ರೂಪುಗೊಳ್ಳುವ ವರುಷಗಳು ಈಗ ಬಿತ್ತುವುದನ್ನು ಮುಂದೆ ಕೊಯ್ಯುವಿರಿ
ಶಿಶುಗಳ ಮಿದುಳುಗಳು ಸುತ್ತುಗಟ್ಟನ್ನು ಹೀರಿಕೊಳ್ಳುವ ಸ್ಪಂಜುಗಳು. ಎರಡು ವರ್ಷಗಳಲ್ಲಿ, ಅವುಗಳುಳ್ಳವರು ಕೇವಲ ಕೇಳಿಯೇ ಜಟಿಲ ಭಾಷೆಯೊಂದನ್ನು ಕಲಿಯಬಲ್ಲರು. ಮಗು ಎರಡು ಭಾಷೆಗಳನ್ನು ಕೇಳುವಲ್ಲಿ ಎರಡನ್ನೂ ಕಲಿಯುತ್ತದೆ. ಭಾಷೆ ಮಾತ್ರವಲ್ಲ, ಸಂಗೀತಾತ್ಮಕ ಮತ್ತು ಕಲಾತ್ಮಕ ಸಾಮರ್ಥ್ಯ, ಸ್ನಾಯುಸಂಬಂಧವಾದ ಸಂಘಟನೆ, ನೈತಿಕ ಮೌಲ್ಯ ಮತ್ತು ಮನಸ್ಸಾಕ್ಷಿ, ನಂಬುಗೆ, ಪ್ರೀತಿ ಮತ್ತು ಆರಾಧನಾ ಪ್ರವೃತ್ತಿ—ಇವೆಲ್ಲ ಶಿಶು ಮಿದುಳುಗಳಲ್ಲಿ ಮುನ್ನೇರ್ಪಡಿಸಿರುವ ಸಂಚಯನ ಶಕ್ತಿ ಮತ್ತು ಸಾಮರ್ಥ್ಯದಿಂದ ಬರುತ್ತವೆ. ಅವುಗಳ ಬೆಳವಣಿಗೆಗೆ ಅವು ಪರಿಸರದಿಂದ ಮಾಹಿತಿಯನ್ನು ಪಡೆಯಲು ಮಾತ್ರ ಕಾಯುತ್ತವೆ. ಅಲ್ಲದೆ, ಈ ಮಾಹಿತಿ ಅತ್ಯುತ್ತಮ ಫಲಿತಾಂಶ ತರಲು ಒಂದು ಸರಿಯಾದ ಸಮಯ ಸೂಚಿಯಿದೆ, ಮತ್ತು ಇದಕ್ಕಿರುವ ಪ್ರಯೋಜನಕರ ಸಮಯವು ರೂಪುಗೊಳ್ಳುವ ವರುಷಗಳೆ.
ಈ ಕಾರ್ಯಗತಿ ಹುಟ್ಟಿನಲ್ಲಿ ಆರಂಭಗೊಳ್ಳುತ್ತದೆ. ಇದಕ್ಕೆ ಅಂಟಿಕೆ (bonding) ಯೆಂದು ಕರೆಯಲ್ಪಟ್ಟಿದೆ. ತಾಯಿ ಮಗುವಿನ ಕಣ್ಣುಗಳನ್ನು ದಿಟ್ಟಿಸು ಪ್ರೀತಿಯಿಂದ ನೋಡುತ್ತಾಳೆ, ಅದನ್ನು ಸಂತೈಸಿ ಮಾತಾಡುತ್ತಾಳೆ, ಅಪ್ಪಿಕೊಂಡು ತಬ್ಬುತ್ತಾಳೆ. ಶಿಶು ಅವಳ ಕಡೆ ತೀವ್ರವಾಗಿ ನೋಡುವಾಗ ಮಾತೃ ಸ್ವಭಾವ ಉದ್ರೇಕಿಸಲ್ಪಡುತ್ತದೆ ಮತ್ತು ಮಗುವಿಗೆ ಸುರಕ್ಷೆಯ ಅನುಭವವಾಗುತ್ತದೆ. ಈ ಆರಂಭದಲ್ಲಿ ಸ್ತನ್ಯಪಾನ ಸಂಭವಿಸುವುದಾದರೆ, ಇದು ಇಬ್ಬರಿಗೂ ಉತ್ತಮ. ಮಗುವಿನ ಈ ಸ್ತನ್ಯಪಾನ ಹಾಲುತ್ಪತಿಯ್ತನ್ನು ಉದ್ರೇಕಿಸುತ್ತದೆ. ಮಗುವಿನ ಚರ್ಮಸ್ಪರ್ಶ ಒಂದು ಚೋದಕಸ್ರಾವವನ್ನು ಬಿಡುಗಡೆ ಮಾಡಿ ಹೆತ್ತ ಬಳಿಕದ ಆಕೆಯ ರಕ್ತಸ್ರಾವವನ್ನು ಕಡಮೆ ಮಾಡುತ್ತದೆ. ತಾಯಿಯ ಹಾಲಿನಲ್ಲಿ ಮಗುವನ್ನು ಸೋಂಕಿನಿಂದ ಕಾಪಾಡುವ ಪ್ರತಿವಿಷವಿದೆ. ಅಂಟಿಕೆ ಉಂಟಾಗುತ್ತದೆ. ಇದು ಒಂದು ಪ್ರೇಮ ಪ್ರಸಂಗದ ಆರಂಭ. ಆದರೆ ಆರಂಭ ಮಾತ್ರ.
ಈ ಇಬ್ಬರು ಬೇಗನೆ, ತಂದೆ ಇದರೊಳಗೆ ಸೇರಿಕೊಳ್ಳುವಾಗ—ಸೇರಿಕೊಳ್ಳಲೇ ಬೇಕು—ಮೂವರಾಗುತ್ತಾರೆ. ಡಾ. ಬೆರಿ ಬ್ರೇಸೆಲ್ಟ್ ಹೇಳುವುದು: “ಪ್ರತಿ ಮಗುವಿಗೂ . . . ಒಬ್ಬ ತಂದೆಯು ಅವಶ್ಯ. ಮತ್ತು ಪ್ರತಿಯೊಬ್ಬ ತಂದೆ ಪ್ರಧಾನ ವ್ಯತ್ಯಾಸವನ್ನು ಮಾಡಬಲ್ಲನು. . . . ತಾಯಂದಿರು ಶಿಶುಗಳಿಗೆ ಮೃದುತ್ವ ಮತ್ತು ನಿರ್ಬಂಧಿತ ಸ್ವಭಾವವನ್ನು ತೋರಿಸಿದರು. ತಂದೆಗಳೋ, ಹೆಚ್ಚು ಆಟವಾಡುವವರೂ, ತಮ್ಮ ಮಕ್ಕಳಿಗೆ ತಾಯಂದಿರಿಗಿಂತ ಹೆಚ್ಚು ಕಿಕ್ಕಳಿ ಮಾಡಿ, ಅವರನ್ನು ತಿವಿದರು.” ಶಿಶುಗಳು ಈ ಒರಟು ವರ್ತನೆಗೆ ಉದ್ರೇಕದ ಕೂಗು ಮತ್ತು ಹರ್ಷದ ಕಿರಿಚಾಟಗಳಿಂದ ಪ್ರತಿವರ್ತನೆ ತೋರಿಸಿ, ಕೇಕೇ ವಿನೋದದಿಂದ ಇನ್ನೂ ಹೆಚ್ಚು ಬೇಕೆಂದು ಗದ್ದಲ ಮಾಡುತ್ತವೆ. ಇದು ಜನ್ಮದಲ್ಲಿ ಆರಂಭಿಸಿದ ಅಂಟಿಕೆಯ ಮುಂದುವರಿಯುವಿಕೆ, ‘ಶಿಶುವಿನ ಜೀವಿತದ ಮೊದಲಿನ ಹದಿನೆಂಟು ಮಾಸಗಳ ಸಮಯದಲ್ಲಿ ಅತಿ ಸ್ವಾಭಾವಿಕವಾಗಿ ಮಾಡಿದ ಇಲ್ಲವೆ ಮಾಡಲು ತಪ್ಪಿದ, ಹೆತ್ತವರ ಮತ್ತು ಮಗುವಿನ ಮಧ್ಯೆ ಇರುವ ಪ್ರೇಮ ಸಂಬಂಧ’ ಎಂದು ಹೈ ರಿಸ್ಕ್: ಚಿಲ್ಡ್ರನ್ ವಿದೌಟ್ ಎ ಕಾನ್ಷನ್ಸ್ ಎಂಬ ಪುಸ್ತಕದ ಲೇಖಕ ಡಾ. ಮೇಗಿಡ್ ಹೇಳುತ್ತಾರೆ. ಇದು ತಪ್ಪುವಲ್ಲಿ ಅವರು ಸಂಬಂಧರಹಿತರಾಗಿ ಬೆಳೆಯಬಹುದು, ಮತ್ತು ಅವರಿಗೆ ಪ್ರೀತಿಸುವ ಸಾಮರ್ಥ್ಯವಿಲ್ಲ.
ತಾಯಿ ಮತ್ತು ತಂದೆ ಅಂಟಿಕೆಯಲ್ಲಿ ಪಾಲಿಗರು
ಆದುದರಿಂದ, ಕಿಂಡರ್ಗಾರ್ಟನ್ನ ಮೊದಲು ಬರುವ ರೂಪುಗೊಳ್ಳುವ ವರ್ಷಗಳಲ್ಲಿ, ಈ ಹೆತ್ತವರ ಮತ್ತು ಮಗುವಿನ ಮಧ್ಯೆ ಆಗುವ ಪ್ರೇಮ ಸಂಬಂಧದಲ್ಲಿ, ಈ ಅಂಟಿಕೆ ಮತ್ತು ಜೋಡಣೆಯಲ್ಲಿ, ತಾಯಿಯೂ ತಂದೆಯೂ ಸಹೋದ್ಯಮಿಗಳಾಗುವುದು ಎಷ್ಟು ನಿರ್ಣಾಯಕ! ಇಬ್ಬರು ಹೆತ್ತವರಿಂದಲೂ ಅಪ್ಪಿಕೊಳ್ಳುವಿಕೆ ಮತ್ತು ಚುಂಬನಗಳು ಧಾರಾಳವಿರಲಿ. ಹೌದು, ತಂದೆಗಳು ಸಹ! ಜೂನ್ 1992ರ ಮೆನ್ಸ್ ಹೆಲ್ತ್ ಹೇಳುವುದು: “ಅಪ್ಪಿಕೊಳ್ಳುವಿಕೆ ಮತ್ತು ಹೆತ್ತವರೊಂದಿಗೆ ಶಾರೀರಿಕ ಮಮತೆ, ಮಗುವಿನ ಭವಿಷ್ಯತ್ತಿನಲ್ಲಿ ಯಶಸ್ವಿಯಾದ ಗೆಳೆತನ, ವಿವಾಹ ಮತ್ತು ಜೀವನೋಪಾಯಗಳನ್ನು ಬಲವಾಗಿ ಮುಂತಿಳಿಸುತ್ತದೆ, ಎಂದು ಜರ್ನಲ್ ಆಫ್ ಪರ್ಸನಾಲಿಟಿ ಆ್ಯಂಡ್ ಸೋಷಲ್ ಸೈಖಾಲಜಿಯಲ್ಲಿ ಪ್ರಕಟಿಸಿದ 36 ವರ್ಷಗಳ ಒಂದು ಅಧ್ಯಯನ ಹೇಳುತ್ತದೆ. ಅನಾದರದ ಹೆತ್ತವರಿದ್ದ ಮಕ್ಕಳಲ್ಲಿ ಕೇವಲ 30 ಪ್ರತಿಶತಕ್ಕೆ ಹೋಲಿಸುವಾಗ, ಮಮತೆ ತೋರಿಸುವ ಹೆತ್ತವರಿದ್ದ ಮಕ್ಕಳಲ್ಲಿ ಎಪ್ಪತ್ತು ಪ್ರತಿಶತ ಸಾಮಾಜಿಕವಾಗಿ ಉತ್ತಮವಾಗಿ ಮುಂದೆ ಬಂದರು; ಮತ್ತು ಅಪ್ಪನ ಅಪ್ಪಿಕೊಳ್ಳುವಿಕೆ ಅಮ್ಮನದಕ್ಕೆ ಸಮಾನವಾದ ಮಹತ್ವವುಳ್ಳದ್ದಾಗಿತ್ತು ಎಂದು ಕಂಡುಹಿಡಿಯಲ್ಪಟ್ಟಿತು.”
ತೂಗುಕುರ್ಚಿಯಲ್ಲಿ ತೂಗುತ್ತಿರುವಾಗ ಅವನನ್ನು ಹಿಡಿದು ತೂಗಿರಿ. ಅವನು ನಿಮ್ಮ ತೊಡೆಯಲ್ಲಿ ಸುರಕ್ಷಿತನಾಗಿರುವಾಗ ಅವನಿಗೆ ಓದಿ ಹೇಳಿರಿ. ಅವನೊಂದಿಗೆ ಮಾತಾಡಿರಿ, ಅವನು ಹೇಳುವುದನ್ನು ಕೇಳಿರಿ. ಸರಿ, ತಪ್ಪು ಯಾವುದೆಂದು ಅವನಿಗೆ ಬೋಧಿಸಿ, ಆ ಸೂತ್ರಗಳನ್ನು ನೀವೇ ಅನುಸರಿಸಿ ಅವನಿಗೆ ಉತ್ತಮ ಮಾದರಿಗಳಾಗಿರಲು ಖಾತ್ರಿ ಮಾಡಿಕೊಳ್ಳಿರಿ. ಮತ್ತು ಈ ಎಲ್ಲ ಸಮಯದಲ್ಲಿ, ಮಗುವಿನ ಪ್ರಾಯ ನೆನಪಿರಲಿ. ಹೇಳುವುದನ್ನು ಸರಳವಾಗಿ, ರಸಕರವಾಗಿ, ಮತ್ತು ವಿನೋದವುಳ್ಳದ್ದಾಗಿ ಮಾಡಿರಿ.
ನಿಮ್ಮ ಮಗುವಿಗೆ ಸ್ವಾಭಾವಿಕವಾದ ಒಂದು ಕುತೂಹಲ ಸ್ವಭಾವ, ಕಂಡು ಹಿಡಿಯುವ ಒಂದು ಬಯಕೆ, ಅದರ ಸುತ್ತುಗಟ್ಟಿನ ಕುರಿತಾಗಿ ಸಕಲ ವಿಷಯಗಳನ್ನು ಕಲಿಯುವ ಮನಸ್ಸು ಇದೆ. ಜ್ಞಾನದ ಈ ಹಸಿವೆಯನ್ನು ತಣಿಸಲು, ಮಗು ನಿಮಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತದೆ. ಗಾಳಿಯನ್ನು ಯಾವುದು ಉಂಟುಮಾಡುತ್ತದೆ? ಆಕಾಶ ನೀಲಿಯೇಕೆ? ಸೂರ್ಯ ಅಸ್ತಮಿಸುವಾಗ ಕೆಂಪು ಬಣ್ಣ ಏಕೆ ಉಂಟಾಗುತ್ತದೆ? ಇವುಗಳನ್ನು ಉತ್ತರಿಸಿ. ಇದು ಯಾವಾಗಲೂ ಸುಲಭವಲ್ಲ. ನಿಮ್ಮ ಮಗುವಿನ ಮನಸ್ಸನ್ನು ಪ್ರಭಾವಿಸುವರೆ, ಮಾಹಿತಿಯನ್ನು ಕೊಡುವರೆ, ಪ್ರಾಯಶಃ ದೇವರನ್ನೂ ಆತನ ಸೃಷ್ಟಿಯನ್ನೂ ಗಣ್ಯ ಮಾಡಿಸುವರೆ, ಅವು ನಿಮಗಿರುವ ಆಮಂತ್ರಣ. ಎಲೆಯ ಮೇಲೆ ಹರಿದಾಡುವ ಒಂದು ಕೀಟ ಅವನನ್ನು ಆಕರ್ಷಿಸುತ್ತದೆಯೆ? ಅಥವಾ, ಒಂದು ಚಿಕ್ಕ ಹೂವಿನ ರಚನೆಯೆ? ಯಾ ಜೇಡ ಬಲೆಯನ್ನು ಹೆಣೆಯುವ ವಿಷಯವೆ? ಯಾ, ಕೇವಲ ಮಣ್ಣನ್ನು ಅಗೆಯುವುದು ಅವನನ್ನು ಆಕರ್ಷಿಸುತ್ತದೆಯೆ? ಮತ್ತು ಯೇಸು ತನ್ನ ಸಾಮ್ಯಗಳ ಮೂಲಕ ಕಲಿಸಿದಂತೆ, ಸಣ್ಣ ಕಥೆಗಳ ಮೂಲಕ ಕಲಿಸುವುದನ್ನು ಅಲಕ್ಷಿಸಬೇಡಿರಿ. ಅದು ಕಲಿಕೆ ಆನಂದಕರವಾಗಿ ಮಾಡುತ್ತದೆ.
ಅನೇಕ ಕಡೆಗಳಲ್ಲಿ, ಸಾಕಷ್ಟು ಹಣಸಂಪಾದನೆ ಮಾಡಲು ಹೆತ್ತವರಲ್ಲಿ ಇಬ್ಬರೂ ಕೆಲಸಕ್ಕೆ ಹೋಗಬೇಕಾಗುತ್ತದೆ. ಇಂಥವರು ಸಾಯಂಕಾಲ ಮತ್ತು ವಾರಾಂತ್ಯದ ಸಮಯವನ್ನು ತಮ್ಮ ಮಕ್ಕಳೊಂದಿಗೆ ಕಳೆಯಲು ವಿಶೇಷ ಪ್ರಯತ್ನ ಮಾಡಬಲ್ಲರೆ? ತಾಯಿ ಮಕ್ಕಳೊಡನೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ಅರ್ಧ ದಿನ ಕೆಲಸಕ್ಕೆ ಹೋಗುವುದು ಸಾಧ್ಯವೆ? ಇಂದು ಅನೇಕ ಒಂಟಿಗ ಹೆತ್ತವರಿದ್ದಾರೆ ಮತ್ತು ಇವರು ತಮ್ಮನ್ನು ಮತ್ತು ಮಕ್ಕಳನ್ನು ಪೋಷಿಸಲು ಕೆಲಸ ಮಾಡಲೇ ಬೇಕಾಗುತ್ತದೆ. ಇಂಥವರು ಸಾಯಂಕಾಲ ತಮಗೆ ಸಾಧ್ಯವಿರುವಷ್ಟು ತಾಸುಗಳನ್ನು ಮತ್ತು ವಾರಾಂತ್ಯಗಳನ್ನು ತಮ್ಮ ಮಕ್ಕಳೊಂದಿಗೆ ಕಳೆಯಲು ಶ್ರದ್ಧೆ ತೋರಿಸಬಹುದೆ? ಅನೇಕ ಸಂದರ್ಭಗಳಲ್ಲಿ ತಾಯಂದಿರು ತಮ್ಮ ಮಕ್ಕಳಿಂದ ದೂರವಿರಬೇಕಾಗಿ ಬರುತ್ತದೆ. ಇದಕ್ಕಿರಬಹುದಾದ ಕಾರಣಗಳು ನ್ಯಾಯಸಮ್ಮತವಾದರೂ, ಆ ಚಿಕ್ಕ ಮಗುವಿಗೆ ಇದು ತಿಳಿಯದೆ ಇರುವುದರಿಂದ ತ್ಯಜಿಸಲ್ಪಟ್ಟಿರುವ ಅನಿಸಿಕೆ ಅದಕ್ಕಾಗಬಹುದು. ಆಗ ನಿಮ್ಮ ಮಗುವಿಗಾಗಿ ಸಮಯವನ್ನು ಖರೀದಿಸಲು ನೀವು ವಿಶೇಷ ಪ್ರಯತ್ನವನ್ನು ಮಾಡತಕ್ಕದ್ದು!
ಈಗ, “ಗುಣಮಟ್ಟದ ಸಮಯ” ಎಂದು ನಾವು ಕೇಳುತ್ತಿರುವ ಈ ಸಮಯವೆಂದರೇನು? ಕಾರ್ಯಮಗ್ನರಾಗಿರುವ ಹೆತ್ತವರು ಪ್ರತಿದಿನ 15 ಯಾ 20 ನಿಮಿಷಗಳನ್ನು ಮತ್ತು ವಾರಾಂತ್ಯದಲ್ಲಿ ಒಂದು ತಾಸನ್ನು ತಮ್ಮ ಮಗುವಿನೊಂದಿಗೆ ಕಳೆಯಬಹುದು, ಮತ್ತು ಇದನ್ನು ಅವರು ಗುಣಮಟ್ಟದ ಸಮಯವೆಂದು ಕರೆಯುತ್ತಾರೆ. ಇದು ಮಗುವಿನ ಆವಶ್ಯಕತೆಗೆ ಸಾಕೊ? ಯಾ ಇದರ ಉದ್ದೇಶ ಹೆತ್ತವರ ಮನಸ್ಸಾಕ್ಷಿಯನ್ನು ಶಮನ ಮಾಡುವುದೊ? ಯಾ ಮಗುವಿನ ಬಯಕೆಯನ್ನು ಪೂರೈಸದೆ ಇರುವಾಗ ತನ್ನ ಆತ್ಮಸಾಧನೆಗಾಗಿ ಕೆಲಸ ನಡೆಸುವ ತಾಯಿಯ ಮನಸ್ಸಿಗೆ ನೆಮ್ಮದಿ ತರಲಿಕ್ಕೊ? ಆದರೆ ನೀವು, ‘ಸತ್ಯವಾಗಿಯೂ, ನಾನು ಎಷ್ಟು ಕಾರ್ಯಮಗ್ನನೆಂದರೆ, ನನಗೆ ಅಂತಹ ಸಮಯವೇ ಇಲ್ಲ,’ ಎಂದು ಹೇಳಬಹುದು. ಹಾಗಿರುವಲ್ಲಿ ಅದು ನಿಮಗೂ ನಿಮ್ಮ ಮಗುವಿಗೂ ಅತಿ ಕೆಟ್ಟದ್ದೂ ಅತಿ ವಿಷಾದನೀಯವೂ ಆಗಿದೆ, ಏಕೆಂದರೆ ಇದಕ್ಕೆ ಸೀಳುದಾರಿಗಳೇ ಇಲ್ಲ. ರೂಪುಗೊಳ್ಳುವ ವರುಷಗಳಲ್ಲಿ ಸಮಯವನ್ನು ಕಂಡುಹಿಡಿಯಿರಿ, ಇಲ್ಲವೆ ಹದಿಪ್ರಾಯಗಳಲ್ಲಿ ಸಂತತಿ ಅಂತರದ ಫಲವನ್ನು ಕೊಯ್ಯಲು ತಯಾರಾಗಿರಿ.
ಇದರಲ್ಲಿ ದಿನಾರೈಕೆಯ ಸ್ಥಳದಲ್ಲಿ ಬಿಟ್ಟಿರುವ ಮಗುವಿಗೆ ಹಾನಿಯಾಗುವ ಸಾಧ್ಯತೆ ಇರುವುದು ಮಾತ್ರವಲ್ಲ, ಮಗು ಬೆಳೆಯುವಾಗ ಅದನ್ನು ನೋಡಿ ಆನಂದಿಸುವುದರಲ್ಲಿ ಹೆತ್ತವರಿಗಾಗುವ ನಷ್ಟವೂ ಸೇರಿದೆ. ತಾನು ಏಕೆ ಒಂಟಿಗನಾಗಿ ಬಿಡಲ್ಪಡುತ್ತಿದ್ದೇನೆ ಎಂಬುದಕ್ಕೆ ಕಾರಣಗಳನ್ನು ಮಗು ಯಾವಾಗಲೂ ಅರ್ಥಮಾಡಿಕೊಳ್ಳುವುದಿಲ್ಲ. ಆದುದರಿಂದ ಅವನಿಗೆ ಅಸಡ್ಡೆ, ನಿರಾಕರಣೆ, ಪರಿತ್ಯಾಗ, ಮತ್ತು ಅಪ್ರೀತಿಯ ಅನಿಸಿಕೆ ಆಗಬಹುದು. ಅವನ ಹದಿಪ್ರಾಯದೊಳಗೆ ಅವನು ತನ್ನ ಕಾರ್ಯಮಗ್ನ ಹೆತ್ತವರ ಸ್ಥಾನಭರ್ತಿ ಮಾಡಲು ತನ್ನ ಸಮಾನವಯಸ್ಸಿನವರೊಡನೆ ಅನುರಕ್ತನಾಗಿರಬಹುದು. ಆ ಹುಡುಗನು ಇಬ್ಬಗೆಯ ಜೀವನವನ್ನೂ ನಡೆಸುತ್ತಿರಬಹುದು, ಒಂದು ತನ್ನ ಹೆತ್ತವರನ್ನು ಸಂತೈಸಲು, ಇನ್ನೊಂದು ತನ್ನನ್ನು ಇಷ್ಟಪಡಿಸಿಕೊಳ್ಳಲು. ಮಾತುಗಳು, ವಿವರಣೆಗಳು, ಕ್ಷಮಾಯಾಚನೆ—ಇವಾವುವೂ ಈ ಅಂತರವನ್ನು ಮುಚ್ಚವು. ಹೆತ್ತವರ ಪ್ರೀತಿಯ ಕುರಿತ ಮಾತು, ಹೆತ್ತವರು ಅತ್ಯಗತ್ಯವಾಗಿದ್ದ ವರುಷಗಳಲ್ಲಿ ಅಸಡ್ಡೆ ಮಾಡಲ್ಪಟ್ಟಿದ್ದ ಮಗುವಿಗೆ ಶುದ್ಧವಾಗಿ ಕಾಣುವುದಿಲ್ಲ. ಪ್ರೀತಿಯ ಕುರಿತ ಮಾತು ಈಗ ಸುಳ್ಳಾಗಿ ಕೇಳಿಬರುತ್ತದೆ; ಟೊಳ್ಳಾಗಿ ಕಂಡುಬರುತ್ತದೆ. ನಂಬಿಕೆ ಹೇಗೋ ಹಾಗೆಯೆ, ಕ್ರಿಯೆಗಳಿಲ್ಲದ ನಟನೆಯ ಪ್ರೀತಿ ಸತ್ತಿರುತ್ತದೆ.—ಯಾಕೋಬ 2:26.
ನಾವು ಬಿತ್ತಿರುವುದನ್ನು ಈಗಲೂ ಕೊಯ್ಯುವುದು
ಈ ನಾ-ಮೊದಲು ಸಂತತಿಯಲ್ಲಿ, ಸ್ವಾರ್ಥ ಹೆಚ್ಚಾಗುತ್ತಿದೆ, ಮತ್ತು ನಮ್ಮ ಮಕ್ಕಳ ಪರಿತ್ಯಾಗದಲ್ಲಂತೂ ಇದು ವಿಶೇಷವಾಗಿ ಸ್ಪಷ್ಟ. ನಾವು ಅವರಿಗೆ ಜನ್ಮಕೊಟ್ಟು, ಆ ಬಳಿಕ ದಿನಾರೈಕೆಯ ಕೇಂದ್ರಗಳಲ್ಲಿ ಹಾಕುತ್ತೇವೆ. ಇಂಥ ಕೆಲವು ದಿನಾರೈಕೆಯ ಕೇಂದ್ರಗಳು ಮಕ್ಕಳಿಗೆ ಒಳ್ಳೆಯದಾಗಿರಬಹುದಾದರೂ, ಅನೇಕ ಕೇಂದ್ರಗಳು ಒಳ್ಳೆಯವುಗಳಲ್ಲ, ವಿಶೇಷವಾಗಿ ಚಿಕ್ಕ ಮಕ್ಕಳಿಗೆ. ಕೆಲವು ಕೇಂದ್ರಗಳು ಮಗುವಿನ ಲೈಂಗಿಕ ಅಪಪ್ರಯೋಗದ ಆಪಾದನೆಯ ಮೇರೆಗೆ ತನಿಖೆಯೊಳಗೂ ಬಂದಿವೆ. ಒಬ್ಬ ಸಂಶೋಧಕರು ಹೇಳಿದ್ದು: “ಭವಿಷ್ಯತ್ತಿನಲ್ಲಿ, ನಿಸ್ಸಂದೇಹವಾಗಿ, ನಮಗೆ ಇಂದಿನದನ್ನು ಚಹ ಗೋಷಿಯ್ಠಾಗಿ ತೋರಿಸುವ ಸಮಸ್ಯೆಗಳು ಬರಲಿಕ್ಕಿವೆ.” ಇಂದಿನ “ಚಹ ಗೋಷ್ಠಿ”, ಡಾ. ಡೇವಿಡ್ ಎಲ್ಕಿಂಡ್, 1992ರಲ್ಲಿ ನೀಡಿರುವ ಸಂಖ್ಯಾಸಂಗ್ರಹಣ ತೋರಿಸುವಂತೆ ಆಗಲೆ ಭಯಂಕರವಾಗಿದೆ:
“ಕಳೆದ ಎರಡು ದಶಕಗಳಲ್ಲಿ, ಮಕ್ಕಳು ಮತ್ತು ಯುವಜನರಲ್ಲಿ ಬೊಜ್ಜಿನಲ್ಲಿ 50-ಪ್ರತಿಶತ ವೃದ್ಧಿಯಿದೆ. ಒಂದು ವರ್ಷದಲ್ಲಿ ನಾವು ವ್ಯಸನ ಸಂಬಂಧಿತ ಅಪಘಾತಗಳಲ್ಲಿ ಸುಮಾರು ಹತ್ತು ಸಾವಿರ—ಗಾಯಗೊಂಡವರು ಮತ್ತು ಅಂಗಹೀನರು ಇದರಲ್ಲಿ ಸೇರಿರುವುದಿಲ್ಲ—ಯುವಜನರನ್ನು ಕಳೆದುಕೊಳ್ಳುತ್ತೇವೆ. ನಾಲ್ವರು ಹದಿಪ್ರಾಯದವರಲ್ಲಿ ಒಬ್ಬನು ಎರಡು ವಾರಕ್ಕೊಮ್ಮೆ ಮಿತಿಮೀರಿ ಕುಡಿಯುತ್ತಾನೆ, ಮತ್ತು ನಮ್ಮಲ್ಲಿ ಇಪ್ಪತ್ತು ಲಕ್ಷ ಮದ್ಯ ರೋಗಾವಸ್ಥೆಯ ಯುವಜನರಿದ್ದಾರೆ.
“ಅಮೆರಿಕದಲ್ಲಿ ಹದಿಪ್ರಾಯದ ಹುಡುಗಿಯರು ವರ್ಷಕ್ಕೆ ಹತ್ತು ಲಕ್ಷದಂತೆ ಗರ್ಭವತಿಯರಾಗುತ್ತಾರೆ. ಇದು ಹದಿಪ್ರಾಯದವರ ಅತಿ ಹೆಚ್ಚು ಗರ್ಭಧಾರಣೆಯ ಎರಡನೆಯ ಪಾಶ್ಚಿಮಾತ್ಯ ದೇಶವಾದ ಇಂಗ್ಲೆಂಡಿಗಿಂತ ಇಮ್ಮಡಿ. ಕಳೆದ 20 ವರ್ಷಗಳಲ್ಲಿ ಹದಿಪ್ರಾಯದವರ ಆತ್ಮಹತ್ಯೆಯಲ್ಲಿ ಮುಮ್ಮಡಿ ವೃದ್ಧಿಯಿದೆ, ಮತ್ತು ಪ್ರತಿ ವರ್ಷ, ಐದರಿಂದ ಆರು ಸಾವಿರ ಹದಿಪ್ರಾಯದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹದಿಪ್ರಾಯದ ನಾಲ್ಕು ಹುಡುಗಿಯರಲ್ಲಿ ಒಬ್ಬಳಿಗೆ, ತಿನ್ನುವ ಸಂಬಂಧದ ಕಾಯಿಲೆ, ಅತಿ ಸಾಮಾನ್ಯವಾಗಿ ವಿಪರೀತ ಆಹಾರ ನಿಯಂತ್ರಣದ ಒಂದು ರೋಗಸೂಚನೆಯಾದರೂ ಇದೆ. ಹದಿನಾಲ್ಕರಿಂದ 19 ವಯಸ್ಸಿನವರ ಗುಂಪು ಇತರ ಯಾವ ಗುಂಪುಗಳಿಗಿಂತಲೂ ಎರಡನೆಯ ಸ್ಥಾನದಷ್ಟು ಹೆಚ್ಚು ನರಹತ್ಯವನ್ನು ಮಾಡುತ್ತದೆ.”
ಇದಕ್ಕೆ ಗರ್ಭಲ್ಲಿರುವಾಗಲೇ ಕೊಲ್ಲಲ್ಪಡುವ ಐದು ಕೋಟಿ ಶಿಶುಗಳ ಭಯಭೀತಿಯನ್ನುಂಟುಮಾಡುವ ಸಂಖ್ಯಾಸಂಗ್ರಹಣವನ್ನು ಸೇರಿಸುವಾಗ, ಇಂದಿನ “ಚಹ ಗೋಷ್ಠಿ” ವರ್ಣನಾತೀತವಾಗುತ್ತದೆ. ಕುಟುಂಬಗಳ ಕುಸಿತದ ವೀಕ್ಷಣದಲ್ಲಿ, ಡಾ. ಎಲ್ಕಿಂಡ್ ಹೇಳಿದ್ದು: “ಕ್ಷಿಪ್ರ ಸಾಮಾಜಿಕ ಬದಲಾವಣೆಗಳು, ಆರೋಗ್ಯಕರವಾದ ಬೆಳವಣಿಗೆ ಮತ್ತು ವಿಕಾಸಕ್ಕಾಗಿ ಸ್ಥಿರತೆ ಮತ್ತು ಸುರಕ್ಷೆ ಬೇಕಾಗುವ ಮಕ್ಕಳಿಗೂ ಯುವಜನರಿಗೂ ದೊಡ್ಡ ದುರಂತ.” ನಾನೇ ಮೊದಲೆಂಬ ಸ್ವಾರ್ಥದ ವಿಷಯದಲ್ಲಿ ಒಬ್ಬ ಲೇಖಕನು ಅಸಮ್ಮತಿಯಿಂದ ಘೋಷಿಸಿದ್ದು: “ದಂಪತಿಗಳಿಗೆ ಯಾರೂ, ನೋಡಿ, ನೀವು ವಿವಾಹಿತರಾಗಿಯೇ ಉಳಿಯುವುದು ಅಗತ್ಯ. ಮಕ್ಕಳಿರುವಲ್ಲಿ, ವಿವಾಹಿತರಾಗಿಯೇ ಉಳಿಯಿರಿ! ಎಂದು ಹೇಳಲು ಮನಸ್ಸು ಮಾಡುವುದಿಲ್ಲ.”
ಒಂದು ಮಗುವನ್ನು ಪ್ರೀತಿಸಲು ಸಮಯ ಹಿಡಿಯುತ್ತದೆ. ಅನೇಕ ವರ್ಷಗಳ ಹಿಂದೆ, ಕ್ಯಾಪ್ಟನ್ ಕ್ಯಾಂಗರೂ ಎಂಬ ಹೆಸರಿಂದ ಮಕ್ಕಳಿಗೆ ಟೀವೀ ಪ್ರಸಾರ ಮಾಡುತ್ತಿದ್ದ ರಾಬರ್ಟ್ ಕೀಶನ್, ಮಕ್ಕಳಿಂದ ಸಮಯವನ್ನು ತಡೆದು ಹಿಡಿಯುವುದರ ಪರಿಣಾಮಗಳ ಕುರಿತು ಎಚ್ಚರಿಸಿದನು. ಅವರಂದದ್ದು:
“ಒಂದು ಚಿಕ್ಕ ಹೆಣ್ಣುಮಗು, ಹೆಬ್ಬೆಟ್ಟನ್ನು ಬಾಯಲ್ಲಿಟ್ಟು, ಬೊಂಬೆಯನ್ನು ಕೈಯಲ್ಲಿ ಹಿಡಿದುಕೊಂಡು, ಹೆತ್ತವರಲ್ಲೊಬ್ಬರು ಮನೆಗೆ ಬರುವ ಸಮಯವನ್ನು ತುಸು ಅಸಹನೆಯಿಂದ ಕಾಯುತ್ತಾ ಇದೆ. ಯಾವುದೋ ಚಿಕ್ಕ ಮರಳ ಡಬ್ಬಿಯ ಅನುಭವವನ್ನು ಆಕೆ ಹೇಳಬೇಕೆಂದಿದ್ದಾಳೆ. ಆ ದಿನ ತನಗೆ ಪರಿಚಯವಾದ ರೋಮಾಂಚ ವಿಷಯದಲ್ಲಿ ಪಾಲಿಗಳಾಗಲು ಆಕೆ ಉದ್ರೇಕಗೊಂಡಿದ್ದಾಳೆ. ಆ ಸಮಯ ಬರುತ್ತದೆ. ತಂದೆ ಬರುತ್ತಾನೆ. ಕೆಲಸ ಸ್ಥಳದ ಒತ್ತಡಗಳಿಂದ ಬಳಲಿದ ತಂದೆ ಅನೇಕ ಸಲ ಮಗುವಿಗೆ, ‘ಈಗ ಬೇಡ ಮಗೂ, ನನಗೆ ತುಂಬ ಕೆಲಸವಿದೆ, ಹೋಗಿ ಟೆಲಿವಿಷನ್ ನೋಡು.’ ಎಂದು ಹೇಳುತ್ತಾನೆ. ಅನೇಕ ಅಮೆರಿಕನ್ ಮನೆಗಳಲ್ಲಿ ಅತಿ ಹೆಚ್ಚು ಬಾರಿ ಹೇಳಲ್ಪಡುವ ಪದಗಳು, ‘ನಾನು ಬಹಳ ಕೆಲಸದಲ್ಲಿದ್ದೇನೆ, ಹೋಗಿ ಟೆಲಿವಿಷನ್ ನೋಡು.’ ಈಗ ಅಲ್ಲದಿದ್ದರೆ ಯಾವಾಗ? ‘ಬಳಿಕ.’ ಆದರೆ ಆ ಬಳಿಕ ಬರುವುದು ವಿರಳ. . . .
“ವರುಷಗಳು ಉರುಳುತ್ತವೆ, ಮಗು ಬೆಳೆಯುತ್ತದೆ. ನಾವು ಅದಕ್ಕೆ ಆಟದ ಸಾಮಾನುಗಳನ್ನೂ ಬಟ್ಟೆಗೆಳನ್ನೂ ಕೊಡುತ್ತೇವೆ. ನಾವು ಆಕೆಗೆ ಅತ್ಯಾಧುನಿಕ ಶೈಲಿಯ ಡಿಸೈನರ್ ಬಟ್ಟೆಗೆಳನ್ನೂ ಸ್ಟೀರಿಯೋವನ್ನೂ ಕೊಡುತ್ತೇವೆ. ಆದರೆ ಅವಳು ಅತಿಯಾಗಿ ಬಯಸುವ ನಮ್ಮ ಸಮಯವನ್ನು ಅವಳಿಗೆ ಕೊಡುವುದಿಲ್ಲ. ಅವಳಿಗೆ ಈಗ ಹದಿನಾಲ್ಕು ವರ್ಷ, ಅವಳ ಕಣ್ಣು ನಿಸೇಜ್ತವಾಗಿವೆ, ಅವಳು ಯಾವುದರಲ್ಲಿಯೋ ಸಿಕ್ಕಿಕೊಂಡಿದ್ದಾಳೆ. ‘ಮಗೂ, ಏನಾಗುತ್ತಾ ಇದೆ? ಹೇಳು, ಮಾತಾಡು.’ ಸಮಯ ಮೀರಿ ಹೋಯಿತು, ಮೀರಿಯೇ ಹೋಯಿತು. ಪ್ರೀತಿ ನಮ್ಮನ್ನು ದಾಟಿ ಹೋಗಿಯಾಗಿದೆ. . . .
“ನಾವು ಒಂದು ಮಗುವಿಗೆ, ‘ಈಗಲ್ಲ, ಆ ಮೇಲೆ’ ಎಂದು ಹೇಳುವಾಗ. ‘ಹೋಗಿ ಟೀವೀ ನೋಡು’ ಎಂದು ಹೇಳುವಾಗ. ‘ಅಷ್ಟೊಂದು ಪ್ರಶ್ನೆಗಳನ್ನು ಕೇಳಬೇಡ’ ಎಂದು ಹೇಳುವಾಗ. ಯುವ ಜನರು ನಮ್ಮಿಂದ ಬಯಸುವ ಒಂದು ವಿಷಯವನ್ನು—ನಮ್ಮ ಸಮಯವನ್ನು—ನಾವು ಕೊಡದಿರುವಾಗ. ನಾವು ಮಗುವನ್ನು ಪ್ರೀತಿಸಲು ತಪ್ಪುವಾಗ ಹೊತ್ತು ಮೀರಿ ಹೋಗಿರುತ್ತದೆ. ನಾವು ಅಚಿಂತಿತರಲ್ಲ. ಮಗುವನ್ನು ಪ್ರೀತಿಸುವ ಬದಲು ಬೇರೆ ಕಾರ್ಯಗಳಲ್ಲಿ ತೀರಾ ಕಾರ್ಯಮಗ್ನರು ಅಷ್ಟೆ.”
ಸಮಯದ ಪರಿಮಾಣ ಅಗತ್ಯ
ಇಡಬೇಕಾದ ಆದರ್ಶವು ಅಳೆದ ಕಂತುಗಳಲ್ಲಿ ಕೊಡಲ್ಪಡುವ “ಗುಣಮಟ್ಟದ ಸಮಯ”ವೆಂದು ಕರೆಯಲ್ಪಡುವ ವಿಷಯವಲ್ಲ; ಅದರಲ್ಲಿ “ಸಮಯದ ಪರಿಮಾಣ”ವೂ ಸೇರಿರತಕ್ಕದ್ದು. ಯಾವುದು ಮನಶ್ಶಾಸ್ತ್ರದ ಸಂಬಂಧದಲ್ಲಿ ಬರೆಯಲ್ಪಟ್ಟಿರುವ ಸಕಲ ಪುಸ್ತಕಗಳಿಗಿಂತಲೂ ಎಷ್ಟೊ ಹೆಚ್ಚು ವಿವೇಕವನ್ನೊಳಗೊಂಡಿದೆಯೋ ಆ ಗ್ರಂಥವಾದ ಬೈಬಲು, ಧರ್ಮೋಪದೇಶಕಾಂಡ 6:6, 7ರಲ್ಲಿ ಹೇಳುವುದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸ ಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” ನಿಮ್ಮ ಹೃದಯದಲ್ಲಿರುವ ದೇವರ ವಾಕ್ಯದಿಂದ ನಿಜ ಮೌಲ್ಯಗಳನ್ನು ಮಕ್ಕಳ ಹೃದಯಕ್ಕೆ ಹತ್ತಿಸಲು ಉಪಯೋಗಿಸತಕ್ಕ ಸಮಯವಿದು. ನೀವು ಅದರಂತೆ ಬಾಳುವಲ್ಲಿ, ನಿಮ್ಮ ಮಗು ನಿಮ್ಮನ್ನು ಅನುಕರಿಸುವುದು.
ಹಿಂದಿನ ಲೇಖನದ ಆರಂಭದ ಪರಿಚ್ಛೇದದಲ್ಲಿ ಉದ್ಧರಿಸಿದ ಜ್ಞಾನೋಕ್ತಿ ಜ್ಞಾಪಕವಿದೆಯೆ? ಅದು ಪುನಃ ಇಲ್ಲಿದೆ: “ನಡೆಯ ಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” (ಜ್ಞಾನೋಕ್ತಿ 22:6) ಇದು ಸತ್ಯವಾಗುವುದು ಮೌಲ್ಯಗಳ ತರಬೇತಿನ ಆಂತರೀಕರಣವಾದರೆ ಮಾತ್ರ, ಅಂದರೆ, ಅದು ಅವನೊಳಗೆ ಹಾಕಲ್ಪಟ್ಟು, ಅವನ ಯೋಚನೆಯ, ಅತ್ಯಾಂತರಿಕ ಅನಿಸಿಕೆಗಳ, ಅವನು ಅತ್ಯಾಳದಲ್ಲಿ ಏನಾಗಿದ್ದಾನೋ ಅದರ ಭಾಗವಾಗಿ ಮಾಡಲ್ಪಟ್ಟರೆ ಮಾತ್ರ. ಇದು ಸಂಭವಿಸುವುದು ಹೆತ್ತವರು ಅವನಿಗೆ ಈ ಮೌಲ್ಯಗಳನ್ನು ಕಲಿಸಿದರೆ ಮಾತ್ರವಲ್ಲ, ಅದನ್ನು ಅವನ ಹೆತ್ತವರೂ ಆಚರಿಸುವುದಾದರೆ ಮಾತ್ರ.
ಅವನು ಅವುಗಳನ್ನು ಒಂದು ಜೀವನ ದಾರಿಯಾಗಿ ಹೀರಿಕೊಂಡಿದ್ದಾನೆ. ಅದು ಅವನದ್ದೇ ಭಾಗವಾಗಿರುವ ವ್ಯಕ್ತಿಪರ ಮಟ್ಟವಾಗಿ ಪರಿಣಮಿಸಿದೆ. ಈಗ ಅವುಗಳಿಗೆದುರಾಗಿ ಹೋಗುವುದು, ಅವನ ಹೆತ್ತವರು ಕಲಿಸಿದ್ದಕ್ಕೆ ಎದುರಾಗಿಯಲ್ಲ, ಅವನು ತಾನೇ ಏನಾಗಿದ್ದಾನೋ ಅದಕ್ಕೆದುರಾಗಿ ಹೋಗುವಂತಾಗುತ್ತದೆ. ಹಾಗೆ ಹೋಗುವಲ್ಲಿ ಅವನು ತನಗೆ ತಾನೇ ದ್ರೋಹಿಯಾಗುತ್ತಾನೆ. ಅವನು ತನ್ನನ್ನು ತಾನೇ ಅಲ್ಲಗಳೆಯುತ್ತಾನೆ. (2 ತಿಮೊಥೆಯ 2:13) ತನಗೆ ತಾನೇ ಹೀಗೆ ಮಾಡಿಕೊಳ್ಳಲು ಒಬ್ಬನಿಗೆ ಅಂತರಾಳದ ಅನಿಚ್ಫೆ ಇರುತ್ತದೆ. ಆದುದರಿಂದ, ತನ್ನಲ್ಲಿ ತುಂಬಿಸಲ್ಪಟ್ಟಿರುವ ‘ಈ ಮಾರ್ಗದಿಂದ ತಿರುಗುವುದು’ ತೀರಾ ಕಡಮೆ ಸಂಭಾವ್ಯ. ಈ ಕಾರಣದಿಂದ, ನಿಮ್ಮ ಮಕ್ಕಳು ನಿಮ್ಮಿಂದ ಉತ್ತಮ ನಡತೆಯನ್ನು ಹೀರಿಕೊಳ್ಳಲಿ. ದಯೆ ತೋರಿಸಿ ದಯಾಭಾವವನ್ನು, ಸಭ್ಯ ವರ್ತನೆಯನ್ನು ಆಚರಿಸುವ ಮೂಲಕ ಸಭ್ಯತೆಯನ್ನು, ಸೌಮ್ಯರಾಗಿದ್ದು ಸೌಮ್ಯತೆಯನ್ನು, ಮಾದರಿಯ ಮೂಲಕ ಪ್ರಾಮಾಣಿಕತೆ ಮತ್ತು ಸತ್ಯಸಂಧತೆಯನ್ನು ಕಲಿಸಿರಿ.
ಯೆಹೋವನ ಏರ್ಪಾಡು
ಆದಿಯಿಂದಲೂ ಕುಟುಂಬ ಏಕಾಂಶವು ಮಾನವನಿಗಿದ್ದ ಯೆಹೋವನ ಏರ್ಪಾಡಾಗಿತ್ತು. (ಆದಿಕಾಂಡ 1:26-28; 2:18-24) ಮಾನವ ಇತಿಹಾಸದ ಆರು ಸಾವಿರ ವರ್ಷಗಳು ಗತಿಸಿದ ಮೇಲೆಯೂ ಇದು ವಯಸ್ಕರಿಗೂ ಮಕ್ಕಳಿಗೂ ಅತ್ಯುತ್ತಮವೆಂದು ಇನ್ನೂ ಒಪ್ಪಲ್ಪಡುತ್ತದೆ. ಸೀಕ್ರೆಟ್ಸ್ ಆಫ್ ಸ್ಟ್ರಾಂಗ್ ಫ್ಯಾಮಿಲೀಸ್ ಪುಸ್ತಕವು ಈ ಕೆಳಗಿನಂತೆ ತೀರ್ಮಾನಿಸುತ್ತದೆ:
“ಪ್ರಾಯಶಃ ನಮ್ಮ ಅಂತರಾಳದಲ್ಲಿ ಯಾವುದೋ, ಕುಟುಂಬವು ನಾಗರಿಕತೆಯ ಅಸ್ತಿವಾರವೆಂದು ಗ್ರಹಿಸುತ್ತದೆ. ಪ್ರಾಯಶಃ ಹುಟ್ಟರಿವಿನಿಂದಲೇ ನಮಗೆ, ನಾವು ಜೀವನದ ಮುಖ್ಯಾಂಶಕ್ಕೆ ಬರುವಾಗ, ಹಣ, ಜೀವನೋಪಾಯ, ಕೀರ್ತಿ, ಉತ್ತಮ ಮನೆ, ಜಮೀನು, ಯಾ ಪ್ರಾಪಂಚಿಕ ಸೊತ್ತುಗಳು ಪ್ರಾಮುಖ್ಯವಲ್ಲ, ನಮ್ಮನ್ನು ಪ್ರೀತಿಸಿ ಪರಾಮರಿಸುವ ನಮ್ಮ ಜೀವನದಲ್ಲಿರುವ ಜನರೇ ಎಂದು ನಮಗೆ ಗೊತ್ತಾಗುತ್ತದೆ. ನಮಗೆ ಬದ್ಧರಾಗಿರುವ ಮತ್ತು ಬೆಂಬಲ ಮತ್ತು ಸಹಾಯಕ್ಕೆ ನಾವು ಯಾರ ಮೇಲೆ ಆತುಕೊಳ್ಳುತ್ತೇವೊ ಅಂಥ ನಮ್ಮ ಜೀವನದಲ್ಲಿರುವ ಜನರೇ ಪ್ರಾಮುಖ್ಯತೆಯುಳ್ಳವರು. ನಾವೆಲ್ಲರೂ ಹಾತೊರೆಯುತ್ತಿರುವ ಪ್ರೀತಿ, ಬೆಂಬಲ, ಪರಾಮರಿಕೆ ಮತ್ತು ಬದ್ಧತೆಗಳಿಗಿರುವ ಸಾಮರ್ಥ್ಯವು ಕುಟುಂಬದಲ್ಲಿರುವಷ್ಟು ಹೆಚ್ಚಾಗಿ ಇನ್ನೆಲ್ಲೂ ಇಲ್ಲ.”
ಆದುದರಿಂದ, ಈಗ ಶ್ರದ್ಧೆಯಿಂದಿದ್ದು ರೂಪುಗೊಳ್ಳುವ ವರುಷಗಳಲ್ಲಿ ಉತ್ತಮ ತರಬೇತನ್ನು ಬಿತ್ತುವುದು ಪ್ರಾಮುಖ್ಯ. ಆಗ ನೀವು ಭವಿಷ್ಯತ್ತಿನಲ್ಲಿ, ನಿಮಗೂ ನಿಮ್ಮ ಮಕ್ಕಳಿಗೂ ಸಂತೋಷದ ಕುಟುಂಬ ಜೀವನವನ್ನು ಕೊಯ್ಯುವಿರಿ.—ಜ್ಞಾನೋಕ್ತಿ 3:1-7 ಹೋಲಿಸಿರಿ. (g92 9/22)
[ಪುಟ 10 ರಲ್ಲಿರುವ ಚೌಕ]
ನಾನು ಯಾವ ವಿಧದ ತಂದೆ ಯಾ ತಾಯಿಯಾಗುವೆ?
“ನಾ ಪಡೆದೆ ಎರಡು ‘ಎ’ಗಳ” ಎಂದು ಕೂಗಿದ ಪುಟ್ಟ ಹಿಗ್ಗಿದ ಸ್ವರದಿಂದ. “ಅಷೆಯ್ಟೊ, ಹೆಚ್ಚೇಕೆ ಪಡೆಯಲಿಲ್ಲ?” ಎಂದ ಅಪ್ಪ ಒರಟು ಸ್ವರದಿಂದ. “ಅಮ್ಮಾ, ಮುಗಿಸಿದೆ ಬಟ್ಟಲುಗಳ ತೊಳೆದು” ಎಂದಳು ಹುಡುಗಿ ಬಾಗಲಿಂದ. “ಕಚಡವ ಒಯ್ದು ಎಸೆದಾಯಿತೆ?” ಎಂದಳು ಅಮ್ಮ ಶಾಂತಿಯಿಂದ. “ಹುಲ್ಲು ಕತ್ತರಿಸಿ ಮುಗಿಸಿದೆ, ಅಪ್ಪಾ, ಯಂತ್ರವ ಇಟ್ಟಿರುವೆ ಒಳಗೆ,” ಆ ನೀಳ ಹುಡುಗನೆಂದ. “ಬೇಲಿಯನ್ನೂ ನೀಟಾಗಿ ಕತ್ತರಿಸಿದಿಯಾ?” ಭುಜ ಹಾರಿಸುತ್ತಾ ತಂದೆಯೆಂದ.
ಪಕ್ಕದ ಮನೆಯ ಮಕ್ಕಳು ಸಂತುಷ್ಟರೂ ಸಂತೃಪ್ತರೂ ಆಗಿ ತೋರಿಬರುತ್ತಾರೆ. ಇದೇ ಸಂಗತಿ ಅಲಿಯ್ಲೂ ನಡೆಯಿತು, ಮತ್ತು ಮಾತುಕತೆ ಈ ಕೆಳಗಿನಂತಿತ್ತು:
“ನಾ ಪಡೆದೆ ಎರಡು ‘ಎ’ಗಳ” ಎಂದು ಕೂಗಿದ ಪುಟ್ಟ ಹಿಗ್ಗಿದ ಸ್ವರದಿಂದ. “ಶಾಭಾಸ್, ನಿನ್ನ ಸಾಧನೆ ನನಗೆ ಸಂತೋಷ,” ಎಂದ ಅಪ್ಪ ಅಭಿಮಾನದಿಂದ. “ಅಮ್ಮಾ, ಮುಗಿಸಿದೆ ಬಟ್ಟಲುಗಳ ತೊಳೆದು,” ಎಂದಳು ಹುಡುಗಿ ಬಾಗಲಿಂದ. “ನನಗೆ ನಿನ್ನ ಮೇಲಿನ ಪ್ರೇಮ ಬೆಳೆಯುತ್ತೆ ಪ್ರತಿದಿನ” ಎಂದಳಮ್ಮ ಮೃದು ನಸುನಗೆಯಿಂದ. “ಹುಲ್ಲು ಕತ್ತರಿಸಿ ಮುಗಿಸಿದೆ, ಅಪ್ಪಾ, ಯಂತ್ರವನ್ನೂ ಇಟ್ಟಿರುವೆ ಒಳಗೆ” ಆ ನೀಳ ಹುಡುಗನೆಂದ. “ನನ್ನ ಮಾಡಿರುವೆ ಗೌರವಿತನಾಗಿ ನಿನ್ನ ವಿಷಯದಲ್ಲಿ” ಎಂದ ತಂದೆ ಸಂತಸದಿಂದ.
ಮಕ್ಕಳು ಪ್ರತಿದಿನ ಮಾಡುವ ಕೆಲಸಗಳಿಗೆ ತುಸು ಪ್ರಶಂಸಾರ್ಹರು. ಅವರು ಸಂತೋಷದ ಜೀವನ ನಡೆಸಬೇಕಾದರೆ, ಹೆಚ್ಚಿನದ್ದು ನಿಮ್ಮ ಮೇಲೆ ಹೊಂದಿಕೊಂಡಿದೆ.
[ಪುಟ 7 ರಲ್ಲಿರುವ ಚಿತ್ರಗಳು]
ಅಂಟಿಕೆಯ ಕಾರ್ಯಗತಿಯಲ್ಲಿ ತಂದೆಯು ತಾಯಿಯೊಂದಿಗೆ ಭಾಗವಹಿಸುತ್ತಾನೆ
[ಪುಟ 8 ರಲ್ಲಿರುವ ಚಿತ್ರ]
ಭಾವನೆ ಹೇರಳವಾಗುವಾಗ ಕೈಗಳನ್ನು ಚಾಚಿ ಓಡಾಡುತ್ತಿರುವ ಹುಡುಗನು ಏರುತ್ತಿರುವ ವಿಮಾನವಾಗುತ್ತಾನೆ, ಒಂದು ದೊಡ್ಡ ರಟಿನ್ಟ ಪೆಟ್ಟಿಗೆ ಆಟದ ಮನೆಯಾಗುತ್ತದೆ, ಒಂದು ಪೊರಕೆಯ ಹಿಡಿಗೋಲು ಆವೇಶದ ಕುದುರೆಯಾಗುತ್ತದೆ, ಮತ್ತು ಒಂದು ಕುರ್ಚಿ ರೇಸ್ ಕಾರ್ ಡ್ರೈವರನ ಆಸನವಾಗುತ್ತದೆ