ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 8/1 ಪು. 26-29
  • ಆನಂದವನ್ನು ತರುವ ಕುಟುಂಬ ಅಧ್ಯಯನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆನಂದವನ್ನು ತರುವ ಕುಟುಂಬ ಅಧ್ಯಯನ
  • ಕಾವಲಿನಬುರುಜು—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಾವೇನನ್ನು ಅಭ್ಯಸಿಸಬೇಕು?
  • ಪರಿಸರವನ್ನು ಪ್ರಶಾಂತವಾಗಿ ಇಟ್ಟುಕೊಳ್ಳಿರಿ
  • ಬೈಬಲು ಜೀವಂತವಾಗುವಂತೆ ಮಾಡಿರಿ
  • ಭಾಗವಹಿಸುವಂತೆ ಪ್ರತಿಯೊಬ್ಬರಿಗೂ ಸಹಾಯ ಮಾಡಿರಿ
  • ಸಂಪರ್ಕಿಸಿ—ಕೆರಳಿಸಬೇಡಿ!
  • ಪ್ರಯತ್ನ ಸಾರ್ಥಕ
  • ಒಂದು ಕುಟುಂಬದೋಪಾದಿ ದೇವರ ವಾಕ್ಯವನ್ನು ಕ್ರಮವಾಗಿ ಅಭ್ಯಾಸಿಸಿರಿ
    ಕಾವಲಿನಬುರುಜು—1999
  • ಕುಟುಂಬ ಕಾಲತಖ್ತೆ—ಕುಟುಂಬ ಅಧ್ಯಯನ
    2005 ನಮ್ಮ ರಾಜ್ಯದ ಸೇವೆ
  • ನಿಮ್ಮ ಕುಟುಂಬವನ್ನು ದೇವರ ನೂತನ ಲೋಕದೊಳಗೆ ಸಂರಕ್ಷಿಸಲು ಕ್ರಿಯೆಗೈಯಿರಿ
    ಕಾವಲಿನಬುರುಜು—1993
  • ಅರ್ಥಭರಿತ ಕುಟುಂಬ ಬೈಬಲಭ್ಯಾಸಗಳನ್ನು ನಡಿಸುವುದು
    1991 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಕಾವಲಿನಬುರುಜು—1997
w97 8/1 ಪು. 26-29

ಆನಂದವನ್ನು ತರುವ ಕುಟುಂಬ ಅಧ್ಯಯನ

“ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬಿಸುವದಕ್ಕೆ ತಿಳುವಳಿಕೆಯೇ [“ಜ್ಞಾನವೇ,” NW] ಉಪಕರಣ,” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 24:4) ಈ ಬೆಲೆಬಾಳುವ ಅಮೂಲ್ಯ ವಸ್ತುಗಳಲ್ಲಿ ಕೇವಲ ಪ್ರಾಪಂಚಿಕ ನಿಧಿಗಳು ಸೇರಿರದೆ, ನಿಜ ಪ್ರೀತಿ, ದಿವ್ಯ ಭಯ ಮತ್ತು ಬಲವಾದ ನಂಬಿಕೆಯೂ ಸೇರಿವೆ. ಇಂತಹ ಗುಣಗಳು ಸಂಪದ್ಯುಕ್ತ ಕುಟುಂಬ ಜೀವನವನ್ನು ರಚಿಸುತ್ತವೆ ನಿಶ್ಚಯ. (ಜ್ಞಾನೋಕ್ತಿ 15:16, 17; 1 ಪೇತ್ರ 1:7) ಆದರೆ ಅವುಗಳನ್ನು ಸಂಪಾದಿಸುವರೆ, ನಾವು ನಮ್ಮ ಕುಟುಂಬಗಳೊಳಗೆ ದೇವರ ಜ್ಞಾನವನ್ನು ತರುವುದು ಅವಶ್ಯ.

ಈಜ್ಞಾನವನ್ನು ಕುಟುಂಬದ ಸದಸ್ಯರಲ್ಲಿ ಅಚ್ಚೊತ್ತುವ ಜವಾಬ್ದಾರಿ ಕುಟುಂಬದ ತಲೆಯಾಗಿರುವವನಿಗಿದೆ. (ಧರ್ಮೋಪದೇಶಕಾಂಡ 6:6, 7; ಎಫೆಸ 5:25, 26; 6:4) ಇದನ್ನು ಮಾಡುವ ಅತ್ಯುತ್ಕೃಷ್ಟ ವಿಧಗಳಲ್ಲಿ ಒಂದು, ಕ್ರಮದ ಕುಟುಂಬ ಅಧ್ಯಯನದ ಮೂಲಕವೇ. ಅಧ್ಯಯನವು ಬೋಧಪ್ರದವೂ ಆನಂದಪ್ರದವೂ ಆದ ರೀತಿಯಲ್ಲಿ ನಡೆಸಲ್ಪಟ್ಟರೆ, ಭಾಗವಹಿಸುವವರಿಗೆ ಅದೆಷ್ಟು ಸಂತೋಷಪ್ರದ! ಹಾಗಾದರೆ, ಒಂದು ಪರಿಣಾಮಕಾರಿಯಾದ ಕುಟುಂಬ ಅಧ್ಯಯನವನ್ನು ನಿರ್ವಹಿಸುವರೆ ಕೆಲವು ಆವಶ್ಯಕ ವಿಷಯಗಳನ್ನು ನಾವು ಪರಿಗಣಿಸೋಣ.a

ಕುಟುಂಬ ಅಧ್ಯಯನವೊಂದು ಅತಿ ಪರಿಣಾಮಕಾರಿಯಾಗಿರುವುದು ಅದು ನಿಯತಕ್ರಮದಲ್ಲಿ ನಡೆಯುವಾಗಲೇ. ಯಾವುದೋ ಒಂದು ಸಂದರ್ಭದಲ್ಲಿ ಅಥವಾ ಇದ್ದಕ್ಕಿದ್ದ ಹಾಗೆ ನಡೆಯುವಂತೆ ಬಿಡುವಲ್ಲಿ ಹೆಚ್ಚೆಂದರೆ ಅದು ಅಪರೂಪದ್ದಾಗಬಹುದು. ಆದಕಾರಣ, ನೀವು ಅಧ್ಯಯನಕ್ಕಾಗಿ ಸಮಯವನ್ನು ‘ಖರೀದಿಸ’ಬೇಕು. (ಎಫೆಸ 5:15-17) ಎಲ್ಲರಿಗೂ ಅನುಕೂಲವಾಗಿರುವ ಒಂದು ಕ್ರಮದ ಸಮಯವನ್ನು ಏರ್ಪಡಿಸುವುದು ಒಂದು ಪಂಥಾಹ್ವಾನವಾಗಿರಬಲ್ಲದು. ಕುಟುಂಬದ ಯಜಮಾನನೊಬ್ಬನು ಒಪ್ಪಿಕೊಂಡದ್ದು: “ನಮ್ಮ ಕುಟುಂಬ ಅಧ್ಯಯನವನ್ನು ಕ್ರಮವಾಗಿಟ್ಟುಕೊಳ್ಳುವುದು ನಮಗೆ ಕಷ್ಟಕರವಾಗಿತ್ತು. ನಾವು ವಿವಿಧ ಸಮಯಾವಧಿಗಳನ್ನು ಪರೀಕ್ಷಿಸಿ ನೋಡಿ, ಕೊನೆಗೆ ನಮಗೆ ಅನುಕೂಲವಾದ ಒಂದು ಸಮಯವನ್ನು ಸಾಯಂಕಾಲದ ಅಂತ್ಯಭಾಗದಲ್ಲಿ ಕಂಡುಹಿಡಿದೆವು. ಈಗ ನಮ್ಮ ಕುಟುಂಬ ಅಧ್ಯಯನ ಕ್ರಮಬದ್ಧವಾಗಿದೆ.”

ಅನುಕೂಲವಾದ ಸಮಯಾವಧಿ ಒಮ್ಮೆ ದೊರಕಿತೆಂದರೆ, ಅಪಕರ್ಷಣೆಗಳು ಅಧ್ಯಯನವನ್ನು ಹೊರದಬ್ಬುವಂತೆ ಬಿಡದಿರಲು ಜಾಗ್ರತೆ ವಹಿಸಿರಿ. ಈಗ 33 ವಯಸ್ಸಿನ ಮರೀಯb ಜ್ಞಾಪಿಸಿಕೊಳ್ಳುವುದು: “ನಾವು ಅಧ್ಯಯನ ಮಾಡುತ್ತಿರುವಾಗ ಭೇಟಿಕಾರರು ಬಂದರೆ, ಅಧ್ಯಯನ ಮುಗಿಯುವ ವರೆಗೆ ಕಾಯುವಂತೆ ಡ್ಯಾಡಿ ಕೇಳಿಕೊಳ್ಳುತ್ತಿದ್ದರು. ಫೋನ್‌ ಕರೆಗಳು ಬಂದಾಗಲೊ, ನಾನು ಆಮೇಲೆ ಫೋನ್‌ ಮಾಡುವೆನೆಂದು ಡ್ಯಾಡಿ ಆ ವ್ಯಕ್ತಿಗೆ ಹೇಳಿಬಿಡುತ್ತಿದ್ದರು.”

ಆದರೂ, ಇದರ ಅರ್ಥವು ನಮ್ಯತೆಗೆ ಎಡೆಯೇ ಇಲ್ಲ ಎಂದಾಗುವುದಿಲ್ಲ. ತುರ್ತುಗಳು ಅಥವಾ ಅನಿರೀಕ್ಷಿತ ಘಟನೆಗಳು ಒದಗಿಬರಬಹುದು, ಒಮ್ಮೊಮ್ಮೆ ಅಧ್ಯಯನವನ್ನು ರದ್ದುಗೊಳಿಸುವ ಅಥವಾ ಮುಂದೂಡುವ ಆವಶ್ಯಕತೆ ಬರಬಹುದು. (ಪ್ರಸಂಗಿ 9:11) ಆದರೆ ಇವಾವುವೂ ನಿಮ್ಮ ನಿತ್ಯಗಟ್ಟಳೆಯನ್ನು ಕಂಬಿ ತಪ್ಪಿಸದಂತೆ ಜಾಗರೂಕತೆಯಿಂದಿರಿ.—ಫಿಲಿಪ್ಪಿ 3:16.

ಒಂದು ಅಧ್ಯಯನದ ಅವಧಿ ಎಷ್ಟಿರಬೇಕು? ಒಬ್ಬ ಮಗಳನ್ನೂ ಮಗನನ್ನೂ ಯಶಸ್ವಿಯಾಗಿ ಬೆಳೆಸಿರುವ ರಾಬರ್ಟ್‌ ಹೇಳುವುದು: “ನಮ್ಮ ಅಧ್ಯಯನಗಳು ವಾಡಿಕೆಯಾಗಿ ಒಂದು ತಾಸು ದೀರ್ಘವಿದ್ದವು. ಮಕ್ಕಳು ಚಿಕ್ಕವರಾಗಿದ್ದಾಗ, ಆ ತಾಸಿನಲ್ಲಿ ಅನೇಕ ವಿಷಯಗಳನ್ನು ಚರ್ಚಿಸುತ್ತ ನಾವು ಅವರ ಆಸಕ್ತಿಯನ್ನು ಹಿಡಿದಿಡಲು ಪ್ರಯತ್ನಿಸಿದೆವು. ಕಾವಲಿನಬುರುಜು ಅಧ್ಯಯನ ಲೇಖನದ ಕೆಲವು ಪ್ಯಾರಗ್ರಾಫ್‌ಗಳು, ಬೈಬಲಿನ ಆರಿಸಿಕೊಳ್ಳಲ್ಪಟ್ಟ ಕೆಲವು ಭಾಗಗಳು ಮತ್ತು ಇತರ ಸಾಹಿತ್ಯಗಳ ಭಾಗಗಳು—ಇಂತಹ ವಿಷಯಗಳು.” ಮರೀಯ ನೆನಪಿಸಿಕೊಳ್ಳುವುದು: “ನನ್ನ ಇಬ್ಬರು ಅಕ್ಕಂದಿರು ಮತ್ತು ನಾನು ತೀರ ಚಿಕ್ಕವರಾಗಿದ್ದಾಗ, ನಮ್ಮ ಅಧ್ಯಯನಗಳು ಸುಮಾರು 20 ನಿಮಿಷಗಳಷ್ಟು ದೀರ್ಘವಾಗಿದ್ದು, ವಾರಕ್ಕೆ ಎರಡು ಅಥವಾ ಮೂರು ಬಾರಿ ನಡೆಯುತ್ತಿದ್ದವು. ನಾವು ದೊಡ್ಡವರಾದಷ್ಟಕ್ಕೆ, ನಮ್ಮ ಸಾಪ್ತಾಹಿಕ ಕುಟುಂಬ ಅಧ್ಯಯನವು ಸುಮಾರು ಒಂದು ತಾಸಿನಷ್ಟು ದೀರ್ಘವಾಗಿತ್ತು.”

ನಾವೇನನ್ನು ಅಭ್ಯಸಿಸಬೇಕು?

ಅಧ್ಯಯನಕ್ಕಾಗಿ ಎಲ್ಲರೂ ಕೂಡಿಬಂದಿರುವಾಗ ಈ ಪ್ರಶ್ನೆಯ ಚಿಂತನೆಯು ಹತಾಶೆಗೆ ಮತ್ತು ಅಮೂಲ್ಯವಾದ ಅಧ್ಯಯನ ಸಮಯದ ನಷ್ಟಕ್ಕೆ ನಡಿಸುವುದು. ವಿದ್ಯಮಾನವು ಅದಾಗಿದ್ದಲ್ಲಿ, ಮಕ್ಕಳಿಗೆ ಪ್ರತ್ಯೇಕವಾದ ಯಾವುದನ್ನೂ ಎದುರುನೋಡಲಿಕ್ಕೆ ಇಲ್ಲದಿರುವುದರಿಂದ ಅವರು ಬೇಗನೆ ಆಸಕ್ತಿಯನ್ನು ಕಳೆದುಕೊಳ್ಳುವರು. ಆದಕಾರಣ, ಸೊಸೈಟಿಯ ಪ್ರಕಾಶನಗಳಲ್ಲಿ ಒಂದನ್ನು ಪರ್ಯಾಲೋಚಿಸಲು ಮೊದಲಾಗಿಯೇ ಆರಿಸಿಕೊಳ್ಳಿರಿ.

“ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ನಾವು ಆರಿಸಿಕೊಳ್ಳುವಂತೆ ಹೇರಳವಾದ ಪ್ರಕಾಶನಗಳನ್ನು ಒದಗಿಸಿದ್ದಾನೆ. (ಮತ್ತಾಯ 24:45-47) ಕುಟುಂಬವು ಈ ವರೆಗೆ ಅಭ್ಯಸಿಸಿದ್ದಿರದ ಒಂದು ಪುಸ್ತಕವನ್ನು ಪ್ರಾಯಶಃ ನೀವು ಉಪಯೋಗಿಸಬಲ್ಲಿರಿ. ಮತ್ತು ಶಾಸ್ತ್ರಗಳ ಒಳನೋಟ ಎಂಬ ಇಂಗ್ಲಿಷ್‌ ಸಂಪುಟಗಳು ನಿಮ್ಮ ಭಾಷೆಯಲ್ಲಿ ದೊರೆಯುವುದಾದರೆ, ಅದರ ಆಯ್ದ ಭಾಗಗಳನ್ನು ಪರ್ಯಾಲೋಚಿಸುವುದು ಎಷ್ಟೊಂದು ಆನಂದಕಾರಕ! ಉದಾಹರಣೆಗೆ, ಜ್ಞಾಪಕ ದಿನಾಚರಣೆಗೆ ಮೊದಲಿನ ವಾರಗಳಲ್ಲಿ, ಕರ್ತನ ಸಂಧ್ಯಾ ಭೋಜನದ ಕುರಿತ ಲೇಖನವನ್ನು ನೀವು ಪುನರ್ವಿಮರ್ಶಿಸಬಹುದು. ಅನೇಕ ಕುಟುಂಬಗಳು ವಾರದ ಕಾವಲಿನಬುರುಜು ಅಭ್ಯಾಸಕ್ಕೆ ತಯಾರಿಸುವುದರಲ್ಲಿ ಸಂತೋಷಪಡುತ್ತಾರೆ. ಕಾವಲಿನಬುರುಜು ಪತ್ರಿಕೆಯ ದ್ವಿತೀಯ ಲೇಖನಗಳೂ ಅಧ್ಯಯನಕ್ಕೆ ಅತ್ಯುತ್ತಮ ವಿಷಯಗಳನ್ನು ಒದಗಿಸುತ್ತವೆ. ಕುಟುಂಬದ ತಲೆಯು, ಕುಟುಂಬದ ಆತ್ಮಿಕ ಆವಶ್ಯಕತೆಗಳನ್ನು ಬಲ್ಲವನಾಗಿರುವುದರಿಂದ ಯಾವ ಪ್ರಕಾಶನಗಳನ್ನು ಅಭ್ಯಸಿಸಬೇಕೆಂಬುದನ್ನು ನಿರ್ಣಯಿಸಲು ಅತ್ಯುತ್ತಮ ಸ್ಥಾನದಲ್ಲಿದ್ದಾನೆ.

ಮರೀಯ ನೆನಪಿಸಿಕೊಳ್ಳುವುದು: “ಸಮಯಕ್ಕೆ ಮುಂದಾಗಿಯೇ ಆರಿಸಲ್ಪಟ್ಟ ಒಂದು ಪುಸ್ತಕವನ್ನು ನಾವು ಯಾವಾಗಲೂ ಅಧ್ಯಯನಿಸುತ್ತಿದ್ದೆವು. ಆದರೆ ಒಂದು ಪ್ರಶ್ನೆ ಎದ್ದು ಬರುವಲ್ಲಿ ಅಥವಾ ಶಾಲೆಯಲ್ಲಿ ಒಂದು ಪ್ರತ್ಯೇಕ ಪರಿಸ್ಥಿತಿ ಏಳುವಲ್ಲಿ, ನಾವು ಆ ಅನ್ವಯಯೋಗ್ಯ ಮಾಹಿತಿಗೆ ತಿರುಗುತ್ತಿದ್ದೆವು.” ಶಾಲೆಯಲ್ಲಿ ಯುವ ಜನರು ಎದುರಿಸುವಂತಹ ಸಮಸ್ಯೆಗಳು, ಡೇಟಿಂಗ್‌, ಪಠ್ಯೇತರ ಚಟುವಟಿಕೆಗಳಂತಹ ವಿಶೇಷ ಚಿಂತೆಗಳು ಬರುತ್ತವೆ ನಿಶ್ಚಯ. ಇದು ಸಂಭವಿಸುವಾಗ, ಸನ್ನಿಹಿತವಾಗಿರುವ ಸಮಸ್ಯೆಗಳನ್ನು ನಿಭಾಯಿಸುವ ಲೇಖನಗಳನ್ನು ಇಲ್ಲವೆ ಪುಸ್ತಕಗಳನ್ನು ಆರಿಸಿಕೊಳ್ಳಿರಿ. ಹೊಸದಾಗಿ ಬಂದ ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯಲ್ಲಿ, ಆ ಕೂಡಲೆ ಕುಟುಂಬದೊಂದಿಗೆ ಚರ್ಚಿಸಬೇಕೆಂದು ನೀವು ಬಯಸುವ ವಿಷಯವನ್ನು ನೀವು ನೋಡುವುದಾದರೆ, ಅದಕ್ಕಾಗಿ ಏರ್ಪಡಿಸಲು ಹಿಂಜರಿಯಬೇಡಿರಿ. ಈ ಬದಲಾವಣೆಯನ್ನು ನೀವು ಮುಂದಾಗಿಯೇ ಕುಟುಂಬದ ಸದಸ್ಯರಿಗೆ ತಿಳಿಸಲು ಬಯಸುವಿರೆಂಬುದು ನಿಶ್ಚಯ. ಆದರೆ ಆ ಆವಶ್ಯಕತೆಯ ಜಾಗ್ರತೆಯನ್ನು ವಹಿಸಿದ ಬಳಿಕ ತಖ್ತೆಯ ವಿಷಯಗಳಿಗೆ ಹಿಂದಿರುಗಿ ಹೋಗಲು ಖಾತರಿಮಾಡಿಕೊಳ್ಳಿರಿ.

ಪರಿಸರವನ್ನು ಪ್ರಶಾಂತವಾಗಿ ಇಟ್ಟುಕೊಳ್ಳಿರಿ

ಕಲಿಕೆ ಅತ್ಯುತ್ತಮವಾಗಿ ನಡೆಯುವುದು ಶಾಂತ ಪರಿಸ್ಥಿತಿಗಳಲ್ಲಿ. (ಯಾಕೋಬ 3:18) ಆದಕಾರಣ ಆರಾಮವಾದ, ಆದರೂ ಗೌರವಾನಿತ್ವ ವಾತಾವರಣವನ್ನು ಬೆಳೆಸಿರಿ. ಅಮೆರಿಕದ ಒಂದು ಕುಟುಂಬದ ತಲೆ ಹೇಳುವುದು: “ನಾವು ವಾಸದ ಕೊಠಡಿಯಲ್ಲಿ ಅಭ್ಯಾಸ ಮಾಡಲಿ, ಬಿಸಿಲು ಮಂಟಪದಲ್ಲಿ ಮಾಡಲಿ, ಒಂದು ವಿಶಾಲವಾದ ಕೋಣೆಯಲ್ಲಿ ಹರಡಿ ಕುಳಿತುಕೊಳ್ಳುವ ಬದಲು, ನಾವು ಪರಸ್ಪರ ಹತ್ತಿರದಲ್ಲಿ ಕುಳಿತುಕೊಳ್ಳುವಂತೆ ಪ್ರಯತ್ನಿಸುತ್ತೇವೆ. ನಮಗಾದರೊ, ಇದು ಪ್ರೀತಿಪರ ಅನಿಸಿಕೆಯನ್ನು ಕೊಡುತ್ತದೆ.” ಮತ್ತು ಮರೀಯ ಮಹಾ ಒಲುಮೆಯಿಂದ ಜ್ಞಾಪಿಸಿಕೊಳ್ಳುವುದು: “ಆ ವಾರ ಮನೆಯಲ್ಲಿ ಎಲ್ಲಿ ಅಧ್ಯಯನ ನಡೆಯುತ್ತದೆಂಬುದನ್ನು ಆರಿಸಿಕೊಳ್ಳುವ ವಿಷಯವು ನನ್ನ ಅಕ್ಕಂದಿರಿಗೂ ನನಗೂ ಬಿಡಲ್ಪಟ್ಟಿತ್ತು. ಇದು ನಮ್ಮನ್ನು ಹಾಯಾಗಿರಿಸಿತು.” ಯೋಗ್ಯ ರೀತಿಯ ಬೆಳಕಿನ ವ್ಯವಸ್ಥೆ, ಸಮಂಜಸವಾದ ಆಸನ ವ್ಯವಸ್ಥೆ ಮತ್ತು ಗೆಲವಿನ, ಅಸ್ತವ್ಯಸ್ತತೆಯಿಲ್ಲದ ಪರಿಸರವು ಪ್ರಶಾಂತತೆಗೆ ಸಹಾಯಮಾಡುತ್ತದೆಂಬುದನ್ನು ಮನಸ್ಸಿನಲ್ಲಿರಿಸಿರಿ. ಅಧ್ಯಯನದ ಅನಂತರ ಆಹಾರ, ಪಾನೀಯ ಸೇವನೆಯು ಆ ಸಾಯಂಕಾಲವನ್ನು ಹರ್ಷಕರವನ್ನಾಗಿ ಮಾಡಲು ಸಹಾಯಮಾಡುತ್ತದೆ.

ಕೆಲವು ಕುಟುಂಬಗಳು ಒಮ್ಮೊಮ್ಮೆ ಬೇರೆ ಕುಟುಂಬಗಳನ್ನೂ ತಮ್ಮ ಅಧ್ಯಯನದಲ್ಲಿ ಸೇರಿಸಿಕೊಳ್ಳುತ್ತವೆ. ಇದು ಆಸಕ್ತಿಗೂ ಉತ್ತರಗಳಲ್ಲಿ ವೈವಿಧ್ಯಕ್ಕೂ ಕೂಡಿಸುತ್ತದೆ. ಈ ಏರ್ಪಾಡಿನಲ್ಲಿ ಸತ್ಯದಲ್ಲಿ ಹೊಸಬರನ್ನು ಆಮಂತ್ರಿಸುವಾಗ, ಒಬ್ಬ ಅನುಭವಿಯಾದ ಕುಟುಂಬದ ತಲೆಯು ಕುಟುಂಬ ಅಧ್ಯಯನವನ್ನು ನಡೆಸುವುದನ್ನು ಅವಲೋಕಿಸುವುದರಿಂದ ಅವರು ಪ್ರಯೋಜನಪಡೆಯಬಲ್ಲರು.

ಬೈಬಲು ಜೀವಂತವಾಗುವಂತೆ ಮಾಡಿರಿ

ಅಧ್ಯಯನ ಅವಧಿಗಳನ್ನು ಮಕ್ಕಳಿಗೆ ಸಜೀವವಾಗಿರುವಂತೆ ಮಾಡುವಲ್ಲಿ, ಅವರು ಅದನ್ನು ಆತುರದಿಂದ ಎದುರುನೋಡುವರು. ಬೈಬಲ್‌ ದೃಶ್ಯಗಳ ಚಿತ್ರಗಳನ್ನು ಬರೆಯುವಂತೆ ಚಿಕ್ಕ ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ನೀವು ಇದನ್ನು ಮಾಡಬಲ್ಲಿರಿ. ಸಮಂಜಸವಾಗಿರುವಾಗ, ಬೈಬಲ್‌ ಘಟನೆಗಳು ಮತ್ತು ನಾಟಕಗಳನ್ನು ಮಕ್ಕಳು ಅಭಿನಯಿಸಿ ತೋರಿಸಲಿ. ಚಿಕ್ಕ ಮಕ್ಕಳೊಂದಿಗೆ ಅಧ್ಯಯನ ಮಾಡುವಾಗ, ಔಪಚಾರಿಕವಾದ ಪ್ರಶ್ನೆ ಮತ್ತು ಉತ್ತರಗಳ ವಿಧಾನಕ್ಕೆ ಅಂಟಿಕೊಂಡಿರುವ ಅಗತ್ಯವಿಲ್ಲ. ಬೈಬಲ್‌ ವ್ಯಕ್ತಿಗಳ ಕುರಿತು ಓದುವುದು ಅಥವಾ ಅವರ ಕಥೆಗಳನ್ನು ಹೇಳುವುದು, ದೈವಿಕ ಮೂಲತತ್ತ್ವಗಳನ್ನು ಅಚ್ಚೊತ್ತುವ ಆನಂದಕಾರಕ ವಿಧವಾಗಿದೆ. ಈ ಮೊದಲು ಹೇಳಲಾಗಿರುವ ರಾಬರ್ಟ್‌ ಜ್ಞಾಪಿಸಿಕೊಳ್ಳುವುದು: “ಕೆಲವು ಬಾರಿ ನಾವು ಬೈಬಲ್‌ ಭಾಗಗಳನ್ನು ಓದುತ್ತಿದ್ದೆವು. ವಿವಿಧ ‘ಸ್ವರ’ ಭಾಗಗಳನ್ನು ಸರದಿಯಾಗಿ ಓದುವ ನೇಮಕವನ್ನು ಪಡೆಯುತ್ತಿದ್ದೆವು.” ವಾಚನದಲ್ಲಿ ಯಾರ ಪಾತ್ರವನ್ನು ವಹಿಸಲು ಮನಸ್ಸಿದೆಯೊ ಅವರನ್ನು ಆರಿಸಿಕೊಳ್ಳುವಂತೆ ಮಕ್ಕಳನ್ನು ಕೇಳಿಕೊಳ್ಳಸಾಧ್ಯವಿದೆ.

ನಕ್ಷೆಗಳು ಮತ್ತು ತಃಖ್ತೆಗಳನ್ನು ಉಪಯೋಗಿಸುವುದರಿಂದ, ತುಸು ಹೆಚ್ಚು ವಯಸ್ಸಾಗಿರುವ ಮಕ್ಕಳು, ಚರ್ಚಿಸಲ್ಪಡುತ್ತಿರುವ ಘಟನೆಗಳು ನಡೆದ ಸ್ಥಳಗಳ ಪ್ರದೇಶಗಳ ಮತ್ತು ವೈಶಿಷ್ಟ್ಯಗಳ ಮನಶ್ಚಿತ್ರ ಮಾಡಿಕೊಳ್ಳುವಂತೆ ಸಹಾಯವಾಗುವುದು. ತುಸು ಕಲ್ಪನಾ ಶಕ್ತಿಯಿಂದ, ಒಂದು ಕುಟುಂಬ ಅಧ್ಯಯನವನ್ನು ಸಜೀವವಾಗಿಯೂ ವೈವಿಧ್ಯವುಳ್ಳದ್ದಾಗಿಯೂ ಮಾಡಸಾಧ್ಯವಿದೆ. ಮತ್ತು ಮಕ್ಕಳು ದೇವರ ವಾಕ್ಯಕ್ಕಾಗಿ ಹಂಬಲಿಕೆಯನ್ನು ರೂಪಿಸಿಕೊಳ್ಳುವರು.—1 ಪೇತ್ರ 2:2, 3.

ಭಾಗವಹಿಸುವಂತೆ ಪ್ರತಿಯೊಬ್ಬರಿಗೂ ಸಹಾಯ ಮಾಡಿರಿ

ಮಕ್ಕಳು ಅಧ್ಯಯನದಲ್ಲಿ ಆನಂದಿಸಬೇಕಾದರೆ, ತಾವು ಅದರಲ್ಲಿ ಸೇರಿಕೊಂಡಿದ್ದೇವೆಂಬ ಅನಿಸಿಕೆ ಅವರಿಗಾಗಬೇಕು. ಆದರೂ, ವಿವಿಧ ವಯಸ್ಸಿನ ಮಕ್ಕಳು ಭಾಗವಹಿಸುವಂತೆ ಮಾಡುವುದು ಒಂದು ಪಂಥಾಹ್ವಾನವಾಗಿರಬಲ್ಲದು. ಆದರೆ ಒಂದು ಬೈಬಲ್‌ ಮೂಲತತ್ತ್ವವು ಹೇಳುವುದು: “ಹಿರೀತನ ನಡಿಸುವವನು ಆಸಕ್ತಿಯಿಂದ ನಡಿಸಲಿ.” (ರೋಮಾಪುರ 12:8) ಉತ್ಸುಕತೆ ಸಹಾಯಕರ, ಏಕೆಂದರೆ ಉತ್ಸುಕತೆ ಹರಡುತ್ತದೆ.

ಅಧ್ಯಯನ ಭಾಗದಲ್ಲಿ ಉಪಶಿರೋನಾಮಗಳನ್ನು ಓದಿಸಿ ಮತ್ತು ಚಿತ್ರಗಳ ವಿಷಯ ಮಾತಾಡುವಂತೆ ಹೇಳಿ, ತನ್ನ ಐದು ವರ್ಷ ವಯಸ್ಸಿನ ಮಗಳಾದ ಡೈನಳನ್ನು ರಾನಲ್ಡ್‌ ಒಳಗೂಡಿಸುತ್ತಾನೆ. ಕಳೆದ ವರ್ಷ, ಕ್ರಿಸ್ತನ ಮರಣದ ಜ್ಞಾಪಕಾಚರಣೆ ಹತ್ತಿರವಾದಾಗ ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕದಲ್ಲಿ ಸಂಬಂಧಪಟ್ಟ ಚಿತ್ರಗಳ ಮೇಲೆ ಅವನು ಕೇಂದ್ರೀಕರಿಸಿದನು.c ಅವನು ಗಮನಿಸಿದ್ದು: “ಆ ಸಂಭವದ ವೈಶಿಷ್ಟ್ಯವನ್ನು ಅವಳು ಅರ್ಥಮಾಡಿಕೊಳ್ಳುವರೆ ಇದು ಸಹಾಯಮಾಡಿದೆ.”

ತನ್ನ ಹತ್ತು ವರ್ಷ ವಯಸ್ಸಿನ ಮಗಳಾದ ಮೀಷಳೊಂದಿಗೆ ರಾನಲ್ಡ್‌ ಇನ್ನೊಂದು ಹೆಜ್ಜೆ ಮುಂದುವರಿಯುತ್ತಾನೆ. ರಾನಲ್ಡ್‌ ಹೇಳುವುದು: “ಮೀಷ ಚಿತ್ರಗಳನ್ನು ಅರ್ಥಮಾಡಿಕೊಳ್ಳುವುದಷ್ಟೇಯಲ್ಲ, ಅವು ಚಿತ್ರಿಸುವುದರ ಅರ್ಥವನ್ನೂ ಅರಿತುಕೊಳ್ಳುವಷ್ಟು ಪ್ರಗತಿಹೊಂದಿದ್ದಾಳೆ. ಆದಕಾರಣ ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ!* ಎಂಬ ಪುಸ್ತಕವನ್ನು ಪರ್ಯಾಲೋಚಿಸಿದಾಗ ನಾವು ಆ ಚಿತ್ರಗಳ ಅರ್ಥದ ಮೇಲೆ ಕೇಂದ್ರೀಕರಿಸಿದೆವು, ಮತ್ತು ಇದು ಅವಳಿಗೆ ಸಹಾಯಮಾಡಿದೆ.”

ಮಕ್ಕಳು ಹದಿವಯಸ್ಕರಾಗಿ ಬೆಳೆಯುವಾಗ, ಪರ್ಯಾಲೋಚಿಸುವ ವಿಷಯದ ಪ್ರಾಯೋಗಿಕ ಅನ್ವಯವನ್ನು ಮಾಡುವರೆ ಅವರನ್ನು ಕೇಳಿಕೊಳ್ಳಿರಿ. ಅಧ್ಯಯನದ ಸಮಯದಲ್ಲಿ ಪ್ರಶ್ನೆಗಳು ಏಳುವಾಗ, ಸಂಶೋಧನೆ ನಡೆಸುವರೆ ಭಾಗಗಳನ್ನು ನೇಮಿಸಿರಿ. ರಾಬರ್ಟ್‌ನ 12 ವಯಸ್ಸಿನ ಮಗ ಪಾಲ್‌, ಡಂಜನ್ಸ್‌ ಆ್ಯಂಡ್‌ ಡ್ರ್ಯಾಗನ್ಸ್‌ ಆಟದಲ್ಲಿ ಒಳಗೊಂಡಿದ್ದ ಹೊಸದಾಗಿ ರಚಿಸಲ್ಪಟ್ಟ ಶಾಲಾ ಕ್ಲಬ್‌ನ ವಿಷಯ ಪ್ರಶ್ನಿಸಿದಾಗ, ರಾಬರ್ಟ್‌ ಹಾಗೆ ಮಾಡಿದನು. ಪಾಲ್‌ ಮತ್ತು ಕುಟುಂಬದ ಇತರರು ವಾಚ್‌ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ ಅನ್ನು ಉಪಯೋಗಿಸಿ ಮಾಹಿತಿಯನ್ನು ಓದಿನೋಡಿ, ತಮ್ಮ ಕುಟುಂಬ ಅಧ್ಯಯನದಲ್ಲಿ ಅದನ್ನು ಪುನರ್ವಿಮರ್ಶಿಸಿದರು. ರಾಬರ್ಟ್‌ ಹೇಳುವುದು: “ಇದರ ಪರಿಣಾಮವಾಗಿ, ಆ ಆಟ ಕ್ರೈಸ್ತರಿಗೆ ಸರಿಯಲ್ಲವೆಂದು ಪಾಲ್‌ ಕೂಡಲೇ ಅರ್ಥಮಾಡಿಕೊಂಡನು.”

ರಾಬರ್ಟ್‌ ಸಂಶೋಧನೆಯನ್ನು ಬೇರೆ ಸಮಯಗಳಲ್ಲಿಯೂ ನೇಮಿಸಿದನು. ಅವನ ಪತ್ನಿ ನ್ಯಾನ್ಸಿ ಜ್ಞಾಪಿಸಿಕೊಳ್ಳುವುದು: “ಯೇಸುವಿನ ಅಪೊಸ್ತಲರ ಬಗೆಗೆ ನಾವು ಸಂಶೋಧನೆ ಮಾಡಿದಾಗ, ನಮ್ಮಲ್ಲಿ ಒಬ್ಬೊಬ್ಬನಿಗೆ ಪ್ರತಿ ವಾರ ಒಬ್ಬ ಅಪೊಸ್ತಲನು ನೇಮಿಸಲ್ಪಟ್ಟನು. ಮಕ್ಕಳು ಕುಟುಂಬ ಅಧ್ಯಯನದಲ್ಲಿ ತಮ್ಮ ವರದಿಯನ್ನು ಕೊಡುವುದನ್ನು ನೋಡುವುದು ಎಷ್ಟು ರೋಮಾಂಚಕವಾಗಿತ್ತು!” ತಮ್ಮ ಸ್ವಂತ ಸಂಶೋಧನೆಯನ್ನು ಮಾಡುವುದು ಮತ್ತು ಆ ಮಾಹಿತಿಯನ್ನು ಕುಟುಂಬದೊಂದಿಗೆ ಹಂಚಿಕೊಳ್ಳುವುದು, ಮಕ್ಕಳು ‘ಯೆಹೋವನೊಂದಿಗೆ ಬೆಳೆಯುವಂತೆ’ ಸಹಾಯಮಾಡುತ್ತದೆ.—1 ಸಮುವೇಲ 2:20, 21.

ಪ್ರಶ್ನೆಗಳನ್ನು ಕೇಳುವುದು—ವಿಚಾರಣೀಯ ಹಾಗೂ ಉತ್ತರಸೂಚಕ ಪ್ರಶ್ನೆಗಳು—ಸಹ ಮಕ್ಕಳನ್ನು ಒಳಗೂಡಿಸುವ ಉತ್ತಮ ವಿಧವಾಗಿದೆ. ಪರಿಣತ ಬೋಧಕನಾದ ಯೇಸು, “ನಿನಗೆ ಹೇಗೆ ತೋರುತ್ತದೆ?” ಎಂಬಂತಹ ವಿಚಾರಣೀಯ ಪ್ರಶ್ನೆಗಳನ್ನು ಕೇಳಿದನು. (ಮತ್ತಾಯ 17:25) ಮರೀಯ ನೆನಪಿಸಿಕೊಳ್ಳುವುದು: “ನಮ್ಮಲ್ಲಿ ಯಾವನಿಗಾದರೂ ಪ್ರಶ್ನೆ ಇದ್ದಾಗ, ನಮ್ಮ ಹೆತ್ತವರು ಅದನ್ನು ನೇರವಾಗಿ ಉತ್ತರಿಸಲಿಲ್ಲ. ವಿಷಯವನ್ನು ತರ್ಕಿಸಲು ಸಹಾಯಮಾಡುವಂತೆ ಅವರು ಯಾವಾಗಲೂ ಉತ್ತರಸೂಚಕ ಪ್ರಶ್ನೆಗಳನ್ನು ಕೇಳಿದರು.”

ಸಂಪರ್ಕಿಸಿ—ಕೆರಳಿಸಬೇಡಿ!

ಉಪಸ್ಥಿತರೆಲ್ಲರೂ ತಮ್ಮ ದೃಷ್ಟಿಕೋನಗಳನ್ನು ಮತ್ತು ಅನಿಸಿಕೆಗಳನ್ನು ಪರಿಹಾಸ್ಯಮಾಡಲ್ಪಡುವ ಭಯವಿಲ್ಲದೆ ಹೇಳುವಲ್ಲಿ, ಕುಟುಂಬ ಅಧ್ಯಯನದ ಆನಂದವು ವೃದ್ಧಿಯಾಗುತ್ತದೆ. ಆದರೆ ಒಬ್ಬ ತಂದೆ ಹೇಳುವುದು: “ಒಂದು ಕುಟುಂಬ ಅಧ್ಯಯನದಲ್ಲಿ ಸುಸಂಪರ್ಕವು, ಇತರ ಸಂದರ್ಭಗಳಲ್ಲಿ ಸಂಪರ್ಕ ಹಾದಿಗಳು ತೆರೆದಿರುವಲ್ಲಿ ಮಾತ್ರ ಸಾಧ್ಯವಿರುತ್ತದೆ. ಅಧ್ಯಯನದ ಅವಧಿಯಲ್ಲಿ ಮಾತ್ರ ಹಾಗೆ ನಟಿಸಲು ಸಾಧ್ಯವಿಲ್ಲ.” ಅವಶ್ಯವಾಗಿ, ‘ಅಷ್ಟೆಯಾ? ನಾನು ಅದೇನೊ ಪ್ರಾಮುಖ್ಯವಾದುದೆಂದೆಣಿಸಿದೆ’; ‘ಅದು ತಿಳಿಗೇಡಿ ಉತ್ತರ’; ‘ನಿನ್ನಿಂದ ಇನ್ನೇನು ಅಪೇಕ್ಷಿಸಲಿ? ನೀನು ಹೇಗೂ ಮಗು ತಾನೆ,’ ಎಂಬಂತಹ ಚುಚ್ಚುವ, ಅವಿಚಾರದ ಹೇಳಿಕೆಗಳಿಂದ ದೂರವಿರಿ. (ಜ್ಞಾನೋಕ್ತಿ 12:18) ನಿಮ್ಮ ಮಕ್ಕಳ ಕಡೆಗೆ ಕನಿಕರ ಮತ್ತು ಕರುಣೆಯನ್ನು ತೋರಿಸಿರಿ. (ಕೀರ್ತನೆ 103:13; ಮಲಾಕಿಯ 3:17) ಅವರಲ್ಲಿ ಸಂತೋಷವನ್ನು ಕಂಡುಕೊಳ್ಳಿರಿ ಮತ್ತು ಅವರು ಕಲಿಯುತ್ತಿರುವುದನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸುವಾಗ ಅವರನ್ನು ಬೆಂಬಲಿಸಿರಿ.

ಕುಟುಂಬ ಅಧ್ಯಯನದ ವಾತಾವರಣವು, ಮಗುವಿನ ಮನಸ್ಸು ಶಿಕ್ಷಣವನ್ನು ಅಂಗೀಕರಿಸುವಂತೆ ಮಾಡುವಂತಹದ್ದಾಗಿರಬೇಕು. ನಾಲ್ವರು ಮಕ್ಕಳ ಒಬ್ಬ ಯಶಸ್ವಿ ಹೆತ್ತವರು ಹೇಳುವುದು: “ನೀವು ಮಕ್ಕಳನ್ನು ತಿದ್ದತೊಡಗುವಾಗ, ನಿಮ್ಮ ಕೇಳುಗ ವರ್ಗವು ತುಸು ಪ್ರತಿಕೂಲ ಮನಸ್ಸಿನದ್ದಾಗಿರುತ್ತದೆ.” ಇಂತಹ ವಾತಾವರಣದಲ್ಲಿ, ಪ್ರಾಯಶಃ ಮಾಹಿತಿಯು ಒಳಗೆ ನುಗ್ಗಿ ಹೋಗಲಿಕ್ಕಿಲ್ಲ. ಆದಕಾರಣ ಅಧ್ಯಯನ ಅವಧಿಗಳನ್ನು ಶಿಸ್ತು ಮತ್ತು ಶಿಕ್ಷೆಯ ಅವಧಿಗಳನ್ನಾಗಿ ಮಾಡುವುದನ್ನು ತಪ್ಪಿಸಿರಿ. ಅಗತ್ಯವಿರುವಲ್ಲಿ, ಅವುಗಳನ್ನು ಆ ಬಳಿಕ ಮತ್ತು ಒಬ್ಬೊಬ್ಬರಿಗೆ ಕೊಡಿರಿ.

ಪ್ರಯತ್ನ ಸಾರ್ಥಕ

ಆತ್ಮಿಕವಾಗಿ ಸಂಪದ್ಯುಕ್ತವಾದ ಕುಟುಂಬವೊಂದನ್ನು ರಚಿಸಲು ಸಮಯ ಮತ್ತು ಪ್ರಯತ್ನ ಹಿಡಿಯುತ್ತದೆ. ಆದರೆ ಕೀರ್ತನೆಗಾರನು ಪ್ರಕಟಿಸುವುದು: “ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು; ಗರ್ಭಫಲವು ಆತನ ಬಹುಮಾನವೇ.” (ಕೀರ್ತನೆ 127:3) ಮತ್ತು ಹೆತ್ತವರಿಗೆ ಮಕ್ಕಳನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳೆಸುತ್ತ ಹೋಗುವ” ಜವಾಬ್ದಾರಿಯು ಕೊಡಲ್ಪಟ್ಟಿದೆ. (ಎಫೆಸ 6:4, NW) ಆದಕಾರಣ, ಒಂದು ಫಲಕಾರಿಯಾದ ಹಾಗೂ ಆನಂದಕಾರಕವಾದ ಕುಟುಂಬ ಅಧ್ಯಯನವನ್ನು ನಡೆಸುವ ಕೌಶಲಗಳನ್ನು ಬೆಳೆಸಿರಿ. ನಿಮ್ಮ ಮಕ್ಕಳು “ಬೆಳೆಯುತ್ತಾ ರಕ್ಷಣೆಯನ್ನು” ಹೊಂದುವಂತೆ ಅವರಿಗೆ “ಪಾರಮಾರ್ಥಿಕವಾದ ಶುದ್ಧ ಹಾಲನ್ನು” ಒದಗಿಸಿರಿ.—1 ಪೇತ್ರ 2:2; ಯೋಹಾನ 17:3.

[ಅಧ್ಯಯನ ಪ್ರಶ್ನೆಗಳು]

a ಈ ಲೇಖನದಲ್ಲಿ ಕೊಡಲಾಗಿರುವ ಅನೇಕ ಸೂಚನೆಗಳು ಕುಟುಂಬ ಅಧ್ಯಯನದಲ್ಲಿ ಮಕ್ಕಳಿಗೆ ಸಹಾಯಮಾಡುವ ಸಂಬಂಧದಲ್ಲಿರುವುದಾದರೂ, ಅದರಲ್ಲಿರುವ ಭಾವನೆಗಳು ಮಕ್ಕಳಿಲ್ಲದ ಕುಟುಂಬಗಳಿಗೂ ಅನ್ವಯಿಸುತ್ತವೆ.

b ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

c ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಪ್ರಕಾಶಿತ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ