳ ನೆರವೇರಕನಾಗುವಂತೆ ಯೆಹೋವನು ತನ್ನನ್ನು ಮಾಡಿಕೊಳ್ಳುತ್ತಾನೆಂದು ಇದು ಸ್ಪಷ್ಟವಾಗಿಗಿ ಅರ್ಥೈಸುತ್ತದೆ. ಮೋಶೆಯು ದೇವರನ್ನು ಆತನ ಹೆಸರಿನ ಕುರಿತು ಕೇಳಿದಾಗ, ಯೆಹೋವನು ಅದರ ಅರ್ಥವನ್ನು ವಿಸ್ತಾರವಾಗಿ ಈ ರೀತಿಯಲ್ಲಿ ವಿವರಿಸಿದನು: “ನಾನು ಏನಾಗಿ ಪರಿಣಮಿಸುವೆನೊ, ಹಾಗೆಯೇ ಆಗಿ ಪರಿಣಮಿಸುವೆನು.” (ವಿಮೋಚನಕಾಂಡ 3:14, NW) ರೋದರ್ಹ್ಯಾಮರ ಭಾಷಾಂತರವು ಅದನ್ನು ನೇರವಾಗಿ ಹೇಳುವುದು: “ನನ್ನ ಇಷ್ಟವು ಏನೇ ಇರಲಿ, ಅದರಂತೆ ಆಗುವೆನು.” ಆತನ ನೀತಿಯ ಉದ್ದೇಶಗಳನ್ನು ಮತ್ತು ವಾಗ್ದಾನಗಳನ್ನು ನೆರವೇರಿಸಲು ಬೇಕಾಗಿರುವ ಏನಾದರೂ ಆಗಲು ಯೆಹೋವನು ಆರಿಸುತ್ತಾನೆ, ಯಾ ಪರಿಣಮಿಸುತ್ತಾನೆ. ಹೀಗೆ, ಸೃಷ್ಟಿಕರ್ತನು, ತಂದೆ, ಸಾರ್ವಭೌಮ ಕರ್ತನು, ಕುರುಬನು, ಸೇನೆಗಳ ಯೆಹೋವನು, ಪ್ರಾರ್ಥನೆಯನ್ನು ಆಲಿಸುವವನು, ನ್ಯಾಯಾಧೀಶನು, ಮಹಾ ಬೋಧಕನು, ಪುನರ್ಕೊಳ್ಳುವವನು ಎಂಬಂತಹ ಬಿರುದುಗಳ ಪ್ರಭಾವಕಾರಿ ಶ್ರೇಣಿಯನ್ನು ಆತನು ಹೊಂದಿದ್ದಾನೆ. ತನ್ನ ಪ್ರೀತಿಯ ಉದ್ದೇಶಗಳನ್ನು ನೆರವೇರಿಸಲು ಆತನು ಇವೆಲ್ಲ ಮತ್ತು ಇದಕ್ಕೂ ಹೆಚ್ಚಾಗಿ ತನ್ನನ್ನು ಆಗಿಸಿಕೊಂಡಿದ್ದಾನೆ.—ಯೆಶಾಯ 8:13; 30:20; 40:28; 41:14; ಕೀರ್ತನೆ 23:1; 65:2; 73:28; 89:26; ನ್ಯಾಯಸ್ಥಾಪಕರು 11:27; ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್, ಅಪೆಂಡಿಕ್ಸ್ 1J ಕೂಡ ನೋಡಿರಿ.
5. ಯೆಹೋವನ ಹೊಂದಿಕೊಳ್ಳುವಿಕೆಯು, ಆತನ ಸ್ವಭಾವ ಯಾ ಮಟ್ಟಗಳು ಬದಲಾಗುತ್ತವೆ ಎಂಬುದನ್ನು ಸೂಚಿಸುತ್ತದೆ ಎಂದು ನಾವು ಯಾಕೆ ತೀರ್ಮಾನಿಸಬಾರದು?
5 ಹಾಗಾದರೆ ಇದರ ಅರ್ಥವು, ದೇವರ ಸ್ವಭಾವ ಯಾ ಮಟ್ಟಗಳು ಬದಲಾಗುತ್ತವೆ ಎಂಬುದಾಗಿದೆಯೊ? ಇಲ್ಲ; ಯಾಕೆಂದರೆ ಯಾಕೋಬ 1:17, NW ಅದನ್ನು ಹೀಗೆ ಹೇಳುತ್ತದೆ, “ನೆರಳಿನ ಹೊರಳುವಷ್ಟೂ ವ್ಯತ್ಯಾಸದ ಸೂಚನೆ ಆತನಲ್ಲಿಲ್ಲ.” ಇಲ್ಲೊಂದು ವಿರೋಧೋಕ್ತಿ ಇದೆಯೊ? ಇಲ್ಲವೇ ಇಲ್ಲ. ಉದಾಹರಣೆಗೆ, ಮಕ್ಕಳಿಗೆ ಪ್ರಯೋಜನವಾಗುವಂತೆ ಯಾವ ಪ್ರೀತಿಯ ಹೆತ್ತವರೊಬ್ಬರು ಪಾತ್ರಗಳನ್ನು ಬದಲಾಯಿಸುವುದಿಲ್ಲ? ಏಕ ದಿನದ ಅವಧಿಯಲ್ಲಿ, ಹೆತ್ತವರಲ್ಲೊಬ್ಬರು ಸಲಹೆಗಾರರು, ಅಡಿಗೆಯವರು, ಆಡಳಿತಗಾರರು, ಶಿಕ್ಷಕರು, ಶಿಸ್ತು ಪಾಲಕರು, ಮಿತ್ರರು, ಮೆಕ್ಯಾನಿಕ್, ಒಬ್ಬಾಕೆ ದಾದಿ—ಪಟ್ಟಿಯು ಮುಂದುವರಿಯುತ್ತಾ ಹೋಗುತ್ತದೆ—ಆಗಿರಬಹುದು. ಈ ಪಾತ್ರಗಳನ್ನು ವಹಿಸಿಕೊಳ್ಳುವಾಗ ಒಬ್ಬ ಹೆತ್ತವರು ವ್ಯಕ್ತಿತ್ವವನ್ನು ಬದಲಾಯಿಸುವುದಿಲ್ಲ; ಅವನು ಯಾ ಅವಳು ಕೇವಲ ಪ್ರಸ್ತುತ ಅಗತ್ಯಗಳಿಗೆ ಹೊಂದಿಕೊಳ್ಳುತ್ತಾರೆ. ಯೆಹೋವನೊಂದಿಗೆ ವಿಷಯಗಳು ಹಾಗೆಯೇ ಇವೆ ಆದರೆ ಅತಿ ಹೆಚ್ಚು ಪ್ರಮಾಣದಲ್ಲಿ. ತನ್ನ ಜೀವಿಗಳಿಗೆ ಪ್ರಯೋಜನವಾಗುವಂತೆ ಆತನು ತನ್ನನ್ನು ಏನಾಗುವಂತೆ ಬಿಟ್ಟುಕೊಳ್ಳುವನೊ ಅದಕ್ಕೆ ಮಿತಿಯಿರುವುದಿಲ್ಲ. ಆತನ ವಿವೇಕದ ಆಳವು ನಿಶ್ಚಯವಾಗಿಯೂ ಸ್ತಂಭಕವು!—ರೋಮಾಪುರ 11:33.
ವಿವೇಚನಾ ಶಕ್ತಿಯು ದೈವಿಕ ವಿವೇಕದ ಒಂದು ಗುರುತು
6. ದೈವಿಕ ವಿವೇಕವನ್ನು ವರ್ಣಿಸುವಲ್ಲಿ ಯಾಕೋಬನು ಉಪಯೋಗಿಸಿದ ಗ್ರೀಕ್ ಪದದ ಅಕ್ಷರಶಃ ಅರ್ಥ ಮತ್ತು ಪರಿಣಾಮಗಳೇನಾಗಿವೆ?
6 ಶಿಷ್ಯನಾದ ಯಾಕೋಬನು ಈ ಶ್ರೇಷ್ಠವಾಗಿ ಹೊಂದಿಕೊಳ್ಳುವ ದೇವರ ವಿವೇಕವನ್ನು ವರ್ಣಿಸಲು ಒಂದು ಆಸಕ್ತಿಕರ ಶಬ್ದವನ್ನು ಉಪಯೋಗಿಸಿದನು. ಅವನು ಬರೆದದ್ದು: “ಮೇಲಣಿಂದ ಬಂದ ವಿವೇಕವು . . . ವಿವೇಚನೆಯುಳ್ಳದ್ದಾಗಿದೆ.” (ಯಾಕೋಬ 3:17, NW) ಇಲ್ಲಿ ಉಪಯೋಗಿಸಲಾದ ಗ್ರೀಕ್ ಪದವನ್ನು (ಎ-ಪಿ-ಯಿ-ಕಸ್) ಭಾಷಾಂತರಿಸುವುದು ಕಷ್ಟ. ಭಾಷಾಂತರಕಾರರು “ಕೋಮಲ,” “ಸೌಮ್ಯವಾದ,” “ಸಹಿಸಿಕೊಳ್ಳುವ,” ಮತ್ತು “ದಾಕ್ಷಿಣ್ಯಪರ” ಎಂಬಂತಹ ಪದಗಳನ್ನು ಉಪಯೋಗಿಸಿದ್ದಾರೆ. ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಅದನ್ನು—ಅಕ್ಷರಾರ್ಥಕ ಅರ್ಥವು “ಬಗ್ಗುವುದು” ಎಂಬುದಾಗಿದೆ ಎಂದು ಸೂಚಿಸುವ ಪಾದಟಿಪ್ಪಣಿಯೊಂದಿಗೆ—“ವಿವೇಚನೆಯುಳ್ಳದ್ದು” ಎಂದು ಭಾಷಾಂತರಿಸುತ್ತದೆ.a ಲಿಖಿತ ಉಪದೇಶಗಳ ಪ್ರತಿಯೊಂದು ಅಲ್ಪ ವಿವರದ ಕುರಿತು ಒತ್ತಾಯಿಸದಿರುವುದರ, ವಿಪರೀತವಾಗಿ ಕಟ್ಟುನಿಟ್ಟಾಗಿ ಯಾ ನಿಷ್ಠುರರು ಆಗದಿರುವುದರ ಅರ್ಥವನ್ನು ಕೂಡ ಆ ಪದವು ನೀಡುತ್ತದೆ. ವಿದ್ವಾಂಸರಾದ ವಿಲಿಯಂ ಬಾರ್ಕ್ಲೇ, ನ್ಯೂ ಟೆಸ್ಟಮೆಂಟ್ ವರ್ಡ್ಸ್ ನಲ್ಲಿ ಹೇಳುವುದು: “ಎಪಿಯಿಕಿಯದ ಕುರಿತು ಮೂಲಭೂತವಾದ ವಿಷಯವೇನೆಂದರೆ, ಅದು ದೇವರಿಂದ ಉದ್ಭವಿಸುತ್ತದೆ. ದೇವರು ತನ್ನ ಹಕ್ಕುಗಳ ಕುರಿತು ಒತ್ತಾಯಿಸಿದರೆ, ನಮ್ಮ ವಿಷಯದಲ್ಲಿ ದೇವರು ನಿಯಮದ ಅನಮ್ಯ ಮಟ್ಟಗಳ ಹೊರತು ಏನನ್ನೂ ಅನ್ವಯಿಸದಿದ್ದರೆ, ನಾವೆಲ್ಲಿ ಇರುತ್ತಿದೆವ್ದು? ಎಪಿಯಿಕೆಸ್ ಆಗಿರುವಾತನ ಅತ್ಯಂತ ಶ್ರೇಷ್ಠ ಮಾದರಿಯು ಮತ್ತು ಇತರರೊಂದಿಗೆ ಎಪಿಯಿಕಿಯ ದಿಂದ ವರ್ತಿಸುವವನು ದೇವರಾಗಿದ್ದಾನೆ.”
7. ಏದೆನ್ ತೋಟದಲ್ಲಿ ಯೆಹೋವನು ವಿವೇಚನೆಯನ್ನು ಹೇಗೆ ಪ್ರದರ್ಶಿಸಿದನು?
7 ಮಾನವಕುಲವು ಯೆಹೋವನ ಸಾರ್ವಭೌಮತೆಯ ವಿರುದ್ಧ ದಂಗೆ ಎದ್ದ ಸಮಯವನ್ನು ಪರಿಗಣಿಸಿರಿ. ಆ ಮೂವರು ಕೃತಜ್ಞತೆಯಿಲ್ಲದ ದಂಗೆಕೋರರನ್ನು—ಆದಾಮ, ಹವ್ವ, ಮತ್ತು ಸೈತಾನನನ್ನು ಸಂಹರಿಸುವುದು ದೇವರಿಗೆ ಎಷ್ಟು ಸುಲಭವಾಗಿರುತ್ತಿತ್ತು! ಸ್ವತಃ ತನಗೆ ಎಷ್ಟೊಂದು ಮನೋವ್ಯಥೆಯನ್ನು ಆತನು ಹೀಗೆ ತಪ್ಪಿಸಬಹುದಿತ್ತು! ಮತ್ತು ಅಂತಹ ಕಟ್ಟುನಿಟ್ಟಿನ ನ್ಯಾಯವನ್ನು ಚಲಾಯಿಸುವ ಹಕ್ಕು ಆತನಿಗಿಲ್ಲವೆಂದು ಯಾರು ವಾದಿಸಬಹುದಿತ್ತು? ಆದರೂ, ಯೆಹೋವನು ತನ್ನ ದಿವ್ಯ ರಥದಂತಿರುವ ಸಂಸ್ಥೆಯನ್ನು ಎಂದಿಗೂ ಯಾವುದೊ ಅನಮ್ಯ, ಹೊಂದಿಕೊಳ್ಳದ ನ್ಯಾಯದ ಮಟ್ಟದೊಳಗೆ ಸೆರೆಹಾಕಿಲ್ಲ. ಆದುದರಿಂದ ಆ ರಥವು ಮಾನವ ಕುಟುಂಬವನ್ನು ಮತ್ತು ಮಾನವಜಾತಿಯ ಸಂತೋಷದ ಭವಿಷ್ಯತ್ತಿಗಾಗಿರುವ ಎಲ್ಲ ಪ್ರತೀಕ್ಷೆಗಳನ್ನು ನಿಷ್ಠುರತೆಯಿಂದ ಜಜ್ಜಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಯೆಹೋವನು ತನ್ನ ರಥವನ್ನು ಮಿಂಚಿನಂತಹ ವೇಗದಿಂದ ಚಲಾಯಿಸಿದನು. ದಂಗೆಯ ತರುವಾಯ ಕೂಡಲೆ, ಆದಾಮನ ಸಂತತಿಯವರಾದ ಎಲ್ಲರಿಗೆ ದಯೆ ಮತ್ತು ನಿರೀಕ್ಷೆಯನ್ನು ನೀಡಿದ ದೀರ್ಘ ವ್ಯಾಪ್ತಿಯ ಉದ್ದೇಶವನ್ನು ಯೆಹೋವ ದೇವರು ರೂಪಿಸಿದನು.—ಆದಿಕಾಂಡ 3:15.
8. (ಎ) ವಿವೇಚನೆಯ ಕುರಿತಾದ ಕ್ರೈಸ್ತಪ್ರಪಂಚದ ತಪ್ಪು ದೃಷ್ಟಿಕೋನವು ಯೆಹೋವನ ಯಥಾರ್ಥವಾದ ವಿವೇಚನೆಯೊಂದಿಗೆ ಹೇಗೆ ವೈದೃಶ್ಯವಾಗಿದೆ? (ಬಿ) ಯೆಹೋವನು ದೈವಿಕ ತತ್ವಗಳ ಒಪ್ಪಂದ ಮಾಡಬಹುದೆಂಬುದನ್ನು ಆತನ ವಿವೇಚನಾ ಶಕ್ತಿಯು ಸೂಚಿಸುವುದಿಲ್ಲವೆಂದು ನಾವು ಯಾಕೆ ಹೇಳಬಲ್ಲೆವು?
8 ಆದರೆ, ಆತನು ದೈವಿಕ ತತ್ವಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದೆಂಬುದನ್ನು ಯೆಹೋವನ ವಿವೇಚನಾ ಶಕ್ತಿಯು ಸೂಚಿಸುವುದಿಲ್ಲ. ತಮ್ಮ ಮೊಂಡ ಕುರಿಗಳಿಗೆ ಬೆಣ್ಣೆ ಹಚ್ಚಲು ಇಂದಿನ ಕ್ರೈಸ್ತಪ್ರಪಂಚದ ಚರ್ಚುಗಳು ಅನೈತಿಕತೆಯನ್ನು ಕಡೆಗಣಿಸುವಾಗ, ತಾವು ವಿವೇಚನೆಯುಳ್ಳವರಾಗಿದ್ದೇವೆಂದು ಅವರು ನೆನಸಬಹುದು. (ಹೋಲಿಸಿ 2 ತಿಮೊಥೆಯ 4:3.) ಯೆಹೋವನು ತನ್ನ ಸ್ವಂತ ನಿಯಮಗಳನ್ನೆಂದೂ ಉಲ್ಲಂಘಿಸುವುದಿಲ್ಲ, ತನ್ನ ತತ್ವಗಳ ಒಪ್ಪಂದವನ್ನೂ ಮಾಡಿಕೊಳ್ಳುವುದಿಲ್ಲ. ಬದಲಿಗೆ, ಆ ತತ್ವಗಳು ನ್ಯಾಯವಾಗಿಯೂ ಕರುಣೆಯಿಂದಲೂ ಅನ್ವಯಿಸುವಂತೆ ಬಗ್ಗಲು, ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಆತನು ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ನ್ಯಾಯ ಮತ್ತು ಶಕ್ತಿಯ ಉಪಯೋಗವನ್ನು ತನ್ನ ಪ್ರೀತಿ ಮತ್ತು ವಿವೇಚನೆಯುಳ್ಳ ವಿವೇಕದೊಂದಿಗೆ ಸರಿದೂಗಿಸುವ ಕುರಿತು ಆತನು ಸದಾ ಗಮನಕೊಡುವವನಾಗಿದ್ದಾನೆ. ಯೆಹೋವನು ವಿವೇಚನಾ ಶಕ್ತಿಯನ್ನು ಪ್ರದರ್ಶಿಸುವ ಮೂರು ವಿಧಗಳನ್ನು ನಾವು ಪರಿಗಣಿಸೋಣ.
“ಕ್ಷಮಿಸಲು ಸಿದ್ಧನು”
9, 10. (ಎ) “ಕ್ಷಮಿಸಲು ಸಿದ್ಧ” ನಾಗಿರುವುದು ವಿವೇಚನೆಯೊಂದಿಗೆ ಹೇಗೆ ಸಂಬಂಧಿಸಿದೆ? (ಬಿ) ಕ್ಷಮಿಸಲಿಕ್ಕಾಗಿ ಯೆಹೋವನ ಸಿದ್ಧಮನಸ್ಸಿನಿಂದ ದಾವೀದನು ಹೇಗೆ ಪ್ರಯೋಜನ ಪಡೆದನು, ಮತ್ತು ಯಾಕೆ?
9 ದಾವೀದನು ಬರೆದದ್ದು: “ಯೆಹೋವನೇ ನೀನು ಒಳ್ಳೆಯವನೂ ಕ್ಷಮಿಸಲು ಸಿದ್ಧನೂ ಆಗಿದ್ದಿ; ನಿನಗೆ ಮೊರೆಯಿಡುವವರೆಲ್ಲರಲ್ಲಿ ಪ್ರೀತಿ ದಯೆಯು ಹೇರಳವಾಗಿದೆ.” (ಕೀರ್ತನೆ 86:5, NW) ಹೀಬ್ರು ಶಾಸ್ತ್ರಗಳನ್ನು ಗ್ರೀಕ್ ಭಾಷೆಗೆ ಭಾಷಾಂತರಿಸಿದಾಗ, “ಕ್ಷಮಿಸಲು ಸಿದ್ಧನು” ಎಂಬುದಕ್ಕೆ ಭಾಷಾಂತರಿಸಿದ ಪದವು, ಎಪಿಯಿಕೆಸ್, ಯಾ “ವಿವೇಚನೆಯುಳ್ಳದ್ದು” ಎಂಬುದಾಗಿತ್ತು. ನಿಶ್ಚಯವಾಗಿಯೂ, ಕ್ಷಮಿಸಲು ಸಿದ್ಧರಾಗಿರುವುದು ಮತ್ತು ಕರುಣೆಯನ್ನು ತೋರಿಸುವುದು ಬಹುಶಃ ವಿವೇಚನಾ ಶಕ್ತಿಯನ್ನು ಪ್ರದರ್ಶಿಸುವ ಪ್ರಾಮುಖ್ಯ ಮಾರ್ಗವಾಗಿದೆ.
10 ಈ ಸಂಬಂಧದಲ್ಲಿ ಯೆಹೋವನು ಎಷ್ಟು ವಿವೇಚನೆಯುಳ್ಳವನಾಗಿದ್ದಾನೆಂದು ಸ್ವತಃ ದಾವೀದನೇ ಚೆನ್ನಾಗಿ ಬಲ್ಲವನಾಗಿದ್ದನು. ದಾವೀದನು ಬತ್ಷೆಬೆಯೊಂದಿಗೆ ವ್ಯಭಿಚಾರವನ್ನು ಮಾಡಿ ಆಕೆಯ ಗಂಡನನ್ನು ಕೊಲ್ಲುವ ಏರ್ಪಾಡನ್ನು ಮಾಡಿದಾಗ, ಅವನೂ ಬತ್ಷೆಬಳೂ ಮರಣ ದಂಡನೆಗೆ ಅರ್ಹರಾಗಿದ್ದರು. (ಧರ್ಮೋಪದೇಶಕಾಂಡ 22:22; 2 ಸಮುವೇಲ 11:2-27) ಅನಮ್ಯ ಮಾನವ ನ್ಯಾಯಾಧೀಶರು ಆ ಕೇಸನ್ನು ನಿರ್ವಹಿಸಿದ್ದರೆ, ಇಬ್ಬರೂ ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಯೆಹೋವನು ವಿವೇಚನಾ ಶಕ್ತಿಯನ್ನು (ಎಪಿಯಿಕೆಸ್) ತೋರಿಸಿದನು, ಅದನ್ನು ವೈನ್ಸ್ ಎಕ್ಸ್ಪೊಸಿಟರಿ ಡಿಕ್ಷನೆರಿ ಆಫ್ ಬಿಬ್ಲಿಕಲ್ ವರ್ಡ್ಸ್ ಹೇಳುವಂತೆ, “‘ಒಂದು ವಿದ್ಯಮಾನದ ನಿಜತ್ವಗಳ ಕಡೆಗೆ ದಯಾಪರತೆಯಿಂದ ಮತ್ತು ವಿವೇಚನೆಯಿಂದ’ ನೋಡುವ ಆ ಪರಿಗಣನೆಯನ್ನು ಅದು ವ್ಯಕ್ತಪಡಿಸುತ್ತದೆ.” ಯೆಹೋವನ ಕರುಣಾಮಯ ನಿರ್ಧಾರವನ್ನು ಪ್ರಭಾವಿಸಿದ ನಿಜತ್ವಗಳು ಬಹುಶಃ ತಪ್ಪಿತಸ್ಥರ ಪ್ರಾಮಾಣಿಕ ಪಶ್ಚಾತಾಪ್ತವನ್ನು ಮತ್ತು ಇತರರ ಪರವಾಗಿ ಸ್ವತಃ ದಾವೀದನೆ ಹಿಂದೆ ತೋರಿಸಿದ್ದ ಕರುಣೆಯನ್ನು ಒಳಗೊಂಡಿರಬಹುದು. (1 ಸಮುವೇಲ 24:4-6; 25:32-35; 26:7-11) ಹಾಗಿದ್ದರೂ, ವಿಮೋಚನಕಾಂಡ 34:4-7 ರಲ್ಲಿರುವ ಸ್ವತಃ ಯೆಹೋವನ ವರ್ಣನೆಗೆ ಸರಿಯಾಗಿ, ದಾವೀದನಿಗೆ ತಿದ್ದುಪಾಟನ್ನು ಯೆಹೋವನು ಕೊಡುವನೆಂಬ ಸಂಗತಿಯು ವಿವೇಚನೆಯುಳ್ಳದ್ದಾಗಿತ್ತು. ದಾವೀದನು ಯೆಹೋವನ ವಾಕ್ಯವನ್ನು ಉಪೇಕ್ಷಿಸಿದನ್ದೆಂಬ ನಿಜತ್ವದಿಂದ ಅವನನ್ನು ಪ್ರಭಾವಿಸುತ್ತಾ, ಯೆಹೋವನು ಪ್ರವಾದಿಯಾದ ನಾತಾನನನ್ನು ದಾವೀದನ ಬಳಿಗೆ ಒಂದು ಬಲವಾದ ಸಂದೇಶದೊಂದಿಗೆ ಕಳುಹಿಸಿದನು. ದಾವೀದನು ಪಶ್ಚಾತಾಪ್ತಪಟ್ಟನು ಮತ್ತು ಆದುದರಿಂದ ತನ್ನ ಪಾಪದ ಕಾರಣ ಸಾಯಲಿಲ್ಲ.—2 ಸಮುವೇಲ 12:1-14.
11. ಮನಸ್ಸೆಯ ವಿಷಯದಲ್ಲಿ ಕ್ಷಮಿಸುವ ಸಿದ್ಧಮನಸ್ಸನ್ನು ಯೆಹೋವನು ಹೇಗೆ ತೋರಿಸಿದನು?
11 ಯೂದಾಯದ ರಾಜ ಮನಸ್ಸೆಯ ಉದಾಹರಣೆಯು ಈ ಸಂಬಂಧದಲ್ಲಿ ಹೆಚ್ಚು ಗಮನಾರ್ಹವಾಗಿದೆ, ಯಾಕೆಂದರೆ ಮನಸ್ಸೆ, ದಾವೀದನಿಗೆ ಅಸದೃಶವಾಗಿ, ಒಂದು ದೀರ್ಘ ಸಮಯದ ವರೆಗೆ ಸಂಪೂರ್ಣವಾಗಿ ದುಷ್ಟನಾಗಿದ್ದನು. ಮಾನವ ಬಲಿಯನ್ನು ಸೇರಿಸಿ, ಅಸಹ್ಯವಾದ ಧಾರ್ಮಿಕ ಆಚರಣೆಗಳನ್ನು ಮನಸ್ಸೆ ದೇಶದಲ್ಲಿ ಪ್ರವರ್ತಿಸಿದನು. ನಂಬಿಗಸ್ತ ಪ್ರವಾದಿಯಾದ ಯೆಶಾಯನನ್ನು “ಗರಗಸದಿಂದ ಕೊಯ್ದು” ಹಾಕುವುದಕ್ಕೂ ಅವನು ಹೊಣೆಯಾಗಿದ್ದಿರಬಹುದು. (ಇಬ್ರಿಯ 11:37) ಮನಸ್ಸೆಯನ್ನು ದಂಡಿಸಲಿಕ್ಕಾಗಿ, ಬಾಬೆಲಿಗೆ ಅವನನ್ನು ಒಬ್ಬ ಬಂದಿಯೋಪಾದಿ ಒಯ್ಯಲು ಯೆಹೋವನು ಅನುಮತಿಸಿದನು. ಹಾಗಿದ್ದರೂ, ಮನಸ್ಸೆ ಸೆರೆಮನೆಯಲ್ಲಿ ಪಶ್ಚಾತಾಪ್ತಪಟ್ಟನು ಮತ್ತು ಕರುಣೆಗಾಗಿ ಕೋರಿದನು. ಪ್ರಾಮಾಣಿಕವಾದ ಈ ಪಶ್ಚಾತಾಪ್ತಕ್ಕೆ ಪ್ರತಿಕ್ರಿಯಿಸುತ್ತಾ, ಯೆಹೋವನು “ಕ್ಷಮಿಸಲು ಸಿದ್ಧ” ನಾಗಿದ್ದನು—ಈ ಅತಿರೇಕದ ವಿದ್ಯಮಾನದಲ್ಲೂ ಕೂಡ.—2 ಪೂರ್ವಕಾಲವೃತ್ತಾಂತ 33:9-13.
ಹೊಸ ಪರಿಸ್ಥಿತಿಗಳು ಎದ್ದಂತೆ ಕಾರ್ಯಗತಿಯನ್ನು ಬದಲಾಯಿಸುವುದು
12, 13. (ಎ) ನಿನೆವೆಯ ಸಂಬಂಧದಲ್ಲಿ, ಪರಿಸ್ಥಿತಿಯ ಯಾವ ಬದಲಾವಣೆಯು ಕಾರ್ಯಗತಿಯನ್ನು ಬದಲಿಸುವಂತೆ ಯೆಹೋವನನ್ನು ಪ್ರವರ್ತಿಸಿತು? (ಬಿ) ಯೆಹೋವ ದೇವರಿಗಿಂತ ಯೋನನು ಹೇಗೆ ಕಡಿಮೆ ವಿವೇಚನೆಯುಳ್ಳವನಾಗಿ ಪರಿಣಮಿಸಿದನು?
12 ಯೆಹೋವನ ವಿವೇಚನಾ ಶಕ್ತಿಯು, ಹೊಸ ಪರಿಸ್ಥಿತಿಗಳು ಎದ್ದಂತೆ ಒಂದು ಯೋಜಿತ ಕಾರ್ಯಗತಿಯನ್ನು ಬದಲಾಯಿಸುವ ಆತನ ಇಚ್ಛೆಯಲ್ಲಿ ಕೂಡ ಕಂಡುಬರುತ್ತದೆ. ಉದಾಹರಣೆಗೆ, ಪ್ರವಾದಿಯಾದ ಯೋನನು ಪ್ರಾಚೀನ ನಿನೆವೆಯ ರಸ್ತೆಗಳಲ್ಲಿ ನಡೆದುಹೋದಾಗ, ಅವನ ಪ್ರೇರಿತ ಸಂದೇಶವು ಬಹಳ ಸರಳವಾಗಿತ್ತು: ಆ ಬಲಿಷ್ಠವಾದ ಪಟ್ಟಣವು 40 ದಿನಗಳಲ್ಲಿ ನಾಶವಾಗಲಿತ್ತು. ಹಾಗಿದ್ದರೂ, ಪರಿಸ್ಥಿತಿಗಳು ಬದಲಾದವು—ನಾಟಕೀಯವಾಗಿ! ನಿನೆವೆಯ ಜನರು ಪಶ್ಚಾತಾಪ್ತಪಟ್ಟರು.—ಯೋನ, ಅಧ್ಯಾಯ 3.
13 ಪರಿಸ್ಥಿತಿಗಳ ಈ ಬದಲಾವಣೆಗೆ ಯೆಹೋವನು ಮತ್ತು ಯೋನನು ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ವೈದೃಶ್ಯಗೊಳಿಸುವುದು ಬೋಧಪ್ರದವಾಗಿದೆ. ಕಾರ್ಯತಃ ಯೆಹೋವನು ತನ್ನ ಆಕಾಶಸ್ಥ ರಥದ ಕಾರ್ಯಗತಿಯನ್ನು ಬದಲಾಯಿಸಿದನು. ಈ ಉದಾಹರಣೆಯಲ್ಲಿ ಆತನು ಹೊಂದಿಕೊಂಡನು, “ಯುದ್ಧಶೂರ” ನಾಗಿರುವ ಬದಲು ಪಾಪಗಳನ್ನು ಕ್ಷಮಿಸುವವನಾಗುವಂತೆ ತನ್ನನ್ನು ಆಗಿಸಿಕೊಂಡನು. (ವಿಮೋಚನಕಾಂಡ 15:3) ಇನ್ನೊಂದು ಪಕ್ಕದಲ್ಲಿ, ಯೋನನು ಬಹಳ ಕಡಿಮೆಯಾಗಿ ಹೊಂದಿಕೊಂಡನು. ಯೆಹೋವನ ರಥದೊಂದಿಗೆ ಹೆಜ್ಜೆಯನ್ನಿಡುವ ಬದಲು, ಅವನು ಮುಂಚೆ ತಿಳಿಸಲಾದ ಸರಕು ರವಾನೆಯ ಗಾಡಿ ಯಾ ದೊಡ್ಡ ಹಡಗಿನಂತೆ ವರ್ತಿಸಿದನು. ಅವನು ವಿನಾಶವನ್ನು ಘೋಷಿಸಿದ್ದನು, ಆದುದರಿಂದ ವಿನಾಶವು ಸಂಭವಿಸಲೇ ಬೇಕು! ಕಾರ್ಯಗತಿಯಲ್ಲಿ ಯಾವುದೇ ಬದಲಾವಣೆಯು ಅವನನ್ನು ನಿನೆವೆಯ ಜನರ ಮುಂದೆ ಅವಮಾನಗೊಳಿಸುವುದೆಂದು ಬಹುಶಃ ಅವನಿಗನಿಸಿತು. ಆದರೂ ತಾಳ್ಮೆಯಿಂದ, ಯೆಹೋವನು ತನ್ನ ಕಲ್ಲೆದೆಯ ಪ್ರವಾದಿಗೆ ವಿವೇಚನೆಯಲ್ಲಿ ಮತ್ತು ಕರುಣೆಯಲ್ಲಿ ಒಂದು ಸ್ಮರಣೀಯ ಪಾಠವನ್ನು ಕಲಿಸಿದನು.—ಯೋನ, ಅಧ್ಯಾಯ 4.
14. ತನ್ನ ಪ್ರವಾದಿಯಾದ ಯೆಹೆಜ್ಕೇಲನ ಸಂಬಂಧದಲ್ಲಿ ಯೆಹೋವನು ತನ್ನ ಕಾರ್ಯಗತಿಯನ್ನು ಯಾಕೆ ಬದಲಾಯಿಸಿದನು?
14 ಇತರ ಸಂದರ್ಭಗಳಲ್ಲೂ ಯೆಹೋವನು ಕಾರ್ಯಗತಿಯನ್ನು ಬದಲಾಯಿಸಿದ್ದಾನೆ—ಸಂಬಂಧಸೂಚಕವಾಗಿ ಅಲ್ಪ ವಿಷಯಗಳಿಗೆ. ಉದಾಹರಣೆಗೆ, ಒಂದು ಪ್ರವಾದನಾತ್ಮಕ ನಾಟಕವನ್ನು ನಟಿಸುವಂತೆ ಆತನು ಪ್ರವಾದಿಯಾದ ಯೆಹೆಜ್ಕೇಲನನ್ನು ಒಮ್ಮೆ ನಿಯೋಗಿಸಿದಾಗ, ತನ್ನ ಊಟವನ್ನು ಯೆಹೆಜ್ಕೇಲನು ಮಾನವ ಮಲದಿಂದ ಉರಿಯುವ ಬೆಂಕಿಯ ಮೇಲೆ ಬೇಯಿಸುವಂತಹ ನಿರ್ದೇಶವು ಯೆಹೋವನ ಉಪದೇಶಗಳಲ್ಲಿ ಒಂದಾಗಿತ್ತು. “ಅಯ್ಯೋ, ಕರ್ತನಾದ ಯೆಹೋವನೇ” ಎಂಬುದಾಗಿ ಕೂಗಿದ ಮತ್ತು ತನಗೆ ಅಷ್ಟು ಅಸಹ್ಯವಾಗಿದ್ದ ಯಾವುದನ್ನೊ ಮಾಡುವಂತೆ ತಾನು ಬಿಡಲ್ಪಡಬಾರದೆಂದು ಬೇಡಿದ ಪ್ರವಾದಿಗೆ ಇದು ಬಹಳ ಅತಿಯಾಗಿತ್ತು. ಯೆಹೋವನು ಪ್ರವಾದಿಯ ಅನಿಸಿಕೆಗಳನ್ನು ಅಸಂಬದ್ಧವಾದವುಗಳೆಂದು ತಳ್ಳಿಬಿಡಲಿಲ್ಲ; ಬದಲಿಗೆ, ಈ ದಿನದ ವರೆಗೂ ಅನೇಕ ದೇಶಗಳಲ್ಲಿ ಇಂಧನದ ಒಂದು ಸಾಮಾನ್ಯ ಮೂಲವಾಗಿರುವ ಸೆಗಣಿಯನ್ನು ಯೆಹೆಜ್ಕೇಲನು ಉಪಯೋಗಿಸುವಂತೆ ಆತನು ಅನುಮತಿಸಿದನು.—ಯೆಹೆಜ್ಕೇಲ 4:12-15.
15. (ಎ) ಮಾನವರಿಗೆ ಕಿವಿಗೊಡಲು ಮತ್ತು ಪ್ರತಿಕ್ರಿಯಿಸಲು ಯೆಹೋವನು ಸಿದ್ಧನಾಗಿದ್ದನೆಂದು ಯಾವ ಉದಾಹರಣೆಗಳು ತೋರಿಸುತ್ತವೆ? (ಬಿ) ಇದು ನಮಗೆ ಯಾವ ಪಾಠವನ್ನು ಕಲಿಸಬಲ್ಲದು?
15 ನಮ್ಮ ದೇವರಾದ ಯೆಹೋವನ ದೀನತೆಯ ಕುರಿತು ಆಲೋಚಿಸುವುದು ಅನುರಾಗಗೊಳಿಸುವುದಿಲ್ಲವೊ? (ಕೀರ್ತನೆ 18:35) ನಮಗಿಂತ ಆತನು ವಿಶಾಲವಾಗಿ ಉನ್ನತನಾಗಿದ್ದಾನೆ; ಆದರೂ ಆತನು ಅಪರಿಪೂರ್ಣ ಮಾನವರ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತಾನೆ ಮತ್ತು ಕೆಲವು ಸಂದರ್ಭಗಳಲ್ಲಿ ಅದಕ್ಕನುಸಾರವಾಗಿ ಆತನ ಕಾರ್ಯಗತಿಯನ್ನು ಕೂಡ ಬದಲಾಯಿಸುತ್ತಾನೆ. ಸೋದೊಮ್ ಮತ್ತು ಗೊಮೋರದ ನಾಶನದ ಕುರಿತು ದೀರ್ಘವಾಗಿ ಆತನೊಂದಿಗೆ ಬೇಡುವಂತೆ ಅಬ್ರಹಾಮನನ್ನು ಆತನು ಅನುಮತಿಸಿದನು. (ಆದಿಕಾಂಡ 18:23-33) ದಂಗೆಕೋರ ಇಸ್ರಾಯೇಲ್ಯರನ್ನು ನಾಶಮಾಡಿ ಮೋಶೆಯ ಮುಖಾಂತರ ಒಂದು ಬಲಿಷ್ಠ ರಾಷ್ಟ್ರವನ್ನು ಉಂಟುಮಾಡುವ ಆತನ ಪ್ರಸ್ತಾಪನೆಗೆ ಆಕ್ಷೇಪಗಳನ್ನು ಎಬ್ಬಿಸುವಂತೆ ಆತನು ಮೋಶೆಯನ್ನು ಅನುಮತಿಸಿದನು. (ವಿಮೋಚನಕಾಂಡ 32:7-14; ಧರ್ಮೋಪದೇಶಕಾಂಡ 9:14, 19; ಹೋಲಿಸಿ ಆಮೋಸ 7:1-6.) ಯುಕ್ತವಾಗಿರುವಾಗ ಮತ್ತು ಹಾಗೆ ಮಾಡಲು ಸಾಧ್ಯವಿರುವಾಗ ಇತರರಿಗೆ ಕಿವಿಗೊಡುವ ಸಮಾನ ಸಿದ್ಧಮನಸ್ಸನ್ನು ತೋರಿಸಬೇಕಾದ ತನ್ನ ಮಾನವ ಸೇವಕರಿಗೆ ಆತನು ಹೀಗೆ ಒಂದು ಪರಿಪೂರ್ಣ ಮಾದರಿಯನ್ನು ಸ್ಥಾಪಿಸಿದನು.—ಹೋಲಿಸಿ ಯಾಕೋಬ 1:19.
ಅಧಿಕಾರದ ಪ್ರಯೋಗದಲ್ಲಿ ವಿವೇಚನಾ ಶಕ್ತಿಯು
16. ತನ್ನ ಅಧಿಕಾರವನ್ನು ಪ್ರಯೋಗಿಸುವ ರೀತಿಯಲ್ಲಿ ಯೆಹೋವನು ಹೇಗೆ ಅನೇಕ ಮಾನವರಿಂದ ಭಿನ್ನನಾಗಿದ್ದಾನೆ?
16 ವ್ಯಕ್ತಿಗಳು ಹೆಚ್ಚು ಅಧಿಕಾರವನ್ನು ಗಳಿಸಿದಂತೆ, ಅನೇಕರು ಕಡಿಮೆ ವಿವೇಚನೆಯುಳ್ಳವರಾಗಿ ತೋರುವುದನ್ನು ನೀವು ಎಂದಾದರೂ ಗಮನಿಸಿದ್ದೀರೊ? ವೈದೃಶ್ಯವಾಗಿ ಯೆಹೋವನಿಗೆ ವಿಶ್ವದಲ್ಲೇ ಅಧಿಕಾರದ ಅತ್ಯಂತ ಉನ್ನತ ಸ್ಥಾನವಿದೆ, ಆದರೂ ವಿವೇಚನಾ ಶಕ್ತಿಯ ಅಂತಿಮ ಮಾದರಿಯು ಆತನಾಗಿದ್ದಾನೆ. ತನ್ನ ಅಧಿಕಾರವನ್ನು ಆತನು ಕಡಮೆ ಬೀಳದ ವಿವೇಚನಾಬದ್ಧ ರೀತಿಯಲ್ಲಿ ಪ್ರಯೋಗಿಸುತ್ತಾನೆ. ಅನೇಕ ಮಾನವರಿಗೆ ಅಸದೃಶವಾಗಿ, ಯೆಹೋವನು ತನ್ನ ಅಧಿಕಾರದ ಕುರಿತು ಅಭದ್ರನಾಗಿಲ್ಲ, ಆದುದರಿಂದ—ಅಧಿಕಾರದ ಒಂದು ನಿರ್ದಿಷ್ಟ ಮೊತ್ತವನ್ನು ಇತರರಿಗೆ ನೀಡುವುದು ಹೇಗೋ ತನ್ನ ಸ್ವಂತ ಅಧಿಕಾರಕ್ಕೆ ಧಕ್ಕೆಯಾಗಿರುವುದೆಂದು—ಅದನ್ನು ಈರ್ಷ್ಯೆಯಿಂದ ರಕ್ಷಿಸುವಂತೆ ಆತನು ಒತ್ತಾಯಿಸಲ್ಪಡುವುದಿಲ್ಲ. ವಾಸ್ತವದಲ್ಲಿ, ವಿಶ್ವದಲ್ಲಿ ಕೇವಲ ಇನ್ನೊಂದು ವ್ಯಕ್ತಿಯು ಮಾತ್ರ ಇದ್ದಾಗ, ಯೆಹೋವನು ಆ ವ್ಯಕ್ತಿಯ ಮೇಲೆ ವಿಸ್ತಾರವಾದ ಅಧಿಕಾರವನ್ನು ಅನುಗ್ರಹಿಸಿದನು. ಯೇಸುಕ್ರಿಸ್ತನನ್ನು “ನಿಪುಣ ಶಿಲ್ಪಿ” ಯಾಗಿ ಮಾಡಿ, ಆಗಿನಿಂದ ಎಲ್ಲ ವಿಷಯಗಳನ್ನು ಈ ಪ್ರಿಯ ಪುತ್ರನ ಮುಖಾಂತರ ಅಸ್ತಿತ್ವಕ್ಕೆ ತಂದನು. (ಜ್ಞಾನೋಕ್ತಿ 8:22, 29-31; ಯೋಹಾನ 1:1-3, 14; ಕೊಲೊಸ್ಸೆ 1:15-17) ಆತನು ತದನಂತರ ಅವನಿಗೆ “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವನ್ನು” ಕೊಟ್ಟನು.—ಮತ್ತಾಯ 28:18; ಯೋಹಾನ 5:22.
17, 18. (ಎ) ಸೊದೋಮ್ ಮತ್ತು ಗೊಮೋರಕ್ಕೆ ಯೆಹೋವನು ದೇವದೂತರನ್ನು ಯಾಕೆ ಕಳುಹಿಸಿದನು? (ಬಿ) ಆಹಾಬನನ್ನು ಪ್ರೇರಿಸುವುದರ ಕುರಿತು ಸೂಚನೆಗಳಿಗಾಗಿ ಯೆಹೋವನು ದೇವದೂತರನ್ನು ಯಾಕೆ ಕೇಳಿದನು?
17 ಅದೇ ರೀತಿಯಲ್ಲಿ, ಸ್ವತಃ ತಾನೇ ಉತ್ತಮವಾಗಿ ನಿರ್ವಹಿಸಬಲ್ಲ ಕೆಲಸಗಳನ್ನು ಯೆಹೋವನು ತನ್ನ ಜೀವಿಗಳಲ್ಲಿ ಅನೇಕರಿಗೆ ವಹಿಸುತ್ತಾನೆ. ಉದಾಹರಣೆಗೆ, ಆತನು ಅಬ್ರಹಾಮನಿಗೆ “ಸೊದೋಮ್ ಗೊಮೋರಗಳ ವಿಷಯವಾಗಿ ಎಷ್ಟೋ ದೊಡ್ಡ ಮೊರೆ ನನಗೆ ಮುಟ್ಟಿತು; . . . ನಾನು ಇಳಿದು ಹೋಗಿ ನನಗೆ ಮುಟ್ಟಿದ ಮೊರೆಯಂತೆಯೇ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುತ್ತೇನೆ” ಎಂದು ಹೇಳಿದಾಗ, ಆತನು ವ್ಯಕ್ತಿಶಃ ಇಳಿದು ಹೋಗುವನೆಂದು ಆತನು ಅರ್ಥೈಸಲಿಲ್ಲ. ಬದಲಿಗೆ, ಯೆಹೋವನು ಅಧಿಕಾರವನ್ನು ವಹಿಸಿಕೊಡಲು ಆರಿಸಿದನು ಮತ್ತು ತನಗಾಗಿ ಅಂತಹ ಮಾಹಿತಿಯನ್ನು ಕೂಡಿಸಲು ದೇವದೂತರನ್ನು ನೇಮಿಸಿದನು. ನಿಜತ್ವಗಳನ್ನು ಕಂಡುಹಿಡಿಯುವ ನಿಯೋಗವನ್ನು ಮುನ್ನಡೆಸುವ ಮತ್ತು ಹಿಂದಿರುಗಿ ಆತನಿಗೆ ವರದಿ ಸಲ್ಲಿಸುವ ಅಧಿಕಾರವನ್ನು ಅವರಿಗೆ ನೀಡಿದನು.—ಆದಿಕಾಂಡ 18:1-3, 20-22.
18 ಇನ್ನೊಂದು ಸಂದರ್ಭದಲ್ಲಿ, ದುಷ್ಟ ಅರಸನಾದ ಆಹಾಬನ ಮೇಲೆ ಮರಣ ದಂಡನೆಯನ್ನು ವಿಧಿಸಲು ಯೆಹೋವನು ನಿರ್ಧರಿಸಿದಾಗ, ತನ್ನ ಜೀವವನ್ನು ಅಂತ್ಯಗೊಳಿಸುವ ಯುದ್ಧವನ್ನು ಭ್ರಷ್ಟ ರಾಜನು ಸೇರುವುದಕ್ಕಾಗಿ ಅವನನ್ನು ಹೇಗೆ “ಪ್ರೇರಿಸುವುದು” ಎಂಬುದಕ್ಕೆ ಸೂಚನೆಗಳನ್ನು ನೀಡಲು, ಸ್ವರ್ಗೀಯ ಸಮ್ಮೇಳನವೊಂದರಲ್ಲಿ ಆತನು ದೇವದೂತರನ್ನು ಆಮಂತ್ರಿಸಿದನು. ಅತ್ಯುತ್ತಮ ಕಾರ್ಯಗತಿಯನ್ನು ಸೂಚಿಸಲು, ಎಲ್ಲ ವಿವೇಕದ ಮೂಲನಾಗಿರುವ ಯೆಹೋವನಿಗೆ ಸಹಾಯದ ಅಗತ್ಯವಿರಲಿಲ್ಲ ಎಂಬುದು ಖಂಡಿತ! ಆದರೂ, ಪರಿಹಾರಗಳನ್ನು ಪ್ರಸ್ತಾಪಿಸುವ ಸುಯೋಗದಿಂದ ಮತ್ತು ತಾನು ಆರಿಸಿದ ಪ್ರಸ್ತಾಪದ ಮೇಲೆ ಕಾರ್ಯವೆಸಗುವ ಅಧಿಕಾರದಿಂದ ಆತನು ದೇವದೂತರನ್ನು ಘನಪಡಿಸಿದನು.—1 ಅರಸುಗಳು 22:19-22.
19. (ಎ) ತಾನು ಮಾಡುವ ನಿಯಮಗಳ ಸಂಖ್ಯೆಯನ್ನು ಯೆಹೋವನು ಯಾಕೆ ಕಡಿಮೆಗೊಳಿಸುತ್ತಾನೆ? (ಬಿ) ನಮ್ಮಿಂದ ಆತನು ಅಪೇಕ್ಷಿಸುವ ವಿಷಯದಲ್ಲಿ ಯೆಹೋವನು ತನ್ನನ್ನು ಹೇಗೆ ವಿವೇಚನೆಯುಳ್ಳವನೆಂದು ತೋರಿಸಿಕೊಳ್ಳುತ್ತಾನೆ?
19 ಇತರರ ಮೇಲೆ ಅನುಚಿತವಾದ ನಿಯಂತ್ರಣವನ್ನು ಪ್ರಯೋಗಿಸಲು ಯೆಹೋವನು ತನ್ನ ಅಧಿಕಾರವನ್ನು ಉಪಯೋಗಿಸುವುದಿಲ್ಲ. ಇದರಲ್ಲೂ ಆತನು ಅಸಮಾನ ವಿವೇಚನೆಯನ್ನು ತೋರಿಸುತ್ತಾನೆ. ತಾನು ಮಾಡುವ ನಿಯಮಗಳ ಸಂಖ್ಯೆಯನ್ನು ಆತನು ಜಾಗತ್ರೆಯಿಂದ ಕಡಿಮೆಗೊಳಿಸುತ್ತಾನೆ ಮತ್ತು ತಮ್ಮ ಸ್ವಂತ ಭಾರವಾದ ನಿಯಮಗಳನ್ನು ಕೂಡಿಸುವ ಮೂಲಕ ‘ಶಾಸ್ತ್ರಗಳಲ್ಲಿ ಬರೆದಿರುವದನ್ನು ಮೀರಿಹೋಗುವುದರಿಂದ’ ತನ್ನ ಸೇವಕರನ್ನು ಆತನು ನಿಷೇಧಿಸುತ್ತಾನೆ. (1 ಕೊರಿಂಥ 4:6; ಅ. ಕೃತ್ಯಗಳು 15:28; ಮತ್ತಾಯ 23:4 ರೊಂದಿಗೆ ವೈದೃಶ್ಯಗೊಳಿಸಿರಿ.) ತನ್ನ ಜೀವಿಗಳ ಅವಿವೇಚನೆಯ ವಿಧೇಯತೆಯನ್ನು ಆತನು ಎಂದಿಗೂ ಕೇಳಿಕೊಳ್ಳುವುದಿಲ್ಲ, ಆದರೆ ಸಾಮಾನ್ಯವಾಗಿ ಅವರನ್ನು ಮಾರ್ಗದರ್ಶಿಸಲು ಸಾಕಷ್ಟು ಮಾಹಿತಿಯನ್ನು ಒದಗಿಸುತ್ತಾನೆ ಮತ್ತು ವಿಧೇಯರಾಗುವ ಪ್ರಯೋಜನಗಳನ್ನು ಮತ್ತು ಅವಿಧೇಯರಾಗುವ ಪರಿಣಾಮಗಳನ್ನು ಅವರಿಗೆ ತಿಳಿಯುವಂತೆ ಮಾಡುತ್ತಾ, ಆಯ್ಕೆಯನ್ನು ಅವರ ಮುಂದೆ ಇಡುತ್ತಾನೆ. (ಧರ್ಮೋಪದೇಶಕಾಂಡ 30:19, 20) ಅಪರಾಧಿ ಪ್ರಜ್ಞೆ, ಅವಮಾನ, ಅಥವಾ ಭಯದಿಂದ ಜನರನ್ನು ಬಲಾತ್ಕರಿಸುವ ಬದಲು, ಹೃದಯಗಳನ್ನು ತಲಪಲು ಆತನು ಪ್ರಯತ್ನಿಸುತ್ತಾನೆ; ನಿರ್ಬಂಧದ ಬದಲು ಯಥಾರ್ಥವಾದ ಪ್ರೀತಿಯಿಂದ ಜನರು ಆತನನ್ನು ಸೇವಿಸಬೇಕೆಂದು ಆತನು ಬಯಸುತ್ತಾನೆ. (2 ಕೊರಿಂಥ 9:7) ಅಂತಹ ಎಲ್ಲ ಮನಃಪೂರ್ವಕವಾದ ಸೇವೆಯು ದೇವರ ಹೃದಯವನ್ನು ಹರ್ಷಿಸುವಂತೆ ಮಾಡುತ್ತದೆ, ಆದುದರಿಂದ ಆತನು ವಿವೇಚನೆರಹಿತನಾಗಿ “ಮೆಚ್ಚಿಸಲು ಕಠಿನ” ನಾಗಿಲ್ಲ.—1 ಪೇತ್ರ 2:18, NW; ಜ್ಞಾನೋಕ್ತಿ 27:11; ಹೋಲಿಸಿ ಮೀಕ 6:8.
20. ಯೆಹೋವನ ವಿವೇಚನಾ ಶಕ್ತಿಯು ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ?
20 ಸೃಷ್ಟಿಯಲ್ಲಿ ಬೇರೆ ಯಾವುದೇ ಜೀವಿಗಿಂತ ಹೆಚ್ಚು ಶಕಿಯ್ತಿರುವ ಯೆಹೋವ ದೇವರು, ಆ ಶಕ್ತಿಯನ್ನು ಅವಿವೇಚನೆಯಿಂದ ಎಂದೂ ಉಪಯೋಗಿಸುವುದಿಲ್ಲ, ಇತರರನ್ನು ಪೀಡಿಸಲು ಎಂದಿಗೂ ಉಪಯೋಗಿಸುವುದಿಲ್ಲ ಎಂಬುದು ಗಮನಾರ್ಹವಾಗಿಲ್ಲವೊ? ಹಾಗಿದ್ದರೂ, ಹೋಲಿಕೆಯಲ್ಲಿ ಅಲ್ಪರಾಗಿರುವ ಮನುಷ್ಯರು, ಒಬ್ಬರ ಮೇಲೊಬ್ಬರು ಅಧಿಕಾರ ಚಲಾಯಿಸಿದ ಇತಿಹಾಸವಿದೆ. (ಪ್ರಸಂಗಿ 8:9) ಸ್ಪಷ್ಟವಾಗಿಗಿಯೆ, ವಿವೇಚನಾ ಶಕ್ತಿಯು ಅಮೂಲ್ಯವಾದೊಂದು ಗುಣವಾಗಿದೆ, ಇನ್ನೂ ಹೆಚ್ಚಾಗಿ ಯೆಹೋವನನ್ನು ಪ್ರೀತಿಸುವಂತೆ ನಮ್ಮನ್ನು ಪ್ರೇರೇಪಿಸುವ ಗುಣವಾಗಿದೆ. ಅದು, ಸ್ವತಃ ನಾವೇ ಈ ಗುಣವನ್ನು ಬೆಳೆಸಿಕೊಳ್ಳುವಂತೆ ನಮ್ಮನ್ನು ಪ್ರಚೋದಿಸಬಹುದು. ನಾವಿದನ್ನು ಹೇಗೆ ಮಾಡಸಾಧ್ಯವಿದೆ? ಮುಂದಿನ ಲೇಖನವು ಈ ವಿಷಯವನ್ನು ಚರ್ಚಿಸುವುದು.
[ಅಧ್ಯಯನ ಪ್ರಶ್ನೆಗಳು]
a ಹಿಂದೆ 1769 ರಲ್ಲಿ, ನಿಘಂಟುಕಾರನಾದ ಜಾನ್ ಪಾರ್ಕ್ಹರ್ಸ್ಟ್ ಪದವನ್ನು “ಬಗ್ಗುವುದು, ಬಗ್ಗುವ ಸ್ವಭಾವ, ಕೋಮಲ, ಸೌಮ್ಯ, ತಾಳ್ಮೆ,” ಎಂಬುದಾಗಿ ವಿವರಿಸಿದನು. ಇತರ ಪಂಡಿತರು ಕೂಡ “ಬಗ್ಗುವುದು” ಎಂಬ ಪದವನ್ನು ಒಂದು ಅರ್ಥವಿವರಣೆಯಾಗಿ ನೀಡಿದ್ದಾರೆ.
ನೀವು ಹೇಗೆ ಉತ್ತರಿಸುವಿರಿ?
▫ ಯೆಹೋವನ ಹೆಸರು ಮತ್ತು ಆತನ ಆಕಾಶಸ್ಥ ರಥದ ದರ್ಶನವು ಆತನ ಹೊಂದಿಕೊಳ್ಳುವಿಕೆಯನ್ನು ಹೇಗೆ ಸ್ಪಷ್ಟಪಡಿಸುತ್ತವೆ?
▫ ವಿವೇಚನಾ ಶಕ್ತಿ ಎಂದರೇನು, ಮತ್ತು ಅದು ಏಕೆ ದೈವಿಕ ವಿವೇಕದ ಒಂದು ಗುರುತಾಗಿದೆ?
▫ ಯಾವ ರೀತಿಗಳಲ್ಲಿ ಯೆಹೋವನು ತಾನು “ಕ್ಷಮಿಸಲು ಸಿದ್ಧ” ನೆಂದು ತೋರಿಸಿದ್ದಾನೆ?
▫ ಕೆಲವೊಂದು ಸಂದರ್ಭಗಳಲ್ಲಿ ಒಂದು ನಿಯೋಜಿತ ಕಾರ್ಯಗತಿಯನ್ನು ಬದಲಾಯಿಸಲು ಯೆಹೋವನು ಏಕೆ ಆರಿಸಿದ್ದಾನೆ?
▫ ತಾನು ಅಧಿಕಾರವನ್ನು ಪ್ರಯೋಗಿಸುವ ರೀತಿಯಲ್ಲಿ ಯೆಹೋವನು ಹೇಗೆ ವಿವೇಚನೆಯನ್ನು ಪ್ರದರ್ಶಿಸುತ್ತಾನೆ?
[ಪುಟ 10 ರಲ್ಲಿರುವ ಚಿತ್ರ]
ದುಷ್ಟನಾದ ರಾಜ ಮನಸ್ಸೆಯನ್ನು ಯೆಹೋವನು ಏಕೆ ಕ್ಷಮಿಸಿದನು?