ದೈವಿಕ ಭಯವನ್ನು ಬೆಳೆಸುವುದು
“ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.”—ಜ್ಞಾನೋಕ್ತಿ 3:7.
1. ಜ್ಞಾನೋಕ್ತಿಗಳು ಯಾರಿಗಾಗಿ ಬರೆಯಲ್ಪಟ್ಟವು?
ಬೈಬಲ್ ಪುಸ್ತಕವಾದ ಜ್ಞಾನೋಕ್ತಿಯಲ್ಲಿ ಆತ್ಮಿಕ ಬುದ್ಧಿವಾದದ ನಿಕ್ಷೇಪವೇ ಇದೆ. ಆರಂಭದಲ್ಲಿ ತನ್ನ ಪ್ರತಿನಿಧಿರೂಪದ ಇಸ್ರಾಯೇಲ್ ಜನಾಂಗಕ್ಕೆ ಶಿಕ್ಷಣ ನೀಡಲು ಯೆಹೋವನು ಈ ಕೈಪಿಡಿಯನ್ನು ಒದಗಿಸಿದನು. ಇಂದು ಇದು “ಯುಗಾಂತ್ಯಕ್ಕೆ ಬಂದಿರುವವರಾದ” ಆತನ ಪವಿತ್ರ ಕ್ರೈಸ್ತ ಜನಾಂಗಕ್ಕೆ ವಿವೇಕದ ಮಾತುಗಳನ್ನು ಒದಗಿಸುತ್ತದೆ.—1 ಕೊರಿಂಥ 10:11; ಜ್ಞಾನೋಕ್ತಿ 1:1-5; 1 ಪೇತ್ರ 2:9.
2. ಜ್ಞಾನೋಕ್ತಿ 3:7 ರ ಎಚ್ಚರಿಕೆ ಇಂದು ಅತಿ ಸಮಯೋಚಿತವೇಕೆ?
2 ಜ್ಞಾನೋಕ್ತಿ 3:7 ಕ್ಕೆ ತಿರುಗುವಾಗ ನಾವು ಓದುವುದು: “ನೀನೇ ಬುದ್ಧಿವಂತನು ಎಂದೆಣಿಸದೆ ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.” ನಮ್ಮ ಆದಿ ಹೆತ್ತವರ ಸಮಯದಂದಿನಿಂದ, ಆ ಸರ್ಪವು ಹವ್ವಳಿಗೆ, ಅವರು, ‘ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ತಿಳಿಯುವರು’ ಎಂದು ವಾಗ್ದಾನದಿಂದ ಸೆಳೆದಂದಿನಿಂದ, ಬರಿಯ ಮಾನವ ವಿವೇಕವು ಮಾನವಸಂತತಿಯ ಆವಶ್ಯಕತೆಗಳಿಗೆ ಉತ್ತರ ನೀಡುವುದರಲ್ಲಿ ವಿಫಲಗೊಂಡಿದೆ. (ಆದಿಕಾಂಡ 3:4, 5; 1 ಕೊರಿಂಥ 3:19, 20) ಈ 20 ನೆಯ ಶತಮಾನದಲ್ಲಿ—ಮಾನವಕುಲವು ನಾಸ್ತಿಕತೆಯ, ವಿಕಾಸಸಂಬಂಧವಾದ ಆಲೋಚನೆಯ ಫಲಗಳನ್ನು ಕೊಯ್ಯುತ್ತಾ, ಜಾತೀಯತೆ, ಹಿಂಸಾಚಾರ, ಮತ್ತು ಪ್ರತಿಯೊಂದು ವಿಧವಾದ ಅನೈತಿಕತೆಯಿಂದ ಪೀಡಿಸಲ್ಪಡುತ್ತಿರುವ ಈ “ಕಡೇ ದಿವಸಗಳಲ್ಲಿ” ಇದು ಸ್ಪಷ್ಟವಾಗಿಗಿರುವಷ್ಟು ಇತಿಹಾಸದ ಇನ್ನಾವ ಅವಧಿಯಲ್ಲಿಯೂ ಹೆಚ್ಚು ಸ್ಪಷ್ಟವಾಗಿದದ್ದಿಲ್ಲ. (2 ತಿಮೊಥೆಯ 3:1-5; 13; 2 ಪೇತ್ರ 3:3, 4) ಇದು ವಿಶ್ವ ಸಂಸ್ಧೆಯಾಗಲಿ, ಲೋಕದ ವಿಭಾಗಿತ ಧರ್ಮಗಳಾಗಲಿ ಬಿಚ್ಚಲಾಗದ ಒಂದು ‘ಹೊಸ ಲೋಕ ಅವ್ಯವಸ್ಥೆ’ ಆಗಿದೆ.
3. ನಮ್ಮ ದಿನಗಳಿಗಾಗಿ ಯಾವ ಬೆಳವಣಿಗೆಗಳು ಪ್ರವಾದಿಸಲ್ಪಟ್ಟವು?
3 ದೆವ್ವ ಸೈನ್ಯಗಳು “ಭೂಲೋಕದಲ್ಲೆಲಿಯೂ ಇರುವ ರಾಜರ ಬಳಿಗೆ ಹೋಗಿ ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧಕ್ಕೆ ಅವರನ್ನು ಕೂಡಿಸುವವು. . . . ಇಬ್ರಿಯ ಭಾಷೆಯಲ್ಲಿ ಹರ್ಮಗೆದೋನ್ ಎಂಬ ಹೆಸರುಳ್ಳ ಸ್ಥಳಕ್ಕೆ ಕೂಡಿಸಿದವು,” ಎಂದು ದೇವರ ಪ್ರವಾದನಾ ವಾಕ್ಯವು ನಮಗೆ ತಿಳಿಸುತ್ತದೆ. (ಪ್ರಕಟನೆ 16:14, 16) ಶೀಘ್ರವೇ ಯೆಹೋವನ ಭಯ ಆ ರಾಜರನ್ನು, ಯಾ ಪ್ರಭುಗಳನ್ನು ಆವರಿಸುವುದು. ಯೆಹೋಶುವ ಮತ್ತು ಇಸ್ರಾಯೇಲ್ಯರು ನ್ಯಾಯ ತೀರಿಸಲು ಬಂದಾಗ ಕಾನಾನ್ಯರಿಗಾದ ಭೀತಿಯಂತೆಯೇ ಇದಿತ್ತು. (ಯೆಹೋಶುವ 2:9-11) ಆದರೆ ಇಂದು, “ಸರ್ವಶಕ್ತನಾದ ದೇವರ ಉಗ್ರಕೋಪ”ದ ಅಭಿವ್ಯಕ್ತಿಯಾಗಿ ‘ಜನಾಂಗಗಳನ್ನು ಹೊಡೆದು ಕಬ್ಬಿಣದ ಕೋಲಿನಿಂದ ಅವರನ್ನು ಆಳುವವನು, ಯೆಹೋಶುವನಿಂದ ಪ್ರತಿನಿಧೀಕರಿಸಲ್ಪಟ್ಟ, “ರಾಜಾಧಿರಾಜನೂ ಕರ್ತರ ಕರ್ತನೂ” ಆಗಿರುವ ಕ್ರಿಸ್ತ ಯೇಸುವೇ.—ಪ್ರಕಟನೆ 19:15, 16.
4, 5. ಯಾರು ರಕ್ಷಣೆಯನ್ನು ಕಂಡುಕೊಳ್ಳುವರು, ಮತ್ತು ಏಕೆ?
4 ಆ ಸಮಯದಲ್ಲಿ ಯಾರು ರಕ್ಷಣೆಯನ್ನು ಕಂಡುಕೊಳ್ಳುವರು? ವಿಮೋಚಿಸಲ್ಪಡುವವರು ತೀವ್ರಭಯದಿಂದ ಆವರಿಸಲ್ಪಡುವವರಲ್ಲ, ಯೆಹೋವನಿಗೆ ಪೂಜ್ಯವಾದ ಭಯವನ್ನು ಬೆಳೆಸಿರುವ ಸಕಲರೇ. ತಮ್ಮ ಸ್ವಂತ ದೃಷ್ಟಿಯಲ್ಲಿ ವಿವೇಕಿಗಳಾಗುವ ಬದಲಿಗೆ, ಅವರು “ಕೆಟ್ಟದ್ದನ್ನು ತೊರೆದು” ಬಿಡುತ್ತಾರೆ. ದೈನ್ಯಭಾವದಿಂದ, ಇವರು ತಮ್ಮ ಯೋಚನೆಯಿಂದ ಕೆಟ್ಟದ್ದನ್ನು ಹೊರಪಡಿಸುವ ಸಲುವಾಗಿ, ತಮ್ಮ ಮನಸ್ಸುಗಳಿಗೆ ಒಳ್ಳೆಯದನ್ನು ಉಣಿಸುತ್ತಾರೆ. ಯಾರು ಕೆಟ್ಟದ್ದಕ್ಕೆ ಅಂಟಿಕೊಳ್ಳುತ್ತಾರೋ ಅಂತಹ ಪ್ರತಿಯೊಬ್ಬನನ್ನು, ಆತನು ನೀತಿಭ್ರಷ್ಟ ಸೋದೋಮ್ಯರಿಗೆ ಮಾಡಿದಂತೆಯೇ ಹತಿಸಲಿರುವ, “ಸರ್ವಲೋಕಕ್ಕೆ ನ್ಯಾಯತೀರಿಸುವ” ಪರಮಾಧಿಕಾರಿ ಕರ್ತನಾದ ಯೆಹೋವನಿಗೆ ಅವರು ಹಿತಕರವಾದ ಸನ್ಮಾನವನ್ನು ಬೆಳಸುತ್ತಾರೆ. (ಆದಿಕಾಂಡ 18:25) ಯೆಹೋವನ ಜನರಿಗೋ, “ಯೆಹೋವನ ಭಯ ಜೀವದ ಬುಗ್ಗೆ; ಮೃತ್ಯುಪಾಶದಿಂದ ತಪ್ಪಿಸಿಕೊಳ್ಳಲು ಅದು ಸಾಧನ,” ನಿಶ್ಚಯ.—ಜ್ಞಾನೋಕ್ತಿ 14:27.
5 ದೈವಿಕ ನ್ಯಾಯ ತೀರ್ಪಿನ ಈ ದಿನದಲ್ಲಿ, ಯೆಹೋವನನ್ನು ಎಂದಿಗೂ ಅಸಂತೋಷಪಡಿಸಲು ಭಯಪಟ್ಟು ಆತನಿಗೆ ಪೂರ್ಣವಾಗಿ ತಮ್ಮನ್ನು ಮೀಸಲಾಗಿಟ್ಟುಕೊಳ್ಳುವ ಸರ್ವರೂ ಜ್ಞಾನೋಕ್ತಿ 3:8 ರಲ್ಲಿ ಸಾಂಕೇತಿಕವಾಗಿ ಹೇಳಿರುವ ಸತ್ಯವನ್ನು ಮನದಟ್ಟು ಮಾಡಿಕೊಳ್ಳುವರು: “ಇದರಿಂದ [ಯೆಹೋವನ ಭಯದಿಂದ] ನಿನ್ನ ದೇಹಕ್ಕೆ ಆರೋಗ್ಯವೂ ಎಲುಬುಗಳಿಗೆ ಸಾರವೂ ಉಂಟಾಗುವದು.”
ಯೆಹೋವನನ್ನು ಸನ್ಮಾನಿಸುವುದು
6. ಜ್ಞಾನೋಕ್ತಿ 3:9 ಕ್ಕೆ ಕಿವಿಗೊಡಲು ನಮ್ಮನ್ನು ಯಾವುದು ಪ್ರಚೋದಿಸಬೇಕು?
6 ಯೆಹೋವನಿಗಿರುವ ನಮ್ಮ ಗಣ್ಯಭಾವದ ಭಯ, ಆತನ ಕಡೆಗೆ ನಮಗಿರುವ ತೀವ್ರ ಪ್ರೀತಿಯೊಂದಿಗೆ, ನಾವು ಜ್ಞಾನೋಕ್ತಿ 3:9 ಕ್ಕೆ ಕಿವಿಗೊಡುವಂತೆ ನಮ್ಮನ್ನು ಪ್ರಚೋದಿಸಬೇಕು: “ನಿನ್ನ ಆದಾಯದಿಂದಲೂ [ಅಮೂಲ್ಯ ವಸ್ತುಗಳು, NW] ಬೆಳೆಯ ಪ್ರಥಮಫಲದಿಂದಲೂ ಯೆಹೋವನನ್ನು ಸನ್ಮಾನಿಸು.” ನಮ್ಮ ಕಾಣಿಕೆಗಳಿಂದ ಯೆಹೋವನನ್ನು ಸನ್ಮಾನಿಸುವಂತೆ ನಾವು ಒತ್ತಾಯಿಸಲ್ಪಡುವುದಿಲ್ಲ. ಅವು, ಪುರಾತನ ಕಾಲದ ಇಸ್ರಾಯೇಲಿನಲ್ಲಿ ಯಜ್ಞಗಳ ಸಂಬಂಧದಲ್ಲಿ ವಿಮೋಚನಕಾಂಡ 35:29 ರಿಂದ ಧರ್ಮೋಪದೇಶಕಾಂಡ 23:23 ರ ವರೆಗೆ ಸುಮಾರು 12 ಬಾರಿ ಸೂಚಿಸಲ್ಪಟ್ಟಿರುವಂತೆ, ಸ್ವಪ್ರೇರಣೆಯದ್ದಾಗಿರಬೇಕು. ಯೆಹೋವನಿಗಾಗಿರುವ ಈ ಪ್ರಥಮಫಲಗಳು, ನಾವು ಆತನ ಕೈಯಿಂದ ಅನುಭವಿಸಿರುವ ಸೌಜನ್ಯ ಮತ್ತು ಪ್ರೀತಿಕೃಪೆಗಳನ್ನು ಎಣಿಕೆಗೆ ತಂದುಕೊಂಡು, ನಾವು ಅರ್ಪಿಸಸಾಧ್ಯವಿರುವವುಗಳಲ್ಲಿ ಅತ್ಯುತ್ತಮವಾಗಿರಬೇಕು. (ಕೀರ್ತನೆ 23:6) “ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕ” ಪಡುವ ನಮ್ಮ ನಿರ್ಣಯವನ್ನು ಅವು ಪ್ರತಿಬಿಂಬಿಸಬೇಕು. (ಮತ್ತಾಯ 6:33) ಮತ್ತು ನಾವು ನಮ್ಮ ಅಮೂಲ್ಯ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸುವುದರಿಂದ ಏನು ಫಲಿಸುತ್ತದೆ? “ಹೀಗೆ ಮಾಡಿದರೆ ನಿಮ್ಮ ಕಣಜಗಳು ಸಮೃದ್ಧಿಯಿಂದ ತುಂಬುವವು, ತೊಟ್ಟಿಗಳಲ್ಲಿ ದ್ರಾಕ್ಷಾರಸವು ತುಂಬಿತುಳುಕುವುದು.”—ಜ್ಞಾನೋಕ್ತಿ 3:10.
7. ನಾವು ಯೆಹೋವನಿಗೆ ಯಾವ ಪ್ರಥಮಫಲಗಳನ್ನು ಅರ್ಪಿಸಬೇಕು, ಮತ್ತು ಫಲಿತಾಂಶವೇನು?
7 ಯೆಹೋವನು ನಮ್ಮನ್ನು ಆಶೀರ್ವದಿಸುವ ಪ್ರಧಾನ ಮಾರ್ಗವು ಆತ್ಮಿಕವಾಗಿದೆ. (ಮಲಾಕಿಯ 3:10) ಈ ಕಾರಣದಿಂದ, ನಾವು ಆತನಿಗೆ ಅರ್ಪಿಸುವ ಪ್ರಥಮಫಲಗಳು ಪ್ರಧಾನವಾಗಿ ಆತ್ಮಿಕವಾಗಿರಬೇಕು. ನಾವು ಆತನ ಚಿತ್ತವನ್ನು ಮಾಡುವರೆ ನಮ್ಮ ಸಮಯ, ಸಾಮರ್ಥ್ಯ ಮತ್ತು ಜೀವಶಕ್ತಿಯನ್ನು ಉಪಯೋಗಿಸಬೇಕು. ಇಂಥ ಚಟುವಟಿಕೆಯು ಹೇಗೆ ಯೇಸುವಿಗೆ ಬಲಪಡಿಸುವ “ಆಹಾರ” ವಾಗಿ ಪರಿಣಮಿಸಿತೋ ಹಾಗೆಯೇ ಇದು ಸರದಿಯಾಗಿ ನಮ್ಮನ್ನು ಪೋಷಿಸುವುದು. (ಯೋಹಾನ 4:34) ನಮ್ಮ ಸರಬರಾಯಿಯ ಆತ್ಮಿಕ ಭಂಡಾರವು ತುಂಬಿ, ಹೊಸ ದ್ರಾಕ್ಷಾಮದ್ಯದಿಂದ ಸೂಚಿತವಾದ ನಮ್ಮ ಆನಂದವು ತುಂಬಿ ತುಳುಕುವುದು. ಇದಲ್ಲದೆ, ಪ್ರತಿದಿನ ನಾವು ಸಾಕಷ್ಟು ಐಹಿಕ ಆಹಾರಕ್ಕಾಗಿ ಭರವಸೆಯಿಂದ ಪ್ರಾರ್ಥಿಸುವಾಗ, ಲೋಕವ್ಯಾಪಕವಾದ ರಾಜ್ಯ ಕೆಲಸವನ್ನು ಬೆಂಬಲಿಸಲಿಕ್ಕಾಗಿ ನಮಗಿರುವುದರಲ್ಲಿ ಹೊಂದಿಕೆಯಿಂದ ಉದಾರವಾಗಿ ಕೊಡಸಾಧ್ಯವಿದೆ. (ಮತ್ತಾಯ 6:11) ನಮಗಿರುವುದೆಲ್ಲ, ಪ್ರಾಪಂಚಿಕ ಸ್ವತ್ತುಗಳು ಕೂಡಿ, ನಮ್ಮ ಪ್ರೀತಿಯ ಸ್ವರ್ಗೀಯ ಪಿತನಿಂದ ಬಂದಿವೆ. ನಾವು ಈ ಅಮೂಲ್ಯ ವಸ್ತುಗಳನ್ನು ಎಷ್ಟರ ಮಟ್ಟಿಗೆ ಆತನ ಸ್ತುತಿಗಾಗಿ ಉಪಯೋಗಿಸುತ್ತೇವೋ ಅಷ್ಟರ ಮಟ್ಟಿಗೆ ಆತನು ಇನ್ನೂ ಹೆಚ್ಚಿನ ಆಶೀರ್ವಾದಗಳನ್ನು ಸುರಿಸುವನು.—ಜ್ಞಾನೋಕ್ತಿ 11:4; 1 ಕೊರಿಂಥ 4:7.
ಪ್ರೀತಿಯ ಗದರಿಕೆಗಳು
8, 9. ಗದರಿಕೆ ಮತ್ತು ನೀತಿಶಿಕ್ಷಣವನ್ನು ನಾವು ಹೇಗೆ ಎಣಿಸಬೇಕು?
8 ಜ್ಞಾನೋಕ್ತಿ 3 ನೆಯ ಅಧ್ಯಾಯದ 11 ಮತ್ತು 12 ನೆಯ ವಚನಗಳು, ದೈವಿಕ ಕುಟುಂಬಗಳಲ್ಲಿ ಹಾಗೂ ಯೆಹೋವ ಮತ್ತು ಆತನ ಪ್ರಿಯ ಆತ್ಮಿಕ ಭೂಮಕ್ಕಳ ಮಧ್ಯೆ ಇರುವ ಪಿತ-ಪುತ್ರ ಸಂಬಂಧದ ಬಗೆಗೆ ಹೇಳುತ್ತವೆ. ನಾವು ಓದುವುದು: “ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ; ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.” ಲೋಕದ ಜನರು ಗದರಿಕೆಯನ್ನು ಹೇಸುತ್ತಾರೆ. ಯೆಹೋವನ ಜನರೋ, ಅದನ್ನು ಸ್ವಾಗತಿಸಬೇಕು. ಅಪೊಸ್ತಲ ಪೌಲನು ಜ್ಞಾನೋಕ್ತಿಗಳಿಂದ ಈ ಮಾತುಗಳನ್ನು ಎತ್ತಿ ಹೇಳುವುದು: “ಮಗನೇ, ಕರ್ತನ ಶಿಕ್ಷೆಯನ್ನು [ನೀತಿಶಿಕ್ಷಣ, NW] ತಾತ್ಸಾರ ಮಾಡಬೇಡ; ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ; ಕರ್ತನು ತಾನು ಪ್ರೀತಿಸುವವನನ್ನೇ ಶಿಕ್ಷಿಸುತ್ತಾನೆ; . . . ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ ಹೊಂದಿದವರಿಗೆ ನೀತಿಯೆಂಬ ಫಲವನ್ನು” ಕೊಡುತ್ತದೆ.—ಇಬ್ರಿಯ 12:5, 6, 11.
9 ಹೌದು, ಗದರಿಕೆ ಮತ್ತು ನೀತಿಶಿಕ್ಷಣ, ಅದನ್ನು ನಾವು ಹೆತ್ತವರಿಂದ ಪಡೆಯಲಿ, ಕ್ರೈಸ್ತ ಸಭೆಯ ಮೂಲಕ ಪಡೆಯಲಿ, ಅಥವಾ ನಮ್ಮ ವ್ಯಕ್ತಿಪರ ಅಧ್ಯಯನದ ಸಮಯದಲ್ಲಿ ಶಾಸ್ತ್ರದ ಮೇಲೆ ಮನನ ಮಾಡುವಾಗ ಪಡೆಯಲಿ, ನಮ್ಮಲ್ಲಿ ಪ್ರತಿಯೊಬ್ಬನಿಗೆ ತರಬೇತಿಯ ಅವಶ್ಯ ಭಾಗವಾಗಿದೆ. ಜ್ಞಾನೋಕ್ತಿ 4:1, 13 (NW) ಇನ್ನೂ ಹೇಳುವಂತೆ, ನೀತಿಶಿಕ್ಷಣಕ್ಕೆ ಕಿವಿಗೊಡುವುದು ಸಾವು ಬದುಕಿನ ವಿಷಯ: “ಪುತ್ರರೇ, ತಿಳಿವಳಿಕೆಯನ್ನು ತಿಳಿಯಲಿಕ್ಕಾಗಿ ತಂದೆಯ ನೀತಿಶಿಕ್ಷಣವನ್ನು ಕೇಳಿ, ಅದಕ್ಕೆ ಗಮನ ನೀಡಿರಿ. ನೀತಿಶಿಕ್ಷಣವನ್ನು ಹಿಡಿದುಕೊಳ್ಳಿರಿ; ಅದನ್ನು ಹೋಗಬಿಡಬೇಡಿರಿ. ಅದನ್ನು ಸುರಕ್ಷಿತವಾಗಿಡಿರಿ, ಏಕೆಂದರೆ ಅದೇ ನಿಮ್ಮ ಜೀವವಾಗಿದೆ.”
ಅತ್ಯಂತ ಮಹಾ ಸಂತೋಷ
10, 11. ಜ್ಞಾನೋಕ್ತಿ 3:13-18 ರ ಆನಂದಕಾರಕ ನುಡಿಗಳ ಕೆಲವು ಮುಖಗಳು ಯಾವುವು?
10 ಎಂತಹ ಸುಂದರ ವಾಕ್ಸರಣಿಗಳು ಈಗ ಹಿಂಬಾಲಿಸಿ ಬರುತ್ತವೆ, ನಿಜವಾಗಿಯೂ ‘ಸತ್ಯದ ಆನಂದಕಾರಕ ಮತ್ತು ಅನ್ಯೂನ ನುಡಿಗಳು’! (ಪ್ರಸಂಗಿ 12:10) ಈ ಸೊಲೊಮೋನನ ಪ್ರೇರಿತ ನುಡಿಗಳು ನಿಜಸಂತೋಷವನ್ನು ವರ್ಣಿಸುತ್ತದೆ. ಅವು ನಾವು ನಮ್ಮ ಹೃದಯಗಳಲ್ಲಿ ಕೆತ್ತಬೇಕಾದ ನುಡಿಗಳು. ನಾವು ಓದುವುದು:
11 “ಜ್ಞಾನವನ್ನು [ವಿವೇಕ, NW] ಪಡೆಯುವವನು ಧನ್ಯನು, ವಿವೇಕವನ್ನು [ವಿವೇಚನೆ, NW] ಸಂಪಾದಿಸುವವನು ಭಾಗ್ಯವಂತನು. ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ. ಅದರ ಬೆಲೆಯು ಹವಳಕ್ಕಿಂತಲೂ ಹೆಚ್ಚು, ನಿನ್ನ ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ. ಜ್ಞಾನವೆಂಬಾಕೆಯ ಬಲಗೈಯಲ್ಲಿ ದೀರ್ಘಾಯುಷ್ಯವೂ, ಎಡಗೈಯಲ್ಲಿ ಧನವೂ ಘನತೆಯೂ ಉಂಟು. ಆಕೆಯ ದಾರಿಗಳು ಸುಖಕರವಾಗಿವೆ, ಆಕೆಯ ಮಾರ್ಗಗಳೆಲ್ಲಾ ಸಮಾಧಾನವೇ. ಜ್ಞಾನವು ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವದ ಮರವಾಗಿದೆ; ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು.”—ಜ್ಞಾನೋಕ್ತಿ 3:13-18.
12. ವಿವೇಕವೂ ವಿವೇಚನಾಶಕ್ತಿಯೂ ನಮಗೆ ಹೇಗೆ ಪ್ರಯೋಜನ ನೀಡಬೇಕು?
12 ವಿವೇಕ—ಇದನ್ನು ಎಷ್ಟು ಬಾರಿ—ಒಟ್ಟಿಗೆ 46 ಬಾರಿ ಜ್ಞಾನೋಕ್ತಿ ಪುಸ್ತಕದಲ್ಲಿ ಹೇಳಲಾಗಿದೆ! “ಯೆಹೋವನ ಭಯವು ಜ್ಞಾನದ ಆರಂಭ.” ಇದು ದೈವಿಕವಾದ ದೇವರ ವಾಕ್ಯದ ಜ್ಞಾನದ ಮೇಲೆ ಆಧಾರಿತವಾದ ಪ್ರಾಯೋಗಿಕ ವಿವೇಕ. ಸೈತಾನನ ಲೋಕದಲ್ಲಿ ಬೀಸುತ್ತಿರುವ ಅಪಾಯಕರವಾದ ಚಂಡಮಾರುತದಲ್ಲಿ ತನ್ನ ಜನರು ಭದ್ರವಾದ ಪಥದಲ್ಲಿ ಹೋಗುವಂತೆ ಮಾಡುವ ವಿವೇಕ. (ಜ್ಞಾನೋಕ್ತಿ 9:10) ಜ್ಞಾನೋಕ್ತಿಗಳಲ್ಲಿ 19 ಬಾರಿ ಸೂಚಿಸಿರುವ ವಿವೇಚನೆಯು ವಿವೇಕದ ದಾಸಿಯಾಗಿದ್ದು, ಸೈತಾನನ ಯುಕ್ತಿಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ತನ್ನ ಕುತಂತ್ರಗಳನ್ನು ನಡಿಸುವಾಗ ಸೈತಾನನಿಗಾದರೋ ಸಹಸ್ರಾರು ವರ್ಷಗಳ ಅನುಭವವಿದೆ. ಆದರೆ ಅನುಭವವು ಶಿಕ್ಷಕನಾಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಬೆಲೆಬಾಳುವ ವಿಷಯವು, ತಪ್ಪಿನಿಂದ ಸರಿಯನ್ನು ಬೇರ್ಪಡಿಸುವ ಮತ್ತು ಸರಿಯಾದ ಮಾರ್ಗದಲ್ಲಿ ಹೋಗಲು ಆರಿಸಿಕೊಳ್ಳುವ ಸಾಮರ್ಥ್ಯವಾದ, ದೈವಿಕ ವಿವೇಚನೆ, ನಮಗಿದೆ. ಯೆಹೋವನು ತನ್ನ ವಾಕ್ಯದ ಮೂಲಕ ನಮಗೆ ಕಲಿಸುವುದು ಇದನ್ನೇ.—ಜ್ಞಾನೋಕ್ತಿ 2:10-13, NW; ಎಫೆಸ 6:11.
13. ಕಠಿನ ಆರ್ಥಿಕ ಸಮಯಗಳಲ್ಲಿ ನಮ್ಮನ್ನು ಯಾವುದು ರಕ್ಷಿಸಬಲ್ಲದು, ಮತ್ತು ಹೇಗೆ?
13 ಇಂದಿನ ಲೋಕದ ಆರ್ಥಿಕ ಅವ್ಯವಸ್ಥೆಯ ಯೆಹೆಜ್ಕೇಲ 7:19ರ ಪ್ರವಾದನೆಯ ನೆರವೇರಿಕೆಯ ಮುನ್‌ಸೂಚಕವಾಗಿದೆ: “ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರವು ಅಶುದ್ಧ ಪದಾರ್ಥದಂತಿರುವದು, ಯೆಹೋವನು ತನ್ನ ರೋಷವನ್ನು ತೀರಿಸುವ ದಿನದಲ್ಲಿ ಅವರ ಬೆಳ್ಳಿಬಂಗಾರವು ಅವರನ್ನು ರಕ್ಷಿಸಲಾರದು.” ಭೂಮಿಯ ಸಕಲ ಪ್ರಾಪಂಚಿಕ ಐಶ್ವರ್ಯವು ವಿವೇಕ ಮತ್ತು ವಿವೇಚನೆಯ ರಕ್ಷಣಾಶಕ್ತಿಯನ್ನು ಹೋಲಲು ಆರಂಭಿಸುವುದೂ ಇಲ್ಲ. ವಿವೇಕಿ ಸೊಲೊಮೋನ ರಾಜನು ಇನ್ನೊಂದು ಸಂದರ್ಭದಲ್ಲಿ ಹೀಗೆಂದನು: “ಧನವು ಹೇಗೋ ಹಾಗೆಯೇ ವಿವೇಕವೂ ಒಂದು ರಕ್ಷೆಯಾಗಿದೆ; ಆದರೆ ಜ್ಞಾನದ ಪ್ರಯೋಜನವೇನಂದರೆ ವಿವೇಕವು ತಾನೇ ತನ್ನ ಯಜಮಾನರನ್ನು ಬದುಕಿ ಉಳಿಸುವುದು.” (ಪ್ರಸಂಗಿ 7:12, NW.) ಇಂದು ಯೆಹೋವನ ಆಹ್ಲಾದಕರ ಮಾರ್ಗಗಳಲ್ಲಿ ನಡೆದು, ವಿವೇಕದಿಂದ “ದೀರ್ಘಾಯುಷ್ಯ” ವನ್ನು, ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನಿಗೆ ದೇವರು ಕೊಡುವ ಕೊಡುಗೆಯಾದ ನಿತ್ಯಜೀವವನ್ನು ಆರಿಸಿಕೊಳ್ಳುವವರು ಸಂತುಷ್ಟರೇ ಸರಿ!—ಜ್ಞಾನೋಕ್ತಿ 3:16; ಯೋಹಾನ 3:16; 17:3.
ನಿಜ ವಿವೇಕವನ್ನು ಬೆಳೆಸುವುದು
14. ಯೆಹೋವನು ಯಾವ ವಿಧಗಳಲ್ಲಿ ಆದರ್ಶ ವಿವೇಕವನ್ನು ಪ್ರದರ್ಶಿಸಿದ್ದಾನೆ?
14 ಯೆಹೋವನು ತನ್ನ ಅದ್ಭುತವಾದ ಸೃಷ್ಟಿಕಾರ್ಯವನ್ನು ಮಾಡಿದ್ದರಲ್ಲಿ ತಾನೇ ಪ್ರದರ್ಶಿಸಿರುವ ಗುಣಗಳಾದ ವಿವೇಕ ಮತ್ತು ವಿವೇಚನೆಯನ್ನು, ದೇವರ ಸ್ವರೂಪದಲ್ಲಿ ನಿರ್ಮಿತರಾಗಿರುವ ಮಾನವರಾದ ನಾವು ಬೆಳಸಿಕೊಳ್ಳಲು ಪ್ರಯತ್ನಿಸುವುದು ಸಮಂಜಸ: “ಯೆಹೋವನು ವಿವೇಕದಲ್ಲಿ ಭೂಮಿಯನ್ನು ಸ್ಧಾಪಿಸಿದನು. ಆತನು ವಿವೇಚನೆಯಲ್ಲಿ ಆಕಾಶವನ್ನು ದೃಢವಾಗಿ ನೆಲೆಗೊಳಿಸಿದನು.” (ಜ್ಞಾನೋಕ್ತಿ 3:19, 20, NW.) ಆತನು ಜೀವಿಗಳನ್ನು ಯಾವುದೋ ರಹಸ್ಯಾರ್ಥದ, ವಿವರಿಸಲಾಗದ ವಿಕಾಸ ವಿಧಾನದಿಂದ ಸೃಷ್ಟಿಸದೆ ಸೃಷ್ಟಿಯ ನೇರವಾದ ಕೃತ್ಯಗಳ ಮೂಲಕ, “ಅವುಗಳ ಜಾತಿಗನುಸಾರ” ಮತ್ತು ಒಂದು ವಿವೇಕದ ಉದ್ದೇಶಕ್ಕಾಗಿ ಸೃಷ್ಟಿಸಿದನು. (ಆದಿಕಾಂಡ 1:25) ಅಂತಿಮವಾಗಿ ಪ್ರಾಣಿಗಳಿಗಿಂತ ಎಷ್ಟೋ ಶ್ರೇಷ್ಠವಾದ ಬುದ್ಧಿಶಕ್ತಿ ಮತ್ತು ಸಾಮರ್ಥ್ಯಗಳಿಂದ ಮನುಷ್ಯನು ಉಂಟುಮಾಡಲ್ಪಟ್ಟಾಗ ದೇವರ ದೂತಪುತ್ರರ ಅಭಿನಂದನಾ ಘೋಷವು ಸ್ವರ್ಗಗಳಲ್ಲಿ ಪ್ರತಿಧ್ವನಿಸಿ, ಪುನರ್ಧ್ವನಿತವಾಗಿದ್ದಿರಬೇಕು. (ಯೋಬ 38:1, 4, 7, ಹೋಲಿಸಿ.) ಯೆಹೋವನ ವಿವೇಚನಾ ಮುಂದೃಷ್ಟಿ, ಆತನ ವಿವೇಕ ಮತ್ತು ಪ್ರೀತಿ, ಆತನ ಸಕಲ ಭೂಉತ್ಪಾದನೆಗಳಲ್ಲಿ ಸ್ಪಷ್ಟವಾಗಿಗಿ ತೋರಿಬರುತ್ತವೆ.—ಕೀರ್ತನೆ 104:24.
15. (ಎ) ಕೇವಲ ವಿವೇಕವನ್ನು ಬೆಳೆಸುವುದು ಸಾಕಾಗದಿರುವುದೇಕೆ? (ಬಿ) ಜ್ಞಾನೋಕ್ತಿ 3:25, 26 ನಮ್ಮಲ್ಲಿ ಯಾವ ಭರವಸೆಯನ್ನು ಎಬ್ಬಿಸಬೇಕು?
15 ನಾವು ಯೆಹೋವನ ಗುಣಗಳಾದ ವಿವೇಕ ಮತ್ತು ವಿವೇಚನಾಶಕ್ತಿಯನ್ನು ಬೆಳೆಸುವುದು ಅವಶ್ಯವಷ್ಟೇಯಲ್ಲ, ಅವನ್ನು ಬಿಗಿಯಾಗಿಯೂ ಹಿಡಿದುಕೊಂಡು, ಆತನ ವಾಕ್ಯದ ಅಧ್ಯಯನದಲ್ಲಿ ಎಂದಿಗೂ ಉದಾಸೀನರಾಗಬಾರದು. ಆತನು ನಮಗೆ ಬುದ್ಧಿಹೇಳುವುದು: “ನನ್ನ ಮಗನೇ, ಅವು ನಿನ್ನ ಕಣ್ಣುಗಳಿಂದ ತಪ್ಪಿಸಿಕೊಂಡು ಹೋಗದಿರಲಿ. ಪ್ರಾಯೋಗಿಕ ವಿವೇಕ ಮತ್ತು ಯೋಚನಾ ಸಾಮರ್ಥ್ಯವನ್ನು ಭದ್ರವಾಗಿಟ್ಟುಕೋ, ಮತ್ತು ಅವು ನಿನ್ನ ಆತ್ಮಕ್ಕೆ ಜೀವವೂ ನಿನ್ನ ಕೊರಳಿಗೆ ಸೊಬಗೂ ಆಗಿರುವುವು.” (ಜ್ಞಾನೋಕ್ತಿ 3:21, 22, NW.) ಹೀಗೆ ನಾವು, ಸೈತಾನನ ಜಗತ್ತಿನ ಮೇಲೆ ಬರಲಿರುವ “ಹಠಾತ್ ನಾಶನ” ದಿನದ ಕಳ್ಳಸದೃಶ ಸಾಮೀಪ್ಯದ ಸಮಯದಲ್ಲಿಯೂ ಭದ್ರತೆ ಮತ್ತು ಮನಶ್ಶಾಂತಿಯಲ್ಲಿ ನಡೆಯಬಲ್ಲೆವು. (1 ಥೆಸಲೊನೀಕ 5:2, 3) ಮಹಾ ಸಂಕಟದ ದಿನದಲ್ಲಿಯೂ, “ಫಕ್ಕನೆ ಬರುವ ಅಪಾಯಕ್ಕಾಗಲಿ ದುಷ್ಟರಿಗೆ ಸಂಭವಿಸುವ ನಾಶನಕ್ಕಾಗಲಿ ನೀನು ಅಂಜುವದೇ ಇಲ್ಲ. ಯೆಹೋವನು ನಿನ್ನ ಭರವಸಕ್ಕೆ ಆಧಾರನಾಗಿದ್ದು ನಿನ್ನ ಕಾಲು ಪಾಶಕ್ಕೆ ಸಿಕ್ಕದಂತೆ ನಿನ್ನನ್ನು ಕಾಪಾಡುವನು.”—ಜ್ಞಾನೋಕ್ತಿ 3:23-26.
ಒಳ್ಳೆಯದನ್ನು ಮಾಡುವುದಕ್ಕಾಗಿ ಪ್ರೀತಿ
16. ಶುಶ್ರೂಷೆಯಲ್ಲಿ ಹುರುಪಿಗೆ ಕೂಡಿಸಲ್ಪಟ್ಟು ಇನ್ನಾವ ಕೃತ್ಯವು ಕ್ರೈಸ್ತರಿಂದ ಕೇಳಲ್ಪಡುತ್ತದೆ?
16 ರಾಜ್ಯದ ಸುವಾರ್ತೆಯನ್ನು ಸಕಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರುವುದಕ್ಕೆ ಹುರುಪನ್ನು ತೋರಿಸಬೇಕಾದ ದಿನಗಳಿವು. ಆದರೆ ಈ ಸಾಕ್ಷಿ ಕೆಲಸವು, ಜ್ಞಾನೋಕ್ತಿ 3:27, 28 ವರ್ಣಿಸುವಂತೆ, ಬೇರೆ ಕ್ರೈಸ್ತ ಚಟುವಟಿಕೆಯಿಂದ ಆಧಾರಿತವಾಗಿರಬೇಕು: “ಉಪಕಾರ ಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ. ಕೊಡತಕ್ಕದ್ದು ನಿನ್ನಲ್ಲಿದ್ದರೆ ನೆರೆಯವನಿಗೆ—ಹೋಗಿ ಬಾ, ನಾಳೆ ಕೊಡುತ್ತೇನೆ ಎಂದು ಹೇಳಬೇಡ.” (ಯಾಕೋಬ 2:14-17 ಹೋಲಿಸಿ.) ಲೋಕದ ಬಹುಭಾಗ ದಾರಿದ್ರ್ಯ ಮತ್ತು ಕ್ಷಾಮದ ಹಿಡಿತದಲ್ಲಿರುವಾಗ ನಮ್ಮ ಜೊತೆಮಾನವರಿಗೆ, ವಿಶೇಷವಾಗಿ ನಮ್ಮ ಆತ್ಮಿಕ ಸಹೋದರರಿಗೆ ನಾವು ಸಹಾಯಮಾಡುವಂತೆ ಅತಿ ತುರ್ತಿನ ಕರೆಗಳು ಬಂದಿವೆ. ಯೆಹೋವನ ಸಾಕ್ಷಿಗಳು ಹೇಗೆ ಪ್ರತಿವರ್ತಿಸಿದ್ದಾರೆ?
17-19. (ಎ) ಯಾವ ತುರ್ತಿನ ಆವಶ್ಯಕತೆಯನ್ನು 1993 ರಲ್ಲಿ ಪೂರೈಸಲಾಯಿತು, ಮತ್ತು ಪ್ರತಿವರ್ತನೆ ಏನಾಗಿತ್ತು? (ಬಿ) ನಮ್ಮ ಮುತ್ತಲ್ಪಟ್ಟ ಸಹೋದರರು “ಪೂರ್ಣ ಜಯಶಾಲಿಗಳು” ಆಗುತ್ತಿದ್ದಾರೆಂದು ಯಾವುದು ಪ್ರದರ್ಶಿಸುತ್ತದೆ?
17 ಒಂದು ದೃಷ್ಟಾಂತವನ್ನು ತೆಗೆದುಕೊಳ್ಳಿ: ಕಳೆದ ವರ್ಷದಲ್ಲಿ, ಸಹಾಯಕ್ಕಾಗಿ ಒಂದು ತುರ್ತಿನ ಕರೆ ಹಿಂದಿನ ಯುಗೊಸ್ಲಾವಿಯದಿಂದ ಬಂದಿತು. ನೆರೆರಾಷ್ಟ್ರಗಳ ಭ್ರಾತೃತ್ವವು ಅದ್ಭುತಕರವಾಗಿ ಪ್ರತಿವರ್ತಿಸಿತು. ಕಳೆದ ಚಳಿಗಾಲದ ಶೀತಲ ಮಾಸಗಳಲ್ಲಿ ಅನೇಕ ಪರಿಹಾರ ವಾಹನಗಳಿಗೆ ಅವಶ್ಯವಿದ್ದ ಸಾಕ್ಷಿಗಳಿಗೆ ಪ್ರಚಲಿತ ಸಾಹಿತ್ಯಗಳು, ಬೆಚ್ಚಗೆನ ಬಟ್ಟೆಗೆಳು, ಆಹಾರ, ಮತ್ತು ಔಷಧಗಳನ್ನು ಸಾಗಿಸುತ್ತಾ ಯುದ್ಧವಲಯವನ್ನು ತೂರಿಹೋಗಲು ಸಾಧ್ಯವಾಗಿತ್ತು. ಒಂದು ಸಂದರ್ಭದಲ್ಲಿ, 15 ಟನ್ನು ಪರಿಹಾರ ಸಾಮಾನುಗಳನ್ನು ಸಾಗಿಸಲು ಸಹೋದರರು ಅರ್ಜಿ ಹಾಕಿದರು, ಆದರೆ ಆ ಪರವಾನಗಿ ದೊರೆತಾಗ ಅದು 30 ಟನ್ನುಗಳಿಗಾಗಿತ್ತು! ಆಸ್ಟ್ರಿಯದ ಯೆಹೋವನ ಸಾಕ್ಷಿಗಳು ಒಡನೆ ಇನ್ನು ಮೂರು ಲಾರಿಗಳನ್ನು ರವಾನಿಸಿದರು. ಒಟ್ಟು 25 ಟನ್ನುಗಳು ಅವು ಹೋಗಬೇಕಾಗಿದ್ದ ಸ್ಥಳವನ್ನು ಹೋಗಿ ಮುಟ್ಟಿದವು. ಈ ಆತ್ಮಿಕ ಮತ್ತು ಶಾರೀರಿಕ ಒದಗಿಸುವಿಕೆಗಳ ಯಥೇಷ್ಟತೆಯನ್ನು ಪಡೆಯಲು ನಮ್ಮ ಸಹೋದರರು ಎಷ್ಟು ಆನಂದಿತರಾದರು!
18 ಆ ಗ್ರಾಹಕರು ಹೇಗೆ ಪ್ರತಿವರ್ತಿಸಿದರು? ಈ ವರ್ಷದ ಆದಿಭಾಗದಲ್ಲಿ ಒಬ್ಬ ಹಿರಿಯನು ಬರೆದುದು: “ಸಾರಯೇವೊವಿನ ಸಹೋದರ ಸಹೋದರಿಯರು ಜೀವಂತರಾಗಿದ್ದಾರೆ, ಕ್ಷೇಮವಾಗಿದ್ದಾರೆ, ಮತ್ತು ಅತಿ ಪ್ರಾಮುಖ್ಯವೇನಂದರೆ ಈ ಹುಚ್ಚು ಯುದ್ಧವನ್ನು ತಾಳಿಕೊಳ್ಳಲು ನಾವು ಇನ್ನೂ ಆತ್ಮಿಕವಾಗಿ ಬಲ ಉಳ್ಳವರಾಗಿದ್ದೇವೆ. ಆಹಾರದ ಕುರಿತ ಸ್ಥಿತಿ ಬಹಳ ಕಷ್ಟಕರವಾಗಿತ್ತು. ನೀವು ನಮಗಾಗಿ ಮಾಡಿದ ಪ್ರಯತ್ನಗಳಿಗಾಗಿ ಯೆಹೋವನು ನಿಮ್ಮನ್ನು ಆಶೀರ್ವದಿಸಿ ನಿಮಗೆ ಪ್ರತಿಫಲ ಕೊಡಲಿ. ಅಧಿಕಾರಿಗಳಿಗೆ ಯೆಹೋವನ ಸಾಕ್ಷಿಗಳ ಆದರ್ಶ ಜೀವಿತ ಮಾರ್ಗದ ಮತ್ತು ಅಧಿಕಾರಿಗಳ ಕಡೆಗೆ ಗೌರವದ ಕಾರಣ ಅವರ ಮೇಲೆ ವಿಶೇಷ ಗೌರವವಿದೆ. ನೀವು ನಮಗೆ ಕಳುಹಿಸಿಕೊಟ್ಟ ಆತ್ಮಿಕ ಆಹಾರಕ್ಕಾಗಿಯೂ ನಾವು ಕೃತಜ್ಞರು.”—ಕೀರ್ತನೆ 145:18 ಹೋಲಿಸಿ.
19 ಈ ಅಪಾಯಕ್ಕೀಡಾಗಿರುವ ಸಹೋದರರು ತಮ್ಮ ಹುರುಪಿನ ಕ್ಷೇತ್ರ ಶುಶ್ರೂಷೆಯ ಮೂಲಕವೂ ಕೃತಜ್ಞತೆ ತೋರಿಸಿದ್ದಾರೆ. ನೆರೆಹೊರೆಯ ಅನೇಕರು ಅವರ ಬಳಿಗೆ ಬಂದು ಬೈಬಲ್ ಅಭ್ಯಾಸಗಳಿಗಾಗಿ ಕೇಳಿಕೊಳ್ಳುತ್ತಾರೆ. ಐದು ಟನ್ನು ಪರಿಹಾರ ಆಹಾರವನ್ನು ತಲುಪಿಸಲಾಗಿದ್ದ ಟೂಸ್ಲ ನಗರದಲ್ಲಿ 40 ಪ್ರಚಾರಕರು, ಸಭೆಯ ಒಂಬತ್ತು ಪಯನೀಯರರಿಗೆ ಉತ್ತಮ ತೆರದ ಬೆಂಬಲ ನೀಡುತ್ತಾ, ಪ್ರತಿಯೊಬ್ಬರು ತಿಂಗಳಿಗೆ ಸರಾಸರಿ 25 ತಾಸುಗಳ ಸೇವೆಯನ್ನು ವರದಿಸಿದರು. ಯೇಸುವಿನ ಮರಣದ ಜ್ಞಾಪಕಕ್ಕೆ ಅವರಲ್ಲಿ 243 ಮಂದಿಯ ಗಮನಾರ್ಹ ಹಾಜರಿಯಿತ್ತು. ಈ ಪ್ರಿಯ ಸಹೋದರರು “ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ . . . ಪೂರ್ಣ ಜಯಶಾಲಿಗಳು” ಆಗುತ್ತಿರುವುದು ನಿಶ್ಚಯ.—ರೋಮಾಪುರ 8:37.
20. ಮೊದಲಿನ ಸೋವಿಯೆಟ್ ಯೂನಿಯನ್‌ನಲ್ಲಿ ಯಾವ “ಸಮಾನತ್ವ” ಸಂಭವಿಸಿದೆ?
20 ಮೊದಲಿನ ಸೋವಿಯೆಟ್ ಯೂನಿಯನ್‌ನೊಳಗೆ ಕಳುಹಿಸಿಕೊಟ್ಟ ಪರಿಹಾರ ಆಹಾರ ಮತ್ತು ಬೆಚ್ಚಗೆನ ಬಟ್ಟೆಗೆಳ ದೊಡ್ಡ ವಾಹನಸಮೂಹಗಳಲ್ಲಿ ತೋರಿಸಲ್ಪಟ್ಟ ಉದಾರಭಾವಕ್ಕೆ ಅಲ್ಲಿಯ ಸಹೋದರರ ಹುರುಪೂ ಸಮ ಸಮವಾಗಿತ್ತು. ಉದಾಹರಣೆಗೆ, ಮಾಸ್ಕೋವಿನಲ್ಲಿ ಕಳೆದ ವರ್ಷದ 3,500 ಕ್ಕೆ ಸರಿಹೋಲಿಸುವಾಗ ಈ ವರ್ಷದ ಜ್ಞಾಪಕ ದಿನಾಚರಣೆಯ ಹಾಜರಿ 7,549. ಅದೇ ಸಮಯದಲ್ಲಿ ಆ ನಗರದ ಸಭೆಗಳ ಸಂಖ್ಯೆ 12 ರಿಂದ 16 ಕ್ಕೆ ಏರಿತು. ಮೊದಲಿನ ಇಡೀ ಸೋವಿಯೆಟ್ ಯೂನಿಯನ್‌ನಲ್ಲಿ (ಬಾಲಿಕ್ಟ್ ರಾಜ್ಯಗಳನ್ನು ಬಿಟ್ಟು), ಸಭೆಗಳಲ್ಲಿ 14 ಪ್ರತಿಶತ, ರಾಜ್ಯ ಪ್ರಚಾರಕರಲ್ಲಿ 25 ಪ್ರತಿಶತ, ಮತ್ತು ಪಯನೀಯರರಲ್ಲಿ 74 ಪ್ರತಿಶತ ಉನ್ನತಿಯಾಗಿದೆ. ಹುರುಪು ಮತ್ತು ಸ್ವತ್ಯಾಗದ ಎಂತಹ ಮನೋಭಾವ! ಒಂದನೆಯ ಶತಮಾನದಲ್ಲಿದ್ದ “ಸಮಾನತ್ವ” ದ ಮನೋಭಾವವನ್ನು ಇದು ನೆನಪು ಹುಟ್ಟಿಸುತ್ತದೆ. ಆತ್ಮಿಕ ಹಾಗೂ ಶಾರೀರಿಕ ಸ್ವತ್ತುಗಳಿದ್ದ ಕ್ರೈಸ್ತರು ಆಗ ಅನುಕೂಲ ಕಡಮೆಯಿದ್ದ ಸ್ಥಳಗಳವರಿಗೆ ಉದಾರಭಾವದ ಕೊಡುಗೆಗಳನ್ನು ಮಾಡಿದಾಗ, ಈ ಪೀಡಿತರಾದವರ ಹುರುಪು ದಾನಿಗಳಿಗೆ ಆನಂದ ಮತ್ತು ಪ್ರೋತ್ಸಾಹವನ್ನು ತಂದಿತು.—2 ಕೊರಿಂಥ 8:14.
ಕೆಟ್ಟದ್ದನ್ನು ದ್ವೇಷಿಸಿರಿ!
21. ಜ್ಞಾನೋಕ್ತಿ 3 ನೆಯ ಅಧ್ಯಾಯದ ಅಂತಿಮ ನುಡಿಗಳು ವಿವೇಕಿಗಳ ಮತ್ತು ಜ್ಞಾನಹೀನರ ಮಧ್ಯೆ ಹೇಗೆ ವ್ಯತ್ಯಾಸವನ್ನು ತೋರಿಸಿವೆ?
21 ಜ್ಞಾನೋಕ್ತಿಯ ಮೂರನೆಯ ಅಧ್ಯಾಯವು ಮುಂದೆ ಪರಸ್ಪರ ವ್ಯತ್ಯಾಸಗಳ ಒಂದು ಶ್ರೇಣಿಯನ್ನೇ ಕೊಟ್ಟು, ಈ ಬುದ್ಧಿವಾದದೊಂದಿಗೆ ಮುಗಿಸುತ್ತದೆ: “ಬಲಾತ್ಕಾರಿಯನ್ನು ನೋಡಿ ಹೊಟ್ಟೆಕಿಚ್ಚುಪಡದಿರು, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸಬೇಡ. ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವದು. ಯೆಹೋವನು ದುಷ್ಟನ ಮನೆಯನ್ನು ಶಪಿಸುವನು, ನೀತಿವಂತರ ನಿವಾಸವನ್ನೋ ಆಶೀರ್ವದಿಸುವನು. ಯಾರು ಧರ್ಮವನ್ನು ತಿರಸ್ಕರಿಸುವರೋ ಅವರನ್ನು ಆತನು ತಿರಸ್ಕರಿಸುವನು. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುವನು. ಜ್ಞಾನವಂತರು ಸನ್ಮಾನಕ್ಕೆ ಬಾಧ್ಯರಾಗುವರು; ಜ್ಞಾನಹೀನರಿಗಾಗುವ ಬಹುಮಾನವೋ ಅವಮಾನವೇ.—ಜ್ಞಾನೋಕ್ತಿ 3:29-35.
22. (ಎ) ಜ್ಞಾನಹೀನರ ಗತಿಯಿಂದ ನಾವು ಹೇಗೆ ತಪ್ಪಬಹುದು? (ಬಿ) ವಿವೇಕಿಗಳು ಏನನ್ನು ದ್ವೇಷಿಸುತ್ತಾರೆ, ಮತ್ತು ಅವರು ಯಾವುದನ್ನು ಬೆಳೆಸುತ್ತಾರೆ, ಯಾವ ಪ್ರತಿಫಲದೊಂದಿಗೆ?
22 ಜ್ಞಾನಹೀನರ ಮಧ್ಯೆ ಲೆಕ್ಕಿಸಲ್ಪಡುವುದನ್ನು ತಪ್ಪಿಸಲು ನಾವೇನು ಮಾಡಬಹುದು? ಕೆಟ್ಟದ್ದನ್ನು—ಈ ಹಿಂಸಾಚಾರದ, ರಕ್ತಾಪರಾಧಿ ಲೋಕದ ಸರ್ವ ಕುಟಿಲ ಮಾರ್ಗಗಳನ್ನು—ದ್ವೇಷಿಸಲು, ಹೌದು, ಹೇಸಲು ನಾವು ಕಲಿಯತಕ್ಕದ್ದು. (ಜ್ಞಾನೋಕ್ತಿ 6:16-19 ನ್ನೂ ನೋಡಿ.) ಇದಕ್ಕೆ ಪರಸ್ಪರ ವ್ಯತ್ಯಾಸವಾಗಿ, ದೈನ್ಯಭಾವ ಮತ್ತು ಯೆಹೋವನ ಭಯದಿಂದಾಗಿ “ಧನ ಮಾನ ಜೀವ” ಗಳನ್ನು ಗಳಿಸುವಂತೆ ನಾವು ಒಳ್ಳೆಯದನ್ನು—ಯಥಾರ್ಥತೆ, ನೀತಿ, ಮತ್ತು ದೈನ್ಯವನ್ನು—ಬೆಳೆಸಬೇಕು. (ಜ್ಞಾನೋಕ್ತಿ 22:4) ನಿಷ್ಠೆಯಿಂದ, “ನಿನ್ನ ಸರ್ವ ಹೃದಯದಿಂದ ಯೆಹೋವನಲ್ಲಿ ಭರವಸವಿಡು,” ಎಂಬ ಸಲಹೆಯನ್ನು ಅನ್ವಯಿಸಿಕೊಳ್ಳುವ ನಮಗೆಲ್ಲರಿಗೆ ದೊರೆಯುವ ಪ್ರತಿಫಲ ಇದಾಗಿರುವುದು.
ನಿಮ್ಮ ಹೇಳಿಕೆಯೇನು?
▫ ಈ ಅಧ್ಯಯನದ ಮುಖ್ಯ ವಚನ ಇಂದು ಹೇಗೆ ಅನ್ವಯಿಸುತ್ತದೆ?
▫ ನಾವು ಯೆಹೋವನನ್ನು ಹೇಗೆ ಸನ್ಮಾನಿಸಬಹುದು?
▫ ನಾವು ನೀತಿಶಿಕ್ಷಣವನ್ನು ಏಕೆ ತೃಣೀಕರಿಸಬಾರದು?
▫ ಅತ್ಯಧಿಕ ಸಂತೋಷವು ಎಲ್ಲಿ ಕಂಡುಕೊಳ್ಳಲ್ಪಡುತ್ತದೆ?
▫ ನಾವು ಹೇಗೆ ಒಳ್ಳೆಯದನ್ನು ಪ್ರೀತಿಸಿ ಕೆಟ್ಟದ್ದನ್ನು ದ್ವೇಷಿಸಬಹುದು?
[ಪುಟ 18 ರಲ್ಲಿರುವ ಚಿತ್ರ]
ಯಾರು ತಮ್ಮ ಯಜ್ಞದಲ್ಲಿ ಅತ್ಯುತ್ತಮವಾದುದನ್ನು ಯೆಹೋವನಿಗೆ ಅರ್ಪಿಸುತ್ತಾರೋ ಅಂಥವರು ಹೇರಳವಾಗಿ ಆಶೀರ್ವದಿಸಲ್ಪಡುವರು