ಯೇಸು ಕ್ರಿಸ್ತನು ನಡೆದಂತೆಯೇ ನಡೆಯುತ್ತಾ ಇರ್ರಿ
“ಆತನಲ್ಲಿ [ದೇವರಲ್ಲಿ] ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಕ್ರಿಸ್ತನು ನಡೆದಂತೆಯೇ ತಾನೂ ನಡೆಯುವದಕ್ಕೆ ಬದ್ಧನಾಗಿದ್ದಾನೆ.”—1 ಯೋಹಾನ 2:6.
1, 2. ಯೇಸುವಿನತ್ತ ತದೇಕಚಿತ್ತದಿಂದ ನೋಡುವುದರಲ್ಲಿ ಏನು ಒಳಗೂಡಿದೆ?
“ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ” ಎಂದು ಅಪೊಸ್ತಲ ಪೌಲನು ಬರೆದನು. (ಇಬ್ರಿಯ 12:1, 2) ನಂಬಿಗಸ್ತಿಕೆಯ ಮಾರ್ಗದಲ್ಲಿ ನಡೆಯಲಿಕ್ಕಾಗಿ ನಾವು ಯೇಸು ಕ್ರಿಸ್ತನ ಮೇಲೆ ದೃಷ್ಟಿಯಿಡುವುದು ಆವಶ್ಯಕವಾಗಿರುತ್ತದೆ.
2 ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ “ದೃಷ್ಟಿಯಿಟ್ಟು” ಎಂದು ಉಪಯೋಗಿಸಲ್ಪಟ್ಟಿರುವ ಮೂಲ ಭಾಷೆಯ ಪದದ ಅರ್ಥ “ಅಪಕರ್ಷಣೆಯಿಲ್ಲದೆ ಗಮನಕೊಡುವುದು,” “ಒಂದು ವಿಷಯವನ್ನು ನೋಡಲಿಕ್ಕಾಗಿ ಇನ್ನೊಂದು ವಿಷಯದಿಂದ ದೃಷ್ಟಿಯನ್ನು ಕೀಳುವುದು,” “ನೋಟವನ್ನು ನೆಡುವುದು” ಎಂದಾಗಿದೆ. ಒಂದು ಪರಾಮರ್ಶೆ ಕೃತಿಯು ತಿಳಿಸಿದ್ದು: “ಕ್ರೀಡಾಂಗಣದಲ್ಲಿರುವ ಗ್ರೀಕ್ ಓಟಗಾರನು ಓಟದ ಪಥದಿಂದ ಮತ್ತು ಅವನು ವೇಗವಾಗಿ ಯಾವ ಗುರಿಯತ್ತ ಚಲಿಸುತ್ತಿದ್ದಾನೊ ಅದರಿಂದ ತನ್ನ ಗಮನವನ್ನು ತಿರುಗಿಸಿ, ಪ್ರೇಕ್ಷಕರ ಗುಂಪುಗಳ ಕಡೆಗೆ ನೋಡಿದ ಕ್ಷಣವೇ ಅವನ ವೇಗವು ತಗ್ಗುತ್ತದೆ. ಒಬ್ಬ ಕ್ರೈಸ್ತನ ವಿಷಯದಲ್ಲಿಯೂ ಹೀಗೆಯೇ ಆಗುತ್ತದೆ.” ಅಪಕರ್ಷಣೆಗಳು ನಮ್ಮ ಆಧ್ಯಾತ್ಮಿಕ ಪ್ರಗತಿಗೆ ತಡೆಯೊಡ್ಡಬಲ್ಲವು. ಆದುದರಿಂದ ನಾವು ಯೇಸು ಕ್ರಿಸ್ತನನ್ನು ತದೇಕಚಿತ್ತದಿಂದ ದೃಷ್ಟಿಸುತ್ತಿರಬೇಕು. ‘ನಂಬಿಕೆಯನ್ನು ಹುಟ್ಟಿಸುವವನಾದ’ ಅವನಲ್ಲಿ ನಾವೇನನ್ನು ನೋಡುತ್ತೇವೆ? ‘ಹುಟ್ಟಿಸುವವನು’ ಎಂದು ಭಾಷಾಂತರಿಸಲಾಗಿರುವ ಗ್ರೀಕ್ ಪದದ ಅರ್ಥ, “ಮುಖ್ಯ ನಾಯಕ, ಯಾವುದೇ ವಿಷಯದಲ್ಲಿ ಮುಂದಾಳುತ್ವ ವಹಿಸುವವ ಮತ್ತು ಹೀಗೆ ಮಾದರಿಯನ್ನಿಡುವವ” ಎಂದಾಗಿದೆ. ಯೇಸುವಿನತ್ತ ತದೇಕಚಿತ್ತದಿಂದ ನೋಡುವುದು, ಅವನ ಮಾದರಿಯನ್ನು ಅನುಸರಿಸುವುದನ್ನು ಅವಶ್ಯಪಡಿಸುತ್ತದೆ.
3, 4. (ಎ) ಯೇಸು ಕ್ರಿಸ್ತನು ನಡೆದಂತೆಯೇ ನಡೆಯುವುದು ನಮ್ಮಿಂದ ಏನನ್ನು ಅವಶ್ಯಪಡಿಸುತ್ತದೆ? (ಬಿ) ಯಾವ ಪ್ರಶ್ನೆಗಳು ನಮ್ಮ ಗಮನಕ್ಕೆ ಅರ್ಹವಾಗಿವೆ?
3 “ಆತನಲ್ಲಿ [ದೇವರಲ್ಲಿ] ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಕ್ರಿಸ್ತನು ನಡೆದಂತೆಯೇ ತಾನೂ ನಡೆಯುವದಕ್ಕೆ ಬದ್ಧನಾಗಿದ್ದಾನೆ” ಎಂದು ಬೈಬಲ್ ತಿಳಿಸುತ್ತದೆ. (1 ಯೋಹಾನ 2:6) ಯೇಸು ತನ್ನ ತಂದೆಯ ಆಜ್ಞೆಗಳನ್ನು ಪಾಲಿಸಿದಂತೆಯೇ, ನಾವು ಯೇಸುವಿನ ಆಜ್ಞೆಗಳನ್ನು ಪಾಲಿಸುವ ಮೂಲಕ ದೇವರಲ್ಲಿ ನೆಲೆಗೊಂಡವರಾಗಿ ಉಳಿಯಬೇಕು.—ಯೋಹಾನ 15:10.
4 ಹೀಗಿರುವುದರಿಂದ, ಯೇಸು ನಡೆದಂತೆಯೇ ನಡೆಯಲಿಕ್ಕಾಗಿ, ನಾವು ಅವನನ್ನು ಮುಖ್ಯ ನಾಯಕನಾಗಿ ನಿಕಟವಾಗಿ ಗಮನಿಸುವುದು ಮತ್ತು ಅವನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವುದು ಆವಶ್ಯಕ. ಈ ವಿಷಯದಲ್ಲಿ ಪರಿಗಣಿಸಬೇಕಾದ ಮುಖ್ಯ ಪ್ರಶ್ನೆಗಳು ಇವಾಗಿವೆ: ಕ್ರಿಸ್ತನು ಇಂದು ಹೇಗೆ ನಮ್ಮನ್ನು ನಡೆಸುತ್ತಾನೆ? ಅವನು ನಡೆದ ರೀತಿಯನ್ನು ಅನುಕರಿಸುವುದು ನಮ್ಮನ್ನು ಹೇಗೆ ಪ್ರಭಾವಿಸಬೇಕು? ಯೇಸು ಕ್ರಿಸ್ತನಿಟ್ಟ ಮಾದರಿಗೆ ಅಂಟಿಕೊಳ್ಳುವುದರಿಂದ ಸಿಗುವ ಪ್ರಯೋಜನಗಳು ಯಾವುವು?
ಕ್ರಿಸ್ತನು ತನ್ನ ಹಿಂಬಾಲಕರನ್ನು ನಡೆಸುವ ವಿಧ
5. ಪರಲೋಕಕ್ಕೇರಿ ಹೋಗುವ ಮುಂಚೆ, ಯೇಸು ತನ್ನ ಹಿಂಬಾಲಕರಿಗೆ ಯಾವ ಮಾತು ಕೊಟ್ಟನು?
5 ಪುನರುತ್ಥಾನಗೊಂಡ ಯೇಸು ಕ್ರಿಸ್ತನು ಪರಲೋಕಕ್ಕೇರಿ ಹೋಗುವ ಮುಂಚೆ ತನ್ನ ಶಿಷ್ಯರಿಗೆ ಪ್ರತ್ಯಕ್ಷನಾಗಿ ಅವರಿಗೊಂದು ಪ್ರಾಮುಖ್ಯ ಕೆಲಸವನ್ನು ನೇಮಿಸಿದನು. ಅವನಂದದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.” ಆ ಸಂದರ್ಭದಲ್ಲಿ ಈ ಮುಖ್ಯ ನಾಯಕನು, ಅವರ ನೇಮಕವನ್ನು ಪೂರೈಸಲಿಕ್ಕಾಗಿ ಅವರೊಂದಿಗಿರುವೆನೆಂದು ಸಹ ಮಾತುಕೊಡುತ್ತಾ ಹೀಗಂದನು: “ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾಯ 28:19, 20) ಈ ಯುಗದ ಸಮಾಪ್ತಿಯ ಸಮಯದಲ್ಲಿ ಯೇಸು ಕ್ರಿಸ್ತನು ಹೇಗೆ ತನ್ನ ಹಿಂಬಾಲಕರ ಸಂಗಡ ಇದ್ದಾನೆ?
6, 7. ಪವಿತ್ರಾತ್ಮದ ಮುಖಾಂತರ ಯೇಸು ನಮ್ಮನ್ನು ಹೇಗೆ ನಡೆಸುತ್ತಾನೆ?
6 “ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು” ಎಂದು ಯೇಸು ಹೇಳಿದನು. (ಯೋಹಾನ 14:26) ಯೇಸುವಿನ ಹೆಸರಿನಲ್ಲಿ ಕಳುಹಿಸಲ್ಪಟ್ಟ ಪವಿತ್ರಾತ್ಮವು, ಇಂದು ನಮ್ಮನ್ನು ಮಾರ್ಗದರ್ಶಿಸುತ್ತದೆ ಮತ್ತು ಬಲಪಡಿಸುತ್ತದೆ. ಅದು ನಮ್ಮನ್ನು ಆಧ್ಯಾತ್ಮಿಕವಾಗಿ ಜ್ಞಾನೋದಯಗೊಳಿಸಿ, “ದೇವರ ಅಗಾಧವಾದ ವಿಷಯಗಳನ್ನು ಕೂಡ” ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುತ್ತದೆ. (1 ಕೊರಿಂಥ 2:10) ಅಷ್ಟುಮಾತ್ರವಲ್ಲದೆ, “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ” ಎಂಬ ದೈವಿಕ ಗುಣಗಳು ‘ದೇವರಾತ್ಮದಿಂದ ಉಂಟಾಗುವ ಫಲವಾಗಿವೆ.’ (ಗಲಾತ್ಯ 5:22, 23) ಪವಿತ್ರಾತ್ಮದ ಸಹಾಯದಿಂದ ನಾವು ಈ ಗುಣಗಳನ್ನು ಬೆಳೆಸಿಕೊಳ್ಳಬಲ್ಲೆವು.
7 ನಾವು ಶಾಸ್ತ್ರವಚನಗಳ ಅಧ್ಯಯನಮಾಡಿ ಕಲಿತ ಸಂಗತಿಗಳನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸಿದಂತೆ, ಯೆಹೋವನ ಆತ್ಮವು, ಜ್ಞಾನ, ತಿಳಿವಳಿಕೆ, ಬುದ್ಧಿ, ವಿವೇಕ, ನ್ಯಾಯ, ಸುಜ್ಞಾನವನ್ನು ಬೆಳೆಸಿಕೊಳ್ಳುವಂತೆ ನಮಗೆ ಸಹಾಯಮಾಡಬಲ್ಲದು. (ಜ್ಞಾನೋಕ್ತಿ 2:1-11) ಪವಿತ್ರಾತ್ಮವು ನಾವು ಪ್ರಲೋಭನೆಗಳನ್ನು ಮತ್ತು ಪರೀಕ್ಷೆಗಳನ್ನು ಸಹ ತಾಳಿಕೊಳ್ಳುವಂತೆ ಸಹಾಯಮಾಡಬಲ್ಲದು. (1 ಕೊರಿಂಥ 10:13; 2 ಕೊರಿಂಥ 4:7; ಫಿಲಿಪ್ಪಿ 4:13) ಕ್ರೈಸ್ತರು ‘ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ತಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವಂತೆ’ ಉತ್ತೇಜಿಸಲ್ಪಟ್ಟಿದ್ದಾರೆ. (2 ಕೊರಿಂಥ 7:1) ಪವಿತ್ರಾತ್ಮದ ಸಹಾಯವಿಲ್ಲದೆ ನಾವು ಪವಿತ್ರತೆ ಇಲ್ಲವೆ ಶುದ್ಧತೆಯ ಕುರಿತಾದ ದೇವರ ಆವಶ್ಯಕತೆಯನ್ನು ತಲಪಲು ಸಾಧ್ಯವೇ ಇಲ್ಲ. ಹೀಗಿರುವುದರಿಂದ ಪವಿತ್ರಾತ್ಮವು, ಇಂದು ನಮ್ಮನ್ನು ನಡೆಸಲಿಕ್ಕಾಗಿ ಯೇಸು ಉಪಯೋಗಿಸುವ ಮಾಧ್ಯಮಗಳಲ್ಲಿ ಒಂದಾಗಿದೆ. ಇದನ್ನು ಉಪಯೋಗಿಸುವಂತೆ ಯೆಹೋವ ದೇವರು ತನ್ನ ಮಗನಿಗೆ ಅಧಿಕಾರವನ್ನು ಕೊಟ್ಟಿದ್ದಾನೆ.—ಮತ್ತಾಯ 28:18.
8, 9. ಮುಂದಾಳುತ್ವವನ್ನು ವಹಿಸಲಿಕ್ಕಾಗಿ ಕ್ರಿಸ್ತನು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು’ ಹೇಗೆ ಉಪಯೋಗಿಸುತ್ತಾನೆ?
8 ಕ್ರಿಸ್ತನು ಇಂದು ಸಭೆಯನ್ನು ನಡೆಸುವ ಇನ್ನೊಂದು ಮಾಧ್ಯಮವನ್ನು ಪರಿಗಣಿಸಿರಿ. ತನ್ನ ಪ್ರತ್ಯಕ್ಷತೆ ಹಾಗೂ ಯುಗದ ಸಮಾಪ್ತಿಯ ಕುರಿತಾಗಿ ಮಾತಾಡುತ್ತಾ ಯೇಸು ಹೇಳಿದ್ದು: “ಹಾಗಾದರೆ ಯಜಮಾನನು ತನ್ನ ಮನೆಯವರಿಗೆ ಹೊತ್ತು ಹೊತ್ತಿಗೆ ಆಹಾರ ಕೊಡಲಿಕ್ಕೆ ಅವರ ಮೇಲಿಟ್ಟ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಯಾರು? ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುವನೋ ಆ ಆಳು ಧನ್ಯನು. ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.”—ಮತ್ತಾಯ 24:3, 45-47.
9 “ಯಜಮಾನನು” ಯೇಸು ಕ್ರಿಸ್ತನಾಗಿದ್ದಾನೆ ಮತ್ತು “ಆಳು,” ಭೂಮಿಯ ಮೇಲೆ ಅಭಿಷಿಕ್ತ ಕ್ರೈಸ್ತರ ಗುಂಪಾಗಿದೆ. ಈ ಆಳು ವರ್ಗಕ್ಕೆ, ಭೂಮಿಯ ಮೇಲಿನ ಯೇಸುವಿನ ಅಭಿರುಚಿಗಳನ್ನು ನೋಡಿಕೊಳ್ಳುವ ಮತ್ತು ಸಮಯಕ್ಕೆ ಸರಿಯಾಗಿ ಆಧ್ಯಾತ್ಮಿಕ ಆಹಾರವನ್ನು ಒದಗಿಸುವ ಜವಾಬ್ದಾರಿಯು ವಹಿಸಿಕೊಡಲ್ಪಟ್ಟಿದೆ. ಸಂಘಟಿತ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ನೊಳಗಿಂದ ಅರ್ಹ ಮೇಲ್ವಿಚಾರಕರ ಒಂದು ಚಿಕ್ಕ ಗುಂಪು ಆಡಳಿತ ಮಂಡಲಿಯಾಗಿರುತ್ತದೆ. ಮತ್ತು ಈ ಮಂಡಲಿಯು ಆಳು ವರ್ಗದ ಪ್ರತಿನಿಧಿಯಾಗಿ ಕಾರ್ಯನಡೆಸುತ್ತದೆ. ಈ ಮಂಡಲಿಯವರು ಲೋಕವ್ಯಾಪಕ ರಾಜ್ಯ ಸಾರುವಿಕೆಯ ಕೆಲಸವನ್ನು ನಿರ್ದೇಶಿಸುತ್ತಾರೆ ಮತ್ತು ಸರಿಯಾದ ಸಮಯದಲ್ಲಿ ಆಧ್ಯಾತ್ಮಿಕ ಪೋಷಣೆಯನ್ನು ಒದಗಿಸುತ್ತಾರೆ. ಈ ರೀತಿಯಲ್ಲಿ ಕ್ರಿಸ್ತನು ಆತ್ಮಾಭಿಷಿಕ್ತ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಮತ್ತು ಅದರ ಆಡಳಿತ ಮಂಡಲಿಯ ಮೂಲಕ ಸಭೆಯನ್ನು ನಡೆಸುತ್ತಾನೆ.
10. ಹಿರಿಯರ ಕಡೆಗೆ ನಮ್ಮ ಮನೋಭಾವ ಏನಾಗಿರಬೇಕು, ಮತ್ತು ಏಕೆ?
10 ಕ್ರಿಸ್ತನ ಮುಂದಾಳುತ್ವದ ಮತ್ತೊಂದು ರುಜುವಾತು, “ಪುರುಷರ ರೂಪದಲ್ಲಿರುವ ದಾನಗಳು” (NW) ಅಂದರೆ ಕ್ರೈಸ್ತ ಹಿರಿಯರು ಇಲ್ಲವೆ ಮೇಲ್ವಿಚಾರಕರು ಆಗಿದ್ದಾರೆ. ಅವರನ್ನು, “ದೇವಜನರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವೂ ಸಭೆಯ ಸೇವೆಗೋಸ್ಕರವೂ ಕ್ರಿಸ್ತನ ದೇಹವು ಅಭಿವೃದ್ಧಿಯಾಗುವದಕ್ಕೋಸ್ಕರವೂ” ಕೊಡಲಾಗಿದೆ. (ಎಫೆಸ 4:8, 11-13) ಅವರ ಕುರಿತಾಗಿ ಇಬ್ರಿಯ 13:7 ತಿಳಿಸುವುದು: “ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ಸಭಾನಾಯಕರನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ಯಾವ ರೀತಿಯಿಂದ ನಡೆದುಕೊಂಡು ಪ್ರಾಣಬಿಟ್ಟರೆಂಬದನ್ನು ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ.” ಸಭೆಯಲ್ಲಿ ಹಿರಿಯರು ಮುಂದಾಳುತ್ವವನ್ನು ವಹಿಸುತ್ತಾರೆ. ಅವರು ಕ್ರಿಸ್ತ ಯೇಸುವನ್ನು ಅನುಕರಿಸುವುದರಿಂದ, ಅವರ ನಂಬಿಕೆಯು ಅನುಕರಣೆಗೆ ಯೋಗ್ಯವಾಗಿರುತ್ತದೆ. (1 ಕೊರಿಂಥ 11:1) ಈ ‘ಪುರುಷರ ರೂಪದಲ್ಲಿರುವ ದಾನಗಳಿಗೆ’ ವಿಧೇಯರೂ ಅಧೀನರೂ ಆಗಿರುವ ಮೂಲಕ ನಾವು ಹಿರಿಯರ ಏರ್ಪಾಡಿಗಾಗಿ ಕೃತಜ್ಞತೆಯನ್ನು ತೋರಿಸಬಲ್ಲೆವು.—ಇಬ್ರಿಯ 13:17.
11. ಕ್ರಿಸ್ತನು ಇಂದು ತನ್ನ ಹಿಂಬಾಲಕರನ್ನು ಯಾವ ಮಾಧ್ಯಮಗಳ ಮೂಲಕ ನಡೆಸುತ್ತಾನೆ, ಮತ್ತು ಅವನು ನಡೆದಂತೆಯೇ ನಡೆಯುವುದರಲ್ಲಿ ಏನು ಒಳಗೂಡಿದೆ?
11 ಹೌದು, ಯೇಸು ಕ್ರಿಸ್ತನು ಇಂದು ಪವಿತ್ರಾತ್ಮ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಮತ್ತು ಸಭಾ ಹಿರಿಯರ ಮೂಲಕ ತನ್ನ ಹಿಂಬಾಲಕರನ್ನು ನಡೆಸುತ್ತಿದ್ದಾನೆ. ಕ್ರಿಸ್ತನು ನಡೆದಂತೆ ನಡೆಯುವುದರಲ್ಲಿ, ಅವನು ನಮ್ಮನ್ನು ನಡೆಸುವ ರೀತಿಯನ್ನು ಅರ್ಥಮಾಡಿಕೊಂಡು ಅದಕ್ಕೆ ಅಧೀನರಾಗುವುದೂ ಸೇರಿದೆ. ಅದೇ ಸಮಯದಲ್ಲಿ, ಅವನು ನಡೆದಂಥ ರೀತಿಯನ್ನು ಅನುಕರಿಸುವುದು ಕೂಡ ಆವಶ್ಯಕ. “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು” ಎಂದು ಅಪೊಸ್ತಲ ಪೇತ್ರನು ಬರೆದನು. (1 ಪೇತ್ರ 2:21) ಯೇಸುವಿನ ಪರಿಪೂರ್ಣ ಮಾದರಿಯನ್ನು ಅನುಕರಿಸುವುದು ನಮ್ಮ ಮೇಲೆ ಯಾವ ಪರಿಣಾಮವನ್ನು ಬೀರಬೇಕು?
ಅಧಿಕಾರವನ್ನು ನಿರ್ವಹಿಸುವಾಗ ನ್ಯಾಯಸಮ್ಮತರಾಗಿರಿ
12. ಸಭಾ ಹಿರಿಯರಿಗೆ ಕ್ರಿಸ್ತನ ಮಾದರಿಯ ಯಾವ ಅಂಶವು ವಿಶೇಷ ಆಸಕ್ತಿಯದ್ದಾಗಿರುತ್ತದೆ?
12 ಯೇಸು ತನ್ನ ತಂದೆಯಿಂದ, ಬೇರೆ ಯಾರಿಗೂ ಕೊಡಲ್ಪಟ್ಟಿರದಷ್ಟು ಅಧಿಕಾರವನ್ನು ಪಡೆದಿದ್ದರೂ, ಅದನ್ನು ಉಪಯೋಗಿಸಿದ ರೀತಿಯಲ್ಲಿ ಅವನು ನ್ಯಾಯಸಮ್ಮತನಾಗಿದ್ದನು. ಸಭೆಯಲ್ಲಿರುವವರೆಲ್ಲರ, ವಿಶೇಷವಾಗಿ ಮೇಲ್ವಿಚಾರಕರ “ಸೈರಣೆಯು” ಇಲ್ಲವೆ ನ್ಯಾಯಸಮ್ಮತತೆಯು “ಎಲ್ಲಾ ಮನುಷ್ಯರಿಗೆ ಗೊತ್ತಾಗ”ಬೇಕು. (ಫಿಲಿಪ್ಪಿ 4:5; 1 ತಿಮೊಥೆಯ 3:2, 3) ಹಿರಿಯರಿಗೆ ಸಭೆಯಲ್ಲಿ ಸ್ವಲ್ಪಮಟ್ಟಿಗಿನ ಅಧಿಕಾರವಿರುವುದರಿಂದ, ಅದನ್ನು ಉಪಯೋಗಿಸುವುದರಲ್ಲಿ ಅವರು ಕ್ರಿಸ್ತನ ಹೆಜ್ಜೆಜಾಡನ್ನು ಅನುಸರಿಸಬೇಕು.
13, 14. ದೇವರನ್ನು ಸೇವಿಸುವಂತೆ ಇತರರನ್ನು ಉತ್ತೇಜಿಸುವಾಗ ಹಿರಿಯರು ಕ್ರಿಸ್ತನನ್ನು ಯಾವ ವಿಧದಲ್ಲಿ ಅನುಕರಿಸಬಲ್ಲರು?
13 ಯೇಸು ತನ್ನ ಶಿಷ್ಯರ ಇತಿಮಿತಿಗಳನ್ನು ಗಣನೆಗೆ ತೆಗೆದುಕೊಂಡನು. ಅವರಿಂದ ಮಾಡಲು ಸಾಧ್ಯವಿಲ್ಲದ್ದನ್ನು ಅವನು ಒತ್ತಾಯಪೂರ್ವಕವಾಗಿ ತಗಾದೆಮಾಡಲಿಲ್ಲ. (ಯೋಹಾನ 16:12) ಯೇಸು ತನ್ನ ಹಿಂಬಾಲಕರ ಮೇಲೆ ಯಾವುದೇ ಒತ್ತಡ ಹಾಕದೆ, ಅವರು ದೇವರ ಚಿತ್ತವನ್ನು ಮಾಡಲು ‘ಹೆಣಗಾಡುವಂತೆ’ ಪ್ರೋತ್ಸಾಹಿಸಿದನು. (ಲೂಕ 13:24) ಇದನ್ನು ಅವನು, ದೇವರ ಚಿತ್ತವನ್ನು ಮಾಡುವುದರಲ್ಲಿ ಮುಂದಾಳುತ್ವವನ್ನು ವಹಿಸುವ ಮೂಲಕ ಮತ್ತು ಅವರ ಹೃದಯಗಳನ್ನು ಪ್ರಚೋದಿಸುವ ಮೂಲಕ ಮಾಡಿದನು. ಅದೇ ರೀತಿಯಲ್ಲಿ ಇಂದು ಕ್ರೈಸ್ತ ಹಿರಿಯರು, ಇತರರಲ್ಲಿ ಅಪರಾಧಿಭಾವವನ್ನು ಹುಟ್ಟಿಸಿ ಅವರು ದೇವರ ಸೇವೆ ಮಾಡುವಂತೆ ಹೆದರಿಸುವುದಿಲ್ಲ. ಅದರ ಬದಲು, ಯೆಹೋವನ ಮತ್ತು ಯೇಸುವಿನ ಮೇಲಣ ಪ್ರೀತಿಯಿಂದ ಹಾಗೂ ತಮ್ಮ ಜೊತೆ ಮಾನವರ ಮೇಲಣ ಪ್ರೀತಿಯಿಂದ ದೇವರನ್ನು ಸೇವಿಸುವಂತೆ ಅವರು ಇತರರನ್ನು ಉತ್ತೇಜಿಸುತ್ತಾರೆ.—ಮತ್ತಾಯ 22:37-39.
14 ಯೇಸು ತನಗಿದ್ದ ಅಧಿಕಾರವನ್ನು ಜನರ ಜೀವನಗಳನ್ನು ನಿಯಂತ್ರಿಸುವ ಮೂಲಕ ದುರುಪಯೋಗಿಸಲಿಲ್ಲ. ತಲಪಲಾಗದಂಥ ಮಟ್ಟಗಳನ್ನು ಅವನು ಸ್ಥಾಪಿಸಲಿಲ್ಲ ಇಲ್ಲವೆ ಅಸಂಖ್ಯಾತ ನಿಯಮಗಳನ್ನು ಮಾಡಲಿಲ್ಲ. ಅವನು ಉಪಯೋಗಿಸಿದ ವಿಧಾನವು, ಜನರ ಹೃದಯಗಳಿಗೆ ಮೋಶೆಯ ಮುಖಾಂತರ ಕೊಡಲ್ಪಟ್ಟ ನಿಯಮಗಳ ಹಿಂದಿರುವ ಮೂಲತತ್ತ್ವಗಳನ್ನು ತಲಪಿಸುವ ಮೂಲಕ ಅವರನ್ನು ಪ್ರಚೋದಿಸುವುದೇ ಆಗಿತ್ತು. (ಮತ್ತಾಯ 5:27, 28) ಹಿರಿಯರು ಯೇಸು ಕ್ರಿಸ್ತನನ್ನು ಅನುಕರಿಸುತ್ತಾ, ತಮ್ಮ ಮನಸ್ಸಿಗೆ ಬಂದಂಥ ನಿಯಮಗಳನ್ನು ಮಾಡುವುದರಿಂದ ಇಲ್ಲವೆ ತಮ್ಮ ವೈಯಕ್ತಿಕ ಅಭಿಪ್ರಾಯಗಳೇ ಸರಿಯೆಂದು ಹಠಹಿಡಿಯುವುದರಿಂದ ದೂರವಿರುತ್ತಾರೆ. ಉಡುಪು ಮತ್ತು ಕೇಶಾಲಂಕಾರ ಇಲ್ಲವೆ ಆಟಪಾಟ ಹಾಗೂ ಮನೋರಂಜನೆಯ ವಿಷಯಗಳಲ್ಲಿ, ಮೀಕ 6:8, 1 ಕೊರಿಂಥ 10:31, 33 ಮತ್ತು 1 ತಿಮೊಥೆಯ 2:9, 10ರಂಥ ವಚನಗಳಲ್ಲಿ ಕೊಡಲ್ಪಟ್ಟಿರುವ ದೈವಿಕ ಮೂಲತತ್ತ್ವಗಳನ್ನು ಬಳಸುತ್ತಾ ಹಿರಿಯರು ಹೃದಯಗಳನ್ನು ತಲಪಲು ಪ್ರಯತ್ನಿಸುತ್ತಾರೆ.
ಸಹಾನುಭೂತಿಯುಳ್ಳವರು ಮತ್ತು ಕ್ಷಮಿಸುವವರು ಆಗಿರಿ
15. ಯೇಸು ತನ್ನ ಶಿಷ್ಯರ ಕುಂದುಕೊರತೆಗಳಿಗೆ ಹೇಗೆ ಪ್ರತಿಕ್ರಿಯಿಸಿದನು?
15 ಕ್ರಿಸ್ತನು ತನ್ನ ಶಿಷ್ಯರ ಕುಂದುಕೊರತೆಗಳನ್ನು ತಾಳಿಕೊಂಡ ರೀತಿಯಲ್ಲಿ ನಮಗಾಗಿ ಒಂದು ಮಾದರಿಯನ್ನಿಟ್ಟಿದ್ದಾನೆ. ಅವನು ಭೂಮಿಯ ಮೇಲೆ ಒಬ್ಬ ಮಾನವನಾಗಿ ಕಳೆದ ಕೊನೆಯ ರಾತ್ರಿಯಂದು ನಡೆದಂಥ ಎರಡು ಘಟನೆಗಳನ್ನು ಪರಿಗಣಿಸಿರಿ. ಗೆತ್ಸೇಮನೆ ತೋಟಕ್ಕೆ ತಲಪಿದಾಗ, ಯೇಸು “ಪೇತ್ರ ಯಾಕೋಬ ಯೋಹಾನರನ್ನು ತನ್ನ ಜೊತೆಯಲ್ಲಿ ಕರಕೊಂಡು”ಹೋದನು. ಅನಂತರ ಅವನು “ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಅಡ್ಡಬಿದ್ದು” ಪ್ರಾರ್ಥನೆಮಾಡಿದನು. ಅಲ್ಲಿಂದ ಹಿಂದಿರುಗಿ ಬಂದಾಗ, ‘ಅವರು ನಿದ್ದೆಮಾಡುವದನ್ನು ಕಂಡನು.’ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ಅವನಂದದ್ದು: “ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು.” (ಮಾರ್ಕ 14:32-38) ಪೇತ್ರ ಯಾಕೋಬ ಯೋಹಾನರನ್ನು ಕಠೋರವಾಗಿ ಗದರಿಸುವ ಬದಲು ಅವನು ಸಹಾನುಭೂತಿಯನ್ನು ವ್ಯಕ್ತಪಡಿಸಿದನು! ಅದೇ ರಾತ್ರಿ, ಪೇತ್ರನು ಯೇಸುವನ್ನು ಮೂರು ಸಲ ಅಲ್ಲಗಳೆದನು. (ಮಾರ್ಕ 14:66-72) ಆ ಬಳಿಕ ಯೇಸು ಪೇತ್ರನೊಂದಿಗೆ ಹೇಗೆ ವ್ಯವಹರಿಸಿದನು? ‘ಸ್ವಾಮಿ ಎದ್ದನು ಮತ್ತು ಆತನು ಸೀಮೋನ [ಪೇತ್ರ]ನಿಗೆ ಕಾಣಿಸಿಕೊಂಡನು.’ (ಲೂಕ 24:34) ಅವನು “ಕೇಫನಿಗೂ ಆ ಮೇಲೆ ಹನ್ನೆರಡು ಮಂದಿ ಅಪೊಸ್ತಲರಿಗೂ ಕಾಣಿಸಿಕೊಂಡನು” ಎಂದು ಬೈಬಲ್ ಹೇಳುತ್ತದೆ. (1 ಕೊರಿಂಥ 15:5) ತನ್ನ ಮನಸ್ಸಿನಲ್ಲಿ ಅಸಮಾಧಾನವನ್ನು ಇಟ್ಟುಕೊಳ್ಳುವ ಬದಲು ಯೇಸು ಆ ಪಶ್ಚಾತ್ತಾಪಿ ಅಪೊಸ್ತಲನನ್ನು ಕ್ಷಮಿಸಿ ಬಲಪಡಿಸಿದನು. ಮುಂದೆ ಯೇಸು ಪೇತ್ರನಿಗೆ ದೊಡ್ಡ ಜವಾಬ್ದಾರಿಗಳನ್ನು ವಹಿಸಿಕೊಟ್ಟನು.—ಅ. ಕೃತ್ಯಗಳು 2:14; 8:14-17; 10:44, 45.
16. ನಮ್ಮ ಜೊತೆ ವಿಶ್ವಾಸಿಗಳು ನಮ್ಮನ್ನು ನಿರಾಶೆಗೊಳಿಸುವಾಗ ಇಲ್ಲವೆ ಯಾವುದೇ ರೀತಿಯಲ್ಲಿ ನಮಗೆ ಅನ್ಯಾಯವನ್ನು ಮಾಡುವಾಗ, ನಾವು ಯೇಸು ನಡೆದಂತೆಯೇ ಹೇಗೆ ನಡೆಯಬಹುದು?
16 ನಮ್ಮ ಜೊತೆ ವಿಶ್ವಾಸಿಗಳು ನಮ್ಮನ್ನು ನಿರಾಶೆಗೊಳಿಸುವಾಗ ಇಲ್ಲವೆ ಯಾವುದೇ ರೀತಿಯಲ್ಲಿ ನಮಗೆ ಅನ್ಯಾಯವನ್ನು ಮಾಡುವಾಗ, ನಾವು ಸಹ ಯೇಸುವಿನಂತೆ ಸಹಾನುಭೂತಿಯುಳ್ಳವರು ಮತ್ತು ಕ್ಷಮಿಸುವವರು ಆಗಿರಬೇಕಲ್ಲವೊ? ಪೇತ್ರನು ತನ್ನ ಜೊತೆ ವಿಶ್ವಾಸಿಗಳಿಗಂದದ್ದು: “ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ; ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ. ಅಪಕಾರಕ್ಕೆ ಅಪಕಾರವನ್ನು ನಿಂದೆಗೆ ನಿಂದೆಯನ್ನು ಮಾಡದೆ ಆಶೀರ್ವದಿಸಿರಿ.” (1 ಪೇತ್ರ 3:8, 9) ಒಬ್ಬ ವ್ಯಕ್ತಿಯು ನಮ್ಮೊಂದಿಗೆ ಯೇಸು ವ್ಯವಹರಿಸುತ್ತಿದ್ದ ರೀತಿಯಲ್ಲಿ ವ್ಯವಹರಿಸದೆ ಸಹಾನುಭೂತಿಯುಳ್ಳವನು ಇಲ್ಲವೆ ಕ್ಷಮಿಸುವವನಾಗಿರಲು ನಿರಾಕರಿಸುವಲ್ಲಿ ಆಗೇನು? ಆಗಲೂ, ನಾವು ಯೇಸುವನ್ನು ಅನುಕರಿಸಲು ಪ್ರಯತ್ನಿಸಬೇಕು ಮತ್ತು ಒಂದುವೇಳೆ ಯೇಸು ಇರುತ್ತಿದ್ದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಿದ್ದನೊ ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವ ಹಂಗಿನಲ್ಲಿದ್ದೇವೆ.—1 ಯೋಹಾನ 3:16.
ರಾಜ್ಯಾಭಿರುಚಿಗಳನ್ನು ಮೊದಲಾಗಿರಿಸಿರಿ
17. ದೇವರ ಚಿತ್ತವನ್ನು ಮಾಡುವುದಕ್ಕೆ ಯೇಸು ತನ್ನ ಜೀವನದಲ್ಲಿ ಪ್ರಥಮ ಸ್ಥಾನವನ್ನು ಕೊಟ್ಟನೆಂದು ಯಾವುದು ತೋರಿಸುತ್ತದೆ?
17 ಯೇಸು ಕ್ರಿಸ್ತನು ನಡೆದಂತೆಯೇ ನಾವು ನಡೆಯಬೇಕಾದ ಮತ್ತೊಂದು ವಿಧವಿದೆ. ಯೇಸುವಿನ ಜೀವನದಲ್ಲಿ ದೇವರ ರಾಜ್ಯದ ಸುವಾರ್ತೆಯನ್ನು ಘೋಷಿಸುವುದೇ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿತ್ತು. ಸಮಾರ್ಯದಲ್ಲಿನ ಸುಖರೆಂಬ ಊರಿನ ಬಳಿಯಲ್ಲಿ ಸಮಾರ್ಯದ ಸ್ತ್ರೀಯೊಬ್ಬಳಿಗೆ ಸಾರಿದ ಬಳಿಕ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” (ಯೋಹಾನ 4:34) ತನ್ನ ತಂದೆಯ ಚಿತ್ತವನ್ನು ಮಾಡುವುದೇ ಯೇಸುವನ್ನು ಪೋಷಿಸಿತು. ಅದು ಅವನಿಗೆ ಆಹಾರದಷ್ಟೇ ಪುಷ್ಟಿಕಾರಕವೂ, ತೃಪ್ತಿದಾಯಕವೂ, ಚೈತನ್ಯದಾಯಕವೂ ಆಗಿತ್ತು. ದೇವರ ಚಿತ್ತವನ್ನು ಮಾಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾ ಮುಂದುವರಿಯುವ ಮೂಲಕ ನಾವು ಯೇಸುವನ್ನು ಅನುಕರಿಸುವಾಗ, ನಮ್ಮ ಜೀವನ ಸಹ ನಿಜವಾಗಿಯೂ ಅರ್ಥಪೂರ್ಣವೂ ತೃಪ್ತಿದಾಯಕವೂ ಆಗಿರುತ್ತದಲ್ಲವೊ?
18. ಪೂರ್ಣ ಸಮಯದ ಸೇವೆಯನ್ನು ಪ್ರವೇಶಿಸುವಂತೆ ಮಕ್ಕಳನ್ನು ಉತ್ತೇಜಿಸುವುದರಿಂದ ಯಾವ ಆಶೀರ್ವಾದಗಳು ಫಲಿಸುತ್ತವೆ?
18 ಹೆತ್ತವರು ತಮ್ಮ ಮಕ್ಕಳಿಗೆ ಪೂರ್ಣ ಸಮಯದ ಸೇವೆಯನ್ನು ಪ್ರವೇಶಿಸುವಂತೆ ಉತ್ತೇಜಿಸುವಾಗ, ಅವರಿಗೂ ಅವರ ಮಕ್ಕಳಿಗೂ ಅನೇಕ ಆಶೀರ್ವಾದಗಳು ಸಿಗುತ್ತವೆ. ತಂದೆಯೊಬ್ಬನು ತನ್ನ ಅವಳಿ ಪುತ್ರರು ಚಿಕ್ಕವರಾಗಿದ್ದಾಗಿನಿಂದಲೇ ಅವರ ಮುಂದೆ ಪಯನೀಯರ್ ಸೇವೆಯ ಗುರಿಯನ್ನಿಟ್ಟನು. ಅದರಂತೆಯೇ ಈ ಅವಳಿಗಳು, ತಮ್ಮ ಐಹಿಕ ಶಿಕ್ಷಣವನ್ನು ಪೂರೈಸಿದ ಬಳಿಕ ಪಯನೀಯರರಾದರು. ಇದರ ಫಲಿತಾಂಶವಾಗಿ ತಾನು ಅನುಭವಿಸಿರುವ ಆನಂದಗಳ ಕುರಿತಾಗಿ ಯೋಚಿಸುತ್ತಾ, ಈ ತಂದೆ ಬರೆದುದು: “ನಮ್ಮ ಹುಡುಗರು ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ‘ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ಥ್ಯ’ ಎಂದು ನಾವು ಕೃತಜ್ಞತಾಭಾವದಿಂದ ಹೇಳಬಲ್ಲೆವು.” (ಕೀರ್ತನೆ 127:3) ಪೂರ್ಣ ಸಮಯದ ಸೇವೆಯನ್ನು ಬೆನ್ನಟ್ಟುವುದರಿಂದ ಮಕ್ಕಳಿಗೆ ಯಾವ ಪ್ರಯೋಜನವಿದೆ? ಐದು ಮಂದಿ ಮಕ್ಕಳ ತಾಯಿಯೊಬ್ಬಳು ಹೇಳಿದ್ದು: “ಪಯನೀಯರ್ ಸೇವೆಯು ನನ್ನ ಎಲ್ಲ ಮಕ್ಕಳು ಯೆಹೋವನೊಂದಿಗೆ ಹೆಚ್ಚು ಆಪ್ತವಾದ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಿದೆ, ಅವರ ವೈಯಕ್ತಿಕ ಅಧ್ಯಯನದ ರೂಢಿಗಳನ್ನು ಉತ್ತಮಗೊಳಿಸಿದೆ, ತಮ್ಮ ಸಮಯವನ್ನು ವಿವೇಕಯುತವಾಗಿ ಬಳಸುವಂತೆ ಕಲಿಯಲು ಸಹಾಯಮಾಡಿದೆ, ಮತ್ತು ತಮ್ಮ ಬದುಕಿನಲ್ಲಿ ಆಧ್ಯಾತ್ಮಿಕ ವಿಷಯಗಳಿಗೆ ಪ್ರಥಮ ಸ್ಥಾನವನ್ನು ಕೊಡುವಂತೆ ಕಲಿಯಲು ಸಹಾಯಮಾಡಿದೆ. ಅವರೆಲ್ಲರೂ ಅನೇಕ ಹೊಂದಾಣಿಕೆಗಳನ್ನು ಮಾಡಬೇಕಾಗಿ ಬಂದರೂ, ತಾವು ಆರಿಸಿಕೊಂಡಿರುವ ಹಾದಿಯ ಬಗ್ಗೆ ಯಾರಿಗೂ ವಿಷಾದವಿಲ್ಲ.”
19. ಭವಿಷ್ಯತ್ತಿಗಾಗಿ ಯುವ ಜನರು ಯಾವ ಯೋಜನೆಗಳ ಬಗ್ಗೆ ಪರಿಗಣಿಸುವುದು ವಿವೇಕಯುತ?
19 ಯುವ ಜನರೇ, ಭವಿಷ್ಯತ್ತಿಗಾಗಿ ನಿಮ್ಮ ಯೋಜನೆಗಳೇನಾಗಿವೆ? ಯಾವುದೊ ವೃತ್ತಿಪರ ಕ್ಷೇತ್ರದಲ್ಲಿ ಉತ್ಕೃಷ್ಟರಾಗಲು ಪ್ರಯತ್ನಿಸುತ್ತಿದ್ದೀರೊ? ಅಥವಾ, ಪೂರ್ಣ ಸಮಯದ ಸೇವೆಯನ್ನು ಜೀವನವೃತ್ತಿಯಾಗಿ ಮಾಡುವ ನಿಟ್ಟಿನಲ್ಲಿ ಪ್ರಯಾಸಪಡುತ್ತಿದ್ದೀರೊ? ಪೌಲನು ಬುದ್ಧಿಹೇಳಿದ್ದು: “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ.” ಅವನು ಮತ್ತೂ ಕೂಡಿಸಿದ್ದು: “ಬುದ್ಧಿಹೀನರಾಗಿ ನಡೆಯದೆ ಕರ್ತನ ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರ್ರಿ.”—ಎಫೆಸ 5:15-17.
ನಿಷ್ಠಾವಂತರಾಗಿರಿ
20, 21. ಯೇಸು ಯಾವ ವಿಧದಲ್ಲಿ ನಿಷ್ಠಾವಂತನಾಗಿದ್ದನು, ಮತ್ತು ನಾವು ಅವನ ನಿಷ್ಠೆಯನ್ನು ಹೇಗೆ ಅನುಕರಿಸಬಲ್ಲೆವು?
20 ಯೇಸು ನಡೆದಂತೆಯೇ ನಡೆಯಲಿಕ್ಕಾಗಿ, ನಾವು ಅವನ ನಿಷ್ಠೆಯನ್ನು ಅನುಕರಿಸಬೇಕು. ಯೇಸುವಿನ ನಿಷ್ಠೆಯ ಕುರಿತಾಗಿ ಬೈಬಲ್ ತಿಳಿಸುವುದು: “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ. ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ [“ಯಾತನಾ ಕಂಬದ,” NW] ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” ತನಗಾಗಿ ದೇವರ ಚಿತ್ತವೇನಾಗಿತ್ತೊ ಅದಕ್ಕೆ ಅಧೀನನಾಗುವ ಮೂಲಕ ಯೇಸು ನಿಷ್ಠೆಯಿಂದ ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿದನು. ಅವನು ಯಾತನಾ ಕಂಬದ ಮೇಲೆ ಮರಣವನ್ನು ಅನುಭವಿಸುವಷ್ಟರ ಮಟ್ಟಿಗೂ ವಿಧೇಯನಾದನು. ನಾವು ಇದೇ ‘ಮನಸ್ಸನ್ನು’ ಹೊಂದಿದವರಾಗಿದ್ದು, ದೇವರ ಚಿತ್ತವನ್ನು ಮಾಡಲು ನಿಷ್ಠೆಯಿಂದ ಅಧೀನರಾಗಬೇಕು.—ಫಿಲಿಪ್ಪಿ 2:5-8.
21 ಯೇಸು ತನ್ನ ನಂಬಿಗಸ್ತ ಅಪೊಸ್ತಲರಿಗೂ ನಿಷ್ಠೆಯನ್ನು ತೋರಿಸಿದನು. ಅವರ ದೌರ್ಬಲ್ಯಗಳ ಮತ್ತು ಅಪರಿಪೂರ್ಣತೆಗಳ ಮಧ್ಯೆಯೂ ಯೇಸು ಅವರನ್ನು “ಕೊನೆ ವರೆಗೂ” (NW) ಪ್ರೀತಿಸಿದನು. (ಯೋಹಾನ 13:1) ಅದೇ ರೀತಿಯಲ್ಲಿ, ನಮ್ಮ ಸಹೋದರರ ಅಪರಿಪೂರ್ಣತೆಗಳು ನಮ್ಮಲ್ಲಿ ಟೀಕಾತ್ಮಕ ಮನೋಭಾವವನ್ನು ಹುಟ್ಟಿಸುವಂತೆ ನಾವು ಬಿಡಬಾರದು.
ಯೇಸುವಿನಿಂದ ಇಡಲ್ಪಟ್ಟ ಮಾದರಿಗೆ ಅಂಟಿಕೊಳ್ಳಿರಿ
22, 23. ಯೇಸು ಇಟ್ಟಿರುವ ಮಾದರಿಗೆ ಅಂಟಿಕೊಳ್ಳುವುದರ ಪ್ರಯೋಜನಗಳೇನು?
22 ಅಪರಿಪೂರ್ಣ ಮಾನವರಾಗಿರುವ ನಾವು, ನಮ್ಮ ಪರಿಪೂರ್ಣ ಆದರ್ಶವ್ಯಕ್ತಿಯ ಹೆಜ್ಜೆಜಾಡಿನಲ್ಲಿ ಚಾಚೂತಪ್ಪದೆ ನಡೆಯಲಾರೆವು ನಿಜ. ಆದರೆ ನಾವು ಅವನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಲು ಪ್ರಯಾಸಪಡಬಲ್ಲೆವು. ಹೀಗೆ ಮಾಡಲಿಕ್ಕಾಗಿ, ಕ್ರಿಸ್ತನು ನಡೆಸುವಂಥ ರೀತಿಯನ್ನು ನಾವು ಅರ್ಥಮಾಡಿಕೊಂಡು ಅದಕ್ಕೆ ಅಧೀನರಾಗಿ, ಅವನಿಟ್ಟಿರುವ ಮಾದರಿಗೆ ಅಂಟಿಕೊಳ್ಳುವುದು ಆವಶ್ಯಕ.
23 ಕ್ರಿಸ್ತನನ್ನು ಅನುಕರಿಸುವವರಾಗಿರುವುದು ಅನೇಕ ಆಶೀರ್ವಾದಗಳಿಗೆ ನಡೆಸುತ್ತದೆ. ನಾವು ನಮ್ಮ ಸ್ವಇಚ್ಛೆಯನ್ನಲ್ಲ ಬದಲಾಗಿ ದೇವರ ಚಿತ್ತವನ್ನು ಮಾಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸುವುದರಿಂದ ನಮ್ಮ ಜೀವನವು ಹೆಚ್ಚು ಅರ್ಥಪೂರ್ಣವೂ ತೃಪ್ತಿದಾಯಕವೂ ಆಗುತ್ತದೆ. (ಯೋಹಾನ 5:30; 6:38) ನಮಗೊಂದು ಒಳ್ಳೇ ಮನಸ್ಸಾಕ್ಷಿಯಿರುತ್ತದೆ. ನಾವು ನಡೆಯುವ ವಿಧವು ಇತರರಿಗೆ ಆದರ್ಶಪ್ರಾಯವಾಗುತ್ತದೆ. ಕಷ್ಟಪಡುವವರೂ ಹೊರೆಹೊತ್ತವರೆಲ್ಲರೂ ತನ್ನ ಬಳಿ ಬಂದು, ವಿಶ್ರಾಂತಿ ಇಲ್ಲವೆ ಚೈತನ್ಯವನ್ನು ಪಡೆಯುವಂತೆ ಯೇಸು ಆಮಂತ್ರಣವನ್ನು ಕೊಟ್ಟನು. (ಮತ್ತಾಯ 11:28-30) ನಾವು ಯೇಸುವಿನ ಮಾದರಿಯನ್ನು ಅನುಸರಿಸುವಾಗ, ನಮ್ಮ ಸಹವಾಸದ ಮೂಲಕ ನಾವು ಸಹ ಇತರರಿಗೆ ಚೈತನ್ಯವನ್ನು ನೀಡಬಲ್ಲೆವು. ಹೀಗಿರುವುದರಿಂದ, ಯೇಸು ನಡೆದಂತೆಯೇ ನಾವು ನಡೆಯುವುದನ್ನು ಮುಂದುವರಿಸೋಣ.
ನಿಮಗೆ ಜ್ಞಾಪಕವಿದೆಯೊ?
• ಕ್ರಿಸ್ತನು ಇಂದು ತನ್ನ ಹಿಂಬಾಲಕರನ್ನು ಹೇಗೆ ನಡೆಸುತ್ತಿದ್ದಾನೆ?
• ತಮ್ಮ ದೇವದತ್ತ ಅಧಿಕಾರವನ್ನು ಬಳಸುವುದರಲ್ಲಿ ಹಿರಿಯರು ಕ್ರಿಸ್ತನ ಮುಂದಾಳುತ್ವವನ್ನು ಹೇಗೆ ಅನುಸರಿಸಬಲ್ಲರು?
• ಇತರರ ಕುಂದುಕೊರತೆಗಳೊಂದಿಗೆ ವ್ಯವಹರಿಸುವಾಗ ನಾವು ಯೇಸುವಿನ ಮಾದರಿಯನ್ನು ಹೇಗೆ ಅನುಸರಿಸಬಲ್ಲೆವು?
• ಯುವ ಜನರು ರಾಜ್ಯಾಭಿರುಚಿಗಳನ್ನು ಹೇಗೆ ಪ್ರಥಮವಾಗಿಡಬಲ್ಲರು?
[ಪುಟ 23ರಲ್ಲಿರುವ ಚಿತ್ರ]
ಕ್ರಿಸ್ತನ ಮುಂದಾಳುತ್ವವನ್ನು ಅನುಸರಿಸಲು ಕ್ರೈಸ್ತ ಹಿರಿಯರು ನಮಗೆ ಸಹಾಯಮಾಡುತ್ತಾರೆ
[ಪುಟ 24, 25ರಲ್ಲಿರುವ ಚಿತ್ರಗಳು]
ಯುವ ಜನರೇ, ತೃಪ್ತಿದಾಯಕವಾದ ಕ್ರೈಸ್ತ ಜೀವನವನ್ನು ಪಡೆಯಲಿಕ್ಕಾಗಿ ನೀವು ಯಾವ ಯೋಜನೆಗಳನ್ನು ಮಾಡುತ್ತಿದ್ದೀರಿ?