ನೀವು ಯೆಹೋವನ ದಿನಕ್ಕಾಗಿ ಸಿದ್ಧರಾಗಿದ್ದೀರೊ?
“ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ.”—ಚೆಫನ್ಯ 1:14.
1. ಶಾಸ್ತ್ರಗಳು ಯೆಹೋವನ ದಿನವನ್ನು ಹೇಗೆ ವರ್ಣಿಸುತ್ತವೆ?
ಯೆಹೋವನ “ಭಯಂಕರವಾದ ಮಹಾದಿನವು” ಬೇಗನೆ ಈ ದುಷ್ಟ ವಿಷಯಗಳ ವ್ಯವಸ್ಥೆಯ ಮೇಲೆ ಬರುವುದು. ಶಾಸ್ತ್ರಗಳು, ಯೆಹೋವನ ದಿನವನ್ನು, ಹೋರಾಟ, ಕತ್ತಲೆ, ಆವೇಶ, ಸಂಕಟ, ಅಳಲು, ದಿಗಿಲು, ಮತ್ತು ನಿರ್ಗತಿಯ ದಿನವಾಗಿ ವರ್ಣಿಸುತ್ತವೆ. ಆದರೂ ಬದುಕಿ ಉಳಿಯುವವರು ಇರುವರು, ಏಕೆಂದರೆ “ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.” (ಯೋವೇಲ 2:30-32; ಆಮೋಸ 5:18-20) ಹೌದು, ದೇವರು ಆಗ ತನ್ನ ವೈರಿಗಳನ್ನು ನಾಶಗೊಳಿಸಿ, ತನ್ನ ಜನರನ್ನು ರಕ್ಷಿಸುವನು.
2. ಯೆಹೋವನ ದಿನದ ಕುರಿತು ನಮಗೆ ತುರ್ತಿನ ಪ್ರಜ್ಞೆಯಿರಬೇಕು ಏಕೆ?
2 ದೇವರ ಪ್ರವಾದಿಗಳು ಯೆಹೋವನ ದಿನಕ್ಕೆ ತುರ್ತುಪ್ರಜ್ಞೆಯನ್ನು ಕೂಡಿಸಿದರು. ದೃಷ್ಟಾಂತಕ್ಕೆ, ಚೆಫನ್ಯನು ಬರೆದುದು: “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ.” (ಚೆಫನ್ಯ 1:14) ಇಂದು ಸನ್ನಿವೇಶವು ಇನ್ನಷ್ಟು ಹೆಚ್ಚು ತುರ್ತಿನದ್ದಾಗಿದೆ ಏಕೆಂದರೆ, ದೇವರ ಪ್ರಧಾನ ವಧಕಾರನಾದ ರಾಜ ಯೇಸು ಕ್ರಿಸ್ತನು, ‘ಸೊಂಟಕ್ಕೆ ಪಟ್ಟದ ಕತ್ತಿಯನ್ನು ಕಟ್ಟಿಕೊಂಡು ಸತ್ಯತೆದೈನ್ಯನೀತಿಗಳನ್ನು ಸ್ಥಾಪಿಸುವದಕ್ಕಾಗಿ ವಾಹನಾರೂಢನಾಗಿ ವಿಜಯೋತ್ಸವದೊಡನೆ ಹೊರಡ’ಲಿದ್ದಾನೆ. (ಕೀರ್ತನೆ 45:3, 4) ನೀವು ಆ ದಿನಕ್ಕಾಗಿ ಸಿದ್ಧರಾಗಿದ್ದೀರೊ?
ಅವರಿಗೆ ಮಹಾ ನಿರೀಕ್ಷೆಗಳಿದ್ದವು
3. ಥೆಸಲೊನೀಕದ ಕೆಲವು ಕ್ರೈಸ್ತರಿಗೆ ಯಾವ ನಿರೀಕ್ಷೆಗಳಿದ್ದವು, ಮತ್ತು ಯಾವ ಎರಡು ಕಾರಣಗಳಿಗಾಗಿ ಅವರು ತಪ್ಪಭಿಪ್ರಾಯಪಟ್ಟರು?
3 ಅನೇಕರಿಗೆ ಯೆಹೋವನ ದಿನದ ಸಂಬಂಧದಲ್ಲಿ ನೆರವೇರದ ನಿರೀಕ್ಷೆಗಳಿದ್ದವು. ಥೆಸಲೊನೀಕದಲ್ಲಿದ್ದ ಕೆಲವು ಆದಿ ಕ್ರೈಸ್ತರು ಹೇಳಿದ್ದು, ‘ಯೆಹೋವನ ದಿನವು ಈಗಲೇ ಹತ್ತಿರವಾಯಿತು!’ (2 ಥೆಸಲೊನೀಕ 2:2) ಆದರೆ ಅದು ಏಕೆ ಹತ್ತಿರದಲ್ಲಿರಲಿಲ್ಲವೆಂಬುದಕ್ಕೆ ಎರಡು ಮೂಲಭೂತ ಕಾರಣಗಳಿದ್ದವು. ಅವುಗಳಲ್ಲಿ ಒಂದನ್ನು ಉದ್ಧರಿಸುತ್ತಾ, ಅಪೊಸ್ತಲ ಪೌಲನು ಹೀಗೆ ಹೇಳಿದ್ದನು: “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು . . . ಬರುವದು.” (1 ಥೆಸಲೊನೀಕ 5:1-6) ಈ “ಅಂತ್ಯಕಾಲ”ದಲ್ಲಿ, ಯೆಹೋವನ ಸಾಕ್ಷಿಗಳಾದ ನಾವು ಆ ಮಾತುಗಳ ನೆರವೇರಿಕೆಯನ್ನು ಕಾಯುತ್ತಿದ್ದೇವೆ. (ದಾನಿಯೇಲ 12:4) ಯೆಹೋವನ ಮಹಾದಿನವು ಆಗಮಿಸಿತ್ತೆಂಬ ವಿಷಯದ ಮತ್ತೊಂದು ರುಜುವಾತೂ ಥೆಸಲೊನೀಕದವರಲ್ಲಿ ಇರಲಿಲ್ಲ. ಏಕೆಂದರೆ ಪೌಲನು ಅವರಿಗೆ ಹೇಳಿದ್ದು: “ಮೊದಲು ಮತಭ್ರಷ್ಟತೆಯು . . . ಬಂದ ಹೊರತು ಆ ದಿನವು ಬರುವದಿಲ್ಲ.” (2 ಥೆಸಲೊನೀಕ 2:3) ಪೌಲನು ಆ ಮಾತುಗಳನ್ನು (ಸಾ.ಶ. 51ರ ಸುಮಾರಿಗೆ) ಬರೆದಾಗ, ಸತ್ಯ ಕ್ರೈಸ್ತತ್ವದಿಂದ ಬಂದ “ಮತಭ್ರಷ್ಟತೆಯು” ಪೂರ್ಣವಾಗಿ ವಿಕಾಸಗೊಂಡಿರಲಿಲ್ಲ. ಇಂದು, ಕ್ರೈಸ್ತಪ್ರಪಂಚದಲ್ಲಿ ಅದು ಪೂರ್ಣವಾಗಿ ಬೆಳೆದಿರುವುದನ್ನು ನಾವು ನೋಡುತ್ತೇವೆ. ಆದರೆ, ತಮ್ಮ ನೆರವೇರದ ನಿರೀಕ್ಷೆಗಳ ಹೊರತೂ, ಮರಣದ ತನಕ ದೇವರನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಾ ಇದ್ದ ಥೆಸಲೊನೀಕದ ಆ ನಂಬಿಗಸ್ತ ಅಭಿಷಿಕ್ತರು, ಕಟ್ಟಕಡೆಗೆ ಒಂದು ಸ್ವರ್ಗೀಯ ಪ್ರತಿಫಲವನ್ನು ಪಡೆದುಕೊಂಡರು. (ಪ್ರಕಟನೆ 2:10) ನಾವು ಯೆಹೋವನ ದಿನಕ್ಕಾಗಿ ಕಾಯುವಾಗ, ನಂಬಿಗಸ್ತರಾಗಿ ಉಳಿಯುವಲ್ಲಿ ನಮಗೂ ಪ್ರತಿಫಲ ಸಿಗುವುದು.
4. (ಎ) 2 ಥೆಸಲೊನೀಕ 2:1, 2ರಲ್ಲಿರುವ ಯಾವ ವಿಷಯದೊಂದಿಗೆ ಯೆಹೋವನ ದಿನವು ಜೋಡಿಸಲ್ಪಟ್ಟಿದೆ? (ಬಿ) ಕ್ರಿಸ್ತನ ಪುನರಾಗಮನ ಮತ್ತು ಸಂಬಂಧಿತ ವಿಷಯಗಳ ಕುರಿತು ಚರ್ಚ್ ಪಿತೃಗಳೆಂದು ಕರೆಯಲ್ಪಟ್ಟವರಿಗೆ ಯಾವ ವೀಕ್ಷಣೆಗಳಿದ್ದವು?
4 ಬೈಬಲು “ಯೆಹೋವನ ಮಹಾದಿನ”ವನ್ನು “ನಮ್ಮ ಕರ್ತನಾದ ಯೇಸು ಕ್ರಿಸ್ತನ ಸಾನ್ನಿಧ್ಯ”ದೊಂದಿಗೆ ಸಂಬಂಧಿಸುತ್ತದೆ. (2 ಥೆಸಲೊನೀಕ 2:1, 2) ಚರ್ಚಿನ ಪಿತೃಗಳೆಂದು ಕರೆಯಲ್ಪಟ್ಟವರಿಗೆ ಕ್ರಿಸ್ತನ ಪುನರಾಗಮನ, ಅವನ ಸಾನ್ನಿಧ್ಯ, ಮತ್ತು ಅವನ ಸಾವಿರ ವರ್ಷದ ಆಳಿಕೆಯ ಕುರಿತು ವಿಭಿನ್ನ ವಿಚಾರಗಳಿದ್ದವು. (ಪ್ರಕಟನೆ 20:4) ಸಾ.ಶ. ಎರಡನೆಯ ಶತಮಾನದಲ್ಲಿ ಹೈರಾಪಲಿಸ್ನ ಪೇಪೀಅಸ್, ಕ್ರಿಸ್ತನ ಸಹಸ್ರ ವರ್ಷದ ಆಳಿಕೆಯ ಸಮಯದಲ್ಲಿ ಭೂಮಿಯ ಆಶ್ಚರ್ಯಕರ ಫಲವತ್ತತೆಯ ಕುರಿತಾಗಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದನು. ಜಸ್ಟಿನ್ ಮಾರ್ಟರ್ ಯೇಸುವಿನ ಸಾನ್ನಿಧ್ಯದ ಕುರಿತಾಗಿ ಪದೇ ಪದೇ ಮಾತಾಡಿದನು ಮತ್ತು ಅವನ ರಾಜ್ಯದ ಕೇಂದ್ರಸ್ಥಾನವು ಪುನಸ್ಸ್ಥಾಪಿತ ಯೆರೂಸಲೇಮ್ ಆಗಿರುವುದೆಂದು ನಿರೀಕ್ಷಿಸಿದನು. ಲೀಓನ್ನ ಐರೀನೀಯಸ್, ರೋಮನ್ ಸಾಮ್ರಾಜ್ಯವು ನಾಶಗೊಳಿಸಲ್ಪಟ್ಟ ನಂತರ, ಯೇಸು ದೃಶ್ಯನಾಗಿ ಕಾಣಿಸಿಕೊಂಡು, ಸೈತಾನನನ್ನು ಬಂಧಿಸಿ, ಭೌಮಿಕ ಯೆರೂಸಲೇಮಿನಲ್ಲಿ ಆಳುವನೆಂದು ಕಲಿಸಿದನು.
5. ಕ್ರಿಸ್ತನ “ಎರಡನೆಯ ಆಗಮನ” ಮತ್ತು ಅವನ ಸಹಸ್ರ ವರ್ಷದ ಆಳಿಕೆಯ ಕುರಿತು ಕೆಲವು ವಿದ್ವಾಂಸರು ಏನು ಹೇಳಿದ್ದಾರೆ?
5 ಇತಿಹಾಸಕಾರ ಫಿಲಿಪ್ ಷಾಫ್ ಗಮನಿಸಿದ್ದೇನೆಂದರೆ, ಸಾ.ಶ. 325ರಲ್ಲಾದ ನೈಸಿಯಾದ ಸಭೆಗೆ ಮುಂಚಿತವಾದ ಸಮಯದಲ್ಲಿನ “ಅತ್ಯಂತ ಗಮನಾರ್ಹವಾದ ವಿಷಯವು, ಸಾಮಾನ್ಯ ಪುನರುತ್ಥಾನ ಮತ್ತು ನ್ಯಾಯತೀರ್ಪಿನ ಮೊದಲು, ಭೂಮಿಯ ಮೇಲೆ ಮಹಿಮೆಯಲ್ಲಿ ಸಾವಿರ ವರ್ಷಗಳ ವರೆಗೆ ಪುನರುತ್ಥಿತ ಸಂತರೊಂದಿಗೆ ಕ್ರಿಸ್ತನ ದೃಶ್ಯ ಆಳಿಕೆಯ ನಂಬಿಕೆ”ಯಾಗಿತ್ತು. ಜೇಮ್ಸ್ ಹೇಸ್ಟಿಂಗ್ಸ್ ಅವರಿಂದ ಪರಿಷ್ಕರಿಸಲ್ಪಟ್ಟ ಬೈಬಲಿನ ಒಂದು ಶಬ್ದಕೋಶ (ಇಂಗ್ಲಿಷ್)ವು ಹೇಳುವುದು: “ಟೆರ್ಟಲ್ಯನ್, ಐರೀನಿಯಸ್, ಮತ್ತು ಹಿಪಾಲಟಸ್ ಇನ್ನೂ [ಯೇಸು ಕ್ರಿಸ್ತನ] ಸನ್ನಿಹಿತವಾದ ಆಗಮನಕ್ಕಾಗಿ ಎದುರುನೋಡುತ್ತಾರೆ; ಆದರೆ ಆ್ಯಲೆಗ್ಸಾಂಡ್ರಿನ್ ಪಿತೃಗಳೊಂದಿಗೆ ನಾವೊಂದು ಹೊಸ ವಿಚಾರಸರಣಿಯನ್ನು ಪ್ರವೇಶಿಸುತ್ತೇವೆ. . . . ಅಗಸ್ಟಿನ್ನ ಬೋಧನೆಗಳು, ಸಾವಿರ ವರ್ಷಕಾಲದ ರಾಜ್ಯಭಾರವನ್ನು ಪಾಪಭಂಜಕ ಕ್ರೈಸ್ತರ ಸಮಯಾವಧಿಯೊಂದಿಗೆ ಸಮಾನೀಕರಿಸಿದಾಗ, ಎರಡನೆಯ ಆಗಮನವನ್ನು ದೂರದ ಭವಿಷ್ಯತ್ತಿಗೆ ಮುಂದೂಡಲಾಗುತ್ತದೆ.”
ಯೆಹೋವನ ದಿನ ಮತ್ತು ಯೇಸುವಿನ ಸಾನ್ನಿಧ್ಯ
6. ಯೆಹೋವನ ದಿನವು ಬಹಳಷ್ಟು ದೂರವಿದೆಯೆಂದು ನಾವು ಏಕೆ ತೀರ್ಮಾನಿಸಬಾರದು?
6 ತಪ್ಪುಕಲ್ಪನೆಗಳು ನಿರಾಶೆಗಳಿಗೆ ನಡೆಸಿವೆಯಾದರೂ, ಯೆಹೋವನ ದಿನವು ಬಹಳ ದೂರವಿದೆಯೆಂದು ನಾವು ನೆನಸದಿರೋಣ. ಯೆಹೋವನ ದಿನವು ಯಾವುದರೊಂದಿಗೆ ಶಾಸ್ತ್ರೀಯವಾಗಿ ಸಂಬಂಧಿಸಲ್ಪಟ್ಟಿದೆಯೊ ಆ ಯೇಸುವಿನ ಅದೃಶ್ಯ ಸಾನ್ನಿಧ್ಯವು, ಈಗಾಗಲೇ ಆರಂಭಿಸಿದೆ. ಕ್ರಿಸ್ತನ ಸಾನ್ನಿಧ್ಯವು ಇಸವಿ 1914ರಲ್ಲಿ ಆರಂಭವಾಯಿತು ಎಂಬ ಸಂಗತಿಗೆ ಯೆಹೋವನ ಸಾಕ್ಷಿಗಳ ಕಾವಲಿನಬುರುಜು ಮತ್ತು ಸಂಬಂಧಿತ ಪ್ರಕಾಶನಗಳು ಅನೇಕ ವೇಳೆ ಶಾಸ್ತ್ರೀಯ ಪ್ರಮಾಣವನ್ನು ಒದಗಿಸಿವೆ.a ಹಾಗಾದರೆ, ಯೇಸು ತನ್ನ ಸಾನ್ನಿಧ್ಯದ ಕುರಿತು ಏನು ಹೇಳಿದನು?
7. (ಎ) ಯೇಸುವಿನ ಸಾನ್ನಿಧ್ಯ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆಯ ಕುರಿತಾದ ಕೆಲವು ವೈಶಿಷ್ಟ್ಯಗಳಾವುವು? (ಬಿ) ನಾವು ಹೇಗೆ ರಕ್ಷಿಸಲ್ಪಡಬಹುದು?
7 ಯೇಸುವಿನ ಮರಣಕ್ಕೆ ಸ್ವಲ್ಪ ಮುಂಚಿತವಾಗಿ ಅವನ ಸಾನ್ನಿಧ್ಯವು ಚರ್ಚೆಯ ವಿಷಯವಾಯಿತು. ಯೆರೂಸಲೇಮಿನ ದೇವಾಲಯದ ನಾಶನವನ್ನು ಅವನು ಮುಂತಿಳಿಸಿದ್ದನ್ನು ಕೇಳಿದ ತರುವಾಯ, ಅವನ ಅಪೊಸ್ತಲರಾದ ಪೇತ್ರ, ಯಾಕೋಬ, ಯೋಹಾನ ಮತ್ತು ಅಂದ್ರೆಯರು ಕೇಳಿದ್ದು: “ಅದು ಯಾವಾಗ ಆಗುವದು? ನೀನು ಪ್ರತ್ಯಕ್ಷನಾಗುವದಕ್ಕೂ [“ನಿನ್ನ ಸಾನ್ನಿಧ್ಯ,” NW] ಯುಗದ ಸಮಾಪ್ತಿಗೂ ಸೂಚನೆಯೇನು?” (ಮತ್ತಾಯ 24:1-3; ಮಾರ್ಕ 13:3, 4) ಉತ್ತರವಾಗಿ ಯೇಸು, ಯುದ್ಧಗಳು, ಬರಗಾಲಗಳು, ಭೂಕಂಪಗಳು, ಮತ್ತು ತನ್ನ ಸಾನ್ನಿಧ್ಯ ಹಾಗೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ “ಸೂಚನೆ”ಯ ಇತರ ವೈಶಿಷ್ಟ್ಯಗಳನ್ನು ಮುಂತಿಳಿಸಿದನು. ಅವನು ಮತ್ತೂ ಹೇಳಿದ್ದು: “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” (ಮತ್ತಾಯ 24:13) ನಾವು ನಂಬಿಗಸ್ತಿಕೆಯಿಂದ ನಮ್ಮ ಪ್ರಸ್ತುತ ಜೀವನದ ಅಂತ್ಯದ ವರೆಗೆ ಅಥವಾ ಈ ದುಷ್ಟ ವ್ಯವಸ್ಥೆಯ ಅಂತ್ಯದ ವರೆಗೆ ತಾಳಿಕೊಳ್ಳುವುದಾದರೆ, ನಾವು ರಕ್ಷಿಸಲ್ಪಡುವೆವು.
8. ಯೆಹೂದಿ ವ್ಯವಸ್ಥೆಯ ಅಂತ್ಯದ ಮುಂಚೆ ಏನು ಸಾಧಿಸಲ್ಪಡಬೇಕಿತ್ತು, ಮತ್ತು ಇದರ ಕುರಿತು ಇಂದು ಏನು ಮಾಡಲಾಗುತ್ತಿದೆ?
8 ಅಂತ್ಯದ ಮೊದಲು, ಯೇಸುವಿನ ಸಾನ್ನಿಧ್ಯದ ಅತಿ ಗಮನಾರ್ಹವಾದ ವೈಶಿಷ್ಟ್ಯವು ನೆರವೇರುವುದು. ಅದರ ಕುರಿತು ಅವನಂದದ್ದು: “ಪರಲೋಕರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಓರೆಅಕ್ಷರಗಳು ನಮ್ಮವು.) (ಮತ್ತಾಯ 24:14) ರೋಮನರು ಯೆರೂಸಲೇಮನ್ನು ನಾಶಮಾಡುವ ಹಾಗೂ ಸಾ.ಶ. 70ರಲ್ಲಿ ಯೆಹೂದಿ ವಿಷಯಗಳ ವ್ಯವಸ್ಥೆಯು ಕೊನೆಗೊಳ್ಳುವ ಮೊದಲು, ಸುವಾರ್ತೆಯು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪ”ಟ್ಟಿತ್ತೆಂದು ಪೌಲನಿಗೆ ಹೇಳಸಾಧ್ಯವಿತ್ತು. (ಕೊಲೊಸ್ಸೆ 1:23) ಆದರೆ ಇಂದು, ಯೆಹೋವನ ಸಾಕ್ಷಿಗಳಿಂದ ‘ಎಲ್ಲಾ ಜನಾಂಗಗಳಲ್ಲಿ’ ಅತಿ ಹೆಚ್ಚು ವಿಸ್ತಾರವಾದ ಸಾರುವ ಕೆಲಸವು ಮಾಡಲ್ಪಡುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ಪೂರ್ವ ಯೂರೋಪ್ನಲ್ಲಿ ಒಂದು ಮಹಾ ಸಾಕ್ಷಿಯು ಕೊಡಲ್ಪಡುವಂತೆ ದೇವರು ಮಾರ್ಗವನ್ನು ತೆರೆದಿದ್ದಾನೆ. ಮುದ್ರಣಾಲಯಗಳು ಹಾಗೂ ಇತರ ಸೌಕರ್ಯಗಳೊಂದಿಗೆ ಲೋಕವ್ಯಾಪಕವಾಗಿ ಯೆಹೋವನ ಸಂಸ್ಥೆಯು, “ಆವರಿಸಲ್ಪಡದ ಕ್ಷೇತ್ರ” (NW)ದಲ್ಲಿಯೂ ಹೆಚ್ಚಿನ ಚಟುವಟಿಕೆಗೆ ಸಿದ್ಧವಾಗಿದೆ. (ರೋಮಾಪುರ 15:22, 23) ಅಂತ್ಯವು ಬರುವ ಮುಂಚೆ ಒಂದು ಸಾಕ್ಷಿಯನ್ನು ಕೊಡುವುದರಲ್ಲಿ ನಿಮ್ಮಿಂದಾಗುವುದನ್ನು ಮಾಡುವಂತೆ ನಿಮ್ಮ ಹೃದಯವು ನಿಮ್ಮನ್ನು ಪ್ರಚೋದಿಸುತ್ತದೊ? ಹಾಗಿರುವಲ್ಲಿ, ಮುಂದಿರುವ ಕೆಲಸದಲ್ಲಿ ಒಂದು ಪ್ರತಿಫಲದಾಯಕ ಭಾಗವನ್ನು ಪಡೆಯುವಂತೆ ದೇವರು ನಿಮ್ಮನ್ನು ಬಲಗೊಳಿಸಬಲ್ಲನು.—ಫಿಲಿಪ್ಪಿ 4:13; 2 ತಿಮೊಥೆಯ 4:17.
9. ಮತ್ತಾಯ 24:36ರಲ್ಲಿ ದಾಖಲಿಸಲ್ಪಟ್ಟಂತೆ ಯೇಸು ಯಾವ ವಿಷಯವನ್ನು ಹೇಳಿದನು?
9 ಮುಂತಿಳಿಸಲ್ಪಟ್ಟ ರಾಜ್ಯ ಸಾರುವಿಕೆಯ ಕೆಲಸವು ಮತ್ತು ಯೇಸುವಿನ ಸಾನ್ನಿಧ್ಯದ ಸೂಚನೆಯ ಕುರಿತಾದ ಇತರ ವೈಶಿಷ್ಟ್ಯಗಳು ಈಗಲೇ ನೆರವೇರುತ್ತಿವೆ. ಆದಕಾರಣ, ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವು ಸಮೀಪವಿದೆ. ನಿಜ, ಯೇಸು ಹೇಳಿದ್ದು: “ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.” (ಮತ್ತಾಯ 24:4-14, 36) ಆದರೆ ‘ಆ ದಿನ ಮತ್ತು ಗಳಿಗೆ’ಗಾಗಿ ಸಿದ್ಧರಾಗಿರುವಂತೆ ಯೇಸುವಿನ ಪ್ರವಾದನೆಯು ನಮಗೆ ಸಹಾಯ ಮಾಡಬಲ್ಲದು.
ಅವರು ಸಿದ್ಧರಾಗಿದ್ದರು
10. ಆತ್ಮಿಕವಾಗಿ ಎಚ್ಚರವಿರುವುದು ಸಾಧ್ಯವೆಂದು ನಮಗೆ ಹೇಗೆ ಗೊತ್ತು?
10 ಯೆಹೋವನ ಮಹಾದಿನದಿಂದ ಬದುಕಿ ಉಳಿಯಲು, ನಾವು ಆತ್ಮಿಕವಾಗಿ ಎಚ್ಚರವಾಗಿರಬೇಕು ಮತ್ತು ಸತ್ಯಾರಾಧನೆಗಾಗಿ ಸ್ಥಿರರಾಗಿ ನಿಲ್ಲಬೇಕು. (1 ಕೊರಿಂಥ 16:13) ಅಂತಹ ತಾಳ್ಮೆಯು ಸಾಧ್ಯವೆಂದು ನಮಗೆ ಗೊತ್ತು ಏಕೆಂದರೆ, ದೈವಭಕ್ತಿಯ ಕುಟುಂಬವೊಂದು ಹಾಗೆ ಮಾಡಿತು ಮತ್ತು ಸಾ.ಶ.ಪೂ. 2370ರಲ್ಲಿ ದುಷ್ಟ ಮಾನವರನ್ನು ನಾಶಗೊಳಿಸಿದ ಜಲಪ್ರಳಯದಿಂದ ಬದುಕಿ ಉಳಿಯಿತು. ಆ ಶಕದೊಂದಿಗೆ ತನ್ನ ಸಾನ್ನಿಧ್ಯವನ್ನು ಹೋಲಿಸುತ್ತಾ, ಯೇಸು ಹೇಳಿದ್ದು: “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ ಇರುವದು. ಹೇಗಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೆ ಇದ್ದರಲ್ಲಾ. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.”—ಮತ್ತಾಯ 24:37-39.
11. ನೋಹನು, ತನ್ನ ದಿನದಲ್ಲಿ ಅಸ್ತಿತ್ವದಲ್ಲಿದ್ದ ಹಿಂಸಾಚಾರದ ಹೊರತೂ ಯಾವ ಮಾರ್ಗವನ್ನು ಬೆನ್ನಟ್ಟಿದನು?
11 ನಮ್ಮಂತೆ ನೋಹನು ಮತ್ತು ಅವನ ಕುಟುಂಬವು ಒಂದು ಹಿಂಸಾತ್ಮಕ ಲೋಕದಲ್ಲಿ ಜೀವಿಸಿತು. ಅವಿಧೇಯ “ದೇವಪುತ್ರರು” ರೂಪಾಂತರಗೊಂಡು, ವಿವಾಹವಾಗಿ, ಕುಖ್ಯಾತ ನೆಫಿಲಿಮ್—ಪರಿಸ್ಥಿತಿಗಳನ್ನು ನಿಸ್ಸಂದೇಹವಾಗಿ ಹೆಚ್ಚು ಹಿಂಸಾತ್ಮಕವಾಗಿ ಮಾಡಿದ ಹಿಂಸಕ—ರಿಗೆ ಜನ್ಮಕೊಟ್ಟರು. (ಆದಿಕಾಂಡ 6:1, 2, 4; 1 ಪೇತ್ರ 3:19, 20) ಆದರೆ, ನಂಬಿಕೆಯಲ್ಲಿ “ನೋಹನು . . . ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.” ಅವನು ತನ್ನ ದಿನದ ದುಷ್ಟ ಸಂತತಿಯವರಲ್ಲಿ, “ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು.” (ಆದಿಕಾಂಡ 6:9-11) ದೇವರ ಮೇಲೆ ಪ್ರಾರ್ಥನಾಪೂರ್ವಕ ಅವಲಂಬನೆಯೊಂದಿಗೆ, ನಾವು ಯೆಹೋವನ ದಿನಕ್ಕಾಗಿ ಕಾಯುವಾಗ, ಈ ಹಿಂಸಾತ್ಮಕ ಹಾಗೂ ದುಷ್ಟ ಲೋಕದಲ್ಲಿ ನಾವೂ ಅದನ್ನೇ ಮಾಡಬಲ್ಲೆವು.
12. (ಎ) ನಾವೆಯನ್ನು ಕಟ್ಟುವುದರ ಜೊತೆಗೆ, ನೋಹನು ಯಾವ ಕೆಲಸವನ್ನು ಮಾಡಿದನು? (ಬಿ) ನೋಹನ ಸಾರುವಿಕೆಗೆ ಜನರು ಹೇಗೆ ಪ್ರತಿಕ್ರಿಯಿಸಿದರು, ಮತ್ತು ಅವರಿಗಾದ ಪರಿಣಾಮಗಳಾವುವು?
12 ಜಲಪ್ರಳಯದಿಂದ ಜೀವವನ್ನು ರಕ್ಷಿಸುವುದಕ್ಕಾಗಿ ನಾವೆಯನ್ನು ಕಟ್ಟಿದವನೋಪಾದಿ ನೋಹನು ಸುವಿದಿತನಾಗಿದ್ದಾನೆ. ಅವನು “ಸುನೀತಿಯನ್ನು ಸಾರುವವ”ನೂ ಆಗಿದ್ದನು, ಆದರೆ ಅವನ ಸಮಕಾಲೀನರು ಅವನ ದೇವದತ್ತ ಸಂದೇಶಕ್ಕೆ ‘ಲಕ್ಷ್ಯಗೊಡಲಿಲ್ಲ.’ ಜಲಪ್ರಳಯವು ಬಂದು ಅವರನ್ನು ಬಡುಕೊಂಡುಹೋಗುವ ತನಕ ಅವರು ತಿಂದರು, ಕುಡಿದರು, ವಿವಾಹವಾದರು, ಮಕ್ಕಳನ್ನು ಪಡೆದರು, ಮತ್ತು ಜೀವನದ ಸಾಮಾನ್ಯ ಕಾರ್ಯಕಲಾಪಗಳನ್ನು ಮಾಡುತ್ತಾ ಮುಂದುವರಿದರು. (2 ಪೇತ್ರ 2:5; ಆದಿಕಾಂಡ 6:14) ಯೆಹೋವನ ಸಾಕ್ಷಿಗಳು, ‘ದೇವರ ಕಡೆಗೆ ತಿರುಗುವ’ ವಿಷಯವಾಗಿ, ಯೇಸುವಿನಲ್ಲಿ ನಂಬಿಕೆ, ಸುನೀತಿ, ಮತ್ತು “ಮುಂದಣ ನ್ಯಾಯವಿಚಾರಣೆ”ಯ ಕುರಿತು ಹೇಳುವ ವಿಷಯಕ್ಕೆ ಇಂದಿನ ದುಷ್ಟ ಸಂತತಿಯು ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವಂತೆಯೇ, ಅವರು ಯಥಾರ್ಥವಾದ ಮಾತು ಮತ್ತು ನಡತೆಯ ಕುರಿತು ಕೇಳಬಯಸಲಿಲ್ಲ. (ಅ. ಕೃತ್ಯಗಳು 20:20, 21; 24:24, 25) ದೇವರ ಸಂದೇಶವನ್ನು ನೋಹನು ಸಾರುತ್ತಿದ್ದಾಗ ಭೂಮಿಯ ಮೇಲೆ ಎಷ್ಟು ಜನರಿದ್ದರೆಂಬುದರ ಕುರಿತು ಯಾವ ದಾಖಲೆಯೂ ಲಭ್ಯವಿಲ್ಲ. ಆದರೆ ಒಂದು ವಿಷಯವು ಮಾತ್ರ ಸತ್ಯ, ಸಾ.ಶ.ಪೂ. 2370ರಲ್ಲಿ ಭೂಮಿಯ ಜನಸಂಖ್ಯೆಯು ಗುರುತರವಾಗಿ ಕಡಿಮೆಗೊಳಿಸಲ್ಪಟ್ಟಿತು! ಜಲಪ್ರಳಯವು ದುಷ್ಟರನ್ನು ನಿರ್ಮೂಲಮಾಡಿ, ದೇವರ ಆ ಕ್ರಿಯೆಗೆ ಸಿದ್ಧರಾಗಿದ್ದವರನ್ನು—ನೋಹ ಮತ್ತು ಅವನ ಕುಟುಂಬದಲ್ಲಿದ್ದ ಇತರ ಏಳು ಮಂದಿಯನ್ನು—ಮಾತ್ರ ಉಳಿಸಿತು.—ಆದಿಕಾಂಡ 7:19-23; 2 ಪೇತ್ರ 3:5, 6.
13. ಯಾವ ದೈವದಂಡನೆಯ ಆಜ್ಞೆಯಲ್ಲಿ ನೋಹನು ಸಂಪೂರ್ಣ ಭರವಸೆಯನ್ನಿಟ್ಟನು, ಮತ್ತು ಇದಕ್ಕೆ ಹೊಂದಿಕೆಯಲ್ಲಿ ಅವನು ಹೇಗೆ ಕ್ರಿಯೆಗೈದನು?
13 ಜಲಪ್ರಳಯವು ಬರಲಿದ್ದ ನಿಖರವಾದ ದಿನ ಮತ್ತು ಗಳಿಗೆಯ ಕುರಿತು ದೇವರು ಅನೇಕ ವರ್ಷಗಳ ಮುಂಚೆ ನೋಹನಿಗೆ ತಿಳಿಸಿರಲಿಲ್ಲ. ಹಾಗಿದ್ದರೂ, ನೋಹನು 480 ವರ್ಷ ಪ್ರಾಯದವನಾಗಿದ್ದಾಗ, ಯೆಹೋವನು ವಿಧಿಸಿದ್ದು: “ನನ್ನ ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿರುವದಿಲ್ಲ; ಅವರು ಭ್ರಷ್ಟರಾದದರಿಂದ ಮರ್ತ್ಯರೇ. ಅವರ ಆಯುಷ್ಯವು ನೂರ ಇಪ್ಪತ್ತು ವರುಷವಾಗಿರಲಿ.” (ಆದಿಕಾಂಡ 6:3) ನೋಹನು ಈ ದಿವ್ಯ ದೈವದಂಡನೆಯ ಆಜ್ಞೆಯಲ್ಲಿ ಸಂಪೂರ್ಣ ಭರವಸೆಯನ್ನಿಟ್ಟನು. ಅವನು 500 ವರ್ಷದವನಾದಾಗ “ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳನ್ನು ಪಡೆದನು,” ಮತ್ತು ಆ ದಿನಗಳ ಪದ್ಧತಿಯು ಸೂಚಿಸುವುದೇನೆಂದರೆ, ಅವನ ಗಂಡುಮಕ್ಕಳು ವಿವಾಹವಾಗುವ ಮೊದಲು 50ರಿಂದ 60 ವರ್ಷ ಪ್ರಾಯದವರಾಗಿದ್ದರು. ಜಲಪ್ರಳಯದಿಂದ ರಕ್ಷಣೆಪಡೆಯುವುದಕ್ಕಾಗಿ ನಾವೆಯನ್ನು ಕಟ್ಟುವಂತೆ ನೋಹನಿಗೆ ಹೇಳಲ್ಪಟ್ಟಾಗ, ಆ ಗಂಡುಮಕ್ಕಳು ಮತ್ತು ಅವರ ಹೆಂಡತಿಯರು ಆ ಕೆಲಸದಲ್ಲಿ ಅವನಿಗೆ ನೆರವು ನೀಡಿದರೆಂಬುದು ಸುಸ್ಪಷ್ಟ. ನಾವೆಯ ನಿರ್ಮಾಣವು, ‘ಸುನೀತಿಯನ್ನು ಸಾರುವವ’ನೋಪಾದಿ ನೋಹನ ಸೇವೆಯೊಂದಿಗೆ ಬಹುಶಃ ಏಕಕಾಲಿಕವಾಗಿತ್ತು. ಇದು ಜಲಪ್ರಳಯಕ್ಕೆ ಮುಂಚೆ, ಕೊನೆಯ 40ರಿಂದ 50 ವರ್ಷಗಳ ತನಕ ಅವನನ್ನು ಕಾರ್ಯಮಗ್ನನನ್ನಾಗಿರಿಸಿತು. (ಆದಿಕಾಂಡ 5:32; 6:13-22) ಆ ಎಲ್ಲ ವರ್ಷಗಳ ಉದ್ದಕ್ಕೂ, ಅವನು ಮತ್ತು ಅವನ ಕುಟುಂಬವು ನಂಬಿಕೆಯಲ್ಲಿ ಕ್ರಿಯೆಗೈಯಿತು. ನಾವು ಸುವಾರ್ತೆಯನ್ನು ಸಾರಿ, ಯೆಹೋವನ ದಿನಕ್ಕಾಗಿ ಕಾಯುವಾಗ, ನಾವು ಸಹ ನಂಬಿಕೆಯನ್ನು ಪ್ರದರ್ಶಿಸೋಣ.—ಇಬ್ರಿಯ 11:7.
14. ಯೆಹೋವನು ಕಟ್ಟಕಡೆಗೆ ನೋಹನಿಗೆ ಏನು ಹೇಳಿದನು, ಮತ್ತು ಏಕೆ?
14 ನಾವೆಯ ನಿರ್ಮಾಣವು ಪೂರ್ತಿಗೊಂಡಂತೆ, ಜಲಪ್ರಳಯವು ಯಾವಾಗ ಬರುವುದೆಂದು ನೋಹನಿಗೆ ನಿಖರವಾಗಿ ಗೊತ್ತಿರದಿದ್ದರೂ ಅದು ಆಸನ್ನವಾಗಿತ್ತೆಂದು ಅವನು ನೆನಸಿದ್ದಿರಬಹುದು. ಕಟ್ಟಕಡೆಗೆ ಯೆಹೋವನು ಅವನಿಗೆ ಹೇಳಿದ್ದು: “ಏಳು ದಿನಗಳನಂತರ ನಾನು ಭೂಮಿಯ ಮೇಲೆ ನಾಲ್ವತ್ತು ದಿವಸ ಹಗಲಿರುಳು ಮಳೆಯನ್ನು” ಸುರಿಸುವೆನು. (ಆದಿಕಾಂಡ 7:4) ಅದು, ಜಲಪ್ರಳಯವು ಆರಂಭವಾಗುವುದಕ್ಕೆ ಮುಂಚೆ, ನಾವೆಯೊಳಗೆ ಎಲ್ಲ ಪ್ರಕಾರದ ಪ್ರಾಣಿಗಳನ್ನು ತರಲು ಮತ್ತು ಸ್ವತಃ ತಾವೇ ಪ್ರವೇಶಿಸಲು, ನೋಹ ಮತ್ತು ಅವನ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡಿತು. ಈ ವ್ಯವಸ್ಥೆಯ ನಾಶನದ ಆರಂಭಕ್ಕಿರುವ ದಿನ ಮತ್ತು ಗಳಿಗೆಯನ್ನು ತಿಳಿದಿರುವ ಅಗತ್ಯ ನಮಗಿಲ್ಲ; ಪ್ರಾಣಿಗಳ ರಕ್ಷಣೆಯು ನಮಗೆ ಒಪ್ಪಿಸಲ್ಪಟ್ಟಿರುವುದಿಲ್ಲ, ಮತ್ತು ಮುಂದೆ ಬದುಕಿ ಉಳಿಯಲಿರುವ ಮಾನವರು ಈಗಾಗಲೇ ಸಾಂಕೇತಿಕ ನಾವೆಯನ್ನು—ದೇವಜನರ ಆತ್ಮಿಕ ಪ್ರಮೋದವನವನ್ನು—ಪ್ರವೇಶಿಸುತ್ತಿದ್ದಾರೆ.
“ಎಚ್ಚರವಾಗಿರ್ರಿ”
15. (ಎ) ನಿಮ್ಮ ಸ್ವಂತ ಮಾತುಗಳಲ್ಲಿ, ಮತ್ತಾಯ 24:40-44ರಲ್ಲಿರುವ ಯೇಸುವಿನ ಮಾತುಗಳನ್ನು ನೀವು ಹೇಗೆ ವಿವರಿಸುವಿರಿ? (ಬಿ) ದೇವರ ಪ್ರತೀಕಾರವನ್ನು ಜಾರಿಗೊಳಿಸಲು ಯೇಸುವಿನ ಬರೋಣದ ನಿಖರವಾದ ಸಮಯವು ಗೊತ್ತಿರದೆ ಇರುವುದು ಯಾವ ಪರಿಣಾಮವನ್ನು ಹೊಂದಿದೆ?
15 ತನ್ನ ಸಾನ್ನಿಧ್ಯದ ಕುರಿತು ಯೇಸು ವಿವರಿಸಿದ್ದು: “ಆವಾಗ ಇಬ್ಬರು ಹೊಲದಲ್ಲಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಒಬ್ಬನು ಬಿಡಲ್ಪಡುವನು. ಇಬ್ಬರು ಹೆಂಗಸರು ಬೀಸುವ ಕಲ್ಲಿನ ಮುಂದೆ ಕೂತು ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಒಬ್ಬಳು ಬಿಡಲ್ಪಡುವಳು. ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ. ಕಳ್ಳನು ಬರುವ ಜಾವ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಗೊಡಿಸುತ್ತಿರಲಿಲ್ಲವೆಂದು ತಿಳುಕೊಳ್ಳಿರಿ. ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” (ಮತ್ತಾಯ 24:40-44; ಲೂಕ 17:34, 35) ದೇವರ ಪ್ರತೀಕಾರವನ್ನು ಜಾರಿಗೊಳಿಸಲು ಯೇಸುವಿನ ಬರೋಣದ ನಿಖರವಾದ ಸಮಯವು ಗೊತ್ತಿರದ ಕಾರಣ, ಅದು ನಮ್ಮನ್ನು ಎಚ್ಚರವಾಗಿಡುತ್ತದೆ ಮತ್ತು ನಾವು ಯೆಹೋವನನ್ನು ನಿಸ್ವಾರ್ಥ ಉದ್ದೇಶಗಳಿಂದ ಸೇವಿಸುತ್ತೇವೆ ಎಂಬುದನ್ನು ರುಜುಪಡಿಸಲು ದಿನನಿತ್ಯವೂ ಅವಕಾಶಕೊಡುತ್ತದೆ.
16. “ಬಿಡಲ್ಪಟ್ಟ” ಮತ್ತು “ತೆಗೆದುಕೊಳ್ಳಲ್ಪಟ್ಟ” ವ್ಯಕ್ತಿಗಳಿಗೆ ಏನು ಸಂಭವಿಸುವುದು?
16 ದುಷ್ಟರೊಂದಿಗೆ ನಾಶನಕ್ಕೆ “ಬಿಡಲ್ಪಟ್ಟ” ವ್ಯಕ್ತಿಗಳಲ್ಲಿ, ಒಮ್ಮೆ ಜ್ಞಾನೋದಯಗೊಂಡಿದ್ದ ಆದರೆ ನಂತರ ಒಂದು ಸ್ವಾರ್ಥ ಜೀವನ ರೀತಿಯಲ್ಲಿ ಸಿಲುಕಿಕೊಂಡವರು ಸೇರಿರುವರು. ನಾವು “ತೆಗೆದುಕೊಳ್ಳಲ್ಪಟ್ಟ” ಜನರಲ್ಲಿ, ಯೆಹೋವನಿಗೆ ಪೂರ್ತಿಯಾಗಿ ಸಮರ್ಪಿತರಾದ ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗದ ಮುಖಾಂತರ ಆತನ ಆತ್ಮಿಕ ಒದಗಿಸುವಿಕೆಗಳಿಗೆ ನಿಜವಾಗಿಯೂ ಕೃತಜ್ಞರಾಗಿರುವವರಲ್ಲಿ ಒಬ್ಬರಾಗಿರೋಣ. (ಮತ್ತಾಯ 24:45-47) ಅಂತ್ಯದ ವರೆಗೆ, ನಾವು ದೇವರನ್ನು “ಒಳ್ಳೇಮನಸ್ಸಾಕ್ಷಿ ನಿಷ್ಕಪಟವಾದ ನಂಬಿಕೆ ಎಂಬಿವುಗಳಿಂದ ಹುಟ್ಟಿದ ಪ್ರೀತಿ”ಯಿಂದ ಸೇವಿಸೋಣ.—1 ತಿಮೊಥೆಯ 1:5.
ಪರಿಶುದ್ಧವಾದ ಕ್ರಿಯೆಗಳು ಅಗತ್ಯ
17. (ಎ) 2 ಪೇತ್ರ 3:10ರಲ್ಲಿ ಏನನ್ನು ಮುಂತಿಳಿಸಲಾಗಿತ್ತು? (ಬಿ) 2 ಪೇತ್ರ 3:11ರ ವಚನದಿಂದ ಪ್ರೋತ್ಸಾಹಿಸಲ್ಪಟ್ಟ ಕೆಲವು ಕೃತ್ಯಗಳು ಮತ್ತು ಕ್ರಿಯೆಗಳಾವುವು?
17 ಅಪೊಸ್ತಲ ಪೇತ್ರನು ಬರೆದುದು: “ಆದರೂ ಕರ್ತನ [“ಯೆಹೋವನ,” NW] ದಿನವು ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಮಂಡಲವು ಮಹಾಘೋಷದಿಂದ ಇಲ್ಲದೆ ಹೋಗುವದು, ಸೂರ್ಯ ಚಂದ್ರ ನಕ್ಷತ್ರಗಳು ಉರಿದು ಲಯವಾಗಿ ಹೋಗುವವು, ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟುಹೋಗುವವು.” (2 ಪೇತ್ರ 3:10) ಸಾಂಕೇತಿಕ ಆಕಾಶಗಳು ಮತ್ತು ಭೂಮಿಯು ದೇವರ ಉರಿಯುವ ಕೋಪದ ಬಿಸಿಯಿಂದ ಬದುಕಿ ಉಳಿಯಲಾರವು. ಆದುದರಿಂದ ಪೇತ್ರನು ಕೂಡಿಸುವುದು: “ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ [“ಪವಿತ್ರ ಕೃತ್ಯಗಳು,” NW] ನಡವಳಿಕೆಯೂ ಭಕ್ತಿಯೂ [“ಕ್ರಿಯೆಗಳು,” NW] ಉಳ್ಳವರಾಗಿರಬೇಕಲ್ಲಾ.” (2 ಪೇತ್ರ 3:11) ಈ ಕೃತ್ಯಗಳು ಹಾಗೂ ಕ್ರಿಯೆಗಳಲ್ಲಿ, ಕ್ರೈಸ್ತ ಕೂಟಗಳಲ್ಲಿನ ಕ್ರಮವಾದ ಉಪಸ್ಥಿತಿ, ಇತರರಿಗೆ ಒಳ್ಳೆಯದನ್ನು ಮಾಡುವುದು, ಸುವಾರ್ತೆಯನ್ನು ಸಾರುವುದರಲ್ಲಿ ಒಂದು ಗಮನಾರ್ಹ ಭಾಗವನ್ನು ಪಡೆದಿರುವುದು ಸೇರಿದೆ.—ಮತ್ತಾಯ 24:14; ಇಬ್ರಿಯ 10:24, 25; 13:16.
18. ನಾವು ಲೋಕದೊಂದಿಗೆ ಒಂದು ಅನ್ಯೋನ್ಯತೆಯನ್ನು ವಿಕಸಿಸಿಕೊಳ್ಳುತ್ತಿರುವಲ್ಲಿ, ನಾವೇನು ಮಾಡತಕ್ಕದ್ದು?
18 ‘ಪರಿಶುದ್ಧವಾದ ನಡವಳಿಕೆ ಮತ್ತು ಭಕ್ತಿಯು’ ನಮಗೆ ‘ಪ್ರಪಂಚದ ದೋಷವು ಹತ್ತದಂತೆ ನೋಡಿಕೊಳ್ಳುವುದನ್ನು’ ಕೇಳಿಕೊಳ್ಳುತ್ತದೆ. (ಯಾಕೋಬ 1:27) ಆದರೆ ಈ ಲೋಕದೊಂದಿಗೆ ಒಂದು ಅನ್ಯೋನ್ಯತೆಯನ್ನು ನಾವು ವಿಕಸಿಸಿಕೊಳ್ಳುತ್ತಿರುವಲ್ಲಿ ಆಗೇನು? ಅಶುದ್ಧವಾದ ಮನೋರಂಜನೆಯನ್ನು ಅರಸುವ ಮೂಲಕ ಅಥವಾ ಈ ಲೋಕದ ಭಕ್ತಿಹೀನ ಆತ್ಮವನ್ನು ಪ್ರವರ್ಧಿಸುವ ಸಂಗೀತ ಹಾಗೂ ಹಾಡುಗಳನ್ನು ಆಲಿಸುವ ಮೂಲಕ, ದೇವರ ಮುಂದೆ ಒಂದು ಅಪಾಯಕರ ಸ್ಥಾನದಲ್ಲಿ ನಮ್ಮನ್ನು ಇರಿಸಿಕೊಳ್ಳುವಂತೆ ನಾವು ಸೆಳೆಯಲ್ಪಡುತ್ತಿರಬಹುದು. (2 ಕೊರಿಂಥ 6:14-18) ವಿಷಯವು ಹಾಗಿರುವಲ್ಲಿ, ನಾವು ಲೋಕದೊಂದಿಗೆ ಗತಿಸಿಹೋಗದೆ, ಮನುಷ್ಯಕುಮಾರನ ಮುಂದೆ ಅನುಗ್ರಹಿತರಾಗಿ ನಿಲ್ಲುವಂತೆ ಪ್ರಾರ್ಥನೆಯಲ್ಲಿ ದೇವರ ಸಹಾಯವನ್ನು ಕೋರೋಣ. (ಲೂಕ 21:34-36; 1 ಯೋಹಾನ 2:15-17) ನಾವು ದೇವರಿಗೆ ಒಂದು ಸಮರ್ಪಣೆಯನ್ನು ಮಾಡಿಕೊಂಡಿರುವಲ್ಲಿ, ಆತನೊಂದಿಗೆ ಒಂದು ಆದರದ ಸಂಬಂಧವನ್ನು ನಿರ್ಮಿಸಲು ಮತ್ತು ಕಾಪಾಡಿಕೊಳ್ಳಲು ಮತ್ತು ಹೀಗೆ ಯೆಹೋವನ ಮಹಾ ಮತ್ತು ಭಯಂಕರವಾದ ದಿನಕ್ಕಾಗಿ ಸಿದ್ಧರಾಗಿರಲು ನಮ್ಮಿಂದ ಅತ್ಯುತ್ತಮವಾದುದನ್ನು ಮಾಡುವಂತೆ ನಾವು ಬಯಸುವೆವು.
19. ಈ ದುಷ್ಟ ವಿಷಯಗಳ ವ್ಯವಸ್ಥೆಯ ಸಮಾಪ್ತಿಯಿಂದ ಅನೇಕಾನೇಕ ರಾಜ್ಯ ಘೋಷಕರು ಬದುಕಿ ಉಳಿಯಲು ಏಕೆ ನಿರೀಕ್ಷಿಸಬಲ್ಲರು?
19 ದೇವಭಕ್ತಿಯುಳ್ಳ ನೋಹ ಮತ್ತು ಅವನ ಕುಟುಂಬವು ಆ ಪ್ರಾಚೀನ ಲೋಕವನ್ನು ನಾಶಮಾಡಿದ ಜಲಪ್ರಳಯದಿಂದ ಬದುಕಿ ಉಳಿಯಿತು. ಪ್ರಾಮಾಣಿಕ ವ್ಯಕ್ತಿಗಳು ಸಾ.ಶ. 70ರಲ್ಲಾದ ಯೆಹೂದಿ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಪಾರಾದರು. ದೃಷ್ಟಾಂತಕ್ಕೆ, ಸಾ.ಶ. 96-98ರ ಸುಮಾರಿಗೆ ಅಪೊಸ್ತಲ ಯೋಹಾನನು ಪ್ರಕಟನೆಯ ಪುಸ್ತಕ, ತನ್ನ ಸುವಾರ್ತಾ ವೃತ್ತಾಂತ, ಮತ್ತು ಮೂರು ಪ್ರೇರಿತ ಪತ್ರಗಳನ್ನು ಬರೆದಾಗ, ದೇವರ ಸೇವೆಯಲ್ಲಿ ಇನ್ನೂ ಸಕ್ರಿಯನಾಗಿದ್ದನು. ಸಾ.ಶ. 33ರ ಪಂಚಾಶತ್ತಮದಲ್ಲಿ ನಿಜ ನಂಬಿಕೆಯನ್ನು ಸ್ವೀಕರಿಸಿದ ಸಾವಿರಾರು ಜನರಲ್ಲಿ, ಬಹುಶಃ ಅನೇಕರು ಯೆಹೂದಿ ವ್ಯವಸ್ಥೆಯ ಅಂತ್ಯದಿಂದ ಪಾರಾದರು. (ಅ. ಕೃತ್ಯಗಳು 1:15; 2:41, 47; 4:4) ಇಂದು ಪ್ರಚಲಿತ ದುಷ್ಟ ವಿಷಯಗಳ ವ್ಯವಸ್ಥೆಯ ಸಮಾಪ್ತಿಯಿಂದ ಅನೇಕಾನೇಕ ರಾಜ್ಯ ಘೋಷಕರು ಬದುಕಿ ಉಳಿಯಲು ನಿರೀಕ್ಷಿಸಬಲ್ಲರು.
20. ನಾವು ಏಕೆ ‘ಸುನೀತಿಯನ್ನು’ ಹುರುಪಿನಿಂದ ‘ಸಾರುವವ’ರಾಗಿರಬೇಕು?
20 ಹೊಸ ಲೋಕದೊಳಗೆ ಪಾರಾಗಿ ಉಳಿಯುವ ಪ್ರತೀಕ್ಷೆ ನಮ್ಮ ಎದುರಿಗಿರುವಾಗ, ನಾವು ‘ಸುನೀತಿಯನ್ನು’ ಹುರುಪಿನಿಂದ ‘ಸಾರುವವ’ರಾಗಿರೋಣ. ಈ ಕಡೇ ದಿವಸಗಳಲ್ಲಿ ದೇವರನ್ನು ಸೇವಿಸುವುದು ಎಂತಹ ಒಂದು ಸುಯೋಗವಾಗಿದೆ! ಮತ್ತು ಜನರನ್ನು ಪ್ರಚಲಿತ ದಿನದ “ನಾವೆ,” ದೇವರ ಜನರು ಅನುಭವಿಸುವ ಆತ್ಮಿಕ ಪ್ರಮೋದವನದ ಕಡೆಗೆ ನಿರ್ದೇಶಿಸುವುದು ಎಂತಹ ಒಂದು ಆನಂದವಾಗಿದೆ! ಈಗ ಅದರಲ್ಲಿರುವ ಲಕ್ಷಾಂತರ ಜನರು ನಂಬಿಗಸ್ತರು, ಆತ್ಮಿಕವಾಗಿ ಎಚ್ಚರವುಳ್ಳವರು, ಮತ್ತು ಯೆಹೋವನ ಮಹಾದಿನಕ್ಕಾಗಿ ಸಿದ್ಧರಾಗಿ ಉಳಿಯುವಂತಾಗಲಿ. ಆದರೆ ಎಚ್ಚರವಾಗಿ ಉಳಿಯಲು ನಮ್ಮೆಲ್ಲರಿಗೂ ಯಾವುದು ಸಹಾಯಮಾಡುವುದು?
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 10 ಮತ್ತು 11ನೆಯ ಅಧ್ಯಾಯಗಳನ್ನು ನೋಡಿರಿ.
ನೀವು ಹೇಗೆ ಉತ್ತರಿಸುವಿರಿ?
◻ ಯೆಹೋವನ ದಿನ ಮತ್ತು ಕ್ರಿಸ್ತನ ಸಾನ್ನಿಧ್ಯದ ಕುರಿತು ಕೆಲವರಿಗೆ ಯಾವ ನಿರೀಕ್ಷೆಗಳಿದ್ದವು?
◻ ನೋಹ ಮತ್ತು ಅವನ ಕುಟುಂಬವು ಜಲಪ್ರಳಯಕ್ಕಾಗಿ ಸಿದ್ಧವಾಗಿತ್ತೆಂದು ನಾವು ಏಕೆ ಹೇಳಬಲ್ಲೆವು?
◻ “ಎಚ್ಚರವಾಗಿ”ರುವವರಿಗೆ ಮತ್ತು ಎಚ್ಚರದಿಂದಿರದವರಿಗೆ ಏನು ಸಂಭವಿಸುವುದು?
◻ ನಾವು ವಿಶೇಷವಾಗಿ ಯೆಹೋವನ ಮಹಾದಿನಕ್ಕೆ ಹತ್ತಿರವಾದಂತೆ, ಪರಿಶುದ್ಧ ಕ್ರಿಯೆಗಳು ಏಕೆ ಅಗತ್ಯವಾಗಿವೆ?