ಯೆಹೋವನ ಭಯದಲ್ಲಿ ಆನಂದವನ್ನು ಕಂಡುಕೊಳ್ಳಲು ಕಲಿಯುವುದು
“ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ; ನಾನು ಯೆಹೋವನ ಭಯವನ್ನು ನಿಮಗೆ ಕಲಿಸುವೆನು.”—ಕೀರ್ತನೆ 34:11.
1. ದೇವರ ರಾಜ್ಯದಿಂದ ಭಯವು ಹೇಗೆ ತೊಲಗಿಸಲ್ಪಡುವುದು, ಆದರೆ ಎಲ್ಲ ವಿಧವಾದ ಭಯವೆಂದು ಇದರರ್ಥವೊ?
ಜನರು ಸರ್ವತ್ರ ಭಯದಿಂದ—ಪಾತಕ ಮತ್ತು ಹಿಂಸಾಚಾರದ ಭಯದಿಂದ, ನಿರುದ್ಯೋಗದ ಭಯದಿಂದ, ಗಂಭೀರ ಅಸ್ವಸ್ಥತೆಯ ಭಯದಿಂದ ಬಿಡುಗಡೆಗಾಗಿ ಹಾತೊರೆಯುತ್ತಾರೆ. ಆ ಬಿಡುಗಡೆಯು ದೇವರ ರಾಜ್ಯದ ಕೆಳಗೆ ನಿಜಸಂಗತಿಯಾಗುವಾಗ ಅದೆಂಥ ಮಹಾ ದಿನವಾಗಿರುವುದು! (ಯೆಶಾಯ 33:24; 65:21, 23; ಮೀಕ 4:4) ಆದರೂ, ಎಲ್ಲ ಭಯವು ಆಗ ತೊಲಗಿಸಲ್ಪಡುವುದಿಲ್ಲ, ಅಲ್ಲದೆ ಎಲ್ಲ ಭಯವನ್ನು ಈಗ ನಮ್ಮ ಜೀವನದಿಂದ ಹೊರತಳ್ಳಲು ನಾವು ಪ್ರಯತ್ನಿಸಲೂಬಾರದು. ಯಾಕಂದರೆ ಒಳ್ಳೆಯ ಭಯ ಮತ್ತು ಕೆಟ್ಟ ಭಯ ಎಂಬ ಸಂಗತಿಗಳಿವೆ.
2. (ಎ) ಯಾವ ರೀತಿಯ ಭಯವು ಕೆಟ್ಟದ್ದು, ಯಾವ ವಿಧದ ಭಯವು ಅಪೇಕ್ಷಣೀಯವು? (ಬಿ) ದಿವ್ಯ ಭಯವೆಂದರೇನು, ಮತ್ತು ಉದಾಹರಿಸಿದ ಶಾಸ್ತ್ರವಚನಗಳು ಅದನ್ನು ಹೇಗೆ ಸೂಚಿಸುತ್ತವೆ?
2 ಭಯವು ಒಬ್ಬ ವ್ಯಕ್ತಿಯ ವಿವೇಚನಾ ಸಾಮರ್ಥ್ಯವನ್ನು ನಿಸ್ಸತ್ವಗೊಳಿಸುವ ಮಾನಸಿಕ ವಿಷವಾಗಿರಬಲ್ಲದು. ಅದು ಧೈರ್ಯವನ್ನು ಕೆಡವಿಹಾಕಿ, ನಿರೀಕ್ಷೆಯನ್ನು ನಾಶಗೊಳಿಸಬಲ್ಲದು. ವೈರಿಯೊಬ್ಬನಿಂದ ಶಾರೀರಿಕವಾಗಿ ಬೆದರಿಸಲ್ಪಡುವ ಒಬ್ಬ ವ್ಯಕ್ತಿಯು ಅಂಥ ಭಯವನ್ನು ಅನುಭವಿಸಾನು. (ಯೆರೆಮೀಯ 51:30) ನಿರ್ದಿಷ್ಟ ಪ್ರಭಾವಶಾಲಿ ಮನುಷ್ಯರ ಮೆಚ್ಚಿಗೆಯನ್ನು ಪಡೆಯುವುದಕ್ಕೆ ತೀರ ಹೆಚ್ಚು ಪ್ರಮುಖತೆಯನ್ನು ಕೊಡುವ ವ್ಯಕ್ತಿಯಿಂದ ಅದು ಅನುಭವಿಸಲ್ಪಟ್ಟೀತು. (ಜ್ಞಾನೋಕ್ತಿ 29:25) ಆದರೆ ಎಚ್ಚರಗೇಡಿಯಾಗಿ ಏನನ್ನಾದರೂ ಮಾಡುವುದರಿಂದ, ನಮ್ಮನ್ನು ಹಾನಿಗೆ ಗುರಿಪಡಿಸುವುದರಿಂದ ತಡೆಹಿಡಿಯುವ ಹಿತಕರವಾದ ಭಯವು ಸಹ ಇದೆ. ದಿವ್ಯ ಭಯವು ಅದಕ್ಕಿಂತಲೂ ಹೆಚ್ಚನ್ನು ಒಳಗೊಳ್ಳುತ್ತದೆ. ಯೆಹೋವನನ್ನು ಅಪ್ರಸನ್ನಗೊಳಿಸುವ ಹಿತಕರವಾದ ಭೀತಿಯಿಂದ ಕೂಡಿದ ಪರಮ ಪೂಜ್ಯಭಾವನೆಯದು, ಭಯಭಕ್ತಿಯ ಭಾವವು ಅದು. (ಕೀರ್ತನೆ 89:7) ಯೆಹೋವನ ಅಪ್ರಸನ್ನತೆಯನ್ನು ತಂದುಕೊಳ್ಳುವ ಈ ಭಯವು ಆತನ ಪ್ರೀತಿಪೂರ್ವಕವಾದ ದಯೆ ಮತ್ತು ಒಳ್ಳೇತನಕ್ಕಾಗಿ ಗಣ್ಯತೆಯಿಂದಾಗಿ ಹೊರಬರುತ್ತದೆ. (ಕೀರ್ತನೆ 5:7; ಹೋಶೇಯ 3:5) ತನಗೆ ವಿಧೇಯರಾಗಲು ನಿರಾಕರಿಸುವವರಿಗೆ ಶಿಕ್ಷೆಯನ್ನು, ಮರಣವನ್ನು ಸಹ ವಿಧಿಸಲು ಶಕಿಯ್ತಿರುವ ಸರ್ವ ಶ್ರೇಷ್ಠ ನ್ಯಾಯಾಧಿಪತಿ ಮತ್ತು ಸರ್ವಶಕ್ತನು ಯೆಹೋವನು ಎಂಬ ಅರಿವು ಸಹ ಅದರಲ್ಲಿ ಒಳಗೂಡುತ್ತದೆ.—ರೋಮಾಪುರ 14:10-12.
3. ಯೆಹೋವನ ಭಯವು ಕೆಲವು ವಿಧರ್ಮಿ ದೇವತೆಗಳಲ್ಲಿ ಜತೆಗೂಡಿದ ಭಯದೊಂದಿಗೆ ಹೇಗೆ ವೈದೃಶ್ಯವಾಗುತ್ತದೆ?
3 ದಿವ್ಯ ಭಯವು ರೋಗಸ್ವಭಾವದ್ದಲ್ಲ, ಆರೋಗ್ಯಕರ. ಯಾವುದು ಯೋಗ್ಯವೊ ಅದಕ್ಕಾಗಿ ದೃಢತೆಯಿಂದಿರುವಂತೆ ಅದು ಒಬ್ಬನನ್ನು ಪ್ರಚೋದಿಸುತ್ತದೆ ಹೊರತು ಕೆಟ್ಟದ್ದನ್ನು ಮಾಡುವ ಮೂಲಕ ಸಂಧಾನಮಾಡಿಕೊಳ್ಳಲಿಕ್ಕಲ್ಲ. ಭಯಪ್ರೇರಕನಾದ ದುಷ್ಟ ದೇವರೆಂದು ವರ್ಣಿಸಲ್ಪಟ್ಟ ಫಾಬಸ್ ಎಂಬ ಪುರಾತನ ಗ್ರೀಕ್ ದೇವನೊಂದಿಗೆ ಜತೆಗೂಡಿದ ಭಯದಂತೆ ಇದಿಲ್ಲ. ಶವಗಳನ್ನು, ಹಾವುಗಳನ್ನು ಮತ್ತು ತಲೆಬುರುಡೆಗಳನ್ನು ಅಲಂಕಾರ ವಸ್ತುಗಳಾಗಿ ಬಳಸುತ್ತಾ ಕೆಲವೊಮ್ಮೆ ರಕ್ತಪಿಪಾಸುವಾಗಿ ಚಿತ್ರಿಸಲ್ಪಡುವ ಹಿಂದೂ ದೇವತೆ ಕಾಳಿಯೊಂದಿಗೆ ಜತೆಗೂಡಿದ ಭಯದಂತೆಯೂ ಅದಿಲ್ಲ. ದಿವ್ಯ ಭಯವು ಆಕರ್ಷಿಸುತ್ತದೆ; ವಿಕರ್ಷಿಸುವುದಿಲ್ಲ. ಅದು ಪ್ರೀತಿ ಮತ್ತು ಗಣ್ಯತೆಯೊಡನೆ ಹೆಣೆಯಲ್ಪಟ್ಟಿದೆ. ಹೀಗೆ ದಿವ್ಯ ಭಯವು ನಮ್ಮನ್ನು ಯೆಹೋವನ ಕಡೆಗೆ ಸೆಳೆಯುತ್ತದೆ.—ಧರ್ಮೋಪದೇಶಕಾಂಡ 10:12, 13; ಕೀರ್ತನೆ 2:11.
ಅದು ಕೆಲವರಲ್ಲಿ ಇರಲು ಮತ್ತು ಇತರರಲ್ಲಿ ಇಲ್ಲದಿರಲು ಕಾರಣ
4. ಅಪೊಸ್ತಲ ಪೌಲನಿಂದ ವಿವರಿಸಲ್ಪಟ್ಟ ಪ್ರಕಾರ, ಮಾನವಕುಲವು ಹೇಗೆ ಅವನತಿಗೆ ಇಳಿದಿದೆ, ಮತ್ತು ಇದಕ್ಕೆ ಕಾರಣವೇನು?
4 ದಿವ್ಯ ಭಯದ ಗುಣದಿಂದ ಸಕಲ ಮಾನವಕುಲವು ಪ್ರೇರಿಸಲ್ಪಟ್ಟಿರುವುದಿಲ್ಲ. ಆರಂಭದ ಪರಿಪೂರ್ಣತೆಯಿಂದ ಮಾನವರು ಎಷ್ಟು ಅವನತಿಗೆ ಬಿದ್ದಿದ್ದಾರೆಂಬುದನ್ನು ರೋಮಾಪುರ 3:9-18 ರಲ್ಲಿ ಅಪೋಸ್ತಲ ಪೌಲನು ವಿವರಿಸುತ್ತಾನೆ. ಸಕಲರೂ ಪಾಪದ ಕೆಳಗಿದ್ದಾರೆಂದು ಹೇಳಿದ ಬಳಿಕ, ಪೌಲನು ಕೀರ್ತನೆಯಿಂದ ಉಲ್ಲೀಖಿಸುತ್ತಾ ಹೇಳುವುದು: “ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ.” (ನೋಡಿರಿ ಕೀರ್ತನೆ 14:1.) ಬಳಿಕ ಅವನು, ದೇವರನ್ನು ಹುಡುಕುವುದರಲ್ಲಿ ಮಾನವಕುಲದ ದುರ್ಲಕ್ಷ್ಯ, ಅವರಲ್ಲಿ ದಯೆಯ ಕೊರತೆ, ಅವರ ವಂಚನೆಯ ಮಾತುಗಳು, ಶಪಿಸುವಿಕೆ, ಮತ್ತು ರಕ್ತಪಾತ ಎಂಬಂತಹ ವಿಷಯಗಳನ್ನು ತಿಳಿಸುವ ಮೂಲಕ ಸವಿವರಗಳನ್ನು ಒದಗಿಸುತ್ತಾನೆ. ಎಷ್ಟು ನಿಷ್ಕೃಷ್ಟವಾಗಿ ಅದು ಇಂದಿನ ಲೋಕವನ್ನು ವರ್ಣಿಸುತ್ತದೆ! ಅಧಿಕತಮ ಜನರಿಗೆ ದೇವರಲ್ಲಿಯೂ ಆತನ ಉದ್ದೇಶಗಳಲ್ಲಿಯೂ ಯಾವ ಆಸಕ್ತಿಯೂ ಇಲ್ಲ. ದಯೆಯ ಯಾವುದೆ ತೋರಿಕೆಯು ಹೆಚ್ಚಾಗಿ ಏನಾದರೂ ಲಾಭಗಳಿಸುವ ಸಂದರ್ಭಗಳಿಗಾಗಿ ಮಾತ್ರ ಕಾದಿರಿಸಲ್ಪಡುತ್ತದೆ. ಸುಳ್ಳಾಡುವುದು ಮತ್ತು ಹೊಲಸು ಮಾತು ಸರ್ವಸಾಮಾನ್ಯ. ರಕ್ತಪಾತವು ವಾರ್ತೆಗಳಲ್ಲಿ ಮಾತ್ರವಲ್ಲ ಮನೋರಂಜನೆಯಲ್ಲಿಯೂ ತೋರಿಸಲ್ಪಡುತ್ತದೆ. ಅಂತಹ ಒಂದು ಪರಿಸ್ಥಿತಿಗೆ ಕಾರಣವೇನು? ನಾವೆಲ್ಲರೂ ಪಾಪಿಯಾದ ಆದಾಮನ ವಂಶಸ್ಥರು ನಿಜ, ಆದರೆ ಅಪೊಸ್ತಲ ಪೌಲನಿಂದ ವರ್ಣಿಸಲ್ಪಟ್ಟ ವಿಷಯಗಳನ್ನು ಜನರು ತಮ್ಮ ಜೀವನ ಮಾರ್ಗವಾಗಿ ಸ್ವೀಕರಿಸುವಾಗ, ಅದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿರುತ್ತದೆ. ಅದೇನೆಂದು ವಿವರಿಸುತ್ತಾ 18 ನೆಯ ವಚನವು ತಿಳಿಸುವುದು: “ಅವರ ಕಣ್ಣೆದುರಿಗೆ ದೇವರ ಭಯವೇ ಇಲ್ಲ.”—ನೋಡಿರಿ ಕೀರ್ತನೆ 36:1.
5. ಕೆಲವರಲ್ಲಿ ದಿವ್ಯ ಭಯವು ಇರುವಾಗ, ಇತರರಲ್ಲಿ ಅದು ಇರುವುದಿಲ್ಲವೇಕೆ?
5 ಆದರೂ, ಕೆಲವರಲ್ಲಿ ದಿವ್ಯ ಭಯವು ಇರುವಾಗ, ಬೇರೆಯವರಲ್ಲಿ ಅದು ಇಲ್ಲದಿರುವುದೇಕೆ? ಸರಳ ಮಾತಿನಲ್ಲಿ, ಕೆಲವರು ಅದನ್ನು ಬೆಳೆಸಿಕೊಳ್ಳುತ್ತಾರೆ, ಕೆಲವರು ಬೆಳೆಸಿಕೊಳ್ಳುವುದಿಲ್ಲ ಎಂಬ ಕಾರಣದಿಂದಲೆ. ನಮ್ಮಲ್ಲಿ ಯಾರೂ ಅದರೊಂದಿಗೆ ಹುಟ್ಟಿಲ್ಲವಾದರೂ, ಅದರ ಸಾಮರ್ಥ್ಯ ನಮಗೆಲ್ಲರಿಗೆ ಇದೆ. ದಿವ್ಯ ಭಯವು ನಾವು ಕಲಿಯಬೇಕಾಗಿರುವ ಒಂದು ವಿಷಯ. ಅನಂತರ, ಅದು ನಮ್ಮ ಜೀವನದಲ್ಲಿ ಪ್ರಬಲವಾದ ಪ್ರೇರೇಪಕ ಶಕ್ತಿಯಾಗಿರುವಂತೆ, ಅದನ್ನು ಬೆಳೆಸಿಕೊಳ್ಳಬೇಕಾದ ಅಗತ್ಯ ನಮಗಿದೆ.
ಒಂದು ಚಿತ್ತಾಕರ್ಷಕ ಆಮಂತ್ರಣ
6. ಕೀರ್ತನೆ 34:11 ರಲ್ಲಿನ ಆಮಂತ್ರಣವನ್ನು ನಮಗೆ ನೀಡುವಾತನು ಯಾರು ಮತ್ತು ದಿವ್ಯ ಭಯವು ಕಲಿಯಲ್ಪಡಬೇಕೆಂಬುದನ್ನು ಈ ವಚನವು ಹೇಗೆ ತೋರಿಸುತ್ತದೆ?
6 ಯೆಹೋವನ ಭಯವನ್ನು ಕಲಿಯಲು ಒಂದು ಚಿತ್ತಾಕರ್ಷಕ ಆಮಂತ್ರಣವನ್ನು ಕೀರ್ತನೆ 34 ರಲ್ಲಿ ನಮಗೆ ನೀಡಲಾಗಿದೆ. ಇದು ದಾವೀದನ ಕೀರ್ತನೆ. ಮತ್ತು ದಾವೀದನು ಯಾರನ್ನು ಮುನ್ಚಿತ್ರಿಸಿದನು? ಕರ್ತನಾದ ಯೇಸು ಕ್ರಿಸ್ತನನ್ನೇ. ಅಪೊಸ್ತಲ ಯೋಹಾನನು ಯೇಸುವಿಗೆ ವಿಶಿಷ್ಟವಾಗಿ ಅನ್ವಯಿಸಿದ ಒಂದು ಪ್ರವಾದನೆಯು, ಈ ಕೀರ್ತನೆಯ 20 ನೆಯ ವಚನದಲ್ಲಿ ದಾಖಲೆಯಾಗಿದೆ. (ಯೋಹಾನ 19:36) ನಮ್ಮ ದಿನಗಳಲ್ಲಿ, ಅಂತಹ ಒಂದು ಆಮಂತ್ರಣವನ್ನು 11 ನೆಯ ವಚನದಲ್ಲಿ ನಮಗೆ ನೀಡುವಾತನು ಯೇಸು ತಾನೇ: “ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ; ನಾನು ಯೆಹೋವನ ಭಯವನ್ನು ನಿಮಗೆ ಕಲಿಸುವೆನು.” ದಿವ್ಯ ಭಯವು ಕಲಿಯ ಸಾಧ್ಯವಿರುವ ಒಂದು ವಿಷಯವೆಂದು ಇದು ಸ್ಪಷ್ಟವಾಗಿಗಿ ತೋರಿಸುತ್ತದೆ, ಮತ್ತು ನಮಗೆ ಕಲಿಸಲು ಯೇಸು ಕ್ರಿಸ್ತನು ಉತ್ಕೃಷ್ಟವಾಗಿ ಅರ್ಹನಾಗಿದ್ದಾನೆ. ಅದೇಕೆ?
7. ಯಾರಿಂದ ದಿವ್ಯ ಭಯವನ್ನು ಕಲಿಯಬೇಕೊ, ಆ ವಿಶೇಷ ವ್ಯಕ್ತಿಯು ಯೇಸು ಏಕೆ?
7 ದಿವ್ಯ ಭಯದ ಪ್ರಮುಖತೆಯನ್ನು ಯೇಸು ಕ್ರಿಸ್ತನು ತಿಳಿದಿದ್ದಾನೆ. ಇಬ್ರಿಯ 5:7 ಅವನ ಕುರಿತಾಗಿ ಅನ್ನುವುದು: “ಕ್ರಿಸ್ತನು ತಾನು ಭೂಲೋಕದಲ್ಲಿದ್ದಾಗ ಮರಣಕ್ಕೆ ತಪ್ಪಿಸಿ ಕಾಪಾಡ ಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ದೇವರ ಮೇಲಣ ಭಯಭಕ್ತಿ [“ದಿವ್ಯ ಭಯ,” NW]ಯ ನಿಮಿತ್ತ ಕೇಳಲ್ಪಟ್ಟನು.” ಅಂತಹ ದಿವ್ಯ ಭಯದ ಒಂದು ಗುಣವನ್ನು ತಾನು ಯಾತನೆಯ ಕಂಬದ ಮೇಲೆ ಮರಣವನ್ನು ಎದುರಿಸುವ ಮುಂಚೆಯೂ ಯೇಸು ಕ್ರಿಸ್ತನು ಪ್ರದರ್ಶಿಸಿದ್ದನು. ಜ್ಞಾನೋಕ್ತಿ 8 ನೆಯ ಅಧ್ಯಾಯದಲ್ಲಿ ದೇವರ ಕುಮಾರನು ಜ್ಞಾನದ ವ್ಯಕ್ತೀಕರಣವಾಗಿ ವರ್ಣಿಸಲ್ಪಟ್ಟಿದ್ದಾನೆಂಬುದನ್ನು ನೆನಪಿಸಿರಿ. ಮತ್ತು ಜ್ಞಾನೋಕ್ತಿ 9:10 ರಲ್ಲಿ, “ಯೆಹೋವನ ಭಯವೇ ಜ್ಞಾನಕ್ಕೆ ಮೂಲವು” ಎಂದು ನಮಗೆ ಹೇಳಲಾಗುತ್ತದೆ. ಹೀಗೆ ಈ ದಿವ್ಯ ಭಯವು ದೇವರ ಕುಮಾರನು ಭೂಮಿಗೆ ಬರುವ ಬಹಳ ಮುಂಚಿತವಾಗಿಯೆ ಅವನ ವ್ಯಕ್ತಿತ್ವದ ಒಂದು ಮೂಲಭೂತ ಭಾಗವಾಗಿತ್ತು.
8. ಯೆಹೋವನ ಭಯದ ಕುರಿತು ಯೆಶಾಯ 11:2, 3 ರಲ್ಲಿ ನಾವೇನನ್ನು ಕಲಿಯುತ್ತೇವೆ?
8 ಅದಲ್ಲದೆ, ಮೆಸ್ಸೀಯ ಸಂಬಂಧಿತ ಅರಸನಾದ ಯೇಸುವಿನ ಕುರಿತು ಯೆಶಾಯ 11:2, 3 ಹೇಳುವುದು: “[“ಅವನ,” NW] ಮೇಲೆ ಜ್ಞಾನವಿವೇಕದಾಯಕ ಆತ್ಮ, ಆಲೋಚನಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನೂ ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವದು; ಯೆಹೋವನ ಭಯವು ಅವನಿಗೆ ಪರಿಮಳಿಸುವದು.” ಅದನ್ನು ಎಷ್ಟು ಸುಂದರವಾಗಿ ಅಭಿವ್ಯಕ್ತಿಸಲಾಗಿದೆ! ಯೆಹೋವನ ಭಯವು ಅಹಿತಕರವೇನೂ ಅಲ್ಲ. ಅದು ಸಕಾರಾತ್ಮಕ ಮತ್ತು ರಚನಾತ್ಮಕ. ಯಾವುದರ ಮೇಲೆ ಕ್ರಿಸ್ತನು ಅರಸನಾಗಿ ಆಳುತ್ತಾನೋ ಆ ಇಡೀ ಆದಿಪತ್ಯವನ್ನು ವ್ಯಾಪಿಸುವ ಒಂದು ಗುಣವದು. ಆತನು ಈಗ ಆಳುತ್ತಿದ್ದಾನೆ, ಮತ್ತು ತನ್ನ ಪ್ರಜೆಗಳಾಗಿ ಒಟ್ಟುಗೂಡಿಸಲ್ಪಡುತ್ತಿರುವವರೆಲ್ಲರಿಗೆ ಯೆಹೋವನ ಭಯವನ್ನು ಅವನು ಬೋಧಿಸುತ್ತಿದ್ದಾನೆ. ಹೇಗೆ?
9. ಯೇಸು ಕ್ರಿಸ್ತನು ನಮಗೆ ಹೇಗೆ ಯೆಹೋವನ ಭಯವನ್ನು ಕಲಿಸುತ್ತಿದ್ದಾನೆ, ಮತ್ತು ಅದರ ಕುರಿತು ನಾವೇನನ್ನು ಕಲಿಯುವಂತೆ ಆತನು ಬಯಸುತ್ತಾನೆ?
9 ನಮ್ಮ ಸಭಾ ಕೂಟಗಳು, ಸಮ್ಮೇಳನಗಳು, ಮತ್ತು ಅಧಿವೇಶನಗಳ ಮೂಲಕವಾಗಿ, ಸಭೆಯ ನಿಯುಕ್ತ ಶಿರಸ್ಸಾದ ಮತ್ತು ಮೆಸ್ಸೀಯ ಸಂಬಂಧಿತ ಅರಸನಾದ ಯೇಸು, ದೇವರ ಭಯವೆಂದರೇನು ಮತ್ತು ಅದು ಏಕೆ ಅಷ್ಟು ಉಪಯುಕ್ತವೆಂದು ಸ್ಪಷ್ಟವಾಗಿಗಿ ತಿಳಿಯಲು ನಮಗೆ ಸಹಾಯ ಮಾಡುತ್ತಾನೆ. ಹೀಗೆ ಯೆಹೋವನ ಭಯದಲ್ಲಿ ಆತನು ಆನಂದಿಸುವ ಪ್ರಕಾರ ನಾವು ಆನಂದವನ್ನು ಕಾಣಲು ಕಲಿಯುವಂತೆ, ಅದಕ್ಕಾಗಿ ನಮ್ಮ ಗಣ್ಯತೆಯನ್ನು ಆಳಗೊಳಿಸಲು ಆತನು ಪ್ರಯತ್ನಿಸುತ್ತಾನೆ.
ನೀವು ಪ್ರಯತ್ನ ಮಾಡುವಿರೊ?
10. ಕ್ರೈಸ್ತ ಕೂಟಗಳಿಗೆ ಹಾಜರಾಗುವಾಗ, ಯೆಹೋವನ ಭಯವನ್ನು ತಿಳಿದುಕೊಳ್ಳಬೇಕಾದರೆ ನಾವೇನನ್ನು ಮಾಡಬೇಕು?
10 ನಾವು ಕೇವಲ ಬೈಬಲನ್ನು ಓದುವುದು ಅಥವಾ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗುವುದು, ದಿವ್ಯ ಭಯವು ನಮ್ಮಲ್ಲಿರುವುದೆಂಬ ಖಾತರಿಯನ್ನು ಕೊಡದು ನಿಶ್ಚಯ. ಯೆಹೋವನ ಭಯವನ್ನು ನಾವು ನಿಜವಾಗಿಯೂ ತಿಳಿದುಕೊಳ್ಳಬೇಕಾದರೆ ನಾವೇನು ಮಾಡುವ ಅಗತ್ಯವಿದೆಯೆಂಬುದನ್ನು ಗಮನಿಸಿರಿ. ಜ್ಞಾನೋಕ್ತಿ 2:1-5 ಹೇಳುವುದು: “ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ, ನಿನ್ನ ಕಿವಿಯನ್ನು ಜ್ಞಾನದ ಕಡೆಗೂ ಹೃದಯವನ್ನು ವಿವೇಕದ ಕಡೆಗೂ ತಿರುಗಿಸು; ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ.” ಆದುದರಿಂದ ಕೂಟಗಳಿಗೆ ಹಾಜರಾಗುವಾಗ, ಏನು ಹೇಳಲಾಗುತ್ತದೊ ಅದಕ್ಕೆ ಗಮನಕೊಡುವ, ಏಕಾಗ್ರತೆಯನ್ನಿಟ್ಟು ಮುಖ್ಯ ವಿಷಯಗಳನ್ನು ನೆನಪಿನಲ್ಲಿಡಲು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡುವ, ಯೆಹೋವನ ಕುರಿತ ನಮ್ಮ ಭಾವನೆಯು—ಕೊಡಲ್ಪಡುವ ಬುದ್ಧಿವಾದದೆಡೆಗೆ ನಮ್ಮ ಮನೋಭಾವವನ್ನು ಹೇಗೆ ಪ್ರಭಾವಿಸಬೇಕೆಂದು ಗಹನವಾಗಿ ಯೋಚಿಸುವ—ಹೌದು, ನಮ್ಮ ಹೃದಯವನ್ನು ತೆರೆಯುವ ಅಗತ್ಯ ನಮಗಿದೆ. ಆಗ ನಾವು ಯೆಹೋವನ ಭಯವನ್ನು ತಿಳಿದುಕೊಳ್ಳುವೆವು.
11. ದಿವ್ಯ ಭಯವನ್ನು ಬೆಳೆಸಿಕೊಳ್ಳಲು, ನಾವು ಶ್ರದ್ಧೆಯಿಂದ ಮತ್ತು ಅಡಿಗಡಿಗೆ ಏನು ಮಾಡಬೇಕು?
11 ಕೀರ್ತನೆ 86:11 ಇನ್ನೊಂದು ಪ್ರಧಾನ ವಿಷಯಕ್ಕೆ, ಪ್ರಾರ್ಥನೆಯ ಕಡೆಗೆ ಗಮನವನ್ನು ಸೆಳೆಯುತ್ತದೆ. “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೀ ಇಟ್ಟುಕೊಂಡು ನಡೆಯುವೆನು” ಎಂದು ಕೀರ್ತನೆಗಾರನು ಪ್ರಾರ್ಥಿಸಿದನು. “ನಿನ್ನ ನಾಮಕ್ಕೆ ಭಯಪಡುವಂತೆ ನನ್ನ ಹೃದಯವನ್ನು ಏಕೀಕರಿಸು (NW).” ಯೆಹೋವನು ಆ ಪ್ರಾರ್ಥನೆಯನ್ನು ಅಂಗೀಕರಿಸಿದನು, ಯಾಕಂದರೆ ಅವನು ಅದನ್ನು ಬೈಬಲಿನಲ್ಲಿ ದಾಖಲೆಯಾಗುವಂತೆ ಮಾಡಿದ್ದನು. ದಿವ್ಯ ಭಯವನ್ನು ಬೆಳೆಸಿಕೊಳ್ಳಲು ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸುವ ಅಗತ್ಯ ನಮಗೂ ಇದೆ, ಮತ್ತು ಶ್ರದ್ಧೆಯಿಂದ ಮತ್ತು ಅಡಿಗಡಿಗೆ ಪ್ರಾರ್ಥಿಸುವುದರಿಂದ ನಾವು ಪ್ರಯೋಜನವನ್ನು ಪಡೆಯುವೆವು.—ಲೂಕ 18:1-8.
ನಿಮ್ಮ ಹೃದಯವು ಒಳಗೊಂಡಿದೆ
12. ಹೃದಯಕ್ಕೆ ವಿಶೇಷ ಗಮನವು ಏಕೆ ಕೊಡಲ್ಪಡಬೇಕು, ಮತ್ತು ಅದು ಏನನ್ನು ಒಳಗೊಳ್ಳುತ್ತದೆ?
12 ಕೀರ್ತನೆ 86:11 ರಲ್ಲಿ ನಾವು ಗಮನಿಸಬೇಕಾದ ಇನ್ನೊಂದು ಸಂಗತಿ ಇದೆ. ದೇವರ ಭಯದ ಮಾನಸಿಕ ಗ್ರಹಿಕೆಗಾಗಿ ಮಾತ್ರ ಕೀರ್ತನೆಗಾರನು ಕೇಳುತ್ತಿದ್ದುದ್ದಲ್ಲ. ಅವನು ತನ್ನ ಹೃದಯದ ಕುರಿತು ತಿಳಿಸುತ್ತಾನೆ. ದಿವ್ಯ ಭಯದ ಬೆಳೆಸಿಕೊಳ್ಳುವಿಕೆಯು ಸಾಂಕೇತಿಕ ಹೃದಯವನ್ನು ಒಳಗೊಳ್ಳುತ್ತದೆ, ಇದಕ್ಕೆ ವಿಶೇಷ ಗಮನವು ಅವಶ್ಯ ಯಾಕಂದರೆ ಅದು ನಮ್ಮ ಜೀವನದ ಎಲ್ಲ ಚಟುವಟಿಕೆಗಳಲ್ಲಿ ತೋರಿಬರುವ ಆಂತರಿಕ ವ್ಯಕ್ತಿಯಾಗಿದೆ ಮತ್ತು ನಮ್ಮ ಆಲೋಚನೆಗಳನ್ನು, ನಮ್ಮ ವಿಚಾರಗಳನ್ನು, ನಮ್ಮ ಅಪೇಕ್ಷೆಗಳನ್ನು, ನಮ್ಮ ಪ್ರಚೋದನೆಗಳನ್ನು, ನಮ್ಮ ಗುರಿಗಳನ್ನು ಒಳಗೊಳ್ಳುತ್ತದೆ.
13. (ಎ) ಒಬ್ಬನ ಹೃದಯವು ವಿಭಾಗಿತವಾಗಿದೆಯೆಂಬುದನ್ನು ಯಾವುದು ಸೂಚಿಸಬಹುದು? (ಬಿ) ದಿವ್ಯ ಭಯವನ್ನು ನಾವು ಬೆಳೆಸಿಕೊಳ್ಳುವಾಗ, ಯಾವ ಗುರಿಯೆಡೆಗೆ ನಾವು ಕಾರ್ಯನಡಿಸಬೇಕು?
13 ಒಬ್ಬ ವ್ಯಕ್ತಿಯ ಹೃದಯವು ವಿಭಾಗಿತವಾಗಬಹುದೆಂದು ಬೈಬಲು ಎಚ್ಚರಿಸುತ್ತದೆ. ಅದು ವಂಚಕವಾಗಿರಬಲ್ಲದು. (ಕೀರ್ತನೆ 12:2; ಯೆರೆಮೀಯ 17:9) ಹಿತಕರವಾದ ಚಟುವಟಿಕೆಗಳಲ್ಲಿ—ಸಭಾ ಕೂಟಗಳಿಗೆ ಮತ್ತು ಕ್ಷೇತ್ರ ಶುಶ್ರೂಷೆಗೆ ಹೋಗುವುದು—ಪಾಲಿಗರಾಗಲು ಅದು ನಮ್ಮನ್ನು ಪ್ರೇರಿಸಬಹುದು, ಆದರೆ ಲೋಕದ ಜೀವನ ಕ್ರಮದ ನಿರ್ದಿಷ್ಟ ವಿಷಯಗಳನ್ನು ಸಹ ಅದು ಪ್ರೀತಿಸೀತು. ಇದು ರಾಜ್ಯಾಭಿರುಚಿಗಳನ್ನು ಪ್ರವರ್ಧಿಸುವುದರಲ್ಲಿ ನಿಜವಾಗಿ ಪೂರ್ಣಾತ್ಮದಿಂದಿರುವುದರಿಂದ ನಮ್ಮನ್ನು ತಡೆಯಬಹುದು. ಎಷ್ಟೆಂದರೂ ಇತರ ಅನೇಕರು ಮಾಡುವಷ್ಟನ್ನು ನಾವು ಮಾಡುತ್ತಿದ್ದೇವಲ್ಲಾ ಎಂದು ನಮ್ಮ ವಂಚಕ ಹೃದಯವು ಬಳಿಕ ನಮ್ಮನ್ನು ಮನವೊಪ್ಪಿಸಲು ಪ್ರಯತ್ನಿಸೀತು. ಅಥವಾ ಪ್ರಾಯಶಃ ಶಾಲೆಯಲ್ಲಿ ಯಾ ನಮ್ಮ ಐಹಿಕ ಕೆಲಸದ ಸ್ಥಳದಲ್ಲಿ, ಮನುಷ್ಯನ ಭಯದಿಂದ ಹೃದಯವು ಪ್ರಭಾವಿತವಾಗಬಹುದು. ಫಲಿತಾಂಶವಾಗಿ, ಆ ಪರಿಸರಗಳಲ್ಲಿ ನಾವು ನಮ್ಮನ್ನು ಯೆಹೋವನ ಸಾಕ್ಷಿಗಳಾಗಿ ಗುರುತಿಸಿಕೊಳ್ಳಲು ಹಿಂಜರಿದೇವು ಮತ್ತು ಕ್ರೈಸ್ತರಿಗೆ ಅಯುಕ್ತವಾದ ವಿಷಯಗಳನ್ನೂ ಮಾಡಿಯೇವು. ಆದರೂ, ತದನಂತರ, ನಮ್ಮ ಮನಸ್ಸಾಕ್ಷಿ ನಮ್ಮನ್ನು ಕಾಡುತ್ತದೆ. ನಾವು ಬಯಸುವುದು ಆ ರೀತಿಯ ವ್ಯಕ್ತಿಗಳಾಗಿರಲಿಕ್ಕಲ್ಲ. ಆದುದರಿಂದ ನಾವು ಕೀರ್ತನೆಗಾರನೊಂದಿಗೆ ಹೀಗೆ ಪ್ರಾರ್ಥಿಸುತ್ತೇವೆ: “ನಿನ್ನ ನಾಮಕ್ಕೆ ಭಯಪಡುವಂತೆ ನನ್ನ ಹೃದಯವನ್ನು ಏಕೀಕರಿಸು.” ಜೀವನದ ಎಲ್ಲ ಚಟುವಟಿಕೆಗಳಲ್ಲಿ ತೋರಿಬರುವಂತೆ, “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು” ತ್ತೇವೆಂಬುದಕ್ಕೆ, ನಮ್ಮ ಇಡೀ ಆಂತರಿಕ ವ್ಯಕ್ತಿಯು ಪುರಾವೆಯನ್ನು ಕೊಡುವಂತೆ ನಾವು ಬಯಸುತ್ತೇವೆ.—ಪ್ರಸಂಗಿ 12:13.
14, 15. (ಎ) ಬಾಬೆಲಿನ ಬಂದಿವಾಸದಿಂದ ಇಸ್ರಾಯೇಲಿನ ಪುನಃಸ್ಥಾಪನೆಯನ್ನು ಮುಂತಿಳಿಸುವಾಗ, ತನ್ನ ಜನರಿಗೆ ಏನನ್ನು ಕೊಡುವುದಾಗಿ ಯೆಹೋವನು ವಾಗ್ದಾನಿಸಿದನು? (ಬಿ) ತನ್ನ ಜನರ ಹೃದಯಗಳಲ್ಲಿ ದೇವರ ಭಯವನ್ನು ಬೇರೂರಿಸುವ ನೋಟದಿಂದ ಯೆಹೋವನು ಏನು ಮಾಡಿದನು? (ಸಿ) ಯೆಹೋವನ ಮಾರ್ಗಗಳಿಂದ ಇಸ್ರಾಯೇಲು ದೂರತೊಲಗಿದ್ದೇಕೆ?
14 ಅಂತಹ ದೈವಭಯದ ಹೃದಯವನ್ನು ತನ್ನ ಜನರಿಗೆ ಕೊಡುವೆನೆಂದು ಯೆಹೋವನು ವಾಗ್ದಾನಮಾಡಿದ್ದಾನೆ. ಯೆರೆಮೀಯ 32:37-39 ರಲ್ಲಿ ನಾವು ಓದುವ ಪ್ರಕಾರ, ಆತನು ಇಸ್ರಾಯೇಲ್ಯರ ಪುನಃಸ್ಥಾಪನೆಯನ್ನು ಮುಂತಿಳಿಸುತ್ತಾ ಅಂದದ್ದು: “[ಅವರನ್ನು] ಈ ಸ್ಥಳಕ್ಕೆ ಪುನಃ ಕರತಂದು ನಿರ್ಭಯವಾಗಿ ವಾಸಿಸುವಂತೆ ಮಾಡುವೆನು. ಅವರು ನನಗೆ ಜನರಾಗಿರುವರು, ನಾನು ಅವರಿಗೆ ದೇವರಾಗಿರುವೆನು. ನಾನು ಅವರ ಹಿತವನ್ನೂ ಅವರ ತರುವಾಯ ಅವರ ಮಕ್ಕಳ ಹಿತವನ್ನೂ ಬಯಸುತ್ತಾ ಅವರು ಸದಾ ನನ್ನಲ್ಲಿ ಭಯಭಕ್ತಿಯುಳ್ಳವರಾಗಿರುವಂತೆ [“ಸದಾ ನನಗೆ ಭಯಪಡುವಂತೆ,” NW] ಎಲ್ಲರಿಗೂ ಒಂದೇ ಮನಸ್ಸನ್ನೂ [“ಒಂದೇ ಹೃದಯವನ್ನು,” NW] ಒಂದೇ ಮಾರ್ಗವನ್ನೂ ಅನುಗ್ರಹಿಸುವೆನು.” ದೇವರ ವಾಗ್ದಾನವನ್ನು 40 ನೆಯ ವಚನದಲ್ಲಿ ಪುನಃ ಪುಷ್ಟಿಗೊಳಿಸಲಾಗಿದೆ: “ಅವರು ನನ್ನಿಂದಗಲದಂತೆ ಅವರ ಹೃದಯದೊಳಗೆ ನನ್ನ ಮೇಲಣ ಭಯಭಕ್ತಿಯನ್ನು ನೆಲೆಗೊಳಿಸುವೆನು.” ಸಾ.ಶ.ಪೂ. 537 ರಲ್ಲಿ, ಯೆಹೋವನು ತಾನು ವಾಗ್ದಾನ ಮಾಡಿದಂತೆಯೆ ಅವರನ್ನು ಯೆರೂಸಲೇಮಿಗೆ ಹಿಂದೆ ಕರೆದುತಂದನು. ಆದರೆ ಉಳಿದ ವಾಗ್ದಾನ, ‘ಆತನಿಗೆ ಸದಾ ಭಯಪಡುವಂತೆ ಒಂದೇ ಹೃದಯವನ್ನು’ ಕೊಡುವನೆಂಬುದರ ಕುರಿತೇನು? ಅವರ ಆಲಯವು ಸಾ.ಶ. 70 ರಲ್ಲಿ ನಾಶವಾಗಿ ಪುನಃ ಎಂದೂ ಕಟ್ಟಲ್ಪಡದೆ ಹೋಗುವಂತೆ, ಪುರಾತನ ಇಸ್ರಾಯೇಲ್ ಜನಾಂಗವು ಯೆಹೋವನು ಅವರನ್ನು ಬಾಬೆಲಿನಿಂದ ಹಿಂದೆ ಕರೆದುತಂದ ಬಳಿಕ ಆತನಿಂದ ದೂರತೊಲಗಿದ್ದೇಕೆ?
15 ಇದು ಯೆಹೋವನ ಪಾಲಿನ ಯಾವುದೇ ತಪ್ಪುವಿಕೆಯಿಂದಾಗಿ ಅಲ್ಲ. ತನ್ನ ಜನರ ಹೃದಯದಲ್ಲಿ ದೇವರ ಭಯವನ್ನು ಹಾಕುವುದಕ್ಕೆ ಯೆಹೋವನು ನಿಶ್ಚಯವಾಗಿ ಹೆಜ್ಜೆಗಳನ್ನು ತೆಗೆದುಕೊಂಡನು. ಅವರನ್ನು ಬಾಬೆಲಿನಿಂದ ಮುಕ್ತಗೊಳಿಸಿ ಸ್ವದೇಶಕ್ಕೆ ಪುನಃಸ್ಥಾಪಿಸಿದುದರಲ್ಲಿ ಆತನು ತೋರಿಸಿದ ಕರುಣೆಯ ಮೂಲಕ, ಅವನನ್ನು ಪರಮ ಪೂಜ್ಯತೆಯಿಂದ ವೀಕ್ಷಿಸುವುದಕ್ಕೆ ಅವರಿಗೆ ಹೇರಳ ಪುರಾವೆಯನ್ನಿತ್ತನು. ಅವೆಲ್ಲವನ್ನು ದೇವರು, ಪ್ರವಾದಿಗಳಾದ ಹಗ್ಗಾಯ, ಜೆಕರ್ಯ, ಮತ್ತು ಮಲಾಕಿಯನ ಮೂಲಕ, ಉಪದೇಶಕನಾಗಿ ಅವರ ಬಳಿಗೆ ಕಳುಹಿಸಲ್ಪಟ್ಟ ಎಜ್ರನ ಮೂಲಕ, ರಾಜ್ಯಪಾಲ ನೆಹೆಮೀಯನ ಮೂಲಕ, ಮತ್ತು ದೇವರ ಸ್ವಂತ ಕುಮಾರನ ಮೂಲಕವೂ—ಮರುಜ್ಞಾಪನಗಳು, ಬುದ್ಧಿವಾದ, ಮತ್ತು ಗದರಿಕೆಯಿಂದ ಪುಷ್ಟೀಕರಿಸಿದನು. ಕೆಲವೊಮ್ಮೆ ಜನರು ಕಿವಿಗೊಟ್ಟರು. ಹಗ್ಗಾಯ ಮತ್ತು ಜೆಕರ್ಯನ ಪ್ರೇರೇಪಣೆಯ ಮೇರೆಗೆ ಯೆಹೋವನ ಆಲಯವನ್ನು ಪುನಃ ಕಟ್ಟಿದಾಗ ಮತ್ತು ಎಜ್ರನ ದಿನಗಳಲ್ಲಿ ವಿದೇಶೀ ಪತ್ನಿಯರನ್ನು ಕಳುಹಿಸಿಬಿಟ್ಟಾಗ, ಅವರು ಹಾಗೆ ಮಾಡಿದರು. (ಎಜ್ರನು 5:1, 2; 10:1-4) ಆದರೆ ಹೆಚ್ಚು ಸಲ ಅವರು ವಿಧೇಯರಾಗಲಿಲ್ಲ. ಗಮನಕೊಡುವ ವಿಷಯದಲ್ಲಿ ಅವರು ಹೊಂದಿಕೆಯಿರುವವರಾಗಿರಲಿಲ್ಲ; ಬುದ್ಧಿವಾದಕ್ಕೆ ಪ್ರತಿಕ್ರಿಯೆ ತೋರಿಸುವುದನ್ನು ಅವರು ಮುಂದುವರಿಸಲಿಲ್ಲ; ಅವರು ತಮ್ಮ ಹೃದಯಗಳನ್ನು ತೆರೆದಿಡಲಿಲ್ಲ. ಇಸ್ರಾಯೇಲ್ಯರು ದಿವ್ಯ ಭಯವನ್ನು ಬೆಳಸಿಕೊಳ್ಳ ಲಿಲ್ಲ, ಮತ್ತು ಫಲಿತಾಂಶವಾಗಿ, ಅದು ಅವರ ಜೀವನದಲ್ಲಿ ಒಂದು ಪ್ರಬಲವಾದ ಪ್ರೇರಕ ಶಕ್ತಿಯಾಗಿರಲಿಲ್ಲ.—ಮಲಾಕಿಯ 1:6; ಮತ್ತಾಯ 15:7, 8.
16. ಯಾರ ಹೃದಯಗಳಲ್ಲಿ ಯೆಹೋವನು ದಿವ್ಯ ಭಯವನ್ನು ಬೇರೂರಿಸಿದ್ದಾನೆ?
16 ಆದರೂ, ತನ್ನ ಜನರ ಹೃದಯಗಳಲ್ಲಿ ದಿವ್ಯ ಭಯವನ್ನು ಹಾಕುವ ಯೆಹೋವನ ವಾಗ್ದಾನವು ನಿಷ್ಫಲಗೊಳ್ಳಲಿಲ್ಲ. ಆತ್ಮಿಕ ಇಸ್ರಾಯೇಲ್ಯರೊಂದಿಗೆ ಅವನೊಂದು ಹೊಸ ಒಡಂಬಡಿಕೆಯನ್ನು ಮಾಡಿಕೊಂಡು, ಆ ಕ್ರೈಸ್ತರಿಗೆ ಒಂದು ಸ್ವರ್ಗೀಯ ನಿರೀಕ್ಷೆಯನ್ನು ಕೊಟ್ಟನು. (ಯೆರೆಮೀಯ 31:33; ಗಲಾತ್ಯ 6:16) ದೇವರು ಅವರನ್ನು 1919 ರಲ್ಲಿ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಬಂದಿವಾಸದಿಂದ ಬಿಡಿಸಿದನು. ಅವರ ಹೃದಯಗಳಲ್ಲಿ ತನ್ನ ಭಯವನ್ನು ದೃಢವಾಗಿ ಬೇರೂರಿಸಿದ್ದಾನೆ. ಇದು ಅವರಿಗೆ ಮತ್ತು ರಾಜ್ಯದ ಭೂಪ್ರಜೆಗಳಾಗಿ ಜೀವಿಸುವ ನಿರೀಕ್ಷೆಯಿರುವ “ಮಹಾ ಸಮೂಹ”ಕ್ಕೆ ಹೇರಳವಾದ ಪ್ರಯೋಜನಗಳನ್ನು ತಂದಿರುತ್ತದೆ. (ಯೆರೆಮೀಯ 32:39; ಪ್ರಕಟನೆ 7:9) ಹೀಗೆ ಇವರ ಹೃದಯದಲ್ಲೂ ಯೆಹೋವನ ಭಯವು ಇರುವಂತಾಗಿಯದೆ.
ದಿವ್ಯ ಭಯವು ನಮ್ಮ ಹೃದಯಗಳಲ್ಲಿ ಬೇರೂರುವ ವಿಧ
17. ನಮ್ಮ ಹೃದಯಗಳಲ್ಲಿ ಯೆಹೋವನು ಹೇಗೆ ದಿವ್ಯ ಭಯವನ್ನು ಹಾಕಿದ್ದಾನೆ?
17 ಈ ದಿವ್ಯ ಭಯವನ್ನು ಯೆಹೋವನು ನಮ್ಮ ಹೃದಯಗಳಲ್ಲಿ ಹೇಗೆ ಬೇರೂರಿಸಿದ್ದಾನೆ? ಆತನ ಆತ್ಮದ ಕಾರ್ಯಗತಿಯ ಮೂಲಕ. ಮತ್ತು ಪವಿತ್ರಾತ್ಮದ ಒಂದು ಉತ್ಪನ್ನವಾಗಿರುವ ಯಾವ ವಿಷಯವು ನಮ್ಮಲ್ಲಿದೆ? ದೇವರ ಪ್ರೇರಿತ ವಾಕ್ಯವಾದ, ಬೈಬಲೇ. (2 ತಿಮೊಥೆಯ 3:16, 17) ನಾವೆಲ್ಲರು ದಿವ್ಯ ಭಯವನ್ನು ವಿಕಸಿಸುವಂತೆ ಗತಕಾಲದಲ್ಲಿ ತಾನು ಮಾಡಿದ ವಿಷಯಗಳ ಮೂಲಕ, ತನ್ನ ಪ್ರವಾದನಾ ವಾಕ್ಯದ ನೆರವೇರಿಕೆಯಲ್ಲಿ ತನ್ನ ಸೇವಕರೊಂದಿಗೆ ಈಗ ತನ್ನ ವ್ಯವಹರಿಸುವಿಕೆಗಳ ಮೂಲಕ, ಮತ್ತು ಬರಲಿರುವ ವಿಷಯಗಳ ಪ್ರವಾದನೆಗಳ ಮೂಲಕ ಆತನು ಒಂದು ಸೂಕ್ತ ಬುನಾದಿಯನ್ನು ಒದಗಿಸುತ್ತಾನೆ.—ಯೆಹೋಶುವ 24:2-15; ಇಬ್ರಿಯ 10:30, 31.
18, 19. ಅಧಿವೇಶನಗಳು, ಸಮ್ಮೇಳನಗಳು, ಮತ್ತು ಸಭಾಕೂಟಗಳು ದಿವ್ಯ ಭಯವನ್ನು ಗಳಿಸಲು ನಮಗೆ ಹೇಗೆ ನೆರವಾಗುತ್ತವೆ?
18 ಧರ್ಮೋಪದೇಶಕಾಂಡ 4:10 ರಲ್ಲಿ ವರದಿಸಿದಂತೆ, ಯೆಹೋವನು ಮೋಶೆಗೆ ಹೇಳಿದ್ದು ಗಮನಾರ್ಹ: “ಜನರೆಲ್ಲರನ್ನು ನನ್ನ ಹತ್ತಿರಕ್ಕೆ ಕೂಡಿಸು; ಅವರು ತಾವು ಭೂಮಿಯ ಮೇಲಿರುವ ದಿನಗಳಲ್ಲೆಲ್ಲಾ ನನಗೆ ಭಯಭಕ್ತಿಯಿಂದಿರುವದಕ್ಕೆ ಕಲಿತುಕೊಂಡು ತಮ್ಮ ಮಕ್ಕಳಿಗೂ ಕಲಿಸಿಕೊಡುವಂತೆ ಅವರಿಗೆ ಆಜ್ಞೆಗಳನ್ನು ತಿಳಿಸುತ್ತೇನೆ.” ತದ್ರೀತಿಯಲ್ಲಿ ಇಂದು, ತನ್ನ ಜನರು ತನಗೆ ಭಯಪಡುವಂತೆ ಕಲಿಯಲಿಕ್ಕಾಗಿ ಸಹಾಯ ಮಾಡಲು ಯೆಹೋವನು ಹೇರಳವಾದ ಒದಗಿಸುವಿಕೆಗಳನ್ನು ಮಾಡಿದ್ದಾನೆ. ಅಧಿವೇಶನಗಳಲ್ಲಿ, ಸಮ್ಮೇಳನಗಳಲ್ಲಿ, ಮತ್ತು ಸಭಾಕೂಟಗಳಲ್ಲಿ, ಯೆಹೋವನ ಪ್ರೀತಿಪೂರ್ವಕವಾದ ದಯೆ ಮತ್ತು ಆತನ ಒಳ್ಳೇತನದ ಪುರಾವೆಯನ್ನು ನಾವು ಕಥನಮಾಡುತ್ತೇವೆ. ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕವನ್ನು ಅಧ್ಯಯನ ಮಾಡುವಾಗ ನಾವದನ್ನೇ ಮಾಡುತ್ತಿದ್ದೆವು. ಆ ಅಧ್ಯಯನವು ನಿಮ್ಮನ್ನು ಮತ್ತು ಯೆಹೋವನೆಡೆಗೆ ನಿಮ್ಮ ಮನೋಭಾವವನ್ನು ಹೇಗೆ ಪ್ರಭಾವಿಸಿತು? ನಮ್ಮ ಸ್ವರ್ಗೀಯ ಪಿತನ ಮಹಾ ವ್ಯಕ್ತಿತ್ವದ ಹಲವಾರು ವೈಶಿಷ್ಟ್ಯಗಳು ಆತನ ಪುತ್ರನಲ್ಲಿ ಪ್ರತಿಬಿಂಬಿಸಿದ್ದನ್ನು ನೀವು ಕಂಡಾಗ, ದೇವರನ್ನೆಂದೂ ಅಸಂತೋಷಗೊಳಿಸದಿರುವ ನಿಮ್ಮ ಅಪೇಕ್ಷೆಯನ್ನು ಇದು ಬಲಪಡಿಸಲಿಲ್ಲವೆ?—ಕೊಲೊಸ್ಸೆ 1:15.
19 ನಮ್ಮ ಕೂಟಗಳಲ್ಲಿ, ಗತಕಾಲದಲ್ಲಿ ಯೆಹೋವನು ತನ್ನ ಜನರನ್ನು ಬಿಡುಗಡೆಮಾಡಿದ ವೃತ್ತಾಂತಗಳನ್ನು ಸಹ ನಾವು ಅಭ್ಯಸಿಸುತ್ತೇವೆ. (2 ಸಮುವೇಲ 7:23) ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ ಸಹಾಯದಿಂದ ಬೈಬಲಿನ ಪ್ರಕಟನೆ ಪುಸ್ತಕವನ್ನು ನಾವು ಅಧ್ಯಯನ ಮಾಡುವಾಗ, ಈ 20 ನೆಯ ಶತಮಾನದಲ್ಲಿ ಈಗಾಗಲೆ ನೆರವೇರಿರುವ ಪ್ರವಾದನಾ ದರ್ಶನಗಳ ಕುರಿತು ಮತ್ತು ಇನ್ನೂ ಬರಲಿರುವ ಭಯ ಪ್ರೇರೇಪಕ ಘಟನೆಗಳ ಕುರಿತು ನಾವು ಕಲಿಯುತ್ತೇವೆ. ದೇವರ ಅಂಥ ಕೃತ್ಯಗಳೆಲ್ಲವುಗಳ ಕುರಿತು, ಕೀರ್ತನೆ 66:5 ಹೇಳುವುದು: “ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ; ಆತನ ಆಳಿಕೆ ನರರಲ್ಲಿ ಭಯಹುಟ್ಟಿಸತಕ್ಕದ್ದಾಗಿದೆ.” ಹೌದು, ಯೋಗ್ಯವಾಗಿ ವೀಕ್ಷಿಸಿದಲ್ಲಿ, ದೇವರ ಈ ಕಾರ್ಯಗಳು ನಮ್ಮ ಹೃದಯಗಳಲ್ಲಿ ಯೆಹೋವನ ಭಯವನ್ನು, ಒಂದು ಪರಮ ಪೂಜ್ಯಭಾವವನ್ನು ಬೇರೂರಿಸುತ್ತವೆ. ಹೀಗೆ ಯೆಹೋವ ದೇವರು ತನ್ನ ವಾಗ್ದಾನವನ್ನು ಹೇಗೆ ನೆರವೇರಿಸುತ್ತಾನೆಂದು ನಾವು ಗ್ರಹಿಸಬಲ್ಲೆವು: “ಅವರು ನನ್ನಿಂದಗಲದಂತೆ ಅವರ ಹೃದಯದೊಳಗೆ ನನ್ನ ಮೇಲಣ ಭಯಭಕ್ತಿಯನ್ನು ನೆಲೆಗೊಳಿಸುವೆನು.”—ಯೆರೆಮೀಯ 32:40.
20. ದಿವ್ಯ ಭಯವು ನಮ್ಮ ಹೃದಯಗಳಲ್ಲಿ ಆಳವಾಗಿ ಬೇರೂರುವಂತಾಗಲು, ನಮ್ಮಿಂದ ಏನು ಆವಶ್ಯಕವಾಗಿದೆ?
20 ಆದರೆ, ನಮ್ಮ ಪಾಲಿನ ಪ್ರಯತ್ನದ ಹೊರತು ದಿವ್ಯ ಭಯವು ನಮ್ಮ ಹೃದಯದಲ್ಲಿರುವುದಿಲ್ಲವೆಂಬುದು ಸುವ್ಯಕ್ತ. ಫಲಿತಾಂಶಗಳು ಯಾಂತ್ರಿಕವಲ್ಲ. ಯೆಹೋವನು ತನ್ನ ಪಾಲನ್ನು ಮಾಡುತ್ತಾನೆ. ದಿವ್ಯ ಭಯವನ್ನು ಬೆಳೆಸಿಕೊಳ್ಳುವ ಮೂಲಕ ನಾವು ನಮ್ಮ ಪಾಲನ್ನು ಮಾಡಬೇಕು. (ಧರ್ಮೋಪದೇಶಕಾಂಡ 5:29) ಮಾಂಸಿಕ ಇಸ್ರಾಯೇಲ್ಯರು ಅದನ್ನು ಮಾಡಲು ತಪ್ಪಿದರು. ಆದರೆ ಯೆಹೋವನಲ್ಲಿ ಆತುಕೊಂಡವರಾಗಿ, ಆತ್ಮಿಕ ಇಸ್ರಾಯೇಲ್ಯರು ಮತ್ತು ಅವರ ಸಂಗಡಿಗರು, ದೇವರಿಗೆ ಭಯಪಡುವವರಿಗೆ ಬರುವ ಅನೇಕ ಪ್ರಯೋಜನಗಳನ್ನು ಈಗಾಗಲೆ ಅನುಭವಿಸುತ್ತಿದ್ದಾರೆ. ಮುಂದಿನ ಲೇಖನದಲ್ಲಿ ಈ ಪ್ರಯೋಜನಗಳಲ್ಲಿ ಕೆಲವನ್ನು ನಾವು ಪರಿಗಣಿಸುವೆವು.
ನೀವು ಹೇಗೆ ಉತ್ತರಿಸುವಿರಿ?
◻ ದಿವ್ಯ ಭಯ ಎಂದರೇನು?
◻ ಯೆಹೋವನ ಭಯದಲ್ಲಿ ಆನಂದವನ್ನು ಕಂಡುಕೊಳ್ಳಲು ನಮಗೆ ಹೇಗೆ ಕಲಿಸಲಾಗುತ್ತಿದೆ?
◻ ದಿವ್ಯ ಭಯವನ್ನು ಪಡೆದುಕೊಳ್ಳಲು, ನಮ್ಮ ಪಾಲಿನ ಯಾವ ಪ್ರಯತ್ನ ಆವಶ್ಯಕ?
◻ ದಿವ್ಯ ಭಕ್ತಿಯ ಗಳಿಸುವಿಕೆಯು ನಮ್ಮ ಸಾಂಕೇತಿಕ ಹೃದಯದ ಎಲ್ಲ ವಿಷಯಾಂಶಗಳನ್ನು ಒಳಗೂಡುತ್ತದೆಯೇಕೆ?
[ಪುಟ 12,13 ರಲ್ಲಿರುವಚಿತ್ರಗಳು]
ಯೆಹೋವನ ಭಯವನ್ನು ತಿಳಿದುಕೊಳ್ಳಲು ಶ್ರದ್ಧಾಯುಕ್ತ ಅಧ್ಯಯನವು ಆವಶ್ಯಕ