ಮಹಾ ಸಂಕಟದಿಂದ ಜೀವಂತವಾಗಿ ರಕ್ಷಿಸಲ್ಪಡುವುದು
“ಇವರು ಆ ಮಹಾ ಹಿಂಸೆಯನ್ನು [ಸಂಕಟವನ್ನು, NW] ಅನುಭವಿಸಿ ಬಂದವರು; ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.”—ಪ್ರಕಟನೆ 7:14.
1. ಐಹಿಕ ಪುನರುತ್ಥಾನದಲ್ಲಿ ಪುನರುತ್ತಿಥರನ್ನು ಯಾರು ಸ್ವಾಗತಿಸುವರು?
ಅಗಣಿತ ಲಕ್ಷ ಜನರು ‘ನೀತಿವಂತರ ಮತ್ತು ಅನೀತಿವಂತರ ಪುನರುತ್ಥಾನದಲ್ಲಿ’ ಎಬ್ಬಿಸಲ್ಪಡುವಾಗ, ಒಂದು ಬರಿದಾದ ಭೂಮಿಯ ಮೇಲೆ ಪುನರ್ಜೀವಿತರಾಗಿ ಅವರು ತರಲ್ಪಡುವುದಿಲ್ಲ. (ಅ. ಕೃತ್ಯಗಳು 24:15) ಸೌಂದರ್ಯಭರಿತವಾದ ಸುಧಾರಿತ ಪರಿಸರಗಳಲ್ಲಿ ಅವರು ಎಚ್ಚರಗೊಳ್ಳುವರು ಮತ್ತು ನಿವಾಸಸ್ಥಾನ, ಉಡುಗೆ ತೊಡುಗೆ, ಮತ್ತು ಆಹಾರ ಸಮೃದ್ಧಯು ತಮಗಾಗಿ ಅಣಿಗೊಳಿಸಲ್ಪಟ್ಟಿರುವುದನ್ನು ಕಾಣುವರು. ಈ ಎಲ್ಲ ತಯಾರಿಗಳನ್ನು ಮಾಡುವವರು ಯಾರು? ಸ್ಪಷ್ಟವಾಗಿಗಿ, ಹೊಸ ಲೋಕದಲ್ಲಿ ಐಹಿಕ ಪುನರುತ್ಥಾನವು ಪ್ರಾರಂಭವಾಗುವ ಮುಂಚೆ ಜನರು ಜೀವಿಸುತ್ತಲಿರುವರು. ಯಾರು? ಬರಲಿರುವ ಮಹಾ ಸಂಕಟವನ್ನು ಪಾರಾಗುವವರೇ ಅವರೆಂದು ಬೈಬಲು ಸೂಚಿಸುತ್ತದೆ. ಬೈಬಲಿನ ಬೋಧನೆಗಳೆಲ್ಲವುಗಳಲ್ಲಿ—ಕೆಲವು ನಂಬಿಗಸ್ತರು ಮಹಾ ಸಂಕಟದಿಂದ ಜೀವಂತವಾಗಿ ರಕ್ಷಿಸಲ್ಪಡುವರು ಮತ್ತು ಅವರೆಂದೂ ಸಾಯಬೇಕಾಗಿಲವ್ಲೆಂಬ ಈ ಬೋಧನೆಯು ನಿಸ್ಸಂಶಯವಾಗಿ ಅತ್ಯಂತ ಕುತೂಹಲಕಾರಿಯಾಗಿದೆ. ಈ ನಿರೀಕ್ಷೆಯನ್ನು ಪವಿತ್ರ ಶಾಸ್ತ್ರಗಳಲ್ಲಿ ಸಪ್ರಮಾಣದೊಂದಿಗೆ ದೃಢೀಕರಿಸಲಾಗಿದೆ.
ನೋಹನ ದಿವಸಗಳ ಹಾಗೆ
2, 3. (ಎ) ನೋಹನ ಮತ್ತು ನಮ್ಮ ದಿನಗಳ ನಡುವೆ ಯಾವ ಹೋಲಿಕೆಗಳನ್ನು ಮಾಡಲಾಗಿದೆ? (ಬಿ) ಜಲಪ್ರಳಯದಿಂದ ನೋಹ ಮತ್ತು ಅವನ ಕುಟುಂಬದ ಪಾರಾಗುವಿಕೆಯಿಂದ ಏನು ಸೂಚಿಸಲ್ಪಟ್ಟಿದೆ?
2 ಮತ್ತಾಯ 24:37-39 ರಲ್ಲಿ, ನಾವಿಂದು ನಮ್ಮನ್ನು ಕಂಡುಕೊಳ್ಳುತ್ತಿರುವ ಕಡೇ ದಿನಗಳ ಮತ್ತು ನೋಹನ ದಿವಸಗಳ ನಡುವೆ ಯೇಸು ಕ್ರಿಸ್ತನು ಒಂದು ತುಲನೆಯನ್ನು ಮಾಡಿದನು. ಅವನಂದದ್ದು: “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ ಇರುವದು. ಹೇಗಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಬಡುಕೊಂಡುಹೋಗುವ ತನಕ ಏನೂ ತಿಳಿಯದೆ ಇದರ್ದಲ್ಲಾ. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.”
3 ದೇವರ ಎಚ್ಚರಿಕೆಯ ಸಂದೇಶಕ್ಕೆ ಗಮನಕೊಡದಿದ್ದವರೆಲ್ಲರನ್ನು ಆ ಭೌಗೋಳಿಕ ಪ್ರಲಯವು ಬಡುಕೊಂಡುಹೋಯಿತು. ಆದರೂ, ಅದು ನೋಹನನ್ನೂ ಆತನ ಕುಟುಂಬವನ್ನೂ ಅಳಿಸಲಿಲ್ಲ. ಯೇಸುವಂದಂತೆ, ಅವರು “ನಾವೆಯಲ್ಲಿ ಸೇರಿ” ದರು. ಅವರ ದಿವ್ಯ ಭಕ್ತಿಯ ಕಾರಣ, ಯೆಹೋವನು ಅವರಿಗೆ ಪಾರಾಗುವ ಮಾರ್ಗವನ್ನು ಒದಗಿಸಿದನು. ಎರಡನೆಯ ಪೇತ್ರ 2:5, 9 ನೋಹ ಮತ್ತು ಅವನ ಕುಟುಂಬದ ಪಾರಾಗುವಿಕೆಗೆ ಸೂಚಿಸುವಾಗ ಹೀಗೆಂದು ಹೇಳುತ್ತದೆ: “ಆತನು [ದೇವರು] ಭಕ್ತಿಹೀನರಾದ ಪುರಾತನರ ಲೋಕವನ್ನು ಸುಮ್ಮನೆ ಬಿಡದೆ ಅವರ ಮೇಲೆ ಜಲಪ್ರಲಯವನ್ನು ಬರಮಾಡಿದನು; ಆದರೆ ಸುನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ಉಳಿಸಿದನು. . . . ಕರ್ತನು [ಯೆಹೋವನು, NW] ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ . . . ಬಲ್ಲವನಾಗಿದ್ದಾನೆ.” ಸಾಮಾನ್ಯವಾಗಿ ಜನರು ದೇವರ ಎಚ್ಚರಿಕೆಯ ಸಂದೇಶಕ್ಕೆ ಕಿವಿಗೊಡುವುದಿಲ್ಲವೆಂದು ತೋರಿಸುವುದಕ್ಕೆ ಯೇಸು ನೋಹನ ದಿವಸಗಳ ಮತ್ತು ಕಡೇ ದಿನಗಳ ನಡುವೆ ಒಂದು ತುಲನೆಯನ್ನು ಮಾಡಿದನು. ಆದರೂ, ಹಾಗೆ ಮಾಡಿದುದರಲ್ಲಿ ಅವನು ಇದನ್ನೂ ದೃಢಪಡಿಸಿದನು ಏನಂದರೆ ನೋಹ ಮತ್ತು ಅವನ ಕುಟುಂಬ ಯೆಹೋವ ದೇವರಿಗೆ ವಿಧೇಯರಾದರು, ನಾವೆಯನ್ನು ಪ್ರವೇಶಿಸಿದರು, ಮತ್ತು ಮಹಾ ಪ್ರಲಯವನ್ನು ಪಾರಾದರು. ನೋಹ ಮತ್ತು ಅವನ ಕುಟುಂಬದ ಪಾರಾಗುವಿಕೆಯು ಈ ಲೋಕಾಂತ್ಯದಲ್ಲಿ ದೇವರ ನಂಬಿಗಸ್ತ ಸೇವಕರ ಪಾರಾಗುವಿಕೆಗೆ ನಿರ್ದೇಶಿಸುತ್ತದೆ.
ಪ್ರಥಮ ಶತಮಾನದ ಒಂದು ನಮೂನೆ
4. ಯೇಸುವಿನ ಮಾತುಗಳ ನೆರವೇರಿಕೆಯಲ್ಲಿ, ಯಾವ ಘಟನೆಗಳು ಸಾ.ಶ. 70 ರಲ್ಲಿ ಯೆರೂಸಲೇಮಿನ ನಾಶನಕ್ಕೆ ನಡಿಸಿದವು?
4 ಈ ಲೋಕಾಂತ್ಯದಲ್ಲಿ ನಡೆಯಲಿರುವ ಘಟನೆಗಳ ಕುರಿತೂ ಯೇಸು ಮಾತಾಡಿದನು. ಮತ್ತಾಯ 24:21, 22 ರಲ್ಲಿ ನಾವು ಓದುವುದು: “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನು ಮೇಲೆಯೂ ಆಗುವದಿಲ್ಲ. [ಕರ್ತನು] ಆ ದಿನಗಳನ್ನು ಕಡಿಮೆಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯದು; ಆದರೆ ತಾನು ಆದುಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡುವನು.” ಈ ಮಾತುಗಳು ನಮ್ಮ ಸಾಮಾನ್ಯ ಶಕದ ಮೊದಲನೆಯ ಶತಮಾನದಲ್ಲಿ ಒಂದು ಪೂರ್ವಭಾವಿ ನೆರವೇರಿಕೆಯನ್ನು ಪಡೆದಿದ್ದವು. ಸಾ.ಶ. 66 ರಲ್ಲಿ ಯೆರೂಸಲೇಮ್ ಪಟ್ಟಣವು ಸೆಸಿಯ್ಟಸ್ ಗ್ಯಾಲಸ್ನ ಕೆಳಗಿನ ರೋಮನ್ ಸೇನೆಯಿಂದ ಮುತ್ತಿಗೆಗೊಳಗಾಯಿತು. ದೇವಾಲಯದ ಗೋಡೆಯನ್ನು ಶಿಥಿಲಗೊಳಿಸುವ ಬಿಂದುವಿಗೆ ರೋಮನ್ ದಂಡು ತಲಪಿತು, ಮತ್ತು ಅನೇಕ ಯೆಹೂದ್ಯರು ಶರಣಾಗತರಾಗಲು ಸಿದ್ಧರಾಗಿದ್ದರು. ಆದರೂ, ಅನಿರೀಕ್ಷಿತವಾಗಿ ಮತ್ತು ಯಾವುದೆ ಸುವ್ಯಕ್ತ ಕಾರಣಕ್ಕಾಗಿ, ಸೆಸಿಯ್ಟಸ್ ಗ್ಯಾಲಸ್ ತನ್ನ ದಂಡನ್ನು ಹಿಂದೆಗೆದನು. ರೋಮನರು ಹಿಂದೆಗೆಯುವುದನ್ನು ಕಂಡಾಗ, ಅನೇಕ ವರ್ಷಗಳ ಮುಂಚಿತವಾಗಿ ನುಡಿಯಲ್ಪಟ್ಟ ಯೇಸುವಿನ ಮಾತುಗಳ ಮೇಲೆ ಕ್ರೈಸ್ತರು ಕ್ರಿಯೆಗೈದರು: “ಆದರೆ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ; ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ.” (ಲೂಕ 21:20, 21) ಆದುಕೊಂಡವರಾದ ಕ್ರೈಸ್ತ ಯೆಹೂದ್ಯರು, ನಾಶಪಾತ್ರ ಯೆರೂಸಲೇಮ್ ಪಟ್ಟಣವನ್ನು ಆ ಕೂಡಲೆ ತೊರೆದರು ಮತ್ತು ಹೀಗೆ, ತದನಂತರ ಬೇಗನೆ ಅದರ ಮೇಲೆ ಬಂದ ಭಯಂಕರ ನಾಶನದಿಂದ ರಕ್ಷಿಸಲ್ಪಟ್ಟರು. ಸಾ.ಶ. 70 ರಲ್ಲಿ ಜೆನೆರಲ್ ಟೈಟಸ್ನ ಕೆಳಗಿನ ರೋಮನ್ ಸೇನೆಗಳು ಮರಳಿಬಂದವು. ಅವು ಯೆರೂಸಲೇಮಿನ ಸುತ್ತಲೂ ಡೇರೆಹೂಡಿದವು, ಪಟ್ಟಣಕ್ಕೆ ಮುತ್ತಿಗೆ ಹಾಕಿದವು, ಮತ್ತು ಅದನ್ನು ವಿಧ್ವಂಸಗೊಳಿಸಿದವು.
5. ಯೆರೂಸಲೇಮಿನ ಮೇಲೆ ಸಂಕಟವು ಸಾ.ಶ. 70 ರಲ್ಲಿ ಕಡಿಮೆಮಾಡಲ್ಪಟ್ಟದ್ದು ಯಾವ ಅರ್ಥದಲ್ಲಿ?
5 ಯೆಹೂದಿ ಇತಿಹಾಸಕಾರ ಜೋಸೀಫಸನು, 11,00,000 ಮಂದಿ ಯೆಹೂದ್ಯರು ಸತ್ತರೆಂತಲೂ, ಆದರೆ 97,000 ಮಂದಿ ಪಾರಾಗಿ ಬಂಧಿವಾಸಕ್ಕೆ ಒಯ್ಯಲ್ಪಟ್ಟರೆಂದು ಹೇಳುತ್ತಾನೆ. ಪಾರಾದ ಆ ಕ್ರೈಸ್ತೇತರ ಯೆಹೂದ್ಯರು ಖಂಡಿತವಾಗಿಯೂ ಯೇಸುವಿನ ಪ್ರವಾದನೆಯ “ಆದುಕೊಂಡವರು” ಅಲ್ಲ. ದಂಗೆಕೋರ ಯೆಹೂದಿ ಜನಾಂಗಕ್ಕೆ ಮಾತಾಡುತ್ತಾ, “ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ. ಈಗಿನಿಂದ—ಕರ್ತನ [ಯೆಹೋವನ, NW] ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ ಎಂದು ನೀವು ಹೇಳುವ ತನಕ ನೀವು ನನ್ನನ್ನು ನೋಡುವದೇ ಇಲ್ಲವೆಂದು ನಿಮಗೆ ಹೇಳುತ್ತೇನೆ” ಎಂದು ಯೇಸು ಹೇಳಿದ್ದನು. (ಮತ್ತಾಯ 23:38, 39) ಯೆರೂಸಲೇಮಿನಲ್ಲಿ ಸಿಕ್ಕಿಕೊಂಡ ಯೆಹೂದ್ಯರು ಕೊನೆಯ ಕ್ಷಣದಲ್ಲಿ ಯೇಸುವನ್ನು ಮೆಸ್ಸೀಯನೆಂದು ಸ್ವೀಕರಿಸಿ, ಕ್ರೈಸ್ತರಾದರು, ಮತ್ತು ಯೆಹೋವನ ಮೆಚ್ಚಿಗೆಯನ್ನು ಪಡೆದರು ಎನ್ನುವುದಕ್ಕೆ ಯಾವ ದಾಖಲೆಯೂ ಇಲ್ಲ. ಆದಾಗ್ಯೂ, ಸಾ.ಶ. 70 ರಲ್ಲಿ ಯೆರೂಸಲೇಮಿನ ಮೇಲೆ ಬಂದ ಸಂಕಟವು ಕಡಿಮೆಮಾಡಲ್ಪಟ್ಟಿತು. ರೋಮನ್ ಸೇನೆಯ ಕೊನೆಯ ಮುತ್ತಿಗೆಯು ದೀರ್ಘ ಕಾಲಾವಧಿಯದ್ದಾಗಿರಲಿಲ್ಲ. ದಾಸರೋಪಾದಿ ರೋಮನ್ ಸಾಮ್ರಾಜ್ಯದ ವಿವಿಧ ಭಾಗಗಳಿಗೆ ರವಾನಿಸಲ್ಪಡುವಂತಿದ್ದರೂ, ಇದು ಕೊಂಚ ಮಂದಿ ಯೆಹೂದ್ಯರನ್ನು ಪಾರಾಗುವಂತೆ ಅನುಮತಿಸಿತು.
ಪಾರಾಗುವವರ ಒಂದು ಮಹಾ ಸಮೂಹ
6, 7. (ಎ) ಯಾವ ಸರಿಸಾಟಿಯಿಲ್ಲದ ನಾಶನದ ಭಾಗದೋಪಾದಿ, ಯಾವ ಮಹಾ ಧಾರ್ಮಿಕ ಪಟ್ಟಣವು ಇನ್ನೂ ನಾಶಮಾಡಲ್ಪಡಲಿದೆ? (ಬಿ) ಈ ಲೋಕದ ಮೇಲೆ ಬರಲಿರುವ ಮಹಾ ಸಂಕಟದ ಕುರಿತು ಯೋಹಾನನು ಏನನ್ನು ಪ್ರವಾದಿಸಿದನು?
6 ಸಾ.ಶ. 70 ರಲ್ಲಿ ಯೆರೂಸಲೇಮಿನ ನಾಶನವು ಆ ಧಾರ್ಮಿಕ ಪಟ್ಟಣದ ಮೇಲೆ ನಿಶ್ಚಯವಾಗಿ “ಮಹಾ ಸಂಕಟ” ವನ್ನು ತಂದಿತಾದರೂ, ಯೇಸುವಿನ ಮಾತುಗಳ ಪ್ರಧಾನ ನೆರವೇರಿಕೆಯು ಇನ್ನೂ ಕೈಗೂಡಲಿರುತ್ತದೆ. ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲು ಎಂಬ ಮಹತ್ತಾದ ಧಾರ್ಮಿಕ ಪಟ್ಟಣವು ಒಂದು ಪ್ರಾಣಾಂತಕ ಮಹಾ ಸಂಕಟವನ್ನು ಅನುಭವಿಸಲಿದೆ, ಇದನ್ನು ಹಿಂಬಾಲಿಸಿ ಕೂಡಲೆ ಸೈತಾನನ ಉಳಿದ ವಿಷಯಗಳ ವ್ಯವಸ್ಥೆಯ ಮೇಲೆ ಒಂದು ಸರಿಸಾಟಿಯಿಲ್ಲದ ಸಂಕಟವು ಬರಲಿದೆ. (ಮತ್ತಾಯ 24:29, 30; ಪ್ರಕಟನೆ 18:21) ಯೆರೂಸಲೇಮಿನ ನಾಶನದ ಸುಮಾರು 26 ವರ್ಷಗಳ ಅನಂತರ ಅಪೊಸ್ತಲ ಯೋಹಾನನು ಪ್ರಕಟನೆ 7:9-14 ರಲ್ಲಿ ಈ ಜಗತ್ತನ್ನಾವರಿಸುವ ಮಹಾ ಸಂಕಟದ ಕುರಿತಾಗಿ ಬರೆದನು. ಜನರ ಒಂದು ಮಹಾ ಸಮೂಹವು ಅದನ್ನು ಪಾರಾಗುವುದೆಂದು ಅವನು ತೋರಿಸಿದನು.
7 “ಮಹಾ ಸಮೂಹ” ಎಂದು ಕರೆಯಲ್ಪಡುವ ಈ ಪಾರಾಗುವವರು ತಾವು ತೆಗೆದುಕೊಳ್ಳುವ ಒಂದು ನಿರ್ದಿಷ್ಟ ನಿರ್ಣಾಯಕ ಕ್ರಿಯೆಗಳಿಂದ ಗುರುತಿಸಲ್ಪಡುತ್ತಾರೆ. ಪ್ರಕಟನೆ 7:14 ಕ್ಕನುಸಾರ, ಪರಲೋಕದಲ್ಲಿ 24 ಹಿರಿಯರಲ್ಲೊಬ್ಬನು ಯೋಹಾನನಿಗೆ ಹೇಳಿದ್ದು: “ಇವರು ಆ ಮಹಾ ಹಿಂಸೆಯನ್ನು [ಮಹಾ ಸಂಕಟ, NW] ಅನುಭವಿಸಿ ಬಂದವರು. ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.” ಹೌದು, ಮಹಾ ಸಮೂಹವು ಯೆಹೋವನಿಗೆ ಅದರ ರಕ್ಷಣೆಯ ಮೂಲನಾಗಿ ಜಯಕಾರವನ್ನೆತ್ತುತ್ತದೆ, ಅವರು ಯೇಸುವಿನ ಸುರಿದ ರಕ್ತದ ಮೇಲೆ ನಂಬಿಕೆಯನ್ನಿಟ್ಟು, ತಮ್ಮ ನಿರ್ಮಾಣಿಕನ ಮತ್ತು ಆತನ ನಿಯುಕ್ತ ರಾಜನಾದ ಯೇಸು ಕ್ರಿಸ್ತನ ಮುಂದೆ ಒಂದು ನೀತಿಯುಳ್ಳ ನಿಲುವನ್ನು ಪಡೆದುಕೊಳ್ಳುತ್ತಾರೆ.
8. ಯಾವ ಉತ್ತಮ ಸಂಬಂಧವು “ಮಹಾ ಸಮೂಹ” ಮತ್ತು ಯೇಸುವಿನ ಸಹೋದರರಲ್ಲಿ ಉಳಿದಿರುವವರ ನಡುವೆ ಇರುತ್ತದೆ?
8 ಇಂದು, ಮಹಾ ಸಮೂಹದ ಬಹುಮಟ್ಟಿಗೆ 50 ಲಕ್ಷಕ್ಕಿಂತಲೂ ಹೆಚ್ಚಿನ ಸದಸ್ಯರು ಸ್ವರ್ಗೀಯ ಅರಸನಾದ ಯೇಸು ಕ್ರಿಸ್ತನ ಕ್ರಿಯಾಶೀಲ ನಾಯಕತ್ವದ ಕೆಳಗೆ ಜೀವಿಸುತ್ತಿದ್ದಾರೆ. ಅವರು ಕ್ರಿಸ್ತನಿಗೆ ಅಧೀನರಾಗಿದ್ದು, ಭೂಮಿಯ ಮೇಲೆ ಇನ್ನೂ ಇರುವ ಆತನ ಅಭಿಷಿಕ್ತ ಸಹೋದರರ ನಿಕಟ ಸಹವಾಸದಲ್ಲಿದ್ದಾರೆ. ಈ ಅಭಿಷಿಕ್ತರಿಗೆ ಮಹಾ ಸಮೂಹವು ನೀಡುವ ಉಪಚಾರದ ಕುರಿತು ಯೇಸು ಹೇಳುವುದು: “ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” (ಮತ್ತಾಯ 25:40) ಕ್ರಿಸ್ತನ ಅಭಿಷಿಕ್ತ ಸಹೋದರರಿಗೆ ಅವರು ನಿಸ್ವಾರ್ಥವಾಗಿ ಸಹಾಯ ನೀಡುವ ಕಾರಣ, ಮಹಾ ಸಮೂಹದವರು ಸ್ವತಃ ಯೇಸುವಿಗೆ ಒಳ್ಳೇದನ್ನು ಮಾಡಿದರೆಂಬ ತೀರ್ಪನ್ನು ಹೊಂದುತ್ತಾರೆ. ಇದು ಯೇಸು ಕ್ರಿಸ್ತನೊಂದಿಗೆ ಮತ್ತು ಯೆಹೋವ ದೇವರೊಂದಿಗೆ ಒಂದು ಭದ್ರವಾದ ಸಂಬಂಧವನ್ನು ಪಡೆದುಕೊಳ್ಳಲು ಅವರಿಗೆ ನೆರವಾಗುತ್ತದೆ. ದೇವರ ಸಾಕ್ಷಿಗಳಾಗಿ ಆತನ ನಾಮವನ್ನು ಧರಿಸುವುದರಲ್ಲಿ ಅವರು ಅಭಿಷಿಕ್ತ ಉಳಿಕೆಯವರೊಂದಿಗೆ ಜೊತೆಗೂಡುವ ಭಾಗ್ಯವನ್ನು ಹೊಂದಿರುತ್ತಾರೆ.—ಯೆಶಾಯ 43:10, 11; ಯೋವೇಲ 2:31, 32.
ಎಚ್ಚರವಾಗಿರುವುದು
9, 10. (ಎ) ಮನುಷ್ಯಕುಮಾರನ ಮುಂದೆ ನಮ್ಮ ನೀತಿಯ ನಿಲುವನ್ನು ಕಾಪಾಡಿಕೊಳ್ಳಲು ನಾವೇನು ಮಾಡಬೇಕು? (ಬಿ) “ಎಚ್ಚರವಾಗಿ” ರಲಿಕ್ಕಾಗಿ ನಾವು ಹೇಗೆ ಕ್ರಿಯೆಗೈಯಬೇಕು?
9 ಮಹಾ ಸಮೂಹವು ಮನುಷ್ಯ ಕುಮಾರನ ಮುಂದೆ ತಮ್ಮ ನೀತಿಯ ನಿಲುವನ್ನು ಬಿಡದೆ ಕಾಪಾಡಿಕೊಳ್ಳತಕ್ಕದ್ದು, ಇದು ಕೊನೆಯ ತನಕ ಎಚ್ಚರವಾಗಿ ಉಳಿಯುವುದನ್ನು ಅವಶ್ಯಪಡಿಸುತ್ತದೆ. ಯೇಸು ಇದನ್ನು ಸ್ಪಷ್ಟಪಡಿಸಿದಾಗ ಅಂದದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿ ಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು. ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ.”—ಲೂಕ 21:34-36.
10 ಮನುಷ್ಯ ಕುಮಾರನ ಮುಂದೆ ನಿಂತುಕೊಳ್ಳುವುದರಲ್ಲಿ ಯಶಸ್ವಿಯಾಗಲು, ನಮಗೆ ಅವನ ಮೆಚ್ಚಿಗೆಯು ಬೇಕು, ನಾವು ನಮ್ಮನ್ನು ಈ ಲೋಕದ ವಿಚಾರದಿಂದ ಪ್ರಭಾವಿಸಲ್ಪಡುವಂತೆ ಬಿಟ್ಟುಕೊಟ್ಟಲ್ಲಿ ಅದು ನಮಗೆ ಸಿಕ್ಕಲಾರದು. ಲೌಕಿಕ ಯೋಚನೆಯು ಮೋಸಕರವಾದದ್ದು ಮತ್ತು ಮಾಂಸಿಕ ಭೋಗಗಳಲ್ಲಿ ಲೋಲುಪನಾಗಿರುವಂತೆ ಯಾ ಜೀವನದ ಸಮಸ್ಯೆಗಳಿಂದ ರಾಜ್ಯಾಭಿರುಚಿಗಳನ್ನು ಪ್ರಥಮವಾಗಿ ಇಡದಷ್ಟು ಜಗ್ಗಿಹೋಗುವಂತೆ ವ್ಯಕ್ತಿಯೊಬ್ಬನನ್ನು ಪ್ರೇರಿಸಬಲ್ಲದು. (ಮತ್ತಾಯ 6:33) ಅಂಥ ಮಾರ್ಗಕ್ರಮವು ಒಬ್ಬ ವ್ಯಕ್ತಿಯನ್ನು ಆತ್ಮಿಕವಾಗಿ ದುರ್ಬಲಗೊಳಿಸಿ, ದೇವರ ಮತ್ತು ಇತರರ ಕಡೆಗಿನ ತನ್ನ ಜವಾಬ್ದಾರಿಗಳ ಕುರಿತು ಅನಾಸಕನ್ತಾಗುವಂತೆ ಮಾಡಸಾಧ್ಯವಿದೆ. ಅವನು ನಿಷ್ಕ್ರಿಯನಾಗಬಲ್ಲನು ಅಥವಾ ಗಂಭೀರವಾದ ಪಾಪವನ್ನು ಗೈಯುವುದರಿಂದ, ಪ್ರಾಯಶಃ ಪಶ್ಚಾತ್ತಾಪರಹಿತ ಮನೋಭಾವವನ್ನು ಪ್ರದರ್ಶಿಸುವುದರಿಂದಲೂ ಸಭೆಯಲ್ಲಿ ತನ್ನ ಸ್ಥಾನವನ್ನು ಗಂಡಾಂತರಕ್ಕೊಡ್ಡಬಲ್ಲನು. ಮಹಾ ಸಮೂಹದ ಪ್ರತಿಯೊಬ್ಬ ವ್ಯಕ್ತಿಯು ಸ್ವತಃ ತನ್ನ ಕಡೆಗೆ ಗಮನಕೊಡಲೇಬೇಕು. ಈ ಭಕ್ತಿಹೀನ ಲೋಕದಿಂದ ಮತ್ತು ಅದರ ಪದ್ಧತಿಗಳಿಂದ ಅವನು ಪ್ರತ್ಯೇಕವಾಗಿರಬೇಕು.—ಯೋಹಾನ 17:16.
11. ಯಾವ ಶಾಸ್ತ್ರೀಯ ತತ್ವಗಳ ಅನ್ವಯಿಸುವಿಕೆ ಅರ್ಮಗೆದೋನನ್ನು ಪಾರಾಗಲು ನಮಗೆ ನೆರವಾಗುವುದು?
11 ಆ ಗುರಿಯಿಂದ, ಯೆಹೋವನು ನಮಗೇನು ಬೇಕೊ ಅದನ್ನು ತನ್ನ ವಾಕ್ಯ, ತನ್ನ ಪವಿತ್ರಾತ್ಮ, ಮತ್ತು ತನ್ನ ದೃಶ್ಯ ಸಂಸ್ಥೆಯ ಮೂಲಕ ಒದಗಿಸಿದ್ದಾನೆ. ಇವುಗಳ ಪೂರ್ಣ ಪ್ರಯೋಜನವನ್ನು ನಾವು ತೆಗೆದುಕೊಳ್ಳಬೇಕು. ಅಲ್ಲದೆ, ದೇವರ ಮೆಚ್ಚಿಗೆಯನ್ನು ಪಡೆಯಲು ನಾವು ನಿರೀಕ್ಷಿಸುವುದಾದರೆ, ನಾವಾತನಿಗೆ ಪ್ರಾರ್ಥನಾಪೂರ್ವಕರೂ, ವಿಧೇಯರೂ ಆಗಿರಬೇಕು. ಒಂದು ಸಂಗತಿಯೇನಂದರೆ, ಕೆಟ್ಟದ್ದರ ಕಡೆಗೆ ಬಲವಾದ ದ್ವೇಷವನ್ನು ನಾವು ಬೆಳೆಸಲೇಬೇಕು. ಕೀರ್ತನೆಗಾರನು ಹೇಳಿದ್ದು: “ನಾನು ಕುಟಿಲಸ್ವಭಾವಿಗಳ ಸಹವಾಸಮಾಡುವವನಲ್ಲ; ಕಪಟಿಗಳನ್ನು ಸೇರುವವನಲ್ಲ. ನನಗೆ ದುರ್ಜನರ ಕೂಟವು ಅಸಹ್ಯ; ದುಷ್ಟರ ಸಂಗವು ಬೇಕಿಲ್ಲ. ಪಾಪಿಷ್ಠರ ಪ್ರಾಣದ ಸಂಗಡ ನನ್ನ ಪ್ರಾಣವನ್ನೂ ತೆಗೆಯಬೇಡ; ಕೊಲೆಪಾತಕರ ಜೀವದೊಂದಿಗೆ ನನ್ನ ಜೀವವನ್ನೂ ತೆಗೆಯಬೇಡ.” (ಕೀರ್ತನೆ 26:4, 5, 9) ಕ್ರೈಸ್ತ ಸಭೆಯಲ್ಲಿನ ಯುವಕರೂ ವೃದ್ಧರೂ ಸಮಾನವಾಗಿ ಯೆಹೋವನಿಗೆ ಸಮರ್ಪಿತರಲ್ಲದವರೊಂದಿಗೆ ಸಹವಾಸವನ್ನು ಸೀಮಿತಗೊಳಿಸುವ ಅವಶ್ಯವಿದೆ. ದೇವರ ಮೆಚ್ಚಿಗೆಯನ್ನು ಪಡೆದುಕೊಳ್ಳಲು, ನಾವು ನಿರ್ಮಲರೂ, ಪ್ರಪಂಚದ ಕಳಂಕವಿಲ್ಲದವರೂ ಆಗಿರಲು ಶ್ರಮಿಸತಕ್ಕದ್ದು. (ಕೀರ್ತನೆ 26:1-5; ಯಾಕೋಬ 1:27; 4:4) ಹೀಗೆ, ಅರ್ಮಗೆದೋನಿನಲ್ಲಿ, ಭಕ್ತಿಹೀನರೊಂದಿಗೆ ಮರಣದಲ್ಲಿ ಯೆಹೋವನು ನಮ್ಮನ್ನು ಅಳಿಸಿಬಿಡನು ಎಂಬ ಆಶ್ವಾಸನೆ ನಮಗಿರುವುದು.
ಕೆಲವರು “ಎಂದಿಗೂ ಸಾಯುವದಿಲ್ಲ’
12, 13. (ಎ) ಲಾಜರನನ್ನು ಪುನರುತ್ಥಾನಗೊಳಿಸುವ ಮುಂಚೆ, ಮಾರ್ಥಳಿಗೆ ಪೂರ್ಣವಾಗಿ ಅರ್ಥವಾಗದ ಯಾವ ಮಾತುಗಳನ್ನು ಯೇಸು ವ್ಯಕ್ತಪಡಿಸಿದನು? (ಬಿ) ಕೆಲವರು ‘ಎಂದಿಗೂ ಸಾಯುವುದೇ ಇಲ್ಲ’ ಎಂಬುದರ ಕುರಿತ ಯೇಸುವಿನ ಮಾತುಗಳು ಏನನ್ನು ಅರ್ಥೈಸಲಿಲ್ಲ?
12 ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಪಾರಾಗುವಿಕೆಯನ್ನು ಮತ್ತು ಎಂದಿಗೂ ಸಾಯದಿರುವ ಸಂಭಾವ್ಯತೆಯ ಕುರಿತು ಧ್ಯಾನಿಸುವುದು ಉತ್ತೇಜಕವಾಗಿದೆ. ಯೇಸುವಿನಿಂದ ನಮಗೆ ನೀಡಲ್ಪಟ್ಟ ಪ್ರತೀಕ್ಷೆಯು ಇದಾಗಿದೆ. ಅವನ ಮೃತ ಮಿತ್ರನಾದ ಲಾಜರನನ್ನು ಪುನರುತ್ಥಾನಗೊಳಿಸುವ ಸ್ವಲ್ಪ ಮುಂಚೆ, ಯೇಸು ಲಾಜರನ ಅಕ್ಕ ಮಾರ್ಥಳಿಗೆ ಹೇಳಿದ್ದು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು; ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ; ಇದನ್ನು ನಂಬುತ್ತೀಯಾ?” ಮಾರ್ಥಳು ಪುನರುತ್ಥಾನದಲ್ಲಿ ನಂಬಿಕೆಯಿಟ್ಟಿದ್ದಳು, ಆದರೆ ಯೇಸು ಹೇಳುತ್ತಿದುದೆಲ್ಲವನ್ನು ಆಕೆ ತಿಳಿಯಲಿಲ್ಲ.—ಯೋಹಾನ 11:25, 26.
13 ತನ್ನ ನಂಬಿಗಸ್ತ ಅಪೊಸ್ತಲರು ಶಾರೀರಿಕವಾಗಿ ಜೀವಿಸುತ್ತಾ ಮುಂದುವರಿದು, ಎಂದಿಗೂ ಸಾಯದೆ ಇರುವರೆಂದು ಯೇಸು ಅರ್ಥೈಸಲಿಲ್ಲ. ವ್ಯತಿರಿಕ್ತವಾಗಿ, ತನ್ನ ಶಿಷ್ಯರು ಸಾಯಲಿರುವರೆಂದು ಅವನು ತರುವಾಯ ಸೂಚಿಸಿ ಹೇಳಿದನು. (ಯೋಹಾನ 21:16-23) ನಿಶ್ಚಯವಾಗಿ, ಸಾ.ಶ. 33ರ ಪಂಚಾಶತ್ತಮದಲ್ಲಿ ಪವಿತ್ರಾತ್ಮದಿಂದ ಅವರ ಅಭಿಷೇಕವು, ಅರಸರು ಮತ್ತು ಯಾಜಕರಾಗಿ ಸ್ವರ್ಗೀಯ ಬಾಧ್ಯತೆಯನ್ನು ಪಡೆದುಕೊಳ್ಳುವುದಕ್ಕೋಸ್ಕರ ಅವರು ಸಾಯಬೇಕೆಂಬ ಅರ್ಥದಲ್ಲಿತ್ತು. (ಪ್ರಕಟನೆ 20:4, 6) ಹೀಗೆ, ಸಮಯದ ಗತಿಸುವಿಕೆಯೊಂದಿಗೆ, ಪ್ರಥಮ ಶತಮಾನದ ಕ್ರೈಸ್ತರೆಲ್ಲರು ಗತಿಸಿಹೋದರು. ಆದರೆ, ಯೇಸು ಏನು ಹೇಳಿದನೊ ಅದನ್ನು ಒಂದು ಉದ್ದೇಶದಿಂದಲೆ ಹೇಳಿದನು. ಎಂದಿಗೂ ಸಾಯದೆ ಬದುಕುತ್ತಾ ಮುಂದರಿಯುವ ಕುರಿತ ಆತನ ಮಾತುಗಳು ನೆರವೇರುವುವು.
14, 15. (ಎ) ಕೆಲವರು ‘ಎಂದಿಗೂ ಸಾಯುವುದೇ ಇಲ್ಲ’ ಎಂಬುದರ ಕುರಿತ ಯೇಸುವಿನ ಮಾತುಗಳು ಹೇಗೆ ನೆರವೇರಲಿವೆ? (ಬಿ) ಈ ಲೋಕದ ಪರಿಸ್ಥಿತಿಯೇನಾಗಿದೆ, ಆದರೆ ನೀತಿವಂತರಿಗೆ ಯಾವ ನಿರೀಕ್ಷೆಯಿದೆ?
14 ಒಂದು ವಿಷಯವೇನಂದರೆ, ನಂಬಿಗಸ್ತರಾದ ಅಭಿಷಿಕ್ತ ಕ್ರೈಸ್ತರು ನಿತ್ಯಮರಣವನ್ನು ಎಂದಿಗೂ ಅನುಭವಿಸುವುದಿಲ್ಲ. (ಪ್ರಕಟನೆ 20:6) ಹಾಗೂ, ದೇವರು ಮಾನವ ವ್ಯವಹಾರಗಳಲ್ಲಿ ಹಸ್ತಕ್ಷೇಪಮಾಡುವ ಮತ್ತು ಭೂಮಿಯ ಮೇಲಿಂದ, ನೋಹನ ದಿನಗಳಲ್ಲಿ ಆತನು ಮಾಡಿದಂತೆಯೆ, ದುಷ್ಟತನವನ್ನು ಅಳಿಸಿಬಿಡುವ ನಿರ್ದಿಷ್ಟ ಸಮಯವೊಂದಕ್ಕೆ ಯೇಸುವಿನ ಮಾತುಗಳು ಸೂಚಿಸುತ್ತವೆ. ಆ ಸಮಯದಲ್ಲಿ ದೇವರ ಚಿತ್ತವನ್ನು ಮಾಡುವವರಾಗಿ ಕಂಡುಬರುವ ನಂಬಿಗಸ್ತ ವ್ಯಕ್ತಿಗಳಿಗೆ ದೇವರ ತೀರ್ಪಿನ ಕ್ರಿಯೆಗಳ ಮೂಲಕ ಸಾಯಲಿರುವುದಿಲ್ಲ. ಬದಲಾಗಿ, ನೋಹ ಮತ್ತು ಅವನ ಕುಟುಂಬದಂತೆ, ಅವರಿಗೆ ಒಂದು ಲೋಕದ ನಾಶನದಿಂದ ಪಾರಾಗುವ ಸದವಕಾಶವು ಇರುವುದು. ಅಂತಹ ನಿರೀಕ್ಷೆಯು ಬೈಬಲ್ ಬೋಧನೆಗಳ ಹಾಗೂ ದೃಷ್ಟಾಂತಿಸಲ್ಪಟ್ಟ ಮಾದರಿಗಳ ಮೇಲೆ ಆಧಾರಿಸಲ್ಪಟ್ಟು ಸುದೃಢವಾಗಿದೆ. (ಹೋಲಿಸಿ ಇಬ್ರಿಯ 6:19; 2 ಪೇತ್ರ 2:4-9.) ಅನೀತಿಯ ಮಾನವ ಸಮಾಜವನ್ನು ಹೊಂದಿರುವ ಸದ್ಯದ ಲೋಕವು ಬಲುಬೇಗನೆ ನಾಶನವೊಂದರಲ್ಲಿ ಅಂತ್ಯವಾಗಿ ಹೋಗುವುದು ಎಂದು ಬೈಬಲ್ ಪ್ರವಾದನೆಯ ನೆರವೇರಿಕೆಯು ತೋರಿಸುತ್ತದೆ. ಪ್ರಸ್ತುತ ಸನ್ನಿವೇಶವನ್ನು ವಿಪರ್ಯಸ್ತಗೊಳಿಸಲಾಗದು, ಯಾಕಂದರೆ ಲೋಕವು ತಿದ್ದಲಾಗದಷ್ಟು ಕೆಟ್ಟದ್ದಾಗಿದೆ. ನೋಹನ ದಿನಗಳ ಲೋಕದ ಕುರಿತು ದೇವರು ಏನು ಹೇಳಿದನೋ, ಅದು ನಾವು ಜೀವಿಸುವ ಲೋಕದ ವಿಷಯದಲ್ಲೂ ಸತ್ಯ. ಕೆಟ್ಟತನವು ಮಾನವಕುಲದ ಅಧಿಕತಮ ಜನರ ಹೃದಯಗಳನ್ನು ತುಂಬಿರುತ್ತದೆ ಮತ್ತು ಅವರ ಆಲೋಚನೆಗಳು ಎಲ್ಲಾ ಸಮಯದಲ್ಲೂ ಕೆಟ್ಟದ್ದೇ ಆಗಿವೆ.—ಆದಿಕಾಂಡ 6:5.
15 ದೈವಿಕ ಹಸ್ತಕ್ಷೇಪವಿಲ್ಲದೇ ಶತಮಾನಗಳ ತನಕ ಭೂಮಿಯನ್ನಾಳಲು ಯೆಹೋವನು ಮನುಷ್ಯರಿಗೆ ಬಿಟ್ಟುಕೊಟ್ಟನು, ಆದರೆ ಅವರ ಸಮಯವು ಬಹುಮಟ್ಟಿಗೆ ಕೊನೆಗೊಂಡಿದೆ. ಬೈಬಲು ಹೇಳುವಂತೆಯೆ, ಬೇಗನೆ ಯೆಹೋವನು ಭೂಮಿಯ ಮೇಲಿಂದ ಎಲ್ಲಾ ದುಷ್ಟರನ್ನು ನಿರ್ಮೂಲಗೊಳಿಸುವನು. (ಕೀರ್ತನೆ 145:20; ಜ್ಞಾನೋಕ್ತಿ 2:21, 22) ಆದಾಗ್ಯೂ, ದುಷ್ಟರೊಂದಿಗೆ ಅವನು ನೀತಿವಂತರನ್ನು ನಾಶಗೊಳಿಸನು. ಅಂತಹ ಒಂದು ಸಂಗತಿಯನ್ನು ದೇವರು ಎಂದಿಗೂ ಮಾಡಲಿಲ್ಲ! (ಹೋಲಿಸಿ ಆದಿಕಾಂಡ 18:22, 23, 26.) ದಿವ್ಯ ಭಯದೊಂದಿಗೆ ಆತನನ್ನು ನಂಬಿಗಸ್ತಿಕೆಯಿಂದ ಸೇವಿಸಲು ಯತ್ನಿಸುತ್ತಿರುವವರನ್ನು ಆತನು ಯಾಕೆ ನಾಶಗೊಳಿಸುವನು? ನೋಹನ ಕಾಲದ ದುಷ್ಟಲೋಕವು ಪ್ರಳಯದಿಂದ ಅಂತ್ಯಗೊಂಡಾಗ ಅವನೂ ಅವನ ಕುಟುಂಬವೂ ಹೇಗೆ ನಾಶಮಾಡಲ್ಪಡಲಿಲ್ಲವೊ ಹಾಗೆಯೆ, ಮಹಾ ಸಂಕಟವು ಆರಂಭಗೊಳ್ಳುವಾಗ ಜೀವಂತವಿರುವ ಯೆಹೋವನ ನಂಬಿಗಸ್ತ ಆರಾಧಕರು ಆತನ ದೃಷ್ಟಿಯಲ್ಲಿ ಮೆಚ್ಚಿಗೆಯನ್ನು ಕಂಡುಕೊಂಡು, ನಾಶಗೊಳಿಸಲ್ಪಡದಿರುವರು ಎಂಬುದು ನ್ಯಾಯಸಮ್ಮತವೇ ಆಗಿದೆ. (ಆದಿಕಾಂಡ 7:23) ಅವರಿಗೆ ದಿವ್ಯ ಸಂರಕ್ಷಣೆಯು ಇರುವುದು ಮತ್ತು ಈ ಲೋಕಾಂತ್ಯವನ್ನು ಪಾರಾಗುವರು.
16. ಹೊಸ ಲೋಕದಲ್ಲಿ ಯಾವ ಕೌತುಕಭರಿತ ಸಂಗತಿಗಳು ನಡೆಯುವುವು, ಪಾರಾಗುವವರಿಗೆ ಯಾವ ಅರ್ಥದಲ್ಲಿ?
16 ಆಮೇಲೆ ಏನು ಸಂಭವಿಸುವುದು? ಹೊಸ ಲೋಕದಲ್ಲಿ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳು ಪೂರ್ಣವಾಗಿ ಅನ್ವಯಿಸಲ್ಪಟ್ಟಂತೆ, ಮಾನವಕುಲಕ್ಕೆ ವಾಸಿಕಾರಕ ಆಶೀರ್ವಾದಗಳು ಪ್ರವಹಿಸುವುವು. “ಸ್ಫಟಿಕದಂತೆ ಪ್ರಕಾಶಮಾನವಾಗಿದ್ದ” ಒಂದು ಸಾಂಕೇತಿಕ “ಜೀವಜಲದ ನದಿಯ” ಕುರಿತು ಬೈಬಲು ಮಾತಾಡುತ್ತದೆ, ಅದು “ದೇವರ ಮತ್ತು ಯಜ್ಞದ ಕುರಿಯಾದಾತನ ಸಿಂಹಾಸನದಿಂದ ಹೊರಟು ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಉಭಯ ಪಾರ್ಶ್ವಗಳಲ್ಲಿ ಜೀವವೃಕ್ಷವಿತ್ತು; ಅದು ತಿಂಗಳು ತಿಂಗಳಿಗೆ ಫಲವನ್ನು ಫಲಿಸುತ್ತಾ ಹನ್ನೆರಡು ತರದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವದಕ್ಕೆ ಪ್ರಯೋಜನವಾಗಿವೆ.” (ಪ್ರಕಟನೆ 22:1, 2) ಕೌತುಕಕರವಾಗಿ, ಆ “ವಾಸಿಮಾಡು” ವಿಕೆಯಲ್ಲಿ ಆದಾಮನ ಮರಣದ ಮೇಲಣ ಜಯವು ತಾನೆ ಸೇರಿರುತ್ತದೆ! “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.” (ಯೆಶಾಯ 25:8) ಹೀಗೆ, ಮಹಾ ಸಂಕಟವನ್ನು ಪಾರಾಗಿ ಹೊಸ ಲೋಕವನ್ನು ಸೇರುವವರಿಗೆ ಎಂದೂ ಮರಣವನ್ನು ಎದುರಿಸುವ ಅಗತ್ಯವಿಲ್ಲ!
ಒಂದು ದೃಢ ನಿರೀಕ್ಷೆ
17. ಕೆಲವರು ಅರ್ಮಗೆದೋನನ್ನು ಪಾರಾಗುವರು ಮತ್ತು “ಎಂದಿಗೂ ಸಾಯುವದಿಲ್ಲ” ಎಂಬ ನಿರೀಕ್ಷೆಯು ಎಷ್ಟು ಖಂಡಿತವಾಗಿದೆ?
17 ಈ ಸ್ತಬ್ಧಗೊಳಿಸುವ ನಿರೀಕ್ಷೆಯಲ್ಲಿ ನಾವು ಪೂರ್ಣ ಭರವಸೆಯಿಡಬಲ್ಲೆವೊ? ಖಂಡಿತವಾಗಿಯೂ ಇಡಬಲ್ಲೆವು! ಜನರು ಎಂದಿಗೂ ಸಾಯದೆ ಬದುಕುತ್ತಾ ಇರುವ ಒಂದು ಸಮಯವಿರುವುದೆಂದು ಯೇಸು ಮಾರ್ಥಳಿಗೆ ಸೂಚಿಸಿದನು. (ಯೋಹಾನ 11:26) ಅಷ್ಟಲ್ಲದೆ, ಯೇಸು ಯೋಹಾನನಿಗೆ ಕೊಟ್ಟ ಪ್ರಕಟನೆಯ 7 ನೆಯ ಅಧ್ಯಾಯದಲ್ಲಿ, ಒಂದು ಮಹಾ ಸಮೂಹವು ಮಹಾ ಸಂಕಟವನ್ನು ಪಾರಾಗಿ ಹೊರಗೆ ಬರುತ್ತದೆ ಎಂದು ಪ್ರಕಟಿಸಲಾಗಿದೆ. ಯೇಸು ಕ್ರಿಸ್ತನಲ್ಲಿ ಮತ್ತು ನೋಹನ ದಿನದ ಐತಿಹಾಸಿಕ ಜಲಪ್ರಳಯವನ್ನು ನಾವು ನಂಬಸಾಧ್ಯವೊ? ನಿರ್ವಿವಾದವಾಗಿ! ಅದಲ್ಲದೆ, ದೇವರು ತನ್ನ ಸೇವಕರನ್ನು ತೀರ್ಪಿನ ಅವಧಿಯಲ್ಲಿ ಮತ್ತು ಜನಾಂಗಗಳ ಪತನಗಳಲ್ಲಿ ಕಾಪಾಡಿ ಉಳಿಸಿದ ಸಂದರ್ಭಗಳ ಬೇರೆ ವೃತ್ತಾಂತಗಳು ಬೈಬಲಿನಲ್ಲಿವೆ. ಈ ಅಂತ್ಯದ ಸಮಯದಲ್ಲಿ ಆತನಿಂದ ಏನಾದರೂ ಕಡಿಮೆಯು ನಿರೀಕ್ಷಿಸಲ್ಪಡಬೇಕೋ? ನಿರ್ಮಾಣಿಕನಿಗೆ ಅಶಕ್ಯವಾದದ್ದು ಏನಾದರೂ ಇದೆಯೆ?—ಹೋಲಿಸಿ ಮತ್ತಾಯ 19:26.
18. ಯೆಹೋವನ ನೀತಿಯುಳ್ಳ ಹೊಸ ಲೋಕದಲ್ಲಿ ಜೀವದ ಆಶ್ವಾಸನೆಯನ್ನು ನಾವು ಹೇಗೆ ಹೊಂದಿರಬಲ್ಲೆವು?
18 ಈಗ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವ ಮೂಲಕ, ಆತನ ಹೊಸ ಲೋಕದಲ್ಲಿ ಅನಂತ ಜೀವನದ ಆಶ್ವಾಸನೆಯು ನಮಗಿದೆ. ಲಕ್ಷಾಂತರ ಅಗಣಿತ ವ್ಯಕ್ತಿಗಳಿಗೆ, ಪುನರುತ್ಥಾನದ ಮೂಲಕ ಆ ಹೊಸ ಲೋಕದ ಜೀವನವು ಬರಲಿರುವುದು. ಆದರೂ, ನಮ್ಮ ದಿನಗಳಲ್ಲಿ, ಯೆಹೋವನ ಲಕ್ಷಾಂತರ ಜನರಿಗೆ—ಹೌದು, ಯಾರಿಂದಲೂ ಎಣಿಸಲಾಗದ ಅಥವಾ ಸೀಮಿತಗೊಳಿಸಲಾಗದ ಒಂದು ಮಹಾ ಸಮೂಹಕ್ಕೆ—ಮಹಾ ಸಂಕಟದಿಂದ ಜೀವಂತವಾಗಿ ರಕ್ಷಿಸಲ್ಪಡುವ ಒಂದು ಅಸದೃಶ ಸೌಭಾಗ್ಯವು ಇರುವುದು. ಮತ್ತು ಅವರಿಗೆ ಎಂದಿಗೂ ಸಾಯಬೇಕಾಗಿರುವುದಿಲ್ಲ.
ದಯವಿಟ್ಟು ವಿವರಿಸಿರಿ
◻ ಅರ್ಮಗೆದೋನನ್ನು ಪಾರಾಗುವುದು ನೋಹನ ದಿನದಲ್ಲಿ ಹೇಗೆ ಮುನ್ಚಿತ್ರಿಸಲ್ಪಟ್ಟಿತು?
◻ ಯೆಹೋವನ ತೀರ್ಪುಗಳನ್ನು ನಿರ್ವಹಿಸಲು ಯೇಸು ಬರುವಾಗ ನಿಲ್ಲುತ್ತಾ ಇರಲು ನಾವೇನು ಮಾಡತಕ್ಕದು?
◻ ಅರ್ಮಗೆದೋನನ್ನು ಪಾರಾಗುವವರಿಗೆ “ಎಂದಿಗೂ ಸಾಯುವ” ಅಗತ್ಯವಿಲ್ಲವೆಂದು ನಾವು ಏಕೆ ಹೇಳಬಲ್ಲೆವು?
[ಪುಟ 15 ರಲ್ಲಿರುವ ಚಿತ್ರ]
ಕ್ರೈಸ್ತರು ಯೆರೂಸಲೇಮಿನ ಸಂಕಟವನ್ನು ಪಾರಾದರು