ದೇವರ ಕಡೆಗೆ ನಿಮಗಿರುವ ಪೂರ್ಣ ಕರ್ತವ್ಯವನ್ನು ನೀವು ನೆರವೇರಿಸುತ್ತಿದ್ದೀರೊ?
“ಒಳ್ಳೇದಾಗಲಿ ಕೆಟ್ಟದಾಗಲಿ ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸುವ ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು.”—ಪ್ರಸಂಗಿ 12:14.
1. ಯೆಹೋವನು ತನ್ನ ಜನರಿಗಾಗಿ ಯಾವ ಏರ್ಪಾಡುಗಳನ್ನು ಮಾಡಿದ್ದಾನೆ?
ಯೆಹೋವನನ್ನು ಯಾರು ತಮ್ಮ ಮಹಾನ್ ಸೃಷ್ಟಿಕರ್ತನಾಗಿ ಜ್ಞಾಪಿಸಿಕೊಳ್ಳುತ್ತಾ ಇರುತ್ತಾರೊ, ಅಂತಹವರನ್ನು ಆತನು ಬೆಂಬಲಿಸುತ್ತಾನೆ. ಆತನನ್ನು ಸಂಪೂರ್ಣವಾಗಿ ಮೆಚ್ಚಿಸಲು ಬೇಕಾದ ಜ್ಞಾನವನ್ನು ಆತನ ಪ್ರೇರಿತ ವಾಕ್ಯವು ಅಂತಹವರಿಗೆ ನೀಡುತ್ತದೆ. ಅವರು ದೈವಿಕ ಚಿತ್ತವನ್ನು ಮಾಡುವಂತೆ ಮತ್ತು “ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ . . . ಅಭಿವೃದ್ಧಿ”ಹೊಂದುವಂತೆ ದೇವರ ಪವಿತ್ರಾತ್ಮವು ಮಾರ್ಗದರ್ಶನವನ್ನು ನೀಡುತ್ತದೆ. (ಕೊಲೊಸ್ಸೆ 1:9, 10) ಇದರೊಂದಿಗೆ, ಯೆಹೋವನು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳು’ ವರ್ಗದ ಮೂಲಕ, ಆತ್ಮಿಕ ಆಹಾರವನ್ನು ಮತ್ತು ದೇವಪ್ರಭುತ್ವ ಮಾರ್ಗದರ್ಶನವನ್ನು ಒದಗಿಸುತ್ತಾನೆ. (ಮತ್ತಾಯ 24:45-47) ಹೀಗೆ, ದೇವರ ಜನರು ಯೆಹೋವನಿಗೆ ಸೇವೆ ಸಲ್ಲಿಸುತ್ತಾ, ರಾಜ್ಯದ ಸುವಾರ್ತೆಯನ್ನು ಸಾರುವ ಅತ್ಯಾವಶ್ಯಕ ಕೆಲಸವನ್ನು ಪೂರೈಸುತ್ತ ಮುಂದುವರಿದಂತೆ, ಅನೇಕ ವಿಧಗಳಲ್ಲಿ ಸ್ವರ್ಗದಿಂದ ಬರುವ ಆಶೀರ್ವಾದವನ್ನು ಅನುಭವಿಸುತ್ತಾರೆ.—ಮಾರ್ಕ 13:10.
2. ಯೆಹೋವನಿಗೆ ಸೇವೆಸಲ್ಲಿಸುವ ವಿಷಯದಲ್ಲಿ ಯಾವ ಪ್ರಶ್ನೆಗಳು ಏಳಬಹುದು?
2 ಯೆಹೋವನಿಗೆ ಪವಿತ್ರ ಸೇವೆಯನ್ನು ಸಲ್ಲಿಸುವುದರಲ್ಲಿ ಕಾರ್ಯಮಗ್ನರಾಗಿರಲು ಸತ್ಯ ಕ್ರೈಸ್ತರು ಆನಂದಿಸುತ್ತಾರೆ. ಹಾಗಿದ್ದರೂ, ಅವರಲ್ಲಿ ಕೆಲವರು ಹತಾಶರಾಗಿ, ತಮ್ಮ ಪ್ರಯತ್ನಗಳು ಅರ್ಥಹೀನವಾಗಿವೆ ಎಂದು ನೆನಸುತ್ತಾರೆ. ಉದಾಹರಣೆಗೆ, ಆತ್ಮಸಾಕ್ಷಿಕವಾಗಿ ಮಾಡಲ್ಪಟ್ಟ ತಮ್ಮ ಪ್ರಯತ್ನಗಳು ನಿಜವಾಗಿಯೂ ಸಾರ್ಥಕವಾಗಿವೆಯೊ ಎಂದು ಕೆಲವೊಮ್ಮೆ ಸಮರ್ಪಿತ ಕ್ರೈಸ್ತರು ಯೋಚಿಸಿದ್ದಿರಬಹುದು. ಕುಟುಂಬ ಅಭ್ಯಾಸ ಮತ್ತು ಇತರ ಚಟುವಟಿಕೆಗಳ ಕುರಿತು ಪರ್ಯಾಲೋಚಿಸುವಾಗ, ಒಬ್ಬ ಕುಟುಂಬ ತಲೆಯ ಮನಸ್ಸಿನಲ್ಲಿ ಈ ರೀತಿಯ ಪ್ರಶ್ನೆಗಳು ಬರಬಹುದು: ‘ನಾವು ಮಾಡುತ್ತಿರುವ ಕಾರ್ಯಗಳನ್ನು ಯೆಹೋವನು ನಿಜವಾಗಿಯೂ ಮೆಚ್ಚುತ್ತಾನೊ? ದೇವರ ಕಡೆಗೆ ನಮಗಿರುವ ಪೂರ್ಣ ಕರ್ತವ್ಯವನ್ನು ನಾವು ನೆರವೇರಿಸುತ್ತಿದ್ದೇವೊ?’ ಪ್ರಸಂಗಿಯ ವಿವೇಕಪೂರ್ಣ ಮಾತುಗಳು ಇಂತಹ ಪ್ರಶ್ನೆಗಳಿಗೆ ಉತ್ತರನೀಡಲು ಸಹಾಯಮಾಡಬಲ್ಲವು.
ಎಲ್ಲವೂ ವ್ಯರ್ಥವೊ?
3. ಪ್ರಸಂಗಿ 12:8ಕ್ಕನುಸಾರ ಯಾವುದು ವಿಪರೀತ ನಿರರ್ಥಕತೆಯಾಗಿದೆ?
3 ವಿವೇಕಿಯ ಮಾತುಗಳು ಆಬಾಲವೃದ್ಧರಿಬ್ಬರಿಗೂ ಅಷ್ಟೇನೂ ಉತ್ತೇಜನದಾಯಕವಾಗಿಲ್ಲವೆಂದು ಕೆಲವರು ನೆನಸಬಹುದು. ಏಕೆಂದರೆ “ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ” ಎಂಬುದಾಗಿ ಪ್ರಸಂಗಿಯು ಹೇಳಿದನು. (ಪ್ರಸಂಗಿ 12:8) ನಮ್ಮ ಮಹಾನ್ ಸೃಷ್ಟಿಕರ್ತನನ್ನು ಯೌವನದಲ್ಲಿ ಕಡೆಗಣಿಸಿ, ಆತನಿಗೆ ಸೇವೆ ಸಲ್ಲಿಸದೆಯೇ ವೃದ್ಧರಾಗಿ, ಮತ್ತು ದೀರ್ಘ ಜೀವನವನ್ನಲ್ಲದೆ ಮತ್ತೇನನ್ನೂ ಸಾಧಿಸಿರದವರ ವಿಷಯದಲ್ಲಿ ಜೀವನವು ನಿಜವಾಗಿಯೂ ಒಂದು ನಿರರ್ಥಕತೆಯಾಗಿದೆ. ಇಂತಹ ವ್ಯಕ್ತಿಯು, ದುಷ್ಟನಾಗಿರುವ ಪಿಶಾಚನಾದ ಸೈತಾನನ ವಶದಲ್ಲಿರುವ ಈ ಲೋಕದಲ್ಲಿ, ಬಹಳಷ್ಟು ಐಶ್ವರ್ಯ ಹಾಗೂ ಜನಪ್ರಿಯತೆಯನ್ನು ಅನುಭವಿಸಿ—ಮರಣಪಟ್ಟರೂ, ಅದೆಲ್ಲವೂ ನಿರರ್ಥಕವಾಗಿದೆ ಇಲ್ಲವೆ ಶೂನ್ಯವಾಗಿದೆ.—1 ಯೋಹಾನ 5:19.
4. ಎಲ್ಲವೂ ವ್ಯರ್ಥವಲ್ಲ ಎಂದು ಏಕೆ ಹೇಳಸಾಧ್ಯವಿದೆ?
4 ಯೆಹೋವನ ನಂಬಿಗಸ್ತ ಸೇವಕರೋಪಾದಿ ಸ್ವರ್ಗದಲ್ಲಿ ಐಶ್ವರ್ಯವನ್ನು ಶೇಖರಿಸಿಟ್ಟುಕೊಳ್ಳುವವರಿಗೆ ಎಲ್ಲವೂ ವ್ಯರ್ಥವಾಗಿರುವುದಿಲ್ಲ. (ಮತ್ತಾಯ 6:19, 20) ಕರ್ತನ ಫಲದಾಯಕ ಕೆಲಸದಲ್ಲಿ ಅವರಿಗೆ ಮಾಡಲು ಸಾಕಷ್ಟಿದೆ, ಮತ್ತು ಇಂತಹ ಕೆಲಸವು ಖಂಡಿತವಾಗಿಯೂ ನಿಷ್ಫಲದಾಯಕವಾಗಿರುವುದಿಲ್ಲ. (1 ಕೊರಿಂಥ 15:58) ಆದರೆ ನಾವು ಸಮರ್ಪಿತ ಕ್ರೈಸ್ತರಾಗಿರುವಲ್ಲಿ, ಈ ಕಡೇ ದಿವಸಗಳಲ್ಲಿ ದೇವರು ನೇಮಿಸಿರುವ ಕೆಲಸವನ್ನು ಮಾಡುವುದರಲ್ಲಿ ಕಾರ್ಯಮಗ್ನರಾಗಿದ್ದೇವೊ? (2 ತಿಮೊಥೆಯ 3:1) ಅಥವಾ, ನಮ್ಮ ನೆರೆಯವರ ಜೀವನಶೈಲಿಗಿಂತ ತುಸುವೇ ಭಿನ್ನವಾಗಿರುವ ಜೀವನಶೈಲಿಯನ್ನು ನಾವು ಅನುಸರಿಸುತ್ತೇವೊ? ಅವರು ಹಲವಾರು ಧರ್ಮಗಳೊಂದಿಗೆ ಸಹವಾಸಿಸಿ, ಸಾಕಷ್ಟು ಧರ್ಮನಿಷ್ಠರಾಗಿರಬಹುದು, ಮತ್ತು ಕ್ರಮವಾಗಿ ತಮ್ಮ ಆರಾಧನೆಯ ಸ್ಥಳಗಳಿಗೆ ಹೋಗಿ, ಅವರ ಧರ್ಮವು ಅವರಿಂದ ಕೇಳಿಕೊಳ್ಳುವುದನ್ನು ನಡೆಸಲು ಪ್ರಯತ್ನಿಸುತ್ತಿರಲೂ ಬಹುದು. ಆದರೆ, ಅವರು ರಾಜ್ಯದ ಸಂದೇಶವನ್ನು ಘೋಷಿಸುವವರಾಗಿರುವುದಿಲ್ಲ. ಇದೇ “ಅಂತ್ಯಕಾಲ” ಎಂಬ ವಿಷಯದಲ್ಲಿ ಅವರಿಗೆ ನಿಷ್ಕೃಷ್ಟ ಜ್ಞಾನವಿರುವುದಿಲ್ಲ ಮತ್ತು ನಾವು ಜೀವಿಸುತ್ತಿರುವ ದಿನಗಳ ಕುರಿತು ಅವರಿಗೆ ತುರ್ತಿನ ಪ್ರಜ್ಞೆಯಿರುವುದಿಲ್ಲ.—ದಾನಿಯೇಲ 12:4.
5. ಜೀವಿತದ ಸಾಮಾನ್ಯ ಬೆನ್ನಟ್ಟುವಿಕೆಗಳಲ್ಲಿಯೇ ನಾವು ಹೆಚ್ಚು ಆಸಕ್ತರಾಗಿರುವುದಾದರೆ, ಏನು ಮಾಡತಕ್ಕದ್ದು?
5 ಯೇಸು ಕ್ರಿಸ್ತನು ನಮ್ಮ ಕಠಿನ ಸಮಯಗಳ ಕುರಿತು ಹೇಳಿದ್ದು: “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ [“ಸಾನ್ನಿಧ್ಯವೂ,” NW] ಇರುವದು. ಹೇಗಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನು ತಿಳಿಯದೇ ಇದ್ದರಲ್ಲಾ. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.” (ಮತ್ತಾಯ 24:37-39) ಮಿತವಾಗಿರುವಾಗ, ತಿನ್ನುವುದರಲ್ಲಿ ಮತ್ತು ಕುಡಿಯುವುದರಲ್ಲಿ ಯಾವ ತಪ್ಪೂ ಇರುವುದಿಲ್ಲ, ಮತ್ತು ವಿವಾಹವು ಸ್ವತಃ ದೇವರೇ ಆರಂಭಿಸಿದ ಏರ್ಪಾಡಾಗಿದೆ. (ಆದಿಕಾಂಡ 2:20-24) ಆದರೂ, ನಾವು ಜೀವಿತದ ಸಾಮಾನ್ಯ ಬೆನ್ನಟ್ಟುವಿಕೆಗಳಲ್ಲಿಯೇ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿರುವುದನ್ನು ಮನಗಂಡರೆ, ಈ ವಿಷಯವಾಗಿ ಏಕೆ ಪ್ರಾರ್ಥಿಸಬಾರದು? ಆಗ, ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡಲು, ಸರಿಯಾದುದ್ದನ್ನು ಮಾಡಲು, ಮತ್ತು ದೇವರ ಕಡೆಗೆ ನಮಗಿರುವ ಕರ್ತವ್ಯವನ್ನು ನೆರವೇರಿಸಲು ಯೆಹೋವನು ನಮಗೆ ಸಹಾಯಮಾಡಬಲ್ಲನು.—ಮತ್ತಾಯ 6:33; ರೋಮಾಪುರ 12:12; 2 ಕೊರಿಂಥ 13:7.
ಸಮರ್ಪಣೆ ಮತ್ತು ದೇವರ ಕಡೆಗೆ ನಮಗಿರುವ ಕರ್ತವ್ಯ
6. ಯಾವ ಪ್ರಮುಖ ವಿಧದಲ್ಲಿ ಕೆಲವು ಸ್ನಾತ ವ್ಯಕ್ತಿಗಳು, ದೇವರ ಕಡೆಗೆ ತಮಗಿರುವ ಕರ್ತವ್ಯವನ್ನು ನೆರವೇರಿಸಲು ತಪ್ಪುತ್ತಿದ್ದಾರೆ?
6 ದೇವರಿಗೆ ಸಮರ್ಪಣೆಯನ್ನು ಮಾಡಿಕೊಂಡಾಗ ಸ್ವತಃ ವಹಿಸಿಕೊಂಡ ಶುಶ್ರೂಷಾ ಕರ್ತವ್ಯಗಳಿಗೆ ಅನುಗುಣವಾಗಿ ಕೆಲವು ಸ್ನಾತ ಕ್ರೈಸ್ತರು ಜೀವಿಸುತ್ತಿಲ್ಲವಾದುದರಿಂದ, ಅವರು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಬೇಕಾಗಿದೆ. ಹಲವಾರು ವರ್ಷಗಳಿಂದ 3,00,000ಕ್ಕಿಂತಲೂ ಹೆಚ್ಚಿನ ಜನರು ವಾರ್ಷಿಕವಾಗಿ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದರೂ, ಯೆಹೋವನ ಸಕ್ರಿಯ ಸಾಕ್ಷಿಗಳ ಒಟ್ಟು ಸಂಖ್ಯೆಯು ಅದಕ್ಕನುಗುಣವಾಗಿ ಅಭಿವೃದ್ಧಿಹೊಂದಿಲ್ಲ. ರಾಜ್ಯದ ಪ್ರಚಾರಕರಾಗಿ ಪರಿಣಮಿಸಿದ ಕೆಲವರು, ಸುವಾರ್ತೆಯ ಸಾರುವಿಕೆಯನ್ನು ನಿಲ್ಲಿಸಿಬಿಟ್ಟಿದ್ದಾರೆ. ಆದರೂ, ದೀಕ್ಷಾಸ್ನಾನ ಪಡೆದುಕೊಳ್ಳುವ ಮೊದಲೇ, ವ್ಯಕ್ತಿಗಳು ಕ್ರೈಸ್ತ ಶುಶ್ರೂಷೆಯಲ್ಲಿ ಅರ್ಥಭರಿತ ಪಾಲನ್ನು ಹೊಂದಿರತಕ್ಕದ್ದು. ಹೀಗೆ ಮಾಡುವುದರಿಂದ, “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ” ಎಂಬುದಾಗಿ ಯೇಸು ತನ್ನ ಹಿಂಬಾಲಕರಿಗೆ ನೀಡಿದ ನಿಯೋಗದ ಅರ್ಥ ಅವರಿಗೆ ತಿಳಿಯುವುದು. (ಮತ್ತಾಯ 28:19, 20) ಆರೋಗ್ಯದ ಕಾರಣ ಕೆಲವು ಅಸಾಧಾರಣ ಇತಿಮಿತಿಗಳನ್ನು ಇಲ್ಲವೆ ತಮ್ಮ ನಿಯಂತ್ರಣವನ್ನು ಮೀರಿರುವ ಸನ್ನಿವೇಶಗಳನ್ನು ಹೊರತುಪಡಿಸಿ, ದೇವರ ಮತ್ತು ಕ್ರಿಸ್ತನ ಸಕ್ರಿಯ ಸಾಕ್ಷಿಗಳಾಗಿ ಸೇವೆಸಲ್ಲಿಸದೆ ಇರುವ ಸ್ನಾತ ವ್ಯಕ್ತಿಗಳು, ನಮ್ಮ ಮಹಾನ್ ಸೃಷ್ಟಿಕರ್ತನ ಕಡೆಗೆ ತಮಗಿರುವ ಸಂಪೂರ್ಣ ಕರ್ತವ್ಯಕ್ಕನುಗುಣವಾಗಿ ಜೀವಿಸುತ್ತಿಲ್ಲ.—ಯೆಶಾಯ 43:10-12.
7. ನಾವು ಏಕೆ ಆರಾಧನೆಗಾಗಿ ಕ್ರಮವಾಗಿ ಕೂಡಿಬರಬೇಕು?
7 ಪುರಾತನ ಇಸ್ರಾಯೇಲ್ ಜನಾಂಗವು ದೇವರಿಗೆ ಸಮರ್ಪಿತವಾದ ಜನಾಂಗವಾಗಿತ್ತು, ಮತ್ತು ನಿಯಮದ ಒಡಂಬಡಿಕೆಗನುಸಾರ ಅದರ ಜನರು ಯೆಹೋವನ ಕಡೆಗೆ ಕೆಲವು ಕರ್ತವ್ಯಗಳನ್ನು ನೆರವೇರಿಸಬೇಕಿತ್ತು. ಉದಾಹರಣೆಗೆ, ವರ್ಷದಲ್ಲಿ ನಡೆಯುವ ಮೂರು ಉತ್ಸವಗಳಿಗೆ ಎಲ್ಲ ಪುರುಷರು ಹಾಜರಾಗಬೇಕಿತ್ತು, ಮತ್ತು ಉದ್ದೇಶಪೂರ್ವಕವಾಗಿ ಪಸ್ಕವನ್ನು ಆಚರಿಸದ ಒಬ್ಬನು “ತೆಗೆದುಹಾಕಲ್ಪಡ”ಬೇಕಿತ್ತು. (ಅರಣ್ಯಕಾಂಡ 9:13; ಯಾಜಕಕಾಂಡ 23:1-43; ಧರ್ಮೋಪದೇಶಕಾಂಡ 16:16) ದೇವರ ಸಮರ್ಪಿತ ಜನರೋಪಾದಿ ಆತನ ಕಡೆಗೆ ತಮಗಿರುವ ಕರ್ತವ್ಯವನ್ನು ನೆರವೇರಿಸಲು, ಇಸ್ರಾಯೇಲ್ಯರು ಆರಾಧನೆಗಾಗಿ ಕೂಡಿಬರಬೇಕಿತ್ತು. (ಧರ್ಮೋಪದೇಶಕಾಂಡ 31:10-13) ‘ಇದನ್ನು ಮಾಡುವುದು ಅನುಕೂಲಕರವಾಗಿದ್ದರೆ ಮಾತ್ರ ಮಾಡಿರಿ’ ಎಂಬುದಾಗಿ ಯಾವ ನಿಯಮವೂ ಅವರಿಗೆ ಹೇಳಲಿಲ್ಲ. ಈಗ ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡಿರುವ ಜನರಿಗೆ, ಪೌಲನ ಈ ಮುಂದಿನ ಮಾತುಗಳು ಹೆಚ್ಚಿನ ಬಲವನ್ನು ಕೂಡಿಸುತ್ತವೆ: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟು ಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.” (ಇಬ್ರಿಯ 10:24, 25) ಹೌದು, ಜೊತೆ ವಿಶ್ವಾಸಿಗಳೊಂದಿಗೆ ಕ್ರಮವಾಗಿ ಕೂಡಿಬರುವುದು, ಒಬ್ಬ ಸಮರ್ಪಿತ ಕ್ರೈಸ್ತನಿಗೆ ದೇವರ ಕಡೆಗಿರುವ ಕರ್ತವ್ಯದ ಒಂದು ಭಾಗವಾಗಿದೆ.
ನಿಮ್ಮ ನಿರ್ಣಯಗಳನ್ನು ಜಾಗರೂಕವಾಗಿ ತೂಗಿನೋಡಿರಿ!
8. ಸಮರ್ಪಿಸಿಕೊಂಡಿರುವ ಒಬ್ಬ ಯುವ ವ್ಯಕ್ತಿಯು, ತನ್ನ ಪವಿತ್ರ ಸೇವೆಯ ಕಡೆಗೆ ಪ್ರಾರ್ಥನಾಪೂರ್ವಕ ಪರಿಗಣನೆಯನ್ನು ನೀಡಬೇಕು ಏಕೆ?
8 ಯೆಹೋವನಿಗೆ ಸಮರ್ಪಿಸಿಕೊಂಡಿರುವ ಒಬ್ಬ ಯುವ ವ್ಯಕ್ತಿ ನೀವಾಗಿದ್ದೀರೆಂದು ಕಲ್ಪಿಸಿಕೊಳ್ಳಿ. ನಿಮ್ಮ ಜೀವಿತದಲ್ಲಿ ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಟ್ಟರೆ, ನಿಮಗೆ ಹೇರಳವಾದ ಆಶೀರ್ವಾದಗಳು ಲಭಿಸುವವು. (ಜ್ಞಾನೋಕ್ತಿ 10:22) ಪ್ರಾರ್ಥನೆ ಮತ್ತು ಜಾಗರೂಕವಾದ ಯೋಜನೆಯೊಂದಿಗೆ, ನೀವು ನಿಮ್ಮ ಯೌವನದ ಕೆಲವು ವರ್ಷಗಳನ್ನು ಪೂರ್ಣ ಸಮಯದ ಸೇವೆಯಲ್ಲಿ ವ್ಯಯಿಸಲು ಶಕ್ತರಾಗಿರಬಹುದು. ಇದು, ನಿಮ್ಮ ಮಹಾನ್ ಸೃಷ್ಟಿಕರ್ತನನ್ನು ನೀವು ಸ್ಮರಿಸಿಕೊಳ್ಳುತ್ತೀರಿ ಎಂಬುದನ್ನು ತೋರಿಸುವ ಅತ್ಯುತ್ತಮ ವಿಧವಾಗಿದೆ. ಇಲ್ಲದಿದ್ದರೆ, ಪ್ರಾಪಂಚಿಕ ಅಭಿರುಚಿಗಳು ನಿಮ್ಮ ಸಮಯ ಹಾಗೂ ಗಮನದ ಹೆಚ್ಚಿನ ಭಾಗವನ್ನು ಅಪಹರಿಸಿಕೊಳ್ಳಲಾರಂಭಿಸಬಹುದು. ಸಾಮಾನ್ಯ ಜನರಂತೆ, ನೀವು ಚಿಕ್ಕ ಪ್ರಾಯದಲ್ಲೇ ವಿವಾಹವಾಗಿ, ಪ್ರಾಪಂಚಿಕ ಸ್ವತ್ತುಗಳನ್ನು ಸಂಗ್ರಹಿಸಲಿಕ್ಕಾಗಿ ಸಾಲದಲ್ಲಿ ಮುಳುಗಬಹುದು. ಬಹಳಷ್ಟು ಸಂಪಾದನೆಯನ್ನು ನೀಡುವ ಕೆಲಸವು ನಿಮ್ಮ ಸಮಯ ಹಾಗೂ ಶಕ್ತಿಯ ಹೆಚ್ಚಿನಾಂಶವನ್ನು ಹೀರಿಕೊಳ್ಳಬಹುದು. ನಿಮಗೆ ಮಕ್ಕಳಿರುವುದಾದರೆ, ದಶಕಗಳ ವರೆಗೆ ನೀವು ಕುಟುಂಬ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುವುದು. (1 ತಿಮೊಥೆಯ 5:8) ನೀವು ನಿಮ್ಮ ಮಹಾನ್ ಸೃಷ್ಟಿಕರ್ತನನ್ನು ಮರೆತಿರಲಾರಿರಿ, ಆದರೂ ಮುಂಚಿತವಾಗಿಯೇ ಯೋಜಿಸುವುದರಿಂದ ಇಲ್ಲವೆ ಯೋಜಿಸದೇ ಇರುವುದರಿಂದ ನಿಮ್ಮ ವಯಸ್ಕ ಜೀವಿತವು ಬಹಳವಾಗಿ ಪ್ರಭಾವಿಸಲ್ಪಡುವುದೆಂಬುದನ್ನು ಗ್ರಹಿಸಿಕೊಳ್ಳುವುದು ವಿವೇಕಯುತವಾಗಿರುವುದು. ತದನಂತರದ ವರ್ಷಗಳಲ್ಲಿ, ನೀವು ಕಳೆದುಹೋದ ಸಮಯಾವಧಿಯ ಕುರಿತು ಯೋಚಿಸಿ, ನಿಮ್ಮ ಯುವ ಪ್ರಾಯದ ಕೆಲವೊಂದು ವರ್ಷಗಳನ್ನಾದರೂ ನಮ್ಮ ಮಹಾನ್ ಸೃಷ್ಟಿಕರ್ತನ ಪವಿತ್ರ ಸೇವೆಯಲ್ಲಿ ಹೆಚ್ಚು ಪೂರ್ಣವಾಗಿ ವ್ಯಯಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಯೋಚಿಸಬಹುದು. ನಿಮ್ಮ ಯುವ ಪ್ರಾಯದಲ್ಲಿ ಯೆಹೋವನಿಗೆ ಪವಿತ್ರ ಸೇವೆಯನ್ನು ಸಲ್ಲಿಸುವುದರಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳಲಿಕ್ಕಾಗಿ, ನಿಮ್ಮ ಪ್ರತೀಕ್ಷೆಗಳ ಕುರಿತು ನೀವು ಪ್ರಾರ್ಥನಾಪೂರ್ವಕವಾಗಿ ಏಕೆ ಯೋಚಿಸಬಾರದು?
9. ಹಿಂದೊಮ್ಮೆ ಸಭೆಯಲ್ಲಿ ಭಾರಿ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದ, ಆದರೆ ಈಗ ವೃದ್ಧನಾಗಿರುವ ವ್ಯಕ್ತಿಯು ಏನು ಮಾಡಸಾಧ್ಯವಿದೆ?
9 ಮತ್ತೊಂದು ಸನ್ನಿವೇಶವನ್ನು ಪರಿಗಣಿಸಿರಿ. ಇದು, ಒಂದಾನೊಂದು ಸಮಯದಲ್ಲಿ “ದೇವರ ಮಂದೆಯನ್ನು” ಕಾಯುವವನಾಗಿದ್ದ ಒಬ್ಬ ಪುರುಷನ ಕುರಿತಾಗಿದೆ. (1 ಪೇತ್ರ 5:2, 3) ಯಾವುದೊ ಕಾರಣಕ್ಕಾಗಿ, ಅವನು ಇಂತಹ ಸುಯೋಗಗಳನ್ನು ಸ್ವಇಚ್ಛೆಯಿಂದ ತೊರೆದುಬಿಟ್ಟಿರಬಹುದು. ಆದರೆ ಈಗ ಅವನು ವೃದ್ಧನಾಗಿರುವುದರಿಂದ, ದೇವರ ಸೇವೆಯಲ್ಲಿ ಮುಂದುವರಿಯುವುದು ಅವನಿಗೆ ಹೆಚ್ಚು ಕಷ್ಟಕರವಾಗಿರಬಹುದು ನಿಜ. ಹಾಗಿದ್ದರೂ, ದೇವಪ್ರಭುತ್ವ ಸುಯೋಗಗಳಿಗಾಗಿ ಅವನು ಪುನಃ ಪ್ರಯತ್ನಿಸಸಾಧ್ಯವೊ? ಸಭೆಯಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅವನು ಶಕ್ತನಾಗಿರುವುದಾದರೆ, ಆ ವ್ಯಕ್ತಿಯು ಇತರರಿಗೆ ಎಂತಹ ಆಶೀರ್ವಾದಗಳನ್ನು ತರಬಲ್ಲನು! ಯಾರೊಬ್ಬರೂ ತಮಗೋಸ್ಕರವೇ ಜೀವಿಸುವುದಿಲ್ಲವಾದುದರಿಂದ, ದೇವರಿಗೆ ಮಹಿಮೆಯನ್ನು ತರುವಂತಹ ರೀತಿಯಲ್ಲಿ ಅವನು ತನ್ನ ಸೇವೆಯನ್ನು ಹೆಚ್ಚಿಸಲು ಶಕ್ತನಾಗಿರುವುದಾದರೆ, ಮಿತ್ರರು ಮತ್ತು ಪ್ರಿಯ ಜನರು ಅದರಿಂದ ಹರ್ಷಿಸುವರು. (ರೋಮಾಪುರ 14:7, 8) ಎಲ್ಲಕ್ಕಿಂತಲೂ ಹೆಚ್ಚಾಗಿ, ಯೆಹೋವನು ತನ್ನ ಸೇವೆಯಲ್ಲಿ ಪಾಲ್ಗೊಳ್ಳುವ ಯಾರನ್ನೂ ಮರೆಯಲಾರನು. (ಇಬ್ರಿಯ 6:10-12) ಆದುದರಿಂದ, ನಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳಲು ನಮಗೆ ಯಾವುದು ಸಹಾಯಮಾಡಬಲ್ಲದು?
ನಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವುದಕ್ಕಾಗಿರುವ ಸಹಾಯಕ ವಿಷಯಗಳು
10. ನಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವ ವಿಷಯದಲ್ಲಿ ಮಾರ್ಗದರ್ಶನ ಸೂತ್ರಗಳನ್ನು ಒದಗಿಸಲು, ಪ್ರಸಂಗಿಯು ಅತ್ಯುತ್ತಮವಾದ ಸ್ಥಾನದಲ್ಲಿದ್ದನೇಕೆ?
10 ಪ್ರಸಂಗಿಯು, ನಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವುದಕ್ಕಾಗಿ ನಮಗೆ ಮಾರ್ಗದರ್ಶನ ಸೂತ್ರಗಳನ್ನು ಒದಗಿಸುವ ಅತ್ಯುತ್ತಮ ಸ್ಥಾನದಲ್ಲಿದ್ದನು. ಅವನಿಗೆ ವಿಶೇಷ ಬುದ್ಧಿಯನ್ನು ದಯಪಾಲಿಸುವ ಮೂಲಕ, ಯೆಹೋವನು ಅವನ ಹೃತ್ಪೂರ್ವಕ ಪ್ರಾರ್ಥನೆಗಳಿಗೆ ಉತ್ತರ ನೀಡಿದನು. (1 ಅರಸು 3:6-12) ಮಾನವ ಕಾರ್ಯಕಲಾಪಗಳ ಸಂಪೂರ್ಣ ವ್ಯಾಪ್ತಿಯನ್ನು ಸೊಲೊಮೋನನು ಕೂಲಂಕಷವಾಗಿ ಪರಿಶೀಲಿಸಿದನು. ಅಲ್ಲದೆ, ಇತರರಿಗೆ ಪ್ರಯೋಜನವಾಗುವಂತೆ, ತಾನು ಪರಿಶೀಲಿಸಿ ಕಂಡುಕೊಂಡದ್ದನ್ನು ಬರೆದಿಡುವಂತೆ ಅವನು ದೈವಿಕವಾಗಿ ಪ್ರೇರಿಸಲ್ಪಟ್ಟನು. ಅವನು ಬರೆದುದು: “ಪ್ರಸಂಗಿಯು ಜ್ಞಾನಿಯಾಗಿದ್ದದ್ದಲ್ಲದೆ ಜನರಿಗೆ ತಿಳುವಳಿಕೆಯನ್ನು ಬೋಧಿಸುತ್ತಾ ಬಂದನು; ಅನೇಕಾನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ ಪರೀಕ್ಷಿಸಿ ಕ್ರಮಪಡಿಸಿದನು. ಪ್ರಸಂಗಿಯು ಯಥಾರ್ಥಭಾವದಿಂದ ರಚಿಸಿದ ಒಪ್ಪಿಗೆಯ ಸತ್ಯದ ಮಾತುಗಳನ್ನು ಹುಡುಕಿ ಆರಿಸಿದನು.”—ಪ್ರಸಂಗಿ 12:9, 10.
11. ಸೊಲೊಮೋನನ ವಿವೇಕಪೂರ್ಣ ಸಲಹೆಯನ್ನು ನಾವು ಏಕೆ ಅಂಗೀಕರಿಸಬೇಕು?
11 ಈ ಮಾತುಗಳನ್ನು ಗ್ರೀಕ್ ಭಾಷೆಯ ಸೆಪ್ಟೂಅಜಿಂಟ್ ಹೀಗೆ ತರ್ಜುಮೆ ಮಾಡುತ್ತದೆ: “ಅದಲ್ಲದೆ, ಸಾರುವವನು ವಿವೇಕಿಯಾಗಿದ್ದ ಕಾರಣ, ಅವನು ಮಾನವಕುಲಕ್ಕೆ ವಿವೇಕವನ್ನು ಕಲಿಸಿದನು; ಸಾಮ್ಯಗಳಿಂದ ಆಹ್ಲಾದಕರ ವಿಷಯಗಳನ್ನು ಕಿವಿಗಳು ಕೇಳಿಸಿಕೊಳ್ಳುವಂತೆ, ಸಾರುವವನು ಸೊಗಸಾದ ಮಾತುಗಳನ್ನು ಮತ್ತು ನೀತಿಯನ್ನು, ಅಂದರೆ ಸತ್ಯದ ಮಾತುಗಳನ್ನು ಕಂಡುಹಿಡಿದು ಬರೆಯಲು ಶ್ರದ್ಧಾಪೂರ್ವಕವಾದ ಅನ್ವೇಷಣೆಯನ್ನು ಮಾಡಿದನು.” (ದ ಸೆಪ್ಯೂಅಜಿಂಟ್ ಬೈಬಲ್, ಚಾರ್ಲ್ಸ್ ಥಾಮ್ಸನ್ ಅವರಿಂದ ಭಾಷಾಂತರಿಸಲ್ಪಟ್ಟದ್ದು) ಸೊಗಸಾದ ಮಾತುಗಳಿಂದ ಮತ್ತು ನಿಜವಾಗಿಯೂ ಆಸಕ್ತಿಕರ ಹಾಗೂ ಯೋಗ್ಯವಾದ ವಿಷಯಗಳಿಂದ, ತನ್ನ ಓದುಗರ ಮನಸ್ಸನ್ನು ಮುಟ್ಟಲು ಸೊಲೊಮೋನನು ಪ್ರಯತ್ನಿಸಿದನು. ಶಾಸ್ತ್ರಗಳಲ್ಲಿರುವ ಅವನ ಮಾತುಗಳು ಪವಿತ್ರಾತ್ಮದಿಂದ ಪ್ರೇರಿತವಾದವುಗಳಾಗಿರುವ ಕಾರಣ, ನಾವು ಮನಃಪೂರ್ವಕವಾಗಿ ಅವನ ನಿರ್ಣಯಗಳನ್ನು ಮತ್ತು ವಿವೇಕಪೂರ್ಣ ಸಲಹೆಯನ್ನು ಅಂಗೀಕರಿಸಸಾಧ್ಯವಿದೆ.—2 ತಿಮೊಥೆಯ 3:16, 17.
12. ಪ್ರಸಂಗಿ 12:11, 12ರಲ್ಲಿ ದಾಖಲಿಸಲ್ಪಟ್ಟಂತೆ, ಸೊಲೊಮೋನನು ಹೇಳಿದ ವಿಷಯವನ್ನು ನೀವು ನಿಮ್ಮ ಸ್ವಂತ ಮಾತುಗಳಲ್ಲಿ ಹೇಗೆ ವ್ಯಕ್ತಪಡಿಸುವಿರಿ?
12 ಸೊಲೊಮೋನನ ದಿನದಲ್ಲಿ ಆಧುನಿಕ ಮುದ್ರಣ ಸೌಲಭ್ಯಗಳು ಇರದಿದ್ದರೂ, ಅನೇಕಾನೇಕ ಪುಸ್ತಕಗಳು ಲಭ್ಯವಾಗಿದ್ದವು. ಅಂತಹ ಸಾಹಿತ್ಯವನ್ನು ಹೇಗೆ ವೀಕ್ಷಿಸಬೇಕಿತ್ತು? ಅವನು ಹೇಳಿದ್ದು: “ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳು; ಸಂಗ್ರಹವಾಕ್ಯಗಳು ಬಿಗಿಯಾಗಿ ಬಡಿದ ಮೊಳೆಗಳು; ಒಬ್ಬನೇ ಕರ್ತನಿಂದ ಬಂದಿವೆ. ಕಂದಾ, ಇವಲ್ಲದೆ ಉಳಿದವುಗಳಲ್ಲಿಯೂ ಎಚ್ಚರದಿಂದಿರು; ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ; ಅತಿವ್ಯಾಸಂಗವು ದೇಹಕ್ಕೆ ಆಯಾಸ.”—ಪ್ರಸಂಗಿ 12:11, 12.
13. ದೈವಿಕ ವಿವೇಕವಿರುವವರ ಮಾತುಗಳು ಮುಳ್ಳುಗೋಲುಗಳಂತೆ ಹೇಗೆ ಇರಬಲ್ಲವು, ಮತ್ತು ಯಾರು “ಬಿಗಿಯಾಗಿ ಬಡಿದ ಮೊಳೆ”ಗಳಂತೆ ಇದ್ದಾರೆ?
13 ದೈವಿಕ ಜ್ಞಾನವುಳ್ಳವರ ಮಾತುಗಳು ಮುಳ್ಳುಗೋಲುಗಳಂತಿವೆ. ಹೇಗೆ? ಓದಿದ ಇಲ್ಲವೆ ಕೇಳಿಸಿಕೊಂಡ ಬುದ್ಧಿಯುತ ಮಾತುಗಳಿಗನುಗುಣವಾಗಿ ಪ್ರಗತಿಯನ್ನು ಮಾಡುವಂತೆ, ಅವು ಓದುಗರನ್ನು ಇಲ್ಲವೆ ಕೇಳುಗರನ್ನು ಚುಚ್ಚುತ್ತವೆ. ಯಾರು ‘ವಾಕ್ಯಗಳ ಸಂಗ್ರಹದಲ್ಲಿ’ ಅಥವಾ ನಿಜವಾಗಿಯೂ ವಿವೇಕಪೂರ್ಣವಾದ ಮತ್ತು ಯೋಗ್ಯವಾದ ಮಾತುಗಳಲ್ಲಿ ತಮ್ಮನ್ನು ಕಾರ್ಯಮಗ್ನರಾಗಿ ಇರಿಸಿಕೊಳ್ಳುತ್ತಾರೊ, ಅಂತಹವರು “ಬಿಗಿಯಾಗಿ ಬಡಿದ ಮೊಳೆ”ಗಳಂತೆ ಅಥವಾ ಕದಲಿಸಲಾರದಂತಹ ಮೊಳೆಗಳಂತೆ ಇದ್ದಾರೆ. ಇಂತಹ ವ್ಯಕ್ತಿಗಳ ಉತ್ತಮ ಮಾತುಗಳು ಯೆಹೋವನ ವಿವೇಕವನ್ನು ಪ್ರತಿಬಿಂಬಿಸುವ ಕಾರಣ, ಅವು ಓದುಗರನ್ನು ಇಲ್ಲವೆ ಕೇಳುಗರನ್ನು ಸ್ಥಿರಪಡಿಸಿ, ಬೆಂಬಲಿಸಲು ಸಹಾಯಮಾಡಬಲ್ಲವು. ನೀವು ದೇವರಿಗೆ ಭಯಪಡುವ ಹೆತ್ತವರಾಗಿದ್ದರೆ, ಇಂತಹ ವಿವೇಕವನ್ನು ನಿಮ್ಮ ಮಗುವಿನ ಹೃದಮನಗಳಲ್ಲಿ ನಾಟಿಸಲು ಸಕಲ ಪ್ರಯತ್ನವನ್ನು ಏಕೆ ಮಾಡಬಾರದು?—ಧರ್ಮೋಪದೇಶಕಾಂಡ 6:4-9.
14. (ಎ) ಯಾವ ರೀತಿಯ ಪುಸ್ತಕಗಳ “ಅತಿವ್ಯಾಸಂಗವು” ಪ್ರಯೋಜನಕರವಾಗಿರುವುದಿಲ್ಲ? (ಬಿ) ಯಾವ ರೀತಿಯ ಸಾಹಿತ್ಯಕ್ಕೆ ನಾವು ಪ್ರಧಾನ ಪರಿಗಣನೆಯನ್ನು ನೀಡಬೇಕು, ಮತ್ತು ಏಕೆ?
14 ಆದರೆ ಪುಸ್ತಕಗಳ ವಿಷಯದಲ್ಲಿ ಸೊಲೊಮೋನನು ಎಚ್ಚರಿಕೆ ಕೊಟ್ಟದ್ದೇಕೆ? ಯೆಹೋವನ ವಾಕ್ಯಕ್ಕೆ ಹೋಲಿಸುವಾಗ, ಈ ಲೋಕದ ಅಸಂಖ್ಯಾತ ಸಂಪುಟಗಳಲ್ಲಿ ಕೇವಲ ಮಾನವ ವಿಚಾರಗಳೇ ತುಂಬಿಕೊಂಡಿವೆ. ಈ ವಿಚಾರಗಳಲ್ಲಿ ಹೆಚ್ಚಿನವು, ಪಿಶಾಚನಾದ ಸೈತಾನನ ಮನಸ್ಸನ್ನೇ ಪ್ರತಿಬಿಂಬಿಸುತ್ತವೆ. (2 ಕೊರಿಂಥ 4:4) ಆದುದರಿಂದ, ಐಹಿಕ ವಿಷಯಗಳ “ಅತಿವ್ಯಾಸಂಗವು” ಶಾಶ್ವತ ಪ್ರಯೋಜನಗಳನ್ನು ತರಲಾರದು. ವಾಸ್ತವದಲ್ಲಿ, ಅವುಗಳಲ್ಲಿ ಹೆಚ್ಚಿನವು ಆತ್ಮಿಕವಾಗಿ ಹಾನಿಕಾರಕವಾಗಿರಬಲ್ಲವು. ನಾವು ಸೊಲೊಮೋನನಂತೆ, ಜೀವಿತದ ಕುರಿತು ದೇವರ ವಾಕ್ಯವು ಹೇಳುವುದನ್ನೇ ಧ್ಯಾನಿಸೋಣ. ಇದು ನಮ್ಮ ನಂಬಿಕೆಯನ್ನು ಬಲಪಡಿಸಿ, ನಾವು ಯೆಹೋವನಿಗೆ ನಿಕಟರಾಗುವಂತೆ ಸಹಾಯಮಾಡುವುದು. ಇತರ ಪುಸ್ತಕಗಳಿಗೆ ಇಲ್ಲವೆ ಮಾಹಿತಿಯ ಮೂಲಗಳಿಗೆ ಅತಿಯಾದ ಗಮನವನ್ನು ನೀಡುವುದು ಆಯಾಸಕರವಾಗಿರಬಲ್ಲದು. ವಿಶೇಷವಾಗಿ ಇಂತಹ ಬರಹಗಳು, ದೈವಿಕ ವಿವೇಕವನ್ನು ವಿರೋಧಿಸುವ ಲೌಕಿಕ ವಾದವಿವಾದಗಳಾಗಿದ್ದರೆ, ಅವು ಭ್ರಷ್ಟಗೊಳಿಸುವಂತಹದ್ದಾಗಿದ್ದು ದೇವರಲ್ಲಿ ಮತ್ತು ಆತನ ಉದ್ದೇಶಗಳಲ್ಲಿ ನಮಗಿರುವ ನಂಬಿಕೆಯನ್ನು ನಾಶಗೊಳಿಸುವಂತಹದ್ದಾಗಿವೆ. ಹಾಗಾದರೆ, ಸೊಲೊಮೋನನ ಮತ್ತು ನಮ್ಮ ದಿನದ ಅತ್ಯಂತ ಪ್ರಯೋಜನಕರವಾದ ಬರಹಗಳು, ‘ಒಬ್ಬನೇ ಕರ್ತನ’ ಅಂದರೆ ಯೆಹೋವ ದೇವರ ವಿವೇಕವನ್ನು ಪ್ರತಿಬಿಂಬಿಸುವ ಬರಹಗಳಾಗಿವೆ ಎಂಬುದನ್ನು ನಾವು ಜ್ಞಾಪಿಸಿಕೊಳ್ಳೋಣ. ಆತನು ಪವಿತ್ರ ಶಾಸ್ತ್ರಗಳ 66 ಪುಸ್ತಕಗಳನ್ನು ನಮಗೆ ನೀಡಿದ್ದಾನೆ, ಮತ್ತು ಇವುಗಳಿಗೆ ನಾವು ಅತ್ಯಧಿಕ ಗಮನವನ್ನು ಕೊಡಬೇಕು. ಬೈಬಲು ಮತ್ತು ‘ನಂಬಿಗಸ್ತ ಆಳಿನ’ ಸಹಾಯಕರ ಪ್ರಕಾಶನಗಳು, “ದೈವಜ್ಞಾನವನ್ನು” ಪಡೆದುಕೊಳ್ಳಲು ನಮಗೆ ಸಹಾಯಮಾಡುತ್ತವೆ.—ಜ್ಞಾನೋಕ್ತಿ 2:1-6.
ದೇವರ ಕಡೆಗೆ ನಮಗಿರುವ ಸಂಪೂರ್ಣ ಕರ್ತವ್ಯ
15. (ಎ) ‘ಮನುಷ್ಯನ ಸಂಪೂರ್ಣ ಕರ್ತವ್ಯದ’ ಬಗ್ಗೆ ಸೊಲೊಮೋನನು ನುಡಿದ ಮಾತುಗಳನ್ನು ನೀವು ಹೇಗೆ ವ್ಯಕ್ತಪಡಿಸುವಿರಿ? (ಬಿ) ನಾವು ದೇವರ ಕಡೆಗೆ ನಮಗಿರುವ ಕರ್ತವ್ಯವನ್ನು ನೆರವೇರಿಸಬೇಕಾದರೆ ಏನು ಮಾಡತಕ್ಕದ್ದು?
15 ತನ್ನ ಇಡೀ ಪರಿಶೀಲನೆಯನ್ನು ಸಾರಾಂಶಿಸುತ್ತಾ, ಪ್ರಸಂಗಿಯಾದ ಸೊಲೊಮೋನನು ಹೇಳುವುದು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ. ಒಳ್ಳೇದಾಗಲಿ ಕೆಟ್ಟದಾಗಲಿ ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸುವ ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು.” (ಪ್ರಸಂಗಿ 12:13, 14) ನಮ್ಮ ಮಹಾನ್ ಸೃಷ್ಟಿಕರ್ತನ ಹಿತಕರವಾದ ಭಯವು ಅಥವಾ ಪೂಜ್ಯಭಾವನೆಯು ನಮ್ಮನ್ನು ಮತ್ತು ಬಹುಶಃ ನಮ್ಮ ಕುಟುಂಬಗಳನ್ನು ಸಂರಕ್ಷಿಸಿ, ನಮ್ಮ ಮತ್ತು ನಮ್ಮ ಪ್ರಿಯ ಜನರ ಮೇಲೆ ಅತೀವವಾದ ದುಃಖ ಮತ್ತು ತೊಂದರೆಯನ್ನು ತರಬಲ್ಲ ಹುಚ್ಚುಸಾಹಸದ ಜೀವನ ರೀತಿಯನ್ನು ಬೆನ್ನಟ್ಟುವುದರಿಂದ ತಡೆಯಬಲ್ಲದು. ದೇವರ ಹಿತಕರವಾದ ಭಯವು ಶುದ್ಧವಾಗಿದ್ದು, ವಿವೇಕ ಮತ್ತು ಜ್ಞಾನದ ಮೂಲವಾಗಿದೆ. (ಕೀರ್ತನೆ 19:9; ಜ್ಞಾನೋಕ್ತಿ 1:7) ದೈವಪ್ರೇರಿತ ವಾಕ್ಯದ ಮೇಲಾಧಾರಿತ ಒಳನೋಟವು ನಮಗಿರುವಲ್ಲಿ ಮತ್ತು ಎಲ್ಲ ವಿಷಯಗಳಲ್ಲಿ ನಾವು ಅದರ ಸಲಹೆಯನ್ನು ಅನ್ವಯಿಸಿಕೊಳ್ಳುವಲ್ಲಿ, ದೇವರ ಕಡೆಗೆ ನಮಗಿರುವ “ಸಂಪೂರ್ಣ ಕರ್ತವ್ಯ”ವನ್ನು ನೆರವೇರಿಸುತ್ತಿರುವೆವು. ಇದು, ಕರ್ತವ್ಯಗಳ ಒಂದು ಪಟ್ಟಿಯನ್ನು ತಯಾರಿಸುವ ಸಂಗತಿಯಾಗಿರುವುದಿಲ್ಲ. ಬದಲಿಗೆ, ಜೀವಿತದ ಸಮಸ್ಯೆಗಳನ್ನು ಬಗೆಹರಿಸುವಾಗ ಶಾಸ್ತ್ರಗಳಿಂದ ಮಾರ್ಗದರ್ಶನವನ್ನು ಪಡೆದು, ಯಾವಾಗಲೂ ದೇವರ ಮಾರ್ಗದರ್ಶನಕ್ಕನುಸಾರ ಕ್ರಿಯೆಗೈಯುವುದನ್ನೇ ಇದು ನಮ್ಮಿಂದ ಕೇಳಿಕೊಳ್ಳುತ್ತದೆ.
16. ನ್ಯಾಯತೀರ್ಪಿನ ಸಂಬಂಧದಲ್ಲಿ ಯೆಹೋವನು ಏನು ಮಾಡಲಿರುವನು?
16 ನಮ್ಮ ಮಹಾನ್ ಸೃಷ್ಟಿಕರ್ತನು ಎಲ್ಲವನ್ನೂ ಗಮನಿಸುತ್ತಾನೆಂಬುದನ್ನು ನಾವು ಗ್ರಹಿಸಿಕೊಳ್ಳತಕ್ಕದ್ದು. (ಜ್ಞಾನೋಕ್ತಿ 15:3) ದೇವರು ‘ಪ್ರತಿಯೊಂದು ಕಾರ್ಯವನ್ನು ನ್ಯಾಯವಿಚಾರಣೆಗೆ ಗುರಿಮಾಡುವನು.’ ಹೌದು, ಮಾನವ ಕಣ್ಣುಗಳಿಗೆ ಅಗೋಚರವಾಗಿರುವವುಗಳನ್ನೂ ಸೇರಿಸಿ, ಮಹೋನ್ನತನು ಎಲ್ಲವನ್ನೂ ನ್ಯಾಯವಿಚಾರಣೆಗೆ ಗುರಿಮಾಡುವನು. ಇಂತಹ ಅಂಶಗಳ ಅರಿವು, ದೇವರ ಆಜ್ಞೆಗಳನ್ನು ಕೈಗೊಳ್ಳುವುದಕ್ಕೆ ಒಂದು ಪ್ರೇರಕವಾಗಿ ಪರಿಣಮಿಸಬಲ್ಲದು. ಆದರೆ ಅತ್ಯಂತ ಪ್ರಧಾನ ಪ್ರೇರಕವು, ನಮ್ಮ ಸ್ವರ್ಗೀಯ ತಂದೆಗಾಗಿರುವ ನಮ್ಮ ಪ್ರೀತಿಯಾಗಿರತಕ್ಕದ್ದು. ಏಕೆಂದರೆ ಅಪೊಸ್ತಲ ಯೋಹಾನನು ಬರೆದುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾನ 5:3) ನಮ್ಮ ಶಾಶ್ವತ ಸುಕ್ಷೇಮವನ್ನು ಪ್ರವರ್ಧಿಸಲಿಕ್ಕಾಗಿ ದೇವರ ಆಜ್ಞೆಗಳು ರಚಿಸಲ್ಪಟ್ಟಿರುವುದರಿಂದ, ಅವುಗಳನ್ನು ಪಾಲಿಸುವುದು ಯೋಗ್ಯವಾಗಿದೆ ಮಾತ್ರವಲ್ಲ, ನಿಜವಾಗಿಯೂ ವಿವೇಕಪ್ರದವಾಗಿದೆ. ಇದು ಮಹಾನ್ ಸೃಷ್ಟಿಕರ್ತನನ್ನು ಪ್ರೀತಿಸುವವರಿಗೆ ಭಾರವಾಗಿರುವುದೇ ಇಲ್ಲ. ಆತನ ಕಡೆಗೆ ತಮಗಿರುವ ಕರ್ತವ್ಯವನ್ನು ನೆರವೇರಿಸಲು ಅವರು ಬಯಸುತ್ತಾರೆ.
ನಿಮ್ಮ ಸಂಪೂರ್ಣ ಕರ್ತವ್ಯವನ್ನು ನೆರವೇರಿಸಿರಿ
17. ದೇವರ ಕಡೆಗೆ ನಮಗಿರುವ ಸಂಪೂರ್ಣ ಕರ್ತವ್ಯವನ್ನು ನೆರವೇರಿಸಲು ನಾವು ನಿಜವಾಗಿಯೂ ಬಯಸುವಲ್ಲಿ, ಏನು ಮಾಡುವೆವು?
17 ನಾವು ವಿವೇಕಿಗಳಾಗಿದ್ದು, ದೇವರ ಕಡೆಗೆ ನಮಗಿರುವ ಸಂಪೂರ್ಣ ಕರ್ತವ್ಯವನ್ನು ನೆರವೇರಿಸಲು ನಿಜವಾಗಿಯೂ ಬಯಸುವುದಾದರೆ, ಆತನನ್ನು ಅಪ್ರಸನ್ನಗೊಳಿಸುವುದರ ಬಗ್ಗೆ ನಮಗೆ ಆರೋಗ್ಯಕರವಾದ ಭಯವಿರುವುದು. ನಿಶ್ಚಯವಾಗಿಯೂ, “ಯೆಹೋವನ ಭಯವೇ ತಿಳುವಳಿಕೆಗೆ [“ವಿವೇಕದ,” NW] ಮೂಲ”ವಾಗಿದೆ, ಮತ್ತು ಆತನ ಆಜ್ಞೆಗಳನ್ನು ಪಾಲಿಸುವವರಿಗೆ “ಉತ್ತಮ ಒಳನೋಟ” (NW) ಇದೆ. (ಕೀರ್ತನೆ 111:10; ಜ್ಞಾನೋಕ್ತಿ 1:7) ಆದುದರಿಂದ ನಾವು ವಿವೇಕಪೂರ್ಣವಾಗಿ ಕ್ರಿಯೆಗೈದು, ಎಲ್ಲ ವಿಷಯಗಳಲ್ಲಿ ಯೆಹೋವನಿಗೆ ವಿಧೇಯರಾಗಿರೋಣ. ಇದು ವಿಶೇಷವಾಗಿ ಈಗ ಅತ್ಯಾವಶ್ಯಕವಾಗಿದೆ, ಏಕೆಂದರೆ ಅರಸನಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾಗಿದ್ದಾನೆ, ಮತ್ತು ದೇವರ ನೇಮಿತ ನ್ಯಾಯಾಧೀಶನೋಪಾದಿ ಅವನ ನ್ಯಾಯತೀರ್ಪಿನ ದಿನವು ಹತ್ತಿರವಿದೆ.—ಮತ್ತಾಯ 24:3; 25:31, 32.
18. ಯೆಹೋವ ದೇವರ ಕಡೆಗೆ ನಮಗಿರುವ ಸಂಪೂರ್ಣ ಕರ್ತವ್ಯವನ್ನು ನೆರವೇರಿಸುವುದಾದರೆ, ಯಾವ ಫಲಿತಾಂಶವನ್ನು ನಾವು ಎದುರುನೋಡಬಲ್ಲೆವು?
18 ಈಗ ನಮ್ಮಲ್ಲಿ ಪ್ರತಿಯೊಬ್ಬರೂ ದೈವಿಕ ಪರಿಶೀಲನೆಗೆ ಒಳಗಾಗಿದ್ದೇವೆ. ನಾವು ಆತ್ಮಿಕ ಪ್ರವೃತ್ತಿಯುಳ್ಳವರಾಗಿದ್ದೇವೊ ಅಥವಾ ದೇವರೊಂದಿಗೆ ನಮಗಿರುವ ಸಂಬಂಧವನ್ನು ಲೌಕಿಕ ಪ್ರಭಾವಗಳು ದುರ್ಬಲಗೊಳಿಸುವಂತೆ ನಾವು ಅನುಮತಿಸಿದ್ದೇವೊ? (1 ಕೊರಿಂಥ 2:10-16; 1 ಯೋಹಾನ 2:15-17) ನಾವು ಯುವ ಜನರಾಗಿರಲಿ ವೃದ್ಧರಾಗಿರಲಿ, ನಮ್ಮ ಮಹಾನ್ ಸೃಷ್ಟಿಕರ್ತನನ್ನು ಮೆಚ್ಚಿಸಲು ನಮ್ಮಿಂದ ಸಾಧ್ಯವಾದುದನ್ನೆಲ್ಲ ಮಾಡೋಣ. ನಾವು ಯೆಹೋವನಿಗೆ ವಿಧೇಯರಾಗಿ, ಆತನ ಆಜ್ಞೆಗಳಿಗನುಸಾರ ನಡೆಯುವುದಾದರೆ, ಗತಿಸಿಹೋಗುತ್ತಿರುವ ಈ ಹಳೆಯ ಲೋಕದ ವ್ಯರ್ಥ ವಿಷಯಗಳನ್ನು ನಾವು ತ್ಯಜಿಸಿಬಿಡುವೆವು. ಆಗ ನಾವು, ದೇವರ ವಾಗ್ದತ್ತ ಹೊಸ ವಿಷಯಗಳ ವ್ಯವಸ್ಥೆಯಲ್ಲಿ ನಿತ್ಯಜೀವದ ನಿರೀಕ್ಷೆಯುಳ್ಳವರಾಗಿರಸಾಧ್ಯವಿದೆ. (2 ಪೇತ್ರ 3:13) ದೇವರ ಕಡೆಗೆ ತಮಗಿರುವ ಪೂರ್ಣ ಕರ್ತವ್ಯವನ್ನು ನೆರವೇರಿಸುತ್ತಿರುವವರಿಗೆ ಇವು ಎಂತಹ ಮಹಾನ್ ಪ್ರತೀಕ್ಷೆಗಳಾಗಿವೆ!
ನೀವು ಹೇಗೆ ಉತ್ತರಿಸುವಿರಿ?
◻ ಎಲ್ಲವೂ ವ್ಯರ್ಥವಲ್ಲವೆಂದು ನೀವು ಏಕೆ ಹೇಳಸಾಧ್ಯವಿದೆ?
◻ ಒಬ್ಬ ಯುವ ಕ್ರೈಸ್ತನು ತನ್ನ ಪವಿತ್ರ ಸೇವೆಯ ಕಡೆಗೆ ಪ್ರಾರ್ಥನಾಪೂರ್ವಕ ಪರಿಗಣನೆಯನ್ನು ಏಕೆ ಕೊಡಬೇಕು?
◻ ಯಾವ ರೀತಿಯ ಪುಸ್ತಕಗಳ “ಅತಿವ್ಯಾಸಂಗವು” ಪ್ರಯೋಜನಕರವಾಗಿರುವುದಿಲ್ಲ?
◻ ‘ಮನುಷ್ಯನ ಸಂಪೂರ್ಣ ಕರ್ತವ್ಯವು’ ಏನಾಗಿದೆ?
[ಪುಟ 20 ರಲ್ಲಿರುವ ಚಿತ್ರ]
ಯೆಹೋವನ ಸೇವೆಯನ್ನು ಮಾಡುವವರಿಗೆ ಎಲ್ಲವೂ ವ್ಯರ್ಥವಾಗಿರುವುದಿಲ್ಲ
[ಪುಟ 23 ರಲ್ಲಿರುವ ಚಿತ್ರ]
ಈ ಲೋಕದ ಅನೇಕ ಪುಸ್ತಕಗಳಿಗೆ ಅಸದೃಶವಾಗಿ, ದೇವರ ವಾಕ್ಯವು ಚೈತನ್ಯಕರವೂ ಪ್ರಯೋಜನದಾಯಕವೂ ಆಗಿದೆ