ದಿವ್ಯ ಶಾಂತಿಯ ಸಂದೇಶವಾಹಕರು ಧನ್ಯರೆಂದು ಹೇಳಲ್ಪಡುವುದು
“ಯೆಹೋವನು ವಿಮೋಚಿಸಿದವರು ಹಿಂದಿರುಗಿ ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು; ಹರ್ಷಾನಂದಗಳನ್ನು ಅನುಭವಿಸುವರು.”—ಯೆಶಾಯ 35:10.
1. ಲೋಕಕ್ಕೆ ಅತ್ಯಂತ ಅಗತ್ಯವಾಗಿ ಏನು ಬೇಕಾಗಿದೆ?
ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು, ಮಾನವಕುಲಕ್ಕೆ ಸುವಾರ್ತೆಯ ಸಂದೇಶವಾಹಕನೊಬ್ಬನ ಅಗತ್ಯವಿದೆ. ದೇವರ ಮತ್ತು ಆತನ ಉದ್ದೇಶಗಳ ಕುರಿತು ಸತ್ಯವನ್ನಾಡುವ, ಬರಲಿರುವ ನಾಶನದ ಕುರಿತು ದುಷ್ಟರನ್ನು ಎಚ್ಚರಿಸುವ ಮತ್ತು ಸಹೃದಯಿಗಳು ದಿವ್ಯ ಶಾಂತಿಯನ್ನು ಕಂಡುಕೊಳ್ಳುವಂತೆ ಸಹಾಯಮಾಡುವ ನಿರ್ಭೀತನಾದ ಸಾಕ್ಷಿಯೊಬ್ಬನ ಅತಿ ಜರೂರಿಯ ಅಗತ್ಯವಿದೆ.
2, 3. ಇಸ್ರಾಯೇಲಿನ ಸಂಬಂಧದಲ್ಲಿ, ಆಮೋಸ 3:7ರಲ್ಲಿ ದಾಖಲೆಯಾಗಿರುವ ತನ್ನ ಪ್ರವಾದನೆಯನ್ನು ಯೆಹೋವನು ಹೇಗೆ ನೆರವೇರಿಸಿದನು?
2 ಇಸ್ರಾಯೇಲಿನ ದಿನಗಳಲ್ಲಿ, ತಾನು ಆ ವಿಧದ ಸಂದೇಶವಾಹಕರನ್ನು ಒದಗಿಸುವೆನೆಂದು ಯೆಹೋವನು ವಚನಕೊಟ್ಟನು. ಸಾ.ಶ.ಪೂ. ಒಂಬತ್ತನೆಯ ಶತಮಾನಾಂತ್ಯದಲ್ಲಿ, ಆಮೋಸ ಪ್ರವಾದಿಯು ಹೇಳಿದ್ದು: “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.” (ಆಮೋಸ 3:7) ಈ ಪ್ರಕಟನೆಯನ್ನು ಹಿಂಬಾಲಿಸಿ ಬಂದ ಅನೇಕ ಶತಮಾನಗಳಲ್ಲಿ, ಯೆಹೋವನು ಅನೇಕ ಮಹಾಕಾರ್ಯಗಳನ್ನು ಮಾಡಿದನು. ಉದಾಹರಣೆಗೆ, ಸಾ.ಶ.ಪೂ. 607ರಲ್ಲಿ ತನ್ನ ಆಯ್ಕೆಯ ಜನರು ಪ್ರತಿಭಟಕರೂ ರಕ್ತಾಪರಾಧಿಗಳೂ ಆಗಿದ್ದ ಕಾರಣ ಆತನು ಅವರನ್ನು ಕಠಿನವಾದ ಶಿಕ್ಷೆಗೊಳಪಡಿಸಿದನು. ಇಸ್ರಾಯೇಲ್ಯರ ಕಷ್ಟಾನುಭವದ ಕಾರಣ ಹಿಗ್ಗಿಕೊಂಡಿದ್ದ ಸುತ್ತಮುತ್ತಲಿನ ಜನಾಂಗಗಳಿಗೂ ಆತನು ಶಿಕ್ಷೆಕೊಟ್ಟನು. (ಯೆರೆಮೀಯ 46-49 ಅಧ್ಯಾಯಗಳು) ಬಳಿಕ ಸಾ.ಶ.ಪೂ. 539ರಲ್ಲಿ, ಯೆಹೋವನು ಬಲಾಢ್ಯವಾದ ಬಾಬೆಲ್ ಲೋಕಶಕ್ತಿಯನ್ನು ಪತನಗೊಳಿಸಿದನು. ಇದರ ಪರಿಣಾಮವಾಗಿ ಸಾ.ಶ.ಪೂ. 537ರಲ್ಲಿ ಇಸ್ರಾಯೇಲಿನ ಒಂದು ಜನಶೇಷವು ದೇವಾಲಯವನ್ನು ಕಟ್ಟಲು ತಮ್ಮ ದೇಶಕ್ಕೆ ಹಿಂದಿರುಗಿತು.—2 ಪೂರ್ವಕಾಲವೃತ್ತಾಂತ 36:22, 23.
3 ಇವು ಭೂಮಿಯನ್ನು ಕಲುಕಿಸುವ ಘಟನೆಗಳಾಗಿದ್ದವು ಮತ್ತು ಆಮೋಸನ ಮಾತುಗಳಿಗನುಸಾರ, ಯೆಹೋವನು ಅವುಗಳನ್ನು ಸಂದೇಶವಾಹಕರಾಗಿ ಸೇವೆಮಾಡಿದ ಪ್ರವಾದಿಗಳಿಗೆ ಮುಂದಾಗಿಯೇ ಪ್ರಕಟಿಸಿ, ಬರಲಿದ್ದ ಸಂಗತಿಗಳ ಕುರಿತು ಇಸ್ರಾಯೇಲನ್ನು ಎಚ್ಚರಿಸಿದನು. ಸಾ.ಶ.ಪೂ. ಎಂಟನೆಯ ಶತಮಾನದ ಮಧ್ಯಭಾಗದಲ್ಲಿ ಆತನು ಯೆಶಾಯನನ್ನು ಕೆಲಸಕ್ಕೆ ತೊಡಗಿಸಿದನು. ಸಾ.ಶ.ಪೂ. ಏಳನೆಯ ಶತಮಾನದ ಮಧ್ಯಭಾಗದಲ್ಲಿ ಯೆರೆಮೀಯನನ್ನು ನೇಮಿಸಿದನು. ಬಳಿಕ, ಆ ಶತಮಾನದ ಅಂತ್ಯ ಸಮಯದಲ್ಲಿ ಆತನು ಯೆಹೆಜ್ಕೇಲನನ್ನು ನೇಮಿಸಿದನು. ಇವರೂ ಇನ್ನಿತರ ನಂಬಿಗಸ್ತ ಪ್ರವಾದಿಗಳೂ ಯೆಹೋವನ ಉದ್ದೇಶಗಳ ಕುರಿತು ಪೂರ್ತಿಯಾದ ಸಾಕ್ಷಿಯನ್ನು ಕೊಟ್ಟರು.
ಇಂದು ದೇವರ ಸಂದೇಶವಾಹಕರ ಗುರುತು ಸ್ಥಾಪಿಸುವುದು
4. ಮಾನವಕುಲಕ್ಕೆ ಶಾಂತಿಯ ಸಂದೇಶವಾಹಕರ ಅಗತ್ಯವಿದೆಯೆಂಬುದನ್ನು ಯಾವುದು ಪ್ರದರ್ಶಿಸುತ್ತದೆ?
4 ಇಂದಿನ ಕುರಿತೇನು? ಲೋಕದಲ್ಲಿರುವ ಅನೇಕರಿಗೆ, ಅವರು ಇಂದು ಮಾನವ ಸಮಾಜದ ಅವನತಿಯನ್ನು ಅವಲೋಕಿಸುವಾಗ ಅಶುಭಸೂಚನೆಯ ಅನಿಸಿಕೆಯಾಗುತ್ತದೆ. ನೀತಿಪ್ರಿಯರು ಕ್ರೈಸ್ತಪ್ರಪಂಚದ ಕಪಟಾಚಾರ ಮತ್ತು ಶುದ್ಧ ದುಷ್ಟತ್ವವನ್ನು ನೋಡುವಾಗ ಮನೋವೇದನೆಯನ್ನು ಅನುಭವಿಸುತ್ತಾರೆ. ಯೆಹೋವನು ಯೆಹೆಜ್ಕೇಲನ ಮೂಲಕ ಮುಂತಿಳಿಸಿದಂತೆ, ಅವರು “ಅದರೊಳಗೆ ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡು”ತ್ತಿದ್ದಾರೆ. (ಯೆಹೆಜ್ಕೇಲ 9:4) ಆದರೂ, ಯೆಹೋವನ ಉದ್ದೇಶಗಳೇನೆಂಬುದನ್ನು ಅನೇಕರು ಗ್ರಹಿಸುವುದಿಲ್ಲ. ಅವರಿಗೆ ಅದನ್ನು ತಿಳಿಯಪಡಿಸಬೇಕಾಗಿದೆ.
5. ನಮ್ಮ ದಿನಗಳಲ್ಲಿ ಶಾಂತಿಯ ಸಂದೇಶವಾಹಕರಿರುವರೆಂದು ಯೇಸು ಹೇಗೆ ತೋರಿಸಿದನು?
5 ಇಂದು ಯಾರಾದರೂ ಯೆಶಾಯ, ಯೆರೆಮೀಯ ಮತ್ತು ಯೆಹೆಜ್ಕೇಲರ ನಿರ್ಭೀತ ಮನೋಭಾವದಿಂದ ಮಾತಾಡುತ್ತಾರೊ? ಯಾರೋ ಹಾಗೆ ಮಾಡುವರೆಂದು ಯೇಸು ಸೂಚಿಸಿದನು. ನಮ್ಮ ದಿನಗಳ ಘಟನೆಗಳನ್ನು ಮುಂತಿಳಿಸುವಾಗ ಆತನಂದದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಇಂದು ಆ ಪ್ರವಾದನೆಯನ್ನು, ಸಂದೇಶವಾಹಕರಾಗಿ, ಸುವಾರ್ತೆಯನ್ನು ಸಾರುವವರಾಗಿ ಯಾರು ನೆರವೇರಿಸುತ್ತಿದ್ದಾರೆ? ನಮ್ಮ ದಿನಗಳ ಮತ್ತು ಪುರಾತನ ಇಸ್ರಾಯೇಲಿನ ಕಾಲದ ಮಧ್ಯೆ ಕಂಡುಬರುವ ಹೋಲಿಕೆಗಳು, ಆ ಪ್ರಶ್ನೆಗೆ ಉತ್ತರ ಕೊಡಲು ನಮಗೆ ಸಹಾಯಮಾಡುತ್ತವೆ.
6. (ಎ) ಒಂದನೆಯ ಜಾಗತಿಕ ಯುದ್ಧದ ಸಮಯದಲ್ಲಿನ “ದೇವರ ಇಸ್ರಾಯೇಲಿ”ನ ಅನುಭವಗಳನ್ನು ವರ್ಣಿಸಿರಿ. (ಬಿ) ಯೆಹೆಜ್ಕೇಲ 11:17, ಪುರಾತನ ಇಸ್ರಾಯೇಲಿನ ಮೇಲೆ ಹೇಗೆ ನೆರವೇರಿತು?
6 ಜಾಗತಿಕ ಯುದ್ಧ Iರ ಅಂಧಕಾರದ ದಿನಗಳಲ್ಲಿ, ಯೆಹೋವನ ಆಧುನಿಕ ದಿನದ ಜನರಾದ ಅಭಿಷಿಕ್ತ “ದೇವರ ಇಸ್ರಾಯೇಲ್ಯ”ರಲ್ಲಿ ಉಳಿಕೆಯವರು, ಇಸ್ರಾಯೇಲು ಬಾಬೆಲಿನಲ್ಲಿದ್ದ ಹಾಗೆ ಸೆರೆವಾಸಿಗಳಾದರು. (ಗಲಾತ್ಯ 6:16) ಅವರು ಮಹಾ ಬಾಬೆಲಿನಲ್ಲಿ, ಅಂದರೆ ಯಾವುದರಲ್ಲಿ ಕ್ರೈಸ್ತಪ್ರಪಂಚವು ಅತಿ ಪ್ರಧಾನವೂ ನಿಂದನೀಯವೂ ಆಗಿದೆಯೊ ಆ ಸುಳ್ಳು ಧರ್ಮಗಳ ಲೋಕ ಸಂಘಟನೆಯಲ್ಲಿ ಆತ್ಮಿಕವಾಗಿ ದೇಶಭ್ರಷ್ಟರಾದರು. ಆದರೂ, ಯೆಹೋವನು ಯೆಹೆಜ್ಕೇಲನಿಗೆ ಹೇಳಿದ ಮಾತುಗಳು, ಅವರು ತ್ಯಜಿಸಲ್ಪಡಲಿಲ್ಲವೆಂದು ತೋರಿಸಿದವು. ಆತನು ಹೇಳಿದ್ದು: “ಅವರನ್ನು ಜನಾಂಗಗಳೊಳಗಿಂದ ಕೂಡಿಸುವೆನು, ಚದರಿರುವ ದೇಶಗಳಿಂದ ಅವರನ್ನು ಒಟ್ಟಿಗೆ ಬರಮಾಡಿ ಇಸ್ರಾಯೇಲ್ ದೇಶವನ್ನು ಅವರಿಗೆ ದಯಪಾಲಿಸುವೆನು.” (ಯೆಹೆಜ್ಕೇಲ 11:17) ಪುರಾತನ ಇಸ್ರಾಯೇಲಿಗೆ ಕೊಟ್ಟ ಆ ವಚನವನ್ನು ನೆರವೇರಿಸಲು ಯೆಹೋವನು ಪಾರಸೀಯ ಕೋರೆಷನನ್ನು ನೇಮಿಸಿದನು. ಅವನು ಬಾಬೆಲ್ ಲೋಕ ಸಾಮ್ರಾಜ್ಯವನ್ನು ಸೋಲಿಸಿ, ಇಸ್ರಾಯೇಲಿನ ಉಳಿಕೆಯವರು ತಮ್ಮ ದೇಶಕ್ಕೆ ಹಿಂದಿರುಗುವಂತೆ ದಾರಿ ತೆರೆದನು. ಆದರೆ ಇಂದಿನ ಕುರಿತೇನು?
7. ಯೇಸು ಮಹಾ ಬಾಬೆಲಿನ ವಿರುದ್ಧ ಕ್ರಮ ಕೈಕೊಂಡನೆಂದು 1919ರ ಯಾವ ಸಂಭವವು ತೋರಿಸಿತು? ವಿವರಿಸಿ.
7 ಈ ಶತಮಾನದ ಆದಿಭಾಗದಲ್ಲಿ, ಮಹಾ ಕೋರೆಷನೊಬ್ಬನು ಕಾರ್ಯ ನಡೆಸುತ್ತಿದ್ದನೆಂಬುದಕ್ಕೆ ಪ್ರಬಲವಾದ ರುಜುವಾತಿತ್ತು. ಅವನು ಯಾರಾಗಿದ್ದನು? ಸ್ವರ್ಗೀಯ ರಾಜ್ಯದಲ್ಲಿ 1914ರಿಂದ ಸಿಂಹಾಸನಕ್ಕೇರಿಸಲ್ಪಟ್ಟ ಯೇಸು ಕ್ರಿಸ್ತನೇ. ಈ ಮಹಾ ಅರಸನು, 1919ರಲ್ಲಿ ಅಭಿಷಿಕ್ತ ಕ್ರೈಸ್ತರನ್ನು ಆತ್ಮಿಕ ಬಂಧನದಿಂದ ಬಿಡಿಸಿ, ಅವರನ್ನು ಅವರ “ದೇಶ”ಕ್ಕೆ, ಅಂದರೆ ಅವರ ಆತ್ಮಿಕ ಸ್ಥಾನಕ್ಕೆ ಹಿಂದಿರುಗಿಸಿ, ಭೂಮಿಯಲ್ಲಿದ್ದ ತನ್ನ ಅಭಿಷಿಕ್ತ ಸೋದರರ ಕಡೆಗೆ ಸದುದ್ದೇಶವನ್ನು ತೋರಿಸಿದನು. (ಯೆಶಾಯ 66:8; ಪ್ರಕಟನೆ 18:4) ಹೀಗೆ ಯೆಹೆಜ್ಕೇಲ 11:17 ಆಧುನಿಕ ದಿನದಲ್ಲಿ ನೆರವೇರಿತು. ಪುರಾತನ ಕಾಲದಲ್ಲಿ ಇಸ್ರಾಯೇಲ್ಯರು ತಮ್ಮ ದೇಶಕ್ಕೆ ಹಿಂದಿರುಗುವಂತೆ ದಾರಿ ಮಾಡಿಕೊಡಲು ಬಾಬೆಲ್ ಪತನಗೊಳ್ಳಬೇಕಾಯಿತು. ಆಧುನಿಕ ದಿನಗಳಲ್ಲಿ ದೇವರ ಇಸ್ರಾಯೇಲಿನ ಪುನಸ್ಸ್ಥಾಪನೆಯು, ಮಹಾ ಬಾಬೆಲ್ ಮಹಾ ಕೋರೆಷನ ಕೈಗಳಿಂದ ಪತನಗೊಂಡಿದೆ ಎಂಬುದಕ್ಕೆ ಸಾಕ್ಷ್ಯವಾಗಿತ್ತು. ಈ ಪತನವು, ಪ್ರಕಟನೆ 14ನೆಯ ಅಧ್ಯಾಯದ ಎರಡನೆಯ ದೇವದೂತನು, “ಬಿದ್ದಳು, ಬಿದ್ದಳು, ಬಾಬೆಲೆಂಬ ಮಹಾ ನಗರಿಯು ಬಿದ್ದಳು. ಆಕೆಯು ಸಕಲ ಜನಾಂಗಗಳಿಗೆ ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿಸಿದಳು” ಎಂದು ಹೇಳಿದಾಗ ಪ್ರಕಟಿಸಲ್ಪಟ್ಟಿತು. (ಪ್ರಕಟನೆ 14:8) ಮಹಾ ಬಾಬೆಲಿಗೆ, ವಿಶೇಷವಾಗಿ ಕ್ರೈಸ್ತಪ್ರಪಂಚಕ್ಕೆ ಎಂತಹ ಅಪಜಯ! ಮತ್ತು ಸತ್ಯ ಕ್ರೈಸ್ತರಿಗೆ ಎಂತಹ ಆಶೀರ್ವಾದ!
8. ಯೆಹೆಜ್ಕೇಲನ ಪುಸ್ತಕವು, 1919ರ ವಿಮೋಚನೆಯ ನಂತರ ದೇವಜನರ ಸಂತೋಷವನ್ನು ಹೇಗೆ ವರ್ಣಿಸುತ್ತದೆ?
8 ಯೆಹೆಜ್ಕೇಲ 11:18-20ರಲ್ಲಿ, ಪುನಸ್ಸ್ಥಾಪನೆಯ ಅನಂತರ ಪ್ರವಾದಿಯು ದೇವಜನರ ಸಂತೋಷವನ್ನು ವರ್ಣಿಸುವುದನ್ನು ನಾವು ಓದುತ್ತೇವೆ. ಅವನ ಮಾತುಗಳ ಪ್ರಥಮ ನೆರವೇರಿಕೆಯು, ಎಜ್ರ ಮತ್ತು ನೆಹೆಮೀಯರ ದಿನಗಳಲ್ಲಿ ಇಸ್ರಾಯೇಲಿನ ಶುದ್ಧೀಕರಣವನ್ನು ಅರ್ಥೈಸಿತು. ಆಧುನಿಕ ದಿನಗಳ ನೆರವೇರಿಕೆಯೂ ಅದಕ್ಕೆ ಸದೃಶವಾದ ಒಂದು ವಿಷಯವನ್ನು ಅರ್ಥೈಸಿತು. ಹೇಗೆಂದು ನೋಡೋಣ. ಯೆಹೋವನು ಹೇಳುವುದು: “ಅವರು ಅಲ್ಲಿಗೆ [ತಮ್ಮ ದೇಶಕ್ಕೆ] ಸೇರಿ ಎಲ್ಲಾ ಅಸಹ್ಯವಸ್ತುಗಳನ್ನೂ ಸಮಸ್ತ ಹೇಯವಿಗ್ರಹಗಳನ್ನೂ ಅಲ್ಲಿಂದ ತೆಗೆದುಹಾಕುವರು.” ಪ್ರವಾದಿಸಿದಂತೆಯೇ, 1919ರಿಂದ ಆರಂಭಿಸಿ, ಯೆಹೋವನು ತನ್ನ ಜನರನ್ನು ಶುದ್ಧೀಕರಿಸಿ, ತನ್ನನ್ನು ಸೇವಿಸಲು ಅವರನ್ನು ಪುನರ್ಚೇತರಿಸಿದನು. ಅವರು ತಮ್ಮ ಆತ್ಮಿಕ ಪರಿಸರದಿಂದ ಆತನ ದೃಷ್ಟಿಯಲ್ಲಿ ತಮ್ಮನ್ನು ಮಲಿನ ಮಾಡಿದ ಸಕಲ ಬಾಬೆಲ್ ಸಂಬಂಧಿತ ಪದ್ಧತಿಗಳನ್ನು ಮತ್ತು ತತ್ತ್ವಗಳನ್ನು ತೊಲಗಿಸಲಾರಂಭಿಸಿದರು.
9. ಯೆಹೋವನು, 1919ರಿಂದಾರಂಭಿಸಿ ತನ್ನ ಜನರಿಗೆ ಯಾವ ಗಮನಾರ್ಹ ಆಶೀರ್ವಾದಗಳನ್ನು ಕೊಟ್ಟನು?
9 ಅನಂತರ 19ನೆಯ ವಚನಕ್ಕನುಸಾರ, ಯೆಹೋವನು ಮುಂದುವರಿಸುವುದು: “ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು; ಕಲ್ಲಾದ ಹೃದಯವನ್ನು ಅವರೊಳಗಿಂದ ತೆಗೆದು ಮೃದುವಾದ ಹೃದಯವನ್ನು ಅವರಿಗೆ ಅನುಗ್ರಹಿಸುವೆನು.” ಈ ಮಾತುಗಳಿಗನುಸಾರ, 1919ರಲ್ಲಿ, ಯೆಹೋವನು ತನ್ನ ಅಭಿಷಿಕ್ತ ಸೇವಕರನ್ನು ಒಂದಾಗಿಸಿ, ಅವರು ಆತನನ್ನು “ಭುಜಕ್ಕೆ ಭುಜ ಕೊಟ್ಟು” ಸೇವಿಸಲಾಗುವಂತೆ, ವಿವರಣಾತ್ಮಕವಾಗಿ “ಒಂದೇ ಮನಸ್ಸನ್ನು [“ಹೃದಯವನ್ನು,” NW]” ಕೊಟ್ಟನು. (ಚೆಫನ್ಯ 3:9) ಅಲ್ಲದೆ, ಅವರನ್ನು ಸಾಕ್ಷಿ ಕೆಲಸದಲ್ಲಿ ಪುನಃ ಚೇತರಿಸುವಂತೆ ಮತ್ತು ಅವರಲ್ಲಿ ಗಲಾತ್ಯ 5:22, 23ರಲ್ಲಿ ವರ್ಣಿಸಿರುವ ಉತ್ತಮ ಫಲಗಳನ್ನು ಉತ್ಪಾದಿಸುವಂತೆ ಯೆಹೋವನು ತನ್ನ ಜನರಿಗೆ ಪವಿತ್ರಾತ್ಮವನ್ನು ಕೊಟ್ಟನು. ಮತ್ತು ಪ್ರತಿವರ್ತನೆಯಿಲ್ಲದ, ಕಲ್ಲಿನಂತಹ ಹೃದಯದ ಬದಲಿಗೆ, ಯೆಹೋವನು ಅವರಿಗೆ ಒಂದು ಮೃದುವಾದ, ನಮ್ಯ, ವಿಧೇಯ ಹೃದಯವನ್ನು, ತನ್ನ ಚಿತ್ತಕ್ಕೆ ಓಗೊಡುವ ಒಂದು ಹೃದಯವನ್ನು ಕೊಟ್ಟನು.
10. ಯೆಹೋವನು 1919ರಿಂದೀಚೆಗೆ ತನ್ನ ಪುನಸ್ಸ್ಥಾಪಿತ ಜನರನ್ನು ಏಕೆ ಆಶೀರ್ವದಿಸಿದ್ದಾನೆ?
10 ಆತನು ಹೀಗೆ ಮಾಡಿದ್ದೇಕೆ? ಯೆಹೋವನು ತಾನೇ ವಿವರಿಸುತ್ತಾನೆ. ಯೆಹೆಜ್ಕೇಲ 11:19, 20ರಲ್ಲಿ ನಾವು ಓದುವುದು: “ಅವರು ನನ್ನ ನಿಯಮಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಕೊಂಡು ನೆರವೇರಿಸಲಿ. . . . ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.” ದೇವರ ಇಸ್ರಾಯೇಲ್ಯರು, ತಮ್ಮ ಸ್ವಂತ ವಿಚಾರಗಳನ್ನು ಅನುಸರಿಸುವುದಕ್ಕೆ ಬದಲಾಗಿ, ದೇವರ ನಿಯಮಕ್ಕೆ ವಿಧೇಯರಾಗಲು ಕಲಿತರು. ಮನುಷ್ಯ ಭಯವಿಲ್ಲದೇ ದೇವರ ಚಿತ್ತವನ್ನು ಮಾಡಲು ಅವರು ಕಲಿತರು. ಹೀಗೆ ಅವರು ಕ್ರೈಸ್ತಪ್ರಪಂಚದ ನಕಲು ಕ್ರೈಸ್ತರಿಗಿಂತ ಪ್ರತ್ಯೇಕವಾಗಿ ಕಂಡುಬಂದರು. ಅವರು ಯೆಹೋವನ ಜನರಾಗಿದ್ದರು. ಮತ್ತು ಹಾಗಿದ್ದುದರಿಂದ, ಯೆಹೋವನು ಅವರನ್ನು ತನ್ನ ಸಂದೇಶವಾಹಕರಾಗಿ, ತನ್ನ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಗಿ ಬಳಸಲು ಸಿದ್ಧನಾಗಿದ್ದನು.—ಮತ್ತಾಯ 24:45-47.
ದೇವರ ಸಂದೇಶವಾಹಕರ ಸಂತೋಷ
11. ಯೆಶಾಯನ ಪುಸ್ತಕವು ಯೆಹೋವನ ಜನರ ಸಂತೋಷವನ್ನು ಹೇಗೆ ವರ್ಣಿಸುತ್ತದೆ?
11 ತಾವು ಎಂತಹ ಸುಯೋಗಿತ ಸ್ಥಾನವನ್ನು ಅನುಭವಿಸುತ್ತಿದ್ದೇವೆಂದು ಗ್ರಹಿಸಿದಾಗ ಅವರಿಗಾದ ಸಂತೋಷವನ್ನು ನೀವು ಚಿತ್ರಿಸಿಕೊಳ್ಳಬಲ್ಲಿರೊ? ಅವರು ಒಂದು ಗುಂಪಾಗಿ ಯೆಶಾಯ 61:10ರ ಮಾತುಗಳನ್ನು ಪ್ರತಿಧ್ವನಿಸಿದರು: “ನಾನು ಯೆಹೋವನಲ್ಲಿ ಪರಮಾನಂದಪಡುವೆನು, ನನ್ನ ಆತ್ಮವು ನನ್ನ ದೇವರಲ್ಲಿ ಹಿಗ್ಗುವದು.” ಯೆಶಾಯ 35:10ರ ವಾಗ್ದಾನವು ಅವರಲ್ಲಿ ನೆರವೇರಿತು: “ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು; ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.” ದಿವ್ಯ ಶಾಂತಿಯ ಯೆಹೋವನ ಸಂದೇಶವಾಹಕರು 1919ರಲ್ಲಿ ಸಕಲ ಮಾನವಕುಲಕ್ಕೆ ಸುವಾರ್ತೆ ಸಾರಲು ಹೊರಟಾಗ ಅವರಿಗಿದ್ದ ಸಂತೋಷವು ಅಂತಹದ್ದಾಗಿತ್ತು. ಅಂದಿನಿಂದ ಹಿಡಿದು ಈ ದಿನದ ತನಕ, ಈ ಕೆಲಸವನ್ನು ಮಾಡುವುದನ್ನು ಅವರು ನಿಲ್ಲಿಸಿರುವುದಿಲ್ಲ ಮತ್ತು ಅವರ ಸಂತೋಷವು ವೃದ್ಧಿಯಾಗಿದೆ. ತನ್ನ ಪರ್ವತ ಪ್ರಸಂಗದಲ್ಲಿ ಯೇಸು ಹೇಳಿದ್ದು: “ಶಾಂತಿಕರ್ತರು ಧನ್ಯರು, ಏಕೆಂದರೆ ಅವರು ‘ದೇವರ ಪುತ್ರರು’ ಎಂದು ಕರೆಯಲ್ಪಡುವರು.” (ಮತ್ತಾಯ 5:9, NW ಪಾದಟಿಪ್ಪಣಿ) ಆ ಮಾತುಗಳ ಸತ್ಯತೆಯನ್ನು ಅಭಿಷಿಕ್ತ ‘ದೇವರ ಪುತ್ರರಲ್ಲಿ’ ಉಳಿಕೆಯವರು 1919ರಿಂದ ಇಂದಿನ ತನಕ ಅನುಭವಿಸಿದ್ದಾರೆ.
12, 13. (ಎ) ಯೆಹೋವನನ್ನು ಸೇವಿಸುವುದರಲ್ಲಿ ದೇವರ ಇಸ್ರಾಯೇಲನ್ನು ಯಾರು ಕೂಡಿಕೊಂಡರು, ಮತ್ತು ಅವರು ಯಾವುದರಲ್ಲಿ ಕಾರ್ಯೋದ್ಯುಕ್ತರಾದರು? (ಬಿ) ಯೆಹೋವನ ಅಭಿಷಿಕ್ತ ಸೇವಕರಿಂದ ಯಾವ ಮಹಾ ಸಂತೋಷವು ಅನುಭವಿಸಲ್ಪಟ್ಟಿದೆ?
12 ವರುಷಗಳು ದಾಟಿದಂತೆ ದೇವರ ಇಸ್ರಾಯೇಲಿನ ಸಂಖ್ಯೆಯು, ಅಭಿಷಿಕ್ತರಲ್ಲಿ ಉಳಿದವರ ಒಟ್ಟುಗೂಡಿಸುವಿಕೆಯು 1930ಗಳಲ್ಲಿ ಮುಗಿಯತೊಡಗುವ ತನಕ ವೃದ್ಧಿಯಾಯಿತು. ಆದರೆ ಆ ಬಳಿಕ ಸಾರುವವರ ಸಂಖ್ಯೆಯಲ್ಲಿ ವೃದ್ಧಿಯು ನಿಂತುಹೋಯಿತೊ? ನಿಶ್ಚಯವಾಗಿಯೂ ನಿಲ್ಲಲಿಲ್ಲ. ಭೂನಿರೀಕ್ಷೆಯ ಕ್ರೈಸ್ತರ ಒಂದು ಮಹಾ ಸಮೂಹವು ಆಗಲೇ ತೋರಿಬರತೊಡಗಿತ್ತು ಮತ್ತು ಇವರು ಸಾರುವ ಕೆಲಸದಲ್ಲಿ ತಮ್ಮ ಅಭಿಷಿಕ್ತ ಸಹೋದರರನ್ನು ಕೂಡಿಕೊಳ್ಳುತ್ತಿದ್ದರು. ಅಪೊಸ್ತಲ ಯೋಹಾನನು ಈ ಮಹಾ ಸಮೂಹವನ್ನು ದರ್ಶನದಲ್ಲಿ ನೋಡಿದನು ಮತ್ತು ಅವನು ಅವರನ್ನು ವರ್ಣಿಸಿದ ವಿಧವು ಗಮನಾರ್ಹ: “ಅವರು ದೇವರ ಸಿಂಹಾಸನದ ಮುಂದೆ ಇದ್ದಾರೆ; ಮತ್ತು ಅವರು ಆತನ ಆಲಯದಲ್ಲಿ ಹಗಲಿರುಳು ಆತನಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತ ಇದ್ದಾರೆ.” (ಪ್ರಕಟನೆ 7:15, NW) ಹೌದು, ಆ ಮಹಾ ಸಮೂಹವು ದೇವರನ್ನು ಸೇವಿಸುವುದರಲ್ಲಿ ಕಾರ್ಯೋದ್ಯುಕ್ತವಾಯಿತು. ಇದರ ಪರಿಣಾಮವಾಗಿ, 1935ರ ಬಳಿಕ, ಅಭಿಷಿಕ್ತರ ಸಂಖ್ಯೆಯು ಕಡಮೆಯಾಗತೊಡಗಿದಾಗ, ಸಾಕ್ಷಿ ಕಾರ್ಯವು ಈ ನಂಬಿಗಸ್ತ ಒಡನಾಡಿಗಳಿಂದ ಹೆಚ್ಚು ಭರದಿಂದ ಮುಂದಕ್ಕೊಯ್ಯಲ್ಪಟ್ಟಿತು.
13 ಈ ವಿಧದಲ್ಲಿ ಯೆಶಾಯ 60:3, 4 ನೆರವೇರಿತು: “ಜನಾಂಗಗಳು ನಿನ್ನ ಬೆಳಕಿಗೆ ನೆರೆಯುವವು. ಅರಸರು ನಿನ್ನಲ್ಲಿನ ಉದಯಪ್ರಕಾಶಕ್ಕೆ ಬರುವರು. ಕಣ್ಣೆತ್ತಿ ಸುತ್ತಲು ನೋಡು, ನಿನ್ನ ಮಕ್ಕಳೆಲ್ಲರೂ ಗುಂಪುಕೂಡಿ ನಿನ್ನ ಬಳಿಗೆ ಸೇರುತ್ತಿದ್ದಾರೆ; ಗಂಡುಮಕ್ಕಳು ದೂರದಿಂದ ಸಮೀಪಿಸುತ್ತಾರೆ, ಹೆಣ್ಣುಮಕ್ಕಳು ಕಂಕುಳಿನಲ್ಲಿ ಕುಳಿತು ಬರುತ್ತಾರೆ.” ಈ ವಿಕಸನಗಳು ದೇವರ ಇಸ್ರಾಯೇಲಿಗೆ ತಂದ ಸಂತೋಷವನ್ನು ಯೆಶಾಯ 60:5ರಲ್ಲಿ ಸೊಗಸಾಗಿ ವರ್ಣಿಸಲಾಗಿದೆ. ಅಲ್ಲಿ ನಾವು ಓದುವುದು: “ನೀನು ನೋಡಿ ಕಳೆಗೊಳ್ಳುವಿ, ನಿನ್ನ ಹೃದಯವು ಅದರುತ್ತಾ ಉಬ್ಬುವದು; ಏಕಂದರೆ ಸಮುದ್ರವ್ಯಾಪಾರಸಮೃದ್ಧಿಯು ನಿನ್ನ ಕಡೆಗೆ ತಿರುಗುವದು, ಜನಾಂಗಗಳ ಐಶ್ವರ್ಯವು ನಿನಗೆ ದೊರೆಯುವದು.”
ಮುನ್ನಡೆಯುತ್ತಿರುವ ಯೆಹೋವನ ಸಂಸ್ಥೆ
14. (ಎ) ಯೆಹೆಜ್ಕೇಲನು ಸ್ವರ್ಗೀಯ ವಿಷಯಗಳ ಯಾವ ದರ್ಶನವನ್ನು ನೋಡಿದನು, ಮತ್ತು ಅವನು ಯಾವ ಆಜ್ಞೆಯನ್ನು ಪಡೆದನು? (ಬಿ) ಆಧುನಿಕ ದಿನಗಳಲ್ಲಿ ಯೆಹೋವನ ಜನರು ಯಾವುದನ್ನು ವಿವೇಚಿಸಿದರು ಮತ್ತು ಯಾವ ಜವಾಬ್ದಾರಿಯ ಅರಿವು ಅವರಿಗಾಯಿತು?
14 ಸಾ.ಶ.ಪೂ. 613ರಲ್ಲಿ, ಯೆಹೆಜ್ಕೇಲನು ದರ್ಶನದಲ್ಲಿ ಯೆಹೋವನ ಸ್ವರ್ಗೀಯ, ರಥಸದೃಶ ಸಂಸ್ಥೆಯು ಮುನ್ಚಲಿಸುವುದನ್ನು ನೋಡಿದನು. (ಯೆಹೆಜ್ಕೇಲ 1:4-28) ಆ ಬಳಿಕ ಯೆಹೋವನು ಅವನಿಗೆ ಹೇಳಿದ್ದು: “ನರಪುತ್ರನೇ, ನೀನು ಇಸ್ರಾಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಅವರಿಗೆ ನುಡಿ.” (ಯೆಹೆಜ್ಕೇಲ 3:4) ಈ 1997ನೆಯ ವರುಷದಲ್ಲಿ, ಯೆಹೋವನ ಸ್ವರ್ಗೀಯ ಸಂಸ್ಥೆಯು, ದೇವರ ಉದ್ದೇಶಗಳನ್ನು ನೆರವೇರಿಸಲು ಇನ್ನೂ ಒಂದೇ ಸಮನೆ ಚಲಿಸುತ್ತಿರುವುದನ್ನು ನಾವು ವಿವೇಚಿಸಿ ತಿಳಿಯುತ್ತೇವೆ. ಆದಕಾರಣ, ಆ ಉದ್ದೇಶಗಳ ಕುರಿತು ಇತರರಿಗೆ ತಿಳಿಸಲು ನಾವಿನ್ನೂ ಪ್ರಚೋದಿಸಲ್ಪಡುತ್ತೇವೆ. ಯೆಹೆಜ್ಕೇಲನ ದಿನಗಳಲ್ಲಿ ಅವನು, ಯೆಹೋವನು ನೇರವಾಗಿ ಪ್ರೇರಿಸಿದ ಮಾತುಗಳನ್ನು ಆಡಿದನು. ಇಂದು ನಾವು ಯೆಹೋವನ ಪ್ರೇರಿತ ವಾಕ್ಯವಾದ ಬೈಬಲಿನಿಂದ ತೆಗೆದ ಮಾತುಗಳನ್ನಾಡುತ್ತೇವೆ. ಮತ್ತು ಮಾನವಕುಲಕ್ಕಾಗಿ ಆ ಗ್ರಂಥದಲ್ಲಿ ಎಂತಹ ಆಶ್ಚರ್ಯಕರವಾದ ಸಂದೇಶವಿದೆ! ಅನೇಕರು ಭವಿಷ್ಯತ್ತಿನ ಕುರಿತು ಚಿಂತಿತರಾಗಿರುವಾಗ, ಪರಿಸ್ಥಿತಿಗಳು ಅವರು ಭಾವಿಸುವುದಕ್ಕಿಂತ ಹೆಚ್ಚು ಕೆಟ್ಟವುಗಳಾಗಿವೆ—ಅದೇ ಸಮಯದಲ್ಲಿ ಹೆಚ್ಚು ಉತ್ತಮವೂ ಆಗಿವೆ—ಎಂದು ಬೈಬಲು ತೋರಿಸುತ್ತದೆ.
15. ಪರಿಸ್ಥಿತಿಗಳು ಇಂದು ಅನೇಕರು ನೆನಸುವುದಕ್ಕಿಂತ ಹೆಚ್ಚು ಕೆಟ್ಟವುಗಳಾಗಿವೆಯೇಕೆ?
15 ನಾವು ಹಿಂದಿನ ಲೇಖನಗಳಲ್ಲಿ ಕಲಿತಿರುವಂತೆ, ಕ್ರೈಸ್ತ ಪ್ರಪಂಚ ಮತ್ತು ಇತರ ಎಲ್ಲ ಸುಳ್ಳು ಧರ್ಮಗಳು, ಸಾ.ಶ.ಪೂ. 607ರಲ್ಲಿ ಯೆರೂಸಲೇಮ್ ಸಂಪೂರ್ಣವಾಗಿ ನಾಶಗೊಂಡಂತೆಯೇ ಬೇಗನೆ ನಾಶಗೊಳ್ಳುವವೆಂಬ ಕಾರಣ, ವಿಷಯಗಳು ಹೆಚ್ಚು ಕೆಟ್ಟದ್ದಾಗಿವೆ. ಅದಲ್ಲದೆ, ಪ್ರಕಟನೆ ಪುಸ್ತಕದಲ್ಲಿ ಏಳು ತಲೆಗಳು ಮತ್ತು ಹತ್ತು ಕೊಂಬುಗಳುಳ್ಳ ಕಾಡು ಮೃಗದಿಂದ ಚಿತ್ರಿಸಲ್ಪಟ್ಟ ಇಡೀ ಭೌಗೋಲಿಕ ರಾಜಕೀಯ ವ್ಯವಸ್ಥೆಯು—ಯೆರೂಸಲೇಮಿನ ಅನೇಕ ವಿಧರ್ಮಿ ನೆರೆಹೊರೆಯವರು ನಾಶವಾದಂತೆ, ಅಳಿಸಲ್ಪಡುವುದು. (ಪ್ರಕಟನೆ 13:1, 2; 19:19-21) ಯೆಹೆಜ್ಕೇಲನ ದಿನಗಳಲ್ಲಿ ಯೆರೂಸಲೇಮನ್ನು ಸಮೀಪಿಸುತ್ತಿದ್ದ ನಾಶನವು ಪ್ರೇರಿಸಿದ ಭೀತಿಯನ್ನು ಯೆಹೋವನು ಸುವ್ಯಕ್ತವಾಗಿ ವರ್ಣಿಸಿದನು. ಆದರೆ ಜನರು ಈ ಲೋಕದ ಸನ್ನಿಹಿತ ನಾಶನವನ್ನು ವಿವೇಚಿಸುವಾಗ, ಆತನ ಮಾತುಗಳಿಗೆ ಇನ್ನೂ ಹೆಚ್ಚಿನ ಅರ್ಥವಿರುವುದು. ಯೆಹೋವನು ಯೆಹೆಜ್ಕೇಲನಿಗೆ ಹೇಳಿದ್ದು: “ನರಪುತ್ರನೇ, ಮೊರೆಯಿಡು; ಸೊಂಟಮುರಿದಷ್ಟು ದುಃಖದಿಂದ ಜನರ ಮುಂದೆ ನರಳಾಡು. ಏಕೆ ನರಳಾಡುತ್ತೀ ಎಂದು ಅವರು ನಿನ್ನನ್ನು ಕೇಳಲು ನೀನು ಅವರಿಗೆ—ದುರ್ವಾರ್ತೆಯ ನಿಮಿತ್ತ ನರಳುತ್ತೇನೆ; ಇಗೋ, ವಿಪತ್ತು ಬಂತು; ಎಲ್ಲರ ಹೃದಯವು ಕರಗಿ ನೀರಾಗುವದು; ಎಲ್ಲರ ಕೈ ಜೋಲು ಬೀಳುವದು, ಎಲ್ಲರ ಮನಸ್ಸು ಕುಂದುವದು, ಎಲ್ಲರ ಮೊಣಕಾಲು ನೀರಿನಂತೆ ಚಂಚಲವಾಗುವದು; ಇಗೋ, ಬಂತು, ಆಯಿತು; ಇದು ಕರ್ತನಾದ ಯೆಹೋವನ ನುಡಿ ಎಂದು ಉತ್ತರಕೊಡು.” (ಯೆಹೆಜ್ಕೇಲ 21:6, 7; ಮತ್ತಾಯ 24:30) ಭೀತಿಹುಟ್ಟಿಸುವ ಘಟನೆಗಳು ಇನ್ನೇನು ಮುಂದೆಯೇ ಇವೆ. ನಮ್ಮ ಜೊತೆ ಮಾನವರಿಗಾಗಿ ನಮಗಿರುವ ಆಳವಾದ ಚಿಂತೆಯು, ನಾವು ಎಚ್ಚರಿಕೆಯನ್ನು ಧ್ವನಿಸುವಂತೆ, ಯೆಹೋವನ ಬರುತ್ತಿರುವ ಕೋಪದ “ದುರ್ವಾರ್ತೆ”ಯನ್ನು ತಿಳಿಸುವಂತೆ ಪ್ರಚೋದಿಸುತ್ತದೆ.
16. ನಮ್ರರಿಗೆ ಪರಿಸ್ಥಿತಿಗಳು ಅನೇಕರು ನೆನಸುವುದಕ್ಕಿಂತ ಹೆಚ್ಚು ಉತ್ತಮವಾಗಿರುವುದೇಕೆ?
16 ಅದೇ ಸಮಯದಲ್ಲಿ, ನಮ್ರರಿಗೊ ಸಂಗತಿಗಳು ಹೆಚ್ಚಿನ ಜನರು ಭಾವಿಸುವುದಕ್ಕಿಂತ ಎಷ್ಟೋ ಉತ್ತಮವಾಗಿರುತ್ತವೆ. ಯಾವ ವಿಧದಲ್ಲಿ? ಹೇಗೆಂದರೆ ಯೇಸು ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತಿದ್ದಾನೆ ಮತ್ತು ಈಗ ದೇವರ ರಾಜ್ಯದ ಅರಸನಾಗಿ ಆಳುತ್ತಿದ್ದಾನೆ. (1 ತಿಮೊಥೆಯ 1:15; ಪ್ರಕಟನೆ 11:15) ಮಾನವಕುಲದ ಬಗೆಹರಿಸಸಾಧ್ಯವಿಲ್ಲದ್ದೆಂದು ತೋರುವ ಸಮಸ್ಯೆಗಳು, ಆ ಸ್ವರ್ಗೀಯ ರಾಜ್ಯದ ಮೂಲಕ ಪರಿಹರಿಸಲ್ಪಡುವುವು. ಮರಣ, ರೋಗ, ಭ್ರಷ್ಟಾಚಾರ, ಹಸಿವೆ ಮತ್ತು ಪಾತಕಗಳು ಗತ ವಿಷಯಗಳಾಗಿಹೋಗಿ, ದೇವರ ರಾಜ್ಯವು ಯಾವ ವಿರೋಧವೂ ಇಲ್ಲದೆ ಒಂದು ಪ್ರಮೋದವನ ಭೂಮಿಯ ಮೇಲೆ ಆಳುವುದು. (ಪ್ರಕಟನೆ 21:3, 4) ಮಾನವಕುಲವು ದಿವ್ಯ ಶಾಂತಿಯನ್ನು—ಯೆಹೋವ ದೇವರೊಂದಿಗೆ ಮತ್ತು ಪರಸ್ಪರವಾಗಿ ಶಾಂತಿಸಂಬಂಧವನ್ನು—ಅನುಭವಿಸುವುದು.—ಕೀರ್ತನೆ 72:7.
17. ದಿವ್ಯ ಶಾಂತಿಯ ಸಂದೇಶವಾಹಕರ ಹೃದಯಗಳಿಗೆ ಯಾವ ಅಭಿವೃದ್ಧಿಗಳು ಆನಂದವನ್ನು ತರುತ್ತವೆ?
17 ಲೋಕದ ಕೆಲವು ಭಾಗಗಳಲ್ಲಿ, ನಮ್ರರ ಗಮನಾರ್ಹವಾಗಿ ದೊಡ್ಡದಾದ ಗುಂಪುಗಳು, ಈ ದಿವ್ಯಶಾಂತಿಯ ಸಂದೇಶಕ್ಕೆ ಓಗೊಡುತ್ತಿವೆ. ಕೆಲವೇ ಉದಾಹರಣೆಗಳನ್ನು ಕೊಡುವುದಾದರೆ, ಕಳೆದ ವರ್ಷ ಯೂಕ್ರೇನ್ ಪ್ರಚಾರಕರಲ್ಲಿ 17 ಪ್ರತಿಶತ ವೃದ್ಧಿಯನ್ನು ವರದಿಮಾಡಿತು. ಮೋಸಂಬೀಕ್ 17 ಪ್ರತಿಶತ, ಲಿಥುಏನಿಯ 29 ಪ್ರತಿಶತ ಅಭಿವೃದ್ಧಿಯನ್ನು ವರದಿಸಿತು. ರಷ್ಯಾದಲ್ಲಿ 31 ಪ್ರತಿಶತ ಅಭಿವೃದ್ಧಿಯಾಗಿರುವಾಗ, ಆಲ್ಬೇನಿಯ ಪ್ರಚಾರಕರಲ್ಲಿ 52 ಪ್ರತಿಶತ ಅಭಿವೃದ್ಧಿಯನ್ನು ಅನುಭವಿಸಿತು. ಈ ಅಭಿವೃದ್ಧಿಗಳು ದಿವ್ಯ ಶಾಂತಿಯನ್ನು ಅನುಭವಿಸಬಯಸುವ ಮತ್ತು ನೀತಿಗಾಗಿ ತಮ್ಮ ಸ್ಥಾನವನ್ನು ತೆಗೆದುಕೊಂಡಿರುವ ಹತ್ತಾರು ಸಾವಿರ ಮಂದಿ ಪ್ರಾಮಾಣಿಕ ಹೃದಯಿಗಳನ್ನು ಪ್ರತಿನಿಧೀಕರಿಸುತ್ತದೆ. ಇಂತಹ ಶೀಘ್ರ ಬೆಳವಣಿಗೆಯು, ಇಡೀ ಕ್ರೈಸ್ತ ಸಹೋದರತ್ವಕ್ಕೆ ಆನಂದವನ್ನು ತರುತ್ತದೆ.
18. ಜನರು ಕೇಳಲಿ, ಕೇಳದಿರಲಿ, ನಮ್ಮ ಮನೋಭಾವವು ಏನಾಗಿರುವುದು?
18 ನೀವು ಜೀವಿಸುವಲ್ಲಿ ಜನರು ಇಷ್ಟೊಂದು ಸಿದ್ಧಮನಸ್ಸಿನಿಂದ ಪ್ರತಿವರ್ತಿಸುತ್ತಾರೊ? ಹಾಗಿದ್ದರೆ ನಾವು ನಿಮ್ಮೊಂದಿಗೆ ಹರ್ಷಿಸುತ್ತೇವೆ. ಆದರೆ ಕೆಲವು ಟೆರಿಟೊರಿಗಳಲ್ಲಿ, ಆಸಕ್ತಿಯಿರುವ ಒಬ್ಬ ವ್ಯಕ್ತಿಯನ್ನು ಕಂಡುಹಿಡಿಯುವ ಮೊದಲು ಅನೇಕಾನೇಕ ತಾಸು ಶ್ರಮಿಸಬೇಕಾಗುತ್ತದೆ. ಅಂತಹ ಟೆರಿಟೊರಿಗಳಲ್ಲಿ ಸೇವೆಮಾಡುತ್ತಿರುವವರು ಆಲಸ್ಯಮಾಡುತ್ತಾರೊ ಅಥವಾ ನಿರಾಶರಾಗುತ್ತಾರೊ? ಇಲ್ಲ. ಯೆಹೋವನ ಸಾಕ್ಷಿಗಳು ಯೆಹೆಜ್ಕೇಲನಿಗೆ ದೇವರು ಹೇಳಿದ ಮಾತುಗಳನ್ನು ಜ್ಞಾಪಿಸಿಕೊಳ್ಳುತ್ತಾರೆ. ದೇವರು ಆ ಯುವ ಪ್ರವಾದಿಯನ್ನು, ತನ್ನ ಯೆಹೂದಿ ನಾಡಿಗರಿಗೆ ಸಾರುವಂತೆ ಮೊದಲಾಗಿ ನಿಯೋಜಿಸಿದಾಗ ಹೇಳಿದ್ದು: “ಅವರು ದ್ರೋಹಿವಂಶದವರು, ಒಂದುವೇಳೆ ಕೇಳದೆ ಹೋದಾರು; ಕೇಳಿದರೂ ಕೇಳದೆ ಹೋದರೂ ಒಬ್ಬ ಪ್ರವಾದಿಯು ತಮ್ಮ ಮಧ್ಯದಲ್ಲಿ ಕಾಣಿಸಿಕೊಂಡಿದ್ದಾನೆಂದು ತಿಳಿದೇ ಇರುವರು.” (ಯೆಹೆಜ್ಕೇಲ 2:5) ಯೆಹೆಜ್ಕೇಲನಂತೆ ನಾವೂ, ಜನರು ಕೇಳಲಿ, ಕೇಳದಿರಲಿ, ಅವರಿಗೆ ದಿವ್ಯ ಶಾಂತಿಯ ಕುರಿತು ಹೇಳುತ್ತಿರುತ್ತೇವೆ. ಅವರು ಆಲಿಸುವಾಗ ನಾವು ರೋಮಾಂಚಗೊಳ್ಳುತ್ತೇವೆ. ಅವರು ಕೇಳದೆ, ಅಪಹಾಸ್ಯ ಮಾಡಿ, ನಮ್ಮನ್ನು ಹಿಂಸಿಸಿದರೂ ನಾವು ಪಟ್ಟುಹಿಡಿಯುತ್ತೇವೆ. ನಾವು ಯೆಹೋವನನ್ನು ಪ್ರೀತಿಸುತ್ತೇವೆ ಮತ್ತು “ಪ್ರೀತಿ . . . ಎಲ್ಲವನ್ನೂ ಸಹಿಸಿಕೊಳ್ಳುತ್ತದೆ,” ಎಂದು ಬೈಬಲು ಹೇಳುತ್ತದೆ. (1 ಕೊರಿಂಥ 13:4, 7) ನಾವು ಸಹಿಷ್ಣುತೆಯಿಂದ ಸಾರುವ ಕಾರಣ, ಯೆಹೋವನ ಸಾಕ್ಷಿಗಳು ಯಾರೆಂದು ಜನರಿಗೆ ಗೊತ್ತಿದೆ. ಅವರಿಗೆ ನಮ್ಮ ಸಂದೇಶವು ತಿಳಿದದೆ. ಅಂತ್ಯವು ಬರುವಾಗ, ತಾವು ದಿವ್ಯ ಶಾಂತಿಯನ್ನು ಅನುಭವಿಸುವಂತೆ ಯೆಹೋವನ ಸಾಕ್ಷಿಗಳು ಸಹಾಯಮಾಡಲು ಪ್ರಯತ್ನಿಸಿದರೆಂದು ಅವರಿಗೆ ತಿಳಿಯುವುದು.
19. ಸತ್ಯ ದೇವರ ಸೇವಕರಾಗಿದ್ದು, ಯಾವ ಮಹಾ ಸುಯೋಗವನ್ನು ನಾವು ಅಮೂಲ್ಯವೆಂದೆಣಿಸುತ್ತೇವೆ?
19 ಯೆಹೋವನನ್ನು ಸೇವಿಸುವುದಕ್ಕಿಂತ ಹೆಚ್ಚಿನ ಸುಯೋಗವಿದೆಯೆ? ಇಲ್ಲ! ನಮ್ಮ ಅತ್ಯಂತ ಮಹಾ ಸಂತೋಷವು ದೇವರೊಂದಿಗೆ ನಮಗಿರುವ ಸಂಬಂಧದಿಂದ ಮತ್ತು ನಾವು ಆತನ ಚಿತ್ತವನ್ನು ಮಾಡುತ್ತೇವೆಂಬ ಜ್ಞಾನದಿಂದ ಬರುತ್ತದೆ. “ಉತ್ಸಾಹಧ್ವನಿಯನ್ನು ಕೇಳಿದ ಜನರು ಧನ್ಯರು; ಯೆಹೋವನೇ, ಅವರು ನಿನ್ನ ಮುಖಪ್ರಕಾಶದಲ್ಲಿ ಸಂಚರಿಸುತ್ತಾರೆ.” (ಕೀರ್ತನೆ 89:15) ಮಾನವಕುಲಕ್ಕೆ ದೇವರ ಶಾಂತಿಯ ಸಂದೇಶವಾಹಕರಾಗಿರುವ ಆನಂದವನ್ನು ನಾವು ಸದಾ ಅಮೂಲ್ಯವೆಂದೆಣಿಸುವಂತಾಗಲಿ. ಯೆಹೋವನು ಮುಗಿಯಿತೆಂದು ಹೇಳುವ ತನಕ ನಾವು ಶ್ರದ್ಧಾಪೂರ್ವಕವಾಗಿ ನಮ್ಮ ಪಾತ್ರವನ್ನು ವಹಿಸುವಂತಾಗಲಿ.
ನಿಮಗೆ ಜ್ಞಾಪಕವಿದೆಯೆ?
◻ ಇಂದು ದೇವರ ಶಾಂತಿಯ ಸಂದೇಶವಾಹಕರಾರು?
◻ ಮಹಾ ಬಾಬೆಲ್ 1919ರಲ್ಲಿ ಪತನವನ್ನನುಭವಿಸಿತೆಂದು ನಮಗೆ ಹೇಗೆ ಗೊತ್ತು?
◻ “ಮಹಾ ಸಮೂಹ”ದ ಮುಖ್ಯ ಆಸಕ್ತಿ ಏನು?
◻ ಭವಿಷ್ಯತ್ತು ಇಂದು ಅನೇಕರು ಯೋಚಿಸುವುದಕ್ಕಿಂತ ಹೆಚ್ಚು ಮೊಬ್ಬಾಗಿರುವುದೇಕೆ?
◻ ಸಹೃದಯಿಗಳಿಗಾದರೊ, ಭವಿಷ್ಯವು ಅವರು ನೆನಸುವುದಕ್ಕಿಂತ ಏಕೆ ಹೆಚ್ಚು ಉತ್ತಮವಾಗಿರಸಾಧ್ಯವಿದೆ?
[ಪುಟ 21 ರಲ್ಲಿರುವ ಚಿತ್ರ]
ಮಾನವ ಸಮಾಜದ ಅವನತಿಯನ್ನು ನೋಡುವಾಗ, ಅನೇಕರಿಗೆ ಅಶುಭಸೂಚನೆಯ ಅನಿಸಿಕೆಯಾಗುತ್ತದೆ
[ಪುಟ 23 ರಲ್ಲಿರುವ ಚಿತ್ರ]
ದಿವ್ಯ ಶಾಂತಿಯ ಸಂದೇಶವಾಹಕರು ಇಂದು ಭೂಮಿಯ ಮೇಲಿರುವ ಅತ್ಯಂತ ಸಂತುಷ್ಟ ಜನರು