ಯೆಹೋವನು ದಾರಿಯನ್ನು ಸಿದ್ಧಪಡಿಸುತ್ತಾನೆ
“ಪರಲೋಕ ರಾಜ್ಯದ ಈ ಸುವಾರ್ತೆಯು . . . ಸಾರಲಾಗುವುದು.”—ಮತ್ತಾಯ 24:14.
1. ಪ್ರಥಮ ಶತಮಾನ ಮತ್ತು 20ನೆಯ ಶತಮಾನದಲ್ಲಿ ಸಾರುವ ಕೆಲಸದಿಂದ ಏನು ಸಾಧಿಸಲ್ಪಟ್ಟಿದೆ?
ಯೆಹೋವನು ಒಬ್ಬ ಪ್ರೀತಿಪರ ದೇವರಾಗಿರುವುದರಿಂದ, “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.” (1 ತಿಮೊಥೆಯ 2:4) ಇದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾರುವ ಮತ್ತು ಕಲಿಸುವ ಕಾರ್ಯಾಚರಣೆಯೊಂದನ್ನು ಅಗತ್ಯಪಡಿಸಿದೆ. ಪ್ರಥಮ ಶತಮಾನದಲ್ಲಿ ಈ ಸಾರುವಿಕೆಯು, ಕ್ರೈಸ್ತ ಸಭೆಯನ್ನು “ಸತ್ಯಕ್ಕೆ ಸ್ತಂಭವೂ ಆಧಾರವೂ” ಆಗುವಂತೆ ಮಾಡಿತು. (1 ತಿಮೊಥೆಯ 3:15) ತದನಂತರ ಒಂದು ದೀರ್ಘಾವಧಿಯ ಧರ್ಮಭ್ರಷ್ಟತೆಯ ಸಮಯವು ಬಂತು. ಆ ಸಮಯದಲ್ಲಿ ಸತ್ಯದ ಬೆಳಕು ಮಬ್ಬಾಯಿತು. ಇತ್ತೀಚಿನ ಸಮಯಗಳಲ್ಲಿ, “ಅಂತ್ಯಕಾಲ”ದಲ್ಲಿ “ಸತ್ಯ ಜ್ಞಾನವು” ಪುನಃ ಹೇರಳವಾಗಿದ್ದು, ಲಕ್ಷಾಂತರ ಮಂದಿಗೆ ಅದು ನಿತ್ಯ ರಕ್ಷಣೆಯ ಬೈಬಲ್ ಆಧಾರಿತ ನಿರೀಕ್ಷೆಯನ್ನು ಕೊಟ್ಟಿದೆ.—ದಾನಿಯೇಲ 12:4.
2. ಸಾರುವ ಚಟುವಟಿಕೆಯ ಸಂಬಂಧದಲ್ಲಿ ಯೆಹೋವನು ಏನನ್ನು ಮಾಡಿದ್ದಾನೆ?
2 ದೇವರ ಉದ್ದೇಶವನ್ನು ಭಂಗಪಡಿಸಲು ಸೈತಾನನು ನಿರಂತರವಾಗಿ ಮಾಡಿರುವ ಪ್ರಯತ್ನಗಳ ಎದುರಿನಲ್ಲೂ, ಪ್ರಥಮ ಶತಮಾನದಲ್ಲಿ ಹಾಗೂ 20ನೆಯ ಶತಮಾನದಲ್ಲಿ ನಡೆಸಲ್ಪಟ್ಟಿರುವ ಸಾರುವ ಚಟುವಟಿಕೆಯು ಆಶ್ಚರ್ಯಕರವಾದ ರೀತಿಯಲ್ಲಿ ಸಫಲಗೊಂಡಿದೆ. ಇದು ಯೆಶಾಯನ ಪ್ರವಾದನೆಯನ್ನು ನೆನಪಿಗೆ ತರುತ್ತದೆ. ಸಾ.ಶ.ಪೂ. ಆರನೆಯ ಶತಮಾನದಲ್ಲಿ ಯೆಹೂದಿ ಬಂದಿವಾಸಿಗಳು ಯೆಹೂದಕ್ಕೆ ಹಿಂದಿರುಗಿ ಹೋಗುವುದರ ಕುರಿತಾಗಿ ಯೆಶಾಯನು ಬರೆದುದು: “ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವವು, ಮಲೆನಾಡು ಬೈಲುಸೀಮೆಯಾಗುವದು, ಕೊರಕಲ ನೆಲವು ಸಮವಾಗುವದು.” (ಯೆಶಾಯ 40:4) ಪ್ರಥಮ ಶತಮಾನ ಹಾಗೂ 20ನೆಯ ಶತಮಾನದಲ್ಲಿ ಸಾರುವ ಮಹಾ ಕಾರ್ಯಾಚರಣೆಗಾಗಿ ಯೆಹೋವನು ದಾರಿಯನ್ನು ಸಿದ್ಧಗೊಳಿಸಿದ್ದಾನೆ ಮಾತ್ರವಲ್ಲ ಅದನ್ನು ಸುಗಮಗೊಳಿಸಿದ್ದಾನೆ ಕೂಡ.
3. ಯೆಹೋವನು ಯಾವ ವಿಧಗಳಲ್ಲಿ ತನ್ನ ಉದ್ದೇಶಗಳನ್ನು ಪೂರೈಸಲು ಶಕ್ತನಾಗಿದ್ದಾನೆ?
3 ಸುವಾರ್ತೆಯನ್ನು ಸಾರುವ ಕೆಲಸವನ್ನು ಮುಂದುವರಿಸಲಿಕ್ಕಾಗಿ ಯೆಹೋವನು ಭೂಮಿಯ ಮೇಲಿನ ಪ್ರತಿಯೊಂದು ವಿಕಸನವನ್ನೂ ನೇರವಾಗಿ ಪ್ರಭಾವಿಸಿದ್ದಾನೆಂಬುದನ್ನು ಇದು ಅರ್ಥೈಸುವುದಿಲ್ಲ. ಅಥವಾ ಸಂಭವಿಸಲಿರುವ ಪ್ರತಿಯೊಂದು ಘಟನೆಯ ನಿಖರವಾದ ವಿವರಗಳನ್ನು ತಿಳಿದುಕೊಳ್ಳಲಿಕ್ಕಾಗಿ ಆತನು ತನ್ನ ಮುನ್ನರಿವನ್ನು ಉಪಯೋಗಿಸಿದನೆಂಬುದೂ ಇದರರ್ಥವಲ್ಲ. ಆತನು ಭವಿಷ್ಯತ್ತಿನ ಘಟನೆಗಳನ್ನು ಮುಂಗಾಣಬಲ್ಲನು ಮತ್ತು ರೂಪಿಸಬಲ್ಲನು ಎಂಬುದಂತೂ ನಿಶ್ಚಯ. (ಯೆಶಾಯ 46:9-11) ಆದರೆ ಘಟನೆಗಳು ಕಾಲಾನುಕ್ರಮವಾಗಿ ಸಂಭವಿಸಿದಂತೆ, ಆತನು ಅವುಗಳಿಗೆ ಪ್ರತಿಕ್ರಿಯಿಸಲೂ ಶಕ್ತನಾಗಿದ್ದಾನೆ. ಒಬ್ಬ ಅನುಭವೀ ಕುರಿಪಾಲಕನಿಗೆ, ತನ್ನ ಮಂದೆಯನ್ನು ಹೇಗೆ ಮಾರ್ಗದರ್ಶಿಸಬೇಕು ಮತ್ತು ಸಂರಕ್ಷಿಸಬೇಕೆಂಬುದು ತಿಳಿದಿರುತ್ತದೆ. ಹಾಗೆಯೇ ಯೆಹೋವನು ತನ್ನ ಜನರನ್ನು ಮಾರ್ಗದರ್ಶಿಸುತ್ತಾನೆ. ಆತನು ಅವರನ್ನು ರಕ್ಷಣೆಯ ಕಡೆಗೆ ನಡಿಸುತ್ತಾ, ಅವರ ಆತ್ಮಿಕತೆಯನ್ನು ಸಂರಕ್ಷಿಸುತ್ತಾನೆ ಮತ್ತು ಲೋಕವ್ಯಾಪಕವಾಗಿ ಸುವಾರ್ತೆಯನ್ನು ಯಶಸ್ವಿಕರವಾಗಿ ಮುಂದುವರಿಸಿಕೊಂಡು ಹೋಗುವ ಸನ್ನಿವೇಶಗಳು ಹಾಗೂ ವಿಕಸನಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅವರನ್ನು ಪ್ರಚೋದಿಸುತ್ತಿದ್ದಾನೆ.—ಕೀರ್ತನೆ 23:1-4.
ಒಂದು ಕಠಿನ ನೇಮಕ
4, 5. ಸುವಾರ್ತೆಯನ್ನು ಸಾರುವ ಕೆಲಸವು ಒಂದು ಪಂಥಾಹ್ವಾನಕಾರಿ ನೇಮಕವಾಗಿರುತ್ತದೆ ಏಕೆ?
4 ಪ್ರಥಮ ಶತಮಾನದಲ್ಲಿ ಮತ್ತು ಆಧುನಿಕ ಸಮಯಗಳಲ್ಲಿನ ರಾಜ್ಯದ ಸಾರುವಿಕೆಯ ಕೆಲಸವು, ನೋಹನ ದಿನದಲ್ಲಿ ನಾವೆಯನ್ನು ಕಟ್ಟುವ ಕೆಲಸದಂತೆಯೇ ಒಂದು ಬೃಹತ್ ಯೋಜನೆಯಾಗಿರುತ್ತದೆ. ಎಲ್ಲ ಜನರಿಗೆ ಸಂದೇಶವೊಂದನ್ನು ತಲಪಿಸುವುದೇ ಸಾಕಷ್ಟು ಕಷ್ಟಕರವಾಗಿರುವಾಗ, ಈ ಕೆಲಸವು ಇನ್ನೂ ಹೆಚ್ಚು ಪಂಥಾಹ್ವಾನಕರವಾಗಿದೆ. ಪ್ರಥಮ ಶತಮಾನದಲ್ಲಿ ಕ್ರೈಸ್ತರು ಸಾಪೇಕ್ಷವಾಗಿ ಕೆಲವೇ ಮಂದಿ ಇದ್ದರು. ಅವರ ನಾಯಕನಾದ ಯೇಸುವನ್ನು, ರಾಜ್ಯದ್ರೋಹದ ತಪ್ಪು ಆಪಾದನೆಯ ಮೇಲೆ ಹತಿಸಲಾಗಿತ್ತು. ಆದರೆ ಅವರಿಗೆ ಹೋಲಿಸುವಾಗ, ಯೆಹೂದಿ ಧರ್ಮವು ಚೆನ್ನಾಗಿ ಬೇರೂರಿತ್ತು. ಯೆರೂಸಲೇಮಿನಲ್ಲಿ ಒಂದು ಭವ್ಯವಾದ ಆಲಯವಿತ್ತು. ಭೂಮಧ್ಯ ಸಮುದ್ರದ ಕ್ಷೇತ್ರದಲ್ಲಿದ್ದ ಯೆಹೂದ್ಯೇತರ ಧರ್ಮಗಳಿಗೂ ಆಲಯಗಳು ಮತ್ತು ಯಾಜಕತ್ವಗಳಿದ್ದು, ಅವು ಸುಸ್ಥಾಪಿಸಲ್ಪಟ್ಟಿದ್ದವು. ತದ್ರೀತಿಯಲ್ಲೇ, 1914ರಲ್ಲಿ “ಅಂತ್ಯಕಾಲ” ಆರಂಭವಾದಾಗ, ಅಭಿಷಿಕ್ತ ಕ್ರೈಸ್ತರ ಸಂಖ್ಯೆಯು ತುಂಬ ಕಡಿಮೆಯಾಗಿತ್ತು. ಆದರೆ ದೇವರನ್ನು ಸೇವಿಸುತ್ತಿದ್ದೇವೆಂದು ಹೇಳಿಕೊಳ್ಳುತ್ತಿದ್ದ ಇತರ ಧರ್ಮಗಳ ಅನುಯಾಯಿಗಳ ಸಂಖ್ಯೆಯು ದೊಡ್ಡದಾಗಿತ್ತು.—ದಾನಿಯೇಲ 12:9.
5 ತನ್ನ ಹಿಂಬಾಲಕರ ಮೇಲೆ ಹಿಂಸೆಯು ಬರುವುದು ಎಂದು ಯೇಸು ಈ ಮುಂಚೆಯೇ ಅವರಿಗೆ ಎಚ್ಚರಿಕೆ ನೀಡಿದ್ದನು. ಅವನಂದದ್ದು: “ಆಗ ನಿಮ್ಮನ್ನು ಉಪದ್ರವಕ್ಕೆ ಒಪ್ಪಿಸಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ಹಗೆಮಾಡುವರು.” (ಮತ್ತಾಯ 24:9) ಅಂತಹ ಸಮಸ್ಯೆಗಳಿಗೆ ಕೂಡಿಸುತ್ತಾ, ವಿಶೇಷವಾಗಿ “ಕಡೇ ದಿವಸಗಳಲ್ಲಿ” ಕ್ರೈಸ್ತರು “ಕಠಿನಕಾಲಗಳನ್ನು” ಎದುರಿಸಲಿದ್ದರು. (2 ತಿಮೊಥೆಯ 3:1) ನೇಮಿಸಲ್ಪಟ್ಟಿರುವ ಕೆಲಸದ ಪ್ರಮಾಣ, ಹಿಂಸೆಯ ನಿಶ್ಚಯತೆ, ಮತ್ತು ಸಮಯಗಳ ಕಷ್ಟಕಾರ್ಪಣ್ಯಗಳು, ಸಾರುವ ಕೆಲಸವನ್ನು ಪಂಥಾಹ್ವಾನಕರ ಹಾಗೂ ಕಷ್ಟಕರವನ್ನಾಗಿ ಮಾಡಿವೆ. ಆದುದರಿಂದ ವಿಶೇಷವಾದ ನಂಬಿಕೆಯು ಆವಶ್ಯಕ.
6. ಯಶಸ್ಸಿನ ಕುರಿತು ಯೆಹೋವನು ತನ್ನ ಜನರಿಗೆ ಯಾವ ಆಶ್ವಾಸನೆಯನ್ನು ಕೊಟ್ಟನು?
6 ತೊಂದರೆಗಳಿರುವವೆಂಬುದು ಯೆಹೋವನಿಗೆ ತಿಳಿದಿತ್ತು. ಆದರೆ ಅದೇ ಸಮಯದಲ್ಲಿ, ಈ ಕೆಲಸವನ್ನು ಯಾವುದೇ ವಿಷಯವು ನಿಲ್ಲಿಸಲಾರದೆಂಬುದೂ ಆತನಿಗೆ ತಿಳಿದಿತ್ತು. ಪ್ರಥಮ ಶತಮಾನದಲ್ಲಿ ಮತ್ತು 20ನೆಯ ಶತಮಾನದಲ್ಲಿ ಗಮನಾರ್ಹವಾಗಿ ನೆರವೇರುತ್ತಿರುವ ಒಂದು ಪ್ರಸಿದ್ಧ ಪ್ರವಾದನೆಯಲ್ಲಿ ಈ ಕೆಲಸದ ಯಶಸ್ಸನ್ನು ಮುಂತಿಳಿಸಲಾಗಿತ್ತು: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು.” (ಓರೆಅಕ್ಷರಗಳು ನಮ್ಮವು.)—ಮತ್ತಾಯ 24:14.
7. ಪ್ರಥಮ ಶತಮಾನದಲ್ಲಿ ಸಾರುವ ಚಟುವಟಿಕೆಯು ಎಷ್ಟು ವಿಸ್ತೃತವಾಗಿ ನಡೆಸಲ್ಪಟ್ಟಿತ್ತು?
7 ಪ್ರಥಮ ಶತಮಾನದಲ್ಲಿದ್ದ ದೇವರ ಸೇವಕರು ನಂಬಿಕೆ ಮತ್ತು ಪವಿತ್ರಾತ್ಮಭರಿತರಾಗಿ ತಮ್ಮ ನೇಮಕವನ್ನು ಪೂರೈಸಲು ಮುಂದೊತ್ತಿದರು. ಯೆಹೋವನು ಅವರೊಂದಿಗೆ ಇದ್ದುದರಿಂದ, ಅವರು ತಾವು ನಿರೀಕ್ಷಿಸಿದುದಕ್ಕಿಂತಲೂ ಹೆಚ್ಚಿನ ಯಶಸ್ಸನ್ನು ಪಡೆದರು. ಯೇಸುವಿನ ಮರಣದ ಬಳಿಕ ಸುಮಾರು 27 ವರ್ಷಗಳ ನಂತರ, ಪೌಲನು ಕೊಲೊಸ್ಸೆಯದವರಿಗೆ ಪತ್ರವನ್ನು ಬರೆಯುತ್ತಿದ್ದ ಸಮಯದಷ್ಟಕ್ಕೆ, ಸುವಾರ್ತೆಯು ‘ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಿದೆ’ ಎಂದು ಅವನು ಹೇಳಸಾಧ್ಯವಿತ್ತು. (ಕೊಲೊಸ್ಸೆ 1:23) ತುಲನಾತ್ಮಕವಾಗಿ ಇಂದು 20ನೆಯ ಶತಮಾನದ ಅಂತ್ಯದೊಳಗೆ, ಸುವಾರ್ತೆಯು 233 ದೇಶಗಳಲ್ಲಿ ಸಾರಲ್ಪಡುತ್ತಾ ಇದೆ.
8. ಅನೇಕರು ಯಾವ ಪರಿಸ್ಥಿತಿಗಳಡಿಯಲ್ಲಿ ಸುವಾರ್ತೆಯನ್ನು ಸ್ವೀಕರಿಸಿದ್ದಾರೆ? ಉದಾಹರಣೆಗಳನ್ನು ಕೊಡಿರಿ.
8 ಇತ್ತೀಚಿನ ದಶಕಗಳಲ್ಲಿ ಲಕ್ಷಾಂತರ ಜನರು ಸುವಾರ್ತೆಯನ್ನು ಸ್ವೀಕರಿಸಿದ್ದಾರೆ. ಅವರಲ್ಲಿ ಅನೇಕರು ಅನನುಕೂಲವಾದ ಪರಿಸ್ಥಿತಿಗಳಲ್ಲಿ, ಅಂದರೆ ಯುದ್ಧ, ನಿಷೇಧ ಮತ್ತು ತೀವ್ರ ಹಿಂಸೆಯ ಸಮಯಾವಧಿಗಳಲ್ಲಿ ಅದನ್ನು ಸ್ವೀಕರಿಸಿದ್ದಾರೆ. ಇದು ಪ್ರಥಮ ಶತಮಾನದಲ್ಲೂ ಸತ್ಯವಾಗಿತ್ತು. ಒಂದು ಸಂದರ್ಭದಲ್ಲಿ, ಪೌಲ ಸೀಲರನ್ನು ಅಮಾನುಷವಾದ ರೀತಿಯಲ್ಲಿ ಚಡಿಗಳಿಂದ ಹೊಡೆದು ಸೆರೆಮನೆಗೆ ದೊಬ್ಬಲಾಯಿತು. ಅದು ಶಿಷ್ಯರನ್ನಾಗಿ ಮಾಡುವುದಕ್ಕೆ ಎಷ್ಟು ಅಸಂಭವನೀಯ ಸನ್ನಿವೇಶವಾಗಿತ್ತು! ಆದರೂ, ಶಿಷ್ಯರನ್ನಾಗಿ ಮಾಡಲಿಕ್ಕಾಗಿಯೇ ಯೆಹೋವನು ಆ ಸನ್ನಿವೇಶವನ್ನು ಉಪಯೋಗಿಸಿದನು. ಪೌಲ ಸೀಲರನ್ನು ಬಿಡುಗಡೆಮಾಡಲಾಯಿತು ಮತ್ತು ಸೆರೆಯ ಯಜಮಾನನು ಹಾಗೂ ಅವನ ಕುಟುಂಬದವರು ವಿಶ್ವಾಸಿಗಳಾದರು. (ಅ. ಕೃತ್ಯಗಳು 16:19-33) ಸುವಾರ್ತೆಯನ್ನು ಯಾರು ವಿರೋಧಿಸುತ್ತಾರೋ ಅವರು ಸುವಾರ್ತೆಯನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ಅಂತಹ ಅನುಭವಗಳು ತೋರಿಸುತ್ತವೆ. (ಯೆಶಾಯ 54:17) ಆದರೂ, ಕ್ರೈಸ್ತತ್ವದ ಇತಿಹಾಸವು ನಿರಂತರವಾಗಿ ಕಷ್ಟ ಮತ್ತು ಹಿಂಸೆಯ ಸಮಯವಾಗಿರಲಿಲ್ಲ. ಪ್ರಥಮ ಶತಮಾನದಲ್ಲಿ ಮತ್ತು 20ನೆಯ ಶತಮಾನದಲ್ಲಿ ಸುವಾರ್ತೆಯು ಯಶಸ್ವಿಕರವಾಗಿ ಸಾರಲ್ಪಡುವದನ್ನು ಸುಗಮಗೊಳಿಸಲು ಸಹಾಯಮಾಡಿದ ಕೆಲವೊಂದು ಅನುಕೂಲಕರ ವಿಕಸನಗಳ ಕಡೆಗೆ ನಾವೀಗ ನಮ್ಮ ಗಮನವನ್ನು ಹರಿಸೋಣ.
ಧಾರ್ಮಿಕ ವಾತಾವರಣ
9, 10. ಪ್ರಥಮ ಶತಮಾನ ಮತ್ತು 20ನೆಯ ಶತಮಾನದಲ್ಲಿ ಸುವಾರ್ತೆಯ ಸಾರುವಿಕೆಗಾಗಿ ಯೆಹೋವನು ಹೇಗೆ ನಿರೀಕ್ಷಣೆಯನ್ನು ಉಂಟುಮಾಡಿದನು?
9 ಭೌಗೋಲಿಕ ಸಾರುವ ಕಾರ್ಯಾಚರಣೆಗಳು ನಡೆದ ಸಮಯಕ್ಕೆ ಗಮನ ಕೊಡಿರಿ. ಪ್ರಥಮ ಶತಮಾನದ ಹಿನ್ನೆಲೆಯ ಕುರಿತಾಗಿ ಹೇಳುವುದಾದರೆ, ಮೆಸ್ಸೀಯನು ಕಾಣಿಸಿಕೊಳ್ಳಲಿದ್ದ ವರ್ಷವು ಸಾ.ಶ. 29 ಆಗಿರುವುದೆಂಬುದನ್ನು ದಾನಿಯೇಲ 9:24-27ರಲ್ಲಿದ್ದ ವರ್ಷಗಳಿರುವ 70 ವಾರಗಳ ಕುರಿತಾದ ಪ್ರವಾದನೆಯು ನಿಷ್ಕೃಷ್ಟವಾಗಿ ಸೂಚಿಸಿತು. ಪ್ರಥಮ ಶತಮಾನದ ಯೆಹೂದ್ಯರಿಗೆ ಘಟನೆಗಳ ಸರಿಯಾದ ಸಮಯವು ಅರ್ಥವಾಗದಿದ್ದರೂ, ಅವರು ಮೆಸ್ಸೀಯನ ನಿರೀಕ್ಷಣೆಯಲ್ಲಿದ್ದು, ಅವನಿಗಾಗಿ ಕಾಯುತ್ತಾ ಇದ್ದರು. (ಲೂಕ 3:15) ಮಾನ್ಯುಈಲ್ ಬೀಬ್ಲೀಕ್ ಎಂಬ ಫ್ರೆಂಚ್ ಪುಸ್ತಕವು ಹೇಳುವುದು: “ದಾನಿಯೇಲನಿಂದ ನಿಗದಿಪಡಿಸಲ್ಪಟ್ಟಿದ್ದ ವರ್ಷಗಳಿರುವ ಎಪ್ಪತ್ತು ವಾರಗಳು ಅಂತ್ಯವಾಗುತ್ತಾ ಇದ್ದವೆಂದು ಜನರಿಗೆ ತಿಳಿದಿತ್ತು; ದೇವರ ರಾಜ್ಯವು ಸಮೀಪಿಸಿತು ಎಂದು ಸ್ನಾನಿಕನಾದ ಯೋಹಾನನು ಘೋಷಿಸುತ್ತಿದ್ದಾಗ ಯಾರಿಗೂ ಆಶ್ಚರ್ಯವಾಗಲಿಲ್ಲ.”
10 ಆಧುನಿಕ ಸಮಯದ ಹಿನ್ನೆಲೆಯ ಕುರಿತಾಗಿ ಏನು? ಒಂದು ಸ್ಮರಣೀಯ ವಿಕಸನವು, ಸ್ವರ್ಗದಲ್ಲಿ ಯೇಸುವಿನ ಸಿಂಹಾಸನಾರೋಹಣವಾಗಿತ್ತು. ಅದು ರಾಜ್ಯಾಧಿಕಾರದಲ್ಲಿ ಅವನ ಸಾನ್ನಿಧ್ಯದ ಆರಂಭವನ್ನು ಗುರುತಿಸಿತು. ಇದು 1914ರಲ್ಲಿ ನಡೆಯಿತೆಂದು ಬೈಬಲ್ ಪ್ರವಾದನೆಯು ತೋರಿಸುತ್ತದೆ. (ದಾನಿಯೇಲ 4:13-17) ಈ ಘಟನೆಗಾಗಿ ಮುನ್ನೋಡುವಿಕೆಯು, ಆಧುನಿಕ ಸಮಯಗಳ ಕೆಲವೊಂದು ಧಾರ್ಮಿಕ ಜನರು ಸಹ ನಿರೀಕ್ಷಣೆಯಿಂದ ತುಂಬಿಕೊಳ್ಳುವಂತೆ ಮಾಡಿತು. ಆ ನಿರೀಕ್ಷಣೆಯು, 1879ರಲ್ಲಿ ಸೈಅನ್ಸ್ ವಾಚ್ಟವರ್ ಆ್ಯಂಡ್ ಹೆರಾಲ್ಡ್ ಆಫ್ ಕ್ರೈಸ್ಟ್ಸ್ ಪ್ರೆಸೆನ್ಸ್ (ಚೀಯೋನಿನ ಕಾವಲಿನಬುರುಜು ಮತ್ತು ಕ್ರಿಸ್ತನ ಸಾನ್ನಿಧ್ಯದ ಘೋಷಣೆ) ಎಂಬ ಶೀರ್ಷಿಕೆಯೊಂದಿಗೆ ಈ ಪತ್ರಿಕೆಯನ್ನು ಪ್ರಕಾಶಿಸಲು ಆರಂಭಿಸಿದ ಪ್ರಾಮಾಣಿಕ ಬೈಬಲ್ ವಿದ್ಯಾರ್ಥಿಗಳಲ್ಲೂ ವ್ಯಕ್ತವಾಗುತ್ತಿತ್ತು. ಹೀಗೆ, ಪ್ರಥಮ ಶತಮಾನದಲ್ಲಿ ಮತ್ತು ಆಧುನಿಕ ಸಮಯದಲ್ಲಿ ಧಾರ್ಮಿಕ ನಿರೀಕ್ಷಣೆಗಳು, ಸುವಾರ್ತೆಯ ಸಾರುವಿಕೆಗಾಗಿ ಅವಶ್ಯವಾಗಿದ್ದ ವಾತಾವರಣವನ್ನು ಸಿದ್ಧಗೊಳಿಸಿದವು.a
11. ಸುವಾರ್ತೆಯ ಸಾರುವಿಕೆಗೆ ನೆರವನ್ನು ಕೊಡಲು ಯಾವ ಧಾರ್ಮಿಕ ಅಸ್ತಿವಾರಗಳನ್ನು ಹಾಕಲಾಯಿತು?
11 ಈ ಎರಡೂ ಸಮಯಾವಧಿಗಳಲ್ಲಿ ಕ್ರೈಸ್ತರ ಕೆಲಸಕ್ಕೆ ನೆರವನ್ನು ನೀಡಿದ ಇನ್ನೊಂದು ಅಂಶವಿತ್ತು. ಅದೇನೆಂದರೆ, ಅನೇಕ ಜನರು ಪವಿತ್ರ ಶಾಸ್ತ್ರಗಳೊಂದಿಗೆ ಪರಿಚಿತರಾಗಿದ್ದರು. ಪ್ರಥಮ ಶತಮಾನದಲ್ಲಿ, ಸುತ್ತಮುತ್ತಲಿನ ಅನ್ಯ ಜನಾಂಗಗಳಲ್ಲೆಲ್ಲ ಯೆಹೂದಿ ಸಮುದಾಯಗಳು ಹರಡಿಕೊಂಡಿದ್ದವು. ಆ ಸಮುದಾಯಗಳಲ್ಲಿ ಸಭಾಮಂದಿರಗಳಿರುತ್ತಿದ್ದವು. ಅಲ್ಲಿ ಶಾಸ್ತ್ರವಚನಗಳು ಓದಲ್ಪಟ್ಟು, ಚರ್ಚಿಸಲ್ಪಡುವುದನ್ನು ಕೇಳಿಸಿಕೊಳ್ಳಲು ಜನರು ಕ್ರಮವಾಗಿ ಕೂಡಿಬರುತ್ತಿದ್ದರು. ಹೀಗೆ ಆರಂಭದ ಕ್ರೈಸ್ತರು, ಆ ಸಮಯದಲ್ಲಿದ್ದ ಜನರಿಗಿದ್ದಂತಹ ಧಾರ್ಮಿಕ ಜ್ಞಾನದ ಆಧಾರದ ಮೇಲೆಯೇ ಕಟ್ಟಲು ಶಕ್ತರಾಗಿದ್ದರು. (ಅ. ಕೃತ್ಯಗಳು 8:28-36; 17:1, 2) ನಮ್ಮ ಶಕದ ಆರಂಭದಲ್ಲಿ ಅನೇಕ ದೇಶಗಳಲ್ಲಿ ಅದೇ ರೀತಿಯ ವಾತಾವರಣವಿದ್ದುದರಿಂದ ಯೆಹೋವನ ಜನರು ಅದರಿಂದ ಪ್ರಯೋಜನಹೊಂದಿದರು. ಕ್ರೈಸ್ತಪ್ರಪಂಚದ ಕ್ಷೇತ್ರಗಳಲ್ಲೆಲ್ಲ, ವಿಶೇಷವಾಗಿ ಪ್ರಾಟೆಸ್ಟಂಟ್ ದೇಶಗಳಲ್ಲಿ ಬೈಬಲ್ ವ್ಯಾಪಕವಾಗಿ ಲಭ್ಯವಾಗಿತ್ತು. ಅದನ್ನು ಅನೇಕ ಚರ್ಚುಗಳಲ್ಲಿ ಓದಲಾಗುತ್ತಿತ್ತು. ಲಕ್ಷಾಂತರ ಜನರ ಬಳಿ ಬೈಬಲಿನ ಪ್ರತಿ ಇರುತ್ತಿತ್ತು. ಜನರ ಬಳಿ ಈಗಾಗಲೇ ಬೈಬಲು ಇದ್ದದ್ದರಿಂದ, ಈಗ ಅವರಿಗೆ ಅದರಲ್ಲಿ ಅಡಕವಾಗಿದ್ದ ವಿಷಯವನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುವ ಅಗತ್ಯವಿತ್ತಷ್ಟೆ.
ಕಾನೂನಿನಿಂದ ದೊರಕಿರುವ ಪ್ರಯೋಜನಗಳು
12. ರೋಮಿನ ಕಾನೂನು, ಪ್ರಥಮ ಶತಮಾನದಲ್ಲಿ ಸಾಮಾನ್ಯವಾಗಿ ಒಂದು ರಕ್ಷಣೆಯಾಗಿದ್ದದ್ದು ಹೇಗೆ?
12 ಸರಕಾರೀ ಕಾನೂನಿನಿಂದಾಗಿ ಕ್ರೈಸ್ತರ ಸಾರುವ ಕೆಲಸಕ್ಕೆ ಅನೇಕವೇಳೆ ಪ್ರಯೋಜನವಾಗಿದೆ. ರೋಮನ್ ಸಾಮ್ರಾಜ್ಯವು ಪ್ರಥಮ ಶತಮಾನದ ಲೋಕವನ್ನು ಆಳುತ್ತಿತ್ತು ಮತ್ತು ಅದರ ಲಿಖಿತ ನಿಯಮಗಳು ದೈನಂದಿನ ಜೀವಿತದ ಮೇಲೆ ಗಾಢವಾದ ಪ್ರಭಾವವನ್ನು ಬೀರಿದವು. ಈ ನಿಯಮಗಳು ರಕ್ಷಣೋಪಾಯಗಳನ್ನು ಒದಗಿಸಿದವು ಮತ್ತು ಆರಂಭದ ಕ್ರೈಸ್ತರಿಗೆ ಅದರಿಂದ ಪ್ರಯೋಜನವಾಯಿತು. ಉದಾಹರಣೆಗೆ, ಪೌಲನು ರೋಮಿನ ಕಾನೂನಿಗೆ ಮೇಲ್ಮನವಿ ಮಾಡಿದ್ದರಿಂದಾಗಿ, ಅವನು ಸೆರೆಮನೆಯಿಂದ ಬಿಡುಗಡೆಯಾಗಿ, ಕೊರಡೆಯಿಂದ ಹೊಡೆಸಿಕೊಳ್ಳುವುದರಿಂದ ತಪ್ಪಿಸಿಕೊಂಡನು. (ಅ. ಕೃತ್ಯಗಳು 16:37-39; 22:25, 29) ರೋಮಿನ ಕಾನೂನು ವ್ಯವಸ್ಥೆಯ ಏರ್ಪಾಡಿಗೆ ಗಮನ ಸೆಳೆದದ್ದು ಎಫೆಸದಲ್ಲಿನ ಕೋಪೋದ್ರಿಕ್ತ ಜನರ ಗುಂಪೊಂದನ್ನು ಶಾಂತಗೊಳಿಸಲು ಸಹಾಯ ಮಾಡಿತು. (ಅ. ಕೃತ್ಯಗಳು 19:35-41) ರೋಮನ್ ಪ್ರಜೆಯಾಗಿದ್ದ ಕಾರಣ, ಪೌಲನು ಒಮ್ಮೆ ಯೆರೂಸಲೇಮಿನಲ್ಲಿ ಹಿಂಸಾಚಾರದಿಂದ ಪಾರಾದನು. (ಅ. ಕೃತ್ಯಗಳು 23:27) ಅನಂತರ, ಅವನು ಕೈಸರನ ಮುಂದೆ ತನ್ನ ನಂಬಿಕೆಯನ್ನು ಕಾನೂನುಬದ್ಧವಾಗಿ ಸಮರ್ಥಿಸಲು ಅನುಮತಿ ಸಿಕ್ಕಿದ್ದು ರೋಮನ್ ಕಾನೂನಿನಿಂದಲೇ. (ಅ. ಕೃತ್ಯಗಳು 25:11) ಹೆಚ್ಚಿನ ಕೈಸರರು ಪ್ರಜಾಪೀಡಕರಾಗಿದ್ದರೂ, ಪ್ರಥಮ ಶತಮಾನದಲ್ಲಿನ ನಿಯಮಗಳು ಸಾಮಾನ್ಯವಾಗಿ ‘ಸುವಾರ್ತೆಯನ್ನು ಸಮರ್ಥಿಸುತ್ತಾ, ನ್ಯಾಯಬದ್ಧವಾಗಿ ಸ್ಥಾಪಿಸಲು’ ಅನುಮತಿಸಿದವು.—ಫಿಲಿಪ್ಪಿ 1:7, NW.
13. ನಮ್ಮ ಸಮಯದಲ್ಲಿ ಸಾರುವ ಕೆಲಸವು ಕಾನೂನಿನಿಂದ ಹೇಗೆ ಪ್ರಯೋಜನವನ್ನು ಪಡೆದಿದೆ?
13 ಇಂದು ಕೂಡ ಅನೇಕ ದೇಶಗಳಲ್ಲಿ ಪರಿಸ್ಥಿತಿಯು ಹೀಗೆಯೇ ಇದೆ. ‘ಕಾನೂನಿನ ನೆವನದಿಂದ ಕೇಡುಕಲ್ಪಿಸುವ’ವರು ಇದ್ದಿರುವುದಾದರೂ, ಹೆಚ್ಚಿನ ದೇಶಗಳಲ್ಲಿನ ಲಿಖಿತ ನಿಯಮಗಳು, ಧರ್ಮದ ಸ್ವಾತಂತ್ರ್ಯವು ಒಂದು ಮೂಲಭೂತ ಹಕ್ಕಾಗಿದೆ ಎಂದು ಪರಿಗಣಿಸುತ್ತವೆ. (ಕೀರ್ತನೆ 94:20) ಸಮಾಜದ ವ್ಯವಸ್ಥೆಗೆ ಯೆಹೋವನ ಸಾಕ್ಷಿಗಳು ಯಾವುದೇ ರೀತಿಯಲ್ಲಿ ಬೆದರಿಕೆಯನ್ನೊಡ್ಡುವುದಿಲ್ಲ ಎಂಬುದನ್ನು ಗ್ರಹಿಸುತ್ತಾ, ಅನೇಕ ಸರಕಾರಗಳು ನಮಗೆ ಕಾನೂನುಬದ್ಧ ಮನ್ನಣೆಯನ್ನು ದಯಪಾಲಿಸಿದ್ದಾರೆ. ಸಾಕ್ಷಿಗಳ ಅತ್ಯಧಿಕ ಮುದ್ರಣದ ಕೆಲಸವು ಅಮೆರಿಕದಲ್ಲಿ ನಡೆಯುತ್ತಿದ್ದು, ಅಲ್ಲಿ ಜಾರಿಯಲ್ಲಿರುವ ನಿಯಮಗಳು, ಸುಮಾರು 120 ವರ್ಷಗಳಿಂದ ಕಾವಲಿನಬುರುಜು ಪತ್ರಿಕೆಯು ಸತತವಾಗಿ ಮುದ್ರಿಸಲ್ಪಟ್ಟು, ಲೋಕವ್ಯಾಪಕವಾಗಿ ಓದಲ್ಪಡುವುದನ್ನು ಸಾಧ್ಯಗೊಳಿಸಿವೆ.
ಶಾಂತಿ ಮತ್ತು ಸೈರಣೆಯ ಕಾಲಾವಧಿಗಳು
14, 15. ಸಾಪೇಕ್ಷವಾದ ಸಾಮಾಜಿಕ ಶಾಂತಿಯು, ಪ್ರಥಮ ಶತಮಾನದಲ್ಲಿ ಸಾರುವ ಚಟುವಟಿಕೆಗೆ ಹೇಗೆ ಪ್ರಯೋಜನವನ್ನು ತಂದಿತು?
14 ಸಾಪೇಕ್ಷ ಶಾಂತಿಯ ಅವಧಿಗಳಿಂದಲೂ ಸಾರುವ ಚಟುವಟಿಕೆಯು ಪ್ರಯೋಜನವನ್ನು ಹೊಂದಿದೆ. ಪ್ರಥಮ ಹಾಗೂ 20ನೆಯ ಶತಮಾನದಲ್ಲಿ “ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವ” ಸಮಯಗಳಿರುವವೆಂದು ಯೇಸು ನಿಷ್ಕೃಷ್ಟವಾಗಿ ಮುಂತಿಳಿಸಿದ್ದರೂ, ನಡುನಡುವೆ ತೀವ್ರ ಪ್ರಮಾಣದ ರಾಜ್ಯದ ಸಾರುವಿಕೆಯನ್ನು ಸಾಧ್ಯಗೊಳಿಸಿರುವ ಶಾಂತಿಯ ಅವಧಿಗಳೂ ಇದ್ದವು. (ಮತ್ತಾಯ 24:7) ಪ್ರಥಮ ಶತಮಾನದ ಕ್ರೈಸ್ತರು ಪ್ಯಾಕ್ಸ್ ರೊಮಾನಾ ಅಥವಾ ರೋಮನ್ ಶಾಂತಿಯ ಅವಧಿಯಲ್ಲಿ ಜೀವಿಸಿದರು. ಒಬ್ಬ ಇತಿಹಾಸಕಾರನು ಬರೆದುದು: “ಮೆಡಿಟರೇನಿಯನ್ ಲೋಕದ ಜನರನ್ನು ರೋಮ್ ಎಷ್ಟೊಂದು ನಿಯಂತ್ರಿಸಿತ್ತೆಂದರೆ, ಸತತವಾಗಿ ಯುದ್ಧಗಳು ನಡೆಯುತ್ತಿದ್ದ ಯುಗಗಳನ್ನು ರೋಮ್ ಅಂತ್ಯಗೊಳಿಸಿತು.” ಈ ಶಾಂತಿಯ ಅವಧಿಯು, ಆರಂಭದ ಕ್ರೈಸ್ತರು ರೋಮನ್ ಸಾಮ್ರಾಜ್ಯದಾದ್ಯಂತ ಬಹುಮಟ್ಟಿಗೆ ಸುರಕ್ಷಿತವಾಗಿ ಪ್ರಯಾಣಿಸುವುದನ್ನು ಸಾಧ್ಯಮಾಡಿತು.
15 ರೋಮನ್ ಸಾಮ್ರಾಜ್ಯವು, ಜನರನ್ನು ತನ್ನ ಪ್ರಬಲವಾದ ನಿಯಂತ್ರಣದಡಿಯಲ್ಲಿ ಐಕ್ಯಗೊಳಿಸಲು ಪ್ರಯತ್ನಿಸಿತು. ಈ ಕಾರ್ಯನೀತಿಯು, ಪ್ರಯಾಣ, ಸಹಿಷ್ಣುತೆ ಮತ್ತು ವಿಚಾರ ವಿನಿಮಯಕ್ಕೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಸಹೋದರತ್ವದ ಕಲ್ಪನೆಗೂ ಒತ್ತಾಸೆಯನ್ನು ಕೊಟ್ಟಿತು. ನಾಗರಿಕತೆಯ ಪಥದಲ್ಲಿ (ಇಂಗ್ಲಿಷ್) ಎಂಬ ಪುಸ್ತಕವು ತಿಳಿಸುವುದು: “[ರೋಮನ್] ಸಾಮ್ರಾಜ್ಯದ ಐಕ್ಯವು, [ಕ್ರೈಸ್ತ ಸಾರುವಿಕೆಗೆ] ಒಂದು ಅನುಕೂಲಕರವಾದ ಕ್ಷೇತ್ರವನ್ನು ಸೃಷ್ಟಿಸಿತು. ರಾಷ್ಟ್ರೀಯ ಪ್ರತಿಬಂಧಗಳು ಕೆಡವಲ್ಪಟ್ಟಿದ್ದವು. ಒಬ್ಬ ರೋಮನ್ ಪ್ರಜೆಯು ಲೋಕದ ಪ್ರಜೆಯಾಗಿದ್ದನು. . . . ಅಷ್ಟುಮಾತ್ರವಲ್ಲದೆ, ಸಾರ್ವತ್ರಿಕ ಪೌರತ್ವದ ವಿಚಾರವನ್ನು ವಿಕಸಿಸಿದ ಒಂದು ರಾಜ್ಯದಲ್ಲಿ, ಮನುಷ್ಯರ ನಡುವಿನ ಸಹೋದರತ್ವವನ್ನು ಕಲಿಸುವ ಒಂದು ಧರ್ಮವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿತ್ತು.”—ಅ. ಕೃತ್ಯಗಳು 10:34, 35ನ್ನು ಹೋಲಿಸಿರಿ; 1 ಪೇತ್ರ 2:17.
16, 17. ಆಧುನಿಕ ಸಮಯಗಳಲ್ಲಿ ಶಾಂತಿಯನ್ನು ಪ್ರವರ್ಧಿಸುವ ಪ್ರಯತ್ನಗಳನ್ನು ಯಾವುದು ಪ್ರಚೋದಿಸಿದೆ, ಮತ್ತು ಅನೇಕ ಜನರು ಯಾವ ತೀರ್ಮಾನಕ್ಕೆ ಬಂದಿದ್ದಾರೆ?
16 ನಮ್ಮ ಸಮಯದ ಕುರಿತಾಗಿ ಏನು? 20ನೆಯ ಶತಮಾನದಲ್ಲಿ ಅತಿ ವಿನಾಶಕಾರಿ ಯುದ್ಧಗಳು ನಡೆದಿವೆ ಮತ್ತು ಈಗಲೂ ಕೆಲವೊಂದು ದೇಶಗಳಲ್ಲಿ ಪ್ರಾದೇಶಿಕ ಯುದ್ಧಗಳು ನಡೆಯುತ್ತಾ ಇವೆ. (ಪ್ರಕಟನೆ 6:4) ಆದರೆ, ಸಾಪೇಕ್ಷ ಶಾಂತಿಯ ಅವಧಿಗಳೂ ಇದ್ದವು. ಲೋಕದ ಪ್ರಬಲ ರಾಷ್ಟ್ರಗಳು, 50ಕ್ಕಿಂತಲೂ ಹೆಚ್ಚು ವರ್ಷಗಳಿಂದ ಸಂಪೂರ್ಣ ಯುದ್ಧದಲ್ಲಿ ಪರಸ್ಪರ ಕಾದಾಡಿರುವುದಿಲ್ಲ. ಈ ಸನ್ನಿವೇಶವು ಆ ದೇಶಗಳಲ್ಲಿ ಸುವಾರ್ತೆಯನ್ನು ಸಾರಲು ತುಂಬ ಸಹಾಯವನ್ನು ನೀಡಿದೆ.
17 ಇಪ್ಪತ್ತನೆಯ ಶತಮಾನದ ಯುದ್ಧದ ಭೀಕರತೆಗಳು, ಒಂದು ಲೋಕ ಸರಕಾರದ ಅಗತ್ಯವಿದೆ ಎಂಬುದನ್ನು ಅನೇಕ ಜನರು ಗ್ರಹಿಸುವಂತೆ ಮಾಡಿದೆ. ಲೋಕ ಯುದ್ಧದ ಭಯವೇ, ಜನಾಂಗ ಸಂಘ ಮತ್ತು ವಿಶ್ವ ಸಂಸ್ಥೆಯ ರಚನೆಗೆ ನಡಿಸಿತು. (ಪ್ರಕಟನೆ 13:14) ಈ ಎರಡೂ ಸಂಸ್ಥೆಗಳ ಘೋಷಿತ ಗುರಿಯು, ಅಂತಾರಾಷ್ಟ್ರೀಯ ಸಹಕಾರ ಮತ್ತು ಶಾಂತಿಗೆ ಒತ್ತಾಸೆ ನೀಡುವುದೇ ಆಗಿರುತ್ತದೆ. ಇದರ ಅಗತ್ಯವಿದೆಯೆಂದು ಗ್ರಹಿಸುವ ಜನರೇ ಅನೇಕವೇಳೆ, ನಿಜ ಮತ್ತು ಶಾಶ್ವತ ಶಾಂತಿಯನ್ನು ತರಲಿರುವ ಒಂದು ಲೋಕ ಸರಕಾರವಾದ ದೇವರ ರಾಜ್ಯದ ಸುವಾರ್ತೆಗೆ ಚೆನ್ನಾಗಿ ಪ್ರತಿಸ್ಪಂದಿಸುತ್ತಾರೆ.
18. ಧರ್ಮದ ಕಡೆಗಿನ ಯಾವ ಮನೋಭಾವವು ಸಾರುವ ಕೆಲಸಕ್ಕೆ ನೆರವಾಗಿವೆ?
18 ಕ್ರೈಸ್ತರನ್ನು ಕೆಲವೊಮ್ಮೆ ಘೋರವಾಗಿ ಹಿಂಸಿಸಲಾಗಿರುವುದಾದರೂ, ಪ್ರಥಮ ಶತಮಾನ ಮತ್ತು 20ನೆಯ ಶತಮಾನವು ಧಾರ್ಮಿಕ ಸೈರಣೆಯ ಅವಧಿಗಳನ್ನೂ ನೋಡಿದೆ. (ಯೋಹಾನ 15:20; ಅ. ಕೃತ್ಯಗಳು 9:31) ರೋಮನರು ಯಾರ ಮೇಲೆ ಜಯ ಸಾಧಿಸಿದರೊ ಆ ಜನರ ದೇವದೇವತೆಗಳನ್ನು ಮುಕ್ತವಾಗಿ ಅಂಗೀಕರಿಸಿ, ಅವುಗಳಿಗೆ ಹೊಂದಿಕೊಳ್ಳುತ್ತಿದ್ದರು. ರಾಡ್ನೀ ಸ್ಟಾರ್ಕ್ ಎಂಬ ಪ್ರೊಫೆಸರರು ಬರೆದುದು: “ರೋಮ್ ಅನೇಕ ವಿಧಗಳಲ್ಲಿ ಹೆಚ್ಚಿನ ಧಾರ್ಮಿಕ ಸ್ವಾತಂತ್ರ್ಯವನ್ನು ಒದಗಿಸಿತು. ಈ ರೀತಿಯ ಸ್ವಾತಂತ್ರ್ಯವು ಪುನಃ ತೋರಿಬಂದದ್ದು ಅಮೆರಿಕನ್ ಕ್ರಾಂತಿಯ ಬಳಿಕವೇ.” ಆಧುನಿಕ ಸಮಯಗಳಲ್ಲಿ ಅನೇಕ ದೇಶಗಳಲ್ಲಿನ ಜನರು, ಇತರ ಅಭಿಪ್ರಾಯಗಳನ್ನೂ ಅಂಗೀಕರಿಸುವ ಮನಸ್ಸುಳ್ಳವರಾಗಿ ಪರಿಣಮಿಸಿದ್ದಾರೆ. ಈ ಕಾರಣದಿಂದ, ಯೆಹೋವನ ಸಾಕ್ಷಿಗಳು ಸಾರುವ ಬೈಬಲ್ ಸಂದೇಶಕ್ಕೆ ಅವರು ಕಿವಿಗೊಡಲು ಸಿದ್ಧರಾಗಿರುತ್ತಾರೆ.
ತಾಂತ್ರಿಕತೆಯ ಪಾತ್ರ
19. ಆರಂಭದ ಕ್ರೈಸ್ತರು ಕೋಡೆಕ್ಸ್ ಅನ್ನು ಹೇಗೆ ಉಪಯೋಗಿಸಿದರು?
19 ಕೊನೆಯಲ್ಲಿ, ತನ್ನ ಜನರು ತಾಂತ್ರಿಕತೆಯ ಪ್ರಗತಿಯಿಂದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಯೆಹೋವನು ಅವರನ್ನು ಹೇಗೆ ಶಕ್ತಗೊಳಿಸಿದ್ದಾನೆಂಬುದನ್ನು ಪರಿಗಣಿಸಿರಿ. ಆರಂಭದ ಕ್ರೈಸ್ತರು, ಕ್ಷಿಪ್ರವಾದ ತಾಂತ್ರಿಕ ಪ್ರಗತಿಯ ಯುಗದಲ್ಲಿ ಜೀವಿಸುತ್ತಿರಲಿಲ್ಲವಾದರೂ, ಅವರು ಬಳಸಿದಂತಹ ಒಂದು ವಿಕಸನವು, ಕೋಡೆಕ್ಸ್ ಅಥವಾ ಹಾಳೆ ಪುಸ್ತಕವಾಗಿತ್ತು. ಈ ಕೋಡೆಕ್ಸ್ ಪುಸ್ತಕವು, ಉಪಯೋಗಿಸಲು ಕಷ್ಟಕರವಾಗಿದ್ದ ಸುರುಳಿಯ ಸ್ಥಾನವನ್ನು ತೆಗೆದುಕೊಂಡಿತ್ತು. ಕೋಡೆಕ್ಸ್ನ ಜನನ (ಇಂಗ್ಲಿಷ್) ಎಂಬ ಪುಸ್ತಕವು ತಿಳಿಸುವುದು: “ಐಹಿಕ ಸಾಹಿತ್ಯವು, ಸುರುಳಿಯ ಬದಲಿಗೆ ಕೋಡೆಕ್ಸ್ ಅನ್ನು ನಿಧಾನವಾಗಿ ಮತ್ತು ಸ್ವಲ್ಪಸ್ವಲ್ಪವಾಗಿ ಬಳಸಿತು. ಇದಕ್ಕೆ ಹೋಲಿಸಿದರೆ, ಕ್ರೈಸ್ತರು ಕೋಡೆಕ್ಸ್ ಅನ್ನು ಬೇಗನೆ ಮತ್ತು ಸಾರ್ವತ್ರಿಕವಾಗಿ ಉಪಯೋಗಿಸಿದರು.” ಈ ಕೃತಿಯು ಹೀಗೂ ಹೇಳುತ್ತದೆ: “ಎರಡನೆಯ ಶತಮಾನದಲ್ಲಿ ಕ್ರೈಸ್ತರು ಕೋಡೆಕ್ಸ್ ಅನ್ನು ಎಷ್ಟು ವ್ಯಾಪಕವಾಗಿ ಉಪಯೋಗಿಸುತ್ತಿದ್ದರೆಂದರೆ, ಅದು ಸಾ.ಶ. 100ಕ್ಕಿಂತಲೂ ಹೆಚ್ಚು ಸಮಯಕ್ಕೆ ಮುಂಚೆಯೇ ಬಳಕೆಗೆ ಬಂದಿರಬೇಕೆಂದು ತೋರುತ್ತದೆ.” ಸುರುಳಿಗಿಂತಲೂ ಕೋಡೆಕ್ಸ್ ಅನ್ನು ಉಪಯೋಗಿಸುವುದು ಹೆಚ್ಚು ಸುಲಭವಾಗಿತ್ತು. ವಚನಗಳನ್ನು ಬೇಗನೆ ತೆರೆದು ನೋಡಲು ಸಾಧ್ಯವಿತ್ತು. ಇದು ಖಂಡಿತವಾಗಿಯೂ ಆರಂಭದ ಕ್ರೈಸ್ತರಿಗೆ ಸಹಾಯಮಾಡಿದ್ದಿರಬಹುದು. ಏಕೆಂದರೆ, ಪೌಲನಂತೆ ಅವರು ಶಾಸ್ತ್ರವಚನಗಳನ್ನು ವಿವರಿಸುತ್ತಿದ್ದರು ಮಾತ್ರವಲ್ಲ, ಅವರು ಕಲಿಸುತ್ತಿದ್ದ ವಿಷಯಗಳನ್ನು ‘ಆಧಾರವಚನಗಳ ಮೂಲಕ ರುಜುಪಡಿಸುತ್ತಿದ್ದರು’ ಕೂಡ.—ಅ. ಕೃತ್ಯಗಳು 17:2, 3, NW.
20. ಭೌಗೋಲಿಕ ಸಾರುವ ಚಟುವಟಿಕೆಯಲ್ಲಿ ದೇವರ ಜನರು ಆಧುನಿಕ ತಾಂತ್ರಿಕತೆಯನ್ನು ಹೇಗೆ ಉಪಯೋಗಿಸಿದ್ದಾರೆ, ಮತ್ತು ಏಕೆ?
20 ನಮ್ಮ ಶತಮಾನದ ತಾಂತ್ರಿಕ ಪ್ರಗತಿಯು ದಂಗುಬಡಿಸುವಂಥದ್ದಾಗಿದೆ. ಅತಿ ವೇಗದ ಮುದ್ರಣ ಯಂತ್ರಗಳಿಂದಾಗಿ ಬೈಬಲ್ ಸಾಹಿತ್ಯವನ್ನು ನೂರಾರು ಭಾಷೆಗಳಲ್ಲಿ ಏಕಕಾಲಿಕವಾಗಿ ಪ್ರಕಾಶಿಸುವುದು ಸಾಧ್ಯವಾಗಿದೆ. ಆಧುನಿಕ ತಾಂತ್ರಿಕತೆಯು, ಬೈಬಲ್ ಭಾಷಾಂತರದ ಕೆಲಸವು ತ್ವರಿತಗತಿಯಲ್ಲಿ ನಡೆಯುವಂತೆ ಮಾಡಿದೆ. ಟ್ರಕ್ಕುಗಳು, ರೈಲುಗಳು, ಹಡಗುಗಳು ಮತ್ತು ವಿಮಾನಗಳು, ಬೈಬಲ್ ಸಾಹಿತ್ಯವನ್ನು ಕ್ಷಿಪ್ರವಾಗಿ ಲೋಕದಾದ್ಯಂತ ಸಾಗಿಸುವುದನ್ನು ಸಾಧ್ಯಗೊಳಿಸಿದೆ. ಟೆಲಿಫೋನು ಮತ್ತು ಫ್ಯಾಕ್ಸ್ ಮಷೀನುಗಳು ಕ್ಷಣಮಾತ್ರದಲ್ಲಿ ಸಂಪರ್ಕಿಸುವುದನ್ನು ಸಾಧ್ಯಮಾಡಿದೆ. ಸುವಾರ್ತೆಯನ್ನು ಲೋಕವ್ಯಾಪಕವಾಗಿ ಹಬ್ಬಿಸಲಿಕ್ಕಾಗಿ ಇಂತಹ ತಾಂತ್ರಿಕತೆಯನ್ನು ವ್ಯಾವಹಾರಿಕ ರೀತಿಯಲ್ಲಿ ಉಪಯೋಗಿಸುವಂತೆ ಯೆಹೋವನು ತನ್ನ ಆತ್ಮದ ಮೂಲಕ ತನ್ನ ಸೇವಕರನ್ನು ಪ್ರಚೋದಿಸಿದ್ದಾನೆ. ಈ ಲೋಕದಲ್ಲಿ ಅತ್ಯಾಧುನಿಕವಾಗಿರುವುದನ್ನು ತಿಳಿದುಕೊಂಡು, ಅದನ್ನೇ ಬಳಸಬೇಕೆಂಬ ಉದ್ದೇಶದಿಂದ ಅವರು ಈ ವಿಕಸನಗಳನ್ನು ವಿನಿಯೋಗಿಸುವುದಿಲ್ಲ. ಅದಕ್ಕೆ ಬದಲಾಗಿ, ಅಂತಹ ವಿಕಸನಗಳು ತಮ್ಮ ಸಾರುವ ನೇಮಕವನ್ನು ತುಂಬ ಪರಿಣಾಮಕಾರಿಯಾಗಿ ನಡೆಸಲು ಸಾಧ್ಯಮಾಡುವುದೊ ಎಂಬ ಸಂಗತಿಯೇ ಅವರ ಪ್ರಥಮ ಮತ್ತು ಪ್ರಧಾನ ಆಸಕ್ತಿಯಾಗಿದೆ.
21. ನಮಗೆ ಯಾವ ದೃಢಭರವಸೆಯಿರಸಾಧ್ಯವಿದೆ?
21 ‘ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಸಾರಲಾಗುವದು’ ಎಂದು ಯೇಸು ಮುಂತಿಳಿಸಿದ್ದನು. (ಮತ್ತಾಯ 24:14) ಆರಂಭದ ಕ್ರೈಸ್ತರು ಆ ಪ್ರವಾದನೆಯು ನೆರವೇರುವುದನ್ನು ನೋಡಿದಂತೆಯೇ, ನಾವು ಕೂಡ ಅದನ್ನು ಇಂದು ವಿಸ್ತಾರವಾದ ಪ್ರಮಾಣದಲ್ಲಿ ನೋಡುತ್ತಿದ್ದೇವೆ. ಕೆಲಸದ ಪ್ರಮಾಣ ಮತ್ತು ಕಷ್ಟದ ಎದುರಿನಲ್ಲಿ, ಅನುಕೂಲ ಮತ್ತು ಅನನುಕೂಲವಾದ ಸಮಯಗಳಲ್ಲಿ, ಬದಲಾಗುತ್ತಿರುವ ನಿಯಮಗಳು ಮತ್ತು ಮನೋಭಾವಗಳ ಮಧ್ಯದಲ್ಲಿ, ಯುದ್ಧ ಮತ್ತು ಶಾಂತಿಯ ಸಮಯದಲ್ಲಿ, ಹಾಗೂ ಎಲ್ಲ ರೀತಿಯ ತಾಂತ್ರಿಕ ಅಭಿವೃದ್ಧಿಯ ನಡುವೆ ಸುವಾರ್ತೆಯು ಸಾರಲ್ಪಟ್ಟಿತ್ತು ಮತ್ತು ಈಗಲೂ ಸಾರಲ್ಪಡುತ್ತಿದೆ. ಇದೆಲ್ಲವೂ ನಿಮ್ಮಲ್ಲಿ ಯೆಹೋವನ ವಿವೇಕ ಮತ್ತು ಮುನ್ನರಿವಿಗಾಗಿ ಭಯಭಕ್ತಿಯನ್ನು ಹುಟ್ಟಿಸುವುದಿಲ್ಲವೊ? ಸಾರುವ ಕೆಲಸವು, ಯೆಹೋವನ ವೇಳಾಪಟ್ಟಿಗನುಸಾರವಾಗಿ ಸರಿಯಾದ ಸಮಯದಲ್ಲಿ ಪೂರ್ಣಗೊಳ್ಳುವುದು ಮತ್ತು ನೀತಿವಂತರಿಗೆ ಆಶೀರ್ವಾದಗಳನ್ನು ತರುತ್ತಾ ಆತನ ಪ್ರೀತಿಪರ ಉದ್ದೇಶವು ಪೂರೈಸಲ್ಪಡುವುದೆಂದು ನಾವು ಖಂಡಿತವಾಗಿಯೂ ಖಾತ್ರಿಯಿಂದಿರಸಾಧ್ಯವಿದೆ. ಮತ್ತು ನೀತಿವಂತರು ಇದೇ ಭೂಮಿಯಲ್ಲಿ ಶಾಶ್ವತವಾಗಿ ವಾಸಿಸುವರು. (ಕೀರ್ತನೆ 37:29; ಹಬಕ್ಕೂಕ 2:3) ನಾವು ನಮ್ಮ ಜೀವಿತಗಳನ್ನು ಯೆಹೋವನ ಉದ್ದೇಶಗಳೊಂದಿಗೆ ಸುಸಂಗತಗೊಳಿಸುವಲ್ಲಿ, ನಾವೂ ಅವರಲ್ಲಿ ಒಬ್ಬರಾಗಿರುವೆವು.—1 ತಿಮೊಥೆಯ 4:16.
[ಅಧ್ಯಯನ ಪ್ರಶ್ನೆಗಳು]
a ಈ ಎರಡೂ ಮೆಸ್ಸೀಯ ಸಂಬಂಧಿತ ಪ್ರವಾದನೆಗಳ ಸವಿಸ್ತಾರವಾದ ವಿವರಣೆಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ ನಿತ್ಯಜೀವಕ್ಕೆ ನಡಿಸುವ ಜ್ಞಾನ ಎಂಬ ಪುಸ್ತಕದ, 36, 97, ಮತ್ತು 98-107ನೆಯ ಪುಟಗಳನ್ನು ನೋಡಿರಿ.
ಪುನರ್ವಿಮರ್ಶೆಗಾಗಿ ಅಂಶಗಳು
◻ ಸುವಾರ್ತೆಯನ್ನು ಸಾರುವುದು ಒಂದು ಪಂಥಾಹ್ವಾನಕಾರಿ ನೇಮಕವಾಗಿ ಪರಿಣಮಿಸಿರುವುದು ಹೇಗೆ?
◻ ಸರಕಾರದ ಏರ್ಪಾಡುಗಳು ಮತ್ತು ಸಾಪೇಕ್ಷ ಸಾಮಾಜಿಕ ಶಾಂತಿಯ ಅವಧಿಗಳಿಂದ, ಕ್ರೈಸ್ತರ ಕೆಲಸಕ್ಕೆ ಹೇಗೆ ಲಾಭವಾಗಿದೆ?
◻ ಸಾರುವ ಕೆಲಸದ ಮೇಲೆ ಯೆಹೋವನ ಆಶೀರ್ವಾದವು, ಭವಿಷ್ಯತ್ತಿನ ಯಾವ ವಿಕಸನಗಳ ಕುರಿತು ನಮಗೆ ಆಶ್ವಾಸನೆಯನ್ನು ನೀಡುತ್ತದೆ?