ಮರಣಾನಂತರದ ಜೀವನ—ಹೇಗೆ, ಎಲ್ಲಿ, ಯಾವಾಗ?
ಮನುಷ್ಯನ ಸೃಷ್ಟಿಕರ್ತನೂ ಜೀವದಾತನೂ ಆಗಿರುವಾತನು, ಮಾನವ ಮರಣವು ಜೀವಿತವನ್ನು ಸದಾ ಕಾಲಕ್ಕೂ ಅಗತ್ಯವಾಗಿ ಕೊನೆಗೊಳಿಸುವುದಿಲ್ಲ ಎಂಬ ತನ್ನ ವೈಯಕ್ತಿಕ ಖಾತ್ರಿಯನ್ನು ಕೊಡುತ್ತಾನೆ. ಇದಲ್ಲದೆ, ಇನ್ನೂ ಪರಿಮಿತವಾದ ಜೀವನಾಯುಷ್ಯದ ವರೆಗೆ ಪುನಃ ಜೀವಿಸುವ ಸಾಧ್ಯತೆಯಿದೆ ಮಾತ್ರವಲ್ಲ, ಮರಣವನ್ನು ಪುನಃ ಎಂದಿಗೂ ಎದುರಿಸದ ಪ್ರತೀಕ್ಷೆಯೊಂದಿಗೆ ಜೀವಿಸುವ ಸಾಧ್ಯತೆಯೂ ಇದೆ ಎಂಬ ಆಶ್ವಾಸನೆಯನ್ನು ದೇವರು ನಮಗೆ ಕೊಡುತ್ತಾನೆ! ಅಪೊಸ್ತಲ ಪೌಲನು ಇದನ್ನು ಸರಳವಾಗಿ, ಆದರೂ ದೃಢಭರವಸೆಯಿಂದ ಹೀಗೆ ಹೇಳಿದನು: “ತಾನು ಅವನನ್ನು [ಯೇಸು ಕ್ರಿಸ್ತ] ಸತ್ತವರೊಳಗಿಂದ ಪುನರುತ್ಥಾನಗೊಳಿಸಿದ್ದೇನೆಂಬುದರಲ್ಲಿ, ಆತನು [ದೇವರು] ಎಲ್ಲಾ ಜನರಿಗೆ ಒಂದು ಖಾತ್ರಿಯನ್ನು ಒದಗಿಸಿದ್ದಾನೆ.” (ಓರೆಅಕ್ಷರಗಳು ನಮ್ಮವು.)—ಅ. ಕೃತ್ಯಗಳು 17:31, NW.
ನಿಶ್ಚಯವಾಗಿಯೂ, ಇದು ಇನ್ನೂ ಮೂರು ಮೂಲಭೂತ ಪ್ರಶ್ನೆಗಳನ್ನು ಉತ್ತರಿಸದೇ ಬಿಡುತ್ತದೆ: ಒಬ್ಬ ಮೃತ ವ್ಯಕ್ತಿಯು ಪುನಃ ಜೀವಿತಕ್ಕೆ ಹೇಗೆ ಹಿಂದಿರುಗಸಾಧ್ಯವಿದೆ? ಇದು ಯಾವಾಗ ಸಂಭವಿಸುವುದು? ಆ ಹೊಸ ಜೀವನವು ಎಲ್ಲಿ ಅಸ್ತಿತ್ವಕ್ಕೆ ಬರುತ್ತದೆ? ಲೋಕದಾದ್ಯಂತವಾಗಿ, ಈ ಪ್ರಶ್ನೆಗಳಿಗೆ ಬೇರೆ ಬೇರೆ ರೀತಿಯ ಉತ್ತರಗಳು ಕೊಡಲ್ಪಟ್ಟಿವೆ, ಆದರೆ ಈ ವಿಷಯದ ಕುರಿತಾದ ಸತ್ಯವನ್ನು ನಿಷ್ಕರ್ಷಿಸಲಿಕ್ಕಾಗಿರುವ ಒಂದು ಅತ್ಯಾವಶ್ಯಕವಾದ ಕೀಲಿ ಕೈಯು, ಮಾನವರ ಮರಣದ ಸಮಯದಲ್ಲಿ ಅವರಿಗೆ ಏನು ಸಂಭವಿಸುತ್ತದೆ ಎಂಬುದನ್ನು ನಿಷ್ಕೃಷ್ಟವಾಗಿ ಅರ್ಥಮಾಡಿಕೊಳ್ಳುವುದೇ ಆಗಿದೆ.
ಅಮರತ್ವವು ಉತ್ತರವಾಗಿದೆಯೊ?
ಎಲ್ಲಾ ಮಾನವರ ಒಂದು ಭಾಗವು ಅಮರವಾಗಿದೆ ಮತ್ತು ಅವರ ಶರೀರಗಳು ಮಾತ್ರವೇ ಸಾಯುತ್ತವೆ ಎಂಬುದು ಬಹಳ ಪ್ರಚಲಿತವಾಗಿರುವ ಒಂದು ನಂಬಿಕೆಯಾಗಿದೆ. ಅಂತಹ ಒಂದು ಪ್ರತಿಪಾದನೆಯನ್ನು ನೀವು ನಿಶ್ಚಯವಾಗಿಯೂ ಕೇಳಿದ್ದೀರಿ. ಅಮರವಾದದ್ದೆಂದು ಪ್ರತಿಪಾದಿಸಲ್ಪಟ್ಟಿರುವ ಈ ಭಾಗವು, “ಪ್ರಾಣ” ಅಥವಾ “ಆತ್ಮ”ದೋಪಾದಿ ಹಲವಾರು ರೀತಿಗಳಲ್ಲಿ ನಿರ್ದೇಶಿಸಲ್ಪಟ್ಟಿದೆ. ಅದು ದೇಹದ ಮರಣದಿಂದ ಬದುಕಿ ಉಳಿದು, ಬೇರೆಲ್ಲಿಯಾದರೂ ಜೀವಿಸುವುದನ್ನು ಮುಂದುವರಿಸುತ್ತದೆಂದು ಹೇಳಲಾಗುತ್ತದೆ. ಸ್ಪಷ್ಟವಾಗಿ, ಅಂತಹ ಒಂದು ನಂಬಿಕೆಯು ಬೈಬಲಿನಲ್ಲಿ ಆರಂಭವಾಗಲಿಲ್ಲ. ಪುರಾತನ ಹೀಬ್ರು ಬೈಬಲ್ ವ್ಯಕ್ತಿಗಳು ಮರಣಾನಂತರದ ಜೀವನಕ್ಕಾಗಿ ಮುನ್ನೋಡಿದರೆಂಬುದು ಸತ್ಯವಾಗಿದೆಯಾದರೂ, ಅದು ತಮ್ಮ ಯಾವುದೋ ಅಮರ ಭಾಗದ ಬದುಕಿ ಉಳಿಯುವಿಕೆಯ ಮೂಲಕವಾಗಿ ಅಲ್ಲ. ಒಂದು ಪುನರುತ್ಥಾನದ ಅದ್ಭುತದ ಮೂಲಕ, ಭೂಮಿಯ ಮೇಲಿನ ಜೀವಿತಕ್ಕೆ ಭವಿಷ್ಯತ್ತಿನ ಹಿಂದಿರುಗುವಿಕೆಗಾಗಿ ಅವರು ದೃಢಭರವಸೆಯಿಂದ ಮುನ್ನೋಡಿದರು.
ಮೂಲಪಿತೃವಾದ ಅಬ್ರಹಾಮನು, ಮೃತರ ಕುರಿತಾದ ಭವಿಷ್ಯತ್ತಿನ ಪುನರುತ್ಥಾನವೊಂದರಲ್ಲಿ ನಂಬಿಕೆಯಿದ್ದಂತಹ ವ್ಯಕ್ತಿಯ ಒಂದು ಪ್ರಧಾನ ಉದಾಹರಣೆಯಾಗಿದ್ದಾನೆ. ತನ್ನ ಮಗನಾದ ಇಸಾಕನನ್ನು ಯಜ್ಞವಾಗಿ ಸಮರ್ಪಿಸಲಿಕ್ಕಾಗಿರುವ ಅಬ್ರಹಾಮನ ಸಿದ್ಧಮನಸ್ಕತೆಯನ್ನು ವರ್ಣಿಸುತ್ತಾ, ಇಬ್ರಿಯ 11:17-19 ನಮಗೆ ಹೀಗನ್ನುತ್ತದೆ: “ಅಬ್ರಹಾಮನು ಪರಿಶೋಧಿತನಾಗಿ ನಂಬಿಕೆಯಿಂದಲೇ ಇಸಾಕನನ್ನು ಸಮರ್ಪಿಸಿದನು. . . . ತನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸಲು ಸಮರ್ಥನಾಗಿದ್ದಾನೆಂದು ತಿಳುಕೊಂಡನು. ಮತ್ತು ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಹೊಂದಿದನು,” ಏಕೆಂದರೆ ಇಸಾಕನು ಯಜ್ಞವಾಗಿ ಸಮರ್ಪಿಸಲ್ಪಡಬೇಕೆಂಬುದನ್ನು ದೇವರು ಅಗತ್ಯಪಡಿಸಲಿಲ್ಲ. ತದನಂತರದ ಒಂದು ಸಮಯದಲ್ಲಿ (ಒಂದು ಆತ್ಮ ಕ್ಷೇತ್ರದಲ್ಲಿ ಜೀವನದ ತತ್ಕ್ಷಣದ ಮುಂದುವರಿಸುವಿಕೆಯನ್ನು ಪಡೆದುಕೊಳ್ಳುವುದಕ್ಕೆ ಬದಲಾಗಿ) ತಾವು ಪುನಃ ಜೀವಿತಕ್ಕೆ ಹಿಂದಿರುಗುವೆವು ಎಂಬ, ಇಸ್ರಾಯೇಲ್ಯರ ಮಧ್ಯೆಯಿದ್ದ ಆರಂಭದ ನಂಬಿಕೆಗೆ ಇನ್ನೂ ಹೆಚ್ಚಿನ ಸಾಕ್ಷ್ಯ ನೀಡುತ್ತಾ, ಪ್ರವಾದಿಯಾದ ಹೋಶೇಯನು ಬರೆದುದು: “ನಾನು ಅವರನ್ನು ಶಿಯೋಲ್ [ಮಾನವಕುಲದ ಸಾಮಾನ್ಯ ಸಮಾಧಿ]ನ ಕೈಯಿಂದ ವಿಮೋಚಿಸುವೆನು; ನಾನು ಅವರನ್ನು ಮರಣದಿಂದ ಉದ್ಧರಿಸುವೆನು.”—ಹೋಶೇಯ 13:14, NW.
ಹಾಗಾದರೆ ಅಂತರ್ಗತ ಮಾನವ ಅಮರತ್ವದ ಈ ಕಲ್ಪನೆಯು, ಯೆಹೂದಿ ಆಲೋಚನೆ ಮತ್ತು ನಂಬಿಕೆಯೊಳಗೆ ಯಾವಾಗ ಪ್ರವೇಶಮಾಡಿತು? ಎನ್ಸೈಕ್ಲೊಪೀಡಿಯ ಜುಡೈಕ ಒಪ್ಪಿಕೊಳ್ಳುವುದೇನಂದರೆ, “ಪ್ರಾಣದ ಅಮರತ್ವದ ಕುರಿತಾದ ಸಿದ್ಧಾಂತವು, ಬಹುಶಃ ಗ್ರೀಕ್ ಪ್ರಭಾವದ ಕೆಳಗೆ ಯೆಹೂದಿಮತದೊಳಗೆ ಪ್ರವೇಶಮಾಡಿತು.” ಆದರೂ, ಕ್ರಿಸ್ತನ ಸಮಯದ ವರೆಗಿನ ಧರ್ಮನಿಷ್ಠ ಯೆಹೂದ್ಯರು, ಭವಿಷ್ಯತ್ತಿನ ಪುನರುತ್ಥಾನದಲ್ಲಿ ಇನ್ನೂ ನಂಬಿಕೆಯನ್ನಿಟ್ಟು, ಅದಕ್ಕಾಗಿ ಮುನ್ನೋಡಿದರು. ಮಾರ್ಥಳ ಸಹೋದರನಾದ ಲಾಜರನ ಮರಣದ ಸಮಯದಲ್ಲಿ, ಯೇಸು ಅವಳೊಂದಿಗೆ ನಡೆಸಿದ ಸಂಭಾಷಣೆಯಿಂದ ನಾವು ಇದನ್ನು ಸ್ಪಷ್ಟವಾಗಿ ಅವಲೋಕಿಸಬಲ್ಲೆವು: “ಮಾರ್ಥಳು ಯೇಸುವಿಗೆ—ಸ್ವಾಮೀ, ನೀನು ಇಲ್ಲಿ ಇರುತ್ತಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ . . . ಎಂದು ಹೇಳಿದಳು. . . . ಯೇಸು ಆಕೆಗೆ—ನಿನ್ನ ತಮ್ಮನು ಎದ್ದುಬರುವನೆಂದು ಹೇಳಿದನು. ಮಾರ್ಥಳು—ಸತ್ತವರಿಗೆ ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದುಬರುವನೆಂದು ನಾನು ಬಲ್ಲೆನು ಅಂದಳು.”—ಯೋಹಾನ 11:21-24.
ಮೃತರ ಸ್ಥಿತಿ
ಇಲ್ಲಿ ಪುನಃ ಆ ವಿಷಯದ ಕುರಿತಾಗಿ ಊಹೆಮಾಡುವ ಅಗತ್ಯವಿಲ್ಲ. ಸರಳವಾದ ಬೈಬಲ್ ಸತ್ಯವೇನೆಂದರೆ, ಮೃತರು “ಗಾಢನಿದ್ರೆ”ಯಲ್ಲಿದ್ದಾರೆ, ಸಂಪೂರ್ಣವಾಗಿ ಭಾವನೆಯಿಲ್ಲದೆ ಅಥವಾ ಜ್ಞಾನವಿಲ್ಲದೆ ಪ್ರಜ್ಞಾಹೀನರಾಗಿದ್ದಾರೆ. ಬೈಬಲಿನಲ್ಲಿ ಅಂತಹ ಸತ್ಯವು ಒಂದು ಜಟಿಲವಾದ, ಅರ್ಥಮಾಡಿಕೊಳ್ಳಲು ಕಷ್ಟಕರವಾದ ಒಂದು ವಿಧಾನದಲ್ಲಿ ಪ್ರಸ್ತುತಪಡಿಸಲ್ಪಟ್ಟಿರುವುದಿಲ್ಲ. ಅರ್ಥಮಾಡಿಕೊಳ್ಳಲು ಸುಲಭವಾಗಿರುವ ಈ ಶಾಸ್ತ್ರವಚನಗಳನ್ನು ಪರಿಗಣಿಸಿರಿ: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; . . . ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು; ನೀನು ಸೇರಬೇಕಾದ ಪಾತಾಳ [“ಶಿಯೋಲ್,” NW]ದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” (ಪ್ರಸಂಗಿ 9:5, 10) “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡಶಕ್ತನಲ್ಲ; ಅವನ ಉಸಿರು ಹೋಗಲು [“ಅವನ ಆತ್ಮವು ಹೊರಕ್ಕೆ ಹೋದಾಗ,” NW] ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.”—ಕೀರ್ತನೆ 146:3, 4.
ಹಾಗಾದರೆ, ಯೇಸು ಕ್ರಿಸ್ತನು, ಮರಣವನ್ನು ಒಂದು ನಿದ್ರೆಯೋಪಾದಿ ಏಕೆ ನಿರ್ದೇಶಿಸಿದನೆಂಬುದು ಗ್ರಾಹ್ಯ. ಯೇಸು ಮತ್ತು ಅವನ ಶಿಷ್ಯರ ನಡುವೆ ನಡೆದ ಒಂದು ಸಂಭಾಷಣೆಯನ್ನು ಅಪೊಸ್ತಲ ಯೋಹಾನನು ಹೀಗೆ ದಾಖಲಿಸುತ್ತಾನೆ: “ಅವರಿಗೆ—ನಮ್ಮ ಮಿತ್ರನಾದ ಲಾಜರನು ನಿದ್ರೆಮಾಡುತ್ತಾನೆ; ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಕ್ಕಾಗಿ ಹೋಗುತ್ತೇನೆ ಎಂದು ಹೇಳಿದನು. ಅದಕ್ಕೆ ಶಿಷ್ಯರು—ಸ್ವಾಮೀ, ಅವನು ನಿದ್ರೆಮಾಡುತ್ತಿದ್ದರೆ ಸ್ವಸ್ಥನಾಗುವನು ಅಂದರು. ಯೇಸು ಅವನ ಮರಣವನ್ನು ಸೂಚಿಸಿ ಅದನ್ನು ಹೇಳಿದ್ದನು; ಆದರೆ ಅವರು ನಿದ್ರೆಯ ವಿಶ್ರಾಂತಿಯನ್ನು ಕುರಿತು ಹೇಳುತ್ತಾನೆಂದು ನೆನಸಿದರು. ಆಗ ಯೇಸು ಸ್ಪಷ್ಟವಾಗಿ ಅವರಿಗೆ—ಲಾಜರನು ಸತ್ತುಹೋದನು . . . ಎಂದು ಹೇಳಿದನು.”—ಯೋಹಾನ 11:11-14.
ಇಡೀ ವ್ಯಕ್ತಿಯು ಸಾಯುತ್ತಾನೆ
ಮಾನವ ಮರಣದ ಪ್ರಕ್ರಿಯೆಯು, ದೇಹದ ಮರಣವನ್ನು ಮಾತ್ರವೇ ಅಲ್ಲ, ಬದಲಾಗಿ ಇಡೀ ವ್ಯಕ್ತಿಯನ್ನು ಒಳಗೊಳ್ಳುತ್ತದೆ. ಸ್ಪಷ್ಟವಾದ ಬೈಬಲ್ ಸಂಬಂಧಿತ ಹೇಳಿಕೆಗಳಿಗನುಸಾರ, ಮನುಷ್ಯನ ದೇಹದ ಮರಣದ ನಂತರ ಬದುಕಿ ಉಳಿಯಸಾಧ್ಯವಿರುವ ಒಂದು ಅಮರ ಪ್ರಾಣವನ್ನು ಅವನು ಪಡೆದುಕೊಂಡಿರುವುದಿಲ್ಲ ಎಂದು ನಾವು ತೀರ್ಮಾನಿಸಬೇಕು. ಒಂದು ಪ್ರಾಣವು ಸಾಯಬಲ್ಲದೆಂಬುದನ್ನು ಶಾಸ್ತ್ರವಚನಗಳು ಸ್ಪಷ್ಟವಾಗಿ ಸೂಚಿಸುತ್ತವೆ. “ಇಗೋ! ಎಲ್ಲಾ ಪ್ರಾಣಗಳು—ಅವುಗಳು ನನಗೆ ಸೇರಿವೆ. ತಂದೆಯ ಪ್ರಾಣದಂತೆಯೇ ಮಗನ ಪ್ರಾಣವೂ ತದ್ರೀತಿಯದ್ದಾಗಿದೆ—ಅವು ನನಗೆ ಸೇರಿವೆ. ಪಾಪಮಾಡುತ್ತಿರುವ ಪ್ರಾಣವು—ಅದು ತಾನೇ ಸಾಯುವುದು.” (ಯೆಹೆಜ್ಕೇಲ 18:4, NW) ಎಲ್ಲಿಯೂ “ಅಮರ” ಅಥವಾ “ಅಮರತ್ವ” ಎಂಬ ಶಬ್ದಗಳು ಮಾನವಕುಲದಲ್ಲಿ ಅಂತರ್ಗತವಾಗಿರುವಂತೆ ಮಾತಾಡಲ್ಪಟ್ಟಿಲ್ಲ.
ಬೈಬಲಿನಲ್ಲಿ “ಪ್ರಾಣ” ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಹೀಬ್ರು ಹಾಗೂ ಗ್ರೀಕ್ ಶಬ್ದಗಳ ಕುರಿತಾಗಿರುವ ಈ ಆಸಕ್ತಿಭರಿತ ಹಿನ್ನೆಲೆಯನ್ನು ನ್ಯೂ ಕ್ಯಾಥೊಲಿಕ್ ಎನ್ಸೈಕ್ಲೊಪೀಡಿಯ ಒದಗಿಸುತ್ತದೆ: “ಓಟಿ [ಓಲ್ಡ್ ಟೆಸ್ಟಮೆಂಟ್]ಯಲ್ಲಿ ಪ್ರಾಣವು ನೆಪೆಸ್ ಆಗಿದೆ, ಎನ್ಟಿ [ನ್ಯೂ ಟೆಸ್ಟಮೆಂಟ್]ಯಲ್ಲಿ [ಸೈಖೆ] ಆಗಿದೆ. . . . ನೆಪೆಸ್ ಉಸಿರಾಡು ಎಂಬರ್ಥಕೊಡಬಹುದಾದ ಆರಂಭದ ಮೂಲದಿಂದ ಬರುತ್ತದೆ, ಮತ್ತು ಹೀಗೆ . . . ಉಸಿರಾಡುವುದು, ಬದುಕಿರುವವರನ್ನು ಮೃತರಿಂದ ಪ್ರತ್ಯೇಕಿಸುವುದರಿಂದ, ನೆಪೆಸ್ ಜೀವ ಅಥವಾ ಸ್ವಯಂ ಅಥವಾ ವೈಯಕ್ತಿಯ ಜೀವವನ್ನೇ ಅರ್ಥೈಸಲಾರಂಭಿಸಿತು. . . . ಓಟಿಯಲ್ಲಿ ದೇಹ ಮತ್ತು ಪ್ರಾಣದ ದ್ವಿಭಾಗ [ಎರಡು ಭಾಗಗಳಾಗಿ ವಿಭಾಗಗೊಂಡಿರುವುದು] ಇಲ್ಲ. ಇಸ್ರಾಯೇಲ್ಯನು ವಿಷಯಗಳನ್ನು ವಾಸ್ತವವಾಗಿ, ಪೂರ್ಣತೆಯಲ್ಲಿ ನೋಡಿದನು, ಮತ್ತು ಹೀಗೆ ಅವನು ಮನುಷ್ಯರನ್ನು ವಿಭಿನ್ನ ಭಾಗಗಳಿಂದ ರಚಿತವಾದವರೋಪಾದಿ ಅಲ್ಲ, ಬದಲಾಗಿ ವ್ಯಕ್ತಿಗಳೋಪಾದಿ ಪರಿಗಣಿಸಿದನು. ನೆಪೆಸ್ ಎಂಬ ಪದವು, ನಮ್ಮ ಪ್ರಾಣ ಎಂಬ ಶಬ್ದದಿಂದ ಭಾಷಾಂತರಿಸಲ್ಪಡುವುದಾದರೂ, ಅದು ದೇಹದಿಂದ ಅಥವಾ ಒಬ್ಬ ವ್ಯಕ್ತಿಯಿಂದ ಪ್ರತ್ಯೇಕಿತವಾಗಿರುವ ಪ್ರಾಣವನ್ನು ಎಂದಿಗೂ ಅರ್ಥೈಸುವುದಿಲ್ಲ. . . . [ಸೈಖೆ] ಎಂಬ ಪದವು ಎನ್ಟಿ ಶಬ್ದವಾಗಿದ್ದು, ನೆಪೆಸ್ನೊಂದಿಗೆ ಹೊಂದಿಕೆಯಲ್ಲಿದೆ. ಇದು ಜೀವದ ಮೂಲವನ್ನು, ಸ್ವತಃ ಜೀವವನ್ನು, ಅಥವಾ ಬದುಕುತ್ತಿರುವ ಜೀವಿಯನ್ನು ಅರ್ಥೈಸಬಲ್ಲದು.”
ಹೀಗೆ ಮರಣದ ಸಮಯದಲ್ಲಿ, ಈ ಹಿಂದೆ ಜೀವಂತನಾಗಿದ್ದ ವ್ಯಕ್ತಿಯು, ಅಥವಾ ಬದುಕುತ್ತಿರುವ ಪ್ರಾಣವು ಅಸ್ತಿತ್ವದಲ್ಲಿಲ್ಲದೇ ಹೋಗುತ್ತದೆ ಎಂಬುದನ್ನು ನೀವು ನೋಡಬಲ್ಲಿರಿ. ದೇಹವು ‘ಮಣ್ಣಿಗೆ’ ಅಥವಾ ಕ್ರಮೇಣವಾದ ಹೂಳುವಿಕೆಯಿಂದಾಗಲಿ ತರುವಾಯದ ಕೊಳೆತ ಅಥವಾ ತ್ವರಿತವಾದ ದಹನಕ್ರಿಯೆಯ ಮೂಲಕವಾಗಲಿ ಭೂಮಿಯ ಘಟಕಾಂಶಗಳಿಗೆ ಹಿಂದಿರುಗುತ್ತದೆ. ಯೆಹೋವನು ಆದಾಮನಿಗೆ ಹೇಳಿದ್ದು: “ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” (ಆದಿಕಾಂಡ 3:19) ಹಾಗಾದರೆ, ಮರಣಾನಂತರದ ಜೀವನವು ಹೇಗೆ ಸಾಧ್ಯವಿದೆ? ಹೇಗೆಂದರೆ ಮೃತಪಟ್ಟಿರುವ ವ್ಯಕ್ತಿಯ ಕುರಿತಾಗಿ ದೇವರಿಗೆ ತನ್ನದೇ ಆದ ಜ್ಞಾಪಕಶಕ್ತಿಯಿದೆ. ಮಾನವರನ್ನು ಸೃಷ್ಟಿಸುವ ಅದ್ಭುತಕರವಾದ ಶಕ್ತಿ ಹಾಗೂ ಸಾಮರ್ಥ್ಯವು ಯೆಹೋವನಿಗಿದೆ, ಆದುದರಿಂದ ಆತನು ತನ್ನ ಜ್ಞಾಪಕಶಕ್ತಿಯಲ್ಲಿ ಆ ವ್ಯಕ್ತಿಯ ಜೀವನ ರೀತಿಯ ಕುರಿತಾದ ಒಂದು ದಾಖಲೆಯನ್ನು ಸಂರಕ್ಷಿಸಿಟ್ಟುಕೊಳ್ಳಬಲ್ಲನೆಂಬ ವಿಷಯವು ನಮಗೆ ಆಶ್ಚರ್ಯಕರವಾಗಿರಬಾರದು. ಹೌದು, ಆ ಒಬ್ಬನು ಪುನಃ ಜೀವಿಸಲು ಬೇಕಾದ ಎಲ್ಲಾ ಪ್ರತೀಕ್ಷೆಗಳು ಪುನಃ ದೇವರ ಮೇಲೆ ಹೊಂದಿಕೊಂಡಿವೆ.
ಅದನ್ನು ಯಾರು ಕೊಟ್ಟನೋ ಆ ಸತ್ಯ ದೇವರ ಬಳಿಗೆ ಹಿಂದಿರುಗುವುದರೋಪಾದಿ ಮಾತಾಡಲ್ಪಟ್ಟಿರುವ “ಆತ್ಮ” ಎಂಬ ಶಬ್ದದ ಅರ್ಥವು ಇದೇ ಆಗಿದೆ. ಈ ಪರಿಣಾಮವನ್ನು ವರ್ಣಿಸುತ್ತಾ, ಪ್ರಸಂಗಿ ಪುಸ್ತಕದ ಪ್ರೇರಿತ ಬರಹಗಾರನು ವಿವರಿಸುವುದು: “ಮಣ್ಣು ಭೂಮಿಗೆ ಸೇರಿ ಇದ್ದ ಹಾಗಾಗುವದು; ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವದು.”—ಪ್ರಸಂಗಿ 12:7.
ದೇವರು ಮಾತ್ರವೇ ಯಾರನ್ನಾದರೂ ಜೀವಿಸುವಂತೆ ಮಾಡಬಲ್ಲಾತನಾಗಿದ್ದಾನೆ. ದೇವರು ಮನುಷ್ಯನನ್ನು ಏದೆನಿನಲ್ಲಿ ಸೃಷ್ಟಿಸಿ, ಆದಾಮನ ಶ್ವಾಸಕೋಶಗಳನ್ನು ಗಾಳಿಯಿಂದ ತುಂಬಿಸಿದ್ದು ಮಾತ್ರವಲ್ಲದೆ, ಅವನ ಮೂಗಿನ ಹೊಳ್ಳೆಗಳೊಳಗೆ “ಜೀವಶ್ವಾಸ”ವನ್ನು ಊದಿದಾಗ, ಯೆಹೋವನು, ಜೀವ-ಶಕ್ತಿಯು ಅವನ ದೇಹದಲ್ಲಿದ್ದ ಎಲ್ಲಾ ಜೀವಕೋಶಗಳನ್ನು ಉಜ್ಜೀವಿಸುವಂತೆ ಮಾಡಿದನು. (ಆದಿಕಾಂಡ 2:7) ಗರ್ಭಧಾರಣೆ ಮತ್ತು ಜನನದ ಪ್ರಕ್ರಿಯೆಯ ಮೂಲಕ, ಹೆತ್ತವರಿಂದ ಮಕ್ಕಳಿಗೆ ಈ ಜೀವ-ಶಕ್ತಿಯು ದಾಟಿಸಲ್ಪಡಸಾಧ್ಯವಿರುವುದರಿಂದ, ಮಾನವ ಜೀವವು ಹೆತ್ತವರಿಂದ ಪಡೆದುಕೊಳ್ಳಲ್ಪಟ್ಟಿರುವುದಾದರೂ, ಅದನ್ನು ಸೂಕ್ತವಾಗಿಯೇ ದೇವರಿಗೆ ಸೇರಿದ್ದೆಂದು ಹೇಳಸಾಧ್ಯವಿದೆ ಎಂಬುದು ನಿಶ್ಚಯ.
ಪುನರುತ್ಥಾನ—ಒಂದು ಸಂತೋಷಭರಿತ ಸಮಯ
ಪುನರುತ್ಥಾನವನ್ನು, ಪವಿತ್ರ ಶಾಸ್ತ್ರಗಳಲ್ಲಿ ಯಾವುದೇ ಆಧಾರವನ್ನು ಕಂಡುಕೊಳ್ಳದ ಪುನರವತಾರದೊಂದಿಗೆ ಗೊಂದಲಕ್ಕೊಳಪಡಿಸಬಾರದು. ಒಬ್ಬ ವ್ಯಕ್ತಿಯು ಮೃತಪಟ್ಟ ಬಳಿಕ, ಅವನು ಒಂದು ಅಥವಾ ಹೆಚ್ಚು ಅನುಕ್ರಮ ಅಸ್ತಿತ್ವಗಳಲ್ಲಿ ಪುನರ್ಜನ್ಮಪಡೆದುಕೊಳ್ಳುತ್ತಾನೆಂಬ ನಂಬಿಕೆಯೇ ಪುನರವತಾರವಾಗಿದೆ. ಆ ಹಿಂದಣ ಜೀವಮಾನದ ಸಮಯದಲ್ಲಿ ಯಾವ ದಾಖಲೆಯು ಸ್ಥಾಪಿಸಲ್ಪಟ್ಟಿತ್ತು ಎಂಬ ಗ್ರಹಿಕೆಯ ಮೇಲಾಧಾರಿಸಿ, ಒಬ್ಬನ ಹಿಂದಣ ಜೀವಿತಕ್ಕೆ ಹೋಲಿಕೆಯಲ್ಲಿ ಇದು ಶ್ರೇಷ್ಠ ದರ್ಜೆಯಲ್ಲಿ ಅಥವಾ ಕೀಳು ದರ್ಜೆಯಲ್ಲಿ ಅಸ್ತಿತ್ವಕ್ಕೆ ಬರುವುದೆಂದು ಹೇಳಲಾಗುತ್ತದೆ. ಈ ನಂಬಿಕೆಗನುಸಾರ, ಒಬ್ಬನು ಒಬ್ಬ ಮಾನವನೋಪಾದಿ ಅಥವಾ ಒಂದು ಪ್ರಾಣಿಯೋಪಾದಿ “ಪುನರ್ಜನ್ಮಪಡೆದು”ಕೊಳ್ಳಬಹುದು. ಅದು ಬೈಬಲು ಕಲಿಸುವ ವಿಷಯದೊಂದಿಗೆ ಬಹಳ ಅಸಂಗತವಾಗಿದೆ.
“ಪುನರುತ್ಥಾನ” ಎಂಬ ಶಬ್ದವು, ಆ್ಯನಸ್ಟಾಸಿಸ್ ಎಂಬ ಗ್ರೀಕ್ ಶಬ್ದದಿಂದ ಭಾಷಾಂತರಿಸಲ್ಪಟ್ಟದ್ದಾಗಿದೆ; ಇದು ಅಕ್ಷರಾರ್ಥವಾಗಿ “ಪುನಃ ಎದ್ದುನಿಂತುಕೊಳ್ಳುವುದನ್ನು” ಅರ್ಥೈಸುತ್ತದೆ. (ಗ್ರೀಕ್ ಭಾಷೆಯ ಹೀಬ್ರು ಭಾಷಾಂತರಕಾರರು, ಆ್ಯನಸ್ಟಾಸಿಸ್ ಅನ್ನು, ಟೆಕೀಯಾತ್ ಹ್ಯಾಮ್ಮಿತಿಮ್ ಎಂಬ ಹೀಬ್ರು ಶಬ್ದಗಳೊಂದಿಗೆ ಭಾಷಾಂತರಿಸಿದ್ದು, ಅವುಗಳು “ಮೃತರ ಪುನರುಜ್ಜೀವನ”ವನ್ನು ಅಥೈಸುತ್ತವೆ.) ಪುನರುತ್ಥಾನವು, ವ್ಯಕ್ತಿಯೊಬ್ಬನ ಜೀವನ ರೀತಿ—ದೇವರು ತನ್ನ ಜ್ಞಾಪಕಶಕ್ತಿಯಲ್ಲಿ ಇಟ್ಟುಕೊಂಡಿರುವಂತಹ ಜೀವನ ರೀತಿ—ಯನ್ನು ಪುನಃ ಕಾರ್ಯನಡಿಸುವಂತೆ ಮಾಡುವುದನ್ನು ಒಳಗೊಳ್ಳುತ್ತದೆ. ಆ ವ್ಯಕ್ತಿಗಾಗಿರುವ ದೇವರ ಚಿತ್ತಕ್ಕನುಸಾರವಾಗಿ, ಆ ವ್ಯಕ್ತಿಯು ಒಂದು ಮಾನವ ದೇಹದೋಪಾದಿ ಅಥವಾ ಒಂದು ಆತ್ಮ ದೇಹದೋಪಾದಿ ಪುನಸ್ಸ್ವಾಧೀನಪಡಿಸಲ್ಪಡುತ್ತಾನೆ; ಆದರೂ ತಾನು ಮೃತಪಟ್ಟಾಗ ಇದ್ದಂತಹದ್ದೇ ವ್ಯಕ್ತಿತ್ವ ಹಾಗೂ ಜ್ಞಾಪಕಶಕ್ತಿಯನ್ನು ಹೊಂದಿದವನಾಗಿದ್ದು, ಅವನು ತನ್ನ ವೈಯಕ್ತಿಕ ಗುರುತನ್ನು ಪುನಃ ಪಡೆದುಕೊಳ್ಳುತ್ತಾನೆ.
ಹೌದು, ಬೈಬಲು ಎರಡು ವಿಧಗಳ ಪುನರುತ್ಥಾನದ ಕುರಿತು ಮಾತಾಡುತ್ತದೆ. ಒಂದು, ಆತ್ಮ ದೇಹದೊಂದಿಗೆ ಸ್ವರ್ಗಕ್ಕೇರಿಸಲ್ಪಡುವ ಪುನರುತ್ಥಾನವಾಗಿದೆ; ಇದು ತುಲನಾತ್ಮಕವಾಗಿ ಕೆಲವೇ ಮಂದಿಗಾಗಿದೆ. ಯೇಸು ಕ್ರಿಸ್ತನು ಅಂತಹ ಒಂದು ಪುನರುತ್ಥಾನವನ್ನು ಪಡೆದುಕೊಂಡನು. (1 ಪೇತ್ರ 3:18) ಮತ್ತು ಅಂತಹ ಪುನರುತ್ಥಾನವು, ಅವನು ಯಾರಿಗೆ ಈ ಕೆಳಗಿನ ವಾಗ್ದಾನವನ್ನು ಕೊಟ್ಟನೋ ಆ ನಂಬಿಗಸ್ತ ಅಪೊಸ್ತಲರಿಂದ ಆರಂಭಗೊಂಡು, ಅವನ ಹೆಜ್ಜೆಜಾಡಿನ ಹಿಂಬಾಲಕರಾಗಿದ್ದವರ ನಡುವೆ ಆರಿಸಿಕೊಳ್ಳಲ್ಪಟ್ಟವರಿಂದ ಅನುಭವಿಸಲ್ಪಡುವುದೆಂದು ಅವನು ಸೂಚಿಸಿದನು: “ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತೇನಲ್ಲಾ. ನಾನು . . . ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು.” (ಯೋಹಾನ 14:2, 3) ಸಮಯದಲ್ಲಿ ಮತ್ತು ಶ್ರೇಣಿಯಲ್ಲಿ ಪ್ರಥಮವಾಗಿರುವುದರಿಂದ, ಇದನ್ನು ಬೈಬಲು “ಪ್ರಥಮ ಪುನರುತ್ಥಾನ”ದೋಪಾದಿ ನಿರ್ದೇಶಿಸುತ್ತದೆ. ಹೀಗೆ ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಟ್ಟವರನ್ನು ಶಾಸ್ತ್ರವಚನಗಳು, ದೇವರ ಯಾಜಕರಾಗಿಯೂ ಕ್ರಿಸ್ತ ಯೇಸುವಿನೊಂದಿಗೆ ರಾಜರಂತೆ ಆಳುವವರಾಗಿಯೂ ವರ್ಣಿಸುತ್ತವೆ. (ಪ್ರಕಟನೆ 20:6) ಈ “ಪ್ರಥಮ ಪುನರುತ್ಥಾನ”ವು ಒಂದು ಪರಿಮಿತ ಸಂಖ್ಯೆಗಾಗಿದೆ, ಮತ್ತು ನಂಬಿಗಸ್ತ ಸ್ತ್ರೀಪುರುಷರಿಂದ ಕೇವಲ 1,44,000 ಮಂದಿ ಮಾತ್ರವೇ ಆರಿಸಿಕೊಳ್ಳಲ್ಪಡುವರೆಂದು ಸ್ವತಃ ಶಾಸ್ತ್ರವಚನಗಳು ಪ್ರಕಟಪಡಿಸುತ್ತವೆ. ಅವರು ತಮ್ಮ ನಂಬಿಕೆಯ ಕುರಿತಾಗಿ ಬೇರೆಯವರಿಗೆ ಸಾಕ್ಷಿಯನ್ನು ನೀಡುವುದರಲ್ಲಿ ಕ್ರಿಯಾಶೀಲರಾಗಿದ್ದು, ತಮ್ಮ ಮರಣದ ತನಕ ಯೆಹೋವ ದೇವರಿಗೂ ಕ್ರಿಸ್ತ ಯೇಸುವಿಗೂ ತಮ್ಮ ಯಥಾರ್ಥತೆಯನ್ನು ರುಜುಪಡಿಸಿಕೊಂಡಿರುವರು.—ಪ್ರಕಟನೆ 14:1, 3, 4.
ನಿಸ್ಸಂದೇಹವಾಗಿ, ಮೃತರ ಪುನರುತ್ಥಾನವು, ಸ್ವರ್ಗದಲ್ಲಿನ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವವರಿಗಾಗಿ ಅಪಾರವಾದ ಸಂತೋಷದ ಒಂದು ಸಮಯವಾಗಿದೆ. ಆದರೆ ಆ ಸಂತೋಷವು ಅಲ್ಲಿಯೇ ಕೊನೆಗೊಳ್ಳುವುದಿಲ್ಲ, ಏಕೆಂದರೆ ಇದೇ ಭೂಮಿಯ ಮೇಲಿನ ಜೀವಿತಕ್ಕೂ ಪುನರುತ್ಥಾನವು ವಾಗ್ದಾನಿಸಲ್ಪಟ್ಟಿದೆ. ಪುನರುತ್ಥಾನಗೊಂಡವರು, ಸದ್ಯದ ದುಷ್ಟ ವ್ಯವಸ್ಥೆಯ ಅಂತ್ಯವನ್ನು ಪಾರಾಗಿ ಉಳಿಯುವ ಅಮಿತ ಸಂಖ್ಯೆಯೊಂದಿಗೆ ಜೊತೆಗೂಡುವರು. ಒಂದು ಸ್ವರ್ಗೀಯ ಪುನರುತ್ಥಾನಕ್ಕಾಗಿ ಅರ್ಹರಾಗುವ ಚಿಕ್ಕ ಸಂಖ್ಯೆಯನ್ನು ವೀಕ್ಷಿಸಿದ ಬಳಿಕ, “ಸಕಲ ಜನಾಂಗ, ಕುಲ, ಪ್ರಜೆಗಳವರಿಂದ ಮತ್ತು ಭಾಷೆಗಳಿಂದ ಹೊರಬಂದ, ಯಾವನಿಂದಲೂ ಎಣಿಸಲಾಗದಂಥ ಒಂದು ಮಹಾ ಸಮೂಹ”ದ (NW) ಕುರಿತಾದ ದರ್ಶನವು ಅಪೊಸ್ತಲ ಯೋಹಾನನಿಗೆ ಕೊಡಲ್ಪಟ್ಟಿತು. ಕೋಟಿಗಟ್ಟಲೆ, ಬಹುಶಃ ನೂರಾರು ಕೋಟಿಗಳಷ್ಟು ಜನರು, ಭೂಮಿಯ ಮೇಲಿನ ಜೀವಿತಕ್ಕೆ ಹಿಂದಿರುಗುವಾಗ, ಅದು ಎಂತಹ ಸಂತೋಷಭರಿತ ಸಮಯವಾಗಿರುವುದು!—ಪ್ರಕಟನೆ 7:9, 16, 17.
ಅದು ಯಾವಾಗ ಸಂಭವಿಸುವುದು?
ಇಂದಿನ ಪರಿಸ್ಥಿತಿಯಲ್ಲಿರುವಂತೆ, ಕಲಹ, ರಕ್ತಪಾತ, ಮಾಲಿನ್ಯ ಮತ್ತು ಹಿಂಸಾಚಾರದಿಂದ ತುಂಬಿಕೊಂಡಿದ್ದ ಭೂಮಿಗೆ ಮೃತರು ಹಿಂದಿರುಗುವುದಾದರೆ, ಯಾವುದೇ ಹರ್ಷ ಮತ್ತು ಸಂತೋಷವು ಅಲ್ಪಕಾಲ ಉಳಿಯುವುದು. ಇಲ್ಲ, ಪುನರುತ್ಥಾನವು “ನೂತನಭೂಮಂಡಲ”ದ ಸ್ಥಾಪಿಸುವಿಕೆಯನ್ನು ಎದುರುನೋಡಬೇಕು. ಇಷ್ಟರ ತನಕ ಭೂಮಿಯನ್ನು ಹಾಳುಮಾಡಲು ನಿರ್ಧರಿಸಿದ್ದ, ಮತ್ತು ಅದರ ನಿವಾಸಿಗಳ ಮೇಲೆ ತಾವು ತಂದಿರುವ ಅಗಣಿತ ಸಂಕಷ್ಟಗಳಿಗೆ ಕೂಡಿಸಿ, ಅದರ ಹಿಂದಿನ ನಿರ್ಮಲ ಸೌಂದರ್ಯವನ್ನು ಹಾಳುಮಾಡುತ್ತಿರುವ ಜನರು ಹಾಗೂ ಸಂಸ್ಥೆಗಳಿಂದ ಶುದ್ಧಗೊಳಿಸಲ್ಪಟ್ಟ ಒಂದು ಭೂಗ್ರಹವನ್ನು ಕಲ್ಪಿಸಿಕೊಳ್ಳಿರಿ.—2 ಪೇತ್ರ 3:13; ಪ್ರಕಟನೆ 11:18.
ಸ್ಪಷ್ಟವಾಗಿಯೇ, ಮಾನವಕುಲದ ಸಾಮಾನ್ಯ ಪುನರುತ್ಥಾನಕ್ಕಾಗಿರುವ ಸಮಯವು ಇನ್ನೂ ಮುಂದಿದೆ. ಆದರೂ ಸುವಾರ್ತೆಯೇನಂದರೆ, ಅದು ಬಹುದೂರವಿಲ್ಲ. ಈ ಪ್ರಚಲಿತ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯಕ್ಕಾಗಿ ಅದು ಕಾಯಲೇಬೇಕು, ನಿಜ. ಹಾಗಿದ್ದರೂ, ಸರ್ವಸಾಮಾನ್ಯವಾಗಿ ಅರ್ಮಗೆದೋನ್ ಎಂದು ಸೂಚಿಸಲ್ಪಡುವ, “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ”ದಲ್ಲಿ ತುತ್ತತುದಿಗೇರುತ್ತಾ, “ಮಹಾ ಸಂಕಟ”ದ ಅನಿರೀಕ್ಷಿತವಾದ ತಲೆದೋರುವಿಕೆಗಾಗಿರುವ ಸಮಯವು ಸಮೀಪವಾಗಿದೆ ಎಂಬುದನ್ನು ಬಹುತೇಕ ಪುರಾವೆಯು ರುಜುಪಡಿಸುತ್ತದೆ. (ಮತ್ತಾಯ 24:3-14, 21; ಪ್ರಕಟನೆ 16:14, 16) ಇದು, ಆನಂದದಾಯಕವಾದ ಈ ಭೂಗ್ರಹದಿಂದ ಎಲ್ಲಾ ದುಷ್ಟತನದ ತೆಗೆದುಹಾಕುವಿಕೆಯನ್ನು ತರಲಿರುವುದು. ಅದನ್ನು ಹಿಂಬಾಲಿಸಿ ಕ್ರಿಸ್ತ ಯೇಸುವಿನ ಸಾವಿರ ವರ್ಷದಾಳಿಕೆಯು ಬರುವುದು, ಆಗ ಭೂಮಿಯು ಪ್ರಗತಿಪರವಾಗಿ ಒಂದು ಪ್ರಮೋದವನ ಸ್ಥಿತಿಗೆ ತರಲ್ಪಡಲಿರುವುದು.
ಈ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ, ಮಾನವ ಮೃತರ ಪುನರುತ್ಥಾನವು ಆಗುವುದೆಂದು ಬೈಬಲು ಪ್ರಕಟಪಡಿಸುತ್ತದೆ. ಆಗ, ಭೂಮಿಯಲ್ಲಿದ್ದಾಗ ಯೇಸು ಮಾಡಿದ ವಾಗ್ದಾನವು ನೆರವೇರಿಸಲ್ಪಡುವುದು: “ಅದಕ್ಕೆ ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ . . . ಪುನರುತ್ಥಾನವಾಗುವದು.”—ಯೋಹಾನ 5:28, 29.
ಪುನರುತ್ಥಾನ ನಿರೀಕ್ಷೆಯ ಪರಿಣಾಮ
ಪುನರುತ್ಥಾನವೊಂದರ ಈ ನಿರೀಕ್ಷೆಯು—ಮೃತರು ಜೀವನಕ್ಕೆ ಹಿಂದಿರುಗುವಂತಹ ಒಂದು ಸಮಯ—ಭವಿಷ್ಯತ್ತಿಗಾಗಿ ಎಂತಹ ಒಂದು ಅದ್ಭುತಕರವಾದ ನಿರೀಕ್ಷೆಯಾಗಿದೆ! ವೃದ್ಧಾಪ್ಯದ ನಡುಕಗಳು, ಅಸ್ವಸ್ಥತೆ, ಅನಿರೀಕ್ಷಿತವಾದ ವಿಪತ್ತುಗಳು ಮತ್ತು ದುಃಖ, ಹಾಗೂ ಜೀವಿತದ ಪ್ರತಿದಿನದ ಒತ್ತಡಗಳು ಹಾಗೂ ಸಮಸ್ಯೆಗಳನ್ನು ನಾವು ಎದುರಿಸಿದಂತೆ, ಇದು ನಮ್ಮನ್ನು ಎಷ್ಟು ಉತ್ತೇಜಿಸುತ್ತದೆ! ಇದು ಮರಣದ ಬಾಧೆಯನ್ನು ತೆಗೆದುಹಾಕುತ್ತದೆ—ದುಃಖವನ್ನು ಸಂಪೂರ್ಣವಾಗಿ ನಿರ್ಮೂಲಮಾಡದಿರುವುದಾದರೂ, ಇದು ಭವಿಷ್ಯತ್ತಿಗಾಗಿ ಯಾವ ನಿರೀಕ್ಷೆಯನ್ನೂ ಪಡೆದುಕೊಂಡಿರದ ಜನರಿಂದ ನಮ್ಮನ್ನು ಪ್ರತ್ಯೇಕಿಸುತ್ತದೆ. ಅಪೊಸ್ತಲ ಪೌಲನು, ಪುನರುತ್ಥಾನ ನಿರೀಕ್ಷೆಯ ಈ ಸಾಂತ್ವನದಾಯಕ ಪರಿಣಾಮವನ್ನು ಈ ಮಾತುಗಳಲ್ಲಿ ಅಂಗೀಕರಿಸಿದನು: “ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು ನಿರೀಕ್ಷೆಯಿಲ್ಲದವರಾದ ಇತರರಂತೆ ದುಃಖಿಸುವದು ನಮ್ಮ ಮನಸ್ಸಿಗೆ ಒಪ್ಪುವದಿಲ್ಲ. ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬಿದ ಮೇಲೆ ಅದರಂತೆ ಯೇಸುವಿನಲ್ಲಿದ್ದುಕೊಂಡು ನಿದ್ರೆಹೋಗುವವರನ್ನು ಸಹ ದೇವರು ಆತನೊಡನೆ ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ.”—1 ಥೆಸಲೊನೀಕ 4:13, 14.
ಪೂರ್ವ ದೇಶದ ಮನುಷ್ಯನಾದ ಯೋಬನಿಂದ ಮಾಡಲ್ಪಟ್ಟ ಇನ್ನೊಂದು ಅಭಿಪ್ರಾಯೋಕ್ತಿಯ ಸತ್ಯವನ್ನು ನಾವು ಈಗಾಗಲೇ ಅನುಭವಿಸಿದ್ದಿರಬಹುದು: “ಮನುಷ್ಯನು ಕೊಳೆತುಹೋದ ಯಾವುದೋ ವಸ್ತುವಿನಂತೆ, ನುಸಿಗಳಿಂದ ತಿಂದುಹಾಕಲ್ಪಟ್ಟ ಒಂದು ಬಟ್ಟೆಯಂತೆ ಕ್ಷಯಿಸಿಹೋಗುತ್ತಾನೆ. ಸ್ತ್ರೀಯಿಂದ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ತೊಂದರೆಗಳಿಂದ ತುಂಬಿದವನಾಗಿಯೂ ಇದ್ದಾನೆ. ಅವನು ಹೂವಿನ ಹಾಗೆ ಅರಳಿ, ಬಾಡಿಹೋಗುತ್ತಾನೆ; ಬೇಗನೆ ಅದೃಶ್ಯವಾಗುವ ನೆರಳಿನಂತೆ, ಅವನು ತಾಳಿಕೊಳ್ಳುವುದಿಲ್ಲ.” (ಯೋಬ 13:28–14:2, ನ್ಯೂ ಇಂಟರ್ನ್ಯಾಷನಲ್ ವರ್ಷನ್) ಜೀವಿತದ ಅನಿಶ್ಚಿತತೆಯನ್ನೂ ನಮ್ಮಲ್ಲಿ ಯಾರ ಮೇಲಾದರೂ “ಕಾಲವೂ ಮುಂಗಾಣದ ಸಂಭವವೂ” ಘಟಿಸಸಾಧ್ಯವಿದೆಯೆಂಬ ಘೋರ ಸತ್ಯವನ್ನೂ, ನಾವೆಲ್ಲರೂ ಅರಿತವರಾಗಿದ್ದೇವೆ. (ಪ್ರಸಂಗಿ 9:11, NW) ಖಂಡಿತವಾಗಿಯೂ, ಸಾಯುವ ಪ್ರಕ್ರಿಯೆಯನ್ನು ಎದುರಿಸುವ ಆಲೋಚನೆಯಲ್ಲಿ ನಾವು ಯಾರೊಬ್ಬರೂ ಆನಂದಿಸುವುದಿಲ್ಲ. ಆದರೂ, ಒಂದು ಪುನರುತ್ಥಾನದ ಖಚಿತವಾದ ನಿರೀಕ್ಷೆಯು, ಮರಣದ ಭಾವಪರವಶಗೊಳಿಸುವ ಭಯವನ್ನು ದೂರಮಾಡಲು ಸಹಾಯ ಮಾಡುತ್ತದೆ.
ಆದುದರಿಂದ, ಉತ್ತೇಜಿತರಾಗಿರಿ! ಮರಣದಲ್ಲಿನ ಒಂದು ಸಂಭವನೀಯ ನಿದ್ರೆಗಿಂತಲೂ ಆಚೆ, ಪುನರುತ್ಥಾನದ ಅದ್ಭುತಕೃತ್ಯದ ಮೂಲಕ ಜೀವನಕ್ಕೆ ಹಿಂದಿರುಗುವುದನ್ನು ಅವಲೋಕಿಸಿರಿ. ಅಂತ್ಯರಹಿತವಾದ ಒಂದು ಭವಿಷ್ಯತ್ತಿನ ಜೀವನದ ಪ್ರತೀಕ್ಷೆಯ ಕಡೆಗೆ ದೃಢಭರವಸೆಯಿಂದ ಮುನ್ನೋಡಿರಿ, ಮತ್ತು ಅಂತಹ ಒಂದು ಆಶೀರ್ವದಿತ ಸಮಯವು ಸಮೀಪ ಭವಿಷ್ಯತ್ತಿನಲ್ಲಿದೆ ಎಂಬುದನ್ನು ತಿಳಿದುಕೊಳ್ಳುವುದರ ಆನಂದವನ್ನು ಇದಕ್ಕೆ ಕೂಡಿಸಿರಿ.