-
ಪುನಸ್ಸ್ಥಾಪಿಸಲ್ಪಟ್ಟ ಪರದೈಸ್!ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
-
-
ಒಂದು ಹೊಸ ಜನಾಂಗದ ಜನನ
19. ಸಾ.ಶ.ಪೂ. ಆರನೆಯ ಶತಮಾನದಲ್ಲಿ ಯೆಶಾಯನ ಪ್ರವಾದನೆಯು ಸೀಮಿತವಾದ ರೀತಿಯಲ್ಲಿ ಮಾತ್ರ ನೆರವೇರಿತೆಂದು ಏಕೆ ಹೇಳಸಾಧ್ಯವಿದೆ?
19 ಸಾ.ಶ.ಪೂ. ಆರನೆಯ ಶತಮಾನದಲ್ಲಿ ಸಂಭವಿಸಿದ ಯೆಶಾಯ 35ನೆಯ ಅಧ್ಯಾಯದ ನೆರವೇರಿಕೆಯು ಸೀಮಿತವಾಗಿತ್ತು. ಸ್ವದೇಶಕ್ಕೆ ಹಿಂದಿರುಗಿದ ಯೆಹೂದ್ಯರು ಪರದೈಸಿನಂಥ ಪರಿಸ್ಥಿತಿಗಳನ್ನು ಶಾಶ್ವತವಾಗಿ ಅನುಭವಿಸಲಿಲ್ಲ. ಸಕಾಲದಲ್ಲಿ, ಸುಳ್ಳು ಧಾರ್ಮಿಕ ಬೋಧನೆಗಳು ಮತ್ತು ರಾಷ್ಟ್ರೀಯಭಾವವು ಶುದ್ಧಾರಾಧನೆಯನ್ನು ಕಲುಷಿತಗೊಳಿಸಿತು. ಆತ್ಮಿಕ ರೀತಿಯಲ್ಲಿ, ಯೆಹೂದ್ಯರು ಪುನಃ ಗೋಳಾಡುತ್ತಾ ನಿಟ್ಟುಸಿರುಬಿಡುತ್ತಾ ಇದ್ದರು. ಕೊನೆಗೆ ಯೆಹೋವನು ಅವರನ್ನು ತಿರಸ್ಕರಿಸಿಬಿಟ್ಟನು. (ಮತ್ತಾಯ 21:43) ಅವರು ಮತ್ತೆ ಮತ್ತೆ ಅವಿಧೇಯರಾಗುವುದರಿಂದ, ಯೆಹೋವನು ವಾಗ್ದಾನಿಸಿದ ಹರ್ಷೋಲ್ಲಾಸವನ್ನು ಅವರು ಶಾಶ್ವತವಾಗಿ ಅನುಭವಿಸಲಿಲ್ಲ. ಈ ಕಾರಣ, ಯೆಶಾಯ 35ನೆಯ ಅಧ್ಯಾಯಕ್ಕೆ ಇನ್ನೂ ಹೆಚ್ಚಿನ ನೆರವೇರಿಕೆಯಿದೆ ಎಂಬುದು ಈ ಎಲ್ಲ ವಿಷಯಗಳಿಂದ ಸ್ಪಷ್ಟವಾಗುತ್ತದೆ.
20. ಸಾ.ಶ. ಪ್ರಥಮ ಶತಮಾನದಲ್ಲಿ ಯಾವ ಹೊಸ ಇಸ್ರಾಯೇಲು ಅಸ್ತಿತ್ವಕ್ಕೆ ಬಂದಿತು?
20 ಯೆಹೋವನ ನೇಮಿತ ಸಮಯದಲ್ಲಿ, ಮತ್ತೊಂದು ಇಸ್ರಾಯೇಲ್ ಅಂದರೆ ಆತ್ಮಿಕ ಇಸ್ರಾಯೇಲ್ ಹುಟ್ಟಿಕೊಂಡಿತು. (ಗಲಾತ್ಯ 6:16) ಈ ಹೊಸ ಇಸ್ರಾಯೇಲಿನ ಜನನಕ್ಕೆ, ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಅಸ್ತಿವಾರವನ್ನು ಹಾಕಿದನು. ಅವನು ಶುದ್ಧಾರಾಧನೆಯನ್ನು ಪುನಃ ಸ್ಥಾಪಿಸಿದನು ಮಾತ್ರವಲ್ಲ, ತನ್ನ ಬೋಧನೆಯ ಮೂಲಕ ಸತ್ಯದ ನೀರು ಪುನಃ ಹರಿಯುವಂತೆಯೂ ಮಾಡಿದನು. ಅವನು ಶಾರೀರಿಕ ಹಾಗೂ ಆತ್ಮಿಕ ಅನಾರೋಗ್ಯಕ್ಕೆ ತುತ್ತಾದವರನ್ನು ಗುಣಪಡಿಸಿದನು. ದೇವರ ರಾಜ್ಯದ ಸುವಾರ್ತೆಯು ಎಲ್ಲೆಡೆಯೂ ಘೋಷಿಸಲ್ಪಟ್ಟಂತೆ, ಹರ್ಷಧ್ವನಿಯು ಮೊಳಗಿತು. ತನ್ನ ಮರಣ ಹಾಗೂ ಪುನರುತ್ಥಾನವಾಗಿ ಏಳು ವಾರಗಳು ಗತಿಸಿದ ಬಳಿಕ, ಮಹಿಮಾನ್ವಿತ ಯೇಸು, ಕ್ರೈಸ್ತ ಸಭೆಯನ್ನು ಸ್ಥಾಪಿಸಿದನು. ಆತ್ಮಿಕ ಇಸ್ರಾಯೇಲ್ಯರನ್ನು ಒಳಗೊಂಡ ಈ ಸಭೆಯಲ್ಲಿ, ಯೇಸುವಿನ ರಕ್ತದಿಂದ ವಿಮೋಚನೆ ಪಡೆದ ಯೆಹೂದ್ಯರು ಮತ್ತು ಇತರರು ಇದ್ದಾರೆ. ಇವರು ದೇವರ ಆತ್ಮಿಕ ಪುತ್ರರಾಗಿ ಮತ್ತು ಯೇಸುವಿನ ಸಹೋದರರಾಗಿ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಿದ್ದಾರೆ.—ಅ. ಕೃತ್ಯಗಳು 2:1-4; ರೋಮಾಪುರ 8:16, 17; 1 ಪೇತ್ರ 1:18, 19.
-
-
ಪುನಸ್ಸ್ಥಾಪಿಸಲ್ಪಟ್ಟ ಪರದೈಸ್!ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
-
-
21. ಪ್ರಥಮ ಶತಮಾನದ ಕ್ರೈಸ್ತ ಸಭೆಯ ಸಂಬಂಧದಲ್ಲಿ, ಯಾವ ಘಟನೆಗಳನ್ನು ಯೆಶಾಯನ ಪ್ರವಾದನೆಯ ನೆರವೇರಿಕೆಯೆಂದು ವೀಕ್ಷಿಸಬಹುದು?
21 ಆತ್ಮಿಕ ಇಸ್ರಾಯೇಲಿನ ಸದಸ್ಯರಿಗೆ ಬರೆಯುವಾಗ, ಅಪೊಸ್ತಲ ಪೌಲನು ಯೆಶಾಯ 35:3ರ ಮಾತುಗಳನ್ನು ಸೂಚಿಸುತ್ತಾ ಹೇಳಿದ್ದು: “ಆದದರಿಂದ ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಸುದಾರಿಸಿಕೊಳ್ಳಿರಿ.” (ಇಬ್ರಿಯ 12:12) ಹಾಗಾದರೆ, ಸಾ.ಶ. ಪ್ರಥಮ ಶತಮಾನದಲ್ಲಿ, ಯೆಶಾಯ 35ನೆಯ ಅಧ್ಯಾಯದ ಮಾತುಗಳು ಸ್ಪಷ್ಟವಾಗಿ ನೆರವೇರಿದವು. ಅಕ್ಷರಾರ್ಥವಾಗಿ, ಯೇಸು ಮತ್ತು ಅವನ ಶಿಷ್ಯರು, ಕುರುಡರಿಗೆ ದೃಷ್ಟಿಯನ್ನು ಮತ್ತು ಕಿವುಡರಿಗೆ ಕೇಳಿಸಿಕೊಳ್ಳುವ ಸಾಮರ್ಥ್ಯವನ್ನು ಅದ್ಭುತಕರವಾಗಿ ನೀಡಿದರು. ಅಲ್ಲದೆ ‘ಕುಂಟರು’ ನಡೆಯುವಂತೆ ಮತ್ತು ಮೂಕರು ಮಾತಾಡುವಂತೆಯೂ ಅವರು ಮಾಡಶಕ್ತರಾಗಿದ್ದರು. (ಮತ್ತಾಯ 9:32; 11:5; ಲೂಕ 10:9) ಎಲ್ಲಕ್ಕಿಂತಲೂ ಮಿಗಿಲಾಗಿ, ಸಹೃದಯಿಗಳು ಸುಳ್ಳು ಧರ್ಮದ ಪಾಶದಿಂದ ತಪ್ಪಿಸಿಕೊಂಡು, ಕ್ರೈಸ್ತ ಸಭೆಯ ಮಧ್ಯದಲ್ಲಿ ಆತ್ಮಿಕ ಪರದೈಸಿನ ಪರಿಸ್ಥಿತಿಗಳನ್ನು ಅನುಭವಿಸತೊಡಗಿದರು. (ಯೆಶಾಯ 52:11; 2 ಕೊರಿಂಥ 6:17) ಅದರೊಂದಿಗೆ ಒಂದು ಸಕಾರಾತ್ಮಕ ಹಾಗೂ ಧೀರ ಮನೋಭಾವವು ಸಹ ಬಹಳ ಅಗತ್ಯವೆಂಬುದನ್ನು ಬಾಬೆಲಿನಿಂದ ಹಿಂದಿರುಗುತ್ತಿದ್ದ ಯೆಹೂದ್ಯರು ಕಂಡುಕೊಂಡಂತೆ ಇವರೂ ಕಂಡುಕೊಂಡರು.—ರೋಮಾಪುರ 12:11.
22. ಆಧುನಿಕ ಸಮಯಗಳಲ್ಲಿ, ಸತ್ಯವನ್ನು ಅರಸುವ ಯಥಾರ್ಥ ಕ್ರೈಸ್ತರು ಬಾಬೆಲಿನ ಸೆರೆವಾಸಕ್ಕೆ ಒಳಗಾದದ್ದು ಹೇಗೆ?
22 ನಮ್ಮ ದಿನದ ಕುರಿತೇನು? ಯೆಶಾಯನ ಪ್ರವಾದನೆಗೆ ಇಂದಿನ ಕ್ರೈಸ್ತ ಸಭೆಯ ಸಂಬಂಧದಲ್ಲಿ ಹೆಚ್ಚು ಪೂರ್ಣವಾದ ಮತ್ತೊಂದು ನೆರವೇರಿಕೆ ಇದೆಯೊ? ಹೌದು, ಇದೆ. ಅಪೊಸ್ತಲರ ಮರಣದ ನಂತರ, ಸತ್ಯ ಅಭಿಷಿಕ್ತ ಕ್ರೈಸ್ತರ ಸಂಖ್ಯೆಯು ಗುರುತರವಾಗಿ ಕಡಿಮೆಯಾಯಿತು, ಮತ್ತು ಸುಳ್ಳು ಕ್ರೈಸ್ತರು ಅಂದರೆ ‘ಹಣಜಿಗಳು’ ಎಲ್ಲೆಲ್ಲೂ ಕಾಣಿಸಿಕೊಂಡವು. (ಮತ್ತಾಯ 13:36-43; ಅ. ಕೃತ್ಯಗಳು 20:30; 2 ಪೇತ್ರ 2:1-3) 19ನೆಯ ಶತಮಾನದಲ್ಲೂ, ಕೆಲವು ಪ್ರಾಮಾಣಿಕ ಹೃದಯದವರು ಕ್ರೈಸ್ತಪ್ರಪಂಚದಿಂದ ಬೇರ್ಪಟ್ಟು ಶುದ್ಧಾರಾಧನೆಯನ್ನು ಅರಸಲಾರಂಭಿಸಿದಾಗ, ಅವರ ತಿಳುವಳಿಕೆಯಲ್ಲೂ ಅಶಾಸ್ತ್ರೀಯ ಬೋಧನೆಗಳ ಕಲೆಗಳಿದ್ದವು. 1914ರಲ್ಲಿ ಯೇಸು ಮೆಸ್ಸೀಯ ರಾಜನಾಗಿ ಸಿಂಹಾಸನವನ್ನೇರಿದನು. ಆದರೆ ಇದಾದ ಸ್ವಲ್ಪದರಲ್ಲೇ, ಸತ್ಯವನ್ನು ಅರಸುತ್ತಿದ್ದ ಈ ಯಥಾರ್ಥವಂತರ ಸನ್ನಿವೇಶವು ಬಹಳ ಕರಾಳವಾಗಿ ತೋರಿತು. ಮತ್ತೊಂದು ಪ್ರವಾದನೆಯನ್ನು ನೆರವೇರಿಸುತ್ತಾ, ರಾಷ್ಟ್ರಗಳು “ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ”ದವು ಮಾತ್ರವಲ್ಲ, ಈ ಪ್ರಾಮಾಣಿಕ ಕ್ರೈಸ್ತರು ಕೈಗೊಂಡಿದ್ದ ಸುವಾರ್ತೆ ಸಾರುವ ಚಟುವಟಿಕೆಯನ್ನೂ ನಿಗ್ರಹಿಸಿದವು. ಹೀಗೆ ಅವರು ಬಾಬೆಲಿನ ಸೆರೆವಾಸಕ್ಕೆ ಒಳಗಾದರು.—ಪ್ರಕಟನೆ 11:7, 8.
23, 24. ಯಾವ ವಿಧಗಳಲ್ಲಿ ಯೆಶಾಯನ ಮಾತುಗಳು 1919ರಿಂದ ದೇವಜನರ ಮಧ್ಯೆ ನೆರವೇರಿವೆ?
23 ಆದರೆ, 1919ರಲ್ಲಿ ಪರಿಸ್ಥಿತಿಯು ಬದಲಾಯಿತು. ಯೆಹೋವನು ತನ್ನ ಜನರನ್ನು ದಾಸತ್ವದಿಂದ ಬಿಡಿಸಿದನು. ಇವರು, ತಮ್ಮ ಆರಾಧನೆಯನ್ನು ಈ ಮೊದಲು ಭ್ರಷ್ಟಗೊಳಿಸಿದ್ದ ಸುಳ್ಳು ಬೋಧನೆಗಳನ್ನು ತಿರಸ್ಕರಿಸಲಾರಂಭಿಸಿದರು. ಫಲಸ್ವರೂಪವಾಗಿ, ಅವರು ಗುಣಮುಖರಾದರು. ಮತ್ತು ಆತ್ಮಿಕ ಪರದೈಸಿನ ಭಾಗವಾದರು. ಈ ಪರದೈಸ್ ಇಂದು ಕೂಡ ಭೂಮಿಯಾದ್ಯಂತ ಹಬ್ಬುತ್ತಿದೆ. ಆತ್ಮಿಕ ಅರ್ಥದಲ್ಲಿ, ಕುರುಡರು ನೋಡಲು ಮತ್ತು ಕಿವುಡರು ಕೇಳಿಸಿಕೊಳ್ಳಲು ಕಲಿಯುತ್ತಿದ್ದಾರೆ. ಅವರು ದೇವರ ಪವಿತ್ರಾತ್ಮದ ಕಾರ್ಯಾಚರಣೆಯನ್ನು ಪೂರ್ಣವಾಗಿ ಗ್ರಹಿಸುತ್ತಾ, ಯೆಹೋವನಿಗೆ ಆಪ್ತರಾಗಿ ಉಳಿಯುವ ಅಗತ್ಯವನ್ನು ಮನಗಾಣುತ್ತಾ ಇದ್ದಾರೆ. (1 ಥೆಸಲೊನೀಕ 5:6; 2 ತಿಮೊಥೆಯ 4:5) ಇನ್ನೆಂದಿಗೂ ಮೂಕರಾಗಿರದ ಈ ಸತ್ಯ ಕ್ರೈಸ್ತರು, ಇತರರಿಗೆ ಬೈಬಲ್ ಸತ್ಯಗಳನ್ನು ಪ್ರಕಟಿಸುತ್ತಾ “ಹರ್ಷಧ್ವನಿ”ಗೈಯಲು ಉತ್ಸುಕರಾಗಿದ್ದಾರೆ. (ರೋಮಾಪುರ 1:15) ಆತ್ಮಿಕ ಅರ್ಥದಲ್ಲಿ ಬಲಹೀನರು ಇಲ್ಲವೆ ‘ಕುಂಟರು’ ಆಗಿದ್ದ ಜನರು ಈಗ ಹುರುಪು ಆನಂದಗಳನ್ನು ಪ್ರಕಟಿಸುತ್ತಾರೆ. ಸಾಂಕೇತಿಕವಾಗಿ, ಅವರು ‘ಜಿಂಕೆಯಂತೆ ಹಾರುತ್ತಾರೆ.’
-