ಅಧ್ಯಯನ ಲೇಖನ 29
ನಮ್ಮ ಮೇಲ್ವಿಚಾರಕನಾಗಿರೋ ಯೇಸುವನ್ನ ಬೆಂಬಲಿಸಿ
“ಸ್ವರ್ಗದಲ್ಲೂ ಭೂಮಿಯಲ್ಲೂ ದೇವರು ನನಗೆ ಎಲ್ಲ ಅಧಿಕಾರ ಕೊಟ್ಟಿದ್ದಾನೆ.”—ಮತ್ತಾ. 28:18.
ಗೀತೆ 5 ನಮಗೆ ಆದರ್ಶಪ್ರಾಯನಾದ ಕ್ರಿಸ್ತನು
ಕಿರುನೋಟa
1. ಯೆಹೋವನ ಆಸೆ ಏನು?
ಇವತ್ತು ಎಲ್ಲರಿಗೂ ಸಿಹಿಸುದ್ದಿ ತಲುಪಬೇಕು ಅನ್ನೋದೇ ದೇವರ ಆಸೆ. (ಮಾರ್ಕ 13:10; 1 ತಿಮೊ. 2:3, 4) ಯೆಹೋವನಿಗೆ ಈ ಕೆಲಸ ಎಷ್ಟು ಮುಖ್ಯ ಅಂದ್ರೆ ಇದರ ಮೇಲ್ವಿಚಾರಣೆಯನ್ನ ತನ್ನ ಪ್ರೀತಿಯ ಮಗನಾದ ಯೇಸು ಕೈಗೆ ವಹಿಸಿಕೊಟ್ಟಿದ್ದಾನೆ. ಅಂತ್ಯ ಬರುವಷ್ಟರಲ್ಲಿ ಈ ಸಾರೋ ಕೆಲಸವನ್ನ ನಾವು ಮಾಡಿ ಮುಗಿಸಬೇಕು ಅಂತ ಯೆಹೋವ ಬಯಸ್ತಾನೆ. ಅದು ಸಮಯಕ್ಕೆ ಸರಿಯಾಗಿ ಮುಗಿಯೋ ತರ ಯೇಸು ನೋಡಿಕೊಳ್ತಾನೆ ಅಂತ ನಾವು ಕಣ್ಮುಚ್ಚಿ ನಂಬಬಹುದು.—ಮತ್ತಾ. 24:14.
2. ಈ ಲೇಖನದಲ್ಲಿ ನಾವೇನು ಕಲಿತೀವಿ?
2 ದೇವರ ವಾಕ್ಯದಿಂದ ನಮಗೆ ಬೇಕಾಗಿರೋ ನಿರ್ದೇಶನಗಳನ್ನ ಕೊಡೋಕೆ ಮತ್ತು ಇಡೀ ಲೋಕದಲ್ಲಿ ನಡೀತಿರೋ ಸಾರುವ ಕೆಲಸನ ನೋಡಿಕೊಳ್ಳೋಕೆ ಯೇಸು ‘ನಂಬಿಗಸ್ತ, ವಿವೇಕಿ ಆದ ಆಳನ್ನ’ ಹೇಗೆ ಉಪಯೋಗಿಸ್ತಿದ್ದಾನೆ? (ಮತ್ತಾ. 24:45) ನಾವೆಲ್ಲರೂ ಯೇಸು ಮತ್ತು ನಂಬಿಗಸ್ತ ಆಳಿಗೆ ಹೇಗೆ ಸಹಕಾರ ಕೊಡಬಹುದು? ಅದನ್ನ ಈ ಲೇಖನದಲ್ಲಿ ನೋಡೋಣ.
ಯೇಸು ಸಾರೋ ಕೆಲಸನ ಮುಂದೆ ನಿಂತು ನಡಿಸುತ್ತಿದ್ದಾನೆ
3. ಯೇಸುಗೆ ಯಾವ ಅಧಿಕಾರ ಇದೆ?
3 ಯೇಸು ಸಾರೋ ಕೆಲಸನ ಮುಂದೆ ನಿಂತು ನಡಿಸುತ್ತಿದ್ದಾನೆ ಅಂತ ನಾವು ಹೇಗೆ ಹೇಳಬಹುದು? ಯೇಸು ಸ್ವರ್ಗಕ್ಕೆ ಹೋಗೋ ಮುಂಚೆ ಗಲಿಲಾಯ ಬೆಟ್ಟದಲ್ಲಿ ತನ್ನ ಶಿಷ್ಯರಿಗೆ “ಸ್ವರ್ಗದಲ್ಲೂ ಭೂಮಿಯಲ್ಲೂ ದೇವರು ನನಗೆ ಎಲ್ಲ ಅಧಿಕಾರ ಕೊಟ್ಟಿದ್ದಾನೆ. ಹಾಗಾಗಿ ನೀವು ಹೋಗಿ ಎಲ್ಲಾ ದೇಶದ ಜನ್ರಿಗೆ ನನ್ನ ಶಿಷ್ಯರಾಗೋದು ಹೇಗೆ ಅಂತ ಕಲಿಸಿ” ಅನ್ನೋ ಆಜ್ಞೆ ಕೊಟ್ಟನು. (ಮತ್ತಾ. 28:18, 19) ಸಿಹಿಸುದ್ದಿ ಸಾರೋ ಕೆಲಸನ ನೋಡಿಕೊಳ್ಳೋ ಅಧಿಕಾರವನ್ನೂ ಯೆಹೋವ ದೇವರು ಯೇಸುಗೆ ಕೊಟ್ಟಿದ್ದಾನೆ ಅಂತ ಇದ್ರಿಂದ ಗೊತ್ತಾಗುತ್ತೆ.
4. ಈಗಲೂ ಸಾರೋ ಕೆಲಸನ ಯೇಸುನೇ ಮುಂದೆ ನಿಂತು ನಡೆಸ್ತಿದ್ದಾನೆ ಅಂತ ನಾವು ಹೇಗೆ ಹೇಳಬಹುದು?
4 ಯೇಸು ತನ್ನ ಶಿಷ್ಯರಿಗೆ “ಎಲ್ಲಾ ದೇಶದ ಜನ್ರಿಗೆ” ಸಿಹಿಸುದ್ದಿ ಸಾರಿ, ಶಿಷ್ಯರನ್ನಾಗಿ ಮಾಡಿ ಅಂತ ಹೇಳಿದನು. ಅಷ್ಟೇ ಅಲ್ಲ, “ಈ ಲೋಕದ ಅಂತ್ಯ ಬರೋ ತನಕ ನಾನು ನಿಮ್ಮ ಜೊತೆ ಇರ್ತಿನಿ” ಅಂತನೂ ಮಾತು ಕೊಟ್ಟನು. (ಮತ್ತಾ. 28:20) ಇದ್ರಿಂದ ನಮಗೇನು ಗೊತ್ತಾಗುತ್ತೆ? ಈಗ ನಡೀತಿರೋ ಸಾರುವ ಕೆಲಸನೂ ಯೇಸುನೇ ಮುಂದೆ ನಿಂತು ನಡೆಸುತ್ತಿದ್ದಾನೆ ಅಂತ ಆತನ ಮಾತುಗಳಿಂದ ಅರ್ಥ ಆಗುತ್ತೆ.
5. ಕೀರ್ತನೆ 110:3ರಲ್ಲಿರೋ ಭವಿಷ್ಯವಾಣಿ ನೆರವೇರೋಕೆ ನಾವು ಹೇಗೆ ಸಹಾಯ ಮಾಡ್ತಾ ಇದ್ದೀವಿ?
5 ಅಂತ್ಯ ಕಾಲದಲ್ಲಿ ಸಿಹಿಸುದ್ದಿ ಸಾರೋಕೆ ಬೇಕಾದಷ್ಟು ಜನ ಇರ್ತಾರೋ ಇಲ್ವೋ ಅಂತ ಯೇಸು ಚಿಂತೆ ಮಾಡಲಿಲ್ಲ. ಯಾಕಂದ್ರೆ “ಯಾವ ದಿನ ನೀನು ನಿನ್ನ ಸೈನ್ಯವನ್ನ ಕರ್ಕೊಂಡು ಯುದ್ಧಕ್ಕೆ ಬರ್ತಿಯೋ, ಆ ದಿನ ನಿನ್ನ ಜನ್ರು ಮನಸಾರೆ ತಮ್ಮನ್ನೇ ಕೊಟ್ಕೊಳ್ತಾರೆ” ಅಂತ ಕೀರ್ತನೆಗಾರ ಹೇಳಿದ ಭವಿಷ್ಯವಾಣಿ ನಡೆದೇ ನಡೆಯುತ್ತೆ ಅನ್ನೋ ನಂಬಿಕೆ ಯೇಸುಗಿತ್ತು. (ಕೀರ್ತ. 110:3) ನಾವು ಸಿಹಿಸುದ್ದಿ ಸಾರುವಾಗ ಈ ಭವಿಷ್ಯವಾಣಿನ ನೆರವೇರಿಸ್ತೀವಿ. ಅಷ್ಟೇ ಅಲ್ಲ, ಯೇಸು ಮತ್ತು ನಂಬಿಗಸ್ತ ಆಳಿಗೆ ಸಹಾಯ ಮಾಡ್ತೀವಿ. ಆದ್ರೆ ಈ ಕೆಲಸನ ಮಾಡೋದು ಅಷ್ಟು ಸುಲಭ ಅಲ್ಲ. ಯಾಕೆ ಅಂತ ಈಗ ನೋಡೋಣ.
6. ಈಗ ನಮಗಿರೋ ಒಂದು ಸಮಸ್ಯೆ ಏನು?
6 ನಮಗೆ ಬರೋ ಒಂದು ಸಮಸ್ಯೆ ವಿರೋಧ. ಧರ್ಮಭ್ರಷ್ಟರು, ರಾಜಕೀಯ ನಾಯಕರು ಮತ್ತು ಧರ್ಮಗುರುಗಳು ನಮ್ಮ ಬಗ್ಗೆ ಇಲ್ಲಸಲ್ಲದ ಸುಳ್ಳನ್ನ ಹಬ್ಬಿಸಿದ್ದಾರೆ. ಇದನ್ನ ನಂಬಿ ನಮ್ಮ ಕುಟುಂಬದವರು, ನಮ್ಮ ಪರಿಚಯದವರು ಮತ್ತು ನಮ್ಮ ಜೊತೆ ಕೆಲಸ ಮಾಡೋರು ನಾವು ಯೆಹೋವನನ್ನು ಆರಾಧಿಸಬಾರದು, ಸಿಹಿಸುದ್ದಿ ಸಾರಬಾರದು ಅಂತ ನಮ್ಮ ಮೇಲೆ ಒತ್ತಡ ಹಾಕ್ತಾರೆ. ಕೆಲವು ದೇಶಗಳಲ್ಲಿ ಸಿಹಿಸುದ್ದಿ ಸಾರಿದ್ದಕ್ಕೆ ಕೆಲವರನ್ನ ಹೆದರಿಸಿದ್ದಾರೆ, ಹೊಡೆದಿದ್ದಾರೆ ಮತ್ತು ಜೈಲಿಗೆ ಹಾಕಿದ್ದಾರೆ. ಯಾಕಂದ್ರೆ ಇದರ ಹಿಂದೆ ಸೈತಾನನ ಕೈವಾಡ ಇದೆ. ಹಾಗಾಗಿ ಈ ತರ ವಿರೋಧ ಬಂದಾಗ ನಮಗೆ ಆಶ್ಚರ್ಯ ಆಗಲ್ಲ. ಯೇಸು ಕೂಡ “ನೀವು ನನ್ನ ಶಿಷ್ಯರಾಗಿರೋ ಕಾರಣ ಎಲ್ಲ ದೇಶದವರು ನಿಮ್ಮನ್ನ ದ್ವೇಷಿಸ್ತಾರೆ” ಅಂತ ಮುಂಚೆನೇ ಹೇಳಿದ್ದನು. (ಮತ್ತಾ. 24:9) ಯೆಹೋವ ದೇವರಿಗೆ ಇಷ್ಟ ಆಗೋ ತರ ನಾವು ನಡೆದುಕೊಳ್ತಿರೋದ್ರಿಂದಾನೇ ನಮಗೆ ವಿರೋಧಗಳು ಬರ್ತಿದೆ. (ಮತ್ತಾ. 5:11, 12) ಆದ್ರೆ ಸೈತಾನನಿಗೆ ಯೇಸುವಿನಷ್ಟು ಶಕ್ತಿ ಇಲ್ಲ. ಅದಕ್ಕೇ ಎಲ್ಲಾ ದೇಶಗಳಲ್ಲಿ ಸಿಹಿಸುದ್ದಿನ ಇಷ್ಟು ಚೆನ್ನಾಗಿ ಸಾರೋಕೆ ಆಗ್ತಾ ಇದೆ. ಇದಕ್ಕೆ ಕೆಲವು ಆಧಾರಗಳನ್ನ ಈಗ ನೋಡೋಣ.
7. ಪ್ರಕಟನೆ 14:6,7ರಲ್ಲಿರೋ ಮಾತು ಹೇಗೆ ನೆರವೇರುತ್ತಿದೆ?
7 ಜನರು ಬೇರೆಬೇರೆ ಭಾಷೆ ಮಾತಾಡ್ತಾರೆ. ಇದು ಸಿಹಿಸುದ್ದಿ ಸಾರೋಕೆ ಇರೋ ಇನ್ನೊಂದು ಸಮಸ್ಯೆ. ಆದ್ರೆ ಈ ಸಮಸ್ಯೆಯಿಂದ ನಮ್ಮ ಕೆಲಸ ನಿಂತುಹೋಗಲ್ಲ ಅಂತ ಯೇಸು, ಅಪೊಸ್ತಲ ಯೋಹಾನನಿಗೆ ಹೇಳಿದ್ದನು. (ಪ್ರಕಟನೆ 14:6, 7 ಓದಿ.) ಅದು ಇವತ್ತು ನಿಜ ಆಗ್ತಿದೆ. ಲೋಕದ ಮೂಲೆ ಮೂಲೆಯಲ್ಲಿರೋ ಜನರಿಗೆ ಸಿಹಿಸುದ್ದಿ ಸಾರೋಕೆ ನಮ್ಮಿಂದಾದ ಎಲ್ಲಾ ಪ್ರಯತ್ನಗಳನ್ನ ನಾವು ಮಾಡ್ತಾ ಇದ್ದೀವಿ. ಉದಾಹರಣೆಗೆ, jw.org ವೆಬ್‌ಸೈಟ್‌ನಲ್ಲಿ ಬೈಬಲ್ ಆಧಾರಿತ ಪ್ರಕಾಶನಗಳು ಸಾವಿರಕ್ಕಿಂತ ಹೆಚ್ಚು ಭಾಷೆಗಳಲ್ಲಿದೆ. ಅಷ್ಟೇ ಅಲ್ಲ, ಬೈಬಲ್ ಸ್ಟಡಿ ಮಾಡೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕವನ್ನ 700ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಭಾಷಾಂತರಿಸೋಕೆ ಆಡಳಿತ ಮಂಡಲಿ ಒಪ್ಪಿಗೆ ಕೊಟ್ಟಿದೆ. ವಿಶೇಷ ಚೇತನರಿಗೆ ಅಂದ್ರೆ ಕಿವಿ ಕೇಳದವರಿಗೆ ವಿಡಿಯೋಗಳ ಮೂಲಕ ಮತ್ತು ಅಂಧರಿಗೆ ಬ್ರೇಲ್ ಲಿಪಿಗಳ ಮೂಲಕ ಬೈಬಲ್ ಪ್ರಕಾಶನಗಳು ಸಿಗುತ್ತಾ ಇದೆ. “ಎಲ್ಲ ಭಾಷೆಗಳಿಂದ ಎಲ್ಲ ದೇಶಗಳಿಂದ ಬಂದಂಥ” ಜನ ಬೈಬಲ್ ಸತ್ಯದ ‘ಶುದ್ಧ ಭಾಷೆಯನ್ನ’ ಕಲಿತಾರೆ ಅಂತ ಹೇಳಿದ ಭವಿಷ್ಯವಾಣಿ ಈಗ ನೆರವೇರುತ್ತಾ ಇದೆ. (ಜೆಕ. 8:23; ಚೆಫ. 3:9) ಸಿಹಿಸುದ್ದಿ ಸಾರೋ ಕೆಲಸನ ಯೇಸು ಮುಂದೆ ನಿಂತು ನಡಿಸ್ತಾ ಇರೋದ್ರಿಂದಾನೇ ಇದನ್ನೆಲ್ಲ ಸಾಧಿಸೋಕೆ ಆಗ್ತಿದೆ.
8. ಸಿಹಿಸುದ್ದಿ ಸಾರೋ ಕೆಲಸದಿಂದ ಏನೆಲ್ಲಾ ಆಗಿದೆ?
8 ಇವತ್ತು 240 ದೇಶಗಳಲ್ಲಿ 80 ಲಕ್ಷಕ್ಕಿಂತ ಹೆಚ್ಚು ಯೆಹೋವನ ಸಾಕ್ಷಿಗಳಿದ್ದಾರೆ. ಅಷ್ಟೇ ಅಲ್ಲ, ಪ್ರತಿವರ್ಷ ಸಾವಿರಾರು ಜನ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ. ಆದ್ರೆ ಅದಕ್ಕಿಂತ ಮುಖ್ಯವಾಗಿ ಇವರೆಲ್ಲರೂ ‘ಹೊಸ ವ್ಯಕ್ತಿತ್ವವನ್ನ’ ಹಾಕೊಳ್ತಿದ್ದಾರೆ ಅಂದ್ರೆ ಕ್ರೈಸ್ತ ಗುಣಗಳನ್ನ ಬೆಳೆಸಿಕೊಳ್ತಾ ಇದ್ದಾರೆ. (ಕೊಲೊ. 3:8-10) ಇವರಲ್ಲಿ ಎಷ್ಟೋ ಜನ ಅನೈತಿಕ ಜೀವನ ನಡೆಸುತ್ತಿದ್ರು, ಕ್ರೂರಿಗಳಾಗಿದ್ರು, ಬೇಧಭಾವ ಮಾಡುತ್ತಿದ್ದರು, ದೇಶಾಭಿಮಾನ ತೋರಿಸುತ್ತಿದ್ರು. ಆದ್ರೆ ಈಗ ಇವರೆಲ್ಲಾ ಬದಲಾಗಿದ್ದಾರೆ. “ಇನ್ನು ಯಾವತ್ತೂ ಅವರು ಯುದ್ಧ ಮಾಡೋಕೆ ಕಲಿಯಲ್ಲ” ಅನ್ನೋ ಯೆಶಾಯ 2:4ರಲ್ಲಿ ಹೇಳಿರೋ ಮಾತು ಇವತ್ತು ನೆರವೇರುತ್ತಿದೆ. ಯೇಸುವಿನ ಸಹಾಯ ಇಲ್ಲದೇ ಇಷ್ಟೆಲ್ಲಾ ಆಗ್ತಿರಲಿಲ್ಲ. ಹೊಸ ವ್ಯಕ್ತಿತ್ವನ ಹಾಕೊಳ್ಳೋಕೆ ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡುವಾಗ ಒಳ್ಳೇ ಜನರು ಯೆಹೋವನ ಹತ್ರ ಬರೋಕೆ ನಾವು ಸಹಾಯ ಮಾಡ್ತೀವಿ. ಹೀಗೆ ಯೇಸು ಕ್ರಿಸ್ತ ಹೇಳಿಕೊಟ್ಟ ತರಾನೇ ನಾವು ನಡಕೊಳ್ತೀವಿ.—ಯೋಹಾ. 13:35; 1 ಪೇತ್ರ 2:12.
ಯೇಸು ಆಳನ್ನ ನೇಮಿಸಿದ್ದಾನೆ
9. ಮತ್ತಾಯ 24:45-47ರಲ್ಲಿ ಯೇಸು ಕೊನೇ ದಿನಗಳಲ್ಲಿ ಏನು ಮಾಡ್ತೀನಿ ಅಂತ ಹೇಳಿದನು?
9 ಮತ್ತಾಯ 24:45-47 ಓದಿ. ಕೊನೇ ದಿನಗಳಲ್ಲಿ ಆಧ್ಯಾತ್ಮಿಕ ಆಹಾರ ಕೊಡೋಕೆ ‘ನಂಬಿಗಸ್ತ, ವಿವೇಕಿ ಆದ ಆಳನ್ನ’ ನೇಮಿಸ್ತೀನಿ ಅಂತ ಯೇಸು ಮುಂಚೆನೇ ಹೇಳಿದ್ದ. ಈ ಆಳು ಅಭಿಷಿಕ್ತ ಕ್ರೈಸ್ತರ ಒಂದು ಚಿಕ್ಕ ಗುಂಪಾಗಿದೆ. ಯೇಸು ಹೇಳಿದ ಹಾಗೆ ಅವರು ಹಗಲೂ-ರಾತ್ರಿ ದುಡಿತಾ ತಮ್ಮ ಕೆಲಸವನ್ನ ಚೆನ್ನಾಗಿ ಮಾಡ್ತಿದ್ದಾರೆ. ಹೀಗೆ ಯೇಸು ನಮಗೆ ಮತ್ತು ಒಳ್ಳೇ ಮನಸ್ಸಿರೋ ಜನರಿಗೆ ‘ತಕ್ಕ ಸಮಯಕ್ಕೆ ಆಧ್ಯಾತ್ಮಿಕ ಆಹಾರ’ ಸಿಗೋ ಹಾಗೆ ನೋಡಿಕೊಳ್ತಿದ್ದಾನೆ. ಇವರು ಬೇರೆಯವರ ನಂಬಿಕೆಗೆ ನಾವು ಒಡೆಯರು ಅಂತ ಹೇಳಿಕೊಳ್ಳಲ್ಲ (2 ಕೊರಿಂ. 1:24) ಬದಲಿಗೆ ಯೇಸು ತಮ್ಮ ‘ನಾಯಕ ಮತ್ತು ಸೇನಾಪತಿ’ ಅಂತ ಅರ್ಥಮಾಡಿಕೊಂಡಿದ್ದಾರೆ.—ಯೆಶಾ. 55:4.
10. ನೀವು ಜೀವದ ದಾರಿಲಿ ನಡಿಯೋಕೆ ನಿಮಗೆ ಯಾವ ಪುಸ್ತಕ ಸಹಾಯ ಮಾಡಿತು?
10 ದೇವರ ಬಗ್ಗೆ ಕಲಿಯೋ ಆಸಕ್ತಿ ಇರೋ ಜನರಿಗೆ ಸಹಾಯ ಮಾಡೋಕೆ ನಂಬಿಗಸ್ತ, ವಿವೇಕಿಯಾದ ಆಳು 1919ರಿಂದ ಇಲ್ಲಿ ತನಕ ಬೇರೆಬೇರೆ ಪುಸ್ತಕಗಳನ್ನ ಬಿಡುಗಡೆ ಮಾಡಿದೆ. 1921ರಲ್ಲಿ ದ ಹಾರ್ಪ್ ಆಫ್ ಗಾಡ್ ಅನ್ನೋ ಪುಸ್ತಕ ಬಿಡುಗಡೆ ಆಯ್ತು. ವರ್ಷಗಳು ಕಳೆದ ಹಾಗೆ ಇನ್ನೂ ಕೆಲವು ಪುಸ್ತಕಗಳು ಬಿಡುಗಡೆ ಆದವು. ಉದಾಹರಣೆಗೆ, “ದೇವರು ಸತ್ಯವಂತನೇ ಸರಿ”, ನಿತ್ಯಜೀವಕ್ಕೆ ನಡೆಸುವ ಸತ್ಯವು, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ, ನಿತ್ಯಜೀವಕ್ಕೆ ನಡೆಸುವ ಜ್ಞಾನ, ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಬೈಬಲ್ ನಮಗೆ ಏನು ಕಲಿಸುತ್ತದೆ? ಮತ್ತು ಇತ್ತೀಚೆಗೆ ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಪುಸ್ತಕ ಬಿಡುಗಡೆ ಆಯ್ತು. ನೀವು ಯಾವ ಪುಸ್ತಕದಿಂದ ಯೆಹೋವನ ಬಗ್ಗೆ ಕಲಿತ್ರಿ? ಜನರನ್ನ ಶಿಷ್ಯರಾಗಿ ಮಾಡೋಕೆ ಈ ಪುಸ್ತಕಗಳು ಸಮಯಕ್ಕೆ ಸರಿಯಾಗಿ ಸಿಕ್ಕಿದವು ಅಲ್ವಾ!
11. ಆಧ್ಯಾತ್ಮಿಕ ಆಹಾರ ನಮಗೆ ಯಾಕೆ ಬೇಕು?
11 ಯೆಹೋವನ ಬಗ್ಗೆ, ಬೈಬಲ್ ಬಗ್ಗೆ ಹೊಸಬರು ಮಾತ್ರ ಅಲ್ಲ, ನಾವೂ ಜಾಸ್ತಿ ತಿಳ್ಕೊಬೇಕು. ಯಾಕಂದ್ರೆ “ಗಟ್ಟಿ ಆಹಾರ ಪ್ರೌಢರಿಗೆ” ಅಂತ ಅಪೊಸ್ತಲ ಪೌಲ ಬರೆದ. ಇದ್ರಿಂದ “ಸರಿ ಯಾವುದು, ತಪ್ಪು ಯಾವುದು ಅನ್ನೋ ವ್ಯತ್ಯಾಸ ತಿಳ್ಕೊಳ್ಳೋಕೆ” ನಮಗೆ ಸಹಾಯ ಆಗುತ್ತೆ. (ಇಬ್ರಿ. 5:14) ಈ ರೀತಿಯ ಆಧ್ಯಾತ್ಮಿಕ ಆಹಾರ ವಿಶೇಷವಾಗಿ ಈಗ ನಮಗೆ ಬೇಕು ಯಾಕಂದ್ರೆ ಲೋಕದಲ್ಲಿ ನೈತಿಕ ಮಟ್ಟಗಳು ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಗುತ್ತಿದೆ. ಆದ್ದರಿಂದ ಯೆಹೋವನಿಗೆ ಇಷ್ಟ ಆಗೋ ತರ ನಡಕೊಳ್ಳಬೇಕಂದ್ರೆ ನಾವು ಆ ಆಹಾರನ ಪಡಕೊಳ್ಳಬೇಕು. ನಮ್ಮ ನಂಬಿಕೆನ ಬಲವಾಗಿಟ್ಟುಕೊಳ್ಳೋಕೆ ಬೇಕಾದ ವಿಷಯಗಳು ನಮಗೆ ಸಿಗುತ್ತಿದೆಯಾ ಅಂತ ಯೇಸು ನೋಡಿಕೊಳ್ತಿದ್ದಾನೆ. ಇವೆಲ್ಲಾ ಬೈಬಲ್‌ನಿಂದ ನಮಗೆ ಸಿಗ್ತಿದೆ. ಯೇಸು ಕೊಡೋ ನಿರ್ದೇಶನದ ಪ್ರಕಾರ ನಂಬಿಗಸ್ತ, ವಿವೇಕಿಯಾದ ಆಳು ಈ ಆಧ್ಯಾತ್ಮಿಕ ವಿಷಯಗಳನ್ನ ತಯಾರಿಸಿ ನಮಗೆ ಕೊಡುತ್ತಿದ್ದಾರೆ.
12. ಯೇಸುವಿನ ಹಾಗೆ ನಾವು ಹೇಗೆ ದೇವರ ಹೆಸರನ್ನ ಗೌರವಿಸುತ್ತಿದ್ದೀವಿ?
12 ಯೇಸು ಹೇಗೆ ಯೆಹೋವನ ಹೆಸರಿಗೆ ಗೌರವ ಕೊಟ್ಟನೋ ನಾವು ಅದೇ ತರ ಗೌರವ ಕೊಡ್ತೀವಿ. (ಯೋಹಾ. 17:6, 26) ಉದಾಹರಣೆಗೆ, 1931ರಲ್ಲಿ ನಾವು ಯೆಹೋವನ ಸಾಕ್ಷಿಗಳು ಅಂತ ಹೆಸರಿಟ್ಟುಕೊಂಡ್ವಿ. ಇದ್ರಿಂದ ಯೆಹೋವ ದೇವರ ಹೆಸರು ನಮಗೆಷ್ಟು ಮುಖ್ಯ ಅಂತ ತೋರಿಸಿಕೊಟ್ವಿ. (ಯೆಶಾ. 43:10-12) ಆ ವರ್ಷದ ಅಕ್ಟೋಬರ್ ತಿಂಗಳಿಂದ ಪ್ರತಿ ಕಾವಲಿನಬುರುಜು ಪತ್ರಿಕೆಗಳ ಮುಖಪುಟದಲ್ಲಿ ಯೆಹೋವನ ಹೆಸರನ್ನ ಹಾಕ್ತಿದ್ದೀವಿ. ಅಷ್ಟೇ ಅಲ್ಲ, ಚರ್ಚಿನವರು ತಮ್ಮ ಬೈಬಲ್ ಭಾಷಾಂತರಗಳಲ್ಲಿ ದೇವರ ಹೆಸರನ್ನ ತೆಗೆದುಹಾಕಿದ್ದಾರೆ. ಆದ್ರೆ ನಾವು ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರದಲ್ಲಿ ಎಲ್ಲೆಲ್ಲಿ ದೇವರ ಹೆಸರು ಇರಬೇಕೋ ಅಲ್ಲೆಲ್ಲಾ ದೇವರ ಹೆಸರನ್ನ ಹಾಕಿದ್ದೀವಿ.
ಯೇಸು ತನ್ನ ಹಿಂಬಾಲಕರನ್ನ ವ್ಯವಸ್ಥಿತವಾಗಿ ನಡೆಸುತ್ತಿದ್ದಾನೆ
13. ‘ನಂಬಿಗಸ್ತ, ವಿವೇಕಿ ಆದ ಆಳನ್ನ’ ಯೇಸುನೇ ನಡೆಸ್ತಿದ್ದಾನೆ ಅಂತ ನಾವು ಹೇಗೆ ಹೇಳಬಹುದು? (ಯೋಹಾನ 6:68)
13 ಶುದ್ಧ ಆರಾಧನೆಯನ್ನ ಸ್ಥಾಪನೆ ಮಾಡೋಕೆ ಯೇಸು ಒಂದು ಸಂಘಟನೆಯನ್ನ ಮಾಡಿ ಅದ್ರಲ್ಲಿ ‘ನಂಬಿಗಸ್ತ, ವಿವೇಕಿ ಆದ ಆಳನ್ನ’ ನೇಮಿಸಿದ್ದಾನೆ. ಈ ಸಂಘಟನೆ ಬಗ್ಗೆ ಯೋಚನೆ ಮಾಡಿದಾಗ ಪೇತ್ರನ ಮಾತುಗಳು ನಿಮಗೆ ನೆನಪಾಗಬಹುದು. ಅವನು ಯೇಸು ಹತ್ರ “ಸ್ವಾಮಿ, ನಿನ್ನನ್ನ ಬಿಟ್ರೆ ನಮಗೆ ಯಾರಿದ್ದಾರೆ? ಶಾಶ್ವತ ಜೀವ ಕೊಡೋ ಮಾತು ನಿನ್ನ ಹತ್ರ ಇದೆ” ಅಂತ ಹೇಳಿದ. (ಯೋಹಾ. 6:68) ಯೆಹೋವನ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ಯೇಸು ನಮಗೆ ಬೇಕಾಗಿರೋದಕ್ಕಿಂತ ಹೆಚ್ಚನ್ನೇ ಸಂಘಟನೆಯಿಂದ ಕೊಡುತ್ತಿದ್ದಾನೆ. ಚೆನ್ನಾಗಿ ಸಿಹಿಸುದ್ದಿ ಸಾರೋಕೆ ನಮಗೆ ತರಬೇತಿ ಕೊಡ್ತಿದ್ದಾನೆ. ಅಷ್ಟೇ ಅಲ್ಲ, ಯೆಹೋವನಿಗೆ ಇಷ್ಟ ಆಗೋ “ಹೊಸ ವ್ಯಕ್ತಿತ್ವವನ್ನ” ಹಾಕಿಕೊಳ್ಳೋಕೂ ಸಹಾಯ ಮಾಡ್ತಿದ್ದಾನೆ. ಒಂದುವೇಳೆ ನಾವು ಈ ಸಂಘಟನೆಯಲ್ಲಿ ಇರಲಿಲ್ಲ ಅಂದ್ರೆ ನಮ್ಮ ಪರಿಸ್ಥಿತಿ ಹೇಗಿರುತ್ತಿತ್ತೋ ಏನೋ!—ಎಫೆ. 4:24.
14. ಯೆಹೋವನ ಸಂಘಟನೆಯಲ್ಲಿ ಇರೋದ್ರಿಂದ ಕೊರೋನ ಸಮಯದಲ್ಲಿ ನಿಮಗೆ ಹೇಗೆಲ್ಲಾ ಸಹಾಯ ಆಗಿದೆ?
14 ಕಷ್ಟದ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು ಅಂತ ಯೇಸು ಹೇಳಿಕೊಡ್ತಿದ್ದಾನೆ. ಉದಾಹರಣೆಗೆ, ಕೊರೋನ ಕಾಯಿಲೆ ಬಂದಾಗ ಲೋಕದ ಜನರಿಗೆ ಏನು ಮಾಡಬೇಕು ಅಂತಾನೇ ಗೊತ್ತಿರಲಿಲ್ಲ. ಆದ್ರೆ ನಾವು ಸುರಕ್ಷಿತವಾಗಿರೋಕೆ ಏನು ಮಾಡಬೇಕು ಅಂತ ಯೇಸು ನಮಗೆ ಕಲಿಸಿದನು. ನಾವು ಹೊರಗೆ ಹೋಗುವಾಗ ಮಾಸ್ಕ್ ಹಾಕಿಕೊಳ್ಳಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಅನ್ನೋ ಕೆಲವು ನಿರ್ದಿಷ್ಟ ಸಲಹೆಗಳನ್ನ ಸಂಘಟನೆಯಿಂದ ಕೊಟ್ಟನು. ಅಷ್ಟೇ ಅಲ್ಲ, ಸಭೆಯಲ್ಲಿರೋ ಹಿರಿಯರು ಆಗಾಗ ಸಹೋದರ ಸಹೋದರಿಯರ ಯೋಗಕ್ಷೇಮ ವಿಚಾರಿಸಬೇಕು, ಅವರು ಸುರಕ್ಷಿತವಾಗಿರೋಕೆ, ಆರೋಗ್ಯವಾಗಿರೋಕೆ ಮತ್ತು ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ಳೋಕೆ ಬೇಕಾಗಿರೋ ಏರ್ಪಾಡು ಮಾಡಬೇಕು ಅಂತ ಸಂಘಟನೆ ಹಿರಿಯರಿಗೆ ಹೇಳಿತು. (ಯೆಶಾ. 32:1, 2) ಇದೆಲ್ಲದರ ಜೊತೆಗೆ ಆಡಳಿತ ಮಂಡಲಿಯಿಂದ ಬಂದ ಅಪ್ಡೇಟ್ ಮೂಲಕ ಕೂಡ ಬೇಕಾಗಿರೋ ಉತ್ತೇಜನ ಹಾಗೂ ಮಾರ್ಗದರ್ಶನ ಸಿಕ್ತು.
15. ಕೊರೋನ ಶುರುವಾದಾಗ ಕೂಟಗಳನ್ನ ನಡೆಸೋಕೆ, ಸಿಹಿಸುದ್ದಿ ಸಾರೋಕೆ ಯಾವ ನಿರ್ದೇಶನ ಸಿಕ್ತು ಮತ್ತು ಇದ್ರಿಂದ ಏನಾಯ್ತು?
15 ಕೊರೋನ ಬಂದಾಗ ನಾವು ಕೂಟಗಳಿಗೆ ಹೇಗೆ ಹಾಜರಾಗಬೇಕು ಮತ್ತು ಸಿಹಿಸುದ್ದಿ ಹೇಗೆ ಸಾರಬೇಕು ಅಂತ ಸ್ಪಷ್ಟವಾದ ನಿರ್ದೇಶನ ಸಿಕ್ತು. ಅದನ್ನ ನಾವು ತಕ್ಷಣ ಪಾಲಿಸಿದ್ವಿ. ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಡೆಸೋಕೆ ಹೇಳಿದ್ರು. ಪತ್ರಗಳನ್ನ ಬರೀತಾ, ಟೆಲಿಫೋನ್ ಸಾಕ್ಷಿಕಾರ್ಯ ಮಾಡ್ತಾ ನಾವು ಸಿಹಿಸುದ್ದಿ ಸಾರೋಕೆ ಶುರುಮಾಡಿದ್ವಿ. ಯೆಹೋವ ನಮ್ಮ ಪ್ರಯತ್ನನ ಆಶೀರ್ವದಿಸ್ತಾ ಇದ್ದಾನೆ. ಈಗ ತುಂಬ ಜನ ಸತ್ಯಕ್ಕೆ ಬರ್ತಿದ್ದಾರೆ, ಪ್ರಚಾರಕರ ಸಂಖ್ಯೆ ಜಾಸ್ತಿ ಆಗ್ತಿದೆ ಅಂತ ತುಂಬ ಬ್ರಾಂಚ್‌ಗಳು ವರದಿ ಮಾಡಿವೆ. ಎಷ್ಟೋ ಸಹೋದರ ಸಹೋದರಿಯರು ಈ ರೀತಿ ಸಿಹಿಸುದ್ದಿ ಸಾರುತ್ತಾ ತುಂಬ ಸಂತೋಷ ಪಡೆದುಕೊಂಡಿದ್ದಾರೆ.—“ಸಾರೋ ಕೆಲಸವನ್ನ ಯೆಹೋವ ಆಶೀರ್ವದಿಸ್ತಾನೆ” ಅನ್ನೋ ಚೌಕ ನೋಡಿ.
16. ನಾವು ಯಾಕೆ ಧೈರ್ಯದಿಂದ ಇರಬಹುದು?
16 ಕೊರೋನ ಬಂದಾಗ ನಮ್ಮ ಸಂಘಟನೆ ಅನಾವಶ್ಯಕವಾಗಿ ಚಿಂತೆಮಾಡ್ತಿದೆ, ಭಯಪಡ್ತಿದೆ ಅಂತ ಕೆಲವರಿಗೆ ಅನಿಸಿರಬಹುದು. ಆದ್ರೆ ಸಂಘಟನೆ ಕೊಟ್ಟಿರೋ ಸಲಹೆಯನ್ನ ಪಾಲಿಸಿದ್ರಿಂದಾನೇ ನಾವು ಇಲ್ಲಿ ತನಕ ಸುರಕ್ಷಿತವಾಗಿದ್ದೀವಿ. (ಮತ್ತಾ. 11:19) ಹಾಗಾಗಿ ಅವರು ಹೇಳ್ತಿರೋದೆಲ್ಲಾ ನಮ್ಮ ಒಳ್ಳೇದಕ್ಕೆ ಅಂತ ನಮಗೆ ಅರ್ಥ ಆಗಿದೆ. ಇಲ್ಲಿ ತನಕ ಯೇಸು ತನ್ನ ಜನರನ್ನ ಹೇಗೆಲ್ಲಾ ನಡೆಸಿಕೊಂಡು ಬಂದಿದ್ದಾನೆ ಅಂತ ಯೋಚನೆ ಮಾಡಿದ್ರೆ ಮುಂದೆ ಏನೇ ಆದ್ರೂ ಯೆಹೋವ ಮತ್ತು ಯೇಸು ನಮ್ಮ ಜೊತೆ ಇರುತ್ತಾರೆ ಅನ್ನೋ ಧೈರ್ಯ ನಮಗಿರುತ್ತೆ.—ಇಬ್ರಿಯ 13:5, 6 ಓದಿ.
17. ಯೇಸು ನಿಮ್ಮ ಮೇಲ್ವಿಚಾರಕನಾಗಿ ಇರೋದ್ರಿಂದ ನಿಮಗೆ ಹೇಗನಿಸುತ್ತೆ?
17 ಯೇಸುವಿನ ನಾಯಕತ್ವದ ಕೆಳಗೆ ಕೆಲಸ ಮಾಡೋದು ನಮಗೆ ನಿಜವಾಗಲೂ ಖುಷಿ ಕೊಡುತ್ತೆ! ನಾವೆಲ್ರೂ ಬೇರೆಬೇರೆ ದೇಶ, ಭಾಷೆ, ಸಂಸ್ಕೃತಿಯಿಂದ ಬಂದಿದ್ದೀವಿ. ಆದ್ರೂ ಯಾವ ಬೇಧಭಾವನೂ ಇಲ್ಲದ ಸಂಘಟನೆಯಲ್ಲಿ ನಾವಿದ್ದೀವಿ. ಎಲ್ಲರಿಗೂ ಆಧ್ಯಾತ್ಮಿಕ ಆಹಾರ ಸಿಗುತ್ತಿದೆ ಮತ್ತು ಎಲ್ಲರೂ ಒಟ್ಟಾಗಿ ಸಿಹಿಸುದ್ದಿ ಸಾರುತ್ತಾ ಇದ್ದೀವಿ. ಅಷ್ಟೇ ಅಲ್ಲ, ಈ ಸಂಘಟನೆಯಲ್ಲಿ ಒಬ್ಬೊಬ್ಬರಿಗೂ ಹೊಸ ವ್ಯಕ್ತಿತ್ವವನ್ನ ಹಾಕಿಕೊಳ್ಳೋಕೆ ಸಹಾಯ ಸಿಗುತ್ತಿದೆ. ನಾವು ಒಬ್ಬರಿಗೊಬ್ಬರು ಪ್ರೀತಿ ತೋರಿಸ್ತಾ, ಒಗ್ಗಟ್ಟಿಂದ ಇದ್ದೀವಿ. ಹಾಗಾಗಿ ಯೇಸು ನಮ್ಮ ಮೇಲ್ವಿಚಾರಕ ಆಗಿರೋದ್ರಿಂದ ನಮಗೆ ಎಷ್ಟು ಹೆಮ್ಮೆಯಾಗುತ್ತೆ ಅಲ್ವಾ!
ಗೀತೆ 108 “ಯೆಹೋವನ ರಾಜ್ಯಕ್ಕಾಗಿ ಆತನನ್ನು ಸ್ತುತಿಸಿ”
a ಲಕ್ಷಾಂತರ ಗಂಡಸರು, ಹೆಂಗಸರು ಮತ್ತು ಮಕ್ಕಳು ಸಿಹಿಸುದ್ದಿಯನ್ನ ಹುರುಪಿಂದ ಸಾರುತ್ತಿದ್ದಾರೆ. ಅವರಲ್ಲಿ ನೀವು ಒಬ್ಬರಾ? ಯೇಸುವಿನ ಮೇಲ್ವಿಚಾರಣೆಯ ಕೆಳಗೆ ಈ ಕೆಲಸ ನಡೀತಿದೆ. ಅದಕ್ಕೆ ಯಾವ ಆಧಾರ ಇದೆ ಅಂತ ಈ ಲೇಖನದಲ್ಲಿ ನೋಡೋಣ. ಈ ವಿಷಯವನ್ನ ತಿಳಿದುಕೊಂಡಾಗ ಮತ್ತು ಅದರ ಬಗ್ಗೆ ಯೋಚಿಸಿದಾಗ ಸಿಹಿಸುದ್ದಿ ಸಾರುವ ಕೆಲಸನ ಇನ್ನೂ ಹೆಚ್ಚು ಹುರುಪಿಂದ ಮಾಡೋಕೆ ಬೇಕಾದ ಪ್ರೋತ್ಸಾಹ ಸಿಗುತ್ತೆ.