ದೇವರು ಕಾರ್ಯವೆಸಗುವಾಗ ನೀವು ರಕ್ಷಿಸಲ್ಪಡುವಿರೊ?
“ಆ ದಿನಗಳು ಮೊಟಕುಗೊಳಿಸಲ್ಪಡದಿದ್ದರೆ, ಯಾವ ನರಜೀವಿಗಳೂ ರಕ್ಷಿಸಲ್ಪಡರು; ಆದರೆ ಆಯ್ದುಕೊಳ್ಳಲ್ಪಟ್ಟವರ ಕಾರಣದಿಂದ ಆ ದಿನಗಳು ಮೊಟಕುಗೊಳಿಸಲ್ಪಡುವುವು.”—ಮತ್ತಾಯ 24:22, NW.
1, 2. (ಎ) ನಮ್ಮ ಭವಿಷ್ಯತ್ತಿನ ವಿಷಯದಲ್ಲಿ ಆಸಕ್ತರಾಗಿರುವುದು ಸ್ವಾಭಾವಿಕವೇಕೆ? (ಬಿ) ಸ್ವಾಭಾವಿಕ ಆಸಕ್ತಿಯು ಯಾವ ಮಹತ್ವದ ಪ್ರಶ್ನೆಗಳಲ್ಲಿ ಒಳಗೂಡಿದ್ದಿರಬಹುದು?
ನಿಮಗೆ ನಿಮ್ಮಲ್ಲಿ ಎಷ್ಟು ಆಸಕ್ತಿಯಿದೆ? ಇಂದು ಅನೇಕರು ಅಹಂಭಾವದಿಂದಿದ್ದು ಸ್ವಪ್ರಯೋಜನಾಸಕ್ತಿಯನ್ನು ವೈಪರೀತ್ಯಗಳಿಗೆ ಒಯ್ಯುತ್ತಾರೆ. ಆದರೂ ಬೈಬಲು, ನಮ್ಮ ಮೇಲೆ ಯಾವುದು ಪರಿಣಾಮಬೀರುತ್ತದೋ ಅದರಲ್ಲಿ ಯೋಗ್ಯವಾದ ಆಸಕ್ತಿಯನ್ನು ಖಂಡಿಸುವುದಿಲ್ಲ. (ಎಫೆಸ 5:33) ಇದರಲ್ಲಿ, ನಾವು ನಮ್ಮ ಭವಿಷ್ಯತ್ತಿನಲ್ಲಿ ಆಸಕ್ತರಾಗಿರುವುದು ಒಳಗೂಡಿದೆ. ಆದಕಾರಣ ನಿಮ್ಮ ಭವಿಷ್ಯತ್ತು ಏನನ್ನು ಒಳಗೊಂಡಿದೆ ಎಂದು ನೀವು ತಿಳಿಯಲಿಚ್ಛಿಸುವುದು ಸ್ವಾಭಾವಿಕ. ನಿಮಗೆ ಆಸಕ್ತಿಯಿದೆಯೆ?
2 ಯೇಸುವಿನ ಅಪೊಸ್ತಲರಿಗೆ ತಮ್ಮ ಭವಿಷ್ಯತ್ತಿನಲ್ಲಿ ಅಂತಹ ಆಸಕ್ತಿಯೊಂದಿತ್ತೆಂದು ನಮಗೆ ಖಾತರಿಯಿರಸಾಧ್ಯವಿದೆ. (ಮತ್ತಾಯ 19:27) ಅವರಲ್ಲಿ ನಾಲ್ವರು ಆಲಿವ್ಸ್ ಗುಡ್ಡದ ಮೇಲೆ ಯೇಸುವಿನೊಂದಿಗೆ ಇದ್ದುದಕ್ಕೆ ಅದೊಂದು ಕಾರಣಭೂತವಾದ ಸಂಗತಿಯಾಗಿದ್ದಿರಬಹುದು. ಅವರು ಕೇಳಿದ್ದು: “ಈ ವಿಷಯಗಳು ಯಾವಾಗ ಆಗುವುವು, ಮತ್ತು ಈ ವಿಷಯಗಳೆಲ್ಲ ಸಮಾಪ್ತಿಗೆ ಬರಲು ನಿಯಾಮಕವಾಗಿರುವುದಕ್ಕಿರುವ ಆ ಸೂಚನೆ ಏನಾಗಿರುವುದು?” (ಮಾರ್ಕ 13:4, NW) ಯೇಸು ಭವಿಷ್ಯತ್ತಿನಲ್ಲಿ ಸ್ವಾಭಾವಿಕವಾದ ಆಸಕ್ತಿ—ಅವರ ಮತ್ತು ನಮ್ಮ ಆಸಕ್ತಿ—ಯನ್ನು ಅಲಕ್ಷ್ಯಮಾಡಲಿಲ್ಲ. ತನ್ನ ಹಿಂಬಾಲಕರ ಮೇಲೆ ಅದು ಹೇಗೆ ಪರಿಣಾಮ ಬೀರುವುದೆಂದು ಮತ್ತು ಅಂತ್ಯ ಪರಿಣಾಮವು ಏನಾಗುವುದೆಂದು ಅವನು ಪದೇ ಪದೇ ಎತ್ತಿ ತೋರಿಸಿದನು.
3. ಯೇಸುವಿನ ಉತ್ತರವನ್ನು ನಾವು ನಮ್ಮ ದಿನಗಳಿಗೆ ಸಂಬಂಧಿಸುವುದೇಕೆ?
3 ಯೇಸುವಿನ ಉತ್ತರವು ನಮ್ಮ ಸಮಯದಲ್ಲಿ ಒಂದು ಪ್ರಧಾನ ನೆರವೇರಿಕೆಯಿರುವ ಪ್ರವಾದನೆಯೊಂದನ್ನು ವಿವರಿಸಿತು. ನಾವಿದನ್ನು ನಮ್ಮ ಶತಕದ ಲೋಕಯುದ್ಧಗಳು ಮತ್ತು ಇತರ ಘರ್ಷಣೆಗಳಿಂದ, ಅಸಂಖ್ಯಾತ ಜೀವಗಳನ್ನು ನಂದಿಸುವ ಭೂಕಂಪಗಳಿಂದ, ಕಾಯಿಲೆ ಮತ್ತು ಮರಣವನ್ನು ತರುವ ಆಹಾರದ ಅಭಾವಗಳಿಂದ, ಮತ್ತು ವ್ಯಾಧಿ—1918ರ ಸರ್ವವ್ಯಾಪಿ ವ್ಯಾಧಿಯಾದ ಸ್ಪ್ಯಾನಿಷ್ ಇನ್ಫ್ಲುಎನ್ಸದಿಂದ ಹಿಡಿದು ಪ್ರಚಲಿತವಾಗಿರುವ ಏಡ್ಸ್ ಪೀಡೆ—ಗಳಿಂದ ನಾವು ಇದನ್ನು ನೋಡಬಲ್ಲೆವು. ಆದರೂ, ಯೇಸುವಿನ ಉತ್ತರದಲ್ಲಿ ಹೆಚ್ಚಿನದರ ಒಂದು ನೆರವೇರಿಕೆಯು, ಸಾ.ಶ. 70ರಲ್ಲಿ ರೋಮನರಿಂದಾದ ಯೆರೂಸಲೇಮಿನ ನಾಶನವನ್ನು ಒಳಗೂಡಿಸಿ ಅದಕ್ಕೆ ನಡೆಸಿದ ಸಮಯದಲ್ಲಿಯೂ ಆಗಿತ್ತು. ಯೇಸು ತನ್ನ ಶಿಷ್ಯರನ್ನು ಎಚ್ಚರಿಸಿದ್ದು: “ಆದರೆ ನಿಮ್ಮ ವಿಷಯದಲ್ಲಿ ನೋಡಿಕೊಳ್ಳಿರಿ. ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳಕೊಂಡುಹೋಗುವರು; ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು; ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದೆಯೂ ಅರಸುಗಳ ಮುಂದೆಯೂ ಸಾಕ್ಷಿಗಳಾಗಿ ನಿಲ್ಲಿಸುವರು.”—ಮಾರ್ಕ 13:9.
ಯೇಸು ಮುಂತಿಳಿಸಿದ ವಿಷಯ, ಮತ್ತು ಸಂಭವಿಸಿದ ವಿಷಯ
4. ಯೇಸುವಿನ ಉತ್ತರದಲ್ಲಿ ಒಳಗೂಡಿರುವ ಕೆಲವು ಎಚ್ಚರಿಕೆಗಳಾವುವು?
4 ತನ್ನ ಶಿಷ್ಯರನ್ನು ಇತರರು ಹೇಗೆ ಉಪಚರಿಸುವರು ಎಂಬುದಕ್ಕಿಂತ ಹೆಚ್ಚಿನದ್ದನ್ನು ಯೇಸು ಮುಂತಿಳಿಸಿದನು. ಅವರು ತಾವಾಗಿ ಹೇಗೆ ವರ್ತಿಸಬೇಕೆಂಬುದರ ಕುರಿತೂ ಅವನು ಅವರನ್ನು ಎಚ್ಚರಿಸಿದನು. ದೃಷ್ಟಾಂತಕ್ಕೆ: “ಇದಲ್ಲದೆ ಹಾಳುಮಾಡುವ ಅಸಹ್ಯವಸ್ತುವು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವದನ್ನು ನೀವು ಕಾಣುವಾಗ (ಇದನ್ನು ಓದುವವನು ತಿಳುಕೊಳ್ಳಲಿ) ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ.” (ಮಾರ್ಕ 13:14) ಲೂಕ 21:20ರಲ್ಲಿ ಇದಕ್ಕೆ ಸಮಾನಾಂತರವಾದ ವೃತ್ತಾಂತವು ಹೇಳುವುದು: “ಆದರೆ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ.” ಹಾಗಾದರೆ ಪ್ರಥಮ ನೆರವೇರಿಕೆಯಲ್ಲಿ ಅದು ಹೇಗೆ ನಿಷ್ಕೃಷ್ಟವಾಗಿ ಪರಿಣಮಿಸಿತು?
5. ಸಾ.ಶ. 66ರಲ್ಲಿ ಯೂದಾಯದ ಯೆಹೂದ್ಯರ ಮಧ್ಯೆ ಏನು ಸಂಭವಿಸಿತು?
5 ದಿ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯ (1982) ನಮಗನ್ನುವುದು: “ರೋಮನ್ ನಿಯಂತ್ರಣದ ಕೆಳಗೆ ಯೆಹೂದ್ಯರು ಜಾಸ್ತಿ ಮೊಂಡರಾಗುತ್ತ ಹೋದರು ಮತ್ತು ಆಡಳಿತಗಾರರು ಜಾಸ್ತಿ ಹಿಂಸಾಚಾರಿಗಳು, ಕ್ರೂರರು ಮತ್ತು ಅಪ್ರಾಮಾಣಿಕರೂ ಆಗಿದ್ದರು. ಬಹಿರಂಗವಾದ ದಂಗೆಯು ಕ್ರಿ.ಶ. 66ರಲ್ಲಿ ಎದ್ದಿತು. . . . ಸೆಲಟರು ಮಸಾಡವನ್ನು ಸ್ವಾಧೀನಪಡಿಸಿಕೊಂಡಾಗ ಯುದ್ಧವು ಆರಂಭಗೊಂಡಿತು ಮತ್ತು ಅನಂತರ ಮೆನಕಮ್ನ ಕೈಕೆಳಗೆ ಅವರು ಯೆರೂಸಲೇಮಿಗೆ ದಂಡೆತ್ತಿಹೋದರು. ಏಕಕಾಲಿಕವಾಗಿ, ಸರಕಾರ ನಗರವಾದ ಸೀಸರೀಯದ ಯೆಹೂದ್ಯರು ಸಂಹರಿಸಲ್ಪಟ್ಟರು, ಮತ್ತು ಈ ಹೇಯ ಕೃತ್ಯದ ವರ್ತಮಾನವು ದೇಶದಲ್ಲೆಲ್ಲ ಹಬ್ಬಿತು. ದಂಗೆಯ 1ನೆಯ ವರ್ಷದಿಂದ 5ನೆಯ ವರ್ಷದ ತನಕ ಹೊಸ ನಾಣ್ಯಗಳನ್ನು ಟಂಕಒತ್ತಲಾಯಿತು.”
6. ಯೆಹೂದಿ ದಂಗೆಯು ರೋಮನರಿಂದ ಯಾವ ಪ್ರತಿವರ್ತನೆಯನ್ನು ಉಂಟುಮಾಡಿತು?
6 ಸೆಸ್ಟಿಯಸ್ ಗ್ಯಾಲಸನ ಕೈಕೆಳಗಿನ ರೋಮನ್ ಹನ್ನೆರಡನೆಯ ಸೈನ್ಯವು ಸಿರಿಯದಿಂದ ದಂಡೆತ್ತಿ ಬಂದು, ಗಲಿಲಾಯ ಮತ್ತು ಯೂದಾಯವನ್ನು ಧ್ವಂಸಮಾಡಿ, ಬಳಿಕ ರಾಜಧಾನಿಗೆ ಆಕ್ರಮಣಮಾಡಿ, “ಪವಿತ್ರನಗರವಾಗಿರುವ ಯೆರೂಸಲೇಮಿನ” ಮೇಲ್ಭಾಗವನ್ನು ಕೂಡ ವಶಪಡಿಸಿಕೊಂಡಿತು. (ನೆಹೆಮೀಯ 11:1; ಮತ್ತಾಯ 4:5; 5:35; 27:53) ವಿಕಸನಗಳನ್ನು ಸಾರಾಂಶಿಸುತ್ತ, ಯೆರೂಸಲೇಮಿನ ರೋಮನ್ ಮುತ್ತಿಗೆ (ಇಂಗ್ಲಿಷ್) ಎಂಬ ಗ್ರಂಥವು ಹೇಳುವುದು: “ಗೋಡೆಯನ್ನು ಹತ್ತಲು ರೋಮನರು ಐದು ದಿನಗಳಲ್ಲಿ ಪ್ರಯತ್ನಿಸಿದರೂ ಪುನಃ ಪುನಃ ಹಿಮ್ಮೆಟ್ಟಿಸಲ್ಪಟ್ಟರು. ಕೊನೆಗೆ, ಅಸ್ತ್ರಗಳ ಸುರಿಮಳೆಯಿಂದ ಸೋಲಿಸಲ್ಪಟ್ಟವರಾಗಿ, ನಗರ ಸಂರಕ್ಷಕರು ಹೋರಾಡುವುದನ್ನು ನಿಲ್ಲಿಸಿದರು. ಒಂದು ಟೆಸ್ಟ್ಯೂಡೊ—ತಮ್ಮನ್ನು ರಕ್ಷಿಸಿಕೊಳ್ಳಲಿಕ್ಕಾಗಿ ಗುರಾಣಿಗಳನ್ನು ತಮ್ಮ ತಲೆಗಳ ಮೇಲೆ ಸಿಕ್ಕಿಸಿಕೊಳ್ಳುವ ವಿಧಾನ—ವನ್ನು ರಚಿಸಿಕೊಳ್ಳುತ್ತ, ರೋಮನ್ ಸೈನಿಕರು ಗೋಡೆಯ ಕೆಳಗಿನಿಂದ ಸುರಂಗ ತೋಡಿ, ದ್ವಾರಕ್ಕೆ ಬೆಂಕಿಹಚ್ಚಲು ಪ್ರಯತ್ನಿಸಿದರು. ಭಯಂಕರ ಗಾಬರಿಯು ನಗರ ಸಂರಕ್ಷಕರನ್ನು ಆವರಿಸಿತು.” ನಗರದೊಳಗಿನ ಕ್ರೈಸ್ತರು ಯೇಸುವಿನ ಮಾತುಗಳನ್ನು ಜ್ಞಾಪಿಸಿಕೊಂಡು, ಅಸಹ್ಯ ವಸ್ತುವೊಂದು ಪವಿತ್ರ ಸ್ಥಾನದಲ್ಲಿ ನಿಂತಿರುತ್ತದೆಂದು ಗ್ರಹಿಸಶಕ್ತರಾದರು.a ಆದರೆ ನಗರವು ಮುತ್ತಿಗೆಹಾಕಲ್ಪಟ್ಟಿದ್ದರಿಂದ, ಯೇಸುವು ಬುದ್ಧಿಹೇಳಿದಂತೆ, ಇಂತಹ ಕ್ರೈಸ್ತರು ಓಡಿಹೋಗಸಾಧ್ಯವಾಗುವುದಾದರೂ ಹೇಗೆ?
7. ಸಾ.ಶ. 66ರಲ್ಲಿ ವಿಜಯವು ಇನ್ನೇನು ದೊರೆಯುತ್ತದೆಂದಿದ್ದಾಗ, ರೋಮನರು ಏನು ಮಾಡಿದರು?
7 ಇತಿಹಾಸಕಾರನಾದ ಫ್ಲೇವಿಯಸ್ ಜೋಸೀಫಸ್ ಹೇಳುವುದು: “ಸೆಸ್ಟಿಯಸ್ [ಗ್ಯಾಲಸ್], ಮುತ್ತಿಗೆ ಹಾಕಲ್ಪಟ್ಟಿದ್ದವರ ಹತಾಶೆಯನ್ನಾಗಲಿ ಜನರ ಅನಿಸಿಕೆಯನ್ನಾಗಲಿ ಅರಿಯದವನಾಗಿ, ಥಟ್ಟನೆ ತನ್ನ ಯೋಧರನ್ನು ಹಿಂದೆ ಕರೆದು, ತನಗೆ ಯಾವ ಸೋಲೂ ಸಂಭವಿಸದಿದ್ದರೂ ಆಶೆ ತ್ಯಜಿಸಿ, ಸಕಲ ವಿವೇಚನೆಗೆ ವ್ಯತಿರಿಕ್ತವಾಗಿ ನಗರವನ್ನು ಬಿಟ್ಟುಹೋದನು.” (ದ ಜ್ಯೂವಿಷ್ ವಾರ್, II, 540 [xix, 7]) ಗ್ಯಾಲಸನು ಹಿಂದೆ ಹೋದದ್ದೇಕೆ? ಕಾರಣವು ಏನೇ ಇರಲಿ, ಅವನ ಹಿಂದಕ್ಕೆ ಹೋಗುವಿಕೆಯು, ಕ್ರೈಸ್ತರು ಯೇಸುವಿನ ಆಜ್ಞೆಗೆ ವಿಧೇಯರಾಗಿ ಬೆಟ್ಟಗಳಿಗೆ ಮತ್ತು ಸುರಕ್ಷಿತತೆಗೆ ಓಡಿಹೋಗುವಂತೆ ಅನುಮತಿಸಿತು.
8. ಯೆರೂಸಲೇಮಿನ ವಿರುದ್ಧವಾದ ರೋಮನ್ ಪ್ರಯತ್ನದ ದ್ವಿತೀಯ ಭಾಗವು ಯಾವುದಾಗಿತ್ತು, ಮತ್ತು ಪಾರಾಗಿ ಉಳಿದವರು ಏನನ್ನು ಅನುಭವಿಸಿದರು?
8 ವಿಧೇಯತೆಯು ಜೀವರಕ್ಷಕವಾಗಿತ್ತು. ಬೇಗನೆ, ದಂಗೆಯನ್ನು ಜಜ್ಜುಬಡಿಯಲು ರೋಮನರು ಕಾರ್ಯಕೈಕೊಂಡರು. ಜನರಲ್ ಟೈಟಸನ ಕೈಕೆಳಗಿನ ಆ ದಂಡಯಾತ್ರೆಯು, ಸಾ.ಶ. 70ರ ಎಪ್ರಿಲ್ನಿಂದ ಆಗಸ್ಟ್ ತನಕ ನಡೆದ ಯೆರೂಸಲೇಮಿನ ಮುತ್ತಿಗೆಯಲ್ಲಿ ಪರಾಕಾಷ್ಠೆಗೇರಿತು. ಯೆಹೂದ್ಯರು ಕಷ್ಟಾನುಭವಿಸಿದ ವಿಧದ ಜೋಸೀಫಸನ ವರ್ಣನೆಯನ್ನು ಓದುವುದು ಒಬ್ಬನ ರಕ್ತವನ್ನು ತಣ್ಣಗಾಗಿಸುತ್ತದೆ. ರೋಮನರೊಂದಿಗೆ ಹೋರಾಡಿದಾಗ ಸತ್ತವರಲ್ಲದೆ, ಇತರ ಯೆಹೂದ್ಯರು ಯೆಹೂದ್ಯರ ಪ್ರತಿದ್ವಂದಿ ತಂಡಗಳಿಂದ ಸಂಹರಿಸಲ್ಪಟ್ಟರು, ಮತ್ತು ಹೊಟ್ಟೆಗಿಲ್ಲದಿರುವಿಕೆಯು ನರಭಕ್ಷಣಕ್ಕೆ ನಡೆಸಿತು. ರೋಮನ್ ವಿಜಯದ ಸಮಯದೊಳಗೆ, 11,00,000 ಮಂದಿ ಯೆಹೂದ್ಯರು ಸತ್ತಿದ್ದರು.b ಪಾರಾಗಿ ಉಳಿದ 97,000 ಮಂದಿಯಲ್ಲಿ ಕೆಲವರನ್ನು ಒಡನೆಯೇ ಕೊಲ್ಲಲಾಯಿತು; ಇತರರನ್ನು ಗುಲಾಮರನ್ನಾಗಿ ಮಾಡಲಾಯಿತು. ಜೋಸೀಫಸನು ಹೇಳುವುದು: “ಹದಿನೇಳು ವರ್ಷ ವಯಸ್ಸಿನ ಮೇಲಿನವರಿಗೆ ಬೇಡಿಹಾಕಿ ಈಜಿಪ್ಟ್ನಲ್ಲಿ ಕಠಿನ ಸಜೆಗೆ ಕಳುಹಿಸಲಾದಾಗ, ಮಹಾಸಂಖ್ಯೆಗಳಲ್ಲಿ ಇತರರು ಟೈಟಸನಿಂದ ಪ್ರಾಂತ್ಯಗಳಿಗೆ ನೀಡಲ್ಪಟ್ಟರು. ಅಲ್ಲಿ ಅವರು ವಧಾಂಗಣಗಳಲ್ಲಿ ಖಡ್ಗದಿಂದ ಅಥವಾ ಕಾಡುಮೃಗಗಳಿಂದ ಸತ್ತರು.” ಈ ಪ್ರತ್ಯೇಕಿಸುವಿಕೆಯು ಸಂಭವಿಸುತ್ತಿದ್ದಾಗಲೂ 11,000 ಕೈದಿಗಳು ಹೊಟ್ಟೆಗಿಲ್ಲದೆ ಸತ್ತರು.
9. ಯೆಹೂದ್ಯರಿಗಾದ ಪರಿಣಾಮವನ್ನು ಕ್ರೈಸ್ತರು ಏಕೆ ಅನುಭವಿಸಲಿಲ್ಲ, ಆದರೆ ಯಾವ ಪ್ರಶ್ನೆಗಳು ಉಳಿಯುತ್ತವೆ?
9 ರೋಮನ್ ಸೈನ್ಯವು ಹಿಂದಿರುಗುವುದಕ್ಕೆ ಮೊದಲು ತಾವು ಕರ್ತನ ಎಚ್ಚರಿಕೆಗೆ ವಿಧೇಯರಾಗಿ ನಗರದಿಂದ ಪಲಾಯನ ಮಾಡಿದ್ದುದಕ್ಕೆ ಕ್ರೈಸ್ತರು ಕೃತಜ್ಞರಾಗಿರಸಾಧ್ಯವಿತ್ತು. ಹೀಗೆ ಅವರು, ಯೇಸುವು ಯಾವುದನ್ನು, ‘ಲೋಕಾದಿಯಿಂದ ಅಂದಿನ ತನಕ’ ಯೆರೂಸಲೇಮಿನ ಮೇಲೆ ‘ಸಂಭವಿಸಿದ್ದಿರದ ಅಥವಾ ಪುನಃ ಸಂಭವಿಸದೆ ಇರುವ ಮಹಾ ಸಂಕಟ’ವೆಂದು ಹೇಳಿದನೊ ಅದರ ಭಾಗದಿಂದ ರಕ್ಷಿಸಲ್ಪಟ್ಟರು. (ಮತ್ತಾಯ 24:21, NW) ಯೇಸು ಕೂಡಿಸಿ ಹೇಳಿದ್ದು: “ವಾಸ್ತವವಾಗಿ, ಆ ದಿನಗಳು ಮೊಟಕುಗೊಳಿಸಲ್ಪಡದಿದ್ದರೆ, ಯಾವ ನರಜೀವಿಗಳೂ ರಕ್ಷಿಸಲ್ಪಡರು; ಆದರೆ ಆಯ್ದುಕೊಳ್ಳಲ್ಪಟ್ಟವರ ಕಾರಣದಿಂದ ಆ ದಿನಗಳು ಮೊಟಕುಗೊಳಿಸಲ್ಪಡುವುವು.” (ಮತ್ತಾಯ 24:22, NW) ಅದರ ಅರ್ಥವು ಆಗ ಏನಾಗಿತ್ತು, ಮತ್ತು ಈಗ ಅದರ ಅರ್ಥವೇನು?
10. ನಾವು ಈ ಹಿಂದೆ ಮತ್ತಾಯ 24:22ನ್ನು ಹೇಗೆ ವಿವರಿಸಿದ್ದೇವೆ?
10 ಈ ಹಿಂದೆ, ಆ ‘ರಕ್ಷಿಸಲ್ಪಡಲಿದ್ದ ನರಜೀವಿಯು’ ಸಾ.ಶ. 70ರಲ್ಲಿ ಯೆರೂಸಲೇಮಿನ ಮೇಲೆ ಬಂದ ಸಂಕಟದಿಂದ ಪಾರಾದ ಯೆಹೂದ್ಯರನ್ನು ಸೂಚಿಸಿತೆಂದು ವಿವರಿಸಲಾಗಿತ್ತು. ಕ್ರೈಸ್ತರು ಪಲಾಯನಗೈದಿದ್ದರಿಂದ, ರೋಮನರು ಕ್ಷಿಪ್ರ ನಾಶನವನ್ನು ತರುವಂತೆ ದೇವರು ಬಿಡಸಾಧ್ಯವಿತ್ತು. ಇನ್ನೊಂದು ಮಾತಿನಲ್ಲಿ, “ಆಯ್ದುಕೊಳ್ಳಲ್ಪಟ್ಟವರು” ಅಪಾಯದಿಂದ ತಪ್ಪಿದ್ದ ನಿಜತ್ವದ ಕಾರಣದಿಂದ, ಸಂಕಟದ ದಿನಗಳನ್ನು ಮೊಟಕುಗೊಳಿಸಿ, ಕೆಲವು ಯೆಹೂದಿ “ನರಜೀವಿಗಳು” ರಕ್ಷಿಸಲ್ಪಡುವಂತೆ ಬಿಡಸಾಧ್ಯವಿತ್ತು. ಆ ಪಾರಾದ ಯೆಹೂದ್ಯರು ನಮ್ಮ ದಿನದಲ್ಲಿ ಬರುವ ಮಹಾಸಂಕಟದಿಂದ ಪಾರಾಗುವವರನ್ನು ಮುನ್ಸೂಚಿಸಿದರೆಂದು ಅಭಿಪ್ರಯಿಸಲಾಗಿತ್ತು.—ಪ್ರಕಟನೆ 7:14.
11. ಮತ್ತಾಯ 24:22ರ ವಿವರಣೆಯನ್ನು ನಾವು ಪುನಃ ಪರಿಗಣಿಸಬೇಕೆಂದು ತೋರುತ್ತದೇಕೆ?
11 ಆದರೆ ಆ ವಿವರಣೆಯು ಸಾ.ಶ. 70ರಲ್ಲಿ ಏನು ಸಂಭವಿಸಿತೊ ಅದಕ್ಕೆ ಹೊಂದಿಕೆಯಾಗಿದೆಯೆ? ಸಂಕಟದಿಂದ “ನರಜೀವಿಗಳು” “ರಕ್ಷಿಸಲ್ಪಡ”ಲಿದ್ದರೆಂದು ಯೇಸು ಹೇಳಿದನು. ಪಾರಾಗಿ ಉಳಿದ 97,000 ಮಂದಿಯಲ್ಲಿ ಸಾವಿರಾರು ಜನರು ಬೇಗನೆ ಉಪವಾಸಬಿದ್ದು ಸತ್ತ ಅಥವಾ ವಧಾಂಗಣಗಳಲ್ಲಿ ಸಂಹರಿಸಲ್ಪಟ್ಟ ನಿಜತ್ವದ ವೀಕ್ಷಣದಲ್ಲಿ, ಅವರನ್ನು ವರ್ಣಿಸಲು ‘ರಕ್ಷಿಸಲ್ಪಟ್ಟರು’ ಎಂಬ ಪದವನ್ನು ನೀವು ಉಪಯೋಗಿಸುವಿರೊ? ಸೀಸರೀಯದ ಒಂದು ವಧಾಂಗಣದ ಕುರಿತು ಜೋಸೀಫಸನು ಹೇಳುವುದು: “ಕಾಡುಮೃಗಗಳೊಂದಿಗೆ ಮಾಡಿದ ಹೋರಾಟಗಳಲ್ಲಿ ಅಥವಾ ಒಬ್ಬರೊಡನೊಬ್ಬರು ಮಾಡಿದ ಹೋರಾಟಗಳಲ್ಲಿ ಸತ್ತವರ ಅಥವಾ ಜೀವಸಹಿತ ಸುಡಲ್ಪಟ್ಟವರ ಸಂಖ್ಯೆ 2,500ನ್ನು ಮೀರಿತು.” ಅವರು ಮುತ್ತಿಗೆಯಲ್ಲಿ ಸಾಯದಿದ್ದರೂ, ಅವರು “ರಕ್ಷಿಸಲ್ಪಡ”ಲಿಲ್ಲವೆಂದೇ ಹೇಳಬೇಕು. ಮತ್ತು ಬರಲಿರುವ “ಮಹಾ ಸಂಕಟ”ದಲ್ಲಿ ಸಂತೋಷಿತರಾಗಿ ಪಾರಾಗಿ ಉಳಿಯುವವರಿಗೆ ಅವರು ಸದೃಶರೆಂದು ಯೇಸು ಅವರನ್ನು ಪರಿಗಣಿಸುವನೊ?
ನರಜೀವಿಗಳು ರಕ್ಷಿಸಲ್ಪಡುವುದು—ಹೇಗೆ?
12. ದೇವರು ಆಸಕ್ತನಾಗಿದ್ದ ಒಂದನೆಯ ಶತಮಾನದ “ಆಯ್ದುಕೊಳ್ಳಲ್ಪಟ್ಟವರು” ಯಾರಾಗಿದ್ದರು?
12 ಸಾ.ಶ. 70ರೊಳಗೆ, ದೇವರು ಪ್ರಾಕೃತಿಕ ಯೆಹೂದ್ಯರನ್ನು ತನ್ನ ಆಯ್ದುಕೊಳ್ಳಲ್ಪಟ್ಟ ಜನರೆಂಬಂತೆ ವೀಕ್ಷಿಸಲಿಲ್ಲ. ದೇವರು ಆ ಜನಾಂಗವನ್ನು ತಳ್ಳಿಬಿಟ್ಟಿದ್ದನೆಂದೂ ಅದರ ರಾಜಧಾನಿ ನಗರ, ದೇವಾಲಯ ಮತ್ತು ಆರಾಧನಾ ವ್ಯವಸ್ಥೆಯು ಕೊನೆಗೊಳ್ಳುವಂತೆ ಬಿಡುವನೆಂದೂ ಯೇಸು ತೋರಿಸಿದನು. (ಮತ್ತಾಯ 23:37-24:2) ದೇವರು ಒಂದು ಹೊಸ ಜನಾಂಗವನ್ನು, ಆತ್ಮಿಕ ಇಸ್ರಾಯೇಲನ್ನು ಆರಿಸಿಕೊಂಡನು. (ಅ. ಕೃತ್ಯಗಳು 15:14; ರೋಮಾಪುರ 2:28, 29; ಗಲಾತ್ಯ 6:16) ಇದು ಎಲ್ಲ ಜನಾಂಗಗಳಿಂದ ಆರಿಸಲ್ಪಟ್ಟು ಪವಿತ್ರಾತ್ಮದಿಂದ ಅಭಿಷೇಕ ಹೊಂದಿದ ಪುರುಷರು ಮತ್ತು ಸ್ತ್ರೀಯರಿಂದ ರಚಿತವಾಗಿತ್ತು. (ಮತ್ತಾಯ 22:14; ಯೋಹಾನ 15:19; ಅ. ಕೃತ್ಯಗಳು 10:1, 2, 34, 35, 44, 45) ಸೆಸ್ಟಿಯಸ್ ಗ್ಯಾಲಸ್ನಿಂದಾದ ಆಕ್ರಮಣಕ್ಕೆ ಕೆಲವು ವರ್ಷಗಳಿಗೆ ಮುಂಚಿತವಾಗಿ ಪೇತ್ರನು, “ಪವಿತ್ರಾತ್ಮನಿಂದ ಪ್ರತಿಷ್ಠಿಸಲ್ಪಟ್ಟವರಾಗಿ . . . ತಂದೆಯಾದ ದೇವರ ಭವಿಷ್ಯದ್ ಜ್ಞಾನಾನುಸಾರವಾಗಿ ಆರಿಸಿಕೊಳ್ಳಲ್ಪಟ್ಟ”ವರಿಗೆ ಬರೆದನು. (ಓರೆಅಕ್ಷರಗಳು ನಮ್ಮವು.) ಅಂತಹ ಆತ್ಮಾಭಿಷಿಕ್ತರು, “ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ” ಆಗಿದ್ದರು. (ಓರೆಅಕ್ಷರಗಳು ನಮ್ಮವು.) (1 ಪೇತ್ರ 1:1, 2; 2:9) ದೇವರು ಇಂತಹ ಆಯ್ದುಕೊಳ್ಳಲ್ಪಟ್ಟವರನ್ನು, ಯೇಸುವಿನೊಂದಿಗೆ ಆಳಲು ಸ್ವರ್ಗಕ್ಕೆ ಒಯ್ಯಲಿದ್ದನು.—ಕೊಲೊಸ್ಸೆ 1:1, 2; 3:12; ತೀತ 1:1; ಪ್ರಕಟನೆ 17:14.
13. ಮತ್ತಾಯ 24:22ರಲ್ಲಿ ಯೇಸುವಿನ ಮಾತುಗಳಿಗೆ ಯಾವ ಅರ್ಥವಿದ್ದಿರಬಹುದು?
13 ಆಯ್ದುಕೊಳ್ಳಲ್ಪಟ್ಟವರ ಈ ಗುರುತಿಸುವಿಕೆಯು ಸಹಾಯಕರವಾಗಿದೆ, ಏಕೆಂದರೆ “ಆಯ್ದುಕೊಳ್ಳಲ್ಪಟ್ಟವರ ಕಾರಣದಿಂದ” ಸಂಕಟದ ದಿನಗಳು ಮೊಟಕುಗೊಳಿಸಲ್ಪಡುವುವೆಂದು ಯೇಸು ಮುಂತಿಳಿಸಿದನು. ಆ “ಕಾರಣದಿಂದ” ಎಂದು ಭಾಷಾಂತರವಾಗಿರುವ ಗ್ರೀಕ್ ಪದವನ್ನು, “ಓಸ್ಕರ” ಅಥವಾ “ಆಗಿ” ಎಂದೂ ಭಾಷಾಂತರಿಸಸಾಧ್ಯವಿದೆ. (ಮಾರ್ಕ 2:27; ಯೋಹಾನ 12:30; 1 ಕೊರಿಂಥ 8:11; 9:10, 23; 11:9; 2 ತಿಮೊಥೆಯ 2:10; ಪ್ರಕಟನೆ 2:3) ಆದಕಾರಣ ಯೇಸು, ‘ಆ ದಿನಗಳು ಮೊಟಕುಗೊಳಿಸಲ್ಪಡದಿದ್ದರೆ ಯಾವ ನರಜೀವಿಯೂ ರಕ್ಷಿಸಲ್ಪಡನು; ಆದರೆ ಆಯ್ದುಕೊಳ್ಳಲ್ಪಟ್ಟವರಿಗೋಸ್ಕರ ಆ ದಿನಗಳು ಮೊಟಕುಗೊಳಿಸಲ್ಪಡುವುವು,’ ಎಂದು ಹೇಳುತ್ತಿದ್ದಿರಸಾಧ್ಯವಿತ್ತು.c (ಮತ್ತಾಯ 24:22, NW) ಯೆರೂಸಲೇಮಿನಲ್ಲಿ ಸಿಕ್ಕಿಬಿದ್ದಿದ್ದ ಆಯ್ದುಕೊಳ್ಳಲ್ಪಟ್ಟಿದ್ದ ಕ್ರೈಸ್ತರ ಪ್ರಯೋಜನಾರ್ಥವಾಗಿ ಅಥವಾ ಅವರಿಗೆ ‘ಓಸ್ಕರ’ ಏನಾದರೂ ಸಂಭವಿಸಿತೊ?
14. ಸಾ.ಶ. 66ರಲ್ಲಿ ರೋಮನ್ ಸೈನ್ಯವು ಯೆರೂಸಲೇಮಿನಿಂದ ಅನಿರೀಕ್ಷಿತವಾಗಿ ಹಿಮ್ಮೆಟ್ಟಿದಾಗ “ನರಜೀವಿಗಳು” ಹೇಗೆ ರಕ್ಷಿಸಲ್ಪಟ್ಟರು?
14 ಸಾ.ಶ. 66ರಲ್ಲಿ, ರೋಮನರು ದೇಶದುದ್ದಕ್ಕೂ ದಂಡೆತ್ತಿ ಬಂದು, ಯೆರೂಸಲೇಮಿನ ಮೇಲ್ಭಾಗವನ್ನು ವಶಪಡಿಸಿಕೊಂಡು, ಗೋಡೆಯಡಿ ಸುರಂಗ ತೋಡಲಾರಂಭಿಸಿದರೆಂಬುದನ್ನು ಜ್ಞಾಪಿಸಿಕೊಳ್ಳಿ. ಜೋಸೀಫಸನು ಹೇಳಿಕೆ ಕೊಡುವುದು: “ಅವನು ಮುತ್ತಿಗೆಯನ್ನು ತುಸು ಕಾಲ ಬಿಡದೆ ಮುಂದುವರಿಸುತ್ತಿದ್ದರೆ ಅವನು ಕೂಡಲೆ ನಗರವನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದನು.” ನಿಮ್ಮನ್ನು ಕೇಳಿಕೊಳ್ಳಿರಿ, ‘ಬಲಾಢ್ಯವಾಗಿದ್ದ ರೋಮನ್ ಸೈನ್ಯವು ಆ ದಂಡಯಾತ್ರೆಯನ್ನು ಥಟ್ಟನೆ ತ್ಯಜಿಸಿ, “ಸಕಲ ವಿವೇಚನೆಗೆ ವ್ಯತಿರಿಕ್ತವಾಗಿ” ಏಕೆ ಹಿಮ್ಮೆಟ್ಟಬೇಕು?’ ಮಿಲಿಟರಿ ಇತಿಹಾಸದ ಅರ್ಥವಿವರಣೆಮಾಡುವ ಒಬ್ಬ ವಿಶೇಷಜ್ಞರಾದ ರೂಪರ್ಟ್ ಫರ್ನೊ ಹೇಳುವುದು: “ಗ್ಯಾಲಸನ ವಿಚಿತ್ರ ಹಾಗೂ ವಿಪತ್ಕಾರಕ ನಿರ್ಣಯಕ್ಕೆ ತಕ್ಕ ಕಾರಣವನ್ನು ಒದಗಿಸುವುದರಲ್ಲಿ ಯಾವ ಇತಿಹಾಸಕಾರನೂ ಯಶಸ್ವಿಯಾಗಿಲ್ಲ.” ಕಾರಣವು ಏನೇ ಇದ್ದಿರಲಿ, ಪರಿಣಾಮವಾಗಿ ಸಂಕಟವು ಮೊಟಕುಗೊಳಿಸಲ್ಪಟ್ಟಿತು. ರೋಮನರು ಹಿಮ್ಮೆಟ್ಟಿದಂತೆ, ಯೆಹೂದ್ಯರು ಅವರ ಮೇಲೆ ದಾಳಿಮಾಡುತ್ತ ಹೋದರು. ಆದರೆ ಸಿಕ್ಕಿಬಿದ್ದಿದ್ದ ಅಭಿಷಿಕ್ತ ಕ್ರೈಸ್ತ “ಆಯ್ದುಕೊಳ್ಳಲ್ಪಟ್ಟವರ” ವಿಷಯವೇನು? ಮುತ್ತಿಗೆಯ ಎತ್ತೋಣವು, ಸಂಕಟದ ಸಮಯದಲ್ಲಿ ಅವರನ್ನು ಬೆದರಿಸಿದ ಯಾವುದೇ ಸಂಹಾರದಿಂದ ಅವರು ರಕ್ಷಿಸಲ್ಪಟ್ಟರು ಎಂಬುದನ್ನು ಅರ್ಥೈಸಿತು. ಆದಕಾರಣ, ಸಾ.ಶ. 66ರಲ್ಲಿನ ಸಂಕಟದ ಮೊಟಕುಗೊಳಿಸುವಿಕೆಯಿಂದ ಪ್ರಯೋಜನಪಡೆದುಕೊಂಡ ಆ ಕ್ರೈಸ್ತರು, ಮತ್ತಾಯ 24:22ರಲ್ಲಿ ಹೇಳಲ್ಪಟ್ಟಿರುವ ರಕ್ಷಿಸಲ್ಪಟ್ಟ “ನರಜೀವಿಗಳು” ಆಗಿದ್ದರು.
ನಿಮ್ಮ ಭವಿಷ್ಯತ್ತಿನಲ್ಲಿ ಏನು ಕಾದಿದೆ?
15. ಮತ್ತಾಯ 24ನೆಯ ಅಧ್ಯಾಯವು ನಮ್ಮ ದಿನದಲ್ಲಿ ವಿಶೇಷ ಆಸಕ್ತಿಯದ್ದಾಗಿದೆ ಎಂದು ನೀವು ಏಕೆ ಹೇಳುವಿರಿ?
15 ಯಾವನಾದರೂ ಹೀಗೆ ಕೇಳಬಹುದು, ‘ಯೇಸುವಿನ ಮಾತುಗಳ ಈ ಸ್ಪಷ್ಟಗೊಳಿಸಲ್ಪಟ್ಟ ತಿಳಿವಳಿಕೆಯಲ್ಲಿ ನಾನೇಕೆ ವಿಶೇಷವಾಗಿ ಆಸಕ್ತನಾಗಿರಬೇಕು?’ ಒಳ್ಳೆಯದು, ಯೇಸುವಿನ ಪ್ರವಾದನೆಗೆ, ಸಾ.ಶ. 70ರ ತನಕ ಮತ್ತು ಅದನ್ನು ಸೇರಿಸಿ ಏನು ಸಂಭವಿಸಿತೊ ಅದಕ್ಕೆ ಅತೀತವಾದ ಒಂದು ಹೆಚ್ಚು ದೊಡ್ಡ ನೆರವೇರಿಕೆಯಿದೆ ಎಂದು ತೀರ್ಮಾನಿಸಲು ಯಥೇಷ್ಟ ಕಾರಣವಿದೆ.d (ಹೋಲಿಸಿ ಮತ್ತಾಯ 24:7; ಲೂಕ 21:10, 11; ಪ್ರಕಟನೆ 6:2-8.) ಯೆಹೋವನ ಸಾಕ್ಷಿಗಳು ದಶಕಗಳಲ್ಲಿ, ನಮ್ಮ ಸಮಯದಲ್ಲಿ ಸಂಭವಿಸುವ ದೊಡ್ಡ ಮಟ್ಟದ ನೆರವೇರಿಕೆಯು, ದೊಡ್ಡ ಪ್ರಮಾಣದ “ಮಹಾ ಸಂಕಟವು” ಇನ್ನೇನು ಮುಂದೆಯೇ ಇದೆಯೆಂದು ನಾವು ನಿರೀಕ್ಷಿಸಸಾಧ್ಯವಿದೆಯೆಂಬುದನ್ನು ರುಜುಮಾಡುತ್ತದೆಂದು ಸಾರಿದ್ದಾರೆ. ಆ ಅವಧಿಯಲ್ಲಿ, ಮತ್ತಾಯ 24:22ರ ಪ್ರವಾದನಾ ನುಡಿಗಳು ಹೇಗೆ ನೆರವೇರಲಿರುವುವು?
16. ಸಮೀಪಿಸುತ್ತಿರುವ ಮಹಾ ಸಂಕಟದ ಕುರಿತು ಪ್ರಕಟನೆಯು ಯಾವ ಪ್ರೋತ್ಸಾಹಕರವಾದ ನಿಜತ್ವವನ್ನು ಒದಗಿಸುತ್ತದೆ?
16 ಯೆರೂಸಲೇಮಿನ ಮೇಲೆ ಬಂದ ಸಂಕಟವು ಕಳೆದು ಸುಮಾರು ಎರಡು ದಶಕಗಳಾದ ಮೇಲೆ, ಅಪೊಸ್ತಲ ಯೋಹಾನನು ಪ್ರಕಟನೆ ಪುಸ್ತಕವನ್ನು ಬರೆದನು. ಮಹಾ ಸಂಕಟವು ಮುಂದಿದೆಯೆಂಬುದನ್ನು ಅದು ದೃಢೀಕರಿಸಿತು. ಮತ್ತು ನಮ್ಮ ಮೇಲೆ ವೈಯಕ್ತಿಕವಾಗಿ ಪ್ರಭಾವ ಬೀರುವ ವಿಷಯಗಳಲ್ಲಿ ಆಸಕ್ತರಾಗಿರುವುದರಿಂದ, ಈ ಬರಲಿರುವ ಮಹಾ ಸಂಕಟದಲ್ಲಿ ಮಾನವ ಜೀವವು ಬದುಕಿ ಉಳಿಯುವುದೆಂದು ಪ್ರಕಟನೆಯು ನಮಗೆ ಪ್ರವಾದನಾರೂಪವಾಗಿ ಆಶ್ವಾಸನೆ ನೀಡುವುದನ್ನು ತಿಳಿಯುವುದು ನಮಗೆ ಉಪಶಮನವನ್ನು ಕೊಟ್ಟೀತು. “ಸಕಲ ಜನಾಂಗ, ಕುಲ, ಪ್ರಜೆಗಳವರಿಂದ ಮತ್ತು ಭಾಷೆಗಳಿಂದ ಹೊರಬಂದ . . . ಮಹಾ ಸಮೂಹ”ವನ್ನು ಯೋಹಾನನು ಮುಂತಿಳಿಸಿದನು. ಅವರಾರು? ಸ್ವರ್ಗದ ಒಂದು ಧ್ವನಿಯು ಉತ್ತರಿಸುವುದು: “ಇವರು ಆ ಮಹಾ ಸಂಕಟದಿಂದ ಹೊರಬರುವವರು.” (ಪ್ರಕಟನೆ 7:9, 14, NW) ಹೌದು, ಅವರು ಪಾರಾಗಿ ಉಳಿದವರಾಗಿರುವರು! ಬರಲಿರುವ ಮಹಾ ಸಂಕಟದಲ್ಲಿ ವಿಷಯಗಳು ಹೇಗೆ ವಿಕಸನಗೊಳ್ಳುವವೆಂಬುದಕ್ಕೆ ಮತ್ತು ಮತ್ತಾಯ 24:22 ಹೇಗೆ ನೆರವೇರುವುದೆಂಬುದಕ್ಕೆ ಒಳನೋಟವನ್ನೂ ಪ್ರಕಟನೆಯು ಕೊಡುತ್ತದೆ.
17. ಮಹಾ ಸಂಕಟದ ಆರಂಭ ಭಾಗದಲ್ಲಿ ಯಾವುದು ಒಳಗೂಡಿರುವುದು?
17 ಈ ಸಂಕಟದ ಆರಂಭದ ಭಾಗವು, “ಮಹಾ ಬಾಬೆಲ್” ಎಂದು ಕರೆಯಲ್ಪಡುವ ಸಾಂಕೇತಿಕ ವೇಶ್ಯೆಯ ಮೇಲಿನ ಆಕ್ರಮಣವೇ. (ಪ್ರಕಟನೆ 14:8; 17:1, 2) ಯಾವುದರಲ್ಲಿ ಕ್ರೈಸ್ತ ಪ್ರಪಂಚವು ಅತ್ಯಂತ ನಿಂದಾರ್ಹವೊ ಆ ಲೋಕವ್ಯಾಪಕವಾದ ಸುಳ್ಳುಧರ್ಮ ಸಾಮ್ರಾಜ್ಯವನ್ನು ಅವಳು ಪ್ರತಿನಿಧಿಸುತ್ತಾಳೆ. ಪ್ರಕಟನೆ 17:16-18ರ ಮಾತುಗಳಿಗನುಸಾರ, ಈ ಸಾಂಕೇತಿಕ ವೇಶ್ಯೆಯ ಮೇಲೆ ಆಕ್ರಮಣಮಾಡುವುದನ್ನು ದೇವರು ರಾಜಕೀಯ ಮೂಲಾಂಶದ ಹೃದಯದಲ್ಲಿ ಹಾಕುವನು.e ಈ ಆಕ್ರಮಣವು ದೇವರ ಅಭಿಷಿಕ್ತ “ಆಯ್ದುಕೊಳ್ಳಲ್ಪಟ್ಟ”ವರಿಗೂ ಅವರ ಒಡನಾಡಿಗಳಾದ “ಮಹಾ ಸಮೂಹ”ಕ್ಕೂ ಹೇಗೆ ಕಂಡುಬರಸಾಧ್ಯವಿದೆಯೆಂಬುದನ್ನು ಯೋಚಿಸಿರಿ. ಧರ್ಮದ ಮೇಲೆ ಈ ಧ್ವಂಸಕಾರಕ ಆಕ್ರಮಣವು ಮುಂದುವರಿಯುವಾಗ, ಅದು ಯೆಹೋವನ ಜನರನ್ನೂ ಕೂಡಿಸಿ, ಸಕಲ ಧಾರ್ಮಿಕ ಸಂಸ್ಥೆಗಳನ್ನು ನಿರ್ಮೂಲಮಾಡುವಂತೆ ಕಂಡುಬಂದೀತು.
18. ಮಹಾ ಸಂಕಟದ ಆರಂಭ ಭಾಗದಲ್ಲಿ ಯಾವ “ನರಜೀವಿ”ಗಳೂ ರಕ್ಷಿಸಲ್ಪಡರೆಂದು ಏಕೆ ತೋರಿಬಂದೀತು?
18 ಮತ್ತಾಯ 24:22ರಲ್ಲಿ ಕಂಡುಬರುವ ಯೇಸುವಿನ ಮಾತುಗಳು ಒಂದು ದೊಡ್ಡ ಪ್ರಮಾಣದಲ್ಲಿ ನೆರವೇರುವುದು ಇಲ್ಲಿಯೇ. ಆಯ್ದುಕೊಳ್ಳಲ್ಪಟ್ಟವರು ಯೆರೂಸಲೇಮಿನಲ್ಲಿ ಗಂಡಾಂತರಕ್ಕೊಳಗಾಗಿದ್ದವರಾಗಿ ಕಂಡುಬಂದಂತೆಯೇ, ಧರ್ಮದ ಮೇಲಿನ ಆ ಆಕ್ರಮಣದ ಸಮಯದಲ್ಲಿ ಯೆಹೋವನ ಸೇವಕರು—ಆ ಆಕ್ರಮಣವು ದೇವರ ಜನರ ಸಕಲ “ನರಜೀವಿ”ಗಳನ್ನು ನಿರ್ಮೂಲಮಾಡುತ್ತದೊ ಎಂಬಂತೆ—ತೆಗೆದುಹಾಕಲ್ಪಡುವ ಅಪಾಯದಲ್ಲಿದ್ದಾರೆಂಬಂತೆ ತೋರಿಬರಬಹುದು. ಆದರೂ ಹಿಂದೆ ಸಾ.ಶ. 66ರಲ್ಲಿ ಏನು ಸಂಭವಿಸಿತೆಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳೋಣ. ರೋಮನರು ಉಂಟುಮಾಡಿದ ಸಂಕಟವು ಮೊಟಕುಗೊಳಿಸಲ್ಪಟ್ಟಿತು. ಇದು ದೇವರ ಅಭಿಷಿಕ್ತ ಆಯ್ದುಕೊಂಡವರು ಪಲಾಯನ ಮಾಡಿ, ಬದುಕಿ ಉಳಿಯುವಂತೆ ಪುಷ್ಕಲ ಸಂದರ್ಭವನ್ನು ಅನುಮತಿಸಿತು. ಹೀಗೆ, ಧರ್ಮದ ಮೇಲಿನ ನಾಶಕಾರಕ ಆಕ್ರಮಣವು, ಸತ್ಯಾರಾಧಕರ ಭೌಗೋಳಿಕ ಸಭೆಯನ್ನು ನಾಶಗೊಳಿಸುವಂತೆ ಅನುಮತಿಸಲ್ಪಡದು ಎಂಬ ಭರವಸೆ ನಮಗಿರಸಾಧ್ಯವಿದೆ. ಅದು ಕ್ಷಿಪ್ರವಾಗಿ, “ಒಂದೇ ದಿನದಲ್ಲಿ”ಯೋ ಎಂಬಂತೆ ಮುಂದೆ ಸಾಗುವುದು. ಆದರೆ ಹೇಗೊ, ಅದು ಮೊಟಕುಗೊಳಿಸಲ್ಪಡುವುದು, ಅದರ ಉದ್ದೇಶವನ್ನು ಪೂರ್ಣಗೊಳಿಸುವಂತೆ ಅದು ಬಿಡಲ್ಪಡದು. ಹೀಗೆ ದೇವರ ಜನರು ‘ರಕ್ಷಿಸಲ್ಪಡ’ಸಾಧ್ಯವಿದೆ.—ಪ್ರಕಟನೆ 18:8.
19. (ಎ) ಮಹಾ ಸಂಕಟದ ಪ್ರಥಮ ಭಾಗಾನಂತರ, ಯಾವುದು ಪ್ರತ್ಯಕ್ಷವಾಗಿರುವುದು? (ಬಿ) ಇದು ಯಾವುದಕ್ಕೆ ನಡೆಸುವುದು?
19 ಪಿಶಾಚನಾದ ಸೈತಾನನ ಭೂಸಂಘಟನೆಯ ಇತರ ಮೂಲಾಂಶಗಳು ಆ ಬಳಿಕ ಸ್ವಲ್ಪ ಕಾಲ, ತಮ್ಮ ಹಳೆಯ ಧಾರ್ಮಿಕ ಪ್ರೇಯಸಿಯೊಂದಿಗಿನ ವ್ಯವಹಾರ ನಷ್ಟದ ಕುರಿತು ಶೋಕಿಸುತ್ತ ಮುಂದುವರಿಯುವವು. (ಪ್ರಕಟನೆ 18:9-19) ಯಾವುದೊ ಒಂದು ಹಂತದಲ್ಲಿ, ದೇವರ ನಿಜ ಸೇವಕರು, “ಗೋಡೆಗಳಿಲ್ಲದೆ ನೆಮ್ಮದಿಯಿಂದ ನಿರ್ಭಯ”ವಾಗಿದ್ದು ಸುಲಭ ಬೇಟೆಯಾಗಿ ತೋರುತ್ತಿರುವುದನ್ನು ಅವರು ಗಮನಿಸುವರು. ಎಂತಹ ಆಶ್ಚರ್ಯವು ಕಾದಿರುವುದು! ತನ್ನ ಸೇವಕರ ವಿರುದ್ಧ ನಿಜವಾಗಿರುವ ಅಥವಾ ಬೆದರಿಕೆಯ ದುರಾಕ್ರಮಣಕ್ಕೆ ಪ್ರತಿವರ್ತನೆ ತೋರಿಸುತ್ತ, ದೇವರು ಆ ಮಹಾ ಸಂಕಟದ ಅಂತಿಮ ಭಾಗದಲ್ಲಿ ತನ್ನ ಶತ್ರುಗಳಿಗೆ ತೀರ್ಪುಕೊಡಲು ಎದ್ದೇಳುವನು.—ಯೆಹೆಜ್ಕೇಲ 38:10-12, 14, 18-23.
20. ಮಹಾ ಸಂಕಟದ ದ್ವಿತೀಯ ಭಾಗವು ದೇವರ ಜನರನ್ನು ಏಕೆ ಅಪಾಯಕ್ಕೊಳಪಡಿಸದು?
20 ಮಹಾ ಸಂಕಟದ ಈ ದ್ವಿತೀಯ ಭಾಗವು, ಸಾ.ಶ. 70ರಲ್ಲಿ ರೋಮನರಿಂದಾದ ಎರಡನೆಯ ಆಕ್ರಮಣದಲ್ಲಿ ಯೆರೂಸಲೇಮಿಗೂ ಅದರ ನಿವಾಸಿಗಳಿಗೂ ಏನು ಸಂಭವಿಸಿತೋ ಅದಕ್ಕೆ ಸದೃಶವಾಗಿರುವುದು. ಅದು, “ಲೋಕಾದಿಯಿಂದ [ಅಂದಿನ] ತನಕ ಸಂಭವಿಸದೆ ಇದ್ದಿರುವ, ಇಲ್ಲ, ಪುನಃ ಸಂಭವಿಸದೆಯೂ ಇರುವ ಮಹಾ ಸಂಕಟ”ವಾಗಿ ಪರಿಣಮಿಸುವುದು. (ಮತ್ತಾಯ 24:21, NW) ಆದರೆ ದೇವರ ಆಯ್ದುಕೊಳ್ಳಲ್ಪಟ್ಟವರು ಹಾಗೂ ಅವರ ಒಡನಾಡಿಗಳು ಆ ಅಪಾಯ ವಲಯದಲ್ಲಿ, ಕೊಲ್ಲಲ್ಪಡುವ ಗಂಡಾಂತರದಲ್ಲಿ ಇರರು ಎಂದು ನಾವು ಭರವಸೆಯಿಂದಿರಬಲ್ಲೆವು. ಓ, ಅವರು ಒಂದು ಭೌಗೋಳಿಕವಾದ ಸ್ಥಳಕ್ಕೆ ಓಡಿಹೋಗಿರರು. ಯೆರೂಸಲೇಮಿನಲ್ಲಿದ್ದ ಒಂದನೆಯ ಶತಮಾನದ ಕ್ರೈಸ್ತರು ಆ ನಗರದಿಂದ ಯೊರ್ದನಿನಾಚೆಯ ಪೆಲದಂತಹ ಪರ್ವತ ಪ್ರದೇಶಕ್ಕೆ ಪಲಾಯನ ಮಾಡಶಕ್ತರಾಗಿದ್ದರು. ಆದರೆ ಭವಿಷ್ಯತ್ತಿನಲ್ಲಿ, ದೇವರ ನಂಬಿಗಸ್ತ ಸಾಕ್ಷಿಗಳು ಭೂವ್ಯಾಪಕವಾಗಿ ನೆಲೆಸಿರುವುದರಿಂದ, ಸುರಕ್ಷಿತತೆಯೂ ಸಂರಕ್ಷಣೆಯೂ ಭೌಗೋಳಿಕ ಸ್ಥಾನದ ಮೇಲೆ ಹೊಂದಿಕೊಂಡಿರದು.
21. ಅಂತಿಮ ಕದನದಲ್ಲಿ ಹೋರಾಡುವವರು ಯಾರು, ಮತ್ತು ಫಲಿತಾಂಶವೇನು?
21 ನಾಶನವು ರೋಮಿನ ಸೈನ್ಯಗಳಿಂದಾಗಲಿ ಇತರ ಯಾವುದೇ ಮಾನವ ಮಧ್ಯವರ್ತಿಯಿಂದಾಗಲಿ ಆಗಿರದು. ಬದಲಿಗೆ, ಪ್ರಕಟನೆ ಪುಸ್ತಕವು ಆ ದಂಡನೆ ವಿಧಿಸುವ ಸೈನ್ಯಗಳು ಸ್ವರ್ಗದವುಗಳಾಗಿವೆಯೆಂದು ವರ್ಣಿಸುತ್ತದೆ. ಹೌದು, ಆ ಮಹಾ ಸಂಕಟದ ಅಂತಿಮ ಭಾಗವನ್ನು ಯಾವುದೇ ಮಾನವ ಸೈನ್ಯವಲ್ಲ, ಬದಲಿಗೆ “ದೇವರ ವಾಕ್ಯ”ವೆಂಬ ಅರಸನಾದ ಯೇಸು ಕ್ರಿಸ್ತನು, ಪುನರುತ್ಥಿತ ಅಭಿಷಿಕ್ತ ಕ್ರೈಸ್ತರು ಒಳಗೂಡಿರುವ ‘ಸ್ವರ್ಗದಲ್ಲಿರುವ ಸೈನ್ಯ’ದ ನೆರವಿನಿಂದ ನೆರವೇರಿಸುವನು. “ಕರ್ತರ ಕರ್ತನೂ ರಾಜಾಧಿರಾಜನೂ” ಸಾ.ಶ. 70ರಲ್ಲಿ ರೋಮನರು ಮಾಡಿದುದಕ್ಕಿಂತ ಎಷ್ಟೋ ಹೆಚ್ಚು ಅಮೂಲಾಗ್ರವಾದ ಸಂಹಾರವನ್ನು ನಿರ್ವಹಿಸುವನು. ಅದು ದೇವರ ಸಕಲ ಮಾನವ ವಿರೋಧಿಗಳನ್ನು—ರಾಜರು, ಮಿಲಿಟರಿ ಅಧಿಪತಿಗಳು, ಸ್ವತಂತ್ರರು ಮತ್ತು ದಾಸರು, ಚಿಕ್ಕವರು ಮತ್ತು ದೊಡ್ಡವರನ್ನು ನೀಗಿಸಿ ಬಿಡುವುದು. ಸೈತಾನನ ಜಗತ್ತಿನ ಮಾನವ ಸಂಘಟನೆಗಳು ಕೂಡ ತಮ್ಮ ಅಂತ್ಯವನ್ನು ತಲಪುವುವು.—ಪ್ರಕಟನೆ 2:26, 27; 17:14; 19:11-21; 1 ಯೋಹಾನ 5:19.
22. ಇನ್ನಾವ ಹೆಚ್ಚಿನ ಅರ್ಥದಲ್ಲಿ “ನರಜೀವಿಗಳು” ರಕ್ಷಿಸಲ್ಪಡುವರು?
22 ಅಭಿಷಿಕ್ತ ಉಳಿಕೆಯವರು ಮತ್ತು “ಮಹಾ ಸಮೂಹ”ದವರಾದ “ನರಜೀವಿಗಳು,” ಈಗಾಗಲೇ ಸಂಕಟದ ಪ್ರಥಮ ಭಾಗದಲ್ಲಿ, ಮಹಾ ಬಾಬೆಲು ಕ್ಷಿಪ್ರವಾಗಿ ಮತ್ತು ಪೂರ್ತಿಯಾಗಿ ನಾಶವಾಗುವಾಗ ರಕ್ಷಿಸಲ್ಪಟ್ಟಿರುವರೆಂಬುದನ್ನು ಜ್ಞಾಪಿಸಿಕೊಳ್ಳಿರಿ. ತದ್ರೀತಿ ಸಂಕಟದ ಅಂತಿಮ ಭಾಗದಲ್ಲಿ, ಯೆಹೋವನ ಪಕ್ಷಕ್ಕೆ ಪಲಾಯನ ಮಾಡಿರುವ “ನರಜೀವಿಗಳು” ರಕ್ಷಿಸಲ್ಪಡುವರು. ಸಾ.ಶ. 70ರಲ್ಲಿ ದಂಗೆಕೋರರಾದ ಯೆಹೂದ್ಯರಿಗಾದ ಪರಿಣಾಮಕ್ಕಿಂತ ಇದು ಎಷ್ಟು ವೈದೃಶ್ಯವಾಗಿರುವುದು!
23. ಬದುಕಿ ಉಳಿಯುವ “ನರಜೀವಿ”ಗಳು ಯಾವುದಕ್ಕೆ ಮುನ್ನೋಡಬಲ್ಲರು?
23 ನಿಮ್ಮ ಸ್ವಂತ ಮತ್ತು ನಿಮ್ಮ ಪ್ರಿಯರ ಭವಿಷ್ಯತ್ತಿನ ಸಾಧ್ಯತೆಗಳನ್ನು ಯೋಚಿಸುತ್ತ, ಪ್ರಕಟನೆ 7:16, 17ರಲ್ಲಿ ವಾಗ್ದಾನಿಸಲ್ಪಟ್ಟಿರುವುದನ್ನು ಗಮನಿಸಿರಿ: “ಇನ್ನು ಮೇಲೆ ಅವರಿಗೆ ಹಸಿವೆ ಇಲ್ಲ, ಬಾಯಾರಿಕೆ ಇಲ್ಲ; ಅವರಿಗೆ ಬಿಸಿಲಾದರೂ ಯಾವ ಝಳವಾದರೂ ಬಡಿಯುವದಿಲ್ಲ; ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಯಾದಾತನು ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ನಡಿಸುತ್ತಾನೆ. ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” ಇದು ನಿಶ್ಚಯವಾಗಿಯೂ, ಒಂದು ಅದ್ಭುತಕರವಾದ, ಬಾಳಿಕೆ ಬರುವ ಅರ್ಥದಲ್ಲಿ ‘ರಕ್ಷಿಸಲ್ಪಡುವುದು’ ಆಗಿರುತ್ತದೆ.
[ಅಧ್ಯಯನ ಪ್ರಶ್ನೆಗಳು]
b ಜೋಸೀಫಸನು ಹೇಳುವುದು: “ಟೈಟಸನು ಪ್ರವೇಶಿಸಿದಾಗ ನಗರದ ಬಲವನ್ನು ನೋಡಿ ಸ್ತಬ್ಧನಾದನು . . . ಅವನು ಗಟ್ಟಿಯಾಗಿ ಉದ್ಗರಿಸಿದ್ದು: ‘ದೇವರು ನಮ್ಮ ಪಕ್ಷದಲ್ಲಿದ್ದನು; ಈ ಪ್ರಬಲ ಸ್ಥಾನಗಳಿಂದ ಯೆಹೂದ್ಯರನ್ನು ಕೆಳಗಿಳಿಸಿದವನು ದೇವರೇ; ಏಕೆಂದರೆ ಮಾನವ ಕೈಗಳಾಗಲಿ ಉಪಕರಣಗಳಾಗಲಿ ಇಂತಹ ದುರ್ಗಗಳೆದುರಾಗಿ ಏನು ತಾನೇ ಮಾಡಬಲ್ಲವು?’”
c ಆಸಕ್ತಿಕರವಾಗಿ ಶೆಮ್-ಟಾಬ್ನ ಮತ್ತಾಯ 24:22ರ ಮೂಲಗ್ರಂಥವು, “ಓಸ್ಕರ, ಕಾರಣದಿಂದ, ಉದ್ದೇಶದಿಂದ” ಎಂಬ ಅರ್ಥವಿರುವ, ಆ್ಯವುರ್ ಎಂಬ ಹೀಬ್ರು ಪದವನ್ನು ಉಪಯೋಗಿಸುತ್ತದೆ.—ಹಿಂದಿನ ಲೇಖನ ನೋಡಿ, ಪುಟ 13.
d ಫೆಬ್ರವರಿ 15, 1994ರ ಕಾವಲಿನಬುರುಜು, ಪುಟಗಳು 11 ಮತ್ತು 12, ಮತ್ತು ಮತ್ತಾಯ ಅಧ್ಯಾಯ 24, ಮಾರ್ಕ ಅಧ್ಯಾಯ 13 ಮತ್ತು ಲೂಕ ಅಧ್ಯಾಯ 21ರಲ್ಲಿ ಕಂಡುಬರುವ ಯೇಸುವಿನ ಪ್ರವಾದನಾ ಉತ್ತರಗಳನ್ನು ಸಮಾನಾಂತರ ಅಂಕಣಗಳಲ್ಲಿ ಕೊಟ್ಟಿರುವ ಪುಟಗಳು 14 ಮತ್ತು 15ರಲ್ಲಿರುವ ತಖ್ತೆಯನ್ನು ನೋಡಿ.
e 1988ರಲ್ಲಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯದಿಂದ ಪ್ರಕಾಶಿಸಲ್ಪಟ್ಟ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ, 235-58ನೆಯ ಪುಟಗಳನ್ನು ನೋಡಿರಿ.
ನೀವು ಹೇಗೆ ಉತ್ತರಿಸುವಿರಿ?
▫ ರೋಮನ್ ಸೈನ್ಯವು ಯೆರೂಸಲೇಮಿನ ಮೇಲೆ ಮಾಡಿದ ಆಕ್ರಮಣಕ್ಕೆ ಯಾವ ಎರಡು ಭಾಗಗಳಿದ್ದವು?
▫ ಮತ್ತಾಯ 24:22ರಲ್ಲಿ ಹೇಳಲ್ಪಟ್ಟಿರುವ “ನರಜೀವಿಗಳು,” ಸಾ.ಶ. 70ರಲ್ಲಿ ಪಾರಾಗಿ ಉಳಿದ 97,000 ಮಂದಿ ಯೆಹೂದ್ಯರಾಗಿರುವುದು ಅಸಂಭವವೇಕೆ?
▫ ಯೆರೂಸಲೇಮಿನ ಸಂಕಟದ ದಿನಗಳು ಹೇಗೆ ಮೊಟಕುಗೊಳಿಸಲ್ಪಟ್ಟವು, ಮತ್ತು ಹೀಗೆ “ನರಜೀವಿಗಳು” ಹೇಗೆ ರಕ್ಷಿಸಲ್ಪಟ್ಟರು?
▫ ಸಮೀಪಿಸುತ್ತಿರುವ ಮಹಾ ಸಂಕಟದಲ್ಲಿ, ದಿನಗಳು ಮೊಟಕುಗೊಳಿಸಲ್ಪಟ್ಟು, “ನರಜೀವಿಗಳು” ಹೇಗೆ ರಕ್ಷಿಸಲ್ಪಡುವರು?
[ಪುಟ 16 ರಲ್ಲಿರುವ ಚಿತ್ರ]
ದಂಗೆಯ ಬಳಿಕ ಟಂಕಒತ್ತಲ್ಪಟ್ಟ ಯೆಹೂದಿ ನಾಣ್ಯ. ಹೀಬ್ರು ಅಕ್ಷರಗಳು “ವರ್ಷ ಎರಡು” ಅಂದರೆ ಸಾ.ಶ. 67 ಎಂದು ಹೇಳುತ್ತವೆ. ಅದು ಅವರ ಸ್ವರಾಜ್ಯದ ಎರಡನೆಯ ವರ್ಷ
[ಕೃಪೆ]
Pictorial Archive (Near Eastern History) Est.
[ಪುಟ 17 ರಲ್ಲಿರುವ ಚಿತ್ರ]
ಸಾ.ಶ. 71ರಲ್ಲಿ ಟಂಕಒತ್ತಲ್ಪಟ್ಟ ರೋಮನ್ ನಾಣ್ಯ. ಎಡದಲ್ಲಿ ಒಬ್ಬ ಸಶಸ್ತ್ರ ರೋಮನನಿದ್ದಾನೆ; ಬಲದಲ್ಲಿ ಶೋಕಿಸುತ್ತಿರುವ ಯೆಹೂದಿ ಸ್ತ್ರೀ. ಯೂಡಾಯ ಕಾಪ್ಟ ಎಂಬ ಪದಗಳ ಅರ್ಥ “ಬಂಧನಕ್ಕೊಳಗಾಗಿರುವ ಯೂದಾಯ”
[ಕೃಪೆ]
Pictorial Archive (Near Eastern History) Est.