ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ಯಾರು ಸಹಾಯ ಮಾಡುವರು?
ರಾಮು ತನ್ನ ನೆರೆಯವನ ಮನೆಗೆ ಹೋಗಲು ತರಕಲು ಕಾಲುದಾರಿಯನ್ನು ಹಿಡಿದಾಗ ಮಳೆ ಮೋಡಗಳು ಮೇಲೇರುತ್ತಿದ್ದವು. ಅವನು ಗಾಬರಿಗೊಂಡಿದ್ದನು. ಪರೀಕ್ಷೆಯ ಸಮಯ ಸಮೀಪಿಸಿತ್ತು. ಗಣಿತದ ಕೆಲವು ಪಾಠಗಳು ಅವನಿಗೆ ಅರ್ಥವಾಗುತ್ತಿರಲಿಲ್ಲ. ನೆರೆಯವರ ಮನೆಗೆ ಹೋಗಿ ಸಹಾಯ ಕೋರಬೇಕೆಂದು ಅವನ ತಾಯಿ ಪಟ್ಟು ಹಿಡಿದಿದಳ್ದು. ಆದರೆ ರಾಮು, ನಗರದ ಶಾಲೆಯೊಂದರಲ್ಲಿ ಗಣಿತ ಕಲಿಸುತ್ತಿದ್ದ ಮಾಸ್ಟರರೊಂದಿಗೆ ಇನ್ನೂ ಮಾತಾಡಿರಲಿಲ್ಲ. ಅವರ ಕುಟುಂಬ ಸ್ನೇಹಭಾವದ ಕುಟುಂಬ, ಸಹಾಯ ಮಾಡಲು ಸಂತೋಷಿಸುವ ಕುಟುಂಬವೆಂದು ಅಮ್ಮ ಹೇಳಿದ್ದರು. ಅಮ್ಮನ ದೇಹಾವಸ್ಥೆಯನ್ನು ನೋಡಿದ ಮಾಸ್ಟರರ ಹೆಂಡತಿ, ರೇಶನ್ ಅಂಗಡಿಯಿಂದ ಅಮ್ಮ ತರುತ್ತಿದ್ದ ಧಾನ್ಯವನ್ನು ಹೊತ್ತು ತರಲಿಲ್ಲವೇ?
ರಾಮು, ತನ್ನ ತಾಯಿಯ ವಿಷಯ, ಆಕೆ ಹೊತ್ತಾರೆಯಿಂದ ಸಂಜೆಯ ತನಕ ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾಳೆಂದು ಯೋಚಿಸಿದ. ಮತ್ತು ಸ್ವಲ್ಪದರಲ್ಲಿ, ಉಣಿಸಿ, ತೊಡಿಸಿ, ಪರಾಮರಿಸಲು ಕುಟುಂಬದಲ್ಲಿ ಇನ್ನೊಂದು ಮಗುವಿರುವುದು. ಈ ಕಾರಣದಿಂದ ತನಗೆ ಒಳ್ಳೇ ಉದ್ಯೋಗ ದೊರೆತು ಕುಟುಂಬವನ್ನು ತಾನೂ ಬೆಂಬಲಿಸುವಂತಾಗುವಂತೆ ಶ್ರಮಪಟ್ಟು ಪಾಠ ಕಲಿ ಎಂದು ತಂದೆ ತನ್ನನ್ನು ಪ್ರೋತ್ಸಾಹಿಸುತ್ತಿರುವುದು ಆಶ್ಚರ್ಯವಲ್ಲ.
ಅವನೀಗ ಮಾಸ್ಟರರ ಮನೆಗೆ ಬಂದಿದ್ದನು. ಬಾಗಲಲ್ಲಿ ಶಂಕಿಸುತ್ತಿದ್ದಾಗ, ಸ್ನೇಹಭಾವದ ಸ್ವರವೂಂದು, “ಏನಪ್ಪಾ, ಒಳಗೆ ಬಾ” ಎಂದು ಹೇಳಲಾಗಿ ರಾಮು ಒಳಗೆ ಪ್ರವೇಶಿಸಿದ.
ಸ್ವಲ್ಪ ಸಮಯದ ಬಳಿಕ ಕೆಲಸದಿಂದ ಹಿಂದಿರುಗಿ ಬರುತ್ತಿದ್ದ ರಾಮುವಿನ ತಂದೆ ಆನಂದ, ರಾಮು ಮಾಸ್ಟರರ ಮನೆಬಿಟ್ಟು ಹೋಗುವುದನ್ನು ನೋಡಿದ. ರಾಮು ಸಂತೋಷದಿಂದಿರುವಂತೆ ಕಂಡಿತು. ಅವನ ನಡಿಗೆಯಲ್ಲಿ ನೆಗೆತವಿತ್ತು. ಆನಂದ ಮಾಸ್ಟರರ ಮನೆಯನ್ನು ಮುಟ್ಟಿದಾಗ ಆಕಾಶವೇ ತೆರೆದಂತಾಗಿ ಧಾರಾಕಾರವಾಗಿ ಮಳೆ ಸುರಿಯಿತು. ರಾಮು ತನ್ನ ಮನೆಗೆ ಓಡುತ್ತಿರುವುದನ್ನು ನೋಡುತ್ತಾ ಇದ್ದ ಆ ಶಾಲಾ ಮಾಸ್ಟರರು ಆನಂದನನ್ನು ಮನೆಯೊಳಗೆ ಕರೆದು, ರಭಸದಿಂದ ಬಡಿಯುತ್ತಿದ್ದ ಮಳೆಯನ್ನು ತಡೆಯಲು ಬೇಗನೇ ಕದಮುಚ್ಚಿದರು.
ನಮ್ಮೆಲ್ಲರಿಗೆ ಮುಖಮಾಡಿ ನಿಂತಿರುವ ಸಮಸ್ಯೆಗಳು
ತನ್ನ ಸೈಕಲ್ ರಿಪೇರಿ ಅಂಗಡಿಯಲ್ಲಿ ದೀರ್ಘದಿನದ ಕೆಲಸಮಾಡಿ ಬಳಲಿದ್ದ ಆನಂದನು ಮಾಸ್ಟರರ ಪತ್ನಿ ಮರ್ಯಮ್ ಕೊಟ್ಟ ಬಿಸಿ ಚಹವನ್ನು ಸಂತೋಷದಿಂದ ಸ್ವೀಕರಿಸಿದ. ಮರ್ಯಮ್ ತನ್ನ ಹೊಲಿಗೆಯ ಯಂತ್ರಕ್ಕೆ ಹಿಂದಿರುಗಲಾಗಿ ಮತ್ತು ಮಾಸ್ಟರರ ಮಕ್ಕಳಾದ ಪೌಲ್ ಮತ್ತು ರೇಚೆಲ್ ತಮ್ಮ ಶಾಲಾ ಮನೆಗೆಲಸ ಮಾಡಲು ಕುಳಿತುಕೊಂಡಾಗ ಆನಂದ ಆ ಶುಚಿಯಾಗಿದ್ದ ಮನೆಯ ಕೊಟಡಿಯಲ್ಲಿ ಅತ್ತಿತ್ತ ಕಣ್ಣುಹಾಯಿಸಿದ. ಥಟ್ಟನೆ, ಮಹಾ ನಿಷ್ಟುರ ಮನಸ್ಸಿಂದ ತುಂಬಿದ ಆನಂದ, “ನಾನು ಪ್ರತಿದಿನ ಎದುರಿಸುವ ಸಮಸ್ಯೆಗಳು ನಿಮಗಿಲ್ಲವೆಂತ ನನಗೆ ತೋಚುತ್ತದೆ. ನೀವೆಲ್ಲ ಎಷ್ಟು ಸಂತೃಪ್ತರೂ ಶಾಂತಚಿತ್ತರೂ ಆಗಿ ಕಾಣುತ್ತೀರಿ. ನಿಮ್ಮನ್ನು ನೋಡಿ ನಾನೆಷ್ಟೋ ಅಸೂಯೆ ಪಡುತ್ತೇನೆ!” ಎಂದು ಕೂಗಿ ಹೇಳಿದ. ಇದನ್ನು ಕೇಳಿ ಮಾಸ್ಟರರು ನಸುನಗುತ್ತಾ, “ನಮಗೂ ಸಮಸ್ಯೆಗಳ ಪಾಲು ಇದ್ದೇ ಇದೆ, ಆನಂದ್. ಆದರೆ, ಹೇಳಿ, ನಿಮ್ಮನ್ನು ಯಾವ ವಿಷಯ ಪ್ರತ್ಯೇಕವಾಗಿ ಬಾಧಿಸುತ್ತಾ ಇದೆ?” ಎಂದು ಕೇಳಿದರು.
ಮಾಸ್ಟರರ ದಯಾಪರವಾದ ಆಸಕ್ತಿಯಿಂದ ಉತ್ತೇಜಿತನಾಗಿ ಆನಂದ ತನ್ನ ಹೃದಯ ಬಿಚ್ಚಿ ಮಾತಾಡಲಾರಂಭಿಸಿದ. ಹಣವೇ ಮುಖ್ಯ ವಿಷಯವಾಗಿತ್ತು. ಸಾಕಷ್ಟು ಇಲ್ಲವೇ ಇಲ್ಲ. ಧಣಿ ಮನೆ ಬಾಡಿಗೆಯನ್ನು ಏರಿಸುತ್ತಾ ಇರುತ್ತಾನೆ. ಸ್ಕೂಲ್ ಫೀಸ್, ಪುಸ್ತಕ ಮತ್ತು ಸಮವಸ್ತ್ರಗಳ ಕ್ರಯ ಸದಾ ಮೇಲೇರುತ್ತಿರುತ್ತದೆ. ತನ್ನ ಹೆಂಡತಿ ನಿರ್ಮಲ ಪ್ರತಿಸಲ ಮಾರ್ಕೆಟಿನಿಂದ ಬಂದಾಗ ಮೂಲ ಅವಶ್ಯಕತೆಗಳ ಬೆಲೆ ಸಹ ಏರುತ್ತಿದೆ ಎಂದು ಗೊಣಗುತ್ತಾಳೆ. ಈಗ ಆಕೆ ಪುನಃ ಗರ್ಭಿಣಿ ಮತ್ತು ಅವಳು ಬಲಹೀನಳೂ ರಕ್ತಹೀನಳೂ ಆಗಿರುವುದರಿಂದ ಆಕೆಗೆ ಟಾನಿಕ್ ಅಗತ್ಯವೆಂದು ಡಾಕ್ಟರ್ ಹೇಳುತ್ತಾರೆ. ಹೀಗೆ, ಹಣ ಎಲ್ಲಿಂದ ಬರಬೇಕು? ರಾಮುವಿನ ಶಾಲೆ ಮುಗಿಯಲು ಇನ್ನೂ ಕೆಲವು ವರ್ಷಗಳಿವೆ ಮತ್ತು ಒಳ್ಳೆಯ ಶಾಲೆಗೆ ಕಳುಹಿಸಲು ಇಷ್ಟೆಲ್ಲ ಹಣ ಖರ್ಚು ಮಾಡಿದ ಮೇಲೆ ಅವನಿಗೆ ಒಳ್ಳೆಯ ಕೆಲಸವಾದರೂ ಪ್ರಾಪ್ತಿಯಾಗಬಹುದೆಂಬದಕ್ಕೆ ಏನು ಖಾತರಿ? ಅನೇಕ ಡಿಗ್ರಿಗಳಿರುವ ಕಾಲೇಜ್ ಪದವೀಧರರೂ ನಿರುದ್ಯೋಗಿಗಳಾಗಿದ್ದಾರೆ. ಹೀಗಿರುವಾಗ, ಒಬ್ಬ ಸೈಕಲ್ ರಿಪೇರಿ ಮಾಡುವವನ ಮಗನಿಗೆ ಅವನ ಜೀವನವನ್ನು ಉತ್ತಮಗೊಳಿಸುವ ಉದ್ಯೋಗ ದೊರಕುವ ನಿರೀಕ್ಷೆ ಎಲ್ಲಿದೆ? ತನ್ನ ಹೆಣ್ಣು ಮಕ್ಕಳಿಗೆ ವರದಕ್ಷಿಣೆಯ ಹಣವಿಲ್ಲದೆ ಗಂಡಂದಿರನ್ನು ಹುಡುಕಲು ಅವನು ಹೇಗೆ ನಿರೀಕ್ಷಿಸ ಸಾಧ್ಯವಿದೆ? ವರದಕ್ಷಿಣೆ ನ್ಯಾಯವಿರುದ್ಧವೇನೋ ನಿಜ. ಆದರೆ ಜನರು ಒಂದಲ್ಲ ಒಂದು ರೂಪದಲ್ಲಿ ಅದನ್ನು ನಿರ್ಬಂಧದಿಂದ ಕೇಳುತ್ತಾರೆ.
ಆನಂದನು ತಾನು ಪ್ರಾಮಾಣಿಕನೆಂದು ನೆನಸಿದವನು. ಅವನ ತಂದೆ ತಾಯಿಗಳು ಸುಳ್ಳಾಡಬಾರದು, ವಂಚಿಸಬಾರದೆಂದು ಅವನಿಗೆ ಕಲಿಸಿದ್ದರು. ಆದರೆ ಇದರಿಂದ ಅವನಿಗೆ ಏನು ಪ್ರಯೋಜನವಾಯಿತು? ಭ್ರಷ್ಟಾಚಾರ ಅವನಿಗೆ ಇಷ್ಟವಿಲ್ಲ. ಆದರೆ ಪ್ರಾಮಾಣಿಕತೆಯಿಂದ ತಾನು ಎಂದಿಗೂ ಏಳಿಗೆ ಪಡೆಯಲಾರೆ ಎಂದು ಅವನಿಗೆ ತಿಳಿದಿತ್ತು. ಸೈಕಲ್ ರಿಪೇರಿ ಮಾಡುವ ಇತರರು ಕದ್ದ ಸೈಕಲುಗಳ ವ್ಯಾಪಾರ ಮಾಡಿ, ಹಳೆಯ ಬಿಡಿ ಭಾಗಗಳನ್ನು ಹೊಸದೆಂದು ಹೇಳಿ ಮಾರುತ್ತಾರೆ ಮತ್ತು ಅವರ ವ್ಯಾಪಾರ ವೃದ್ಧಿಯಾಗುತ್ತಾ ಇದೆ. ತಾನೂ ಹಾಗೆ ಏಕೆ ಮಾಡಬಾರದು? ಸ್ವಲ್ಪ ಹೆಚ್ಚು ಹಣದಿಂದ ಅವನಿಗಿರುವ ಅನೇಕ ಹೊರೆಗಳು ಹಗುರವಾಗಬಹುದು.
ಮಾಸ್ಟರರು ಇದನ್ನೆಲ್ಲ ತಾಳ್ಮೆಯಿಂದ ಮತು ಸಹಾನುಭೂತಿಯಿಂದ, ಆನಂದನ ಪೇಚಾಟದ ಕಥೆ ಮುಗಿಯುವ ತನಕ ಕೇಳಿದರು.
ಆ ಬಳಿಕ, “ಆನಂದ್, ಹೇಳಿ, ಹಣ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತದೆಂದು ನೀವು ನಿಜವಾಗಿಯೂ ನೆನಸುತ್ತೀರಾ? ಎಲ್ಲ ಧನಿಕರು ಸಂತುಷ್ಟರು, ಸುಭದ್ರರು ಮತ್ತು ಸಮಸ್ಯೆರಹಿತರೆಂದು ನಿಮ್ಮ ಅಭಿಪ್ರಾಯವೇ? ಅವರು ಎಂದೂ ಕಾಯಿಲೆ ಬೀಳುವುದಿಲ್ಲವೇ? ಅವರ ಮಕ್ಕಳು ಮಾದಕ ಪದಾರ್ಥ ವ್ಯಸನಿಗಳು, ದುರಾಚಾರಿಗಳು ಯಾ ಅಧಿಕಾರ ವಿರೋಧಿಗಳಾಗಿರುವುದರ ವಿಷಯದಲ್ಲೇನು? ಹಣವು ಹೆಚ್ಚಾಗಿರುವ, ವಿಕಾಸಹೊಂದಿರುವ ರಾಷ್ಟ್ರಗಳೆನಿಸುವವುಗಳಲ್ಲಿ ನಾವು ಭ್ರಷ್ಟಾಚಾರ, ಲಂಚ, ನಿರುದ್ಯೋಗ, ಮತ್ತು ಹೆಚ್ಚುತ್ತಿರುವ ಹಿಂಸಾಕೃತ್ಯಗಳ ಕುರಿತು ಕೇಳುವುದಿಲ್ಲವೇ? ಇಲ್ಲ, ಆನಂದ್, ಕೇವಲ ಹಣದಿಂದ ನನ್ನ ಮತ್ತು ನಿಮ್ಮ ಸಮಸ್ಯೆಗಳು ಪರಿಹಾರವಾಗುವವೆಂದು ನಾನು ಸಮ್ಮತಿಸಲಾರೆ.”
“ನಿಮ್ಮ ಸಮಸ್ಯೆಗಳೋ? ಅವು ಯಾವುವು?” ಎಂದು ಆನಂದ ಕೇಳಿದ.
“ನನ್ನ ಸಮಸ್ಯೆಗಳೂ ನಿನ್ನ ಸಮಸ್ಯೆಗಳೂ ಒಂದೇ ಆನಂದ್. ನಮ್ಮಲ್ಲಿ ಹೆಚ್ಚಿನವರಿಗೆ ಒಂದೇ ರೀತಿಯ ಸಮಸ್ಯೆಗಳಿವೆ.”
“ಆದರೆ ನೀವು ನನ್ನಷ್ಟು ಚಿಂತಾಭರಿತರಾಗಿಲ್ಲ. ನಿಮ್ಮ ಕುಟುಂಬವು ಪ್ರಶಾಂತವೂ ಸಂತುಷ್ಟವೂ ಆಗಿದೆಯೆಂದು ನಾನು ನೋಡಬಲ್ಲೆ. ಇದರ ರಹಸ್ಯವೇನು, ಮಾಸ್ಟ್ರೇ?”
“ಅನಂದ್, ನಮ್ಮ ಸಮಸ್ಯೆಗಳನ್ನು ಶೀಘ್ರವೇ ಯಾವನೋ ಒಬ್ಬನು ಬಗೆಹರಿಸುವನೆಂಬ ದೃಢತೆ ಕುಟುಂಬವಾಗಿರುವ ನಮಗಿದೆ.”
“ಏಕೆ, ನೀವು ಯಾರ ಆಸ್ತಿಗಾದರೂ ಉತ್ತರಾಧಿಕಾರಿ ಆಗಲಿದ್ದೀರಾ?”
“ಇಲ್ಲ, ಹಾಗಲ್ಲ” ಎಂದರು ಮಾಸ್ಟ್ರು ನಗುತ್ತಾ. “ಇಲ್ಲ, ಆನಂದ್, ಅತಿ ಶೀಘ್ರದಲ್ಲಿ ದೇವರು ಲೋಕ ವಿಚಾರಗಳಲ್ಲಿ ಅಡ್ಡಬಂದು ಎಂಥ ಪರಿವರ್ತನೆಯನ್ನು ತರುವನೆಂದರೆ ಶಿಷ್ಟರೂ ಶಾಂತಿಪ್ರಿಯರೂ ಆದ ಜನರಿಗೆ ಇನ್ನು ಮುಂದೆ ಏರುತ್ತಿರುವ ಬೆಲೆ, ಕಾಯಿಲೆ, ಪಾತಕ, ವಸತಿ ಸಮಸ್ಯೆ, ಉದ್ಯೋಗದ ಅಭಾವ, ಹಿಂಸಾಕೃತ್ಯ ಯಾ ಅಭದ್ರತೆಯ ವಿಷಯ ಚಿಂತಿಸಬೇಕಾಗಿರುವುದಿಲ್ಲವೆಂದು ನಾವು ನಂಬುತ್ತೇವೆ.”
ಆನಂದನು ಬೆರಗುಗೊಂಡಂತೆ ಕಂಡನು. “ನೀವು ನನ್ನ ತಾಯಿಯಂತೆ ಮಾತಾಡುತ್ತೀರಿ: ‘ಎಲ್ಲವನ್ನೂ ದೇವರ ಕೈಯಲ್ಲಿ ಬಿಟ್ಟುಬಿಡು; ನಿನ್ನ ಅದೃಷ್ಟ ಆತನ ಕೈಯಲ್ಲಿದೆ.’ ನಿಮ್ಮಂಥ ವಿದ್ಯಾವಂತರಿಂದ ನಾನು ಇಂಥ ಹೇಳಿಕೆಯನ್ನು ಅಪೇಕ್ಷಿಸಿರಲಿಲ್ಲ, ಮಾಸ್ಟ್ರೇ. ನೀವು ಕ್ರೈಸ್ತರೆಂದು ನನಗೆ ಗೊತ್ತು. ಆದರೆ ನನ್ನ ಪರಿಚಯಸ್ಥರಾದ ಇತರ ಕ್ರೈಸ್ತರಿಗೆ ನಿಮ್ಮಂತೆ ಅನಿಸುವುದಿಲ್ಲ. ಅವರು ರಾಜಕೀಯ ಮತ್ತು ಅಭಿಪ್ರಾಯ ಪ್ರದರ್ಶನಗಳಲ್ಲಿ ಕ್ರಿಯಾಶೀಲರಾಗಿದ್ದು ತಮ್ಮ ಸ್ವಂತ ಪ್ರಯತ್ನಗಳಿಂದ ಪರಿಸ್ಥಿತಿಯನ್ನು ಸುಧಾರಿಸ ಪ್ರಯತ್ನಿಸುತ್ತಿದ್ದಾರೆ. ದೇವರು ವಿಷಯಗಳನ್ನು ಬದಲಾಯಿಸುವಂತೆ ಅವರು ‘ದೇವರ ಕೈಯನ್ನು ಬಿಡುವುದಿಲ್ಲ.’”
“ಪ್ರಾಯಶಃ ನಾನಿದನ್ನು ವಿವರಿಸಬೇಕಾಗಿದೆ, ಆನಂದ್. ನನ್ನ ಕುಟುಂಬ ಮತ್ತು ನಾನು ನಂಬುವುದಕ್ಕೂ ಚರ್ಚ್ಗಳ ಬೋಧನೆ ಮತ್ತು ಆಚಾರಗಳಿಗೂ ಅತಿ ದೊಡ್ಡ ವ್ಯತ್ಯಾಸವಿದೆ. ಇದೇ ನಗರದಲ್ಲಿ ಕ್ರೈಸ್ತರೆನಿಸಿಕೊಳ್ಳುವ ಅಂದರೆ, ಕ್ರಿಸ್ತನನ್ನು ಮತ್ತು ಬೈಬಲಿನ ಬೋಧನೆಗಳನ್ನು ಅನುಸರಿಸುತ್ತೇವೆಂದು ಹೇಳುವ ಅನೇಕ ಭಿನ್ನ ಗುಂಪುಗಳಿವೆಯೆಂದು ನಿಮಗೆ ಗೊತ್ತು. ಆದರೂ, ಅವರ ನಂಬಿಕೆಗಳನ್ನು ಪರೀಕ್ಷಿಸುವಾಗ, ಅವರ ಬೋಧನೆಗಳಲನ್ಲೇಕ ಕ್ರಿಸ್ತನ ಬೋಧನೆಗಳಿಂದ ಭಿನ್ನವಾಗಿವೆ ಎಂದು ನೀವು ಕಂಡುಕೊಳ್ಳುವಿರಿ. ದೃಷ್ಟಾಂತಕ್ಕೆ, ಕ್ರಿಸ್ತನು ತನ್ನ ಹಿಂಬಾಲಕರಿಗೆ ಅವರು ಅಹಿಂಸಾ ಭಾವದವರೂ ವೈರಿಗಳನ್ನು ಪ್ರೀತಿಸುವವರೂ ಆಗಿರಬೇಕೆಂದು ಕಲಿಸಿದನು. ಕ್ರೈಸ್ತರೆನಿಸಿಕೊಳ್ಳುವ ರಾಷ್ಟ್ರಗಳು ಈ ಬೋಧನೆಯನ್ನು ಅನುಸರಿಸುತ್ತವೆಯೇ? ಎರಡು ಜಾಗತಿಕ ಯುದ್ಧಗಳಲ್ಲಿ ಮತ್ತು ನ್ಯೂಕ್ಲಿಯರ್ ಶಸ್ತ್ರಉತ್ಪಾದನೆಗಳಲ್ಲಿ ಅವರು ನಾಯಕತ್ವ ವಹಿಸಿಲ್ಲವೇ? ಮತ್ತು ಚರ್ಚುಗಳು ಈ ರಾಷ್ಟ್ರಗಳನ್ನು ಬೆಂಬಲಿಸಿವೆ ಎಂದು ದಾಖಲೆ ತೋರಿಸುತ್ತದೆ. ಹೀಗೆ, ಚರ್ಚುಗಳು ಕ್ರೈಸ್ತೇತರ ರಾಷ್ಟ್ರಗಳಿಗೆ ತಮ್ಮ ಮಿಶನೆರಿಗಳನ್ನು ಕಳುಹಿಸುವಾಗ ಅವರು ಯಾವಾಗಲೂ ಕ್ರಿಸ್ತನ ಬೋಧನೆಯನ್ನು ಕಳುಹಿಸುತ್ತಿದ್ದಾರೆಂದಾಗುವುದಿಲ್ಲ.
“ಆದರೆ ಜಗದ್ವ್ಯಾಪಕವಾಗಿ ನಮ್ಮಂತೆ, ದೇವರು ಬೇಗನೇ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ತರುತ್ತಾನೆಂದು ನಂಬುವ ಜನರಿದ್ದಾರೆ. ಬಹುಪೂರ್ವದಲ್ಲಿ ಬೈಬಲಿನಲ್ಲಿ ಬರೆಯಲ್ಪಟ್ಟಿರುವ ಭವಿಷ್ಯವಾಣಿಗಳೇ ನಮ್ಮ ನಿರೀಕ್ಷೆಗೆ ಆಧಾರ. ಲೋಕ ಪರಿವರ್ತನೆ ಅತಿ ನಿಕಟವಾಗಿದೆ ಎಂಬದನ್ನು ಇದು ನಮಗೆ ದೃಢೀಕರಿಸುತ್ತವೆ. ಮತ್ತು ನಾವು ನಮ್ಮ ನೆರೆಯವರೊಂದಿಗೆ ಈ ಸುವಾರ್ತೆಯಲ್ಲಿ ಪಾಲುಗಾರರಾಗಲು ಸರ್ವ ಪ್ರಯತ್ನವನ್ನು ಮಾಡುತ್ತೇವೆ. ಈ ಪರಿವರ್ತನೆಯ ವಾಗ್ದಾನವಿತ್ತಿರುವ ಬೈಬಲಿನ ದೇವರು ಯೆಹೋವನೆಂದು ಕರೆಯಲ್ಪಟ್ಟಿರುವುದರಿಂದ ನಾವು ಯೆಹೋವನ ಸಾಕ್ಷಿಗಳೆಂದು ಕರೆಯಲ್ಪಡುತ್ತೇವೆ.”
“ಮಾಸ್ಟ್ರೇ, ಇದು ನನಗೆ ಹೊಸ ವಿಷಯ. ಇನ್ನೊಂದು ಸಮಯ ನೀವು ನಮಗೆ ಇದರ ವಿಷಯ ಹೆಚ್ಚು ತಿಳಿಸಬೇಕು.”
ಭೂಮಿಯ ಮೇಲೆ ಸಂತೋಷದಿಂದಿರುವ ಬಯಕೆ
“ಅವರಿಗೆ ದೇವರಲ್ಲಿ ವಿಶ್ವಾಸವಿದೆ,” ಎಂದಳು ನಿರ್ಮಲ ತನ್ನ ಮಾವನಿಗೆ.
“ನೀನು ಯಾವುದರ ವಿಷಯ ಮಾತಾಡುತಿದ್ದಿ, ನಿರ್ಮಲ?”
“ಮಾಸ್ಟ್ರು ಮತ್ತು ಕುಟುಂಬ—ದೇವಸ್ಥಾನ, ಮಸೀದಿ ಯಾ ಚರ್ಚಿಗೆ ಹೋಗದೆ ಇರುವುದರಿಂದ ಮತ್ತು ಅವರ ಮನೆಯಲ್ಲಿ ವಿಗ್ರಹ ಅಥವಾ ಧಾರ್ಮಿಕ ಚಿತ್ರಗಳು ಇಲ್ಲದೆ ಇರುವುದರಿಂದ ಅವರಿಗೆ ದೇವರಲ್ಲಿ ವಿಶ್ವಾಸವಿಲ್ಲ ಎಂದು ನೀವು ಎಣಿಸುತ್ತಿದ್ದಿರಲ್ಲಾ. ಆದರೆ ಅವರಿಗೆ ವಿಶ್ವಾಸವಿದೆ. ನನ್ನ ಹುಟ್ಟಲಿರುವ ಮಗುವಿಗೆ ಉಡುಪನ್ನು ಮಾಡಲು ನನಗೆ ಕಲಿಸುತ್ತಿದ್ದಾಗ ಮರ್ಯಮ್ ಅಕ್ಕ ಇದನ್ನು ನನಗೆ ವಿವರಿಸಿದರು. ಸಕಲವನ್ನೂ ಸೃಷ್ಟಿಸಿದ ಏಕದೇವರಲ್ಲಿ ತಮಗೆ ವಿಶ್ವಾಸವಿದೆ ಮತ್ತು ಆತನ ಹೆಸರು ಯೆಹೋವನೆಂದು ಅವರು ಹೇಳಿದರು. ಆತನು ಅದೃಶ್ಯನಾಗಿರುವುದರಿಂದ ಮತ್ತು ಯಾರೂ ಆತನನ್ನು ಕಂಡಿಲ್ಲವಾದ್ದರಿಂದ ಅವರು ಆತನ ವಿಗ್ರಹ ಯಾ ಚಿತ್ರಗಳನ್ನು ಮಾಡುವುದಿಲ್ಲವಂತೆ. ಅವರ ಪವಿತ್ರ ಗ್ರಂಥವಾದ ಬೈಬಲು, “ದೇವರು ಆತ್ಮ ಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು” ಎಂದು ಹೇಳುತ್ತದೆಂದು ಅವರು ಹೇಳಿದರು. (ಯೋಹಾನ 4:24) ಆದುದರಿಂದ ಅವರು ದೃಶ್ಯವಾದ ಯಾವುದನ್ನೂ ಉಪಯೋಗಿಸದೆ ದೇವರಿಗೆ ಪ್ರಾರ್ಥಿಸುತ್ತಾರೆ. ಅವರು ತಮ್ಮನ್ನು ಯೆಹೋವನ ಸಾಕ್ಷಿಗಳೆಂದು ಕರೆದುಕೊಳ್ಳುತ್ತಾರೆ.
“ಮತ್ತು ದೇವರನ್ನು ಸತ್ಯದಿಂದ ಆರಾಧಿಸುವ ಕುರಿತು ಅತಿ ಸ್ವಾರಸ್ಯದ ಒಂದು ವಿಷಯವನ್ನು ಅವರು ಹೇಳಿದರು. ಸತ್ಯವೆಂದರೆ ನಿಜವಾಗಿಯೂ ವಾಸ್ತವವಾದ ವಿಷಯ, ಅದು ಪುರಾಣ ಕಥೆಯಾಗಲಿ ಕಲ್ಪನೆಯಾಗಲಿ ಅಲ್ಲವಂತೆ. ಆದುದರಿಂದ ಸಹಜ ನಿಜತ್ವಗಳನ್ನು ಒಪ್ಪದಿರುವ ಮಾನವ ನಿರ್ಮಿತ ತತ್ವಜ್ಞಾನಗಳನ್ನು ನಂಬುವುದಿಲ್ಲ. (ಮಾರ್ಕ 7:7, 8) ದೃಷ್ಟಾಂತಕ್ಕೆ, ಹೆಚ್ಚಿನ ಧರ್ಮಗಳು, ಈ ಭೂಮಿಯನ್ನು ಬಿಟ್ಟು ದೇವರೊಂದಿಗೆ ಐಕ್ಯವಾಗುವುದು ಅಥವಾ ಯಾವುದೇ ಮುಂದಿನ ಆತ್ಮ ಜೀವಿತದಲ್ಲಿ ಪ್ರತಿಫಲವನ್ನು ಪಡೆಯುವುದು ನಮ್ಮ ಅಂತಿಮ ಗುರಿ ಎಂದು ಹೇಳುವುದಾದರೂ ಇದು ನಿಜತ್ವಗಳನ್ನು ಒಪ್ಪುವುದಿಲ್ಲ. ಏಕೆಂದರೆ ಇದು ಮನುಷ್ಯನ ಸ್ವಾಭಾವಿಕ ಪ್ರವೃತ್ತಿಯಲ್ಲವೆಂದು ಅವರು ಹೇಳಿದರು. ಮನುಷ್ಯನಿಗೆ ಅತ್ಯಂತ ಅಪೇಕ್ಷಣೀಯವಾದ ವಿಷಯಗಳು ಒಂದು ಒಳ್ಳೆಯ ಮನೆ, ಒಳ್ಳೆಯ ಆರೋಗ್ಯ, ಸಂತುಷ್ಟ ಕುಟುಂಬ ಮತ್ತು ಪ್ರೀತಿಸುವ ಮಿತ್ರರು—ಇವೇ. ಜನರು ಸಂತೋಷದಲ್ಲಿರುವಾಗ, ಸಾಯಲಿಕ್ಕಾಗಲಿ, ಸ್ವರ್ಗಕ್ಕೆ ಹೋಗಲಿಕ್ಕಾಗಲಿ ಅಥವಾ ನಿರ್ವಾಣ ಯಾ ಮೋಕ್ಷವನ್ನು ಪಡೆಯಲಿಕ್ಕಾಗಲಿ ಬಯಸುವುದಿಲ್ಲವೆಂದು ಅವರು ಒತ್ತಿಹೇಳಿದರು. ‘ಭೂಮಿಯಲ್ಲಿ ಸಂತೋಷದಿಂದ ಜೀವಿಸುವ ಬಯಕೆಯನ್ನು ಮನುಷ್ಯನಿಗೆ ಯಾರು ಕೊಟ್ಟಿರಬೇಕು?’ ಎಂದು ಅವರು ನನ್ನನ್ನು ಪ್ರಶ್ನಿಸಿದರು. ಅವನನ್ನು ಸೃಷ್ಟಿಸಿದಾತನೇ ಆಗಿರಬೇಕು. ಹೀಗೆ, ಮನುಷ್ಯನು ಸದಾ ಇಲ್ಲಿ, ಇದೇ ಭೂಮಿಯಲ್ಲಿ ಸಂತೋಷದಿಂದ ಜೀವಿಸಲಿಕ್ಕಾಗಿ ಯೆಹೋವ ದೇವರು ಅವನನ್ನು ನಿರ್ಮಿಸಿದನೆಂದು ಬೈಬಲು ಕಲಿಸುತ್ತದಂತೆ. ಇದು ಮನುಷ್ಯನ ಪ್ರಾಕೃತಿಕ ಅಪೇಕ್ಷೆಯಾಗಿರುವುದರಿಂದ ಬೈಬಲಿನ ಈ ಬೋಧನೆ ವಿಷಯವನ್ನು ವಾಸ್ತವಿಕವಾಗಿ ವರ್ಣಿಸುತ್ತದೆಂದೂ ಈ ಕಾರಣದಿಂದ ಇದನ್ನು ಸತ್ಯವೆಂದು ಕರೆಯಬಹುದೆಂದೂ ಅವರು ವಾದಿಸಿದರು.”
“ಆದರೆ ನಿರ್ಮಲ, ಅದು ಸತ್ಯವಾಗಿದ್ದರೆ ದೇವರು ತನ್ನ ಉದ್ದೇಶದಲ್ಲಿ ನಿಷ್ಪಲಗೊಂಡಂತೆ ಆಯಿತು. ಭೂಮಿಯಲ್ಲಿ ಜನರಿಗೆ ಸಂತೋಷವಿಲ್ಲ. ಭೂಜೀವನವೆಂದರೆ ಸಮಸ್ಯೆ ಮತ್ತು ಕಷ್ಟಾನುಭವಗಳೇ ಮತ್ತು ಈ ಭೂಮಿಯಿಂದ ತಪ್ಪಿಸಿಕೊಳ್ಳುವಾಗ ಮಾತ್ರ ನಮಗೆ ಉಪಶಮನ ಬರಬಲ್ಲದು. ಹೇಗೂ ಇರಲಿ, ಮಾಸ್ಟ್ರು ಮತ್ತು ಅವರ ಕುಟುಂಬ ಈ ರಾತ್ರಿ ನಮ್ಮ ಮನೆಗೆ ಬರುತ್ತಾರೆಂದು ಆನಂದ ಹೇಳುತ್ತಾನೆ. ಇದರ ವಿಷಯ ಅವರ ಅಭಿಪ್ರಾಯವೇನೆಂದು ನಾವು ನೋಡೋಣ.”
ಸಕಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆಂದು ವಚನವಿತ್ತಿರುವಾತನು
ಹವಾಮಾನ ಮತ್ತು ಮಕ್ಕಳ ಸಮೀಪಿಸುತ್ತಿದ್ದ ಪರೀಕ್ಷೆಯ ಕುರಿತು ತುಸು ಮಾತಾಡಿದ ಬಳಿಕ ಅಜ್ಜಯ್ಯ ಅದೇದಿನ ಮೊದಲು ತಾನು ನಿರ್ಮಲಳ ಮುಂದೆ ಎತ್ತಿದ ವಾದವನ್ನು ಪುನಃ ಎತ್ತಿದರು. ಸ್ವಲ್ಪ ಕಾಲ ಯೋಚಿಸಿದ ಬಳಿಕ ಮಾಸ್ಟರರು ಆನಂದನ ತಾಯಿಗೆ, “ಅಜ್ಜಮ್ಮ, ಕುಟುಂಬದಲ್ಲಿ ಒಬ್ಬನಿಗೆ ಮಲೇರಿಯ ಜ್ವರ ಬಂದಾಗ ನೀವೇನು ಮಾಡುತ್ತೀರಿ?” ಎಂದು ಕೇಳಿದರು.
ಆಕೆ ಆಶ್ಚರ್ಯದಿಂದ, “ನಿಶ್ಚಯವಾಗಿಯೂ ಔಷಧ ಕೊಡುತ್ತೇನೆ. ನಮ್ಮಲ್ಲಿ ಈಗ ಅದು ಮಾಮೂಲಿಯಾಗಿರುವುದರಿಂದ ಔಷದದ ಅಂಗಡಿಯಲ್ಲಿ ಏನು ಕೇಳಬೇಕೆಂದು ನನಗೆ ಗೊತ್ತು.”
ಆನಂದನ ತಂದೆಯ ಕಡೆ ತಿರಿಗಿ ಮಾಸ್ಟರರು ಹೀಗೆಂದರು: “ನೋಡಿ ಅಜ್ಜಯ್ಯ, ಒಬ್ಬನಿಗೆ ಕಾಯಿಲೆ ಬರುವಾಗ ಹಾಗೆ ಮಾಡುವುದು ಸಮಂಜಸ. ನಾವು ಹುಷಾರಾಗಲು ಮದ್ದು ತೆಗೆದುಕೊಳ್ಳುತ್ತೇವೆ. ‘ನಾನು ಸತ್ತು ಭೂಮಿ ಬಿಟ್ಟು ಹೋಗುತ್ತೇನೆ’ ಎಂದು ನಾವು ಹೇಳುವುದಿಲ್ಲ. ಹಾಗಾದರೆ ನಮ್ಮ ಎಲ್ಲಾ ಕಷ್ಟಾನುಭವಗಳನ್ನು ತೆಗೆಯುವ ಮತ್ತು ಭೂಮಿಯಲ್ಲಿರುವ ನಮ್ಮ ಸರ್ವ ಸಮಸ್ಯೆಗಳನ್ನು ಬಗೆಹರಿಸುವ ಸಮರ್ಪಕ ‘ಔಷಧ’ ನಮಗಿರುವುದಾದರೆ ನಾವು ಸತ್ತು ನಮ್ಮ ಇಷ್ಟ ಮಿತ್ರರನ್ನು ಬಿಟ್ಟುಹೋಗುವ ಬದಲು ಇಲ್ಲಿಯೇ ಇರಲು ಇಷ್ಟಪಡಲಿಕ್ಕಿಲ್ಲವೇ?
“ಮನುಷ್ಯನಿಗೆ ತನ್ನ ಸರ್ವ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವಿಲ್ಲವೆಂಬದು ವ್ಯಕ್ತ. ಈ ಕಾರಣದಿಂದ ಮಾನವರು ಬಹಳ ಕಾಲದಿಂದ ಈ ಭೂಮಿಯ ಮೇಲೆ ಕಷ್ಟಾನುಭವಿಸುತ್ತಿದ್ದಾರೆ. ನಿಮ್ಮ ಸ್ವಂತ ನಂಬಿಕೆಯೇ ಕಲಿಯುಗದ ಸಮಯದಲ್ಲಿ ಭೂಮಿಗೆ ಸತ್ಯಯುಗವನ್ನು ತರಲು ದೇವರು ಅವತಾರವೆತ್ತುವನೆಂದು ಕಲಿಸುವುದಿಲ್ಲವೇ? ಈ ಬೋಧನೆಯನ್ನು ವಿಕಸಿಸಿದ ಪುರಾತನ ಕಾಲದ ತತ್ವಜ್ಞಾನಿಗಳು ಸಹ ಮನುಷ್ಯನು ಭೂಮಿಯಲ್ಲಿ ಸಂತೋಷಿಸುವಂತೆ ದೇವರು ಬಯಸಿದ್ದನೆಂದು ನಂಬುತ್ತಿದ್ದರು ಎಂದು ಇದು ತೋರಿಸುವುದಿಲ್ಲವೇ?
“ನಮ್ಮ ಈ ವಠಾರದ ಕುರಿತು ಯೋಚಿಸಿ, ಅಜ್ಜಯ್ಯ. ಇದು ಮೊದಲು ಕಟ್ಟಲ್ಪಟ್ಟಾಗ ಈ ಸ್ಥಳ ಅತ್ಯಂತ ಒಳ್ಳೇ ಸ್ಥಳವಾಗಿತ್ತಲ್ಲವೇ? ಆದರೆ ಇಂದು ನೋಡಿ. ಇತರರ ವಿಷಯ ಲಕ್ಷ್ಯವೇ ಮಾಡದ ಅನೇಕ ಬಾಡಿಗೆದಾರರು ಬಂದು ನೆಲೆಸಿದ್ದಾರೆ. ಅವರು ದಾರಿ ದೀಪಗಳನ್ನು ಒಡೆದು, ಇಷ್ಟ ಬಂದಲ್ಲಿ ಕಸವನ್ನು ಬಿಸಾಡಿ, ಕಿಟಿಕಿಗಳನ್ನು ಒಡೆದು ನಲ್ಲಿಯನ್ನು ಕದ್ದಿದ್ದಾರೆ ಮತ್ತು ಹೀಗೆ ನೀರು ನಷ್ಟವಾಗಿ ದಾರಿಯನ್ನೆಲ್ಲಾ ಕೆಸರು ಮಾಡಿಯದೆ. ಈಗ ಏನು ಮಾಡುವುದು ಅಗತ್ಯ? ಈ ಕೆಟ್ಟ ಬಾಡಿಗೆದಾರರನ್ನು ತೆಗೆದು ಈ ವಠಾರದ ಸೌಕರ್ಯಗಳನ್ನು ಸರಿಪಡಿಸುವುದಾದರೆ ನಾವಿಲ್ಲಿ ಸಂತೋಷದಿಂದ ಜೀವಿಸಲು ಸಾಧ್ಯವಿಲ್ಲವೇ? ಸರ್ವಭೂಮಿಗೆ ಹೀಗೆಯೇ ಮಾಡುತ್ತೇನೆಂದು ದೇವರು ವಾಗ್ದಾನಿಸಿದ್ದಾನೆ.
“ಬೈಬಲಿಗನುಸಾರವಾಗಿ, ದೇವರು ಮಾನವನನ್ನು ಸಂಪೂರ್ಣನೂ ಆರೋಗ್ಯವಂತನೂ ಸಂತೋಷಿಯೂ ಆಗಿ ಸೃಷ್ಟಿಸಿದನು. ಆದರೆ ದೇವರ ನಿಯಮಗಳಿಗೆ ವಿಧೇಯರಾಗದೆ ಇದ್ದು ಮನುಷ್ಯರು ಕೆಟ್ಟವರಾಗಿ ವರ್ತಿಸಿದ್ದಾರೆ, ನ್ಯೂನತೆಯುಳ್ಳವರಾಗಿದ್ದಾರೆ. (ಧರ್ಮೋಪದೇಶಕಾಂಡ 32:4, 5) ಅಷ್ಟೇ ಅಲ್ಲ, ಇಂದು ಅವರು ದೇವರ ಸೃಷ್ಟಿಯಾದ ಭೂಮಿಯನ್ನು ದ್ವಂಸ ಮಾಡುತ್ತಿದ್ದಾರೆ. ಆದುದರಿಂದ, ದೇವರು ಮೊದಲು ಈ ಭೂಮಿಯಿಂದ ದುಷ್ಟ ‘ಬಾಡಿಗೆದಾರ’ರನ್ನು ತೆಗೆದು, ಬಳಿಕ ಸಜ್ಜನರು ಆನಂದದ ಪರಿಸ್ಥಿತಿಗಳನ್ನು ಪುನಃಸ್ಥಾಪಿಸುವಂತೆ ಸಹಾಯ ಮಾಡುವನೆಂದು ಬೈಬಲು ಹೇಳುತ್ತದೆ.”—ಪ್ರಕಟನೆ 11:18.
“ಆದರೆ ಮಾಸ್ಟ್ರೇ, ಸ್ವಲ್ಪ ಸಮಯದ ಬಳಿಕ ಪರಿಸ್ಥಿತಿಗಳು ಪುನಃ ಕೆಟ್ಟುಹೋಗುವವು. ಈ ಕಾರಣದಿಂದ, ದೇವರು ಭೂಮಿಯನ್ನು ಶುಚಿಗೊಳಿಸಿ ಸತ್ಯಯುಗವನ್ನು ತಂದ ಬಳಿಕ, ದುಷ್ಟ ಪರಿಸ್ಥಿತಿಗಳು ಪುನಃ ಸಂಭವಿಸಿ, ಪುನಃ ಕಲಿಯುಗಕ್ಕೆ ನಡಿಸುತ್ತವೆ. ಆದುದರಿಂದ ಭೂಮಿಯಿಂದ ಪಲಾಯನವೇ ಕಾಯಂ ಶಾಂತಿಯನ್ನು ತರಬಲ್ಲದು. ಉದಾಹರಣೆಗೆ, ನನ್ನ ಕುಟುಂಬದ ಸಮಸ್ಯೆಗಳನ್ನು ನಾನು ಆಗಾಗ ಪರಿಹರಿಸಿದರೂ ಅವು ಪುನಃ ಹಿಂದೆ ಬಂದೇ ಬರುತ್ತವೆ ಅಥವಾ ಅವುಗಳ ಸ್ಥಾನದಲ್ಲಿ ಇನ್ನಿತರ ಸಮಸ್ಯೆಗಳು ಬಂದು ಬಿಡುತ್ತವೆ.”
“ಹೌದು, ಅದು ನಮಗೆಲ್ಲರಿಗೂ ಸಂಭವಿಸುತ್ತದೆ. ಆದರೆ ದೇವರಿಗೆ ಹಾಗಾಗಲಾರದು. ಆತನಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಇರುವುದು ಮಾತ್ರವಲ್ಲ, ಅವು ಪುನಃ ಎಂದಿಗೂ ಸಂಭವಿಸದಂತೆ ಮಾಡುವ ಶಕ್ತಿಯೂ ಬಯಕೆಯೂ ಇದೆ. ಭೂವ್ಯಾಪಕವಾಗಿ ಶಾಂತಿ ಮತ್ತು ಭದ್ರತೆಯನ್ನು ಚಿರಕಾಲ ಕಾಪಾಡುವ ಸಾಮರ್ಥ್ಯ ಆತನಿಗಿದೆ.”—ನಹೂಮ 1:9.
ಈ ಹಂತದಲ್ಲಿ, ಸುಮ್ಮನೆ ಕೂತು ಚರ್ಚೆಯನ್ನು ಕೇಳುತ್ತಿದ್ದ ಆನಂದ ಮಧ್ಯೆ ಮಾತಾಡುತ್ತಾ ಹೀಗಂದನು: “ನಾನದನ್ನು ಒಪ್ಪಲಾರೆ, ಮಾಸ್ಟ್ರೇ. ನಾವು ಇಷ್ಟು ದೀರ್ಘಕಾಲ ಸಮಸ್ಯೆಗಳೊಂದಿಗೆ ಜೀವಿಸುತ್ತಿದ್ದರೂ ದೇವರು ಅದನ್ನು ನಿಲ್ಲಿಸಿದ್ದಾನೆಯೇ? ಇಲ್ಲ! ಮನುಷ್ಯರಾದ ನಾವು ಮಾತ್ರ ಬದಲಾವಣೆ ತರಬಲ್ಲಿವೆಂತ ನನ್ನ ಅಭಿಪ್ರಾಯ. ನಾವು ಪೂರ್ಣ ವ್ಯವಸ್ಥೆಯನ್ನೇ ಬದಲಾಯಿಸಬೇಕು. ಧನಿಕರ ಮತ್ತು ಭ್ರಷ್ಟರ ವಿರುದ್ಧ ದಂಗೆಯೆದ್ದು ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಪೀಡಿತ ಜನರು ಲೋಕವ್ಯಾಪಕವಾಗಿ ಬಲಾತ್ಕಾರದ ವಿರುದ್ಧ ಏಳುವಲ್ಲಿ ನಾವು ಪರಿವರ್ತನೆ ತರಬಲ್ಲೆವು. ಆಗ ಪ್ರಾಯಶಃ, ನಾನು ರಾಮು ಮತ್ತು ಪ್ರಿಯಳನ್ನು ದೊಡ್ಡ ವಂತಿಗೆ ಕೊಡದೆ ಅಥವಾ ಅನುಚಿತ ಪ್ರಾಬಲ್ಯದಿಂದ ಒತ್ತಡ ತರದೆ ಹೆಚ್ಚು ಉತ್ತಮ ಶಾಲೆಗಳಿಗೆ ಸೇರಿಸಬಲ್ಲೆ.”
“ನಿಮ್ಮ ಅನಿಸಿಕೆ ನನಗೆ ಅರ್ಥವಾಗುತ್ತದೆ, ಆನಂದ್. ವಾಸ್ತವವಾಗಿ ಬೈಬಲ್ ಈ ಸ್ಥಿತಿಗತಿಗಳ ಕುರಿತು ನುಡಿಯುತ್ತಾ ಶತಮಾನಗಳಿಂದ ‘ಮನುಷ್ಯನು ಮನುಷ್ಯನ ಮೇಲೆ ಅಧಿಕಾರ ನಡಿಸುತ್ತಾ ಆತನಿಗೆ ಹಾನಿಮಾಡಿದ್ದಾನೆ’ ಎಂದು ಹೇಳುತ್ತದೆ.”—ಪ್ರಸಂಗಿ 8:9.
“ಆದರೆ ದೇವರ ಉದ್ದೇಶ ಇದೇ ಆಗಿಲ್ಲವೇ?” ಎಂದ ಆನಂದ. “ಆರಾಧನೆಯ ಸ್ಥಳಗಳಲ್ಲಿಯೂ ಧನಿಕರಿಗೆ ಬಡವರಿಗಿಂತ ಆಧ್ಯತೆ ದೊರಕಿ ಧನಿಕರು ಅಧಿಕಾರ ನಡಿಸುತ್ತಾರೆ.”
“ಇಲ್ಲ, ಆನಂದ್, ಇದು ದೇವರ ಉದ್ದೇಶವಾಗಿರಲಿಲ್ಲ. ದೇವರು ಮನುಷ್ಯನನ್ನು ಅವನು ಕೆಳರೀತಿಯ ಜೀವಿಗಳ ಮೇಲೆ—ಪ್ರಾಣಿ, ಮತ್ಸ್ಯ ಮತ್ತು ಪಕ್ಷಿಗಳ ಮೇಲೆ ಮಾತ್ರ—ಅಧಿಕಾರ ನಡಸಲು ಮಾಡಿದನೇ ಹೊರತು ಜೊತೆ ಮಾನವರ ಮೇಲಲ್ಲ.”—ಆದಿಕಾಂಡ 1:28.
“ಒಳ್ಳೆಯದು. ಇಂಥ ಅಧಿಕಾರ ದೇವರ ಅಪೇಕ್ಷೆಗೆ ವ್ಯತಿರಿಕ್ತವಾಗಿರುವಲ್ಲಿ, ಕ್ರಾಂತಿಕಾರರು ಭ್ರಷ್ಟರಾದ ಬಲಾತ್ಕಾರಿಗಳನ್ನು ನಾಶಮಾಡುವಾಗ ಅವರು ದೇವರ ಇಷ್ಟವನ್ನು ನೆರವೇರಿಸುವುದಿಲ್ಲವೇ?”
“ಆದರೆ ಈ ಕ್ರಾಂತಿಕಾರರು ಇಂಥವರನ್ನು ತೊಲಗಿಸಿದ ಬಳಿಕ ಏನಾಗುವುದು? ಅವರು ಅಧಿಕಾರ ತೆಗೆದುಕೊಂಡು ತಾವೇ ಪೀಡಕರಾಗುತ್ತಾರೆ. ಹೀಗೆ ನಾವು ಮೊದಲಿದ್ದ ಸ್ಥಾನಕ್ಕೆ ಹಿಂದೆ ಹೋಗುತ್ತೇವೆ. ಇಲ್ಲ, ಕೇವಲ ದೇವರೇ ಸರ್ವ ದಬ್ಬಾಳಿಕೆಯನ್ನು ನಿವಾರಿಸಿ ದೈವಿಕ ಪ್ರಭುತ್ವವನ್ನು ಸ್ಥಾಪಿಸುವ ಮುಖೇನ ಬಾಳುವ ಶಾಂತಿಯನ್ನು ತರಬಲ್ಲನು. ಯೆಹೋವ ದೇವರು ಇದನ್ನು ಅತಿ ಶೀಫ್ರದಲ್ಲಿ ಮಾಡಲಿರುವನೆಂದು ಬೈಬಲು ಹೇಳುತ್ತದೆ. ನನ್ನ ಕುಟುಂಬವೂ ಸಾವಿರಾರು ಜನ ಯೆಹೋವನ ಸಾಕ್ಷಿಗಳೂ ಇದನ್ನು ದೃಢವಾಗಿ ನಂಬುತ್ತಾರೆ, ಮತ್ತು ನಮಗೆ ಇದು ಅದ್ಭುತಕರವಾದ ಭಾವೀ ನಿರೀಕ್ಷೆಯನ್ನು ಕೊಡುತ್ತದೆ.”
ಸಮಸ್ಯೆಗಳನ್ನು ಯಾವಾಗ ಪರಿಹರಿಸಲಾಗುವುದು?
“ಅದು ನ್ಯಾಯವೆಂದು ಕಾಣುತ್ತದೆ” ಎಂದ ಆನಂದ. “ಆದರೆ ಭೂಮಿಯಲ್ಲಿ ಬದಲಾವಣೆ ಯಾ ಸುಧಾರಣೆ ಆಗುತ್ತದೆನ್ನುವ ಯಾವ ಸೂಚನೆಯನ್ನೂ ನಾನು ಕಾಣೆ. ಇಂಥ ಪರಿವರ್ತನೆಯನ್ನು ದೇವರು ನನ್ನ ಆಯುಷ್ಕಾಲದಲ್ಲಿ ತರುವನೆಂದು ನಾನು ಹೇಗೆ ನಂಬಬಲ್ಲೆ?”
“ಆನಂದ್, ನೀವು ಮನೆಯಲ್ಲಿಲ್ಲದಿದ್ದಾಗ ನಾನು ನಿಮ್ಮ ತೋಟದಲ್ಲಿ ಒಂದು ಮಾವಿನ ಬೀಜವನ್ನು ಹಾಕಿದ್ದೇನೆಂದು ಹೇಳಿದೆ ಎಂದು ನೆನಸಿ. ನೀವು ಹೊರಗೆ ಹೋಗಿ ನೋಡುವಾಗ ನಿಮಗೆ ಯಾವುದೂ—ಕೆದಕಿದ ಮಣ್ಣೂ— ಕಾಣಿಸುವುದಿಲ್ಲ. ನಾನು ನಿಮಗೆ ಅಪರಿಚಿತನೆಂದು ನೆನಸಿರಿ. ನಿಮಗೆ ಹೀಗೆ ಅನಿಸೀತು: ‘ಈ ಅಪರಿಚಿತನು ನನ್ನ ತೋಟಕ್ಕೆ ಬಂದು ಬೀಜಹಾಕುವ ತೊಂದರೆಯನ್ನು ಏಕೆ ತೆಗೆದುಕೊಳ್ಳಬೇಕು?’ ನಾನು ಹೇಳಿದ್ದನ್ನು ನಿಜವಾಗಿಯೂ ಮಾಡಿದ್ದೇನೆ ಎಂದು ನಂಬುವ ಪ್ರವೃತಿ ನಿಮಗೆ ಬಂದೀತೇ?”
“ಇಲ್ಲ. ಬರಲಿಕ್ಕಿಲ್ಲ. ನೀವು ಹಾಗೆ ಮಾಡಿದ್ದೀರೆಂಬ ವಿಷಯ ನನಗೆ ಕಡಿಮೆಪಕ್ಷ ಅತಿ ಸಂಶಯವಾದರೂ ಬಂದೀತು.”
“ಹೌದು, ಅದು ನಿಶ್ಚಯ. ಸ್ವಲ್ಪ ಸಮಯಾನಂತರ, ಒಂದು ಸಸಿ ಬೆಳೆಯಲಾರಂಭಿಸುವುದನ್ನು ನೀವು ನೋಡುತ್ತೀರೆಂದು ನೆನಸಿ. ನೀವು ಮನೆಯಲ್ಲಿರದಾಗ ಯಾರೋ ಗುಪ್ತವಾಗಿ ಆ ಸಸಿಗೆ ನೀರು ಹೊಯ್ಯುತ್ತಿದ್ದಾರೆಂದು ನೀವು ತಿಳಿಯುತ್ತೀರಿ. ಸಮಯ, ವರ್ಷಗಳು ದಾಟುತ್ತವೆ. ಅದು ನಿಜವಾಗಿಯೂ ಮಾವಿನ ಮರವೆಂದು ನೀವು ಗುರುತಿಸುತ್ತೀರಿ. ಬಳಿಕ, ಒಂದು ವರ್ಷ, ಮರ ಹೂವಿನಿಂದ ತುಂಬುವುದನ್ನು ನೀವು ನೋಡುತ್ತೀರಿ. ಈಗ ನಿಮಗೆ ಹೇಗೆನಿಸಬಹುದು?”
“ಆಗ ನೀವು ಹೇಳಿದ್ದು ಸತ್ಯವೆಂದು ನನಗೆ ತಿಳಿದುಬರುತ್ತದೆ. ನೀವು ದಯಾಪರರೆಂದೂ ನನ್ನ ವಿಷಯವಾಗಿ ಚಿಂತಿಸುವವರೆಂದೂ ನನಗೆ ತಿಳಿಯುತ್ತದೆ. ಮತ್ತು ನಾನು ಆ ಮರವನ್ನು ನೋಡುತ್ತಾ ಉತ್ತೇಜನದಿಂದ ಅದರ ಫಲಕ್ಕಾಗಿ ಕಾಯುತ್ತಿರುವೆ.”
“ಖಂಡಿತ. ನಿಮ್ಮ ಪ್ರತಿಕ್ರಿಯೆ ನಿರೀಕ್ಷಿಸಬಹುದಾದ ಪ್ರತಿಕ್ರಿಯೆಯೆ. ಯೆಹೋವನ ಸಾಕ್ಷಿಗಳು ಬಹು ಬೇಗನೆ ಒಂದು ಲೋಕ ಪರಿವರ್ತನೆಯನ್ನು ಏಕೆ ನಿರೀಕ್ಷಿಸುತ್ತಿದ್ದಾರೆಂಬದಕ್ಕೆ ಇದೊಂದು ದೃಷ್ಟಾಂತ. ಅದನ್ನು ವಿವರಿಸುತ್ತೇನೆ.
“ಬೈಬಲನ್ನು ಬರೆದು ಮುಗಿಸಲು 1,600 ವರ್ಷಗಳು ಹಿಡಿದವು. ಇವನ್ನು 66 ಚಿಕ್ಕ ಪುಸ್ತಕಗಳ ರೂಪದಲ್ಲಿ 40ಕ್ಕೂ ಹೆಚ್ಚು ವಿವಿಧ ಪುರುಷರು ಬರೆದರು. ಇದು ಕೊನೆಗೆ ಒಂದು ದೊಡ್ಡ ಗ್ರಂಥವಾಗಿ ಸಂಗ್ರಹಿಸಲ್ಪಟ್ಟಿತು. ತನ್ನ ಸ್ವಂತಾಲೋಚನೆಗಳನ್ನು ಬರೆದಿದ್ದೇನೆಂದು ಯಾವ ಲೇಖಕನೂ ಹೇಳಲಿಲ್ಲ. ತಾನು ಏನು ಬರೆಯಬೇಕೆಂಬದನ್ನು ದೇವರೇ ತಿಳಿಸಿದನೆಂದೂ ಈ ಮಾಹಿತಿ ದೇವರಿಂದಲೇ ಎಂದು ಅವರು ಹೇಳಿದರು. ಮಧ್ಯಪೂರ್ವದಲ್ಲಿ ರಾಜನಾಗಿ ಆಳುತ್ತಿದ್ದ ಒಬ್ಬ ಲೇಖಕನು ಹೇಳಿದ್ದು: ‘ಯೆಹೋವನ ಆತ್ಮವು ನನ್ನಲ್ಲಿ ಉಸುರಿತು; ಆತನ ವಾಕ್ಯ ನನ್ನ ಬಾಯಲ್ಲಿತ್ತು’—2 ಸಮುವೇಲ 23:2.
“ಅತ್ಯಂತ ಮೊದಲನೆಯ ಪುಸ್ತಕವೇ ಸೃಷ್ಟಿಯನ್ನು ವರ್ಣಿಸುತ್ತದೆ. ಯೆಹೋವ ದೇವರು ಮನುಷ್ಯನನ್ನು ಪರಿಪೂರ್ಣರಾಗಿ ಮಾಡಿದನೆಂದೂ ಆತನ ಮಾರ್ಗದರ್ಶನಕ್ಕಾಗಿ ನಿಯಮಗಳನ್ನು ಕೊಟ್ಟನೆಂದೂ ಅದು ಹೇಳುತ್ತದೆ. ಆದರೆ ದೇವರು ಅವನಿಗೆ, ದೇವರ ನಿಯಮಗಳನ್ನು ಅವನು ಅನುಸರಿಸಬೇಕೊ ಬಾರದೊ ಎಂದು ಆಯ್ಕೆ ಮಾಡಲು ಸ್ವತಂತ್ರ ಸಂಕಲ್ಪ ಶಕ್ತಿಯನ್ನೂ ಕೊಟ್ಟನು. ಈ ನಿಯಮಗಳ ಅನುಸರಣೆ ಸಂತೋಷವನ್ನು ತರಲಿಕ್ಕಿತ್ತು. ಅವುಗಳ ಉಲ್ಲಂಘನೆ ಶಿಕ್ಷೆಯನ್ನು ತರಲಿಕ್ಕಿತ್ತು. ಮನುಷ್ಯನು ದೇವರ ನಿಯಮಗಳನ್ನು ಮುರಿಯಲು ಆಯ್ದುಕೊಂಡು ಹೀಗೆ, ತನ್ನ ಮತ್ತು ತನ್ನ ಸಂತತಿಯ ಮೇಲೆ ಬಾಧೆ ಮತ್ತು ಮರಣವನ್ನು ತಂದನು. ಆದರೆ ದೇವರು ಆಗ ಒಂದು ‘ಬೀಜ’ವನ್ನು ಬಿತ್ತಿದನು. ಹೌದು, ಒಂದಾನೊಂದು ದಿನ ಆತನು ನಮ್ಮ ಸಮಸ್ಯೆಗಳನ್ನೆಲ್ಲಾ ಬಗೆಹರಿಸಿ ಮಾನವ ಕುಲಕ್ಕೆ ಶಾಂತಿ ಮತ್ತು ಸಂತೋಷವನ್ನು ತರುವ ನಿರೀಕ್ಷಾ ‘ಬೀಜ’ ಅದಾಗಿತ್ತು.
“ಈ ‘ಬೀಜ,’ ದೇವರು ಒಂದು ಪರಿವರ್ತನೆಯನ್ನು ತರುತ್ತಾನೆಂಬ ವಚನದ ರೂಪದಲ್ಲಿತ್ತು. ಇತಿಹಾಸದಲ್ಲೆಲ್ಲಾ ಮಾನವ ಕುಲದ ಬಹುತೇಕ ಜನರಿಗೆ ದೇವರು ‘ಅಪರಿಚಿತ’ನಾಗಿದ್ದನು. ಯೆಹೋವನು ಆ ವಚನವನ್ನು ಕೊಟ್ಟಾಗ ಅಥವಾ ಆ ‘ಬೀಜ’ವನ್ನು ಬಿತ್ತಿದಾಗ ನಾನು, ನೀವು ಮತ್ತು ಇಂದು ಜೀವಿಸುತ್ತಿರುವ ಸಕಲರು ಇದ್ದಿರಲಿಲ್ಲ. ಆತನು ತನ್ನ ವಚನವನ್ನು ಪುನಃ ನುಡಿದು, ಅದನ್ನು ವಿಸ್ತರಿಸಿ, ಶತಮಾನಗಳಲ್ಲಿ ಹೆಚ್ಚಿನ ವಿವರಣೆ ನೀಡುತ್ತಾ ಹೀಗೆ, ‘ನೀರು ಹೊಯ್ಯುತ್ತಿದ್ದಾಗಲೂ’ ನಾವು ಇದ್ದಿರಲಿಲ್ಲ. ಆದರೆ ಇದರ ವೃತ್ತಾಂತ ವಿವಿಧ ಪುಸ್ತಕಗಳಲ್ಲಿ ಹರಡಿರುತ್ತಾ ಬೈಬಲಿನಲ್ಲಿ ಕಂಡು ಬರುತ್ತದೆ. ಮತ್ತು ಬೈಬಲು ಮುಕ್ತಾಯಗೊಂಡಾಗ ಮಾನವ ಕುಲದ ಸಮಸ್ಯೆಗಳನ್ನು ದೇವರು ಹೇಗೆ ಪರಿಹರಿಸುವನೆಂಬದನ್ನು ಅದು ಪೂರ್ತಿಯಾಗಿ ವಿವರಿಸಿತ್ತು.
“ಆದುದರಿಂದ ಆನಂದ್, ನನ್ನ ದೃಷ್ಟಾಂತದ ಮುಖ್ಯಾರ್ಥ ಇದೇ. ‘ಬೀಜ’ ಬಿತ್ತುವುದನ್ನು—ದೇವರ ಮೂಲ ವಾಗ್ದಾನವನ್ನು—ಅಥವಾ ದೇವರು ಕೊಟ್ಟಿರುವ ಎಲ್ಲಾ ಹೆಚ್ಚಿಗೆಯ ಮಾಹಿತಿಯ ಮೂಲಕ ಅದಕ್ಕೆ ನೀರು ಹೊಯ್ಯುವುದನ್ನು ನಾವು ನೋಡದಿದ್ದರೂ, ನಾವಿಂದು ಹೂಬಿಟ್ಟಿರುವ ಪೂರ್ತಿ ಬೆಳೆದ ಮರವನ್ನು ನೋಡಬಲ್ಲೆವು. ಹೀಗೆ ಫಲ ಬಂದೇ ಬರುವುದೆಂದು ನಾವು ಖಂಡಿತ ಹೇಳಬಲ್ಲೆವು.”
“ನೀವು ಏನು ಹೇಳುತ್ತೀರಿ? ನಾನು ಈ ಮೊದಲೇ ಹೇಳಿದಂತೆ, ಬದಲಾವಣೆ ಬರುತ್ತದೆಂಬ ಯಾವುದೂ ನನಗೆ ಕಾಣಿಸುವುದಿಲ್ಲ.”
“ಹೌದು, ಕಾಣಿಸುತ್ತದೆ. ಆದರೆ ನೀವು ಏನು ಹುಡುಕಬೇಕೆಂದು ಯಾರೂ ತಿಳಿಸದ ಕಾರಣ ನೀವು ಅದನ್ನು ಗುರುತಿಸುವುದಿಲ್ಲ. ದೇವರು ಮಧ್ಯೆ ಕೈಹಾಕುವ ಸಮಯದಲ್ಲಿ ಪರಿಸ್ಥಿತಿಯು ಹೇಗಿರುವುದೆಂಬದರ ವಿವರವಾದ ವರ್ಣನೆಯನ್ನು ಬೈಬಲು ಕೊಡುತ್ತದೆ. ಆಗ ಎದ್ದು ಕಾಣುವ ಅನೇಕ ವಿಷಯಗಳನ್ನು ಒಂದೇ ಸಂತತಿಯ ಜನರು ನೋಡುವರೆಂದೂ ಈ ‘ಸೂಚನೆ’ಯನ್ನು ಕಾಣುವ ಸಂತತಿಯೇ ದುಷ್ಟತ್ವದ ಅಂತ್ಯವನ್ನು ಮತ್ತು ಶಾಂತಿಭರಿತ ನೂತನ ಜಗತ್ತಿನ ಆರಂಭವನ್ನೂ ನೋಡುವದೆಂದೂ ಅದು ಸ್ಪಷ್ಟವಾಗಿ ತೋರಿಸುತ್ತದೆ. (ಮತ್ತಾಯ 24:3) ಈಗ ಆನಂದ್, ನೀವೇ ತೀರ್ಮಾನಿಸಲಾಗುವಂತೆ ಮತ್ತು ಈ ಸಂಗತಿಗಳು ನಡೆಯುತ್ತವೂ ಇಲ್ಲವೂ ಎಂದು ನೋಡಲಾಗುವಂತೆ ಬೈಬಲು ಹೇಳುವುದನ್ನು ನೀವು ತಿಳಿಯಬಯಸುವುದಿಲ್ಲವೆ?”
“ನಿಶ್ಚಯ ತಿಳಿಯ ಬಯಸುವೆ.”
“ಸೂಚನೆ”
“ಮೊನ್ನೆ ಸಂಜೆ ನಮ್ಮ ವಠಾರದಲ್ಲಿ ಹೆಚ್ಚುತ್ತಿರುವ ಬಲಾತ್ಕಾರವನ್ನು ಚರ್ಚಿಸುತ್ತಾ, ಸ್ತ್ರೀಯರು ಮತ್ತು ಮಕ್ಕಳು ಕತ್ತಲೆಯಾದ ಬಳಿಕ ಹೊರಗೆ ಹೋಗಬಾರದೆಂದು ನಾವು ಒಪ್ಪಿದ್ದು ನೆನಪಿದೆಯೆ? ಮೊದಲು ನಗರದ ಈ ಭಾಗ ಅತ್ಯಂತ ನೆಮ್ಮದಿಯದಾಗಿದ್ದರೂ ಈಗ ಎಷ್ಟೋ ಜನರ ಮೇಲೆ ಆಕ್ರಮಣ ನಡೆದು ಅವರನ್ನು ಸುಲಿಗೆ ಮಾಡಲಾಗುತ್ತದೆ. ಇದು ಸೂಚನೆಯ ಭಾಗ. ‘ಅಧರ್ಮವು ಹೆಚ್ಚಾಗುವುದು’ ಮತ್ತು ‘ಜನರು ಹಣದಾಸೆಯವರೂ . . . ದಮೆಯಿಲ್ಲದವರೂ ಉಗ್ರತೆಯುಳ್ಳವರೂ’ ಆಗುವರೆಂದು ಬೈಬಲು ಹೇಳುತ್ತದೆ. ನಾವು, ಖೋಟಾ ಮಾದಕ ಪದಾರ್ಥ ತಯಾರಕರ ಮೇಲೆ ಇತ್ತೀಚೆಗೆ ನಡೆದ ಪೊಲೀಸರ ಧಾಳಿಯ ಕುರಿತೂ ಮಾತಾಡಿದ್ದು ನೆನಪಿದೆಯೆ? ಹಣಮಾಡುವ ಉದ್ದೇಶದಿಂದ ಜನರ ಜೀವವನ್ನು ಅಪಾಯಕ್ಕೊಡ್ಡುವ ಈ ವಿಷಯ ಎಷ್ಟು ಕ್ರೂರ! ಸಾಮಾನ್ಯವಾಗಿ, ಜನರು ರೋಗಿಗಳನ್ನು ಕನಿಕರದಿಂದ ನೋಡುವುದುಂಟು. ಆದರೆ ಈ ದುಷ್ಟ ಲೋಕದ ಕೊನೆಯ ದಿನಗಳಲ್ಲಿ ಜನರು ‘ಸ್ವಾರ್ಥಚಿಂತಕರೂ . . . [ಸ್ವಾಭಾವಿಕ] ಮಮತೆಯಿಲ್ಲದವರೂ . . . ಒಳ್ಳೇದನ್ನು ಪ್ರೀತಿಸಿದವರೂ’ ಆಗುವುದರಿಂದ ಅದು ತೀರಾ ಕಠಿಣಕಾಲ ಆಗಲಿದೆ ಎಂದು ಬೈಬಲು ಹೇಳುತ್ತದೆ.—ಮತ್ತಾಯ 24:12. 2 ತಿಮೊಥಿ 3:1-3.
ಆಗ ರಾಮು ಥಟ್ಟನೆ “ಇದೇ ಕಲಿಯುಗದ ಸೂಚನೆಯೆಂದು ಅಜ್ಜಮ್ಮ ಹೇಳುತ್ತಾರೆ. ಕಲಿಯುಗದ ಸಮಯದಲ್ಲಿ ಜನರು ಹೆಚ್ಚು ಸ್ವಾರ್ಥಿಗಳೂ ಲೋಭಿಗಳೂ ಆಗುತ್ತಾರಂತೆ. ಆದರೆ ಸತ್ಯಯುಗ ಬರಲು ದೀರ್ಘಕಾಲವಿದೆ. ಅದು ಅವರ ಆಯುಷ್ಕಾಲದಲ್ಲಿ ಬರುವುದಿಲ್ಲವೆಂದು ಅಜ್ಜಮ್ಮನ ಹೇಳಿಕೆ” ಎಂದು ಹೇಳಿದನು.
“ಹೌದು ರಾಮೂ, ಅನೇಕರಿಗೆ ಅಜ್ಜಿಯಂತೆಯೇ ಅನಿಸುತ್ತದೆ. ಪರಿಸ್ಥಿತಿ ತೀರಾ ಕೆಟ್ಟಿದೆ, ಬದಲಾವಣೆ ಬರಲಿಕ್ಕಿದೆ ಎಂದು ಅವರು ಬಲ್ಲರು. ಆದರೆ ಅದು ಯಾವಾಗ ಬರಬಹುದೆಂಬದರ ವಿಷಯ ಅನೇಕ ಭಿನ್ನಾಭಿಪ್ರಾಯಗಳಿವೆ. ಈ ಸಂದರ್ಭದಲ್ಲಿ ಬೈಬಲು ನಮಗೆ ಸಹಾಯ ಮಾಡುತ್ತದೆ. ನಮ್ಮ ಜೀವಮಾನದಲ್ಲಿಯೇ ಈ ಬದಲಾವಣೆ ಬರುತ್ತದೆಂದು ಬೈಬಲು ಅತಿ ಸ್ಪಷ್ಟವಾಗಿ ಹೇಳುತ್ತದೆ. ಈ ಸೂಚನೆಯಲ್ಲಿ, ಕೇವಲ ಮನುಷ್ಯನ ವ್ಯಕ್ತಿತ್ವ ಕೆಟ್ಟದಾಗುವುದಕ್ಕಿಂತ ಎಷ್ಟೋ ಹೆಚ್ಚು ವಿಷಯಗಳು ಸೇರಿವೆ.
“ಬೈಬಲಿನ ಮತ್ತಾಯ ಪುಸ್ತಕದ 24ನೇ ಅಧ್ಯಾಯದ 7ನೇ ವಚನದಲ್ಲಿ, ‘ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಭೂಕಂಪಗಳು ಆಗುವವು’ ಎಂದು ಹೇಳುತ್ತದೆ. ಯೇಸು ಕ್ರಿಸ್ತನು, ದುಷ್ಟತನದ ಅಂತ್ಯ ದಿನಗಳು ಬಂದಿವೆ ಮತ್ತು ದೇವರಿಂದ ಬರಲಿರುವ ನಾಶನ ಸನ್ನಿಹಿತವಾಗಿದೆ ಎಂದು ತೋರಿಸಲು ಕೊಟ್ಟ ಸೂಚನೆಯ ಭಾಗವಿದು. ಈಗ ಇದನ್ನು, ಪ್ರಕಟನೆಯೆಂದು ಕರೆಯಲ್ಪಡುವ ಬೈಬಲಿನ ಕೊನೆಯ ಪುಸ್ತಕದ ಇದೇ ಸಮಯದ ವರ್ಣನೆಗೆ ಹೋಲಿಸಿ. 6ನೇ ಅಧ್ಯಾಯ 4ರಿಂದ 8ರ ವರೆಗಿನ ವಚನಗಳಲ್ಲಿ ಇಂಥ ಪರಿಸ್ಥಿತಿಗಳು ಲೋಕವ್ಯಾಪಕವಾಗಿರುವುದೆಂದು ನಾವು ನೋಡುತ್ತೇವೆ. ಯುದ್ಧವನ್ನು ವರ್ಣಿಸುತ್ತಾ, ‘ಭೂಮಿಯಿಂದ ಸಮಾಧಾನವನ್ನು ತೆಗೆದು ಬಿಡುವುದರ’ ಕುರಿತು ಅದು ಹೇಳುತ್ತದೆ. ರಾಮು, ನಿನ್ನ ಚರಿತ್ರೆ ಪಾಠಗಳಲ್ಲಿ, 1914ನೇ ವರ್ಷ ಪ್ರಥಮ ಜಾಗತಿಕ ಯುದ್ಧ ಪ್ರಾರಂಭವಾದ ವರ್ಷವೆಂದು ನೀನು ಕಲಿತಿದ್ದೀ ಎಂಬದು ನಿಶ್ಚಯ. ಇದು ಇತಿಹಾಸದ ಸಂಧಿಕಾಲವೆಂದು ಚರಿತ್ರೆಗಾರರ ಹೇಳಿಕೆ. ಏಕೆಂದರೆ ಅಂದಿನಿಂದ ನಾವು ಒಂದರ ಮೇಲೆ ಇನ್ನೊಂದು ಯುದ್ಧವಾಗುತ್ತಿರುವುದನ್ನು ನೋಡಿದ್ದೇವೆ ಮತ್ತು ಸಮಸ್ತ ಭೂಮಿಯಿಂದ ಸಮಾಧಾನ ಪೂರ್ತಿಯಾಗಿ ತೆಗೆಯಲ್ಪಟ್ಟಿದೆ.
“ಅದೇ ಅಧ್ಯಾಯ, ಯೇಸು ಹೇಳಿದ ಆಹಾರದ ಅಭಾವದ ಕುರಿತು ಹೆಚ್ಚಿನ ವಿವರಣೆಯನ್ನು ಕೊಡುತ್ತದೆ. ಒಂದು ಪೂರ್ತಿ ದಿನದ ಸಂಬಳವನ್ನು ಕೊಟ್ಟು ಸ್ವಲ್ಪ ಗೋಧಿಯನ್ನು ಪಡೆಯುವುದರ ಕುರಿತು ಅಲ್ಲಿ ಹೇಳುತ್ತದೆ. ಆನಂದ್, ನಿರ್ಮಲ ಮಾರ್ಕೆಟಿಗೆ ಹೋಗಿ ಬರುವಾಗ ಇದರ ವಿಷಯ ಗೊಣಗುವುದಿಲ್ಲವೇ? ಮೂಲಪದಾರ್ಥಗಳ ಬೆಲೆಯೂ ಒಂದೇ ಸವನೆ ವೃದ್ಧಿಯಾಗುತ್ತಿರುವ ವಿಷಯ ಹೇಳುವುದಿಲ್ಲವೆ? ಆಫ್ರಿಕಾ ಮತ್ತು ಏಷ್ಯಾದ ಅನೇಕ ಭಾಗಗಳಲ್ಲಿ ಅನಾವೃಷ್ಟಿಯ ಕಾರಣ ಆಗಿರುವ ಆಹಾರದ ತೀರಾ ಕೊರತೆಯನ್ನು ಗಮನಿಸಿ. ಲಕ್ಷಗಟ್ಟಲೆ ಜನರು ರಾತ್ರಿ ಹಸಿವೆಯುಳ್ಳವರಾಗಿ ಮಲಗುತ್ತಾರೆ. ನ್ಯೂನ ಪೋಷಣೆಯಿಂದಾಗಿ ಬರುವ ರೋಗಗಳ ಕಾರಣ ಮಕ್ಕಳು ಸಾಯುತ್ತಾರೆ. ಹೌದು, ಆಹಾರದ ಅಭಾವವು ನಮ್ಮ ದಿನಗಳಲ್ಲಿ ಲೋಕವ್ಯಾಪಕವಾದ ಕೇಡು ಸೂಚನೆಯಾಗಿದೆ.
“ಅದೇ ಸೂಚನೆಯ ಇನ್ನೊಂದು ಭಾಗವು ಅಂಟುರೋಗ ಅಥವಾ ಕಾಯಿಲೆ. ವೈದ್ಯಕೀಯ ಕ್ಷೇತ್ರದಲ್ಲಿ ಮನುಷ್ಯನು ಎಷ್ಟೋ ಪ್ರಗತಿಯನ್ನು ಮಾಡಿರುವುದಾದರೂ, ನಮಗೆ ಮಲೇರಿಯ ಮತ್ತು ಇನ್ನಿತರ ಕಾಯಿಲೆಗಳನ್ನು ತರುವ ಸೊಳ್ಳೆಗಳನ್ನು ಅವನು ಇನ್ನೂ ತೊಲಗಿಸಿರುವುದಿಲ್ಲ. ಮತ್ತು ವಿಷಜ್ವರ, ವಾಂತಿಭೇದಿ, ಅರಸಿನ ಕುತ್ತ, ಆಮಶಂಕೆ ಅಥವಾ ಹೊಟ್ಟೆ ಹುಳುರೋಗ ನಮಗೆ ಉಂಟಾಗದಂತೆ ಪ್ರತಿಯೊಬ್ಬನಿಗೂ ಸ್ವಚ್ಛ ಕುಡಿಯುವ ನೀರನ್ನು ಮನುಷ್ಯನು ಇನ್ನೂ ಒದಗಿಸಿರುವುದಿಲ್ಲ. ಮತ್ತು ಈ ರೋಗಗಳು ವಿರಳವಾಗಿರುವ ವಿಕಸಿತವೆಂದು ಹೇಳಲ್ಪಡುವ ದೇಶಗಳಲ್ಲಿ ಕ್ಯಾನ್ಸರ್, ಹೃದ್ರೋಗ, ಲೈಂಗಿಕವಾಗಿ ರವಾನಿತ ರೋಗಗಳು ಮತ್ತು ಇನ್ನಿತರ ಅನೇಕ ಅಂಟುರೋಗಗಳ ವೃದ್ಧಿಯಿದೆ.
“ಈಗ, ಅಂತ್ಯವು ವಾಸ್ತವವಾಗಿ ಬರಲಿರುವ ಸಮಯವನ್ನು ಬೈಬಲು ಇಲ್ಲಿ ಸೂಚಿಸಿ ಹೇಳುತ್ತದೆ. ಪ್ರಿಯಾ, ಮತ್ತಾಯ 24ನೇ ಅಧ್ಯಾಯದ 32ರಿಂದ 34ರ ವರೆಗಿನ ವಚನಗಳನ್ನು ನಮಗೆ ಓದಿ ಹೇಳುವಿಯಾ.”
“ಅಂಜೂರದ ಮರದ ದೃಷ್ಟಾಂತದಿಂದ ಬುದ್ಧಿ ಕಲಿಯಿರಿ. ಅದರ ಕೊಂಬೆ ಇನ್ನೂ ಎಳೆಯದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ತಿಳುಕೊಳ್ಳುತ್ತೀರಲ್ಲಾ. ಹಾಗೆಯೇ ನೀವು ಸಹಾ ಇದನ್ನೆಲ್ಲಾ ನೋಡುವಾಗ ಆ ದಿನವು ಹತ್ತರವದೆ, ಬಾಗಲಲ್ಲೀ ಅದೆ ಎಂದು ತಿಳುಕೊಳ್ಳಿರಿ. ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”
“ಉಪಕಾರ, ಪ್ರಿಯಾ. ಇದರ ಅರ್ಥ ತಿಳಿಯಿತೆ? ಮರ ಹೂವು ಬಿಡುವಾಗ ಬೇಸಗೆ ಸಮೀಪವಿದೆಯೆಂದು ನೀವು ತಿಳಿಯುತ್ತೀರಿ. ಮತ್ತು ನೀವು ಈ ಸೂಚನೆಯನ್ನು—ನಡಿಯುವ ವಿಭಿನ್ನ ವಿಷಯಗಳನ್ನೊಳಗೊಂಡಿರುವ ಸೂಚನೆಯನ್ನು— ನೋಡುವಾಗ, ಲೋಕ ವಿಚಾರಗಳನ್ನು ತಾನೇ ತೆಗೆದುಕೊಳ್ಳುವ ದೇವರ ಸಮಯವು ಸನ್ನಿಹಿತವೆಂದು ತಿಳಿಯುತ್ತೀರಿ. ಅದು ಎಷ್ಟು ಸಮೀಪವಿದೆ? ‘ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವುದೇ ಇಲ್ಲ’ವೆಂದು ಯೇಸು ಹೇಳಿದನು. ಯಾವ ಸಂತತಿಯಿದು? ಈ ಪೂರ್ತಿ ಸೂಚನೆಯನ್ನು ನೋಡುವ ಸಂತತಿಯೇ. ಇಲ್ಲವಾದರೆ ಸೂಚನೆಯ ಅವಶ್ಯವೇನಿದೆ? ಆ ಸಮಯದಲ್ಲಿ ಜೀವಿಸುವ ಜನರು ತಮ್ಮ ಜೀವ ಸಂರಕ್ಷಿಸುವ ಕ್ರಮ ಕೈಕೊಳ್ಳತಕ್ಕದೆಂದು ಅವರಿಗೆ ಇದು ಎಚ್ಚರಿಕೆಯಾಗಿದೆ. ರೈಲ್ವೆ ಪ್ಲಾಟ್ಫಾರ್ಮಿನಲ್ಲಿ ಗಂಟೆ ಕೇಳಿಬರುವಾಗ ರೈಲ್ಗಾಡಿ ನಾಳೆ ಬರುತ್ತದೆಂದು ಅರ್ಥವೂ? ಆಗ ನಾವು ವಿಶ್ರಾಂತಿಯಿಂದ ಕೂರಿ ನಿದ್ದೆಹೋಗುತ್ತೇವೂ? ಇಲ್ಲ. ನಾವು ಸಾಮಾನುಗಳನ್ನು ಎತ್ತಿಕೊಂಡು ಸಿದ್ಧವಾಗಿ ನಿಲ್ಲುತ್ತೇವೆ. ಏಕೆಂದರೆ ಗಾಡಿ ಪ್ಲಾಟ್ಫಾರ್ಮಿಗೆ ಸ್ವಲ್ಪದರಲ್ಲಿ ಬರಲಿದೆಯೆಂದು ನಮಗೆ ಗೊತ್ತು. ಆದುದರಿಂದ ಯೇಸು, ಈ ಎಚ್ಚರಿಕೆಯ ಸೂಚನೆಯನ್ನು ನೋಡುವ ಜನರ ಸಂತತಿಯು ಈ ದುಷ್ಟಲೋಕದ ಅಂತ್ಯವನ್ನೂ ನೋಡುವ ಸಂತತಿಯೂ ಆಗಿರುವುದೆಂದು ಹೇಳಿದನು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, 1914ರಲ್ಲಿ ಈ ಸೂಚನೆಯ ಪ್ರಥಮ ಭಾಗವು ತೋರಿಬಂದಾಗ ಜೀವಿಸುತ್ತಿದ್ದ ಮತ್ತು ಸಂಭವಿಸುತ್ತಿದ್ದುದರ ಅರಿವಿದ್ದ ಕೆಲವರು ಅಂತ್ಯ ಬರುವಾಗ ಇನ್ನೂ ಜೀವಿಸುತ್ತಿರುವರು.”
“ಅಜ್ಜಯ್ಯ, ನೀವು 1914ರಲ್ಲಿ ಜೀವಿಸಿದ್ದಿರೋ?”
“ಇಲ್ಲ, ರಾಮು, ಅಷ್ಟು ಹಳಬನಲ್ಲವಾದರೂ ಅದು ಕಳೆದು ಕೆಲವೇ ವರ್ಷಗಳಲ್ಲಿ ನಾನು ಹುಟ್ಟಿದವನು. ನಾನು ಚಿಕ್ಕದಿರುವಾಗ ನನ್ನ ತಾಯಿ, ಪ್ರಥಮ ಯುದ್ಧವಾದ ಬಳಿಕ ತನ್ನ ತಂದೆ ಮತ್ತು ಅವರ ಕುಟುಂಬದಲ್ಲಿ ಅನೇಕರು ಒಂದು ಭಯಂಕರ ರೋಗದಿಂದ ಸತ್ತದ್ದರಿಂದಲೇ ನಾವು ಬಡವರಾಗಿದ್ದೇವೆಂದು ಹೇಳಿದ್ದು ನನಗೆ ನೆನಪಿದೆ. ಅದು ಸ್ಪ್ಯಾನಿಷ್ ಫ್ಲ್ಯೂ ರೋಗ ಮತ್ತು ಅದರ ಕಾರಣ ಲೋಕದಲ್ಲಿ ಕೋಟ್ಯಂತರ ಜನರು ಸತ್ತರು.”
“ನೋಡಿ, ಅಜ್ಜಯ್ಯ, ಇದು ಆ ಸೂಚನೆಯ ಇನ್ನೊಂದು ಭಾಗ. ಅದು ಎಷ್ಟು ಖ್ಯಾತ ಸಾಂಕ್ರಾಮಿಕ ರೋಗವೆಂದರೆ ಅದು ನಡೆದು ಸುಮಾರು 70 ವರ್ಷಗಳು ದಾಟಿರುವುದಾದರೂ ಅದು ನಿಮಗೆ ತಿಳಿದದೆ ಮತ್ತು ಅದರ ಪರಿಣಾಮ ನಿಮಗೆ ಜ್ಞಾಪಕವಿದೆ.
“ದೇವರು ತನ್ನ ದಯೆಯಿಂದ ತಾನು ಮಾಡಲಿರುವುದರ ಕುರಿತು ನಮಗೆ ಇಷ್ಟೊಂದು ಸ್ಪಷ್ಟವಾದ ಎಚ್ಚರಿಕೆಯನ್ನು ಕೊಡುವುದಾದರೂ ಮಾನವ ಸಂತತಿಯಲ್ಲಿ ಅಧಿಕಾಂಶ ಜನರು ಈ ಎಚ್ಚರಿಕೆಯನ್ನು ಅಸಡ್ಡೆಮಾಡುವರೆಂದು ಬೈಬಲು ಹೇಳುತ್ತದೆ. ಹೆಚ್ಚಿನ ಜನ ತಮ್ಮ ದೈನಂದಿನ ವಿಚಾರಗಳಲ್ಲೀ ಮುಳುಗಿ ತಾವು ಏನು ಕುಡಿಯುವುದು, ತಿನ್ನುವುದು, ಮತ್ತು ತಮ್ಮ ಮಕ್ಕಳು ಯಾರನ್ನು ವಿವಾಹವಾಗುವುದು ಎಂಬಿವೇ ಸಾಮಾನ್ಯ ವಿಷಯಗಳನ್ನು ಚಿಂತಿಸುವರೆಂದೂ ನಾಶನವು ಥಟ್ಟನೆ ಅವರ ಮೇಲೆ ಬರುವ ತನಕ ಅವರು ಲಕ್ಷ್ಯ ಮಾಡದೆ ಹೋಗುವರೆಂದೂ ಅದು ತಿಳಿಸುತ್ತದೆ. ಅನೇಕರು, ಈ ದುಷ್ಟ ಜಗತ್ತಿನ ಅಂತ್ಯದ ಕುರಿತು ಹೇಳುವಾಗ ಗೇಲಿ ಮತ್ತು ಕುಚೋದ್ಯ ಮಾಡುವರೆಂದೂ ಬೈಬಲು ಪ್ರವಾದಿಸುತ್ತದೆ. ಆದುದರಿಂದ, ನಮ್ರರೂ ಯಥಾರ್ಥವಂತರೂ ಆಗಿರುವವರು ಅಧಿಕಾಂಶ ಜನರಂತಿರದೆ ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಅದು ಎಚ್ಚರಿಸುತ್ತದೆ.—ಮತ್ತಾಯ 24:38, 39; ಲೂಕ 21:34-36; 2 ಪೇತ್ರ 3:3, 4.
“ಮತ್ತು 40 ಲಕ್ಷ ಕಿಂತಲೂ ಹೆಚ್ಚು ಜನರು 212 ದೇಶಗಳಲ್ಲಿ ಇದನ್ನೇ ಮಾಡಿದ್ದಾರೆ. ಅವರು ಈ ಎಚ್ಚರಿಕೆಯನ್ನು ನಂಬುವದಲ್ಲದೆ, ತಾವು ಈ ನಾಶನವನ್ನು ಪಾರಾಗಲು ಮತ್ತು ದೇವರು ಮನುಷ್ಯನಿಗೆ ಕೊಟ್ಟಿರುವ ಈ ಸುಂದರ ಬೀಡಿನ ಯೋಗ್ಯ ‘ಬಾಡಿಗೆದಾರರು’ ಆಗಿ ಭೂಮಿಯಲ್ಲಿ ಉಳಿಯಲು ಅರ್ಹರು ಎಂಬದನ್ನು ರುಜುಪಡಿಸಲು ಸರ್ವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಎಲ್ಲಿಯೇ ಜೀವಿಸಲಿ, ಯೆಹೋವನ ಸಾಕ್ಷಿಗಳು ಕುಲ, ಜಾತಿ ಯಾ ವರ್ಣವೆಂಬ ಯಾವ ಭೇದವನ್ನೂ ಮಾಡುವದಿಲ್ಲವೆಂದು ನೀವು ಕೂಡ ಕಂಡು ಹಿಡಿಯುವಿರಿ. ಅವರೆಲ್ಲರೂ ಒಂದು ದೊಡ್ಡ ಲೋಕವ್ಯಾಪಕ ಪರಿವಾರವಾಗಿದ್ದಾರೆ. ದೇವರ ನಿಯಮಗಳಿಗೆ ವಿಧೇಯತೆ ತೋರಿಸುತ್ತಾ ಅವರು ಲೋಕ ಬದಲಾವಣೆಗಳಿಗೆ ಪ್ರಯತ್ನಿಸುವ ಬಲಾತ್ಕಾರ, ಕ್ರಾಂತಿ ಅಥವಾ ರಾಜಕೀಯ ಚಳವಳಿಗಳಲ್ಲಿ ಯಾವ ಭಾಗವನ್ನೂ ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಬದಲಾಗಿ ಅವರು ಸರ್ವರಿಗೂ ಪ್ರೀತಿ ತೋರಿಸುತ್ತಾರೆ. ಈ ಪ್ರೀತಿಯ ಅತ್ಯಂತ ಮಹಾ ಅಭಿವ್ಯಕ್ತಿಯಾಗಿ ಅವರೆಲ್ಲರೂ ಮನೆಮನೆಗಳಲ್ಲಿ ಜನರನ್ನು ಭೇಟಿಯಾಗಿ ಅವರು ಸಹಾ ದೇವರ ಶಾಂತಿಭರಿತ ನೂತನ ಜಗತ್ತಿನಲ್ಲಿ ಜೀವವನ್ನು ಅನುಭವಿಸಲಿಕ್ಕಾಗಿ ದೇವರ ಎಚ್ಚರಿಕೆಯನ್ನು ಗಮನಿಸುವಂತೆ ಪ್ರೋತ್ಸಾಹಿಸಲು ತಮ್ಮ ಸಮಯ, ಪ್ರಯತ್ನ ಮತ್ತು ಹಣವನ್ನು ವ್ಯಯಿಸುತ್ತಾರೆ.”
ಒಂದು ಹೊಸ ಜಗತ್ತು—ಹೇಗೆ ಭಿನ್ನವಾಗಿದೆ?
“ಮಾಸ್ಟ್ರೇ, ಒಂದು ಹೊಸ ಜಗತ್ತು ಮತ್ತು ದೇವರು ತರುವ ಬದಲಾವಣೆಗಳ ವಿಷಯ ನೀವು ಮಾತಾಡುತ್ತಾ ಇರುತ್ತೀರಿ. ದೇವರು ಯಾವ ವಿಧದ ಬದಲಾವಣೆಗಳನ್ನು ತರುವನು? ಅಂದರೆ, ಈ ಹೊಸಲೋಕದಲ್ಲಿ ಯಾವುದು ಭಿನ್ನವಾಗಿರುವುದು?” ಎಂದು ಕೇಳಿದ ರಾಮು.
“ರೇಚೆಲ್ ಇದರ ವಿಷಯ ನಮಗೆ ತಿಳಿಸುವಂತೆ ಕೇಳೋಣ, ರಾಮು. ರೇಚೆಲ್, ದೇವರು ಮಾನವ ವಿಚಾರಗಳ ಮಧ್ಯೆ ಕೈಹಾಕುವಾಗ ಭೂಮಿಯ ಮೇಲೆ ಬರಲಿರುವ ಯಾವ ಕೆಲವು ಪರಿಸ್ಥಿತಿಗಳ ಕುರಿತು ನೀನು ಬೈಬಲಿನಲ್ಲಿ ಓದಿರುತ್ತಿ? ನಿನಗೆ ಹಿಡಿಸುವ ಕೆಲವು ಸಂಗತಿಗಳನ್ನು ನಮಗೆ ತಿಳಿಸು ನೋಡೋಣ.”
“ನಾನು ಓದಲು ಇಷ್ಟಪಡುವ ಒಂದು ಬೈಬಲ್ ವಚನ ಇದು” ಎಂದಳು ರೇಚೆಲ್, “ಏಕೆಂದರೆ ಪ್ರಾಣಿಗಳೊಂದಿಗೆ ಆಟವಾಡುವುದು ನನಗೆ ಇಷ್ಟ. ನಾನು ಓದಲಾ? ಯೆಶಾಯ ಪುಸ್ತಕದ 11ನೇ ಅಧ್ಯಾಯದ 6ರಿಂದ 8ರ ವರೆಗಿನ ವಚನಗಳಲ್ಲಿ ಇದು ಅದೆ. ಇಲ್ಲಿ ಹೇಳುವುದು: ‘ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆ ಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟ ಪಶುವೂ ಒಟ್ಟಿಗಿರುವವು; ಅವುಗಳ ಮರಿಗಳು ಜೊತೆಯಾಗಿ ಮಲಗುವವು. ಸಿಂಹವು ಎತ್ತಿನಂತೆ ಹುಲ್ಲು ತಿನ್ನುವದು. ಮೊಲೆಕೂಸು ನಾಗರ ಹುತ್ತದ ಮೇಲೆ ಆಡುವದು. ಮೊಲೆಬಿಟ್ಟ ಮಗು ಹಾವಿನ ಬಿಲದ ಮೇಲೆ ಕೈಹಾಕುವದು.’ ಸಿಂಹಗಳ ಆಕ್ರಮಣ ಅಥವಾ ಹಾವುಗಳ ಕಡಿತದ ಭಯವಿಲ್ಲದೆ ಕಾಡಿನೊಳಗೆ ಹೋಗಲು ಶಕ್ತರಾಗುವುದು ಆಶ್ಚರ್ಯಕರವಾದ ವಿಷಯವೆಂದು ನನ್ನ ಎಣಿಕೆ; ಆಗ ಸರ್ವ ಪ್ರಾಣಿಗಳೊಂದಿಗೂ ನಾವು ಆಡುವಂಥಾಗುವದು.
“ನನಗೆ ಫ್ಲೂ, ಮಲೇರಿಯ ಯಾ ಕೆಟ್ಟ ನೆಗಡಿ ಬರುವಾಗ, ‘ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು’ ಎಂಬ ವಚನ ನೆನಪಿಗೆ ಬರುತ್ತದೆ. (ಯೆಶಾಯ 33:24) ಶಾಲೆಯಲ್ಲಿ ಕುಂಟಳಾದ ಹುಡುಗಿಯೊಬ್ಬಳಿದ್ದಾಳೆ. ಅವಳಿಗೆ ಚಿಕ್ಕಂದಿನಲ್ಲಿ ಪಾರ್ಶ್ವವಾಯು ತಟ್ಟಿತ್ತು. ಅವಳು ಎಷ್ಟೋ ಕಷ್ಟಪಡುತ್ತಿದ್ದಾಳೆ ಮತ್ತು ನಮ್ಮೊಂದಿಗೆ ಆಟವಾಡಲು ಅವಳಿಗೆ ಆಗುವುದಿಲ್ಲ. ನಾನು ಒಂದುದಿನ ನನ್ನ ಬೈಬಲನ್ನು ಶಾಲೆಗೆ ಕೊಂಡುಹೋಗಿ ಯೆಶಾಯ 35:5, 6 ರಿಂದ ಇದನ್ನು ಓದಿಹೇಳಿದೆ: ‘ಆಗ ಕುರುಡರ ಕಣ್ಣು ಕಾಣುವುದು, ಕಿವುಡರ ಕಿವಿ ಕೇಳುವದು. ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷದ್ವನಿಗೈಯವದು.’ ಇದನ್ನು ಕೇಳಿ ಅವಳು ಎಷ್ಟೊ ಸಂತೋಷಪಟ್ಟಳು.
“ನಮ್ಮ ಗ್ರಾಮದಲ್ಲಿ ಜೀವಿಸುವ ರೈತನಾಗಿರುವ ನಮ್ಮ ಮಾವ ಸಹ, ಮುಂದಿನ ವಚನ ಓದುವಾಗ ಸಂತೋಷಪಟ್ಟರು: ‘ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣನೆಲದಲ್ಲಿ ನದಿಗಳು ಹುಟ್ಟಿ ಹರಿಯವವು.’ (ಯೆಶಾಯ 35:7) ಮಳೆಗಾಲದಲ್ಲಿ ಮಳೆ ಇಲ್ಲದಿರುವಾಗ ಮತ್ತು ಬೆಳೆ ನ್ಯೂನವಾಗಿರುವಾಗ ಅವರು ಎಷ್ಟೋ ಕಷ್ಟಪಡುತ್ತಿರುತ್ತಾರೆ. ಆದರೆ ದೇವರ ನೂತನ ಜಗತ್ತಿನಲ್ಲಿ ಎಲ್ಲರಿಗೂ ಆಹಾರವು ಹೇರಳವಾಗಿರುವುದು ಎಂದು ಬೈಬಲು ಹೇಳುತ್ತದೆ. ಬೆಳೆ ಹಾಳಾಗುವುದೇ ಇಲ್ಲ! ಯೆಹೋವ ದೇವರು ‘ಸಕಲ ಜನಾಂಗಗಳಿಗೂ ಸಾರವತಾದ್ತ . . . ಔತಣವನ್ನು ಅಣಿಮಾಡುವನು’ ಎಂದೂ ‘ದೇಶದಲ್ಲಿ . . . ಬೆಳೆಯು ಸಮೃದ್ಧಿಯಾಗಲಿ’ ಎಂದೂ ಅದು ಹೇಳುತ್ತದೆ. (ಯೆಶಾಯ 25:6; ಕೀರ್ತನೆ 72:16) ಯೆಹೆಜ್ಕೇಲ 34:27 ನಮಗನ್ನುವುದು: ‘ತೋಟದ ಮರಗಳು ಹಣ್ಣುಬಿಡುವವು; ಹೊಲಗಳು ಒಳ್ಳೆಯ ಬೆಳೆ ಕೊಡುವವು; ಜನರು ಸ್ವದೇಶದಲ್ಲಿ ನೆಮ್ಮದಿಯಾಗಿರುವರು.’ ಇದೆಷ್ಟು ಸೋಜಿಗವಲ್ಲವೆ?”
“ನಾನು ನಿಜವಾಗಿಯೂ ಸಿಂಹದೊಂದಿಗೆ ಆಡುವಲ್ಲಿ ಅದು ಸೋಜಿಗವೇ ಸರಿ,” ಎಂದಳು ಆಶಾ, ಆನಂದನ ಕಿರೀ ಮಗಳು. “ನಾನು ಅವನ್ನು ಮೃಗಾಲಯದಲ್ಲಿ ನೋಡಿದ್ದೇನೆ ಮತ್ತು ಅವು ಭಯ ಹುಟ್ಟಿಸುತ್ತವೆ.”
“ನೀನು ಅದರಲ್ಲಿ ಆನಂದಿಸುವಿ ಎಂಬುದು ನಿಶ್ಚಯ, ಆಶಾ,” ಎಂದರು ಮಾಸ್ಟರರು. “ಆನಂದ್, ನಮ್ಮ ನಿರ್ದಿಷ್ಟ ಸಮಸ್ಯೆಗಳನ್ನು ಯೆಹೋವನು ಗುರುತಿಸಿ ಅವನ್ನು ತೊಲಗಿಸಲು ವಚನ ಕೊಟ್ಟಿದ್ದಾನೆಂಬದನ್ನು ಬೈಬಲು ಹೇಗೆ ತೋರಿಸುತ್ತದೆಂಬದು ಈಗ ತಿಳಿಯಿತೇ? ರೋಗ, ಮಳೆಯಿಲ್ಲದ ಕಾರಣ ಬರುವ ಆಹಾರದ ಅಭಾವ ಮತ್ತು ಬೆಳೆಯ ನಾಶ—ಇವೆಲ್ಲ ನಮ್ಮೆಲ್ಲರನ್ನು ಭಾದಿಸುವ ಸಂಗತಿಗಳು. ನ್ಯೂನ ವಸತಿ ಸೌಕರ್ಯವು ಸಹ ಇನ್ನೊಂದು ದೊಡ್ಡ ಸಮಸ್ಯೆ. ಹೆಚ್ಚು ಬಾಡಿಗೆ ಮತ್ತು ಕಿಕ್ಕಿರಿದ ಜನವಸತಿ ದೇವರ ಹೊಸ ಲೋಕದಲ್ಲಿರವು. ಯೆಶಾಯ 65:21 ಮತ್ತು 22ರಲ್ಲಿ ವಸತಿಯ ಕುರಿತು ಅದು ಹೀಗೆನ್ನುತ್ತದೆ: ‘ಅಲ್ಲಿಯ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು. ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.’ ಹೀಗೆ, ದೇವರು ಭೂಮಿಯಲ್ಲಿರುವ ಪ್ರತಿಯೊಬ್ಬನಿಗೂ ಮನೆ ಮತ್ತು ತೋಟವನ್ನು ವಾಗ್ದಾನಿಸುತ್ತಾನೆ.
“ಆದರೆ, ದುಷ್ಟರು ಯುದ್ಧ ಮತ್ತು ಬಲಾತ್ಕಾರಗಳನ್ನು ಮಾಡಿ ಅಭದ್ರ ಸ್ಥಿತಿಯನ್ನು ತರುವಲ್ಲಿ ಇಂಥ ಆಶ್ಚರ್ಯಕರವಾದ ಪರಿಸ್ಥಿತಿಗಳನ್ನು ಅನುಭೋಗಿಸ ಸಾಧ್ಯವಿಲ್ಲ. ಆದುದರಿಂದ ಇಂಥವರನ್ನು ದೇವರು ಅಳಿಸಿಬಿಡುತ್ತಾನೆ. ಕೀರ್ತನೆ 37:10 ಹೇಳುವುದು: ‘ಇನ್ನು ಸ್ವಲ್ಪ ಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು. ಆತನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ.’ ಮತ್ತು ದುಷ್ಟನು ನಾಶವಾಗುವದರಿಂದ, ‘[ಆತನು] ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ’ ಎಂಬ ವಾಗ್ದಾನದಲ್ಲಿ ನಾವು ಭರವಸೆಯಿಡಬಲ್ಲೆವು.—ಕೀರ್ತನೆ 46:9.
“ಯೆಹೋವ ದೇವರು ಇದನ್ನು ದೇವರ ರಾಜ್ಯವೆಂದು ಬೈಬಲು ಕರೆಯವ ಒಂದು ಸರಕಾರದ ಮೂಲಕ ಸಾಧಿಸುತ್ತಾನೆಂದು ವಚನಿಸಿದ್ದಾನೆ. ಈ ಸರಕಾರವು ಮಾನವ ಸರಕಾರಗಳಿಂದ ಅನೇಕ ವಿಧಗಳಲ್ಲಿ ಭಿನ್ನವಾಗಿರುವುದು. ಒಂದನೆಯದಾಗಿ, ಇದು ಸ್ವರ್ಗೀಯ ಸರಕಾರ ಮತ್ತು ಹೀಗಿರುವುದರಿಂದ ಅದನ್ನು ಭ್ರಷ್ಟಗೊಳಿಸುವುದು ಅಸಾಧ್ಯ. ಎರಡನೆಯದಾಗಿ, ಅದು ಸರ್ವರಿಗೂ—ಧನಿಕರಿಗೆ ಮತ್ತು ಬಲಾಢ್ಯರಿಗೆ ಮಾತ್ರವಲ್ಲ—ನ್ಯಾಯದ ಖಾತರಿ ಕೊಡುವುದು. ಈ ಸರಕಾರದ ಕಾರ್ಯನಡಿಸುವಿಕೆಯ ಕುರಿತು ಬೈಬಲಿನಲ್ಲಿರುವ ಒಂದು ಸುಂದರ ವರ್ಣನೆಯನ್ನು ನಾನು ತೋರಿಸುತ್ತೇನೆ: ‘ಅವನು ಬಡವರಿಗೋಸ್ಕರ ನ್ಯಾಯವಾಗಿ ತೀರ್ಪು ಮಾಡುವನು, ಲೋಕದ ದೀನರಿಗೋಸ್ಕರ ಧರ್ಮವಾಗಿ ನಿರ್ಣಯಿಸುವನು. . . . ಧರ್ಮವೇ ಅವನಿಗೆ ನಡುಕಟ್ಟು, ಪ್ರಾಮಾಣಿಕತೆಯೇ ಸೊಂಟಪಟ್ಟಿ.’—ಯೆಶಾಯ 11:4, 5.
“ಅಂತಿಮವಾಗಿ, ದೇವರ ರಾಜ್ಯವು ಇತರ ಎಲ್ಲ ಸರಕಾರಗಳ ಸ್ಥಾನದಲ್ಲಿ ನಿಲ್ಲುವಾಗ ಅದು ನಿಜವಾಗಿಯೂ ಜಾಗತಿಕ ಸರಕಾರವಾಗಿರುವುದು. ದಾನಿಯೇಲ ಪುಸ್ತಕದಲ್ಲಿರುವ ಗಮನಾರ್ಹವಾದ ಒಂದು ಪ್ರವಾದನೆಯಲ್ಲಿ ಇದನ್ನು ತೋರಿಸಲಾಗಿದೆ: ‘ಆ ರಾಜರ ಕಾಲದಲ್ಲಿ ಪರಲೋಕ ದೇವರು ಒಂದು ರಾಜ್ಯವನ್ನು ಸ್ಥಾಪಿಸುವನು. ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಗಳಿಗೆ ಕದಲಿ ಹೋಗದು. ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.’ (ದಾನಿಯೇಲ 2:44) ಹೌದು, ದೇವರ ರಾಜ್ಯ ಪೂರ್ತಿ ಅಧಿಕಾರದಲ್ಲಿರುವಾಗ ಪರಿಸ್ಥಿತಿಯಲ್ಲಿ ತುಂಬಾ ಸುಧಾರಣೆ ಇರುವುದು. ಆದುದರಿಂದ ತನ್ನ ಹಿಂಬಾಲಕರು ಅದರ ಬರೋಣವನ್ನು ಮುನ್ನೋಡಲು ಯೇಸು ಕಲಿಸಿದರ್ದಲ್ಲಿ ಆಶ್ಚರ್ಯವಿಲ್ಲ. ಆತನು ‘ನಿನ್ನ ರಾಜ್ಯ ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ’ ಎಂದು ಪ್ರಾರ್ಥಿಸುವಂತೆಯೂ ಹೇಳಿದನು.— ಮತ್ತಾಯ 6:10.
“ಹೀಗೆ, ಯೆಹೋವನೆಂಬ ನಾಮವುಳ್ಳ ಸರ್ವಶಕ್ತನಾದ ದೇವರು ನಮ್ಮ ಕಷ್ಟಗಳನ್ನು ಪೂರ್ತಿ ಬಲ್ಲನೆಂದೂ ನಮ್ಮ ಕಡೆಗೆ ಸಹಾನುಭೂತಿಯುಳ್ಳವನೆಂದೂ ನೀವು ನೋಡಬಲ್ಲಿರಿ. ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಆತನು ಬಹು ಶೀಘ್ರವೇ ಕ್ರಮ ಕೈಕೊಳ್ಳುವನೆಂದು ಆಶ್ವಾಸನೆ ಕೊಡುತ್ತಾನೆ.”
ವಿವೇಕದ ಬುದ್ಧಿವಾದದಿಂದ ಈಗ ಪ್ರಯೋಜನಗಳು
“ಅವೆಲ್ಲ ಒಳ್ಳೆಯದಾಗಿ ಕಾಣುತ್ತವೆ, ಮಾಸ್ಟ್ರೇ. ಆದರೆ ದೇವರು ಪರಿವರ್ತನೆ ತರುತ್ತಾನೆಂದು ಹೇಳಿ ಕೇವಲ ಕುಳಿತು ಕಾಯುವುದು ನನ್ನ ಮಕ್ಕಳಿಗೆ ಊಟ ಮತ್ತು ಉಡುಪನ್ನು ಕೊಡಲಾರದು. ನಾವು ಕೆಲಸ ಮಾಡಬೇಕು. ನಮ್ಮ ಜೀವನಾಭಿವೃದ್ಧಿಗಾಗಿ ನಾವು ಪ್ರಯತ್ನ ಪಡತಕ್ಕದ್ದು.”
“ಕೆಲಸ ಮಾಡಬೇಕೆಂಬದು ನಿಶ್ಚಯ, ಆನಂದ್. ನಮ್ಮ ಆಶ್ರಿತರಿಗೆ ಒದಗಿಸಲು ನಾವು ಕಷ್ಟಗಳ ಎದುರಿನಲ್ಲಿಯೂ ಶ್ರಮಪಟ್ಟು ಕೆಲಸಮಾಡಬೇಕೆಂದು ಬೈಬಲು ಹೇಳುತ್ತದೆ. (1 ತಿಮೊಥಿ 5:8) ವಾಸ್ತವವಾಗಿ ಅದು, ‘ಕೆಲಸಮಾಡಲೊಲ್ಲದವನು ಊಟ ಮಾಡಬಾರದು’ ಎಂದು ಸ್ಪಷ್ಟವಾಗಿ ಹೇಳುತ್ತದೆ. (2 ಥೆಸಲೋನಿಕ 3:10) ನಮ್ಮ ಆರೋಗ್ಯ ಮತ್ತು ಸಂತೋಷಕ್ಕಾಗಿ, ಅನುಸರಿಸುವಲ್ಲಿ ಪ್ರಯೋಜನಕರವಾದ ನಿಯಮ, ಮೂಲತತ್ವ ಮತ್ತು ಸಲಹೆಯನ್ನು ಅದು ಕೊಡುತ್ತದೆ. ಉದಾಹರಣೆಗೆ, ಮಿತಿಮೀರಿ ತಿನ್ನುವುದು ಮತ್ತು ಮದ್ಯಪೇಯಗಳನ್ನು ಮಿತಿಮೀರಿ ಕುಡಿಯುವುದನ್ನು ದೇವರು ಅಸಮ್ಮತಿಸುತ್ತಾನೆಂದು ಬೈಬಲು ತೋರಿಸುತ್ತದೆ. ಇವೆರಡು ವಿಷಯಗಳು ನಮ್ಮ ಆರೋಗ್ಯವನ್ನು ತೀರಾ ಕೆಡಿಸಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ದುಂದುವೆಚ್ಚ ಮಾಡಬಲ್ಲವೆಂದು ನಮಗೆ ತಿಳಿದದೆ.
“ತದ್ರೀತಿ, ವೈದ್ಯರು ಒಪ್ಪುವಂತೆ, ನಮ್ಮ ಆರೋಗ್ಯವನ್ನು ಗಂಭೀರವಾಗಿ ಕೆಡಿಸುವ ತಂಬಾಕು ಮತ್ತು ಅಡಕೆಯನ್ನು ನಾವು ಉಪಯೋಗಿಸದಂತೆ ಬೈಬಲ್ ಮೂಲ ಸೂತ್ರಗಳು ನಮಗೆ ಕಲಿಸುತ್ತವೆ. ಈ ಅಭ್ಯಾಸ, ನಮ್ಮ ಸಾಲ ತೀರಿಸಬಹುದಾದ ಅಥವಾ ಕುಟುಂಬಕ್ಕೆ ಆಹಾರವನ್ನು ಕೊಳ್ಳಬಹುದಾದ ಹಣವನ್ನು ವ್ಯಯಿಸುವಂತೆ ಮಾಡುತ್ತದೆ. (2 ಕೊರಿಂಥ 7:1) ಬೈಬಲಿನ ಉನ್ನತ ನೈತಿಕ ಮಟ್ಟ ಮತ್ತು ಆರೋಗ್ಯ ಸೂತ್ರಗಳ ಕುರಿತ ವಿವೇಕದ ಬುದ್ಧಿವಾದ ಸಹ ನಮ್ಮನ್ನು ಭಾವನಾತ್ಮಕವಾಗಿ ಹರ್ಷಚಿತ್ತರಾಗುವಂತೆ ಮಾಡಿ ಅನೇಕ ರೋಗಗಳಿಂದ ನಾವು ತಪ್ಪಿಸಿಕೊಳ್ಳುವಂತೆ ಸಹಾಯ ಮಾಡುತ್ತದೆ. ಈ ಕಾರಣದಿಂದಲೇ, ಯೆಹೋವ ದೇವರು ಬೈಬಲಿನಲ್ಲಿ ತನ್ನನ್ನು ‘ನಿನಗೆ ವೃದ್ಧಿಮಾರ್ಗವನ್ನು ಬೋಧಿಸು’ ವವನೆಂದು ಹೇಳಿಕೊಳ್ಳುತ್ತಾ ‘ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು’ ಎಂದು ಹೇಳುತ್ತಾನೆ.—ಯೆಶಾಯ 48:17, 18.
“ಆದರೆ, ನಾವಿಂದು ನಮ್ಮ ಜೀವನದ ಗುಣಮಟ್ಟವನ್ನು ಈ ವಿವೇಕದ ಸಲಹೆಯನ್ನು ಅನುಸರಿಸುವುದರ ಮೂಲಕ ಬಹಳ ಅಭಿವೃದ್ಧಿಪಡಿಸಬಲ್ಲೆವಾದರೂ, ಅನ್ಯಾಯ, ಭ್ರಷ್ಟಾಚಾರ, ಕುಲಸಂಬಂಧವಾದ ಮತ್ತು ಜಾತೀಯ ದುರಭಿಪ್ರಾಯ, ಪಕ್ಷಪಾತ, ಅಪಾಯಕರ ರೋಗ ಮತ್ತು ಮರಣದಂಥ ದೊಡ್ಡ ಸಮಸ್ಯೆಗಳನ್ನು ಬಗೆಹರಿಸಲಾರೆವು. ಇವನ್ನು ಶಾಶ್ವತವಾಗಿ ತೊಲಗಿಸಬೇಕಾದರೆ ದೇವರು ತಾನೇ ಮಧ್ಯೆ ಬರತಕ್ಕದ್ದು.”
“ನಮ್ಮ ಸ್ವಂತ ಸತ್ಕರ್ಮಗಳಿಂದ ಮಹಾ ಬದಲಾವಣೆಗಳನ್ನು ನಾವೇ ತರಬಲೆವ್ಲೆಂದು ನನ್ನ ನಂಬಿಕೆ” ಎಂದರು ಅಜ್ಜಮ್ಮ ಮಧ್ಯೆ ಮಾತಾಡುತ್ತಾ. “ನಮ್ಮ ಒಳ್ಳೆಯ ಕರ್ಮಗಳು ಇತರರಿಗೂ ತಟ್ಟುತ್ತವೆ ಮತ್ತು ದೈನಂದಿನದ ಧ್ಯಾನದ ಮೂಲಕ ನಾವು ಅಂತರಿಕ ಶಾಂತಿಯನ್ನು ಪಡೆದು ನಮ್ಮ ಎದುರು ಬರುವ ಯಾವ ಸಮಸ್ಯೆಗಳಿಂದಲೂ ಶಾಂತಿಭಂಗ ಪಡೆಯಲಾರೆವು.”
“ಅಜ್ಜಮ್ಮ, ನಿಮ್ಮಂತೆಯೇ ಅನೇಕರಿಗೆ ಅನಿಸುತ್ತದಾದರೂ ಒಂದು ಸಂಗತಿ ನಿಶ್ಚಯ. ನಮ್ಮ ಕರ್ಮಗಳು ಎಷ್ಟು ಒಳ್ಳೆಯದಾಗಿದ್ದರೂ ನಾವು ಭೂಮಿಯಿಂದ ದುಷ್ಟತ್ವವನ್ನು ತೆಗೆಯಲಾರೆವು. ನಮ್ಮ ಸತ್ಕಾರ್ಯಗಳು ಇತರರು ಒಳ್ಳೆಯದು ಮಾಡುವಂತೆ ಪ್ರಭಾವ ಬೀರಬಹುದಾದರೂ ಕೆಲವು ಜನರು ಬದಲಾವಣೆ ಹೊಂದುವದೇ ಇಲ್ಲ. ವಾಸ್ತವವೇನಂದರೆ, ಕೆಲವರು ನಿಮ್ಮ ಸಜ್ಜನಿಕೆಯ ಪ್ರಯೋಜನ ಪಡೆಯುತ್ತಾ ಅದನ್ನು ಹೆಚ್ಚು ಹಾನಿಮಾಡಲು ಉಪಯೋಗಿಸುತ್ತಾರೆ.
“ಹಿಂದುಗಳಲ್ಲಿ ಅಧಿಕಾಂಶ ಮಂದಿ, ದೇವರು ಅವತಾರವೆತ್ತುವಾಗ ಮಾತ್ರ ಸತ್ಯಯುಗ ಬರುವುದೆಂದು ನಂಬುತ್ತಾರೆಂದು ನೀವು ಒಪ್ಪುವಿರಿ. ಮನುಷ್ಯರಲ್ಲಿ ಅಧಿಕಾಂಶ ಮಂದಿ ಕೆಟ್ಟ ಕರ್ಮಗಳನ್ನು ಮಾಡುವಾಗ ದೇವರು ಮಧ್ಯೆ ಬರುವುದು ಅತ್ಯಾವಶ್ಯಕವೆಂದು ಅವರ ಅಭಿಪ್ರಾಯ. ಮತ್ತು ಯೋಚಿಸಿ, ಅಜ್ಜಮ್ಮ, ಧ್ಯಾನದ ಪರಿಣಾಮವಾಗಿ ನಿಮಗೆ ಅಂತರಿಕ ಶಾಂತಿಯಿರುವಲ್ಲಿ, ಅದು ತಾನೇ, ಆನಂದ್ ತನ್ನ ಕುಟುಂಬಕ್ಕೆ ಉಣಿಸಿ, ಉಡಿಸಿ, ವಿದ್ಯೆ ಕೊಡಲು ಸಾಕಷ್ಟು ಹಣ ತರುತ್ತದೆಂದು ಖಾತರಿ ಕೊಡುತ್ತದೊ? ಇಲ್ಲ, ಅಲ್ಲವೆ?
“ನೀವು ಧ್ಯಾನದ ಕುರಿತು ಹೇಳುವುದು ರಸಕರವಾದ ವಿಷಯ. ಆದರೆ ಮೊದಲು ನಾವು ಸರಿಯಾಗಿ ಧ್ಯಾನಮಾಡಲು ಕಲಿಯಬೇಕು. ಉದಾಹರಣೆಗೆ, ನಮಗೆ ಮೊದಲು ಧ್ಯಾನಮಾಡುವ ಮಾಹಿತಿ ಇತರಕ್ಕದ್ದು. ಈ ಕಾರಣದಿಂದಲೇ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ. ಹೆಚ್ಚು ಮಾಹಿತಿ ಬಲ್ಲವರು ಅವರಿಗೆ ಕಲಿಸುವುದು ಅಗತ್ಯ. ಆಗ ಕಲಿತ ವಿಷಯಗಳನ್ನು ಮಕ್ಕಳು ಧ್ಯಾನಿಸಬಲ್ಲರು. ನಾವು ಅವರಿಗೆ ನೀವು ಮನೆಯಲ್ಲೇ ಕುಳಿತು ಧ್ಯಾನಿಸಿರಿ, ಆಗ ಒಳಗಿಂದ ಜ್ಞಾನ ಬರುತ್ತದೆ ಎಂದು ಹೇಳುವುದಿಲ್ಲ. ನಮಗೆ ನಮ್ಮಿಂದ ಹೆಚ್ಚು ತಿಳಿದಿರುವ ಒಬ್ಬ ಅಧ್ಯಾಪಕ ಅಥವಾ ಗುರುವಿನ ಅಗತ್ಯವಿದೆ. ಹೀಗಿರುವಾಗ, ಮನುಷ್ಯನ ಮತ್ತು ಅವನ ಸಮಸ್ಯೆಗಳ ಕುರಿತು ಅವನನ್ನು ಸೃಷ್ಟಿಸಿದಾತನಿಗಿಂತ ಹೆಚ್ಚು ಯಾರಿಗೆ ತಿಳಿದದೆ? ಆದುದರಿಂದ, ನಮ್ಮ ಸೃಷ್ಟಿಕರ್ತನು ಸಹ ನಮ್ಮ ಅಧ್ಯಾಪಕನಾಗಿ ವರ್ತಿಸುವನು ಮತ್ತು ನಮ್ಮ ಸಮಸ್ಯೆಗಳ ಪರಿಹಾರ ಮಾರ್ಗವನ್ನು ತೋರಿಸುವನೆಂದು ನಾವು ನಿರೀಕ್ಷಿಸಬಲ್ಲೆವು. ನಮ್ಮ ಮಕ್ಕಳನ್ನು ಪ್ರೀತಿಸುವ ಕಾರಣವೇ ನಾವು ಅವರಿಗೆ ವಿದ್ಯೆ ಕೊಡುತ್ತೇವೆ. ಹಾಗಾದರೆ ಪ್ರೀತಿಸುವ, ಸರ್ವಶಕ್ತ ಸ್ವರ್ಗೀಯ ತಂದೆ ಹಾಗೆಯೇ ಮಾಡಲಿಕ್ಕಿಲ್ಲವೇ?”
“ನಿಮ್ಮ ಮಾತುಗಳು ಮನದಟ್ಟು ಮಾಡುವ ವಿಷಯಗಳೆಂದು ಹೇಳಬೇಕು ಮಾಸ್ಟ್ರೇ,” ಎಂದರು ಅಜ್ಜಯ್ಯ ಮಧ್ಯೆ ಬರುತ್ತಾ. “ಆದರೆ ನಿಮ್ಮ ವಿವರಣೆ ತೀರಾ ಸರಳ. ನಮ್ಮ ಧರ್ಮ ಎಷ್ಟೋ ಆಳವಾದ ತತ್ವಜ್ಞಾನವನ್ನೊಳಗೊಂಡಿದೆ. ನಮ್ಮ ಸಂತರು, ಸಾಧುಗಳು ಜೀವನದ ಅರ್ಥವನ್ನು ಧ್ಯಾನಿಸಲು ವರ್ಷಗಳನ್ನು ಕಳೆದ್ದಿದಾರೆ. ನಾನೇ ಪವಿತ್ರ ಗ್ರಂಥಗಳನ್ನು ಜೀವನವಿಡೀ ಓದಿರುತ್ತೇನಾದರೂ ವಿಶ್ವ, ಜೀವ ಮತ್ತು ಅದರ ಉದ್ದೇಶಗಳ ರಹಸ್ಯಾರ್ಥಗಳನ್ನೆಲ್ಲಾ ಇನ್ನೂ ಗ್ರಹಿಸಿರುವುದಿಲ್ಲ.”
“ಅಜ್ಜಯ್ಯ, ದೇವರ ವಿವೇಕ ನಮ್ಮ ವಿವೇಕಕ್ಕಿಂತ ಎಷ್ಟೋ ಶ್ರೇಷ್ಟವೆಂಬದು ಖರೆ. ಬೈಬಲು, ಯೋಬನೆಂಬ ಒಬ್ಬನ ಕುರಿತು ಮಾತಾಡುತ್ತಾ, ಅವನು ದೇವರ ಮತ್ತು ಆತನ ಸೃಷ್ಟಿಯ ಕುರಿತು ವರ್ಷಗಟ್ಟಲೆಯಾಗಿ ಆಳವಾಗಿ ಯೋಚಿಸಿದರೂ, ‘ಆಹಾ, ಈ ಅದ್ಭುತಗಳು ಆತನ ಮಾರ್ಗಗಳ ಕಟ್ಟಕಡೆ [“ಅಂಚುಗಳು” NW] ಯಾಗಿವೆ. ಆತನ ವಿಷಯವಾಗಿ ಸೂಕ್ಷ್ಮ ಶಬ್ದವನ್ನು ಮಾತ್ರ ಕೇಳಿದ್ದೇನೆ” ಎಂದು ಒಪ್ಪಿಕೊಂಡನು ಎಂದು ಹೇಳುತ್ತದೆ. (ಯೋಬ 26:14) ಆದರೆ ನಮ್ಮ ಕೆಳಮಟ್ಟದ ಮನಸ್ಸುಗಳ ಕಾರಣ ನಾವು ದೇವರ ವಿಷಯ ಸರ್ವವನ್ನು ಗ್ರಹಿಸಲಾರೆವಾದರೂ ಆತನಿಗೆ ಇಷ್ಟವಿರುವಲ್ಲಿ ನಮಗೆ ಅವಶ್ಯವಿರುವಷ್ಟನ್ನಾದರೂ ಆತನು ನಮಗೆ ಕಲಿಸಲಾರನೇ?
“ದೃಷ್ಟಾಂತಕ್ಕೆ, ಅತಿ ಹೆಚ್ಚು ವ್ಯಾಸಂಗ ಮಾಡಿ, ತೀಕ್ಷ್ಣ ಬುದ್ಧಿಯ ಗಣಿತಜ್ಞನೆಂದು ಕೀರ್ತಿ ಪಡೆದ ಗಣಿತ ಪ್ರಾಧ್ಯಾಪಕರೊಬ್ಬರು ರಾಮುವಿಗೆ ಹಣ ತೆಗೆದುಕೊಳ್ಳದೆ ಕಲಿಸುತ್ತೇನೆಂದು ಹೇಳುತ್ತಾರೆಂದು ನೆನಸಿರಿ. ಆಗ ನೀವು ‘ಅವರು ತುಂಬಾ ಜ್ಞಾನಿಗಳು; ಅವರಿಗೆ ತಿಳಿದಿರುವುದನ್ನೆಲ್ಲಾ ರಾಮು ಗ್ರಹಿಸಲಾರನು’ ಎಂದು ಹೇಳಿ ಅದು ಬೇಡವೆಂದು ಹೇಳುವಿರೋ? ನಿಶ್ಚಯವಾಗಿ ಇಲ್ಲ! ಅವರು ಎಷ್ಟೇ ತೇಜಸ್ವಿಯಾದ ಪಂಡಿತರಾಗಿದ್ದರೂ ಅವರು ಉತ್ತಮ ಅಧ್ಯಾಪಕರಾಗಿರುವಲ್ಲಿ ಶಿಶುವಿಹಾರದ ಮಕ್ಕಳು ಸಹ ತಿಳುಕೊಳ್ಳುವಂತೆ ಕಲಿಸಬಲ್ಲರೆಂದು ನಿಮಗೆ ತಿಳಿದದೆ. ಹೀಗಿರುವಾಗ, ಸರ್ವ ವಿವೇಕಿಯಾದ ದೇವರು ಆತನ ಮಕ್ಕಳಾದ ನಮಗೆ ಅವಶ್ಯವಿರುವ ವಿಷಯಗಳನ್ನು ಸರಳ ಭಾಷೆಯಲ್ಲಿ ನಮಗೆ ಅರ್ಥವಾಗುವಂತೆ ಕಲಿಸಲಾರನೆ? ಕಲಿಸಬಲ್ಲನೆಂದು ಬೈಬಲ್ ಹೇಳುತ್ತದೆ. ಅದು ಹೇಳುವುದು: ‘ನಿನ್ನ ಮಕ್ಕಳೆಲ್ಲರು ಯೆಹೋವನಿಂದ ಶಿಕ್ಷಿತರಾಗಿರುವರು.’ (ಯೆಶಾಯ 54:13) ಈ ಕಾರಣದಿಂದಲೇ ಬೈಬಲಿನ ಶಿಕ್ಷಣವು ಮನುಷ್ಯರಾದ ನಮಗೆ ಸರಳವೂ ಗ್ರಹಿಸಸಾಧ್ಯವೂ ಆಗಿದೆ ಎಂದು ನೀವು ಕಂಡುಕೊಳ್ಳುವಿರಿ. ಅದರಲ್ಲಿ ತುಂಬ ದೃಷ್ಟಾಂತಗಳೂ ಸಾಮಾನ್ಯ ಜನರ ದಾಖಲೆಗಳೂ ನಮ್ಮಲ್ಲಿ ಯಾವನೂ ಅರ್ಥ ಮಾಡಿಕೊಳ್ಳಬಹುದಾದ ಸರಳ ಭಾಷೆಯಲ್ಲಿ ಬರೆದಿರುವ ದೈನಂದಿನ ಜೀವಿತ ವಿಚಾರಗಳೂ ಇವೆ. ಶ್ರೇಷ್ಟ ಬುದ್ಧಿಶಕ್ತಿಯ ವ್ಯಕ್ತಿಯೊಬ್ಬನು ನಮಗೆ ನಮ್ಮ ಸಮಸ್ಯೆಗಳ ಪರಿಹಾರವನ್ನು ತೋರಿಸುವ ಅತ್ಯುತ್ತಮ ವಿಧಾನ ಇದಾಗಿದೆ.
“ಆದರೆ ನಾವೀಗ ಹೋಗಿಬರಲೇ ಬೇಕು. ನಾವು ಕೂಡಿ ಕಳೆದ ಸಮಯ ನಿಜವಾಗಿಯೂ ಅನಂದಕರವಾಗಿತ್ತು ಮತ್ತು ನಿಮ್ಮ ಅತಿಥಿ ಸತ್ಕಾರಕ್ಕಾಗಿ ಉಪಕಾರ.”
ಮಾಹಿತಿಯ ಗ್ರಂಥ
ಹಲವು ದಿನಗಳ ಬಳಿಕ, ನಿರ್ಮಲ ಮತ್ತು ಮರ್ಯಮ್, ಮರ್ಯಮಳ ಸರಿಯಾಗಿ ಕೆಲ್ಸ ಮಾಡದೆ ಇದ್ದ ಹೊಲಿಗೆಯ ಯಂತ್ರದ ಮಾಹಿತಿ ಪುಸ್ತಕವನ್ನು ಪರೀಕ್ಷಿಸುತ್ತಿದ್ದರು. ತೊಂದರೆ ಪರಿಹಾರವಾದ ಬಳಿಕ ಮರ್ಯಮ್ ನಿರ್ಮಲಳನ್ನು, “ನಮ್ಮನ್ನು ನಿರ್ಮಿಸಿದ ದೇವರು ನಮಗೆ ಸಮಸ್ಯೆಗಳು ಬಂದಾಗ ಪರೀಕ್ಷಿಸಲು ಇಂಥ ಒಂದು ಮಾಹಿತಿ ಗ್ರಂಥವನ್ನು ಕೊಡುವನೆಂದು ನೀನು ಭಾವಿಸುತ್ತಿಯಾ” ಎಂದು ಕೇಳಿದಳು.
“ಅಂದರೇನು ಮರ್ಯಮಕ್ಕಾ?” ಎಂದಳು ನಿರ್ಮಲ, ಆಶ್ಚರ್ಯದಿಂದ.
“ನಾವು ಈ ಹೊಲಿಗೆಯ ಯಂತ್ರವನ್ನು ಕೊಂಡಾಗ, ಅದರ ತಯಾರಕನು ನಮಗೆ ಒಂದು ಮಾಹಿತಿಯ ಪುಸ್ತಕ ಕೊಟ್ಟನು. ಅದೇ ರೀತಿ, ಮಾನವ ನಿರ್ಮಾಣಿಕನಾದ ದೇವರು, ಅನುಸರಿಸುವವರು ಪ್ರಯೋಜನ ಪಡೆಯುವಂತೆ ಮಾಹಿತಿಯನ್ನು ಕೊಡುವನೆಂಬುದು ನ್ಯಾಯ ಸಮ್ಮತವಲ್ಲವೆ?”
“ಆ ಮಾಹಿತಿ ಗ್ರಂಥ ಬೈಬಲೆಂದು ನೀವು ನಂಬುತ್ತಿರಬಹುದು, ಅಲ್ಲವೆ?”
“ಹೌದು, ನಿರ್ಮಲ. ಪವಿತ್ರ ಗ್ರಂಥಗಳೆನಿಸುವ ಅನೇಕ ಪುಸ್ತಕಗಳಿವೆ. ಇವುಗಳಲ್ಲಿ ಕೆಲವು ಪುರಾಣಗಳಾಗಿಯೂ ಕೆಲವು ಇತಿಹಾಸದ ಒಂದು ನಿರ್ದಿಷ್ಟ ಸಮಯದಲ್ಲಿ ಜೀವಿಸುತ್ತಿದ್ದ ವ್ಯಕ್ತಿಗಳ ಮತ್ತು ಅವರ ಸ್ವಂತ ಅಲೋಚನೆಗಳಿಂದ ವಿಕಸಿಸಿರುವ ತತ್ವಜ್ಞಾನಗಳಾಗಿಯೂ ಅಂಗೀಕರಿಸಲ್ಪಟ್ಟಿರುತ್ತವೆ. ಇತರ ಪುಸಕಗಳು ಒಂದು ನಿರ್ದಿಷ್ಟ ಪ್ರದೇಶ ಮತ್ತು ನಿರ್ದಿಷ್ಟ ಸಮಯದಲ್ಲಿ ತಕ್ಕದಾಗಿರುವ ನೈತಿಕ ನ್ಯಾಯಸೂತ್ರ ಮತ್ತು ಸಾಮಾಜಿಕ ನಿಯಮಗಳನ್ನು ಕೊಡುತ್ತವೆ. ಈ ಪುಸ್ತಕಗಳೆಲ್ಲ ವಿವಿಧ ವಿಷಯಗಳನ್ನು ಬೋಧಿಸುತ್ತವೆ. ಮತ್ತು ಜನರು, ಸ್ತ್ರೀಯೊಬ್ಬಳು ತಾನು ಉಡುವ ಸೀರೆಯ ಬಣ್ಣವನ್ನು ಆರಿಸಿಕೊಳ್ಳುವಂತೆ, ತಮಗೆ ಹಿಡಿಸುವುದನ್ನು ಆರಿಸಿಕೊಳ್ಳುತ್ತಾರೆ.
“ಆದರೆ, ಬೈಬಲು ಭಿನ್ನವಾಗಿದೆ. ನಾವು ಈ ಮೊದಲು ಚರ್ಚಿಸಿರುವಂತೆ, ಯಾವ ಲೇಖಕನೂ ಆ ಅಲೋಚನೆ ತನ್ನದೇ ಎಂದು ವಾದಿಸಿರುವುದಿಲ್ಲ. ಒಬ್ಬ ಲೇಖಕನು ವಿವರಿಸಿರುವಂತೆ, ಬೈಬಲಿನ ಸಂದೇಶ, ‘ಎಂದೂ ಮನುಷ್ಯನ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು . . . ದೇವರಿಂದ ಹೊಂದಿದ್ದನ್ನೇ ಮಾತಾಡಿದರು. (2 ಪೇತ್ರ 1:21) ಬೈಬಲಿನ ಬುದ್ಧಿವಾದ, ಅದು ಬರೆಯಲ್ಪಟ್ಟ ಸಮಯದಲ್ಲಿ ಪ್ರಾಯೋಗಿಕವಾಗಿತ್ತಾದರೂ, ಈ 20ನೇ ಶತಮಾನದಲ್ಲಿಯೂ ಅದು ಪ್ರಾಯೋಗಿಕವೇ, ಏಕೆಂದರೆ ದೇವರ ಮಾರ್ಗದರ್ಶನ ಸದಾಕಾಲಕ್ಕೂ ಪ್ರಯೋಜನಕರ ಮತ್ತು ಆತನ ಮಟ್ಟಗಳು ಬದಲಾವಣೆಯಾಗುವುದಿಲ್ಲ. ಅದನ್ನು ಅನುಸರಿಸುವವರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಮಾಡಲು ಸಹಾಯ ಮಾಡುತ್ತಾ ಅದು ಸದಾ ಅವರ ಜೀವನಕ್ಕೆ ಹಿತಕರವಾದ ಶಕ್ತಿಯಾಗಿ ಪರಿಣಮಿಸಿದೆ. ಈ ಕಾರಣದಿಂದಲೇ, ಸುಮಾರು 2,000 ವರ್ಷಗಳ ಹಿಂದೆ ಜೀವಿಸಿದ್ದ ಒಬ್ಬ ನ್ಯಾಯವಾದಿ ‘ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು’ ಎಂದು ಹೇಳಿದನು.—ಇಬ್ರಿಯ 4:12.
“ಆದರೆ ನಿರ್ಮಲ, ಇಂದು ಜೀವಿಸುವ ನಮಗೆ, ಬೈಬಲಿನ ಅತ್ಯಂತ ಎದ್ದುಕಾಣುವ ಉಪಯುಕ್ತತೆಯು, ಅದು ನಮ್ಮ ಸಂತತಿಗೆ ಬೆಳಕು ತೋರಿಸಿ, ದೇವರು ವಾಗ್ದಾನಿಸಿರುವ ಬದಲಾವಣೆ ನೋಡುವ ಸಂತತಿ ಇದೇ ಎಂದು ಸ್ಪಷ್ಟವಾಗಿ ತಿಳಿಸಿರುವುದೇ. ಮೊನ್ನೆ ಸಾಯಂಕಾಲ, ನಾವು ಚರ್ಚಿಸಿರುವ ‘ಸೂಚನೆ’ಯನ್ನು ಅದು ಕೊಡುತ್ತದೆ. ಬೈಬಲಿನ ಲೇಖಕರು ಈ ಸಮಯವನ್ನು ಮುನ್ನೋಡಿದರೂ ಅವರಲ್ಲಿ ಅನೇಕರು ತಾವು ದಾಖಲೆ ಮಾಡಿದ ಪ್ರವಾದನೆಗಳ ಅರ್ಥವನ್ನು ತಿಳಿಯಲಿಲ್ಲ. ಆದರೂ ದೇವರು ಮಾನವನ ಸಮಸ್ಯೆಗಳನ್ನು ಹೇಗೆ ಬಗೆಹರಿಸಲಿರುವನೆಂಬ ವಿಷಯ ಅವರಿಗೆ ತೀವ್ರಾಸಕ್ತಿ ಇತ್ತು. ದೃಷ್ಟಾಂತಕ್ಕೆ, ದಾನಿಯೇಲನೆಂಬ ಒಬ್ಬ ಲೇಖಕನು ತನಗೆ ಬರೆಯಲು ಹೇಳಲ್ಪಟ್ಟ ವಿಷಯಗಳ ಅರ್ಥವನ್ನು ಕೇಳಿದನು. ಆದರೆ, ಅವನಿಗೆ ದೊರೆತ ಉತ್ತರವನ್ನು ನೋಡಿರಿ: ‘ದಾನಿಯೇಲನೇ, ಈ ಮಾತುಗಳು ಅಂತ್ಯಕಾಲದ ವರೆಗೆ ಮುಚ್ಚಲ್ಪಟ್ಟು ಮುದ್ರಿತವಾಗಿವೆ, ಹೋಗು . . . ಜ್ಞಾನಿಗಳಿಗೆ ವಿವೇಕವಿರುವದು.’ ಮತ್ತು ಅವನಿಗೆ ಅಂತ್ಯಕಾಲದ ವಿಷಯ ಹೀಗೆ ಹೇಳಲಾಯಿತು: ‘ಬಹು ಜನರು ಅತ್ತಿತ್ತ ತಿರುಗುವರು, ತಿಳುವಳಿಕೆಯು ಹೆಚ್ಚುವದು.’—ದಾನಿಯೇಲ 12:4, 8-10.
“ಇಂದು ಇದು ನಿಜವಾಗಿಯೂ ನಡಿಯುತ್ತಿದೆ. ಶತಮಾನಗಳಲ್ಲಿ ಬೈಬಲು ಮೂಲ ಭಾಷೆಗಳಲ್ಲಿ ಮಾತ್ರ ಲಭ್ಯವಾಗುತ್ತಿತ್ತು, ಬಳಿಕ ಒಂದೆರಡು ಇತರ ಭಾಷೆಗಳಲ್ಲಿ ದೊರೆಯಿತು. ಇಂದು ಬೈಬಲು ಪೂರ್ತಿಯಾಗಿ ಅಥವಾ ಅಂಶವಾಗಿ 1,900ಕ್ಕೂ ಹೆಚ್ಚು ಭಾಷೆಗಳಲ್ಲಿ ದೊರಕಿ ಅದರ 200 ಕೋಟಿಗಳಿಗೂ ಹೆಚ್ಚು ಪ್ರತಿಗಳು ಲೋಕವ್ಯಾಪಕವಾಗಿ ವಿತರಣೆಯಾಗಿವೆ. ಇದಕ್ಕೆ 40 ಲಕ್ಷ ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳು ಮನೆಮನೆಗಳಿಗೆ ಹೋಗಿ ಜನರು ಬೈಬಲನ್ನು ಗ್ರಹಿಸುವಂತೆ ಸಹಾಯ ಮಾಡುವ ನಿಜತ್ವವನ್ನು ಕೂಡಿಸುವಲ್ಲಿ, ಈ ಪ್ರವಾದನೆ ಹೇಗೆ ನೆರವೇರುತ್ತಿದೆಯೆಂದು ನೀವು ನೋಡಬಲ್ಲಿರಿ. ‘ಮುಚ್ಚಲ್ಪಟ್ಟ’ ವಿಷಯಗಳು ಈಗ, ‘ತಿಳುವಳಿಕೆ’ ಹೆಚ್ಚುವ ‘ಅಂತ್ಯಕಾಲ’ದಲ್ಲಿ ಅರ್ಥವಾಗುತ್ತಾ ಇವೆ. ಈ ದುಷ್ಟ ಲೋಕದ ಅಂತ್ಯವನ್ನು ಪಾರಾಗಲು ಜನರಿಗೆ ದೇವರ ಮಾಹಿತಿಗಳ ಬಗ್ಗೆ ತಿಳಿಯಬೇಕಾದರೆ ಇದು ಅತ್ಯಾವಶ್ಯಕ. ಬೈಬಲನ್ನು ಅಭ್ಯಸಿಸುವ ಮೂಲಕ, ದೇವರು ಗತಕಾಲದಲ್ಲಿ ಮುಂತಿಳಿಸಿದ ವಿಷಯಗಳು ನಿಜವಾಗಿಯೂ ನಡದಿವೆಯೆಂದು ಜನರು ನೋಡಿ, ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ತರುವ ನೂತನ ಲೋಕದ ಆತನ ವಾಗ್ದಾನವನ್ನೂ ನಂಬಶಕ್ತರಾಗುವರು.
ಪಾರಾಗಲು ನಾವು ಮಾಡತಕ್ಕದಾಗಿರುವ ವಿಷಯಗಳು
ಮರ್ಯಮ್ ನಿರ್ಮಲಳೊಂದಿಗೆ ಮನೆಗೆ ನಡೆದು ಹೋದಾಗ ಅಜ್ಜಮ್ಮ ತಮ್ಮ ಸಂಧ್ಯಾ ಪೂಜೆಯನ್ನು ಆಗತಾನೇ ಮುಗಿಸಿದ್ದರು. ಹುಟ್ಟಲಿದ್ದ ಮಗುವಿಗಾಗಿ ಮಾಡಿದ್ದ ಉಡುಪುಗಳನ್ನು ಶಾಘ್ಲಿಸಿದ ಬಳಿಕ, ಅಜ್ಜಮ್ಮ ಥಟ್ಟನೆ ವಿಷಯ ಬದಲಾಯಿಸಿದರು.
“ಮಾಸ್ಟ್ರು ಹೇಳಿದ್ದು ಸತ್ಯವಾದರೆ ಮತ್ತು ದೇವರು ದುಷ್ಟರನ್ನು ಬೇಗನೇ ನಾಶಮಾಡುವಲ್ಲಿ ನಾವು ಸುರಕ್ಷಿತರು. ನಾವು ವಂಚಿಸುವುದಿಲ್ಲ, ಸುಳ್ಳು ಹೇಳುವುದಿಲ್ಲ. ನಾವು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುತ್ತೇವೆ, ಮತ್ತು ನೈತಿಕ ಜೀವನ ನಡಿಸುತ್ತೇವೆ. ನಮ್ಮ ಕುಟುಂಬಕ್ಕೆ ಯಾವ ಹಾನಿಯೂ ಬರಲಾರದು,” ಎಂದರು ಅಜ್ಜಮ್ಮ.
“ಅಜ್ಜಮ್ಮ, ದೇವರು ದುಷ್ಟರನ್ನು ನಾಶಮಾಡುವಾಗ ಪಾರಾಗಲು ನೈತಿಕ ಜೀವನ ನಡಿಸುವ ಆವಶ್ಯಕತೆಯಿರುವುದು ಖಂಡಿತ,” ಎಂದು ಮರ್ಯಮ್ ಉತ್ತರಿಸಿದಳು. “ಸುಳ್ಳು ಹೇಳಿ, ವಂಚಿಸಿ, ಕೊಲ್ಲುವ ಜನರು ಆತನ ನೂತನ ಲೋಕದಲ್ಲಿ ಇರಲು ಆತನಿಗೆ ಎಂದಿಗೂ ಮನಸ್ಸಿರಲಿಕ್ಕಿಲ್ಲ, ಏಕೆಂದರೆ ಹಾಗಿರುವಲ್ಲಿ ಅದು ಈ ಲೋಕಕ್ಕಿಂತ ಭಿನ್ನವಾಗಿರಲಿಕ್ಕಿಲ್ಲ, ಅಲ್ಲವೇ? ಆದರೆ ಸ್ವಲ್ಪ ಯೋಚಿಸಿ, ಅಜ್ಜಮ್ಮ. ನೆರೆಯಂಥ ವಿಪತ್ತಿನ ಸಂದರ್ಭದಲ್ಲಿ ಪಾರಾಗಲು ಸರಕಾರವು ನಮಗೆ ನಿರ್ದಿಷ್ಟ ಮಾಹಿತಿಯನ್ನು ಕೊಡುತ್ತದೆ. ಇದು ವಾಸ್ತವ ಪರಿಸ್ಥಿತಿಯ ವಿಷಯ ಅವರಿಗಿರುವ ಜ್ಞಾನದ ಮೇಲೆ ಮತ್ತು ಏನು ಸಂಭವಿಸಬಹುದೆಂಬ ಅವರ ತಿಳುವಳಿಕೆಯ ಮೇಲೆ ಹೊಂದಿಕೊಂಡಿರುತ್ತದೆ. ಆಗ ನಾವು ಮನೆಯಲ್ಲಿ ಕುಳಿತುಕೊಳ್ಳುತ್ತಾ, ‘ನಾನು ಒಳ್ಳೆಯ ವ್ಯಕ್ತಿ. ಆದುದರಿಂದ ನಾನು ಮುಳುಗಿ ಸಾಯುವುದಿಲ್ಲ’ ಎನ್ನುವುದಿಲ್ಲ, ಅಲ್ಲವೆ? ದೇವರು ಈ ನೆರೆಗಿಂತ ಎಪ್ಟೋ ದೊಡ್ಡ ವಿಪತ್ತನ್ನು ತರಲಿದ್ದಾನೆ. ಆತನು, ಬೈಬಲು ಅರ್ಮಗೆದೋನ್ ಎಂದು ಕರೆಯುವ, ಭೂಮಿಯ ಮೇಲಿರುವ ಪ್ರತಿಯೊಬ್ಬನನ್ನು ಬಾಧಿಸುವ ಯುದ್ಧವನ್ನು ಬರಮಾಡುತ್ತಾನೆ. (ಪ್ರಕಟನೆ 16:14-16) ನೈತಿಕ ಸೌಜನ್ಯವು ಪಾರಾಗಲಿಕ್ಕಿರುವ ಒಂದು ಮೂಲ ಆವಶ್ಯಕತೆಯೆಂದು ಪವಿತ್ರ ಶಾಸ್ತ್ರವು ತಿಳಿಸುತ್ತದೆ. ಆದರೆ ದೇವರು, ಆ ಸ್ಥಿತಿಯ ಕುರಿತ ತನ್ನ ಜ್ಞಾನಾನುಸಾರ ಇತರ ನಿರ್ದಿಷ್ಟ ಮಾಹಿತಿಯನ್ನೂ ಒದಗಿಸಿದ್ದಾನೆ. ನಾವು ಪಾರಾಗಬೇಕಾದರೆ ಇವನ್ನೂ ನಾವು ಅನುಸರಿಸಲೇ ಬೇಕು. ದೇವರ ಶಿಕ್ಷಣವನ್ನು ಪಾಲಿಸುವವರನ್ನು ‘ನೀತಿವಂತರು,’ ‘ಯಥಾರ್ಥವಂತರು’ ಮತ್ತು ‘ನಿರ್ದೋಷಿಗಳು’ ಎಂದು ಎಣಿಸಲಾಗುತ್ತದೆ. ಮತ್ತು ದೇವರು ದುಷ್ಟರನ್ನು ನಾಶಮಾಡುವಾಗ ಇವರೇ ಭೂಮಿಯಲ್ಲಿ ಬಿಡಲ್ಪಡುವರೆಂದು ಬೈಬಲು ಹೇಳುತ್ತದೆ.—ಜ್ಞಾನೋಕ್ತಿ 2:20-22.
ಈ ಸಂದರ್ಭದಲ್ಲಿ ಅಜ್ಜಯ್ಯ ಮಾತಾಡಿದರು: “ಆದರೆ ಈ ನಮ್ಮ ಪ್ರಸ್ತುತ ಸ್ಥಿತಿಯಲ್ಲಿ ನಾವು ಪಾರಾಗಲು ಯೋಗ್ಯತೆ ಇರುವಷ್ಟು ನೀತಿವಂತರೆಂದು ಹೇಗೆ ಎಣಿಸಲ್ಪಟ್ಟೇವು?”
ಮರ್ಯಮ್ ಉತ್ತರಿಸಿದ್ದು: “ಮನುಷ್ಯನಿಗೆ ನೆರವಾಗಲು ಯೆಹೋವ ದೇವರು ಒಂದು ಅದ್ಭುತಕರವಾದ ಶಾಸನಬದ್ಧ ಏರ್ಪಾಡನ್ನು ಮಾಡಿದನು. ಒಂದು ದೃಷ್ಟಾಂತ ಕೊಟ್ಟು ನಾನದನ್ನು ವಿವರಿಸುತ್ತೇನೆ. ನಿರ್ಮಲ, ನೀನು ರಾಮುವಿಗೆ 10 ರೂಪಾಯಿ ಕೊಟ್ಟು ಒಂದು ಕಿಲೊ ಸಕ್ಕರೆ ತರಲು ಕಳುಹಿಸುತ್ತಿ ಎಂದು ನೆನಸೋಣ. ಅಂಗಡಿಯ ರಸ್ತೆಯಲ್ಲಿ ಅವನು ಆಟವಾಡಲು ನಿಂತಾಗ ಅವನ ಹಣ ಕಳೆದು ಹೋಗುತ್ತದೆ. ಅವನು ಅಂಗಡಿಗೆ ಹೋದಾಗ ವ್ಯಾಪಾರಿ ಅವನಿಗೆ ಸಕ್ಕರೆ ಕೊಡುವನೆ?”
“ಇಲ್ಲ. ನಿಶ್ಚಯ ಕೊಡಲಾರ,” ಎಂದಳು ನಿರ್ಮಲ.
“ರಾಮು ಅಳುತ್ತಾ ನಿಲ್ಲುತ್ತಾನೆ. ಹಣ ಕಾಣೆಯಾದ ಕಾರಣ ಇಡೀ ಕುಟುಂಬ ಬಾಧೆ ಪಡುತ್ತದೆಂದು ಅವನಿಗೆ ಗೊತ್ತು. ಆಗ ಹತ್ತಿರದಲ್ಲಿದ್ದ ದಯೆಯ ಗ್ರಹಸ್ಥನೊಬ್ಬನು ಅವನ ಮೇಲೆ ಕರುಣೆದೋರಿ ಅವನಿಗೆ ಹತ್ತು ರೂಪಾಯಿಗಳನ್ನು ಕೊಡುತ್ತಾನೆ. ಇದನ್ನು ವ್ಯಾಪಾರಿಗೆ ಸಕ್ಕರೆಗಾಗಿ ಕೊಡಲಾಗುತ್ತದೆ, ಮತ್ತು ನಿಮ್ಮ ಕುಟುಂಬ ಅದನ್ನು ಉಪಯೋಗಿಸುತ್ತದೆ.
“ನಮ್ಮ ಸಮಸ್ಯೆಗಳು, ದೇವರು ಸೃಷ್ಟಿಸಿದ ಪ್ರಥಮ ಮಾನವ ಜೊತೆ ತಮ್ಮ ಸ್ವತಂತ್ರ ಸಂಕಲ್ಪ ಶಕ್ತಿಯನ್ನು ದುರುಪಯೋಗಿಸಿ ದೇವರ ವಿವೇಕದ ಮಾಹಿತಿಗಳಿಗೆ ಅವಿಧೇಯರಾಗಲು ನಿಶ್ಚಯಿಸಿದಾಗ ಪ್ರಾರಂಭವಾದವೆಂದು ಬೈಬಲು ಹೇಳುತ್ತದೆ. ಹಾಗೆ ಮಾಡುವಲ್ಲಿ ಬರುವ ಶಿಕ್ಷೆಯ ಕುರಿತು ಅಂದರೆ ಸಂಪೂರ್ಣತೆಯ ನಷ್ಟ, ಪ್ರಮೋದವನ ಬೀಡಿನ ನಷ್ಟ ಮತ್ತು ಭೂಮಿಯ ಮೇಲೆ ಅನಂತಕಾಲ ಜೀವಿಸುತ್ತಾ ಮುಂದರಿಯಲು ಅವನಿಗಿರುವ ಹಕ್ಕಿನ ನಷ್ಟದ ಕುರಿತು ದೇವರು ಅವನನ್ನು ಆಗಲೇ ಎಚ್ಚರಿಸಿದ್ದನು. ಆದುದರಿಂದ ದೇವರು ನ್ಯಾಯವಾಗಿಯೇ ತನ್ನ ನಿಯಮಗಳನ್ನು ಜ್ಯಾರಿಗೆ ತಂದನು. ಇದು ಅವರ ಸಂತಾನವನ್ನು, ಈ ಮಹಾ ನಷ್ಟದ ನಿಮಿತ್ತ ಆಳುವ ಸ್ಥಿತಿಗೆ ತಂದಿತು. ಆದರೆ ದೇವರು ನ್ಯಾಯವನ್ನು ಪ್ರೀತಿ ಸೇರಿಸಿ ಮೆಲುಪು ಮಾಡುತ್ತಾನಾದ್ದರಿಂದ ಆತನು ಆ ಪ್ರಥಮ ಜೊತೆ ನಷ್ಟಪಟ್ಟದ್ದನ್ನು ಪುನಃ ಪಡೆಯುವ ಸಂದರ್ಭವನ್ನು ಮಾನವರಿಗೆ ಕೊಡಲು ಏರ್ಪಡಿಸಿದನು. ದೃಷ್ಟಾಂತದ ದಯೆಯ ಗ್ರಹಸ್ಥನೋಪಾದಿ ದೇವರು ನಷ್ಟವಾದುದಕ್ಕೆ ಸಮಾನವಾಗುವಷ್ಟೇ ಬೆಲೆಯನ್ನು ಒದಗಿಸಿಕೊಟ್ಟನು. ಸ್ವರ್ಗದ ತನ್ನ ಸ್ವಂತ ಆತ್ಮರೂಪಿ ಪುತ್ರನು ಭೂಮಿಯ ಮೇಲೆ ಯೇಸು ಕ್ರಿಸ್ತನೆಂಬ ಮಾನವನಾಗಿ ಹುಟ್ಟುವಂತೆ ಮಾಡುತ್ತಾ ಆತನಿದನ್ನು ಮಾಡಿದನು. ಮತ್ತು ಯೇಸು ಇಷ್ಟಪೂರ್ವಕವಾಗಿ ಪ್ರಥಮ ಪುರುಷನಾದ ಆದಾಮನು ಕಳೆದುಕೊಂಡಿದ್ದ ಜೀವಕ್ಕೆ ಸಮಾನವಾಗಿದ್ದ ತನ್ನ ಪರಿಪೂರ್ಣ ಮಾನವ ಜೀವವನ್ನು ಯಜ್ಞಾರ್ಪಿಸಿ ಅದರ ಮೌಲ್ಯವನ್ನು ದೇವರಿಗೆ ಸಮರ್ಪಿಸಿದಾಗ, ಆ ಬೆಲೆಯನ್ನೇ, ಯಾವುದು ನಷ್ಟವಾಗಿತ್ತೋ ಅದನ್ನು ಅಂದರೆ, ಪ್ರಮೋದವನವಾದ ಭೂಮಿಯ ಮೇಲೆ ಅನಂತಕಾಲದ ಪರಿಪೂರ್ಣ ಜೀವವನ್ನು ಮಾನವ ಸಂತತಿಗಾಗಿ ಪುನಃ ಖರೀದಿಸಲು ಉಪಯೋಗಿಸ ಸಾಧ್ಯವಾಯಿತು.”
ಚರ್ಚೆಯ ಈ ಹಂತದಲ್ಲಿ, ತುಸು ಮೊದಲು ಆನಂದನೊಂದಿಗೆ ಒಳಬಂದಿದ್ದ ಮಾಸ್ಟರರು ಮಾತುಕತೆಯಲ್ಲಿ ತನ್ನನ್ನು ಸೇರಿಸಿಕೊಂಡರು. “ಮರ್ಯಮ್ನ ಹೇಳಿಕೆಯಿಂದ ಯೇಸು, ದೇವರ ಅವತಾರವಲ್ಲವೆಂದೂ ದೇವರ ಆತ್ಮರೂಪದ ಪುತ್ರನೆಂದೂ ನೀವು ನೋಡಬಲ್ಲಿರಿ. ಅವನು ಮಾನವರಿಗಾಗಿ ತನ್ನ ಪರಿಪೂರ್ಣ ಜೀವವನ್ನು ನೀಡಲು ಮನುಷ್ಯನಾಗಿ ಹುಟ್ಟಿ, ಹೀಗೆ ಪ್ರಥಮ ಮಾನವ ಜೊತೆಯ ಅವಿಧೇಯತೆಯ ಕಾರಣ ನಷ್ಟವಾದದ್ದನ್ನು ಅವರಿಗಾಗಿ ಪುನಃ ಪಡೆಯುವಂತೆ ಸಾಧ್ಯಮಾಡಿದನು. ದೇವರು ಮಾಡಿದ ಈ ಏರ್ಪಾಡನ್ನು ನಾವು ಅಂಗೀಕರಿಸುವಲ್ಲಿ, ಈ ದುಷ್ಟ ಲೋಕದ ಅಂತ್ಯವನ್ನು ಪಾರಾಗುವ ಮತ್ತು ಶಾಂತಿಭರಿತ, ಸಮಸ್ಯೆರಹಿತ ಭೂಮಿಯಲ್ಲಿ ನಿತ್ಯಜೀವವನ್ನು ಅನುಭವಿಸುವ ಮಾರ್ಗದಲ್ಲಿ ನಾವು ನಡೆಯುತ್ತೇವೆ. ಈ ನಿರೀಕ್ಷೆ ಎಷ್ಟು ಆಶ್ಚರ್ಯಕರವೆಂದರೆ ಯೆಹೋವನ ಸಾಕ್ಷಿಗಳು ಲೋಕದ ಎಲ್ಲಾ ಭಾಗಗಳಲ್ಲಿ ಸರ್ವ ರಾಷ್ಟ್ರಗಳ ಜನರು ಇದರ ವಿಷಯ ಕಲಿಯಲು ಸಹಾಯ ಮಾಡುವಂತೆ ಶ್ರಮಪಟ್ಟು ಕೆಲಸ ನಡಿಸುತ್ತಿದ್ದಾರೆ. ಹೌದು, ಈ ನಿರೀಕ್ಷೆ ವಿಶ್ವಾಸಾರ್ಹವೆಂದು ರುಜುಪಡಿಸಿಕೊಳ್ಳಲು ಪ್ರಯತ್ನ ಅವಶ್ಯವೆಂಬದು ನಿಜ. ಆದರೆ ನಮಗೆ ನೀಡಲ್ಪಡುವ ಪ್ರತಿಫಲಗಳು ಈ ಪ್ರಯತ್ನವನ್ನು ಸಾರ್ಥಕವಾಗಿ ಮಾಡುತ್ತವೆ.”
ಒಂದು ಉಜ್ವಲ ಭವಿಷ್ಯ
ಆನಂದ ಆಸ್ಪತ್ರೆಯಿಂದ ನಿರ್ಮಲಳನ್ನೂ ಹೊಸ ಶಿಶುವನ್ನೂ ಮನೆಗೆ ತಂದಾಗ ಶುಭ್ರವಾದ ನೀಲಾಕಾಶದಲ್ಲಿ ಸೂರ್ಯ ಪ್ರಕಾಶಿಸುತ್ತಿತ್ತು. ಮಳೆಗಾಲ ಮುಗಿಯಿತು ಎಂಬಂತೆ ತೋರುತ್ತಿತ್ತು. ಕುಟುಂಬದಲ್ಲಿ ತುಂಬ ಸಡಗರವಿತ್ತು. ನೆರೆಯವರು ಹೊಸ ಮಗುವನ್ನು ನೋಡಲು ಬಂದರು. ಆನಂದನು ಮೆಲ್ಲನೆ ಹಿತ್ತಲಿಗೆ ಹೋಗಿ ಅಲ್ಲಿ ಒಂದು ಗುಬ್ಬಚ್ಚಿ ಗೂಡುಕಟ್ಟಲು ಹುಲ್ಲಿನ ಚೂರುಗಳನ್ನು ಸಂಗ್ರಹಿಸುವುದನ್ನು ನೋಡುತ್ತಾ ಕೂತನು. ‘ನನ್ನಂತೆಯೇ ಆ ಹಕ್ಕಿಯೂ ಸುರಕ್ಷಿತ ಭವಿಷ್ಯವನ್ನು ಬಯಸುತ್ತದೆ’ ಎಂದು ಅವನು ನೆನಸಿದನು.
ಮಾಸ್ಟರರು ಹೇಳಿದ ವಿಷಯಗಳೆಲ್ಲಾ ಸತ್ಯವಾಗುವುದಾದರೆ ಏನು? ಆಗ ತನ್ನ ಮನೆಯ ಈ ಹೊಸ ಮಗುವಿನ ಮುಂದೆ ಆಶ್ಚರ್ಯಕರವಾದ ಭವಿಷ್ಯವಿರುವುದು. ಹಲವು ದಿನಗಳ ಮೊದಲು ತಮ್ಮ ಸಂಭಾಷಣೆಯಲ್ಲಿ ಮಾಸ್ಟರರು ಹೇಳಿದ್ದ ಕೊನೆಯ ಮಾತುಗಳನ್ನು ಅವನು ಜ್ಞಾಪಿಸಿಕೊಂಡನು. “ರಾಮುವಿನ ವಿದ್ಯೆ ಮುಗಿದಾಗ, ನೀವು ವಾರ್ತಾ ಪತ್ರಿಕೆಯಲ್ಲಿ ಕೆಲಸದ ಒಂದು ಜಾಹೀರಾತನ್ನು ನೋಡುತ್ತೀರಿ ಎಂದು ಭಾವಿಸಿ. ಅದು ರಾಮುವಿನಷ್ಟೇ ಅರ್ಹತೆಯುಳ್ಳವನಿಗೆ ಕೊಡಲ್ಪಡುತ್ತದೆ. ಅತ್ಯುತ್ತಮ ವೇತನ, ಅವನು ಜೀವಿಸ ಬಯಸುವ ಪ್ರದೇಶದಲ್ಲಿ ಅದು ಇದೆ, ಉತ್ತಮ ವಸತಿ ದೊರಕುತ್ತದೆ ಮತ್ತು ಅವನು ಮಾಡಲು ಸಂತೋಷಿಸುವ ಕೆಲಸ—ಇವೆಲ್ಲ ಇವೆ. ಆಗ ನೀವೇನು ಮಾಡುವಿರಿ? ಆ ಜಾಹೀರಾತನ್ನು ಅಲಕ್ಷ್ಯ ಮಾಡುವಿರಾ ಯಾ ಆ ಉದ್ಯೋಗವನ್ನು ಪಡೆಯಲು ಸರ್ವ ಪ್ರಯತ್ನವನ್ನು ಮಾಡುತ್ತೀರಾ?” ‘ಇದಕ್ಕೆ ಉತ್ತರ ಸುವ್ಯಕ್ತ’ ಎಂದು ಯೋಚಿಸಿದ ಆನಂದ್.
ಹಾಗಾದರೆ, ದೇವರು ಇಂದು ಜೀವಿಸುವ ಜನರಿಗೆ ನೀಡುವನೆಂಬ ಬೈಬಲು ಹೇಳುವ ವಿಷಯಗಳ ಕುರಿತೇನು? ಪ್ರಮೋದವನವಾದ ಭೂಮಿ, ಉತ್ತಮ ಬೀಡು, ಹೇರಳ ಆಹಾರ, ತೃಪ್ತಿಕರವಾದ ಕೆಲಸ, ಸಂಪೂರ್ಣ ಆರೋಗ್ಯ ಮತ್ತು ಪೂರ್ಣ ಭದ್ರತೆ. ಇದು ನಿಜವಾಗುವುದಾದರೆ? ಆನಂದ್ ದೀರ್ಘಕಾಲ ಇದರ ವಿಷಯ ಯೋಚಿಸಿದ.
ಸೂರ್ಯ ಶೋಭಾಯಮಾನವಾದ ಬಣ್ಣದ ಹೊಳಪಿನಲ್ಲಿ ಕಂತ ತೊಡಗಿದಾಗ ಅವನು ನಿಶ್ಚಯ ಮಾಡಿದ. ‘ಹೌದು’ ಎಂದುಕೊಂಡ ಅವನು ತನ್ನಲ್ಲೇ. ‘ಈ ಪರಿವರ್ತನೆ ನಿಜವಾಗಿಯೂ ಬರಲಿರುವುದೊ ಎಂಬ ವಿಷಯದ ರುಜುವಾತನ್ನು ಕೂಲಂಕುಷವಾಗಿ ಪರೀಕ್ಷಿಸಲು ನನ್ನ ಮತ್ತು ನನ್ನ ಕುಟುಂಬದ ಹಂಗು ನನಗಿದೆ. ನಾನು ತೃಪ್ತನಾದರೆ, ದುಷ್ಟತ್ವದ ಅಂತ್ಯವನ್ನು ಪಾರಾಗುವ ಅರ್ಹತೆ ಪಡೆದು, ನಮ್ಮ ಸಮಸ್ಯೆಗಳೆಲ್ಲ ಬಗೆಹರಿಸಲ್ಪಟ್ಟಿರುವ ಆನಂದದ ಭವಿಷ್ಯತ್ತನ್ನು ಅನುಭವಿಸಲು ನಾವು ನಮಗೆ ಸಾಧ್ಯವಿರುವ ಸಕಲ ಪ್ರಯತ್ನವನ್ನೂ ಮಾಡತಕ್ಕದ್ದು.’
[Blurb on page 5]
“ನಾನು ಪ್ರತಿದಿನ ಎದುರಿಸುವ ಸಮಸ್ಯೆಗಳು ನಿಮಗಿಲ್ಲವೆಂದು ನನಗೆ ಕಂಡುಬರುತ್ತದೆ. ನೀವೆಲ್ಲ ಎಷ್ಟು ಶಾಂತ ಚಿತ್ತರೂ ಸಂತೃಪ್ತರೂ ಆಗಿದ್ದೀರಿ. ನಿಮ್ಮನ್ನು ನೋಡಿ ನಾನೆಷ್ಟೊ ಅಸೂಯೆ ಪಡುತ್ತೇನೆ!”
[Blurb on page 7]
ಮನುಷ್ಯನಿಗೆ ಅತ್ಯಂತ ಅಪೇಕ್ಷಣೀಯವಾದ ವಿಷಯಗಳು ಒಂದು ಒಳ್ಳೆಯ ಮನೆ, ಒಳ್ಳೆಯ ಆರೋಗ್ಯ, ಸಂತುಷ್ಟ ಕುಟುಂಬ ಮತ್ತು ಪ್ರೀತಿಸುವ ಮಿತ್ರರು
[Blurb on page 13]
ಈ ಸೂಚನೆಯಲ್ಲಿ ಕೇವಲ ಮನುಷ್ಯನ ವ್ಯಕ್ತಿತ್ವ ಕೆಟ್ಟದಾಗುವುದಕ್ಕಿಂತ ಎಷ್ಟೋ ಹೆಚ್ಚು ವಿಷಯಗಳು ಸೇರಿವೆ.
[Blurb on page 20]
ಈ ಕೆಟ್ಟ ಬಾಡಿಗೆದಾರರನ್ನು ತೆಗೆದು ಈ ವಠಾರದ ಸೌಕರ್ಯಗಳನ್ನು ಸರಿಪಡಿಸುವುದಾದರೆ ನಾವಿಲ್ಲಿ ಸಂತೋಷದಿಂದ ಜೀವಿಸಲು ಸಾಧ್ಯವಿಲ್ಲವೆ? ಸರ್ವಭೂಮಿಗೆ ಹೀಗೆಯೇ ಮಾಡುತ್ತೇನೆಂದು ದೇವರು ವಾಗ್ದಾನಿಸಿದ್ದಾನೆ
[Blurb on page 23]
“ದೇವರ ವಿವೇಕ ನಮ್ಮ ವಿವೇಕಕ್ಕಿಂತ ಎಷ್ಟೋ ಶ್ರೇಷ್ಟವೆಂಬದು ಖರೆ”
[Blurb on page 27]
“ನಮ್ಮ ಈ ಪ್ರಸ್ತುತ ಸ್ಥಿತಿಯಲ್ಲಿ ನಾವು ಪಾರಾಗಲು ಯೋಗ್ಯತೆಯಿರುವಷ್ಟು ನೀತಿವಂತರೆಂದು ಹೇಗೆ ಎಣಿಸಲ್ಪಟ್ಟೇವು?”
[ಪುಟ 9 ರಲ್ಲಿರುವ ಚಿತ್ರ]
ಮಾನವರು ಬಹಳ ಕಾಲದಿಂದ ಭೂಮಿಯ ಮೇಲೆ ಕಷ್ಟಾನುಭವಿಸುತ್ತಿದ್ದಾರೆ
[ಪುಟ 0 ರಲ್ಲಿರುವ ಚಿತ್ರ]
ಇವರಿಗೆ ಸಂತೋಷ ಭವಿಷ್ಯದ ಸಂದರ್ಭ ಕೊಡಲು ಕ್ರಾಂತಿ ಬೇಕಾದೀತೆ?
[Pictures on pages 14, 15]
ಮರ ಹೂವು ಬಿಡುವಾಗ ಬೇಸಗೆ ಹತ್ತರವೆಂದು ನಿಮಗೆ ಗೊತ್ತು. ಹಾಗೆಯೇ ಪೂರ್ತಿ ಸೂಚನೆ ನೆರವೇರುತ್ತಿರುವಾಗ ಅಂತ್ಯ ಸಮೀಪವಿದೆ
[Pictures on pages 16, 17]
ಬೈಬಲು ನಮ್ರರೂ ಯಥಾರ್ಥವಂತರೂ ಆದವರನ್ನು ಅವರು ದೇವರ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಎಚ್ಚರಿಸುತ್ತದೆ
[ಪುಟ 36 ರಲ್ಲಿರುವ ಚಿತ್ರ]
ದೇವರ ವಾಕ್ಯ ಶಾಶ್ವತವಾಗಿರುವುದರಿಂದ ಬೈಬಲಿನ ಬುದ್ಧಿವಾದ ಇಂದು ಪ್ರಾಯೋಗಿಕ
[ಪುಟ 30 ರಲ್ಲಿರುವ ಚಿತ್ರ]
“ರುಜುವಾತನ್ನು ಪರೀಕ್ಷಿಸಲು ನನ್ನ ಮತ್ತು ನನ್ನ ಕುಟುಂಬದ ಹಂಗು ನನಗಿದೆ”