-
ಸಿಂಹಗಳ ಬಾಯಿಂದ ರಕ್ಷಿಸಲ್ಪಟ್ಟದ್ದು!ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
-
-
7. ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು ಅರಸನ ಬಳಿ ಯಾವ ಪ್ರಸ್ತಾಪವನ್ನು ಮಾಡಿದರು, ಮತ್ತು ಅದನ್ನು ಯಾವ ರೀತಿಯಲ್ಲಿ ಮಾಡಿದರು?
7 ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳ ಒಂದು ತಂಡವೇ ದಾರ್ಯಾವೆಷನ ಸಮ್ಮುಖದಲ್ಲಿ ‘ನೆರೆದುಬಂತು.’ ಇಲ್ಲಿ ಉಪಯೋಗಿಸಲ್ಪಟ್ಟಿರುವ ಅರಮಾಯ ಅಭಿವ್ಯಕ್ತಿಯು, ಉದ್ರೇಕದಿಂದ ಕೂಡಿದ ಕೋಲಾಹಲವನ್ನು ಅರ್ಥೈಸುತ್ತದೆ. ದಾರ್ಯಾವೆಷನ ಮುಂದೆ ತುಂಬ ತುರ್ತಿನ ಸಂಗತಿಯನ್ನು ಪ್ರಸ್ತುತಪಡಿಸಲಿಕ್ಕಾಗಿ ತಾವು ಬಂದಿದ್ದೇವೆ ಎಂಬಂತೆ ಈ ಜನರು ತೋರಿಸಿಕೊಂಡರು ಎಂಬುದು ಸುವ್ಯಕ್ತ. ತಾವು ಇದನ್ನು ನಿಶ್ಚಿತಾಭಿಪ್ರಾಯದಿಂದ ಹಾಗೂ ತತ್‌ಕ್ಷಣವೇ ಗಮನ ಕೊಡುವ ಅಗತ್ಯವುಳ್ಳ ವಿಷಯ ಎಂಬಂತಹ ರೀತಿಯಲ್ಲಿ ಪ್ರಸ್ತುತಪಡಿಸುವಲ್ಲಿ, ಅರಸನು ತಮ್ಮ ಪ್ರಸ್ತಾಪವನ್ನು ಪ್ರಶ್ನಿಸುವ ಸಂಭವವಿರುವುದಿಲ್ಲ ಎಂದು ಅವರು ಯೋಚಿಸಿದ್ದಿರಬಹುದು. ಆದುದರಿಂದ, ಅವರು ಈ ವಿಷಯವನ್ನು ನೇರವಾಗಿ ಹೇಳಿದ್ದು: “ಅರಸನೇ . . . ಯಾವನಾದರೂ ಮೂವತ್ತು ದಿನಗಳ ತನಕ ರಾಜನಾದ ನಿನಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ವಿಜ್ಞಾಪನೆ ಮಾಡಿಕೊಂಡರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು ಎಂಬ ಖಂಡಿತನಿಬಂಧನೆಯನ್ನು ರಾಜಾಜ್ಞಾರೂಪವಾಗಿ ವಿಧಿಸುವದು ಒಳ್ಳೇದೆಂದು ರಾಜ್ಯದ ಸಕಲ ಮುಖ್ಯಾಧಿಕಾರಿ ನಾಯಕ ದೇಶಾಧಿಪತಿ ಮಂತ್ರಿ ಈ ಸಂಸ್ಥಾನಾಧ್ಯಕ್ಷರೂ ಆಲೋಚನೆಮಾಡಿಕೊಂಡಿದ್ದಾರೆ.”a—ದಾನಿಯೇಲ 6:6, 7.
8. (ಎ) ಪ್ರಸ್ತಾಪಿಸಲ್ಪಟ್ಟ ನಿಬಂಧನೆಯು ದಾರ್ಯಾವೆಷನ ಮನಸ್ಸಿಗೆ ಏಕೆ ಹಿಡಿಸಿದ್ದಿರಬಹುದು? (ಬಿ) ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳ ನಿಜವಾದ ಹೇತು ಯಾವುದಾಗಿತ್ತು?
8 ಮೆಸಪೊಟೇಮಿಯದ ಅರಸರನ್ನು ದೇವರೆಂದು ಪರಿಗಣಿಸಿ, ಅವರನ್ನು ಆರಾಧಿಸುವುದು ಸರ್ವಸಾಮಾನ್ಯವಾಗಿತ್ತು ಎಂದು ಐತಿಹಾಸಿಕ ದಾಖಲೆಗಳು ರುಜುಪಡಿಸುತ್ತವೆ. ಆದುದರಿಂದ, ಈ ಪ್ರಸ್ತಾಪವನ್ನು ಕೇಳಿಸಿಕೊಂಡ ದಾರ್ಯಾವೆಷನು, ತನ್ನನ್ನು ತುಂಬ ಗೌರವಿಸಲಾಗುತ್ತಿದೆ ಎಂದು ಭಾವಿಸಿದನು ಎಂಬುದರಲ್ಲಿ ಸಂದೇಹವೇ ಇಲ್ಲ. ಅದರಿಂದಾಗುವ ಲಾಭವನ್ನು ಸಹ ಅವನು ಮನಗಂಡಿದ್ದಿರಬಹುದು. ಬಾಬೆಲಿನಲ್ಲಿ ವಾಸಿಸುತ್ತಿದ್ದವರಿಗೆ, ದಾರ್ಯಾವೆಷನು ವಿದೇಶೀಯನಾಗಿದ್ದನು ಮತ್ತು ಹೊಸಬನಾಗಿದ್ದನು ಎಂಬುದು ನಿಮಗೆ ನೆನಪಿರಲಿ. ಈ ಹೊಸ ನಿಯಮವು ಅವನನ್ನು ಒಬ್ಬ ಅರಸನಾಗಿ ಸ್ಥಾಪಿಸಲು ಸಹಾಯ ಮಾಡಸಾಧ್ಯವಿತ್ತು. ಮತ್ತು ಬಾಬೆಲಿನಲ್ಲಿ ವಾಸಿಸುತ್ತಿದ್ದ ಜನಸಮುದಾಯಗಳು, ಹೊಸ ರಾಜ್ಯಭಾರಕ್ಕೆ ತಮ್ಮ ನಿಷ್ಠೆ ಹಾಗೂ ಬೆಂಬಲವನ್ನು ತೋರಿಸುವಂತೆ ಉತ್ತೇಜಿಸಸಾಧ್ಯವಿತ್ತು. ಆದರೂ, ಈ ನಿಬಂಧನೆಯನ್ನು ಪ್ರಸ್ತಾಪಿಸುವುದರಲ್ಲಿ ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳಿಗೆ ರಾಜನ ಹಿತಕ್ಷೇಮದ ಬಗ್ಗೆ ಯಾವುದೇ ಆಸಕ್ತಿಯಿರಲಿಲ್ಲ. ದಾನಿಯೇಲನನ್ನು ಸಮಸ್ಯೆಯಲ್ಲಿ ಸಿಕ್ಕಿಸುವುದೇ ಅವರ ನಿಜವಾದ ಹೇತುವಾಗಿತ್ತು. ಏಕೆಂದರೆ ತೆರೆದ ಕಿಟಕಿಗಳುಳ್ಳ ತನ್ನ ಮಹಡಿಯ ಕೋಣೆಯಲ್ಲಿ ದಿನಕ್ಕೆ ಮೂರು ಬಾರಿ ಪ್ರಾರ್ಥಿಸುವುದು ಅವನ ಪದ್ಧತಿಯಾಗಿತ್ತು ಎಂಬುದು ಅವರಿಗೆ ಗೊತ್ತಿತ್ತು.
9. ಅಧಿಕಾಂಶ ಯೆಹೂದ್ಯೇತರರಿಗೆ ಹೊಸ ನಿಬಂಧನೆಯು ಏಕೆ ಒಂದು ಸಮಸ್ಯೆಯಾಗಿರಲಿಲ್ಲ?
9 ಪ್ರಾರ್ಥನೆಯ ಮೇಲಿನ ಈ ನಿರ್ಬಂಧವು, ಬಾಬೆಲಿನಲ್ಲಿರುವ ಎಲ್ಲ ಧಾರ್ಮಿಕ ಸಮುದಾಯಗಳಿಗೆ ಒಂದು ಸಮಸ್ಯೆಯನ್ನು ಉಂಟುಮಾಡಸಾಧ್ಯವಿತ್ತೊ? ಖಂಡಿತವಾಗಿಯೂ ಇಲ್ಲ, ಏಕೆಂದರೆ ಈ ನಿಷೇಧವು ಕೇವಲ ಒಂದು ತಿಂಗಳ ವರೆಗೆ ಮಾತ್ರ ಇರಲಿತ್ತು. ಇದಲ್ಲದೆ, ಕೆಲವು ಯೆಹೂದ್ಯೇತರರು, ಸ್ವಲ್ಪ ಕಾಲಾವಧಿಯ ವರೆಗೆ ತಮ್ಮ ಆರಾಧನೆಯನ್ನು ಮನುಷ್ಯನಿಗೆ ನೀಡುವುದನ್ನು ಒಂದು ಒಪ್ಪಂದದೋಪಾದಿ ಪರಿಗಣಿಸುವ ಸಾಧ್ಯತೆಯಿತ್ತು. ಒಬ್ಬ ಬೈಬಲ್ ವಿದ್ವಾಂಸನು ದಾಖಲಿಸಿದ್ದು: “ಜನಾಂಗಗಳ ಅಧಿಕಾಂಶ ಮೂರ್ತಿಪೂಜಕರಿಗೆ, ಅರಸನ ಆರಾಧನೆಯು ಒಂದು ವಿಚಿತ್ರ ಬೇಡಿಕೆಯಾಗಿರಲಿಲ್ಲ; ಆದುದರಿಂದಲೇ, ದೇವರಿಗೆ ಸಲ್ಲತಕ್ಕ ಗೌರವವನ್ನು, ವಿಜೇತನಾಗಿದ್ದ ಮೇದ್ಯಯನಾದ ದಾರ್ಯಾವೆಷನಿಗೆ ಸಲ್ಲಿಸುವಂತೆ ಬಾಬೆಲಿನವನಿಗೆ ಕರೆಕೊಡಲ್ಪಟ್ಟಾಗ, ಅವನು ಈ ಬೇಡಿಕೆಗೆ ಸುಲಭವಾಗಿ ವಿಧೇಯನಾದನು. ಇಂತಹ ಒಂದು ಬೇಡಿಕೆಯನ್ನು ನಿರಾಕರಿಸಿದ್ದು ಯೆಹೂದ್ಯನು ಮಾತ್ರವೇ.”
-
-
ಸಿಂಹಗಳ ಬಾಯಿಂದ ರಕ್ಷಿಸಲ್ಪಟ್ಟದ್ದು!ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
-
-
a ಬಾಬೆಲಿನಲ್ಲಿ “ಸಿಂಹಗಳ ಗವಿ”ಯು ಇತ್ತು ಎಂಬುದು, ಕೆಲವೊಮ್ಮೆ ಪ್ರಾಚ್ಯ ಅರಸರು ತಮ್ಮ ಮೃಗಾಲಯಗಳಲ್ಲಿ ಕಾಡುಮೃಗಗಳನ್ನು ಇಟ್ಟುಕೊಂಡಿದ್ದರು ಎಂದು ತೋರಿಸುವ ಪುರಾತನ ಶಿಲಾಶಾಸನಗಳ ಪುರಾವೆಗಳಿಂದ ಬೆಂಬಲಿಸಲ್ಪಟ್ಟಿದೆ.
-