ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w05 6/15 ಪು. 23-28
  • ಎಳೆಯರೇ, ಯೆಹೋವನನ್ನು ಸ್ತುತಿಸಿರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಳೆಯರೇ, ಯೆಹೋವನನ್ನು ಸ್ತುತಿಸಿರಿ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೆಹೋವನನ್ನು ಏಕೆ ಸ್ತುತಿಸಬೇಕು?
  • ಕೆಲವು ಎಳೆಯರು ಯೆಹೋವನನ್ನು ಸ್ತುತಿಸಿದ ವಿಧ
  • ನೀವು ಯೆಹೋವನನ್ನು ಹೇಗೆ ಸ್ತುತಿಸಬಲ್ಲಿರಿ?
  • ನೀವು ಯೆಹೋವನನ್ನು ಸ್ತುತಿಸಲು ಯಾವಾಗ ಆರಂಭಿಸಬೇಕು?
  • ನೀವು ಯೆಹೋವನನ್ನು ಸ್ತುತಿಸುವಿರೋ?
    ಕಾವಲಿನಬುರುಜು—1995
  • ಲೋಕವ್ಯಾಪಕವಾಗಿ ಹರ್ಷಭರಿತ ಸ್ತುತಿಗಾರರಾಗಿರಲು ಪ್ರತ್ಯೇಕಿಸಲ್ಪಟ್ಟದ್ದು
    ಕಾವಲಿನಬುರುಜು—1997
  • “ಯೆಹೋವನ ಹೆಸ್ರನ್ನ ಕೊಂಡಾಡಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಯೆಹೋವನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
w05 6/15 ಪು. 23-28

ಎಳೆಯರೇ, ಯೆಹೋವನನ್ನು ಸ್ತುತಿಸಿರಿ!

“ಭೂಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ. . . . ಪ್ರಾಯಸ್ಥರಾದ ಸ್ತ್ರೀಪುರುಷರೂ . . . ಹುಡುಗರೂ ಯೆಹೋವನನ್ನು ಕೊಂಡಾಡಲಿ.”​—⁠ಕೀರ್ತನೆ 148:​7, 12, 13.

1, 2. (ಎ) ಅನೇಕ ಮಂದಿ ಎಳೆಯರಿಗೆ ಯಾವ ನಿರ್ಬಂಧಗಳ ಬಗ್ಗೆ ಚೆನ್ನಾಗಿ ತಿಳಿದಿದೆ? (ಬಿ) ಹೆತ್ತವರು ಎಳೆಯರ ಮೇಲೆ ಹಾಕುವ ನಿರ್ಬಂಧಗಳ ಬಗ್ಗೆ ಅವರು ಮುನಿಸಿಕೊಳ್ಳಬೇಕಾಗಿಲ್ಲವೇಕೆ?

ಎಳೆಯರಿಗೆ ಅನೇಕವೇಳೆ, ತಮಗೆ ಏನೇನು ಮಾಡಲು ಇನ್ನೂ ಅನುಮತಿ ಇಲ್ಲವೊ ಅದರ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಉದಾಹರಣೆಗೆ, ತಾವು ಒಬ್ಬರಾಗಿಯೇ ರಸ್ತೆಯನ್ನು ದಾಟಲು ಇಲ್ಲವೆ ರಾತ್ರಿ ಇಷ್ಟೇ ಗಂಟೆಗೆ ಮಲಗದಿರಲು ಅಥವಾ ಕಾರನ್ನು ಚಲಾಯಿಸಲಿಕ್ಕೆ ಅನುಮತಿ ದೊರೆಯಲು ತಮಗೆ ಎಷ್ಟು ವಯಸ್ಸಾಗಬೇಕು ಎಂಬುದನ್ನು ಅವರು ಕೂಡಲೇ ಹೇಳಬಲ್ಲರು. ಕೆಲವು ಬಾರಿ, ತಾವು ತುಂಬ ಆಸೆಯಿಂದ ಮಾಡುವ ಹೆಚ್ಚಿನ ಕೋರಿಕೆಗಳಿಗೆ, “ನೀನಿನ್ನೂ ಸ್ವಲ್ಪ ದೊಡ್ಡವನಾಗಬೇಕು, ತಾಳು” ಎಂಬ ಒಂದೇ ಉತ್ತರವು ಸಿಗುತ್ತದೆ ಎಂದು ಎಳೆಯರಿಗೆ ಅನಿಸುತ್ತದೆ.

2 ಇಂತಹ ನಿರ್ಬಂಧಗಳನ್ನು ಇಡುವುದು ವಿವೇಕಪ್ರದವಾಗಿದೆ, ಪ್ರಾಯಶಃ ನಿಮ್ಮ ಸ್ವಂತ ಸಂರಕ್ಷಣೆಗಾಗಿಯೂ ಇದೆಯೆಂದು ನಿಮ್ಮ ಹೆತ್ತವರಿಗನಿಸುತ್ತದೆ ಎಂದು ಎಳೆಯರಾದ ನಿಮಗೆ ತಿಳಿದಿದೆ. ಮತ್ತು ನಿಮ್ಮ ಹೆತ್ತವರಿಗೆ ನೀವು ವಿಧೇಯರಾಗುವುದು ಯೆಹೋವನನ್ನು ಮೆಚ್ಚಿಸುತ್ತದೆಂಬುದೂ ನಿಮಗೆ ನಿಶ್ಚಯವಾಗಿ ತಿಳಿದದೆ. (ಕೊಲೊಸ್ಸೆ 3:20) ಆದರೆ ಈ ಎಲ್ಲ ನಿರ್ಬಂಧಗಳ ಕಾರಣ ನಿಮ್ಮ “ನಿಜ” ಜೀವನ ಇನ್ನೂ ಪ್ರಾರಂಭವಾಗಿಲ್ಲ ಎಂದು ನಿಮಗೆ ಎಂದಾದರೂ ಅನಿಸಿದ್ದುಂಟೊ? ನೀವು ಇನ್ನೂ ಹೆಚ್ಚು ದೊಡ್ಡವರಾಗುವ ತನಕ ಪ್ರಾಮುಖ್ಯವಾಗಿರುವ ವಿಷಯಗಳೆಲ್ಲವೂ ನಿಮಗೆ ನಿಷೇಧಿತವಾಗಿವೆಯೊ? ಖಂಡಿತವಾಗಿಯೂ ಇಲ್ಲ! ಏಕೆಂದರೆ ನೀವು ಕಾದುಕೊಂಡಿರಬಹುದಾದ ಇನ್ನಾವುದೇ ಸದವಕಾಶಕ್ಕಿಂತ ಎಷ್ಟೋ ಹೆಚ್ಚು ಪ್ರಾಮುಖ್ಯವಾಗಿರುವ ಒಂದು ಕೆಲಸವು ಇಂದು ನಡೆಯುತ್ತ ಇದೆ. ಅದರಲ್ಲಿ ಜೊತೆಗೂಡಲು ಎಳೆಯರಾದ ನಿಮಗೆ ಅನುಮತಿ ಇದೆಯೆ? ನಿಮಗೆ ಅನುಮತಿ ಇದೆ ಮಾತ್ರವಲ್ಲ, ಆ ಕೆಲಸವನ್ನು ಮಾಡಲು ಸರ್ವೋನ್ನತನಾದ ದೇವರು ತಾನೇ ನಿಮ್ಮನ್ನು ಆಮಂತ್ರಿಸುತ್ತಾನೆ ಕೂಡ!

3. ಯಾವ ಸದವಕಾಶವನ್ನು ಹೊಂದುವಂತೆ ಯೆಹೋವನು ಎಳೆಯರನ್ನು ಆಮಂತ್ರಿಸುತ್ತಾನೆ, ಮತ್ತು ಈಗ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

3 ನಾವು ಯಾವ ಕೆಲಸದ ಕುರಿತು ಮಾತಾಡುತ್ತಿದ್ದೇವೆ? ಈ ಲೇಖನದ ಮುಖ್ಯ ವಚನದ ಮಾತುಗಳನ್ನು ಗಮನಿಸಿ: “ಭೂಮಂಡಲದಿಂದ ಯೆಹೋವನಿಗೆ ಸ್ತುತಿಯುಂಟಾಗಲಿ. . . . ಪ್ರಾಯಸ್ಥರಾದ ಸ್ತ್ರೀಪುರುಷರೂ . . . ಹುಡುಗರೂ ಯೆಹೋವನನ್ನು ಕೊಂಡಾಡಲಿ.” (ಕೀರ್ತನೆ 148:​7, 12, 13) ಇಲ್ಲಿದೆ ನಿಮಗಿರುವ ಸದವಕಾಶ: ನೀವು ಯೆಹೋವನನ್ನು ಕೊಂಡಾಡಬಲ್ಲಿರಿ ಅಥವಾ ಸ್ತುತಿಸಬಲ್ಲಿರಿ. ಎಳೆಯ ವ್ಯಕ್ತಿಯಾಗಿರುವ ನೀವು, ಈ ಕೆಲಸದಲ್ಲಿ ಭಾಗವಹಿಸುವ ವಿಷಯದಲ್ಲಿ ರೋಮಾಂಚನಗೊಂಡಿದ್ದೀರೋ? ಅನೇಕರು ಪುಳಕಿತರಾಗಿದ್ದಾರೆ. ಅಂತಹ ಅನಿಸಿಕೆ ಏಕೆ ಯೋಗ್ಯವೆಂಬುದನ್ನು ನೋಡಲು ನಾವು ಮೂರು ಪ್ರಶ್ನೆಗಳನ್ನು ಪರಿಗಣಿಸೋಣ. ಒಂದು, ನೀವು ಯೆಹೋವನನ್ನು ಏಕೆ ಸ್ತುತಿಸಬೇಕು? ಎರಡು, ನೀವು ಆತನನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಹೇಗೆ ಸ್ತುತಿಸಬಲ್ಲಿರಿ? ಮೂರು, ಯೆಹೋವನನ್ನು ಸ್ತುತಿಸುವುದನ್ನು ಆರಂಭಿಸಲು ಉತ್ತಮ ಸಮಯವು ಯಾವುದು?

ಯೆಹೋವನನ್ನು ಏಕೆ ಸ್ತುತಿಸಬೇಕು?

4, 5. (ಎ) ಕೀರ್ತನೆ 148ಕ್ಕನುಸಾರ, ನಾವು ಯಾವ ಆಶ್ಚರ್ಯಕರವಾದ ಸನ್ನಿವೇಶದಲ್ಲಿದ್ದೇವೆ? (ಬಿ) ಮಾತಾಡದ ಮತ್ತು ತರ್ಕಿಸಲಾರದ ಸೃಷ್ಟಿಗಳು ಯೆಹೋವನನ್ನು ಹೇಗೆ ಸ್ತುತಿಸಬಲ್ಲವು?

4 ಯೆಹೋವನನ್ನು ಸ್ತುತಿಸಲಿಕ್ಕಾಗಿರುವ ಒಂದು ಪ್ರಮುಖ ಕಾರಣವು ಆತನು ಸೃಷ್ಟಿಕರ್ತನಾಗಿರುವುದರಿಂದಲೇ. 148ನೇ ಕೀರ್ತನೆ ನಾವು ಈ ಸತ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಸಹಾಯಮಾಡುತ್ತದೆ. ಸ್ವಲ್ಪ ಭಾವಿಸಿರಿ: ಒಂದು ಸುಂದರವಾದ, ಮನತಟ್ಟುವ ಗೀತೆಯನ್ನು ಕೂಡುಗಾಯನದಲ್ಲಿ ಹಾಡುತ್ತಿರುವ ಒಂದು ದೊಡ್ಡ ಜನಸಮೂಹದ ಹತ್ತಿರಕ್ಕೆ ಬರುವಾಗ ನಿಮಗೆ ಹೇಗನಿಸುವುದು? ಆ ಗೀತೆಯ ಮಾತುಗಳು ನಿಮಗೆ ತಿಳಿದಿರುವಂತೆ ಸತ್ಯವಾಗಿವೆ ಮತ್ತು ಅವು ಪ್ರಾಮುಖ್ಯವೂ, ಹರ್ಷಕರವೂ, ಭಕ್ತಿವರ್ಧಕವೂ ಆಗಿವೆಯೆಂದು ನಿಮಗೆ ತಿಳಿದಿರುವ ವಿಚಾರಗಳನ್ನು ವ್ಯಕ್ತಪಡಿಸುತ್ತವೆ. ಹಾಗಿರುವಾಗ, ಅದರಲ್ಲಿರುವ ಪದಗಳನ್ನು ಕಲಿತು ಅದನ್ನು ಹಾಡುವುದರಲ್ಲಿ ಜೊತೆಗೂಡಲು ನಿಮಗೆ ಮನಸ್ಸಾದೀತೆ? ನಮ್ಮಲ್ಲಿ ಹೆಚ್ಚಿನವರಿಗೆ ಹಾಗೆ ಮನಸ್ಸಾಗಬಹುದು. ನೀವು ತದ್ರೀತಿಯ, ಆದರೆ ಅದಕ್ಕೂ ಹೆಚ್ಚು ಆಶ್ಚರ್ಯಕರವಾದ ಒಂದು ಸ್ಥಿತಿಯಲ್ಲಿದ್ದೀರೆಂದು 148ನೇ ಕೀರ್ತನೆ ತೋರಿಸುತ್ತದೆ. ತುಂಬ ದೊಡ್ಡ ಸಮೂಹವೊಂದು ಕೂಡುಗಾಯನದಲ್ಲಿ ಯೆಹೋವನನ್ನು ಸ್ತುತಿಸುತ್ತಿರುವುದನ್ನು ಆ ಕೀರ್ತನೆ ವರ್ಣಿಸುತ್ತದೆ. ಆದರೆ ನೀವು ಆ ಕೀರ್ತನೆಯನ್ನು ಓದುವಾಗ ತುಸು ವಿಚಿತ್ರವಾದ ಏನನ್ನೊ ಗಮನಿಸಬಹುದು. ಏನದು?

5 ಕೀರ್ತನೆ 148ರಲ್ಲಿ ವರ್ಣಿಸಲಾಗಿರುವ ಅನೇಕ ಸ್ತುತಿಗಾರರಿಗೆ ಮಾತಾಡುವ ಇಲ್ಲವೆ ತರ್ಕಿಸುವ ಶಕ್ತಿ ಇಲ್ಲ ಎಂಬುದನ್ನೇ. ದೃಷ್ಟಾಂತಕ್ಕಾಗಿ, ಸೂರ್ಯ, ಚಂದ್ರ, ನಕ್ಷತ್ರಗಳು, ಹಿಮ, ಗಾಳಿ, ಬೆಟ್ಟಗಳು ಮತ್ತು ಗುಡ್ಡಗಳು ಯೆಹೋವನನ್ನು ಸ್ತುತಿಸುವ ಕುರಿತು ನಾವು ಓದುತ್ತೇವೆ. ಈ ನಿರ್ಜೀವ ಸೃಷ್ಟಿಗಳು ಯೆಹೋವನನ್ನು ಸ್ತುತಿಸುವುದಾದರೂ ಹೇಗೆ? (3, 8, 9ನೇ ವಚನಗಳು) ಮರಗಳು, ಸಮುದ್ರ ಜೀವಿಗಳು ಮತ್ತು ಪಶುಗಳು ಸ್ತುತಿಸುವಂತೆಯೇ ಎಂಬುದು ನಿಜ. (7, 9, 10 ವಚನಗಳು) ಸೊಬಗಿನ ಸೂರ್ಯಾಸ್ತಮಾನವನ್ನು ನೀವು ಎಂದಾದರೂ ನೋಡಿದ್ದುಂಟೊ ಇಲ್ಲವೆ ಹುಣ್ಣಿಮೆಯ ಚಂದ್ರನು ತಾರಾರಾಶಿಯ ಮಧ್ಯದಿಂದ ಹಾದುಹೋಗುತ್ತಿರುವುದನ್ನು ನೋಡಿದ್ದುಂಟೊ ಅಥವಾ ಪ್ರಾಣಿಗಳು ಆಡುವುದನ್ನು ನೋಡಿ ಹರ್ಷದಿಂದ ನಕ್ಕಿದ್ದುಂಟೊ ಇಲ್ಲವೆ ಬೆರಗುಗೊಳಿಸುವ ಭೂದೃಶ್ಯವೊಂದನ್ನು ನೋಡಿ ಆಶ್ಚರ್ಯಪಟ್ಟದ್ದುಂಟೊ? ಹಾಗಿರುವಲ್ಲಿ, ನೀವು ಸೃಷ್ಟಿಯಿಂದ ಬರುವ ಸ್ತುತಿಗೀತೆಯನ್ನು “ಕೇಳಿಸಿಕೊಂಡಿದ್ದೀರಿ.” ಯೆಹೋವನು ಮಾಡಿರುವ ಸೃಷ್ಟಿಯೆಲ್ಲವೂ ಆತನೇ ಸರ್ವಶಕ್ತನಾದ ಸೃಷ್ಟಿಕರ್ತನೆಂದೂ, ವಿಶ್ವದಲ್ಲೆಲ್ಲ ಅಷ್ಟು ಶಕ್ತಿಶಾಲಿಯೂ, ವಿವೇಕಿಯೂ, ಪ್ರೀತಿಪೂರ್ಣನೂ ಇನ್ನಾವನೂ ಇಲ್ಲವೆಂದೂ ನಮಗೆ ಜ್ಞಾಪಕ ಹುಟ್ಟಿಸುತ್ತದೆ.​—⁠ರೋಮಾಪುರ 1:20; ಪ್ರಕಟನೆ 4:11.

6, 7. (ಎ) ಕೀರ್ತನೆ 148, ಬುದ್ಧಿಶಕ್ತಿಯಿರುವ ಯಾವ ಜೀವಿಗಳು ಯೆಹೋವನನ್ನು ಸ್ತುತಿಸುವುದನ್ನು ವರ್ಣಿಸುತ್ತದೆ? (ಬಿ) ನಾವು ಯೆಹೋವನನ್ನು ಸ್ತುತಿಸುವಂತೆ ಏಕೆ ಪ್ರಚೋದಿಸಲ್ಪಡಬಹುದು? ದೃಷ್ಟಾಂತ ಕೊಡಿರಿ.

6 ಕೀರ್ತನೆ 148, ಬುದ್ಧಿಶಕ್ತಿಯಿರುವ ಸೃಷ್ಟಿಯೂ ಯೆಹೋವನನ್ನು ಸ್ತುತಿಸುವುದನ್ನು ವರ್ಣಿಸುತ್ತದೆ. ವಚನ 2ರಲ್ಲಿ ಯೆಹೋವನ ಸ್ವರ್ಗೀಯ “ಸೈನ್ಯಗಳು” ಅಂದರೆ ದೇವದೂತರು ದೇವರನ್ನು ಸ್ತುತಿಸುವುದನ್ನು ನೋಡುತ್ತೇವೆ. ವಚನ 11ರಲ್ಲಿ, ರಾಜರು ಮತ್ತು ದೇಶಾಧಿಪತಿಗಳಂಥ ಬಲಾಢ್ಯರೂ ಪ್ರಭಾವಶಾಲಿಗಳೂ ಆ ಸ್ತುತಿಸುವಿಕೆಯಲ್ಲಿ ಭಾಗಿಗಳಾಗುವಂತೆ ಆಮಂತ್ರಿಸಲ್ಪಟ್ಟಿದ್ದಾರೆ. ಬಲಿಷ್ಠರಾದ ದೇವದೂತರೇ ಯೆಹೋವನನ್ನು ಸ್ತುತಿಸುವುದರಲ್ಲಿ ಹರ್ಷಿಸುವಾಗ, ಹಾಗೆ ಮಾಡಲು ತಾನು ತೀರ ಉಚ್ಚಸ್ಥಾನದಲ್ಲಿದ್ದೇನೆ ಎಂದು ಯಾವ ಮಾನವನು ಹೇಳಬಲ್ಲನು? ಬಳಿಕ, 12 ಮತ್ತು 13ನೆಯ ವಚನಗಳಲ್ಲಿ, ಎಳೆಯರಾದ ನಿಮಗೆ ಸಹ ಯೆಹೋವನನ್ನು ಸ್ತುತಿಸುವುದರಲ್ಲಿ ಜೊತೆಗೂಡಲು ಆಮಂತ್ರಣವನ್ನು ಕೊಡಲಾಗಿದೆ. ಹಾಗೆ ಮಾಡಲು ನೀವು ಪ್ರಚೋದಿಸಲ್ಪಟ್ಟಿದ್ದೀರೊ?

7 ಒಂದು ದೃಷ್ಟಾಂತವನ್ನು ಪರಿಗಣಿಸಿರಿ. ಪ್ರಾಯಶಃ ಕ್ರೀಡೆಯಲ್ಲಿ, ಚಿತ್ರಕಲೆಯಲ್ಲಿ ಇಲ್ಲವೆ ಸಂಗೀತದಲ್ಲಿ ವಿಸ್ಮಯಗೊಳಿಸುವಂಥ ಕೌಶಲವಿರುವ ಒಬ್ಬ ಆಪ್ತಮಿತ್ರನು ನಿಮಗಿರುವಲ್ಲಿ, ನೀವು ಅವನ ಬಗ್ಗೆ ನಿಮ್ಮ ಕುಟುಂಬದವರೊಂದಿಗೆ ಮತ್ತು ಇತರ ಮಿತ್ರರೊಂದಿಗೆ ಮಾತಾಡುವಿರೊ? ನಿಶ್ಚಯವಾಗಿ ಮಾತಾಡುವಿರಿ. ಹಾಗೆಯೇ, ಯೆಹೋವನು ಮಾಡಿರುವ ಸಕಲ ವಿಷಯಗಳ ಕುರಿತು ಕಲಿಯುವುದು ನಮ್ಮ ಮೇಲೆ ಅದೇ ರೀತಿಯ ಪರಿಣಾಮವನ್ನು ಬೀರಬಲ್ಲದು. ದೃಷ್ಟಾಂತಕ್ಕೆ, ತಾರಾರಂಜಿತ ಆಕಾಶವು, “ಮಾತು ಹೊರ ಉಕ್ಕುವಂತೆ ಮಾಡುತ್ತದೆ” ಎಂದು ಕೀರ್ತನೆ 19:​1, 2 (NW) ಹೇಳುತ್ತದೆ. ನಮ್ಮ ವಿಷಯದಲ್ಲಾದರೊ ಯೆಹೋವನು ಸಾಧಿಸಿರುವ ಅದ್ಭುತಕರ ಸಂಗತಿಗಳ ಕುರಿತು ನಾವು ಯೋಚಿಸುವಾಗ, ನಮ್ಮ ದೇವರ ಬಗ್ಗೆ ಇತರರೊಂದಿಗೆ ಮಾತಾಡದಿರಲು ನಮ್ಮಿಂದ ಸಾಧ್ಯವಾಗುವುದಿಲ್ಲ.

8, 9. ಯೆಹೋವನು ನಾವು ಯಾವ ಕಾರಣಗಳಿಗಾಗಿ ಆತನನ್ನು ಸ್ತುತಿಸಬೇಕೆಂದು ಬಯಸುತ್ತಾನೆ?

8 ಯೆಹೋವನನ್ನು ಸ್ತುತಿಸಲಿಕ್ಕಾಗಿರುವ ಇನ್ನೊಂದು ಪ್ರಮುಖ ಕಾರಣವು, ನಾವು ಆತನನ್ನು ಸ್ತುತಿಸುವಂತೆ ಆತನು ಬಯಸುವುದೇ ಆಗಿದೆ. ಏಕೆ? ಆತನಿಗೆ ಮನುಷ್ಯರಿಂದ ಸ್ತುತಿಯ ಅಗತ್ಯವಿರುವ ಕಾರಣದಿಂದಲೊ? ಇಲ್ಲ. ಮಾನವರಾದ ನಮಗೆ ಕೆಲವು ಬಾರಿ ಶ್ಲಾಘನೆ ಅಗತ್ಯವಿರಬಹುದು, ಆದರೆ ಯೆಹೋವನು ನಮಗಿಂತ ಎಷ್ಟೋ ಉನ್ನತನಾಗಿದ್ದಾನೆ. (ಯೆಶಾಯ 55:⁠8) ಆತನಿಗೆ ತನ್ನ ವಿಷಯವಾಗಲಿ ತನ್ನ ಗುಣಗಳ ವಿಷಯವಾಗಲಿ ಯಾವ ಅನಿಶ್ಚಿತತೆಯೂ ಇಲ್ಲ. (ಯೆಶಾಯ 45:⁠5) ಹೀಗಿದ್ದರೂ, ನಾವು ಸ್ತುತಿಸಬೇಕೆಂದು ಆತನು ಬಯಸುತ್ತಾನೆ, ಮತ್ತು ನಾವು ಹಾಗೆ ಮಾಡುವಾಗ ಆತನು ಅದನ್ನು ಮೆಚ್ಚುತ್ತಾನೆ. ಏಕೆ? ಎರಡು ಕಾರಣಗಳನ್ನು ಪರಿಗಣಿಸಿರಿ. ಒಂದನೆಯದಾಗಿ, ನಾವು ಆತನನ್ನು ಸ್ತುತಿಸುವುದು ಅಗತ್ಯವೆಂದು ಆತನಿಗೆ ತಿಳಿದದೆ. ಆತನು ನಮ್ಮನ್ನು ಆಧ್ಯಾತ್ಮಿಕ ಆವಶ್ಯಕತೆ ಅಂದರೆ ಆರಾಧಿಸುವ ಆವಶ್ಯಕತೆ ಉಳ್ಳವರಾಗಿ ನಿರ್ಮಿಸಿದನು. (ಮತ್ತಾಯ 5:⁠3) ಆಹಾರವು ನಿಮಗೆ ಪುಷ್ಟಿದಾಯಕವೆಂದು ತಿಳಿದಿರುವುದರಿಂದ, ನೀವು ಆಹಾರವನ್ನು ಸೇವಿಸುವಾಗ ನಿಮ್ಮ ಹೆತ್ತವರಿಗೆ ಸಂತೋಷವಾಗುವಂತೆಯೇ, ನಮ್ಮಲ್ಲಿರುವ ಆಧ್ಯಾತ್ಮಿಕ ಆವಶ್ಯಕತೆಯನ್ನು ನಾವು ಪೂರೈಸುವುದನ್ನು ನೋಡಿ ಯೆಹೋವನಿಗೆ ಸಂತೋಷವಾಗುತ್ತದೆ.​—⁠ಯೋಹಾನ 4:34.

9 ಎರಡನೆಯದಾಗಿ, ನಾವು ಯೆಹೋವನನ್ನು ಸ್ತುತಿಸುವುದನ್ನು ಇತರರು ಕೇಳುವುದು ಆವಶ್ಯಕವೆಂಬದು ಆತನಿಗೆ ತಿಳಿದದೆ. ಅಪೊಸ್ತಲ ಪೌಲನು ಈ ಕೆಳಗಿನ ಮಾತುಗಳನ್ನು ಯುವಕನಾಗಿದ್ದ ತಿಮೊಥೆಯನಿಗೆ ಬರೆದನು: “ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.” (1 ತಿಮೊಥೆಯ 4:16) ಹೌದು, ನೀವು ಯೆಹೋವ ದೇವರ ಕುರಿತು ಇತರರಿಗೆ ಕಲಿಸುತ್ತ, ಆತನನ್ನು ಸ್ತುತಿಸುವಾಗ, ಅವರೂ ಯೆಹೋವನ ಜ್ಞಾನವನ್ನು ಪಡೆದುಕೊಳ್ಳಬಹುದು. ಅಂತಹ ಜ್ಞಾನವು ಅವರನ್ನು ನಿತ್ಯರಕ್ಷಣೆಗೆ ನಡೆಸಬಲ್ಲದು.​—⁠ಯೋಹಾನ 17:⁠3.

10. ಯೆಹೋವನನ್ನು ಸ್ತುತಿಸಲು ಪ್ರಚೋದಿಸಲ್ಪಡುವ ಅನಿಸಿಕೆ ನಮ್ಮಲ್ಲಿರುವುದೇಕೆ?

10 ಯೆಹೋವನನ್ನು ಸ್ತುತಿಸಲು ಇನ್ನೊಂದು ಕಾರಣವೂ ಇದೆ. ವಿಶೇಷ ಕೌಶಲಗಳಿರುವ ನಿಮ್ಮ ಮಿತ್ರನ ದೃಷ್ಟಾಂತವನ್ನು ನೆನಪಿಸಿಕೊಳ್ಳಿ. ಇತರರು ಅವನ ವಿಷಯದಲ್ಲಿ ಸುಳ್ಳುಗಳನ್ನು ಹೇಳಿ ಅವನಿಗಿರುವ ಒಳ್ಳೇ ಹೆಸರಿಗೆ ಮಸಿಬಳಿಯುವುದನ್ನು ನೀವು ಕೇಳುವಲ್ಲಿ, ಅವನನ್ನು ಹೊಗಳಲು ನೀವು ಇನ್ನೂ ಹೆಚ್ಚು ದೃಢಸಂಕಲ್ಪದವರು ಆಗುವುದಿಲ್ಲವೆ? ಹೌದು, ಈ ಲೋಕದಲ್ಲಿ ಎಲ್ಲ ಕಡೆಯಲ್ಲಿಯೂ ಯೆಹೋವನ ಹೆಸರನ್ನು ನಿಂದಿಸಲಾಗುತ್ತಿದೆ. (ಯೋಹಾನ 8:44; ಪ್ರಕಟನೆ 12:9) ಆದಕಾರಣ, ಆತನನ್ನು ಪ್ರೀತಿಸುವವರು ಆತನ ಕುರಿತು ಸತ್ಯವನ್ನು ಹೇಳುವಂತೆ ಮತ್ತು ಹೀಗೆ ತಪ್ಪುಮಾಹಿತಿಯನ್ನು ತಿದ್ದಿ ಸರಿಪಡಿಸಲು ಪ್ರೇರಿಸಲ್ಪಡುತ್ತಾರೆ. ಹಾಗಾದರೆ, ಯೆಹೋವನಿಗೆ ನಿಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ಹಾಗೂ ಆತನ ಪ್ರಧಾನ ವಿರೋಧಿಯಾದ ಸೈತಾನನಿಗೆ ಬದಲಾಗಿ ಯೆಹೋವನು ನಿಮ್ಮ ಪ್ರಭುವಾಗಿರುವಂತೆ ಬಯಸುತ್ತೀರೆಂದು ನೀವು ಸಹ ತೋರಿಸಲು ಇಷ್ಟಪಡುತ್ತೀರೊ? ಇವೆಲ್ಲವನ್ನೂ ನೀವು ಯೆಹೋವನನ್ನು ಸ್ತುತಿಸುವ ಮೂಲಕ ಮಾಡಬಲ್ಲಿರಿ. ಹೀಗಿರುವುದರಿಂದ ಮುಂದಿನ ಪ್ರಶ್ನೆಯು, ನೀವು ಆತನನ್ನು ಹೇಗೆ ಸ್ತುತಿಸಬಲ್ಲಿರಿ? ಎಂಬುದೇ.

ಕೆಲವು ಎಳೆಯರು ಯೆಹೋವನನ್ನು ಸ್ತುತಿಸಿದ ವಿಧ

11. ಯೆಹೋವನನ್ನು ಸ್ತುತಿಸುವುದರಲ್ಲಿ ಮಕ್ಕಳು ತುಂಬ ಪರಿಣಾಮಕಾರಿ ಆಗಿರಬಲ್ಲರೆಂದು ಯಾವ ಬೈಬಲ್‌ ದೃಷ್ಟಾಂತಗಳು ತೋರಿಸುತ್ತವೆ?

11 ಯೆಹೋವನನ್ನು ಸ್ತುತಿಸುವುದರಲ್ಲಿ ಎಳೆಯರು ಅನೇಕವೇಳೆ ತೀರ ಪರಿಣಾಮಕಾರಿಗಳಾಗಿ ಇರುತ್ತಾರೆಂದು ಬೈಬಲು ತೋರಿಸುತ್ತದೆ. ಉದಾಹರಣೆಗೆ, ಸಿರಿಯದವರು ಸೆರೆಹಿಡಿದಿದ್ದ ಒಬ್ಬ ಇಸ್ರಾಯೇಲ್ಯ ಹುಡುಗಿ ಇದ್ದಳು. ಆಕೆ ಯೆಹೋವನ ಪ್ರವಾದಿಯಾಗಿದ್ದ ಎಲೀಷನ ಕುರಿತು ತನ್ನ ಒಡತಿಗೆ ಧೈರ್ಯದಿಂದ ಸಾಕ್ಷಿಕೊಟ್ಟಳು. ಆಕೆಯ ಮಾತುಗಳು ಒಂದು ಅದ್ಭುತಕ್ಕೆ ನಡೆಸಿದವು, ಮತ್ತು ಪ್ರಬಲವಾದ ಸಾಕ್ಷಿಯನ್ನು ಕೊಟ್ಟಿತು. (2 ಅರಸುಗಳು 5:​1-17) ಯೇಸು ಸಹ ಹುಡುಗನಾಗಿದ್ದಾಗ ಧೈರ್ಯದಿಂದ ಸಾಕ್ಷಿಕೊಟ್ಟನು. ಅವನು ಹುಡುಗನಾಗಿದ್ದಾಗ ನಡೆದ ಎಲ್ಲ ಘಟನೆಗಳಲ್ಲಿ ಯೆಹೋವನು ಒಂದೇ ಘಟನೆಯನ್ನು ಶಾಸ್ತ್ರದಲ್ಲಿ ದಾಖಲೆಮಾಡಿಡಲು ಆರಿಸಿಕೊಂಡನು. ಅದು, ಯೇಸು 12 ವಯಸ್ಸಿನವನಾಗಿದ್ದಾಗ ಯೆರೂಸಲೇಮಿನ ದೇವಾಲಯದಲ್ಲಿ ಧಾರ್ಮಿಕ ಬೋಧಕರನ್ನು ಧೈರ್ಯದಿಂದ ಪ್ರಶ್ನಿಸಿದ ಮತ್ತು ಯೆಹೋವನ ಮಾರ್ಗಗಳ ವಿಷಯದಲ್ಲಿ ಅವನಿಗಿದ್ದ ತಿಳಿವಳಿಕೆಯಿಂದ ಅವರನ್ನು ದಂಗುಬಡಿಸಿದ ಘಟನೆಯೇ ಆಗಿತ್ತು.​—⁠ಲೂಕ 2:​46-49.

12, 13. (ಎ) ತನ್ನ ಮರಣಕ್ಕೆ ತುಸು ಮೊದಲು ಯೇಸು ದೇವಾಲಯದಲ್ಲಿ ಏನು ಮಾಡಿದನು, ಮತ್ತು ಅದು ಅಲ್ಲಿದ್ದ ಜನರ ಮೇಲೆ ಯಾವ ಪರಿಣಾಮಬೀರಿತು? (ಬಿ) ಚಿಕ್ಕ ಹುಡುಗರು ಮಾಡಿದ ಸ್ತುತಿಯ ಕುರಿತು ಯೇಸುವಿಗೆ ಹೇಗನಿಸಿತು?

12 ಯೇಸು ಬೆಳೆದು ಪುರುಷ ಪ್ರಾಯದವನಾದಾಗ, ಮಕ್ಕಳು ಸಹ ಯೆಹೋವನನ್ನು ಸ್ತುತಿಸುವಂತೆ ಪ್ರಚೋದಿಸಿದನು. ಉದಾಹರಣೆಗೆ, ತನ್ನ ಮರಣಕ್ಕೆ ಕೆಲವೇ ದಿನಗಳ ಮೊದಲು ಯೇಸು ಯೆರೂಸಲೇಮಿನ ದೇವಾಲಯದಲ್ಲಿ ಸಮಯ ಕಳೆದನು. ಅವನು ಅಲ್ಲಿ “ಆಶ್ಚರ್ಯಕರವಾದ ಕಾರ್ಯಗಳನ್ನು” ಮಾಡಿದನು ಎನ್ನುತ್ತದೆ ಬೈಬಲು. ಆ ಪವಿತ್ರ ಸ್ಥಳವನ್ನು ಕಳ್ಳರ ಗವಿಯಾಗಿ ಮಾಡುತ್ತಿದ್ದವರನ್ನು ಅವನು ಅಲ್ಲಿಂದ ಹೊರಡಿಸಿಬಿಟ್ಟನು. ಅವನು ಕುರುಡರನ್ನೂ ಕುಂಟರನ್ನೂ ವಾಸಿಮಾಡಿದನು. ಇದರ ಪರಿಣಾಮವಾಗಿ, ಅಲ್ಲಿದ್ದವರೆಲ್ಲರೂ, ವಿಶೇಷವಾಗಿ ಧಾರ್ಮಿಕ ಮುಖಂಡರು ಯೆಹೋವನನ್ನೂ ಆತನ ಪುತ್ರನಾದ ಮೆಸ್ಸೀಯನನ್ನೂ ಸ್ತುತಿಸುವಂತೆ ಪ್ರಚೋದಿಸಲ್ಪಡಬೇಕಾಗಿತ್ತು. ಆದರೆ ವಿಷಾದಕರವಾಗಿ, ಆ ದಿನಗಳಲ್ಲಿದ್ದ ಅನೇಕರು ಅಂತಹ ಸ್ತುತಿಗಳನ್ನಾಡಲು ಬಾಯಿತೆರೆಯಲಿಲ್ಲ. ಯೇಸುವನ್ನು ಕಳುಹಿಸಿಕೊಟ್ಟವನು ದೇವರೆಂದು ಅವರಿಗೆ ತಿಳಿದಿದ್ದರೂ ಅವರು ಧಾರ್ಮಿಕ ಮುಖಂಡರಿಗೆ ಭಯಪಡುತ್ತಿದ್ದರು. ಆದರೂ ಒಂದು ಗುಂಪು ಧೈರ್ಯದಿಂದ ಮಾತಾಡತೊಡಗಿತು. ಅದು ಯಾರೆಂಬುದು ನಿಮಗೆ ಗೊತ್ತೇ? ಬೈಬಲ್‌ ಹೇಳುವುದು: “ಮಹಾಯಾಜಕರೂ ಶಾಸ್ತ್ರಿಗಳೂ ಆತನು ಮಾಡಿದ ಆಶ್ಚರ್ಯಕರವಾದ ಕಾರ್ಯಗಳನ್ನೂ ದಾವೀದನ ಕುಮಾರನಿಗೆ ಜಯಜಯವೆಂದು ದೇವಾಲಯದಲ್ಲಿ ಕೂಗುತ್ತಿರುವ ಹುಡುಗರನ್ನೂ ನೋಡಿ ಸಿಟ್ಟುಗೊಂಡು ಆತನಿಗೆ​—⁠ಇವರು ಹೇಳುವದನ್ನು ಕೇಳುತ್ತೀಯಾ ಎಂದು” ಕೇಳಿದರು.​—⁠ಮತ್ತಾಯ 21:15, 16; ಯೋಹಾನ 12:42.

13 ಯೇಸು ತನ್ನನ್ನು ಸ್ತುತಿಸುತ್ತಿದ್ದ ಮಕ್ಕಳ ಬಾಯಿಗಳನ್ನು ಮುಚ್ಚಿಸುವನೆಂದು ಆ ಯಾಜಕರು ನೆನಸಿದರು. ಆದರೆ ಅವನು ಹಾಗೆ ಮಾಡಿದನೊ? ನಿಶ್ಚಯವಾಗಿಯೂ ಇಲ್ಲ! ಯೇಸು ಆ ಯಾಜಕರಿಗೆ ಉತ್ತರಿಸುತ್ತಾ ಹೇಳಿದ್ದು: “ಹೌದು, ಕೇಳುತ್ತೇನೆ, ಸಣ್ಣ ಮಕ್ಕಳ ಬಾಯಿಂದಲೂ ಮೊಲೇಕೂಸುಗಳ ಬಾಯಿಂದಲೂ ಸ್ತೋತ್ರವನ್ನು ಸಿದ್ಧಿಗೆ ತಂದಿ ಎಂಬದನ್ನು ನೀವು ಎಂದಾದರೂ ಓದಲಿಲ್ಲವೋ?” ಯೇಸು ಮತ್ತು ಅವನ ತಂದೆ, ಆ ಚಿಕ್ಕ ಹುಡುಗರ ಸ್ತುತಿಯನ್ನು ಮೆಚ್ಚಿದರೆಂಬುದು ವ್ಯಕ್ತ. ಏಕೆಂದರೆ ಅಲ್ಲಿದ್ದ ವಯಸ್ಕರೆಲ್ಲರೂ ಏನನ್ನು ಮಾಡಬೇಕಾಗಿತ್ತೊ ಅದನ್ನು ಆ ಮಕ್ಕಳು ಮಾಡುತ್ತಿದ್ದರು. ಅವರ ಎಳೆಯ ಮನಸ್ಸುಗಳಲ್ಲಿ ಹಾಗೆ ಮಾಡುವುದು ಸರಿ ಎಂಬುದು ಸುಸ್ಪಷ್ಟವಾಗಿರುವಂತೆ ತೋರಿಬಂತು. ಏಕೆಂದರೆ ಈ ಮನುಷ್ಯನು ಅದ್ಭುತಗಳನ್ನು ಮಾಡುವುದನ್ನು, ಧೈರ್ಯ ಹಾಗೂ ನಂಬಿಕೆಯಿಂದ ಮಾತಾಡುವುದನ್ನು ಮತ್ತು ದೇವರಿಗಾಗಿಯೂ ತನ್ನ ಜನರಿಗಾಗಿಯೂ ಗಾಢವಾದ ಪ್ರೀತಿ ತೋರಿಸುವುದನ್ನು ಅವರು ನೋಡಿದರು. ಅವನು ತಾನು ಯಾರೆಂದು ಹೇಳಿಕೊಳ್ಳುತ್ತಿದ್ದನೊ ಆ “ದಾವೀದನ ಕುಮಾರನು,” ಮೆಸ್ಸೀಯನು ಆಗಿದ್ದನು. ತಮ್ಮ ನಂಬಿಕೆಗಾಗಿ ಹರಸಲ್ಪಟ್ಟ ಆ ಹುಡುಗರಿಗೆ ಪ್ರವಾದನೆಯನ್ನು ನೆರವೇರಿಸುವ ಸದವಕಾಶವೂ ದೊರೆಯಿತು.​—⁠ಕೀರ್ತನೆ 8:⁠2.

14. ಎಳೆಯರಲ್ಲಿರುವ ವರದಾನಗಳು ಅವರು ದೇವರನ್ನು ಸ್ತುತಿಸುವಂತೆ ಸನ್ನದ್ಧವಾಗಿಸುವುದು ಹೇಗೆ?

14 ಇಂತಹ ಮಾದರಿಗಳಿಂದ ನಾವೇನು ಕಲಿಯಬಲ್ಲೆವು? ಚಿಕ್ಕವರು ಯೆಹೋವನ ಸ್ತುತಿಗಾರರಾಗಿ ಇರುವುದರಲ್ಲಿ ಅತಿ ಪರಿಣಾಮಕಾರಿ ಆಗಿರಬಲ್ಲರೆಂದೇ. ಅವರಿಗೆ ಅನೇಕವೇಳೆ, ಸತ್ಯವನ್ನು ಸ್ಪಷ್ಟವಾಗಿ ಮತ್ತು ಸರಳವಾಗಿ ನೋಡುವ, ಶ್ರದ್ಧಾಪೂರ್ವಕವಾಗಿಯೂ ಹುರುಪಿನಿಂದಲೂ ವ್ಯಕ್ತಪಡಿಸುವ ವರದಾನವಿರುತ್ತದೆ. ಜ್ಞಾನೋಕ್ತಿ 20:29ರಲ್ಲಿ “ಯುವಕರಿಗೆ ಬಲವು ಭೂಷಣ” ಎಂದು ಹೇಳಲಾಗಿದೆ. ಈ ವರದಾನವೂ ಅವರಿಗಿದೆ. ಹೌದು, ಎಳೆಯರಾದ ನೀವು, ಯೆಹೋವನನ್ನು ಸ್ತುತಿಸುವುದರಲ್ಲಿ ನಿಜವಾದ ಸ್ವತ್ತುಗಳಾಗಿರುವಂಥ ಬಲ ಮತ್ತು ಶಕ್ತಿಯಿಂದ ಆಶೀರ್ವದಿಸಲ್ಪಟ್ಟಿದ್ದೀರಿ. ಈ ವರದಾನಗಳನ್ನು ನೀವು ನಿರ್ದಿಷ್ಟವಾಗಿ ಹೇಗೆ ಉಪಯೋಗಿಸಬಲ್ಲಿರಿ?

ನೀವು ಯೆಹೋವನನ್ನು ಹೇಗೆ ಸ್ತುತಿಸಬಲ್ಲಿರಿ?

15. ಯೆಹೋವನನ್ನು ಪರಿಣಾಮಕಾರಿಯಾಗಿ ಸ್ತುತಿಸಲು ಯಾವ ಪ್ರಚೋದನೆಯು ಅಗತ್ಯ?

15 ಪರಿಣಾಮಕಾರಿಯಾಗಿ ಸ್ತುತಿಸುವ ಸಂಗತಿಯ ಮೂಲವು ಹೃದಯವಾಗಿದೆ. ನೀವು ಯೆಹೋವನನ್ನು ಸ್ತುತಿಸಬೇಕೆಂದು ಇತರರು ಬಯಸುತ್ತಾರೆಂಬ ಒಂದೇ ಕಾರಣದಿಂದ ನೀವು ಅದನ್ನು ಮಾಡುವಲ್ಲಿ ನೀವು ಆತನನ್ನು ಸ್ತುತಿಸಲಾರಿರಿ. ಸಕಲ ಆಜ್ಞೆಗಳಲ್ಲಿ ಅತಿ ಶ್ರೇಷ್ಠವಾದುದು, “ನಿನ್ನ ದೇವರಾಗಿರುವ ಕರ್ತ [“ಯೆಹೋವ,” NW]ನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು” ಎಂಬುದೇ ಎಂದು ನಿಮಗೆ ನೆನಪಿರಲಿ. (ಮತ್ತಾಯ 22:37) ನೀವು ಯೆಹೋವನ ವಾಕ್ಯದ ನಿಮ್ಮ ಸ್ವಂತ ಅಧ್ಯಯನದ ಮೂಲಕ ಆತನನ್ನು ವೈಯಕ್ತಿಕವಾಗಿ ತಿಳಿದುಕೊಂಡಿದ್ದೀರೊ? ಅಂತಹ ಕಲಿಕೆಯ ಸರಿಯಾದ ಫಲಿತಾಂಶವೇನೆಂದರೆ, ಅದರಿಂದಾಗಿ ನಮ್ಮಲ್ಲಿ ಯೆಹೋವನಿಗಾಗಿ ಪ್ರೀತಿಯ ಭಾವನೆಯು ಹುಟ್ಟುತ್ತದೆ. ಆ ಪ್ರೀತಿಯನ್ನು ವ್ಯಕ್ತಪಡಿಸುವ ಸ್ವಾಭಾವಿಕ ವಿಧವು ಆತನನ್ನು ಸ್ತುತಿಸುವ ಮೂಲಕವೇ. ನಿಮ್ಮ ಪ್ರಚೋದನೆಯು ಯಾವಾಗ ಸ್ಪಷ್ಟವಾದದ್ದೂ ಬಲವಾದದ್ದೂ ಆಗಿರುವುದೊ ಆಗ ನೀವು ಉತ್ಸುಕತೆಯಿಂದ ಯೆಹೋವನನ್ನು ಸ್ತುತಿಸಲು ಸಿದ್ಧರಾಗಿರುತ್ತೀರಿ.

16, 17. ಯೆಹೋವನನ್ನು ಸ್ತುತಿಸುವುದರಲ್ಲಿ ನಡತೆಯು ಯಾವ ಪಾತ್ರ ವಹಿಸುತ್ತದೆ? ದೃಷ್ಟಾಂತಿಸಿ.

16 ಈಗ, ನೀವು ಏನು ಹೇಳುವಿರಿ ಎಂಬುದನ್ನೂ ಪರಿಗಣಿಸುವ ಮೊದಲು ನೀವು ಹೇಗೆ ವರ್ತಿಸುವಿರಿ ಎಂಬುದನ್ನು ಪರಿಗಣಿಸಿರಿ. ಎಲೀಷನ ದಿನಗಳಲ್ಲಿದ್ದ ಆ ಇಸ್ರಾಯೇಲ್ಯ ಹುಡುಗಿ ಒರಟು ಸ್ವಭಾವದವಳು, ಅಗೌರವ ತೋರಿಸುವವಳೂ, ಅಪ್ರಾಮಾಣಿಕಳೂ ಆಗಿರುತ್ತಿದ್ದಲ್ಲಿ, ಆಕೆಯನ್ನು ಬಂಧಿಸಿದ್ದ ಸಿರಿಯದವರು ಯೆಹೋವನ ಪ್ರವಾದಿಯ ಬಗ್ಗೆ ಆಕೆ ಹೇಳಿದ ಮಾತುಗಳಿಗೆ ಕಿವಿಗೊಡುತ್ತಿದ್ದರೆಂದು ನೀವು ನೆನಸುತ್ತೀರೊ? ಪ್ರಾಯಶಃ ಕಿವಿಗೊಡುತ್ತಿರಲಿಲ್ಲ. ತದ್ರೀತಿಯಲ್ಲಿಯೇ, ನೀವು ಗೌರವ ತೋರಿಸುವವರೂ, ಪ್ರಾಮಾಣಿಕರೂ, ಸದ್ವರ್ತನೆಯವರೂ ಆಗಿರುವುದನ್ನು ಜನರು ನೋಡುವಾಗ, ಆಗ ಅವರು ನಿಮಗೆ ಕಿವಿಗೊಡುವರು ಎಂಬುದು ಹೆಚ್ಚು ಸಂಭವನೀಯ. (ರೋಮಾಪುರ 2:21) ಒಂದು ಉದಾಹರಣೆಯನ್ನು ಪರಿಗಣಿಸಿರಿ.

17 ಪೋರ್ಚುಗಲ್‌ನಲ್ಲಿ, 11 ವರ್ಷ ಪ್ರಾಯದ ಹುಡುಗಿಯೊಬ್ಬಳು, ಅವಳ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯನ್ನು ಕೆಡಿಸುವಂತಹ ಹಬ್ಬಗಳನ್ನು ಆಚರಿಸುವಂತೆ ಶಾಲೆಯಲ್ಲಿ ಒತ್ತಡಕ್ಕೊಳಗಾದಳು. ತಾನು ಅವುಗಳನ್ನು ಆಚರಿಸದಿರುವುದು ಏಕೆಂದು ಅವಳು ತನ್ನ ಉಪಾಧ್ಯಾಯಿನಿಗೆ ಗೌರವಪೂರ್ವಕವಾಗಿ ವಿವರಿಸಿದಳು. ಆದರೆ ಆ ಉಪಾಧ್ಯಾಯಿನಿ ಅವಳನ್ನು ಅಪಹಾಸ್ಯಮಾಡಿದರು. ಸಮಯ ದಾಟಿದಂತೆ, ಆ ಉಪಾಧ್ಯಾಯಿನಿ, ಅವಳ ಧರ್ಮದ ವಿಷಯದಲ್ಲಿ ಗೇಲಿಮಾಡುತ್ತ ಅವಳನ್ನು ಅವಮಾನಿಸಲು ಪದೇ ಪದೇ ಪ್ರಯತ್ನಿಸಿದರು. ಆದರೂ ಆ ಚಿಕ್ಕ ಹುಡುಗಿ ಗೌರವಪೂರ್ವಕವಾಗಿ ನಡೆದುಕೊಳ್ಳುತ್ತಾ ಇದ್ದಳು. ವರುಷಗಳು ದಾಟಿದ ಮೇಲೆ, ಆ ಎಳೆಯ ಸಹೋದರಿ ರೆಗ್ಯುಲರ್‌ ಪಯನೀಯರ್‌ ಎಂದು ಕರೆಯಲ್ಪಡುವ ಪೂರ್ಣ ಸಮಯದ ಶುಶ್ರೂಷಕಿಯಾಗಿ ಸೇವೆಮಾಡುತ್ತಿದ್ದಳು. ಒಂದು ಅಧಿವೇಶನದಲ್ಲಿ, ಅವಳು ದೀಕ್ಷಾಸ್ನಾನ ಹೊಂದುತ್ತಿದ್ದವರನ್ನು ನೋಡುತ್ತಾ ಇದ್ದಾಗ, ಅವರಲ್ಲೊಬ್ಬರ ಗುರುತು ಹಿಡಿದಳು. ಅದು ಅವಳ ಹಿಂದಿನ ಉಪಾಧ್ಯಾಯಿನಿ ಆಗಿದ್ದರು! ಆನಂದಬಾಷ್ಪದಿಂದ ತಬ್ಬಿಕೊಂಡ ಬಳಿಕ, ಆ ಹಿರಿಯ ಮಹಿಳೆಯು ಈ ಯುವ ಸಹೋದರಿಗೆ, ಅವಳ ಗೌರವಪೂರ್ಣ ನಡತೆಯನ್ನು ತನಗೆ ಮರೆಯಲು ಸಾಧ್ಯವೇ ಆಗಲಿಲ್ಲವೆಂದು ಹೇಳಿದರು. ಸಾಕ್ಷಿಯೊಬ್ಬಳು ಅವರನ್ನು ಸಂದರ್ಶಿಸಿದಾಗ, ತನ್ನ ಮಾಜಿ ವಿದ್ಯಾರ್ಥಿನಿಯ ನಡತೆಯ ಕುರಿತು ಅವರು ಮಾತಾಡಿದ್ದರು. ಒಂದು ಬೈಬಲ್‌ ಅಧ್ಯಯನವನ್ನು ಪ್ರಾರಂಭಿಸಲಾಯಿತು ಮತ್ತು ಆ ಉಪಾಧ್ಯಾಯಿನಿ ಬೈಬಲ್‌ ಸತ್ಯವನ್ನು ಸ್ವೀಕರಿಸಿದರು. ಹೌದು, ನಿಮ್ಮ ನಡತೆ ಯೆಹೋವನನ್ನು ಸ್ತುತಿಸುವ ಒಂದು ಅತಿ ಪ್ರಭಾವಶಾಲಿ ವಿಧಾನವಾಗಿರಬಲ್ಲದು!

18. ಬೈಬಲು ಮತ್ತು ಯೆಹೋವ ದೇವರ ಬಗ್ಗೆ ಸಂಭಾಷಣೆ ಆರಂಭಿಸಲು ಒಬ್ಬ ಎಳೆಯ ವ್ಯಕ್ತಿ ಹಿಂಜರಿಯುವುದಾದರೆ, ಅವನು ಏನು ಮಾಡಬಹುದು?

18 ಶಾಲೆಯಲ್ಲಿ ನಿಮ್ಮ ನಂಬಿಕೆಯ ಕುರಿತು ಮಾತಾಡಲಾರಂಭಿಸುವುದು ನಿಮಗೆ ಕೆಲವು ಬಾರಿ ಕಷ್ಟಕರವೆನಿಸುತ್ತದೊ? ಅಂತಹ ಅನಿಸಿಕೆ ಇರುವವರು ನೀವು ಮಾತ್ರವೇ ಅಲ್ಲ. ಆದರೂ, ಇತರರು ನಿಮ್ಮ ನಂಬಿಕೆಯ ಕುರಿತು ಕೇಳುವಂಥ ರೀತಿಯಲ್ಲಿ ನೀವು ಸನ್ನಿವೇಶವನ್ನು ಏರ್ಪಡಿಸಬಹುದು. ದೃಷ್ಟಾಂತಕ್ಕೆ, ಕಾನೂನುಸಮ್ಮತವಾಗಿರುವಲ್ಲಿ ಮತ್ತು ಅನುಮತಿಯಿರುವಲ್ಲಿ, ಬೈಬಲಾಧಾರಿತ ಸಾಹಿತ್ಯಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ, ಊಟದ ಸಮಯದಲ್ಲಿಯೊ ಅನುಮತಿ ಇರುವ ಇತರ ಸಮಯಗಳಲ್ಲಿಯೊ ಏಕೆ ಓದಬಾರದು? ನೀವು ಏನು ಓದುತ್ತಿದ್ದೀರಿ ಎಂದು ನಿಮ್ಮ ಜೊತೆವಿದ್ಯಾರ್ಥಿಗಳು ಕೇಳಬಹುದು. ಆಗ ನೀವು ಉತ್ತರಕೊಡುತ್ತ, ನೀವು ಓದುವ ಆ ಲೇಖನದಲ್ಲಿ ಅಥವಾ ಪುಸ್ತಕದಲ್ಲಿ ನಿಮಗೇನು ಆಸಕ್ತಿಕರವಾಗಿ ಕಂಡಿತು ಎಂಬುದನ್ನು ತಿಳಿಸುವಲ್ಲಿ, ಒಂದು ಉತ್ತಮ ಸಂಭಾಷಣೆಯು ಕೂಡಲೇ ಶುರುವಾಗುತ್ತದೆಂದು ನೀವು ಕಂಡುಕೊಳ್ಳಬಹುದು. ಪ್ರಶ್ನೆಗಳನ್ನು ಕೇಳಲು ಮರೆಯದಿರಿ, ಆಗ ನಿಮ್ಮ ಜೊತೆವಿದ್ಯಾರ್ಥಿಯು ಏನು ನಂಬುತ್ತಾರೆಂದು ನಿಮಗೆ ತಿಳಿದುಬರುವುದು. ನೀವು ಬೈಬಲಿನಿಂದ ಕಲಿತಿರುವ ವಿಷಯಗಳನ್ನು ಹಂಚಿಕೊಳ್ಳುತ್ತಿರುವಾಗ, ಅವರು ಹೇಳುವ ಮಾತಿಗೂ ಗೌರವಪೂರ್ವಕವಾಗಿ ಕಿವಿಗೊಡಿರಿ. ಪುಟ 29ರಲ್ಲಿರುವ ಅನುಭವಗಳು ತೋರಿಸುವಂತೆ, ಅನೇಕ ಮಂದಿ ಎಳೆಯರು ಶಾಲೆಯಲ್ಲಿ ದೇವರನ್ನು ಸ್ತುತಿಸುತ್ತಿದ್ದಾರೆ. ಇದು ಅವರಿಗೆ ಮಹಾ ಸಂತೋಷವನ್ನು ತರುತ್ತದೆ ಮತ್ತು ಅನೇಕರು ಯೆಹೋವನ ಜ್ಞಾನವನ್ನು ಪಡೆಯುವಂತೆ ಸಹಾಯಮಾಡುತ್ತದೆ.

19. ಮನೆಮನೆಯ ಶುಶ್ರೂಷೆಯಲ್ಲಿ ಎಳೆಯರು ಹೇಗೆ ಹೆಚ್ಚು ಪರಿಣಾಮಕಾರಿ ಆಗಬಲ್ಲರು?

19 ಯೆಹೋವನನ್ನು ಸ್ತುತಿಸಲು ಅತಿ ಪರಿಣಾಮಕಾರಿಯಾದ ಒಂದು ಮಾರ್ಗವು ಮನೆಮನೆಯ ಶುಶ್ರೂಷೆಯಾಗಿದೆ. ನೀವು ಇದುವರೆಗೆ ಅದರಲ್ಲಿ ಭಾಗವಹಿಸಿಲ್ಲವಾದರೆ, ಅದನ್ನು ಒಂದು ಗುರಿಯಾಗಿ ಏಕೆ ಇಡಬಾರದು? ಆದರೆ ನೀವು ಈಗಾಗಲೇ ಅದರಲ್ಲಿ ಭಾಗವಹಿಸುತ್ತಿರುವಲ್ಲಿ, ನೀವು ಇಟ್ಟುಕೊಳ್ಳಬಹುದಾದ ಇನ್ನೂ ಕೆಲವು ಗುರಿಗಳಿವೆಯೊ? ಉದಾಹರಣೆಗೆ, ಪ್ರತಿಯೊಂದು ಮನೆಯಲ್ಲಿ ನೀವು ಹೆಚ್ಚುಕಡಮೆ ಒಂದೇ ವಿಷಯವನ್ನು ಮಾತಾಡುತ್ತಿರುವಲ್ಲಿ, ಅದನ್ನು ಉತ್ತಮಗೊಳಿಸುವ ಮಾರ್ಗಗಳಿಗಾಗಿ ಹುಡುಕುತ್ತಾ ನಿಮ್ಮ ಹೆತ್ತವರನ್ನೊ ಬೇರೆ ಅನುಭವಸ್ಥರನ್ನೊ ಕೇಳಿರಿ. ಬೈಬಲನ್ನು ಹೇಗೆ ಹೆಚ್ಚೆಚ್ಚು ಉಪಯೋಗಿಸುವುದು, ಕಾರ್ಯಸಾಧಕ ಪುನರ್ಭೇಟಿಗಳನ್ನು ಹೇಗೆ ಮಾಡುವುದು ಮತ್ತು ಒಂದು ಬೈಬಲ್‌ ಅಧ್ಯಯನವನ್ನು ಹೇಗೆ ಆರಂಭಿಸುವುದು ಎಂಬುದನ್ನು ಕಲಿಯಿರಿ. (1 ತಿಮೊಥೆಯ 4:15) ನೀವು ಯೆಹೋವನನ್ನು ಇಂತಹ ವಿಧಗಳಲ್ಲಿ ಎಷ್ಟು ಹೆಚ್ಚಾಗಿ ಸ್ತುತಿಸುತ್ತೀರೊ, ನೀವು ಅಷ್ಟು ಹೆಚ್ಚು ಪರಿಣಾಮಕಾರಿಯಾಗುವಿರಿ ಮಾತ್ರವಲ್ಲ, ನಿಮ್ಮ ಶುಶ್ರೂಷೆಯಲ್ಲಿಯೂ ನೀವು ಹೆಚ್ಚು ಆನಂದಪಡುವಿರಿ.

ನೀವು ಯೆಹೋವನನ್ನು ಸ್ತುತಿಸಲು ಯಾವಾಗ ಆರಂಭಿಸಬೇಕು?

20. ಯೆಹೋವನನ್ನು ಸ್ತುತಿಸಲು ಎಳೆಯರು ತಾವು ಇನ್ನೂ ತೀರ ಚಿಕ್ಕವರೆಂದು ಎಣಿಸಬೇಕಾಗಿಲ್ಲವೇಕೆ?

20 ಈ ಚರ್ಚೆಯಲ್ಲಿದ್ದ ಮೂರು ಪ್ರಶ್ನೆಗಳಲ್ಲಿ, ಈ ಕೊನೆಯ ಪ್ರಶ್ನೆಗಿರುವ ಉತ್ತರವೇ ತೀರ ಸುಲಭವಾದದ್ದು. ಬೈಬಲಿನ ನೇರವಾದ ಉತ್ತರವನ್ನು ಗಮನಿಸಿ: “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.” (ಪ್ರಸಂಗಿ 12:⁠1) ಹೌದು, ಯೆಹೋವನನ್ನು ಸ್ತುತಿಸಲು ಪ್ರಾರಂಭಿಸಬೇಕಾದ ಸಮಯ ಈಗಲೇ. “ಯೆಹೋವನನ್ನು ಸ್ತುತಿಸಲು ನಾನು ಇನ್ನೂ ತೀರ ಚಿಕ್ಕವನು. ನನಗೆ ಅನುಭವ ಇಲ್ಲ, ಆದ್ದರಿಂದ ಇನ್ನೂ ಸ್ವಲ್ಪ ದೊಡ್ಡವನಾಗುವ ತನಕ ಕಾಯಬೇಕು,” ಎಂದು ಹೇಳುವುದು ತೀರ ಸುಲಭ. ಆದರೆ ಹಾಗೆ ಅನಿಸಿರುವವರಲ್ಲಿ ನೀವು ಮೊದಲಿಗರಲ್ಲ. ಉದಾಹರಣೆಗೆ, ಯುವ ಯೆರೆಮೀಯನು ಯೆಹೋವನಿಗೆ ಹೇಳಿದ್ದು: “ಅಯ್ಯೋ, ಕರ್ತನಾದ ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು.” ಆಗ ಯೆಹೋವನು, ಅವನು ಭಯಪಡಲು ಯಾವುದೇ ಕಾರಣವಿಲ್ಲವೆಂದು ಅವನಿಗೆ ಪುನರಾಶ್ವಾಸನೆ ಕೊಟ್ಟನು. (ಯೆರೆಮೀಯ 1:​6, 7) ಅದೇ ರೀತಿ, ನಾವು ಯೆಹೋವನನ್ನು ಸ್ತುತಿಸುವಾಗ ಭಯಪಡಲು ಯಾವ ಕಾರಣವೂ ಇಲ್ಲ. ಏಕೆಂದರೆ ನಮ್ಮ ಮೇಲೆ ಯಾವುದೇ ರೀತಿಯ ಹಾನಿ ಬಂದರೂ, ಅದು ಯೆಹೋವನು ಸಂಪೂರ್ಣವಾಗಿ ತೊಡೆದುಹಾಕಲು ಶಕ್ತನಾಗಿರದಂಥದ್ದು ಆಗಿರುವುದಿಲ್ಲ.​—⁠ಕೀರ್ತನೆ 118:⁠6.

21, 22. ಯೆಹೋವನ ಯುವ ಸ್ತುತಿಗಾರರನ್ನು ಇಬ್ಬನಿಗೆ ಹೋಲಿಸಿರುವುದೇಕೆ, ಮತ್ತು ಆ ತುಲನೆ ಪ್ರೋತ್ಸಾಹನೀಯವೇಕೆ?

21 ಈ ಕಾರಣ, ನಾವು ಎಳೆಯರಾದ ನಿಮ್ಮನ್ನು ಹೀಗೆ ಪ್ರೋತ್ಸಾಹಿಸುತ್ತೇವೆ: ಯೆಹೋವನನ್ನು ಸ್ತುತಿಸುವ ವಿಷಯದಲ್ಲಿ ಹಿಂಜರಿಯಬೇಡಿ! ಭೂಮಿಯಲ್ಲಿ ಈಗ ಮಾಡಲಾಗುತ್ತಿರುವ ಅತಿ ಪ್ರಾಮುಖ್ಯವಾದ ಕೆಲಸದಲ್ಲಿ ಸೇರಲು ನಿಮಗಿರುವ ಅತ್ಯುತ್ತಮ ಸಮಯವು ನೀವು ಇನ್ನೂ ಎಳೆಯರಾಗಿರುವಾಗಲೇ ಆಗಿದೆ. ನೀವು ಹಾಗೆ ಸೇರುವಾಗ, ಯೆಹೋವನನ್ನು ಸ್ತುತಿಸುವ ಆಶ್ಚರ್ಯಕರವಾದ ಒಂದು ವಿಶ್ವ ಕುಟುಂಬದ ಭಾಗವಾಗುತ್ತೀರಿ. ನೀವೂ ಈ ಕುಟುಂಬದಲ್ಲಿ ಸೇರಿರುವುದು ಯೆಹೋವನಿಗೆ ಹರ್ಷವನ್ನು ತರುತ್ತದೆ. ಕೀರ್ತನೆಗಾರನು ಯೆಹೋವನಿಗೆ ಸಂಬೋಧಿಸಿದ ಈ ಮಾತುಗಳನ್ನು ಗಮನಿಸಿರಿ: “ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಪರಿಶುದ್ಧವಸ್ತ್ರಭೂಷಿತರಾದ ನಿನ್ನ ಯುವಕಸೈನಿಕರು ಉದಯಕಾಲದ ಇಬ್ಬನಿಯಂತಿರುವರು.”​—⁠ಕೀರ್ತನೆ 110:⁠3.

22 ಮುಂಜಾನೆಯ ಬೆಳಕಿನಲ್ಲಿ ಥಳಥಳಿಸಿ ಮಿನುಗುವ ಇಬ್ಬನಿಗಳು ನೋಡಲೆಷ್ಟು ಚೆಂದ ಅಲ್ಲವೆ? ಅವು ಚೈತನ್ಯದಾಯಕವೂ, ಮಿರುಗುವಂತಹವುಗಳೂ, ಅಸಂಖ್ಯಾತವೂ ಆಗಿವೆ. ಈ ಕಠಿನ ದಿನಗಳಲ್ಲಿ ನಂಬಿಗಸ್ತರಾಗಿ ಯೆಹೋವನನ್ನು ಸ್ತುತಿಸುತ್ತಿರುವ ಎಳೆಯರಾದ ನಿಮ್ಮನ್ನು ಯೆಹೋವನು ಹಾಗೆಯೇ ವೀಕ್ಷಿಸುತ್ತಾನೆ. ಯೆಹೋವನನ್ನು ಸ್ತುತಿಸಲು ನೀವು ಮಾಡಿರುವ ಆಯ್ಕೆ ಆತನ ಹೃದಯವನ್ನು ಹರ್ಷಪಡಿಸುತ್ತದೆಂಬುದು ಸ್ಪಷ್ಟ. (ಜ್ಞಾನೋಕ್ತಿ 27:11) ಆದುದರಿಂದ, ಎಳೆಯರೇ, ಅವಶ್ಯವಾಗಿ ಯೆಹೋವನನ್ನು ಸ್ತುತಿಸಿರಿ!

ನೀವು ಹೇಗೆ ಉತ್ತರ ಕೊಡುವಿರಿ?

• ಯೆಹೋವನನ್ನು ಸೇವಿಸಲಿಕ್ಕಾಗಿರುವ ಕೆಲವು ಪ್ರಮುಖ ಕಾರಣಗಳಾವುವು?

• ಯೆಹೋವನನ್ನು ಸ್ತುತಿಸುವುದರಲ್ಲಿ ಎಳೆಯರು ತುಂಬ ಪರಿಣಾಮಕಾರಿ ಆಗಿರಬಲ್ಲರೆಂದು ಯಾವ ಬೈಬಲ್‌ ಮಾದರಿಗಳು ತೋರಿಸುತ್ತವೆ?

• ಎಳೆಯರು ಇಂದು ಯೆಹೋವನನ್ನು ಹೇಗೆ ಸ್ತುತಿಸಬಲ್ಲರು?

• ಎಳೆಯರು ಯಾವಾಗ ಯೆಹೋವನನ್ನು ಸ್ತುತಿಸಲು ಆರಂಭಿಸಬೇಕು, ಮತ್ತು ಏಕೆ?

[ಪುಟ 25ರಲ್ಲಿರುವ ಚಿತ್ರಗಳು]

ನಿಮ್ಮ ಮಿತ್ರರೊಬ್ಬರಲ್ಲಿ ಗಮನಾರ್ಹವಾದ ಕೌಶಲವಿರುವಲ್ಲಿ, ಅದನ್ನು ನೀವು ಇತರರಿಗೆ ತಿಳಿಸುವುದಿಲ್ಲವೆ?

[ಪುಟ 27ರಲ್ಲಿರುವ ಚಿತ್ರ]

ಜೊತೆವಿದ್ಯಾರ್ಥಿಗಳಿಗೆ ನಿಮ್ಮ ನಂಬಿಕೆಯಲ್ಲಿ ಆಸಕ್ತಿಯಿರಬಹುದು

[ಪುಟ 28ರಲ್ಲಿರುವ ಚಿತ್ರ]

ನಿಮ್ಮ ಶುಶ್ರೂಷೆಯನ್ನು ಉತ್ತಮಗೊಳಿಸಲು ಬಯಸುವಲ್ಲಿ, ಸಲಹೆಗಾಗಿ ಹೆಚ್ಚು ಅನುಭವಿಯಾದ ಸಾಕ್ಷಿಯನ್ನು ಕೇಳಿರಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ