ನಮ್ಮ ಮಹಾ ಸೃಷ್ಟಿಕರ್ತನೊಂದಿಗೆ ಕುರಿಪಾಲನೆ ಮಾಡುವುದು
“ಯೆಹೋವನು ನನಗೆ ಕುರುಬನು; ಕೊರತೆ ಪಡೆನು. ನನ್ನ ಪ್ರಾಣವನ್ನು ಉಜ್ಜೀವಿಸಮಾಡಿ ತನ್ನ ಹೆಸರಿಗೆ ತಕ್ಕಂತೆ ನೀತಿಮಾರ್ಗದಲ್ಲಿ ನನ್ನನ್ನು ನಡಿಸುತ್ತಾನೆ.”—ಕೀರ್ತನೆ 23:1, 3.
1. ಯಾವ ಪ್ರೀತಿಯುಳ್ಳ ಚೈತನ್ಯವನ್ನು ಯೆಹೋವನು ಒದಗಿಸುತ್ತಾನೆ?
ಕೀರ್ತನೆ 23, “ದಾವೀದನ ಗಾನವು” ಬಳಲಿಹೋದ ಅನೇಕ ಆತ್ಮಗಳಿಗೆ ಚೈತನ್ಯವನ್ನು ತಂದಿದೆ. ಅದು ಅವರನ್ನು 6 ನೆಯ ವಚನದಲ್ಲಿ ವ್ಯಕ್ತಪಡಿಸಲಾದ ಆತ್ಮವಿಶ್ವಾಸವನ್ನು ಇಡುವಂತೆ ಉತ್ತೇಜಿಸಿಯದೆ: “ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನನ್ನು ಹಿಂಬಾಲಿಸುವವು. ನಾನು ಸದಾಕಾಲವೂ ಯೆಹೋವನ ಮಂದಿರದಲ್ಲಿ ವಾಸಿಸುವೆನು.” ಭೂಮಿಯ ಎಲ್ಲಾ ಜನಾಂಗಗಳಿಂದ ಈಗ ಒಟ್ಟುಗೂಡಿಸಲ್ಪಡುತ್ತಿರುವವರಾದ ಆತನ ಜನರೊಂದಿಗೆ ಐಕಮತ್ಯದಿಂದ ಯೆಹೋವನ ಆರಾಧನಾಲಯದಲ್ಲಿ ಸದಾಕಾಲವೂ ವಾಸಿಸುವ ಅಪೇಕ್ಷೆಯು ನಿಮ್ಮದೂ ಆಗಿದೆಯೇ? “ನಿಮ್ಮ ಆತ್ಮಗಳನ್ನು ಕಾಯುವ ಕುರುಬನೂ ಅಧ್ಯಕ್ಷನೂ ಆಗಿರುವಾತನಾದ” ನಮ್ಮ ಮಹಾ ನಿರ್ಮಾಣಿಕನಾದ ಯೆಹೋವ ದೇವರು, ಆ ಗುರಿಯನ್ನು ಮುಟ್ಟಲು ನಿಮಗೆ ಸಹಾಯ ಮಾಡುವನು.—1 ಪೇತ್ರ 2:25.
2, 3. (ಎ) ಯೆಹೋವನು ತನ್ನ ಜನರನ್ನು ಹೇಗೆ ಪ್ರೀತಿಪೂರ್ವಕವಾಗಿ ಪರಿಪಾಲಿಸುತ್ತಾನೆ? (ಬಿ) ಯೆಹೋವನ “ಹಿಂಡು” ಕೌತುಕವುಂಟುಮಾಡುವ ರೀತಿಯಲ್ಲಿ ವೃದ್ಧಿಯಾದದ್ದು ಹೇಗೆ?
2 “ನೂತನಾಕಾಶಮಂಡಲ ಮತ್ತು ನೂತನಭೂಮಂಡಲ” ದ ಈ ಸೃಷ್ಟಿಕರ್ತನು, “ದೇವರ ಮನೆ” ಯಾದ ಕ್ರೈಸ್ತ ಸಭೆಯ ವ್ಯವಸ್ಥಾಪಕನೂ ಸರ್ವಶ್ರೇಷ್ಠ ಮೇಲ್ವಿಚಾರಕನೂ ಆಗಿದ್ದಾನೆ. (2 ಪೇತ್ರ 3:13; 1 ತಿಮೊಥೆಯ 3:15) ಯೆಶಾಯ 40:10, 11 ಸ್ಪಷ್ಟವಾಗಿಗಿ ತಿಳಿಸುವಂತೆ, ಆತನು ತನ್ನ ಜನರ ಕುರಿಪಾಲನೆಯಲ್ಲಿ ಆಳವಾಗಿ ಆಸಕ್ತನಾಗಿದ್ದಾನೆ: “ಆಹಾ, ಕರ್ತನಾದ ಯೆಹೋವನು ಶೂರನಾಗಿ ಬರುವನು, ತನ್ನ ಭುಜಬಲದಿಂದಲೇ ಆಳುವನು; ಇಗೋ, ಆತನ ಕ್ರಿಯಾಲಾಭವು ಆತನೊಂದಿಗಿದೆ, ಆತನ ಶ್ರಮದ ಫಲವು ಆತನ ಮುಂದಿದೆ. ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು. ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು. ಹಾಲು ಕುಡಿಸುವ ಮರಿಗಳನ್ನು ಮೆಲ್ಲನೆ ನಡಿಸುವನು.”
3 ಒಂದು ವಿಸ್ತಾರವಾದ ಅರ್ಥದಲ್ಲಿ, ಈ “ಮಂದೆ”ಯಲ್ಲಿ ಕ್ರೈಸ್ತ ಸತ್ಯದಲ್ಲಿ ಬಹಳ ಸಮಯದಿಂದ ನಡೆದವರು ಮತ್ತು—ಆಫ್ರಿಕ ಮತ್ತು ಪೂರ್ವ ಯೂರೋಪಿನಲ್ಲಿ ಈಗ ಮಹಾ ಸಂಖ್ಯೆಯಲ್ಲಿ ದೀಕ್ಷಾಸ್ನಾನ ಹೊಂದುತ್ತಿರುವಂಥವರಾದ—ಬಹಳ ಇತ್ತೀಚೆಗೆ ಒಟ್ಟುಗೂಡಿಸಲ್ಪಟ್ಟವರಾದ “ಕುರಿಮರಿಗಳು” ಕೂಡಿರುತ್ತಾರೆ. ಯೆಹೋವನ ಬಲಾಢ್ಯ, ರಕ್ಷಣಾ ಹಸ್ತವು ಅವರನ್ನು ಕೂಡಿಸಿ ಎದೆಗೆತ್ತಿಕೊಳ್ಳುತ್ತದೆ. ಅವರು ಅಲೆದಾಡುವ ಕುರಿಗಳಂತಿದ್ದರೂ, ಅವರೀಗ ತಮ್ಮ ಅತಿಪ್ರಿಯ ತಂದೆಯೂ ಕುರುಬನೂ ಆಗಿರುವಾತನೊಂದಿಗೆ ಅತ್ಯಾಪ್ತ ಸಂಬಂಧಕ್ಕೆ ಬಂದಿರುತ್ತಾರೆ.
ಯೆಹೋವನ ಜೊತೆ ಕುರುಬನು
4, 5. (ಎ) “ಒಳ್ಳೇ ಕುರುಬನು” ಯಾರು, ಮತ್ತು ಪ್ರವಾದನೆಯು ಅವನಿಗೆ ಹೇಗೆ ಕೈತೋರಿಸಿದೆ? (ಬಿ) ಯಾವ ಬೇರ್ಪಡಿಸುವ ಕೆಲಸದ ಮೇಲ್ವಿಚಾರವನ್ನು ಯೇಸು ನಡಿಸುತ್ತಿದ್ದಾನೆ, ಯಾವ ಎದ್ದುಕಾಣುವ ಫಲಿತಾಂಶದೊಂದಿಗೆ?
4 ಪರಲೋಕದಲ್ಲಿ ತನ್ನ ತಂದೆಯ ಬಲಗಡೆಯಲ್ಲಿ ಸೇವೆ ಮಾಡುತ್ತಿರುವ, “ಒಳ್ಳೇ ಕುರುಬ” ಯೇಸು ಕ್ರಿಸ್ತನು ಸಹ, “ಕುರಿಗಳ” ಕಡೆಗೆ ಕನಿಕರದ ಗಮನವನ್ನು ಕೊಡುತ್ತಾನೆ. ಆತನು ತನ್ನ ಜೀವವನ್ನು ಮೊದಲಾಗಿ “ಚಿಕ್ಕ ಹಿಂಡಿ” ನ ಅಭಿಷಿಕ್ತರಿಗಾಗಿ ಮತ್ತು ಅನಂತರ, ಇಂದು, ಆತನ “ಬೇರೆ ಕುರಿಗಳ” ಮಹಾ ಸಮೂಹದವರಿಗಾಗಿ ಒಪ್ಪಿಸಿಕೊಟ್ಟನು. (ಲೂಕ 12:32; ಯೋಹಾನ 10:14, 16) ಮಹಾ ಕುರುಬನಾದ ಯೆಹೋವ ದೇವರು, ಈ ಎಲ್ಲಾ ಕುರಿಗಳನ್ನು ಸಂಬೋಧಿಸುತ್ತಾ ಅನ್ನುವುದು: “ಇಗೋ, . . . ನಾನೇ ಕುರಿಮೇಕೆಗಳಿಗೂ ನ್ಯಾಯ ತೀರಿಸುವೆನು. ನನ್ನ ಹಿಂಡನ್ನು ಕಾಯಲಿಕ್ಕೆ ಒಬ್ಬನೇ ಕುರುಬನನ್ನು ಏರ್ಪಡಿಸುವೆನು. ನನ್ನ ಸೇವಕನಾದ ದಾವೀದನೆಂಬ ಆ ಕುರುಬನು ಅದನ್ನು ಮೇಯಿಸುವನು; ಹೌದು, ಅದರ ಕುರುಬನಾಗಿ ಅದನ್ನು ಮೇಯಿಸುತ್ತಾ ಬರುವನು. ಯೆಹೋವನಾದ ನಾನು ನನ್ನ ಜನರ ದೇವರಾಗಿರುವೆನು; ನನ್ನ ಸೇವಕನಾದ ದಾವೀದನು ಅವರನ್ನು ಆಳುವ ಪ್ರಭುವಾಗಿರುವನು; ಯೆಹೋವನಾದ ನಾನೇ ಅದನ್ನು ನುಡಿದಿದ್ದೇನೆ.”—ಯೆಹೆಜ್ಕೇಲ 34:20-24.
5 “ನನ್ನ ಸೇವಕನಾದ ದಾವೀದ” ಎಂಬ ಹೆಸರು, ದಾವೀದನ ಸಿಂಹಾಸನವನ್ನು ಬಾಧ್ಯವಾಗಿ ಹೊಂದುವ “ಸಂತಾನ” ವಾದ ಕ್ರಿಸ್ತ ಯೇಸುವಿಗೆ ಪ್ರವಾದನಾರೂಪವಾಗಿ ಸೂಚಿಸುತ್ತದೆ. (ಕೀರ್ತನೆ 89:35, 36) ಜನಾಂಗಗಳ ತೀರ್ಪಿನ ಈ ದಿನದಲ್ಲಿ, ಯೆಹೋವನ ಜೊತೆ ಕುರುಬನೂ ರಾಜನೂ ಆಗಿರುವ ದಾವೀದ ಪುತ್ರನಾದ ಯೇಸು ಕ್ರಿಸ್ತನು, “ಕುರಿ” ಗಳೆಂದು ಹೇಳಿಕೊಂಡರೂ ಕಾರ್ಯತಃ “ಆಡು” ಗಳಾಗಿರುವವರೊಳಗಿಂದ ಮಾನವಕುಲದ “ಕುರಿ” ಗಳನ್ನು ಬೇರ್ಪಡಿಸುತ್ತಿದ್ದಾನೆ. (ಮತ್ತಾಯ 25:31-33) ಈ “ಒಬ್ಬನೇ ಕುರುಬನು” ಕುರಿಗಳನ್ನು ಮೇಯಿಸಲಿಕ್ಕಾಗಿಯೂ ಎಬ್ಬಿಸಲ್ಪಟ್ಟಿದ್ದಾನೆ. ಈ ಪ್ರವಾದನೆಯ ಎಂಥ ಮಹಿಮಾಯುಕ್ತ ನೆರವೇರಿಕೆಯನ್ನು ನಾವಿಂದು ಕಾಣುತ್ತೇವೆ! ಒಂದು ಹೊಸ ಲೋಕ ಕ್ರಮದ ಮೂಲಕ ಮಾನವಕುಲವನ್ನು ಐಕ್ಯತೆಗೆ ತರುವ ಕುರಿತು ರಾಜನೀತಿಜ್ಞರು ಕೇವಲ ಮಾತಾಡುವಾಗ, ಈ ಒಬ್ಬನೇ ಕುರುಬನಾದರೋ ಬಹುಭಾಷೆಗಳ ಸಾಕ್ಷಿ ಚಟುವಟಿಕೆಯ ಮೂಲಕ ಸಕಲ ಜನಾಂಗಗಳ ಕುರಿಗಳನ್ನು ಕಾರ್ಯತಃ ಐಕ್ಯತೆಗೆ ತರುತ್ತಾ ಇದ್ದಾನೆ, ಭೂಮಿಯಲ್ಲಿರುವ ದೇವರ ಸಂಸ್ಥೆಯು ಯಾವತ್ತೂ ಇಂಥ ಒಂದು ಕಾರ್ಯದಲ್ಲಿ ತೊಡಗಲು ಶಕವ್ತಾಗಿರುವದು.
6, 7. ಕುರಿಗಳಿಗೆ “ಹೊತ್ತುಹೊತ್ತಿಗೆ ಆಹಾರ” ದೊರೆಯುವಂತೆ ಮಾಡಲು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಹೇಗೆ ನೋಡಿಕೊಂಡಿದ್ದಾನೆ?
6 ರಾಜ್ಯ ಸಂದೇಶವು ಹೊಸ ಕ್ಷೇತ್ರಗಳಿಗೆ ಹಬ್ಬುತ್ತಿರುವಾಗ, ಒಬ್ಬನೇ ಕುರುಬನಿಂದ ನಿಯೋಗವನ್ನು ಪಡೆದ ಪ್ರಕಾರ, ಅಭಿಷಿಕ್ತ ಕ್ರೈಸ್ತರ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” “ಹೊತ್ತು ಹೊತ್ತಿಗೆ ಆಹಾರ” ಕೊಡಲಿಕ್ಕೆ ಪ್ರತಿಯೊಂದು ಒದಗಿಸುವಿಕೆಯನ್ನು ಮಾಡುವಂತೆ ನೋಡಿಕೊಳ್ಳುತ್ತಾನೆ. (ಮತ್ತಾಯ 24:45) ವಾಚ್ ಟವರ್ ಸೊಸೈಟಿಯ ಭೂಮಿಯಾದ್ಯಂತ ಇರುವ 33 ಪ್ರಿಂಟಿಂಗ್ ಬ್ರಾಂಚ್ಗಳಲ್ಲಿ ಹೆಚ್ಚಿನವು, ಅಧಿಕ ಮತ್ತು ಉತ್ತಮ ತರದ ಬೈಬಲ್ ಪಠ್ಯಪುಸ್ತಕಗಳು ಮತ್ತು ಪತ್ರಿಕೆಗಳಿಗಾಗಿ ಗತಿವೃದ್ಧಿಯ ಬೇಡಿಕೆಯನ್ನು ಮುಟ್ಟಲು ಉತ್ಪಾದನೆಯನ್ನು ಹೆಚ್ಚಿಸುತ್ತಾ ಇವೆ.
7 ಸುಮಾರು 200 ಭಾಷೆಗಳಲ್ಲಿ ಭಾಷಾಂತರದ ಗುಣಮಟ್ಟವನ್ನು ಪ್ರಗತಿಗೊಳಿಸಲು ಮತ್ತು ಇಡೀ ಲೋಕ ಹೊಲವನ್ನು ಆವರಿಸಲು ಬೇಕಾದ ಅಧಿಕ ಭಾಷೆಗಳಲ್ಲಿ ಭಾಷಾಂತರವನ್ನು ಆರಂಭಿಸಲು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು ಸಾಧ್ಯವಾದ ಎಲ್ಲಾ ಪ್ರಯತ್ನವನ್ನು ಮಾಡುತ್ತಲಿದೆ. ಇದು ಅಪೊಸ್ತಲರ ಕೃತ್ಯಗಳು 1:8 ರಲ್ಲಿ ಯೇಸು ತನ್ನ ಶಿಷ್ಯರಿಗೆ ಕೊಟ್ಟ ನಿಯೋಗದ ಬೆಂಬಲದಲ್ಲಿದೆ: “ಪವಿತ್ರಾತ್ಮವು ನಿಮ್ಮ ಮೇಲೆ ಬರಲು . . . ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರಬೇಕು.” ಅಷ್ಟಲ್ಲದೆ, ಈಗಾಗಲೇ, ಇಡೀ ಅಥವಾ ಅಂಶಿಕವಾಗಿ 14 ಭಾಷೆಗಳಲ್ಲಿ ಮುದ್ರಿತವಾದ ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್, ಈಗ ಯೂರೋಪ್, ಆಫ್ರಿಕ ಮತ್ತು ಪೂರ್ವ ದೇಶದ ಇತರ 16 ಭಾಷೆಗಳಲ್ಲಿ ಭಾಷಾಂತರವಾಗುತಲ್ತಿದೆ.
“ದೇವರ ಸಮಾಧಾನದಲ್ಲಿ” ಆನಂದಿಸುವುದು
8. ಯೆಹೋವನು ಅವರೊಂದಿಗೆ ಏರ್ಪಡಿಸಿರುವ ಸಮಾಧಾನದ ಒಡಂಬಡಿಕೆಯಿಂದ ಕುರಿಗಳು ಹೇಗೆ ಹೇರಳವಾಗಿ ಆಶೀರ್ವದಿಸಲ್ಪಟ್ಟಿವೆ?
8 ಅವನ ಒಬ್ಬನೇ ಕುರುಬನಾದ ಯೇಸು ಕ್ರಿಸ್ತನ ಮೂಲಕ, ಯೆಹೋವನು ತನ್ನ ಸುಪುಷ್ಟ ಕುರಿಗಳೊಂದಿಗೆ ಒಂದು “ಸಮಾಧಾನದ ಒಡಂಬಡಿಕೆ”(NW) ಯನ್ನು ಮಾಡಿಕೊಳ್ಳುವನು. (ಯೆಶಾಯ 54:10) ಯೇಸುವಿನ ಸುರಿದ ರಕ್ತದಲ್ಲಿ ನಂಬಿಕೆಯನ್ನಿಡುತ್ತಾ, ಈ ಕುರಿಗಳು ಬೆಳಕಿನಲ್ಲಿ ನಡೆಯಲು ಶಕವ್ತಾಗಿವೆ. (1 ಯೋಹಾನ 1:7) ‘ಅವರ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವ ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿ’ ಯಲ್ಲಿ ಅವರು ಆನಂದಿಸುತ್ತಾರೆ. (ಫಿಲಿಪ್ಪಿ 4:7) ಯೆಹೆಜ್ಕೇಲ 34:25-28 ವಿವರಿಸುತ್ತಾ ಹೋಗುವ ಪ್ರಕಾರ, ಯೆಹೋವನು ತನ್ನ ಕುರಿಗಳನ್ನು ಚೈತನ್ಯಕರ ಸಮೃದ್ಧಿಯೂ, ಫಲದಾಯಕತೆಯೂ ಉಳ್ಳ ಒಂದು ಸುರಕ್ಷೆಯ ಆನಂದಭರಿತ ಪರಿಸ್ಥಿತಿಯಾದ, ಒಂದು ಆತ್ಮಿಕ ಪರದೈಸದೊಳಗೆ ನಡಿಸುವನು. ಈ ಪ್ರೀತಿಯುಳ್ಳ ಕುರುಬನು ತನ್ನ ಕುರಿಗಳ ಕುರಿತು ಹೇಳುವುದು: “ಅವರ ಮೇಲೆ ಹೇರಿದ ನೊಗದ ಗೂಟಗಳನ್ನು ನಾನು ಮುರಿದು ಹಾಕಿ ಅವರನ್ನು ಅಡಿಯಾಳಾಗಿ ಮಾಡಿಕೊಂಡವರ ಅಧೀನದಿಂದ ಬಿಡಿಸಿದಾಗ ನಾನೇ ಯೆಹೋವನು ಎಂದು ಅವರಿಗೆ ದೃಢವಾಗುವದು. ಅಂದಿನಿಂದ ಅವರನ್ನು ಅನ್ಯಜನರು ಸೂರೆಮಾಡರು. . . . ಅವರು ಯಾರಿಗೂ ಹೆದರದೆ ನೆಮ್ಮದಿಯಾಗಿ ವಾಸಿಸುವರು.”
9. ‘ನೊಗದ ಗೂಟಗಳನ್ನು ಮುರಿದ’ ಮೂಲಕ ದೇವರ ಜನರಿಗೆ ಯಾವ ಸಂದರ್ಭಗಳು ತೆರೆಯಲ್ಪಟ್ಟವು?
9 ಈವಾಗಲೇ, ಇತ್ತೀಚಿನ ವರ್ಷಗಳಲ್ಲಿ, ಯೆಹೋವನ ಸಾಕ್ಷಿಗಳು ಅನೇಕ ದೇಶಗಳಲ್ಲಿ “ಅವರ ಮೇಲೆ ಹೇರಿದ ನೊಗದ ಗೂಟಗಳು” ಮುರಿಯಲ್ಪಡುವುದನ್ನು ಅನುಭವಿಸಿದ್ದಾರೆ. ಹಿಂದೆಂದಿಗಿಂತಲೂ ಸಾರಲು ಅವರು ಸ್ವತಂತ್ರರಾಗಿದ್ದಾರೆ. ಮತ್ತು ಪ್ರತಿಯೊಂದು ದೇಶದಲ್ಲಿರುವ ನಾವೆಲ್ಲರೂ, ಈ ಕಾರ್ಯವನ್ನು ಮಾಡಿ ಪೂರೈಸುವುದಕ್ಕಾಗಿ ಮುಂದೊತ್ತುವಾಗ ಯೆಹೋವನು ಒದಗಿಸುವ ಸುರಕ್ಷೆಯ ಸದುಪಯೋಗವನ್ನು ಮಾಡೋಣ. ಮಾನವ ಕುಲವು ಎಂದಾದರೂ ಕಾಣುವ ಆ ಮಹತ್ತಾದ ಸಂಕಟದ ಸಮಯವನ್ನು ನಾವು ಸಮೀಪಿಸುವಾಗ ಎಂಥ ಆಶ್ವಾಸನೆಯನ್ನು ಯೆಹೋವನು ನಮಗೆ ಕೊಡುತ್ತಾನೆ!—ದಾನಿಯೇಲ 12:1; ಮತ್ತಾಯ 24:21, 22.
10. ಒಳ್ಳೇ ಕುರುಬನಾದ ಕ್ರಿಸ್ತ ಯೇಸುವಿಗೆ ನೆರವಾಗಲು ಯೆಹೋವನು ಯಾರನ್ನು ಒದಗಿಸಿದ್ದಾನೆ, ಇವರಲ್ಲಿ ಕೆಲವರು ಅಪೊಸ್ತಲ ಪೌಲನಿಂದ ಹೇಗೆ ಉದ್ದೇಶಿಸಿ ನುಡಿಯಲ್ಪಟ್ಟರು?
10 ದುಷ್ಟರ ವಿರುದ್ಧವಾಗಿ ಆತನ ಮುಯ್ಯಿತೀರಿಸುವ ಆ ದಿನಕ್ಕಾಗಿ ತಯಾರಿಯಲ್ಲಿ, ಮಂದೆಯನ್ನು ಪಾಲಿಸುವುದರಲ್ಲಿ ಒಳ್ಳೇ ಕುರುಬನಾದ ಕ್ರಿಸ್ತ ಯೇಸುವಿಗೆ ಸಹಾಯಮಾಡಲು ಯೆಹೋವನು ಉಪಕುರುಬರನ್ನು ಒದಗಿಸಿರುತ್ತಾನೆ. ಇವರು ಪ್ರಕಟನೆ 1:16 ರಲ್ಲಿ ಯೇಸುವಿನ ಬಲಗೈಯಲ್ಲಿರುವ “ಏಳು ನಕ್ಷತ್ರಗಳ” ಒಂದು ಪೂರ್ಣ ಸಂಖ್ಯೆಯಾಗಿ ವರ್ಣಿಸಲ್ಪಟ್ಟಿದ್ದಾರೆ. ಒಂದನೆಯ ಶತಮಾನದಲ್ಲಿ, ಈ ಉಪಕುರುಬರ ಒಂದು ಪ್ರತಿನಿಧಿ ಮಂಡಲಿಯನ್ನು ಉದ್ದೇಶಿಸಿ ಅಪೊಸ್ತಲ ಪೌಲನು ಹೇಳಿದ್ದು: “ದೇವರು ಸ್ವರಕ್ತದಿಂದ [ಸಕ್ವುಮಾರನ ರಕ್ತದಿಂದ, NW] ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.” (ಅ. ಕೃತ್ಯಗಳು 20:28) ಇಂದು ಭೂಮಿಯಾದ್ಯಂತ ಇರುವ 69,558 ಸಭೆಗಳಲ್ಲಿ ಹತ್ತಾರು ಸಾವಿರ ಉಪಕುರುಬರು ಸೇವೆಮಾಡುತ್ತಿದ್ದಾರೆ.
ಉಪಕುರುಬರು ಮುಂದಾಳುಗಳಾಗಿ!
11. ಪದೇ ಪದೇ ಸೇವೆಯಾದ ಕ್ಷೇತ್ರಗಳಲ್ಲಿ ಕೆಲವು ಕುರುಬರು ಹೇಗೆ ಸಾಫಲ್ಯದಿಂದ ಮುಂದಾಳುತನ ವಹಿಸಿದ್ದಾರೆ?
11 ಅನೇಕ ಸ್ಥಳಗಳಲ್ಲಿ ಈ ಕುರುಬರು ಈ ಕಡೇ ದಿನಗಳಲ್ಲಿ ಪದೇ ಪದೇ ಸೇವೆಯಾದ ಕ್ಷೇತ್ರಗಳಲ್ಲಿ ನಾಯಕತ್ವವನ್ನು ವಹಿಸಬೇಕಾಗಿದೆ. ಮಂದೆಯ ಉತ್ಸಾಹವನ್ನು ಅವರು ಹೇಗೆ ಉನ್ನತ ಮಟ್ಟದಲ್ಲಿ ಇಡಬಲ್ಲರು? ಈ ಕುರುಬರು ಅತಿ ಪ್ರಶಂಸನೀಯವಾಗಿ ಕೆಲಸ ಮಾಡುತ್ತಿದ್ದಾರೆ, ಮತ್ತು ಅವರು ಸಾಫಲ್ಯ ಪಡೆದಿರುವ ವಿಧಾನಗಳಲ್ಲಿ ಒಂದು ಯಾವುದಂದರೆ ಸಹಾಯಕ ಮತ್ತು ಕ್ರಮದ ಪಯನೀಯರ ಸೇವೆಯನ್ನು ಹುರಿದುಂಬಿಸುವ ಮೂಲಕ. ಅನೇಕ ಕುರುಬರು ತಾವೇ ಈ ಸೇವೆಯಲ್ಲಿ ಭಾಗವಹಿಸಿದ್ದಾರೆ, ಮತ್ತು ಅದನ್ನು ಮಾಡಲು ಅಶಕ್ತರಾದ ಪ್ರಚಾರಕರು ಸಹ ಪಯನೀಯರ ಆತ್ಮವನ್ನು ಪ್ರದರ್ಶಿಸಿದ್ದಾರೆ, ಕ್ಷೇತ್ರದಲ್ಲಿರುವ ನಿರಾಸಕ್ತಿಯನ್ನು ಪರಿಹರಿಸುವುದರಲ್ಲಿ ಸಹಾಯಕವಾದ ಸಂತೋಷದೊಂದಿಗೆ ಸೇವೆ ಮಾಡಿದ್ದಾರೆ. (ಕೀರ್ತನೆ 100:2; 104:33, 34; ಫಿಲಿಪ್ಪಿ 4:4, 5) ಹೀಗೆ, ದುಷ್ಟತನ ಮತ್ತು ಬಹುಮಟ್ಟಿಗೆ ಅರಾಜಕತೆಯೇ ಲೋಕವನ್ನು ಮುಳುಗಿಸಿಬಿಟ್ಟಿರುವಾಗ, ಅನೇಕ ಕುರಿಸದೃಶ ಜನರು ರಾಜ್ಯದ ನಿರೀಕ್ಷೆಯೆಡೆಗೆ ಎಚ್ಚರಗೊಳಿಸಲ್ಪಡುತ್ತಿದ್ದಾರೆ.—ಮತ್ತಾಯ 12:18, 21; ರೋಮಾಪುರ 15:12.
12. ತೀವ್ರಗತಿಯಿಂದ ವೃದ್ಧಿಯಾಗುತ್ತಿರುವ ಕ್ಷೇತ್ರಗಳಲ್ಲಿ ಯಾವ ಗಂಭೀರ ಸಮಸ್ಯೆಯು ಅಸ್ತಿತ್ವದಲ್ಲಿದೆ, ಮತ್ತು ಇದು ಕೆಲವು ಸಾರಿ ಹೇಗೆ ನಿರ್ವಹಿಸಲ್ಪಟ್ಟಿದೆ?
12 ಇನ್ನೊಂದು ಸಮಸ್ಯೆಯೇನಂದರೆ ಆಗಿಂದಾಗ್ಯೆ ಮಂದೆಯ ಪರಿಪಾಲನೆಗಾಗಿ ಸಾಕಷ್ಟು ಯೋಗ್ಯತೆ ಪಡೆದ ಕುರುಬರು ಇಲ್ಲದಿರುವುದು. ಪೂರ್ವ ಯೂರೋಪಿನಂತೆ, ಎಲ್ಲಿ ತೀವ್ರ ವೃದ್ಧಿಯು ಉಂಟಾಗಿದೆಯೋ ಅಲ್ಲಿ, ನೇಮಿತ ಹಿರಿಯರೇ ಇಲ್ಲದಿರುವ ಅನೇಕ ಹೊಸ ಸಭೆಗಳು ಇವೆ. ಸಿದ್ಧಮನಸ್ಸಿನ ಕುರಿಗಳು ಹೊರೆಯನ್ನು ಹೊರುತ್ತಾ ಇದ್ದಾರೆ, ಆದರೆ ಅವರು ತೀರಾ ಅನನುಭವಿಗಳು, ಮತ್ತು ಸಭೆಗಳಿಗೆ ಹಿಂಡು ಹಿಂಡಾಗಿ ಬರುತ್ತಿರುವ ಕುರಿಗಳನ್ನು ತರಬೇತುಗೊಳಿಸಲು ಸಹಾಯವು ಬೇಕಾಗಿದೆ. ಎಲ್ಲಿ ತೀವ್ರ ಬೆಳವಣಿಗೆ ಇದೆಯೋ ಆ ಬ್ರೇಸಿಲ್, ಮೆಕ್ಸಿಕೋ, ಮತ್ತು ಸೀಎರದಂಥ ದೇಶಗಳಲ್ಲಿ, ತುಲನಾತ್ಮಕವಾಗಿ ಯುವ ಸಾಕ್ಷಿಗಳನ್ನು, ಸೇವೆಯ ಸಂಸ್ಥಾಪನೆಯಲ್ಲಿ ಮತ್ತು ಬೇರೆ ಹೊಸಬರನ್ನು ತರಬೇತು ಮಾಡಲು ಉಪಯೋಗಿಸಬೇಕಾಗಿದೆ. ಪಯನೀಯರರು ಅತ್ಯುತ್ತಮ ಸಹಾಯವನ್ನು ನೀಡುತ್ತಿದ್ದಾರೆ, ಸಹೋದರಿಯರು ಹೊಸ ಸಹೋದರಿಯರನ್ನು ತರಬೇತು ಮಾಡಬಲ್ಲ ಒಂದು ಕ್ಷೇತ್ರವು ಇಲ್ಲಿದೆ. ಯೆಹೋವನು ತನ್ನ ಆತ್ಮದ ಮೂಲಕ ಫಲಿತಾಂಶಗಳನ್ನು ಆಶೀರ್ವದಿಸುತ್ತಾನೆ. ಅಭಿವೃದ್ಧಿಯು ಬಿಡದೆ ಬರುತ್ತಾ ಇದೆ.—ಯೆಶಾಯ 54:2, 3.
13. (ಎ) ಬೆಳೆಯು ಅಷ್ಟು ಬಹಳವಾಗಿರುವಾಗ, ಎಲ್ಲಾ ಸಾಕ್ಷಿಗಳು ಯಾವುದಕ್ಕಾಗಿ ಪ್ರಾರ್ಥಿಸಬೇಕು? (ಬಿ) ದೇವಜನರ ಪ್ರಾರ್ಥನೆಗಳು ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಮತ್ತು ಅದಕ್ಕೆ ಮುಂಚೆ ಹೇಗೆ ಉತ್ತರಿಸಲ್ಪಟ್ಟವು?
13 ಎಲ್ಲಿ ಸಾರುವ ಕಾರ್ಯವು ಸುಸಂಸ್ಥಾಪಿಸಲ್ಪಟ್ಟಿದೆಯೇ ಆ ದೇಶಗಳಲ್ಲಿ, ಇತ್ತೀಚೆಗೆ ನಿರ್ಬಂಧಗಳು ತೆಗೆಯಲ್ಪಟ್ಟ ದೇಶಗಳಲ್ಲಿ, ಮತ್ತು ಹೊಸದಾಗಿ ತೆರೆಯಲ್ಪಟ್ಟ ಕ್ಷೇತ್ರಗಳಲ್ಲಿ, ಮತ್ತಾಯ 9:37, 38 ರ ಮಾತುಗಳು ಇನ್ನೂ ಅನ್ವಯಿಸುತ್ತವೆ: “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸಗಾರರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.” ಯೆಹೋವನು ಹೆಚ್ಚು ಮಂದಿ ಕುರುಬರನ್ನು ಏರ್ಪಡಿಸುವಂತೆಯೂ ನಾವು ಬೇಡಿಕೊಳ್ಳುವ ಅಗತ್ಯವಿದೆ. ಆತನು ಅದನ್ನು ಮಾಡಶಕ್ತನೆಂಬದನ್ನು ಆತನು ಪ್ರದರ್ಶಿಸಿದ್ದಾನೆ. ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಮತ್ತು ಅದಕ್ಕೆ ಮುಂಚೆ, ಕ್ರೂರ ಅಶ್ಶೂರ್ಯರಂಥ ನಿರಂಕುಶಪ್ರಭುಗಳು ಯೆಹೋವನ ಸಾಕ್ಷಿಗಳನ್ನು ನಾಶಮಾಡಿಬಿಡಲು ಪ್ರಯತ್ನಿಸಿದರು. ಆದರೆ ಅವರ ಪ್ರಾರ್ಥನೆಗಳಿಗೆ ಉತ್ತರವಾಗಿ, ಯೆಹೋವನು ಅವರ ಸಂಸ್ಥಾಪನೆಯನ್ನು ಶುದ್ಧೀಕರಿಸಿ, ಅದನ್ನು ನಿಜವಾಗಿಯೂ ದೇವಪ್ರಭುತ್ವವನ್ನಾಗಿ ಮಾಡಿ, ಬೇಕಾದ “ಕುರುಬರನ್ನು” ಒದಗಿಸಿಕೊಟ್ಟನು.a ಇದು ಪ್ರವಾದನೆಗೆ ಹೊಂದಿಕೆಯಲ್ಲಿದೆ: “ಅಶ್ಶೂರ್ಯರು ನಮ್ಮ ದೇಶವನ್ನು ನುಗ್ಗಿ ನಮ್ಮ ಅರಮನೆಗಳನ್ನು ತುಳಿದು ಹಾಕುವಾಗ ನಾನು ಅವರ ವಿರುದ್ಧವಾಗಿ ಏಳು ಮಂದಿ ಪಾಲಕರನ್ನು [ಕುರುಬರನ್ನು, NW] ಹೌದು, ಎಂಟು ಮಂದಿ ಪುರುಷಶ್ರೇಷ್ಠರನ್ನು ಏರ್ಪಡಿಸುವೆನು”—ಮುಂದಾಳುತನ ವಹಿಸಲು ಸಮರ್ಪಿತ ಹಿರಿಯರ ಸಾಕಷ್ಟು ಮೊತ್ತಕ್ಕಿಂತಲೂ ಹೆಚ್ಚು.—ಮೀಕ 5:5.
14. ಸಂಸ್ಥೆಯಲ್ಲಿ ಯಾವ ಮಹತ್ತಾದ ಅಗತ್ಯತೆಯು ಅಸ್ತಿತ್ವದಲ್ಲಿದೆ, ಮತ್ತು ಯಾವ ಉತ್ತೇಜನವು ಸಹೋದರರಿಗೆ ಕೊಡಲ್ಪಟ್ಟಿದೆ?
14 ಸ್ನಾನಿತರಾದ ಎಲ್ಲಾ ಪುರುಷ ಸಾಕ್ಷಿಗಳಿಗೆ ಹೆಚ್ಚಿನ ಸುಯೋಗಗಳನ್ನು ಎಟಕಿಸಿಕೊಳ್ಳುವ ಒಂದು ಮಹತ್ತಾದ ಅಗತ್ಯತೆಯು ಇದೆ. (1 ತಿಮೊಥೆಯ 3:1) ಪರಿಸ್ಥಿತಿಯು ಜರೂರಿಯದ್ದು. ಈ ವ್ಯವಸ್ಥೆಯ ಅಂತ್ಯವು ವೇಗವಾಗಿ ಗೋಚರಿಸುತ್ತಿದೆ. ಹಬಕ್ಕೂಕ 2:3 ಹೇಳುವುದು: “ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು. ಆದರೆ ಪರಿಣಾಮಕ್ಕೆ ತರ್ವೆಪಡುತ್ತದೆ, ಮೋಸಮಾಡದು; . . . ಅದು ಬಂದೇ ಬರುವದು, ತಾಮಸವಾಗದು.” ಸಹೋದರರೇ, ಅಂತ್ಯವು ಬರುವ ಮುಂಚೆ ಈ ಕುರಿಪಾಲನೆಯ ಕೆಲಸದಲ್ಲಿ ಅಧಿಕ ಸುಯೋಗಗಳಿಗಾಗಿ ಯೋಗ್ಯತೆ ಪಡೆಯುವುದಕ್ಕಾಗಿ ನೀವು ಎಟಕಿಸಿಕೊಳ್ಳಬಲ್ಲಿರೋ?—ತೀತ 1:6-9.
ದೇವಪ್ರಭುತ್ವ ಕುರಿಪಾಲನೆ
15. ಯಾವ ರೀತಿಯಲ್ಲಿ ಯೆಹೋವನ ಜನರು ಒಂದು ದೇವಪ್ರಭುತ್ವವಾಗಿದ್ದಾರೆ?
15 ಯೆಹೋವನ ಸಂಸ್ಥೆಯ ವಿಸ್ತರಣದಲ್ಲಿ ಪೂರ್ಣವಾಗಿ ಭಾಗವಹಿಸಲಿಕ್ಕಾಗಿ, ಆತನ ಜನರು ತಮ್ಮ ಹೊರನೋಟದಲ್ಲಿ ದೇವಪ್ರಭುತ್ವವಾದಿಗಳಾಗಿರುವ ಅಗತ್ಯತೆ ಇದೆ. ಅವರದನ್ನು ಹೇಗೆ ಪೂರೈಸಶಕ್ತರು? ಒಳ್ಳೇದು, “ದೇವಪ್ರಭುತ್ವ” ಎಂಬ ಪದಸರಣಿಯ ಅರ್ಥವೇನು? ವೆಬ್ಸ್ಟರ್ಸ್ ನ್ಯೂ ಟ್ವೆಂಟಿಯತ್ ಸೆಂಟ್ಯುರಿ ಡಿಕ್ಷನರಿ, “ದೇವಪ್ರಭುತ್ವ” ವನ್ನು “ದೇವರಿಂದ ಒಂದು ರಾಜ್ಯದ ಆಳಿ” ಯಾಗಿ ಅರ್ಥ ವಿವರಿಸುತ್ತದೆ. ಯೆಹೋವನ ಜನರ “ಪವಿತ್ರ ಜನಾಂಗ” ಒಂದು ದೇವಪ್ರಭುತ್ವವಾಗಿರುವುದು ಇದೇ ಅರ್ಥದಲ್ಲಿ. (1 ಪೇತ್ರ 2:9; ಯೆಶಾಯ 33:22) ಆ ದೇವಪ್ರಭುತ್ವ ಜನಾಂಗದ ಸದಸ್ಯರು ಅಥವಾ ಸಹವಾಸಿಗಳೋಪಾದಿ, ನಿಜ ಕ್ರೈಸ್ತರು ದೇವರ ವಾಕ್ಯ ಮತ್ತು ಅದರ ತತ್ವಗಳಿಗೆ ವಿಧೇಯತೆಯಲ್ಲಿ ಜೀವಿಸತಕ್ಕದ್ದು ಮತ್ತು ಸೇವಿಸತಕ್ಕದ್ದು.
16. ಮೂಲಭೂತವಾಗಿ ನಾವು ಹೇಗೆ ನಮ್ಮನ್ನು ದೇವಪ್ರಭುತ್ವವಾದಿಗಳಾಗಿ ತೋರಿಸಿಕೊಳ್ಳಬಲ್ಲೆವು?
16 ಕ್ರೈಸ್ತರು ಹೇಗೆ ದೇವಪ್ರಭುತ್ವವಾದಿಗಳಾಗಿರಬೇಕೆಂದು ಅಪೊಸ್ತಲ ಪೌಲನು ಸ್ಪಷ್ಟವಾಗಿಗಿ ವಿವರಿಸುತ್ತಾನೆ. ಮೊದಲಾಗಿ ಅವರು, “ನಿಜ ನೀತಿ ಮತ್ತು ನಿಷ್ಠೆಯಲ್ಲಿ ದೇವರ ಚಿತ್ತಕ್ಕೆ ಅನುಸಾರವಾಗಿ ನಿರ್ಮಿಸಲ್ಪಟ್ಟ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕು” (NW) ಎಂದವನು ಹೇಳುತ್ತಾನೆ. ಕ್ರೈಸ್ತನ ವ್ಯಕ್ತಿತ್ವವು ದೇವರ ವಾಕ್ಯದಲ್ಲಿ ಕೊಡಲ್ಪಟ್ಟ ಆತನ ನೀತಿಯ ಸೂತ್ರಗಳಿಗನುಸಾರ ರೂಪಿಸಲ್ಪಡಬೇಕು. ಅವನು ಯೆಹೋವನಿಗೆ ಮತ್ತು ಆತನ ನಿಯಮಗಳಿಗೆ ನಿಷ್ಠೆಯುಳ್ಳವನಾಗಿರಬೇಕು. ಇದನ್ನು ಹೇಗೆ ಮಾಡಬಹುದೆಂದು ಉದಾಹರಿಸಿದ ಬಳಿಕ, ಪೌಲನು ಪ್ರೇರೇಪಿಸಿದ್ದು: “ಆದದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.” (ಎಫೆಸ 4:24–5:1) ವಿಧೇಯ ಮಕ್ಕಳ ಹಾಗೆ, ನಾವು ದೇವರನ್ನು ಅನುಸರಿಸುವವರಾಗಿರಬೇಕು. ಅದು ನಿಜವಾಗಿಯೂ ನಾವು ದೇವರಿಂದ ಆಳಲ್ಪಡುತ್ತೇವೆಂದು ಕ್ರಿಯೆಯಲ್ಲಿ ತೋರಿಬರುವ ನಿಜ ದೇವಪ್ರಭುತ್ವ!—ಕೊಲೊಸ್ಸೆ 3:10, 12-14 ಸಹ ನೋಡಿರಿ.
17, 18. (ಎ) ದೇವರ ಯಾವ ಮಹತ್ತಾದ ಗುಣವನ್ನು ದೇವಪ್ರಭುತ್ವವಾದಿಗಳಾದ ಕ್ರೈಸ್ತರು ಅನುಸರಿಸುತ್ತಾರೆ? (ಬಿ) ಮೋಶೆಗೆ ನುಡಿದ ತನ್ನ ಮಾತುಗಳಲ್ಲಿ, ಯೆಹೋವನು ಹೇಗೆ ತನ್ನ ಪ್ರಧಾನ ಗುಣವನ್ನು ಒತ್ತಿಹೇಳಿದನು, ಆದರೆ ಯಾವ ಎಚ್ಚರಿಕೆಯನ್ನು ಆತನು ಕೂಡಿಸಿದನು?
17 ನಾವು ಅನುಸರಿಸತಕ್ಕ ದೇವರ ಪ್ರಧಾನ ಗುಣವು ಯಾವುದು? ಅಪೊಸ್ತಲ ಯೋಹಾನನು ಅದನ್ನು 1 ಯೋಹಾನ 4:8 ರಲ್ಲಿ ಉತ್ತರಿಸುತ್ತಾ ಅನ್ನುವುದು: “ದೇವರು ಪ್ರೀತಿಸ್ವರೂಪಿಯು.” ಎಂಟು ವಚನಗಳ ಅನಂತರ, 16 ನೆಯ ವಚನದಲ್ಲಿ, ಅವನು ಈ ಪ್ರಾಮುಖ್ಯ ಸೂತ್ರವನ್ನು ಪುನಃ ಹೇಳಿದ್ದಾನೆ: “ದೇವರು ಪ್ರೀತಿಸ್ವರೂಪಿ; ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ. ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.” ಮಹಾ ಕುರುಬನಾದ ಯೆಹೋವನು, ಪ್ರೀತಿಯೇ ಮೂರ್ತಿಮತ್ತಾದ ವ್ಯಕ್ತಿಯು. ದೇವಪ್ರಭುತ್ವ ಕುರುಬರು ಯೆಹೋವನ ಕುರಿಗಳಿಗೆ ಆಳವಾದ ಪ್ರೀತಿಯನ್ನು ತೋರಿಸುವ ಮೂಲಕ ಆತನನ್ನು ಅನುಸರಿಸುತ್ತಾರೆ.—ಹೋಲಿಸಿರಿ 1 ಯೋಹಾನ 3:16, 18; 4:7-11.
18 ಈ ಮಹಾ ದೇವಪ್ರಭುತ್ವಾಧಿಪತಿ ತನ್ನನ್ನು ಮೋಶೆಗೆ, “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಗಳನ್ನು ಕ್ಷಮಿಸುವವನು; ಆದರೂ [ಅಪರಾಧವನ್ನು] ಶಿಕ್ಷಿಸದೆ ಬಿಡದವನು; ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳ ವರೆಗೆ ಬರಮಾಡುವವನು” ಎಂದು ಪ್ರಕಟಿಸಿದ್ದಾನೆ. (ವಿಮೋಚನಕಾಂಡ 34:6, 7) ಹೀಗೆ ಯೆಹೋವನು ತನ್ನ ಮಹತ್ತಾದ ದೇವಪ್ರಭುತ್ವ ಗುಣವಾದ ಪ್ರೀತಿಯ ವಿವಿಧ ಮುಖಗಳನ್ನು ಒತ್ತಿಹೇಳುತ್ತಾನಾದರೂ, ಶಿಕ್ಷೆಗೆ ಪಾತ್ರವಾದ ಅಪರಾಧಗಳನ್ನು ಶಿಕ್ಷಿಸದೆ ಬಿಡದವನು ಎಂಬ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಕೊಟ್ಟಿದ್ದಾನೆ.
19. ಫರಿಸಾಯರಿಗೆ ವೈದೃಶ್ಯವಾಗಿ, ಕ್ರೈಸ್ತ ಹಿರಿಯರು ಹೇಗೆ ದೇವಪ್ರಭುತ್ವ ವಿಧಾನದಲ್ಲಿ ಕ್ರಿಯೆನಡಿಸಬೇಕು?
19 ಸಂಸ್ಥೆಯಲ್ಲಿ ಯಾರಿಗೆ ಜವಾಬ್ದಾರಿಕೆಯ ಸ್ಥಾನಗಳು ಇವೆಯೋ ಅವರಿಗೆ, ದೇವಪ್ರಭುತ್ವವಾದಿಗಳಾಗಿರುವುದು ಯಾವ ಅರ್ಥದಲ್ಲಿದೆ? ತನ್ನ ದಿನದ ಶಾಸ್ತ್ರಿಗಳ ಮತ್ತು ಫರಿಸಾಯರ ಕುರಿತು ಯೇಸು ಅಂದದ್ದು: “ಅವರು ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲಿನ ಮೇಲೆ ಹೊರಿಸುತ್ತಾರೆ. ತಾವಾದರೋ ಬೆರಳಿನಿಂದಾದರೂ ಅದನ್ನು ಮುಟ್ಟಲಾರರು.” (ಮತ್ತಾಯ 23:4) ಎಂಥ ದಬ್ಬಾಳಿಕೆ ಮತ್ತು ಪ್ರೀತಿಹೀನತೆ! ದೇವಪ್ರಭುತ್ವ ಅಥವಾ ದೇವಾಧಿಪತ್ಯವು, ಬೈಬಲಿನ ಪ್ರೀತಿಯುಳ್ಳ ತತ್ವಗಳನ್ನು ಅನ್ವಯಿಸುವ ಮೂಲಕ ಮಂದೆಯನ್ನು ಪರಿಪಾಲಿಸುವುದನ್ನು ಕೇಳಿಕೊಳ್ಳುತ್ತದೆ, ಅಸಂಖ್ಯಾತ ಮಾನವ ನಿರ್ಮಿತ ನಿಯಮಗಳೊಂದಿಗೆ ಕುರಿಗಳ ಮೇಲೆ ಭಾರಹೊರಿಸುವ ಮೂಲಕವಾಗಿ ಅಲ್ಲ. (ಹೋಲಿಸಿರಿ ಮತ್ತಾಯ 15:1-9.) ಅದೇ ಸಮಯದಲ್ಲಿ, ದೇವಪ್ರಭುತ್ವ ಕುರುಬರು ಸಭೆಯ ಶುದ್ಧತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ, ತಮ್ಮ ಪ್ರೀತಿಗೆ ಒಂದು ಕಟ್ಟುನಿಟ್ಟನ್ನು ಸೇರಿಸುವ ಮೂಲಕ ದೇವರನ್ನು ಅನುಸರಿಸತಕ್ಕದ್ದು.—ಹೋಲಿಸಿರಿ ರೋಮಾಪುರ 2:11; 1 ಪೇತ್ರ 1:17.
20. ಯಾವ ಸಂಘಟನಾ ಏರ್ಪಾಡುಗಳನ್ನು ದೇವಪ್ರಭುತ್ವ ಕುರುಬರು ಅಂಗೀಕರಿಸುತ್ತಾರೆ?
20 ಈ ಕಡೇ ದಿನಗಳಲ್ಲಿ ಯೇಸುವು ತನ್ನೆಲ್ಲಾ ಆಸ್ತಿಯ ಮೇಲೆ ಒಬ್ಬ ನಂಬಿಗಸ್ತನೂ ವಿವೇಕಿಯೂ ಆದ ಆಳನ್ನು ನೇಮಿಸಿದ್ದಾನೆಂದೂ, ಮತ್ತು ಕುರಿಪಾಲನೆಗಾಗಿ ಹಿರಿಯರನ್ನು ನೇಮಿಸುವುದರಲ್ಲಿ ಪವಿತ್ರಾತ್ಮವು ಈ ಆಳನ್ನು ಮಾರ್ಗದರ್ಶಿಸಿದೆಯೆಂದೂ ನಿಜ ಕುರುಬರು ಮನಗಾಣುತ್ತಾರೆ. (ಮತ್ತಾಯ 24:3, 47; ಅ. ಕೃತ್ಯಗಳು 20:28) ಆದಕಾರಣ, ದೇವಪ್ರಭುತ್ವ ಭಾವದವರಾಗಿರುವುದರಲ್ಲಿ ಈ ಆಳಿಗಾಗಿ, ಈ ಆಳು ವ್ಯವಸ್ಥಾಪಿಸಿರುವ ಸಂಘಟನಾ ಏರ್ಪಾಡುಗಳಿಗಾಗಿ, ಮತ್ತು ಸಭೆಯ ಒಳಗಿರುವ ಹಿರಿಯರ ಏರ್ಪಾಡಿಗಾಗಿ ಆಳವಾದ ಗೌರವವು ಒಳಗೂಡಿರುತ್ತದೆ.—ಇಬ್ರಿಯ 13:7, 17.
21. ಉಪಕುರುಬರಿಗೆ ಯಾವ ಉತ್ತಮ ಮಾದರಿಯನ್ನು ಯೇಸು ಇಟ್ಟಿದ್ದಾನೆ?
21 ಮಾರ್ಗದರ್ಶನೆಗಾಗಿ ಸದಾ ಯೆಹೋವನೆಡೆಗೆ ಮತ್ತು ಆತನ ವಾಕ್ಯದೆಡೆಗೆ ದೃಷ್ಟಿಯಿಡುತ್ತಾ ಯೇಸು ತಾನೇ ಒಂದು ಉತ್ತಮ ಮಾದರಿಯನ್ನು ತೋರಿಸಿದ್ದಾನೆ. ಅವನಂದದ್ದು: “ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ತಂದೆ ಹೇಳಿದ್ದನ್ನು ಕೇಳಿ ನ್ಯಾಯತೀರಿಸುತ್ತೇನೆ; ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸುವದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.” (ಯೋಹಾನ 5:30) ಇಂಥ ದೀನ ಮನೋಭಾವವನ್ನು ಕರ್ತನಾದ ಯೇಸು ಕ್ರಿಸ್ತನ ಉಪಕುರುಬರು ಬೆಳೆಸಿಕೊಳ್ಳಬೇಕು. ಯೇಸುವಿನಂತೆ, ಮಾರ್ಗದರ್ಶನೆಗಾಗಿ ಹಿರಿಯನೊಬ್ಬನು ಯಾವಾಗಲೂ ದೇವರ ವಾಕ್ಯಕ್ಕೆ ಅಪ್ಪೀಲು ಮಾಡುವುದಾದರೆ, ಆಗ ಅವನು ನಿಜವಾಗಿಯೂ ದೇವಪ್ರಭುತ್ವ ಭಾವದವನು.—ಮತ್ತಾಯ 4:1-11; ಯೋಹಾನ 6:38.
22. (ಎ) ಯಾವ ರೀತಿಯಲ್ಲಿ ಎಲ್ಲರೂ ದೇವಪ್ರಭುತ್ವವಾದಿಗಳಾಗಿರುವಂತೆ ಪ್ರಯಾಸಪಡಬೇಕು? (ಬಿ) ಯಾವ ದಯೆಯುಳ್ಳ ಆಮಂತ್ರಣವನ್ನು ಯೇಸು ಕುರಿಗಳಿಗೆ ಕೊಡುತ್ತಾನೆ?
22 ದೀಕ್ಷಾಸ್ನಾನವಾದ ಪುರುಷರೇ, ಸಭೆಯಲ್ಲಿ ಸುಯೋಗಗಳಿಗಾಗಿ ಯೋಗ್ಯತೆ ಪಡೆಯಲು ಎಟಕಿಸಿಕೊಳ್ಳಿರಿ! ಪ್ರಿಯರಾದ ಕುರಿಗಳೆಲ್ಲರೇ, ಪ್ರೀತಿಯನ್ನು ತೋರಿಸುವುದರಲ್ಲಿ ದೇವರನ್ನು ಮತ್ತು ಕ್ರಿಸ್ತನನ್ನು ಅನುಸರಿಸುತ್ತಾ, ದೇವಪ್ರಭುತ್ವವಾದಿಗಳಾಗಿರುವ ಗುರಿಯಿಡಿರಿ! ಕುರುಬರೂ ಮಂದೆಗಳೂ ಸರಿಸಮಾನವಾಗಿ ಯೇಸುವಿನ ಆಮಂತ್ರಣಕ್ಕೆ ಉತ್ತರಕೊಟ್ಟಿರುವ ಕಾರಣ ಉಲ್ಲಾಸಪಡಲಿ: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು. ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು. ನನ್ನ ಹೊರೆಯು ಹೌರವಾದದ್ದು.”—ಮತ್ತಾಯ 11:28-30. (w93 1/1)
[ಅಧ್ಯಯನ ಪ್ರಶ್ನೆಗಳು]
a ಜೂನ್ 1, ಮತ್ತು 15, 1938 ರ ವಾಚ್ಟವರ್ ಸಂಚಿಕೆಗಳಲ್ಲಿ “ಆರನ್ಗೈಜೇಷನ್” ಶೀರ್ಷಿಕೆಯ ಲೇಖನಗಳನ್ನು ನೋಡಿರಿ.
ನೀವು ವಿವರಿಸಬಲ್ಲಿರೋ?
▫ ಯೆಹೋವನ “ಹಿಂಡು” ಯಾವುದು, ಮತ್ತು ಅದರಲ್ಲಿ ಯಾರು ಒಳಗೂಡಿದ್ದಾರೆ?
▫ ಒಂದನೆಯ ಶತಮಾನದಲ್ಲಿ ಯೇಸು “ಒಳ್ಳೆಯ ಕುರುಬ” ನಾಗಿ ಹೇಗೆ ಕ್ರಿಯೆನಡಿಸಿದನು, ಮತ್ತು ಇಂದು ಹೇಗೆ ನಡೆಸುತ್ತಾನೆ?
▫ ಮಂದೆಯ ಪರಿಪಾಲನೆಯಲ್ಲಿ ಉಪಕುರುಬರು ಯಾವ ಮುಖ್ಯ ಪಾತ್ರವನ್ನು ವಹಿಸುತ್ತಾರೆ?
▫ “ದೇವಪ್ರಭುತ್ವ” ಎಂಬ ಪದದ ಮೂಲಭೂತ ಅರ್ಥವು ಯಾವುದು?
▫ ಒಬ್ಬ ಕ್ರೈಸ್ತನು—ವಿಶೇಷವಾಗಿ ಒಬ್ಬ ಉಪಕುರುಬನು—ದೇವಪ್ರಭುತ್ವವಾದಿಯಾಗಿರುವಂತೆ ಹೇಗೆ ಕಾರ್ಯನಡಿಸಬೇಕು?
[ಪುಟ 20 ರಲ್ಲಿರುವ ಚಿತ್ರ]
ಅನುರಕ್ತ ಕುರುಬನೋಪಾದಿ, ಯೆಹೋವನು ತನ್ನ ಮಂದೆಯ ಪಾಲನೆ ಮಾಡುತ್ತಾನೆ
[ಪುಟ 23 ರಲ್ಲಿರುವ ಚಿತ್ರ]
ಯೆಹೋವ ದೇವರ ಗುಣವಾದ ಪ್ರೀತಿಯನ್ನು ಅನುಸರಿಸುವುದೇ ದೇವಪ್ರಭುತ್ವ ಕ್ರಿಯೆಯಲ್ಲಿ